०६ महापुरुषपद्धतिः

विश्वास-प्रस्तुतिः

सतामेव खपुष्पत्वं येषां यत्सदसत्त्वयोः ।
न जातु तस्य तत्ताभ्यामिति तेषां स विश्वदृक् ॥ ६-१ ॥

मूलम्

सतामेव खपुष्पत्वं येषां यत्सदसत्त्वयोः ।
न जातु तस्य तत्ताभ्यामिति तेषां स विश्वदृक् ॥ ६-१ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ದೇಶಿಕರು ಕಳೆದ ಐದು ಪದ್ಧತಿಗಳಲ್ಲಿ ದುರ್ಜನರನ್ನು ವರ್ಣಿಸಿ ಇನ್ನುಳಿದ ಏಳು ಪದ್ಧತಿಗಳಲ್ಲಿ ಸಜ್ಜನರನ್ನು ವರ್ಣಿಸುತ್ತಾರೆ. ಈ ಆರನೆ ಪದ್ಧತಿಯಲ್ಲಿ ಮಹಾಪುರುಷರ ಗುಣಗಳನ್ನು ತೋರಿಸುತ್ತಾರೆ:

(೧) (ಹಗಲಿನಲ್ಲಿ) ಯಾವನ ಇರುವಿಕೆಯಿಂದ ನಕ್ಷತ್ರಗಳಿಗೆ ಆಕಾಶಕುಸುಮದಂತೆ ಸತ್ತೆಯೇ ಇಲ್ಲವೋ, (ಇರುಳಿನಲ್ಲಿ) ಯಾವನ ಇಲ್ಲದೆ ಇರುವುದರಿಂದ ನಕ್ಷತ್ರಗಳು ಆಕಾಶದಲ್ಲಿ ಪುಷ್ಪಗಳಂತೆ (ಕಂಗೊಳಿಸುತ್ತವೋ), ಯಾವನಿಗೆ ನಕ್ಷತ್ರಗಳ ಇರುವಿಕೆಯಾಗಲಿ ಇಲ್ಲದೆ ಇರುವುದಾಗಲಿ ನಿಷ್ಪರಿಣಾಮಕಾರಿಯೋ ಅವನೇ ವಿಶ್ವವನ್ನೆಲ್ಲಾ ಬೆಳಗುವ ಸೂರ್ಯನು. (೨) ಯಾವನ ಇರುವಿಕೆಯಿಂದ ಮತ್ತು ಇಲ್ಲದೆ ಇರುವುದರಿಂದ (ಇತರೆ) ಸಜ್ಜನರು ಆಕಾಶಕುಸುಮದಂತೆ ಅವರ ಸತ್ತೆಯೇ ಇಲ್ಲದಂತೆ ಆಗುತ್ತಾರೋ ಮತ್ತು (ಇತರೆ) ಸಜ್ಜನರ ಇರುವಿಕೆಯಾಗಲಿ ಇಲ್ಲದಿರುವುದಾಗಲಿ ಯಾವನಿಗೆ ನಿಷ್ಪರಿಣಾಮಕಾರಿಯೋ ಅವನೇ ಸರ್ವಜ್ಞನು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲೋಕದ ತಿರುಳನ್ನು ಅರಿಯಲು ಕೊಂಚ ವಿವರಣೆ ಅಗತ್ಯ. ಮಹಾಪ್ರಾಜ್ಞನ ಸಾನ್ನಿಧ್ಯದಲ್ಲಿ ಇತರೆ ಪ್ರಾಜ್ಞರು ಶೋಭಿಸುವುದಿಲ್ಲ ಹಾಗಾದರೂ ಮಹಾಪ್ರಾಜ್ಞನ ಸಾನ್ನಿಧ್ಯವು ಇತರೆ ಪ್ರಾಜ್ಞರಿಗೆ ಅತ್ಯಾವಶ್ಯಕ ಕೂಡ. ಇತರೆ ಪ್ರಾಜ್ಞರು ಇರಲಿ ಬಿಡಲಿ ಮಹಾಪ್ರಾಜ್ಞನಿಗೆ ಯಾವ ಪರಿಣಾಮವೂ ಇಲ್ಲ. ಇತರೆ ಪ್ರಾಜ್ಞರಿಗೆ ಮಹಾಪ್ರಾಜ್ಞನ ಸನ್ನಿಧಿಯಲ್ಲಿ ಆಕಾಶಕುಸುಮದಂತೆ ತಮ್ಮ ಸತ್ತೆಯೇ ಇಲ್ಲದಂತಾಗುತ್ತದೆಂದು ಕೊಂಚ ಉತ್ಪ್ರೇಕ್ಷೆ ಮಾಡಿ ಹೇಳಲಾಗಿದೆ. ಅಂತಹ ಮಹಾಪುರುಷರ ಮಾರ್ಗದರ್ಶನ ಇಲ್ಲದೆ ಹೋದರೂ ಸಜ್ಜನರ ಸತ್ತೆಗೆ ಧಕ್ಕೆಯೇ. ಇದಕ್ಕೆ ಶ್ಲೇಷೆಯ ಮೂಲಕ ದೃಷ್ಟಾನ್ತವನ್ನು ದೇಶಿಕರು ಕೊಟ್ಟಿದ್ದಾರೆ. ಸೂರ್ಯನ ಪ್ರಖರತೆಯಲ್ಲಿ ನಕ್ಷತ್ರಗಳು ಆಕಾಶಕುಸುಮದಂತೆ ಇಲ್ಲವಾಗುತ್ತವೆ. ಸೂರ್ಯನು ಇಲ್ಲದೆ ಇದ್ದರೆ ಆಕಾಶಕುಸುಮ ಅಂದರೆ ಆಕಾಶದಲ್ಲಿ ಪುಷ್ಪಗಳಂತೆ ಕಂಗೊಳಿಸುತ್ತವೆ! (ಇಲ್ಲಿ ಶ್ಲೇಷೆಯ ಚಮತ್ಕಾರವನ್ನು ಸವಿಯಬೇಕು.) ನಕ್ಷತ್ರಗಳು ಇರಲಿ ಬಿಡಲಿ ಸೂರ್ಯನ ಪ್ರಭೆಗೆ ಯಾವ ಪರಿಣಾಮವೂ ಇಲ್ಲ.

विश्वास-प्रस्तुतिः

सन्नियोगेन शिष्टानां वर्णादीनां स्वसूत्रतः ।
प्रवृत्तिं च निवृत्तिं च न भिन्द्यात् साधुशब्दवित् ॥ ६-२ ॥

मूलम्

सन्नियोगेन शिष्टानां वर्णादीनां स्वसूत्रतः ।
प्रवृत्तिं च निवृत्तिं च न भिन्द्यात् साधुशब्दवित् ॥ ६-२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಸಮೀಚೀನ ಶಬ್ದ ಜ್ಞಾನವುಳ್ಳ ವ್ಯಾಕರಣ ಪಂಡಿತನು ಪಾಣಿನಿಯ ಸೂತ್ರಕ್ಕನುಸಾರವಾಗಿ ವರ್ಣಗಳಿಗೆ ಒಟ್ಟಿಗೆ ವಿಧಿಸಿರುವ ವಿಧಿಗಳನ್ನು ಒಡೆಯದೆ ಒಟ್ಟಿಗೇ ಪ್ರವರ್ತಿಸಬೇಕು ಇಲ್ಲವೆ ನಿವರ್ತಿಸಬೇಕು. (೨) ಸಾಧುವೆಂಬ ಹೆಸರನ್ನು ಪಡೆದವನು ವರ್ಣಾಶ್ರಮವಿಷಯದಲ್ಲಿ ಆಯಾಯಾ ಆಪಸ್ತಂಬವೇ ಮೊದಲಾದ ಸೂತ್ರಗಳು ಒಟ್ಟಿಗೆ ಹೇಳಿರುವ ವಿಧಿಗಳನ್ನು ಒಡೆಯದೆ ಅವುಗಳನ್ನು ಒಟ್ಟಿಗೇ ನಡೆಸಬೇಕು ಇಲ್ಲದಿದ್ದರೆ ಒಟ್ಟಿಗೇ ಕೈಬಿಡಬೇಕು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲಿಷ್ಟ ಪದಗಳು: ವರ್ಣ= ( ವ್ಯಾಕರಣಕ್ಕೆ ಸಂಬಂಧಿಸಿದ ವರ್ಣ, ಧರ್ಮಶಾಸ್ತ್ರದಲ್ಲಿ ಹೇಳಿರುವ ವರ್ಣ ); ಸಾಧುಶಬ್ದವಿತ್= (ಶಬ್ದಗಳ ಯಥಾರ್ಥಜ್ಞಾನವನ್ನು ಪಡೆದವನು, ಸಾಧುವೆಂಬ ಶಬ್ದವನ್ನು ಪಡೆದವನು). ಇಲ್ಲಿನ ಎರಡು ಅರ್ಥಗಳೂ ಶಾಸ್ತ್ರಜ್ಞರಿಗೇ ಸಂಬಂಧಿಸಿದುದು. ಮೊದಲನೆಯದು ವ್ಯಾಕರಣಶಾಸ್ತ್ರಜ್ಞರಿಗೆ, ಎರಡನೆಯದು ಧರ್ಮಶಾಸ್ತ್ರಜ್ಞರಿಗೆ.

विश्वास-प्रस्तुतिः

मुक्तानुगुणवृत्तानां भजतां पावनीं गतिम् ।
नित्यं विष्णुपदे सक्तिः तारकाणां सितात्मनाम् ॥ ६-३ ॥

मूलम्

मुक्तानुगुणवृत्तानां भजतां पावनीं गतिम् ।
नित्यं विष्णुपदे सक्तिः तारकाणां सितात्मनाम् ॥ ६-३ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಮುತ್ತಿನಂತೆ ಗುಂಡಗಿರುವ, ಪರಿಶುದ್ಧವಾದ ಸ್ವರೂಪವುಳ್ಳ, ಬೆಳ್ಳಗಿರುವ ನಕ್ಷತ್ರಗಳು ವಿಷ್ಣುಪದ ಎಂದರೆ ಆಕಾಶದಲ್ಲಿಯೇ ಯಾವಾಗಲೂ ಇರುತ್ತವೆ. (೨) ಸಂಸಾರಬಂಧನದಿಂದ ಮುಕ್ತರಾದವರಿಗೆ ತಕ್ಕ ಆಚಾರವುಳ್ಳ, ಪವಿತ್ರವಾದ ದಾರಿಯನ್ನು ಹಿಡಿದಿರುವ, ನಿಷ್ಕಳಂಕಮನಸ್ಸುಳ್ಳ, ಆಶ್ರಯಿಸಿರುವವರನ್ನು ಸಂಸಾರಸಾಗರದಾಚೆ ದಾಟಿಸುವ ಆಚಾರ್ಯರು ಸದಾ ವಿಷ್ಣುವಿನ ಪಾದಗಳಲ್ಲೇ ಆಸಕ್ತರಾಗಿರುತ್ತಾರೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲೇಷೆ ಇರುವ ಪದಗಳು: ಮುಕ್ತ= (ಮುತ್ತು, ಸಂಸಾರಬಂಧನದಿಂದ ಬಿಡಿಸಿಕ್ಕೊಂಡವನು); ವೃತ್ತ= (ಗುಂಡಗೆ, ನಡತೆ); ವಿಷ್ಣುಪದ= (ಆಕಾಶ, ವಿಷ್ಣುವಿನ ಪಾದಗಳು); ತಾರಕ= (ತಾರೆ, ದಾಟಿಸುವ); ಸಿತ= (ಬೆಳ್ಳನೆಯ, ನಿಷ್ಕಲಂಕ).

विश्वास-प्रस्तुतिः

धर्मसेतुनिविष्टानाम् अचलानां गरीयसाम्
दक्षिणोत्तरवृत्तीनां दृष्टिः पापनिवर्तिनी ॥ ६-४ ॥

मूलम्

धर्मसेतुनिविष्टानाम् अचलानां गरीयसाम्
दक्षिणोत्तरवृत्तीनां दृष्टिः पापनिवर्तिनी ॥ ६-४ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಶ್ರೀರಾಮನಿಂದ ಧರ್ಮಸ್ಥಾಪನೆಗಾಗಿ ಕಟ್ಟಲಾದ, ಅಲುಗಾಡಿಸಲು ಅಸಾಧ್ಯವಾದ, ಅತಿಭಾರವಾದ, ದಕ್ಷಿಣ-ಉತ್ತರವಾಗಿರುವ ಸೇತುವಿನ ದರ್ಶನವು ಎಲ್ಲ ಪಾಪಗಳನ್ನೂ ಪರಿಹರಿಸುವುದು. (೨) ಧರ್ಮದ ಮರ್ಯಾದೆಗೆ ಸೀಮಿತರಾದ, ಚಂಚಲತೆಯಿಲ್ಲದ, ಹೆಚ್ಚು ಘನತೆಯುಳ್ಳ, ಸರಳವಾದ ಶ್ರೇಷ್ಠವಾದ ಆಚಾರವುಳ್ಳ ಆಚಾರ್ಯರ ಕಟಾಕ್ಷವು ಎಲ್ಲ ಪಾಪಗಳನ್ನೂ ಪರಿಹರಿಸುತ್ತದೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲಿಷ್ಟ ಪದಗಳು: ಅಚಲ= (ಚಲಿಸದ, ಚಂಚಲತೆಯಿಲ್ಲದ); ಗರೀಯಸ್= (ಹೆಚ್ಚು ಭಾರವಾದ, ಹೆಚ್ಚು ಘನತೆಯುಳ್ಳ); ದಕ್ಷಿಣ= ( ದಕ್ಷಿಣ ದಿಕ್ಕು, ಸರಳವಾದ); ಉತ್ತರ= ( ಉತ್ತರ ದಿಕ್ಕು, ಶ್ರೇಷ್ಠ).

विश्वास-प्रस्तुतिः

अनङ्गीकृतकामानाम् अनुमानार्हवर्ष्मणाम् ।
धृतनिर्मलतीर्थानां भूतिलेपो विभूषणम् ॥ ६-५ ॥

मूलम्

अनङ्गीकृतकामानाम् अनुमानार्हवर्ष्मणाम् ।
धृतनिर्मलतीर्थानां भूतिलेपो विभूषणम् ॥ ६-५ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಕಾಮದೇವನನ್ನು ಸುಟ್ಟು ಅವನನ್ನು ಅನಙ್ಗನನ್ನಾಗಿ ಮಾಡಿದ, ಉಮಾದೇವಿಯನ್ನಲ್ಲದೆ ಬೇರೆ ಯಾರಿಗೂ ತಕ್ಕುದಲ್ಲವಾದ ಶರೀರವುಳ್ಳ, ಶಿರಸ್ಸಿನಲ್ಲಿ ಸ್ವಚ್ಛಗಙ್ಗಾತೀರ್ಥವನ್ನು ಧರಿಸಿರುವ ಶಿವನಿಗೆ ಬೂದಿಯ ಲೇಪವೂ ಕೂಡ ಭೂಷಣವೇ ಸರಿ. (೨) ಕಾಮವನ್ನು ಅಂಗೀಕರಿಸದ ಅರ್ಥಾತ್ ಕಾಮಾರ್ಥಕರ್ಮಗಳನ್ನು ಮಾಡದ, ಆ ಸಂಕಲ್ಪವನ್ನನುಸರಿಸಿಯೇ ಗೌರವಕ್ಕೆ ಪಾತ್ರವಾದ ಶರೀರವುಳ್ಳ, ಶುದ್ಧ ಶಾಸ್ತ್ರಗಳನ್ನು ಗ್ರಹಿಸಿರುವ ಮಹಾತ್ಮರಿಗೆ ಐಶ್ವರ್ಯದ ಅನುಭವವೂ ಅಲಂಕಾರವೇ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಗೌರವಾರ್ಥವಾಗಿ ಶಿವನಿಗೆ ಬಹುವಚನವು ಉಪಯುಕ್ತವಾಗಿದೆ. ಇಲ್ಲವೆ, ಏಕಾದಶ ರುದ್ರರು ಎಂಬರ್ಥದಲ್ಲೂ ಬಹುವಚನ ಪ್ರಯುಕ್ತವಾಗಿದೆ ಎನ್ನಬಹುದು. ಶ್ಲಿಷ್ಟ ಪದಗಳು: (ಅನಙ್ಗೀ+ಕೃತ+ಕಾಮಾನಾಮ್, ಅನ್+ಅಙ್ಗೀಕೃತ+ ಕಾಮಾನಾಮ್); (ಅನ್+ಉಮಾ+ನ+ಅರ್ಹ+ವರ್ಷ್ಮ, ಅನು+ಮಾನಾರ್ಹ+ವರ್ಷ್ಮ); ತೀರ್ಥ= (ಪಾವನವಾದ ಗಙ್ಗೆ, ಶಾಸ್ತ್ರ); ಭೂತಿ= (ಬೂದಿ, ಐಶ್ವರ್ಯ). ನಿಷ್ಕಾಮಕರ್ಮನಿಗೆ ಭಗವಂತನ ಅನುಗ್ರಹದಿಂದ ಏನೇ ಎಷ್ಟೇ ಐಶ್ವರ್ಯ ಬಂದರೂ ಅವೆಲ್ಲ ಲೇಪ ಮಾತ್ರ ಎಂಬ ಧ್ವನಿಯು “ಭೂತಿಲೇಪ” ಎಂಬ ಪದದ ಪ್ರಯೋಗದಿಂದ ಸೊಗಸಾಗಿ ಮೂಡಿಬಂದಿದೆ.

ಅನನ್ತಖ್ಯಾತಿಸಂಪನ್ನಃ ಶುದ್ಧಸತ್ತ್ವಃ ಸಧೀಬಲಃ |

ಧತ್ತೇ ಬಹುಮುಖಂ ಭೋಗಂ ಶ್ರುತಿದೃಷ್ಟಿಃ ಸ್ಥಿರಾಶಯಃ || ೬-೬ ||

विश्वास-प्रस्तुतिः

अनन्तख्यातिसम्पन्नः शुद्धसत्त्वः सधीबलः ।
धत्ते बहुमुखं भोगं श्रुतिदृष्टिः स्थिराशयः ॥ ६-६ ॥

मूलम्

अनन्तख्यातिसम्पन्नः शुद्धसत्त्वः सधीबलः ।
धत्ते बहुमुखं भोगं श्रुतिदृष्टिः स्थिराशयः ॥ ६-६ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಅನನ್ತನೆಂದು ಪ್ರಖ್ಯಾತನಾದ, ಸ್ವರೂಪದಲ್ಲಿ ಶುಕ್ಲವರ್ಣನಾದ, ಜ್ಞಾನ ಮತ್ತು ಬಲ ಎಂಬ ಗುಣಗಳಿಂದ ಕೂಡಿದ, ಕಣ್ಣಿನಿಂದಲೇ ಕೇಳುವ, ಭೂಮಿಯಮೇಲೆ ಮಲಗುವ (ಆದಿಶೇಷನು) ಬಹುಮುಖವಾದ ಹೆಡೆಗಳನ್ನು ಹೊಂದಿದ್ದಾನೆ. (೨) ಎಲ್ಲೆಯಿಲ್ಲದ ಪ್ರಖ್ಯಾತಿಯುಳ್ಳ, ಶುದ್ಧಸತ್ತ್ವಗುಣಾತ್ಮಕನಾದ, ಜ್ಞಾನ ಮತ್ತು ಕರ್ಮಾನುಷ್ಠಾನಕ್ಕೆ ಬೇಕಾದ ಬಲ ಇವೆರಡನ್ನೂ ಹೊಂದಿರುವ, ವೇದಗಳೇ ದರ್ಶನಸಾಧನವಾದ, ನಿಶ್ಚಲವಾದ ಅಭಿಪ್ರಾಯವುಳ್ಳ ಮಹಾತ್ಮನು ಬಹುಮುಖವಾದ ಭೋಗಗಳನ್ನು ಅನುಭವಿಸುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಮಹಾಪುರುಷನು ಭಗವದನುಗ್ರಹದಿಂದ ಒದಗಿಬಂದ ಐಶ್ವರ್ಯಮೂಲವಾದ ಭೋಗಗಳನ್ನು ಅನುಭವಿಸುತ್ತಾನೆ ಎಂದು ಅರ್ಥಮಾಡಬಹುದು. ಅಂತಹ ಮಹಾಪುರುಷನಿಗೆ ಒದಗಿಬಂದ ಬ್ರಹ್ಮಾನನ್ದವೇ ಎಲ್ಲ ಭೋಗಗಳಿಗೂ ಸಮವೆಂದಾದರೂ ಅರ್ಥಮಾಡಬಹುದು. ಶ್ಲೇಷೆಯಿರುವ ಪದಗಳು: ಅನನ್ತ= (ಆದಿಶೇಷ, ಎಲ್ಲೆಯಿಲ್ಲದ); ಶುದ್ಧಸತ್ತ್ವಃ= (ಶುಭ್ರವರ್ಣಸ್ವರೂಪ, ಸಾತ್ತ್ವಿಕ); ಭೋಗ= (ಹೆಡೆ, ಐಹಿಕಸುಖ); ಶ್ರುತಿದೃಷ್ಟಿಃ= (ಕಣ್ಣಿನಿಂದ ಕೇಳುವ, ವೇದವೇ ಆಧಾರವಾದ ದರ್ಶನವುಳ್ಳವನು); ಸ್ಥಿರಾಶಯಃ= (ಸ್ಥಿರಾ+ಶಯಃ, ಸ್ಥಿರ+ಆಶಯಃ).

ಅಹಾರ್ಯಃ ಸರ್ವಮಧ್ಯಸ್ಥಃ ಕಾಞ್ಚನದ್ಯುತಿಮುದ್ವಹನ್ |

ಸತ್ಪ್ರದಕ್ಷಿಣಯೋಗ್ಯತ್ವಮ್ ಉಪಯಾತಿ ಮಹೋನ್ನತಃ || ೬-೭ ||

विश्वास-प्रस्तुतिः

अहार्यः सर्वमध्यस्थः काञ्चनद्युतिमुद्वहन् ।
सत्प्रदक्षिणयोग्यत्वम् उपयाति महोन्नतः ॥ ६-७ ॥

मूलम्

अहार्यः सर्वमध्यस्थः काञ्चनद्युतिमुद्वहन् ।
सत्प्रदक्षिणयोग्यत्वम् उपयाति महोन्नतः ॥ ६-७ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಎಲ್ಲ ಭೂಭಾಗಗಳಿಗೂ ಮಧ್ಯದಲ್ಲಿರುವ, ಅತ್ಯಂತ ಎತ್ತರವಾದ (ಮೇರು) ಪರ್ವತವು ಚಿನ್ನದ ಬಣ್ಣವನ್ನು ಹೊಮ್ಮುತ್ತಾ ನಕ್ಷತ್ರಗಳು ತನ್ನ ಸುತ್ತಲೂ ತಿರುಗುವಂತಹ ಯೋಗ್ಯತೆಯನ್ನು ಹೊಂದಿದೆ. (೨) ದೃಢವಾದ ಜ್ಞಾನವುಳ್ಳ, ಎಲ್ಲ ಮತಭೇದಗಳಿಗೂ ಮಧ್ಯಸ್ಥನಾದ ಮಹಾತ್ಮನು ಯಾವುದೋ ಒಂದು ಅನಿರ್ವಚನೀಯ ಕಾಂತಿಯನ್ನು ತಳೆದು ಸಜ್ಜನರಿಂದ ಪ್ರದಕ್ಷಿಣೆ ಮಾಡಿಸಿಕ್ಕೊಳ್ಳಲು ಯೋಗ್ಯನಾಗುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಸರ್ವಮಧ್ಯಸ್ಥಃ ಎಂಬಲ್ಲಿ ಮಹಾತ್ಮನ ಪರವಾದ ಅರ್ಥದಲ್ಲಿ “ಮಧ್ಯಸ್ಥ” ಎಂದರೆ ಸತ್ಯಕ್ಕೂ ಅಸತ್ಯಕ್ಕೂ ಮಧ್ಯೆ ಎಂಬ ಅರ್ಥವಲ್ಲ. ಪೂರ್ವಾಗ್ರಹವಿಲ್ಲದೆ ಸತ್ಯ ಎಲ್ಲಿದೆಯೋ ಅದನ್ನು ಒಪ್ಪುವವನು, ಸತ್ಯನಿಷ್ಠ ಎಂದೇ ಅರ್ಥ. ಹಿಂದೆ ೫.೧ನೇ ಶ್ಲೋಕದಲ್ಲಿ ಪ್ರಸ್ತಾಪಿಸಿದ ಮೇರು ಪರ್ವತವನ್ನೇ ಇಲ್ಲೂ ಪ್ರಸ್ತಾಪಿಸಿದ್ದಾರೆ. ಶ್ಲಿಷ್ಟ ಪದಗಳು: ಅಹಾರ್ಯಃ= (ಪರ್ವತ, ದೃಢಜ್ಞಾನವುಳ್ಳವನು); ಕಾಞ್ಚನ= (ಚಿನ್ನ, ಯಾವುದೋ ಒಂದನ್ನು); ಸತ್= (ನಕ್ಷತ್ರ, ಸಜ್ಜನ);

विश्वास-प्रस्तुतिः

पुण्यगंधाः सुमनसः प्रबुद्धाः समयागमे ।
शिरसा परिगृह्यन्ते सादरं त्रिदशैरपि ॥ ६-८ ॥

मूलम्

पुण्यगंधाः सुमनसः प्रबुद्धाः समयागमे ।
शिरसा परिगृह्यन्ते सादरं त्रिदशैरपि ॥ ६-८ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ತಮ್ಮ ಜಾತಿಗೆ ಉಚಿತವಾದ ಕಾಲದಲ್ಲಿ ಅರಳಿ ಪರಿಮಳವನ್ನು ಬೀರುವ (ಚಂಪಕ) ಪುಷ್ಪಗಳನ್ನು ದೇವತೆಗಳೂ ಕೂಡ ಆದರದಿಂದ ತಲೆಯಲ್ಲಿ ಮುಡಿದುಕ್ಕೊಳ್ಳುತ್ತಾರೆ. (೨) ತಮ್ಮ ಪುಣ್ಯವೇ ಬಲವಾಗಿಯುಳ್ಳ, ಶುದ್ಧಮನಸ್ಕರಾದ, ಸಿದ್ಧಾಂತಶಾಸ್ತ್ರಜ್ಞಾನದಲ್ಲಿ ಪರಿಣತರಾದ ಮಹಾತ್ಮರುಗಳನ್ನು ದೇವತೆಗಳೂ ಕೂಡ ಗೌರವದಿಂದ ಶಿರಸಾ ನಮಸ್ಕರಿಸುತ್ತಾರೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಪುಣ್ಯಗಂಧ= (ಸೊಗಸಾದ ಪರಿಮಳವುಳ್ಳ, (ಚಂಪಕವೃಕ್ಷ), ಪುಣ್ಯವೇ ಬಲವಾಗಿಯುಳ್ಳ); ಸುಮನಸಃ= (ಪುಷ್ಪಗಳು, ಶುದ್ಧಮನಸ್ಕರು); ಸಮಯ= (ಉಚಿತ ಕಾಲ, ಸಿದ್ಧಾನ್ತ).

विश्वास-प्रस्तुतिः

अनुकर्तुमपह्नोतुम् अतिवर्तितुमीक्षितुम् ।
अशक्ये तेजसां पत्यौ मित्रता नु मतिक्षमा ॥ ६-९ ॥** **

ಶ್ರೀನಿವಾಸಮೂರ್ತಿ - ಭಾವಾರ್ಥ

ಅನುಕರಿಸುವುದಕ್ಕಾಗಲಿ ಮರೆಮಾಚುವುದಕ್ಕಾಗಲಿ ಮೀರುವುದಕ್ಕಾಗಲಿ ಅಷ್ಟೇ ಅಲ್ಲ ಸುಮ್ಮನೆ ಎವೆಯಿಕ್ಕದೆ ನೋಡುವುದಕ್ಕಾಗಲಿ ಅಸಾಧ್ಯನಾದ (೧) (ಪಞ್ಚಮಹಾಭೂತಗಳಲ್ಲಿ ಒಂದಾದ) ತೇಜಸ್ಸಿಗೇ ಒಡೆಯನಾದ ಸೂರ್ಯನಿಗೆ “ಮಿತ್ರ” ಎಂಬ ಪದವು ಒಪ್ಪುತ್ತದಲ್ಲವೇ? (೨) ತೇಜಸ್ವಿಗಳಲ್ಲಿ ಅಗ್ರಗಣ್ಯನಾದ ಮಹಾಪುರುಷನಲ್ಲಿ ಸ್ನೇಹವು ಸರಿಯಲ್ಲವೇ?

ಶ್ರೀನಿವಾಸಮೂರ್ತಿ - ಟಿಪ್ಪನೀ

ತೇಜಸ್ವಿಗಳೊಡನೆ ಗೆಳೆತನವು ಉಚಿತವೆಂಬುದೇ ಈ ಶ್ಲೋಕದ ಭಾವ. ಶ್ಲಿಷ್ಟ ಪದಗಳು: ಮಿತ್ರ= ( ಸೂರ್ಯ, ಸ್ನೇಹಿತ); ಮಿತ್ರತಾ ನು ಮತಿಕ್ಷಮಾ= (ಮಿತ್ರತಾ+ ಅನುಮತಿಕ್ಷಮಾ, ಮಿತ್ರತಾ+ ನು + ಮತಿಕ್ಷಮಾ). ಇಲ್ಲಿ “ಅನುಮತಿ” ಎಂಬ ಪದಕ್ಕೆ ಶುಕ್ಲ ಚತುರ್ದಶಿಯಿಂದ ಕೂಡಿದ ಪೂರ್ಣಿಮೆ ಎಂಬ ಅರ್ಥವೂ ಉಂಟು. ಈ ಅರ್ಥದಿಂದ ಭಾವಾರ್ಥಕ್ಕೆ ಪುಷ್ಟಿ ಹೇಗೆ ಬರುವುದೆಂಬುದು ಅಸ್ಪಷ್ಟ.

अहितुंडिकवृत्तीनाम् अशेषा भोगिनः पदम् ।
न संवर्ताग्निसारथ्ये स्थाता यन्मुखमारुतः ॥ ६-१० ॥

मूलम्

अनुकर्तुमपह्नोतुम् अतिवर्तितुमीक्षितुम् ।
अशक्ये तेजसां पत्यौ मित्रता नु मतिक्षमा ॥ ६-९ ॥** **

ಶ್ರೀನಿವಾಸಮೂರ್ತಿ - ಭಾವಾರ್ಥ

ಅನುಕರಿಸುವುದಕ್ಕಾಗಲಿ ಮರೆಮಾಚುವುದಕ್ಕಾಗಲಿ ಮೀರುವುದಕ್ಕಾಗಲಿ ಅಷ್ಟೇ ಅಲ್ಲ ಸುಮ್ಮನೆ ಎವೆಯಿಕ್ಕದೆ ನೋಡುವುದಕ್ಕಾಗಲಿ ಅಸಾಧ್ಯನಾದ (೧) (ಪಞ್ಚಮಹಾಭೂತಗಳಲ್ಲಿ ಒಂದಾದ) ತೇಜಸ್ಸಿಗೇ ಒಡೆಯನಾದ ಸೂರ್ಯನಿಗೆ “ಮಿತ್ರ” ಎಂಬ ಪದವು ಒಪ್ಪುತ್ತದಲ್ಲವೇ? (೨) ತೇಜಸ್ವಿಗಳಲ್ಲಿ ಅಗ್ರಗಣ್ಯನಾದ ಮಹಾಪುರುಷನಲ್ಲಿ ಸ್ನೇಹವು ಸರಿಯಲ್ಲವೇ?

ಶ್ರೀನಿವಾಸಮೂರ್ತಿ - ಟಿಪ್ಪನೀ

ತೇಜಸ್ವಿಗಳೊಡನೆ ಗೆಳೆತನವು ಉಚಿತವೆಂಬುದೇ ಈ ಶ್ಲೋಕದ ಭಾವ. ಶ್ಲಿಷ್ಟ ಪದಗಳು: ಮಿತ್ರ= ( ಸೂರ್ಯ, ಸ್ನೇಹಿತ); ಮಿತ್ರತಾ ನು ಮತಿಕ್ಷಮಾ= (ಮಿತ್ರತಾ+ ಅನುಮತಿಕ್ಷಮಾ, ಮಿತ್ರತಾ+ ನು + ಮತಿಕ್ಷಮಾ). ಇಲ್ಲಿ “ಅನುಮತಿ” ಎಂಬ ಪದಕ್ಕೆ ಶುಕ್ಲ ಚತುರ್ದಶಿಯಿಂದ ಕೂಡಿದ ಪೂರ್ಣಿಮೆ ಎಂಬ ಅರ್ಥವೂ ಉಂಟು. ಈ ಅರ್ಥದಿಂದ ಭಾವಾರ್ಥಕ್ಕೆ ಪುಷ್ಟಿ ಹೇಗೆ ಬರುವುದೆಂಬುದು ಅಸ್ಪಷ್ಟ.

अहितुंडिकवृत्तीनाम् अशेषा भोगिनः पदम् ।
न संवर्ताग्निसारथ्ये स्थाता यन्मुखमारुतः ॥ ६-१० ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಯಾವುಗಳ ವದನದಿಂದ ಬರುವ ಗಾಳಿಯು ಪ್ರಲಯಕಾಲದ ಅಗ್ನಿಗೆ ಸಹಾಯಕವಾಗಿ ಆಗುವುದಿಲ್ಲವೋ ಅಂತಹ, ಆದಿಶೇಷನ ಹೊರತಾದ, ಸರ್ಪಗಳೆಲ್ಲವೂ ಹಾವಾಡಿಗನ ಆಟದ ವೃತ್ತಿಗೆ ಪಾಲಾಗುತ್ತವೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಯಾವ ರೀತಿಯಲ್ಲಿ ಆದಿಶೇಷನು ಹಾವಾಡಿಗನ ಪುಂಗಿಗೆ ಮಣಿಯುವುದಿಲ್ಲವೋ ಅದೇರೀತಿ ಮಹಾಪುರುಷನು ಸಾಧಾರಣ ಜನರ ಮೋಹಕ ರಂಜಕ ವಾಕ್ಕಿಗಾಗಲಿ ಕೃತ್ಯಗಳಿಗಾಗಲಿ ಮಾರುಹೋಗುವುದಿಲ್ಲ ಎಂಬುದು ಧ್ವನಿತ. “ಭೋಗಿ” ಎಂಬ ಪದಕ್ಕೆ ಸರ್ಪ ಮತ್ತು ಐಹಿಕಸುಖಾಸಕ್ತ ಎಂಬ ಎರಡು ಅರ್ಥಗಳು ಇರುವುದು ಈ ಧ್ವನಿಗೆ ಪುಷ್ಟಿಯನ್ನು ಕೊಡುತ್ತದೆ. ಆದಿಶೇಷನ ಫೂತ್ಕಾರವು ಪ್ರಲಯಕಾಲದ ಅಗ್ನಿಗೆ ಉತ್ತೇಜಕವಾಗುತ್ತದೆಂಬುದು ಪೌರಾಣಿಕ ಕಥೆ.

** ಗರುತ್ಮತಿ ಸುಪಕ್ಷತಾಂ ಗಿರಿಧುರಂಧರೇ ಧೀರ**ತಾಮ್

विश्वास-प्रस्तुतिः

गरुत्मति सुपक्षतां गिरिधुरंधरे धीरताम्
उदन्वति गभीरताम् अमृतदीधितौ सौम्यताम् ।
विवस्वति च दीप्ततां विधिरुपादधानश्चिरात्
अनर्घगुणचित्रितं किमपि चित्रमासूत्रयत् ॥ ६-११ ॥

मूलम्

गरुत्मति सुपक्षतां गिरिधुरंधरे धीरताम्
उदन्वति गभीरताम् अमृतदीधितौ सौम्यताम् ।
विवस्वति च दीप्ततां विधिरुपादधानश्चिरात्
अनर्घगुणचित्रितं किमपि चित्रमासूत्रयत् ॥ ६-११ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಗರುಡನಲ್ಲಿ ಸುಪಕ್ಷತ್ವವನ್ನೂ ( ಬಲಿಷ್ಠವಾದ ರೆಕ್ಕೆಗಳನ್ನು, ಉಚಿತವಾದ ಅಭಿಮತವನ್ನು), ಪರ್ವತಶ್ರೇಷ್ಠನಾದ ಹಿಮವನ್ತನಲ್ಲಿ ಧೈರ್ಯವನ್ನೂ, ಸಾಗರದಲ್ಲಿ ಗಾಂಭೀರ್ಯವನ್ನೂ, ಚಂದ್ರನಲ್ಲಿ ಸೌಮ್ಯತೆಯನ್ನೂ, ಸೂರ್ಯನಲ್ಲಿ ಪ್ರಕಾಶವನ್ನೂ ಅಳವಡಿಸಿದ ವಿಧಿಯು ಬಹಳ ಕಾಲ ಕಳೆದ ಮೇಲೆ ಅಮೌಲ್ಯಗುಣಗಳಿಂದ ಚಿತ್ರಿತವಾದ ಯಾವುದೋ ಒಂದು ಅನಿರ್ವಚನೀಯ ಚಿತ್ರವನ್ನು ಪೋಣಿಸಿದನು. ಅಂದರೆ ವಿಧಿಯು ಬಿಡಿ ಬಿಡಿಯಾಗಿ ಬೇರೆ ಬೇರೆ ಭೂತಗಳಲ್ಲಿ ಅಳವಡಿಸಿದ್ದ ಶ್ರೇಷ್ಠ ಗುಣಗಳನ್ನೆಲ್ಲಾ ಒಂದೆಡೆ ಮಹಾಪುರುಷನಲ್ಲಿ ಕ್ರೋಢೀಕರಿಸಿತು.

ಶ್ರೀನಿವಾಸಮೂರ್ತಿ - ಟಿಪ್ಪನೀ

ದೇಶಿಕರಿಗೆ ಈ ಶ್ಲೋಕರಚನೆಯಲ್ಲಿ ವಾಲ್ಮೀಕಿಮಹರ್ಷಿಯು ಮಾಡಿರುವ ಶ್ರೀರಾಮಚಂದ್ರನ ಗುಣಗಾನ ಮನಸ್ಸಿನಲ್ಲಿತ್ತು ಎಂಬುದು ಸ್ಪಷ್ಟ. ವಾಲ್ಮೀಕಿರಾಮಾಯಣದಲ್ಲಿ " ಸಮುದ್ರ ಇವ ಗಾಂಭೀರ್ಯೇ ಧೈರ್ಯೇಣ ಹಿಮವಾನಿವ", " ಸೋಮವತ್ ಪ್ರಿಯದರ್ಶನಃ", “ದೀಪ್ತಃ ಸೂರ್ಯ ಇವಾಂಶುಭಿಃ” ಇತ್ಯಾದಿ ಶ್ರೀರಾಮನ ಗುಣಗಾನ ಬರುತ್ತದೆಂಬುದನ್ನು ನೆನೆಯಬಹುದು.

ಪ್ರಶಸ್ತಿಂ ವಿನ್ದನ್ತಿ ಪ್ರಶಮ-ಸುಖ-ದಿವ್ಯಾಮೃತ-ಸರಿತ್-

ಪ್ರಲೀನೋದನ್ಯಾನಾಂ ಪರಿಷದಿ ನ ಸಂಪತ್ತಿಸರಿತಃ |

ಅಮಿತ್ರೋಪಕ್ಷೇಪ-ಕ್ಷಣ-ವಿಗಲದ್-ಆತ್ಮೀಯ-ಪೃತನಾ-

ದೃಢಾಮರ್ದ-ತ್ರಸ್ಯದ್-ದ್ರವಿಡ-ಭಟ-ಜಂಘಾ-ಜವ-ಭೃತಃ || ೬-೧೨ ||

विश्वास-प्रस्तुतिः

प्रशस्तिं विन्दन्ति प्रशम-सुख-दिव्यामृत-सरित्-
प्रलीनोदन्यानां परिषदि न संपत्तिसरितः ।
अमित्रोपक्षेप-क्षण-विगलद्-आत्मीय-पृतना-
दृढामर्द-त्रस्यद्-द्रविड-भट-जंघा-जव-भृतः ॥ ६-१२ ॥

मूलम्

प्रशस्तिं विन्दन्ति प्रशम-सुख-दिव्यामृत-सरित्-
प्रलीनोदन्यानां परिषदि न संपत्तिसरितः ।
अमित्रोपक्षेप-क्षण-विगलद्-आत्मीय-पृतना-
दृढामर्द-त्रस्यद्-द्रविड-भट-जंघा-जव-भृतः ॥ ६-१२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಸುದೃಢವಾದ ಇಂದ್ರಿಯನಿಗ್ರಹದ ಸುಖವೆಂಬ ದಿವ್ಯವಾದ ಅಮೃತಸಿಂಧುವಿನಲ್ಲಿ ಕರಗಿಹೋಗಿರುವ ಬಾಯಾರಿಕೆಯುಳ್ಳ ಮಹಾಪುರುಷರ ಗೋಷ್ಠಿಯಲ್ಲಿ ಶತ್ರುವಿನ ಬೆದರಿಕೆಯಿಂದ ಕ್ಷಣಮಾತ್ರದಲ್ಲಿ ಚದುರಿದ ತಮ್ಮ ಕಡೆಯ ಸೈನ್ಯದ ನೂಕಿನಲ್ಲಿ ಹೆದರಿದ ದ್ರವಿಡಸೈನ್ಯದ ಕಾಲಾಳುಗಳ ತೊಡೆಯ ವೇಗವನ್ನು ಹೊಂದಿರುವ ಐಹಿಕಸಂಪತ್ತಿಯೆಂಬ ನದಿಗಳು ಹೊಗಳಿಸಿಕ್ಕೊಳ್ಳುವುದಿಲ್ಲ. ಅರ್ಥಾತ್, ಇಂದ್ರಿಯನಿಗ್ರಹದಿಂದ ಒದಗಿರುವ ಆನಂದವೆಂಬ ಅಮೃತಸಿನ್ಧುವಿನಲ್ಲಿ ಮಹಾಪುರುಷರ ಆಸೆಯೆಂಬ ಬಾಯಾರಿಕೆಯು ಅಡಗಿದೆ. ಐಹಿಕಸಂಪತ್ತಿಗಳು ವೇಗದಿಂದ ಹರಿಯುತ್ತಿರುವ ಕ್ಷುದ್ರನದಿಯಂತೆ. ಅಮೃತಸಿಂಧುವಿನ ಪಾನವಿರುವಾಗ ಅಂತಹ ಕ್ಷುದ್ರನದಿಯ ಗೊಡವೆ ಯಾಕೆ?

ಶ್ರೀನಿವಾಸಮೂರ್ತಿ - ಟಿಪ್ಪನೀ

ಈ ಶ್ಲೋಕದಲ್ಲಿ ದೇಶಿಕರು ದ್ರವಿಡ ಸೈನ್ಯದ ಕಾಲಾಳುಗಳನ್ನು ಗೇಲಿಮಾಡಿದ್ದಾರೆ. ಎದುರು ಸೈನ್ಯದ ಬೆದರಿಕೆಗೇ ಹೆದರಿ ಚದುರಿಹೋಗುವ ಸೈನ್ಯ. ಆ ಸೈನ್ಯದ ನೂಕುನುಗ್ಗಲಿನಲ್ಲಿ ಹೆದರಿ ಕಾಲಿಗೆ ಬುದ್ಧಿ ಹೇಳುವ ಕಾಲಾಳು. ಆ ಕಾಲಾಳಿನ ತೊಡೆಯ ವೇಗವನ್ನು ಹೋಲುತ್ತದೆ ಕ್ಷುದ್ರನದಿಯ ವೇಗ. ದ್ರವಿಡ ಸೈನ್ಯವೆಂದರೆ ಯಾವ ಸೈನ್ಯವು ಉದ್ದಿಷ್ಟವೆನ್ನುವುದು ಅಸ್ಪಷ್ಟ. ಅವರ ಕಾಲದಲ್ಲಿ ಒಂದು ಸಮಯದಲ್ಲಿ ತುರುಷ್ಕರ ಹಾವಳಿಯಿಂದ ಶ್ರೀರಂಗನಾಥನ ದೇವಸ್ಥಾನಕ್ಕೆ ಹಾನಿಯಾಗಿತ್ತು. ಆ ಸಂದರ್ಭ ಇದಕ್ಕೆ ಪ್ರೇರಕವಾಗಿರಬಹುದು. ಕಾಲಾಳಿನ ಓಟದ ವರ್ಣನೆ ಪಾಶ್ಚಾತ್ಯ ಕಾವ್ಯ ಮೀಮಾಂಸಕರು ಹೇಳುವ ಹೋಮರಿಕ್ ಉಪಮಾನವನ್ನು ನೆನಪಿಗೆ ತರುತ್ತದೆ.

||ಇತಿ ಮಹಾಪುರುಷಪದ್ಧತಿಃ ಷಷ್ಠೀ ||

॥ इति महापुरुषपद्धतिः षष्ठी ॥