1 ಶ್ರೀಶೈ ಲಶಿಖರಂ ದೃಷ್ಟ್ವಾ . . .
ಟ್ರೇನಿನ ನೌಕರ ಬಿಸಿ ಬಿಸಿ ಬೆಡ್ ಶೀಟುಗಳನ್ನು ತಂದುಕೊಟ್ಟಾಗ ಎಷ್ಟೋ ದಿನದ ಮೇಲೆ ಸಿಕ್ಕ ಆತ್ಮೀಯತೆಯ ಅಪ್ಪುಗೆಯಂತೆ ಅದನ್ನು ಎದೆಗೊತ್ತಿಕೊಂಡು ಕುಳಿತೆ.
ಸಾಮಾನ್ಯವಾಗಿ ಈ ಲಾಡ್ಜು, ಬಸ್ಸು ಇಲ್ಲೆಲ್ಲಕೊಡುವ ಬೆಡ್ ಶೀಟು, ಟವೆಲ್ಲುಗಳನ್ನು ಮೂಗು ಮುರಿದುಕೊಂಡೇನೋಡುವ ನನಗೆ ಇಂದೇಕೋ ರೇಲ್ವೇದವರು ಕೊಟ್ಟ ಈ ತಾಜಾ ಒಗೆದು ಇಸ್ತ್ರಿ ಮಾಡಿದ ಬೆಚ್ಚಗಿನ ಹಾಸುಗೆ ಹೊದಿಕೆಗಳು ಯಾವುದೋ ಭಾವೋರ್ಜೆಯನ್ನು ತಂದುಕೊಟ್ಟಿತ್ತು.
ಹುಬ್ಬಳ್ಳಿ ಸ್ಟೇಶನ್ನಲ್ಲಿ ಇಷ್ಟೊತ್ತುಆ ಪ್ಲಾಟಫಾರ್ಮಿನ ನಾತದಲ್ಲಿಕಾದು ಕಾದು ಬಸವಳಿದು ಮತ್ತದೇ ನಾತದಲ್ಲಿ ಟ್ರೈನ್ ಒಳಗೆ ಕಾಲಿರಿಸಿ ಮಂದಿಯ ಗಿಜಿಬಿಜಿಯ ನಡುವೆ ಆರಕ್ಷಿತ ಸೀಟು ಹಿಡಿದು ಕುಳಿತು, ವೇಳೆಯಾದರೂ ಇನ್ನೂ ಹೊರಟಿಲ್ಲ್ಲಪ್ಪ ಇವನು ಎಂದುಕೊಳ್ಳುತ್ತ ಕಿಟಕಿಯಾಚೆಗಿನ ಕಂಬ, ಅಂಗಡಿ, ಬೋರ್ಡುಗಳು ಚಲಿಸತೊಡಗುವುದನ್ನೇ ನಿರೀಕ್ಷಿಸುತ್ತಿದ್ದಾಗ ನೌಕರನ ಈ ವಾರ್ಮ್-ವೆಲ್ಲಕಮಿಂಗಿಗೆ ಎದೆ ಕರಗಿ ಹಾ ಎನಿಸಿತು.
ರಸಾರ್ದ್ರತೆ ಯಾವಾಗ ಎಲ್ಲಿಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ.
ನಾಕು ಜನ ಸಭ್ಯರ ಮುಂದೆ ಅನಬಾರದ ಪದಗಳನ್ನೇ ಹಿಡಿದು ಮಡಿಯುಡಿಸಿ ಸಹೃದಯ-ಪಂಕ್ತಿಪಾವನವೆನಿಸಿ ಕೂರಿಸುತ್ತಾನಲ್ಲ ಆ ಕುಮಾರವ್ಯಾಸ! ಅಂಥ ಎಂಥದೋ ಈ ಬೆಡ್ ಶೀಟುಗಳಿಗೂ ಆಯಿತು ಇವತ್ತು.
ಅದೇ ಮನದ ಮಧುರಿಮೆಯಲ್ಲಿಸುಳಿದದ್ದುಕಳೆದ ವಾರದ ಹಂಪೆ, ಶ್ರೀಶೈಲ ಪ್ರಯಾಣ.
ಏಕೋ ಇತ್ತೀಚೆಗೆ ಟ್ರೇನ್ ಪ್ರಯಾಣ ಮಾಡಬೇಕೆಂಬ ಬಯಕೆ ಬಹಳ ಆಯಿತು.
ಮೊದಲಿಂದಲೂ ನನಗೆ ಟ್ರೇನ್ ಅಂದರೆ ಇಷ್ಟ.
ತನ್ನದೇ ಒಂದು ಲಯದಲ್ಲಿಧಡ್ ಬಡ್ ಧಡ್ ಬಡ್ ಎನ್ನುತ್ತಸಾಗುತ್ತದೆ.
ಎಲ್ಲಾದರೂ ಸೇತುವೆ ಬಂದಾಗ ಅದರ ಲಯವಿನ್ಯಾಸ ಒಮ್ಮೆಲೇ ಬದಲಾಗಿ ಥಟ್ಟನೇ ಹೇಳುತ್ತದೆ, ಹಳ್ಳ, ನದಿ ಏನೋ ಬಂತುನೋಡು ಅಂತ.
ಜೊತೆಗೆ ಅಲ್ಲಲ್ಲಿಉದ್ದನೆಯ ತಿರುವು ಬಂದಾಗ ಕಿಟಕಿಯಲ್ಲಿ ಗೋಣು ಚಾಚಿ ಅದೋ ಆ ಮುಂದುಗಡೆಯಲ್ಲಿಇದೇ ಟ್ರೇನು ಮೈಮುರಿದು ಹೊರಹೊರಳಿ ಸಾರುತ್ತಿರುತ್ತದೆ.
ಅರೇ, ಅದೇ ಟ್ರೇನಿನ ಹಿಂಭಾಗದಲ್ಲಿ ನಾನಿದ್ದೇನಲ್ಲಎಂಬ ಥ್ರಿಲ್ಲು, ನನ್ನದೇ ಬದುಕಿನ ಯಾನದ ಭವಿಷ್ಯವನ್ನು ನಾನೀಗ ಕಾಣುತ್ತಿರುವಂತಹ ಖುಷಿ.+++(5)+++
ಅಂತೆಯೇ ಆ ವಿಸ್ತಾರದ ವಿಸ್ಮಯಕಾರಿ ನೋಟ.
ಈ ಹರಹು ಬಸ್ಸು ಕಾರುಗಳಲ್ಲಿಸಿಗುವುದಿಲ್ಲ.
ಇವುಗಳದು ಸಣ್ಣತನದ ಅವೇಶ, ಉದ್ವೇಗ, ಅಡೆತಡೆ.
ಬದುಕಿನ ರಭಸ, ಕೆಲಬಲದವರ ಜೊತೆಗಿನ ಪೈಪೋಟಿ.
ಟ್ರೇನಿನ ಹದವಾದ ಲಯದ ಸಮಗತಿ ಇವಕ್ಕಿಲ್ಲ.+++(4)+++
ಅಂತಲೇ ಟ್ರೇನ್ ಯಾನದಲ್ಲಿವಿಳಂಬಿತವೋ ಮಧ್ಯವೋ ದ್ರುತವೋ ಬೇರೆಬೇರೆ ತಾಳವಿನ್ಯಾಸಗಳ ನನ್ನದೇ ಮನೋ ವೃತ್ತಿಗಳ, ಕೈಬಾಯಿ ಕಾರುಬಾರುಗಳ ಗಾಯನ ತೊಡಗಬಹುದು.
ಹಾಗಂತಲೇ ಟ್ರೇನ್ ನನಗೆ ಇಷ್ಟ ಎಂಬುದಷ್ಟೇ ಅಲ್ಲದೆ ಒಂದು ರೀತಿ ಅಗತ್ಯವೂ ಕೂಡ.
ಟ್ರೇನಿನಲ್ಲಿ ಓದುವುದು, ತಿನ್ನುವುದು, ಜೊತೆಯವರೊಡನೆ ಮಾತುಕತೆ ಇತ್ಯಾದಿ ಮಾಡುವಂತೆ ಬಸ್, ಕಾರುಗಳಲ್ಲಿನನಗೆ ಆಗದ ಮಾತು.
ಏನಾದರೂ ಮಾಡ ಹೋದರೆ ಹೊಟ್ಟೆ ತೊಳಸು, ವಾಂತಿ ಶುರು.
ಇತ್ತೀಚೆಗೆ ಏಕೋ ವ್ಯವಧಾನ ಕಡಮೆ ಆಗಿ, ಓಟ ಜಾಸ್ತಿಆಗಿ ಬಸ್ಸು ಕಾರುಗಳಲ್ಲಿಪ್ರಯಾಣ ಆಗುತ್ತಿದ್ದು, ಟ್ರೇನಿನ ರೂಢಿಯೇ ತಪ್ಪಿತ್ತು.
ಮೊನ್ನೆ ಗಣಪತಿ ಹಬ್ಬದ ಮರುದಿನ ಒಮ್ಮೆಲೇ ಹಂಪೆ, ಶ್ರೀಶೈಲನೋಡಲು ಹೋಗುವುದೆಂದೂ, ಒಬ್ಬನೇ ಹೋಗುವುದೆಂದೂ, ಟ್ರೇನಿಗೇ ಹೋಗೋ ಣೆಂದೂ ನಿರ್ಧರಿಸಿ ಮರುದಿನ ರಾತ್ರಿ ಹೊಸಪೇಟೆಯಿಂದ ಕರ್ನೂಲಿಗೆ ತತ್ಕಾಲ್ ರಿಸರ್ವೇಶನ್ ಮಾಡಿಕೊಂಡು, ಈಗ ಹುಬ್ಬಳಿಯಿಂದ ಹೊಸಪೇಟೆಗೆ ಜೆನರಲ್ ಟಿಕೀಟು ಕೊಂಡು ಹತ್ತೇ ಬಿಟ್ಟೆ, ಮಧ್ಯಾಹ್ನದ ಒಂದು ಟ್ರೇನಿಗೆ.
ಬೋ ಗಿಯಲ್ಲಿ ಅತ್ತಿತ್ತ ಕೈ ಕಾಲು ಚಾಚಿಕೊಂಡು ಎರ್ರಾಬಿರ್ರಿ ಕೂತ ಜನ.
ಕೆಲವರು ಇಸ್ಪೀಟು, ಕೆಲ ಜನ ಗಿರಮಿಟ್ಟು ಚಹಾ, ಕೆಲವು ಉದ್ದನಾಮದ ಹೆಂಗಸರ ಮಡಿ ಮಡಿ ಸರಕು ಸರಂಜಾಮು, ಕೆಲವರ ಹೂವು ಹಣ್ಣುಗಳ ಮೂಟೆಗಳು.
ಇಂಥವು ಕೆಲವು ವಿಶೇಷ ದರ್ಶನಗಳಾದರೆ ಸರ್ವೇಸಾಧಾರಣವಾದನೋಟ ಮೊಬೈಲು ಗೇಮ್ಸು, ವಾಟ್ಸಪ್ಪು ಫೇಸ್ಬುಕ್ಕು ಫಾರ್ವರ್ಡ್ ವಿಡಿಯೋಗಳು, ಅವುಗಳ ಚೀರಾಟ ಕೀರಾಟ.
ಆ ಜಾತ್ರೆಯಲ್ಲಿ ನುಗ್ಗಿನುಸುಳಿ “ಇಲ್ ಕೂತ್ಕೋಬೋ ದೇನ್ರೀ.
" ಅಂತ ಒದರಿ ಮಾಡಿ ಒಂದು ಸೀಟು ಗಿಟ್ಟಿಸಿಕೊಂಡೆ.
ಟ್ರೇನು ಹೊರಟ ಮೇಲೆ ಇನ್ನು ಯಾರೂ ಏರುವುದಿಲ್ಲಎಂದು ಮನದಟ್ಟು ಮಾಡಿಕೊಂಡು ಜನ ತಮ್ಮ ಸಾಮರ್ಥ್ಯ ಮೀರಿ ಕೈಕಾಲು ಚಾಚಿದ್ದವರು ಈಗ ಸ್ವಲ್ಪ ನೀಟಾಗಿ ಕೂತರು; ಎರಡು ಮೂರು ಗಂಟು ಮೂಟೆ ಇಟ್ಟವರು ಈಗ ಅವೆಲ್ಲವನ್ನೂ ಸೇರಿಸಿ 2 ಒಂದೆಡೆ ಮಡಗಿದರು; ಹೈಸನ್-ಬರ್ಗನ ಇಲೆಕ್ಟ್ರಾನಿನಂತೆ ಏಕಕಾಲಕ್ಕೆ ಎರಡು ಸೀಟು ಹಿಡಿದು ಕೂತವರು ಈಗ ಒಂದು ಕಡೆ ನಿಶ್ಚಿತವಾಗಿ ನೆಲಸಿದರು.+++(5)+++
ಒಟ್ಟಿನಲ್ಲಿ ಏರುವಾಗಿನ ತಳಮಳ ಈಗ ಇರಲಿಲ್ಲ.
ನಾನೂ ಕೂರ್ಮಾವತಾರದ ಲೀಲೆ ತೋರಿಸುತ್ತಸ್ವಲ್ಪ ಕೈಕಾಲು ಚಾಚತೊಡಗಿದೆ.
ಕಿಟಕಿ ಆಚೆನೋಡಿದೆ.
ಸ್ವಲ್ಪ ಹೊತ್ತುನೋ ಡಿದೆ.
ಬಿರ ಬಿರ ಬಯಲುಸೀಮೆಯಲ್ಲಿಏನಂಥ ಕಾಣಸಿಗುತ್ತದೆ? ಮುಳ್ಳು ಜಾಲಿ ಕಂಟಿಗಳು, ಅಲ್ಲಿಇಲ್ಲಿಬೇವಿನ ಮರ, ಹೊಲಗದ್ದೆಯ ಅಂಗಲು ಅಂಗಲು ಬೆಳೆ, ಒಣ ಒಣ ಕೆಲವು ಹಳ್ಳಗಳು.
ಸಾಕಾಯಿತು.
ಗದಗನ್ನು ದಾಟಿದ ಮೇಲೆ ಯಾರೋ ಒಬ್ಬಾತ ಗರಮಾ ಗರಮ್ ಮಿರ್ಚಿಭಜಿ ಚಾಯ್ ಅಂತ ಒದರುತ್ತ ಬಂದ ಬೋಗಿಯೊಳಗೆ.
ನನಗೆ ಬಾಯಿ ನೀರೂಡಿತು.
ಆ ಮನುಷ್ಯ ಕಣ್ಣೆದುರು ಬಂದ.
ಯಥೇಷ್ಟವಾಗಿ ಮುಕ್ತವಾಗಿ ಬಾಯಿತೆರೆದು ಕೂಗುವ ಅವನ ವಾಣಿಯಿಂದ ನಿರಂತರ ಪರಿಪೂತವಾದ ಮಿರ್ಚಿಭಜಿಗಳು.
ತಿನ್ನಲೇಬೇಕೇ? ಏನೂ ಅಗತ್ಯ ಇಲ್ಲ.
ಮನೆಯಲ್ಲಿ ಮಾಡಿಕೊಂಡು ತಿಂದರಾಯಿತು.
ಬುದ್ಧಿಯು ಆಸೆಗೆ ತಣ್ಣೀರೆರಚುತ್ತಿತ್ತು, ನಾಲಗೆ ಇನ್ನೂ ಇನ್ನೂ ನೀರೂಡುತ್ತಿತ್ತು.
ಬಯಕೆಗೆ ಮಿತಿ ಇಲ್ಲ.
ಎಲ್ಲಿಎಂಥದಿದ್ದರೂ ಎಷ್ಟು ತಿಂದರೂ ಮತ್ತೆಬೇಡುವುದು ನಾಲಗೆ.
“ನ ಜಾತು ಕಾಮಾಃ ಕಾಮಾನಾಮುಪಭೋ ಗೇನ ಶಾಮ್ಯತಿ.
" ಬ್ಯಾಗಿಗೆ ಕೈಹಾಕಿದೆ.
ಖಾಂಡೇಕರರ ಯಯಾತಿ ಕಾದಂಬರಿ ಎತ್ತಿಕೊಂಡು ಮುಂದುವರಿಸಿದೆ.
ಕಳ್ಳನೆಂದು ಸಂಶಯ ಬಂದಾಗ ಗಾಬರಿ, ಅಸಮಾಧಾನದಿಂದನೋಡುವಂತೆ ಎದುರಿನ ಅಕ್ಕಪಕ್ಕದ ಜನ ನನ್ನೆಡೆಗೆ ಕಣ್ಣು ಹಾಯಿಸತೊಡಗಿದರು.
ಇದಾವ ಪ್ರಾಣಿ! ಇದೇನು ಕೈಯಲ್ಲಿ ಹಿಡಕೊಂಡು ಕೂತಿದ್ದು.
ಬಲು ಹಿಂದಿನ ಕಾಲದಲ್ಲಿರುತ್ತಿದ್ದ ಈ ಪುಸ್ತಕ ಎಂಬ ವಸ್ತುಈಗಲೂ ಇದೆಯೇ! ಎಂದು.
ಅವರಿಗೆ ಹಾಗೆ ಅನಿಸಿತು ಎಂಬುದಕ್ಕಿಂತ ಅವರೆಲ್ಲರ ನಡುವೆ ಕೂತ ನನಗೇ ನನ್ನ ಬಗ್ಗೆಅನಿಸಿತು ಎಂಬುದು ಹೆಚ್ಚು ದಿಟ.
ಹೊಸಪೇಟೆ ಸ್ಟೇಶನ್ನಲ್ಲಿಇಳಿದು ಇಳಿಸಂಜೆಯಲ್ಲೇ ಸರ ಸರ ನಡೆದೆ.
ಎಲ್ಲಿಎತ್ತಎಂಬುದರ ಪರಿವೆ ಇರಲಿಲ್ಲ.
ಈಗಲೇ ಹಂಪೆಗೆ ಹೋಗಿ ಲಾಜ್ ಮಾಡಿಕೊಂಡು ಉಂಡು ಮಲಗಿ ನಸುಕಿಗೆದ್ದುಆ ಗತವೈಭವದ ವಾರ್ಧಕದ ಹಂಪೆ ನೇಸರಿನ ಅರುಣಕಿರಣಕಾಂತಿಯಲ್ಲಿ ಹೊಸ ಜನ್ಮವನ್ನು ತಳೆದ ಶಿಶುವಿನಂತಹ ಚೆಲುವನ್ನುನೋಡಿ ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಕನಸು.
ಎಲ್ಲಾದರೂ ಹಂಪೆಗೆ ಹೋಗುವ ಗಾಡಿ ಸಿಗುತ್ತವೆಯೋ ಎಂದು ನಡೆದುಕೊಂಡೆ ಹೋದೆ.
ಆದರೆ ಹೊಸಪೇಟೆಯ ಮುಖ್ಯಬೀದಿಯಲ್ಲಿ ಸಿಕ್ಕ ಒಂದು ಹೊಟೆಲ್ಲು ಮನಸೆಳೆಯಿತು.
ಹೊಟ್ಟೆ ಹಸಿದಿತ್ತು.
ಅಲ್ಲೇ ರೂಮ್ ತಗೊಂಡು, ಉಂಡು ಮಲಗಿ ಬೆಳಗ್ಗೆಎದ್ದುತಿಂಡಿ ಚಹಾ ಮುಗಿಸಿ ಶೇರ್ ಆಟೋದಲ್ಲಿಹಂಪೆಗೆ ಬಂದಾಗಲೇ ನನ್ನ ನಿನ್ನಿನ ಮಧುರಸ್ವಪ್ನ ಎಂತಹ ದುಃಸ್ವಪ್ನವಾಗುತ್ತಿತ್ತುಎಂಬುದರ ಅರಿವಾಯಿತು.
ಹಂಪೆಯಲ್ಲಿ ಇರಲೊಂದು ಸೂರೂ ಇಲ್ಲ, ತಿನಲೊಂದು ನೆಟ್ಟನೇ ಖಾನಾವಳಿಯೂ ಇದ್ದಿರಲಿಲ್ಲ. ಆ ರಾತ್ರಿ ಹೊಸಪೇಟೆಯಲ್ಲಿರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತಲೇ ವಿರೂಪಾಕ್ಷನ ಮಂದಿರ ಹೊಕ್ಕೆ.
ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋ ಕವಾವರಿಸುವ ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋ ಷದಿಂದ ಎಂದುಕೊಂಡು ಸ್ವಲ್ಪ ಹೊತ್ತುಧ್ಯಾನಸ್ಥನಾದೆ.
ಯಾರೋ ಎದ್ದುಬಂದು ಬಾಯ ಹಲ್ಲುಬೀಳುವಂತೆ ಒದ್ದಹಾಗಾಯಿತು! ಆಹಾ, ಎದುರಿಗೆ ನಿಂತದ್ದುಸ್ವಭಾವದಲ್ಲಿಕಠಿನನೆನಿಸಿಯೂ ಗುಣದಲ್ಲಿಭಕ್ತಿನಮ್ರನಾದ ಹಂಪೆಯರಸನ ಕುಮಾರ ಹರಿಹರನ ಮೂರ್ತಿ.
“ಅಳಿಯೆರಗದನಿಲನಲುಗದ ರವಿಕರಂಬುಗದ, ಬೆಳೆದು ನಳನಳಿಸಿ ಮಗಮಗಿಸುತಂ ಕವಲಿರಿದ \ ನನೆಮುಗುಳ್ ಕೊನೆಮುಗುಳ್ ಬಿರಿಮುಗುಳರಳ್ಗಳಂ \ ತನಿಗಂಪು ತೀವಿರ್ದ ಪೊಚ್ಚಪೊಸ ಪೂಗಳಂ ತಂದು ಇದೇ ವಿರೂಪಾಕ್ಷನನ್ನು ಪೂಜಿಸಿದನಲ್ಲವೇ.
ಅವನ ಭಕ್ತಿಯ ಬೆಳಕು ಅಲ್ಲಿ ಇಲ್ಲಿ ಸಂದುಗೊಂದುಗಳಲ್ಲಿ ಇನ್ನೂ ತುಂಬಿ ಆ ಮಂದಿರವನ್ನು ಬೆಳಗುತ್ತಿದ್ದುದನ್ನು ಕಾಣಲು ಕಣ್ತೆರೆದೆ.
ಅಷ್ಟರಲ್ಲಿಜಯ ಜಯ ವಿರೂಪಾಕ್ಷಾ ಎಂಬ ಜಯೋನ್ಮಾದದ ಧ್ವನಿ, ಧ್ವನಿಯನ್ನು ಸೀಳಿಕೊಂಡು ಕೋರೈಸುವ ಖಡ್ಗಳ ಝಳುಕು, ಆ ಝಳಕನ್ನು ಮುಸುಕುವ ಕುದುರೆಗಳ ಖುರಪುಟದ ಧೂಳು… ಇದೆಲ್ಲ ಗದ್ದಲಕ್ಕೆ ಹಿನ್ನೆಲೆಯಾಗಿ ಒಬ್ಬ ಆಚಾರ್ಯರು ಒಂದಿಬ್ಬರು ಕಟ್ಟಾಳುಗಳ ಜೊತೆಗೆ ಸರ ಸರ ಇಲ್ಲಿಗೆ ಬಂದುದು, 3 ಕೈಮುಗಿದು ಅರ್ಚನೆ ಮಾಡಿದುದು, ಆಮೇಲೆ ಮತ್ತೆಆ ಕಡೆ ಎಲ್ಲೋ ಕಲ್ಲುಬೆಟ್ಟಗಳ ನಡುವೆ ನಡೆದುದು ಎಲ್ಲಘನೀಭವಿಸಿ ಸುಳುಹು ಸುಳುಹುಗಳಾಗಿ ಆ ದೇವಾಲಯದ ಕಲ್ಲಿನ ಕೆತ್ತನೆಗಳಲ್ಲಿಅಂಟಿ ಹೋಗಿವೆಯೋ ಅನಿಸಿತು.
ಏನೋ ತರಾತುರಿ, ಕಾರ್ಯಾಚರಣೆ, ಯೋಚನೆ, ಯೋಜನೆ.
ನನ್ನದೂ ಆಲೋ ಚನೆ, ಮುಂದಿನ ಯೋಜನೆ.
ಮತ್ತೊಮ್ಮೆ ಹಣೆಮಣಿದು ಎದ್ದೆ.
ಹಿಂಬದಿಯಲ್ಲಿದ್ದ ವಿದ್ಯಾರಣ್ಯರ ದೇಗುಲಕ್ಕೆ ಹೋದೆ.
ಕೀಲಿ ಜಡಿದ ಬಾಗಿಲಿಂದೀಚೆಯೇ ನಿಂತು ಕೈಮುಗಿದು ಮುಖ್ಯದೇವಾಲಯಕ್ಕೆ ಮರಳಿದೆ.
ಅಲ್ಲೀಗ ಪಂಪಾಂಬಿಕೆ, ಭುವನೇಶ್ವರೀದೇವಿಯರ ದರ್ಶನ.
ಅವರಿಬ್ಬರಂತೂ ತಮ್ಮ ಮಂಗಳ ಮೋಹಕ ರೂಪಕ್ಕೆ ಅಲಂಕಾರವಾಗಿ ತೊಟ್ಟ ಅಚ್ಚಹಸುರಿನ ಎಲೆಗೊಂಚಲು ಹದಿದ ಅಚ್ಚಗೆಂಪು ಅಚ್ಚಬಿಳಿ ಅಚ್ಚರಿಷಿಣದ ಬಣ್ಣದ ಹೂಮಾಲೆಗಳ ಸೊಬಗನ್ನು ಏನೆಂದು ಹೇಳೋ ಣ! ಯಾವ ಕಲಬೆರಕೆಯೂ ಇರದ, ಕೃತ್ರಿಮತೆಯೂ ಇರದ ಪ್ರಕೃತಿರೂಪಿಣಿಗೆ ಆ ಮೊಗದ ಸೊಬಗಿಗೆ ಅಷ್ಟೇ ನಿಷ್ಕಲ್ಮಷವಾದ ಅಪ್ಪಟ ಪ್ರಾಕೃತಿಕ ವರ್ಣಾವಳಿಯ ತೊಡುಗೆಯ ಸಂಸ್ಕೃತಿ.
ದಿಟಕ್ಕೂ ಆಕೆ ನಮ್ಮ ನಾಡ ದೇವಿಯೇ.
ತಾಯಿ, ಈ ನಾಡನ್ನು ಕಾಯಿ, ಈ ನೆಲಕ್ಕೆ ಸಾತ್ತ್ವಿಕ ಸೌಂದರ್ಯದ ಸಮೃದ್ಧಿಯನ್ನು ಕೊಡು, ನಮ್ಮ ಕನ್ನಡ ನುಡಿಯನ್ನು ಹಸನಾಗಿರಿಸು, ನಮ್ಮ ಕಲೆ, ಒಲವು ನಲವುಗಳನ್ನು ಬೆಳಸು ಎಂದು ಬೇಡಿಕೊಂಡು ತುಂಗಭದ್ರೆಯ ದರ್ಶನ ಮಾಡಿಕೊಂಡು ಹೇಮಕೂಟದತ್ತನಡೆದೆ.
ರಣ ರಣ ಬಿಸಿಲಿನಲ್ಲಿ ಕಾದ ಕಲ್ಲಿನ ಆ ವಿಶಾಲ ಪರ್ವತಪ್ರಸ್ತರಣ ಹೇಮಕೂಟ! ಮಹಾದೇವ ಶಿವನು ಸತಿಯನ್ನು ಕಳೆದುಕೊಂಡ ಮೇಲೆ ಈ ಹೇಮಕೂಟದ ಮೇಲೆಯೇ ಅಂತೆ, ಬಂದು ತಪಸ್ಸು ಮಾಡಿದ್ದು.
ಇಲ್ಲಿಯೇ ಅಂತೆ ಪಾರ್ವತಿಯು ನಿತ್ಯ ಆತನ ಸೇವೆ ಮಾಡುತ್ತಒಲಿಸಿಕೊಳ್ಳಲು ಯತ್ನಿಸಿದ್ದು.
ಅಂತೆಯೇ ದೇವತೆಗಳು ಮನ್ಮಥನನ್ನು ಚೋದಿಸಿ ಶಿವನ ತಪೋಭಂಗಕ್ಕೆ ಕಳಿಸಿದ್ದೂ, ಭಾಲನೇತ್ರದ ಉರಿಯಿಂದ ಶಂಕರನು ಮದನದಹನವನ್ನು ಗೈದಿದ್ದೂಎಲ್ಲಇಲ್ಲಿಯೇ ಅಂತೆ. ಹ್ಮ್. ಆ ಕಾಳಿದಾಸ ದೂರದ ಉಜ್ಜಯಿನಿಯಿಂದ ಇದೆಲ್ಲನೋ ಡಿದ, ಅಥವಾ ಯಾರೋ ಅವನಿಗೆ ಸುದ್ದಿಮುಟ್ಟಿಸಿದರು. ಅಂತೆಯೇ ಚುಟುಕಾಗಿ ಬರೆದುಬಿಟ್ಟ, “.
ಸ್ಫುರನ್ನುದರ್ಚಿಃ ಸಹಸಾ ತೃತೀಯಾದಕ್ಷ್ಣಃ ಕೃಶಾನುಃ ಕಿಲ ನಿಷ್ಪಪಾತ || ಕ್ರೋಧಂ ಪ್ರಭೋ ಸಂಹರ ಸಂಹರೇತಿ ಯಾವದ್ಗಿರಂ ಖೇ ಮರುತಾಂ ಚರಂತಿ | ತಾವತ್ಸ ವಹ್ನಿರ್ಭವನೇತ್ರಜನ್ಮಾ ಭಸ್ಮಾವಶೇಷಂ ಮದನಂ ಚಕಾರ ||” ಪಾರ್ವತಿಯ ವರ್ಣನೆ, ರತಿವಿಲಾಪಗಳನ್ನು ಪುಟಪುಟಳಗಷ್ಟು ಸರ್ಗದಷ್ಟು ಬರೆದಾತನಿಗೆ ಏನಷ್ಟೂ ಕಿಮ್ಮತ್ತಿಲ್ಲದ್ದಾಯಿತೇ ನಮ್ಮ ಮುಕ್ಕಣ್ಣನ ಹಣೆಗಣ್ಣುರಿ! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ದೂರದೆ ಸುಟ್ಟ ಬಣ್ಣನೆ ಸಣ್ಣಗೆ ಅಂತಾಯಿತು ಪಾಪ ಕಾಳಿದಾಸನ ಕವಿತೆ.
ಅದೇ ನಮ್ಮ ಹರಿಹರ ಕವೀಶ್ವರನನ್ನನೋಡಿ! ಅಲ್ಲಿಯೇ ತುಂಗಭದ್ರೆಯ ದಡದ ಮೇಲೆ ಕೂತು ಸಂಪಗೆ ಮಾಲೆ ಹೆಣೆಯುತ್ತಿದ್ದವನಿಗೆ ಇದೆಲ್ಲವಿವರವಿವರವಾಗಿ ಕಂಡಿತ್ತು.
ಉದ್ದಕ್ಕೆ ಎಳೆದೆಳೆದು ಹಾಕಿದ… “ಪೊಗೆದುದು ಪೊತ್ತಿದತ್ತುಕಿಡಿಯಿಟ್ಟುದು ನಾಲ್ದೆಸೆದೋ ರಿದತ್ತುಬಾ- ನ್ಗೊಗೆದುದು ನಿಂದು ಪೊಂಬೆಳಗುಮಂ ಪರಪುತ್ತದು ಧಂಧಗಿಲ್ ಧಗಿಲ್- ಧಗಿಲೆನುತಟ್ಟಿ ತಟ್ಟಿದುದು ಮುಟ್ಟಿತು ಸುಟ್ಟಿತು ತಿಂದು ತೇಗಿದತ್ತಗಿಯದೆ ನಿಂದ ಪೂಗಣೆಯನಂ ಪಣೆಗಣ್ಣುರಿ ಹಂಪೆಯಾಳ್ದನಾ || ಇಟ್ಟಣಿಸಿ ಘುಡುಘುಡಿಸಿ ಕಿಡಿ- ಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂ ತೊಟ್ಟುದು ಬಿಸುಗಣ್ಣುರಿ ಪೊರ- 4 ಮಟ್ಟುದು ಸುಟ್ಟುದು ರತೀಶನಂ ನಿಮಿಷಾರ್ಧಂ || ಗಗನದೆ ಹರಿಸುರಪತಿಗಳ್ ಜಗದ್ಧಿತಾರ್ಥಂ ಮಹೇಶ ಕರುಣಿಪುದೆಂಬ- ನ್ನೆಗಮಿತ್ತಲ್ ಘರಿ ಘರಿ ಭುಗಿ- ಭುಗಿಲೆನೆ ನೆರೆ ಕಾಮನುರಿದು ಕರಿಮುರಿವೋದಂ ||.
" ಇಷ್ಟಕ್ಕೆ ಮುಗಿಯಲಿಲ್ಲ, ಬೆಂಕಿಯ ಝಳ ಇನ್ನೂ ಹರಡಿದೆ.
ಇರಲಿ, ಅಂತೂ ಪಾರ್ವತಿ ಮನೆಗೆ ಕಾಲಿಟ್ಟಳು.
ಗಣಪ ಹುಟ್ಟಿದ.
ಸಾಸುವೆಕಾಳಷ್ಟಿದ್ದವನು ಬೆಳೆದು ಕಡಲೆಕಾಳಷ್ಟಾದ.
ಇವರ ಸಂಸಾರ ಒಂದು ನೆಲೆಗೆ ಹತ್ತಿತು, ಮುಂದೇನು ಎಂದು ಗೂಗಲ್ ಮ್ಯಾಪ್ ತೆಗೆದೆ.
ತುಂಬ ಚಿಕ್ಕವನಿದ್ದಾಗೊಮ್ಮೆ ಹಂಪೆನೋಡಿದ್ದೆ.
ಏನೂ ಅಷ್ಟು ನೆನಪಿರಲಿಲ್ಲ.
ಈಗ ಮ್ಯಾಪ್ ಅಲ್ಲಿ ವಿಜಯವಿಟ್ಠಲ ದೇವಾಲಯನೋಡಿದರೆ ಗಾಡಿಯಲ್ಲಿಹೋಗಲು ಒಂಬತ್ತುಕಿಲೋ ಮೀಟರ್ ಏನೋ ತೋರಿಸಿತು.
ಆದರೆ ನೇರ ದೂರ ಅಷ್ಟಾಗಿ ಅನಿಸಲಿಲ್ಲವಾಗಿ ನಡಿಗೆಯ ದೂರನೋಡಿದೆ.
ಅರೇ, ಇಲ್ಲೇ ಎರಡೂವರೆ ಕಿಲೋ ಮೀಟರ್ ಇದೆಯಲ್ಲ.
ಅದೂ ತುಂಗಭದ್ರೆಯ ದಂಡೆಯ ಗುಂಟವೇ.
ಅಹೋಭಾಗ್ಯ ಎಂದುಕೊಂಡು ಗೂಗಲ್ ಗುರುವಿನ ಹಿಂದೆ ಹೆಜ್ಜೆಹಾಕತೊಡಗಿದೆ.
ಬರ್ತಾ ಬರ್ತಾ ಗೂಗಲ್ಲಿನ ಅಗತ್ಯ ತಪ್ಪಿತು.
ಪ್ರವಾಸಿ ನಿಗಮದವರು ಚಂದಾಗಿ ಎಲ್ಲೆಡೆ ಬೋರ್ಡು ಹಾಕಿದ್ದರು.
ವಿರೂಪಾಕ್ಷನ ಗುಡಿಯ ಮುಂದಿನ ವಿಜಯನಗರದ ಹಳೇ ಪೇಟೆಯ ಬೀದಿಯಲ್ಲಿಸಾಗಿ, ಎಡಕ್ಕೆ ತಿರುಗಿದರೆ ತಣ್ಣನೆ ಗಾಳಿ ಬಡಿಯತೊಡಗಿತು.
ಅಲ್ಲೊಂದು ಬದಿಯಲ್ಲಿಗುಮಚಿ ಅಂಗಡಿ.
ಒಂದು ಪಾಕೀಟು ಪಾಪಡೆ ತಗೊಂಡೆ.
ಅದು ನನಗೆ ಇಷ್ಟ.
ಎಲ್ಲೋ ಚಿಕ್ಕಂದಿನಲ್ಲಿ ಊರಲ್ಲಿ ಕೊಂಡು ತಿನ್ನುತ್ತಿದ್ದುದು.
ಅದನ್ನು ತಿನ್ನದೇ ದಶಕ ದಶಕಗಳೇ ಆಗಿತ್ತು.
ಕೊಳವೆ ಕೊಳವೆಗಳಾಗಿರುವ ಅವನ್ನು ಬೆರಳಿಗೆ ಹಾಕಿಕೊಂಡು ಕರುಮ್ ಕುರುಮ್ ಎಂದು ಉಪ್ಪು ಖಾರದ ಸೊಗಡಿನ ಹುಡಿ ಕಟವಾಯಿ ನಾಲಗೆಗಳಿಗೆ ಮೆತ್ತಿಕೊಂಡಿರುತ್ತ, ಮೂಗಿಗೆ ಕರಿದ ಎಣ್ಣೆಯ ಘಮಲು ಬಡಿಯುತ್ತ ಆಹಾ.
ಏನು ಸಂಭ್ರಮ! ಹಾಗೇ ಕೈಗೆ ಬೆನ್ನಿಗೆ ಮನಸ್ಸಿಗೆ ಯಾವ ಭಾರವೂ ಇಲ್ಲದೇ ಹೊತ್ತಿನ ಪರಿವೆ ಇಲ್ಲದೆ ಅಪರಿಚಿತ ಊರಲ್ಲಿಏಕಾಂಗಿಯಾಗಿ ನಡೆದದ್ದೂದಶಕವೇ ಸಂದಿತೇನೋ .
ಅರ್ಧ ತಾಸಿನ ಹಿಂದೆಯಷ್ಟೇ ಗುಡಿಯ ಹಿಂದೆ ಭೇಟಿಯಾದ ಏನದೇ ನದಿ ಬಿಡು ಎಂದೆನಿಸಿದ್ದು, ಈಗ ಆ ದಾರಿ ಗುಂಟವಾಗಿ ಕಲ್ಲುಬಂಡೆಗಳ ನಡುವೆ ಜುಳು ಜುಳು ಹರಿಯುತ್ತ, ಬಾ ನಾನೂ ನಿನ್ನೊಡನೆ ಬರುವೆ ವಿಜಯ ವಿಟ್ಠಲನ ವರೆಗೆ ಎಂದು ಕುಲು ಕುಲು ಹೊಸತನದ ನಗುವಿನಲ್ಲಿಸ್ನೇಹಶೀಲೆಯಾಗಿ ಜೊತೆಗೂಡಿದಳು ತುಂಗಭದ್ರೆ.
ಅದು ಕಂಪ ಭೂಪಾಲನು ನಿರ್ಮಿಸಿದ ಮಾರ್ಗವಂತೆ.
ನಡೆನಡೆಯುತ್ತಎಡಕ್ಕೆ ಹೊಳೆಯ ತೀರಾ ಹತ್ತಿರದ ದಂಡೆ, ಬಲಕ್ಕೆ ಕಲ್ಲಿನ ಹೆಬ್ಬಂಡೆಗಳ ರಾಶಿ.
ಹಾಗೇ ಸಾಗಿದರೆ ಒಂದು ಗವಿಯಂದದ ದಾರಿ.
ಅದರೊಳಕ್ಕೆ ನುಸುಳಿ ಆಚೆಯ ಕಡೆ ದಾಟುವಾಗ ಒಂದು ಬಂಡೆಯ ಮೇಲೆ ಕಂಪ ಭೂಪನದೆನ್ನುವ ಒಂದು ಉಬ್ಬು ಶಿಲ್ಪ.
ಅಂಜಲಿಮುದ್ರೆಯಲ್ಲಿನಿಂತಿದ್ದಆ ಪ್ರಭುವಿಗೆ ನಾನೂ ಗೌರವದಿಂದ ಕೈ ಜೋಡಿಸಿ ಮಣಿದೆ.
ಅವನಿಂದ ಬೀಳ್ಕೊಂಡು ನಡೆದರೆ ಆಹಾ, ಅಲ್ಲಿಹೊಳೆಯ ಸ್ನಾನ ಘಟ್ಟ.
ಬಲಬದಿಗೆ ಕಲ್ಲುಬೆಟ್ಟದ ಮೇಲೆ ಆಂಜನೇಯನ ಗುಡಿ.
ಈಚೆ ತುಂಗಭದ್ರೆ ಸ್ವಲ್ಪ ತಿರುವು ತೆಗೆದುಕೊಂಡು ಮುಂದೆ ಸಾಗುತ್ತಾಳೆ.
ಆಚೆಯ ದಂಡೆಯಲ್ಲಿಋಷ್ಯಮೂಕ, ಅಂಜನಾದ್ರಿ ಇತ್ಯಾದಿ.
ಈಚೆಯ ದಂಡೆಯಲ್ಲಿಹಾಗೇ ಸ್ವಲ್ಪ ಮುಂದೆ ಸಾಗಿದೆ.
ಬೋ ರ್ಡು ಓದಿದಾಗ, ಹೋಈ ಕಡೆ ಬಲಕ್ಕೆ ಕಾಣುತ್ತಿರುವುದೇ ಮಾತಂಗ ಪರ್ವತ.
ಮತಂಗ ಮಹರ್ಷಿಯ ಶಾಪಕ್ಕೆ ಹೆದರಿ ವಾಲಿ ಈಯೆಡೆ ಬಾರನೆಂದು ಸುಗ್ರೀವನು ಹನುಮಂತ ಜಾಂಬವಾದಿಗಳೊಡನೆ ಇಲ್ಲೇ ಅಲ್ಲವೆ ಅಡಗಿಕೊಂಡದ್ದು! ಇಲ್ಲೇ ಎಲ್ಲೋ ಬಿದ್ದಿತ್ತೇನೋ ಆ ದುಂದುಭಿಯ ಅಸ್ಥಿಪಂಜರ.
ಮತ್ತೆಆ ಏಳು ತಾಲವೃಕ್ಷಗಳು ಎಲ್ಲಿದ್ದಿರಬಹುದು? ಸುತ್ತಲೂ ಊಹೆಯನೋಟ ಚೆಲ್ಲಿದೆ.
ಅವಕ್ಕೆ ಗುರಿಯಿಟ್ಟು ಬಾಣ ಹೂಡಿಕೊಂಡು ರಾಮ - ಆಹಾ ಆ ಪಿತೃವಾಕ್ಯಪರಿಪಾಲಕನಾದ ರಾಮ, ಸೀತಾವಿಯೋಗಪರಿತಪ್ತನಾದ ರಾಮ, ಮರ್ಯಾದಾಪುರುಷೋ ತ್ತಮ ರಾಮ - ಇಲ್ಲೇ ಎಲ್ಲೋ ನಿಂತಿದ್ದಿರಬಹುದಲ್ಲವೇ! ನಾನು ಈಗ ನಿಂತಲ್ಲೇ ಅವನೂ ನಡೆದಾಡಿದ್ದಲ್ಲವೇ.
ಜೊತೆಗೇ ಆ ನಚ್ಚಿನ ಕಟ್ಟಾಳು, ಆಳು ಎನಿಸಿಕೊಂಡೇ ದೇವತ್ವಕ್ಕೇರಿದ ಮಹಾವೀರನೂ ವಾಕ್ಕೋವಿದನೂ, ಧೀಮಂತನೂ ಆದ ಆ ಹನುಮ, 5 ಪರಮವೃದ್ಧನಾದ ಆ ಬ್ರಹ್ಮಪುತ್ರ ಜಾಂಬವ ಇವರೆಲ್ಲನಡೆದದ್ದು! ಬಾಗಿ ಮಣ್ಣನ್ನು ಮುಟ್ಟಿ ಹಣೆಗೊತ್ತಿಕೊಂಡೆ, ತಲೆ ಮೇಲೆ ಕೊಡವಿಕೊಂಡೆ.
ಹಾಗೇ ನಿಂತು ಕಣ್ಣಾಡಿಸಿದೆ.
ನಿರಭ್ರ ನಿರವಧಿಕ ನೀಲಗಗನದ ಹರಹು.
ಅದರಡಿಯಲ್ಲಿಎತ್ತರಕ್ಕೂ ಅಡ್ಡಗಲಕ್ಕೂ ಹಬ್ಬಿದ ಹನುಮನ ವಜ್ರಕಠೋ ರ-ವಕ್ಷಃಸ್ಥಳದಂತೆಸೆವ ಶೈಲಶ್ರೇಣಿ.
ಅವುಗಳ ಸಾನುವಿನಲ್ಲಿ, ಪಾದಸ್ಥಾನದಲ್ಲಿನಡುನಡುವೆ ಗುಹೆ, ಸಂದು ಗೊಂದುಗೊಳಲ್ಲಿತೂರಿ ಹಾರಿ ಓಡಾಡುತ್ತಿದ್ದಆ ಮಹಾಕಪಿಗಳ ಚಿತ್ರಗಳಿಗೆ ನನ್ನ ಊಹೆಯ ಉಸಿರು ತುಂಬಿ ಕಣ್ತುಂಬಿಕೊಂಡೆ.
ಮತ್ತೆಆಚೆ ಬಲಕ್ಕೆ ಹೊರಳಿದರೆ ಅಚ್ಯುತರಾಯನ ಮಂದಿರ.
ಎಡಕ್ಕೆ ತಿರುಗಿದರೆ ಸುಗ್ರೀವ ಗುಹೆ.
ಅಲ್ಲಿಯೇ ಉದ್ದಕ್ಕೆ ಸೀತೆಯ ಸೆರಗು.
ಆ ಹೆಬ್ಬಂಡೆಯ ಹಾಸಿನ ಮೇಲೆ ಆಕೆಯ ಸೆರಗು ತಾಗಿ ಅಮೃತಶಿಲೆಯ ಪದರವಾಗಿ ಮೂಡಿದೆ.
ಅದೆಲ್ಲಮೂಢ ನಂಬಿಕೆ ಎನ್ನುವಿರಾ? ಇಲ್ಲ.
ಆ ಪರಮಪಾವನೆ ಸೀತೆ ನಮ್ಮ ಮನದಲ್ಲಿಅಷ್ಟು ಆಳವಾಗಿ ಶಾಶ್ವತವಾಗಿ ಅಚ್ಚೊತ್ತಿಮೂಡಿ ನಿಂತ ಅಪ್ಪಟವಾದ ದಿಟದ ಮುಂದೆ ಈ ಸೆರಗು ಮೂಡಿದ್ದುಯಾವ ಮಟ್ಟಕ್ಕೆ ಸಟೆಯಾದೀತು! ಅದರ ಮೇಲೆ ಮೆಲ್ಲಗೆ ಕೈಯಾಡಿಸಿ, ಕಣ್ಣಿಗೊತ್ತಿಕೊಂಡು, ಅಲ್ಲೊಂದು ಚಿಕ್ಕ ಹೊಂಡದ ಆಚೆ ಇರುವ ಬಂಡೆಗಳ ಸಂದಿನಲ್ಲಿ ಹೋದೆ.
ಬಿಲದ ಬಳಿ ಹೋಗುತ್ತಲೇ ಒಳಗಿಂದ ಏನೋ ಸದ್ದು, ಅಸ್ಪಷ್ಟವಾದ ಮಾತುಗಳು.
ಆಗಾಗ ದುಃಖ ಉಮ್ಮಳಿಸಿದಂತಹ ದನಿ.
ನಿಟ್ಟುಸಿರು, ಹೂಂಗುಡಿತ, ಉದ್ವೇಗಗಳ ಉಲಿ.
ಮುಂದುವರಿಯದೇ ಅಲ್ಲೇ ನಿಂತೆ.
“ಪ್ರಭು. ಇದೇ ಆ ವಸ್ತ್ರದ ಗಂಟು..
" “ಆಹ್, ಬಿಚ್ಚಿನೋಡು..”..
ಏನೋ ಘಲ-ಘಳಿರು ಶಬ್ದ.
ಜೊತೆಗೇ ಆ ಮಬ್ಬುಗತ್ತಲ ಗವಿಯೊಳಗೆ ಥಳ ಥಳ ಮಿನುಗು.
“ಇವೇ ಏನುನೋಡು ಲಕ್ಷ್ಮ ಣ.
ನನಗೆ ಕಣ್ಣುಮಂಜಾಗಿಬಿಟ್ಟಿದೆ.
" ಏನೋ ಒಂದು ಅಳಲಿನ ಸುಯ್ಲು.
“ಹೌದಣ್ಣ.
ಇದೇ ಅಂದುಗೆ… ನನಗೆ ಸರಿಯಾಗಿ ಗುರುತಿದೆ.
" ಮತ್ತೆಅಳಲಿನ ಸುಯ್ಲು.
ಈ ಬಾರಿ ಹಲವರದು ಏಕಕಾಲಕ್ಕೆ.
ಏನಿದೆಲ್ಲಎಂದು ಹಾಗೇ ನಿಂತುನೋಡುತ್ತಿದ್ದರೆ, ಕೆಲಹೊತ್ತಿನಲ್ಲಿಗವಿಯ ಒಳಗೆ ಝಗ್ಗನೇ ಬೆಳಕಾಯಿತು.
ಕುಂಡದಲ್ಲಿಅಗ್ನಿದೇವನು ನಿಗಿ ನಿಗಿ ಜ್ವಲಿಸುತ್ತಿದ್ದಬೆಳಕಿನ ಕುಣಿತ.
ಒಡನೆಯೇ ಗಟ್ಟಿಯಾಗಿ ಶಪಥ ಮಾಡುತ್ತಿರುವಂಥ ಎರಡು ದನಿಗಳು.
ಧೀರಗಂಭೀರವೆನಿಸಿಯೂ ಮಾಧುರ್ಯವುಳ್ಳ ಒಂದು ದನಿ, “ನಾನು, ಅಯೋಧ್ಯೆಯ ರಘುಕುಲಾನ್ವಯನಾದ ದಶರಥ ಮಹಾರಾಜನ ಮಗನಾದ ರಾಮ, ಇನ್ನು ಮುಂದೆ ನಿನ್ನ ಮಿತ್ರನಾಗಿ.. .”.
ಕೀರಲೆನಿಸಿಯೂ ದೃಢವಾದ ಶಕ್ತವಾದ ಇನ್ನೊಂದು ದನಿ, “ನಾನು, ಕಿಷ್ಕಿಂಧೆಯ ಋಕ್ಷರಜಸ್ಸಿನ ಮಗನಾದ ಸುಗ್ರೀವ, ಇನ್ನು ಮುಂದೆ ಸದಾ ನಿನಗೆ ಮಿತ್ರನಾಗಿದ್ದುಕೊಂಡು.”.
“ಅಗ್ನಿಸಾಕ್ಷಿಯಾಗಿ.
" ಚೂರೇ ಚೂರು ಗೋಣು ಚಾಚಿ ಕಡೆಗಣ್ಣಕಳ್ಳನೋ ಟ ಬೀರಿದೆ.
ಅವರ ಆ ಕೆಲಸಗಳಿಗೆ ಎಲ್ಲಿಚಿತ್ತಭಂಗವಾದೀತೋ ಎಂಬ ಅಂಜಿಕೆ.
ಕತ್ತಲ ಗುಹೆಯಲ್ಲಿನಡುವೆ ಅಗ್ನಿ ಹೊತ್ತಿಸಿಕೊಂಡು ಸುತ್ತಲೂ ನಿಂತಿದ್ದಅವರ ಮಿನುಗುವ ಅಂಗಲೇಖೆಗಳು ಮಾತ್ರ ಅಸ್ಪಷ್ಟವಾಗಿ ಕಂಡುವು.
ಹಾಗೇ ನಮಿಸಿ ಹೊರನಡೆದೆ.
ಅಲ್ಲಿನೋ ಡಲು ರಾಮ, ಇಲ್ಲಿನೋ ಡಲು ರಾಮ.
ಆ ರಾಮನ ಓಡಾಟದ ನೆಲದ ಪಕ್ಕದಲ್ಲೇ ಆಚೆ ಹೊಳೆ ದಂಡೆಯ ಒಂದು ಚಿಕ್ಕ ಬಯಲಿನಲ್ಲಿಆಲದೊಂದು ಮರ.
ಅದರಾಚೆ ಪುರಂದರ ಮಂಟಪ.
ಮರದ ಕೆಳಗೆ ಒಬ್ಬಾಕೆ ಮಂಡಕ್ಕಿ, ಮಿರ್ಚಿ ಭಜಿ, ಮಜ್ಜಿಗೆ ಎಲ್ಲಹಚ್ಚಿಕೊಂಡು ಕೂತಿದ್ದಳು.
ಬೆಳಗ್ಗೆಹೊಸಪೇಟೆಯಲ್ಲಿತಿಂದುದಷ್ಟೇ.
ಹಂಪೆಯಲ್ಲಿತಿನ್ನಲು ಖಾಸಾಗಿ ಏನೂ ಇರಲಿಲ್ಲ.
ಪಾಪಡಿ, ಅನಾನಸು, ನೆಲ್ಲಿಕಾಯಿಗಳ ಮೇಲೇ ಮಧ್ಯಾಹ್ನ ನೂಕಿದ್ದೆ.
ಈ ಧಣಧಣ ಹೊಟ್ಟೆಗೆ ಮಿರ್ಚಿ ಭಜಿ ಬೇಡವೆನಿಸಿತು.
ಮಜ್ಜಿಗೆ ಕುಡಿದು ಕಲ್ಲಮಂಟಪಕ್ಕೆ ಹೋದೆ.
ಅಲ್ಲಿನಾನೊಬ್ಬನೇ.
ಕಲ್ಲಿನ ಕಂಬದಲ್ಲಿದಾಸರ ಉಬ್ಬು ಶಿಲ್ಪ.
ಹಣೆ ಹಚ್ಚಿ ನಮಿಸಿ, ಮಂಟಪದ ಕಟ್ಟೆ ಇಳಿದು, ಹೊಳೆಯ ನೀರಲ್ಲಿಕಾಲಿಳಿ ಬಿಟ್ಟುಕೊಂಡು ಕಲ್ಲಿನ ಹಾಸಿನ ಮೇಲೆ ಕುಳಿತು ನಾಕೈದು ಕೀರ್ತನೆ ಹಾಡಿದೆ.
ಎಷ್ಟೋ ದಿನದಿಂದ ಹಾಡಿರಲಿಲ್ಲವಾದರೂ ದಾಸರ ಆ ಇನಿದಾದ ನೆನಪಿನಲ್ಲಿಗಂಟಲು ತಾನೇ ಉತ್ಸಾಹ ತೋರಿಕೊಂಡು ಬಂದಿತು.
ಸ್ವಚ್ಛಂದಳಾಗಿ ಹರಿಯುತ್ತಿದ್ದತುಂಗಭದ್ರೆಯ ಅಲೆಗಳ ಗಮಕ, ತಾನಗಳ ಮೇಲೆ ಅಪರಾಹ್ಣದ ಸೂರ್ಯ ತನ್ನ ಕಟುವೆನಿಸದ ಆದರೆ ಸ್ಪಷ್ಟವಾದ ವರ್ಣಾಕ್ಷರಗಳನ್ನು ಒತ್ತುತ್ತಿದ್ದ.
ಮೇಲಿನ ಬಯಲ ಮರದ ಕೆಳಗೆ ಮಜ್ಜಿಗೆ ಮಾರುವವಳ ಬಳಿ ನಾಕೆರಡು ಜನರ ದನಿಗಳು, ಈ ಕಡೆ ಎಲ್ಲೋ ದೂರದಲ್ಲಿ ಕಲ್ಲುಕಟೆಯುವ ಸದ್ದು, ಮತ್ತೆಅಲ್ಲೇ ಎಲ್ಲೋ ದನಗಳ ಅಂಬಾರವ, ಇವೆಲ್ಲಜಗತ್ತುಇದೆ, ಆದರೆ ನನ್ನಿಂದ ದೂರ ಇದೆ 6 ಎಂದು ಸೂಚಿಸುತ್ತಿದ್ದುವು.
ನಾನು ಮಾತ್ರ ಇಲ್ಲಿಏಕಾಂಗಿ, ಸ್ವತಂತ್ರ.
ಆ ಏಕಾಂತದಲ್ಲಿ, ಆ ವಿಟ್ಠಲನ ವಂಚನೆಯ ಭಾಗ್ಯಕ್ಕೆ ಸಿಲುಕಿ ನವಕೋಟಿಯ ಸಿರಿವಂತಿಕೆಯ ಜಗತ್ತನ್ನು ಬಿಟ್ಟು ಬಂದವನ ಪದಗಳು ನಾಲಗೆಯ ಮೇಲೆ ನಲಿಯುತ್ತಿದ್ದುವು.
“ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ.
" ಮಂಟಪದಿಂದ ಎದ್ದುಈ ಕಡೆ ಬಂದೆ.
ಹಿಂಡು ಹಿಂಡಾಗಿ ಆಕಳುಗಳು - ಕಪ್ಪು, ಕಂದು, ಬಿಳಿ, ಹಂಡ - ವಿಜಯವಿಟ್ಠಲ ಮಂದಿರದ ಕಡೆಯಿಂದ ಮಾತಂಗದ ಕಡೆ ಹೊರಟಿದ್ದುವು.
ಕಣ್ತುಂಬನೋಡಿ ಹರ್ಷಪಟ್ಟು ಕೆಲವದರ ಬಾಲ ಮುಟ್ಟಿ ಮುಗುಳ್ನಕ್ಕೆ, ಮುಟ್ಟಿದ್ದಕ್ಕೆ ಕರುವೊಂದು ಬಾಲ ನಿಮಿರಿ ಛಂಗನೆ ನೆಗೆದೋ ಡಿದಾಗ ಹಲ್ಲುಬೀರಿ ನಕ್ಕೆ.
ಅವು ನಡೆದ ದಿಕ್ಕಿಗೆ ವಿರುದ್ಧವಾಗಿ ಬಂದೆ.
ತನ್ನ ಮಂದಿರದಿಂದ ವಿಜಯವಿಟ್ಠಲ ಯಾವಾಗಲೋ ಹೊರಟು ಹೋಗಿದ್ದ.
ಮಥುರೆಗೆ ನಡೆದ ಮೇಲೆ ಗೋಕುಲದ ಸ್ಥಿತಿಯಂತಾಗಿತ್ತುಅದು.
ಅಲ್ಲಲ್ಲಿಮುಗ್ಗರಿಸುವ ಇಳಿವಯಸ್ಸಿನ ನೆನಪಿನ ಹಂದರದಂತೆ ಒಳಿತೋ ಕೆಡುಕೋ ಎರಡನ್ನೂ ಹೊತ್ತುಕೊಂಡು ನಿಂತಿತ್ತು.
ಗತಸಾಮ್ರಾಜ್ಯಭವನದ ಹಳೇ ದಾರುಮುಟ್ಟುಗಳಿಗೆ ಕಟ್ಟಿದ ಗೆದ್ದಲು ಹುತ್ತುಗಳಂತೆ ಕಲೆಯ ಸ್ನಿಗ್ಧಸೌಂದರ್ಯ ಆ ಭಿತ್ತಿ, ಕಂಭಗಳಿಗೆ ಒತ್ತೊತ್ತಾಗಿ ಮೆತ್ತಿಕೊಂಡಿತ್ತು.
ನೆರೆದ ಕೆಲವರ ಮುಂದೆ ಜೋತು ಬಿದ್ದು ದೀನವಾಗಿ ತಮ್ಮ ಅಸ್ತಿತ್ವದ ಸಾರ್ಥಕ್ಯ ಏನು ಎಂದು ಅವು ಕೇಳುತ್ತಿರುವಂತೆ ಅನಿಸಿತು.
ಇನಿದು ಸರವನುಲಿವ ಕಂಬಗಳಿಗೀಗ ನುಡಿಯಿಸಿಕೊಂಡು ಹಾಡುವ ಅವಕಾಶವಿಲ್ಲ.
ಮಂಚದ ಮೇಲೆ ಕಲಾವಿದರನ್ನು ಕರೆಯಿಸಿ ಹಾಡಿಸದೇ ಕೇವಲ ಪ್ರದರ್ಶನಕ್ಕೆ ಕೂರಿಸಿದಂತಹ ಮೂಕವೇದನೆ ಅವುಗಳಿಂದ ಒಸರುತ್ತಿತ್ತು.
ಅರ್ಧ ತಾಸು ಒಬ್ಬ ಗೈಡ್ ಜೊತೆ ಸುತ್ತಿಬಂದು, ಆಮೇಲೆ ಮತ್ತರ್ಧ ತಾಸು ನಾನೊಬ್ಬನೇ ಸುತ್ತಾಡಿದ್ದಾಯಿತು.
ಬಿಟ್ಟು ಬಂದ ಹಳ್ಳಿಯ ನಮ್ಮ ಮನೆಯನ್ನು ಆಗೀಗ ಕಂಡು ಆಗಿನ ಬಾಳ್ವೆ, ಸಂಭ್ರಮ, ಸಡಗರಗಳ ನೆನಪಿನ ಸರಕನ್ನು ಮೌನದ ನೌಕೆಯಲ್ಲಿ ಸಾಗಿಸುವಂತೆಯೇ ಈ ಮಂದಿರವನ್ನು ಕಂಡಾಗಲೂ ಆದದ್ದು.
ಆವಾಗಿನ ಆ ಹಬ್ಬಗಳು, ಉತ್ಸವಗಳು, ಸಭೆ-ಸಮಾರಮ್ಭ ಗಳು, ಆ ಸುಣ್ಣ-ಬಣ್ಣಗಳು, ಪರದೆ-ಪರಿಜುಗಳು, ಮಂಗಲ ವಾದ್ಯ-ಮಂತ್ರಘೋಷಗಳು, ಸಂಗೀತ-ನೃತ್ಯಗಳು, ಹಸೆ ಹಾಡುಗಳು, ಪರಾಕು-ಬಿರುದು-ಬಿನ್ನವತ್ತಳೆಗಳು, ಯಜಮಾನನಾದ ಅರಸನ ಉಪಸ್ಥಿತಿ, ಜರುಬಿನ ಓಡಾಟ, ಮಹಿಷಿಯರ ಮೇಲಾಟ, ಸಖಿಯರ, ಪರಿಜನದ ಪುರಜನದ ಹೊಕ್ಕು ಬಳಕೆಯ ನಲಿವು ಚೆಲುವುಗಳನ್ನು ಊಹಿಸಿಕೊಂಡೆ.
ಕಲಾವಿದರ ಕಲೆಯ ಪ್ರಶಂಸೆಗೂ ಮನಬಾರದೆ, ಹಾಳುಗೆಡವಿದವರ ಹಳಿಯಲೂ ಮನಬಾರದೆ ಸುಮ್ಮನೇ ತಲೆ ತಗ್ಗಿಸಿಕೊಂಡು ಹೊರಬಂದೆ.
ರಾಜನ ತುಲಾಭಾರ ಮಂಟಪ ದಾಟಿ, ಸೂಳೆ-ಬೀದಿ ದಾಟಿ, ಮಾತಂಗ-ಗಂಧಮಾದನಗಳ ನಡುವಿರುವ ಅಚ್ಯುತರಾಯನ ಮಂದಿರವನ್ನು ಹೊಕ್ಕೆ.
“ಬೇಗನೋಡಿ ಬನ್ನಿ, ಇನ್ನರ್ಧ ತಾಸಿಗೆ ಬಂದ್ ಆಗುತ್ತದೆ” ಎಂದ ಸೆಕ್ಯುರಿಟಿ.
ಸರಿ ಎಂದು ಒಳ ನಡೆದೆ.
ಅಲ್ಲಿಬಂದ್ ಮಾಡಲು ಬಾಗಿಲಿಲ್ಲ, ಒಳಗೆ ಸಂಪತ್ತಿಲ್ಲ.
ದೊಡ್ಡಪ್ರಾಕಾರದ ಒಳಗೆ ಮತ್ತೊಂದು ಮಹಾದ್ವಾರ.
ಒಳ ಹರವಿನಲ್ಲಿ ದಶಾವತಾರದ ಮುದ್ದಾದ ಉಬ್ಬು ಶಿಲ್ಪಗಳು.
ಸೂರು-ಮಾಡುಗಳ ಮಿತಿಯನ್ನು ಕಳಚಿಕೊಂಡು ಅನಂತ ಆಕಾಶಕ್ಕೆ ಮೈದೆರೆದುಕೊಂಡು ಆಧೇಯವೇ ಇಲ್ಲದೇ ನಿಂತ ಎರಡಾಳೆತ್ತರದ ಯಾಳಿಗಳ ಕಲ್ಲು ಮಂಟಪ.
ಅದರ ಪಕ್ಕದಲ್ಲಿಯಥಾಪ್ರಕಾರ ದೇವರಿಲ್ಲದ ದೇಗುಲ.
ಹೊರಬಂದರೆ ಈ ಕಡೆ ಬೀದಿಯ ಪಕ್ಕ ತೆಪ್ಪೋತ್ಸವ ಇತ್ಯಾದಿ ನಡೆಯುತ್ತಿದ್ದುವೆನ್ನುವ ಒಂದು ತಟಾಕ.
ನೀರಿರದ ಕಲ್ಲಚೌಕಟ್ಟು.
ಅದೀಗ ಸುಮಾರು ಆರೂ ಕಾಲು ಗಂಟೆ.
ಹಕ್ಕಿಗಳ ಅಂದಿನ ಕೊನೆಯ ಕುಟುಕಿನ ಭೋಜನ ಮುಗಿಸಿ ಸಂಜೆಯ ಬಾನು ನಿದ್ರೆಗೆ ಜಾರಲು ಒಂದೊಂದೇ ಪದರ ಹಚ್ಚಡವನ್ನು ಹೊದೆಯುತ್ತಿತ್ತು.
ಕತ್ತಲಾಗುವುದರೊಳಗೆ ಬೇಗ ಬೇಗ ಹೊರಡಬೇಕು.
ಆದರೆ ಹೊರಡುವ ಮುನ್ನ ಇನ್ನೂ ಸರಿಯಾಗಿನೋಡಬೇಡವೇ.
ಏನುನೋಡುವುದು? ಏನಿದೆ ಅಲ್ಲಿ? ಕಣ್ಣಿಗೆ ಕಾಣುತ್ತಿರುವುದಿಷ್ಟೇ.
.
ಇಲ್ಲಇಲ್ಲ, ಇನ್ನೂ ಇದೆ.
.
.
ಆಗಿದ್ದು, ಆಗ ಇದ್ದವರು, ಅವರು ಕಂಡ ಕನಸುಗಳು, ನಮ್ಮ ಹಿರಿಯರು ಅವರ ಬಗ್ಗೆಕಂಡ ಕನಸುಗಳು.
“ಸ್ವಲ್ಪ ಮುಂದೆ ಹಾಗೆ ಹೋದರೆ ಅಲ್ಲಿಶಾಂತವಾಗಿ ಹರಿಯುತ್ತಿರುವ ನದಿ.
ನದಿಯ ಎರಡೂ ಕಡೆ ಬೆಟ್ಟಗಳಾದುದರಿಂದ ಇಳಿಸೂರ್ಯನ ಕಿರಣಗಳು ಪೇಲವವಾಗಿವೆ.
ನದಿಯ ವಕ್ಷಮಾತ್ರ ದೀಪ್ತ.
ಸಂಧ್ಯಾರಾಗ ಮೂಡಲಾಕಾಶಕ್ಕೆ ಹರಡಿ ಎಲ್ಲರ ಮೈಕೈಗಳನ್ನೂ ಪಾತ್ರೆ ಪದಾರ್ಥಗಳನ್ನೂ ಗರ್ಭಗುಡಿಯ ಚಿನ್ನದ ಗೋಪುರವನ್ನೂ ಮಂಟಪಗಳ ಬೆಳ್ಳಿಯ ಮೇಲು 7 ಹೊದಿಕೆಯನ್ನೂ ನದಿಯ ನೀರನ್ನೂ ನಾನಾ ಬಣ್ಣಗಳಿಂದ ಅಲಂಕರಿಸಿದೆ.
ಬ್ರಾಹ್ಮಣರು ನೀರಿಗೆ ಪೂಜೆ ಮಾಡಿ, ತುಂಗಭದ್ರೆಯ ಜೊತೆಗೆ ಸಂಧ್ಯಾರಾಗವನ್ನೂ ತುಂಬಿಕೊಂಡು ದಡಕ್ಕೆ ಬಂದು.” “.
ಇಷ್ಟರಲ್ಲಿ ದೂರದಿಂದ ಶಂಖ ತುತೂರಿಗಳ ಬಾಜನ ಕೇಳಿಸಿತು… ಬಂಗಾರದ ಪಲ್ಲಕ್ಕಿಯಲ್ಲಿ ಮಗುಟವನ್ನುಟ್ಟು ಕಿಂಕಾಪಿನ ಮೇಲುದವನ್ನು ಹೊದ್ದು ರತ್ನಕುಂಡಲ ಧರಿಸಿದ್ದ ಆಜಾನುಬಾಹು ಸಾರ್ವಭೌಮ ಶ್ರೀಕೃಷ್ಣದೇವರಾಯನು ದೇವರ ದರುಶನಕ್ಕೆ ಬರುತ್ತಿದ್ದಾನೆ.
ಈಗ ತಾನೆ ಅಭ್ಯಂಜನ ಮಾಡಿ ಬಂದಂತಿರುವ - ಜೇನುತುಪ್ಪದಲ್ಲಿನೆನೆಸಿಟ್ಟು ಹೊಸದಾಗಿ ಹೊರಗೆ ತೆಗೆದಂತಿರುವ - ಮಹಾರಾಯನ ಮುಖದ ಮೇಲೆ ದೀಪಗಳ ಕಾಂತಿ ಬಿದ್ದು ಬೆಳಗುತ್ತಿದೆ.
ವಿರೂಪಾಕ್ಷನಿಗೆ ಮಹಾಮಂಗಳಾರತಿ ಬಹುವಿಜೃಂಭಣೆಯಿಂದ ನಡೆಯುತ್ತಿದೆ.
ಮುಂದೆ ಮಂತ್ರಪುಷ್ಪ, ರಾಜಾಶೀರ್ವಾದ, ಪ್ರಸಾದ ವಿನಿಯೋಗ.
ಇಲ್ಲಿಕಾಣುವ ಈಕೆ ಮಹಾರಾಜ್ಞಿಯಿರಬೇಕು.
ಚೈತ್ರೋದ್ಯಾನದಲ್ಲಿತೆಳ್ಳಗೆ ಎತ್ತರವಾಗಿ ಬೆಳೆದು, ಹಸುರು ಕೆಂಪು ಚಿಗುರುಗಳಿಂದ ಅಲಂಕೃತವಾಗಿ ಸರ್ವಾಂಗಸುಂದರವಾಗಿರುವ ವೃಕ್ಷವನ್ನು ಕುಸುಮಚಯ ಸಿಂಗರಿಸುವಂತೆ ಈಕೆಯ ಸಹಜಲಾವಣ್ಯವನ್ನು ರತ್ನಾಭರಣರಾಜಿ ರಂಜಿಸಿದೆ.
ನಾನಾ ಪರಿಮಳಗಳಿಂದ ತುಂಬಿದ ಈ ಮಂದಿರ.
.
.
ಆ ಸಮಯದಲ್ಲಿಇನ್ನೊಬ್ಬಳು ಗಿಳಿಯ ಹತ್ತಿರಕ್ಕೆ ಹೋಗಿಯೋ ಶಾರಿಕೆಯನ್ನು ಕರೆದೋ , ‘ನಮ್ಮ ಸಖಿಯ ಮನಸ್ಸಿನಲ್ಲಿ ಇರುವುದನ್ನು ಹೇಳಿಬಿಡು ಮತ್ತೆ! ನಿನಗೆ ಮುತ್ತಿನ ಸರ ಹಾಕುತ್ತೇನೆ - ಹಣ್ಣುಕೊಡುತ್ತೇನೆ - ಮುತ್ತುಕೊಡುತ್ತೇನೆ’ ಎನ್ನುವಳು.
‘ಸಾಕು ಸುಮ್ಮನಿರೆ, ನಿನಗೆ ಯಾವಾಗಲೂ ಒಂದೇ’ ಎಂದು ತುರುಬಿಗೆ ಹೂ ಮುಡಿಸಿಕೊಳ್ಳುತ್ತಿರುವ ಸುಂದರಿ ಹುಸಿಮುನಿಸಿಂದ ಅವಳನ್ನು ಗದರಿಕೊಳ್ಳುವಳು.
ಆ ಸಮಯಕ್ಕೆ ಸರಿಯಾಗಿ ಗಿಳಿ ಆಕೆಯ ಮಡಿಲಿನೊಳಕ್ಕೆ ಇಳಿದು ಬಂದು ಕುಳಿತು ಭುಜದ ಮೇಲಕ್ಕೆ ಹಾರಿ ನಿಂತು, ಆಕೆಯ ಕಪೋಲಕ್ಕೆ ತನ್ನೊಡಲನ್ನು ಒಡ್ಡಿ ಮುಖದಲ್ಲಿ ಮುಖವಿಟ್ಟು ಆಡುವುದು…” “.
.
.
ಚಂದ್ರಕಾಂತಿಯನ್ನು ಅನುಭವಿಸಲು ರಮಣಿಯರು ಕೆಳದಿಯರೊಡಗೂಡಿ ಮೆಲ್ಲಮೆಲ್ಲನೆ ಬರುತ್ತಿದ್ದಾರೆ.
ಅವರ ಕಾಲುಂಗುರಗಳು ಘಲ್ ಘಲ್ ಎಂದು ಶಬ್ದಮಾಡುತ್ತಿವೆ.
ಅದರ ತಾನಕ್ಕೆ ಸರಿಯಾಗಿ ಕಾಲಿಡುತ್ತಅವರು ಸೋಪಾನದ ಮೆಟ್ಟಲನ್ನು ಇಳಿಯುತ್ತ, ಸುತ್ತಲೂನೋಡಿಕೊಂಡು ಸೆರಗು ಸರಿಮಾಡಿಕೊಳ್ಳುತ್ತ, ತುರುಬಿಂದ ಜಾರಿಬೀಳುತ್ತಿರುವ ಹೂಗಳ ಸರವನ್ನು ಸರಿಯಾಗಿ ಮುಡಿದುಕೊಳ್ಳುತ್ತ, ಒಬ್ಬರ ಕಡೆ ಒಬ್ಬರುನೋಡಿ ವಿನೋ ದದಿಂದ ನಗುತ್ತ, ಹಾಡಿನ ಪದಗಳಿಗೆ ತಮ್ಮ ಮನಸ್ಸಿಗೆ ತೋರಿದ ಪದಗಳನ್ನು ಸೇರಿಸಿ ಹಾಡುತ್ತ, ಒಬ್ಬರ ಮುಖಕ್ಕೆ ಇನ್ನೊಬ್ಬರು ಆರತಿ ಬೆಳಗಿ ಅಕ್ಷತೆ ಚೆಲ್ಲುವಂತೆ ನಟಿಸುತ್ತಹೋಗಿ ನೀರಿನೆಡೆಯಲ್ಲಿಕಾಲುಚಾಚಿಕೊಂಡು ಕುಳಿತುಕೊಳ್ಳುತ್ತಿದ್ದಾರೆ.
ಏನು ಚಿತ್ರಗಳು! ಪ್ರಪಂಚದ ಅನುಭವವೆಲ್ಲಈ ರಮಣಿಯರಿಗೆ ಈ ತೆರನಾದ ಭೋಗಭಾಗ್ಯವಿಲಾಸಗಳಲ್ಲಿಯೇ ಅಡಕವಾಗಿರುವಂತಿದೆ.
ಶಾಶ್ವತವಾಗಿ ತಾವು ಹೀಗೇ ಇರುವೆವೆಂದೂ ಎಲ್ಲವೂ ತಮಗೆ ಹೀಗೇ ನಡೆದುಬರುವುದೆಂದೂ ಅವರ ಭಾವನೆ, ಪಾಪ!” ಪಂಪಾಯಾತ್ರೆ ತೊಡಗಿದ್ದ ನಮ್ಮ ವಿ.
ಸೀ.
ಅವರು ಕಂಡ ಕನಸುಗಳ ಕೆಲ ಚಿತ್ರಗಳನ್ನು ಅಲ್ಲಿ ಇಲ್ಲಿ ಎತ್ತಿಕೊಂಡುನೋಡಿದೆ.
ನಾವೇ ಎಲ್ಲನೋ ಡುತ್ತೇವೆ ಎಂದರೆ ಆಗುವಂಥದ್ದೇ? ನಮ್ಮ ಹಿರಿಯರ ಕಾಣ್ಕೆಯನ್ನೂ ಜೊತೆಗೂಡಿಕೊಂಡು ಕಾಣಬೇಕಲ್ಲವೇ.
ಮರಳುವಾಗ ಪಶ್ಚಿಮದ ಅಂಚಿಗೆ ತಲುಪಿದ್ದಸೂರ್ಯನು ತನ್ನ ಸಂಧ್ಯಾರಾಗದ ಸ್ವರಗಳನ್ನು ಆಗಸದಲ್ಲಿವಿಲಂಬಿತವಾಗಿ ಬೀಸಿ ಬೀಸಿ, ತುಂಗಭದ್ರೆಯ ಅಲೆಯಲೆಯ ಉಂಗುರಗಳಲ್ಲಿ ಕಂಪಿತಗಮಕವಾಗಿಸಿ ದ್ಯಾವಾ-ಪೃಥಿವಿಗಳ ಯುಗಲಗಾಯನವನ್ನು ಚೋದಿಸಿದ್ದ.
ಆಗಳೇ ಬರುವಾಗ ಕಂಡಿದ್ದಆ ಸ್ನಾನಘಟ್ಟಕ್ಕೆ ಇಳಿದು ಸೂರ್ಯನಿಗೆ ಅರ್ಘ್ಯ ಕೊಟ್ಟು ಗಾಯತ್ರಿ ಜಪಿಸಿ, ಘಟ್ಟದ ಮೆಟ್ಟಿಲು ಮೆಟ್ಟಿಲಿಗೂ ನಿಂತು ಮತ್ತೆಮತ್ತೆಆ ರಂಗಿನಾಟವನ್ನುನೋಡುತ್ತ, ಕಲ್ಲುಬೆಟ್ಟದ ಗುಹೆಯ ದಾರಿ ಸವೆದು, ಹಂಪೆಯ ಪೇಟೆ ಬೀದಿಗೆ ಬಂದಾಗ ಕತ್ತಲೆ ಸುಳಿಸುತ್ತಿಮುಸುಕುತ್ತಿತ್ತು.
ಕಾಮನನ್ನು ಸುಟ್ಟ ಹೇಮಕೂಟದ ವಿರೂಪಾಕ್ಷನ ಕೆದರುಗೂದಲಿನ ಹಣೆಗಪ್ಪಿನ ನಡುವೆ ಇನ್ನೂ ಆರದ ಆ ಕೆಂಗಣ್ಣುರಿಯಂತೆ ಪಡುವಣದ ಪಟ್ಟಿಕೆ ನಿಗಿನಿಗಿ ಕಿನಿಸುತ್ತಿತ್ತು.
“ಹೋ! ಆರದಿರು, ತಡೆ ತಡೆ, ರಿಪುಗಳು ಇನ್ನೂ ಇದ್ದಾರೆ, ಒಳಗೂ ಹೊರಗೂ.
" ಮನಸ್ಸು ಬೇಡಿಕೊಳ್ಳುತ್ತಿತ್ತು.
<><><><><>
8 “ಭಾಳ ಖಾರ ಅದಾವೇನಮ್ಮಾ ಮೆಣಸಿನಕಾಯಿ” ಅಂದೆ.
ಆಕೆ ಬರಿದೇ ನಕ್ಕಳು.
ಈಕೆ ನಗುವುದೇಕೆ ಎಂದು ಗಲಿಬಿಲಿಯಲ್ಲೇ ಭಜಿಗಳನ್ನು ಚಪ್ಪರಿಸತೊಡಗಿದ್ದೆ.
ವಾಪಸು ಹೊಸಪೇಟೆಗೆ ಹೋಗಲು ಹಂಪೆಯ ಬಸ್ ನಿಲ್ದಾಣದ ಬಳಿ ನಿಂತಾಗ ಇಳಿಸಂಜೆಯ ಕತ್ತಲಲ್ಲಿ ಕಂಡದ್ದು ರಸ್ತೆಬದಿಯ ಮಿರ್ಚಿಭಜಿಗಳ ರಾಶಿ.
ಮಾರುವ ಹೆಣ್ಣುಮಗಳ ಮುಖಕ್ಕೆ ತಿಳಿಯಾದ ಹೊಂಬೆಳಕಿನ ಕಳೆಯೂಡುತ್ತ, ಅರುಚಿಗೆ ಮದ್ದಾದ ಹಿಮಾಲಯದ ವನೌಷಧಿಗಳ ಹೂಗಾಯಿಗಳಂತೆ ಸ್ವಯಂಪ್ರಭೆಯಿಂದ ಮಿರುಗುತ್ತಿದ್ದುವು.
ಎಷ್ಟಂತ ಸಂಯಮ ತೋರಲಿ! ಟ್ರೇನಲ್ಲಿಬಿಟ್ಟಾಯಿತು, ಪುರಂದರ ಮಂಟಪದೆಡೆ ಬಿಟ್ಟಾಯಿತು.
ಈಗ ಸಾಧ್ಯವಿಲ್ಲ.
ಹೋಗಿ ಒಂದು ಪ್ಲೇಟ್ ಕೊಡಮ್ಮ ಅಂದೇ ಬಿಟ್ಟೆ.
ಆಕೆ ಬುಟ್ಟಿಯಲ್ಲಿ ಛಣ ಛಣ ಬೆರಳಾಡಿಸುತ್ತಬಿಸಿಗೆ ಛಕ್ಕನೆ ಎತ್ತಿಕೊಂಡು ಭಜಿ ಹಾಕಿಕೊಡುತ್ತಿದ್ದಾಗ ಅವುಗಳ ಖಾರದ ಬಗ್ಗೆಭಯವೂ ಆಗಿ ಹಾಗೆ ಕೇಳಿದೆ.
ಈ ಬಯಲ ಸೀಮೆ ಜನದ್ದು ಸಿಹಿಯೂ ಅತಿ, ಎಣ್ಣೆ-ಖಾರಗಳೂ ಅತಿ.
ಆಕೆ ನಗುತ್ತಲೇ “ಯಾವೂರಣ್ಣ?” ಅಂದಳು.
“ಹಾವೇರಿ” ಅಂದೆ.
“ಚಾ?” ಅಂದಳು.
“ಹಾ” ಅಂದೆ.
ನಾನು ಏರಬೇಕಿದ್ದಶೇರ್ ಆಟೋದವನು ಬೇರೆ ಗಿರಾಕಿ ಸಿಗದೇ, ನನ್ನ ಸಮಾರಾಧನೆ ಮುಗಿಯದೇ ನನ್ನತ್ತಲೇ ಗುರಾಯಿಸುತ್ತಿದ್ದ.
ಇವನೇಕೆ ಮಿರ್ಚಿಯ ಜೊತೆ ಜೊತೆಗೇ ಚಾ ಕುಡಿದು ಬೇಗ ಮುಗಿಸುತ್ತಿಲ್ಲಎಂಬುದು ಅವನ ಜಿಜ್ಞಾಸೆ.
ಎಲ್ಲತಿಂದು ತೃಪ್ತಿಯ ದೇಗುಲ ಕಟ್ಟಿ ನೀರು ಕುಡಿದು ಬಾಯಿ ಶುದ್ಧಿಮಾಡಿಕೊಂಡು, ಅದಾಗಿ ನಾಲಗೆಯ ಮೇಲೆ ಎಷ್ಟೋ ಹೊತ್ತುಚಹಾದ ಇನಿಗಂಪು ಗುಡಿಗಟ್ಟಿ ಲಟಪಟಿಸುವಂತೆ ಮಾಡಿಕೊಳ್ಳುವ ನನ್ನ ಎಂದಿನ ಹುನ್ನಾರ ಪಾಪ ಅವನಿಗೇನು ತಿಳಿದೀತು! ಹಂಪೆಯಲ್ಲಿ ತುಂಗಭದ್ರೆಯ ಆಚೆ ದಡದ ಆನೆಗೊಂದಿ, ಋಷ್ಯಮೂಕ, ಪಂಪಾಸರೋ ವರ, ಅಂಜನಾದ್ರಿ ಎಲ್ಲನೋಡುವುದು ಬಾಕಿ ಇದ್ದರೂ ಮತ್ತೊಂದು ದಿನ ಅಲ್ಲಿರುವುದು ಸಾಧ್ಯವಿರಲಿಲ್ಲ.
ತತ್ಕಾಲದಲ್ಲಿಮಾಡಿಸಿದ್ದಟಿಕೀಟಿನ ಹಣ ಎಂಥ ಆಪತ್ಕಾಲದಲ್ಲಿಯೂ ವಾಪಸು ಬರುವಂಥದಲ್ಲ ಎಂದುಕೊಂಡು ಮತ್ತೊಮ್ಮೆ ಬಂದರಾಯಿತು ಎಂದು ಹೊಸಪೇಟೆಯಿಂದ ರಾತ್ರಿ ಹನ್ನೊಂದುವರೆಯ ಟ್ರೇನ್ ಹತ್ತಿದೆ.
ಅತ್ತಣಿನ ಎಲ್ಲಊರು, ಪ್ರದೇಶ ನನಗೆ ಹೊಸದೇ.
ದಾರಿ ಹೇಗಿತ್ತು, ಅಕ್ಕ ಪಕ್ಕ ಬಯಲು, ಗದ್ದೆ, ಗಿಡಮರ ಹೇಗಿತ್ತು, ಯಾವುದಾದರೂ ನದಿ ಹಳ್ಳ ಕೊಳ್ಳ ಕಾಣುತ್ತವೆಯೇ ಎಂದುನೋಡಲಾಗಲಿಲ್ಲ.
ಅದು ರಾತ್ರಿ.
ನನಗೂ ಗಡದ್ದುನಿದ್ದೆ.
ಬೆಳಗ್ಗೆಐದುವರೆಗೆ ಕರ್ನೂಲಿಗೆ ಇಳಿದು, ಸ್ಟೇಶನ್ನಿಂದ ಬಸ್ ನಿಲ್ದಾಣಕ್ಕೆ ಉಡು ಉಡು ಹೋಗಿ ನಿಂತಿದ್ದಒಂದು ಬಸ್ ಹತ್ತಿ ಸಾಗಿದೆ.
ಕೆಲ ಹೊತ್ತಿನಲ್ಲಿಬಯಲುಸೀಮೆಯ ಹರಹಿನ ಸೀರೆ ಕ್ರಮೇಣ ಮುದುಮುದುರಿಕೊಳ್ಳುತ್ತಹಸುರ ಸಾಂದ್ರತೆಯ ಮಡಿಕೆ ನಿರಿಗೆ ತಳೆಯುತ್ತಅಲ್ಲಲ್ಲಿಒತ್ತೊತ್ತಾದ ಗಿಡಗಂಟೆ, ತೋಟ-ಪಟ್ಟಿಗಳ ಜರಿಯಂಚು ಮಿರುಗಿಸುತ್ತ, ಮತ್ತಷ್ಟು ದೂರದಲ್ಲಿಅಲ್ಲಲ್ಲಿಎದ್ದವಸುಧೆಯ ಹರಿದ್ವಲಯಿತವಾದ ಮೈಯುಬ್ಬುಗಳಿಗೆ ತಾಗಿ ಚೆಲ್ಲಿತ್ತು.
ಬಸ್ಸು ಇನ್ನೊಂದು ಅರ್ಧ ಗಂಟೆಯಲ್ಲಿಅಂಕುಡೊಂಕಿನ ಏರಿ ಏರತೊಡಗಿತ್ತು.
ಮತ್ತೆಹತ್ತಾರು ನಿಮಿಷದಲ್ಲಿ"ನಲ್ಲಮಲ ಸಂರಕ್ಷಿತ ಅರಣ್ಯವಲಯ” ಎಂದು ಬೋರ್ಡಿನ ಕಮಾನು ಕಂಡಿತು.
ಹೋಘಟ್ಟ ಬಂತೆಂದು ಖುಷಿಯೋ ಖುಷಿ.
ಸುಮಾರು ವರ್ಷಗಳಿಂದ ಶ್ರೀಶೈಲನೋಡಬೇಕು ಎಂದು ಆಸೆ ಪಟ್ಟು ಹೊರಟಿದ್ದೆ.
ಅದೋ ಆ ಕಣಿವೆಯಾಚೆಗಿನ ಎತ್ತರದ ಕಂದುಬಣ್ಣದ ಸಾನುಪ್ರದೇಶವೇ ಇದ್ದೀತಲ್ಲವೇ ಮಲ್ಲಿಕಾರ್ಜುನನ ಆವಾಸಸ್ಥಾನ ಎಂದುಕೊಳ್ಳುತ್ತಕೂತವನಿಗೆ ಅದೆಲ್ಲೋ ಮರೆಯಾಗಿ ಒಂದು ತಾಸಾದರೂ ಅದರ ಪತ್ತೆಸಿಗದೇ ಶೈಲಸರಣಿಯ ಬೇರೇನೋ ವಿನ್ಯಾಸ ಎದುರಾಗುತ್ತಿತ್ತು.
ಮತ್ತೀಗ ದೂರದಲ್ಲಿತನ್ನೆರಡೂ ಭುಜಗಳನ್ನು ಒಗೆದುಕೊಂಡು ಠೀವಿಯಿಂದ ವಿರಮಿಸುತ್ತಿದೆಯಲ್ಲ, ಆ ಬೆಟ್ಟದ ಕೊರಳೆಡೆ ಯಜ್ಞೋಪವೀತದಂತೆ ಹಾದು ಹೋಗುವ ಆ ರಸ್ತೆ ಆಚೆಗಿನ ಇಳಿಜಾರಿಗೆ ಸಾರುತ್ತದಲ್ಲ.
.
ಅಲ್ಲೇ ಇದ್ದೀತು.
.
ಈ ಕೋಡುಬೆಟ್ಟದ ಅರಗು ದಾಟಿ, ಆ ಕಣಿವೆಯಂಚಿನ ದಿಬ್ಬ ಏರಿ ಎರಡು ತಿರುವು ಹಾಕಿ ಇಳಿದು ಮತ್ತೆಏರಿದರೆ, ಇನ್ನೇನು ಮುಕ್ಕಾಲು ಗಂಟೆಯಲ್ಲಿಬಂದೇ ಬರುತ್ತದೆ.
ಹೊಟ್ಟೆ ಹಸಿಯುತ್ತಿದೆ.
ಹೋಗಿ ಒಂದು ರೂಮು ತಗೊಂಡು ಸ್ನಾನ ಮಾಡಿ ಇಡ್ಲಿ ದೋಸೆ ತಿಂದು ಒಳ್ಳೇ ಕಾಫಿ ಕುಡಿದು ಈ ಮಲೆಗಳ ತೊಪ್ಪಲಿನ ತಂಪಿಗೆ ಒಂದು ಜೊಂಪು ನಿದ್ದೆ ಮಾಡಿ ಮಲ್ಲಿಕಾರ್ಜುನನ ದರ್ಶನ.
.
.
.
ಎಂದುಕೊಳ್ಳುವಾಗಲೇ ಕೈಗೆ ಕೈ ನೀಡಿ, ಹೆಗಲಿಗೆ ಹೆಗಲು ತಾಗಿ, ತಲೆಗೆ ತಲೆ ಹಚ್ಚಿ ಕಟ್ಟಿದ ಆ ಸುತ್ತಲಿನ ಬೆಟ್ಟಗಳ ಬಾಂಧವ್ಯದ ಮಡಿಲ ತೊಟ್ಟಿಲಲ್ಲಿತಂಬೆಲರ ಜೋಗುಳದಲ್ಲಿಹೊರಹೊರಳಿ ಆಡುತ್ತಿದ್ದನಿದ್ರಾಶಿಶು ಗಿಡಮರಗಳ ಎಲೆಗಳ ಲಟಪಟದ ತೊದಲು ನುಡಿಯಲ್ಲಿಕೈಚಾಚಿ ಬಂದು ತೆಕ್ಕೆ ಹಾಕಿತು.
9 ಮತ್ತೆಕಣ್ ತೆರೆದಾಗ ಆ ಬೆಟ್ಟಗಳ ಸುತ್ತುಗಟ್ಟು ಮುಗಿದು ಉದ್ದನೆಯ ತಿರುವಿನ ಒಂದು ರಸ್ತೆ, ಅಕ್ಕ ಪಕ್ಕ ಇಳಿದ ದಿಬ್ಬಗಳ ಸಾಲು.
.
.
ಅದೇ ಕಾಡಿನ ದಟ್ಟಣೆ.
ಮೈಲಿಗಲ್ಲೊಂದು ಶ್ರೀಶೈಲ ಇನ್ನೂ ಎಂಬತ್ತೈದು ಕಿಲೋ ಮೀಟರು ಎಂದು ತನ್ನ ನಿರ್ವಿಕಾರ ಭಾವದಿಂದ ಹೇಳಿತು.
ಈಗಾಗಲೇ ಬೆಳಗಿನ ಹತ್ತುಗಂಟೆ ಸಮಯ.
ಇನ್ನೂ ಹಲ್ಲಿಲ್ಲ, ಮೋರೆಯಿಲ್ಲ.
ಈ ಘಟ್ಟದಲ್ಲಿ ಈ ಬಸ್ಸಿನ ವೇಗದಲ್ಲಿ ಇನ್ನೂ ಎರಡು ತಾಸು ಎಂದು ಹಸಿವೆಯನ್ನೇ ನುಂಗಿಕೊಂಡು ನೀರು ಕುಡಿದೆ.
“ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳುದೇಗುಲಗಳುಂಟು.
" ಅಕ್ಕಾ, ನಿನಗೆ ಇವೆಲ್ಲಇತ್ತು.
ನನಗೀಗ ಏನೂ ಇಲ್ಲವಲ್ಲಎಂದು ಚಡಪಡಿಸಿದೆ.
ಕಿಟಕಿಯಲ್ಲಿಕಣ್ಣುಹಾಯಿಸಿದರೆ ತಳಿರು, ಬಳ್ಳಿಗಳ ತೂಗು ತೊನೆತದ ನಡುವೆ, ಗಿಡಗಂಟಿಗಳ, ದೊಡ್ಡ ದೊಡ್ಡ ಮರಗಳ ಪಹರೆಯ ನಡುವೆ, ಬೆಟ್ಟ ದಿಬ್ಬಗಳ ಏರಿಳಿವಿನಲ್ಲಿಅಡಗಿ ಅಡಗಿ ಅಲ್ಲಲ್ಲಿಬಿದ್ದಬಿಸಿಲ ಬೆಳಕಿನ ಜಾಡು ಹಿಡಿದು ಬಯಲು ಎಲ್ಲೆಲ್ಲೋ ಓಡುತ್ತಿತ್ತು.
ಅದೇನು ಸುಮ್ಮನೇ ಸಿಕ್ಕುತ್ತದೆಯೇ? ಆ ಬಯಲ ಹಿಂದೆಯೇ ಎಲ್ಲಅನುಭಾವಿಗಳೂ ಓಡಿದ್ದು.
ನಾವೇ ನಟ್ಟು ಕಟ್ಟೆ ಕಟ್ಟಿ ನೀರುಣಿಸಿ ಗೊಬ್ಬರ ಹಾಕಿ ಬೆಳಸಿದ ಆಶಾಲತೆಗಳ ತೊಡಕಿನಲ್ಲಿ, ರಾಗದ್ವೇಷಗಳ ಹೂಹಣ್ಣುಗಳ, ಮುಳ್ಳುಮೊನೆಗಳ ಹೊತ್ತ ಮಹತ್ತ್ವಾಕಾಂಕ್ಷೆಗಳ ಮರದ ಸಂದಣಿಯಲ್ಲಿಎಷ್ಟು ಸುಲಭವಾಗಿ ಸಿಕ್ಕೀತು ಆ ಬಯಲು? ಆದರೇನು, ಆ ಕಾಡಲ್ಲೇ ಹಾದು ಹೋಗಬೇಕು, ದಾಟಬೇಕು.
ಬೇರೆ ದಾರಿಯಿಲ್ಲ.
“ಮುನ್ನ ಮಾಡಿತ್ತನಾರು ಕಳೆಯಬಾರದು, ಅದು ಬೆನ್ನ ಹಿಂದೆ ಬರುತ್ತಿಪ್ಪುದು, ಅದನಿನ್ನು ಕಳೆದಹೆನೆಂದಡೆ ಎನ್ನಿಚ್ಚೆಯುಂಟೇ ಅಯ್ಯಾ? ಚೆನ್ನಮಲ್ಲಿಕಾರ್ಜುನನೆನಗೆ ಕಟ್ಟಿದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವೆನು.
" ಅಕ್ಕ ಇದೇ ಕಾಡಿನ ಹಾದಿಯಲ್ಲೇ ನಡೆದು ಹೋದಳಂತೆ ಶ್ರೀಶೈಲಕ್ಕೆ.
ಎಲ್ಲರೂ ಹೋಗುತ್ತಿದ್ದವರೇ.
ಆದರೆ ಆಕೆ ಹೋಗಿದ್ದರ ವಿಶೇಷವನ್ನು ಕುರಿತು ಮನಸ್ಸು ಚಿಂತಿಸುತ್ತಿತ್ತು.
ಕಿಟಕಿಯಾಚೆಯ ಆ ಹಸುರಿನ ಸಿರಿವಂತನತ್ತಆಸೆ ಹೊತ್ತೋ ಅಥವಾ ಏನೂ ಸಿಕ್ಕದು ಎಂಬ ನಿರ್ವೇದದಿಂದಲೋ ಕಣ್ಣಿನನೋಟ ಒಬ್ಬ ಬಡವನಂತೆ ಸುಮ್ಮನೇ ಚೆಲ್ಲಿಕೊಂಡಿತ್ತು.
ನಡುನಡುವೆ ಕಿಟಕಿಯ ಸಳಿಗಳು ಮೂಗು ಹಣೆಗಳಿಗೆ ಬಡಿಯುತ್ತಿದ್ದುವು.
ಕೈಯೆತ್ತಿನೋವನ್ನು ಸವರಿಕೊಳ್ಳಲೂ ಉತ್ಸಾಹವಿರಲಿಲ್ಲ.
ಅಲ್ಲೆಲ್ಲೋ ಆಕೆ ನಡೆದುಕೊಂಡು ಹೋಗುತ್ತಿದ್ದಾಳೆಂಬ ಚಿತ್ರ.
ಹಿಂಗಡೆಯಿಂದ ಕಾಣುವ ಒಂದು ಕೈಯ ತ್ರಿಶೂಲವೋ ದಂಡವೋ, ಇನ್ನೊಂದು ಕೈಗೆ ಜೋಳಿಗೆಯೋ.
ಮೈತುಂಬ ಹರಡಿದ ಕೇಶರಾಶಿ.
ಕೂದಲ ಮೊನೆಯ ಕೆಳಗೆ ಸ್ವಲ್ಪ ಮಾತ್ರ ಕಾಣುತ್ತಿದ್ದಹಿಂಗಾಲುಗಳು.
.
ಆ ಹೆಜ್ಜೆಗಳು ಸಾಗುತ್ತಿದ್ದುದು ಹೇಗೆ? “.
.
.
ತಡವಾದರೆ ಬಡವಾದೆ.
ಚೆನ್ನಮಲ್ಲಿಕಾರ್ಜುನನೊಂದಿರುಳಗಲಿದಡೆ ತಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ” ಎಂಬ ವ್ಯಾಕುಲತೆ ಹೆಜ್ಜೆಹೆಜ್ಜೆಯಲ್ಲೂಕಾಣುತ್ತಿತ್ತಲ್ಲವೇ! “ಎಲೆ ತಾಯೆ ನೀನಂತಿರು, ಎಲೆ ತಂದೆ ನೀನಂತಿರು, ಎಲೆ ಬಂಧುವೆ ನೀನಂತಿರು ಎಲೆ ಕುಲವೆ ನೀನಂತಿರು, ಎಲೆ ಬಲವೆ ನೀನಂತಿರು…” ಎಂದು ತನ್ನವರೆಂದು ತೊಡಕಾದವರನ್ನೆಲ್ಲದೂರ ಇರಿಸಿ ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ನಡೆದಳಲ್ಲ.
! ಬಂಧುಗಳ ಬಂಧನ ಒಂದು ಬಿಟ್ಟರೆ ಆಯಿತೇ? ದೇಹ, ಮನಸ್ಸುಗಳು ಇನ್ನೂ ಇನ್ನೂ ಹತ್ತಿರದವಾಗಿ ಇವಳ ಛಲಕ್ಕೆ ಮತ್ತಷ್ಟು ಛಲ ಹೂಡಿ ಎಷ್ಟು ಅಡ್ಡಿಯಾಗಿರಬೇಡ! “ಹಸಿವೆ ನೀನಂತಿರು ಬರಬೇಡ, ವಿಷಯವೆ ನೀನಂತಿರು ಬರಬೇಡ, ಕಾಮವೆ ನೀನಂತಿರು ಬರಬೇಡ, ಕ್ರೋಧವೆ ನೀನಂತಿರು ಬರಬೇಡ, ಚೆನ್ನಮಲ್ಲಿಕಾರ್ಜುನದೇವರ ವ್ಯಸನದ ಅವಸರವಾಗಿ ಹೋಗುತ್ತಿದ್ದೇನೆ.
.
.
" ಎಂದು ಮನದ ಗತಿಯನ್ನೂ ಹೆಚ್ಚಿಸುತ್ತ, ಧಡಧಡ ಹೆಜ್ಜೆಹಾಕುತ್ತಿದ್ದಳಲ್ಲವೇ? ಇಲ್ಲ, ಅಲ್ಲಿಇಲ್ಲಿ ನಿಂತು, “ಚಿಳಿಮಿಳಿ ಎಂದೋ ದುವ ಗಿಳಿಗಳಿರಾ ನೀವು ಕಾಣಿರೇ ನೀವು ಕಾಣಿರೇ… ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೇ ನೀವು ಕಾಣಿರೇ.
.
.
" ಎಂದು ಕಂಡಕಂಡವರನ್ನು ವಿಚಾರಿಸುತ್ತನಿಧಾನವಾಗಿ ನಡೆದು ಹೋಗುತ್ತಿದ್ದಳೇ ? ಹೇಗೇ ಇರಲಿ, ಮೀರಾಬಾಯಿಯಲ್ಲಿಕಾಣುವಂತಹ ಆ ಏಕತಾರಿ ಲಯದ ಹಾಡು ಕುಣಿತಗಳ ಲಗುಬಗೆಯ ಲಾಘವದ ಗತಿಯನ್ನು ಈಕೆಯಲ್ಲಿ ಕಾಣಲು ನನಗೆ ಆಗುವುದಿಲ್ಲ.
ಈಕೆ ಬೇಗ ಬೇಗ ನಡೆದಾಳಂದರೂ ಅದೇನೋ ಆ ಗತಿಯಲ್ಲೊಂದು ಗಾಂಭೀರ್ಯ ತೋರುತ್ತದೆ.
ಮನದ ಆಳ ಹೆಜ್ಜೆಗೂ ಇಳಿದು ಭಾರ ಅನಿಸುತ್ತದೆ.
ಜಗದೆಡೆಗಿನ ವಿಮುಖತೆಯ ದೃಢತೆಯ ಬಿಗಿ ಕಾಣುತ್ತದೆ.
ಆದರೇನು, ಇಹದ ಗುರುತ್ವವಲಯವನ್ನು ದಾಟಿ ಪರಮಾರ್ಥದ ನಭೋ ಮಂಡಲಕ್ಕೆ ದಾಂಗುಡಿಯಿಡುವ ಕಾತರ, ಕೆಚ್ಚು, ದಿಟ್ಟತನ, ಧೈರ್ಯ ಮಾತ್ರ ಇಬ್ಬರಲ್ಲೂ ಏಕಪ್ರಕಾರವಾಗಿ ಇದ್ದದ್ದೇ.
10 ಮತ್ತೆರಡು ತಾಸಿಗೆ ಶ್ರೀಶೈಲದ ಹೊರವಲಯ ಬಂತು.
ಬಂತು ಬಂತು ಅನ್ನುತ್ತಲೇ ಬಸ್ಸು ಮತ್ತೆಅಲ್ಲಿಇಲ್ಲಿಸುಳಿದು ನಿಂತು ಅರ್ಧ ಗಂಟೆಯ ಮೇಲೆ ಕೊನೆ ಸ್ಟಾಪಲ್ಲಿಇಳಿಸಿತು.
ಬೇಗ ಲಾಡ್ಜುಹಿಡಿದು ಸ್ನಾನ ಮಾಡಿ ಇಡ್ಲಿದೋ ಸೆ.
.
.
ಎಂದುಕೊಳ್ಳುತ್ತಿದ್ದಾಗಲೇ ಮತ್ತೊಂದು ಆಘಾತ! ಅಲ್ಲಿಪ್ರೈವೇಟ್ ಲಾಡ್ಜುಎಂಬಂತಹದು ಇಲ್ಲವೇ ಇಲ್ಲ.
ದೇವಸ್ಥಾನದ ಆಡಳಿತದವರ ವಸತಿ ಮಂದಿರಗಳು ಮಾತ್ರ.
ಅಲ್ಲಿಒಬ್ಬೊಬ್ಬರಿಗೆ ಇರಲು ಅವಕಾಶ ಇಲ್ಲ.
ಇದ್ದುದು ಅವೇ ವಸತಿ ಮಂದಿರಗಳ ಡಾರ್ಮೆಟರಿಗಳು.
ಅಂಥವು ನಾನು ಕಂಡದ್ದುಇದೇ ಮೊದಲು.
ಬತ್ತದ ಗದ್ದೆಯ ಕಣದಂಥ ದೊಡ್ಡದೊಂದು ಕೋಣೆಯಲ್ಲಿಆಸ್ಪತ್ರೆಗಳ ಜನರಲ್ ವಾರ್ಡಿನಂತೆ ಐವತ್ತೋ ನೂರೋ ಕಾಟು ಹಾಕಿದ್ದಾರೆ.
ಎಲ್ಲರಿಗೂ ಸೇರಿ ಮೂರು ಅಟ್ಯಾಚಡ್ ಟಾಯ್ಲೆಟ್ಟು ಬಾತರೂಮು.+++(5)+++
ನನ್ನ ಪುಣ್ಯ ಅಂದರೆ ಅಲ್ಲಿಇರುವ ಕಾಟುಗಳ ತುಂಬೆಲ್ಲಜನ ಇರಲಿಲ್ಲ.
ಎಂಟೋ ಹತ್ತೋ ಕಾಟು ತುಂಬಿದ್ದವು.
ಅಲ್ಲಿದ್ದಒಂದಿಷ್ಟು ಕೆಲಸದ ಹೆಣ್ಣಾಳುಗಳ ಜೊತೆ ನಾಕಾರು ಮಂದಿ ಇವನ್ಯಾರೋ ಈ ಉಂಡು ಅಡ್ಡಾಗೋ ಹೊತ್ತುಬಂದಾನೆ ಎಂದು ಕಡೆಗಣ್ಣಿಂದನೋಡಿದರು.
ನನಗೆ ಸ್ವಲ್ಪ ಭಯವಾಯಿತು.
ಗೊತ್ತಿಲ್ಲ, ಗುರಾಚಾರಿಲ್ಲ.
.
ಈ ಊರಲ್ಲಿಈ ಜನದ ಮಧ್ಯೆ ಇದ್ದು, ಸ್ನಾನ ಎಲ್ಲಮಾಡುವುದು ಹೇಗೆ.
.
ಸ್ನಾನಕ್ಕೆ ಹೋದಾಗ ನನ್ನ ಮೊಬೈಲು ಪರ್ಸುಗಳ ಗತಿ ಏನು? ಲಾಕರ್ ಕೇಳಿದರೆ, ಕೊಡುತ್ತೇವೆ, ಆದರೆ ಲಾಕ್ ನೀವೇ ತಂದು ಹಾಕಿಕೊಳ್ಳಬೇಕು ಅಂದರು… ಝಕ್ಕನೇ ನನ್ನ ಒಡಲಿನ ಮರ್ಯಾದೆ, ನನ್ನ ಚೀಲ, ಮೊಬೈಲು, ಪರ್ಸುಗಳ ಚಿಂತೆ ನನ್ನ ಮೈಯೆಲ್ಲಆವರಿಸಿ ಅರಮನೆ ಕಟ್ಟಿಕೊಂಡು ನಿಂತಿತ್ತು.
ಮತ್ತೆನೆನಪಾದಳು ಅಕ್ಕ, ಆಹಾ ಇಂಥ ಈ ಅರಮನೆಯಲ್ಲಿಆ ಚೆನ್ನಮಲ್ಲಿಕಾರ್ಜುನನ ಆತ್ಮಸಂಗಾತಕೆ ಏನ ಉಂಟು?! ಎಂದೇ ಅಲ್ಲವೇ ಅವಳು ಅರಮನೆಯನ್ನು ಬಿಸುಟ್ಟು ಬಂದದ್ದು.
.
.
ಸರಿ, ಆ ಹಸಿವೆಯಲ್ಲೂನನ್ನ ಇಂಜಿನೀಯರಿಂಗ್ ತಲೆ ಓಡಿತು.
ಪ್ಯಾಂಟು ತೆಗೆದು ಪಂಚೆ ಸುತ್ತಿಕೊಂಡೆ,.
.
ಅಲ್ಲ, ಪಂಚೆ ಸುತ್ತಿಕೊಂಡು ಪ್ಯಾಂಟು ತೆಗೆದೆ.
ಟವೆಲ್ಲು, ಸೋಪು, ಟೂತ್ ಬ್ರಶು ಪೇಷ್ಟುಗಳ ಜೊತೆಗೆ ಮೊಬೈಲು, ಪರ್ಸು ಸಮೇತ ಪ್ಯಾಂಟನ್ನೂ ತೆಗೆದುಕೊಂಡೇ ಸ್ನಾನದ ಕೋಣೆಗೆ ನಡೆದೆ.
ಅಲ್ಲಿಟಾವೆಲ್ಲುಹಾಕುವ ಸಳಿಗೆ ಪ್ಯಾಂಟನ್ನು ನೇತು ಹಾಕಿ ಕಟ್ಟಿದೆ.
ನನ್ನ ಚೀಲವನ್ನು ಹೊರಗೇ ಶಿವನ ಕೃಪೆಯ ಜೋಳಿಗೆಯಲ್ಲಿಹಾಕಿದ್ದೆ.
ಅಕಸ್ಮಾತ್ ಅವನು ಕೈಬಿಟ್ಟರೂ ನನ್ನ ಬಳಿ ಪ್ಯಾಂಟು, ಮೊಬೈಲು, ಪರ್ಸು ಇದ್ದೇ ಇದ್ದುವು.
ಹೇಗೂ ಅವನೆಷ್ಟು ನಂಬಿಗಸ್ಥಎಂಬುದು ಈಗ ಸ್ನಾನ ಮಾಡಿ ಬಂದ ಮೇಲೆ ಗೊತ್ತಾಗುತ್ತದಲ್ಲ… ಕೈಯಲ್ಲಿಪುಡಿಗಾಸು ಇಲ್ಲದೇ ದೇವರ ಮೇಲೆ ಎಲ್ಲಭಾರ ಹಾಕಿ ಇರುವುದು ಏನು ಮಹಾ.
.
.
? ಆ ದಾಸರು ಶರಣರು ಮಾಡಿದ್ದುಅಷ್ಟೇ ತಾನೇ? ನಮ್ಮ ಹಾಗೆ ಬೆಲೆ ಬಾಳುವುದೆಲ್ಲಇಟ್ಟುಕೊಂಡು ದೇವರನ್ನು ನಚ್ಚಿಕೊಂಡು ಇರಲಾಗುತ್ತಿತ್ತೇ ಅವರಿಗೆ? ಅವನಾದರೂ ಎಂಥವನು ಎಂದರೆ, ಇಲ್ಲದ ಹೊರೆ ಹೊತ್ತುಕೊಳ್ಳಲು ಎಳ್ಳಷ್ಟೂ ತಯಾರಿಲ್ಲ.
ಎಲ್ಲಬಿಟ್ಟು ಬಂದವರನ್ನಷ್ಟೇ ಒಲಿದು ಆಶ್ರಯಿಸುವ.
ಇಂಥ ಸಂಚನ್ನು ಅರಿಯದ ಮುಗ್ಧೆ ನಮ್ಮ ಮಹಾದೇವಿಯಕ್ಕ, “ಎನ್ನಲ್ಲಿ ಏನುಂಟೆಂದು ಕರಸ್ಥಳವನಿಂಬುಗೊಂಡೆ ಪೇಳಾ.
.
.
" ಎಂದು ಕಣ್ತುಂಬಿ ಹೃದಯ ತುಂಬಿ ಆತನ ಔದಾರ್ಯವನ್ನು ಕೊಂಡಾಡುತ್ತಾಳೆ.
ಸ್ನಾನ ಮಾಡಿ ಬಂದುನೋಡುತ್ತೇನೆ.
ಚೀಲ ಅಲ್ಲೇ ಇತ್ತು.
ಕಾಟುಗಳ ಮೇಲಿನ ಹತ್ತಾರು ಜನ ಅಲ್ಲಲ್ಲೇ ಹಾಗಾಗೇ ಇದ್ದರು.
ಇವನ್ಯಾಕೋ ತುಂಬ ಆಡಿಕೊಳ್ಳುತ್ತಿದ್ದಾನೆ ಎಂದು ಕಿರಿಕಿರಿಯಿಂದಲೋ ಏನೋ ಮಲ್ಲಿಕಾರ್ಜುನ ನನ್ನ ಬ್ಯಾಗನ್ನು ಕಾದುಕೊಂಡಿದ್ದ.
ನೆಮ್ಮದಿಯ ಉಸಿರು ಬಿಡುತ್ತಮಾಸಿದ ಬಟ್ಟೆಗಳನ್ನು ಮಾತ್ರ ಕಾಟಿನ ಮೇಲಿಟ್ಟು ಉಳಿದೆಲ್ಲಬ್ಯಾಗಲ್ಲಿ ತುಂಬಿಕೊಂಡು ಹೊರನಡೆದೆ.
ಆಗಲೇ ಅಪರಾಹ್ಣಎರಡು ಗಂಟೆ.
ಯಾಕೋ ತಿನ್ನುವುದು ಬೇಡ ಎನಿಸಿತು.
ದರ್ಶನವೇ ಮೊದಲಾಗಲಿ.
ಆಮೇಲೆ ಉಳಿದದ್ದುಎಂದುಕೊಂಡು, ದೇವಸ್ಥಾನದತ್ತನಡೆದೆ.
ಅಲ್ಲಿಯ ಕ್ಲೋಕ್ ರೂಮಲ್ಲಿಮೊಬೈಲು, ಚೀಲ ಇಟ್ಟು ದರ್ಶನದ ಸರದಿಯತ್ತಸರಸರ ನಡೆದೆ.
ಆ ಕ್ಯೂ ಒಂದು ಏಳೆಂಟು ಸುತ್ತಿನ ಚಕ್ರವ್ಯೂಹ.
ಖಾಕಿ ತೊಟ್ಟ ಜಯದ್ರಥನೊಬ್ಬ ತಡೆದು “ಧೋ ತಿ ಪೆಹನಕೇ ಆವೋ” ಅಂದ.
ಮತ್ತೆ ಕ್ಲೋಕ್ ರೂಮಿಗೆ ಓಡಿ, ಪಂಚೆ ತೆಗೆದುಕೊಳ್ಳುತೇನೆಂದು ಬೇಡಿದೆ.
ಆತ ಹಿಂಬಾಗಿಲಿಗೆ ಕರೆದು ಬೇಗ ತೆಕ್ಕೊಂಡು ಕೊಡಿ ಅಂದ.
ನಾನು ಪಂಚೆ ಸುತ್ತಿಕೊಂಡು ಪ್ಯಾಂಟು ತೆಗೆಯುವ ಗುದುಮುರಿಗೆನೋಡಿ, ಅದೆಲ್ಲ ಬೇಕಾಗಿಲ್ಲ, ಪ್ಯಾಂಟ್ ಮೇಲೆಯೇ ಪಂಚೆ ಸುತ್ತಿಕೊಂಡು ಹೋಗಿ ಎಂದ.
ಎಲಾ ಇವನ.
.
ಇವನ ಮಾತು ಕೇಳಿ ಹಾಗೇ ಮಾಡಿ ಹೋದರೆ ಅಲ್ಲಿಪೊಲೀಸಿನವನು ನನ್ನ ಪಂಚೆ ಎತ್ತಿನೋ ಡಿ ಮತ್ತೆವಾಪಸು ಕಳಿಸಿದರೆ ಏನು ಗತಿ ಅಂದುಕೊಂಡರೂ ಹುಬ್ಬಳ್ಳಿಯ ಮಾಧ್ವ ಮಂಡಳ 11 ಹಾಸ್ಟೆಲ್ ಅಲ್ಲಿಇದ್ದಾಗಿನ ನೆನಪಾಯಿತು.
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ ತತ್ತ್ವತೋ .
.
.
ಮೊದಲಾಗಿ ಬೆಳಗಿನ ಆರು ಗಂಟೆಯ ಪ್ರಾರ್ಥನೆಗೆ ಅಲ್ಲಿನ ಹುಡುಗರು ತಮ್ಮ ಬರ್ಮುಡಾ, ನೈಟ್ ಪ್ಯಾಂಟುಗಳ ಮೇಲೆಯೇ ಪಂಚೆ ಸುತ್ತಿಕೊಂಡು ಬಂದು ಪ್ರಾರ್ಥನೆ ಮುಗಿಸಿ ಹಾಗೇ ಮರಳಿ ಬೆಡ್ ಮೇಲೆ ಮತ್ತೆಉರುಳುತ್ತಿದ್ದರು.
ಸರಿ, ಧೈರ್ಯ ತಾಳಿ ಕ್ಯೂ ಅಲ್ಲಿ ನಿಂತು ಶ್ರೀಮದ್ಗಾಂಭೀರ್ಯದಿಂದ ತಲೆ ಎತ್ತಿಕೊಂಡು, ಅರ್ಧನಿಮೀಲಿತನೇತ್ರನಾಗಿ ಅಕ್ಕಪಕ್ಕದವರ ಕಾಲುಗಳತ್ತಕಳ್ಳನೋಟ ಬೀರಿದೆ.
ಎಲ್ಲರ ಬಿಳಿ ಪಂಚೆಗಳ ಒಳಗೂ ಕರಿ, ನೀಲಿ, ಬೂದು ಬಣ್ಣಗಳ ಪ್ಯಾಂಟು, ಜೀನ್ಸು ಇಣುಕುತ್ತಿದ್ದುವು.
ಸುಮಾರು ಹೊತ್ತುಆ ಸರದಿಯ ಸುತ್ತುಗಳಲ್ಲಿಚಲಿಸಿದ ಮೇಲೆ ಎರಡು ತಾಸಿನಲ್ಲಿದೇವಸ್ಥಾನದ ಒಳ ಮಂಟಪ ಬಂತು.
ನಮ್ಮಲ್ಲಿಕಲೆ ರಾಸಿಕ್ಯಗಳಿಗೆ ಮೀಸಲಾದ ದೇವಾಲಯಗಳೇ ಬೇರೆ.
ಭಕ್ತಿ, ಪೂಜೆಗಳಿಗೆ ಮೀಸಲಾದುವೇ ಬೇರೆ ಆಗಿವೆ.
ಬೇಲೂರು ಹಳೇ ಬೀಡುಗಳಲ್ಲಿಬರೀ ಕಂಬ, ಗೋಡೆನೋಡಲು ಹೋಗುತ್ತೇವೆ.
ಒಳಗೆ ದೇವರಿದ್ದರೂ ಪೂಜೆ ನಡೆದರೂ ಅವಕ್ಕೇನೂ ಅಷ್ಟು ಕಿಮ್ಮತ್ತಿಲ್ಲ.
ಆ ದೇವರುಗಳಿಗೆ ಭಕ್ತರ ಜಾತ್ರೆ ನೆರೆಯುವುದಿಲ್ಲ.
ಹರಕೆ, ಮುಡಿಪು, ಕಾಣಿಕೆಗಳು ಇಲ್ಲ.
ಇನ್ನು ಜ್ಯೋತಿರ್ಲಿಂಗಗಳೆಂದು ಹೇಳುವ ಪುರಾಣಪ್ರಸಿದ್ಧಈ ದೇವಾಲಯಗಳಲ್ಲಿಭಕ್ತರ ಸಂದಣಿ, ಅಷ್ಟು ಜನಕ್ಕೆ ಪ್ರಬಂಧ ಕಲ್ಪಿಸಲು ಮಾಡಿದ ಪಾಳಿಯ ಕಟ್ಟು, ಕಟಾಂಜನ, ಛತ್ತುಛಾವಣಿಗಳ ಇಕ್ಕಟ್ಟಿನಲ್ಲಿ ಗೋಡೆ, ಕಂಬ, ಸೂರುಗಳು ಅವುಗಳಲ್ಲಿನ ಕೆತ್ತನೆ ಇವಾವೂ ಕಣ್ಣಿಗೆ ಬೀಳುವುದಿಲ್ಲ.
ಬಿದ್ದರೂ ಆ ಆದಿಶೇಷನಂಥ ಸುತ್ತುಗಳ ಕ್ಯೂನಲ್ಲಿ ನಿಂತು ಬಸವಳಿದು ಕಂಗೆಟ್ಟ ಮನಸ್ಸಿಗೆ ನಾಟುವುದಿಲ್ಲ.
ಎಲ್ಲೋ ಕಂಬದ ಮೇಲಿನ ಆನೆ, ಸಿಂಹ, ಗಿಣಿ, ನವಿಲುಗಳ ಕೆತ್ತನೆ, ಮತ್ತಾವುದೋ ಹಳೆಯ ಬಣ್ಣದ ಚಿತ್ರ, ದ್ವಾರಪಾಲಕರ ಸೊಗಸಾದ ವಿಗ್ರಹಗಳು ಕಣ್ಣಿಗೆ ಬೀಳುವಷ್ಟರಲ್ಲಿಹಿಂದಿನಿಂದ ತಳ್ಳುತ್ತಾರೆ, ಪಕ್ಕದಿಂದ ತಿವಿಯುತ್ತಾರೆ, ಎದುರಿನಲ್ಲಿ ಮತ್ತಾರೋ ನುಸುಳಿ ಸೇರಿಕೊಂಡು ಇಷ್ಟೊತ್ತುಕಾದು ನಿಂತ ಅಭಿಮಾನವನ್ನು ಕೆರಳಿಸುತ್ತಾರೆ.
ಅನಿವಾರ್ಯವಾಗಿ ಈ ಅಧಿಭೂತ, ಅಧಿದೈವ, ಅಧ್ಯಾತ್ಮ, ಅಧಿರಸಗಳ ಪೃಥಕ್ಕರಣ ಮಾಡಿಕೊಂಡೇ ಸಾಗಬೇಕಾಗುತ್ತದೆ.
ಅವೆಲ್ಲಸೇರುವುದು ಎಲ್ಲಿ? ಎಲ್ಲೋ ಕ್ವಚಿತ್ತಾಗಿ.
ನಮ್ಮ ಮನಸ್ಸಿನ ಯಾವುದೋ ಕ್ಷಣದ ಸ್ಥಿತಿಯಲ್ಲಿ.
ಆದರೆ ಅದು ಸಿಕ್ಕ ಆ ಕ್ಷಣ ಮಾತ್ರ ಚಿರಕಾಲ ನೆನಪನ್ನು ಬೆಳಗುವಂಥದು.
ಅದನ್ನು ಚಿರಂತನವಾಗಿ, ನಿತ್ಯಪ್ರಸ್ತುತವಾಗಿ ಅನುಭವಿಸುವವರು ಅನುಭಾವಿಗಳು.
ಹೀಗಂತ ಜನಸಮೂಹದ ಮನದ ಮೇಲೆ ಈ ಅಧಿದೈವ ಉಂಟುಮಾಡುವ ಪರಿಣಾಮ ಗೌಣವಲ್ಲ.
ಎಲ್ಲಇಷ್ಟು ಕಾತರ, ಸಡಗರ, ಸಂಭ್ರಮಗಳಿಂದ ನುಗ್ಗುತ್ತಿರುವುದು ಏತಕ್ಕೆ? ಆ ಹೊತ್ತುಮೈಮರೆವುದು ಏತಕ್ಕೆ? ಅಲ್ಲೊಂದು ತಮ್ಮ ಮನವ ಬೆಳಗುವ ಆದರ್ಶದ ಬಿಂಬವಿದೆ, ಅಲ್ಲೊಂದು ತಮ್ಮ ಅಳಿಯಾಸೆಯೋ ಉಳಿವಾಸೆಯೋ ಬೆಳೆವಾಸೆಯೋ ಕೈಗೂಡುವಂತೆ ಮಾಡುವ ಶಕ್ತಿಕೇಂದ್ರವಿದೆ, ಅಲ್ಲೊಂದು ಆನಂದದ ಒರತೆಯಿದೆ, ಅಲ್ಲೊಂದು ಬಾಳಿಗೆ ಆಸರೆ ಕೊಟ್ಟ ನಂಬಿಕೆಯ ಮೂರ್ತರೂಪ ಇದೆ.
ಹೆಚ್ಚಾಗಿ ಆ ಹೊತ್ತು ಕೆಲಮಟ್ಟಿಗಾದರೂ ನಮ್ಮ ಅಹಂಕಾರದ ತಲೆ ತಗ್ಗಿಸುವಂತಹ ಭೂಮಕಲ್ಪವಿದೆ, ನಮ್ಮ ಸೋಗಿನ ಮೈ ಬರಿದು ಮಾಡಿ ನಿಲಿಸಿಕೊಳ್ಳುವ ನಿಜದ ಸೌಂದರ್ಯದ ನೆಲೆಯಿದೆ.
“ಹರ ಹರ, ಹರ ಹರ” ಎಂದು ಘೋಷ ಮೊಳಗುತ್ತ, ಅಲ್ಲಿಎಲ್ಲರೂ ಬಾಗಿ ಹಣೆ ಹಚ್ಚಿ ಬಂದುದಾಯಿತು.
ಪಕ್ಕದಲ್ಲೇ ಭ್ರಮರಾಂಬಿಕೆಯ ಮಂದಿರ.
ಅಲ್ಲಿ ಜನದ ಸಂದಣಿ ಕಡಮೆ.
ಮಲ್ಲಿಕಾರ್ಜುನನ ದರ್ಶನದ ಬಾಲಭಾಸ್ಕರದೀಧಿತಿಗೆ ಅರಳಿದ ಭಕ್ತಹೃತ್ಕಮಲಗಳ ಪರಾಗದ ಕಾಣ್ಕೆಯಲ್ಲಿಭ್ರಮರಾಂಬಿಕೆ ಮಿಸುನಿಯ ಕಾಂತಿದಳೆದು ಮಿರುಗುತ್ತಿದ್ದಳು.
ಆಕೆಗೆ ಮಣಿದು ಮೇಲೇಳುತ್ತಿರುವಂತೆಯೇ ಹೊಟ್ಟೆಯ ಹಸಿವು ತಲೆ ಎತ್ತಿತು.
ವೇಳೆ ಸಂಜೆ ನಾಲ್ಕುವರೆ.
ದೇವಸ್ಥಾನದ ನಿತ್ಯದ ಅನ್ನ ದಾಸೋ ಹದ ವೇಳೆ ಮೀರಿತ್ತು.
ಪ್ರಸಾದವೆಂದು ಲಾಡು, ನಿಪ್ಪಟ್ಟು ಕೊಂಡು ಒಂದು ತಿಂದು ನೀರು ಕುಡಿದಾಗಲೇ ಎಷ್ಟೋ ಸುಧಾರಿಸಿಕೊಂಡಾಯಿತು.
ಆಮೇಲೆ ಒಂದು ಹೊಟೆಲ್ಲಲ್ಲಿಅನ್ನ ಸಾರು ಉಂಡು ಅಲ್ಲಿಇಲ್ಲಿ ವಿಚಾರಿಸಿದೆ, ಅಕ್ಕಮಹಾದೇವಿಯ ಗುಹೆಗೆ ಹೋಗುವುದು ಹೇಗೆ ಎಂದು.
ಕೆಲವರು ಅದೇನೋ ಗೊತ್ತಿರದ ಸಂಗತಿ ಎಂಬಂತೆ ತಲೆಗೊಡವಿದರು.
ಕೆಲವರು ಅಲ್ಲಿಗೆ ಹೋಗುವುದನ್ನು ಅರಣ್ಯ ಇಲಾಖೆಯವರು ನಿಷೇಧಿಸಿದ್ದಾರೆ ಎಂದರು.
ಒಬ್ಬಾತ ಕೃಷ್ಣಾನದಿಯಲ್ಲಿ ನೀರಿಲ್ಲ, ಬೋಟ್ ಹೋಗುವುದಿಲ್ಲಎಂದ.
ಮತ್ತೊಬ್ಬ ಬೆಳಗ್ಗೆ ಮಾತ್ರ ಹೋಗಬಹುದು ಎಂದ.
ಡಾರ್ಮೆಟರಿಗೆ ಹೋಗಿ, ತಲೆಯಿಂಬಿನ ಕೆಳಗೆ ಪರ್ಸು, ಮೊಬೈಲು ಹುದುಗಿಟ್ಟು ಪಂಚೆ ಹೊದ್ದುತಣ್ಣಗೆ ಮಲಗಿದೆ.
12 <><><><><> ಮದನಾರಿ ಎಂಬ ಮಳೆ ಹೊಯ್ಯಲು ಶಿವಯೋಗವೆಂಬ ತೊರೆ ಬರಲು ಕಾಮನೆ ಅಂಬಿಗನಾದನೋಡಾ! ಕರ್ಮದ ಕಡಲೆನ್ನನೆಳದೊಯ್ವಾಗ ಕಯ್ಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ ಬೆಳಗಿಗೆ ಮುನ್ನ ಧೋಧೋ ಮಳೆ ಸುರಿಯತೊಡಗಿತ್ತು.
ಸಪ್ಪಳಕ್ಕೆ ಎಚ್ಚರವಾಗಿ ಕಿಟಕಿಯತ್ತಕಣ್ಣಾಡಿಸಿದೆ.
ಹಬ್ಬಿ ಹರಡಿದ ಕತ್ತಲೆ ಕರಕರಗಿ ರಸ್ತೆಬದಿಯ ದೀಪದಲ್ಲಿಮಿನುಗುತ್ತಹನಿಸುತ್ತಿರುವಂತೆ ತೋರಿತು.
ಮೈಯ ಜಡ್ಡುಮಳೆ ಇದೆಯಲ್ಲ, ಈಗ ಎದ್ದುಎಲ್ಲಿಗೆ ತಾನೇ ಹೋಗಲು ಸಾಧ್ಯ ಎಂದು ನೆಪ ಹೂಡಿ ಮತ್ತೆನಿದ್ರೆಗೆ ಎಳೆಯಿತು.
ಅರೆತೆರೆದ ಕಣ್ಣುಮುಚ್ಚುವ ಮೊದಲು ತಲೆಯಿಂಬಿನ ಕೆಳಗೆ ಕೈಯಾಡಿಸಿ ಮೊಬೈಲು, ಪರ್ಸುಗಳ ಅಸ್ತಿತ್ವದ ಖಾತ್ರಿ ಪಡಿಸಿಕೊಂಡೆ.
ಮೈ-ಸುಖದ ಕಾಮನೆ ಮಳೆ, ಚಳಿ ಎಂದು ನೆಪ ಹೂಡಿ ಕೋಣೆಯೊಳಗೆ ಬಂಧಿಸಿಡುತ್ತದೆ.
ತಪಿಸಿ ತಪಿಸಿ ಕಾದ ಯೋಗಿಗಳ ಮನದ ನೆಲದ ಮೇಲೆ ಶಿವತತ್ತ್ವದ ಮಳೆ ಹೊಯ್ದು, ತೊರೆ ಉಕ್ಕಿದಾಗ, ಅದೇ ಭವದ ಕಾಮವೇ ಈಗ ಮೋಕ್ಷಕಾಮವಾಗಿ ಅಂಬಿಗನಂತೆ ಈ ಭವದಿಂದಾಚೆ ದಾಟಿಸುತ್ತದೆ.
ಮಳೆ ಬಿಡಲಿಲ್ಲ.
ಮತ್ತೆಎಬ್ಬಿಸಿತು.
ಆರು ಗಂಟೆ.
ಈಚೆ ಹೊರಳಿದೆ.
ನಿನ್ನೆ ಮಧ್ಯಾಹ್ನ ನಾ ಈ ಡಾರ್ಮೆಟರಿ ಹೊಕ್ಕಾಗಿನಿಂದನೋಡುತ್ತೇನೆ, ಆ ಮನುಷ್ಯ ಹಾಗೇ ಹಾಸಿಗೆಗೆ ಅಂಟಿಕೊಂಡಿದ್ದ.
ದೇವರ ದರ್ಶನವೋ! ಸುತ್ತಲಿನ ಕ್ಷೇತ್ರ ದರ್ಶನವೋ! ಒಂದೂ ಉಸಾಬರಿ ಇಲ್ಲ.
ನಾನೂ ಅವನಂತಾಗಲೇಕೆ? ನಿಂದಲ್ಲಿಫಲವೇನು ಶ್ರೀಶೈಲದ ಕಾಗೆಯಂತೆ.
.
.
ಏಳೆಂದು ಕೊಡವಿಕೊಂಡು ಎದ್ದೆ.
ಪರ್ಸು ಮೊಬೈಲುಗಳನ್ನು ಕರೆದುಕೊಂಡು ಹೋಗಿ ಶೌಚ, ಸ್ನಾನ ಮುಗಿಸಿ ಬಟ್ಟೆ ತೊಟ್ಟು ಹೊರನಡೆದೆ.
ಏಳು ಗಂಟೆಗಾಗಲೇ ಹೊಟ್ಟೆ ಹಸಿದಿತ್ತು.
ಜಿಟಿಜಿಟಿ ಮಳೆಗೆ ತೋಯುತ್ತಲೇ ನಡೆದು ಒಂದು ಖಾನಾವಳಿಯಲ್ಲಿಇಡ್ಡಲಿ ತಿಂದು ಸಕ್ಕರೆ ಪಾಕದಂತಹ ಚಹಾ ಕುಡಿದು ಅರ್ಧ ಚೆಲ್ಲಿ, ಶಿಖರದರ್ಶನಕ್ಕೆಂದು ಒಂದು ಶೇರ್ ಆಟೋ ಹಿಡಿದು ಕೂತೆ.
ಆ ಮನುಷ್ಯ ಇನ್ನಷ್ಟು ಜನಕ್ಕೆ ಕಾದು ಕಾದು ಬೇಸರಿಸುತ್ತಿದ್ದಾಗಲೇ “ಹರ ಹರ, ಹರ ಹರ” ಎನ್ನುತ್ತಒಬ್ಬಾತ ಜೊತೆಯೊಬ್ಬನೊಂದಿಗೆ ಆಟೋ ಏರಿದ.
ಮನಸ್ಸಿಗೆ ನಿರಾಳವಾಯಿತು.
ಚೆಕ್ಕೆಯಂತೆ ತೆಳ್ಳಗಿನ ಮೈಕಟ್ಟು, ನನ್ನೆದೆಗೆ ಬರುವ ಎತ್ತರ, ಎದ್ದುನಿಂತ ಕಪೋಲದ ಎಲುವುಗಳ ನಡುವೆ ದೊಡ್ಡದೊಡ್ಡ ಕಣ್ಣುಗಳು, ಅರೆನೆರೆತ ಮೀಸೆ, ಬಾಚದ ತಲೆಗೂದಲು, ಎಲೆಯಡಿಕೆಯ ಕೆಂಪಿನ ತುಟಿ, ಹುಳಿತ ಹಲ್ಲು, ಉಬ್ಬಿದ ದವಡೆಯ ಆಯತಾಕಾರದ ಮುಖ, ಉದ್ದವೂ ಅಗಲವೂ ಮೂಗು, ಚಪ್ಪಟ ಹಣೆಯ ಮೇಲೆ ನಿರಿನಿರಿ ಹಸಿ ಗಂಧದ ಢಾಳವಾದ ಎರಡು ಅಡ್ಡಸುತ್ತಿನ ತೀಡಿಕೆ, ನಡುವೆ ಕುಂಕುಮದ ಬೊಟ್ಟು, ಅದರ ಮೇಲೆ ಅಕ್ಷತೆಯ ಒತ್ತು.
ದನಿಯೋ ಗಂಟೆ.
ಬರಿಮೈ ಮೇಲೆ ಕೆಂಗೇಸುರಿಯ ತೆಳ್ಳನೆ ಶಾಲು, ಬಿಳಿ ಪಂಚೆ.
ಘಟ್ಟಗಳ ರಸ್ತೆ ಏರಿಳಿವಾಗಲೊಮ್ಮೆ, ತಿರುವಿದಾಗೊಮ್ಮೆ “ಹರ ಹರ, ಹರ ಹರ” ಘೋಷ.
ದೇವಾಲಯಗಳ ಒಳಹೊಕ್ಕಾಗಂತೂ ಕಂಚಿನ ಕಂಠದ ಏರುದನಿಯ ಸ್ತೋತ್ರ-ಮಂತ್ರಗಳ ಪಠಣ, ಹಾಡುಗಳ ಹಾಡೋ ಣಿ.
ಸಂಗೀತಶಾರದೆ ಸದಾ ಸ್ನೇಹಮಯಿಯಾಗಿ ಆತನಿಗೆ ಒಳ್ಳೇ ದನಿ, ಸ್ವರ-ಲಯ, ಲಾಲಿತ್ಯ, ಭಾವ ಎಲ್ಲ ಕೊಟ್ಟಿದ್ದರೂ ಸಾಹಿತ್ಯಶಾರದೆ ಮಾತ್ರ ಏಕೋ ತೀರಾ ಕೈಕೊಟ್ಟು ಅನ್ಯಾಯ ಮಾಡಿದ್ದಳು.
“ಕಾರಂಗ್ರ ವಸತೇ ಲಕ್ಷ್ಮೀ ಕರಾ ಮಧ್ಯೇ ಸರಸ್ವತೀ | ಕರಂ ಮೂಲೇ ಸದಾ ಗೌರೀ ಪ್ರಭಾ ಶಂಕರ ದರ್ಶನಮ್ ||” ಎಂದೆಲ್ಲನಿರರ್ಗಳವಾಗಿ ಹರಿಯುತ್ತಿತ್ತು.
ಆತನಲ್ಲಿದೇವರ ಬಗ್ಗೆಮೀಸಲಾತಿ ಇರಲಿಲ್ಲ.
ಶಿವನ ಮುಂದೆ ಪಾಂಡುರಂಗನ ಸ್ತುತಿ, ದೇವಿಯ ಮುಂದೆ ಶಿವಸ್ತುತಿ, ಹನುಮನ ಸ್ತುತಿ, ಗಣಪತಿಯ ಮುಂದೆ ರಾಮನ ಸ್ತುತಿ ಇಂತೆಲ್ಲ ಔದಾರ್ಯ ಧಾರಾಳವಾಗಿತ್ತು.
ಇದು ಕೇವಲ ಪ್ರದರ್ಶನ ಅನಿಸುತ್ತಿರಲಿಲ್ಲ.
ನಿತ್ಯದ ರೂಢಿ ಇಟ್ಟುಕೊಂಡ ಪ್ರಾಮಾಣಿಕ ವರ್ತನೆ ಮಾತ್ರವಾಗಿತ್ತು.
ಮುಖದಲ್ಲಿ ಸದಾ ಸಂತೃಪ್ತಿಯ ಮುಗುಳುನಗೆ.
ಅದೇನು ಇಲ್ಲೇನು ಅದೇಕೆ ಎಂದೆಲ್ಲ ಯಾವಾಗಲೂ ಗಮನಿಸುವ ಅರಳಿದ ಕಣ್ಣುಗಳ ಎಚ್ಚರದ ಭಾವ.
ಒಟ್ಟಲ್ಲಿಬೆಳ್ಳಂಬೆಳಗ್ಗೆಇದೊಳ್ಳೇ ಸಹವಾಸ ಆಯಿತಲ್ಲ ಎಂಬ ಸಕುತೂಹಲ ಸಂತೋ ಷ.
ಯಾವೂರು ಅಂದೆ.
ವಾರಂಗಲ್ಲುಅಂದರು.
13 ಇಂಥ ಶಿವಭಕ್ತನನ್ನು ಜೊತೆ ಮಾಡಿಕೊಂಡು ಮುಂಜಾವದ ಆ ತುಷಾರಗಾಢತೆಯ ನಿಗೂಢತೆಯಲ್ಲಿ ಮನವು ಮರಗಟ್ಟಿದಂತಾಗಿರೆ ಮಹಾದೇವನ ನಿವಾಸಸ್ಥಾನವಾದ ಹಿಮವಂತನ ಮಡಿಲಲ್ಲೇ ಚರಿಸುತ್ತಿರುವ ಅನುಭವ! ಭಕ್ತರ, ಶರಣರ ಪ್ರತಿಯೊಂದು ಚಿತ್ತವೃತ್ತಿಗಳು, ಕೃತಿವಾಗ್ಗತಿಗಳು ಶಿವಭಕ್ತಿತುಹಿನಧವಳತೆಯಲ್ಲಿ ತೊಯ್ದು ತೊಪ್ಪೆಯಾಗಿ ನಿಂದಂತೆ ಅಕ್ಕಪಕ್ಕದ ಗಿಡಮರ-ಬಳ್ಳಿಗಳ ಎಲೆ ಹೂವುಗಳು ಮಂಜಿನ ಮುಸುಕು ತಾಳಿ ತಗ್ಗಿನಿಂತಿದ್ದುವು.
ಯಾವ ಮಾಯಾಯವನಿಕೆಗೆ ಭಗವದ್ವಿಷಯವು ಮರೆಯಾಗಿ ಲೋಕದ ಜೊತೆಗೆ ಕಣ್ಣಮುಚ್ಚಾಲೆ ಆಡುತ್ತದೋ , ಅದೇ ಭಗವದ್ಭಕ್ತಿಯ ಬಾಷ್ಪವೀಗ ಎಲ್ಲೆಡೆ ಹರಡಿ ಪ್ರಪಂಚದ ವಿಷಯವಸ್ತುಗಳ ಗಾಢತೆಯನ್ನು ಮಸುಕುಗೊಳಿಸಿದಂತೆ ಕಾಣುತ್ತಿತ್ತು.
ಶಿಖರದರ್ಶನಕ್ಕೆ ಹೋಗುತ್ತಿದ್ದೇವಂತೆ.
ಅದೇನೋ ಹೇಗೋ ಗೊತ್ತಿಲ್ಲ.
ಆದರೆ ಈ ಬೆಳಗಿನ ಸೊಗಸಿನ ಮರಸಿನ ಸ್ನಿಗ್ಧ-ಮೋಹಕ ಸೌಂದರ್ಯಶಿಖರಕ್ಕೆ ಮಣಿದೆ.
ಅದೊಂದು ಪರ್ವತದ ನೆತ್ತಿಯ ಮೇಲೆ ಒಂದು ಗುಡಿ.
ಅದರ ಪಕ್ಕ ಕಿರು ಆಳೆತ್ತರದ ಕಟ್ಟೆಯ ಮೇಲೆ ಒಂದು ಒರಳಿನಂತಹ ರಚನೆ.
ಅದರಲ್ಲಿಬೇರೆ ಬೇರೆ ಕೋನಕ್ಕೆ ತಿರುಗಿಸಿ ಹೊಂದಿಸಿಕೊಳ್ಳಬಹುದಾದ ನಂದಿಯ ಕಲ್ಲಿನ ಮೂರ್ತಿ.
ಜೊತೆಯಿದ್ದಾತ ತಾನೇ ಪುರೋ ಹಿತನಂತೆ ಮೊದಲು ಆ ಕಟ್ಟೆ ಹತ್ತಿನಿಂತ.
ಆ ನಂದಿಯನ್ನು ಆಚೆ ಈಚೆ ತಿರುಗಿಸಿ ಒಂದೆಡೆ ಸ್ಥಿರಗೊಳಿಸಿ, ಅದರ ಕೋಡುಗಳ ಮೇಲೆ ತನ್ನ ಬಲಗೈಬೆರಳಿನ ಕಮಾನು ಮಾಡಿ ಹಿಡಿದು, ಆ ಕಮಾನಿನೊಳಗಡೆ ತೂರುವಂತೆ ದೃಷ್ಟಿ ನೆಟ್ಟುನೋಡಿದ.
ಹಾ, ಆಹಾ ಎಂದು ಉದ್ಗರಿಸಿದ.
ನಾನು ಬಾಯಿ ತೆರೆದು ನಿಂತುಕೊಂಡೆದ್ದೆ.
ಒಂದಿಷ್ಟು ಜನರುನೋಡಿಯಾದ ಮೇಲೆ ನನ್ನನ್ನು ಮೇಲೆ ಕರೆದ.
ನಂದಿಯ ಶೃಂಗಗಳ ಮಧ್ಯದಿಂದ ಅಗೋ ಅಲ್ಲಿನೋಡಿದರೆ ಮಲ್ಲಿಕಾರ್ಜುನನ ದೇಗುಲದ ಶಿಖರ ಕಾಣುತ್ತದೆ,ನೋಡು, ನಮಸ್ಕಾರ ಮಾಡು ಎಂದ.
ದಾಕ್ಷಿಣ್ಯದ ದಕ್ಷಿಣಾಮೂರ್ತಿಯಾದ ನನಗೆ ಸತ್ಯ ಹೇಳಲು ಸಂಕೋಚವಾಯಿತು.
ದಟ್ಟ ಮಂಜಿನ ತೆರೆ ಮಾತ್ರ ಕಂಡದ್ದು.
“ಶಿಖರ್ ಉಸೀ ದಿಶಾ ಮೇಂ ಹೈ” ಎಂದ.
“ಹಾಂ.
.
" ಎಂದು ನಮಸ್ಕರಿಸಿ ನಾನು ಕಟ್ಟೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಘಂಟಾಘೋಷದಿಂದ “ಬಸ್! ಹೋಗಯಾ.
.
ಶಿರಿಶೈಲ ಶಿಖರಂ ದೃಷ್ಟ್ಬಾ ಪುನರ್ಜನ್ಮ ನ ವಿದ್ಯತೇ.
.
ಶಿಖರ್ ದರ್ಶನ್ ಹೋಗಯಾ.
ಅಬ್ ಸಬ್ ಕುಛ್ ಖತಮ್.
.
ಜನಮ್ ಜನಮ್ ಕಾ ಅಕೌಂಟ್ ಕ್ಲೋಸ್ ಹೋಗಯಾ” ಎಂದು ಕೂಗತೊಡಗಿದ.
ನನಗೆ ಗಾಬರಿಯಾಯಿತು.
ಮಾರಾಯಾ, ನನಗೆ ಇನ್ನೂ ಬೇಕಾಗಿದೆಯಪ್ಪ ಜನ್ಮ! ಕಳೀಬೇಡಪ್ಪ ದೇವರೇ ಈ ಬಾಳನ್ನು ಎಂದು ಬೇಡಿಕೊಂಡೆ.
ಅಲ್ಲಿಂದ ಇಳಿದು ಹಾಟಕೇಶ್ವರನ ದರ್ಶನಕ್ಕೆ ಬಂದೆವು.
ಆಹಾ! ಆ ಚಿಕ್ಕದಾದ, ಚೊಕ್ಕದಾದ ಒಂದು ದೇಗುಲ ಮನಸ್ಸಿಗೆ ಅದೆಷ್ಟು ತಂಪೆರೆಯುತ್ತಿತ್ತು! ಸುತ್ತಲೂ ಸಂತಾನವೃಕ್ಷಗಳು, ಆಲದ ಮರವೊಂದು.
ಕೆಲವೇ ಕೆಲವು ಮಂದಿ ಬರುವರು ಹೋಗುವರು.
ಹಿತಮಿತವಾದ ಕೆತ್ತನೆಯ ಕಲ್ಲ ಕಂಬಗಳು.
ಒಳಹೋಗುತ್ತಿದ್ದಂತೆ ಕೈಮುಗಿಯುವುದೂ ಮರೆಯಿತು.
ಸುಮ್ಮನೇ ಹೋಗಿ ಗರ್ಭಗೃಹದ ಮುಂದೆ ಕೂತುಬಿಟ್ಟೆ.
ಅಲ್ಲಿನ ಪ್ರಸನ್ನತೆಗೆ ಸುತ್ತಲಿನ ಭೌತಪ್ರಪಂಚ ತನ್ನ ಸಹಕಾರದ ಹಸ್ತಚಾಚಿತ್ತು.
ಯಾವುದೂ ಅತಿಯೆನಿಸದ ಸೊಗಸಿನ ಸಾತ್ತ್ವಿಕತೆಯ ಸೌಷ್ಠವದ ಭಿತ್ತಿಗಳು, ಕಂಬಗಳು, ಸುತ್ತು, ಛತ್ತು.
ಮಂದವಾದ ಎಣ್ಣೆದೀಪದ ಬೆಳಕಿನಲ್ಲಿ ಭಸ್ಮ, ಗಂಧಾನುಲೇಪನದಿಂದ, ಕಠಿನವ್ರತಿಯಾದ ಯೋಗಿಯೊಬ್ಬನ ಮುಗುಳುನಗೆಯಂತೆ ತುಸು ಮಿಸುನಿದೊಳಗಿನಿಂದ ಒಪ್ಪುವ ಕಪ್ಪು ಶಿಲೆಯ ಹಾಟಕೇಶ್ವರ ಲಿಂಗಮೂರ್ತಿ.
ತುಪ್ಪದ ದೀಪ, ಧೂಪಗಳ ಕಮರು ಜಾಜಿ ಮಲ್ಲಿಗೆ, ಸೇವಂತಿಗಳ ಪರಿಮಳದ ಕೈವಿಡಿದು ಒನಪುಗೊಂಡು ಸುಳಿದಾಡುವ ದಿವ್ಯತೆಯನ್ನುನೋಡಲು ಹೇ ಕಣ್ಣೇ ನಿನಗಾಗದು ಎಂದು ಮೂಗು ಮೂದಲಿಸಿ ಅರಳಿತ್ತು.
ಅಲ್ಲಿಆ ಒಂದು ಹೊತ್ತುನಾನೇ ನಾನಾಗಿ ಸಂತಸಿಸುತ್ತಿದ್ದೆ.
ಜೊತೆಯಾತನೂ ಹಾಗೇ ಸ್ವಲ್ಪ ಹೊತ್ತು ನಿಂತಿದ್ದವನು ಕೈಮುಗಿದುಕೊಂಡು ರುದ್ರಸೂಕ್ತವೋ, ಶಂಕರರ ಒಂದು ರಚನೆಯೋ ಹಾಡಿದ.
ಆತನ ಪಠಣ ಮುಗಿದಾದ ಮೇಲೆ ಹಣೆ ಹಚ್ಚಿ ಬಾಗಿದೆ.
ಮೇಲೇಳುವಷ್ಟರಲ್ಲಿಆತ ಸ್ವಲ್ಪ ಬಾಗಿ ಬೊಗಸೆ ಚಾಚಿ ಗಟ್ಟಿ ದನಿಯಿಂದ ಒಂದೇ ಸಮನೆ ತೆಲುಗಿನಲ್ಲಿಏನೋ ಅನ್ನುತ್ತಿದ್ದ.
ಅವನ ಮಾತು ಶಿವನ ಜೊತೆಗೋ ಅರ್ಚಕನ ಜೊತೆಗೋ ತಿಳಿಯದಾಯಿತು.
ತೆಲುಗಿನ ಗಂಧವೂ ಇರದ ನನಗೆ ಆತ ಕೇಳುತ್ತಿದ್ದುದೇನು ಎಂದು ತಿಳಿದದ್ದು ಅರ್ಚಕನು ಲಿಂಗಕ್ಕೆ ಲೇಪಿಸಿದ ಒಂದಿಷ್ಟು ಗಂಧವನ್ನು ಬಳಿದುಕೊಂಡು ಆತನ ಹಣೆಗೆ ಹಚ್ಚಿದಾಗಲೇ.
ನನ್ನನ್ನೂ ಕೈಬೀಸಿ ಅತ್ತಬರುವಂತೆ ಹೇಳಿ, ನನ್ನ ಹಣೆಗೂ ಇಷ್ಟಗಲ ಗಂಧ ಹಚ್ಚಿಸಿದ.
ಆತನ ಕಣ್ಣುಗಳಲ್ಲಿಧನ್ಯತೆಯ ಬೆಳಕು ತುಳುಕುತ್ತಿತ್ತು.
14 ಎಂಥ ಪುಣ್ಯಾತ್ಮನಪ್ಪ ಇವನು ಎಂದು ಮನದಲ್ಲೇ ವಂದಿಸುತ್ತಮತ್ತೆಒಂದಿಷ್ಟು ಹೊತ್ತುಕೂತೆದ್ದು, ಕೆಲದಲ್ಲೇ ಇದ್ದ ಲಲಿತಾದೇವಿಯ ದರ್ಶನ ಮಾಡಿ, ಅಲ್ಲಿನ ಗೋಶಾಲೆಗೆ, ನಿತ್ಯ ಅನ್ನದಾನಕ್ಕೆ ಒಂದಿಷ್ಟು ಕಾಣಿಕೆಯಿತ್ತು ಹೊರಟದ್ದಾಯಿತು.
ಮತ್ತೆಇಳಿಯಿಳಿಯುತ್ತಅಲ್ಲೊಂದು ಚಿಕ್ಕ ಕಣಿವೆಯಲ್ಲಿಮೆಟ್ಟಿಲಿಳಿದು ಪುಟ್ಟ ಜಲಪಾತವೊಂದರ ದರ್ಶನಕ್ಕೆ ಹೋದೆವು.
ಫಾಲಧಾರಾ, ಪಂಚಧಾರಾ ಎಂದಾಗಿ ಐದಾರು ಎಸಳುಗಳ ಧಾರೆಗೊಂಡಿದೆ.
ಆಚಾರ್ಯ ಶಂಕರರು ಅಲ್ಲಿತಪಸ್ಸು ಮಾಡಿದ್ದಂತೆ.
ಅಲ್ಲಿಯೇ ಶಿವಾನಂದಲಹರಿಯನ್ನು ರಚಿಸಿದ್ದಂತೆ.
ಶಿವನ ಐದೂ ಮುಖಗಳ ಜಟಾಮಂಡಲದಿಂದ ಹರಿದ ಆ ಪಂಚಧಾರೆಗಳಿಂದ ಇವರ ಆನಂದಲಹರಿ ಹರಿಯಿತೋ , ಇವರೀ ಲಹರಿಯಿಂದ ಅವಕ್ಕೆ ಆ ಹೆಸರು ಬಂತೋ ! ಧಾರೆಯ ಪಕ್ಕದಲ್ಲಿಪುಟ್ಟದೊಂದು ದೇಗುಲ.
ಅಲ್ಲಿಶಂಕರರ ವಿಗ್ರಹದ ಜೊತೆಗೆ ಶಿವಲಿಂಗ.
ಪಂಚಧಾರೆಯ ನೀರನ್ನು ತಲೆಯ ಮೇಲೆ ಹಾಕಿಕೊಂಡು, ಸಾಕೆಂಬಷ್ಟು ಕುಡಿದು ಇತ್ತಬರುತ್ತಿರುವಾಗ ಆ ಜೊತೆಯಾತ ಮತ್ತೆಅಲ್ಲಿನ ಅರ್ಚಕನನ್ನು ಒಂದೇ ಸಮನೆ ಏನೋ ಕೇಳುತ್ತಿದ್ದ.
ಅಲ್ಲಿನ್ನೂ ಗಂಧ, ಪುಷ್ಪ, ಅಕ್ಷತೆ ಏನೂ ಇರಲಿಲ್ಲ.
ಅರ್ಚಕ ಅದೇ ತಾನೇ ಬಾಗಿಲು ತೆರೆದು ಶಿವಲಿಂಗವನ್ನು ತೊಳೆಯುತ್ತಿದ್ದ.
ಈತನ ಮಾತಿಗೆ ಹೊರಳಿಯೇನೋಡಲಿಲ್ಲ.
ಆತ ಏನೂ ಕೊಡಲಿಲ್ಲವಾದ್ದರಿಂದ ಈತ ಕೇಳಿದ್ದುಏನು ಎಂದು ನನಗೂ ಗೊತ್ತಾಗಲಿಲ್ಲ.
ಕೊನೆಗೆ ಈತ ಕೈ ಜಾಡಿಸಿಕೊಂಡು ನಡೆದುಬಂದ.
ಮೆಟ್ಟಿಲೇರುವಾಗ ತಾನೇ ಹಿಂದಿಯಲ್ಲಿಹೇಳಿದ, “ಅವರು ಶಿವಲಿಂಗಕ್ಕೆ ಸ್ನಾನ ಮಾಡಿಸುತ್ತಿದ್ದರಲ್ಲ.
.
ಶಿವನ ತಲೆ ಮೇಲೆ ನಾವೂ ಸ್ವಲ್ಪ ನೀರು ಹಾಕುತ್ತೇವೆ ಎಂದು ಕೇಳಿದೆ.
ನನ್ನ ಮಾತಿಗೆ ಲಕ್ಷ್ಯ ಹಾಕಲೇ ಇಲ್ಲ, ಏನೋ ಅವರವರ ಮರ್ಜಿ.
.
.
“.
ನಾನು ಅವನೆಡೆನೋಡಿ ಸಹಾನುಭೂತಿಯ ಮುಗುಳುನಗೆ ಬೀರಿದೆ.
ಇಷ್ಟು ನಡೆದದ್ದು ಹೇಳಿದನೇ ಹೊರತು, ಆತನ ಮಾತಿನಲ್ಲಿ, ಮುಖದಲ್ಲಿ ನಿರಾಶೆ, ಅವಮಾನ, ಬೇಸರಗಳು ಎಷ್ಟೂ ಕಾಣಲಿಲ್ಲ.
ಮತ್ತದೇ ಹೊಳೆಯುವ ಕಣ್ಣುಗಳು, ಸಂತೃಪ್ತಿಯ ಕುಲುಕುಲು ಮುಖಭಾವ.
ಇಷ್ಟಾಗಿ ಮಾರ್ಗಮಧ್ಯದ, ರಸ್ತೆಯ ನಡುವೆ ದ್ವೀಪದಂತೆ ಇರುವ ಸಾಕ್ಷಿಗಣಪತಿ ಮಂದಿರವನ್ನು ಹೊಕ್ಕು ದರ್ಶನ ಮಾಡಿಕೊಂಡು ಮರಳಿ ಡಾರ್ಮೆಟರಿಯತ್ತಬಂದಾಗ ಸುಮಾರು ಒಂಬತ್ತುಗಂಟೆ.
ಜೊತೆಯಾತನಿಗೆ ನಮಸ್ಕಾರ ಹೇಳಿ, ತಿಳಿಯದ ಯಾವುದೋ ಕೃತಜ್ಞತೆ ಬೆರಸಿದ ದೊಡ್ಡದೊಂದು ಮುಗುಳ್ನಗೆ ನಕ್ಕು, ಮತ್ತೆಸಿಗೋ ಣ ಎಂದು ಹೇಳಿ ಬೀಳ್ಕೊಟ್ಟೆ.
ಆಟೋದವನನ್ನು ಕೇಳಿದ್ದೆ, ಆತ “ಅಕ್ಕಮಹಾದೇವಿ ಗುಹೆಗೆ ಒಂಬತ್ತುವರೆಗೊಂದು, ಹನ್ನೊಂದಕ್ಕೊಂದು ಬೋಟ್ ಇದೆ.
ಪಾತಾಳಗಂಗೆಗೆ ರೋಪ್ ವೇ ಇದೆ.
ಅಲ್ಲಿಂದ ಕೆಳಗೆ ಬೋಟು.
.
" ಎಂದು ಖಚಿತವಾಗಿ ಹೇಳಿದ್ದ.
ಸರಸರ ನಡೆದು ಬ್ಯಾಗನ್ನು ಮುಖ್ಯ ದೇವಾಲಯದ ಕ್ಲೋಕ್ ರೂಮಲ್ಲಿಜತನವಿರಿಸಿ, ಹಗುರಾಗಿ ಹೆಚ್ಚಿದ ವೇಗದಲ್ಲಿಕೈ ಬೀಸುತ್ತ ಪಾತಾಳ ಗಂಗೆಯತ್ತನಡೆದೆ.
ಅದೊಂದು ಕಿಲೋ ಮೀಟರು ದೂರ.
ನೇರ ಟಿಕೀಟು ಕೌಂಟರಿಗೆ ದೌಡಾಯಿಸಿ ರೋಪ್ ವೇ ಒಂದು, ಅಕ್ಕಮಹಾದೇವಿ ಗುಹೆ ಒಂದು ಕೊಡಿ ಎಂದೆ.
ಆ ಮನುಷ್ಯ, ಈಗ ರೋಪ್ ವೇ ಕೊಡುವೆ.
ಕೆಳಗೆ ಹೋಗಿ ವಿಚಾರಿಸಿ, ಸಾಕಷ್ಟು ಜನ ಇದ್ದರೆ ಗುಹೆಗೆ ಬೋಟು ಬಿಡುತ್ತಾರೆ.
ಅಲ್ಲೇ ಟಿಕೀಟು ಕೊಡ್ತಾರೆ ಎಂದ.
ಮತ್ತೇನಪ್ಪ ಮೀನಮೇಷ ಎಂದು ಗೊಣಗುತ್ತಲೇ ರೋಪ್ ವೇ ಹತ್ತಿರ ಹೋಗಿ ಪಾಳಿ ನಿಂತೆ.
ಓಹ್, ಕೆಳಾಗೆ ಅಲ್ಲಿನೋಡಿದರೆ ಕೃಷ್ಣಾನದಿ.
ಎಡದ ಈ ಕಡೆಯಿಂದ ಎಲ್ಲೋ ತಿರುವಿನಲ್ಲಿಹರಿದು ಬಂದು ದೊಡ್ಡದೊಂದು ಪಾತಳಿ ತುಂಬಿಕೊಂಡು ನಾಗಾರ್ಜುನ-ಸಾಗರ ಡ್ಯಾಮಿಗೆ ಆತು ನಿಂತಿದೆ.
ಕೆಳಗೆ ಹೋಗಿ ಮತ್ತೆಭರ ಭರ ನಡೆದು ಅಕ್ಕಮಹಾದೇವಿ.
.
ಎನ್ನುತ್ತಿದ್ದಂತೆಯೇ ಟಿಕೀಟಿನವ ಅಲ್ಲಿಕೂತುಕೊಳ್ಳಿ ಎಂದು ಕುರ್ಚಿ ತೋರಿಸಿದ.
ಟಿಕೀಟು ಕೊಡುವುದಿಲ್ಲವೇ ಎಂದೆ.
“ತಲ್ಲಣಿಸದಿರು ಕಂಡ್ಯ ತಾಳು.
.
.
" ಎಂಬಂತೆನೋಡಿ ಸ್ವಲ್ಪ ಕಾಯಿರಿ ಎಂದ.
ನನಗೆ ಎದೆ ಢವಢವ ಶುರುವಾಯಿತು.
ಏನು ಜನ ಯಾರೂ ಇಲ್ಲವೇ, ಬೋಟು ಬಿಡುವುದಿಲ್ಲವೇ ಇವತ್ತು.
.
ಅಥವಾ ಎಲ್ಲತುಂಬಿ ಕಳಿಸಿದ್ದಾಯಿತೇ.
ನನಗಿವತ್ತುಸಿಗುವುದಿಲ್ಲವೇ.
ರಾತ್ರಿ ಟ್ರೇನು ಮರಳಿ ಹತ್ತಬೇಕು.
ಈ ಇಷ್ಟೊಂದು ದೂರ ಬಂದು ಹಾಗೇ ಹೋಗುವುದೇ.
.
ಮತ್ತೆ ಯಾವಾಗ ಬರುವುದೋ ಎಂದು ಒಂದೇ ಸಮನೆ ಚಡಪಡಿಸುತ್ತಟಿಕೀಟಿನವನತ್ತಆಶೆಯ ಕಣ್ಣುನಟ್ಟಿರುವಾಗಲೇ ಹತ್ತಾರು ನಿಮಿಷದ ಮೇಲೆ, ಬನ್ನಿ ಎಂದು ಕರೆದ.
ಧಿಗ್ಗನೇ ಎದ್ದುನಡೆದೆ.
ಐನೂರು ರೂಪಾಯಿ ತೆಗೆದುಕೊಂಡು, ಹೆಸರು, ವಿಳಾಸ, ಫೋನು ನಂಬರ್ ಎಲ್ಲಬರೆಸಿಕೊಂಡು ಒಂದು 15 ಟಿಕೀಟು ಕೊಟ್ಟ.
ಜೊತೆಗೆ ಒಂದು ಹಾಳೆಯಲ್ಲಿಪ್ರಿಂಟು ಹಾಕಿದ ಹೆಸರಿನ ಪಟ್ಟಿ ಕೊಟ್ಟು, ಇದನ್ನು ಬೋಟಿನವನಿಗೆ ಕೊಡಿ ಎಂದು ಕಳಿಸಿದ.
ಆ ಪಟ್ಟಿನೋಡಿದೆ, ಕೊಟ್ಟ-ಕೊನೆಯ ಹೆಸರು ನನ್ನದಾಗಿತ್ತು.
ಅದು ಅವತ್ತಿನ ಕೊನೆಯ ಬೋಟಾಗಿತ್ತು.
ದೋ ಣಿಯವನಿಗೆ ಈ ಹೆಸರಿನ ಪಟ್ಟಿ ಕೊಡುವ ಚಾಕರಿಗಾಗಿ ನನ್ನನ್ನು ಬಳಸಿಕೊಂಡನೇ ಅವನು ಎಂದು ಸ್ವಲ್ಪ ಚುಚ್ಚಿದರೂ, ಇಂದಿನೀ ಯಾತ್ರೆಯ ನೌಕೆಗೆ ಹಸಿರು ನಿಶಾನೆ ತೋರುವವನು ನಾನೆಂಬ ಹೆಮ್ಮೆಯಿಂದ ಧಡಧಡ ಹೆಜ್ಜೆ ಹಾಕುತ್ತನದಿಯ ದಂಡೆಯತ್ತನಡೆದೆ.
“ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು, ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.
ಇದರಂತುವನಾರು ಬಲ್ಲರಯ್ಯ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ, ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
.
" ಎಲ್ಲೇ ಆದರೂ ಭಗವಂತನಿಗಿಂತ ಭಗವದ್ಭ ಕ್ತರೆಡೆಗೇ ಒಂದು ತೂಕ ಜಾಸ್ತಿ ಒಲವು.
ಈ ಇಂದ್ರಿಯಗಳ ಕಟ್ಟು ಹರಿದುಕೊಂಡು ಅದಾವುದೋ ಸ್ಥಿತಿಯಲ್ಲಿದೇವರು ಕಾಣುವುದಂತೆ.
ಅದು ಕಂಡಾಗ ಈ ಅರಿವು ಇಲ್ಲ.
ಅರಿವು ಇದ್ದಾಗ ಆ ದೇವರಿಲ್ಲ.
ನಾವು ಇಷ್ಟು ಹಚ್ಚಿಕೊಂಡ ಈ ತನುವಿನಲ್ಲಿ, ಇಷ್ಟು ಬೆಳಸಿಕೊಂಡ ಈ ಅರಿವಿನಲ್ಲಿಯೇ ಆ ದೇವರು ಭೇಟಿಯಾಗುವುದು ಆಗಿದ್ದರೆ ಅದೆಷ್ಟು ಕುಣಿದು ಕುಪ್ಪಳಿಸುತ್ತಿದ್ದೆವೋ! ಆದರೆ ಅದಕ್ಕೆ ಇನ್ನೊಂದು ಮಗ್ಗುಲೂ ಇದೆ.
ನಾವು ಅಷ್ಟೊಂದು ಆ ದೇವರಿಗೆ ಮುಗಿಬೀಳುವುದು ಯಾತಕ್ಕೆ? ಅದೇ ಭಂಗಿ, ಅದೇ ಜಟಾಜೂಟ, ಅದೇ ಸರ್ಪ, ಅದೇ ಭಸ್ಮ.
.
ಅದೇ ಶಂಖ ಚಕ್ರ ಗದೆ…ನೋಡಿನೋಡಿ ಬೇಸರ ಆಗುವುದಿಲ್ಲವೇ? ಭಂಡತನದ ಉತ್ತರ ಎಂದರೆ ಆತ ಎಂದೂ ನಮಗೆ ಕಂಡಿಲ್ಲ, ಅದಕ್ಕೇ ಅಷ್ಟು ಕುತೂಹಲ ಎಂದು.
ಆದರೆ ಹುಟ್ಟಿ ಸಾಯುವವರೆಗೂ ಜೀವಂತವಾಗಿ ಈ ಕಣ್ಣಿಗೆ ಕಾಣುವುದಿಲ್ಲಎಂದು ಪಕ್ಕಾ ಗೊತ್ತಿದ್ದೂಬೇಸರಿಸದೇ ಅವನಲ್ಲಿಗೆ ಹೋಗುತ್ತೇವಲ್ಲ.
.
ಏಕೆ? ತತ್ತ್ವತಃ ಅವನು ಎಂದಿಗೂ ಹಳಸದ ಆನಂದಕ್ಕೆ, ಎಂದಿಗೂ ಮುಕ್ಕಾಗದ ಚೈತನ್ಯಕ್ಕೆ ಸೆಲೆ ಎಂದು ತಿಳಿದುದರಿಂದ.
ಇಲ್ಲಅಂದರೆ ನಿತ್ಯವೂ ಅದೇ ಹೂವು, ಅದೇ ಧೂಪ ದೀಪ, ಅಕ್ಷತೆ, ಗಂಟೆ, ಜಾಗಟೆ ಆದರೂ ಏಕೆ ಬೇಸರವಿಲ್ಲದೇ ಪೂಜೆ ಮಾಡುತ್ತೇವೆ, ಏಕೆ? ನಿತ್ಯ ನಮ್ಮ ಮನೆಗೆ ಒಬ್ಬ ಅತಿಥಿ ಬರುತ್ತಾನಂದರೆ ಬೇಸರವಾಗದೇ.
.
ಈ ಹಳಸುವಿಕೆ ಲೋಕದ ಸಂಗತಿಗಳಿಗೆ ಮಾತ್ರ.
ಸಚ್ಚಿದಾನಂದವೇ ವಲಯಗೊಂಡ ಸಂಗತಿಗಳಲ್ಲಿಏಕಾಗಿ ಬೇಸರಿಕೆ ಒದಗೀತು? ಆದರೆ ಬರೀ ಆಶಯದಲ್ಲೇ ಸಂತೋ ಷ ಕಂಡುಕೊಳ್ಳುವಷ್ಟು ಒಣ ಒಣ ಏನಲ್ಲ ಈ ಪ್ರಪಂಚ.
ತತ್ತ್ವದ ನಿರಪೇಕ್ಷ ಆನಂದ ಇಹದಲ್ಲಿ ಸಾಪೇಕ್ಷವಾಗಿ ಮೂಡಿ ಬರುವುದಕ್ಕೆ ಕೆಲವು ಸಂಗತಿಗಳು ಒದಗಿ ಬರುತ್ತವೆ.
ಅವೇ ಸಹೃದಯಿ ಸಮಾನಮನಸ್ಕರ ಜೊತೆ, ನಮ್ಮ ನಮ್ಮ ಮನೋ ಭಾವಕ್ಕೆ ಒಗ್ಗಿಕೊಂಡು ದಾರಿ ತೋರುವ ಒಬ್ಬ ಮಾರ್ಗದರ್ಶಕನ ಜೊತೆ, ನಮ್ಮ ಹೃದಯ ಕರಕರಗಿ ನಾವು ನಮ್ಮ ದೇಹಭಾವವನ್ನು ಅಷ್ಟಷ್ಟು ಮರೆತು ಲಯಹೊಂದುವ ನಮ್ಮಿಷ್ಟದ ಕೆಲವು ಕೆಲಸಗಳು, ಪ್ರವೃತ್ತಿಗಳು ಇತ್ಯಾದಿ ಇತ್ಯಾದಿ.
ಮಹಾದೇವಿಯಕ್ಕ ಯಾರೂ ಬಯಸದ್ದನ್ನು ಬಯಸಿದಳು.
ಅದು ಈ ಜನ, ಈ ಜಗತ್ತುಬಲ್ಲಂತೆ ಆಗಿರಲಿಲ್ಲ.
ಅಷ್ಟೇ ಅಲ್ಲ, ಆಕೆಯದೇ ಮೈ ಮನಸ್ಸು ಮಾತುಗಳಿಗೆ ಅತ್ತಲಾಗಿತ್ತು.
ತಾನು ಒಲಿದದ್ದಕ್ಕೆ ತ್ರಿಕರಣಸಮೇತ ಅರ್ಪಿಸಿಕೊಳ್ಳುವ ಹಂಬಲ ಆಕೆಗೆ.
ಆದರೇನು, ಆಕೆ ಒಂದು ಬಯಸಿದರೆ, ಲೋಕ ತನ್ನ ಎಂದಿನ ಚಾಳಿಯಂತೆ ಆಕೆಯ ಮೈ, ಮನಸ್ಸುಗಳನ್ನು ಬಯಸಿತ್ತು.
ಆಕೆ ಕೊಡೆನೆಂದಳು.
ಲೋ ಕ ಬಿಡೆನೆಂದಿತು.
ಈ ಜಗತ್ತಿನಲ್ಲಿಹುಟ್ಟಿದ್ದುಆಕೆಯ ತಪ್ಪೇ? ಹಾಗೆ ಹುಟ್ಟಿ ಇಲ್ಲಿನ ಸಹಜ ವೃತ್ತಿಗಳಿಗೆ ಒಗ್ಗದ್ದುಆಕೆಯ ತಪ್ಪೇ? ಇವೆರಡು ಪ್ರಶ್ನೆಗಳ ನಡುವಿನ ಜಗ್ಗಾಟದಲ್ಲಿಆಕೆ ನೊಂದಳು, ಬೆಂದಳು.
ಇದರ ಕೊನೆ ಹೇಗೆಂದು ಚಿಂತಿಸಿ ತನ್ನ ವಿವೇಕದ ಪ್ರಜ್ಜ್ವಾಲನೆಯಲ್ಲಿ, ಮಿಂಚಿದ ಬುದ್ಧಿಯಲ್ಲಿ ಕಂಡುಕೊಂಡದ್ದು, ತಾನು ನಿಂತದ್ದುಈ ಜಗತ್ತಿನ ಬಟ್ಟೆಯಲ್ಲಿ, ಇದರಲ್ಲಿದ್ದರೆ ತೊಡಕು ತಪ್ಪದು ಎಂದು.
ಅದೇ ಕ್ಷಣ ಆ ಬಟ್ಟೆಯನ್ನು ಬಿಟ್ಟಳು.
ಹೋಲಜ್ಜೆಗೆಟ್ಟಳು ಎಂದಿತು ಜಗತ್ತು.
ಚೆನ್ನಮಲ್ಲಿಕಾರ್ಜುನನ ಬೆಳಗನುಟ್ಟು ಲಜ್ಜೆಗೆಟ್ಟವಳು ತಾನು 16 ಎಂದಳವಳು.
ತಾನುಟ್ಟ ಬೆಳಕಿನ ಆಚೆಯದೂ ಆಕೆಯ ಪರಿವೆಯಲ್ಲಿಇಲ್ಲ, ಅದರೊಳಗಿನದೂ ಇಲ್ಲ.
.
ಕೇವಲ ಬೆಳಕಿನ ಆವರಣ ಮಾತ್ರ ಅಲ್ಲಿರುವುದು.
ಉಳಿದೆಲ್ಲವೂ, ತಾನೂ ಅದರಲ್ಲಿಲಯ ಹೊಂದಿಯಾಗಿತ್ತು.
ಇಂಥ ಲಜ್ಜೆಗೆಟ್ಟವಳ ಜೊತೆ ಯಾರು ತಾನೇ ಸ್ನೇಹಾದರ ತೋರಿ ನಡಕೊಂಡಾರು? ಮತ್ತಾರು ಬೆಳಕನುಟ್ಟು ಲಜ್ಜೆಗೆಟ್ಟವರೋ ಅವರು ಮಾತ್ರ.
ಅಂತಹ ಕೆಲವರು ಕಲ್ಯಾಣದ ಮಹಾಮನೆಯಲ್ಲಿಸಿಗುತ್ತಾರೆ ಎಂದು ಹಂಬಲಿಸಿ ಹಂಬಲಿಸಿ ಸಾಗಿದಳು.
ನನಗೂ ಇವತ್ತುಅಂಥದೊಂದು ಹಂಬಲ ಆಕೆಯ ಗುಹೆನೋಡಲು ಎನ್ನಲೇ? ನನ್ನದು ಒಂದು ಹೊತ್ತಿನ ಕಾತರ, ಕುತೂಹಲ ಮಾತ್ರ.
ಆದರೆ ಅಷ್ಟರ ಮಟ್ಟಿಗೆ ನಾನೂ ಈ ಜಗತ್ತುಮರೆತಿದ್ದೆನಲ್ಲ! ಆ ಮಟ್ಟಿಗೆ ಅದು ಅಪೇಕ್ಷಣೀಯವಲ್ಲವೇ? ನಿತ್ಯ ಕೊಳೆ ಕಸ ತುಂಬಿದ ಮನೆ ಯಾವಾಗಾದರೂ ಒಬ್ಬ ಅತಿಥಿ ಬಂದಾಗ ಎಷ್ಟೋ ಅಷ್ಟು ಸ್ವಚ್ಛ ಆಗುವಂತಾದರೆ ಒಳ್ಳೆಯದೇ ಅಲ್ಲವೇ.
ಬಹುಶಃ ಇನ್ನೂ ಸ್ವಲ್ಪ ದಿನ ಆ ಸ್ವಚ್ಛತೆ ಉಳಿಯುತ್ತದೆ.
ಬೋ ಟು ಹೊರಟಿತು.
ನೀರಲ್ಲೇ ಸುಮಾರು ಒಂದು ತಾಸಿನ ಪಯಣ.
ಆಸೆ ಪಟ್ಟು ಎಲ್ಲಕ್ಕೂ ಮುಂದಿನ ಸೀಟಲ್ಲಿಯೇ ಕೂತಿದ್ದೆ.
ನನ್ನ ಮುಂದೆ, ಅಕ್ಕ ಪಕ್ಕ ಕೃಷ್ಣೆಯ ನೀಲತರಂಗಾವಳಿಯ ಮೆಲ್ಲನೆಯ ಹರಹು.
ಆಕೆಯ ಪಾತ್ರದ ಎರಡೂ ದಡಗಳನ್ನು ತೆಕ್ಕಯಿಸಿದ ಬೆಟ್ಟ ಗುಡ್ಡಗಳ ಸಾಲು.
ಚಿಕ್ಕವು, ದೊಡ್ಡವು, ಎದೆ ಸೆಟೆದು ನಿಂತವು, ತಮ್ಮ ಹರಿದ್ರೋಮರಾಜಿಯಿಂದಲೇ ಮೈ ಮುಚ್ಚಿಕೊಂಡು ವಿನಮ್ರವಾಗಿ ಧ್ಯಾನಸ್ಥವಾಗಿ ಕೂತವು, ಒಂದರ ಬೆನ್ನಿಗೊಂದು ಒರಗಿ ಮಲಗಿರುವವು.
.
.
ಹಿಂದುಗಡೆಯಿಂದ ನಾಗಾರ್ಜುನ ಸಾಗರ ಆಣೆಕಟ್ಟು, ಬೋಟು ಹತ್ತಿದ ತಾಣ, ಲಂಗರು ಎಲ್ಲ ಮರೆಯಾಯಿತು.
ನದಿ, ಬೆಟ್ಟಗಳು, ಆಕಾಶ ಮೂರೇ ಕಾಣುವುದು.
ಅಲ್ಲಿಎಲ್ಲೋ ಕೊಂಬೆಯ ಮೇಲೆ ಕೂತಲ್ಲಿಯೇ ಕೂತ ಪಿಕಳಾರ, ಬೆಟ್ಟದ ಮುಂಚಾಚಿದ ಕೋಡಿನ ಕೆಳಗೆ ಭುಗ್ ಎಂದು ಹಾರಿದ ಪಾರಿವಾಳ, ದಂಡೆಯ ಕಲ್ಲೊಂದರ ಮೇಲೆ ಕೂತು ಧ್ಯಾನಿಸುವ ಕೊಕ್ಕರೆ.
.
.
, ಇವೆಲ್ಲ ಬಣ್ಣಬಣ್ಣದ ಚಿತ್ರ ಬರೆದಿಟ್ಟ ಭಿತ್ತಿ, ಸೂರುಗಳ ಸುರಂಗದಲ್ಲಿ ಮತ್ತೊಂದು ಲೋಕಕ್ಕೆ ಪಯಣಿಸುತ್ತಿರುವ ಅನುಭವ.
ಒಮ್ಮೆಲೇ “ಜೈ ಬೋಲೋ ರಾಧೇ ಶ್ಯಾಮ ಕೀ, ಜೈ ಬೋಲೋ ಸಿಯಾ ರಾಮ ಕೀ” ಎಂಬ ಘೋಷ ನನ್ನ ಮನದ ನಿರಾಳದ ನೀರ್ಕೊಳನ ತಿಳಿಯನ್ನು ಕದಡಿತ್ತು.
ಮಥುರಾ-ಬೃಂದಾವನದಿಂದ ಒಬ್ಬ ಮಹಿಳಾ-ಸಂತಳ ಜೊತೆ ಒಂದು ಗುಂಪು ಹೊರಟಿತ್ತು.
ಆ ಇಡೀ ತಂಡಕ್ಕೆ ಒಂದು ಬೋಟು ಎಂದು ಹೊರಡಿಸಿದ್ದರು.
ಗುಂಪಿಗೆ ಸೇರದವ ನಾನೊಬ್ಬನೇ ಅಲ್ಲಿ.
ಎಲ್ಲರೂ ಮರದ ಕೊಂಬೆಗಳಂತೆ ಕೈ ಮೇಲೆತ್ತಿಭಜನೆ ಕೀರ್ತನೆ ಶುರು ಮಾಡಿದರು.
ಇದೇನಪ್ಪ ಎಂದು ನನಗೆ ಮುಜುಗರ.
ಆಚೀಚೆನೋಡುತ್ತಸುಮ್ಮನೇ ಒಂದು ಮೂಲೆಯಲ್ಲಿಕೂತಿದ್ದೆ.
ನನ್ನ ಮುಂದೆಯೇ ಆಚೆ ಕಡೆ ದಪ್ಪನೆಯ ಕಾರ್ಪಾಸದ ಆಸನದ ಮೇಲೆ ಸಂತ ಗುರುಮಾಜೀ.
ಇನ್ನೂ ತರುಣ ವಯಸ್ಸಿನಾಕೆ.
ಕಟ್ಟಿಗೆಯ ಆವುಗೆ, ಅದರ ಮೇಲೆ ಕಾವಿ ಬಣ್ಣದ ಅಧರೀಯ, ಅದರ ಮೇಲೊಂದು ನಿಲುವಂಗಿ, ಅದರ ಮೇಲೆ ಉತ್ತರೀಯ, ಅದರ ಮೇಲೆ ಜರಿಯಂಚಿನ ಬಿಳಿ ಶಾಲು, ಅದರ ಮೇಲೆ ಸುಗಂಧರಾಜಿ-ತುಳಸಿ ಮಾಲೆ, ಕ್ಲಿಪ್ಪು ಹಾಕಿ ಒಪ್ಪವಾಗಿಸಿದ ಕೇಶಾಲಂಕಾರ, ಎತ್ತರದ ಹಣೆಗೆ ಉದ್ದನೆ ತಿಗುರಿದ ಗಂಧ, ಚಂದನ.
ಬೋ ಟಿನಲ್ಲಿಜಿಗಿದಾಡುತ್ತಅಲ್ಲಿಇಲ್ಲಿಕೂರುತ್ತಆರಾಮಾಗಿ ಮಾತಾಡುತ್ತ ಹಾಡುತ್ತಒಳ್ಳೇ ಎಂಜಾಯ್ ಮಾಡುತ್ತಿದ್ದಳು.
ಆಕೆಯ ಸುತ್ತದೊಡ್ಡಕ್ಯೆಮರಾ ಹಿಡಿದು ಉಡಾಯಿಸಿದ ಉಪಗ್ರಹದಂತೆ ಒಬ್ಬಾತ ಸುತ್ತುತ್ತಿದ್ದ.
ಆಕೆ ಆಗಾಗ ಚೈತನ್ಯದೇವನಂತೆ ಕೈ ಮೇಲೆ ಎತ್ತಿದ್ದು, ಏಸು ಕ್ರಿಸ್ತನಂತೆ ಎದೆಗೆ ಕೈಮುಗಿದುಕೊಂಡದ್ದು, ಬುದ್ಧನಂತೆ ಕಣ್ಣು ಮುಚ್ಚಿದ್ದು, ರಾಮಕೃಷ್ಣರಂತೆ ಯಾವುದೋ ಭಾವದಿಂದ ಭಕ್ತರ ಮೇಲೆ ಕೃಪಾದೃಷ್ಟಿ ಚೆಲ್ಲಿದ್ದು, ರಮಣರಂತೆ ಇದಾವುದೂ ಬೇಡ ಎಂದು ಕೆಲವೊಮ್ಮೆ ಕತ್ತುಹೊರಳಿಸಿ ಬೆಟ್ಟದತ್ತನೋ ಟ ನಟ್ಟದ್ದು, ತಲೆ ತುರುಬು, ಹಾರುವ ಕೂದಲು, ತೊನೆಯುವ ಮಾಲೆ, ತುಯ್ಯುವ ಸೆರಗು, ಆವುಗೆ ಬಿಟ್ಟೆದ್ದ ಪಾದ ಎಲ್ಲ ಸೆರೆಹಿಡಿಯುತ್ತಿದ್ದ.
ನಡುನಡುವೆ ಅವರ ತಂಡದವರಿಂದ ಮಸೂರ್ ಪಾಕು, ಬರ್ಫಿ, ಬೂಂದಿ ಲಾಡು, ಚಿಪ್ಸು, ಜ್ಯೂಸು, ಹಣ್ಣುಗಳ ವಿತರಣೆ ಆಗುತ್ತಿತ್ತು.
ಆಕೆ ಕೆಲವನ್ನು ತೆಗೆದುಕೊಂಡು ಕೆಲವಕ್ಕೆ ಬೇಡ ಎಂದು ಸನ್ನೆ ಮಾಡುವಳು.
ಬಂದದ್ದೆಲ್ಲ ಬರಲಿ ಗೋವಿಂದನ ದಯವೊಂದಿರಲಿ ಎಂದು ನಾನು ಯಾವುದಕ್ಕೂ ಅಸಡ್ಡೆಮಾಡಲಿಲ್ಲ.
ಗುಹೆ ಇನ್ನೂ ಅರ್ಧ ಗಂಟೆ ಇತ್ತು.
ಇವರ ತಾಳ, ಚಪ್ಪಾಳೆ, ಹಾಡು, ಕೇಕೆ.
ಬೇಸರವಾಯಿತು.
ಬಸ್ಸು, ಟ್ರೇನು, ಪೇಟೆಬೀದಿಯ ಜನದ ಯಾದೃಚ್ಛಿಕವಾದ ಗಲಾಟೆ ಸರಿ.
ನನ್ನ ಪಾಡಿಗೆ ನಾನು ಇದ್ದುಬಿಡಬಹುದು.
ಆದರೆ ಇವರ 17 ಸತ್ಸಂಗದ ಸುವ್ಯವಸ್ಥಿತವಾದ ಗದ್ದಲ ನನ್ನ ಮನೋ ಲಹರಿಗೆ ಅಡಚಣೆ ಎನಿಸಿತು.
ಮತ್ತೆಮತ್ತೆಮನಸ್ಸಿಗೆ ಅಗೋ ಆ ಮೋಡಗಳನ್ನುನೋಡು, ಒಂದು ದಿಮ್ಮಿಯನ್ನು ಬಳಸಿ ನೊರೆಗಟ್ಟಿ ನುಗ್ಗುವ ತೆರೆಗಳನ್ನುನೋಡು, ಅಲ್ಲೊಂದು ದಡದ ಮೇಲೆ ಗುಡ್ಡದ ಸಂದಿನಲ್ಲಿಮೀನುಗಾರರ ಒಂಟಿ ಜೋಪಡಿನೋಡು ಎಂದು ಒತ್ತಾಯಿಸುತ್ತಿದ್ದೆ.
ಕೊನೆಗಿಷ್ಟು ಹೊತ್ತಾದ ಮೇಲೆ ಗಂಟಲು ದಣಿವಾಯಿತೇನೋ .
ನೀರು ಗುಟುಕರಿಸುತ್ತತೆಪ್ಪಗೇ ಕೂತರು.
ಮನಸ್ಸಿಗೆ ಹಾಯೆನಿಸಿತು.
ಈಗಾಗಲೇ ಬೋಟು ನದಿಯ ಹರಿವಿನ ಮೇಲೆ ಎರಡು ತಿರುವುಗಳನ್ನು ತೆಗೆದುಕೊಂಡಿತ್ತು.
ಈಗ ಮತ್ತೊಂದು ದೊಡ್ಡ ತಿರುವು.
ನದಿಗೆ ತಮ್ಮ ಭಾರೀ ಮೈಯೊಡ್ಡಿಅಡ್ಡನಿಂತ ಪರ್ವತದ ಎತ್ತರ, ಬಿತ್ತರ.
ಅವುಗಳು ಸ್ವಲ್ಪ ಅನುವು ಮಾಡಿ ಬಿಟ್ಟುಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಂತೆಯೇ ಬಲದ ನೇರಕ್ಕೆ ದೊಡ್ಡದೊಂದು ಕಂದುಗಲ್ಲಿನ ಪದರ ಪದರವಾದ ಗಿರಿಮುಖ.
ಅದರ ಮುಂದೆ ಬೆಳೆದ ಗಿಡಗಂಟೆಗಳು.
ಗಿಡದ ತಲೆಗಳ ಆಚೆ ಕಾಣುವ ಕಪ್ಪು ಗವಿಗಳ ತೆರೆದ ಬಾಯಿ.
ದಂಡೆಯ ಮೇಲಿಂದ ಅಲ್ಲಿಗೆ ಹೋಗಲೊಂದು ಮೆಟ್ಟಿಲ ಸಾಲು.
ಈಚೆ ಲಂಗರು ಕಟ್ಟೆ.
ಮನಸ್ಸು ಶಿವ ಶಿವಾ ಎಂದಿತು.
ಮಣಿಯಿತು.
ದೋ ಣಿಯಲ್ಲೇ ಚಪ್ಪಲಿ ಬಿಟ್ಟು ಇಳಿದೆ.
ದಂಡೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರ ಬೆಟ್ಟದರುಗಿಗೆ ಮೆಟ್ಟಿಲೇರುತ್ತಸಾಗಿದರೆ ಗಿಡಮರಗಳ ಸಾಲಿನಲ್ಲಿಹಕ್ಕಿಗಳ ಕಲರವ ಕೇಳುತ್ತದೆ.
ಮುಂದುವರಿದಂತೆ ಆ ಕಲರವಕ್ಕೆ ಗೂಬೆ, ಪಾರಿವಾಳಗಳ ಗೂಂಕಾರ, ಭುಗ್ಗನೇ ಹಾರುವ ಬಾವಲಿಗಳ ರೆಕ್ಕೆಯ ಸದ್ದುಬೆರಸುತ್ತದೆ.
ಅಲ್ಲಿಂದ ಕಾಣುವುದೇ ತ್ರಿಪುರದಹನಗೈದ ಶಿವನ ಪುರಾತನ ರಥದ ಕೆಚ್ಚನೆ ಕಾದ, ಅಲ್ಲಲ್ಲಿಕೊಳೆಗಟ್ಟಿ ಗೀರು ಬಿದ್ದಬಂಗಾರದ ಚೌಕಿಯನ್ನು ಬೆಟ್ಟದ ಮುರುವಿನಲ್ಲಿಹುದುಗಿಸಿಟ್ಟಂತಹ ಗುಹೆಯ ಮುಂಭಾಗದ ಅಂಕಣ.
ತಲೆಬಾಗಿಲ ಮೇಲೆ ಇಕ್ಕೆಲದ ಬೆಟ್ಟಗಳನ್ನು ಹೊಕ್ಕ ಹೆಬ್ಬಂಡೆಯೊಂದು ಅಡ್ಡಲಾಗಿ ಕಮಾನು ಕಟ್ಟಿದೆ.
ಅಂಕಣದ ಸೂರನ್ನು ನೆಗಹಿದ ಮೂರ್ನಾಲ್ಕು ಕಂಬಗಳಂತೆ ಪೇರಿಸಿಟ್ಟ ಶಿಲಾವ್ಯೂಹ.
ಸೃಷ್ಟಿತರುವಿನ ತಾಯ್ಬೇರುಗಳ ನಾರನ್ನು ಬಿಗಿಬಿಗಿದು ಮಾಡಿದಂಥ ಪದರ ಕಲ್ಲಿನ ರಚನೆ.
ತಲೆ ಎತ್ತಿನೋ ಡಿದರೆ ಬಂಡೆಯ ಛೇದದ ನಡುವೆ ತರಲಾಕಾಶ.
ಮುಂದುಗಡೆನೋಡಿದರೆ, ಎದುರುಬದುರು ಉಬ್ಬುಬ್ಬಿ ನಿಂತ ಬೆಟ್ಟಗಳ ಸಾಲಿನ ನಡುವೆ ಕೃಷ್ಣೆ ಭೀಮಬಾಹುಗಳ ಕಾಪಿನಲ್ಲಿರುವ ಕೃಷ್ಣೆಯಂತೆ ಮೆಲ್ಲನೆ ಸಾರುತ್ತಿದ್ದಾಳೆ.
ತಿರುಗಿ ಅಂಕಣವನ್ನು ದಾಟಿ ಒಳನೋ ಡಿದರೆ ಭೂಮಿಯೊಡೆತನವನ್ನು ಬೆಳಕಿಗೆ ಒಪ್ಪಿಸಿ ಕತ್ತಲೆ ಮೈಮುದುರಿಕೊಂಡು ಅನಾದಿ ಕಾಲದಿಂದ ನೆಲಸಿದ ಕಾಳಗವಿ.
ಒಳಗೆ ಹೆಜ್ಜೆಇಡುತ್ತಿದ್ದಂತೆಯೇ ಕಾಲಕೂಟವು ನೊರೆಯಾಡುತ್ತಿರುವ ಹರನ ಗಂಟಲನ್ನು ಹೊಕ್ಕಂತಾಯಿತು.
ಕತ್ತಲೆ ಕಣ್ಣುಮೂಗು ಕಿವಿಗಳ ಒಳನುಗ್ಗಿತು.
ಮೈಗೆ ಮೈ ಹಚ್ಚಿ ತಿಕ್ಕಿತು.
ಇದೇನು ಕತ್ತಲೆ ಇಷ್ಟು ಗಟ್ಟಿಯಾಯಿತೇ ಎಂದುಕೊಳ್ಳುತ್ತ ಬಡಿದು ತರಚಿದ ತಲೆ ಭುಜಗಳನ್ನು ಸವರಿಕೊಳ್ಳುತ್ತ ಮೊಬೈಲಿನ ಟಾರ್ಚ್ ಹಚ್ಚಿನೋಡಿದರೆ ಗುಹೆ ಕಿರಿಕಿರಿದಾಗಿ ಸಾಗಿತ್ತು.
ಬೆನ್ನು ಬಾಗಿಸಿ, ಮತ್ತೂಸ್ವಲ್ಪ ಮುಂದೆ ಕುಳಿತು ಕುಕ್ಕುರಿಸುತ್ತಹೋದೆ.
ಅಲ್ಲಿಒಂದು ಪೀಠದ ಮೇಲಿನ ಸ್ವಯಂಭೂ ಶಿವಲಿಂಗ.
ಮಾರಾಯಾ, ಇಲ್ಲೇನು? ಹೇಗೆ ಇರುವೆ? ನಿನ್ನನಿಲ್ಲಿ ಇರಿಸಿದವರು ಯಾರು? ನಾಮ-ರೂಪಗಳ ಗೊಡವೆಯನ್ನು ಕಿತ್ತುಹಾಕಿ ನಿರಾಕಾರವನ್ನು ಮೆರೆಯುತ್ತಿರುವೆಯಾ? ಅಲ್ಲಿ ಹೊರಗೆ ಲೋಕ ಅಷ್ಟೆಲ್ಲ ಬೆಳಕಿನಲ್ಲಿ ನಿನ್ನನ್ನು ಹುಡುಕುತ್ತಿದೆ.
ನೀನಿಲ್ಲಿ ಅಡಗಿ ಕುಳಿತಿರುವುದೇ? ಆ ಬೆಳಕು ಯಾಕಾಗಿ ಮತ್ತೆ? ಈ ಕತ್ತಲೆಯ ವಾಸ ಯಾಕೆ? ಬೆಳಕಿನ ಅಸ್ತಿತ್ವವನ್ನೇ ನಿರಾಕರಿಸುವ ಈ ಕಗ್ಗತ್ತಲೆ! ಇದೇ ಸತ್ಯವೇ? ಇಲ್ಲ ಹೊರಗಿನ ಬೆಳಕು ಸತ್ಯವೇ? ಏನೇನೋ ಪ್ರಶ್ನೆಗಳು ಎದ್ದುವು.
ಆ ಪ್ರಶ್ನೆಗಳ ಹರಳುಕಲ್ಲಿಗೆ ತಮಃಸಲಿಲದಲ್ಲಿ ಎದ್ದ ಒಂದಿಷ್ಟು ಅಸ್ಪಷ್ಟ ಅಕ್ಷರದ ಬುದ್ಬುದಗಳು ಎದ್ದೆದ್ದು ಮುಳುಗುತ್ತಿದ್ದವು… “ನಾಸದಾಸೀನ್ನೋ ಸದಾಸೀತ್ತದಾನೀಂ.
.
.
ನೋ ವ್ಯೋಮಾ ಪರೋ ಯತ್ .
.
.
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀತ್ ಗಹನಂ ಗಭೀರಮ್ .
.
.
ತಮ ಆಸೀತ್ ತಮಸಾ ಗೂಳ್ಹಮಗ್ರೇSಪ್ರಕೇತಂ ಸಲಿಲಂ ಸರ್ವಮಾ ಇದಮ್… ಕೋಅದ್ಧಾವೇದ ಕ ಇಹ ಪ್ರವೋಚತ್.
.
.
ಯೋ ಅಸ್ಯಾಧ್ಯಕ್ಷಃ .
.
.
ಸೋ ಅಂಗ ವೇದ ಯದಿ ವಾ ನ ವೇದ.
.
.
" ಆ ಸ್ವಯಂಭೂ ಮೂರ್ತಿಯನ್ನು ಮುಟ್ಟಿ ನಮಸ್ಕಾರ ಮಾಡಿದೆ.
ಸ್ವಲ್ಪ ಹೊತ್ತುಕುಳಿತಿರಲೂ ಆಗದಂತಹ ಗವ್ವೆನುವ ಕತ್ತಲೆ ಹೆಪ್ಪುಗಟ್ಟಿ ಮೊಸರಾಗಿ ಹುಳಿಚಿ ವಾಸನೆ ಬೀರುತ್ತಿದ್ದ ಬಾವಲಿಗಳ ಕಟುಗಂಧ.
ಉಸಿರುಗಟ್ಟುತ್ತಿದೆ ಎನಿಸುತ್ತಿದ್ದಂತೆಯೇ ಮತ್ತೆ ತೆವಳಿಕೊಂಡು, ಬಾಗಿಕೊಂಡು ನಿಧಾನ ಎದ್ದುಕೊಂಡು ಹೊರಬಂದೆ.
ನನಗಾಗಿಯೇ 18 ಕಾದಂತಿದ್ದಬೆಳಕು ನಗುನಗುತ್ತತಬ್ಬಿವಿಡಿದು, ನನ್ನ ಮೈಗಂಟಿದ ಕತ್ತಲೆಯನ್ನು ಕೊಡವುತ್ತಅಂದಳು, “ಮಗು, ಅಜ್ಜಿಯ ಮನೆಗೆ ಹೋಗಿದ್ದೆಯ? ಅದೇನೋಡು, ನನ್ನ ತವರು ಮನೆ!” ಅಲ್ಲಿ ಮಹಾದೇವಿಯಕ್ಕ ಸುಮಾರು ಹನ್ನೆರಡು ವರ್ಷ ಕಾಲ ಇದ್ದಳಂತೆ, ತಪಸ್ಸು ಮಾಡಿದಳಂತೆ.
ಅದರ ಎದುರಿನ ಆಚೆಯ ಒಂದು ಬೆಟ್ಟದ ತಪ್ಪಲಿನಲ್ಲಿಕದಳಿಯ ವನದಲ್ಲಿಐಕ್ಯಳಾದಳಂತೆ.
<><><><><>
ಗುಹೆಯಿಂದ ಮರಳುತ್ತಒಂದೆಡೆ ದೋಣೆಯಾತ ಇದು ಪಾತಾಳಗಂಗೆ, ಸುಮಾರು ಎಂಟುನೂರು ಅಡಿ ಆಳದ ಮಡುವು, ಉತ್ತರದ ಗಂಗೆಯ ಒರತೆ ಇಲ್ಲಿದೆ ಎಂದೆಲ್ಲತಿಳಿಸಿ, ದೋಣಿಯಿಂದಲೇ ಅಲ್ಲಿಯ ನೀರನ್ನು ಮೊಗೆದು ತಲೆ ಮೇಲೆ ಸಿಂಪಡಿಸಿದ.
ಮಧ್ಯಾಹ್ನ ಎರಡು ಗಂಟೆ ಸಮಯ.
ಮುಖ್ಯ ದೇವಾಲಯದ ಬೀದಿಗೆ ನಡೆದು ಬಂದೆ.
ಹೊಟ್ಟೆ ಹಸಿದಿತ್ತು.
ಯಾಕೋ ಹೊಟೆಲ್ಲುಗಳಲ್ಲಿ ತಿನ್ನಲು ಮನಸ್ಸಾಗಲಿಲ್ಲ.
ನಿನ್ನೆ ವೇಳೆ ಮೀರಿ ಸಿಗದ ಅನ್ನಪ್ರಸಾದದ ನೆನಪಾಯಿತು.
ನೇರವಾಗಿ ಮಲ್ಲಿಕಾರ್ಜುನನ ಮುಖ್ಯ ಅನ್ನಚ್ಛತ್ರಕ್ಕೆ ನಡೆದೆ.
ಸಾಲಿಗೆ ಸುಮಾರು ಇನ್ನೂರು ಜನ, ಅಂತಹ ಹತ್ತಾರು ಸಾಲುಗಳಷ್ಟು ವಿಶಾಲವಾದ ಅಂಕಣದ ಭೋಜನಾಲಯದಲ್ಲಿ ಅದಾಗಲೇ ಅಚ್ಚುಕಟ್ಟಾಗಿ ಸಾಲಾಗಿ ಎಲೆ ಮೇಲೆ ಉಪ್ಪಿನಕಾಯಿ, ಕೋಸುಂಬರಿ, ಪಲ್ಯ, ಪಾಯಸ ಬಡಿಸಿಟ್ಟಿದ್ದರು.
ಹೋದಹೋದವರೆಲ್ಲಕೂತ ಮೇಲೆ ಬಿಸಿಬಿಸಿ ಅನ್ನ, ಹುಳಿ, ಸಾರುಗಳ ಸಾಕೆಂಬಷ್ಟು ಸರಬರಾಜು.
ಕೊನೆಗೆ ಅನ್ನ ಮಜ್ಜಿಗೆ.
ನಡುನಡುವೆ ಕೇಳಿದರೆ ಮತ್ತೆತಂದು ಬಡಿಸುವರು.
ಅಷ್ಟೊಂದು ಜನಸಮೂಹ, ಅಷ್ಟು ಚೊಕ್ಕಟ, ಅಚ್ಚುಕಟ್ಟು, ರುಚಿಕಟ್ಟು, ಶಾಂತಿ-ಸಮಾಧಾನದ ದಾಸೋ ಹ! ಮನುಷ್ಯನ ಹತ್ತಿರ ಎಷ್ಟೇ ದುಡ್ಡಿರಲಿ, ಆ ದುಡ್ಡಿಗೆ ಎಷ್ಟೇ ಸಿರಿವಂತಿಕೆಯ ಊಟ ದಕ್ಕಲಿ.
.
.
ಇಂತಹ ನಿತ್ಯಾನ್ನದಾಸೋ ಹಗಳಲ್ಲಿಉಂಡ ಆನಂದ ಮತ್ತಿಲ್ಲಎನಿಸಿತು.
ದಾನ ಎಂಬುದು ಬರೀ ಅಗತ್ಯವಿರುವವರಿಗಂತ ಅಲ್ಲ.
ಅಲ್ಲಿಪಡೆವವ ಬಡವ, ಕೊಡುವವ ಬಲ್ಲಿದ ಅಂತ ಅಲ್ಲ.
ಸ್ವಯಂ ಪ್ರೀತಿಯಿಂದ ಕೊಟ್ಟು-ಕೊಂಡು ತಿನ್ನುವುದು.
ಅದರಿಂದ ಉಂಟಾಗುವ ಪ್ರಸನ್ನತೆ ಅದೇ ಸದಾಶಿವನ ಪ್ರಸಾದ.
ಅದು ಅನ್ನಮಯ ರಸೋ ಪಾಸನೆ.
ಋಣರಹಿತ ವ್ಯಾಪಾರ.
ಸಕಲಕ್ಕೂ ಮೂಲಭೂತವಾದದ್ದು.
ಅದರಲ್ಲಿ ಅಂತರ್ನಿಹಿತವಾದ ಸಹಜವಾದ ಆನಂದ ಮಿಕ್ಕವುಗಳಲ್ಲಿ ಅಷ್ಟಷ್ಟು ಮರುಹುಟ್ಟುಗೊಂಡಿರುತ್ತದೆ ಅಷ್ಟೇ.
ಅದಾವುದೋ ದೈವೀಭಾವದಲ್ಲಿ ಇದ್ದನೆಂದು ಕೃಷ್ಣ “ಯಜ್ಞಾನಾಂ ಜಪಯಜ್ಞೋಸ್ಮಿ.
.
" ಅಂದನೇನೋ .
ಆದರೆ ಆ ಮಹಾನುಭಾವ ಸರಸಮಾನುಷ ಭಾವದಲ್ಲಿದ್ದಿದ್ದರೆ ಖಂಡಿತವಾಗಿಯೂ ಯಜ್ಞಾನಾಮನ್ನಯಜ್ಞೋಸ್ಮಿ ಅಂದಿರುತ್ತಿದ್ದ.
ಶ್ರೀಶೈಲದಿಂದ ಮರಳುವ ಹೊತ್ತಾಯಿತು.
ಬಸ್ಸು ಹಿಡಿದು ಸುಮಾರು ಎರಡುವರೆ ತಾಸು ಪಯಣಿಸಿ ಕಂಬಂ ಸ್ಟೇಶನ್ನಿನಿಂದ ಟ್ರೇನು ಹಿಡಿಯಬೇಕು.
ಕ್ಲೋಕ್ ರೂಮಿಂದ ಬ್ಯಾಗ್ ತಗೊಂಡು ನಿಧಾನವಾಗಿ ಹೆಜ್ಜೆಹಾಕುತ್ತಅಲ್ಲಿಯ ಪೇಟೆ ಬೀದಿಗಳಲ್ಲಿಹಾದು ಬರುತ್ತಿದ್ದೆ.
ನನಗೆ ಏನೋ ಬದಲಾವಣೆ ಕಾಣಿಸತೊಡಗಿತ್ತು.
ಸುತ್ತಲಿನ ಜನ ಓಡಾಟ ಅಂಗಡಿ ಮುಂಗಟ್ಟುಗಳು ಅಲ್ಲಿಯ ಬೊಂಬೆ, ಆಟಿಕೆ, ಪೂಜಾ ಸಾಮಾನು, ಅರಿಷಿಣ ಕುಂಕುಮ ಕಾಯಿ ಹಣ್ಣುಮಾಲೆಗಳ ರಾಶಿ, ಬಟ್ಟೆ ಬರೆ, ವಾಹನಗಳ ಗದ್ದಲ, ಅನ್ನಚ್ಛತ್ರಗಳು, ಉತ್ಸವ ಎಲ್ಲವೂ ಒಂದು ಪರದೆಯ ಮೇಲೆ ನಡೆಯುತ್ತಿದ್ದಂತೆ.
ಅವೆಲ್ಲವುಗಳಿಂದ ಹಿಂದೆ ಸರಿಸರಿದು ಮನಸ್ಸು ತನ್ನದೇ ಒಂದು ಜಾಗ ಮಾಡಿಕೊಂಡು ಸುಮ್ಮನೇ ಕೂತುಕೊಂಡಿತ್ತು.
ಆಡಿ ಸಾಕೆನಿಸಿ ಒಂದೆಡೆ ಕೂತು ಮಿಕ್ಕವರ ಆಟನೋಡುತ್ತಹರ್ಷಿಸುವ ಮಗುವಿನಂತೆ.
ಬೇಕು-ಬೇಡಗಳ ಗಲಿಬಿಲಿ ಇರಲಿಲ್ಲ.
ನಾನು ಎಲ್ಲಿದ್ದೇನೆ, ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಎಂಬುದೆಲ್ಲಗೊಡವೆ ನನ್ನದಲ್ಲವಾಗಿತ್ತು.
ನಗು, ಬಿಗಿತ, ಅಳು ಇವೆಲ್ಲಬೇರೆ ಬೇರೆ ಮುಖವಾಡಗಳು ಅನಿಸುತ್ತಿತ್ತು.
ಸುಖ ದುಃಖ ಎಂಬುವು ಮನಸ್ಸು ಆಗೀಗ ಕೂರುವ ಯಾವುದೋ ಎರಡು ಕಟ್ಟೆ ಆಗಿದ್ದುವು.
ಅದು ಬೇರೆಲ್ಲೋ ಆರಾಮಾಗಿ ಕೂರಬಹುದಿತ್ತು.
ಕಳೆದು ಹೋದದ್ದು, ಮುಂದೆ ಬರಬಹುದಾದದ್ದು ಎಂಬುದಕ್ಕೆ ಅರ್ಥವಿರಲಿಲ್ಲ.
ನಾನೀಗ ಇದ್ದೇನೆ, ಅಷ್ಟೇ.
ಇಡೀ ಇರುವಿಕೆಯ ಗೋಳದ ಮೇಲೆ ಅದೊಂದು ಬಿಂದು.
ಅದು ಶಾಶ್ವತ.
ಅಷ್ಟೇ.
ಯಾವಾಗಿಂದ ಇದು? ಅನ್ನಚ್ಛತ್ರದಲ್ಲಿ ಹೊಟ್ಟೆ ತುಂಬ ಊಟ ಮಾಡಿದಾಗಿಂದಲೇ?ನೋಡೋ ದೆಲ್ಲಮುಗೀತು, ಈಗ ಮರಳಿ ಊರಿಗೆ ಎಂಬ ನಿರಾಳದಿಂದಲೇ? ಅಲ್ಲ. ಆ ಗುಹೆಯಿಂದ ಮರಳಿ ದೋಣಿ ಹತ್ತಿದಾಗಿಂದ.+++(5)+++ ಆಗಿಂದಲೇ ಯಾವುದೋ ಬಿಡುಗಡೆಯ ಅನುಭವ. ಪ್ರಲಯಸಲಿಲದ ಮೇಲೆ ತನ್ನಷ್ಟಕ್ಕೆ ತಾನು ಆಲದೆಲೆಯ ಮೇಲೆ ಆ ಪುರಾಣಶಿಶು ಒರಗಿ ತೇಲುತ್ತಿರುವಂತೆ.
ಮಾರ್ಕಂಡೇಯನ ಭಕ್ತಿ-ವ್ಯಾಕುಲತೆ, 19 ಜೀವಕುಲವನ್ನು ಕಾಪಿಡುವ ಮನುವಿನ ಕಾತರ, ಎಲ್ಲವನ್ನೂ ನುಂಗಿ ನೊಣೆದ ರುದ್ರನ ಉರವಣೆ, ಮತ್ತೆಲ್ಲಸೃಷ್ಟಿಸುವ ಬ್ರಹ್ಮನ ಗಡಿಬಿಡಿ ಇವಾವುವೂ ಆ ಶಿಶುವಿಗೆ ಸೋಕುತ್ತಿಲ್ಲ.
ಇದೆಲ್ಲ ಏಕಾಯಿತು? ಹೇಗಾಯಿತು? ನಿಸ್ಸಂಗದ ಪರಮಾವಧಿಯನ್ನು ಇನ್ನಿಲ್ಲದಂತೆ ಹೊಕ್ಕು ಬೆಳಗಿದ ಮಹಾದೇವಿಯಕ್ಕನ ಅಷ್ಟೊಂದು ನೆನವರಿಕೆ, ಆಕೆ ನಡೆದಾಡಿ ತಪಗೈದ ಆ ಕ್ಷೇತ್ರ, ಗುಹೆಗಳ ಸಂದರ್ಶನ ಇವುಗಳಿಂದ ಇನಿತಾದರೂ ಕೆಲ ಹೊತ್ತಾದರೂ ಆ ನಿರ್ವೇದ, ನಿಸ್ಸಂಗದ ಭಾವ ನಮಗೆ ಬಾರದೇ ಹೋದರೆ ಏನು ಬಂತು? “.
.
.
ಅಯ್ಯಾ ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ಸಂಗ ಕರ್ಪೂರದ ಗಿರಿಯನುರಿಕೊಂಡಂತಾಯಿತ್ತಯ್ಯ”.
ಆಕೆ ಕರ್ಪೂರದಂತೆ ಉರಿದು ನೀರಾಜನ ಬೆಳಗಿ ಅರ್ಚನೆ ಮಾಡಿದ ಆ ತಾಣದಲ್ಲಿಹೊಕ್ಕು ಬಂದ ನಮಗಾದರೂ ಸ್ವಲ್ಪ ಆ ಧೂಪ ದೀಪದ ಕಮರು ಅಂಟಿಕೊಂಡು ಬರಬೇಕಲ್ಲ! ದೂರದ ನಾಡು.
ಅಲ್ಲಿಯಾತನಿಗೆ ನಮ್ಮ ಊರಿನ ಕಡೆಯವಳನ್ನು ಕೊಟ್ಟ ಏನೋ ಅಕ್ಕರೆ ನನಗೆ.
ಜಗದ ಸಂತಸದ ಸಾರವೆಲ್ಲಬಸಿಬಸಿದು ಆಕೆಯ ಮನದಲ್ಲಿಹೆಪ್ಪುಗೊಂಡ ಆನಂದದಿಂದ ಆಕೆ ಅಲ್ಲಿಚರಿಸಿದ್ದರ ಚಿತ್ರ ಮತ್ತೆಮತ್ತೆಮನಸ್ಸಿಗೆ ಬರುತ್ತಿತ್ತು.
ಆ ಆನಂದದ ಒಂದು ಮಗ್ಗುಲೇ ನಿತ್ಯಾತ್ಮನ ಜೊತೆಗಿನ ಆಕೆಯ ವಿರಹ.
ಆ ವಿರಹ ದುಃಖಾತ್ಮಕವಾದದ್ದಲ್ಲ.
ಅನ್ವೇಷಣೆಯ ಧೀರಭಾವದ್ದು.
ಗಿಳಿ ಕೋಗಿಲೆ, ಹಂಸೆ ನವಿಲು, ಅಳಿಸಂಕುಲ, ಮಾಮರ ಬೆಳುದಿಂಗಳುಗಳನ್ನೆಲ್ಲತಡೆದು ತಡೆದು ಕೇಳುತ್ತಾಳೆ, ಚೆನ್ನಮಲ್ಲಿಕಾರ್ಜುನನ ಕಂಡಿರಾ ಎಂದು.
ಅದೇ ಮಗುದೊಮ್ಮೆ, “ವನವೆಲ್ಲಾ ನೀನೇ, ವನದೊಳಗಣ ದೇವತರುವೆಲ್ಲಾ ನೀನೆ, ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ, ಚೆನ್ನಮಲ್ಲಿಕಾರ್ಜುನಾ ಸರ್ವಭರಿತನಾಗಿ ನೀ ಎನಗೇಕೆ ಮುಖದೋ ರೆ?” ಎಂದು ಲಲಿತರಮಣೀಯತೆಯಲ್ಲಿಯೇ ಪರಮೋದಾತ್ತಗಂಭೀರವಾದ ಕಾಣ್ಕೆಯನ್ನು ಕೊಡುತ್ತಾಳೆ.
ಯಾವುಯಾವುದನ್ನು ನಿಂತು ತನ್ನ ಪ್ರಿಯತಮನಾದ ಭಗವಂತನಿಗೋ ಸ್ಕರ ಕೇಳಿದಳೋ ಅವೇ ಎಲ್ಲದರ ಹಿಂದೆ, ಅವೇ ಆಗಿ ಅವನಿದ್ದಾನೆ ಎಂಬ ಸರ್ವಾತ್ಮಕತೆಯ ಭಾವ.
ಈ ಜ್ಞಾನಾಂಜನದಲ್ಲಿಯೇ ಅಲ್ಲವೇ “ವನವೆಲ್ಲಾ ಕಲ್ಪತರು, ಗಿಡುವೆಲ್ಲಾ ಮರುಜವಣಿ, ಶಿಲೆಯೆಲ್ಲಾ ಪರ್ವತ, ನೆಲವೆಲ್ಲಾ ಅವಿಮುಕ್ತಕ್ಷೇತ್ರ, ಜಲವೆಲ್ಲಾ ನಿರ್ಜರಾವೃತ, ಮೃಗವೆಲ್ಲಾಪುರುಷಾಮೃಗ, ಎಡಹುವ ಹರಳೆಲ್ಲಾಚಿಂತಾಮಣಿ” ಎಂಬ ಸೌಂದರ್ಯಪ್ರಜ್ಞೆ ಹುಟ್ಟುವುದು! ಆದರೆ ಆಕೆಗೆ ಭಗವದ್ವಸ್ತುಎಂಬುದು ವಾಸ್ತವದ ಆದರ್ಶವಾಗಿ, ಅದ್ವಯದ ಒಂದು ಸ್ಥಿತಿಯಾಗಿ, ತತ್ತ್ವವಾಗಿ ಮಾತ್ರ ಕೊನೆಗೆ ಉಳಿಯಿತೇ? ಯಾವುದು ಮೊದಲು ಯಾವುದು ಕೊನೆ ಗೊತ್ತಿಲ್ಲ.
ಆದರೆ ಆ ನಿರಾಕಾರತೆಯ ಸರ್ವಾಕಾರತೆಯಲ್ಲಿಯೇ ಆಕೆಗೆ ಸ್ಪಷ್ಟವಾದ ರೂಪವೂ ಕಂಡಿತು.
“ಹೊಳೆವ ಕೆಂಜೆಡೆಗಳ ಮಣಿಮುಕುಟದ, ಒಪ್ಪುವ ಸುಲಿಪಲ್ಗಳ ನಗೆಮೊಗದ ಕಂಗಳ ಕಾಂತಿಯ ಈರೇಳು ಭುವನವ ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು! ಕಂಡೆನ್ನ ಕಂಗಳ ಬರ ಹಿಂಗಿತ್ತಿಂದು! ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು, ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು.
" ಎಂತಹ ಜ್ಞಾನ-ಭಕ್ತಿಗಳ ಅರ್ಧನಾರೀಶ್ವರರೂಪ ಆಕೆಯ ಭಾವಸೌಷ್ಠವ! ಹೌದು, ಆಕೆಯ ಲೋಕೋತ್ತರನಾದ ಪ್ರಿಯಕರನು ಲೋಕದ ರೂಢಿಯಲ್ಲಿ ಕಂಡಿದ್ದ.
ಅವನನ್ನು ಹಾಗೆ ಎಳೆತಂದು ಲೋಕದೊಡನೆ ಬೆಸೆದ ದಿಟ್ಟತನ ಆಕೆಯದೇ.
ಪರಮಪುರುಷನು ಪ್ರಕೃತಿಯಲ್ಲಿ ಬೆರಸಿ ಮಾತನಾಡದಿದ್ದರೆ, ಹಾಗೆ ನಾವು ಮಾತನಾಡಿಸದಿದ್ದರೆ ಉಳಿವೆಲ್ಲಿ, ಬದುಕೆಲ್ಲಿ? ಆಕೆ ಬದುಕಿದ್ದುಹಾಗೆ.
<><><><><> ನಡೆನಡೆಯುತ್ತಮತ್ತೊಂದು ನೆನಪು ಬಿಚ್ಚಿಕೊಂಡಿತು.
ಅಲ್ಲಿಆ ಲಕ್ಷಾಂತರ ವರ್ಷಗಳ ಪುರಾತನ ಗುಹೆಯನ್ನು ಮಾತ್ರ ಕಂಡೆನೇ? ಇಲ್ಲ, ಅದರ ಜೀವಂತಿಕೆಯನ್ನೂ ಹೇಗೋ ಕಂಡಿದ್ದೆ, ಲವಲವಿಕೆಯ ತುಂಬಿದ ಮನೆಯನ್ನು ಕಂಡಂತೆ.
ಬೇರೆಯವರು ಕಾಣದಂತೆ, ನನ್ನ ಕಣ್ಣುಗಳೂ ಕಾಣದಂತೆ ಕಂಡಿದ್ದೆ.
ಗುಹೆಯಿಂದ ಮರಳಿ ದೋಣಿ ಹತ್ತಬೇಕೆಂದು ದಡಕ್ಕೆ ಬಂದಾಗ ಒಬ್ಬಾಕೆ ಬಾಗಿ ಅಲ್ಲಿನೀರು ತುಂಬಿಕೊಳ್ಳುತ್ತಿದ್ದಳು.
ಹೊದ್ದ ಕಂಬಳಿಯ ಮೇಲೆ ಹರಡಿದ ನೀಳ ಕೂದಲು.
ಅದರಂಚುಗಳು ನೀರಿಗೆ ತಾಗಿ ಆಕೆ ನೀರು ತುಂಬಿಕೊಂಡು ಏಳುತ್ತಲೇ ತೊಡೆಗೆ ಅಂಟಿಕೊಂಡ ಕೂದಲನ್ನು ಹಿಂದಕ್ಕೆ ಒಗೆದಾಗ ಕೆಲ ತುಂತುರು ಹನಿಗಳು ನನ್ನ ಮೈಮೇಲೂ ಬಿದ್ದುವು.
ಆಕೆ ಈಚೆ ತಿರುಗಿದಳು.
ಹಣೆಗೆ ಭಸ್ಮ.
ನೀಳವಾದ ಮೂಗು.
ಆಡಿದ ಮಾತಿನ ದೃಢತೆಯ ಸೂಚಿಸುವ ತುಟಿಗಳ ಕಟೆದಿಟ್ಟ ಭಾವ.
ಕಂಬು ಕೊರಳಿನ ರುದ್ರಾಕ್ಷಿ ಮಾಲೆ.
ಬೆಳಕಿನ ಭಿತ್ತಿಗೆ ಕಣ್ಣುಬಂದಂತಿರುವ, ಊರ್ಧ್ವಮುಖವಾಗಿ ಚಾಚಿ ಒಳಹೊರಗುಗಳನ್ನು ಸಮೀಕರಿಸುತ್ತಿರುವ ಆಕೆಯನೋಟಕ್ಕೆ ಒಗ್ಗಿದ ಕಣ್ಣರೆಪ್ಪೆಯ ನಿಲವು.
ಅದರ ಮೇಲೆ ಗಾಢವಿವೇಕವು ಕಮಾನು ಕಟ್ಟಿದ ಹುಬ್ಬು.
ಅದರ ಮೇಲೆ ಭಿಡೆ 20 ಸಂಕೋಚ ಚಿಂತೆಗಳ ಗೆರೆ ಕಾಣದ ಹಣೆಯ ಹರಹು.
ಅದರ ಮೇಲೆ ಅಂಕುಡೊಂಕಿನ ಮನದ ಬಯಕೆಗಳ ಮುಂಗುರುಳನ್ನು ಬಿಗಿಗಟ್ಟಿ ಹಾರಾಡದಂತೆ ಹಿಂದೊಡ್ಡಿಬಾಚಿದ ಮುಡಿ.
ಆ ಶಮೆ-ದಮೆಗಳೇ ಮೈ-ಮನವ ಮುಚ್ಚಿದಂತೆ ಹರಡಿಕೊಂಡಿದ್ದಕೇಶರಾಶಿ.
ಆಕೆಯನ್ನುನೋಡುತ್ತಲೇ ಎದೆಗೆ ಕೈಮುಗುಳು ಮುಡಿದಿದ್ದನನ್ನನ್ನು ಕಂಡು ಒಂದು ಕ್ಷಣ ನಿಂತಳು.
ಅಪ್ರತಿಭನಾಗಿ ಏನು ಮಾತಾಡಬೇಕೆಂದು ತಿಳಿಯದೇ ಉಪಚಾರಕ್ಕೆಂಬಂತೆ, “ಈ ಗುಹೆಯೊಳಗೆ ಒಬ್ಬರೇ ಇರುವಿರೇ?” ಎಂದೆ.
“ಇಲ್ಲ, ಜೊತೆಗೆ ನನ್ನ ಗಂಡ ಇದ್ದಾನೆ” ಎಂದಳು.
“ಹೌದೇ! ಇಷ್ಟೊತ್ತುಆ ಗುಹೆಯೊಳಗೇ ಸುತ್ತಾಡಿದೆವಲ್ಲ.
.
ಯಾರೂ ಕಾಣಲಿಲ್ಲ” ಎಂದೆ.
ಆಕೆ ಸೌಹಾರ್ದದ ಒಂದೆಳೆ ನಗು ಮಿಂಚಿಸಿ, “ಅಲ್ಲೇ ಒಳಗೆಲ್ಲೋ ಇರುವ.
ನಿಮಗೆ ಕಂಡಿರಲಿಕ್ಕೆ ಇಲ್ಲ” ಎಂದು ಮೆಟ್ಟಿಲೇರುತ್ತಗುಹೆಯತ್ತಸಾಗಿದಳು.
ಅವಳ ಕೂದಲಂಚಿನ ನೀರ ಬಿಂದುಗಳು ತೊಟ್ಟಿಕ್ಕುತ್ತಆಕೆ ಏರಿದ ಮೆಟ್ಟಿಲ ಗುರುತು ಹಾಕಿಡುತ್ತಿದ್ದುವು.
ಕೃಷ್ಣೆಯ ಆ ಹರಿವಿನ ಗುಂಟ ದೋಣೆಯಲ್ಲಿ ಮರಳುತ್ತಿದ್ದಾಗ ಮೂಗರಿಯದ ಯಾವುದೋ ನವುರುಗಂಪು ಹೊಯ್ದಾಡಿದಂತೆ ತೋರಿತು.
ಥಟ್ಟನೇ ಹೊಳೆದದ್ದು, ಇದು ಆ ಗುಹೆಯಲ್ಲಿದ್ದಾಕೆಯ ಕೂದಲಂಚಿನ ಹನಿಗಳು ಮೈಸೋ ಕಿದ ಪರಿಮಳ ಎಂದು.
ಅದು ಮೊಲ್ಲೆ-ಸಂಪಗೆಯ ಮೋಹಿಸುವ ಕಂಪಲ್ಲ.
ವಿಚಿತ್ರ ನಿರ್ಮೋಹದ ಕಂಪು.
ನನ್ನ ಒಳಗೂ ಹೊರಗೂ, ಸುತ್ತಲೂ, ನದಿಯ ಇಕ್ಕೆಲದ ಬೆಟ್ಟದಂಡೆಗಳ ಹರಹಿನಲ್ಲೂ, ಅದ ದಾಟಿದೆತ್ತರದ ಬಾನಗಲದಲ್ಲೂ ಹರಡಿ ಎಲ್ಲವನ್ನೂ ನಿಸ್ಸಂಗದ ಬಯಲಿನಲ್ಲಿಒಂದುಗೂಡಿಸಿತ್ತು.
ಆ ಬಯಲ ನಿಡು ನೀರವತೆಯಲ್ಲಿಅಗೋ ಏನೋ ಸದ್ದು.
.
ಎಲ್ಲಿಂದ ಬರುತ್ತಿದೆ? ಆ ಗುಹೆಯತ್ತಣಿಂದಲೇ? ಹೌದು, ಆ ಗುಹೆಯಿಂದಲೇ.
.
ಕಲ್ಲಚಪ್ಪಡಿಯ ಮೇಲೆ ಏನೋ ಕಳ-ಕಳ ಉರುಳಿದ ಶಬ್ದ.
.
.
ಮರುಕ್ಷಣ ಖಟ್ ಖಟ್ ಎಂದು ಏನನ್ನೋ ನೆಲಕ್ಕೆ ಕುಕ್ಕಿ ಕುಕ್ಕಿ ಇಡುವ ಶಬ್ದ… ಇವೇ ಕೆಲ ಹೊತ್ತು ಕೇಳುತ್ತಿದ್ದಂತೆ, “ಹೋಆನು ಗೆದ್ದೆ.
.
ಎಲ್ಲಿನಿನ್ನ ಪಣ? ಕೊಡಿಲ್ಲಿ” ಎಂಬ ಗಂಡಿನ ದನಿ.
“ಓ ಇಲ್ಲಇಲ್ಲ, ಇದು ವಂಚನೆ.
.
ದಿಟದಾಟವಲ್ಲ.
.
.
" ಎಂಬ ಹೆಣ್ಣಿನ ಮುನಿಸಿನ ದನಿ.
.
“ಇಟ್ಟ ಪಣವನೆತ್ತಿಡದೆ ದಿಟ-ಗಿಟದ ಮಾತೆತ್ತಿದಡೆ ಬಿಟ್ಟುಬಿಡುವೆನೇ?” ಎಂಬ ಗಂಡಿನ ದನಿಯ ಜೊತೆಗೇ ಕಲ್ಲಹಾಸಿನ ಮೇಲೆ ಕುಟುಕುಟು ಟಣಟಣ ಎಂದು ಏನೋ ಬಿದ್ದುಚೆಲ್ಲಾಡಿದ ಶಬ್ದ.
.
“ಮಾಣೆಲೆ ರಮಣ ಮಾಣೆಂಬೆ.
.
.
ಹೋಎನ್ನ ರುದ್ರಾಕ್ಷಿ ಮಾಲೆ! ಹೋಯಿತ್ತು! ಓಓ ಹೋಯಿತ್ತೆನ್ನ ಲಿಂಗಾರ್ಚನೆಯ ಕರಡಿಗೆ.
.
.
ಏನ ಗಯ್ದೆಲೆ!!” ಎಂದು ಹೆಣ್ಣಿನ ಕೂಗಿನ ಜೊತೆಗೇ ಯಾರದೋ ಕೈ ತುಡುಕಿದಂತಾಗಿ ಬೆದರಿದ ಹಾವು ಹೆಡೆಯೆತ್ತಿಸಳ್ಳನೇ ಬುಸುಗುಟ್ಟಿದ ಶಬ್ದ.
“ಎಲೆಲೆ ಬಲು ಘಾಟಿಯಲ ನೀ ಹೆಣ್ಣು, ಸೋತ ನಿನಗೇತರದು ಏರಾಟವೋ” ಗಂಡೆಂದಿತು.
“ನಿನ್ನಾಟ ಕಪಟವೆಂಬೆ, ಮಿಥ್ಯಾಚಾರವೆಂಬೆ.
ನಿನ್ನುರುಬೆಗೆ ಸುಮ್ಮನಿರಲಪ್ಪೆನೇ ಆನು?” ಹೆಣ್ಣಿನ ಏರುದನಿ.
“ಅಹುದಹುದು, ಹುಸಿಹೋಹದು ಕಂಡೆಯಾ ನಿನ್ನ ನುಡಿ! ಎನ್ನಾಟ ಮಿಥ್ಯಾಚಾರವೇ!” ಎಂದು ಗಂಡಿನ ನಗು ಬೆರಸಿದ ದನಿ.
ಒಂದು ಕ್ಷಣ ಮೌನ.
ಗಂಡಿನ ಜೊತೆ ಹೆಣ್ದನಿಯೂ ಈಗ ನಗತೊಡಗಿತು.
ಕೇಳುತ್ತಿದ್ದಂತೆ ದಿಕ್ತಟದ ಮೋಡಗಳ ಗುಡುಗು, ಕೃಷ್ಣೆಯ ಅಲೆಗಳ ಜುಳುಜುಳು ನಾದ, ಗುಡ್ಡಗಾಡಿನ ಹಕ್ಕಿಗಳ ಕಲಕಲ ಎಲ್ಲವೂ ಆ ಎರಡು ದನಿಗಳ ಜೊತೆ ಕೂಡಿಕೊಂಡಿತ್ತು.
<><><><><>
೨೩-೧೦-೨೦೨೩, ನೀಲಕಂಠ ಕುಲಕರ್ಣಿ