विश्वास-प्रस्तुतिः
अपङ्किलधियः शुद्धाः साधुमानसवृत्तयः ।
वमन्ति श्रुतिजीवातुं ध्वनिं नवरसास्पदम् ॥ ११-१ ॥
मूलम्
अपङ्किलधियः शुद्धाः साधुमानसवृत्तयः ।
वमन्ति श्रुतिजीवातुं ध्वनिं नवरसास्पदम् ॥ ११-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಈ ಪದ್ಧತಿಯಲ್ಲಿ ದೇಶಿಕರು ಒಳ್ಳೆಯ ಕವಿಯಲ್ಲಿರುವ ಗುಣಗಳನ್ನು ವಿವರಿಸುತ್ತಾರೆ.
(೧) ಕೆಸರಿನಲ್ಲಿ ಮನಸ್ಸು ಹೋಗದ, ಬೆಳ್ಳಗಿರುವ, ರಮ್ಯವಾದ ಮಾನಸಸರೋವರದಲ್ಲಿ ಇರುವ, ಹಂಸಪಕ್ಷಿಗಳು ಹೊಸ ಹೊಸ ಆಹ್ಲಾದಕತೆಗೆ ಎಡೆಕೊಡುವ, ಶ್ರುತಿಗೆ ಧಾರಕವಾದ ಧ್ವನಿಯನ್ನು ಹೊರಡಿಸುತ್ತವೆ. (೨) ನಿರ್ಮಲಮನಸ್ಸುಳ್ಳ, ಶುದ್ಧರಾದ, ಸತ್ಪುರುಷರಲ್ಲೇ ಸಕ್ತವಾದ ಮನಸ್ಸುಳ್ಳ ಕವಿಗಳು ವೇದಗಳಿಗೆ ಉಪಬೃಹ್ಮಣ ರೂಪವಾದ, ನವರಸಗಳಿಂದ ಕೂಡಿದ, ಧ್ವನಿಪ್ರಧಾನವಾದ ಉತ್ತಮಕಾವ್ಯವನ್ನು ಹೊರಗೆಡಹುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಪಙ್ಕಿಲ= (ಕೆಸರಾದ, ಪಾಪಯುಕ್ತ); ಶುದ್ಧ= (ಬೆಳ್ಳನೆಯ, ನಿರ್ಮಲ); ಸಾಧು= (ರಮ್ಯ, ಸಜ್ಜನ); ಮಾನಸ= (ಮಾನಸ ಸರೋವರ, ಮನಸ್ಸು); ಶ್ರುತಿ= (ಗಾನ ಶ್ರುತಿ, ವೇದ); ಧ್ವನಿ= (ಅವ್ಯಕ್ತ ಶಬ್ದ, ಕಾವ್ಯಧ್ವನಿ); ನವರಸ= (ಹೊಸ ಆಹ್ಲಾದಕತೆ, ಒಂಬತ್ತು ಕಾವ್ಯರಸಗಳು). ಇಲ್ಲಿ ದೇಶಿಕರು ಉತ್ತಮಕವಿಗೆ ಕೊಟ್ಟಿರುವ ವಿಶೇಷಣಗಳನ್ನೂ ಅಂತಹ ಕವಿಯು ಸೃಜಿಸುವ ಕಾವ್ಯದ ವಿಶೇಷಣಗಳನ್ನೂ ಗಮನಿಸಬೇಕು. ಆತ ನಿರ್ಮಲಮನಸ್ಕ, ಸಜ್ಜನರಲ್ಲಿ ಆಸ್ಥೆಯಿರುವವ; ಆತನ ಕಾವ್ಯ ವೇದವಿಹಿತಧರ್ಮದ ಮೌಲ್ಯವನ್ನು ಎತ್ತಿಹಿಡಿಯಬೇಕು, ನವರಸಗಳಿಂದ ರಞ್ಜಿತವಾಗಿ ವ್ಯಙ್ಗ್ಯಪ್ರಧಾನವಾಗಿರಬೇಕು. ದೇಶಿಕರು ದುರಾಚಾರಿಯ ಕಾವ್ಯ ಎಷ್ಟೇ ಮನೋರಞ್ಜಕವಾಗಿರಲಿ ಅದಕ್ಕೆ ಬೆಲೆಯನ್ನು ಕೊಡುವವರಲ್ಲವೆಂಬುದು ಸ್ಪಷ್ಟ. ಮಹಾಭಗವದ್ಭಕ್ತರಾಗಿ, ನಿರ್ಲಿಪ್ತರಾಗಿ ಕಾವ್ಯಗಳನ್ನು ಸೃಜಿಸಿದವರಲ್ಲಿ ದೇಶಿಕರು ಅಗ್ರೇಸರರೇ ಸರಿ.
विश्वास-प्रस्तुतिः
महापुरुषबद्धात्मा सर्गादिप्रथितोदयः ।
वश्यावदातया वाचा सेव्यते चतुराननः ॥ ११-२ ॥
मूलम्
महापुरुषबद्धात्मा सर्गादिप्रथितोदयः ।
वश्यावदातया वाचा सेव्यते चतुराननः ॥ ११-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಪುರುಷೋತ್ತಮನಾದ ಶ್ರೀಮನ್ನಾರಾಯಣನಲ್ಲಿ ನೆಟ್ಟ ಮನಸ್ಸುಳ್ಳ, ಸೃಷ್ಟಿಯ ಮೊದಲಿನಲ್ಲಿ ಹೆಸರಾಂತ ಆವಿರ್ಭಾವವುಳ್ಳ ಚತುರ್ಮುಖ ಬ್ರಹ್ಮನನ್ನು ಅನುಕೂಲಳೂ ಶ್ವೇತವರ್ಣದವಳೂ ಆದ ಸರಸ್ವತಿಯು ಸೇವಿಸುತ್ತಾಳೆ. (೨) ಪುರುಷಶ್ರೇಷ್ಠರಲ್ಲಿ ನಿರತವಾದ ಮನಸ್ಸುಳ್ಳ, ಕಾವ್ಯದ ಸರ್ಗ, ಉಚ್ಚ್ವಾಸ, ಅಙ್ಕವೇ ಮೊದಲಾದ ಪ್ರಸಿದ್ಧ ವಿಭಾಗಗಳ ಉದಯಕ್ಕೆ ಕಾರಣನಾದ, ಸಮರ್ಥವಾದ ವದನವುಳ್ಳ ಕವಿಯನ್ನು ವಿಧೇಯವಾದ ಮತ್ತು ಶುಭ್ರವಾದ ವಾಕ್ಕು ಸೇವಿಸುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಸರ್ಗ= (ಸೃಷ್ಟಿ, ಕಾವ್ಯವಿಭಾಗ); ಅವದಾತ= (ಶ್ವೇತವರ್ಣ, ಶುಭ್ರ). ವಾಕ್= (ಸರಸ್ವತಿ, ಮಾತು); ಚತುರಾನನಃ = (ಬ್ರಹ್ಮ, ಸಮರ್ಥವಾದ ವದನವುಳ್ಳ). ಭಾರತೀಯ ಕಾವ್ಯಪರಂಪರೆಯಲ್ಲಿ ಕಾವ್ಯಗಳು ಪುರುಷಶ್ರೇಷ್ಠರನ್ನು ಕುರಿತು ಬರೆದವಾಗಿರಬೇಕು. ಕಾವ್ಯದ ನಾಯಕ ಹೆಸರಾಂತ ರಾಜನೋ ಅಥವಾ ದೈವಾಂಶವ್ಯಕ್ತಿಯೋ ಆಗಿರುತ್ತಾನೆ.
विश्वास-प्रस्तुतिः
विशुद्धवर्णललिता गुणालङ्कारशालिनी ।
सरसा भारती यस्य स सत्ये कः प्रतिष्ठितः ॥ ११-३ ॥
मूलम्
विशुद्धवर्णललिता गुणालङ्कारशालिनी ।
सरसा भारती यस्य स सत्ये कः प्रतिष्ठितः ॥ ११-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಶ್ವೇತವರ್ಣದಿಂದ ಮನೋಹರಳಾದ ಸದ್ಗುಣಗಳಿಂದಲೂ ಆಭರಣಾದ್ಯಲಙ್ಕಾರಗಳಿಂದಲೂ ಒಪ್ಪುತ್ತಿರುವ ಸುಂದರಳಾದ ಸರಸ್ವತೀದೇವಿಯು ಯಾರವಳೋ ಆ ಬ್ರಹ್ಮನು ಸತ್ಯಲೋಕದಲ್ಲಿ ನೆಲೆಸಿದ್ದಾನೆ (೨) ದೋಷಗಳಿಲ್ಲದ ಅಕಾರಾದಿ ವರ್ಣಗಳಿಂದ ರಮಣೀಯವಾದ, ಓಜಸ್ಸೇ ಮೊದಲಾದ ಗುಣಗಳಿಂದಲೂ ಉಪಮಾನವೇ ಮೊದಲಾದ ಅಲಙ್ಕಾರಗಳಿಂದಲೂ ತುಂಬಿ ಒಪ್ಪುತ್ತಿರುವ, ಶೃಙ್ಗಾರವೇ ಮೊದಲಾದ ರಸಗಳಿಂದ ಕೂಡಿದ ವಾಕ್ಕು ಯಾರಿಗೆ ಒಲಿದಿದೆಯೋ, ಅಂತಹವನು ಯಾರು ತಾನೆ ಯಥಾರ್ಥತೆಯಲ್ಲಿ ನೆಲೆಸಿರುತ್ತಾನೆ? [ಆತನೊಬ್ಬನು ಸತ್ಯದಲ್ಲಿ [ಪರಬ್ರಹ್ಮನಲ್ಲಿ] ನೆಲೆಸಿದ್ದಾನೆ].
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಸರಸಾ= (ಸುಂದರಳಾದ, ಶೃಙ್ಗಾರವೇ ಮೊದಲಾದ ರಸಗಳಿಂದ ಕೂಡಿದ); ಸತ್ಯೇಕಃ= (ಸತಿ+ಏಕಃ, ಸತ್ಯೇ+ಕಃ); ಕಃ= (ಬ್ರಹ್ಮ, ಯಾರು). ಕೆಲವು ಭಾರತೀಯ ಕಾವ್ಯ ಮೀಮಾಂಸಕರು ಕಾವ್ಯದಲ್ಲಿ ಓಜಸ್ಸು, ಮಾಧುರ್ಯ ಮತ್ತು ಪ್ರಸಾದವೆಂಬ ಶಬ್ದಾರ್ಥನಿಷ್ಠವಾದ ಗುಣಗಳಿರಬೇಕೆಂದು ಹೇಳುತ್ತಾರೆ. ಮತ್ತೆ ಕೆಲವರು ಹತ್ತು ಗುಣಗಳನ್ನು ಎಣಿಸುತ್ತಾರೆ. ಕಾವ್ಯಮೀಮಾಂಸಕನೊಬ್ಬನ ಮಾತನ್ನು ಇಲ್ಲಿ ನೆನೆಯಬಹುದು:
" ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ | ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ ||" “ಕಾವ್ಯವೆಂಬ ವಿಶ್ವಕ್ಕೆ ಕವಿಯೇ ಬ್ರಹ್ಮನು. ಅವನಿಗೆ ರುಚಿಸಿದಂತೆ ಈ ವಿಶ್ವವನ್ನು ಬದಲಿಸುತ್ತಾನೆ” ಎಂಬುದು ಇದರ ಅರ್ಥ. ದೇಶಿಕರೂ ಕೂಡ ಅದನ್ನೇ ಒತ್ತಿ ಹೇಳುತ್ತಿದ್ದಾರೆ. ಕವಿ ಯಥಾರ್ಥತೆಯ ಸಂಕೋಲೆಯನ್ನು ಕಳಚಿಕ್ಕೊಂಡವನು.
विश्वास-प्रस्तुतिः
कुतश्चिदचलस्थानात् प्रयांती सागरांतिकम्।
दृश्यादृश्यतनुर्भाति श्रुत्यभीष्टा सरस्वती ॥ ११-४ ॥
मूलम्
कुतश्चिदचलस्थानात् प्रयांती सागरांतिकम्।
दृश्यादृश्यतनुर्भाति श्रुत्यभीष्टा सरस्वती ॥ ११-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಯಾವುದೋ ಒಂದು ಬೆಟ್ಟದ ಎಡೆಯಿಂದ ಸಾಗರದವರೆಗೂ ಹೋಗುತ್ತಿರುವ, ವೇದದಲ್ಲಿ ಪ್ರಶಂಸಿತವಾದ [ಭೋರ್ಗರೆತದಿಂದ ಕಿವಿಗೆ ಇಂಪಾದ] ಸರಸ್ವತೀ ನದಿಯು [ನದಿಯು] ಕೆಲವು ಕಡೆ ಮರೆಯಾಗಿ ಕೆಲವು ಕಡೆ ಕಾಣಿಸಿಕ್ಕೊಂಡು ಕಂಗೊಳಿಸುತ್ತದೆ. (೨) ಸ್ಥಿರವಾದ ಕಾರಣವುಳ್ಳ ಯಾವನೋ ಒಬ್ಬ ಮಹಾಕವಿಯಿಂದ ಹೊರಬಂದು ಸಾಗರಪರ್ಯಂತ ಹರೆಡಿರುವ, ಕಿವಿಗೆ ಆನಂದಕರವಾದ ವಾಗ್ಝರಿಯು ಕೆಲವು ಕಡೆ ಅಸ್ಪಷ್ಟವಾಗಿಯೂ ಕೆಲವು ಕಡೆ ಸ್ಪಷ್ಟವಾಗಿಯೂ ಕಂಗೊಳಿಸುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದ: ಶ್ರುತಿ= (ವೇದ, ಕಿವಿ). ಬೆಟ್ಟದಿಂದ ಹರಿದು ಸಾಗರವನ್ನು ಸೇರುವ ನದಿಯು ಅದರ ಭೋರ್ಗರೆ ಕೇಳಿಬಂದರೂ ಕೆಲವು ಕಡೆ ಕಾಣಿಸಿಕ್ಕೊಳ್ಳುತ್ತದೆ ಮತ್ತೆ ಕೆಲವು ಕಡೆ ಕಾಣಿಸಿಕ್ಕೊಳ್ಳದೆ ಅಂತರಗಂಗೆಯಾಗಿ ಹರಿಯುತ್ತದೆ. ಅದೇ ರೀತಿ ಮಹಾಕವಿಯ ಕಾವ್ಯ ಶ್ರವಣಾನಂದಕರವಾಗಿದ್ದರೂ ಕೆಲವು ಕಡೆ ಅರ್ಥ ಸ್ಪಷ್ಟ ವಾಗುವುದಿಲ್ಲ, ಮತ್ತೆ ಕೆಲವು ಕಡೆ ಬಹಳ ಸ್ಪಷ್ಟವಾಗಿರುತ್ತದೆ.
विश्वास-प्रस्तुतिः
प्रभूतोदितमुक्ताभिः भूयते सूक्तिशुक्तिभिः ।
सुदृशां कर्णपूराय तादृक्त्वं फलभेदतः ॥ ११-५ ॥
मूलम्
प्रभूतोदितमुक्ताभिः भूयते सूक्तिशुक्तिभिः ।
सुदृशां कर्णपूराय तादृक्त्वं फलभेदतः ॥ ११-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸುಕವಿಯ ಕಥನಗಳೇ ಮುತ್ತುಗಳು; ಅವನ ಸುಭಾಷಿತಗಳೇ ಮುತ್ತಿನ ಚಿಪ್ಪುಗಳು. (೧) ಈ ಮುತ್ತಿನ ಚಿಪ್ಪುಗಳು ಸುನಯನೆಯರ ಕರ್ಣಾಭರಣವಾಗಿ ಶೋಭಿಸುತ್ತವೆ. ಈ ಶೋಭೆಗೆ ಕಾರಣ ಕರ್ಣಾಭರಣದ ಮುತ್ತುಗಳನ್ನು ಭೇದಿಸಿರುವುದರಿಂದ, ಅಂದರೆ ಅವುಗಳಲ್ಲಿ ರಂಧ್ರ ಮಾಡಿರುವುದರಿಂದ. (೨) ಕವಿಯ ಸದುಕ್ತಿಗಳು ಪ್ರಾಜ್ಞರಿಗೆ ಶ್ರವಣಸುಖವನ್ನು ಕೊಡುತ್ತವೆ. ಈ ಶ್ರವಣಸುಖಕ್ಕೆ ಕಾರಣ ಸುಕವಿಯ ಕಥನಗಳ ಧರ್ಮ-ಅರ್ಥ-ಕಾಮ- ಮೋಕ್ಷಫಲಗಳ ವೈವಿಧ್ಯತೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಶ್ಲೋಕದಲ್ಲಿ ರೂಪಕ-ಶ್ಲೇಷೆಗಳ ಸಂಕರವಿದೆ. ಪೂರ್ವಾರ್ಧದಲ್ಲಿ ರೂಪಕವಾಗಿ ಆರಂಭವಾದುದು ಉತ್ತರಾರ್ಧದಲ್ಲಿ ಶ್ಲೇಷೆಯಾಗಿ ಪರಿಣಮಿಸಿದೆ. ಆದುದರಿಂದ ಭಾವಾರ್ಥದಲ್ಲಿ ಅದೇ ರೀತಿ ಪೂರ್ವಾರ್ಧದ ರೂಪಕ ಮತ್ತು ಉತಾರಾರ್ಧದ ಶ್ಲೇಷೆ ಇವುಗಳ ಪ್ರತಿಫಲನವಿದೆ.
विश्वास-प्रस्तुतिः
प्रतीपमवमृष्टापि स्वामभिख्यां न मुञ्चति ।
कालिकेव सतां सूक्तिः तादृशश्रुतिनन्दनी ॥ ११-६ ॥
मूलम्
प्रतीपमवमृष्टापि स्वामभिख्यां न मुञ्चति ।
कालिकेव सतां सूक्तिः तादृशश्रुतिनन्दनी ॥ ११-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸತ್ಪುರುಷರ ಸದುಕ್ತಿಗಳು, (ಕೆಲವರು) ವಿರುದ್ಧಾರ್ಥವನ್ನು ಕಲ್ಪಿಸಿ ಗೇಲಿ ಮಾಡಿದರೂ ಕೂಡ, ಯಾವ ರೀತಿ ಮೋಡದ ಸಾಲುಗಳು (ಕಾಲಿಕಾ) ಎದುರಿನ ಗಾಳಿಯಿಂದ ದಿಕ್ಕು ಬದಲಿಸಿದರೂ ಕೂಡ ತಮ್ಮ ಯಶಸ್ಸಿಗೆ ಕುಂದು ಬಾರದಂತೆ ತಮ್ಮ ಮಳೆಗರೆಯುವ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸಿ ಮಳೆಗೆ ಕಾದಿರುವವರು ಮಳೆಯ ಶಬ್ದದಿಂದ ಸಂತುಷ್ಟರಾಗುವಂತೆ ಮಾಡುತ್ತದೋ ಅದೇ ರೀತಿ ವೇದೋಪಬೃಹ್ಮಣಗಳಾಗಿ ವೇದಗಳನ್ನು ಸಂತೋಷಪಡಿಸಿ ತನ್ನ ಖ್ಯಾತಿಯನ್ನು ಕಳೆದುಕ್ಕೊಳ್ಳುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಶ್ಲೋಕದಲ್ಲಿ ದೇಶಿಕರು ಸುಕವಿಯ ಕಾವ್ಯ ವೇದಾರ್ಥಬಾಹಿರವಾಗಿರಬಾರದು ಎಂಬುದನ್ನು ಮತ್ತೆ ಒತ್ತಿ ಹೇಳಿದ್ದಾರೆ. ಈ ಶ್ಲೋಕದ “ಕಾಲಿಕಾ” ಎಂಬ ಉಪಮಾನಕ್ಕೆ ಇನ್ನೊಂದು ವಿಧವಾಗಿಯೂ ಅರ್ಥ ಮಾಡಬಹುದು. ಅದು ಹೀಗೆ: ಹೇಗೆ ಕಾಲಿಕಾ ಎಂಬ ಪದವನ್ನು ಹಿಂದು ಮುಂದಾಗಿ ಓದಿದರೂ ಆ ಪದವು ವ್ಯತ್ಯಸ್ತವಾಗದೆ ಶ್ರವಣರೋಚಕವಾಗಿರುವುದೋ ಅದೇ ರೀತಿ—.
विश्वास-प्रस्तुतिः
अपार्थेतरयुक्तानां व्याससंग्रहशालिनाम् ।
अपि गोपालगीतानां निवेशो निगमादिषु ॥ ११-७ ॥
मूलम्
अपार्थेतरयुक्तानां व्याससंग्रहशालिनाम् ।
अपि गोपालगीतानां निवेशो निगमादिषु ॥ ११-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಪಾರ್ಥನಿಗಾಗಿ ಪ್ರವೃತ್ತವಾದ ವ್ಯಾಸಮಹರ್ಷಿಗಳಿಂದ ಸಂಗ್ರಹಿಸಲ್ಪಟ್ಟ ಗೋಪಾಲಕೃಷ್ಣನ ಗೀತಾವಾಕ್ಯಗಳಿಗೆ ವೇದಾದಿ ಧರ್ಮಗ್ರಂಥಗಳಲ್ಲಿಯೂ ಸ್ಥಾನವಿದೆ. (೨) ಸಮೀಚೀನವಾದ ಅರ್ಥವುಳ್ಳ, ವಿಸ್ತರಣೆ ಮತ್ತು ಸಂಗ್ರಹ ಇವೆರಡನ್ನೂ ಒಳಗೊಂಡ ಗೊಲ್ಲರ ಹಾಡುಗಳಿಗೂ ಕೂಡ ಉಪದೇಶಗಳಲ್ಲಿ ಸ್ಥಾನವಿರುವುದು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಅಪಾರ್ಥ= (ಪಾರ್ಥನಲ್ಲದ, ಕೆಟ್ಟ ಅರ್ಥ); ವ್ಯಾಸ= (ವ್ಯಾಸಮಹರ್ಷಿ, ವಿಸ್ತರಣೆ); ನಿಗಮ= (ವೇದ, ಉಪದೇಶ). ಕವಿಯ ಕವಿತ್ವ ಅವನ ಹುಟ್ಟಿನ ಮೇಲೆ ಅವಲಂಬಿಸಿಲ್ಲ. ಕಾಳಿದಾಸನೇ ಹುಟ್ಟಿನಲ್ಲಿ ಉಚ್ಚಸ್ತರದವನಲ್ಲವೆಂದು ಹೇಳುತ್ತಾರೆ. ಹಲವರು ಆಳ್ವಾರರುಗಳು ದ್ವಿಜರಲ್ಲವೆಂದೂ ತಿಳಿಯಬಂದಿದೆ. ಕವಿ ತನ್ನ ಕಾವ್ಯದಲ್ಲಿ ಎಲ್ಲಿ ವಿಸ್ತರಿಸಬೇಕೋ ಅಲ್ಲಿ ವಿಸ್ತರಿಸಿ ಎಲ್ಲಿ ಸಂಗ್ರಹಿಸಬೇಕೋ ಅಲ್ಲಿ ಸಂಗ್ರಹಿಸುತ್ತಾನೆ. ಉದಾಹರಣೆಗೆ, ವಾಲ್ಮೀಕಿ ಮಹರ್ಷಿ ಸುಮಾರು ಎರಡು ವಾರಗಳ ಕಥೆಯನ್ನು ಅಯೋಧ್ಯಾಕಾಂಡದಲ್ಲಿ ವರ್ಣಿಸಿ, ಅರಣ್ಯ ಕಾಂಡದಲ್ಲಿ ಹತ್ತು ವರ್ಷಗಳ ಕಥೆಯನ್ನು ಎರಡು ಮೂರು ಶ್ಲೋಕಗಳಲ್ಲಿ ಸಂಗ್ರಹಿಸುತ್ತಾರೆ. ಮತ್ತೆ, ಎರಡು ದಿನಗಳಲ್ಲಿ ನಡೆದ ಕಥೆಯೇ ಸುಂದರಕಾಂಡವಾಗುತ್ತದೆ.
विश्वास-प्रस्तुतिः
जडाशयस्य घोषेण जातलौल्यस्य भूयसा ।
कविशब्दं तिरोधाय कश्चिदर्थो न साध्यते ॥ ११-८ ॥
मूलम्
जडाशयस्य घोषेण जातलौल्यस्य भूयसा ।
कविशब्दं तिरोधाय कश्चिदर्थो न साध्यते ॥ ११-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಅತ್ಯುಚ್ಚವಾದ ಭೋರ್ಗರೆತದಿಂದ ಹಂಸದ ದನಿಯನ್ನು ಮರೆಮಾಡಿದ ಚಂಚಲವಾದ ಜಲಾಶಯಕ್ಕೆ ಯಾವ ಪುರುಷಾರ್ಥವೂ ಸಾಧ್ಯವಾಗುವುದಿಲ್ಲ. (೨) ಸ್ಥಿರಚಿತ್ತನಲ್ಲದ ಮಂದಬುದ್ಧಿಗೆ ಘಟ್ಟಿಯಾಗಿ ಕೂಗಿಕ್ಕೊಂಡು ಕವಿಯ ಉಕ್ತಿಗಳನ್ನು ಮರೆಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಜಡ= (ಜಲ, ಮಂದ); ಕವಿ= (ಹಂಸ, ಕವಿ). ಮಾತ್ಸರ್ಯದಿಂದಲೋ ಅಜ್ಞಾನದಿಂದಲೋ ಸುಕವಿಯ ಎದುರಿಗೆ ಸುಮ್ಮನೆ ಜಂಬ ಕೊಚ್ಚಿಕ್ಕೊಳ್ಳುವನಿಗೆ ಯಾವ ಪ್ರಯೋಜನವೂ ಇಲ್ಲ. ಸುಕವಿಯ ಯಶಸ್ಸಿಗೆ ಎಳ್ಳಷ್ಟೂ ಹಾನಿಯಿಲ್ಲ, ಜಂಬಕೋರನಿಗೆ ಎಳ್ಳಷ್ಟೂ ಉಪಯೋಗವಿಲ್ಲ.
विश्वास-प्रस्तुतिः
सदानवोक्तिमहितः प्रतिरुन्धन् प्रतीपगान् ।
प्रथितः काव्यनाम्नापि कविरेकः प्रकाशते ॥ ११-९ ॥
मूलम्
सदानवोक्तिमहितः प्रतिरुन्धन् प्रतीपगान् ।
प्रथितः काव्यनाम्नापि कविरेकः प्रकाशते ॥ ११-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ತನ್ನ ಶಿಷ್ಯರಾದ ದಾನವರುಗಳಿಗೆ ಹೇಳಿಕೊಟ್ಟ ಉಕ್ತಿಗಳಿಂದ ಪ್ರಸಿದ್ಧನಾದ, ಅಸುರರನ್ನು ವಿರೋಧಿಸುವ ದೇವತೆಗಳನ್ನು ತಡೆಯುವ, ಕಾವ್ಯ ಎಂಬ ಹೆಸರಿನಿಂದಲೂ ತಿಳಿದುಬಂದ ಶುಕ್ರಾಚಾರ್ಯನು ಶ್ರೇಷ್ಠತೆಯಿಂದ (ಆಕಾಶದಲ್ಲಿ) ಹೊಳೆಯುತ್ತಾನೆ. (೨) ಸರ್ವದಾ ಹೊಸ ಹೊಸ ಉಕ್ತಿಗಳಿಂದ ಪ್ರಸಿದ್ಧನಾದ, ತನ್ನ ಎದುರಾಳಿಗಳನ್ನು (ವಾಕ್ಸಾಮರ್ಥ್ಯದಿಂದ) ಸೋಲಿಸುವ, ತಾನು ರಚಿಸಿದ ಕಾವ್ಯನಾಮದಿಂದಲೇ ಹೆಸರುವಾಸಿಯಾದ ಕವಿಯು ಸರ್ವೋತ್ಕೃಷ್ಟನಾಗಿ ಪ್ರಕಾಶಿಸುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಸದಾನವೋಕ್ತಿ= (ಸಃ+ದಾನವೋಕ್ತಿ, ಸದಾ+ನವೋಕ್ತಿ); ಕವಿಃ= (ಶುಕ್ರಾಚಾರ್ಯ, ಕವಿ). ಶುಕ್ರಾಚಾರ್ಯನಿಗೆ ಕವಿ, ಕಾವ್ಯ ಎಂಬ ಎರಡು ಹೆಸರುಗಳೂ ಇವೆ. ಅವನ ಉಕ್ತಿಗಳೇ ಶುಕ್ರನೀತಿ; ನೀತಿಗ್ರಂಥದಲ್ಲಿ ಶುಕ್ರನನ್ನು ಸ್ಮರಿಸುವುದು ಸಮಂಜಸ. ಅನೇಕ ಕಾವ್ಯಗಳು ಕವಿಯ ಹೆಸರಿನಿಂದಲೇ ಪ್ರಸಿದ್ಧವಾಗಿವೆ. ಮಾಘಕವಿಯ ಶಿಶುಪಾಲವಧವನ್ನು “ಮಾಘಕಾವ್ಯ” ಎಂದೇ ವ್ಯವಹರಿಸುತ್ತಾರೆ. ಅನೇಕ ಕವಿಗಳ ವ್ಯಕ್ತಿತ್ವದ ವಿಷಯವಾಗಿ ಏನೂ ತಿಳಿಯದೆ ಅವರ ಕಾವ್ಯವೇ ಅವರ ವ್ಯಕ್ತಿತ್ವವಾಗಿ ಪರಿಣಮಿಸಿದೆ. ವಾಲ್ಮೀಕಿ,ಕಾಳಿದಾಸ ಮುಂತಾದ ಮಹಾಕವಿಗಳ ಕಾವ್ಯಗಳೇ ಅವರ ವ್ಯಕ್ತಿತ್ವದ ಪ್ರತೀಕವಾಗಿವೆ. ಅಷ್ಟೇ ಅಲ್ಲ; ಮಹಾಭಾರತ,ಪುರಾಣಗಳಲ್ಲಿ ತಮ್ಮ ಬರಹಗಳನ್ನೂ ಸೇರಿಸಿ, ತಮ್ಮ ಹೆಸರು ಉಳಿಯದಿದ್ದರೂ ತಮ್ಮ ಕೃತಿಗಳನ್ನು ಉಳಿಸಿಕ್ಕೊಂಡಿರುವ ಕವಿಗಳು ಅನೇಕರಿದ್ದಾರೆ.
विश्वास-प्रस्तुतिः
पूर्वकल्पप्रकारेण पुरुषार्थप्रवृत्तया ।
विचित्रसृष्ट्या विहरन् व्याप्तः कश्चिन्महाकविः ॥ ११-१० ॥
मूलम्
पूर्वकल्पप्रकारेण पुरुषार्थप्रवृत्तया ।
विचित्रसृष्ट्या विहरन् व्याप्तः कश्चिन्महाकविः ॥ ११-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಹಿಂದಿನ ಕಲ್ಪದಲ್ಲಿ ನಡೆದುದನ್ನು ಅನುಸರಿಸಿ, ಧರ್ಮ-ಅರ್ಥ-ಕಾಮ-ಮೋಕ್ಷಾರ್ಥವಾಗಿ ಪ್ರಯುಕ್ತವಾದ ಈ ವೈವಿಧ್ಯತೆಯ ಲೀಲಾಸೃಷ್ಟಿಯಿಂದ ವ್ಯಾಪ್ತನಾದ ಆ ಕ್ರಾನ್ತದರ್ಶಿಯಾದ ಪರಬ್ರಹ್ಮನು ತಲ್ಲೀನನಾಗಿ ಆಟವಾಡುತ್ತಿದ್ದಾನೆ. (೨) ಹಿಂದಿನವರ ಅನುಷ್ಠಾನದ ಪ್ರಕಾರ ಪುರುಷಾರ್ಥಗಳಿಗಾಗಿ ಪ್ರವೃತ್ತವಾದ ಅದ್ಭುತವಾದ ಕಾವ್ಯ ಸೃಷ್ಟಿಯಿಂದ ವ್ಯಾಪ್ತನಾಗಿ ಮಹಾಕವಿಯು ಆನಂದಿಸುತ್ತಿದ್ದಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಮಹಾಕವಿಯೊಬ್ಬನು ತನ್ನ ಕಾವ್ಯಸೃಷ್ಟಿಯಲ್ಲಿ ಲೀನನಾಗಿ ಅನುಭವಿಸುವ ಆನಂದವು ಪರಬ್ರಹ್ಮನು ತನ್ನ ಲೀಲಾಸೃಷ್ಟಿಯಿಂದ ಪಡೆಯುವ ಆನಂದಕ್ಕೆ ಸಾಟಿಯೆಂದು ದೇಶಿಕರು ಹೃದಯಂಗಮವಾಗಿ ವರ್ಣಿಸಿದ್ದಾರೆ.
विश्वास-प्रस्तुतिः
मतिमन्थजवेन लब्धवर्णा
प्रतिपन्ना विबुधैरनन्यभक्तैः ।
सुकवेरनघाशयस्य सूक्तिः
स्वदते दुग्धपयोनिधेः सुधेव ॥ ११-११ ॥
मूलम्
मतिमन्थजवेन लब्धवर्णा
प्रतिपन्ना विबुधैरनन्यभक्तैः ।
सुकवेरनघाशयस्य सूक्तिः
स्वदते दुग्धपयोनिधेः सुधेव ॥ ११-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಬುದ್ಧಿಯ ಮಂಥನದ ವೇಗದಿಂದ ಮೂಡಿಬಂದ ವರ್ಣಬಂಧವುಳ್ಳ, ಬೇರೆ ಏನನ್ನೂ ಸ್ವೀಕರಿಸದ ಪಂಡಿತರುಗಳಿಂದ ಗೌರವದಿಂದ ಸ್ವೀಕೃತವಾದ, ಸದಭಿಪ್ರಾಯದಿಂದ ಕೂಡಿದ, ಸತ್ಕವಿಯ ಸುಭಾಷಿತಗಳು ಉದ್ದೇಶಪೂರ್ವಕವಾಗಿ ಕಡೆಯುವುದರ ವೇಗದಿಂದ ಉಂಟಾದ ರೂಪವುಳ್ಳ, ಮತ್ತೇನನ್ನೂ ಭುಂಜಿಸದ ದೇವತೆಗಳಿಂದ ಗೌರವದೊಡನೆ ಸ್ವೀಕೃತವಾದ, ಕ್ಷೀರಸಮುದ್ರದಿಂದ ಬಂದ ಅಮೃತದಂತೆ ಭೊಗ್ಯವಾಗಿರುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸುಭಾಷಿತಗಳು ಕವಿಯ ಮನೋಮಂಥನದಿಂದ ಬಂದ ಸುಧೆ! ಪಂಡಿತರು ಸುಭಾಷಿತಸುಧೆಯ “ಅನನ್ಯಭಕ್ತ"ರು ! ದೇಶಿಕರ ಮನೋಮಂಥನದಿಂದ ಬಂದ ಈ ಶ್ಲೋಕಸುಧೆ ಹೃದ್ಯವಲ್ಲವೇ, ಆಸ್ವಾದ್ಯವಲ್ಲವೇ?
विश्वास-प्रस्तुतिः
मनुव्यासप्राचेतसपरिषदर्हा क्वचिदियम्
सुधासिक्ता सूक्तिः स्वयमुदयमन्विच्छति जने ।
निरुन्ध्युः के विंध्याचलविकटसंध्यानटजटा-
परिभ्रान्ता पङ्गोरुपरि यदि गङ्गा निपतति ॥ ११-१२ ॥
मूलम्
मनुव्यासप्राचेतसपरिषदर्हा क्वचिदियम्
सुधासिक्ता सूक्तिः स्वयमुदयमन्विच्छति जने ।
निरुन्ध्युः के विंध्याचलविकटसंध्यानटजटा-
परिभ्रान्ता पङ्गोरुपरि यदि गङ्गा निपतति ॥ ११-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಮನು-ವ್ಯಾಸ-ವಾಲ್ಮೀಕಿ ಮುಂತಾದವರ ಗುಂಪಿಗೆ ಸಹಜವಾದ, ಅಮೃತದಿಂದ ತೊಯ್ದ ಸುಭಾಷಿತವು ಎಲ್ಲೋ ಯಃ ಕಶ್ಚಿತ್ ಮನುಷ್ಯನಲ್ಲಿ ಮೂಡಿಬರುತ್ತದೆ. ಸಂಧ್ಯಾಕಾಲದಲ್ಲಿ ನರ್ತಿಸುವ ಶಿವನ ಜಡೆಯು ವಿಂಧ್ಯಪರ್ವತದಂತೆ ಹಳ್ಳತಿಟ್ಟಾಗಿದೆ. ಆ ಜಡೆಯಿಂದ ಜಾರಿದ ಗಂಗೆಯು ಹೆಳವನ ಮೇಲೆ ಬಿದ್ದರೆ ಅದನ್ನು ಯಾರು ತಾನೆ ತಪ್ಪಿಸಿಯಾರು?
ಶ್ರೀನಿವಾಸಮೂರ್ತಿ - ಟಿಪ್ಪನೀ
ಸೂಕ್ತಿಸುಧೆ ಸರ್ವೋಚ್ಚ ಕವಿಗಳ ಸ್ವತ್ತೇನಲ್ಲ. ಆ ಮಹೋನ್ನತಶ್ರೇಣಿಗೆ ಸೇರದ ಸಾಧಾರಣ ಕವಿಗಳ ಮನೋಮಂಥನಕ್ಕೂ ಎಟಕುವಂತಹುದು ಅದು. ಶಿವನ ಜಡೆಯಿಂದ ಜಾರಿಬಿದ್ದ ಗಂಗೆಯು ಹೆಳವನೊಬ್ಬನ ತಲೆಯ ಮೇಲೆ ಬೀಳಬಹುದಲ್ಲವೇ? ಹೆಳವ ಗಂಗೆಯ ಹತ್ತಿರ ಪ್ರಾಯಶಃ ಹೋಗಲಾರ, ಗಂಗೆಯೇ ಅವನ ಹತ್ತಿರ ಹೋದಾಳು ! ಈ ಸುಭಾಷಿತವನ್ನು ದೇಶಿಕರು ತಮ್ಮ ಸಂಕಲ್ಪಸೂರ್ಯೋದಯ ನಾಟಕದಲ್ಲಿಯೂ ಪ್ರಯೋಗಿಸಿದ್ದಾರೆ.
|| ಇತಿ ಸುಕವಿಪದ್ಧತಿಃ ಏಕಾದಶೀ ||
॥ इति सुकविपद्धतिरेकादशी ॥