विश्वास-प्रस्तुतिः
पुंसः कस्यचिदास्थाने द्विजेन्द्रः सूरिसेविते ।
गुणवत् पक्षपातेऽपि मध्ये तिष्ठति मानभृत् ॥ ७-१ ॥
मूलम्
पुंसः कस्यचिदास्थाने द्विजेन्द्रः सूरिसेविते ।
गुणवत् पक्षपातेऽपि मध्ये तिष्ठति मानभृत् ॥ ७-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸುಖ ದುಃಖಗಳಲ್ಲಿ, ಲಾಭಾಲಾಭಗಳಲ್ಲಿ, ದುಷ್ಟಸಜ್ಜನರಲ್ಲಿ ಏಕಪ್ರಕಾರವಾದ ಶಾನ್ತಮನೋಭಾವವೇ ಮಹಾಪುರುಷನ ಲಕ್ಷಣವೆಂಬುದನ್ನು ಈ ಸಮಚಿತ್ತಪದ್ಧತಿಯಲ್ಲಿ ದೇಶಿಕರು ವಿವರಿಸುತ್ತಾರೆ.
(೧) ಅದ್ವಿತೀಯನಾದ ಪುರುಷನ (ಪುರುಷೋತ್ತಮನ) ಸಭೆಯಲ್ಲಿ (ವೈಕುಂಠದಲ್ಲಿ) ನಿತ್ಯಸೂರಿಗಳು ಸೇವಿಸುತ್ತಿರಲು ಪಕ್ಷಿರಾಜನಾದ ಗರುಡನು ಸ್ವಭಾವತಃ ರೆಕ್ಕೆಗಳನ್ನು ಬಡಿಯುವುದಾಗಿದ್ದರೂ ಸಭಾಮಾನನಿಷ್ಠನಾಗಿ ಮಧ್ಯದಲ್ಲಿ ಕದಲದೆ ನಿಂತಿದ್ದಾನೆ. (೨) ಪಂಡಿತರಿಂದ ಕೂಡಿದ ಯಾವನೋ ಒಬ್ಬ ಪುರುಷನ ಆಸ್ಥಾನದಲ್ಲಿ ಬ್ರಾಹ್ಮಣಶ್ರೇಷ್ಠನು ಗುಣವಿಶಿಷ್ಟವಾದ ಪಕ್ಷದಲ್ಲಿ ಆಸಕ್ತಿಯಿದ್ದರೂ ಸಭೆಯ ಮರ್ಯಾದೆಯನ್ನು ಕಾಪಾಡಲಿಕ್ಕಾಗಿ ಮಧ್ಯಸ್ಥನಾಗಿರುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
“ಕಸ್ಯಚಿತ್” ಎಂಬ ಪದಕ್ಕೆ ಮೊದಲನೆಯ ಅರ್ಥದಲ್ಲಿ “ಅದ್ವಿತೀಯ’ ಎಂಬ ಅರ್ಥವನ್ನು ವಾತ್ಸ್ಯ ವೀರರಾಘವಾಚಾರ್ಯರ ವ್ಯಾಖ್ಯಾನದಲ್ಲಿ ಕೊಟ್ಟಿದೆ. ಮೇಲೆ ಭಾವಾರ್ಥದಲ್ಲಿ ಇದೇ ಅರ್ಥವನ್ನೇ ಕೊಡಲಾಗಿದೆ. “ಕಸ್ಯ ಪುಂಸಃ ಚಿದಾಸ್ಥಾನೇ” ಎಂಬುದಾಗಿಯೂ ಅನ್ವಯ ಮಾಡುವ ಸಂಭವವಿದೆ. ಆಗ “ಕಸ್ಯ” ಎಂಬ ಪದಕ್ಕೆ ಶ್ರೀಮನ್ನಾರಾಯಣನ ಎಂಬ ಅರ್ಥ ಸಲ್ಲುತ್ತದೆ.
ಇಲ್ಲಿ ಶ್ಲಿಷ್ಟ ಪದಗಳು : ದ್ವಿಜ= (ಹಕ್ಕಿ, ಬ್ರಾಹ್ಮಣ); ಪಕ್ಷ= (ರೆಕ್ಕೆ, ಪಕ್ಷ).
विश्वास-प्रस्तुतिः
चकोरानादरं देवश्चक्रवाकस्य चादरम् ।
विवस्वान् नाभिसंधत्ते विश्वमेतत् प्रकाशयन् ॥ ७-२ ॥
मूलम्
चकोरानादरं देवश्चक्रवाकस्य चादरम् ।
विवस्वान् नाभिसंधत्ते विश्वमेतत् प्रकाशयन् ॥ ७-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸೂರ್ಯನು ಜಗತ್ತನ್ನೆಲ್ಲಾ ಬೆಳಗುವಾಗ (ಚಂದ್ರಕಿರಣಗಳಲ್ಲಿ ಅಭಿಲಾಷೆಯಿರುವ) ಚಕೋರಪಕ್ಷಿಗಳಲ್ಲಿ ಅನಾದರವನ್ನಾಗಲಿ, (ಬೆಳಕಿನಲ್ಲಿ ಕಾಮಿಸುವ) ಚಕ್ರವಾಕಪಕ್ಷಿಗಳಲ್ಲಿ ಆದರವನ್ನಾಗಲಿ ತೋರಿಸನು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಚಕೋರ ಪಕ್ಷಿಗಳು ಚಂದ್ರನ ಕಿರಣವನ್ನು ಕುಡಿಯುವುವೆಂಬುದು ಕವಿಸಮಯ. ಚಕ್ರವಾಕ ಪಕ್ಷಿಗಳು ಬೆಳಗಿನ ಹೊತ್ತು ಅನೇಕ ಇತರೆ ಪಕ್ಷಿಗಳಂತೆ ಕಾಮಕ್ರೀಡಾಸಕ್ತವಾಗಿರುತ್ತವೆಂಬುದರಲ್ಲಿ ಸೋಜಿಗವಿಲ್ಲ. ಈ ಶ್ಲೋಕ ಶ್ಲೇಷೆಲ್ಲದ ಅನ್ಯೋಕ್ತಿ. ಸೂರ್ಯನು ಯಾವ ರೀತಿ ತನ್ನನ್ನು ಇಷ್ಟಪಡುವವರಲ್ಲಿ ಆದರವನ್ನಾಗಲಿ ತನ್ನನ್ನು ಬಿಟ್ಟು ಚಂದ್ರನಲ್ಲಿ ಆಸಕ್ತಿಯಿರುವವರಲ್ಲಿ ಅನಾದರವನ್ನಾಗಲಿ ತೋರಿಸದೆ ತನ್ನ ಬೆಳಕನ್ನು ವಿಶ್ವಕ್ಕೆಲ್ಲಾ ಬೀರುತ್ತಾನೋ ಅದೇ ರೀತಿ ಮಹಾತ್ಮನು ತನ್ನ “ಹಿಂಬಾಲಕರನ್ನೂ ದ್ವೇಷಿಗಳನ್ನೂ ಒಂದೇ ರೀತಿ ನೋಡುತ್ತಾನೆ ಎಂಬುದೇ ಶ್ಲೋಕದ ತಿರುಳು.
विश्वास-प्रस्तुतिः
देशकालविशेषेण विषमत्त्वं समत्त्ववत् ।
निशादिवसयोर्दृष्टम् अहोरात्रस्य न क्वचित् ॥ ७-३ ॥
मूलम्
देशकालविशेषेण विषमत्त्वं समत्त्ववत् ।
निशादिवसयोर्दृष्टम् अहोरात्रस्य न क्वचित् ॥ ७-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ದೇಶಕಾಲಭೇದದಿಂದ ರಾತ್ರಿ ದಿವಸಗಳ ಪ್ರಮಾಣವು ಬೇರೆ ಬೇರೆ ಯಾಗಿಯೂ ಒಂದೇ ಆಗಿಯೂ ತೋರುತ್ತದೆ. ದಿನರಾತ್ರಿಗಳು ಒಟ್ಟುಗೂಡಿ ಅಹೋರಾತ್ರಿಯೆನಿಸಿಕ್ಕೊಳ್ಳುವ ಕಾಲ ಪ್ರಮಾಣದಲ್ಲಿಯಾದರೋ ಈ ವಿಧವಾದ ವ್ಯತ್ಯಾಸವು ಕಾಣಬರುವುದಿಲ್ಲ. ಅರ್ಥಾತ್ ಬೇರೆ ಬೇರೆ ದೇಶಗಳಲ್ಲಾಗಲಿ ಬೇರೆ ಬೇರೆ ಕಾಲಗಳಲ್ಲಾಗಲಿ ಅಹೋರಾತ್ರಿಯ ಕಾಲಪ್ರಮಾಣವು ಒಂದೇ ಆಗಿರುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಒಂದೇ ಸ್ಥಳದಲ್ಲಿ ಛಳಿಗಾಲದಲ್ಲಿ ದಿನವು ಕುಗ್ಗುತ್ತದೆ, ರಾತ್ರಿಯು ಹಿಗ್ಗುತ್ತದೆ. ಬೇಸಿಗೆಯಲ್ಲಿ ದಿನವು ಹಿಗ್ಗುತ್ತದೆ, ರಾತ್ರಿಯು ಕುಗ್ಗುತ್ತದೆ. ಒಂದೇ ಕಾಲದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅವುಗಳ ಅಕ್ಷಾಂಶಕ್ಕೆ ಅನುಗುಣವಾಗಿ ದಿವಸದ ಪ್ರಮಾಣವು ಬೇರೆಯಾಗಿರುತ್ತದೆ. ಅಹೋರಾತ್ರಿಗೆ ಈ ವಿಧವಾದ ವ್ಯತ್ಯಾಸಗಳು ಇರುವುದಿಲ್ಲ. ಅಹೋರಾತ್ರಿಯ ಕಾಲಪ್ರಮಾಣವು ಹೇಗೆ ದೇಶಭೇದದಿಂದಲಾಗಲಿ ಕಾಲಭೇದದಿಂದಲಾಗಲಿ ಪ್ರಭಾವಿತವಾಗದೆ ಒಂದೇ ಆಗಿರುತ್ತದೋ ಅದೇ ರೀತಿ ಮಹಾತ್ಮರು ದೇಶಕಾಲಭೇದದಿಂದ ಪ್ರಭಾವಿತರಾಗದೆ ಸ್ಥಿರಚಿತ್ತರಾಗಿರುತ್ತಾರೆ.
विश्वास-प्रस्तुतिः
प्रतिगृह्णति जीमूते प्रत्यर्पयति वा स्वयम् ।
अपूरणमपां पत्युः पूरणं च न लक्ष्यते ॥ ७-४ ॥
मूलम्
प्रतिगृह्णति जीमूते प्रत्यर्पयति वा स्वयम् ।
अपूरणमपां पत्युः पूरणं च न लक्ष्यते ॥ ७-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಮೇಘಗಳು ನೀರನ್ನು ಹೀರಲಿ ಇಲ್ಲವೆ ಸುರಿಸಲಿ ಸಮುದ್ರವು ತುಂಬಿಲ್ಲದಂತಾಗಲಿ ತುಂಬಿರುವುದಂತಾಗಲಿ ಕಾಣುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ರೀರಾಮಚಂದ್ರನು “ಸಮುದ್ರ ಇವ ಗಾಂಭೀರ್ಯೇ” ಎಂದು ವಾಲ್ಮೀಕಿಯು ಹೇಳುವುದನ್ನು ಇಲ್ಲಿ ನೆನಪು ಮಾಡಿಕ್ಕೊಳ್ಳಬಹುದು. ಮಹಾಪುರುಷನ ಗಾಂಭೀರ್ಯವು ಸಮುದ್ರದಂತೆ ತಗ್ಗುವುದೂ ಇಲ್ಲ ಹಿಗ್ಗುವುದೂ ಇಲ್ಲ.
विश्वास-प्रस्तुतिः
छिद्रं जनयतां नीचैः अच्छिद्रं बिभ्रतामपि ।
त्रासहीनाः सुमणयः स्वभावादुपकुर्वते ॥ ७-५ ॥
मूलम्
छिद्रं जनयतां नीचैः अच्छिद्रं बिभ्रतामपि ।
त्रासहीनाः सुमणयः स्वभावादुपकुर्वते ॥ ७-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ದೋಷಗಳಿಲ್ಲದ ಒಳ್ಳೆಯ ಮಣಿಯು ಅದರ ಕೆಳಭಾಗದಲ್ಲಿ ತೂತನ್ನು ಕೊರೆದು ಧರಿಸಲಿ, ತೂತನ್ನು ಕೊರೆಯದೇ ಧರಿಸಲಿ ಸಹಜವಾಗಿ ಉಪಕಾರವನ್ನು ಎಸಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಮಣಿಯಲ್ಲಿ ಬರುವ ದೋಷಕ್ಕೆ “ತ್ರಾಸ"ವೆನ್ನುವರು. ದೋಷವಿಲ್ಲದ ಮಣಿಗಳು ಅದನ್ನು ಧರಿಸಿದವರಿಗೆ ಒಳ್ಳೆಯದನ್ನು ಉಂಟು ಮಾಡುವುದೆಂಬ ವಿಷಯ ಜ್ಯೋತಿಶ್ಶಾಸ್ತ್ರವನ್ನು ತಿಳಿದವರಿಗೂ ನಂಬುವವರಿಗೂ ಸೇರಿದೆ. ಒಳ್ಳೆಯ ಮಣಿಯು ಯಾವ ರೀತಿ ತನ್ನಲ್ಲಿ ರಂಧ್ರವನ್ನು ಕೊರೆಯುವದರಿಂದ ಆಗುವ ತೊಂದರೆಯನ್ನು ಲೆಕ್ಕಿಸದೆ ಮಣಿಯನ್ನು ಧರಿಸುವವನಿಗೆ ಶುಭವನ್ನು ಮಾಡುವುದೋ ಅದೇ ರೀತಿ ಮಹಾತ್ಮನು ತನಗೆ ಆಗುವ ತೊಂದರೆಯನ್ನೂ ಲೆಕ್ಕಿಸದೆ ತನ್ನ ಸಹಾಯವು ಬೇಕಾದವರಿಗೆ ಒಳಿತನ್ನು ಮಾಡುತ್ತಾನೆ. ಇಲ್ಲಿ ಮಣಿ ಅಚೇತನವಾದರೂ ಸಚೇತನವೆಂಬಂತೆ ತೊಂದರೆಯನ್ನು ಅನುಭವಿಸುವುದೆಂದು ಹೇಳಿದೆ. ಹೀಗೆ ಅಚೇತನ ವಸ್ತುಗಳಲ್ಲಿ ಚೈತನ್ಯಸಹಜ ಗುಣಗಳನ್ನು ಆರೋಪಿಸುವುದು ಅನ್ಯೋಕ್ತಿಯಲ್ಲಿ ಸಾಧಾರಣ.
विश्वास-प्रस्तुतिः
अनुज्झितसुहृद्भावः सुहृदां दुर्हृदामपि ।
सम इत्येव भाव्योऽपि नम इत्यभिभाव्यते ॥ ७-६ ॥
मूलम्
अनुज्झितसुहृद्भावः सुहृदां दुर्हृदामपि ।
सम इत्येव भाव्योऽपि नम इत्यभिभाव्यते ॥ ७-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ದುಷ್ಟಸ್ವಭಾವವುಳ್ಳವರಲ್ಲಿಯೂ ಒಳ್ಳೆಯಸ್ವಭಾವವುಳ್ಳವರಲ್ಲಿಯೂ ಏಕರೀತಿಯಾಗಿ ಒಳ್ಳೆಯ ಸ್ವಭಾವವನ್ನೇ ತೋರಿಸುವ ಮಹಾತ್ಮರು ಸಮರೆನ್ನಿಸಿಕ್ಕೊಳ್ಳಬೇಕಾದರೂ “ನಮಃ” ಎನ್ನಿಸಿಕ್ಕೊಳ್ಳುತ್ತಾರೆ. ಅಂದರೆ ಎಲ್ಲರೂ ಅವರ ಸಮದೃಷ್ಟಿಯನ್ನು ಮೆಚ್ಚಿ ಅವರಿಗೆ ನಮಸ್ಕಾರವನ್ನು ಸಲ್ಲಿಸುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ದೇಶಿಕರು ಇಲ್ಲಿ “ಸಮ” ಮತ್ತು “ನಮ” ಪದಗಳ ಪ್ರಯೋಗದಿಂದ ವಿರೋಧವು ಸ್ಫುರಿಸುವಂತೆ ತೋರಿಸಿದ್ದಾರೆ. “ಸಮ ಎನ್ನಬೇಕಾದವರನ್ನು ನಮ ಎನ್ನುತ್ತಾರೆ.” ಎಂಬ ವಾಕ್ಯದಲ್ಲಿ ಏನೋ ವಿರೋಧ ಕ್ಷಣಕಾಲ ಭಾಸವಾಗುತ್ತದೆ. ಆದರೆ ಅರ್ಥವನ್ನು ಪರಿಶೀಲಿಸಿದರೆ ಆ ವಿರೋಧ ಮಾಯವಾಗುತ್ತದೆ. ಮತ್ತೂ ಒಂದು ಚಮತ್ಕಾರ ಇಲ್ಲಿ ಉಂಟು. ನಮ ಎಂಬಲ್ಲಿ ನ + ಮೇ ಎಂದೂ ಪದವಿಭಾಗ ಮಾಡಬಹುದು. ಆಗ “ಎಲ್ಲರಲ್ಲೂ ಸಮದೃಷ್ಟಿಯಿದ್ದರೂ ಮಹಾತ್ಮನನ್ನು ‘ಇವನು ನನ್ನಲ್ಲಿ ಅನುಕೂಲನಾಗಿಲ್ಲ’ ಎಂದು ಹೇಳುತ್ತಾರೆ” ಎಂಬ ಅರ್ಥವೂ ಬರುತ್ತದೆ. ಮಧ್ಯಸ್ಥಿಕೆಯನ್ನು ಮಾಡುವವನ ತೀರ್ಪು ಎರಡು ಪಕ್ಷದವರಿಗೂ ಅಸಮರ್ಪಕವೆಂದು ತೋರಿದರೆ ಆ ತೀರ್ಪು ನಿಜವಾಗಿಯೂ ಒಳ್ಳೆಯ ತೀರ್ಪೇ ಅಲ್ಲವೆ?
विश्वास-प्रस्तुतिः
मरुद्भिः पीड्यमानोऽपि संत्यक्तोऽपि दिवानिशम् ।
विषयस्नेहरहितो रत्नदीपः प्रकाशते ॥ ७-७ ॥
मूलम्
मरुद्भिः पीड्यमानोऽपि संत्यक्तोऽपि दिवानिशम् ।
विषयस्नेहरहितो रत्नदीपः प्रकाशते ॥ ७-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಗಾಳಿಯ ಹೊಡೆತವಿದ್ದರೂ ಹಗಲಿರುಳು ಗಮನಕೊಡದೆ ಇದ್ದರೂ ಆಸರೆಯಲ್ಲಿ ಎಣ್ಣೆಯಿಲ್ಲದೆ ರತ್ನದೀಪವು ಬೆಳಗುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸಂಸ್ಕೃತ ಕಾವ್ಯಗಳಲ್ಲಿ ರತ್ನದೀಪವು ಮಿಣುಕು ಹುಳುವಿನಂತೆ ಸ್ವಯಂ ಪ್ರಕಾಶಮಾನವಾಗಿರುತ್ತದೆಂದು ಉಲ್ಲೇಖಿಸುತ್ತಾರೆ. ಕೆಲವು ಖನಿಜಗಳು ಜೈವಿಕಪದಾರ್ಥಗಳು ಸ್ವಯಂ ಪ್ರಕಾಶಮಾನವಾಗಿರುತ್ತವೆ ಎಂಬುದೇನೋ ನಿಜ. ಸಾಧಾರಣವಾದ ರತ್ನಗಳು ಪ್ರತಿಫಲನದಿಂದ ಹೊಳೆಯುತ್ತವೆಯೇ ಹೊರತು ಸ್ವಯಂ ಪ್ರಕಾಶಕಗಳಲ್ಲ. ಈ ಶ್ಲೋಕದಲ್ಲಿ “ವಿಷಯಸ್ನೇಹರಹಿತಃ” ಎಂಬ ಪದದ ಉಪಯೋಗದಿಂದ ಈ ಅನ್ಯೋಕ್ತಿ ವಿಷಯಸುಖಗಳನ್ನೂ ಸಂಸಾರದಲ್ಲಿನ ವ್ಯಾಮೋಹವನ್ನೂ ತೊರೆದವನಿಗೆ ಅನ್ವಯಿಸುತ್ತದೆಂಬುದು ಸ್ಪಷ್ಟ. ವಿರಕ್ತನ ತೇಜಸ್ಸು ನಿರಪೇಕ್ಷವಾಗಿರುತ್ತದೆ.
विश्वास-प्रस्तुतिः
जनयत्यनिले दावं शमयत्यपि तोयदे ।
अभिन्नैः स्थीयते पुण्यैराश्रमारण्यपादपैः ॥ ७-८ ॥
मूलम्
जनयत्यनिले दावं शमयत्यपि तोयदे ।
अभिन्नैः स्थीयते पुण्यैराश्रमारण्यपादपैः ॥ ७-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(ಕಾಡಿನ ಮರಗಳಲ್ಲಿ) ಗಾಳಿಯು ಬಂದಾಗ ಕಾಡಿಗಿಚ್ಚು ಉಂಟಾಗುತ್ತಿರಲು, ಮೋಡಗಳು ಮಳೆ ಸುರಿಸಲು ಕಿಚ್ಚು ಆರುತ್ತಿರಲು, ಪವಿತ್ರಕರವಾದ ಋಷ್ಯಾಶ್ರಮದ ಮರಗಳು (ಈ ವ್ಯತ್ಯಾಸಗಳಿಲ್ಲದೆ) ಒಂದೇ ರೀತಿ ಇರುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಋಷ್ಯಾಶ್ರಮದ ಮರಗಳಂತೆ ಸ್ಥಿರಚಿತ್ತನ ಮನಸ್ಸೂ ಕೂಡ ಸುಖ ದುಃಖಗಳಿಂದ ಪ್ರಭಾವಿತವಾಗದೆ ಏಕರೀತಿ ಇರುತ್ತದೆ ಎಂಬುದೇ ಈ ಅನ್ಯೋಕ್ತಿಯ ಧ್ವನಿ. ಈ ಸ್ಥಿರಚಿತ್ತತೆಯೂ ಪೂರ್ವಜನ್ಮಸುಕೃತದ ಫಲವೆಂಬುದು “ಪುಣ್ಯೈಃ” ಎಂಬ ಪದದಿಂದ ಸೂಚಿತವಾಗುತ್ತದೆ.
विश्वास-प्रस्तुतिः
अहार्येण कदाप्यन्यैः असंहार्येण केनचित् ।
तितिक्षाकवचेनैव सर्वं जयति संवृतः ॥ ७-९ ॥
मूलम्
अहार्येण कदाप्यन्यैः असंहार्येण केनचित् ।
तितिक्षाकवचेनैव सर्वं जयति संवृतः ॥ ७-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಇತರರು ಯಾರೂ ಎಂದಿಗೂ ಅಪಹರಿಸಲಾಗದ ಮತ್ತು ನಾಶಪಡಿಸಲಾಗದ ತಾಳ್ಮೆಯೆಂಬ ಕವಚವನ್ನು ಧರಿಸಿದವನು ಎಲ್ಲವನ್ನೂ ಗೆಲ್ಲುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಯೋಧನ ಕವಚವನ್ನು ಕಳ್ಳರು ಕದಿಯಬಹುದು, ಇತರರು ನಾಶಪಡಿಸಬಹುದು. ಸ್ಥಿರಚಿತ್ತನ ಸಹನೆಯಾದರೋ ಅಹಾರ್ಯ ಹಾಗೂ ಅಸಂಹಾರ್ಯ.
विश्वास-प्रस्तुतिः
अमृतस्यन्दिनं कश्चित् कृष्णमेघं द्विजः स्मरन् ।
उदन्यया न वेशन्तम् उदन्वन्तं च वीक्षते ॥ ७-१० ॥
मूलम्
अमृतस्यन्दिनं कश्चित् कृष्णमेघं द्विजः स्मरन् ।
उदन्यया न वेशन्तम् उदन्वन्तं च वीक्षते ॥ ७-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಹಕ್ಕಿಯೊಂದು (ಚಾತಕ) ಬಾಯಾರಿಕೆಯಿಂದ ಅಮೃತಪ್ರಾಯವಾದ ನೀರನ್ನು ಸುರಿಸುವ ಕಾರ್ಮೋಡವನ್ನು ನೆನೆಯುತ್ತಾ ಚಿಕ್ಕ ಹೊಂಡವನ್ನಾಗಲಿ ಸಮುದ್ರವನ್ನಾಗಲಿ ನೋಡುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಆತ್ಮಜ್ಞಾನಕ್ಕಾಗಿ ತೃಷಿತನಾದ ಸಾಧಕನು ಸ್ಥಿರಚಿತ್ತನಾಗಿ ಶ್ರೀಕೃಷ್ಣನಲ್ಲೇ ಮನಸ್ಸುಳ್ಳವನಾಗಿ ಉಳಿದ ಕ್ಷುದ್ರ ದೇವತೆಗಳಲ್ಲಾಗಲಿ ವಿಷಯಗಳಲ್ಲಾಗಲಿ ಆಸ್ಥೆಯನ್ನು ತೋರಿಸುವುದಿಲ್ಲ ವೆಂಬ ಧ್ವನಿಯನ್ನು “ದ್ವಿಜಃ” ಮತ್ತು “ಕೃಷ್ಣಮೇಘಃ” ಎಂಬ ಪದಗಳು ಪುಷ್ಟೀಕರಿಸುತ್ತವೆ. ಚಾತಕ ಪಕ್ಷಿಯು ಮಳೆಯ ನೀರಿಗೇ ಕಾದು ಮಳೆಯ ನೀರಿನಿಂದಲೇ ತೃಪ್ತಿಯನ್ನು ಪಡೆಯುತ್ತದೆ ಎಂಬುದು ಕವಿಸಮಯ.
विश्वास-प्रस्तुतिः
विदधातु धाम तमसा कृतेन किं
यदि वा न वेत्ति न विधिर्न वा वयं ।
प्रथमोपकारि चरमं यतस्ततः
प्रतियोगिनो भवति तस्य सार्थता ॥ ७-११ ॥
मूलम्
विदधातु धाम तमसा कृतेन किं
यदि वा न वेत्ति न विधिर्न वा वयं ।
प्रथमोपकारि चरमं यतस्ततः
प्रतियोगिनो भवति तस्य सार्थता ॥ ७-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ವಿಧಿಯು (ಸೂರ್ಯನ) ರಶ್ಮಿಯನ್ನು ಸೃಷ್ಟಿಸಲಿ ಕತ್ತಲನ್ನೇಕೆ ಸೃಷ್ಟಿಸಿದನು ? (ಎಂದು ಕೇಳಬಹುದು). (ಇದಕ್ಕೆ ಉತ್ತರವು) ವಿಧಿಗಾಗಲಿ ನಮಗಾಗಲಿ ತಿಳಿದಿಲ್ಲವೆಂದಲ್ಲ. (ಮೊದಲು ಹೇಳಿದ) ರಶ್ಮಿಗೆ ವಿರೋಧಿಯಾಗಿರುವುದೇ (ಕಡೆಯಲ್ಲಿ ಹೇಳಿರುವ) ಕತ್ತಲೆಯು ರಶ್ಮಿಗೆ ಮಾಡಿದ ಉಪಕಾರವು ಹಾಗೂ ಕತ್ತಲೆಯ ಸಾರ್ಥಕ್ಯವು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಬೆಳಕಿನ ಸುಖವನ್ನು ಅನುಭವಿಸಬೇಕಾದರೆ ಕತ್ತಲೆಯಿದ್ದರೆ ತಾನೇ? ಅದೇ ರೀತಿ, ಸಜ್ಜನರ ಮಹಿಮೆಯ ಉನ್ನತಿಗೆ ದುರ್ಜನರೂ ಅವಶ್ಯಕ ಎಂಬುದು ಈ ಶ್ಲೋಕದ ಅಭಿಪ್ರಾಯ. ಪುರಂದರ ದಾಸರ “ನಿಂದಕರಿರಬೇಕು” ಎಂಬ ದೇವರನಾಮವನ್ನು ಇಲ್ಲಿ ನೆನೆಯಬಹುದು.
ವೈಜ್ಞಾನಿಕದೃಷ್ಟಿಯಲ್ಲಿ ಬೆಳಕಿನ ಅಭಾವವೇ ಕತ್ತಲೆ. ಆದರೆ ಕೆಲವು ಸನಾತನ ದಾರ್ಶನಿಕರು ಬೆಳಕಿನಂತೆ ಕತ್ತಲೆಯೂ ಒಂದು ಸತ್ತ್ವವೆಂದು ನಂಬುತ್ತಾರೆ.
विश्वास-प्रस्तुतिः
विभवेष्वपि दोषगंधहीनः
प्रलयेऽपि स्थितिमक्षयां दधानः ।
विषमेष्वपि भावयन् समत्त्वं
पुरुषः कोऽपि हृदि स्थितः प्रजानाम् ॥ ७-१२ ॥
मूलम्
विभवेष्वपि दोषगंधहीनः
प्रलयेऽपि स्थितिमक्षयां दधानः ।
विषमेष्वपि भावयन् समत्त्वं
पुरुषः कोऽपि हृदि स्थितः प्रजानाम् ॥ ७-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ವಿಭವಾವತಾರಗಳಲ್ಲಿಯೂ ದೋಷದ ಗಂಧವೂ ಇಲ್ಲದ, ಪ್ರಲಯ ಕಾಲದಲ್ಲಿಯೂ ನಾಶರಹಿತನಾದ, ಪ್ರತಿಕೂಲರಾದವರಲ್ಲಿಯೂ ಒಂದೇ ರೀತಿಯಾದ (ಪ್ರಸನ್ನತೆಯುಳ್ಳ) ಅನಿರ್ವಚನೀಯನಾದ ಪುರುಷನು (ಪುರುಷೋತ್ತಮನು) ಜನರ ಹೃದಯದಲ್ಲಿ ನೆಲೆಸಿದ್ದಾನೆ. (೨) ಐಶ್ವರ್ಯ ಬಂದಾಗಲೂ ಅಹಂಕಾರ ದೃಪ್ತತೆ ಮೊದಲಾದ ದೋಷಗಳಿಲ್ಲದ, ಬಂದ ಐಶ್ವರ್ಯವು ಕ್ಷೀಣವಾದಾಗಲೂ ನಿರ್ವಿಕಾರಚಿತ್ತನಾದ ಮಹಾಪುರುಷನು ಜನರ ಮನಸ್ಸಿನಲ್ಲಿ ನೆಲೆಸಿರುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ದೇಶಿಕರು ಪದ್ಧತಿಯ ಕಡೆಯ ಶ್ಲೋಕದಲ್ಲಿ ಪುರುಷೋತ್ತಮನನ್ನು ನೆನೆಯುತ್ತಾ ಮಹಾಪುರುಷನ ಸ್ಥಿರಚಿತ್ತತೆಯನ್ನೂ ಹೊಗಳಿ ಅಂತಹವನು ಚಿರಸ್ಮರಣೀಯನು ಎಂದು ಹೇಳಿದ್ದಾರೆ.
|| ಇತಿ ಸಮಚಿತ್ತಪದ್ಧತಿಃ ಸಪ್ತಮೀ ||
॥ इति समचित्तपद्धतिः सप्तमी ॥