०५ असेव्यपद्धतिः

विश्वास-प्रस्तुतिः

कठिनः कृशमूलश्च दुर्लभो दक्षिणेतरः ।
कश्चित् कल्याणगोत्रोऽपि मनुष्यैर्नोपजीव्यते ॥ ५-१ ॥

मूलम्

कठिनः कृशमूलश्च दुर्लभो दक्षिणेतरः ।
कश्चित् कल्याणगोत्रोऽपि मनुष्यैर्नोपजीव्यते ॥ ५-१ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ದುರ್ಜನರು ಸೇವಿಸಲು ಅಯೋಗ್ಯರು ಅಸೇವ್ಯರು ಎಂಬ ವಿಷಯವನ್ನು ಉಪಪಾದಿಸುವುದರಿಂದ ಈ ಪದ್ಧತಿಯ ಹೆಸರು ಅಸೇವ್ಯಪದ್ಧತಿ ಎಂದು.

(೧) ನಿಶ್ಚಲವಾಗಿಯೂ, ಸೂಕ್ಷ್ಮವಾದ ಬುಡವುಳ್ಳದ್ದಾಗಿಯೂ, ದುರ್ಗಮವಾಗಿಯೂ ಇರುವ ಉತ್ತರದಿಕ್ಕಿನಲ್ಲಿರುವ ಮೇರು ಪರ್ವತವನ್ನು ಜನರು ಸೇವಿಸುವುದಿಲ್ಲ. (೨) ಕ್ರೂರನಾಗಿಯೂ, ಅಲ್ಪಮೂಲಧನದಿಂದ ಮೇಲೆ ಬಂದವನಾಗಿಯೂ, ಜನರಿಗೆ ದುರ್ಲಭನಾಗಿಯೂ, ಅಪ್ರಾಮಾಣಿಕನಾಗಿಯೂ ಇರುವವನು ಒಳ್ಳೆಯ ಕುಲದವನಾದರೂ ಜನರು ಅಂತಹವನನ್ನು ಸೇವಿಸುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ಕಠಿನ= ( ನಿಶ್ಚಲ, ಕ್ರೂರ); ದಕ್ಷಿಣೇತರಃ= (ಉತ್ತರ ದಿಕ್ಕು, ಅಪ್ರಾಮಾಣಿಕ); ಕಲ್ಯಾಣಗೋತ್ರ= (ಮೇರು ಪರ್ವತ, ಸತ್ಕುಲಪ್ರಸೂತ). ಭಾರತೀಯ ವಾಙ್ಮಯದಲ್ಲಿ ಮೇರು ಪರ್ವತವು ಅತ್ಯಂತ ಉತ್ತರಕ್ಕಿರುವ ಪರ್ವತವೆಂದೂ ಅದರ ಬುಡವು ಬಹಳ ಸೂಕ್ಷ್ಮವೆಂದೂ ಭೂಮಿಯ ಭ್ರಮಣಕ್ಕೆ ಮೇರು ಪರ್ವತವೇ ಅಕ್ಷವೆಂದೂ ಹೇಳಲಾಗಿದೆ. ಈಗಿನ ಜ್ಞಾನಕ್ಕೆ ಸಾಮಞ್ಜಸ್ಯ ಕಲ್ಪಿಸಬೇಕಾದರೆ, ಭೂಮಿಯ ಉತ್ತರ ಧ್ರುವವನ್ನೇ ಮೇರು ಪರ್ವತವೆಂದು ಭಾವಿಸಬಹುದು.

विश्वास-प्रस्तुतिः

दृष्टपङ्का प्रतिपदं स्यादल्पसरसस्स्थितिः ।
काले घनरसैर्योगेऽप्यसेव्या जीवितार्थिभिः ॥ ५-२ ॥

मूलम्

दृष्टपङ्का प्रतिपदं स्यादल्पसरसस्स्थितिः ।
काले घनरसैर्योगेऽप्यसेव्या जीवितार्थिभिः ॥ ५-२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಹೆಜ್ಜೆ ಹೆಜ್ಜೆಗೂ ಕೆಸರಿರುವ ಚಿಕ್ಕ ಹೊಂಡವು ಮಳೆಗಾಲದಲ್ಲಿ ಮಳೆಯ ನೀರಿನಿಂದ ತುಂಬಿದರೂ ಅದರ ನೀರು ಕುಡಿಯುವುದಕ್ಕೆ ಯೋಗ್ಯವಾಗುವುದಿಲ್ಲ. (೨) ಅಲ್ಪನೊಡನೆ ಸರಸದಿಂದಿರೋಣವು ಪ್ರತಿಯೊಂದು ನಡೆಯಲ್ಲಿಯೂ ಪಾಪಯುಕ್ತವಾಗಿರುವುದರಿಂದ ಆ ಅಲ್ಪನಿಗೆ ಕಾಲಕ್ರಮೇಣ ದೃಢವಾದ ಸುವರ್ಣದ ಯೋಗಬಂದರೂ ಜೀವನೋಪಾಯವನ್ನು ಅಪೇಕ್ಷಿಸುವರು ಅವನನ್ನು ಸೇವಿಸುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ದ್ವ್ಯರ್ಥಕ ಪದಗಳು : ಪಙ್ಕ= (ಕೆಸರು,ಪಾಪ); ಸರಸಃ=(ಸರಸ್ಸಿನ, ಸರಸವಾದ); ಘನ= (ಮೋಡ,ದೃಢವಾದ); ರಸ= (ನೀರು,ಚಿನ್ನ); ಜೀವಿತ= (ನೀರು,ಜೀವನೋಪಾಯ).

विश्वास-प्रस्तुतिः

स्वतः सत्त्वविहीनानां सत्तयैवापराध्यताम् ।
कथङ्कारं प्रतीकारः कल्पकोटिशतैरपि ॥ ५-३ ॥

मूलम्

स्वतः सत्त्वविहीनानां सत्तयैवापराध्यताम् ।
कथङ्कारं प्रतीकारः कल्पकोटिशतैरपि ॥ ५-३ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಸ್ವತಃ ಸತ್ತ್ವಗುಣವಿಲ್ಲದವರಾಗಿ ಅವರ ಅಸ್ತಿತ್ತ್ವವನ್ನೇ ಅಪರಾಧಗಳಿಗೆ ಮೀಸಲಾಗಿ ಇಟ್ಟಿರುವವರಿಗೆ (ಅಥವಾ ಇತರರ ಸತ್ತ್ವಗುಣದಿಂದಲೇ ಕೆರಳಿ ಅಪರಾಧಗಳನ್ನು ಮಾಡುವವರಿಗೆ) ನೂರು ಕೋಟಿ ಕಲ್ಪಗಳಲ್ಲಿಯೂ ಕೂಡ ಪ್ರತೀಕಾರವು ಸಾಧ್ಯವೇ?

ಶ್ರೀನಿವಾಸಮೂರ್ತಿ - ಟಿಪ್ಪನೀ

ಕಲ್ಪವೆಂದರೆ ಬ್ರಹ್ಮನ ಸೃಷ್ಟಿಕಾಲ, ಬ್ರಹ್ಮನ ಹಗಲು. ಕೋಷ್ಟಕದ ಪ್ರಕಾರ ೪೩೨ ಕೋಟಿ ವರ್ಷಗಳಿಗೆ ಒಂದು ಕಲ್ಪ. ಇಲ್ಲಿ ಅನಂತ ವರ್ಷಗಳಾದರೂ ಅಂತಹವರಿಗೆ ಪ್ರತೀಕಾರ ಅಸಾಧ್ಯ ವೆಂಬ ಅರ್ಥದಲ್ಲಿ ಉಪಯುಕ್ತವಾಗಿದೆ.

विश्वास-प्रस्तुतिः

अपि संतापशमनाः शुद्धाः सुरभिशीतलाः ।
भुजङ्गसङ्गात् जायन्ते भीषणाः चंदनद्रुमाः ॥ ५-४ ॥

मूलम्

अपि संतापशमनाः शुद्धाः सुरभिशीतलाः ।
भुजङ्गसङ्गात् जायन्ते भीषणाः चंदनद्रुमाः ॥ ५-४ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಚಂದನದ ಮರಗಳು ಶಾಖವನ್ನು ನಿವಾರಿಸುವುವಾದರೂ, ಶುಭ್ರವರ್ಣವುಳ್ಳವಾದರೂ, ಅವುಗಳ ಗಂಧವು ತಂಪನ್ನುಂಟುಮಾಡುವುದಾದರೂ, ಅವು ಸರ್ಪಗಳೊಡನೆ ಇರುವುದರಿಂದ ಜನರಲ್ಲಿ ಭಯವನ್ನು ಉಂಟುಮಾಡುತ್ತವೆ. (೨) ಚಂದನ ವೃಕ್ಷದ ಕಾಂತಿಯುಳ್ಳ, ಇತರರ ದುಃಖವನ್ನು ಪರಿಹರಿಸುವ, ಶುದ್ಧಮನಸ್ಕರಾದ, ಪ್ರಖ್ಯಾತಿಯಿಂದ ತಂಪನ್ನು ಸೂಸುವ (ಸಜ್ಜನರು) ವಿಟಪುರುಷರ ಸಂಗದಿಂದ ಜನರಿಗೆ ಭಯವನ್ನು ಉಂಟು ಮಾಡುತ್ತಾರೆ. ಎಷ್ಟೇ ಸಜ್ಜನರಾದರೂ ದುರ್ಜನರನ್ನು ಹತ್ತಿರ ಸೇರಿಸಿಕ್ಕೊಂಡರೆ ಅವರಿಗೆ ಕಲಂಕ ತಪ್ಪಿದ್ದಲ್ಲ ವೆಂಬುದೇ ತಾತ್ಪರ್ಯ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲಿಷ್ಟ ಪದಗಳು: ಭುಜಙ್ಗ= (ಸರ್ಪ,ವಿಟ); ಚಂದನದ್ರುಮಾಃ= (ಚಂದನ+ದ್ರುಮಾಃ, ಚಂದನ+ದ್ರು+ಮಾಃ). ದ್ರುಮ, ದ್ರು ಎರಡು ಪದಗಳಿಗೂ ವೃಕ್ಷವೆಂಬ ಅರ್ಥ. ಚಂದನ ವೃಕ್ಷಗಳು ಸರ್ಪಗಳನ್ನು ಆಕರ್ಷಿಸುತ್ತವೆ ಎಂಬುದು ವೈಜ್ಞಾನಿಕ ತಥ್ಯವಿರಲಾರದು; ಪ್ರಾಯಶಃ ಕವಿಸಮಯವೇ.

विश्वास-प्रस्तुतिः

नीचानुसरणान्मन्ये निसर्गपरिशुद्धयोः ।
गतिः कुटिलतां याति गङ्गायमुनयोरिव ॥ ५-५ ॥

मूलम्

नीचानुसरणान्मन्ये निसर्गपरिशुद्धयोः ।
गतिः कुटिलतां याति गङ्गायमुनयोरिव ॥ ५-५ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಸಹಜವಾಗಿ ನಿರ್ಮಲವಾಗಿರುವ ಗಙ್ಗಾ-ಯಮುನಾ ನದಿಗಳು ತಗ್ಗು ಪ್ರದೇಶದ ಕಡೆಗೆ ಹರಿಯುವುದರಿಂದ ಅವುಗಳ ಗಮನವು ಕುಟಿಲವಾಗುವಂತೆ ಸ್ವಭಾವತಃ ಶುದ್ಧರಾದ ಇಬ್ಬರು ನೀಚನೊಬ್ಬನ ಅನುಸರಣೆ ಮಾಡುವುದರಿಂದ (ಅವರಿಬ್ಬರಲ್ಲಿನ ಪರಸ್ಪರ) ತಿಳುವಳಿಕೆಯು ಕುಟಿಲವಾಗುತ್ತದೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲಿಷ್ಟ ಪದ: ನೀಚಾನುಸರಣ= (ತಗ್ಗಿನ ಕಡೆ ಹರಿಯುವುದು, ನೀಚರನ್ನು ಅನುಸರಿಸುವುದು); ಗತಿಃ= (ಗಮನ, ತಿಳುವಳಿಕೆ).

विश्वास-प्रस्तुतिः

मित्रे भवति वैमुख्यं मैत्री दोषाकरेण च ।
अपि तीर्थप्रसूतानां कैरवाणां रजोभृताम् ॥ ५-६ ॥

मूलम्

मित्रे भवति वैमुख्यं मैत्री दोषाकरेण च ।
अपि तीर्थप्रसूतानां कैरवाणां रजोभृताम् ॥ ५-६ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ನಿರ್ಮಲವಾದ ನೀರಿನಲ್ಲಿ ಬೆಳೆದರೂ ಪರಾಗದಿಂದ ತುಂಬಿದ ಬಿಳಿ ನೈದಲೆಗಳಿಗೆ ಸೂರ್ಯನಲ್ಲಿ ವಿಮುಖತೆಯೂ ಚಂದ್ರನಲ್ಲಿ ಮೈತ್ರಿಯೂ ಉಂಟಾಗುತ್ತದೆ. (೨) ಸದ್ಗುರುಪ್ರಸೂತರಾದರೂ ರಜೋಗುಣಭರಿತರಾದ ವಂಚಕರಿಗೆ ಹಿತೈಷಿಗಳಲ್ಲಿ ತಿರಸ್ಕಾರವೂ ದೋಷಪೂರಿತರಾದವರಲ್ಲಿ ಗೆಳೆತನವೂ ಉಂಟಾಗುತ್ತದೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲೇಷೆ ಹೀಗೆ: ಮಿತ್ರ= (ಸೂರ್ಯ,ಹಿತೈಷಿ); ದೋಷಾಕರ= (ಚಂದ್ರ,ದುಷ್ಟ ); ತೀರ್ಥ= (ಪುಣ್ಯತೀರ್ಥ,ಗುರು); ಕೈರವ= (ಬಿಳಿನೈದಿಲೆ,ವಂಚಕ); ರಜಃ=(ಪರಾಗ,ರಜೋಗುಣ ). ಬಿಳಿ ನೈದಿಲೆಗಳು ರಾತ್ರಿಯ ಹೊತ್ತು ಅರಳಿ ಬೆಳಗಿನಲ್ಲಿ ಮೊಗ್ಗುವುದರಿಂದ ಅದಕ್ಕೆ ಸೂರ್ಯನೊಡನೆ ಹಗೆತನ ಮತ್ತು ಚಂದ್ರನೊಡನೆ ಗೆಳೆತನ ಎನ್ನುತ್ತಾರೆ.

विश्वास-प्रस्तुतिः

अपि निर्मुक्तभोगेन स्वान्तस्स्थविषयेक्षया ।
असद्भावाय जायेत जिह्मगेन सहासिका ॥ ५-७ ॥

मूलम्

अपि निर्मुक्तभोगेन स्वान्तस्स्थविषयेक्षया ।
असद्भावाय जायेत जिह्मगेन सहासिका ॥ ५-७ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ವಕ್ರ ವಕ್ರವಾಗಿ ಚಲಿಸುವ ಹಾವಿನೊಡನೆ ಸಹವಾಸವು ಅದು ಹೆಡೆಯ ಪೊರೆಯನ್ನು ಬಿಟ್ಟಿದ್ದರೂ ತನ್ನೊಳಗಿರುವ ವಿಷದಿಂದ ಕೂಡಿದ ನೋಟದ ದೆಸೆಯಿಂದ (ನಮ್ಮ) ಅಸ್ತಿತ್ವಕ್ಕೇ ಧಕ್ಕೆಯಾಗುತ್ತದೆ. (೨) ಕುಟಿಲಮನಸ್ಕನೊಡನೆ ಸಹವಾಸವು, ಅವನು ಸುಖಭೋಗಗಳಿಂದ ವಿಮುಕ್ತನಾಗಿದ್ದರೂ ಕೂಡ ಅವನ ಅಂತರಂಗದಲ್ಲಿನ ವಿಷಯಾಸಕ್ತಿಯಿಂದ ದೋಷವಾದೀತು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲಿಷ್ಟ ಪದಗಳು: ನಿರ್ಮುಕ್ತ= (ಪೊರೆ ಬಿಟ್ಟ, ವಿಮುಕ್ತ); ಭೋಗ= (ಹೆಡೆ, ವಿಷಯಸುಖ); ಅಸದ್ಭಾವ= (ಇಲ್ಲದಿರೋಣ, ದೋಷ); ಜಿಹ್ಮಗ= (ಹಾವು, ಕುಟಿಲಮನಸ್ಕ).

विश्वास-प्रस्तुतिः

मण्डूकराविणं सर्पं गोमुखं च मृगादनम् ।
असुहृत्त्वेन मन्येत मानयन्तं च वैरिणम् ॥ ५-८ ॥

मूलम्

मण्डूकराविणं सर्पं गोमुखं च मृगादनम् ।
असुहृत्त्वेन मन्येत मानयन्तं च वैरिणम् ॥ ५-८ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಕಪ್ಪೆಯಂತೆ ಕೂಗುವ ಹಾವನ್ನೂ ಗೋಮುಖವುಳ್ಳ ವ್ಯಾಘ್ರವನ್ನೂ ಸ್ನೇಹಿತನಂತೆ ವರ್ತಿಸುವ ಶತ್ರುವನ್ನೂ ಗೆಳೆತನಕ್ಕೆ ಪಾತ್ರವಲ್ಲವೆಂದು ಪರಿಗಣಿಸಬೇಕು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಮಂಡೂಕರಾವೀ ಸರ್ಪಗಳೂ ಗೋಮುಖ ವ್ಯಾಘ್ರಗಳೂ ಮಾನವರಲ್ಲೇ ಎಂಬುದು ಸುಸ್ಪಷ್ಟ.

विश्वास-प्रस्तुतिः

घोरास्त्यक्तमिथोवैराः सौकर्यवदुपद्रवे ।
दंडेनापि न भज्येरन् पापकुंडलिमंडलाः ॥ ५-९ ॥

मूलम्

घोरास्त्यक्तमिथोवैराः सौकर्यवदुपद्रवे ।
दंडेनापि न भज्येरन् पापकुंडलिमंडलाः ॥ ५-९ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ತಮ್ಮ ಬೊಗಳುವಿಕೆಯಿಂದ ಭಯವನ್ನುಂಟುಮಾಡುವ, ಹಂದಿಗಳನ್ನು ಹಿಂಸಿಸುವುದಕ್ಕಾಗಿ ತಮ್ಮ ತಮ್ಮಲ್ಲಿರುವ ದ್ವೇಷವನ್ನು ಬಿಟ್ಟಿರುವ, ಪಾಪಕೃತ್ಯಕ್ಕಾಗಿ ಸುತ್ತುಹಾಕಿಕ್ಕೊಂಡಿರುವ (ಗುಂಪುಗಟ್ಟಿಕ್ಕೊಂಡಿರುವ) ನಾಯಿಗಳು ದೊಣ್ಣೆಯ ಹೊಡೆತಕ್ಕೂ ಜಗ್ಗುವುದಿಲ್ಲ. (೨) ಭಯಂಕರರಾದ, ಸುಲಭವಾಗಿ ಹಿಂಸಿಸಬಹುದಾದವರ ವಿಷಯದಲ್ಲಿ ತಮ್ಮ ತಮ್ಮೊಳಗಿನ ವೈರವನ್ನು ತ್ಯಜಿಸಿರುವ, ಪಾಪಕೃತ್ಯಕ್ಕಾಗಿ ಸುತ್ತುಗಟ್ಟಿಕ್ಕೊಂಡಿರುವ (ದುರ್ಜನರು) ದಂಡೋಪಾಯಕ್ಕೂ ಜಗ್ಗುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲೇಷೆಯಿರುವ ಪದಗಳು: ಸೌಕರ್ಯವತ್= (ಹಂದಿಯಗುಣವುಳ್ಳ ಅಂದರೆ ಹಂದಿ, ಸುಕರವಾದ); ದಂಡ= (ದೊಣ್ಣೆ, ದಂಡೋಪಾಯ); ಮಂಡಲ= (ನಾಯಿ, ಗುಂಪಾಗಿರುವ).

विश्वास-प्रस्तुतिः

अनाकलितमानुष्याः क्षमासंस्पर्शवर्जिताः ।
प्रतिबुद्धैर्न सेव्यन्ते पूर्वदेवविरोधिनः ॥ ५-१० ॥

मूलम्

अनाकलितमानुष्याः क्षमासंस्पर्शवर्जिताः ।
प्रतिबुद्धैर्न सेव्यन्ते पूर्वदेवविरोधिनः ॥ ५-१० ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಮನುಷ್ಯರ ಉಡುಪು ಹಾಕಿಕ್ಕೊಳ್ಳುವುದೇ ಮೊದಲಾದ ಸಾಮಾನ್ಯಧರ್ಮಗಳನ್ನು ಲೆಕ್ಕಿಸದ, ಇವರು ತಕ್ಕವರು ಇವರು ಅಸ್ಪೃಶ್ಯರು ಎಂಬ ತುಲನಾತ್ಮಕ ಮನೋಭಾವವಿಲ್ಲದ, ಪುರಾಣಪ್ರಥಿತರಾದ ದೇವರನ್ನು ವಿರೋಧಿಸುವ ದಿಗಂಬರರನ್ನು ಸನಾತನಧರ್ಮಿಗಳು ಸೇವಿಸುವುದಿಲ್ಲ. (೨) ಮನುಷ್ಯತ್ವದ ಶ್ರೇಷ್ಠತೆಯನ್ನು ಪರಿಗಣಿಸದ, ಕಿಞ್ಚಿದಪಿ ಕ್ಷಮಾಗುಣವನ್ನು ತೋರದ, ತಾಯಿತಂದೆಗಳೇ ಮೊದಲಾದ ಪೂರ್ವಪುರುಷರುಗಳನ್ನು ವಿರೋಧಿಸುವ (ದುರ್ಜನರನ್ನು) ಜ್ಞಾನಿಗಳು ಸೇವಿಸುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲೇಷೆ: ಕ್ಷಮಾಸಂಸ್ಪರ್ಶ= (ಕ್ಷಮ+ಅಸಂಸ್ಪರ್ಶ, ಕ್ಷಮಾ+ಸಂಸ್ಪರ್ಶ). ಇಲ್ಲಿ ಮೊದಲನೆಯ ಅರ್ಥ ಜೈನಮತವಿರೋಧಕವಾಗಿದೆ. ಇದು ನೀತಿಗ್ರಂಥದಲ್ಲಿ ಅಪ್ರಕೃತವೆನ್ನಿಸಬಹುದು. ವಿಶಿಷ್ಟಾದ್ವೈತ ಮತವನ್ನು ಎತ್ತಿಹಿಡಿಯುವುದರಲ್ಲಿ ನಿಷ್ಠುರತೆಗೆ ಹಿಂಜರಿಯದ ದೇಶಿಕರು ಈ ಅರ್ಥವನ್ನು ಅಳವಡಿಸಿಕ್ಕೊಂಡಿರುವುದು ಸೋಜಿಗವೇನಲ್ಲ.

विश्वास-प्रस्तुतिः

अमित्रे विश्वासः श्वपचकरके सौमिकरसः
कपाले गङ्गांभः खलपरिषदङ्के सुजनता ।
परिक्षीणाचारे श्रुतमनुपनीते च निगमः
स्वतस्सिद्धां शुद्धिं त्यजति विपरीतं च फलति ॥ ५-११ ॥

मूलम्

अमित्रे विश्वासः श्वपचकरके सौमिकरसः
कपाले गङ्गांभः खलपरिषदङ्के सुजनता ।
परिक्षीणाचारे श्रुतमनुपनीते च निगमः
स्वतस्सिद्धां शुद्धिं त्यजति विपरीतं च फलति ॥ ५-११ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಶತ್ರುವಿನಲ್ಲಿ ನಂಬಿಕೆ, ನಾಯಮಾಂಸವನ್ನು ತಿನ್ನುವವನ ಪಾತ್ರೆಯಲ್ಲಿ ಯಜ್ಞಾರ್ಥವಾದ ಸೋಮಲತೆಯ ರಸ, ಕಪಾಲದಲ್ಲಿ ಗಂಗೆಯ ತೀರ್ಥ, ದುಷ್ಟರ ಗುಂಪಿನೊಡನೆ ಸೌಜನ್ಯ, ಆಚಾರವನ್ನು ಕಳೆದುಕ್ಕೊಂಡವನಲ್ಲಿ ವೇದಾರ್ಥಜ್ಞಾನ, ಉಪನಯನವಾಗದವನಲ್ಲಿ ವೇದಪಾಠ, ಇವೆಲ್ಲವೂ ಸಹಜವಾದ ಪವಿತ್ರತೆಯನ್ನು ಕಳೆದುಕ್ಕೊಳ್ಳುವುದಲ್ಲದೆ ಹಾನಿಗೂ ಎಡೆಕೊಡುತ್ತವೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಪ್ರಸ್ತುತ ದುರ್ಜನರ ವಿಷಯವಾಗಿ ಜನಸಾಮಾನ್ಯರಿಗೆ ನೀತಿಬೋಧೆಯಾದುದರಿಂದ, ಇಲ್ಲಿ ದುಷ್ಟರ ಗುಂಪಿನೊಡನೆ ಸೌಜನ್ಯ ಮಾಡಬಾರದೆಂಬುದೇ ಪ್ರಧಾನಾರ್ಥ. ಉಳಿದವೆಲ್ಲವೂ ದುರ್ಜನಸಹವಾಸದಷ್ಟೇ ಹಾನಿಕರವಾಗಿರುವ ನಿದರ್ಶಕ ಪ್ರಸಂಗಗಳು.

विश्वास-प्रस्तुतिः

तरतु विवित्सयाऽब्धिमधिरोहतु शैलतटे
धमतु च धातुवर्गमधिगच्छतु शस्त्रमुखम् ।
तदिदमरुन्तुदं यदुत बह्ववधाय भिया
धन-मद-मेदुर-क्षितिभृदङ्गण-चंक्रमणम् ॥ ५-१२ ॥

मूलम्

तरतु विवित्सयाऽब्धिमधिरोहतु शैलतटे
धमतु च धातुवर्गमधिगच्छतु शस्त्रमुखम् ।
तदिदमरुन्तुदं यदुत बह्ववधाय भिया
धन-मद-मेदुर-क्षितिभृदङ्गण-चंक्रमणम् ॥ ५-१२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಹಣವನ್ನು ಪಡೆಯುವ ಆಸೆಯಿಂದ ಸಮುದ್ರವನ್ನು ದಾಟಲಿ, ಬೆಟ್ಟವನ್ನು ಹತ್ತಲಿ, ಲೋಹಗಳನ್ನು ಕರಗಿಸಲು ತಿದಿಯನ್ನು ಒತ್ತಲಿ, ಶಸ್ತ್ರಗಳ ಪ್ರಯೋಗವನ್ನು ಕಲಿಯಲಿ. ಇವುಗಳಲ್ಲಿ ಯಾವುದೂ ಜಾಗರೂಕನಾಗಿ ಭಯಪಟ್ಟುಕ್ಕೊಂಡು ಧನಮದದಿಂದ ಕೊಬ್ಬಿದ ರಾಜನಮನೆಯ ಅಂಗಳದಲ್ಲಿ ಅಲೆದಾಡುವುದರಷ್ಟು ಮನೋವೇಧಕಗಳಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಹಣದ ಆಸೆಗಾಗಿ ಧನಮದಾಂಧ ದುರ್ಜನರ ಮನೆಯ ಬಾಗಿಲಿಗೆ ಅಲೆಯುವುದಕ್ಕಿಂತ ಯಾವುದೋ ಕಷ್ಟಕರವಾದ ಮತ್ತು ಸಾಹಸಕರವಾದ ಕಸುಬೇ ಲೇಸು ಎಂಬುದೇ ಈ ಶ್ಲೋಕದ ಭಾವ. ದೇಶಿಕರು ಈ ಶ್ಲೋಕವನ್ನು ಹೆಚ್ಚು ಬಳಕೆಯಲ್ಲಿಲ್ಲದ ೧೭ ಅಕ್ಷರ ೨೨ ಮಾತ್ರೆಗಳುಳ್ಳ ಕುಟಕವೆಂಬ ವೃತ್ತದಲ್ಲಿ ರಚಿಸಿದ್ದಾರೆ.

|| ಇತಿ ಅಸೇವ್ಯಪದ್ಧತಿಃ ಪಂಚಮೀ ||

॥ इत्यसेव्यपद्धतिः पञ्चमी ॥