ಬೆಳ್ಬೆಳಗ್ಗೆ ಏಳುತ್ತಲೇ ಸೆಗಣಿ ತರಬೇಕು, ಚಂಡುಹೂವಿನ ಮಾಲೆ, ಸೇವಂತಿ, ಬಿಡಿಹೂವು, ಬಾಳೆ ಎಲೆ ತರಬೇಕು ಎಂದೆಲ್ಲ ಗಜಿಬಿಜಿ ನಡೆದಿತ್ತು. ವಿದ್ಯಾರಣ್ಯಪುರದ ಅಣ್ಣನ ಮನೆಯಿಂದ ಸ್ವಲ್ಪ ದೂರದಲ್ಲಿ ದುರ್ಗಾಪರಮೇಶ್ವರೀ ದೇವಸ್ಥಾನದ ಗೋಶಾಲೆಯಲ್ಲಿ ಸೆಗಣಿ ಸಿಗುತ್ತದಂತೆ. ಅಲ್ಲಿ ಆ ಯಾರೋ ಒಬ್ಬನ್ನ ಕೇಳಿದರೆ ಒಳಗೆ ಕರಕೊಂಡು ಹೋಗ್ತಾನಂತೆ, ಅಲ್ಲಿ ಇನ್ನೊಬ್ಬಾತನನ್ನು ಕೇಳಿಕೊಂಡರೆ ಸೆಗಣಿ ಕೊಡುತ್ತಾನಂತೆ, ಅವನು ಕೊಡಲಿಲ್ಲ ಅಂದರೆ ಆ ಮತ್ತೊಬ್ಬನ ಹತ್ತಿರ ಹೋಗಬೇಕು.. ನೀ ಹೋಗಿ ತಗೊಂಡು ಬಾ, ನಾನು ಅಂಗಡಿಗೆ ಹೋಗಿ ಬೇರೆ ಸಾಮಾನು ತರುವೆ ಎಂದ ಅಣ್ಣ. ಪರಿಚಯವಿಲ್ಲದ ಜಾಗದಲ್ಲಿ ಯಾರಾರದೋ ಕೈಕಾಲು ಹಿಡಿದು ಸೆಗಣಿ ತರುವುದಕ್ಕಿಂತ, ನನ್ನವೇ ನೂರಾರು ರೂಪಾಯಿ ಖರ್ಚಾದರೂ ಪರವಾಗಿಲ್ಲ, ಮರ್ಯಾದೆಯಿಂದ ಉಳಿಯುತ್ತದೆ ಎಂದುಕೊಂಡು, ನೀನೇ ಸೆಗಣಿ ತರು, ನಾನು ಅಂಗಡಿ ಸಾಮಾನು ತರುವೆ ಎಂದೆ ಅಣ್ಣನಿಗೆ. ನೂರಾರು ರೂಪಾಯಿ ಉಳಿಯಿತು ಎಂದು ಆತನೂ ಸಂತೋಷದಿಂದ ಒಪ್ಪಿಕೊಂಡ.+++(4)+++
ಇವತ್ತು ಬಲಿಪಾಡ್ಯಮಿ. ದನದ ಕೊಟ್ಟಿಗೆಯಲ್ಲಿಯೇ ಹಬ್ಬದ ಮುಖ್ಯ ಆಚರಣೆ. ಮನೆ, ಹಕ್ಕೆ ಮನೆಯ ತುಂಬ ಸೆಗಣಿಯದೇ ಸಡಗರ. ಇದೆಲ್ಲ ವಿಜೃಂಭಣೆಯಿಂದ ನಡೆಯುತ್ತಿದ್ದದ್ದು ನಮ್ಮ ಹಳ್ಳಿಯ ಮನೆಯಲ್ಲಿ. ಅದು ಬಿಟ್ಟ ಮೇಲೆ ಹುಬ್ಬಳ್ಳಿಯ ಅಣ್ಣನ ಮನೆಯಲ್ಲಿ ಸ್ವಲ್ಪ ಕಡಮೆ ವೈಭವದಲ್ಲಿ ನಡೆಯುತ್ತಿತ್ತು. ಅಲ್ಲಿ ಹಕ್ಕೆ ಮನೆ ಇಲ್ಲವಾದರೂ ಸಿದ್ಧಾರೂಢಮಠದ ಗೋಶಾಲೆಯಿಂದ ಸಾಕೆಂಬಷ್ಟು ಸೆಗಣಿ ಸಿಗುತ್ತದೆ. ಅಣ್ಣನ ಮನೆಯ ಮುಂಚಿ-ಸಾಲೆಯೂ ದೊಡ್ಡದು. ಪ್ರತಿ ಸರ್ತಿ ಅಲ್ಲಿಗೇ ಹೋಗುತ್ತಿದ್ದೆನಾದರೂ, ಈ ಬಾರಿ ಒಂದು ವ್ಯಾಜದಿಂದಾದ ಒಪ್ಪಂದದಲ್ಲಿ ನಾನು ಬೆಂಗಳೂರಿನ ವಿದ್ಯಾರಣ್ಯಪುರದ ಅಣ್ಣನ ಮನೆಯಲ್ಲಿಯೇ ದೀಪಾವಳಿ ಆಚರಣೆ ಮಾಡಬೇಕೆಂದು ತಾಯಿಯ ಅಪ್ಪಣೆಯಾಗಿತ್ತು. ಹಬ್ಬಕ್ಕೆ ಬಳಸಿಕೊಳ್ಳಬಹುದಾದ ಒಂದು ಸಂಪನ್ಮೂಲದ ವಸ್ತುವಾಗಿ, ಚರಾಸ್ತಿಯಾಗಿ ನನ್ನನ್ನೇ ಏಕೆ ಬಳಸಿಕೊಂಡರು? ಅದಕ್ಕೆಲ್ಲ ಬೇರೆ ಉದಾತ್ತ, ಅನುದಾತ್ತ ಕಾರಣಗಳಿವೆ. ಇಲ್ಲಿ ಸ್ವರಿತಗೊಳಿಸುವುದು ಬೇಕಿಲ್ಲ.+++(5)+++
ಕೊಟ್ಟ ಮಾತಿನಂತೆ ಅಣ್ಣ ದೇವಸ್ಥಾನದ ಗೋಶಾಲೆಯಿಂದ ಸೆಗಣಿ ತಂದ. ನಾನು ಹೂವು ಬಾಳೆಲೆ ಇತ್ಯಾದಿ ತಂದಿಟ್ಟು ಬೆಳಗಿನ ವಾಕಿಂಗ್ ಆಗಲಿಲ್ಲ ಎಂದು ಮತ್ತೆ ಹೊರನಡೆದೆ. ಹತ್ತಿರದ ಒಂದು ಉದ್ಯಾನದ ಟ್ರ್ಯಾಕ್ ಅಲ್ಲಿ ಆರು ಸುತ್ತು ಹೊಡೆದು ಮರಳುವಾಗ ಏನೋ ನೆನಪಾಯಿತು. ಪಾಂಡವರಿಗೆ ಹಾಗೂ ಅವರ ಕೋಟೆಗೆ ಅಲಂಕರಿಸಲು ಕೆಲವು ಸೊಪ್ಪು, ಹೂವು ಬೇಕಿದ್ದುವು. ಅವು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಇಲ್ಲಿಯವರು ಬಳಸುವುದಿಲ್ಲ. ಕಾಲುವೆ ದಂಡೆ, ಬೇಲಿಗಳಲ್ಲಿ ಕಣ್ಣು ಹಾಯಿಸುತ್ತ ಬಂದೆ. ಎಲ್ಲೂ ಕಾಣಲಿಲ್ಲ. ಕೊನೆಗೆ ಮನೆಯ ಹತ್ತಿರಕ್ಕೆ ಬರುತ್ತ ಒಂದು ಖಾಲಿ ಸೈಟು ಕಂಡಿತು. ಅಲ್ಲಿ ಮುಳ್ಳು ಪೊದೆಗಳು, ಚಿಕ್ಕ ಗಿಡ, ಕಸ ಕಡ್ಡಿ ಎಲ್ಲ ಬೆಳೆದಿತ್ತು. ನಿಂತು ಕಣ್ಣಾಡಿಸಿದೆ. ಹೋ, ನನಗೆ ಬೇಕಾದ ಹೂವು, ತೊಪ್ಪಲು ಕಡ್ಡಿಗಳು ಬೆಳೆದು ನಿಂತಿದ್ದುವು. ಧಡಧಡ ಆ ಕಸ ಕಳೆಗಳ ನಡುವೆ ಸೌಗಂಧಿಕಾಕುತೂಹಲಿಯಾದ ಭೀಮನಂತೆ ನಡೆದೆ. ಅಲ್ಲಿಯೇ ಇಬ್ಬರು ಆಳುಗಳು ಕಳೆ ಕೊಳೆ ಕೆತ್ತುವ ಕೆಲಸ ಮಾಡುತ್ತಿದ್ದರು. ಇವನೇಕೆ ಇಲ್ಲಿ ನುಗ್ಗಿದನೆಂದು ಅವರು ಬೆರಲ ಮೂಗಿನವರಾಗಿರುತ್ತಲೇ ನಾನು ಆ ಗಿಡಗಳಿಗೆ ಕೈ ಹಾಕಿದ್ದೆ. ಮುಳ್ಳು ಮುಳ್ಳಿನ ಗೋಪುರಾಕಾರಾದ ಆ ಗಿಡ- ಹೂವುಗಳ ಗುರುತು ಹತ್ತಿತಾದರೂ ಅದರ ಹೆಸರು ನೆನಪಾಗಲಿಲ್ಲ. ಏನೋ ಅನ್ನುತ್ತಿದ್ದೆವೆಲ್ಲ ಇದಕ್ಕೆ ಎಂದು ನೆನಸಿಕೊಳ್ಳುತ್ತಲೇ ಕಿತ್ತುಕೊಳ್ಳುತ್ತಿದ್ದಾಗ ಆಚೆ ನಿಂತ ಆ ಇಬ್ಬರು ಆಳುಗಳ ಪೈಕಿ ಒಬ್ಬಾಕೆ “ಉತ್ತರಾಣಿ ಕಡ್ಡಿ ಹರಕಾಳಕ್ಕತ್ತಾರ…” ಎಂದಳು. ಉತ್ತರಕರ್ನಾಟಕದ ಮಧು ಸುರಿಯುತ್ತಲೇ ಅದನ್ನು ಬಾಚಿಕೊಳ್ಳಲು ಕಿವಿಯ ಬಟ್ಟಲು ತೆರೆದು ನಿಂತಿತು. ಕಡೆಗಣ್ಣನ್ನು ಅವರತ್ತ ಚೆಲ್ಲಿದಾಗ, ಇನ್ನೊಬ್ಬ ಟೋಪಿ, ಗಡ್ಡ ಹೊತ್ತ ಮುಸಲ್ಮಾನ ಆಳು, “ಹೂಂಬೇ, ಹಟ್ಟಿ ಹಬ್ಬಕ್ಕ ಬೇಕಲ್ಲ, ಒಯ್ಯಾಕತ್ತಾರ ಮತ್ತ…” ಅಂದ. ಅವನನ್ನು ನೋಡುತ್ತಲೇ ನಮ್ಮೂರ ಮನೆಯ ಆಳು ಮೆಹಬೂಬ ನೆನಪಾದ. ಈಗ ಮುದುಕನಾಗಿದ್ದಾನೆ. ನಾವು ಹೋದಾಗೊಮ್ಮೆ ಸಾಧ್ಯವಾದಷ್ಟು ಮನೆ ಕೆಲಸ ಮಾಡಿಕೊಡುತ್ತಾನೆ. ನಾನು ಚಿಕ್ಕವನಿದ್ದಾಗ ಅವನಿಗೆ ಮುವತ್ತೋ ಮುವ್ವತ್ತೈದೋ. ಅವರಪ್ಪ ಗೌಸಪ್ಪ - ಗೌಸು ಸಾಹೇಬ ಆಗೆಲ್ಲ ಕೋಲೂರಿಕೊಂಡು ಬಂದು ನಮ್ಮ ಮನೆಯ ಪಡಸಾಲೆಯ ಒಂದು ಕಲ್ಲಿನ ಮೇಲೆ ಅಡಿಕೆ ಎಲೆ ಅರೆದುಕೊಳ್ಳುತ್ತಿದ್ದ. ಮೆಹಬೂಬನಿಗಿಂತ ಮೊದಲು ಅಜ್ಜನ ಕಾಲದಲ್ಲಿ ನಮ್ಮ ಮನೆಗೆ ಗೌಸಪ್ಪನ ಆಳ್ತನ. ಅವನಿಗೆ ವಯಸ್ಸಾದ ಮೇಲೆ ಮನೆ ಗದ್ದೆ ಕೆಲಸಗಳ ಎಲ್ಲ ಕಾರುಬಾರು ಮೆಹಬೂಬನದೇ. ಹಬ್ಬ ಹರಿದಿನಗಳಂದು ಮೆಹಬೂಬ ಮನೆಗೆ ಬಾರದಿದ್ದರೆ ಎಲ್ಲ ಕೆಲಸ ನಮ್ಮಿಂದ ಸಾಗದೇ, ಅವ್ವನ ಮಡಿಯಡುಗೆ ಅಪ್ಪನ ಮಡಿ ಪೂಜೆಗಳಲ್ಲಿಯೇ ಮನೆ ತುಂಬ ತಾಂಡವನೃತ್ಯವೇ ಸರಿ.+++(5)+++ ಹಬ್ಬದ ಮನೆಗೆ ತಳಿರು ತೋರಣ, ದನಗಳ ಮೈತೊಳೆಯೋದು, ವಾಲಗ ಭಜಂತ್ರಿಯವರನ್ನು ಕರೆದುಕೊಂಡು ಬರುವುದು, ಜೋಗಿತಿಯರನ್ನು ಕರಕೊಂಡು ಬರುವುದು, ಮಿಕ್ಕ ಆಳುಗಳನ್ನು ಕರೆಯೋದು, ಮನೆಯ ಹೈನು ಸಾಲದೇ ಹೆಚ್ಚಿಗೆ ಬೇಕೆಂದರೆ ಹಾಲು ಮೊಸರು ಬೆಣ್ಣೆ ತಂದು ಕೊಡುವುದು ಎಲ್ಲ ಅವನದೇ. ಹೀಗಾಗಿ ಅಪ್ಪನಿಗೆ ನಮಗೆಲ್ಲರಿಗಿಂತ ಹೆಚ್ಚಾಗಿ ಫರಾಳ, ಚಹಾ ಊಟ ಅವನದಾಯಿತೋ ಇಲ್ಲವೋ ಎಂಬುದರ ಚಿಂತೆ.
ಊರಲ್ಲಿ ನಮಗೆಲ್ಲ ಹಣಕಾಸು, ವ್ಯವಹಾರ, ಆಳುಕಾಳು ಒದಗಿ ಬರುತ್ತಿದ್ದುದು ಜೈನರು, ಮುಸಲ್ಮಾನರು. ಮಿಕ್ಕ ದಾಯಾದ ಬ್ರಾಹ್ಮಣರ ಮನೆಗಳು ಅರಿಷಿಣ ಕುಂಕುಮಕ್ಕೆ, ಯಾರದರೂ ಹೋದಾಗ ಮಾತಾಡಿಸಿಕೊಂಡು ಬರುವುದಕ್ಕೆ, ಹತ್ತು ದಿನನ ಸೂತಕಕ್ಕೆ ಮಾತ್ರ. ಬೆಳಗಾಗೆದ್ದು ಮನೆ ಮುಂದೆ ನೀರು ಸಾರಣೆಗೆ ನಿಂತು ಎಡಕ್ಕೆ ತಿರುಗಿದರೆ ಜೈನರ ಬಸದಿಯ ಧ್ವಜ. ಬಲಕ್ಕೆ ತಿರುಗಿದರೆ ಮಸೀದಿಯ ಧ್ವಜ. ಎದುರಿಗೆ ನೋಡುವಂತಿಲ್ಲ. ಅಲ್ಲೆಲ್ಲ ನಮ್ಮ ದಾಯಾದಿಗಳ ಮನೆ.+++(4)+++ ವರ್ಷವರ್ಷದ ಪಂಚಕಲ್ಯಾಣ, ದಶಲಕ್ಷಣ ಮಹಾಪರ್ವ ಇತ್ಯಾದಿಗಳಲ್ಲಿ ನಮ್ಮ ತಾಯಿಯೊಡನೆ, ನಾವೂ ಹೋಗಿ ಶಂಭವನಾಥ ತೀರ್ಥಂಕರನಿಗೆ ಅಭಿಷೇಕ ಮಾಡುತ್ತಿದ್ದೆವು.+++(5)+++ ಅವರ ದಿಗಂಬರ ಸ್ವಾಮಿಗಳ ಮೆರವಣಿಗೆ ನಮ್ಮ ಮನೆಯ ಮುಂದೆ ನಡೆದಾಗ ಭಕ್ತಿಯಿಂದ ನಾವೂ ಹೋಗಿ ಅಡ್ಡ ಬೀಳುತ್ತಿದ್ದೆವು. ಇತ್ತ ಈದು, ಮೊಹರಮ್ಮುಗಳ ದಿನ ಮಸೀದಿಗೆ ಹೋಗಿ ಊದುಬತ್ತಿ, ಧೂಪ ಕೊಟ್ಟು, ಉಪ್ಪು, ಉತ್ತುತ್ತೆ ಬೀರಿ ಮುಲ್ಲಾನ ನವಿಲುಗರಿಯ ಗುಚ್ಛದಿಂದ ಬಡಿಸಿಕೊಂಡು ಬರುತ್ತಿದ್ದೆವು.+++(5)+++ ಇನ್ನು ನಮ್ಮ ಹಬ್ಬ ಹುಣ್ಣಿಮೆ ಬಂದರೆ ನಮ್ಮ ಸಂಪ್ರದಾಯ, ಅದಕ್ಕೆ ಬೇಕಾದ ಸಾಮಗ್ರಿ ಸಾಮಾನು ಎಲ್ಲ ಅವರಿಗೂ ಗೊತ್ತು. ಎಲ್ಲ ವ್ಯವಸ್ಥೆಯೂ ಅವರದೇ. ಈಗಲೂ ಆಯಿತು, ಬೆಂಗಳೂರಲ್ಲಿಯೋ ಹುಬ್ಬಳ್ಳಿಯಲ್ಲಿಯೋ ಇರುವ ನಮ್ಮ ತಾಯಿಗೆ, ತುಳಸೀಲಗ್ನದಂದು ಊರಲ್ಲಿ ಮೆಹಬೂಬ ನಮ್ಮ ಮನೆಯ ತುಳಸೀ-ಕಟ್ಟೆಯನ್ನು ತಳಿರು ತೋರಣ, ಚಂಡುಹೂವಿನ ಮಾಲೆಗಳಿಂದ ಅಲಂಕರಿಸಿ ಪಕ್ಕದ ಅಂಗಡಿಯ ಹುಡುಗನಿಂದ ಫೊಟೋ ತೆಗೆಸಿ ವಾಟಸಪ್ ಕಳಿಸಿದ್ದನ್ನು ನೋಡಿದಾಗಲೇ ಸಮಾಧಾನ.
ಇವತ್ತಿನ ಬಲಿಪಾಡ್ಯಮಿಗೆ ಬಲಿಯ ನಿಮಿತ್ತ ಏನು ಮಾಡುತ್ತೇವೋ ಗೊತ್ತಿಲ್ಲ. ಆದರೆ ಅದ್ದೂರಿಯಾಗಿ ಹಟ್ಟಿ ಪೂಜೆ ನಡೆಯುತ್ತಿತ್ತು. ಬೆಳಗಾಗಿ ಆಕಳು, ಎಮ್ಮೆಗಳು ಮೇಯಲು ಹೊರಗೆ ಹೋದ ಮೇಲೆ, ಮೆಹಬೂಬ ಬಂದು ಸೆಗಣಿ ಕಸ ಮಾಡುತ್ತಿದ್ದ. ಅಂದಿನ ಸೆಗಣಿ ತಿಪ್ಪೆಗೆ ಹೋಗುವುದಿಲ್ಲ. ಪೂಜೆಗೆ ಎತ್ತಿಡಲಾಗುತ್ತಿತ್ತು. ಎತ್ತು-ಆಕಳೇ ಇರಲಿ, ಎಮ್ಮೆಯೇ ಇರಲಿ ಎಲ್ಲದರ ಸೆಗಣಿಗೂ ಏಕೋಭಾವ, ಪೂಜ್ಯಭಾವ. ಎತ್ತುಗಳನ್ನು ಹಿತ್ತಲಿಗೆ ಒಯ್ದು ಅಥವಾ ನದಿಗೆ ಕರಕೊಂಡು ಹೋಗಿ ಸ್ನಾನ ಮಾಡಿಸಿ ಬಂದು ಹಿತ್ತಲ ತೆಂಗಿನ ಮರಕ್ಕೆ ಕಟ್ಟಿ ಕಾದ ಕಬ್ಬಿಣದ ಬಳೆಯಿಂದ ಗುಲ್ಲು ಕೊಡುತ್ತಿದ್ದ. ನಾವು ಸ್ಮಾರ್ತ ಅದ್ವೈತಿಗಳಾದರೂ ನಮ್ಮ ಎತ್ತುಗಳು ಮಾತ್ರ ಮಧ್ವಮತಾಬ್ಧಿಯಲ್ಲಿ ಮೀನಾಗಿದ್ದುವು. ಆಮೇಲೆ ಹಕ್ಕೆಮನೆಯನ್ನು ಗುಡಿಸಿ ಸಾರಿಸಿ ಕಬ್ಬಿನ ಜಲ್ಲೆ, ಬತ್ತ ಜೋಳಗಳ ತೆನೆಗಟ್ಟಿದ ಮೆದೆ, ಉತ್ತರಾಣಿ ಕಡ್ಡಿ, ಹೊನ್ನೆ ಊವು ಎಲ್ಲ ತರಲು ಹೋಗುತ್ತಿದ್ದ. ಮೆಹಬೂಬ ಆಚೆ ಹೋದ ಮೇಲೆ ನನಗಿನ್ನು ಹಕ್ಕೆಮನೆ ಕೆಲಸ. ಅಲ್ಲಿ ಪಾಂಡವರ ಕೋಟೆ ಕಟ್ಟಬೇಕು, ಅಲಂಕರಿಸಬೇಕು. ಅಣ್ಣಂದಿರು ಅದಕ್ಕೆಲ್ಲ ಕೈ ಹಾಕುತ್ತಿರಲ್ಲಿಲ್ಲ. ಅವರದೇನಿದ್ದರೂ ಸಂಜೆ ಅದನ್ನೆಲ್ಲ ತೆಗೆದು ಸ್ವಚ್ಛ ಮಾಡುವ ಕೆಲಸ. ಸೆಗಣಿಯಿಂದ ಪಾಂಡವರ ಕೋಟೆ ಕಟ್ಟಿ ಅದರೊಳಗೆ ಸೆಗಣಿಯ ಪಾಂಡವರನ್ನಿಟ್ಟು, ಮುಂದೆ ಸುಣ್ಣ ಕೆಮ್ಮಣ್ಣಿನ ರಾಡಿಯಲ್ಲಿ ಕೈ ಮುಷ್ಟಿ ಅದ್ದಿ ಅದ್ದಿ ಗೋಪಾದದ ಗುರುತುಗಳನ್ನು ಮಾಡಬೇಕು. ಕೋಟೆಗೆ ಕಬ್ಬು, ಬತ್ತ ಜೋಳದ ತೆನೆ, ಮಾವಿನ ತಳಿರು, ಉತ್ತರಾಣಿ, ಹೊನ್ನೆ ಗಿನ್ನೆಗಳ ಹೂವುಗಳು ಮತ್ತಿತರ ಗಿಡಗಳ ತೊಂಗಲು, ಸಿವುಡಿನ ಅಲಂಕಾರ. ಕೋಟೆಯ ಸುತ್ತ ಅಂಕಣದುದ್ದಕ್ಕೂ ನನ್ನದೇ ರಂಗೋಲಿ ಕಲೆ. ಸೌಮ್ಯ ಮುಖದಲ್ಲಿಯೇ ರಾಜತ್ವದ ಜಬರಿನ ಯುಧಿಷ್ಠಿರ, ಪೊದೆ ಮೀಸೆಯ ಗಡತರದ ಆಸಾಮಿ ಭೀಮ, ಒಳ್ಳೇ ಮುಖಸೌಷ್ಠವದ ತೆಳುಮೀಸೆಯ ಅರ್ಜುನ, ಇನ್ನೆರಡು ಎಳೆಮುಖದ ಕುಡಿಮೀಸೆಯ ನಕುಲ ಸಹದೇವರು, ಯುಧಿಷ್ಠಿರನ ಪಕ್ಕ ತನ್ನ ಚೆಲುವಿನಲ್ಲಿಯೂ ಒಂದು ತೆರನ ಬಿಗುವಿನ ದ್ರೌಪದಿ ಇವರೆಲ್ಲರ ಚಿತ್ರಗಳು. ಅವರವರ ಕೈಯಲ್ಲಿ ಭರ್ಚಿ, ಗದೆ, ಬಿಲ್ಲು ಬಾಣ, ಖಡ್ಗ, ಕೊಂತ, ಕಮಲ ಇತ್ಯಾದಿ. ಮೆಹಬೂಬ ಬಂದು ನೋಡಿ ಮೆಚ್ಚುಗೆಯ ಲೊಚಲೊಚ ಮಾಡಿ ಅಲಲಲಲಾ… ಏನ್ ಭೀಮಾ ಏನ್ ಅರಜೂನ, ಧರಮ್ ರಾಯಾ ಅನ್ನುತ್ತಿದ್ದ. ಈ ಹಟ್ಟಿ ಲಕ್ಷ್ಮಿಗೆ, ಕೋಟೆಗೆ ವಿಧ್ಯುಕ್ತ ಪೂಜೆ, ನೈವೇದ್ಯ, ಆರತಿ ಅಕ್ಷತೆ ಎಲ್ಲ ಆಗುವುದು. ಸಂಪ್ರದಾಯ ಇರದಿದ್ದರೂ ನನ್ನ ಪಾಂಡವರ ರಂಗೋಲಿಗಳಿಗೂ ಅಪ್ಪನ ಅರಿಷಿಣ ಕುಂಕುಮ ಹೂವು ಧೂಪ ದೀಪದ ಪೂಜೆ, ಆರತಿ. ಸಂಜೆಗೆ ಮೊದಲು ಮತ್ತೊಮ್ಮೆ ಮಂಗಳಾರತಿ ಧೂಪ ದೀಪ. ಅದೆಲ್ಲ ಸಿಂಗಾರವನ್ನು ನಾವು ಕೈಯಿಂದ ತೆಗೆಯುವಂತಿಲ್ಲ. ಸಂಜೆ ಮರಳಿ ಬರುವ ಆಕಳು, ಎಮ್ಮೆಗಳ ಕಾಲಿಗೆ ಸಿಕ್ಕಿ ಆ ಎಲ್ಲ ಸಡಗರ ಹಕ್ಕೆಯ ನೆಲದಲ್ಲಿ ಹರಡತಕ್ಕದ್ದು. ಕೆಲವೊಮ್ಮೆ ಮಧ್ಯಾಹ್ನದ ಹೊತ್ತಿಗೇ ಊರಲ್ಲಿ ಹೋರಿ ಓಡಿಸುವ ಗಲಾಟೆಯಲ್ಲಿ ಆ ಹೋರಿಗಳು ಎಲ್ಲೆಲ್ಲೋ ಹಿತ್ತಲ ಬೇಲಿಯಲ್ಲಿ ನುಗ್ಗಿ ಬಂದು ಹಕ್ಕೆ ಮನೆಗೂ ನುಗ್ಗಿ ಆ ಪೂಜೆ ಮಾಡಿದ್ದೆಲ್ಲ ಹಾಳುಗೆಡವುತ್ತಿದ್ದುದೂ ಉಂಟು. ಆಯಿತು, ಎಲ್ಲ ಬಸವಣ್ಣ ಗೋಮಾತೆ ಎಂದುಕೊಳ್ಳುತ್ತಿದ್ದೆವು. ಆಮೇಲೆ ದನಗಳನ್ನು ಅವವದಿರ ಜಾಗದಲ್ಲಿ ಕಟ್ಟಿ ಇದೆಲ್ಲವನ್ನು ಸ್ವಚ್ಛ ಮಾಡಿಕೊಂಡು ಬರಬೇಕು. ಪೂಜೆಗೊಂಡ ಆ ಎಲ್ಲ ಸಗಣಿಯನ್ನೂ ತಟ್ಟಿ ಮನೆಯ ಸೂರಿನ ಮೇಲೆ ಹಾಕುತ್ತಿದ್ದೆವು. ಇನ್ನೆರಡು ಮೂರು ತಿಂಗಳು ಅವು ಒಣಗಿ ಕುರುಳಾಗಿ ಅವುಗಳ ಕೆಂಡದಲ್ಲಿಯೇ ರಥಸಪ್ತಮಿಯ ದಿನದ ಹಾಲು ಉಕ್ಕಿಸತಕ್ಕದ್ದು.+++(5)+++ ಇಷ್ಟೆಲ್ಲ ಬೆಂಗಳೂರಿನಲ್ಲಿ ಮಾಡಲಾದೀತೇ! ಅದೇನಿದ್ದರೂ ಮನಸ್ಸಿನಲ್ಲಿ ಉಳಿದ ನೆನಪಿನ ಬಿಂಬದ ಗಾತ್ರಕ್ಕೆ, ಶಾಸ್ತ್ರಕ್ಕೆ.
ಸರಿ, ಈ ಅಪಾರ್ಟಮೆಂಟಿನ ಮನೆಯ ಮುಂದಿನ ನಾಲ್ಕಡಿ ಕಾರಿಡಾರಿನಲ್ಲಿಯೇ ಆಚೆ ಮನೆಯವರು ಓಡಾಡಲು ಒಂದಡಿ ಜಾಗ ಬಿಟ್ಟು ಸೆಗಣಿಯ ಕೋಟೆ ಕಟ್ಟಿದೆ. ನಡುವೆ ಐದು ಸಗಣಿಯ ಮುದ್ದೆ ಮಾಡಿ ಇಟ್ಟೆ. ಹಾಗೆ ಇಡುತ್ತಿರುವಾಗಲೇ ಅನಿಸಿತು. ಹೌದು, ಐದು ಜನ ಪಾಂಡವರನ್ನು ಇಟ್ಟು ಪೂಜಿಸುತ್ತೇವಲ್ಲ, ದ್ರೌಪದಿ ಯಾಕಿಲ್ಲ? ಅವಳಿಂದಲೇ ಅಲ್ಲವೇ ಈ ಐದೂ ಜನ ಒಂದು ನೆಲೆಗೆ ಹತ್ತಿದ್ದು. ಅವಳಿಲ್ಲದೇ ಇವರಿಗಾವ ಸೀಮೆಯ ಭಾಗ್ಯ, ಸೂಜಿ ಮೊನೆಯ ಮಣ್ಣೂ ಸಿಗುತ್ತಿರಲಿಲ್ಲ ಎಂದುಕೊಂಡು, ಇನ್ನೊಂದು ಇಡೋಣ, ಆರನೇದು ಎಂದು ಮತ್ತೊಂದು ಸೆಗಣಿ ಮುದ್ದೆ ಮಾಡಿ ಧರ್ಮರಾಯನ ಪಕ್ಕ ಇಟ್ಟೆ. ಹಾಗಾದರೆ ಕೃಷ್ಣ ಬೇಡವೇ? ಬೇಕಿಲ್ಲ, ಅವನು ಮನದಲ್ಲಿ ಸಾಕು ಎಂದುಕೊಂಡು ಮುಗಿಸಿದೆ. ಪಕ್ಕದ ಚೂರು ಜಾಗದಲ್ಲಿ ರಂಗೋಲಿಯ ಪಾಂಡವರು, ದ್ರೌಪದೀಸಮೇತ.
ಇಷ್ಟೆಲ್ಲ ಮಾಡಿಟ್ಟು ಸ್ನಾನಕ್ಕೆ ಹೋದೆ. ಸ್ನಾನ ಮಾಡಿ ಬಾಗಿಲು ತೆರೆದು ಹೊರಗೆ ಕಾಲಿಡುವಷ್ಟರಲ್ಲಿ ಅತ್ತಿಗೆ ಕೂಗಿದರು, ತಡೆ ಆರತಿ ಮಾಡಬೇಕು ಎಂದು. ಇವತ್ತು ಸ್ನಾನ ಆದಮೇಲೆ ಬಚ್ಚಲಲ್ಲಿಯೇ ಆರತಿ. ಎಲೆ ಅಡಿಕೆಬೆಟ್ಟ ನಾಣ್ಯ ಕೊಟ್ಟು “ಬೆಳಗುವೆನಾರುತಿಯಾ ಪಾರ್ಥರಾಯಗೆ, ನರಗೇ ಮುರಹರನ ಸಖಗೇ” ಎಂದು ಶುರು ಮಾಡಿದರು. ಇಲ್ಲಿಯ ಬಚ್ಚಲುಗಳೇನು ಹಳ್ಳಿಯ ಅಪ್ಪಟ ಬಚ್ಚಲು ಅಲ್ಲವಲ್ಲ. ಜೊತೆಗೆ ಬೇರೆಯದೂ ಇರುತ್ತದೆ.+++(5)+++ ಆದರೂ ವಿಲ್ಲಿಂಗ್ ಸಸ್ಪೆನ್ಷನ್ ಆಫ್ ಡಿಸ್ಬಿಲೀಫಿನಲ್ಲಿ ಬೇರೆ ವಿಚಾರಗಳನ್ನು ಹುದುಗಿಟ್ಟು ಮುಖ ಬೆಳಗಿಸಿಕೊಂಡು ಬಂದೆ. ದೇವರ ಕೋಣೆಯ ಮುಂದೆ ತಾಂಬೂಲ ಇಟ್ಟು ಹಣೆಗೆ ಕೈ ಹಚ್ಚಿ ಬಾಗಿ ನಮಸ್ಕರಿಸುವಾಗ ಕೈಯ ಸೆಗಣಿ ವಾಸನೆ ಇನ್ನೂ ಗಾಢವಾಗಿ ಮೂಗಿಗೆ ಬಡಿಯುತ್ತಿತ್ತು. ಇನ್ನೊಂದಿಷ್ಟು ಸೋಪು ಹಾಕಿ ಉಜ್ಜಿಕೊಂಡು ಬರಬೇಕಿತ್ತು ಅನಿಸಿತು. ಬೇಡ ಬಿಡು, ಹೀಗೇ ಇರಲಿ ಆ ವಾಸನೆ ಎನಿಸಿ ಹಾಗೇ ಬಿಟ್ಟೆ.
विश्वास-टिप्पनी
उत्तरभारते क्रियमाणं गोमय-गोवर्धनपूजाम् अन्नकूटं चापि स्मारयति। एकस्यैव कर्मणः कथानानात्वं विस्मयजनकम्।