ನೆನಪಿನ ಪುಟಗಳಿಂದ-103
ಕಾಲ ಯಾನ.
ಶತಾವಧಾನಿ ರಾ ಗಣೇಶರಂತಹ ಪ್ರತಿಭೆ ಹುಟ್ಟಿಬಂದ ಮನೆತನಕ್ಕೊಂದು ವಿಶೇಷತೆ ಇದೆ. ಗಣೇಶರ ತಂದೆ ರಾಯ ಶಂಕರನಾರಾಯಣ ಅಯ್ಯರ್. ಅವರ ಮನೆತನದವರು ಮಾಡಿದ ನಿರಂತರ ದಾನ ಧರ್ಮಗಳಿಂದ ರಾಯ ಎಂಬ ಹೆಸರು ಬಂದಿದ್ದಂತೆ. ತಮ್ಮ ತಿಳುವಳಿಕೆಯನ್ನು ಹಂಚುವಲ್ಲಿ ವಿದ್ಯಾದಾನ ಮಾಡುವಲ್ಲಿ ಗಣೇಶರು ಈಗಲೂ ರಾ(ಜ)ಯರೆ ತಾನೇ?!
ರಾಯರನ್ನು ಕೊನೆಯ ವರ್ಷಗಳಲ್ಲಿ ನಾನು ಕಂಡಿದ್ದು. ತುಂಬಾ ಶಿಸ್ತಿನ ಮನುಷ್ಯರಾಗಿದ್ದರು. ಮನೆ ಸೈನ್ಯದ ಶಿಬಿರವೇ ಆಗಿತ್ತು ಎಂದು ಗಣೇಶರು ಹೇಳಿದ್ದನ್ನು ಕೇಳಿದ್ದೇನೆ. ನಾನು ರಾಯರನ್ನು ಕಾಣುವಾಗ ದೈಹಿಕವಾಗಿಯೂ ದುರ್ಬಲರಾಗಿದ್ದರು. ಆದರೂ ನಾನು ಹೋದಾಗ ಎಷ್ಟೋ ಬಾರಿ ಅವರೇ ಬಂದು ಬಾಗಿಲನ್ನು ತೆರೆದಿದ್ದರು. ಉತ್ಸಾಹದಿಂದಲೇ ಚೆನ್ನಾಗಿ ಮಾತನಾಡುತ್ತಿದ್ದರು. ಅದನ್ನು ನೋಡಿದ ಗಣೇಶರು ಒಮ್ಮೆ ನನಗೆ ಹೇಳಿದ್ದರು, “ನೀವು ಬಂದಾಗ ತಂದೆಯವರು ಉತ್ಸಾಹದಿಂದ ಇರುತ್ತಾರೆ.” “ಗೃಹಸ್ಥರಾಗಿ ಯಶಸ್ಸನ್ನು ಗಳಿಸಿದವರನ್ನು ಕಂಡರೆ ತಂದೆಯವರಿಗೆ ಹೆಚ್ಚು ಗೌರವ. ಗೃಹಸ್ಥರಾಗದಿರುವ, ಸನ್ಯಾಸದಲ್ಲಿ ಒಲವಿರುವ, ಸಮಾಜಕ್ಕಾಗಿ ಬ್ರಹ್ಮಚರ್ಯದಲ್ಲಿರುವವರನ್ನೆಲ್ಲ ಕಂಡರೆ ಅನ್ಯಮನಸ್ಕರಾಗುತ್ತಿದ್ದರು.” ಎಂದು ಹೇಳಿದ್ದರು.
ತಂದೆಯವರ ಶಿಸ್ತು, ಸರಳ ಜೀವನ ಗಣೇಶರಿಗೆ ಮುಂದಿನ ದಾರಿಯಾಗಿತ್ತು. ಪುಸ್ತಕ ಸಂಗ್ರಹವನ್ನು ಇಡುವುದಕ್ಕೇ ಅವರ ಮನೆ ಸಾಲುತ್ತಿರಲಿಲ್ಲ. ನಾಲ್ಕು ಜನರಿರುವ ಅಂತಹ ಮನೆಯನ್ನು ಗಣೇಶರು ಓರಣವ್+++(=ಒಪ್ಪವ್)+++ ಆಗಿ ಇಟ್ಟುಕೊಂಡಿದ್ದರು. ಉಡುವ ಬಟ್ಟೆಯಲ್ಲಿ ಮಾಡುವ ಊಟದಲ್ಲಿ ಕೆಲವು ನಿಷೇಧವಿದ್ದರೂ ತುಂಬಾ ಆಯ್ಕೆಗಳಿಲ್ಲ. ಬೆಳ್ಳುಳ್ಳಿ ಈರುಳ್ಳಿ ಎಂಬ ಶಬ್ದಗಳು ಗಣೇಶರು ಬಳಸುವ ಡಿಕ್ಷನರಿಯಲ್ಲೂ ಇಲ್ಲ. ಗಣೇಶರು ಬರೆಯಲು ಬಳಸುವ ರೈಟಿಂಗ್ ಪ್ಯಾಡ್ ಗಣೇಶರಿಗಿಂತ 20 ವರ್ಷ ಹಿರಿದು. ಅಂದರೆ ಗಣೇಶರ ತಂದೆಯವರು ಬಳಸಿದ ರೈಟಿಂಗ್ ಪ್ಯಾಡ್ ಅನ್ನೆ ಮೊನ್ನೆ ಮೊನ್ನೆಯವರೆಗೆ ಬಳಸುತ್ತಿರುವುದನ್ನು ಬಲ್ಲೆ. ಗಣೇಶರು ಉಡುವ ಪಂಚೆಗೆ ಹತ್ತು ವರ್ಷದ ಇತಿಹಾಸವಿದ್ದರೆ. ಬರೆಯುವ ಫೌಂಟನ್ ಪೆನ್ನಿಗೆ ಹದಿನೈದು ವರ್ಷಗಳ ಇತಿಹಾಸವಿರುತ್ತದೆ.
ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಚ್ಚು ಆಸ್ಥೆಯಿರುವ ರಾಯರಿಗೆ ಓದಿನಲ್ಲೂ, ಗುಣದಲ್ಲೂ, ಪ್ರತಿಭೆಯಿಂದಲೂ ಇಷ್ಟು ಉತ್ತಮನಾದ ಮಗ ಗೃಹಸ್ಥನಾಗಲಿಲ್ಲ ಎಂಬ ನೋವಿರುವುದು ಸಹಜ. ಗಣೇಶರ ಅಣ್ಣ ರಂಗನಾಥರು ವಿವಾಹವನ್ನು ನಿರಾಕರಿಸಿದ್ದರಿಂದ ಗಣೇಶರು ವಿವಾಹವ್ ಆಗಬೇಕೆಂಬ ತಂದೆ-ತಾಯಿಯರ ಅಪೇಕ್ಷೆಗೆ ಬಲ ಬಂದಿರಬಹುದು. ಆದರೆ ಕೈಗೂಡದ ಈ ಆಶಯದಿಂದ ಅಸಮಾಧಾನ ದಿನದಲ್ಲಿ ಒಮ್ಮೊಮ್ಮೆ ಮಾತುಗಳಲ್ಲಿ ವ್ಯಕ್ತವಾಗಿರಬಹುದು. ಅಥವಾ ಮೌನವಾಗಿ ಅಸಮಾಧಾನ ಪ್ರಕಟವಾಗಿರಲೂ ಬಹುದು - ಎಂದು ನನಗ್ ಅನಿಸುತ್ತದೆ. ನಾನು ನೋಡುವಾಗ ಆ ಮನೆಯಲ್ಲಿ ದೊಡ್ಡ ಮಾತು ಗಣೇಶರದೇ ಆಗಿತ್ತು.
ನನಗೆ ಗಣೇಶರ ಮನೆಯಲ್ಲಿ ಸಲಿಗೆ ಬೆಳೆಯಿತು. ಗಣೇಶರ ಮನೆಯ ಸದಸ್ಯರ ಪ್ರೀತಿ ಸ್ನೇಹದಿಂದ ಪರಸ್ಪರ ಕೌಟುಂಬಿಕ ಸ್ನೇಹವು ಬೆಳೆಯಿತು. ರಾಯರ ಆರೋಗ್ಯವನ್ನು ತಿಳಿದ ನಮ್ಮಪ್ಪಯ್ಯನು ರಾಯರಿಗೆ ಮಸಾಜ್ ಇತ್ಯಾದಿಗಳನ್ನು ಮಾಡಿ ಬರುತ್ತಿದ್ದರು. ಇಷ್ಟೆಲ್ಲ ಸಲಿಗೆ ಬೆಳೆದ ನಂತರ, ಸಂನ್ಯಾಸದಲ್ಲಿ ಒಲವಿರುವ ಗಡ್ಡವನ್ನು ಬಿಟ್ಟಿದ್ದ ಗಣೇಶರ ಸ್ನೇಹಿತರೊಬ್ಬರು ಮನೆಗೆ ಬಂದು ಹೋದ ಮೇಲೆ ರಾಯರು ಸ್ನೇಹಿತರ ಬಗ್ಗೆ ವ್ಯಗ್ರವಾಗಿ ನನ್ನಲ್ಲಿ ಮಾತನ್ನಾಡಿದ್ದರು. ಮತ್ತೆ ಕೆಲವು ಸಮಯದ ನಂತರ, ಮುಹೂರ್ತವನ್ನು ನೋಡಿಕೊಂಡು ಗಣೇಶರು ಹಾಲನ್ನೊ ನೀರನ್ನೊ ಕುಡಿಸುತ್ತಿರುವಾಗಲೆ ರಾಯರು ಪ್ರಾಣವನ್ನು ಬಿಟ್ಟರು.
ಗಣೇಶರ ತಾಯಿ ಅಲಮೇಲಮ್ಮ. ತಾಯಿಯವರ ಕಲಾಸಕ್ತಿ, ವೈಚಾರಿಕತೆ, ಓದು ವಿದ್ಯೆಗಳೆಲ್ಲ ಗಣೇಶರಿಗೆ ಬಂದಿತ್ತು. ಆ ಕಾಲದಲ್ಲಿ ಕಾಲೇಜಲ್ಲಿ ಅಲಮೇಲಮ್ಮ ಬಾಸ್ಕೇಟ್ ಬಾಲ್ ಆಟಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಹಾಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಗಣೇಶ ಆಸಕ್ತಿಯನ್ನು ಹುಟ್ಟಿಸಿದವರು ತಾಯಿ ಅಲಮೇಲಮ್ಮನೆ. ಆಗೆಲ್ಲ ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುವುದಾಗಿತ್ತು. ಆ ಸಂದರ್ಭದಲ್ಲಿ ಪಕ್ಕದಲ್ಲಿ ಗಣೇಶರನ್ನು ಕೂಡಿಸಿಕೊಂಡು, ಗದುಗಿನ ಭಾರತ, ಜೈಮಿನಿ ಭಾರತವನ್ನು ಹೇಳಿಕೊಡುತ್ತಿದ್ದರಂತೆ. ಸಂಸಾರಕ್ಕೆ ಉಪಯುಕ್ತವಲ್ಲದ ವಿಷಯದಲ್ಲಿ ಗಂಡನಿಗೆ ಅನಾಸಕ್ತಿ. ಅದರಿಂದ ಅಲಮೇಲಮ್ಮನ ಕಲೆ, ಕಾವ್ಯ ಶಕ್ತಿಗಳೆಲ್ಲ ಪ್ರಕಟವಾಗದೆ ಸುಪ್ತಾವಸ್ಥೆಯಲ್ಲೆ ಇತ್ತು. ಅದನ್ನೆಲ್ಲ ಮಗನಾದ ಗಣೇಶರಿಗೆ ಧಾರೆಯೆರೆದು ಮಗನಲ್ಲಿ ಬೆಳೆದ ತನ್ನ ಆಸಕ್ತಿಯನ್ನು ಕಂಡು ಆನಂದಿಸುತ್ತಿದ್ದರು.
ತಂದೆಯವರು ತೀರಿಕೊಂಡ ಮೇಲೆ ಅತಿಯಾದ ಶಿಸ್ತಿನ ಬಂಧನ ತಪ್ಪಿ, ಸ್ವಾತಂತ್ರ್ಯ ವಿಸ್ತಾರದಲ್ಲಿ ಅಮ್ಮ ಸಮಾಧಾನದಿಂದ ಇರಬಹುದೆಂದು ಗಣೇಶರು ಊಹಿಸಿದ್ದರು. ಗಣೇಶರು ಕಾರ್ಯಕ್ರಮಕ್ಕಾಗಿ ಊರಿಗೆ ಓಡಾಡುವುದು, ಮನೆಯಲ್ಲಿದ್ದಾಗಲೂ ಬೆಂಗಳೂರಿನಲ್ಲಿ ಭಾಷಣ, ಉಪನ್ಯಾಸ ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಗಣೇಶರ ಅಣ್ಣನಿಗೂ ಮಾತುಕತೆಗಳಲ್ಲಿ ಆಸಕ್ತಿ ಕಡಿಮೆ. ಇದರಿಂದ ಅಲಮೇಲಮ್ಮನಿಗೆ ಏಕಾಂಗಿತನ ಕಾಡಿತೇನೊ. ಬೇಗ ಮಾನಸಿಕವಾಗಿ ಕುಸಿತ ಕಂಡರು. ಅದನ್ನು ಗ್ರಹಿಸಿದ ಗಣೇಶರು ತಾವು ಹೋಗುವ ಕಾರ್ಯಕ್ರಮಗಳಿಗೆಲ್ಲ ಅಮ್ಮನನ್ನು ಕರೆದುಕೊಂಡೆ ಹೋಗತೊಡಗಿದರು. ಅದು ಅಮ್ಮನಿಗೆ ಉತ್ಸಾಹವನ್ನು ತಂದಿತ್ತು. ಆಗ ನಾನು ಗಣೇಶರ ಭಾಷಣ ಉಪನ್ಯಾಸಗಳಿಗೆ ಹೋಗುತ್ತಿದ್ದೆ. ಆ ಸಂದರ್ಭಗಳಲ್ಲಿ ನಾನೇ ಅಲಮೇಲಮ್ಮನವರನ್ನು ಗಣೇಶರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಪರವೂರುಗಳಿಗೂ ಕೆಲವು ಕಡೆ ಅಮ್ಮನನ್ನು ಕರೆದುಕೊಂಡೆ ಗಣೇಶರು ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಸಭೆಯಲ್ಲಿ ಕುಳಿತ ಅಲಮೇಲಮ್ಮ, ಅಲ್ಲಿಂದಲೇ ಗಣೀ ಆ ವಿಷಯವನ್ನು ಬಿಟ್ಟ್ಯಲ್ಲೋ, ಅದನ್ನು ಹೇಳು ಎಂದು ಕರೆದು ಹೇಳುತ್ತಿದ್ದರು. ಆಗ ಗಣೇಶರು ಅಮ್ಮ ಸುಮ್ಮನಿರು ಮುಂದೆ ಹೇಳುತ್ತೇನೆ ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಗದರುತ್ತಿದ್ದರು. ನಾನು ಆ ವಿಷಯವನ್ನು ಮರೆತರೆ ಎಂಬ ಕಳವಳ ಅಮ್ಮನಿಗೆ ಎಂದು ಸಭೆಗೆ ಸಮಾಜಾಯಿಷಿಯನ್ನು ಕೊಟ್ಟು ಮುಂದುವರಿಯುತ್ತಿದ್ದರು. ಗಣೇಶರಿಗೆ ಓದಿನ ವಿಸ್ತಾರ ಹೆಚ್ಚಿತ್ತು. ಆದರೆ ಅಮ್ಮನ ತಿಳುವಳಿಕೆ ಗಣೇಶರಿಗೆ ಸಮದಂಡಿಯಾಗಿಯೆ ಇತ್ತು. ಮನೆಗೆ ನಾವೆಲ್ಲ ಹೋದಾಗ ಅಮ್ಮನು ಮಾತುಕತೆಗಳಲ್ಲಿ ಭಾಗಿಯಾಗಿ, ಗಣೇಶರು ಹೇಳುವ ವಿಷಯಗಳಿಗೆ ಪೂರಕವಾಗಿ ವಿಸ್ತರಿಸುವುದು, ಕೆಲವೊಮ್ಮೆ ಗಣೇಶರನ್ನು ತಿದ್ದುವುದಕ್ಕೂ ಮುಂದಾಗುತ್ತಿದ್ದರು. ಆಗೆಲ್ಲ ಗಣೇಶರು, ನೀನು ಸುಮ್ಮನೆ ಇರಮ್ಮ ಎಂದು ಅಸಹನೆ ತೋರಿಸಿದ್ದೂ ಇದೆ. ಅಮ್ಮನಲ್ಲಿಯೂ ತರ್ಕವನ್ನು ಪ್ರಾರಂಭಿಸಿ ಬಿಡುತ್ತಿದ್ದರು. ಅವರೂ ಕಡಿಮೆ ಏನಿರಲಿಲ್ಲ. ಆಗೊಮ್ಮೆ ಗಣೇಶರಿಗೆ ನಾನು ಹೇಳಿದ್ದೆ. ಅವರು ನಿಮಗೊಂದು ಮಗು. ಅವರಲ್ಲಿ ಯಾಕೆ ತರ್ಕ, ವಾಗ್ವಾದ ಎಂದು. ಆ ಕ್ಷಣದಲ್ಲಿ ಗಣೇಶರು ತಮ್ಮ ನಡೆಯನ್ನು ಬದಲಾಯಿಸಿಕೊಂಡು ಬಿಟ್ಟರು. ತಾಯಿಗೆ ತಾಯಿಯಾದರು.
ಇದರಿಂದ ಅಮ್ಮನ ಖುಷಿ ಹೆಚ್ಚಿತು. ಗಣೇಶರ ಸಮಾಧಾನ ವೃದ್ಧಿಸಿತು. ವಿಧಿ, ಗ್ರಹಚಾರ ಏನಾದರೊಂದು ಹೇಳಬೇಕಲ್ಲ. ಅಮ್ಮನಿಗೆ ಮರೆವಿನ ಕಾಯಿಲೆ ಪ್ರಾರಂಭವಾಯಿತು. ಗಣೇಶರು ತಮ್ಮ ಜೊತೆ ಅಮ್ಮನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವುದು ಕಷ್ಟವಾಗತೊಡಗಿತು. ಈ ಸಂದರ್ಭದಲ್ಲಿ ಅಮ್ಮ ಬಿದ್ದು ಮೂಳೆ ಮುರಿದುಕೊಂಡರು. ಗಣೇಶರ ಜಂಘಾಬಲವೇ ಉಡುಗಿ ಹೋಯಿತು. ನನಗೆ ಫೋನ್ ಮಾಡಿದರು. ನಾನು ಕೂಡಲೇ ಹೋದೆ. ಈ ತರದ ಸನ್ನಿವೇಶವನ್ನು ಗಣೇಶರು ಎದುರಿಸಿದವರಲ್ಲ. ಯಾವ ಕಾರ್ಯವನ್ನು ಮಾಡುವುದಕ್ಕೂ ಹಿಂದೇಟಲ್ಲ, ಏನನ್ನು ಮಾಡುವುದು ಎಂಬ ಪ್ರಶ್ನೆ ಅಷ್ಟೆ, ಗಣೇಶರನ್ನು ಕಾಡಿತು. ಗಣೇಶರು ಅತ್ತರೆ ವಿಶೇಷವಲ್ಲ. ಅವರನ್ನು ನೋಡಿದ ನಮಗೇ ಅಳು ಬರುವಂತಿತ್ತು. ಗಣೇಶರ ಫ್ಯಾಮಿಲಿ ಡಾಕ್ಟರ್ ಮತ್ತು ಪರಿಚಯದವರನ್ನೆಲ್ಲ ವಿಚಾರಿಸಿ, ಮರೆವಿನ ಕಾಯಿಲೆಯ ಬಗ್ಗೆ ತಿಳಿದುಕೊಂಡರು. ಅದೇ ಸಮಯಕ್ಕೆ ನನ್ನ ತಮ್ಮ ರತ್ನಾಕರ, ಫೋನ್ ಮಾಡಿ ಈ ಕಾಯಿಲೆಗೆ ಔಷಧಿಯಿಲ್ಲ ಆಸ್ಪತ್ರೆಯನ್ನೆ ಮನೆಯನ್ನಾಗಿ ಮಾಡಿಕೊಳ್ಳಿ. ಅಥವಾ ಮನೆಯನ್ನೆ ಆಸ್ಪತ್ರೆಯನ್ನಾಗಿಸಿ ಎಂದು ಸಲಹೆ ನೀಡಿದ. ಪರವೂರಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದರು. ಬೆಂಗಳೂರಿನಲ್ಲಿ ಅತ್ಯಂತ ಅನಿವಾರ್ಯವಾದ ಕಾರ್ಯಕ್ರಮವನ್ನು ಮಾತ್ರ ಒಪ್ಪಿಕೊಂಡರು. ಅಮ್ಮನನ್ನು ನೋಡಿಕೊಳ್ಳುವುದಕ್ಕೆ ಗಣೇಶರು ಕಟಿಬದ್ಧರಾದರು. ನಿಜವಾಗಿ ಅಲಮೇಲಮ್ಮನ ಪುಣ್ಯ. ಮಗನೇ ತಾಯಿಯಾಗಿ ನೋಡಿಕೊಂಡ ರೀತಿ ನನ್ನ ಜೀವನದಲ್ಲಿ ನಾನೆಲ್ಲೂ ನೋಡಲಿಲ್ಲ. ನನ್ನಿಂದಂತೂ ಸಾಧ್ಯವೇ ಇಲ್ಲ. ಅಷ್ಟು ಚೆನ್ನಾಗಿ ಅಮ್ಮನನ್ನು ನೋಡಿಕೊಂಡರು.
ಅಲಮೇಲಮ್ಮನ ಮರವೇ ಯಾವ ಮಟ್ಟಕ್ಕೆ ಬಂತೆಂದರೆ, ವಯೋಧರ್ಮ ದಿಂದ ಕಿವಿ ಜೋಲು ಬಿತ್ತು. ಆಗೊಂದು ದಿನ ಕಿವಿಯಲ್ಲಿರುವ ಬಂಗಾರದ ಒಡವೆಯನ್ನು ತೆಗೆದು ಬಾಯಿಗಿಟ್ಟು ಜಗಿಯತೊಡಗಿದರು. ಚಿಕ್ಕಮಕ್ಕಳ ಬಾಯಿಗೆ ಕೈ ಹಾಕಿ ಮಣ್ಣನ್ನು ತೆಗೆದಂತೆ ಬಂಗಾರವನ್ನು ತೆಗೆದರು. ತಾಯಿಗೆ ತನ್ನ ಬಾಯಿಗೆ ತುತ್ತು ಇಡುವವನು, ಬಾಯಿಯಲ್ಲಿದ್ದ ಬಂಗಾರವನ್ನು ತೆಗೆದವನು ತನ್ನ ಮಗನೆಂದು ತಿಳಿಯದಂತಾಯಿತು. ಹೀಗೆ ಏನೂ ಅರಿಯದ ತಾಯಿಗೆ ಮಾಡಿದ ಸೇವೆ, ತೋರಿದ ಪ್ರೀತಿಯನ್ನು ನೆನೆದರೆ ಈಗಲೂ ಕಣ್ಣು ಪ್ರತಿಕ್ರಿಯಿಸುವುದು.
ಗಣೇಶರಿಗು ನನಗೂ ಪರಿಚಿತರಾದ ರಮಾಮಣಿಯವರ ಮೂಲಕ ಸುಗುಣಾ ಎಂಬವಳು ಅಮ್ಮನನ್ನು ನೋಡಿಕೊಳ್ಳಲು ಬಂದಳು. ಅಮ್ಮನನ್ನು ನೋಡಿಕೊಳ್ಳುವ ಕೆಲಸಕ್ಕೆ ಬಂದ ಸುಗುಣಾ, ಗಣೇಶರು ತೋರಿದ ಗೌರವಾದರಕ್ಕೆ ಮನೆಯ ಮಗಳಾಗಿ ಜವಾಬ್ದಾರಿ ನಿರ್ವಹಿಸತೊಡಗಿದಳು. ಒಂದೆರಡು ಗಂಟೆ ಬಿಡುವು ಬೇಕಾದರೂ ತಮ್ಮ ಮಕ್ಕಳನ್ನೆ ಕರೆಸಿಕೊಳ್ಳುತ್ತಿದ್ದರು. ಆ ಮಕ್ಕಳು ಕೂಡ ಗಣೇಶರ ತಾಯಿಯನ್ನು ತಮ್ಮ ತಾಯಿಯಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಗಣೇಶರಿಗೆ ಸ್ವಲ್ಪ ಬಿಡುವಾಯಿತು. ಆದರೂ ತಾಯಿಗೆ ಊಟವನ್ನು ತಾವೇ ಮಾಡಿಸುತ್ತಿದ್ದರು. ಅನ್ನವನ್ನು ಕೈಯಲ್ಲಿ ಕಿವುಚಿ, ತುತ್ತನ್ನು ಕಟ್ಟಿ ತಾಯಿಯ ಬಾಯಿಗಿಡುವ ಚಿತ್ರ ಇನ್ನೂ ನನ್ನ ಕಣ್ಮುಂದಿದೆ.
ಗಣೇಶರು ಬಾದರಾಯಣ ಪ್ರಶಸ್ತಿಯನ್ನು ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಹೋಗುವಾಗ ಅಮ್ಮನನ್ನು ಕರೆದುಕೊಂಡು ಹೋಗಿದ್ದರು. ಇಡೀ ಜಗತ್ತನ್ನೇ ಮರೆತ ಅಮ್ಮ ಆ ಸಂದರ್ಭವನ್ನು ಮಾತ್ರ ಮತ್ತೆ ಮತ್ತೆ ಹೇಳುತ್ತಿದ್ದರು. ಮಗನ ಕೀರ್ತಿಯನ್ನು ಕಾಣುವ ಕಣ್ಣಾಗಿ ಇನ್ನೂ ಕೆಲವುಕಾಲ ಅಲಮೇಲಮ್ಮ ಇರಬೇಕಿತ್ತು, ಅಂದುಕೊಳ್ಳುವುದಷ್ಟೆ ನಮ್ಮಿಂದಾಗುವುದಲ್ಲವೇ?!