०२ दृप्तपद्धतिः

विश्वास-प्रस्तुतिः

तदेव गृह्यतां नाम च्छागमण्डूकरासभैः ।
तिसॄणां तावता हंत मूर्तीनां किमिहागतम् ॥ २-१ ॥

मूलम्

तदेव गृह्यतां नाम च्छागमण्डूकरासभैः ।
तिसॄणां तावता हंत मूर्तीनां किमिहागतम् ॥ २-१ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ದೃಪ್ತನೆಂದರೆ ಕೊಬ್ಬಿದವನು ಎಂದು ಅರ್ಥ. ಈ ಪದ್ಧತಿಯಲ್ಲಿ ಅಹಙ್ಕಾರದ ಅನೇಖಮುಖಗಳ ಪರಿಚಯವಾಗುತ್ತದೆ.

ಆಡಿಗೆ “ಅಜ” ಎಂಬ ಹೆಸರೂ, ಕಪ್ಪೆಗೆ “ಹರಿ” ಎಂಬ ಹೆಸರೂ, ಕತ್ತೆಗೆ “ಹರ” ಅಥವಾ “ಖರ” ಎಂಬ ಹೆಸರೂ ಇರಲಿ. ಹಾಗೆ ಇದ್ದ ಮಾತ್ರಕ್ಕೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಏನು ತಾನೇ ಹಾನಿಯಾದೀತು?

ಶ್ರೀನಿವಾಸಮೂರ್ತಿ - ಟಿಪ್ಪನೀ

ಮೂಲದಲ್ಲಿ ಅಜ,ಹರಿ,ಹರ (ಖರ) ಎಂಬ ಹೆಸರುಗಳನ್ನು ನಿರ್ದೇಶಿಸಿಲ್ಲವಾದರೂ ಸುಲಭವಾಗಿ ಊಹ್ಯ. ಅಮರಕೋಶದಲ್ಲಿ “ಅಜಾವಿಷ್ಣುಹರಚ್ಛಾಗಾ”,“ಯಮಾನಿಲೇಂದ್ರಚಂದ್ರಾರ್ಕವಿಷ್ಣುಸಿಂಹಾಂಶುವಾಜಿಷು ಶುಕಾಹಿಕಪಿಭೇಕೇಷು ಹರಿಃ” ಎಂದೂ , ರತ್ನಮಾಲಾಕೋಶದಲ್ಲಿ “ಖರಾ ರುದ್ರಾಗ್ನಿರಾಸಭಾಃ” ಎಂದೂ, ವೈಜಯಂತೀ ಕೋಶದಲ್ಲಿ “ಹರಾ ರುದ್ರಾಗ್ನಿಗರ್ದಭಾಃ” ಎಂದೂ ಕೊಟ್ಟಿದೆ.“ಅಜ” ಎಂಬ ಪದಕ್ಕೆ ಬ್ರಹ್ಮ,ಆಡು ಎಂದೂ, “ಹರಿ” ಎಂಬುದಕ್ಕೆ ವಿಷ್ಣು,ಕಪ್ಪೆ ಎಂದೂ “ಹರ” ಅಥವಾ “ಖರ” ಎಂಬುದಕ್ಕೆ ಈಶ್ವರ,ಕತ್ತೆ ಎಂದೂ ಅರ್ಥಗಳು ಬರುತ್ತವೆ. ಕೊಬ್ಬಿದವರು ಮಹಾಪುರುಷರ ಹೆಸರಿಟ್ಟುಕೊಂಡ ಮಾತ್ರಕ್ಕೇ ಅವರಿಗೆ ಮಹಾಪುರುಷತ್ತ್ವ ಬಾರದು, ಮಹಾಪುರುಷರ ಮಹತ್ತ್ವವೂ ಕಡಿಮೆಯಾಗದು.

विश्वास-प्रस्तुतिः

अण्डजाः पुण्डरीकेषु समुद्रेषु जनार्दनाः ।
नीलकंठाश्च शैलेषु निवसन्तु न तेन ते ॥ २-२ ॥

मूलम्

अण्डजाः पुण्डरीकेषु समुद्रेषु जनार्दनाः ।
नीलकंठाश्च शैलेषु निवसन्तु न तेन ते ॥ २-२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಅಂಡಜ ಎಂದರೆ ಮೊಟ್ಟೆಯನ್ನೊಡೆದು ಹುಟ್ಟುವ ಹಂಸಗಳು ಕಮಲಗಳಲ್ಲಿಯೂ ಜನಾರ್ದನ ಎಂದರೆ ಜನರನ್ನು ಹಿಂಸಿಸುವ ಮೊಸಳೆಗಳು ಸಮುದ್ರಗಳಲ್ಲಿಯೂ ನೀಲಕಂಠ ಎಂದರೆ ನೀಲಿಬಣ್ಣದ ಕತ್ತುಳ್ಳ ನವಿಲುಗಳು ಪರ್ವತಗಳಲ್ಲಿಯೂ ವಾಸವಾಗಿರಲಿ. ಹಾಗೆ ವಾಸವಾಗಿರುವುದರಿಂದ ಅವುಗಳು ಅಂಡಜನಾದ ಬ್ರಹ್ಮನಾಗಿ, ಜನಾರ್ದನನಾದ ವಿಷ್ಣುವಾಗಿ, ನೀಲಕಂಠನಾದ ಈಶ್ವರನಾಗಿ ಆಗುತ್ತವೆಯೇ?

ಶ್ರೀನಿವಾಸಮೂರ್ತಿ - ಟಿಪ್ಪನೀ

ಕಳೆದ ಶ್ಲೋಕದಲ್ಲಿ ನಾಮೈಕ್ಯತೆಯಿಂದ ಮಹತ್ತ್ವಬರುವುದಿಲ್ಲವೆಂದು ಹೇಳಿ ಈ ಶ್ಲೋಕದಲ್ಲಿ ನಾಮೈಕ್ಯತೆಯ ಜೊತೆಗೆ ಸ್ಥಾನೈಕ್ಯತೆಯಿದ್ದರೂ ಕೂಡ ಮಹತ್ತ್ವ ಬಾರದು ಎಂಬುದನ್ನು ಶ್ಲೇಷೆಯ ಮೂಲಕ ಉಪಪಾದಿಸಲಾಗಿದೆ. ಹಂಸಕ್ಕೆ ಮತ್ತು ಬ್ರಹ್ಮನಿಗೆ “ಅಂಡಜ” ಎಂಬ ನಾಮ ಒಂದೇ, ವಾಸಸ್ಥಾನವೂ ಒಂದೇ ಅರ್ಥಾತ್ ಕಮಲ. ಹಾಗೆಯೇ ಮೊಸಳೆಗೂ ವಿಷ್ಣುವಿಗೂ “ಜನಾರ್ದನ” ಎಂಬ ಒಂದೇ ನಾಮ, ವಾಸಸ್ಥಾನ ಕೂಡ ಒಂದೇ, ಸಮುದ್ರ. ಅದೇರೀತಿ ನವಿಲಿಗೂ ಈಶ್ವರನಿಗೂ “ನೀಲಕಂಠ’ ಎಂಬ ಒಂದೇ ನಾಮ, ವಾಸಸ್ಥಾನವೂ ಒಂದೇ, ಪರ್ವತ. ಹಾಗಾದ ಮಾತ್ರಕ್ಕೆ ಹಂಸವು ಬ್ರಹ್ಮನಾಗುವುದಿಲ್ಲ, ಮೊಸಳೆ ವಿಷ್ಣುವಾಗುವುದಿಲ್ಲ, ನವಿಲು ಈಶ್ವರನಾಗುವುದಿಲ್ಲ.

विश्वास-प्रस्तुतिः

कामं लिखतु संस्थानं कश्चिद्रूपं च भास्वतः ।
अभित्तिविहितालंबमालोकं विलिखेत् कथम् ॥ २-३ ॥

मूलम्

कामं लिखतु संस्थानं कश्चिद्रूपं च भास्वतः ।
अभित्तिविहितालंबमालोकं विलिखेत् कथम् ॥ २-३ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಒಬ್ಬ (ಕಲಾವಿದ) ಸೂರ್ಯನ ಆಕಾರವನ್ನೂ ಅವನ ಸನ್ನಿವೇಶವನ್ನೂ ಯಥೇಚ್ಛೆಯಿಂದ (ಒಂದು ಗೋಡೆಯಮೇಲೆ) ಚಿತ್ರಿಸಲಿ. ಗೋಡೆಯನ್ನು ಅವಲಂಬಿಸದ ಸೂರ್ಯನ ತೇಜಸ್ಸನ್ನು ಹೇಗೆ ತಾನೇ ಚಿತ್ರಿಸುತ್ತಾನೆ? ಮಹಾಮಹಿಮರ ರೂಪ ಸನ್ನಿವೇಶಗಳನ್ನು ಅನುಕರಿಸಬಹುದು. ಹಾಗೆ ಅನುಕರಿಸುವುದರಿಂದ ಅವರ ಸಹಜತೇಜಸ್ಸನ್ನು ಅನುಕರಿಸುವುದಕ್ಕಾಗುವುದಿಲ್ಲವಷ್ಟೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಕಃ+ಚಿದ್ರೂಪಮ್, ಭಾಃ+ಸ್ವತಃ, ಆ+ಲೋಕಮ್ ಎಂದು ಪದವಿಭಾಗಮಾಡಿ ವ್ಯಾಖ್ಯಾನಕಾರರು ಕಾಣುವ ಮತ್ತೊಂದು ಅರ್ಥ ಹೀಗೆ: (ಸಂಸ್ಥಾನಮ್) ದೇವಮನುಷ್ಯಾದಿ ಆಕಾರವನ್ನು ಎಷ್ಟು ಬೇಕಾದರೂ ಬರೆಯಲಿ. (ಆಲೋಕಮ್)ವಿಶ್ವದ ಎಲ್ಲೆಯವರೆಗೂ ಸ್ವತಃ ಭಾಸಮಾನವಾದ ಅಭೇದ್ಯವಾಗಿ ಜ್ಞಾನಕ್ಕೆ ಗೋಚರವಾಗುವ ಚಿದ್ರೂಪವಾದ ಆತ್ಮಾವನ್ನು ಯಾರು ತಾನೇ ಹೇಗೆ ತಾನೇ ಬರೆದಾರು?

विश्वास-प्रस्तुतिः

अपि सत्पथनिष्ठानाम् आशाः पूरयतामपि ।
अगस्त्यवृत्तिर्मेघानां हंत मालिन्यकारणम्॥ २-४ ॥

मूलम्

अपि सत्पथनिष्ठानाम् आशाः पूरयतामपि ।
अगस्त्यवृत्तिर्मेघानां हंत मालिन्यकारणम्॥ २-४ ॥

ಶ್ರೀನಿವಾಸಮೂರ್ತಿ - ಭಾವಾರ್ಥ

“ಸತ್ಪಥನಿಷ್ಠಾನಾಮ್” ಎಂದರೆ ನಕ್ಷತ್ರಮಾರ್ಗದಲ್ಲಿರುವ (ಸತ್ಪಥದಲ್ಲಿಯೇ ನಿಷ್ಠವಾದ) ಮೋಡಗಳು “ಆಶಾಃ ಪೂರಯತಾಮಪಿ” ದಿಕ್ಕುಗಳನ್ನೆಲ್ಲಾ ಆವರಿಸಿದರೂ ( ತಮ್ಮ ಶಿಷ್ಯವರ್ಗದ ಆಸೆಗಳನ್ನು ಪೂರೈಸಿದರೂ) ಅಗಸ್ತ್ಯಮುನಿಯ ಅನುಕರಣೆಯಿಂದ, ಅಯ್ಯೋ, ಮಲಿನವಾದವು (ಅಪಯಶಸ್ಸನ್ನು ಪಡೆದವು).

ಶ್ರೀನಿವಾಸಮೂರ್ತಿ - ಟಿಪ್ಪನೀ

ಈ ಶ್ಲೋಕದ ಭಾವಕ್ಕೆ ಶ್ಲೇಷೆಯೇ ಆಧಾರ. ಮೇಘಗಳು ಸತ್ಪಥನಿಷ್ಠವಾಗಿದ್ದರೂ ಆಶಾಪೂರಕಗಳಾಗಿದ್ದರೂ ಅಗಸ್ತ್ಯವೃತ್ತಿಯಿಂದ ಮಲಿನವಾದವು. ಅಗಸ್ತ್ಯಮುನಿ ಸಮುದ್ರವನ್ನೇ ಆಪೋಷನವನ್ನಾಗಿ ತೆಗೆದುಕ್ಕೊಂಡರು ಎಂಬ ಪುರಾಣವೃತ್ತಾನ್ತವನ್ನು ಎತ್ತಿಕ್ಕೊಂಡು, ಮೇಘಗಳು ಅಗಸ್ತ್ಯರಂತೆ ತಾವೂ ಸಮುದ್ರವನ್ನು ಹೀರುವೆವೆಂಬ ಪ್ರಯತ್ನ ಮಾಡುವುದಕ್ಕೆ ಹೋಗಿ ಕಪ್ಪುಬಣ್ಣವನ್ನು ಪಡೆದುಕ್ಕೊಂಡವು ಅಷ್ಟೆ ಎಂದು ಉತ್ಪ್ರೇಕ್ಷೆ ಮಾಡಿ, ಶ್ಲೇಷೆಯ ಮೂಲಕ ಜ್ಞಾನಸಾಧಕರು ನಿಷ್ಠರಾಗಿದ್ದರೂ ಅವರ ಶಿಷ್ಯವರ್ಗಕ್ಕೆ ಸಾಕಷ್ಟು ಫಲಗಳನ್ನು ಒದಗಿಸಿಕ್ಕೊಟ್ಟಿದ್ದರೂ ತಮಗೆ ಎಟುಕದ ಸಾಧನೆಗಳನ್ನು ಮಾಡುವುದಕ್ಕೆ ಹೋಗುವುದರಿಂದ ಅವರಿಗೆ ಅಪಯಶಸ್ಸು ಬಂದೀತು ಎಂದು ದೇಶಿಕರು ಇಲ್ಲಿ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ.

विश्वास-प्रस्तुतिः

अस्तु तावदगस्त्यस्य जह्नोर्महिमनिह्नवः ।
का कथा तस्य बालस्य विश्वग्रासेऽप्यतृप्यतः ॥ २-५ ॥

मूलम्

अस्तु तावदगस्त्यस्य जह्नोर्महिमनिह्नवः ।
का कथा तस्य बालस्य विश्वग्रासेऽप्यतृप्यतः ॥ २-५ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(ಸಮುದ್ರವನ್ನೇ ಕುಡಿದ) ಅಗಸ್ತ್ಯರ ಮಹಿಮೆಯು (ಗಂಗೆಯನ್ನು ಕುಡಿದ) ಜಹ್ನುಮುನಿಯ ಮಹಿಮೆಯನ್ನು ಮರೆಸಲಿ. ವಿಶ್ವವನ್ನೇ ತುತ್ತಾಗಿ ತೆಗೆದುಕ್ಕೊಂಡರೂ ತೃಪ್ತಿ ಪಡದ ಆ (ವಟಪತ್ರಶಾಯಿ ವಿಷ್ಣುವಿನ) ಮಹಿಮೆಯ ವಿಷಯದಲ್ಲಿ ಏನು ಹೇಳೋಣ?

ಶ್ರೀನಿವಾಸಮೂರ್ತಿ - ಟಿಪ್ಪನೀ

ಒಬ್ಬ ಮನುಷ್ಯ ಎಷ್ಟೇ ಆಶ್ಚರ್ಯಕರ ಅಭೂತಪೂರ್ವ ಸಾಹಸಗಳನ್ನು ಮಾಡಿದರೂ, ಅದಕ್ಕಿಂತ ಆಶ್ಚರ್ಯಕರವಾದ ಅಭೂತಪೂರ್ವವಾದ ಕಾರ್ಯಗಳನ್ನು ಮಾಡುವ ಮತ್ತೊಬ್ಬ ಇದ್ದೇ ಇರುತ್ತಾನೆ. ಆದುದರಿಂದ ಯಾರೂ ತಮ್ಮ ಸಾಧನೆಗಳ ವಿಷಯದಲ್ಲಿ ಹೆಮ್ಮೆಪಡುವುದು ಅನುಚಿತ ಎಂದು ಅಗಸ್ತ್ಯ, ಜಹ್ನುಮುನಿ, ಶ್ರೀ ವಿಷ್ಣು ಇವರ ಪೌರಾಣಿಕ ಕಥೆಗಳನ್ನು ನೆನಪು ಮಾದಿಕೊಡುವ ಮೂಲಕ ದೇಶಿಕರು ಇಲ್ಲಿ ತಿಳಿಸುತ್ತಿದ್ದಾರೆ.

विश्वास-प्रस्तुतिः

दष्टसारङ्गयूथोऽपि दंष्ट्रानखरवानपि ।
भूभृत्कटकसंस्थोऽपि सारमेयो न सिह्मति ॥ २-६ ॥

मूलम्

दष्टसारङ्गयूथोऽपि दंष्ट्रानखरवानपि ।
भूभृत्कटकसंस्थोऽपि सारमेयो न सिह्मति ॥ २-६ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಜಿಂಕೆಗಳ (ಆನೆಗಳ) ಹಿಂಡನ್ನು ಕಡಿದರೂ ಕೋರೆ ಹಲ್ಲು ಮತ್ತು ಉಗುರುಗಳಿಂದ ಕೂಡಿದ್ದರೂ ರಾಜರ (ಪರ್ವತಗಳ) ಬಿಡಾರ (ತಪ್ಪಲುಪ್ರದೇಶ)ಗಳಲ್ಲಿ ನೆಲೆಸಿದ್ದರೂ ನಾಯಿಯು ಸಿಹ್ಮವಾಗುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಶ್ಲೇಷೆಯ ಮೂಲಕ ನಾಯಿಗೂ ಸಿಂಹಕ್ಕೂ ಹೋಲಿಕೆಯನ್ನು ತೋರಿಸಿ, ಹಾಗೆ ತೋರಿದ ಹೋಲಿಕೆಯಿಂದ ಮಾತ್ರ ನಾಯಿಯು ಸಿಂಹವಾಗುವುದಿಲ್ಲವಲ್ಲ ಅದೇ ರೀತಿ ಬಾಹ್ಯ ಆಲೋಕಕ್ಕೆ ಸಾಮ್ಯ ಕಂಡರೂ ಡಂಭಾಚಾರಿಗಳು ನಿಜವಾದ ಅನ್ತಸ್ಸತ್ತ್ವವಿರುವ ಮಹಾತ್ಮರಿಗೆ ಸರಿಸಾಟಿಯಾಗುವುದಿಲ್ಲವೆಂದು ಅನ್ಯಾಪದೇಶದ ಮೂಲಕ ದೇಶಿಕರು ಇಲ್ಲಿ ಧ್ವನಿಸಿದ್ದಾರೆ.

विश्वास-प्रस्तुतिः

सत्पथे च्छादयन् मित्रमपि व्यालस्तमोमयः ।
अतीतपर्वा जगतामदृश्यः सहसा भवेत् ॥ २-७ ॥

मूलम्

सत्पथे च्छादयन् मित्रमपि व्यालस्तमोमयः ।
अतीतपर्वा जगतामदृश्यः सहसा भवेत् ॥ २-७ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ತಮೋಗುಣಪೂರ್ಣನಾದ ದುಷ್ಟನು ಸನ್ಮಾರ್ಗದಲ್ಲಿರುವ ಸ್ನೇಹಿತನನ್ನು ಕೂಡ ತಿರಸ್ಕರಿಸಿ ಮೇರೆ ಮೀರಿದರೆ ಛಾಯಾರೂಪಿಯಾದ ರಾಹುವು ನಕ್ಷತ್ರಮಾರ್ಗದಲ್ಲಿರುವ ಸೂರ್ಯನನ್ನು ಮರೆಮಾಡಿದರೆ ಅಮಾವಾಸ್ಯೆಯು ಮುಗಿದಕೂಡಲೇ ಅದೃಶ್ಯನಾಗುವಂತೆ ಸಜ್ಜನರ ಕಣ್ಣಿಗೆ ಬೀಳುವುದಕ್ಕೆ ಯೋಗ್ಯನಾಗುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲೇಷೆಯ ಮೂಲಕ ದುಷ್ಟನಿಗೂ ರಾಹುವಿಗೂ ಸಾದೃಶ್ಯವನ್ನು ತರಲಾಗಿದೆ. ಶ್ಲೇಷೆಯ ವಿನ್ಯಾಸ ಹೀಗೆ:- ತಮೋಮಯಃ (ತಮೋಗುಣಮಯನಾದ,ಛಾಯಾರೂಪಿಯಾದ), ವ್ಯಾಲಃ (ದುಷ್ಟನು,ದುಷ್ಟ ರಾಹುವು), ಸತ್ಪಥೇ (ಸನ್ಮಾರ್ಗದಲ್ಲಿ,ನಕ್ಷತ್ರಮಾರ್ಗದಲ್ಲಿ)

ಮಿತ್ರಮ್ (ಸ್ನೇಹಿತನನ್ನು, ಸೂರ್ಯನನ್ನು) ಛಾದಯನ್ ( ತಿರಸ್ಕರಿಸಿ, ಮರೆಮಾಡಿ) ಅತೀತಪರ್ವಾ (ಮೇರೆಮೀರಿ, ಅಮಾವಾಸ್ಯೆಯನ್ನು ದಾಟಿ), ಜಗತಾಮ್ (ಜನರಿಗೆ, ಜಗತ್ತಿಗೆ).

विश्वास-प्रस्तुतिः

धुर्याणामपि सत्कार्यगुणशालिविमर्दिनाम् ।
अनागमविदां युक्तमपनीतेर्निवारणम् ॥ २-८ ॥

मूलम्

धुर्याणामपि सत्कार्यगुणशालिविमर्दिनाम् ।
अनागमविदां युक्तमपनीतेर्निवारणम् ॥ २-८ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಹೊರೆಯನ್ನು ಹೊರುವುದರಲ್ಲಿ ಎಷ್ಟೇ ಸಮರ್ಥವಾಗಿದ್ದರೂ ಧಾನ್ಯದಿಂದ ತುಂಬಿದ ಭತ್ತದ ಸಸಿಗಳನ್ನು ತುಳಿದುಹಾಕುವ ರಾಸುಗಳನ್ನು ಅವುಗಳ ವಿಧ್ವಂಸಕ ಕೃತ್ಯದಿಂದ ಹೊಡೆದಟ್ಟುವುದು ನ್ಯಾಯವು (೨) ಕೆಲವು ದೃಪ್ತರು ಒಳ್ಳೆಯಕೆಲಸಗಳನ್ನು ಮಾಡುವ ಗುಣಶಾಲಿಗಳಾದವರನ್ನು ಹಿಂಸಿಸುತ್ತಾರೆ.ಅವರು ಮುಂದೆ ಏನು ಬರುವುದೆನ್ನುವುದನ್ನು ಅರಿಯರು. ಅಂತಹವರ ಅನ್ಯಾಯವನ್ನು ತಡೆಗಟ್ಟುವುದು, ಅವರು ಕಾರ್ಯನಿರ್ವಹಣೆಯಲ್ಲಿ ಸಮರ್ಥರಾಗಿದ್ದರೂ ಕೂಡ, ನ್ಯಾಯವು.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲೇಷೆಯ ವಿನ್ಯಾಸ ಈ ರೀತಿ ಇದೆ: ಧುರ್ಯಾಣಾಮ್ ( ಹೊರೆಯನ್ನು ಹೊರುವುದರಲ್ಲಿ ಸಮರ್ಥವಾದ, ಕಾರ್ಯನಿರ್ವಹಣೆಯಲ್ಲಿ ಸಮರ್ಥರಾದ), ಸತ್ಕಾರ್ಯಗುಣಶಾಲಿವಿಮರ್ದಿನಾಮ್ (ಒಳ್ಳೆಯ ಫಸಲಿನಿಂದ ತುಂಬಿದ ಭತ್ತದ ಸಸಿಗಳನ್ನು ತುಳಿದುಹಾಕುವ, ಸತ್ಕಾರ್ಯವನ್ನು ಮಾಡುವ ಗುಣಶಾಲಿಗಳಾದ ಜನರನ್ನು ಹಿಂಸಿಸುವ). ಇನ್ನೊಂದು ಅಪ್ರಕೃತ ಅದ್ವೈತಮತಖಂಡನೆಯೂ ದ್ಯೋತವಾಗುತ್ತದೆ: ನಾಸ್ತಿಕಮತಗಳನ್ನು ಖಂಡಿಸುವುದರಲ್ಲಿ ಸಮರ್ಥರಾದರೂ ಕೂಡ ಸತ್ಕಾರ್ಯ, ಸಗುಣಬ್ರಹ್ಮ ವಾದಗಳನ್ನು ಒಪ್ಪದ ಆಗಮಶಾಸ್ತ್ರವನ್ನು ತಿಳಿಯದ ಅದ್ವೈತಿಗಳನ್ನು ತಡೆಗಟ್ಟುವುದು ನ್ಯಾಯವೇ ಸರಿ!

विश्वास-प्रस्तुतिः

बलोत्तरेण हरिणा नागमल्लविभेदिना ।
सृगालः साम्यमाकांक्षन् शौर्याधिक्यं न विन्दति ॥ २-९ ॥

मूलम्

बलोत्तरेण हरिणा नागमल्लविभेदिना ।
सृगालः साम्यमाकांक्षन् शौर्याधिक्यं न विन्दति ॥ २-९ ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ನರಿಯು ಆನೆಗಳ ಕಪೋಲಸ್ಥಳವನ್ನು ಭೇದಿಸುವ ಮಹಾಬಲಶಾಲಿಯಾದ ಸಿಂಹದೊಡನೆ ಸಮತೆಗಾಗಿ ಆಸೆಪಡುವುದರಿಂದ ತನ್ನ ಪರಾಕ್ರಮದಲ್ಲಿ ವೃದ್ಧಿಯನ್ನು ಹೊಂದುವುದಿಲ್ಲ. (೨) ಕಾಲಿಯವೆಂಬ ಸರ್ಪವನ್ನೂ ( ಕುವಲಯಾಪೀಡವೆಂಬ ಆನೆಯನ್ನೂ ) ಚಾಣೂರಮುಷ್ಟಿಕರೆಂಬ ಮಲ್ಲರನ್ನೂ ದಮಿಸಿದ ಬಲಾನುಜ ಕೃಷ್ಣನೊಡನೆ ಸಾಮ್ಯಕ್ಕಾಗಿ ಆಶಿಸುವ ಸೃಗಾಲನು (ಪೌಣ್ಡ್ರಕವಾಸುದೇವ) ತನ್ನ ಶೌರ್ಯದಲ್ಲಿ ವೃದ್ಧಿಯನ್ನು ಹೊಂದುವುದಿಲ್ಲ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಈ ಶ್ಲೋಕದಲ್ಲಿ ಶ್ಲೇಷೆ ಈ ರೀತಿ: ಬಲೋತ್ತರೇಣ ( ಮಹಾಬಲಶಾಲಿಯಾದ, ಬಲರಾಮನ ತಮ್ಮನಾದ), ಹರಿಣಾ ( ಸಿಂಹ, ಕೃಷ್ಣ), ನಾಗಮಲ್ಲವಿಭೇದಿನಾ ( ಆನೆಯ ಕಪೋಲಸ್ಥಲವನ್ನು ಭೇದಿಸುವ, ಸರ್ಪ (ಆನೆ)ಮತ್ತು ಮಲ್ಲರುಗಳನ್ನು ದಮಿಸಿದ), ಸೃಗಾಲಃ (ನರಿ, ಪೌಣ್ಡ್ರಕವಾಸುದೇವನೆಂದು ಕುಖ್ಯಾತನಾದ ಸೃಗಾಲನೆಂಬ ರಾಜ). ಪೌಣ್ಡ್ರಕವಾಸುದೇವನು ಶಂಖಚಕ್ರಗಳನ್ನು ಧರಿಸಿ, ಗರುಡವಾಹನನಾಗಿ ಕೃಷ್ಣನಿಗೆ ಸಲ್ಲುವ ಪೂಜೆ, ಗೌರವಗಳು ತನಗೇ ಸಲ್ಲಬೇಕೆಂದು ಆಶಿಸಿದ ಪೌರಾಣಿಕ ಕಥೆಯನ್ನು ಪ್ರಸ್ತಾಪಿಸಿ ಹಾಗೆ ಮಹಾಪುರುಷರ ಬಾಹ್ಯಾನುಕರಣೆಯಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಇಲ್ಲಿ ದೇಶಿಕರು ಮತ್ತೆ ಒತ್ತಿ ಹೇಳಿದ್ದಾರೆ.

विश्वास-प्रस्तुतिः

सुदर्शनभृता कश्चिदजहत्कीर्तिमत्सरः ।
महाशान्तपदाकर्षी जलजन्तुर्निगृह्यते ॥ २-१० ॥

मूलम्

सुदर्शनभृता कश्चिदजहत्कीर्तिमत्सरः ।
महाशान्तपदाकर्षी जलजन्तुर्निगृह्यते ॥ २-१० ॥

ಶ್ರೀನಿವಾಸಮೂರ್ತಿ - ಭಾವಾರ್ಥ

(೧) ಸುದರ್ಶನಚಕ್ರಧಾರಿಯಾದ ಶ್ರೀವಿಷ್ಣುವು ಕೆಸರಿನಿಂದ ತುಂಬಿದ ಕೆರೆಯಲ್ಲೇ ಇರುವ, ಮಹಾಶಾನ್ತಸ್ವಭಾವಿಯಾದ ಗಜರಾಜನ ಕಾಲನ್ನು ಸೆಳೆಯುವ,ಒಂದು ಜಲಜನ್ತುವನ್ನು (ಮೊಸಳೆಯನ್ನು) ನಿಗ್ರಹಿಸುತ್ತಾನೆ. (೨) ಇತರರ ಕೀರ್ತಿಯಲ್ಲಿ ಮಾತ್ಸರ್ಯವನ್ನು ತೊರೆಯಲಾಗದೇ ಇರುವ, ಮಹಾಶಾನ್ತಸ್ವಭಾವಿಗಳ ಸ್ಥಾನಗಳನ್ನು ತನ್ನ ಅಪಲಾಪಕ್ಕೆ ಸೆಳೆಯಲು ನೋಡುವ, ಜಡಮನುಷ್ಯನೊಬ್ಬನನ್ನು ಸದ್ದರ್ಶನಪಟುವು ನಿಗ್ರಹಿಸುತ್ತಾನೆ.

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ಶ್ಲೇಷೆಯ ಪ್ರಕಾರ ಈ ರೀತಿ: ಸುದರ್ಶನಭೃತಾ ( ಸದ್ದರ್ಶನಶಾಲಿಯಾದವನಿಂದ, ಸುದರ್ಶನಚಕ್ರಧಾರಿಯಿಂದ); ಅಜಹತ್ಕೀರ್ತಿಮತ್ಸರಃ (ಅಜಹತ್+ಕೀರ್ತಿ+ಮತ್ಸರಃ, ಅಜಹತ್+ಕೀರ್ತಿಮತ್(ಕೆಸರಿನಿಂದತುಂಬಿದ)+ಸರಃ (ಕೆರೆ) ); ಮಹಾಶಾನ್ತ+ಪದ(ಸ್ಥಾನ, ಕಾಲು)+ಆರ್ಕ. ಸಮೀಚೀನ ಸಿದ್ಧಾನ್ತದಲ್ಲಿ ಶ್ರದ್ಧೆಯಿರುವವರು ಅಂತಹ ಮಹಾನುಭಾವರನ್ನು ಅಲ್ಲಗಳೆಯುವ ಮಾತ್ಸರ್ಯಪೂರಿತರಾದ ಜನರಿಗೆ ಸೋಲರಾರರೆಂದು ದೇಶಿಕರು ಇಲ್ಲಿ ತಿಳಿಸುತ್ತಿದ್ದಾರೆ.

विश्वास-प्रस्तुतिः

गतिर्व्योम्ना किं तद्गरुडमभिटीकेत चटकः
पिबत्वंभः क्षारं न खलु कलशीसूनुरलसः ।
कलः कंठे नादः क इव मशके किन्नरपतेः
कथञ्चित्साधर्म्यं क्षिपति न हि साधर्म्यनियमम् ॥ २-११ ॥

मूलम्

गतिर्व्योम्ना किं तद्गरुडमभिटीकेत चटकः
पिबत्वंभः क्षारं न खलु कलशीसूनुरलसः ।
कलः कंठे नादः क इव मशके किन्नरपतेः
कथञ्चित्साधर्म्यं क्षिपति न हि साधर्म्यनियमम् ॥ २-११ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಗುಬ್ಬಚ್ಚಿಯು ಆಗಸದಲ್ಲಿ ಹಾರುತ್ತದೆಯೆಂದ ಮಾತ್ರಕ್ಕೆ ಗರುಡನಿಗೆ ಸರಿಸಾಟಿಯಾದೀತೇ? ಅಲಸರೋಗಗ್ರಸ್ತನು ಉಪ್ಪು ನೀರನ್ನು ಕುಡಿದ ಮಾತ್ರಕ್ಕೆ ಅಗಸ್ತ್ಯಮುನಿಯಾಗುವುದಿಲ್ಲವಲ್ಲ! ಸೊಳ್ಳೆಯ ಕಂಠದಿಂದ ನಾದ ಬಂದ ಮಾತ್ರಕ್ಕೆ ಗಾನಪಟುವಾದ ಕಿನ್ನರರಾಜನಿಗೆ ತಾನೆ ಏನು ಹಾನಿ? ಹೇಗಾದರೂ ಪಡೆದ ಯಾವುದೋ ಒಂದು ಸಾಧರ್ಮ್ಯದಿಂದ ಸಹಜವೈಧರ್ಮ್ಯಕ್ಕೆ ಹಾನಿಯಾದೀತೇ?

ಶ್ರೀನಿವಾಸಮೂರ್ತಿ - ಟಿಪ್ಪನೀ

ಇಲ್ಲಿ ದುರ್ಬಲಜಠರಾಗ್ನಿಯುಳ್ಳ ರೋಗಿಯನ್ನು ಅಲಸನೆಂದು ಕರೆದಿದೆಯೆಂದೂ, ಆಯುರ್ವೇದದಲ್ಲಿ ಈ ರೋಗಕ್ಕೆ ಕ್ಷಾರಯುತ ಆಹಾರ ಸೇವನೆಯಿಂದ ಪರಿಹಾರವೆಂದೂ ವ್ಯಾಖ್ಯಾನಕಾರರು ತಿಳಿಸುತ್ತಾರೆ. ಈ ವಿಷಯ ತಜ್ಞಗ್ರಾಹ್ಯ.

विश्वास-प्रस्तुतिः

निमीलयतु लोचने न हि तिरस्कृतो भास्करः
श्रवः स्थगयतु स्थिरं परभृतः किमु ध्वांक्षति ।
स्वयम् भ्रमतु बालिशो न खलु बंभ्रमीति क्षितिः
कदर्थयतु मुष्टिभिः कथय किं नभः क्षुभ्यते ॥ २-१२ ॥

मूलम्

निमीलयतु लोचने न हि तिरस्कृतो भास्करः
श्रवः स्थगयतु स्थिरं परभृतः किमु ध्वांक्षति ।
स्वयम् भ्रमतु बालिशो न खलु बंभ्रमीति क्षितिः
कदर्थयतु मुष्टिभिः कथय किं नभः क्षुभ्यते ॥ २-१२ ॥

ಶ್ರೀನಿವಾಸಮೂರ್ತಿ - ಭಾವಾರ್ಥ

ಒಬ್ಬ ಎಳಕು ಮನುಷ್ಯ ತನ್ನ ಕಣ್ಣುಗಳನ್ನು ಮುಚ್ಚಿಕ್ಕೊಂಡಿದ್ದ ಮಾತ್ರಕ್ಕೆ ಸೂರ್ಯನಿಗೆ ತಿರಸ್ಕಾರವಾದೀತೇ? ( ಕೇಳುವವನು ) ಕಿವಿಗಳನ್ನು ಮುಚ್ಚಿಕ್ಕೊಂಡ ಮಾತ್ರಕ್ಕೆ ಕೋಗಿಲೆಯು ಕಾಗೆಯಾದೀತೇ? (ಕಾಗೆಯಂತೆ ಕೂಗೀತೇ?), ತಾನು ನಿಂತಲ್ಲೇ ತಿರುಗಿದರೆ ಭೂಮಿಯು ತಿರುಗಿದಂತಾಯಿತೇ? ತನ್ನ ಮುಷ್ಟಿಯಿಂದ ಆಕಾಶದತ್ತ ಪ್ರಹಾರ ಮಾಡಿದರೆ ಆಕಾಶ ನಡುಗೀತೇ?.

ಶ್ರೀನಿವಾಸಮೂರ್ತಿ - ಟಿಪ್ಪನೀ

“ನಾಯಿ ಬೊಗಳಿದರೆ ದೇವಲೋಕ ಹಾಳೇ” ಎಂಬ ಕನ್ನಡದ ಗಾದೆಯ ಅರ್ಥವನ್ನೇ ಈ ಶ್ಲೋಕವು ಪ್ರತಿಪಾದಿಸುತ್ತದೆ. ಒಟ್ಟಿನಲ್ಲಿ ಈ ದೃಪ್ತಪದ್ಧತಿಯಲ್ಲಿ ದೇಶಿಕರು ಹುರುಳಿಲ್ಲದ ಡಂಭಾಚಾರ ಮತ್ತು ಅದರೊಡನಾಡಿ ಅಸೂಯೆಯ ಅನೇಕಮುಖಗಳನ್ನು ಸೂಕ್ತ ಅನ್ಯಾಪದೇಶಗಳ ಮೂಲಕ ಮನೋಜ್ಞವಾಗಿ ಚಮತ್ಕಾರದಿಂದ ಬಣ್ಣಿಸಿದ್ದಾರೆ

|| ಇತಿ ದೃಪ್ತಪದ್ಧತಿಃ ದ್ವಿತೀಯಾ ||

|| इति दृप्तपद्धतिर्द्वितीया ||