विश्वास-प्रस्तुतिः
परचित्तैकनिरताः पुत्रादिष्वप्यसङ्गिनः ।
योगिनामनुकुर्वन्ति विशृङ्खलधियः खलाः ॥ ३-१ ॥
मूलम्
परचित्तैकनिरताः पुत्रादिष्वप्यसङ्गिनः ।
योगिनामनुकुर्वन्ति विशृङ्खलधियः खलाः ॥ ३-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಖಲ ಎಂದರೆ ಕೆಟ್ಟವನು ಅಥವಾ ದುರ್ಜನ. ಈ ಪದ್ಧತಿ ಕೆಟ್ಟವರ ವಿಷಯವಾಗಿ. “ದುರ್ಜನಸಂಗವ ಬಿಡೋ ಬಿಡೋ” ಎಂಬುದೇ ಈ ಪದ್ಧತಿಯ ತಿರುಳು.
ಪರ ಎಂದರೆ ಮತ್ತೊಬ್ಬರ ವಿಷಯವಾಗಿ ಯೋಚನೆಮಾಡುವುದರಲ್ಲೇ ಯಾವಾಗಲೂ ನಿರತರಾಗಿರುವ, ಸ್ವಂತ ಮಕ್ಕಳೇ ಮೊದಲಾದವರಲ್ಲಿ ಕೂಡ ಆಸಕ್ತಿಯಿಲ್ಲದ, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದ ದುರ್ಜನರು ಪರ ಎಂದರೆ ಪರಬ್ರಹ್ಮನಲ್ಲೇ ನಿರತವಾದ ಮನಸ್ಸುಳ್ಳ, ಪುತ್ರಾದಿಗಳಲ್ಲಿಯೂ ವ್ಯಾಮೋಹವಿಲ್ಲದ, ಸಂಸಾರಬಂಧನಗಳನ್ನು ತೊರೆದ ಯೋಗಿಗಳನ್ನು ಅನುಕರಿಸುತ್ತಾರೆ!
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಪದಪ್ರಯೋಗದ ಚಮತ್ಕಾರದಿಂದ ದುರ್ಜನರಿಗೂ ಯೋಗಿಗಳಿಗೂ ಸಾಮ್ಯದ ತೋರಿಕೆ!
ಇಬ್ಬರೂ ಪರಚಿತ್ತೈಕನಿರತರು, ಇಬ್ಬರಿಗೂ ಪುತ್ರಾದಿಗಳಲ್ಲಿ ಅಸಂಗ, ಇಬ್ಬರೂ ವಿಶೃಂಖಲಮನಸ್ಸುಳ್ಳವರು! ವಾಸ್ತವತೆಗೂ ತೋರಿಕೆಗೂ ಅಜಗಜಾಂತರ.
विश्वास-प्रस्तुतिः
आत्मार्थं युक्तचित्तानां मित्रमंडलभेदिनाम् ।
अतिलंघितलोकानां न बंधः केनचित् क्वचित् ॥ ३-२ ॥
मूलम्
आत्मार्थं युक्तचित्तानां मित्रमंडलभेदिनाम् ।
अतिलंघितलोकानां न बंधः केनचित् क्वचित् ॥ ३-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಆತ್ಮಯೋಗದಲ್ಲಿ ನಿರತರಾದ, ಸೂರ್ಯಮಂಡಲವನ್ನು ಭೇದಿಸಿ ಮುಂದೆ ಹೋಗುವ,ಬ್ರಹ್ಮಲೋಕವೇ ಮೊದಲಾದ ಲೋಕಗಳನ್ನು ದಾಟುವ ಯೋಗಿಗಳಿಗೆ ಎಲ್ಲಿಯಾಗಲಿ ಯಾರೊಡನೆಯಾಗಲಿ ಬಂಧವಿರುವುದಿಲ್ಲ. (೨) ಸ್ವಂತ ಪ್ರಯೋಜನದಲ್ಲಿಯೇ ನಿರತವಾದ ಮನಸ್ಸುಳ್ಳ, ಸ್ನೇಹಿತರ ಗುಂಪನ್ನು ಒಡೆಯುವ, ಸಮಾಜದ ಕಟ್ಟಲೆಗಳನ್ನು ಮೀರುವ ದುರ್ಜನರಿಗೆ ಎಲ್ಲಿಯಾಗಲಿ ಯಾರೊಡನೆಯಾಗಲಿ ಬಂಧವಿರುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಹಿಂದಿನ ಶ್ಲೋಕದಲ್ಲಿ ಮುನಿಜನಕ್ಕೂ ದುರ್ಜನರಿಗೂ ಇರುವ ತೋರಿಕೆಯ ಸಾಮ್ಯವನ್ನು ಈ ಶ್ಲೋಕದಲ್ಲೂ ಶ್ಲೇಷೆಯ ಧ್ವನಿಯ ಮೂಲಕ ತೋರಿಸಲಾಗಿದೆ. ಸಿದ್ಧಿಯನ್ನು ಪಡೆದ ಯೋಗಿಗಳು ಮರಣಹೊಂದಿದಮೇಲೆ ಸೂರ್ಯಮಂಡಲದಾಚೆ ಅರ್ಚಿರಾದಿ ಮಾರ್ಗದಲ್ಲಿ ಬ್ರಹ್ಮಲೋಕವೇ ಮೊದಲಾದ ಲೋಕಗಳನ್ನು ದಾಟಿ ಪರಮಾತ್ಮನ ಪರಮಪದವನ್ನು ಸೇರುವರು ಎಂಬುದು ವೈದಿಕಸನಾತನಧರ್ಮಿಗಳ ನಂಬಿಕೆಯಾಗಿರುತ್ತದೆ. ಈ ನಂಬಿಕೆಯನ್ನು ಈ ಶ್ಲೋಕದಲ್ಲಿ ಪ್ರಸ್ತಾಪಿಸಿ ದೇಶಿಕರು ತಮ್ಮ ವಾಕ್ಯಗ್ರಥನಕೌಶಲದಿಂದ ಶ್ಲೇಷೆಯ ಮೂಲಕ ಅಂತಹ ಬ್ರಹ್ಮಜ್ಞಾನಿಗಳಿಗೂ ದುರ್ಜನರಿಗೂ ತೋರಿಕೆಯ ಸಾಮ್ಯವನ್ನು ರಚಿಸಿದ್ದಾರೆ.
विश्वास-प्रस्तुतिः
स्नेहः शैत्यं प्रसादश्च कोशत्यागश्च जायते ।
आसन्नपरपीडार्थं निस्त्रिंशस्यासितात्मनः ॥ ३-३ ॥
मूलम्
स्नेहः शैत्यं प्रसादश्च कोशत्यागश्च जायते ।
आसन्नपरपीडार्थं निस्त्रिंशस्यासितात्मनः ॥ ३-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ರಿಪುಗಳು ಸನ್ನಿಹಿತರಾದಾಗ ಅವರನ್ನು ಹಿಂಸಿಸಲು ಕಪ್ಪುಬಣ್ಣದ ಕತ್ತಿಗೆ ಎಣ್ಣೆಯ ಸಂಪರ್ಕವೂ ಮಸೆಯುವಿಕೆಯೂ ಹೊಳಪುಕೊಡೋಣವೂ ಒರೆಯಿಂದ ಹೊರಕ್ಕೆ ತೆಗೆಯೋಣವೂ ಉಂಟಾಗುತ್ತವೆ. (೨) ಕಲಂಕಿತಮನಸ್ಸುಳ್ಳ ದುರ್ಜನನು ಸಮೀಪದಲ್ಲಿರುವ ಇತರರನ್ನು ಹಿಂಸಿಸಲಿಕ್ಕಾಗಿ ಸ್ನೇಹವನ್ನೂ, ತಂಪನ್ನೂ ಪ್ರಸನ್ನತೆಯನ್ನೂ ಧನತ್ಯಾಗವನ್ನೂ ತೋರಿಸುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲೇಷೆಯ ಲಾಸ್ಯ ಈ ಶ್ಲೋಕದಲ್ಲೂ. ಈ ಶ್ಲೋಕದಲ್ಲಿ ಎರಡು ಅರ್ಥವುಳ್ಳ ಪದಗಳು: ಸ್ನೇಹ= (ಗೆಳೆತನ, ಜಿಡ್ಡು); ಶೈತ್ಯ=(ತಂಪು, ಮಸೆಯುವಿಕೆ); ಪ್ರಸಾದ= (ಪ್ರಸನ್ನತೆ, ಹೊಳಪು); ಕೋಶ= (ಧನದ ಭಂಡಾರ, ಕತ್ತಿಯ ಒರೆ); ಪರ= (ಇತರರು, ಶತ್ರು); ನಿಸ್ತ್ರಿಂಶ= (ದುರ್ಜನ, ನೀಳ್ಗತ್ತಿ); ಅಸಿತ= (ಕಲಂಕಿತ, ಕಪ್ಪಾದ). ದುರ್ಜನನು ಇತರರ ವಿನಾಶಕ್ಕಾಗಿ ಅಂತಹವರು ಸನ್ನಿಹಿತರಾದಾಗ (ಅವರನ್ನು ಬಲೆಗೆ ಹಾಕಿಕ್ಕೊಳ್ಳಲು) ಅವರಲ್ಲಿ ಕಪಟ ಸ್ನೇಹ, ಮಾರ್ದವ ಮತ್ತು ಪ್ರಸನ್ನತೆಯನ್ನೂ ತೋರಿ ಅವರಿಗಾಗಿ ಧನತ್ಯಾಗವನ್ನೂ ಮಾಡುತ್ತಾನೆ. ಇದಕ್ಕೆ ಶ್ಲೇಷೆಯ ಧ್ವನಿಯ ಮೂಲಕ ಸಾಮ್ಯ ಯುದ್ಧಕಾಲದಲ್ಲಿ ಪ್ರಯೋಗಕ್ಕೆ ಮೊದಲು ಎಣ್ಣೆಯಿಂದ ತಿಕ್ಕಿ, ಅಲಗು ಚೂಪಾಗುವುದಕ್ಕೆ ಮಸೆದು, ಹೊಳೆಯುತ್ತಿರುವಂತೆ ಸಿದ್ಧ ಮಾಡಿಟ್ಟುಕ್ಕೊಂಡಿರುವ ನೀಳ್ಗತ್ತಿಯನ್ನು ಒರೆಯಿಂದ ಹೊರತೆಗೆಯುವಿಕೆ.
विश्वास-प्रस्तुतिः
जनित्वाऽपि महावंशे निम्नगा वक्रचेष्टिताः ।
वैपरीत्यं वितन्वन्ति समेषु विषमेषु च ॥ ३-४ ॥
मूलम्
जनित्वाऽपि महावंशे निम्नगा वक्रचेष्टिताः ।
वैपरीत्यं वितन्वन्ति समेषु विषमेषु च ॥ ३-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧)ದೊಡ್ಡ ಬಿದಿರು ಮೆಳೆಗಳಿಗೆ ವಾಸಸ್ಥಾನವಾದ ಪರ್ವತದಲ್ಲಿ ಹುಟ್ಟಿ ಇಳಿಕಲಿನಲ್ಲಿ ಹರಿದುಹೋಗುವ ಡೊಂಕುಡೊಂಕಾಗಿ ಹರಿಯುವ ನದಿಗಳು ಸಮತಲಪ್ರದೇಶಗಳನ್ನು ಹಳ್ಳದಿಬ್ಬಗಳನ್ನುಳ್ಳದಾಗಿಯೂ ಹಳ್ಳದಿಬ್ಬಗಳುಳ್ಳ ಪ್ರದೇಶಗಳನ್ನು ಸಮವಾಗಿಯೂ ಮಾಡಿ ಪ್ರತಿಕೂಲವಾಗಿ ನಡೆದುಕ್ಕೊಳ್ಳುತ್ತವೆ. (೨) ಸತ್ಕುಲಪ್ರಸೂತರಾದರೂ ನೀಚಮನೋಭಾವವುಳ್ಳ ಕುಟಿಲಗಾಮಿಗಳು ಸಾಧುಗಳಲ್ಲಿ ಹಗೆತನವನ್ನೂ ಅಸಾಧುಗಳಲ್ಲಿ ಮೈತ್ರಿಯನ್ನೂ ವ್ಯತ್ಯಸ್ತವಾಗಿ ಆಚರಿಸುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಸ್ಪಷ್ಟವಾಗಿ ಎರಡು ಅರ್ಥ ಬರುವ ಪದ “ವಂಶ” ಎಂಬುದು ಒಂದೇ. ವಂಶ= (ಕುಲ, ಬಿದಿರು). “ನಿಮ್ನ”, “ವಕ್ರ” ಮತ್ತು “ವಿಷಮ” ಪದಗಳು ರೂಢರೂಪಕದ ಬಲದಿಂದ ಕೆಟ್ಟವನ ಗುಣಗಳ ನಿರೂಪಣೆಯಲ್ಲಿ ಬಳಕೆಗೆ ಬಂದಿವೆ. ನದಿಗಳ ಅನ್ಯಾಪದೇಶದಿಂದ ಶ್ಲೇಷೆಯ ಬಲದಲ್ಲಿ ಈ ಶ್ಲೋಕದ ಅರ್ಥ ದುರ್ಜನರಿಗೆ ಅನ್ವಯವಾಗುತ್ತದೆ.
विश्वास-प्रस्तुतिः
उत्पथादुन्नताः केचित् बहुभङ्गभ्रमाकुलाः ।
तटस्थानपि निघ्नन्ति तरसा भिन्नसेतवः ॥ ३-५ ॥
मूलम्
उत्पथादुन्नताः केचित् बहुभङ्गभ्रमाकुलाः ।
तटस्थानपि निघ्नन्ति तरसा भिन्नसेतवः ॥ ३-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ತಮ್ಮ ಸಹಜ ಮಾರ್ಗವನ್ನು ತೊರೆದು ಉಕ್ಕಿ ಹರಿಯುವ ಕೆಲವು ನದಗಳು ಅನೇಕ ಅಲೆಗಳಿಂದ ಸುಳಿಗಳಿಂದ ಕಲುಷಿತಗಳಾಗಿ ಅಣೆಕಟ್ಟುಗಳನ್ನು ಒಡೆದು ಅತಿವೇಗದಿಂದ ದಡದಲ್ಲಿರುವ ಮರಗಳನ್ನು ಕೂಡ ಹಾಳುಮಾಡುತ್ತವೆ. (೨) ಸಹಜಮಾರ್ಗವನ್ನು ತೊರೆದು ಉಚ್ಛ್ರಾಯಸ್ಥಿತಿಗೆ ಬಂದಿರುವ ಕೆಲವರು ಅನೇಕವಾದ ವಂಚನೆ, ಭ್ರಮೆಗಳಿಂದ ಕಲುಷಿತರಾಗಿ ಸಮಾಜದ ತಡೆಗಳನ್ನೆಲ್ಲಾ ಮುರಿದು ಪ್ರತಿಕೂಲರಲ್ಲದವರನ್ನು ಕೂಡ ಕ್ಷಣಕಾಲದಲ್ಲಿಯೇ ಹಾಳುಮಾಡುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಪ್ರವಾಹದಿಂದ ಉಕ್ಕಿ ಹರಿಯುವ ನದಗಳು ದಡದಲ್ಲಿರುವ ಮರಗಳನ್ನು ಕೂಡ ನಾಶಮಾಡುವುದನ್ನು ಪ್ರಸ್ತಾಪಿಸಿ, ಅನ್ಯಾಪದೇಶದಿಂದ ದುಷ್ಟ ಜನರು ದುರ್ಮಾರ್ಗಗಳ ಮೂಲಕ ಮೇಲಕ್ಕೆ ಬಂದು ವಂಚನೆ ಭ್ರಮೆಗಳಿಂದ ಕೂಡಿದವರಾಗಿ ಸಮಾಜದ ಕಟ್ಟುಗಳನ್ನೆಲ್ಲಾ ಮುರಿದು ತಮಗೆ ಎದುರಾಗದೆ ಇರುವ ತಟಸ್ಥಜನರನ್ನು ಕೂಡ ನಾಶಿಸುತ್ತಾರೆ ಎಂದು ದೇಶಿಕರು ತಿಳಿಸುತ್ತಿದ್ದಾರೆ. “ನದೀ” ಮತ್ತು ಅದರ ಪರ್ಯಾಯ ಪದಗಳು ಸ್ತ್ರೀಲಿಂಗವಾದುದರಿಂದ, ಇಲ್ಲಿ ಪುಲ್ಲಿಂಗದ ಪ್ರಯೋಗವಿರುವುದರಿಂದ ಈ ಶ್ಲೋಕ “ನದ"ಗಳಿಗೆ (ಪಶ್ಚಿಮಾಭಿಮುಖವಾಗಿ ಹರಿಯುವ ಹೊಳೆಗಳು) ಅನ್ವಯಿಸುತ್ತದೆ. ಅನ್ಯಾಪದೇಶಕ್ಕೆ ಭಙ್ಗ (ಅಲೆ, ವಂಚನೆ), ಭ್ರಮ ( ಸುಳಿ, ಭ್ರಮೆ) ಎಂಬ ಪದಗಳು ಶ್ಲೇಷೆಯ ಮೂಲಕ ಪುಷ್ಟಿಯನ್ನು ಕೊಡುತ್ತವೆ.
विश्वास-प्रस्तुतिः
केनचिद्दान्तकृत्येन कुलगोत्रविमर्दिनम् ।
मदेन बहुधा भिन्नं मातङ्गं मन्यते जनः ॥ ३-६ ॥
मूलम्
केनचिद्दान्तकृत्येन कुलगोत्रविमर्दिनम् ।
मदेन बहुधा भिन्नं मातङ्गं मन्यते जनः ॥ ३-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ತನ್ನ ದಂತಕ್ರೀಡೆಯಿಂದ ಕುಲಪರ್ವತಗಳನ್ನೇ ಹಾಳುಮಾಡುವ ಆನೆಯನ್ನು ಮದದಿಂದ ಬಹುವಿಚಿತ್ರವಾಗಿ ವರ್ತಿಸುತ್ತಿರುವುದನ್ನಾಗಿ ಜನರು ತಿಳಿಯುತ್ತಾರೆ. (೨) ಸನ್ಯಾಸಿಗೆ ತಕ್ಕ ಯಾವುದೋ ಒಂದು ಕೆಲಸವನ್ನೆಸಗಿ ತನ್ನ ಕುಲಗೋತ್ರಕ್ಕೇ ಧಕ್ಕೆಯನ್ನು ತಂದು ಮದದಿಂದ ಬಹಳಮಟ್ಟಿಗೆ ಭಿನ್ನಚರಿತ್ರನಾಗಿರುವವನನ್ನು ಜನರು ಅಸ್ಪೃಶ್ಯನಂತೆ ಕಾಣುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಶ್ಲೇಷೆರುವ ಪದಗಳು: ದಾನ್ತ= ( ಸನ್ಯಾಸಿ, ದಂತಕ್ಕೆ ಸಂಬಂಧಿಸಿದ); ಗೋತ್ರ= (ಗೋತ್ರ, ಪರ್ವತ); ಮಾತಙ್ಗ= (ಅಸ್ಪೃಶ್ಯ, ಆನೆ). ಸ್ವಧರ್ಮದಲ್ಲಿ ನಿರತರಾಗಿರುವುದು ಸರ್ವಸಮ್ಮತವೆಂಬುದೇ ಈ ಶ್ಲೋಕದ ಆಶಯ.
विश्वास-प्रस्तुतिः
अनेकमुखपापात्मा छलसंदर्शिताश्रमः ।
कर्बुरप्रकृतिः कश्चित् कापेयकलहोचितः ॥ ३-७ ॥
मूलम्
अनेकमुखपापात्मा छलसंदर्शिताश्रमः ।
कर्बुरप्रकृतिः कश्चित् कापेयकलहोचितः ॥ ३-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಕಪಟತೆಯಿಂದ ಶ್ರೀರಾಮನ ಆಶ್ರಮವನ್ನು ಸಂದರ್ಶಿಸಿದ ಅನೇಕಮುಖ ಎಂದರೆ ದಶಾನನನಾದ ಪಾಪಿಷ್ಠ ರಾಕ್ಷಸನೊಬ್ಬನು ಕಪಿಯೊಡನೆ ಕಲಹಕ್ಕೆ ಯೋಗ್ಯನಾದನು. (೨) ಅನೇಕವಿಧವಾದ ಪಾಪಗಳನ್ನು ಮಾಡಿದ, ಕಪಟತೆಯಿಂದ ಸನ್ಯಾಸ ಅಥವಾ ಬ್ರಹ್ಮಚರ್ಯ ಆಶ್ರಮಗಳನ್ನು ಹೊರತೋರುವ ಒಬ್ಬಾನೊಬ್ಬ ಪಾಪಪ್ರಕೃತಿಯುಳ್ಳ ಮನುಷ್ಯನು ಕಪಿಗಳಂತೆ ವಿನಾಕಾರಣ ಕಲಹದಲ್ಲಿ ತೊಡಗುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಕರ್ಬುರ ಎಂಬ ಪದಕ್ಕೆ ಪಾಪಿಷ್ಠ ಮತ್ತು ರಾಕ್ಷಸ ಎಂಬ ಎರಡು ಅರ್ಥಗಳು ಇವೆ.
विश्वास-प्रस्तुतिः
छलिनं सत्कथानर्हं स्वात्मोपहतजातिकम् ।
न निगृह्णाति यः काले सोऽपि सभ्यैर्निगृह्यते ॥ ३-८ ॥
मूलम्
छलिनं सत्कथानर्हं स्वात्मोपहतजातिकम् ।
न निगृह्णाति यः काले सोऽपि सभ्यैर्निगृह्यते ॥ ३-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಛಲ ಜಾತಿ ಮೊದಲಾದ ದೋಷಗಳಿಂದ ಕೂಡಿದ ವಾದವನ್ನು ಮಾಡುವ ವಾದಿಯನ್ನು ಅಲ್ಲೇ ಆಗಲೇ ಪ್ರತಿವಾದಿಯು ತಪ್ಪುಗಳನ್ನು ತೋರಿಸಿ ಸೋಲಿಸದಿದ್ದರೆ ನೆರೆದಿರುವ ಸಭಾಸದರು ಪ್ರತಿವಾದಿಯೇ ಸೋತನೆಂದು ಪರಿಗಣಿಸುತ್ತಾರೆ. (೨) ಯಾವನು ಛಲಸ್ವಭಾವವುಳ್ಳ, ಸತ್ಕಥಾಶ್ರವಣಕ್ಕೆ ಅನರ್ಹನಾದ, ತನ್ನ ವರ್ತನೆಯಿಂದ ತನ್ನ ಜಾತಿಗೇ ಹಾನಿಯನ್ನು ತಂದ ಮನುಷ್ಯನನ್ನು ಸಕಾಲದಲ್ಲಿ ನಿಗ್ರಹಿಸುವುದಿಲ್ಲವೋ ಅಂತಹವನನ್ನು ಇತರ ಸಭ್ಯರು ನಿಗ್ರಹಿಸುತ್ತಾರಲ್ಲವೇ?.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ನ್ಯಾಯದರ್ಶನದ ಹಲವು ಪಾರಿಭಾಷಿಕ ಶಬ್ದಗಳು ಉಪಯುಕ್ತವಾಗಿವೆ. ಅವು ಹೀಗೆ. ಕಥಾ: ತತ್ತ್ವನಿರ್ಣಯಕ್ಕಾಗಿ ವಾದಿ ಪ್ರತಿವಾದಿಗಳು ಪೂರ್ವಪಕ್ಷ ಸಿದ್ಧಾಂತ ರೂಪವಾಗಿ ಯುಕ್ತಿಯಿಂದ ಆಡುವ ಮಾತು. ಛಲ: ವಾದಿಯು ಹೇಳಿದ ಶಬ್ದಕ್ಕೆ ಬೇರೆ ಅರ್ಥವನ್ನು ಕಲ್ಪಿಸಿ ಪ್ರತಿವಾದಿಯು ಹೇಳುವ ದೂಷಣೆ. ಜಾತಿ: ತನ್ನ ವಾದಕ್ಕೇ ಹಾನಿಮಾಡುವ ಉತ್ತರ. ನಿಗ್ರಹ: ವಾದದಲ್ಲಿ ದೋಷಯುಕ್ತವಾಗಿ ವಾದಿಸಿ ಸೋಲುವುದು. ದುರ್ಜನನನ್ನು ಸಕಾಲದಲ್ಲಿ ನಿಗ್ರಹಿಸದೇ ಹೋಗುವುದು ಮಹಾದೋಷವಾಗಿ ಪರಿಣಮಿಸುತ್ತದೆ ಎಂಬುದೇ ಈ ಶ್ಲೋಕದ ಭಾವ.
विश्वास-प्रस्तुतिः
अकिञ्चित्कारिणां दीनैराक्रुष्टगुणकर्मणाम् ।
अघाय गतसत्त्वानां दर्शनस्पर्शनादिकम् ॥ ३-९ ॥
मूलम्
अकिञ्चित्कारिणां दीनैराक्रुष्टगुणकर्मणाम् ।
अघाय गतसत्त्वानां दर्शनस्पर्शनादिकम् ॥ ३-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ನಿಶ್ವಾಸ ಉಚ್ಛ್ವಾಸ ವೇ ಆದಿಯಾದ ಯಾವುದೇ ದೇಹವ್ಯಾಪಾರಗಳು ಇಲ್ಲವಾಗಿವೆ. ಸುತ್ತಮುತ್ತಲಿನ ನೊಂದವರು ಅವರ ಗುಣಕರ್ಮಗಳನ್ನು ಗಟ್ಟಿಯಾಗಿ ಹೇಳಿಕ್ಕೊಳ್ಳುತ್ತಿದ್ದಾರೆ. ಅಂತಹ ನಿರ್ಜೀವಗಳನ್ನು (ಶವಗಳನ್ನು) ನೋಡುವುದಾಗಲಿ ಮುಟ್ಟುವುದಾಗಲಿ ಪಾಪಕರವು. (೨) ಪರಹಿತಕ್ಕಾಗಿ ಯತ್ಕಿಞ್ಚಿದಪಿ ಮಾಡದವರ ದುರ್ಗುಣಗಳನ್ನು ದುಷ್ಕರ್ಮಗಳನ್ನು ದೀನರು ಪರೋಕ್ಷದಲ್ಲಿ ಗಟ್ಟಿಯಾಗಿ ಹೇಳುತ್ತಾರೆ. (ಅಥವಾ, ದೀನರು ಭಯದಿಂದ ಅವರ ಸಮಕ್ಷ ಅವರಲ್ಲಿಲ್ಲದ ಗುಣಗಳನ್ನು , ಅವರು ಮಾಡದ ಕೆಲಸಗಳನ್ನು ಅವರಲ್ಲಿ ಆರೋಪಿಸಿ ಗಟ್ಟಿಯಾಗಿ ಹೊಗಳುತ್ತಾರೆ.) ಅಂತಹ ಸತ್ತ್ವಗುಣವಿಹೀನರಾದ ದುರ್ಜನರನ್ನು ನೋಡುವುದಾಗಲಿ ಸಂಪರ್ಕವಾಗಲಿ ಪಾಪಕರವು. ಅರ್ಥಾತ್, ಶವದ ದರ್ಶನ ಸಂಪರ್ಕಗಳು ಹೇಗೆ ವರ್ಜ್ಯವೋ ಅದೇ ರೀತಿ ದುರ್ಜನರ ದರ್ಶನ ಸಂಪರ್ಕಗಳೂ ವರ್ಜ್ಯ.
विश्वास-प्रस्तुतिः
निगिरन्तो जगत्प्राणान् उद्गिरन्तो मुखैर्विषम् ।
दूरतः परिहर्तव्या द्विजिह्वा जिह्मवृत्तयः ॥ ३-१० ॥
मूलम्
निगिरन्तो जगत्प्राणान् उद्गिरन्तो मुखैर्विषम् ।
दूरतः परिहर्तव्या द्विजिह्वा जिह्मवृत्तयः ॥ ३-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಗಾಳಿಯನ್ನು ನುಂಗುತ್ತಲೂ ಬಾಯಿಯಿಂದ ವಿಷವನ್ನು ಉಗುಳುತ್ತಲೂ ಡೊಂಕು ಡೊಂಕಾಗಿ ಹರಿದುಹೋಗುವ ಹಾವುಗಳನ್ನು ದೂರದಿಂದಲೇ ನಿವಾರಿಸಬೇಕು. (೨) ಜಗತ್ತಿನ ಜೀವಗಳನ್ನು ನುಂಗುತ್ತಲೂ (ನಾಶಪಡಿಸುತ್ತಲೂ), ತಮ್ಮ ಮುಖಗಳಿಂದ ವಿಷಪ್ರಾಯವಾದ ಮಾತುಗಳನ್ನು ಹೊರಗೆಡಹುತ್ತಲೂ, ಕುಟಿಲವ್ಯಾಪಾರವುಳ್ಳ, ಪರಸ್ಪರವಿರುದ್ಧವಾಗಿ ಮಾತುಗಳನ್ನಾಡುವ ದುರ್ಜನರನ್ನು ದೂರದಿಂದಲೇ ತೊರೆಯಬೇಕು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಪ್ರಾಣ= (ಗಾಳಿ, ಜೀವ); ದ್ವಿಜಿಹ್ವ= (ಸರ್ಪ, ಎರಡು ಮಾತನಾಡುವವ). ಹಾವಿನ ಸಹವಾಸದಂತೆ ದುರ್ಜನಸಹವಾಸವೂ ತ್ಯಾಜ್ಯ.
विश्वास-प्रस्तुतिः
अधिकोन्नतैरपि सुदारुणान्वितैः
असकृत्-भ्रमत्-पशुगणांघ्रिपीडितैः ।
विधिसिद्धनैकगुणसस्यसम्पदां
विरसैः स्वभावकठिनैरलं खलैः ॥ ३-११ ॥
मूलम्
अधिकोन्नतैरपि सुदारुणान्वितैः
असकृत्-भ्रमत्-पशुगणांघ्रिपीडितैः ।
विधिसिद्धनैकगुणसस्यसम्पदां
विरसैः स्वभावकठिनैरलं खलैः ॥ ३-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಹೆಚ್ಚು ಎತ್ತರದಲ್ಲಿರುವ, ಮೇಟಿಕಂಬದಿಂದ ಕೂಡಿದ, ಬಾರಿ ಬಾರಿಗೂ ತಿರುಗುತ್ತಿರುವ ಪಶುಗಳ ಕಾಲಿನಿಂದ ತುಳಿಯಲ್ಪಟ್ಟ, ಒಣಗಿ ಸ್ವಭಾವದಿಂದಲೇ ಗಟ್ಟಿಯಾಗಿರುವ ಕಣದ ಸಂಸರ್ಗವು ದೈವದತ್ತಗುಣಗಳನ್ನು ಹೊಂದಿರುವ ಧಾನ್ಯದ ಕಂತೆಗೆ ಬೇಕಿಲ್ಲ. (೨) ಸಮಾಜದಲ್ಲಿ ದೊಡ್ಡ ಅಂತಸ್ತನ್ನು ಪಡೆದ, ಕ್ರೂರಿಗಳಿಂದ ಸುತ್ತುವರಿಯಲ್ಪಟ್ಟ, ಬಾರಿ ಬಾರಿಗೂ ತಮ್ಮಹಿಂದೆ ತಿರುಗುತ್ತಿರುವ ಮೂಢರುಗಳಿಂದ ಹಿಡಿಯಲ್ಪಟ್ಟ ಪಾದಗಳುಳ್ಳ, ಕಲಹಪ್ರಿಯರಾದ, ಸ್ವಭಾವದಿಂದಲೇ ಕಠಿನಮನಸ್ಕರಾದ ದುರ್ಜನರ ಸಹವಾಸವು ದೈವವಶಾತ್ ಸ್ವಯಂ ಪ್ರಾಪ್ತವಾದ ವಿವಿಧಗುಣಗಳುಳ್ಳ ಧಾನ್ಯಸಂಪತ್ತಿಯನ್ನು ಪಡೆದ ಸಜ್ಜನರಿಗೆ ಬೇಕಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಶ್ಲೋಕದಲ್ಲಿ ಶ್ಲೇಷೆ ಹೀಗೆ: ಸು-ದಾರುಣಾ= ಅತ್ಯಂತಕ್ರೂರಿಗಳಾದ, ಸು-[ದಾರು]ಣಾ= ದೃಢವಾದ ಮರದಿಂದ[ಮೇಟಿಕಂಬದಿಂದ] ಕೂಡಿದ), ಖಲ= (ದುರ್ಜನ, ಕಣ). ಕಣವನ್ನು ಸಾಮಾನ್ಯವಾಗಿ ಗದ್ದೆ, ಹೊಲಗಳಿಗಿಂತಲೂ ಎತ್ತರದ ಪ್ರದೇಶದಲ್ಲಿ ಅಣಿಮಾಡುತ್ತಾರೆ. ಕಣದ ಮಧ್ಯೆ ಮೇಟಿಯೆಂಬ ಒಂದು ಕಂಬವಿರುತ್ತದೆ. ಮೇಟಿಗೆ ಕಟ್ಟಿದ ಎತ್ತುಗಳು ಕಣದಲ್ಲಿ ಹಾಸಿದ ಧಾನ್ಯಭರಿತ ಹುಲ್ಲನ್ನು ತುಳಿದು ಅದರಿಂದ ಧಾನ್ಯವನ್ನು ಬೇರ್ಪಡಿಸುತ್ತವೆ. ಕಣದ ನೆಲವು ಒಣಗಿ,ಗಟ್ಟಿಯಾಗಿರುತ್ತದೆ. ಬೇಸಾಯದ ಕಣಕ್ಕೆ ಸಂಬಂಧಿಸಿದ ಈ ಎಲ್ಲ ವಿಷಯಗಳನ್ನು ಈ ಶ್ಲೋಕದಲ್ಲಿ ಹೆಣೆದು ದೇಶಿಕರು ದುರ್ಜನರಿಗೂ ಕಣಕ್ಕೂ ಶ್ಲೇಷೆಯ ಮೂಲಕ ಸಾದೃಶ್ಯವನ್ನು ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಸಾರಾಂಶ ಇಷ್ಟು: ಯದೃಚ್ಛಾಲಾಭಸಂತುಷ್ಟರಾಗಿ ಇರುವ ಸಜ್ಜನರಿಗೆ ಐಶ್ವರ್ಯಮದಮತ್ತರಾಗಿ ಕಠಿನಹೃದಯರಾಗಿರುವವರ ಸಂಗಕ್ಕಿಂತ ಅವರನ್ನು ದೂರದಲ್ಲಿಟ್ಟಿರುವುದೇ ಲೇಸು.
ಉಷ್ಣೇ ಶೀತಲತಾಮುಪೇತ್ಯ ಶಿಶಿರೇ ಪ್ರಾಪ್ತೇ ಭಜನ್ತ್ಯುಷ್ಣತಾಂ
विश्वास-प्रस्तुतिः
मुक्ताहारनिषेविता अपि न तद्-वृत्त्यै दिशन्त्यंतरम्
बन्धे गाढविमर्दनॆऽपि न जहत्यन्योन्यसंपीडनम् ।
उष्णे शीतलतामुपेत्य शिशिरे प्राप्ते भजन्त्युष्णतां
कामान्तःपुरचेटिकाकुचतटीकाठिन्यवन्तः खलाः ॥ ३-१२ ॥
मूलम्
मुक्ताहारनिषेविता अपि न तद्-वृत्त्यै दिशन्त्यंतरम्
बन्धे गाढविमर्दनॆऽपि न जहत्यन्योन्यसंपीडनम् ।
उष्णे शीतलतामुपेत्य शिशिरे प्राप्ते भजन्त्युष्णतां
कामान्तःपुरचेटिकाकुचतटीकाठिन्यवन्तः खलाः ॥ ३-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ದುರ್ಜನರು ಆಹಾರವನ್ನು ಬಿಟ್ಟು (ಹಗಲಿರುಳು ತಮ್ಮ) ಸೇವೆ ಮಾಡುತ್ತಿದ್ದವರಿಗೂ ಕೂಡ ಅವರ ಜೀವನೋಪಾಯಕ್ಕೆ ಅವಕಾಶವನ್ನು ಕೊಡುವುದಿಲ್ಲ. ಬಂಧನ ಮತ್ತು ತೀವ್ರಪ್ರಹಾರಗಳಿಗೆ ಒಳಗಾದರೂ ಕೂಡ ತಮ್ಮತಮ್ಮಲ್ಲಿ ಕಲಹವನ್ನು ಬಿಡುವುದಿಲ್ಲ. ಜಾಣರೆದುರಿಗೆ ತಣ್ಣಗಾಗಿ, ತಣ್ಣಗಿರುವರೆದುರಿಗೆ ಕ್ರೌರ್ಯವನ್ನು ತೋರಿ ಕಾಮಾರ್ಥವಾಗಿ ಇಟ್ಟುಕ್ಕೊಂಡಿರುವ ಅನ್ತಃಪುರದಲ್ಲಿನ ದಾಸಿಯ ಸ್ತನಪ್ರದೇಶದಂತೆ ಕಠಿಣತೆಯುಳ್ಳವರು.
ಶ್ರೀನಿವಾಸಮೂರ್ತಿ - ಟಿಪ್ಪನೀ
ದುರ್ಜನರು ದಾಸಿಯರ ಸ್ತನಪ್ರದೇಶಗಳಂತೆ ಕಠಿಣರು ಎಂಬ ಹೇಳಿಕೆಗೆ ಶ್ಲೇಷೆಯ ಮೂಲಕ ಪುಷ್ಟಿ ಕೊಡುವ ವಿಶೇಷಣಗಳು ಹೀಗೆ: ಮುಕ್ತಾಹಾರನಿಷೇವಿತಾ ಅಪಿ= ಮುತ್ತಿನ ಹಾರದಿಂದ ಸೇವಿತವಾದರೂ, ತದ್-ವೃತ್ತ್ಯೈ= ಅದರ ಇರುವಿಕೆಗೆ, ಅನ್ತರಮ್ ನ ದಿಶನ್ತಿ= ಸ್ಥಲವನ್ನು ಕೊಡುವುದಿಲ್ಲ. ಬನ್ಧೇ ಗಾಢವಿಮರ್ದನೇಽಪಿ= ಆಲಿಂಗನ ಮಾಡಿಕ್ಕೊಳ್ಳುವಾಗ ಮರ್ದಿತವಾದರೂ ಅನ್ಯೋನ್ಯಸಂಪೀಡನಮ್ ನ ಜಹತಿ= ಪರಸ್ಪರಸಮ್ಮರ್ದವನ್ನು ತೊರೆಯುವುದಿಲ್ಲ, ಉಷ್ಣೇ=ಸೆಖೆಯ ಕಾಲದಲ್ಲಿ ತಂಪನ್ನು ನೀಡಿ ಶಿಶಿರೇ= ಛಳಿಗಾಲದಲ್ಲಿ ಶಾಖವನ್ನು ನೀಡುತ್ತವೆ, ಸ್ತನಪ್ರದೇಶಗಳು ಪ್ರೇಮಿಗಳ ಸ್ಪರ್ಶಕ್ಕೆ ಕಠಿನ= ಗಟ್ಟಿಯಾಗಿರುತ್ತವೆ. ದುರ್ಜನರು ಕಠಿನ=ಕ್ರೂರರಾಗಿರುತ್ತಾರೆ. ಅನ್ತಃಪುರಚೇಟಿಕಾ ಎಂಬ ಪದಕ್ಕೆ ಉತ್ತಮ ಸ್ತ್ರೀ ಎಂಬ ಸಾಮಾನ್ಯ ಅರ್ಥ ಅಷ್ಟೆ.
|| ಇತಿ ಖಲಪದ್ಧತಿಃ ತೃತೀಯಾ ||
|| इति खलपद्धतिस्तृतीया ||