ತೇಜಸ್ವಿ-ಪತ್ರಮ್

(ತೇಜಸ್ವಿ ಪತ್ರಗಳು 7)

‘ಉದಯರವಿ’ ತಾ. 24.1.56

ಪ್ರೀತಿಯ ಚಿರಂಜೀವಿ ತೇಜಸ್ವಿಗೆ, ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರವಾಯಿತು. ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು. ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳು ಮಾಡದೆ ನಾಲ್ಕಾರು ಸಾರಿ ಶಾಂ ಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು. ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತಾ.ಕರ ಮಾವ ಕಾಗದ ಬರೆದಿದ್ದರು - ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು, ನಿನ. ಜಯಕ್ಕ ಕಾಗದ ಬರೆದಿದ್ದರಂತೆ - ನೀನೇನೋ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ. ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದುವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ. ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು. ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ತಿಳಿಸಿದಂತೆ - ನೀನು ಕನ್ನಡ ಛಂದಸ್ಸಿನ ಸ್ಕೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ದಿ ಹೇಗೆ ಆವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ರೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ. ಪಡೆಯುತ್ತಾನೆ. ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ. ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವ ಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿ ಕೊಡುತ್ತದೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢಮನಸ್ಸಿನಿಂದ ಕಾನ್ನೋನ್ಮುಖಿಯಾದರೆ, ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ. ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಷ್ಟೆ, ಉದ್ದಾರಾಕಾಂಕ್ಷೆ ಈಗ ತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗ ತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವಾ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ. ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸಪೊರೆಯ ಆವೇಶಗೊಳು ಆಗಿದೆ. ಆದರೆ ಅದರದುದು ನಿಜಕ್ಕೂ ನನ್ನ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ.

ಶ್ರೀರಾಮಾಯಣದರ್ಶನಂ ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವದು ಉತ್ತಮ. ಆದರೆ ಅದು ನಿನ್ನಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮ ದಿಂದ ವರಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯ ವಿಕಾಸಗೊಳ್ಳಬೇಕಾದುದು ಅನಿವಾಯ್ಯ. - ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮುಂದಿನ ವರ್ಷ ಮೈಸೂರಿಗೆ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುವುದಕ್ಕೆ ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು. ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು. ಆದರೆ ಅದು ಬದಲಾಗುವವರೆಗೆ ಅದರಲ್ಲಿಯೇ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವ ತನಕ ಅದನ್ನೇ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದಲ್ಲಿ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ SSLCಓದುವಾಗ ಸೈನ್ನನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಹೊತ್ತಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು, ಈಗ ನೀನು ಆರ್ಟ್ಸ್ ತೆಗೆದುಕೊಂಡಿದ್ದೀಯೆ. ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನ ಮಾಡಬಲ್ಲುದು. ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆಯು ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ. ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ ಶ್ರೇಯಸ್ಸು ಅಭ್ಯುದಯ ಸುಖ ಶಾಂತಿ ಏಳೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರವ್ಯ. ನಿನಗೆ ಏನೇನು ನೆರವು ಬೇಕೋ

ಅವನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟರೆ . ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ ಮತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈ ಚಾಚಿ ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರಿಸು, ಅವರ ಆಲೋಚನೆಗಳು : ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು. ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತಾ ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!!

ಆಶೀರ್ವಾದಗಳು.

(ಕುವೆಂಪು * ಹದಿನೆಂಟರ ತೇಜಸ್ವಿ ತಂದೆ ಕುವೆಂಪು ಅವರಿಗೆ ಬರೆದ ಪತ್ರದಲ್ಲಿದ್ದ ಸಾಹಿತ್ಯಾಸಕ್ತಿ, ಅಭೀಷ್ಟೆ, ಉದಾರಾಕಾಂ ಇವುಗಳನ್ನಷ್ಟೇ ಅಲ್ಲ, ಆವಾಗಲೇ ತೇಜಸ್ವಿ ಬರೆದ ಒಂದೆರಡು ಕವಿತೆಗಳು; ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಕುರಿತು ಗಂಭೀರ ಓದು, ವಿಮರ್ಶೆ ಇವುಗಳನ್ನು ಗಮನಿಸಿ ಕುವೆಂಪು ಮಗನಿಗೆ ಬರೆದ ಸುದೀರ್ಘ ಪತ್ರವಿದು.)

7-2-1956

ಚಿ|| ತೇಜಸ್ವಿಗೆ,

ಬೆಂಗಳೂರಿನಲ್ಲಿ ಒಂದು ಹೊಸ ಸ್ಟುಡಿಬೇಕರ್ ಕಾರು Commander ತರಹದ್ದು ಮಾರಾಟಕ್ಕೆ ಬಂದಿದೆ. ಅದರ ನಿಜ ಬೆಲೆ 19,000 ರೂ. ಅದನ್ನು ತೆಗೆದುಕೊಂಡವರು ಅನಿವಾಯ್ಯ ಕಾರಣ ಗಳಿಗಾಗಿ ಅದನ್ನು ಮಾರುತ್ತಾರೆ. ಹೊಸದಾಗಿ ರಿಜಿಸ್ಸಾಗದೆ 500 ಮೈಲಿ ಓಡಿದೆ. ಶ್ರೀನಿವಾಸನ್, ಮರಿಗೌಡರು ಎಲ್ಲರೂ ವಿಚಾರಿಸಿ ಹೇಳಿದ್ದಾರೆ. ನಮ್ಮ ಕಾರನ್ನು 5500 ರೂ.ಗೆ ತೆಗೆದುಕೊಂಡು ಅವರ ಕಾರಿಗೆ 2000 ರೂ. ಬಿಟು ಕೊಡಿಸಿ ಅಂದರೆ ನಾವು 11500 ರೂ ಕೊಡಬೇಕು. ನೀನು ನಾಳೆ ಹೊರಟು ಬರುತ್ತೀಯ ಎಂದು ಹೇಳಿದರು. ಹೌದೆ? ಬಂದರೆ ಬೆಂಗಳೂರಿಗೆ ಹೋಗಿ ಆ ಕಾರನ್ನು ನೋಡಿ ತರಬಹುದು. ನೀನು ನೋಡಬೇಕು ಎಂದು ಹೇಳಿದ್ದೇನೆ. ನಿನ್ನ ರತ್ನಾಕರ ಮಾವನಿಗೂ ತಿಳಿಸು. ಸಮಯವಿದ್ದರೆ ಅವರಿಗೂ ಬಂದು ನೋಡುವಂತೆ ಹೇಳು. ಅವರ ಅಭಿಪ್ರಾಯವನ್ನು ತಿಳಿಸು. ಕಾರನ್ನು ನಾನೂ ನೋಡಿದ್ದೇನೆ. ದೊಡ್ಡದು. ಚೆನ್ನಾಗಿದೆ. ಗ್ಯಾಲನ್ನಿಗೆ 20-22 ಮೈಲಿ ಓಡುತ್ತದಂತೆ. ಯಾವುದಕ್ಕೂ ನಿನ್ನ ರತ್ನಾಕರ ಮಾವನನ್ನು ಕೇಳು. ನಿನ್ನ ಪರೀಕ್ಷೆ ಯಾವಾಗ? ಪರೀಕ್ಷೆಗೆ ತೊಂದರೆಯಾಗುವುದಾದರೆ ಬರುವುದು ಬೇಡ, ನೀನು ಈ ಸಾರಿ ತೇರ್ಗಡೆ ಹೊಂದಲೇ ಬೇಕು. ಯಾವುದಕ್ಕೂ ವಿಚಾರಿಸಿ ಬರೆ.

ನಿನ್ನ ಅಣ್ಣ ಕುವೆಂಪು