विश्वास-प्रस्तुतिः
गुणजालप्रकर्षेऽपि धीवरत्त्वेऽपि जन्मतः ।
सर्वतीर्थावगाहेऽपि नीचवृत्तिर्न शस्यते ॥ ४-१ ॥
मूलम्
गुणजालप्रकर्षेऽपि धीवरत्त्वेऽपि जन्मतः ।
सर्वतीर्थावगाहेऽपि नीचवृत्तिर्न शस्यते ॥ ४-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ದುರ್ವೃತ್ತಿ ಎಂದರೆ ಕೆಟ್ಟ ಆಚಾರ. ಈ ಪದ್ಧತಿಯಲ್ಲಿ ಕೆಟ್ಟ ಆಚಾರವಿದ್ದರೆ ಬೇರೆ ಎಷ್ಟೇ ಗುಣಗಳಿರಲಿ ಅವಕ್ಕೆ ಬೆಲೆ ಬಾರದು ಎಂಬ ವಿಷಯವು ವಸ್ತು.
(೧) ಬೇಕಾದಷ್ಟು ನೂಲಿನ ಬಲೆಗಳನ್ನು ಹೊಂದಿದ್ದರೂ ಹುಟ್ಟಿನಿಂದ ಬೆಸ್ತನಾಗಿದ್ದರೂ ಅನೇಕ ತೀರ್ಥಪ್ರದೇಶಗಳಲ್ಲಿ ಮುಳುಗಿದ್ದರೂ ನೀರಿನ ಕೆಳಗಿನ ಮೀನುಹಿಡಿಯುವನು ಪ್ರಶಂಸಾರ್ಹನಲ್ಲ. (೨) (ಒಬ್ಬನಿಗೆ) ಅನೇಕಗುಣಗಳ ಆಧಿಕ್ಯವಿದ್ದರೂ ಹುಟ್ಟಿನಿಂದ ಬಂದ ಪ್ರತಿಭೆಯಿದ್ದರೂ ಅನೇಕತೀರ್ಥಗಳಲ್ಲಿ ಮಿಂದಿದ್ದರೂ ಕೀಳ್ಮಟ್ಟದ ವ್ಯವಹಾರವಿದ್ದರೆ ಅಂತಹವನು ಪ್ರಶಂಸಾರ್ಹನಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ದ್ವ್ಯರ್ಥಕ ಪದಗಳು ಇವು: ಗುಣ= ( ನೂಲು, ಗುಣ ); ಧೀವರ= ( ಬೆಸ್ತ, ಪ್ರತಿಭಾವಂತ ).
विश्वास-प्रस्तुतिः
द्विजराजाङ्कसंस्थोऽपि सन्मार्गाचारवानपि ।
विशुद्धिरहितः कश्चित् न विन्दत्यकलङ्कताम् ॥ ४-२ ॥
मूलम्
द्विजराजाङ्कसंस्थोऽपि सन्मार्गाचारवानपि ।
विशुद्धिरहितः कश्चित् न विन्दत्यकलङ्कताम् ॥ ४-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) “ದ್ವಿಜರಾಜ” ( ಚಂದ್ರ) ನೆಂಬ ಪದವಿಯನ್ನು ಪಡೆದಿದ್ದರೂ, ನಕ್ಷತ್ರಮಾರ್ಗದಲ್ಲಿ ಚಲಿಸುವವನಾದರೂ, ಕಲೆಯುಳ್ಳವನಾದುದರಿಂದ ಚಂದ್ರನಿಗೆ ಕಲಙ್ಕಿತನೆಂಬುದು ತಪ್ಪಿದ್ದಲ್ಲ. (೨) ಬ್ರಾಹ್ಮಣಶ್ರೇಷ್ಠನೆಂಬ ಸ್ಥಾನ ಪಡೆದಿದ್ದರೂ, ಸದಾಚಾರವನ್ನುಳ್ಳವನಾಗಿದ್ದರೂ, ನಿಷಿದ್ಧ ಕಾರ್ಯವನ್ನೆಸಗಿದರೆ ಅಂತಹವನಿಗೆ ಕಲಙ್ಕತೆಯು ತಪ್ಪಿದ್ದಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ದ್ವ್ಯರ್ಥಕ ಶಬ್ದಗಳು: ದ್ವಿಜರಾಜ= ( ಚಂದ್ರ, ಬ್ರಾಹ್ಮಣಶ್ರೇಷ್ಠ ); ಸನ್ಮಾರ್ಗ= ( ನಕ್ಷತ್ರಮಾರ್ಗ, ಸದ್ವೃತ್ತಿ, ).
विश्वास-प्रस्तुतिः
अवक्रस्तारकाधीशः परिपूर्णः प्रियोदयः ।
प्राचीं दिशमतिक्रम्य पतनं प्रतिपद्यते ॥ ४-३ ॥
मूलम्
अवक्रस्तारकाधीशः परिपूर्णः प्रियोदयः ।
प्राचीं दिशमतिक्रम्य पतनं प्रतिपद्यते ॥ ४-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ತನ್ನ ಉದಯದಿಂದ ಜನರಿಗೆ ಪ್ರಿಯವನ್ನು ತರುವ, ವಕ್ರತೆಯಿಲ್ಲದೆ ಪರಿಪೂರ್ಣನಾದ (ಹುಣ್ಣಿಮೆಯ) ಚಂದ್ರನು ಪೂರ್ವ ದಿಕ್ಕನ್ನು ದಾಟಿದಮೇಲೆ ಪತನವನ್ನು ಅನುಭವಿಸುತ್ತಾನೆ (ಅಸ್ತಮಯನಾಗುತ್ತಾನೆ). (೨) ಋಜುಸ್ವಭಾವವುಳ್ಳ, ಇತರರ ಕಷ್ಟವನ್ನು ಪಾರುಮಾಡುವವರಲ್ಲಿ ಮುಖಂಡನಾಗಿರುವ, (ತಾನೇ) ಪರಿಪೂರ್ಣನಾದ, (ಇತರರಿಗೆ) ಪ್ರಿಯವನ್ನು ತರುವ (ಮನುಷ್ಯನೂ ಕೂಡ) ಪೂರ್ವಿಕರು ತೋರಿಸಿದ ಮಾರ್ಗವನ್ನು ಮೀರಿ ನಡೆದರೆ ಪತನವನ್ನು ಹೊಂದುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ತಾರಕಾಧೀಶಃ= (ತಾರೆಗಳೊಡೆಯ ಚಂದ್ರ, ಪಾರುಮಾಡುವವರಲ್ಲಿ ಮುಖಂಡ); ಪ್ರಾಚೀ= ( ಪೂರ್ವದಿಕ್ಕು, ಹಿಂದಿನಕಾಲ).
विश्वास-प्रस्तुतिः
पततां हन्त केषाञ्चित्त् भजते मलिनात्मनाम् ।
विशुद्धवर्णयोगोऽपि विपरीतनिमित्तताम्॥ ४-४ ॥
मूलम्
पततां हन्त केषाञ्चित्त् भजते मलिनात्मनाम् ।
विशुद्धवर्णयोगोऽपि विपरीतनिमित्तताम्॥ ४-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ರೂಪದಲ್ಲಿ ಕಪ್ಪಾದ ಹಕ್ಕಿಗಳಿಗೆ (ಕಾಗೆಗಳಿಗೆ) ಶುಭ್ರವರ್ಣವು ಬಂದರೆ ಅದೂ ಪ್ರತಿಕೂಲಕ್ಕೆ ಕಾರಣವಾಗುತ್ತದೆಯಲ್ಲವೆ!(೨) ಅಧೋಗತಿಯಲ್ಲಿರುವ ಮಲಿನಮನಸ್ಕರಿಗೆ ಶ್ರೇಷ್ಠವರ್ಣದವರೊಡನೆ ಸಂಸರ್ಗವು ಪ್ರತಿಕೂಲಕ್ಕೆ ಕಾರಣವಾಗುತ್ತದೆಯಲ್ಲವೆ!
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದ: ಪತತಾಮ್= (ಹಕ್ಕಿಗಳಿಗೆ, ಅಧೋಗತಿಯಲ್ಲಿರುವವರಿಗೆ). ದುಷ್ಟರು ಶಿಷ್ಟರೊಡನೆ ಬೆರೆತರೆ ಸಮಾಜಕ್ಕೇ ಪ್ರತಿಕೂಲವಾಗುತ್ತದೆ. ಬಿಳಿಯ ಕಾಗೆಯ ದರ್ಶನವು ರಾಷ್ಟ್ರಕ್ಕೇ ಅಹಿತವೆಂದು ಜ್ಯೋತಿಶ್ಶಾಸ್ತ್ರದಲ್ಲಿ ಹೇಳಿದೆ, " ಪುಚ್ಛನಕ್ಷತ್ರಮಂಡೂಕಂ ಶ್ವೇತವರ್ಣಂ ಚ ವಾಯಸಮ್ | ರಾತ್ರಾವಿನ್ದ್ರಧನುರ್ದೃಷ್ಟ್ವಾ ತದ್ರಾಷ್ಟ್ರಂ ಪರಿವರ್ಜಯೇತ್ ||".
विश्वास-प्रस्तुतिः
पतनानंतरं कृच्छ्रात् प्ररूढः शुद्धिमानपि ।
द्विजः संछाद्यते कश्चिदधरेणापि रागिणा ॥ ४-५ ॥
मूलम्
पतनानंतरं कृच्छ्रात् प्ररूढः शुद्धिमानपि ।
द्विजः संछाद्यते कश्चिदधरेणापि रागिणा ॥ ४-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಬಿದ್ದ ಹಲ್ಲು ಕಷ್ಟದಿಂದ ಮತ್ತೆ ಶುಭ್ರವಾಗಿ ಬೆಳೆದರೂ ಅದನ್ನು ಕೆಂಪಾದ ತುಟಿಯು ಮುಚ್ಚಿಬಿಡುತ್ತದೆಯಲ್ಲವೆ? (೨) ದ್ವಿಜನೊಬ್ಬನು (ಬ್ರಾಹ್ಮಣ ಕ್ಷತ್ರಿಯ ವೈಶ್ಯ) ಪತಿತನಾದ ಬಳಿಕ ಕೃಚ್ಛ್ರಾದಿ ಪ್ರಾಯಶ್ಚಿತ್ತ ಕರ್ಮಗಳನ್ನೆಸಗಿ ಶುದ್ಧಿಯನ್ನು ಹೊಂದಿ ಮತ್ತೆ ಪ್ರಸಿದ್ಧನಾದರೂ, ಅಂತಹವನನ್ನು ಕೀಳ್ಮಟ್ಟದ ಪಾಪಿಯು ಮರೆಮಾಡುವುದಿಲ್ಲವೆ?
ಶ್ರೀನಿವಾಸಮೂರ್ತಿ - ಟಿಪ್ಪನೀ
ಒಬ್ಬನು ಪಾಪಕಾರ್ಯವನ್ನು ಮಾಡಿ ಅದಕ್ಕೆ ಪ್ರಾಯಶ್ಚಿತ್ತವನ್ನೆಸಗಿ ಮತ್ತೆ ಸನ್ಮಾರ್ಗಕ್ಕೆ ಬಂದರೂ ಜನರು ಅವನ ಪಾಪಕಾರ್ಯವನ್ನು ಮರೆಯುವುದಿಲ್ಲ. ಆದುದರಿಂದ ಪಾಪಕಾರ್ಯವನ್ನು ಮಾಡದಿರುವುದೇ ಲೇಸು ಎಂಬುದೇ ಈ ಶ್ಲೋಕದ ತಾತ್ಪರ್ಯ. ಇಲ್ಲಿ ದ್ವ್ಯರ್ಥಕ ಪದಗಳು: ಕೃಚ್ಛ್ರ= (ಕಷ್ಟ, ಪ್ರಾಜಾಪತ್ಯ ಚಾನ್ದ್ರಾಯಣ ಮುಂತಾದ ವ್ರತ ); ದ್ವಿಜ= ( ಹಲ್ಲು, ಉಪನಯನ ಕರ್ಮಕ್ಕೆ ಬಾಧ್ಯತೆಯಿರುವವನು ); ಅಧರ= ( ಕೆಳದುಟಿ, ಕೆಳಗಿನ ).
विश्वास-प्रस्तुतिः
जोषमेकपदे स्थित्वा सन्निकृष्टान् क्षणात् घसन् ।
बहिर्दर्शितसंशुद्धिः बकव्याहारमर्हति ॥ ४-६ ॥
मूलम्
जोषमेकपदे स्थित्वा सन्निकृष्टान् क्षणात् घसन् ।
बहिर्दर्शितसंशुद्धिः बकव्याहारमर्हति ॥ ४-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಮೌನವಾಗಿ ಒಂದೇ ಕಾಲಿನಲ್ಲಿ ನಿಂತು ಹತ್ತಿರದಲ್ಲಿರುವವುಗಳನ್ನು ಕ್ಷಣಕಾಲದಲ್ಲಿ ಮುಳುಗಿ ತೋರಿಕೆಗೆ ಶ್ವೇತವರ್ಣವಾದ ಪ್ರಾಣಿಯನ್ನು ಬಕವೆಂದು ಕರೆಯುತ್ತಾರೆ. (೨) ಒಂದೇ ಸ್ಥಲದಲ್ಲಿ ಮೌನಿಯಾಗಿದ್ದು ನಂಬಿ ಹತ್ತಿರಕ್ಕೆ ಬಂದವರನ್ನು ಕ್ಷಣಕಾಲದಲ್ಲಿ ಕಬಳಿಸಿ ( ಮೋಸ ಮಾಡಿ) ತೋರಿಕೆಗೆ ಶುದ್ಧನಂತೆ ಕಾಣುವವನನ್ನು ಬಕವೃತ್ತಿಯವನೆಂದು ಕರೆಯುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಕಪಟಸನ್ಯಾಸವನ್ನು ಬಕವೃತ್ತಿಯೆಂದು ಕರೆಯುವುದು ಲೋಕವಿದಿತ.
विश्वास-प्रस्तुतिः
द्विजस्य सितपक्षस्य कवेरपि निरस्यते ।
अहंस इति साजात्यं गतिशब्दितवृत्तिभिः ॥ ४-७ ॥
मूलम्
द्विजस्य सितपक्षस्य कवेरपि निरस्यते ।
अहंस इति साजात्यं गतिशब्दितवृत्तिभिः ॥ ४-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಹಕ್ಕಿಯಾಗಿರುವುದರಿಂದ, ಬೆಳ್ಳನೆಯ ರೆಕ್ಕೆಗಳನ್ನು ಹೊಂದಿರುವುದರಿಂದ, ನೀರಿನಲ್ಲಿರುವುದರಿಂದ ಬಕ ಪಕ್ಷಿಯ ಹಂಸದೊಡನೆ ಸಜಾತೀಯತೆಯನ್ನು ಅದರ ನಡೆ, ಕೂಗು, ಮತ್ತು ಇರುವಿಕೆಗಳು ಹಂಸವಲ್ಲವೆಂದು ತಳ್ಳಿಹಾಕುತ್ತವೆ. (೨) ತಾನು ದ್ವಿಜ, ನಿಸ್ಸಂಶಯವಾದ ಅಭಿಪ್ರಾಯಗಳುಳ್ಳವನು ಮತ್ತು ಕವಿ ಆದುದರಿಂದ ಮತ್ತೊಬ್ಬ ನಿಷ್ಠ ಸಾತ್ತ್ವಿಕ ಮೇಧಾವಿಯೊಬ್ಬನಿಗೆ ಸಮನು ಎಂಬ ಸಾಜಾತ್ಯವನ್ನು ಆತನ ಚರ್ಯೆ,ವಾಕ್ ಮತ್ತು ವೃತ್ತಿಗಳು ತಳ್ಳಿಹಾಕುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಶ್ಲೇಷೆಯಿರುವ ಶಬ್ದಗಳು: ದ್ವಿಜ= (ಹಕ್ಕಿ, ತ್ರಿವರ್ಣೀ); ಸಿತಪಕ್ಷ= (ಬಿಳಿಯ ರೆಕ್ಕೆಯುಳ್ಳದು, ಕೊನೆಮುಟ್ಟಿದ ಪಕ್ಷವುಳ್ಳ ಅರ್ಥಾತ್ ನಿಸ್ಸಂಶಯ ಅಭಿಪ್ರಾಯಗಳುಳ್ಳ); ಅಹಂಸ= ( ಹಂಸವಲ್ಲ, ಅಹಂ ಸಃ ಅರ್ಥಾತ್ ನಾನೇ ಅವನು). “ಬಾಯಿ ಬಿಟ್ಟರೆ ಬಣ್ಣಗೇಡು” ಎಂಬ ಗಾದೆ ಕಾಗೆ,ಕೋಗಿಲೆಗಳಿಗೂ ಬಕ, ಹಂಸಗಳಿಗೂ ಅನ್ವಯಿಸುತ್ತದೆ.
ದೇಶಿಕರು ಮಹಾನಿಷ್ಠರು, ಮಹಾಸಾಧ್ವಿಗಳು, ಮಹಾಕವಿಗಳೂ ಕೂಡ. ಅವರೊಡನೆ ಸಮತ್ತ್ವವನ್ನು ಬಯಸುತ್ತಿದ್ದ ಮತ್ತಾರೋ ಒಬ್ಬ ಸಮಕಾಲೀನ ಕವಿಗೂ ಇದನ್ನು ಈಗ ನಾವು ಅನ್ವಯಿಸಬಹುದು.
विश्वास-प्रस्तुतिः
अव्यवस्थितवृत्तानाम् अभिन्नश्रुतिचक्षुषाम् ।
अधर्मार्जितभोगानाम् आशीरप्यहितोचिता ॥ ४-८ ॥
मूलम्
अव्यवस्थितवृत्तानाम् अभिन्नश्रुतिचक्षुषाम् ।
अधर्मार्जितभोगानाम् आशीरप्यहितोचिता ॥ ४-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಬೆಟ್ಟದಲ್ಲಿ ವಾಸಿಸುವ, ಕಿವಿ ಕಣ್ಣುಗಳು ಒಂದೇ ಆಗಿಯುಳ್ಳ, ಪೂರ್ವಾರ್ಜಿತ ಅಧರ್ಮದಿಂದ ಹೆಡೆಯನ್ನು ಹೊಂದಿರುವ ಸರ್ಪಗಳ ವಿಷದ ಹಲ್ಲುಗಳು ಸರ್ಪತ್ವಕ್ಕೆ ಉಚಿತವೇ ಸರಿ. (೨) ನಡತೆಯಲ್ಲಿ ಸ್ಥಿರತೆಯಿಲ್ಲದವರ, ಶ್ರವಣೇಂದ್ರಿಯ ಗ್ರಾಹ್ಯ ವೆಲ್ಲವೂ ಚಕ್ಷುರಿಂದ್ರಿಯಗ್ರಾಹ್ಯವೆನ್ನುವವರ, ಅಧರ್ಮದಿಂದ ಐಹಿಕಭೋಗಗಳನ್ನು ಸಂಪಾದಿಸಿಕ್ಕೊಂಡಿರುವವರ ಆಶೀರ್ವಾದವೂ ಕೂಡ ಹಿತಕ್ಕೆ ಯೋಗ್ಯವಲ್ಲವು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಶ್ಲೇಷೆಯ ಪದಗಳು: ಅವ್ಯವಸ್ಥಿತ= (ಅವಿ+ಅವಸ್ಥಿತ ಬೆಟ್ಟದಲ್ಲಿರುವ, ಅ+ವ್ಯವಸ್ಥಿತ ಅರ್ಥಾತ್ ನಡತೆಯಲ್ಲಿ ಸ್ಥಿರತೆಯಿಲ್ಲದ); ಅಭಿನ್ನಶ್ರುತಿಚಕ್ಷುಷ್= ಹಾವು [ಭಾರತೀಯ ಪುರಾತನ ವಾಙ್ಮಯದಲ್ಲಿ ಸರ್ಪಗಳು ಕಣ್ಣಿನಿಂದಲೇ ಕೇಳುತ್ತವೆಯೆಂಬ ಒಂದು ಅವೈಜ್ಞಾನಿಕ ನಂಬಿಕೆಯಿದೆ. ಅದಕ್ಕೇ ಹಾವಿಗೆ ಸಂಸ್ಕೃತದಲ್ಲಿ “ಚಕ್ಷುಶ್ಶ್ರವಾಃ” ಎಂಬ ಸಮಾನಾರ್ಥಕ ಪದವಿದೆ], ಚಾರ್ವಾಕ [ಚಾರ್ವಾಕರಿಗೆ ಚಾಕ್ಷುಷಪ್ರಮಾಣವೂ ಶಬ್ದಪ್ರಮಾಣವೂ ಒಂದೇ. ಕಣ್ಣಿಗೆ ಕಾಣದ ಶ್ರುತಿಗ್ರಾಹ್ಯ ಪರಲೋಕದಲ್ಲಿ ಅವರಿಗೆ ನಂಬಿಕೆಯಿಲ್ಲ]); ಆಶೀಃ= (ಹಾವಿನ ವಿಷದ ಹಲ್ಲು, ಆಶೀರ್ವಾದ); ಅಹಿತೋಚಿತಾ= ( ಅಹಿ+ತಾ+ಉಚಿತಾ ಅರ್ಥಾತ್ ಸರ್ಪತ್ವಕ್ಕೆ ಯೋಗ್ಯ, ಅ+ಹಿತೋಚಿತಾ ಹಿತಕ್ಕೆ ಉಚಿತವಲ್ಲದ).
विश्वास-प्रस्तुतिः
दुष्टैरारोपितः कश्चिदनर्थक्रिययाऽन्वितः ॥ असत्कारॆण गृह्येत विरुद्धाकारवेदिभिः ॥ ४-९ ॥
मूलम्
दुष्टैरारोपितः कश्चिदनर्थक्रिययाऽन्वितः ॥ असत्कारॆण गृह्येत विरुद्धाकारवेदिभिः ॥ ४-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ದೃಷ್ಟ್ಯಾದಿ ದೋಷಯುಕ್ತರು ಯಾವುದೋ ವಸ್ತುವಿನಲ್ಲಿ ಆ ವಸ್ತುವಿಗೆ ಸಂಬಂಧಿಸದ ಕ್ರಿಯೆಯಿಂದ ಕೂಡಿರುವುದೆಂಬ ಆರೋಪವನ್ನು ಮಾಡಿದರೆ ಆ ಆರೋಪಕ್ಕೆ ವಿರುದ್ಧವಾದ ತಥ್ಯತೆಯನ್ನು ತಿಳಿದವರು ಆರೋಪವು ಅಸತ್ ಎಂದರೆ ಸುಳ್ಳು ಎಂದು ಗ್ರಹಿಸುತ್ತಾರೆ. (೨) ದುಷ್ಟರು ಒಬ್ಬನ ಮೇಲೆ ಮಾಡಬಾರದಕೃತ್ಯವನ್ನೆಸಗಿದನೆಂಬ ಆರೋಪವನ್ನು ಹೊರಿಸಿದರೆ, ಅವನನ್ನು ಅವನ ವಿಷಯದಲ್ಲಿ ತಥ್ಯತೆಯನ್ನು ಅರಿತವರೂ ಕೂಡ (ದುರ್ಜನರ ಭಯದಿಂದ?) ಸತ್ಕರಿಸುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಮೊದಲನೆಯ ಅರ್ಥ ತರ್ಕ ಶಾಸ್ತ್ರಕ್ಕೆ ಸಂಬಂಧಿಸಿದೆ. ಭಾರತೀಯ ತರ್ಕ ಶಾಸ್ತ್ರದಲ್ಲಿ “ಶುಕ್ತೌ ರಜತತ್ವಾರೋಪಃ” (ಕಪ್ಪೆಯ ಚಿಪ್ಪನ್ನು ಬೆಳ್ಳಿಯೆಂದು ತಿಳಿಯುವುದು) ಮತ್ತು “ರಜ್ಜೌ ಸರ್ಪತ್ವಾರೋಪಃ” (ಹಗ್ಗವನ್ನು ಹಾವೆಂದು ತಿಳಿಯುವುದು), ಭ್ರಮೆಗೆ ಸಾಮಾನ್ಯ ಉದಾಹರಣೆಗಳು. “ಸತ್ಕಾರ್ಯ” ಮತ್ತು “ಅಸತ್ಕಾರ್ಯ” ಇವುಗಳಿಗೂ ಭಾರತೀಯ ದರ್ಶನಗಳಲ್ಲಿ ಪಾರಿಭಾಷಿಕ ಅರ್ಥಗಳಿವೆ. ಹೆಚ್ಚಿಗೆ ವಿವರ ಪ್ರಾಜ್ಞವಿದಿತ, ಪ್ರಾಯಶಃ ಅಪ್ರಕೃತ ಕೂಡ.
विश्वास-प्रस्तुतिः
तमस्स्वभावमलिनं वृत्त्यालोकोज्झिताश्रयम् ।
दण्ड्यं मित्रेण राज्ञा च दृष्टदोषान्वयं विदुः ॥ ४-१० ॥
मूलम्
तमस्स्वभावमलिनं वृत्त्यालोकोज्झिताश्रयम् ।
दण्ड्यं मित्रेण राज्ञा च दृष्टदोषान्वयं विदुः ॥ ४-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಸ್ವಭಾವದಿಂದಲೇ ಮಲಿನನಾದ, ತನ್ನ ವರ್ತನೆಯಿಂದ ಚಂದ್ರಸೂರ್ಯರು ದೃಷ್ಟಿಗೆ ಬೀಳದಂತೆ ಮಾಡಿದ ರಾಹುವು ಸೂರ್ಯನಿಂದಲೂ ಚಂದ್ರನಿಂದಲೂ ದಂಡ್ಯನು ಎಂದು (ಜನರು) ತಿಳಿಯುತ್ತಾರೆ. (೨) ತಮೋಗುಣದ ಸ್ವಭಾವದಿಂದ ಮಲಿನಮನಸ್ಕನಾದ, ಜನರು ಒಪ್ಪದ ಕಸುಬನ್ನು ಆಶ್ರಯಿಸಿದ, ಎಲ್ಲರೂ ಕಂಡಂತೆ ದೋಷಿಯಾದ ಮನುಷ್ಯನನ್ನು ಸ್ನೇಹಿತನೋ ಇಲ್ಲವೇ ರಾಜನೋ ದಂಡಿಸಬೇಕು ಎಂದು (ಜನರು) ತಿಳಿಯುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿರುವ ಶ್ಲಿಷ್ಟ ಪದಗಳು: ತಮಃ= ( ರಾಹು, ತಮೋಗುಣ); ವೃತ್ತ್ಯಾಲೊಕೋಜ್ಝಿತಾಶ್ರಯಮ್= (ವೃತ್ತ್ಯಾ+ಆಲೋಕೋಜ್ಝಿತಾಶ್ರಯಮ್, ವೃತ್ತ್ಯಾ+ಲೋಕೋಜ್ಝಿತಾಶ್ರಯಮ್, ); ಮಿತ್ರ= (ಸೂರ್ಯ, ಸ್ನೇಹಿತ ); ರಾಜನ್= (ಚಂದ್ರ, ರಾಜ, ). ಇಲ್ಲಿ ನಿರ್ದಿಷ್ಟವಾಗಿರುವ ಪೌರಾಣಿಕ ಕಥೆ: ಸಮುದ್ರಮಥನದಿಂದ ದೊರೆತ ಅಮೃತವನ್ನು ಶ್ರೀವಿಷ್ಣುವು ದೇವತೆಗಳಿಗೆ ಹಂಚುತ್ತಿದ್ದಾಗ ರಾಕ್ಷಸನಾದ ರಾಹುವು ದೇವತೆಗಳ ಮಧ್ಯೆ ಮೋಸದಿಂದ ಕುಳಿತಿರುವುದನ್ನು ಸೂರ್ಯ ಚಂದ್ರರು ಕಂಡು ಹಿಡಿದು ಈ ವಿಷಯವನ್ನು ವಿಷ್ಣುವಿಗೆ ತಿಳಿಸಲಾಗಿ ವಿಷ್ಣುವು ಕೋಪಗೊಂಡು ರಾಹುವಿನ ಶಿರಶ್ಛೇದನ ಮಾಡಿದನು. ಅಂದಿನಿಂದ ರಾಹು (ಶಿರಸ್ಸು) ಕೇತು(ದೇಹ)ಗಳಾಗಿ ಸೂರ್ಯ ಚಂದ್ರರನ್ನು ಕಾಡುತ್ತಾರೆ.
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಒಲೆಯೇ ಮನೆಯಾಗಿ ಉಳ್ಳ (ಬೀದಿಯ ನಾಯಿಗಳು) ಮನೆಗಳ ಹೊರಗೇ ಅಲೆದಾಡುತ್ತಾ ನಾಚಿಕೆಯಿಲ್ಲದೆ ಕಾಮಕೇಳಿಯಲ್ಲಿ ತೊಡಗಿ ಕೋಪವನ್ನು ಉಂಟುಮಾಡುತ್ತಾ ಜನರನ್ನು ನಾಚುವಂತೆ ಮಾಡುತ್ತವೆ. (೨) ತಮ್ಮ ಜಾತಿಯೊಂದನ್ನೇ ಶರಣಾಗಿರುವ, ಸಜ್ಜನರಿಂದ ಬಹಿಷ್ಕೃತರಾದ, ನಾಚಿಕೆಯಿಲ್ಲದೆ ನೀಚವೃತ್ತಿಯನ್ನು ಆಶ್ರಯಿಸಿರುವ ಕೆಲವರು ವಿನಾಕಾರಣ ಅಲೆದಾಡುತ್ತಾ ಕೋಪವನ್ನು ಉಂಟುಮಾಡುತ್ತಾ ಇತರೆ ಜನರು ನಾಚುವಂತೆ ಮಾಡುತ್ತಾರೆ.
ಟಿ: ದ್ವ್ಯರ್ಥಕ ಪದಗಳು: (೧) ಜಾತಿ=(ಒಲೆ, ಜಾತಿ); ಶರಣ= (ಮನೆ, ಆಶ್ರಯ); ಜಘನ್ಯ= (ಜಘನಪ್ರದೇಶಕ್ಕೆ ಸಂಬಂಧಿಸಿದ, ಕೀಳ್ಮಟ್ಟದ). ಇಲ್ಲಿ ಶ್ಲೇಷೆಯ ಧ್ವನಿಯ ಮೂಲಕ ತಮ್ಮ ಜಾತಿಗೆ ಯೋಗ್ಯವಲ್ಲದ ಕೀಳ್ಮಟ್ಟದ ಕಸುಬನ್ನು ಅವಲಂಬಿಸಿ ನಾಮಮಾತ್ರಕ್ಕೆ ತಮ್ಮ ಜಾತಿಯನ್ನು ಹೊಂದಿರುವ ಜನರನ್ನು ಬೀದಿಯ ನಾಯಿಗಳಿಗೆ ಹೋಲಿಸಿದೆ.
विश्वास-प्रस्तुतिः
आलोकावधि यद्वशेन सुगतिं विंदन्ति भूतान्यसौ
दृष्टिः स्नेहविशेषतो वितनुते वंशे भुजंगभ्रमम् ।
दक्षा भोगिषु केषुचित् विषमिता दृष्टिं निहन्तुं क्षणात्
तामप्याशु विनाशयेत् क्षणरुचिः काचित् क्षणस्फूर्जतुः ॥ ४-१२ ॥
मूलम्
आलोकावधि यद्वशेन सुगतिं विंदन्ति भूतान्यसौ
दृष्टिः स्नेहविशेषतो वितनुते वंशे भुजंगभ्रमम् ।
दक्षा भोगिषु केषुचित् विषमिता दृष्टिं निहन्तुं क्षणात्
तामप्याशु विनाशयेत् क्षणरुचिः काचित् क्षणस्फूर्जतुः ॥ ४-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧)ಯಾವ ಕಣ್ಣಿನ ಸಹಾಯದಿಂದ ಬೆಳಕಿರುವವರೆಗೂ ಜನ್ತುಗಳಿಗೆ ಗಮನಕ್ರಿಯೆಯು ಸುಲಭವೋ ಅದೇ ಕಣ್ಣು ಜಿಡ್ಡಿನಸಂಸರ್ಗದಿಂದ ಬಿದಿರಿನಲ್ಲಿ ಹಾವೆಂಬ ಭ್ರಮೆಯನ್ನು ಉಂಟುಮಾಡುತ್ತದೆ. ಅದೇ ಕಣ್ಣು ಭೋಗಿಗಳಲ್ಲಿ (ಹಾವುಗಳಲ್ಲಿ, ಕ್ಷೌರಕರಲ್ಲಿ) ವಿಷಮಿತವಾದರೆ (ವಿಷವನ್ನು ಹೊಂದಿ, ಏರುಪೇರಾಗಿ) ಕ್ಷಣದಲ್ಲಿಯೇ ಕಣ್ಣನ್ನು ಹಾಳುಮಾಡಬಲ್ಲದು. ಆ ಕಣ್ಣನ್ನೇ ಕ್ಷಣಕಾಲ ಮಿಂಚುವ ಸಿಡಿಲು ವೇಗದಲ್ಲಿ ನಾಶಪಡಿಸೀತು. (೨) ಮಹಾಪುರುಷನೊಬ್ಬನ ಯಾವ ದೃಷ್ಟಿಯ ದೆಸೆಯಿಂದ ಲೋಕಗಳ ಎಲ್ಲೆಯವರೆಗೂ ಪ್ರಾಣಿಗಳು ಸದ್ಗತಿಯನ್ನು ಹೊಂದುತ್ತವೋ ಆ ದೃಷ್ಟಿಯೇ ಸದ್ವಂಶಸ್ಥನೊಬ್ಬನು ಸ್ತ್ರೀಗಳೊಡನೆ ಸ್ನೇಹಪರನಾಗಿದ್ದರೆ ಅವನನ್ನು ವಿಟನೆಂದು ಪರಿಗಣಿಸುತ್ತದೆ. ಅದೇ ದೃಷ್ಟಿಯು ವಿಷಮಿತವಾದರೆ ಕೆಲವು ಭೋಗಾಸಕ್ತರಲ್ಲಿ ಕ್ಷಣಮಾತ್ರದಲ್ಲಿ ದೃಷ್ಟಿಯನ್ನು ಹಾಳುಮಾಡಬಲ್ಲದು. ಆ ದೃಷ್ಟಿಯನ್ನೇ ಸಿಡಿಲಿನಂತೆ ಬಂದ ಕ್ಷಣಕಾಲ ಪ್ರಿಯವೆನಿಸುವ ಒಂದು ಆಸೆಯು ನಾಶಪಡಿಸಬಲ್ಲದು.
ಶ್ರೀನಿವಾಸಮೂರ್ತಿ - ಟಿಪ್ಪನೀ
ದೇಶಿಕರು ಈ ಶ್ಲೋಕವನ್ನು ಒಂದು ಒಗಟಿನಂತೆ ಬರೆದಂತಿದೆ. ಅಂತಹ ಕ್ಲಿಷ್ಟ ಪದಗಳಿಲ್ಲದೆ ಹೋದರೂ ವಾಕ್ಯಾರ್ಥವು ಎಟುಕಿದರೂ ಶ್ಲೋಕದ ಭಾವ ತಿರುಳು ದುರ್ಗ್ರಾಹ್ಯ. ಸಿದ್ಧಪುರುಷನೊಬ್ಬನ ಕಟಾಕ್ಷದಿಂದ ಅನೇಕರಿಗೆ ಶುಭವುಂಟಾಗುತ್ತದೆ. ಆದರೆ, ಯಾರೋ ಒಬ್ಬರ ಮೇಲಿನ ಅನುರಾಗವಿಶೇಷದಿಂದ ಆ ಸಿದ್ಧನು ಭ್ರಮೆಯಿಂದ ಸದ್ವಂಶಸ್ಥನೊಬ್ಬನನ್ನು ವಿಟನೆಂದು ಪರಿಗಣಿಸಿಯಾನು. ಕ್ರೋಧವಶನಾಗಿ ಅವನು ಭೋಗಾಸಕ್ತರಾದ ಅನುಯಾಯಿಗಳಿಗೆ ಕೆಡುಕನ್ನು ಕೂಡಾ ಮಾಡಿಯಾನು. ಅಂತಹವನು ಇಂದ್ರಿಯಚಾಪಲ್ಯಕ್ಕೆ ಸಿಕ್ಕಿ ತನ್ನ ಸಿದ್ಧಿಯನ್ನೇ ಕಳೆದುಕ್ಕೊಂಡಾನು. ಒಟ್ಟಿನಲ್ಲಿ, ಸಿದ್ಧ ಪುರುಷನೊಬ್ಬನು ಸಾಧಿಸಿಕ್ಕೊಂಡ ಸಿದ್ಧಿಯನ್ನು ಉಳಿಸಿಕ್ಕೊಳ್ಳಬೇಕಾದರೆ ದುರ್ವೃತ್ತಿಯಿಂದ ದೂರವಿರಬೇಕು, ಸಿದ್ಧಿಯು ಸತತಸಾಧನೆಯಿಲ್ಲದೆ ಉಳಿದುಕ್ಕೊಳ್ಳುವುದಿಲ್ಲ ಎಂಬುದೇ ಶ್ಲೋಕದ ಅಂತರಾರ್ಥವೆಂದೆನಿಸುತ್ತದೆ.
|| ಇತಿ ದುರ್ವೃತ್ತಪದ್ಧತಿಃ ಚತುರ್ಥೀ ||
॥ इति दुर्वृत्तपद्धतिश्चतुर्थी ॥