१२ परीक्षितपद्धतिः

विश्वास-प्रस्तुतिः

काकानां कोकिलानां च सीमाभेदः कथं भवेत् ।
यदि विश्वसृजा साक्षं न कृता कर्णशष्कुली ॥ १२-१ ॥

मूलम्

काकानां कोकिलानां च सीमाभेदः कथं भवेत् ।
यदि विश्वसृजा साक्षं न कृता कर्णशष्कुली ॥ १२-१ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಈ ಪದ್ಧತಿಯಲ್ಲಿ ಹಲವಾರು ಶ್ಲೋಕಗಳು ಕವಿ, ಕಾವ್ಯಕ್ಕೆ ಸಂಬಂಧಿಸಿವೆ. ಸತ್ಪುರುಷರು ಹೇಳಿಕೆಯ ಮಾತುಗಳಿಗೆ ಬೆಲೆ ಕೊಡದೆ ಹೊರತೋರಿಕೆಗಳಿಗೆ ಮರುಳಾಗದೆ ಪರೀಕ್ಷಿಸಿ ಸತ್ಕೃತಿಗಳನ್ನು ಸಜ್ಜನರನ್ನು ಪುರಸ್ಕರಿಸುತ್ತಾರೆ ಎಂಬುದೇ ಮುಖ್ಯ ಆಶಯ.

ಬ್ರಹ್ಮನು ಕಣ್ಣಿನೊಡನೆ ಕಿವಿಯನ್ನೂ ಸೃಷ್ಟಿಸದಿದ್ದರೆ, ಕಾಗೆಗಳಿಗೂ ಕೋಗಿಲೆಗಳಿಗೂ ಇರುವ ವ್ಯತ್ಯಾಸವು ಹೇಗೆತಾನೆ ತಿಳಿಯುತ್ತಿದ್ದಿತು?

ಶ್ರೀನಿವಾಸಮೂರ್ತಿ - ಟಿಪ್ಪನೀ

ಕಾಗೆ-ಕೋಗಿಲೆಗಳಿಗೆ ಇರುವ ರೂಪಸಾಮ್ಯದ ಬಗ್ಗೆ ರಸಿಕರಿಗೆ ಪ್ರಿಯವಾದ ಸುಭಾಷಿತವೊಂದನ್ನು ಇಲ್ಲಿ ನೆನಪಿಗೆ ತಂದುಕ್ಕೊಳ್ಳಬಹುದು: “ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕಕಾಕಯೋಃ | ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||” “ಕಾಗೆಯೂ ಕಪ್ಪು, ಕೋಗಿಲೆಯೂ ಕಪ್ಪು, ಅವೆರಡಕ್ಕೂ ವ್ಯತ್ಯಾಸವೇನು?” ಎಂಬುದು ಪೂರ್ವಾರ್ಧದ ಅರ್ಥ. ಇದಕ್ಕೆ ಉತ್ತರಾರ್ಧದಲ್ಲಿ ಉತ್ತರವಿದೆ.“ವಸಂತಕಾಲ ಬಂದೊಡನೆಯೇ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ”. ಈ ಸುಭಾಷಿತದ ಭಾವವನ್ನೇ ಮತ್ತೊಂದು ದೃಷ್ಟಿಕೋಣದಿಂದ ನೋಡುತ್ತದೆ ಈ ಶ್ಲೋಕ. ವಸಂತಕಾಲದಲ್ಲೂ ಕಿವುಡನಿಗೆ ಇವೆರಡರ ವ್ಯತ್ಯಾಸ ತಿಳಿಯುವುದಿಲ್ಲವಲ್ಲ! ಇವುಗಳ ಭೇದಜ್ಞಾನ ಮನುಷ್ಯನ ಶ್ರವಣೇಂದ್ರಿಯಜನ್ಯ ತಾನೆ.

विश्वास-प्रस्तुतिः

छन्दःप्रत्ययशुद्धात्मा पश्यन् यतिगणस्थितीः ।
वर्णादिनियतं वृत्तं नियुङ्क्ते गौरवादिवित् ॥ १२-२ ॥

मूलम्

छन्दःप्रत्ययशुद्धात्मा पश्यन् यतिगणस्थितीः ।
वर्णादिनियतं वृत्तं नियुङ्क्ते गौरवादिवित् ॥ १२-२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಪದ್ಯಗಳ ಛಂದಸ್ಸಿನ ನಿರ್ಣಾಯಕಜ್ಞಾನವುಳ್ಳ, ಗುರು-ಲಘು ಅಕ್ಷರಜ್ಞಾನವುಳ್ಳ ಕವಿಯು ಯತಿ,ಗಣ,ಸ್ಥಿತಿ ಇವುಗಳಿಗೆ ಗಮನವನ್ನು ಕೊಟ್ಟು ವರ್ಣ-ಮಾತ್ರಾ ಮೊದಲಾದವುಗಳ ನಿಯಮಕ್ಕೆ ಬದ್ಧವಾದ ವೃತ್ತಗಳನ್ನು ರಚಿಸುತ್ತಾನೆ (೨) ವೇದಗಳಮೇಲಿನ ವಿಶ್ವಾಸದಿಂದ ಪರಿಶುದ್ಧವಾದ ಆತ್ಮವುಳ್ಳವನು, ಸನ್ಯಾಸಿಗಳೇ ಮೊದಲಾದ ಸಮೂಹಗಳಿಗೆ ಗಮನಕೊಟ್ಟು, ಗೌರವವೇ ಮೊದಲಾದ ಗುಣಗಳನ್ನು ತಿಳಿದವನಾಗಿ ವರ್ಣಾಶ್ರಮಧರ್ಮವನ್ನನುಸರಿಸಿ ಚರ್ಯೆಗಳನ್ನು ನಿಯಮಿಸುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಛಂದಃ= (ಛಂದಸ್ಸು, ವೇದ); ಪ್ರತ್ಯಯ= (ಜ್ಞಾನ, ವಿಶ್ವಾಸ); ಯತಿ= (ಛಂದೋಯತಿ, ಸನ್ಯಾಸಿ); (ಗಣ= ಛಂದೋಗಣ, ಗುಂಪು); ವರ್ಣ= (ಅಕ್ಷರವರ್ಣ, ವರ್ಣಧರ್ಮ); ವೃತ್ತ= (ಛಂದೋವೃತ್ತ, ಚರ್ಯೆ); ಗೌರವ= (ಛಂದಸ್ಸಿನ “ಗುರು"ತ್ವ, ಗೌರವ). ಮೊದಲನೆಯ ಅರ್ಥದಲ್ಲಿ ಛಂದಶ್ಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪಾರಿಭಾಷಿಕ ಶಬ್ದಗಳು ಪ್ರಯುಕ್ತವಾಗಿವೆ. ಯತಿ: ಉಚ್ಚರಿಸಲು ಸುಕರವಾಗುವುದಕ್ಕಾಗಿ ಪದ್ಯದಲ್ಲಿ ಮಧ್ಯೆ ನಿಯಮಿಸಿರುವ ವಿರಾಮ ಸ್ಥಾನ. ಗಣ: ಅನುಕ್ರಮವಾದ ಮೂರು ವರ್ಣಗಳ ಗುಂಪು. ಪ್ರತಿ ವರ್ಣವೂ ಲಘು ಅಥವಾ ಗುರುವಾಗಬಹುದಾದುದರಿಂದ ಒಟ್ಟು ಎಂಟು ಗಣಗಳು ಆಗುತ್ತವೆ. ಸ್ಥಿತಿ: ಸ್ಥಿತಿ ಎಂಬ ಪದಕ್ಕೆ ಎಲ್ಲೆ ಎಂಬ ಅರ್ಥವು ಇರುವುದರಿಂದ ಶ್ಲೋಕದ ಪಾದಾನ್ತ್ಯವನ್ನು ಸ್ಥಿತಿ ಎನ್ನಬಹುದು.

विश्वास-प्रस्तुतिः

सुवर्णमपि दुर्वर्णं युक्त्या दर्शयति क्वचित् ।
व्यनक्ति शुद्धिं सहसा शुचिरेकः स्वतैक्ष्ण्यतः ॥ १२-३ ॥

मूलम्

सुवर्णमपि दुर्वर्णं युक्त्या दर्शयति क्वचित् ।
व्यनक्ति शुद्धिं सहसा शुचिरेकः स्वतैक्ष्ण्यतः ॥ १२-३ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಯಾವನೋ ಒಬ್ಬನು ಕೈಚಳಕದಿಂದ ಚಿನ್ನವನ್ನು ತುಚ್ಛಲೋಹವನ್ನಾಗಿ ತೋರಿಸಿದರೆ, ಬೆಂಕಿಯು ತನ್ನ ಚುರುಕಿನಿಂದ ಕೂಡಲೇ ಸುವರ್ಣದ ಶುದ್ಧಿಯನ್ನು ತಿಳಿಯಪಡಿಸುತ್ತದೆ. (೨) ಯಾವನೋ ಒಬ್ಬನು ಉಚ್ಚವರ್ಣದವನನ್ನು ಅಧಮವರ್ಣದವನನ್ನಾಗಿ ಪರಿಗಣಿಸಿದರೆ, ನಿಷ್ಕಲಂಕನಾದವನೊಬ್ಬನು ಆ ಉಚ್ಚವರ್ಣದವನ ಪರಿಶುದ್ಧತೆಯನ್ನು ತನ್ನ ಬುದ್ಧಿವಂತಿಕೆಯಿಂದ ಹೊರಗೆಡಹುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಸುವರ್ಣಂ= (ಚಿನ್ನ, ಉಚ್ಚವರ್ಣ); ಶುಚಿಃ= (ಬೆಂಕಿ, ನಿಷ್ಕಲಂಕ).

विश्वास-प्रस्तुतिः

स्वच्छस्वादुविशुद्धानां स्रोतसां कलशोदधेः ।
दोषं केऽपि न मृष्यंति दुष्टजिह्वेन कल्पितम् ॥ १२-४ ॥

मूलम्

स्वच्छस्वादुविशुद्धानां स्रोतसां कलशोदधेः ।
दोषं केऽपि न मृष्यंति दुष्टजिह्वेन कल्पितम् ॥ १२-४ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ನಾಲಗೆ ಕೆಟ್ಟು ಹೋದವನೊಬ್ಬನು ಬಿಳುಪಾಗಿಯೂ ರುಚಿಕರವಾಗಿಯೂ ನಿರ್ಮಲವಾಗಿಯೂ ಇರುವ ಕ್ಷೀರಸಮುದ್ರದ ಹೊನಲುಗಳಲ್ಲಿ ದೋಷವನ್ನು ಕಲ್ಪಿಸಿದರೆ ಯಾರೂ ಅದನ್ನು ಮನ್ನಿಸುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಗದುಗಿನ ನಾರಣಪ್ಪನ “ಕ್ಷೀರವನು ಕ್ಷಯರೋಗಿ ಹಳಿದರೆ” ಎಂಬ ಸಾಲನ್ನು ಈ ಶ್ಲೋಕ ನೆನಪಿಗೆ ತರುತ್ತದೆ.

विश्वास-प्रस्तुतिः

सहैव भुवने जातं सत्त्वसंस्थापनक्षमम् ।
गृह्यते किमपि स्वस्थैः अन्यत् किमपि जिह्मगैः ॥ १२-५ ॥

मूलम्

सहैव भुवने जातं सत्त्वसंस्थापनक्षमम् ।
गृह्यते किमपि स्वस्थैः अन्यत् किमपि जिह्मगैः ॥ १२-५ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಸಮುದ್ರದಿಂದ ಒಟ್ಟಿಗೆ ಹುಟ್ಟಿದ ಎರಡು ವಸ್ತುಗಳಲ್ಲಿ ಒಂದು, ಶಕ್ತಿಯನ್ನು ಸ್ಥಿರಗೊಳಿಸುವಂತಹುದು (ಅಮೃತ); ಇನ್ನೊಂದು, ಸತ್ತೆಯನ್ನೇ ನಾಶಪಡಿಸುವಂತಹುದು (ಹಾಲಾಹಲ). ಸ್ವರ್ಗಲೋಕದಲ್ಲಿರುವ ದೇವತೆಗಳು ಒಂದನ್ನು ಸ್ವೀಕರಿಸಿದರು, ಸರ್ಪಗಳು ಮತ್ತೊಂದನ್ನು ಸ್ವೀಕರಿಸಿದವು. (೨) ಭೂಮಿಯಲ್ಲಿ ಒಟ್ಟಿಗೆ ಹುಟ್ಟಿದ ಎರಡುವಿಧವಾದ ಕರ್ಮಗಳಲ್ಲಿ ಒಂದು ಸತ್ತ್ವಗುಣವನ್ನು ಸ್ಥಿರಗೊಳಿಸುವಂತಹುದು ಇನ್ನೊಂದು ಸತ್ತ್ವಗುಣವನ್ನು ನಾಶಪಡಿಸುವಂತಹುದು. ಒಂದನ್ನು ಸಮಚಿತ್ತತೆಯುಳ್ಳವರು ಪರಿಗ್ರಹಿಸುತ್ತಾರೆ, ಇನ್ನೊಂದನ್ನು ಕುಟಿಲಮನೋಭಾವದವರು ಪರಿಗ್ರಹಿಸುತ್ತಾರೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಈ ಶ್ಲೋಕದ ಪೂರ್ವಾರ್ಧದಲ್ಲಿ “ದ್ವಯಮ್” ಎಂಬುದನ್ನು ಅಧ್ಯಾಹಾರಮಾಡಿ “ದ್ವಯಂ ಜಾತಮ್’ ಎಂದು ಅರ್ಥಮಾಡಬೇಕು. “ಸಂಸ್ಥಾಪನ” ಎಂಬುದಕ್ಕೆ ಸ್ಥಿರವಾಗಿಸುವುದು, ಅಂತ್ಯಗೊಳಿಸುವದು ಎಂಬ ಎರಡು ಅರ್ಥಗಳು ಇವೆ. ಮೇಲಿನ ಎರಡು ಅರ್ಥಗಳಲ್ಲಿಯೂ ಈ ಎರಡು ಅರ್ಥಗಳೂ ಗ್ರಾಹ್ಯ. ಶ್ಲಿಷ್ಟ ಪದಗಳು: ಭುವನಮ್= (ಸಮುದ್ರ, ಭೂಮಿ); ಸತ್ತ್ವ= (ಶಕ್ತಿ, ಸತ್ತೆ, ಸತ್ತ್ವಗುಣ); ಸ್ವಸ್ಥಃ= (ಸ್ಥಿರಚಿತ್ತ, ದೇವತೆ); ಜಿಹ್ಮಗಃ= (ಸರ್ಪ, ಕುಟಿಲಸ್ವಭಾವದವನು). ಕ್ಷೀರ ಸಮುದ್ರದ ಮಥನವಾದಾಗ ಹುಟ್ಟಿದ ಅಮೃತವು ದೇವತೆಗಳಿಗೆ ದಕ್ಕಿತು, ಹುಟ್ಟಿದ ವಿಷದಲ್ಲಿ ಶಿವನು ಸ್ವೀಕರಿಸಿ ಮಿಕ್ಕಿದುದನ್ನು ಪಾತಾಲದ ಸರ್ಪಗಳೇ ಮೊದಲಾದುವು ನೆಕ್ಕಿದುವು ಎಂಬುದು ಪೌರಾಣಿಕ ಕಥೆ.

विश्वास-प्रस्तुतिः

कलकंठगलास्वाद्ये कामस्यास्त्रे निजाङ्कुरे ।
निंबवृत्तिभिरुत्कीर्णे न चूतः परितप्यते ॥ १२-६ ॥

मूलम्

कलकंठगलास्वाद्ये कामस्यास्त्रे निजाङ्कुरे ।
निंबवृत्तिभिरुत्कीर्णे न चूतः परितप्यते ॥ १२-६ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಕೋಗಿಲೆಗಳಿಗೆ ಆಸ್ವಾದ್ಯವಾದ, ಮನ್ಮಥನಿಗೆ ಅಸ್ತ್ರವಾದ ತನ್ನ ಚಿಗುರನ್ನು ಬೇವಿನಚಿಗುರಿನಲ್ಲೇ ಸಕ್ತವಾದ ಕಾಗೆ ಮತ್ತಿತರ ಪಕ್ಷಿಗಳು ತಿನ್ನದಿದ್ದರೆ ಮಾವಿನಮರಕ್ಕೆ ಖೇದವೇನಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಮಾವಿನ ಚಿಗುರನ್ನು ಕೋಗಿಲೆಯು ತಿನ್ನುವುದೆಂದೂ ಇನ್ನು ಕೆಲ ಹಕ್ಕಿಗಳು ಒಲ್ಲವೆಂದೂ ಹೇಳಿರುವುದು ಕವಿಸಮಯವೋ ನಿಜಕಥನವೋ ತಿಳಿಯುವುದು ಕಷ್ಟ. ಈ ಶ್ಲೋಕವನ್ನು ತಮ್ಮ ತಮಿಳು ಭಾಷೆಯಲ್ಲಿ ರಚಿಸಿದ ರಹಸ್ಯತ್ರಯಸಾರದ ಕಡೆಯಲ್ಲಿ ದೇಶಿಕರು ಉಪಯೋಗಿಸಿದ್ದಾರೆ. ಬಲ್ಲವರು ತಮ್ಮ ಗ್ರಂಥವನ್ನು ಸವಿದರೆ ಸಾಕು, ಉಳಿದವರು ಅದಕ್ಕೆ ಗಮನಕೊಡದಿದ್ದರೆ ತನಗೆ ಯಾವ ಖೇದವೂ ಇಲ್ಲವೆಂಬುದನ್ನು ತಿಳಿಸುವುದಕ್ಕೆ ಅಲ್ಲಿ ಉಪಯುಕ್ತವಾಗಿರುವುದು ಸ್ಪಷ್ಟ.

विश्वास-प्रस्तुतिः

रत्नाभरणयोग्यानां राजान्तःपुरयोषिताम् ।
क्रीडाकङ्कणनिर्माणकाचोऽपि ललितायते ॥ १२-७ ॥

मूलम्

रत्नाभरणयोग्यानां राजान्तःपुरयोषिताम् ।
क्रीडाकङ्कणनिर्माणकाचोऽपि ललितायते ॥ १२-७ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ರತ್ನದ ಒಡವೆಗಳನ್ನು ಹಾಕಿಕ್ಕೊಳ್ಳಲು ಯೋಗ್ಯರಾದ ರಾಜನ ಅನ್ತಃಪುರದ ಸ್ತ್ರೀಯರು ಆಟಕ್ಕಾಗಿ ತೊಡೆದುಕ್ಕೊಂಡಿರುವ ಗಾಜಿನಬಳೆಗಳು ಕೂಡ ಶೋಭಾಯಮಾನವಾಗಿರುತ್ತವೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ರೀಮನ್ತರು ಹಾಕಿಕ್ಕೊಂಡ ಕೃತಕವಜ್ರಗಳ ಆಭರಣಗಳನ್ನು ನಿಜವಾದ ವಜ್ರಾಭರಣಗಳೆಂದು ಜನರು ನಂಬುತ್ತಾರೆ; ಅದೇ ನಿಜವಾದ ವಜ್ರಾಭರಣವನ್ನು ಬಡಹೆಂಗಸೊಬ್ಬಳು ತೊಟ್ಟರೆ ಅದನ್ನು ಕೃತಕ ಆಭರಣವೆಂದು ಹೇಳುತ್ತಾರೆ. ಹೆಸರುಪಡೆದವರು ಉಟ್ಟ ತೊಡಿಗೆಗಳಿಗೆ ನಂಬಲಾರದಷ್ಟು ಬೆಲೆಯನ್ನು ಕೊಟ್ಟು ಹರಾಜಿನಲ್ಲಿ ಕೊಳ್ಳುವುದನ್ನು ನಾವು ಕಾಣುತ್ತೇವೆ. ಒಂದು ಉತ್ತಮ ಪದವಿಯನ್ನು ಹೇಗೋ ಎಂತೋ ಪಡೆದ ಮನುಷ್ಯನಿಗೂ ಆ ಪದವಿಯಲ್ಲಿರುವವರೆಗೂ ಬೆಲೆಯುಂಟು. ಮುಖ್ಯವಾಗಿ, ಪದಾರ್ಥದ ಮತ್ತು ಮನುಷ್ಯನ ಬೆಲೆ ಬಹಳ ಮಟ್ಟಿಗೆ ಸ್ಥಾನಬದ್ಧ ಎಂಬುದೇ ಈ ಶ್ಲೋಕದ ಧ್ವನಿ.

विश्वास-प्रस्तुतिः

मन्ये किन्नरमुख्यानां मौनं जगति सांप्रतम् ।
मशकक्वणितं यत्र वीणास्वनविकल्पितम् ॥ १२-८ ॥

मूलम्

मन्ये किन्नरमुख्यानां मौनं जगति सांप्रतम् ।
मशकक्वणितं यत्र वीणास्वनविकल्पितम् ॥ १२-८ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಸೊಳ್ಳೆಗಳು ಹಾಡುವುದನ್ನೇ ವೀಣೆಯ ಧ್ವನಿ ಎಂದು ನಂಬುವ ಲೋಕದಲ್ಲಿ ಗಂಧರ್ವಶ್ರೇಷ್ಠರು ಸುಮ್ಮನಿರುವುದೇ ಲೇಸು ಎಂದು ಅರಿತಿದ್ದೇನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

“ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ” ಎಂಬ ಗಾದೆಯ ಪ್ರತಿರೂಪ ಇದು. “ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ” ಎಂಬ ಇನ್ನೊಂದು ಚಾಟುಶ್ಲೋಕವನ್ನು ಈ ಶ್ಲೋಕ ನೆನಪು ಮಾಡುತ್ತದೆ. ಅರಸಿಕರ ಮುಂದೆ ತನ್ನ ಕವಿತ್ವವನ್ನು ಹೇಳ ಹೊರಟು ನಿರಾಶನಾದವನ ಉದ್ಗಾರ. “ಅಯ್ಯಾ ಬ್ರಹ್ಮ, ನನ್ನ ಹಣೆಯ ಮೇಲೆ ಏನನ್ನಾದರೂ ಬರೆ, ಆದರೆ ಅರಸಿಕರ ಮುಂದೆ ಕವಿತ್ವವನ್ನು ಹೇಳಿಕೊಳ್ಳುವ ಪಾಡನ್ನು ಮಾತ್ರ ಬರೆಯಬೇಡವಯ್ಯ, ಬರೆಯಬೇಡ” ಎಂದು ಮೊರೆಇಡುತ್ತಾನೆ . ಈ ಚಾಟುವಿನಿಂದಲೇ ಅಮರತ್ವನ್ನು ಪಡೆದ ಕವಿ ಆತ!

विश्वास-प्रस्तुतिः

कटूनामिह सार्थत्वात् कामं भवति संग्रहः ।
तथापि वृत्तिर्न तथा रसज्ञानुमतिक्षमा ॥ १२-९ ॥

मूलम्

कटूनामिह सार्थत्वात् कामं भवति संग्रहः ।
तथापि वृत्तिर्न तथा रसज्ञानुमतिक्षमा ॥ १२-९ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಖಾರವೇ ಮೊದಲಾದ ಭೋಜ್ಯರಸಗಳು ಔಷಧಿಗಳಲ್ಲಿ ಪರಿಣಾಮಕಾರಿಗಳಾದುದರಿಂದ ಉಪಯುಕ್ತವಾಗುವುವೆಂಬುದೇನೋ ನಿಜ. ಹಾಗಾದರೂ ಆ ರಸಗಳ ಕ್ರಿಯೆಯು ನಾಲಗೆಯು ಅಂಗೀಕರಿಸುವಂತಹುದಲ್ಲ. (೨) ಕಾವ್ಯಗಳಲ್ಲಿ ಕ್ರೌರ್ಯವೇ ಮೊದಲಾದ ಅನುಭಾವಗಳು ಅವುಗಳ ಸಾರ್ಥಕತೆಯ ದೃಷ್ಟಿಯಿಂದ ಅತಿಶಯವಾಗಿ ಉಪಯುಕ್ತವಾಗುತ್ತವೆ. ಹಾಗಾದರೂ ಆ ಕ್ರೌರ್ಯವೇ ಮೊದಲಾದವುಗಳ ವ್ಯವಹಾರವು ರಸಿಕರಿಗೆ ಹಿಡಿಸುವಂತಹುದಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಕಟು= (ಖಾರ, ಕ್ರೂರ); ರಸಜ್ಞಾನುಮತಿ= (ರಸಜ್ಞಾ+ಅನುಮತಿ, ರಸಜ್ಞ+ಅನುಮತಿ). ದೃಶ್ಯ- ಶ್ರವ್ಯ ಕಾವ್ಯಗಳಲ್ಲಿ ಕ್ರೂರ, ಭಯಾನಕ ಮುಂತಾದ ಸನ್ನಿವೇಶಗಳು ರಸಿಕರ ಮನಮುಟ್ಟುವಂತೆ ವರ್ಣಿತವಾಗುತ್ತವೆ. ಅಂತಹ ಪ್ರಸಂಗಗಳ ವರ್ಣನೆಯ ಆಸ್ವಾದದ ಫಲ ರಸಿಕನ ಮನಸ್ಸಿನಲ್ಲಿ ಉಂಟಾಗುವ ಆನಂದವೇ. ಹಾಗಾದ ಮಾತ್ರಕ್ಕೆ ರಸಿಕನು ಕ್ರೌರ್ಯಕ್ಕೂ ಭಯಾನಕತೆಗೂ ತನ್ನ ಒಪ್ಪಿಗೆ ಸೂಚಿಸಿದನೆಂದಲ್ಲ. ಮೊದಲನೆಯ ಅರ್ಥದಲ್ಲಿ ಆಯುರ್ವೇದದಲ್ಲಿ ಹೇಳಲಾದ ಆರು ವಿಧವಾದ ಭೋಜ್ಯರಸಗಳ ಪ್ರಸ್ತಾಪವಿದೆ. ಮಧುರ (ಸಿಹಿ), ಲವಣ (ಉಪ್ಪು), ಕಷಾಯ (ಒಗಚು), ಕಟು (ಖಾರ), ಆಮ್ಲ (ಹುಳಿ) ಮತ್ತು ತಿಕ್ತ (ಕಹಿ) ಇವೇ ಆರು ಭೋಜ್ಯ ರಸಗಳು.

विश्वास-प्रस्तुतिः

नादं मङ्गलतालानां नागरीनटनोचितम् ।
कृषिक्षमेषु ग्रामेषु न मूर्च्छयति गीतिवत् ॥ १२-१० ॥

मूलम्

नादं मङ्गलतालानां नागरीनटनोचितम् ।
कृषिक्षमेषु ग्रामेषु न मूर्च्छयति गीतिवत् ॥ १२-१० ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಸಂಗೀತಗಾರನು ಪಟ್ಟಣಗಳ ನಾಟ್ಯಪ್ರಸಂಗಗಳಿಗೆ ಯೋಗ್ಯವಾದ ಮಂಗಲಕರ ತಾಳಗಳ ನಾದವನ್ನು ಬೇಸಾಯದ ಹಳ್ಳಿಗಳಲ್ಲಿ ಬಳಸುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಈ ಶ್ಲೋಕಕ್ಕೆ ಹಲವಾರು ಪಾಠಾಂತರಗಳಿವೆ. ಅವುಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಶ್ರೋತೃಗಳ ಸಂಗೀತಜ್ಞಾನಕ್ಕೆ ತಕ್ಕ ರೀತಿಯಲ್ಲಿ ತನ್ನ ಸಂಗೀತವನ್ನು ಬೆಳೆಸುವುದು ಸಂಗೀತಗಾರನಿಗೂ ಹಿತಕರ, ಶ್ರೋತೃಗಳಿಗೂ ಹಿತಕರ. ಭಾಷಣಕಾರನೂ ಕೂಡ ಸಭೆಗೆ ಬಂದಿರುವವರ ದರ್ಜೆಗೆ ಸರಿಯಾಗಿ ಭಾಷಣ ಮಾಡದಿದ್ದರೆ ಅವನಿಗೆ ಅವಮಾನವಾಗುತ್ತದೆ, ಕೇಳುವವರಿಗೆ ಅನ್ಯಾಯವಾಗುತ್ತದೆ.

ವಿಧಿಮನ್ತರೇಣ ವಿಹಗೇನ ಕುತಃ

ಪಯಸೋರಶಿಕ್ಷ್ಯತ ವಿವೇಕವಿಧಿಃ |

ಕತಿ ವಾ ದಿನಾನಿ ವದ ಪರ್ಯಚಿನೋತ್

ಕಲಶೀಸುತಃ ಕವಲಯನ್ ಜಲಧಿಮ್ ||೧೨-೧೧ ||

विश्वास-प्रस्तुतिः

विधिमन्तरेण विहगेन कुतः
पयसोरशिक्ष्यत विवेकविधिः ।
कति वा दिनानि वद पर्यचिनोत्
कलशीसुतः कवलयन् जलधिम् ॥ १२-११ ॥

मूलम्

विधिमन्तरेण विहगेन कुतः
पयसोरशिक्ष्यत विवेकविधिः ।
कति वा दिनानि वद पर्यचिनोत्
कलशीसुतः कवलयन् जलधिम् ॥ १२-११ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ನೀರ-ಕ್ಷೀರಗಳನ್ನು ವಿವೇಚನೆಯಿಂದ ಬೇರೆಮಾಡುವ ಕೌಶಲ್ಯವನ್ನು ಹಂಸಕ್ಕೆ ವಿಧಿಯಲ್ಲದೆ ಮತ್ತಾರು ಹೇಳಿಕೊಟ್ಟರು? ಅಗಸ್ತ್ಯಋಷಿಯು ಸಮುದ್ರವನ್ನು ಕಬಳಿಸುವುದನ್ನು ಎಷ್ಟು ದಿನಗಳ ಕಾಲ ಅಭ್ಯಾಸ ಮಾಡಿದನು? ಹೇಳು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಕೌಶಲ್ಯ, ಪ್ರಾಗಲ್ಭ್ಯ ಬಹಳ ಮಟ್ಟಿಗೆ ಸಂಸ್ಕಾರಜನ್ಯ, ಅಭ್ಯಾಸ ಅಧ್ಯಯನಗಳಿಂದಲೇ ಅದನ್ನು ಪಡೆಯಲು ಸಾಧ್ಯವಿಲ್ಲ ವೆಂಬುದನ್ನು ಎರಡು ಉದಾಹರಣೆಗಳಿಂದ ಇಲ್ಲಿ ದೇಶಿಕರು ಮನವರಿಕೆಮಾಡಿಕ್ಕೊಡುತ್ತಿದ್ದಾರೆ.

विश्वास-प्रस्तुतिः

भूयसीरपि कलाः कलङ्किताः
प्राप्य कश्चिदपचीयते क्षणैः ।
एकयापि कलया विशुद्धया
योऽपि कोऽपि भजते गिरीशताम् ॥ १२-१२ ॥

मूलम्

भूयसीरपि कलाः कलङ्किताः
प्राप्य कश्चिदपचीयते क्षणैः ।
एकयापि कलया विशुद्धया
योऽपि कोऽपि भजते गिरीशताम् ॥ १२-१२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಒಬ್ಬನು ಅನೇಕ ಕಲಂಕಿತ ಕಲೆಗಳನ್ನು ಪಡೆದು ದಿನ ದಿನಕ್ಕೆ ಕ್ಷೀಣನಾಗುತ್ತಾನೆ; ಮತ್ತಾರೋ ಒಬ್ಬನು ಒಂದೇ ಶುದ್ಧವಾದ ಕಲೆಯನ್ನು ಪಡೆದು ಶಿವನಾಗುತ್ತಾನೆ. (೨) ವಿದ್ಯಾಭಿಲಾಷಿಯೊಬ್ಬನು ಅನೇಕವಾದ ವಿದ್ಯೆ-ಶಾಸ್ತ್ರಗಳನ್ನು ಸಂಶಯ-ಅಪಾರ್ಥ ಇವೇ ಮೊದಲಾದ ದೋಷಗಳ ಸಹಿತವಾಗಿ ಕಲಿತುಕ್ಕೊಂಡು, ನಿಷ್ಕರ್ಷಕಜ್ಞಾನವನ್ನು ಪಡೆಯದೆ ಅವುಗಳನ್ನು ದಿನ ದಿನಕ್ಕೆ ಕಳೆದುಕ್ಕೊಳ್ಳುತ್ತಾನೆ. ಮತ್ತೊಬ್ಬನು ಒಂದೇ ವಿದ್ಯೆಯಲ್ಲಿ ಪಾರಙ್ಗತನಾಗಿ ಭಾಷೆಯಲ್ಲಿ ಪ್ರಭುತ್ವವನ್ನು ಪಡೆಯುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಕಲಾ= (ಚಂದ್ರನ ಹದಿನಾರನೆಯ ಒಂದು ಭಾಗ, ಕುಶಲವಿದ್ಯೆ); ಗಿರೀಶ= (ಶಿವ, ಗಿರಿ+ಈಶ= ಭಾಷೆಯಲ್ಲಿ ಪ್ರಭು). ಮೊದಲನೆಯ ಅರ್ಥದಲ್ಲಿ, “ಒಬ್ಬನು” ಎಂಬುದು ಚಂದ್ರನನ್ನು ಉದ್ದೇಶಿಸಿದುದು, “ಮತ್ತೊಬ್ಬನು” ಎಂಬುದು ಶಿವನನ್ನು ಉದ್ದೇಶಿಸಿದುದು ಎಂಬುದು ಸ್ಪಷ್ಟ. ಚಂದ್ರನು ಹದಿನಾರು ಕಲೆಗಳನ್ನು ಹೊತ್ತು ಕೃಷ್ಣಪಕ್ಷದಲ್ಲಿ ಕ್ಷೀಣನಾಗುವುದು, ಶಿವನು ಚಂದ್ರಚೂಡನಾಗಿ ಒಂದುಕಲೆಯನ್ನು ಹೊತ್ತಿರುವುದು ಪ್ರಸ್ತಾಪಿತವಾಗಿದೆ. ಹಿಂದಿನ ಶ್ಲೋಕದಲ್ಲಿ ಕುಶಲತೆಗೆ ಸಂಸ್ಕಾರದ ಮಹತ್ವವನ್ನು ಒತ್ತಿ ಹೇಳಲಾಗಿದೆ. ಈ ಶ್ಲೋಕದಲ್ಲಿ, ಅನೇಕ ಕಲೆಗಳಲ್ಲಿನ ಸಂಶಯಗ್ರಸ್ತ ಜ್ಞಾನಕ್ಕಿಂತ ಒಂದೇ ಕಲೆಯಲ್ಲಿನ ನಿಷ್ಕರ್ಷಕ ಜ್ಞಾನ ಲೇಸು ಎಂಬುದನ್ನು ಹೇಳಲಾಗಿದೆ. ಇಂಗ್ಲಷಿನಲ್ಲಿನ ಗಾದೆ " jack of all and master of none " ಎಂಬುದನ್ನು ನೆನಪು ಮಾಡಿಕ್ಕೊಳ್ಳಬಹುದು.

|| ಇತಿ ಪರೀಕ್ಷಿತಪದ್ಧತಿಃ ದ್ವಾದಶೀ ||

|| इति परीक्षितपद्धतिर्द्वादशी ॥

विश्वास-प्रस्तुतिः

सैषा सुभाषितानां माला महनीयवर्णवृत्तगुणा ।
भावुकसंख्यारूढा प्रियपद्धतिभूता जयति ॥

मूलम्

सैषा सुभाषितानां माला महनीयवर्णवृत्तगुणा ।
भावुकसंख्यारूढा प्रियपद्धतिभूता जयति ॥

ಭಾ: (೧) ಶ್ಲಾಘಿತವಾದ ರತ್ನಗಳ ಇಂತಹ ಅಮೋಘವಾದ ಹಾರವು ಮಂಗಳಕರವಾಗಿಯೂ ವರ್ಣರಂಜಿತವಾಗಿಯೂ ಗುಂಡಗಾಗಿಯೂ ಇರುವ ದಾರವುಳ್ಳದ್ದಾಗಿ, ಮೆಚ್ಚಿದ ಅನೇಕಜನರಿಂದ ಧೃತವಾಗಿ ಇಷ್ಟವಾದವರ ಶ್ರೇಣಿಯಿಂದ ಅಲಂಕರಿಸಲ್ಪಟ್ಟದ್ದಾಗಿ ಮೇಲ್ಮೆಯನ್ನು ಹೊಂದುತ್ತದೆ. (೨) ಸುಭಾಷಿತಗಳ ಈ ಅಮೋಘವಾದ ಮಾಲೆಯು ಘನವಾದ ವರ್ಣಗಳಿಂದಲೂ, ಆರ್ಯಾ-ಅನುಷ್ಟುಪ್ ಮೊದಲಾದ ವೃತ್ತಗಳಿಂದಲೂ, ಓಜಸ್ಸು-ಪ್ರಸಾದ ಮೊದಲಾದ ಗುಣಗಳಿಂದಲೂ ಕೂಡಿದುದಾಗಿ, ರಸಿಕರ ಜ್ಞಾನದಲ್ಲಿ ಬೇರೂರಿ, ಒಪ್ಪುವ ಪದ್ಧತಿಗಳಿಂದ ಅಲಂಕೃತವಾಗಿ ಸರ್ವೋತ್ಕೃಷ್ಟವಾಗಿರುತ್ತದೆ.

ಟಿ: ಶ್ಲಿಷ್ಟ ಪದಗಳು: ಸುಭಾಷಿತ= (ಶ್ಲಾಘಿತ, ಸುಭಾಷಿತ); ವರ್ಣ= (ಬಣ್ಣ, ಅಕ್ಷರವರ್ಣ); ವೃತ್ತ= (ಗುಂಡಗಿರುವ, ಪದ್ಯವೃತ್ತ); ಗುಣ= (ದಾರ, ಓಜಸ್ಸೇ ಮೊದಲಾದ ಕಾವ್ಯಗುಣ); ಸಂಖ್ಯಾ= (ಅನೇಕ, ಜ್ಞಾನ); ಪದ್ಧತಿ= (ಶ್ರೇಣಿ, ಕಾವ್ಯವಿಭಾಗ). ಇದು ಕಾವ್ಯದ ನಿಗಮನಶ್ಲೋಕ. ಹನ್ನೆರಡು ಪದ್ಧತಿಗಳಾದಮೇಲೆ ಯಾವ ಪದ್ಧತಿಗೂ ಸೇರದಂತೆ ಕಾವ್ಯದ ಕಡೆಯ ಶ್ಲೋಕವೆಂದು ಪರಿಗಣಿಸುವುದು ಸೂಕ್ತವೆನಿಸುತ್ತದೆ. ಕಟಪಯಾದಿಸಂಜ್ಞೆಯ ಪ್ರಕಾರ “ಭಾವುಕಸಂಖ್ಯಾ” ಎಂಬಲ್ಲಿ “ಭಾವುಕ” ಪದವು ೧೪೪ ಎಂಬ ಸಂಖ್ಯೆಯನ್ನೂ,“ಪ್ರಿಯಪದ್ಧತಿ” ಎಂಬಲ್ಲಿ “ಪ್ರಿಯ” ಪದವು ೧೨ ಎಂಬ ಸಂಖ್ಯೆಯನ್ನೂ ಸೂಚಿಸಿ, ಈ ಕಿರುಕಾವ್ಯದಲ್ಲಿ ೧೪೪ ಶ್ಲೋಕಗಳಿರುವುವೆಂದೂ, ೧೨ ಪದ್ಧತಿಗಳಿರುವುವೆಂದೂ ತಿಳಿಸಲಾಗಿದೆ. ಕಟಪಯಾದಿ ಸಂಜ್ಞೆಯ ವಿವರ ಈ ರೀತಿ ಇದೆ:

ಕ,ಟ,ಪ,ಯ=೧; ಖ,ಠ,ಫ,ರ=೨; ಗ,ಡ,ಬ,ಲ=೩; ಘ,ಢ,ಭ,ವ=೪; ಙ,ಣ,ಶ=೫; ಚ,ತ,ಷ=೬; ಛ,ಥ,ಸ=೭; ಜ,ದ,ಹ=೮; ಝ,ಧ=೯; ಞ,ನ=೦. ಪದದಲ್ಲಿನ ವ್ಯಞ್ಜನಗಳಿಗೆ ಈ ಕೋಷ್ಟಕದ ಪ್ರಕಾರ ಬೆಲೆಕೊಡಬೇಕು. ಸ್ವರಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳ ಅರ್ಧಾಕ್ಷರಗಳೂ ಲೆಕ್ಕಕ್ಕೆ ಬರುವುದಿಲ್ಲ. ಹೀಗೆ ಬೆಲೆಕೊಟ್ಟು ಬಲದಿಂದ ಎಡಕ್ಕೆ ಓದಬೇಕು. ಇದರ ಪ್ರಕಾರ “ಭಾವುಕ” ಪದಕ್ಕೆ ೧೪೪ ಎಂಬ ಬೆಲೆ ದೊರಕುತ್ತದೆ, “ಪ್ರಿಯ” ಎಂಬುದಕ್ಕೆ ೧೨ ಎಂಬ ಬೆಲೆ ದೊರಕುತ್ತದೆ. ಕಾವ್ಯದ ಎರಡನೆಯ ಶ್ಲೋಕದಲ್ಲಿ ಕೂಡ ಕಾವ್ಯದಲ್ಲಿರುವ ಶ್ಲೋಕಗಳ ಸಂಖ್ಯೆಯು ಸೂಚಿತವಾಗಿದೆಯೆಂದು ವ್ಯಾಖ್ಯಾನಕಾರರು ಹೇಳುತ್ತಾರೆ. ಆದರೆ, ಸಂಖ್ಯೆಯನ್ನು ಎಡದಿಂದ ಬಲಕ್ಕೆ ಓದಬೇಕು. ಈ ಪ್ರಕಾರ “ಕವಿಭಿಃ” ಎಂಬ ಪದವು ೧೪೪ನ್ನೂ, “ಪರಿ” ೧೨ನ್ನೂ ಸೂಚಿಸುತ್ತವೆ.

॥ इति कवितार्किकसिंहस्य सर्वतन्त्रस्वतन्त्रस्य
श्री वेङ्कटनाथस्य वेदान्ताचार्यस्य कृतिषु
सुभाषितनीवी सम्पूर्णा ॥