विश्वास-प्रस्तुतिः
सुवृत्तस्यावदातस्य कलापूर्णस्य सत्पतेः ।
क्षणलेशग्रहेऽपि स्यात् अतीर्थस्यापि तीर्थता ॥ ८-१ ॥
मूलम्
सुवृत्तस्यावदातस्य कलापूर्णस्य सत्पतेः ।
क्षणलेशग्रहेऽपि स्यात् अतीर्थस्यापि तीर्थता ॥ ८-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸತ್ಪುರುಷರನ್ನು ಆಶ್ರಯಿಸುವುದರ ಪ್ರಾಮುಖ್ಯತೆಯನ್ನು ಈ ಪದ್ಧತಿಯಲ್ಲಿ ವಿವರಿಸಲಾಗಿದೆ
(೧) ಪೂರ್ಣವಾಗಿ ಗುಂಡಗಿರುವ, ಸುಂದರನಾದ, ಹದಿನಾರು ಕಲೆಗಳಿಂದಲೂ ಕೂಡಿರುವ ನಕ್ಷತ್ರರಾಜನಾದ ಚಂದ್ರನಿಗೆ ಕೊಂಚವೇ ಕಾಲ ಕೊಂಚಮಟ್ಟಿಗೇನೇ ಗ್ರಹಣವಾದಾಗ್ಯೂ ತೀರ್ಥವೆಂದು ಪರಿಗಣನೆಗೆ ಬಾರದ ಜಲರಾಶಿಗೂ ತೀರ್ಥತೆಯು ಬರುತ್ತದೆ. (೨) ಸದಾಚಾರವಂತನಾದ ಪರಿಶುದ್ಧನಾದ ಜ್ಞಾನಪೂರ್ಣನಾದ ಸಜ್ಜನಶ್ರೇಷ್ಠನಿಂದ ಅಲ್ಪಕಾಲದ ಅಲ್ಪಸ್ವೀಕಾರವೂ ಅಶುದ್ಧನಿಗೆ ಶುದ್ಧಿಯನ್ನು ಕೊಡುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಶ್ಲಿಷ್ಟ ಪದಗಳು: ಸುವೃತ್ತ= (ಪೂರ್ಣವೃತ್ತ,ಆಚಾರವಂತ); ಅವದಾತ= (ಸುಂದರ, ಶುದ್ಧ); ಕಲಾ= (ಚಂದ್ರನ ಬಿಂಬದ ಹದಿನಾರನೆಯ ಒಂದು ಭಾಗ, ಜ್ಞಾನ); ಸತ್ಪತಿ= (ಚಂದ್ರ, ಸಜ್ಜನಶ್ರೇಷ್ಠ); ಗ್ರಹ= (ಗ್ರಹಣ, ಸ್ವೀಕಾರ); ತೀರ್ಥ= ( ಪುಣ್ಯಕ್ಷೇತ್ರ,ಸತ್ಪಾತ್ರ). ಚಂದ್ರಗ್ರಹಣದ ಕಾಲದಲ್ಲಿ ಅಶುದ್ಧವಾದ ಒಂದು ಹೊಂಡವೂ ಕೂಡ ಶುದ್ಧವೆಂದು ಪರಿಗಣಿತವಾಗುತ್ತದೆ ಎಂಬ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯವು ಇಲ್ಲಿ ಪ್ರಸ್ತಾಪವಾಗಿದೆ.
विश्वास-प्रस्तुतिः
प्रतिपद्प्राप्तितः प्रागप्यापदा सत्पदाश्रितः ।
राजा तदितरो वापि नोपरागेण पीड्यते ॥ ८-२ ॥
मूलम्
प्रतिपद्प्राप्तितः प्रागप्यापदा सत्पदाश्रितः ।
राजा तदितरो वापि नोपरागेण पीड्यते ॥ ८-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ನಕ್ಷತ್ರಮಾರ್ಗವನ್ನು ಆಶ್ರಯಿಸಿದ ಚಂದ್ರನೇ ಆಗಲಿ ಸೂರ್ಯನೇ ಆಗಲಿ ಪ್ರಥಮಾ ತಿಥಿಯು ಬರುವುದಕ್ಕೆ ಮುನ್ನ ಗ್ರಹಣಕ್ಕೆ ಒಳಗಾಗಿದ್ದರೂ ಪ್ರಥಮಾ ತಿಥಿಯು ಬಂದಮೇಲೆ ಗ್ರಹಣದಿಂದ ಪೀಡಿತನಾಗುವುದಿಲ್ಲ. (೨) ಸಜ್ಜನರ ಪಾದಗಳನ್ನು ಆಶ್ರಯಿಸಿದ ರಾಜನೇ ಆಗಲಿ ಉಳಿದವರೇ ಆಗಲಿ ಅವರಿಗೆ ಜ್ಞಾನಪ್ರಾಪ್ತಿಯಾಗುವುದಕ್ಕೆ ಮೊದಲು ತೊಂದರೆಗಳಿಂದ ಪೀಡಿತರಾಗಿದ್ದರೂ ಜ್ಞಾನಪ್ರಾಪ್ತಿಯನಂತರ ಪೀಡಿತರಾಗುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಪ್ರತಿಪತ್= (ಪ್ರಥಮಾ ತಿಥಿ,ಜ್ಞಾನ); ಸತ್ಪದಾಶ್ರಿತಃ= (ನಕ್ಷತ್ರಮಾರ್ಗವನ್ನು ಆಶ್ರಯಿಸಿದ, ಸಜ್ಜನರ ಪಾದಗಳನ್ನು ಆಶ್ರಯಿಸಿದ); ಉಪರಾಗ= (ಗ್ರಹಣ, ತೊಂದರೆ). ಪ್ರಥಮಾ ತಿಥಿಯು ಬಂದೊಡನೆ ಗ್ರಹಣದ ಬಿಡುಗಡೆಯಾಗುವ ವಿಷಯವನ್ನು ಚಮತ್ಕಾರವಾಗಿ ವರ್ಣಿಸಿ ಅದರ ಮೂಲಕ ಸಜ್ಜನರ ಆಶ್ರಯದಿಂದ ಬಂದೊದಗಿದ ಜ್ಞಾನವು ಸರ್ವಪೀಡಾನಿವಾರಕವೆಂಬುದನ್ನು ದೇಶಿಕರು ತಿಳಿಸಿದ್ದಾರೆ.
विश्वास-प्रस्तुतिः
विषमो गुणभेदेन विकारान् जनयन् क्रमात् ।
समये महता योगात् अहङ्कारः प्रलीयते ॥ ८-३ ॥
मूलम्
विषमो गुणभेदेन विकारान् जनयन् क्रमात् ।
समये महता योगात् अहङ्कारः प्रलीयते ॥ ८-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸತ್ತ್ವರಜಸ್ತಮೋಗುಣಗಳಸಮ್ಮಿಶ್ರಣ ಭೇದದಿಂದ ಏಕರೀತಿಯಾಗಿರದೆ ಮನುಷ್ಯನಲ್ಲಿ ವಿವಿಧವಾದ ಕ್ಷೋಭೆಗಳನ್ನು ಉಂಟುಮಾಡುವ ಅಹಙ್ಕಾರವು ಸಕಾಲದಲ್ಲಿ ಮಹಾತ್ಮನ ಸಂಸರ್ಗವಾದರೆ ಕರಗಿಹೋಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ “ವಿಷಮಃ” ಎಂಬ ಶಬ್ದಕ್ಕೆ ವಿಷಮಜ್ವರವೆಂಬ ಅರ್ಥವನ್ನೂ ಹೇಳಬಹುದು. ವಿಷಮಜ್ವರವು ಹೇಗೆ ಜ್ವರಪೀಡಿತನ ಶರೀರಗುಣಗಳನ್ನವಲಂಬಿಸಿ ಬಗೆಬಗೆಯಾದ ಕ್ಷೋಭೆಗಳನ್ನು ಉಂಟುಮಾಡಿ, ಸಕಾಲದಲ್ಲಿ ಸದ್ವೈದ್ಯನೊಬ್ಬನ ಸಂಸರ್ಗವಾದರೆ ಇಳಿಯುವುದೋ ಅದೇ ರೀತಿ ಅಹಙ್ಕಾರವೂ ಕೂಡ ಸದ್ಗುರುವಿನ ಯೋಗದಿಂದ ಮಾಯವಾಗುವುದು ಎಂಬುದು ಧ್ವನಿತ.
विश्वास-प्रस्तुतिः
स्वदृष्टिप्रतिघातेऽपि स्वच्छे क्वचन शोभनः ।
तत्र ह्यभिमुखः स्वात्मा झटित्येव प्रकाशते ॥ ८-४ ॥
मूलम्
स्वदृष्टिप्रतिघातेऽपि स्वच्छे क्वचन शोभनः ।
तत्र ह्यभिमुखः स्वात्मा झटित्येव प्रकाशते ॥ ८-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ನಿರ್ಮಲವಾದ (ಕನ್ನಡಿಯು) ತನ್ನ ದೃಷ್ಟಿಗೆ ಅಡ್ಡಬಂದರೂ ಆ ಕನ್ನಡಿಯಲ್ಲಿ ತನ್ನ ಸ್ವರೂಪವು ಒಡನೆಯೇ ಪ್ರಕಾಶಿಸುತ್ತದೆ. (೨) ನಿರ್ಮಲನಾದ ಸತ್ಪುರುಷನ ಎದುರಿನಲ್ಲಿ ತನ್ನ ತಿಳುವಳಿಕೆಗೆ ಏಟು ಬಿದ್ದರೂ ತನ್ನ ಆತ್ಮದ ನಿಜರೂಪವು ಆ ಸತ್ಪುರುಷನ ಸನ್ನಿಧಿಯಲ್ಲಿಯೇ ಗೋಚರವಾಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಒಬ್ಬ ಮನುಷ್ಯ ಸತ್ಪುರುಷನೊಬ್ಬನನ್ನು ಸಂದರ್ಶಿಸಿದಾಗ ಆ ಮಹಾತ್ಮನ ಬೋಧೆಯಿಂದ ಅಲ್ಲಿಯವರೆಗೂ ಅವನಲ್ಲಿದ್ದ ಅರಿವಿನಲ್ಲಿನ ದೋಷಗಳು ಥಟ್ಟನೆ ಸ್ಫುರಿಸುವುವು. ಆ ಸ್ಫುರಣದಿಂದಲೇ ತನ್ನ ನಿಜ ಆಂತರಿಕ ಸ್ವರೂಪವೂ ಕೂಡ ಅವನಿಗೆ ಸ್ವಚ್ಛವಾದ ಕನ್ನಡಿಯಲ್ಲಿ ಕಂಡಂತೆ ತೋರಿಬರುವುದು. ಭಾರತೀಯ ತಾರ್ಕಿಕ ಸಂಪ್ರದಾಯದ ಪ್ರಕಾರ ಕಣ್ಣಿಗೆ ಒಂದು ವಸ್ತುವು ಕಾಣಬೇಕಾದರೆ ಕಣ್ಣಿನಿಂದ ಹೊರಟ ಕಿರಣಗಳು ಆ ವಸ್ತುವನ್ನು ಮುಟ್ಟಬೇಕು . ( ಈ ನಂಬಿಕೆಯಲ್ಲಿ ವೈಜ್ಞಾನಿಕತಥ್ಯತೆಯಿಲ್ಲ.) ಈ ನಂಬಿಕೆಯು “ಸ್ವದೃಷ್ಟಿಪ್ರತಿಘಾತೇಽಪಿ” ಎಂಬಲ್ಲಿ ಸೂಚಿತವಾಗಿದೆ.
विश्वास-प्रस्तुतिः
शिक्षके हरिताकारः मेरौ नीलतनुर्द्विजः ।
अपूर्ववर्णवान् भाति सत्यनिष्ठे च कौशिकः ॥ ८-५ ॥
मूलम्
शिक्षके हरिताकारः मेरौ नीलतनुर्द्विजः ।
अपूर्ववर्णवान् भाति सत्यनिष्ठे च कौशिकः ॥ ८-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಹಸಿರು ಬಣ್ಣದ ಗಿಳಿಯು (ತನಗೆ ಮಾತು ಹೇಳಿಕ್ಕೊಡುವ) ಶಿಕ್ಷಕನ ಸಂಗದಿಂದ ಅಕಾರವೇ ಮೊದಲಾದ ವರ್ಣಾಕ್ಷರಗಳನ್ನು ಪಡೆದು ಕಂಗೊಳಿಸುತ್ತದೆ. ಕಪ್ಪು ಬಣ್ಣದ ಕಾಗೆಯು (ಚಿನ್ನದಂತೆ ಥಳಥಳಿಸುವ) ಮೇರು ಪರ್ವತದ ಬಳಿ ಅಪೂರ್ವವಾದ ಬಣ್ಣವನ್ನು ಪಡೆದು ಕಂಗೊಳಿಸುತ್ತದೆ. ಕೌಶಿಕ ವಂಶೋದ್ಭವನಾದ ವಿಶ್ವಾಮಿತ್ರ ಮುನಿಯು ಸತ್ಯನಿಷ್ಠನಾದ ವಸಿಷ್ಠನ ಸಂಗದಿಂದ ಬ್ರಾಹ್ಮಣತ್ವನ್ನು ಪಡೆದು ಕಂಗೊಳಿಸುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಅದೇ ಪ್ರಕಾರ, ಸತ್ಪುರುಷನ ಸಂಗದಿಂದ ಸಾಮಾನ್ಯನೂ ಕೂಡ ಸದಾಚಾರಯುಕ್ತನಾಗಿ ಅನಿರ್ವಚನೀಯ ಕಾಂತಿಯೊಂದನ್ನು ಪಡೆಯುತ್ತಾನೆ ಎಂಬುದು ಅನ್ಯೋಕ್ತಿಯ ಮೂಲಕ ಧ್ವನಿತವಾಗುತ್ತದೆ. “ವರ್ಣ” ಎಂಬ ಶಬ್ದಕ್ಕೆ ಮೂರು ಅರ್ಥಗಳಿರುವುದನ್ನು (ವರ್ಣ= ಬಣ್ಣ, ಅಕಾರಾದಿ ವರ್ಣ, ಚಾತುರ್ವರ್ಣ್ಯದ ವರ್ಣ) ದೇಶಿಕರು ಚಮತ್ಕಾರವಾಗಿ ಉಪಯೋಗಿಸಿಕ್ಕೊಂಡಿದ್ದಾರೆ.
विश्वास-प्रस्तुतिः
कलङ्किनि जले क्वापि सौरं प्रतिफलन् महः ।
तमोऽपहत्त्वं तनुते समृद्धिं च दिने दिने ॥ ८-६ ॥
मूलम्
कलङ्किनि जले क्वापि सौरं प्रतिफलन् महः ।
तमोऽपहत्त्वं तनुते समृद्धिं च दिने दिने ॥ ८-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಸೂರ್ಯಸಂಬಂಧವಾದ ತೇಜಸ್ಸು ಕಲಙ್ಕವುಳ್ಳ ಜಲಮಯಮಂಡಲನಾದ ಚಂದ್ರನಲ್ಲಿ ಪ್ರತಿಫಲಿಸಿ ಕತ್ತಲೆಯನ್ನು ಹೋಗಲಾಡಿಸುತ್ತಾ ದಿನ ದಿನಕ್ಕೆ ವೃದ್ಧಿಯಾಗುತ್ತದೆ. (೨) ಯಾವನೋ ಕಲಙ್ಕಿತನಾದ ಜಡಮನುಷ್ಯನಲ್ಲಿ ವಿದ್ವಾಂಸನೊಬ್ಬನ ತೇಜಸ್ಸು ಪ್ರತಿಫಲಿಸಿ ಆ ಜಡಮನುಷ್ಯನ ತಮೋಗುಣವನ್ನು ಹೋಗಲಾಡಿಸುತ್ತಾ ದಿನ ದಿನಕ್ಕೆ ವೃದ್ಧಿಯಾಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸೂರ್ಯನ ಪ್ರತಿಫಲಿತವಾದ ಬೆಳಕೇ ಬೆಳ್ದಿಂಗಳು ಎಂದು ನಮ್ಮ ಪುರಾತನ ಭಾರತೀಯ ಜ್ಯೋತಿಶ್ಶಾಸ್ತ್ರಜ್ಞರಿಗೆ ತಿಳಿದಿದ್ದಿತು. ದೇಶಿಕರು ಈ ವಿಷಯವನ್ನೇ ಇಲ್ಲಿ ಎತ್ತಿಕ್ಕೊಂಡಿದ್ದಾರೆ. ಸೂರ್ಯನ ಪ್ರತಿಫಲಿತವಾದ ಬೇಳಕು ಶುಕ್ಲಪಕ್ಷದಲ್ಲಿ ಕತ್ತಲೆಯನ್ನು ಹೋಗಲಾಡಿಸಿ ದಿನ ದಿನಕ್ಕೂ ವೃದ್ಧಿಯಾಗುವಂತೆ ಮಹಾಪುರುಷನೊಬ್ಬನ ಸಂಸರ್ಗದಿಂದ ಜಡಮನುಷ್ಯನ ತಮೋಗುಣವು ನಾಶವಾಗಿ ಅವನ ತೇಜಸ್ಸು ದಿನ ದಿನಕ್ಕೆ ವೃದ್ಧಿಯಾಗುತ್ತದೆ ಎಂಬುದೇ ಈ ಶ್ಲೋಕದ ತಿರುಳು. ಇಲ್ಲಿ ಶ್ಲಿಷ್ಟ ಪದಗಳು: ಜಲ= (ನೀರು, ಜಡಸ್ವಭಾವದವ); ಸೌರಂ= (ಸೂರ್ಯ ಸಂಬಂಧವಾದ, ವಿದ್ವಾಂಸನಿಗೆ ಸಂಬಂಧಿಸಿದ); ತಮಃ= (ಕತ್ತಲೆ, ತಮೋಗುಣ).
विश्वास-प्रस्तुतिः
स्वतश्चैतन्यहीनस्य विषयच्छिद्रभागिनः ।
कस्यचित् प्राज्ञमूलाः स्युः पुरुषार्थप्रवृत्तयः ॥ ८-७ ॥
मूलम्
स्वतश्चैतन्यहीनस्य विषयच्छिद्रभागिनः ।
कस्यचित् प्राज्ञमूलाः स्युः पुरुषार्थप्रवृत्तयः ॥ ८-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸ್ವಭಾವತಃ ಅಜ್ಞಾನಿಯಾದ, (ಆದುದರಿಂದಲೇ) ವಿಷಯಸುಖದೌರ್ಬಲ್ಯದಲ್ಲಿ ಭಾಗವಹಿಸುವ ಮನುಷ್ಯನ ಪುರುಷಾರ್ಥಪ್ರಯತ್ನಗಳು (ಆತನು ಆಶ್ರಯಿಸಿರುವ) ಜ್ಞಾನಿಯನ್ನವಲಂಬಿಸಿರುತ್ತವೆ. ಅರ್ಥಾತ್, ಅಜ್ಞಾನಿಯಾಗಿ ಚಂಚಲಚಿತ್ತನಾದವನೂ ಕೂಡ ಮಹಾತ್ಮನೊಬ್ಬನನ್ನು ಆಶ್ರಯಿಸುವುದರಿಂದ ಅವನ ಪ್ರವೃತ್ತಿಗಳು ಧರ್ಮಾರ್ಥಕಾಮಮೋಕ್ಷಗಳೊಳಗೆ ಮೋಕ್ಷವೇ ಗುರಿಯಾಗಿ ಇರುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಮನುಷ್ಯನು ಅವನ ಜೀವಿತದಲ್ಲಿ ಸಾಧಿಸಬೇಕಾದ ವಿಷಯಗಳು - ಧರ್ಮಾರ್ಥಕಾಮಮೋಕ್ಷಗಳು - ಪುರುಷಾರ್ಥಗಳು.
विश्वास-प्रस्तुतिः
महान्तं पुरुषं प्राप्य कञ्चित् सत्त्वप्रवर्तकम् ।
प्रतिबुद्धो जनस्तेन परमं साम्यमश्नुते ॥ ८-८ ॥
मूलम्
महान्तं पुरुषं प्राप्य कञ्चित् सत्त्वप्रवर्तकम् ।
प्रतिबुद्धो जनस्तेन परमं साम्यमश्नुते ॥ ८-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸತ್ತ್ವಗುಣವನ್ನು ಪ್ರೇರಿಸುವ ಮಹಾಪುರುಷನ ಸಾನ್ನಿಧ್ಯದಲ್ಲಿ ಜ್ಞಾನವನ್ನು ಪಡೆದುಕ್ಕೊಂಡು ಎಚ್ಚೆತ್ತ ಮನುಷ್ಯನು ಉಪದೇಶಕನ ಪರಮಸಾಮ್ಯಕ್ಕೇ ಬರುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶುದ್ಧಸತ್ತ್ವರೂಪಿಯಾದ ಪುರುಷೋತ್ತಮನಲ್ಲಿ ಶರಣನಾದವನು ಅವನಿಗೆ ಜ್ಞಾನೋದಯವಾದ ಬಳಿಕ ಪರಮಾತ್ಮನ ಸಾಮ್ಯವನ್ನೇ ಪಡೆಯುತ್ತಾನೆ ಎಂಬ ಅರ್ಥವೂ ಸೂಚಿತವಾಗಿದೆ.
विश्वास-प्रस्तुतिः
सूत्रं रत्नसमावेशात् चर्म सत्पदसंश्रयात् ।
तदभेदेन गृह्येत तृणमप्यस्त्रमन्त्रणात् ॥ ८-९ ॥
मूलम्
सूत्रं रत्नसमावेशात् चर्म सत्पदसंश्रयात् ।
तदभेदेन गृह्येत तृणमप्यस्त्रमन्त्रणात् ॥ ८-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ರತ್ನಗಳನ್ನು ಪೋಣಿಸುವ ನೂಲು ರತ್ನದೊಡನೆಯೂ, ಸಜ್ಜನರ ಪದಸಂಸ್ಪರ್ಶದಿಂದ (ಪಾದುಕೆಯ) ಚರ್ಮವು ಸಜ್ಜನರ ಪಾದದೊಡನೆಯೂ, ಅಸ್ತ್ರಕ್ಕೆ ಸಂಬಂಧಿಸಿದ ಮಂತ್ರದಿಂದ ಮಂತ್ರಿಸಲಾದ ಹುಲ್ಲುಕಡ್ಡಿಯು ಅಸ್ತ್ರದೊಡನೆಯೂ ಭೇದವಿಲ್ಲದೆ ಪರಿಗಣಿತವಾಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸಜ್ಜನರ ಸಂಗದಿಂದ ಅಲ್ಪರೂ ಕೂಡ ಉನ್ನತಿಯನ್ನು ಪಡೆಯುತ್ತಾರೆ ಎಂಬುದೇ ತಾತ್ಪರ್ಯ. “ಹೂವಿನಿಂದ ನಾರಿಗೂ ಸ್ವರ್ಗ” ಎಂಬ ಕನ್ನಡದ ಗಾದೆಯನ್ನು ನೆನಪುಮಾಡಿಕ್ಕೊಡುತ್ತದೆ.
विश्वास-प्रस्तुतिः
एकयैव गुरोर्दृष्ट्या द्वाभ्यां वापि लभेत यत् ।
न तत् तिसृभिरष्टाभिः सहस्रेणापि कर्हिचित्॥ ८-१० ॥
मूलम्
एकयैव गुरोर्दृष्ट्या द्वाभ्यां वापि लभेत यत् ।
न तत् तिसृभिरष्टाभिः सहस्रेणापि कर्हिचित्॥ ८-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಆಚಾರ್ಯನ ಒಂದು ಸಲದ ಅಥವಾ ಎರಡು ಸಲದ ದೃಷ್ಟಿಪಾತದಿಂದ ಏನು ಲಭ್ಯವೋ ಅದು ಇತರರ ಮೂರಲ್ಲ, ಎಂಟಲ್ಲ ಸಾವಿರಸಲದ ದೃಷ್ಟಿಪಾತದಿಂದಲೂ ಲಭ್ಯವಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಮುಕ್ಕಣ್ಣನಾದ ಶಿವನಿಂದಲೇ ಆಗಲಿ, ಎಂಟು ಕಣ್ಣಿನ ಚತುರ್ಮುಖಬ್ರಹ್ಮನಿಂದಲೇ ಆಗಲಿ, ಸಹಸ್ರಾಕ್ಷನಾದ ಇಂದ್ರನಿಂದಲೇ ಆಗಲಿ ಲಭ್ಯವಿಲ್ಲ ಎಂಬ ಅರ್ಥವೂ ಸ್ಪಷ್ಟವಾಗಿ ಕಾಣಬರುತ್ತದೆ.
विश्वास-प्रस्तुतिः
रथ्यातोयं त्रिदशसरिता राजनीतिः सुकीर्त्या
काव्यालापस्त्रियुगकथया कायवान् आत्मबुद्ध्या ।
दारप्रीतिः प्रजननधिया जन्तुहिंसा मखेन
प्रज्ञाहीनः परहितविदा सङ्गतः शुद्धिमेति ॥ ८-११ ॥
मूलम्
रथ्यातोयं त्रिदशसरिता राजनीतिः सुकीर्त्या
काव्यालापस्त्रियुगकथया कायवान् आत्मबुद्ध्या ।
दारप्रीतिः प्रजननधिया जन्तुहिंसा मखेन
प्रज्ञाहीनः परहितविदा सङ्गतः शुद्धिमेति ॥ ८-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ರಸ್ತೆಯ ಚರಂಡಿಯ ನೀರಿಗೆ ಗಂಗಾನದಿಯನ್ನು ಸೇರುವುದರಿಂದ, ರಾಜನೀತಿಗೆ ಸುಪ್ರಸಿದ್ಧನ ಸಂಬಂಧದಿಂದ, ಕಾವ್ಯವಾಚನಕ್ಕೆ ಪರಮಾತ್ಮನ ಕಥೆಯಿಂದ, ಮನುಷ್ಯನಿಗೆ ಆತ್ಮಜ್ಞಾನದಿಂದ, ಭಾರ್ಯೆಯಲ್ಲಿ ಪ್ರೀತಿಗೆ ವಂಶವನ್ನು ಬೆಳೆಸುವ ಬುದ್ಧಿಯಿಂದ, ಪ್ರಾಣಿಹಿಂಸೆಗೆ ಯಜ್ಞಾರ್ಥವಾಗುವುದರಿಂದ, ಜ್ಞಾನಶೂನ್ಯನಾದವನಿಗೆ ಇತರರಿಗೆ ಯಾವುದು ಹಿತವೆಂಬುದನ್ನು ಅರಿತ ಪಂಡಿತನ ಸಹವಾಸದಿಂದ ಶುದ್ಧಿಯು ದೊರೆಯುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ದೇಶಿಕರು ಸತ್ಪುರುಷನ ಸಂಸರ್ಗ ಹೇಗೆ ಉತ್ತಾರಕವೆಂಬುದಕ್ಕೆ ಅನೇಕ ನಿದರ್ಶನಗಳನ್ನು ಕೊಟ್ಟು ವಿವರಿಸಿದ್ದಾರೆ. “ತ್ರಿಯುಗ” ಎಂಬ ಪದಕ್ಕೆ ಶಬ್ದಾರ್ಥಕೌಸ್ತುಭದಲ್ಲಿ ಯಜ್ಞಪುರುಷನೆಂಬ ಅರ್ಥವನ್ನು ಕೊಟ್ಟಿದೆ. ವ್ಯಾಖ್ಯಾನದಲ್ಲಿ ತ್ರಿಯುಗ ವೆಂಬುದಕ್ಕೆ ಮೂರುಜೋಡಿ ಎಂಬ ಅರ್ಥದ ಮೂಲಕ ಷಾಡ್ಗುಣ್ಯರೂಪಿ ಪರಮಾತ್ಮನ ಜ್ಞಾನ-ಬಲ, ವೀರ್ಯ-ಐಶ್ವರ್ಯ ಮತ್ತು ಶಕ್ತಿ-ತೇಜೋಮಯ ವ್ಯೂಹರೂಪಗಳು ಎಂಬ ಅರ್ಥವನ್ನು ಮಾಡಲಾಗಿದೆ. ಒಟ್ಟಿನಲ್ಲಿ “ತ್ರಿಯುಗಕಥಾ” ಎಂದರೆ ಹರಿಕಥೆ ಎನ್ನಬಹುದು. ಅಥವಾ, ಕೃತ, ತ್ರೇತಾ ದ್ವಾಪರಯುಗಗಳ ಕಥೆಯೆಂದೂ ಅರ್ಥಮಾಡಬಹುದು. ಯಜ್ಞಾರ್ಥವಾದ ಪ್ರಾಣಿಹಿಂಸೆಯು ನಿಂದ್ಯವಲ್ಲವೆಂದೂ ಬಲಿ ಕೊಟ್ಟ ಪ್ರಾಣಿಗೂ ಸದ್ಗತಿ ಬರುತ್ತದೆಂದೂ ಹೇಳುತ್ತಾರೆ. ಆದರೆ ಪಶುಹಿಂಸಾತ್ಮಕ ಯಜ್ಞಗಳು ಕಲಿಯುಗದಲ್ಲಿ ನಿಷಿದ್ಧವೆಂದೂ ಹೇಳಲಾಗಿದೆ.
विश्वास-प्रस्तुतिः
विभुर्बन्धं प्राप्य व्यतनुत विमुक्तिं व्रजभुवाम्
स्वतंत्रोऽसौ दूतः स्वयमजनि सूतश्च भजताम् ।
प्रतिज्ञां स्वाम् औज्झत् स्वपदतटिनीसूनुसमरे
महद्योगात् प्रायो वहति महिमानं तदखिलम् ॥ ८-१२ ॥
मूलम्
विभुर्बन्धं प्राप्य व्यतनुत विमुक्तिं व्रजभुवाम्
स्वतंत्रोऽसौ दूतः स्वयमजनि सूतश्च भजताम् ।
प्रतिज्ञां स्वाम् औज्झत् स्वपदतटिनीसूनुसमरे
महद्योगात् प्रायो वहति महिमानं तदखिलम् ॥ ८-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನು ತಾನೇ ಬಂಧಕ್ಕೆ ಒಳಗಾಗಿ ವ್ರಜಸ್ತ್ರೀಯರಿಗೆ ಮುಕ್ತಿಯನ್ನು ಕೊಟ್ಟನು. ಸ್ವತಂತ್ರನಾದರೂ ದೂತನಾದನು. ಸ್ವಯಂಭುವಾದವನು ಅವನನ್ನು ಸೇವಿಸಿದವರಿಗೆ ಸೂತ(ಸಾರಥಿ)ನಾದನು. ಗಾಂಗೇಯ ಭೀಷ್ಮನೊಡನೆ ಅರ್ಜುನನ ಯುದ್ಧದಲ್ಲಿ (“ಆಯುಧಗಳನ್ನು ತೊಡುವುದಿಲ್ಲ” ಎಂಬ) ತನ್ನ ಪ್ರತಿಜ್ಞೆಯನ್ನೇ ಮುರಿದನು. ಇವೆಲ್ಲ ಕೃತ್ಯಗಳು ಪ್ರಾಯಶಃ ಮಹಾತ್ಮನ ಸಂಯೋಗದಿಂದಲೇ ಮಹಿಮೆಯನ್ನು ತಳೆದಿವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ತಾಯಿ ಯಶೋದೆಯಿಂದ ಒರಳಿಗೆ ಕಟ್ಟಿಹಾಕಿಸಿಕ್ಕೊಂಡು ಬಂಧನಕ್ಕೆ ಒಳಗಾದನು. ತಾನೇ ಬಂಧನಕ್ಕೆ ಒಳಗಾದವನು ಉಳಿದವರನ್ನು ಬಂಧನದಿಂದ ಬಿಡಿಸುವುದೂ ಹೇಗೆ? ಆದರೆ ಗೋಪಿಕಾಸ್ತ್ರೀಯರನ್ನು ಸಂಸಾರಬಂಧನದಿಂದಲೇ ಬಿಡಿಸಿದನಲ್ಲ? ಸ್ವತಂತ್ರನಾದವನು ಇನ್ನೊಬ್ಬರಿಗೆ ದೂತನಾಗುವುದು ಉಂಟೆ? ಸ್ವಯಂಭುವಾಗಿ ಸೂತನಾದನಲ್ಲ? (ಸೂತನೆಂದರೆ ಸಾರಥಿ ಎಂಬ ಅರ್ಥವಲ್ಲದೆ ಕ್ಷತ್ರಿಯನಿಂದ ಬ್ರಾಹ್ಮಣಸ್ತ್ರೀಯಲ್ಲಿ ಹುಟ್ಟಿದವನು ಎಂಬ ಅರ್ಥವೂ ಉಂಟು.) ತಾನೇ ಮಾಡಿದ ಪ್ರತಿಜ್ಞೆಯನ್ನು ಅರ್ಜುನ- ಭೀಷ್ಮರ ಯುದ್ಧದಲ್ಲಿ ಮರತನಲ್ಲ? ಹೀಗೂ ಉಂಟೆ? ಲೋಕೋತ್ತರ ಮಹಾತ್ಮನ ಚರಿತ್ರೆಯಲ್ಲಿ ಈ ವಿಧವಾದ ತೊಡಕುಗಳು ಇರುತ್ತವೆ. ಈ ತೊಡಕುಗಳಿಗೂ ಮಹಾತ್ಮನ ಸಂಬಂಧದಿಂದಲೇ ಪ್ರಾಯಶಃ ಮಾಹಾತ್ಮ್ಯೆ.
|| ಇತಿ ಸದಾಶ್ರಿತಪದ್ಧತಿಃ ಅಷ್ಟಮೀ ||
॥ इति सदाश्रितपद्धतिरष्टमी ॥