ಶ್ರೀನಿವಾಸಮೂರ್ತಿ - ಪ್ರಸ್ತಾವನೆ
ಈ ಮೊದಲಿನ ಪದ್ಧತಿಯ ಹೆಸರು ಅನಿಪುಣಪದ್ಧತಿಯೆಂದು. ಅನಿಪುಣ ಎಂದರೆ ಜಾಣನಲ್ಲದವ, ಅವಿವೇಕಿ, ದಡ್ಡ. ಎಲ್ಲ ದುರ್ಗುಣಗಳಿಗೂ ಅವಿವೇಕವೇ ಮೂಲವೆಂದು ಅನಿಪುಣತೆಯನ್ನೇ ಆಚಾರ್ಯರು ಮೊದಲು ಎತ್ತಿಕ್ಕೊಂಡಿದ್ದಾರೆ.
विश्वास-प्रस्तुतिः
प्रथम-सुजनाय पुंसे
मह्यम् अपि प्रथम-दुर्जनाय नमः ।
सर्वं हतः कृतं यौ
सकृद् उपकारापकाराभ्याम् ॥ १-१ ॥
मूलम्
प्रथमसुजनाय पुंसे मह्यमपि प्रथमदुर्जनाय नमः ।
सर्वं हतः कृतं यौ सकृदुपकारापकाराभ्याम् ॥ १-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಒಂದೇ ಸಲ ಉಪಕಾರಮಾಡುವುದರಿಂದ ಅಲ್ಲಿಯವರಿಗೂ ಮಾಡಿದ ಎಲ್ಲ ಉಪಕಾರಗಳನ್ನೂ ನಾಶಪಡಿಸುವವನಾದ ಸೌಜನ್ಯಶೀಲರಲ್ಲಿ ಪ್ರಥಮನಾದ ಪುರುಷೋತ್ತಮನಿಗೆ ನಮಸ್ಕಾರವು. ಹಾಗೆಯೇ ಒಂದೇ ಸಲ ಕೆಡುಕನ್ನು ಮಾಡುವುದರಿಂದ ಅಲ್ಲಿಯವರಿಗೂ ಮಾಡಿದ ಉಪಕಾರಗಳೆಲ್ಲವನ್ನೂ ನಾಶಪಡಿಸುವ ನನಗೂ ನಮಸ್ಕಾರವು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಮೊದಲಿನ ಶ್ಲೋಕದಲ್ಲಿ ವೇದಾನ್ತದೇಶಿಕರು ಪುರುಷೋತ್ತಮನನ್ನು ನಮಸ್ಕರಿಸಿ ತಮ್ಮನ್ನೇ ಪುರುಷಾಧಮರೆಂದು ಹೇಳಿಕ್ಕೊಂಡು ತಮಗೂ ನಮಸ್ಕಾರವನ್ನು ಸಲ್ಲಿಸಿಕ್ಕೊಳ್ಳುತ್ತಾರೆ. ಪ್ರಾಯಶಃ ಕವಿ ಈ ವಿಧವಾಗಿ ನೈಚ್ಯಾನುಸಂಧಾನ ಮಾಡಿಕ್ಕೊಂಡು ತನ್ನನ್ನೇ ನಮಸ್ಕರಿಸಿಕ್ಕೊಳ್ಳುವುದನ್ನು ನಾವು ಇನ್ನೆಲ್ಲೂ ಕಾಣಲಾರೆವು. ಇದು ದೇಶಿಕರ ಅಪೂರ್ವಸೃಜನಶೀಲತೆಯನ್ನು ಎತ್ತಿ ತೋರಿಸುತ್ತದೆ.
ಭಗವಂತ ಪ್ರತ್ಯುಪಕಾರಗಳನ್ನು ಅಪೇಕ್ಷಿಸದೆ ನಿರುಪಾಧಿಕವಾಗಿ ಉಪಕಾರಮಾಡುವವ. ಶ್ರೀರಾಮ “ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ” ಎಲ್ಲರೂ ತನ್ನವರೇ ಎಂಬ ಭಾವದಿಂದ ನೂರಾರು ತಪ್ಪುಗಳನ್ನು ಇತರರು ಮಾಡಿದ್ದರೂ ಕೂಡ ಅವುಗಳನ್ನು ನೆನೆಯುವುದಿಲ್ಲ. ಈ ಜೀವಿಯಾದರೋ ಭಗವಂತ ಮಾಡಿದ ಉಪಕಾರಗಳನ್ನೆಲ್ಲಾ ಒಂದೇ ಅಪಕಾರದಿಂದ ನಾಶಮಾಡಲು ಹೊರಡುವ ಕೃತಘ್ನ.
ಈ ಕಿರು ಕಾವ್ಯಕ್ಕೆ ಅನೇಕ ವ್ಯಾಖ್ಯಾನಗಳಿವೆ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕೆಲವು ಸಲ ಕವಿ ಕಾಣದ್ದನ್ನೂ ವ್ಯಾಖ್ಯಾನಕಾರರು ಕಾಣುವುದು ಉಂಟು. ಈ ಶ್ಲೋಕದಲ್ಲೂ ಅನೇಕ ಅರ್ಥಗಳು ಧ್ವನಿಸುತ್ತವೆಂದು ವ್ಯಾಖ್ಯಾನಕಾರರು ಹೇಳುತ್ತಾರೆ. ಅವುಗಳಲ್ಲಿ ಕೆಲವು ಹೀಗೆ: (೧) ಈ ಶ್ಲೋಕದಲ್ಲಿ ತಮಗೇ ಸಲ್ಲಿಸಿಕ್ಕೊಳ್ಳುವ ನಮಸ್ಕಾರ ನಮಸ್ಕಾರಕ್ಕೆ ಪಾತ್ರನಾದವನ ಸಹವಾಸ ಸಾಕಪ್ಪ ಎಂಬ ಅರ್ಥದಲ್ಲಿ! ಕನ್ನಡದಲ್ಲಿಯೂ ಮಾತನಾಡುವಾಗ," ಅವನಿಗೆ ನಮೋ ನಮಃ" ಎಂದು ಹೇಳಿದರೆ ಹೇಳುವ ವಿಧಾನದಿಂದ ವ್ಯಂಗ್ಯವಾಗಿ “ಅವನ ಸಹವಾಸ ಬೇಡವಪ್ಪ” ಎಂಬ ಅರ್ಥ ಸ್ಫುರಿಸುವುದಿಲ್ಲವೇ? ಹಾಗೆ. (೨) ತನಗೂ ಆ ಭಗವಂತನಿಗೂ ಒಟ್ಟಿಗೆ ನಮಸ್ಕಾರ ಸಲ್ಲಿಸಿರುವುದರಿಂದ ಪರಮಾತ್ಮನಿಗೂ ಜೀವಾತ್ಮನಿಗೂ ಅಭೇದವನ್ನು ಕಲ್ಪಿಸಿದಂತಾಗಿ ಅದ್ವೈತತತ್ತ್ವವೂ ತೋರಿಬರುತ್ತದೆ.
विश्वास-प्रस्तुतिः
प्रमिति-परिष्कृति-मुद्रा
सहृदय-हृदये समर्पिता कविभिः ।
भवति सुभाषितनीवी
पर-गुण-चोरैर् अहार्यार्था ॥ १-२ ॥
मूलम्
प्रमिति-परिष्कृति-मुद्रा
सहृदय-हृदये समर्पिता कविभिः ।
भवति सुभाषित-नीवी+++(=मूलधनम्)+++
पर+++(कवि)+++-गुण-चोरैर् अहार्यार्था ॥ १-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಕವಿಗಳಿಂದ ಸಹೃದಯರ ಹೃದಯದಲ್ಲಿ ಸಮರ್ಪಿತವಾದ,
ತರ್ಕಬದ್ಧವಾಗಿರುವುದು ಮತ್ತು ರಸಾಲಂಕಾರಗಳಿಂದ ಪರಿಷ್ಕೃತವಾಗಿರುವುದು ಇವೇ ಗುರುತಾಗಿ ಉಳ್ಳ
ಸುಭಾಷಿತನೀವಿಯ ಅರ್ಥವನ್ನು ಕದಿಯುವುದು
ಇತರಕವಿಗಳ ರಚನಾಗುಣಗಳನ್ನು ಕದಿಯುವ ಕೃತಿಚೋರರಿಂದ ಸಾಧ್ಯವಾಗದು.
ಶ್ರೀನಿವಾಸಮೂರ್ತಿ - ಟಿಪ್ಪನೀ
ದೇಶಿಕರು ಬಳಕೆಮಾಡುವ ಪದಗಳು ಸರಳವಾದರೂ ವಾಕ್ಯದ ಅರ್ಥ ಸ್ಫುಟವಾಗುವುದಕ್ಕೆ ಸಹೃದಯನು ಮನಸ್ಸಿನಲ್ಲಿ ಮಂಥನಮಾಡಬೇಕಾಗುತ್ತದೆಂಬುದಕ್ಕೆ ಈ ಶ್ಲೋಕವೇ ಉದಾಹರಣೆಯಾದೀತು. ಈ ಶ್ಲೋಕದಲ್ಲಿ, ಈ ಕೃತಿಯಲ್ಲಿನ ಅನೇಕ ಶ್ಲೋಕಗಳಂತೆ ಶ್ಲೇಷೆಯಿದೆ. ನೀವೀ ಎಂದರೆ ಹಣದ ಗಂಟು ಅಥವಾ ಮೂಲಧನ. ಶ್ಲೇಷೆಯ ಮೂಲಕ ಸುಭಾಷಿತನೀವಿಗೂ ಹಣದ ಗಂಟಿಗೂ ಸಾದೃಶ್ಯವನ್ನು ತೋರಿಸಿದ್ದಾರೆ. ಪ್ರಮಿತಿ ಎಂದರೆ ಅಳತೆ ಅಥವಾ ಎಣಿಕೆಮಾಡುವುದು.
ಹಣದ ಗಂಟನ್ನು ಹಣವನ್ನು ಎಣಿಸಿ(ಪ್ರಮಿತಿ) ಅದನ್ನು ಥೈಲಿಯಲ್ಲಿ ಭದ್ರಪಡಿಸಿ(ಪರಿಷ್ಕೃತಿ) ಮೇಲೆ ಮುದ್ರೆ (ಮುದ್ರಾ) ಹಾಕುವುದರಿಂದ ಹಣದಗಂಟಿನ ಒಳಗಿನ ಹಣ(ಅರ್ಥ)ವನ್ನು ಇತರರು ಕದಿಯುವುದು ದುಸ್ಸಾಧ್ಯ ವಾಗುವುದಿಲ್ಲವೇ? ಅದೇ ರೀತಿ ಸುಕವಿಗಳು ತರ್ಕಬದ್ಧವಾಗಿ, ಪರಿಷ್ಕೃತವಾಗಿ ರಚಿಸಿದ ಸುಭಾಷಿತನೀವಿಯೂ ಕೂಡ ಕೃತಿಚೌರ್ಯಕ್ಕೆ ಬಾರದು. ಈ ಶ್ಲೋಕವು ತಮ್ಮ ಈ ಕೃತಿಗೇ ಅನ್ವಯಿಸಿದರೂ ಸುಕವಿಗಳು ರಚಿಸುವ ಸುಭಾಷಿತಗ್ರಂಥಗಳೆಲ್ಲಕ್ಕೂ ಅನ್ವಯವಾಗುವಂತೆ “ಕವಿಭಿಃ” ಎಂದು ಬಹುವಚನವನ್ನು ಉಪಯೋಗಿಸಿದ್ದಾರೆ.
ಈ ಶ್ಲೋಕದಲ್ಲಿ ಈ ಕೃತಿಯ ಪರಿಮಿತಿಯನ್ನು ಗೂಢವಾಗಿ ತೋರಿಸಲಾಗಿದೆಯೆನ್ನುತ್ತಾರೆ ವ್ಯಾಖ್ಯಾನಕಾರರು. ವಿವರಣೆಯನ್ನು ಈ ಕಾವ್ಯದ ಕಡೆಯ ಶ್ಲೋಕದಲ್ಲಿ ಕೊಡಲಾಗಿದೆ.
ಶ್ರೀವೈಷ್ಣವ ಸಂಪ್ರದಾಯಕ್ಕನುಗುಣವಾದ ಇನ್ನು ಕೆಲವು ಅರ್ಥಗಳನ್ನೂ ವ್ಯಾಖ್ಯಾನಕಾರರು ತೋರಿಸಿದ್ದಾರೆ.
विश्वास-प्रस्तुतिः
पश्यति परेषु दोषान्
असतोऽपि, जनः सतोऽपि नैव गुणान् ।
विपरीतम् इदं स्वस्मिन्
महिमा मोहाञ्जनस्यैषः ॥ १-३ ॥+++(5)+++
मूलम्
पश्यति परेषु दोषान् असतोऽपि जनः सतोऽपि नैव गुणान् ।
विपरीतमिदं स्वस्मिन् महिमा मोहाञ्जनस्यैषः ॥ १-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(ಅವಿವೇಕಿಯಾದ) ಮಾನವ ಇತರರಲ್ಲಿ, ಇಲ್ಲದ ದೋಷಗಳನ್ನು ಕಾಣುತ್ತಾನೆ, ಇರುವ ಸುಗುಣಗಳನ್ನು ಕಾಣುವುದಿಲ್ಲ. ತನ್ನಲ್ಲಿಯೇ ಆದರೋ ಅವನ ಚರ್ಯೆ ತದ್ವಿರುದ್ಧ; ಅರ್ಥಾತ್ ತನ್ನಲ್ಲಿ ಇಲ್ಲದ ಗುಣಗಳನ್ನು ಕಾಣುತ್ತಾನೆ, ಇರುವ ದೋಷಗಳನ್ನು ಕಾಣುವುದಿಲ್ಲ. ಈ ವೈಪರೀತ್ಯವು ಮೋಹವೆಂಬ ಕಾಡಿಗೆಯ ಪ್ರಭಾವವು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಅಞ್ಜನವೆಂದರೆ ಕಣ್ಣಿಗೆ ಹಾಕಿಕ್ಕೊಳ್ಳುವ ಕಾಡಿಗೆ. ಆದರೆ, ಸಂಸ್ಕೃತ ವಾಙ್ಮಯದಲ್ಲಿ ವಿಶೇಷ ಅಞ್ಜನವೊಂದರ ಪ್ರಸ್ತಾಪ ಬರುತ್ತದೆ. ಈ ಅಞ್ಜನವನ್ನು ಕಣ್ಣಿಗೆ ಹಾಕಿಕ್ಕೊಂಡರೆ ಕಾಣದ ವಸ್ತುಗಳೆಲ್ಲಾ ಕಾಣುವುದೆಂದೂ, ಕತ್ತಲಿನಲ್ಲಿಯೂ ವಸ್ತುಗಳನ್ನು ಕಾಣಬಹುದೆಂದೂ ಪ್ರತೀತಿ. ಈ ಶ್ಲೋಕದಲ್ಲಿ ಮೋಹವೆಂಬ ಅಞ್ಜನದ ಪ್ರಭಾವದಿಂದ ಆಗುವ ದೃಷ್ಟಿವೈಪರೀತ್ಯವನ್ನು ಬಣ್ಣಿಸಲಾಗಿದೆ.
ಇಲ್ಲಿ ಅದ್ವೈತಮತದ ಖಂಡನೆಯು ಧ್ವನಿತವಾಗಿದೆ. ಅದ್ವೈತಿಗಳು ಪರಬ್ರಹ್ಮನಲ್ಲಿ ಇಲ್ಲದ ಮಾಯಾ ಅವಿದ್ಯಾ ಮುಂತಾದ ದೋಷಗಳನ್ನು ಹೊರಿಸಿ ಅವನಲ್ಲಿರುವ ಷಡ್ಗುಣಗಳೇ ಮೊದಲಾದ ಗುಣಗಳ ಅಸ್ತಿತ್ತ್ವವನ್ನು ಇಲ್ಲವೆಂದು, ಜೀವಾತ್ಮನಲ್ಲಿ ಇಲ್ಲದ ಪರಬ್ರಹ್ಮೈಕ್ಯತೆಯನ್ನು ಹೊರಿಸಿ ಇರುವ ಅವಿದ್ಯಾದಿ ದೋಷಗಳನ್ನು ಇಲ್ಲವೆಂದು ಹೇಳುವುದು ಭ್ರಮೆ ತಾನೇ?
विश्वास-प्रस्तुतिः
यत्र पयः-प्रभृति स्वं
भुक्त्वा ऽसत्यानुषक्त-धीश् +++(पक्षे सत्यभामासक्तधीः)+++ चोरः ।
पशु-वृत्ति-गणे तस्मिन्न् +++(पक्षे कृष्णवृन्दे)+++
अपि नाम यशो-दया-वृत्तम्? +++(पक्षे यशोदया वृत्तम्)+++ ॥ १-४ ॥
मूलम्
यत्र पयःप्रभृति स्वं भुक्त्वासत्यानुषक्तधीश्चोरः ।
पशुवृत्तिगणे तस्मिन्नपि नाम यशोदया वृत्तम् ॥ १-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಹಾಲು ಮೊದಲಾದ ಭೋಗಗಳನ್ನು ಅನುಭವಿಸಿ
ಅನುಭವಿಸಿದುದೆಲ್ಲಾ ಸುಳ್ಳೆಂದು ಹೇಳುವುದರಲ್ಲಿ
ನಿರತನಾದ ಕಳ್ಳನಿರುವ ಪಾಶವೀವೃತ್ತಿಯವರ ಗುಂಪಿನಲ್ಲಿ
ಯಶಸ್ಸೂ ದಯೆಯೂ ಸದಾಚಾರವೂ ಇರುವುದೆ?
ಶ್ರೀನಿವಾಸಮೂರ್ತಿ - ಟಿಪ್ಪನೀ
“ಪಯಃ = ಹಾಲು”, “ಚೋರಃ”, “ಪಶುವೃತ್ತಿ = ಗೋಪಾಲನ”, “ಯಶೋದಯಾ” ಎಂಬ ಪದಗಳಿಂದ ಕೃಷ್ಣಲೀಲೆಯು ಅಪ್ರಸ್ತುತವಾಗಿ ಭಾಸವಾಗುತ್ತದೆ. ಹಾಲು ಮುಂತಾದುವನ್ನು ಕದ್ದು ಕುಡಿದು ಕುಡಿಯಲಿಲ್ಲವೆಂದು ಹೇಳುವ ಕೃಷ್ಣನಿದ್ದ ಗೊಲ್ಲರ ಗುಂಪಿನಲ್ಲಿ ಯಶೋದೆ ಇದ್ದಳಲ್ಲವೆ?
विश्वास-प्रस्तुतिः
हरि-कर-पुष्कर-हंसं,
+++(→लक्ष्म्याः)+++ हार-मणीनां प्रसूतिम् इव लक्ष्म्याः ।
पित्तेन पाञ्च-जन्यं पीतं
पश्यन् भिषज्यतु कम् ॥ १-५ ॥+++(4)+++
मूलम्
हरिकरपुष्करहंसं हारमणीनां प्रसूतिमिव लक्ष्म्याः ।
पित्तेन पाञ्चजन्यं पीतं पश्यन् भिषज्यतु कम् ॥ १-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಕಾಮಾಲೆಯ ರೋಗದಿಂದ ಪೀಡಿತನಾದ ವೈದ್ಯನು ವಿಷ್ಣುವಿನ ಕರಕಮಲದಲ್ಲಿ ಹಂಸದಂತಿರುವ, ಲಕ್ಷ್ಮಿಯ ಹಾರದ ಮುತ್ತುಗಳಿಗೆ ಜನ್ಯಸ್ಥಾನದಂತಿರುವ ಪಾಞ್ಚಜನ್ಯವನ್ನು ಹಳದಿಯಾಗಿ ಕಾಣುತ್ತಾನೆ. ಅಂತಹವನು ಯಾರಿಗೆ ತಾನೇ ಔಷಧವನ್ನು ಮಾಡಿಯಾನು?
ಶ್ರೀನಿವಾಸಮೂರ್ತಿ - ಟಿಪ್ಪನೀ
ವಿಷ್ಣುವಿನ ಕೈಯಲ್ಲಿರುವ ಪಾಞ್ಚಜನ್ಯಕ್ಕಿಂತಲೂ ಬಿಳುಪಾದುದು ಇನ್ನು ಯಾವುದೂ ಇರಲಿಕ್ಕಿಲ್ಲ. ಅಂತಹ ಅಸದೃಶ ಶ್ವೇತವರ್ಣವನ್ನೇ ಹಳದಿಯನ್ನಾಗಿ ನೋಡುವ ವೈದ್ಯನ ವ್ಯಾಧಿಯ ಉಲ್ಬಣತೆ ಪರಮಾವಧಿಯನ್ನು ಮುಟ್ಟಿದ್ದೀತು. ತಮ್ಮಲ್ಲಿರುವ ದೋಷಗಳನ್ನು ಇತರರಲ್ಲಿ ಕಾಣುವ ಮೂಢರು ಬೇರೆಯವರ ದೋಷಗಳನ್ನು ಸರಿಪಡಿಸುವುದಕ್ಕಾಗುತ್ತದೆಯೇ ಎನ್ನುವುದನ್ನು ಅನ್ಯೋಕ್ತಿಯ ಮೂಲಕ ದೇಶಿಕರು ತಿಳಿಸಿದ್ದಾರೆ.
विश्वास-प्रस्तुतिः
+++(पारदर्शित्वात्)+++ स्फटिकस् स्वभाव-शुद्धः
स एव सन् वहति सर्वम् आरोपम् ।
तद् अपि न तत्रानास्था
तद्-उपाधिषु वा भवत्य् आस्था ॥ १-६ ॥
मूलम्
स्फटिकस्स्वभावशुद्धः स एव सन् वहति सर्वमारोपम् ।
तदपि न तत्रानास्था तदुपाधिषु वा भवत्यास्था ॥ १-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸ್ವಚ್ಛವಾದ ಮತ್ತು ಪಾರದರ್ಶಕವಾದ ಸ್ಫಟಿಕ ಮಣಿಯು ತನ್ನಲ್ಲಿ ಆರೋಪಿಸಿದ ಎಲ್ಲ ಬಣ್ಣಗಳನ್ನೂ ತಳೆಯುತ್ತದೆ. ಹಾಗಾದರೂ (ಬಲ್ಲವರು) ಆ ಸ್ಫಟಿಕಮಣಿಯಲ್ಲಿ ಅನಾದರಣೆಯನ್ನಾಗಲಿ ಬಣ್ಣಗಳನ್ನು ಆರೋಪಿಸಿದ ಇತರೆ ವಸ್ತುಗಳಲ್ಲಿ ಆದರಣೆಯನ್ನಾಗಲಿ ತೋರಿಸುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸ್ಫಟಿಕಮಣಿಯ ಹತ್ತಿರ ಕೆಂಪು ಗುಲಾಬಿಯನ್ನಿಟ್ಟರೆ ಆ ಮಣಿಯು ಬೆಳಕಿನ ಪ್ರತಿಫಲನದಿಂದ ಕೆಂಪಾಗಿ ಕಾಣುತ್ತದೆ. ಹಳದಿ ಗುಲಾಬಿಯನ್ನಿಟ್ಟರೆ ಹಳದಿಯಾಗಿ ಕಾಣುತ್ತದೆ. ಇದನ್ನು ತಿಳಿದವರು ಸ್ಫಟಿಕಮಣಿಯು ಬಣ್ಣ ಬದಲಾಸುವಂತಹ ಪದಾರ್ಥವೆಂದು ಅನಾದರಣೆಯನ್ನಾಗಲಿ, ಈ ವರ್ಣವ್ಯತ್ಯಯಕ್ಕೆ ಕಾರಣವಾದ ಗುಲಾಬಿಯಲ್ಲಿ ಇಲ್ಲದ ಆದರಣೆಯನ್ನಾಗಲಿ ತೋರಿಸುವುದಿಲ್ಲ. ಇದರ ಅಂತರಾರ್ಥ ಹೀಗೆ: ಪರಿಶುದ್ಧಮನಸ್ಕನು ದುಷ್ಟರು ಹೊರಿಸಿದ ಆರೋಪಗಳನ್ನೆಲ್ಲಾ ಪ್ರತ್ಯುತ್ತರಕೊಡದೆ ಹೊರುತ್ತಾನೆ. ಬಲ್ಲವರು ಅಂತಹವನಲ್ಲಿ ಅನಾದರಣೆಯನ್ನಾಗಲಿ ಆರೋಪಿಗಳಲ್ಲಿ ಆದರಣೆಯನ್ನಾಗಲಿ ತೋರಿಸುವುದಿಲ್ಲ.
ಶುದ್ಧಬ್ರಹ್ಮವು ಸೃಷ್ಟಿ-ಸ್ಥಿತಿ-ಲಯದ ಮೂಲಕ ಅನೇಕ ವಿಕಾರವನ್ನು ತಳೆದರೂ, ಬ್ರಹ್ಮಜ್ಞಾನಿಯು ಬ್ರಹ್ಮದ ಶುದ್ಧತ್ತ್ವವನ್ನು ತಿಳಿದವನಾಗಿ ಮೋಕ್ಷಕ್ಕಾಗಿ ಅದನ್ನೇ ಆಶ್ರಯಿಸುತ್ತಾನೆ, ಈ ಸಂಸಾರದಲ್ಲಿ ಆಸ್ಥೆಯನ್ನು ತೋರಿಸುವುದಿಲ್ಲ ಎಂಬ ವೇದಾಂತಾರ್ಥವೂ ಧ್ವನಿಸುತ್ತದೆ.
विश्वास-प्रस्तुतिः
स्थलपरिशेषितजलधेः सविधे सञ्जातडंबरं जलदम् ।
प्रहसन्ति पाण्ड्यनद्यः शुक्तिमुखैः मौक्तिकस्त्यानैः ॥ १-७ ॥
मूलम्
स्थलपरिशेषितजलधेः सविधे सञ्जातडंबरं जलदम् ।
प्रहसन्ति पाण्ड्यनद्यः शुक्तिमुखैः मौक्तिकस्त्यानैः ॥ १-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಭೂತಲವನ್ನು ಬಿಟ್ಟು ಸಮುದ್ರದ ನೀರನ್ನೆಲ್ಲಾ ಕುಡಿದ ಅಗಸ್ತ್ಯಮುನಿಯ ಸನಿಯದಲ್ಲಿ ಮೋಡವು ಗರ್ಜಿಸುತ್ತಿದೆ. (ಇದನ್ನು ನೋಡಿ) ಪಾಂಡ್ಯದೇಶದ ನದಿಗಳು ಮುತ್ತಿನಿಂದ ತುಂಬಿದ ಮುತ್ತಿನಚಿಪ್ಪಿನ ಮುಖಗಳಿಂದ ನಗುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಅಲ್ಪಜ್ಞನೊಬ್ಬ ಮಹಾಪಂಡಿತನ ಎದುರಿನಲ್ಲಿ ತನ್ನ ಬಡಾಯಿಯನ್ನು ಕೊಚ್ಚಿಕ್ಕೊಳ್ಳುತ್ತಿದ್ದರೆ, ಸುತ್ತಲಿರುವ ಜನರು ನಗುವುದಿಲ್ಲವೆ? ಎಂಬ ಭಾವವನ್ನು ಇಲ್ಲಿ ಅನ್ಯೋಕ್ತಿಯ ಮೂಲಕ ಹೇಳಲಾಗಿದೆ. ಅಗಸ್ತ್ಯಮುನಿವರ್ಯರು ಸಮುದ್ರವನ್ನೇ ಆಪೋಶನವನ್ನಾಗಿ ತೆಗೆದುಕೊಂಡ ಪುರಾಣದ ಕಥೆ ಇಲ್ಲಿ ಪ್ರಸ್ತುತ. ದಕ್ಷಿಣದೇಶದ ನದಿಗಳ ದಡದಲ್ಲಿ ಅಥವಾ ಮುಖದಲ್ಲಿ ಇರುವ ಪ್ರಚುರವಾದ ಮುತ್ತುಗಳು ನದಿಗಳು ನಗುವಂತೆ ತೋರುತ್ತವೆ ಎಂಬ ಉತ್ಪ್ರೇಕ್ಷೆ. “ಜಲದಮ್” ಎಂಬುದು ನಪುಂಸಕ ಲಿಙ್ಗ. “ನದೀ” ಸ್ತ್ರೀಲಿಙ್ಗ. ಸ್ತ್ರೀಯರು ಕೂಡ ಮಹಾಪ್ರಾಜ್ಞನ ಸಮ್ಮುಖದಲ್ಲಿ ಜಂಬ ಕೊಚ್ಚಿಕ್ಕೊಳ್ಳುತ್ತಿರುವ ಒಬ್ಬನನ್ನು ನಪುಂಸಕಪ್ರಾಯನನ್ನಾಗಿ ತಿಳಿದು ನಗುತ್ತಾರೆ ಎಂಬುದು ಧ್ವನಿತ.
विश्वास-प्रस्तुतिः
प्रतिपन्नवामदृष्टिस्स्तन इव कश्चित् समुन्नतोऽप्यधिकम् ।
पतनमधिगम्य समये परिहासरसावहो भवति ॥ १-८ ॥
मूलम्
प्रतिपन्नवामदृष्टिस्स्तन इव कश्चित् समुन्नतोऽप्यधिकम् ।
पतनमधिगम्य समये परिहासरसावहो भवति ॥ १-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಅತ್ಯುಚ್ಛ್ರಾಯಸ್ಥಿತಿಯಲ್ಲಿದ್ದರೂ ಕೂಡ ಮನುಷ್ಯನೊಬ್ಬನು ಒಂದು ಸಮಯದಲ್ಲಿ ದುರದೃಷ್ಟದಿಂದ ನಡತೆಯಲ್ಲಿ ಎಡವಿ ಬಿದ್ದು ಹಾಸ್ಯಕ್ಕೆ ಪಾತ್ರನಾಗುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಶ್ಲೋಕದಿಂದ ಅನೇಕ ವ್ಯಙ್ಗ್ಯಾರ್ಥಗಳನ್ನು ವ್ಯಾಖ್ಯಾನಕಾರರು ಹಿಂಡಿದ್ದಾರೆ. ಅವುಗಳಲ್ಲಿ ಎರಡು ಹೀಗಿವೆ: (೧) ಪ್ರತಿಪತ್+ನವಾ+ಆಮ+ದ್ಟೃಃ ಮತ್ತು ಪರಿ+ಹಾಸ+ರಸಾವಹಃ ಎಂಬುದಾಗಿ ಪದಚ್ಛೇದ ಮಾಡಿಕ್ಕೊಂಡರೆ, ಚಂದ್ರನು ಶುಕ್ಲಪಕ್ಷದಲ್ಲಿ ಪ್ರಥಮಾತಿಥಿಯಿಂದ ಅಮಾವಾಸ್ಯೆಯವರೆಗೂ ಅಧಿಕಾಧಿಕವಾಗಿ ಶೋಭಿಸುತ್ತಿರುವವನು ಕೃಷ್ಣಪಕ್ಷದಲ್ಲಿ ಹೆಂಗಸಿನ ಸ್ತನದಂತೆ ಕ್ಷೀಣನಾಗುತ್ತಾ ಸುತ್ತಲೂ ಸಂತಸವನ್ನು ಸೂಸುತ್ತಾನೆ. (ಈ ಅರ್ಥವು ಮುಖ್ಯಾರ್ಥಕ್ಕೆ ಪೋಷಕವಾಗುವುದಿಲ್ಲ.) (೨) ಸ್ತನೇ+ಇವ ಮತ್ತು ಸಮುತ್+ನತಃ ಎಂದು ಪದಚ್ಛೇದಮಾಡುವುದರಿಂದ ರಾಮಾಯಣದ ಕಾಕಾಸುರವೃತ್ತಾಂತವು ಧ್ವನಿಸುತ್ತದೆ. ಸೀತೆಯ ಸ್ತನದಲ್ಲಿ ಪ್ರೀತಿಯಿರುವವನಂತೆ ಇದ್ದ ಕಾಕಾಸುರನು ಅನೇಕರಲ್ಲಿ ಶರಣಾಗತನಾಗಿ ಕಡೆಗೆ ಶ್ರೀರಾಮನ ಪಾದದಡಿಯಲ್ಲಿ ಬಿದ್ದು ಹಾಸ್ಯಕ್ಕೆ ಈಡಾದನು.
विश्वास-प्रस्तुतिः
बहु विदधत्युपकारान् गुप्त्या दुरितं प्रकाश्य पिदधति च ।
सुहृदि विहिताहितमतिर्यन्न प्रत्युपकरोति न तत् ॥ १-९ ॥
मूलम्
बहु विदधत्युपकारान् गुप्त्या दुरितं प्रकाश्य पिदधति च ।
सुहृदि विहिताहितमतिर्यन्न प्रत्युपकरोति न तत् ॥ १-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಇರುವ ದೋಷಗಳನ್ನು ಇತರರಿಗೆ ಪ್ರಕಾಶಪಡಿಸದೆ ಗುಟ್ಟಿನಲ್ಲಿ ತನಗೆ ತಿಳಿಯಪಡಿಸಿ ಅನೇಕ ಉಪಕಾರಗಳನ್ನು ಮಾಡುವ ಸ್ನೇಹಿತನಲ್ಲಿ ಅಹಿತಭಾವನೆಯನ್ನು ತೋರಿಸುವುದು ಅವನು ಮಾಡಿದ ಉಪಕಾರಗಳಿಗೆ ಪ್ರತ್ಯುಪಕಾರವಲ್ಲವು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಹೀಗೂ ಅರ್ಥಮಾಡಬಹುದು:- ನಿಜವಾದ ಸ್ನೇಹಿತನನ್ನು ಅಹಿತೈಷಿಯೆಂದು ಎಣಿಸಿ ಅವನಿಗೆ ಪ್ರತ್ಯುಪಕಾರ ಮಾಡದೆ ಇರುವುದೆಂಬುದು ಒಂದೇ ಅಲ್ಲ. ಹಿತೈಷಿಯೆಂದು ಎಣಿಸಿಯೂ ಅವನಿಗೆ ಪ್ರತ್ಯುಪಕಾರಮಾಡದೇ ಇರುವುದೂ ಉಂಟು.
विश्वास-प्रस्तुतिः
एधान् दहन्ति शान्तान् येभ्यः सिद्ध्येयुरसितवर्त्मानः ।
अगणितनिजप्रकाशैः किमाश्रयाशैरनाश्यमिह ॥ १-१० ॥
मूलम्
एधान् दहन्ति शान्तान् येभ्यः सिद्ध्येयुरसितवर्त्मानः ।
अगणितनिजप्रकाशैः किमाश्रयाशैरनाश्यमिह ॥ १-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಅಗ್ನಿಜ್ವಾಲೆಗಳು ಅವುಗಳ ಸಿದ್ಧಿಗೇ ಮುಂದೆ ಉಪಕಾರಮಾಡುವಂತಹ ಶಾನ್ತವಾಗಿರುವ ಕಟ್ಟಿಗೆಗಳನ್ನು ಸುಡುತ್ತವೆ. ಗಣನೀಯವಲ್ಲದ ಪ್ರಕಾಶವಿರುವ, ತನ್ನನ್ನು ಆಶ್ರಯಿಸಿರುವುಗಳನ್ನೇ ತಿನ್ನುವಂತಹ ಬೆಂಕಿಯು ಏನನ್ನು ತಾನೇ ನಾಶಮಾಡದೆ ಬಿಡುತ್ತದೆ? ಅದೇರೀತಿ, ಅಸ್ವಚ್ಛಮಾರ್ಗವನ್ನು ಹಿಡಿದಿರುವ ಅವಿವೇಕಿಗಳು ತಮಗೇ ಮುಂದೆ ಉಪಕಾರಮಾಡುವಂತಹ ಶಾಂತಚಿತ್ತರಾದ ಪೋಷಕರನ್ನು ನಾಶಮಾಡುತ್ತಾರೆ. ತಮ್ಮಪ್ರಕಾಶಕ್ಕೇ ಕಾರಣಭೂತರಾದವರನ್ನು ಲೆಕ್ಕಿಸದೆ ಆಶ್ರಯಿಸಿರುವವರನ್ನೇ ನುಂಗುವವರಿಂದ ಏನು ತಾನೇ ನಾಶವಾಗದೇ ಹೋಗುತ್ತದೆ?
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಶ್ಲೇಷೆಯ ಮೂಲಕ ಬೆಂಕಿಗೂ ಅವಿವೇಕಿಗೂ ಸಾದೃಶ್ಯವನ್ನು ತೋರಿದ್ದಾರೆ. ಅಸಿತವರ್ತ್ಮಾ=ಕೃಷ್ಣವರ್ತ್ಮಾ=(ಬೆಂಕಿ, ಅಸ್ವಚ್ಛದಾರಿಯನ್ನು ಹಿಡಿದವನು); ಏಧಾ=(ಕಟ್ಟಿಗೆ, ವೃದ್ಧಿಗೆ ಸಹಾಯಕ); ಶಾನ್ತ=(ಆರಿರುವ, ಶಾಂತಮನಸ್ಕರು); ಅಗಣಿತನಿಜಪ್ರಕಾಶಃ=(ಸೂರ್ಯನ ಪ್ರಕಾಶಕ್ಕೆ ಹೋಲಿಸಿದರೆ ಲೆಕ್ಕಕ್ಕೆ ಬರದ ಪ್ರಕಾಶವುಳ್ಳ, ತನಗೆ ಬೆಳಕು ನೀಡಿದವರನ್ನು ಕಡೆಗೆಣಿಸಿದವ); ಆಶ್ರಯಾಶಃ=(ಬೆಂಕಿ, ಆಶ್ರಯಿಸಿರುವವರನ್ನು ನುಂಗುವವನು).
ಮತ್ತೊಂದು ವಿಶೇಷ: ಕೃತಘ್ನ ಎಂದರೆ ಮಾಡಿದ ಉಪಕಾರಕ್ಕೆ ಬದಲಾಗಿ ಅಪಕಾರವನ್ನೆಸಗಿದವ. ಕ್ರಿಯಮಾಣಘ್ನ ಎಂದರೆ ಈಗ ಮಾಡುತ್ತಿರುವ ಉಪಕಾರಕ್ಕೆ ಬದಲಾಗಿ ಅಪಕಾರವನ್ನು ಎಸಗುತ್ತಿರುವವ. ಕರಿಷ್ಯಮಾಣಘ್ನ ಎಂದರೆ ಮುಂದೆ ಮಾಡಲಾಗುವ ಉಪಕಾರಕ್ಕೆ ಬದಲಾಗಿ ಅಪಕಾರಮಾಡುವವ. ಈ ಶ್ಲೋಕದ ಪೂರ್ವಾರ್ಧದಲ್ಲಿ “ಸಿದ್ಧ್ಯೇಯುಃ” ಎಂಬ ಭವಿಷ್ಯತ್ ಕಾಲದ ಪ್ರಯೋಗವು ಕರಿಷ್ಯಮಾಣಘ್ನನಿಗೆ ಅನ್ವಯಿಸುತ್ತದೆ. “ಆಶ್ರಯಾಶೈಃ” ಪದಕ್ಕೆ “ಈಗ ಆಶ್ರಯಿಸಿರುವವರನ್ನು ನುಂಗುವ” ಎಂಬ ಅರ್ಥ ಬರುವುದರಿಂದ ಉತ್ತರಾರ್ಧವು ಕ್ರಿಯಮಾಣಘ್ನನಿಗೆ ಅನ್ವಯಿಸುತ್ತದೆ. ಮೊದಲನೆಯ ಶ್ಲೋಕದಲ್ಲಿಯೇ ಕೃತಘ್ನನ ಪ್ರಸ್ತಾವವಾಗಿದೆ. ಇಲ್ಲಿ ಉಳಿದಿಬ್ಬರ ಪ್ರಸ್ತಾವವೂ ಆದಹಾಗೆ ಆಯ್ತು. ಶ್ರೀ ರಾಮಾನುಜರು ಅನುಗ್ರಹಿಸಿರುವ “ಕೃತಾನ್ ಕ್ರಿಯಮಾಣಾನ್ ಕರಿಷ್ಯಮಾಣಾನ್ ಚ ಸರ್ವಾನ್ ಅಶೇಷತಃ ಕ್ಷಮಸ್ವ” ಎಂಬುದನ್ನು ಇಲ್ಲಿ ನೆನೆಯಬಹುದು.
विश्वास-प्रस्तुतिः
नवदलपुटे कल्प्या यस्य प्रभोरपि तल्पधीः
नटपरिबृढो यस्याधस्तात् श्रमं शमयिष्यते ।
वटविटपिनस्तस्याङ्कूरान् अनुत्कटपल्लवान्
स्थपुटचटकापेक्षी भिक्षुः प्रतिक्षणमीक्षते ॥ १-११ ॥
मूलम्
नवदलपुटे कल्प्या यस्य प्रभोरपि तल्पधीः
नटपरिबृढो यस्याधस्तात् श्रमं शमयिष्यते ।
वटविटपिनस्तस्याङ्कूरान् अनुत्कटपल्लवान्
स्थपुटचटकापेक्षी भिक्षुः प्रतिक्षणमीक्षते ॥ १-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಭಗವಂತನಿಗೆ ಯಾವ ಮರದ ಎಲೆಯ ಮೇಲೆ ಮಲಗುವ ಮನಸ್ಸಾಯಿತೋ, ಯಾವ ಮರದ ಕೆಳಗೆ ನಟವರನಾದ ಈಶ್ವರನು ಬಳಲಿಕೆಯನ್ನು ಆರಿಸಿಕ್ಕೊಳ್ಳುವನೋ, ಅಂತಹ ಆಲದಮರದ ಇನ್ನೂ ಹೊಮ್ಮದಿರುವ ಎಳೆಯ ಚಿಗುರುಗಳನ್ನು ಒಬ್ಬ ಭಿಕ್ಷುಕನು ವಂಕುಡೊಂಕಾದ ದೊನ್ನೆಯನ್ನು ಮಾಡಿಕೊಳ್ಳುವುದಕ್ಕಾಗಿ ಪ್ರತಿಕ್ಷಣವೂ (ಎವೆಯಿಕ್ಕದೆ) ನೋಡುತ್ತಾನೆ. ಆಲದ ಮರದ ಮಹತ್ತ್ವವನ್ನರಿಯದ ಭಿಕ್ಷುಕನೊಬ್ಬ ಹೇಗೆ ಆ ಮರದ ಎಲೆಗಳನ್ನು ಒಂದು ಕ್ಷುಲ್ಲ ಉಪಯೋಗಕ್ಕಾಗಿ ಆಶಿಸುತ್ತಾನೋ ಅದೇ ರೀತಿ ಅವಿವೇಕಿಯು ಭಗವಂತನಲ್ಲಿ ಕ್ಷುಲ್ಲ ಐಹಿಕ ಸುಖಗಳಿಗಾಗಿ ಮೊರೆಹೋಗುತ್ತಾನೆ ಎಂಬುದು ಇಲ್ಲಿನ ಅಂತರಾರ್ಥ.
ಶ್ರೀನಿವಾಸಮೂರ್ತಿ - ಟಿಪ್ಪನೀ
“ಚಟಕ” ಎಂಬ ಪದವನ್ನು “ದೊನ್ನೆ” ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಆದರೆ, ಈ ಪದವು ವಿ.ಎಸ್. ಆಪ್ಟೆ ಯವರ ವಿದ್ಯಾರ್ಥಿಗಳ ಸಂಸ್ಕೃತ-ಇಂಗ್ಲಿಷ್ ಕೋಶದಲ್ಲಿಯಾಗಲಿ, ಚಕ್ರವರ್ತಿ ಶ್ರೀನಿವಾಸಗೋಪಾಲಾಚಾರ್ಯರ ಶಬ್ದಾರ್ಥಕೌಸ್ತುಭದಲ್ಲಾಗಲಿ ಬಂದಿಲ್ಲ. ಅಮರಕೋಶದಲ್ಲಿ ಈ ಪದಕ್ಕೆ ಪಕ್ಷಿವಿಶೇಷ (ಗುಬ್ಬಚ್ಚಿ) ಎಂಬ ಅರ್ಥವನ್ನು ಕೊಟ್ಟಿದೆ. ಮುಂದೆ ಎರಡನೆಯ ಪದ್ಧತಿಯಲ್ಲಿ ೧೧ನೇ ಶ್ಲೋಕದಲ್ಲಿ “ಚಟಕ” ಎಂಬ ಪದವು ಗುಬ್ಬಚ್ಚಿ ಎಂಬುವ ಅರ್ಥದಲ್ಲಿ ಪ್ರಯುಕ್ತವಾಗಿದೆ. “ಚಷಕ"ವೆಂದರೆ ಪಾನಪಾತ್ರೆ. “ಚಟಕ"ವು “ಚಷಕ"ದ ಬದಲಾಗಿ ಲೇಖಕಪ್ರಮಾದದಿಂದ ಮೂಲದಲ್ಲಿ ಸೇರಿಹೋಗಿದೆಯೇ? “ಚಷಕ” ಎಂಬ ಪದದಿಂದ ಧ್ವನ್ಯರ್ಥ ಪುಷ್ಟಿಯಾಗುತ್ತದೆ ಎಂದು ಅನಿಸುತ್ತದೆ. ಪಂಡಿತರು ಗಮನಿಸಬೇಕು.
विश्वास-प्रस्तुतिः
निरवधिगुणग्रामे निरागसि वागसि-
स्फुरणमुषितालोका लोका वदन्ति सदन्तिके ।
वरतनुहतिं वालिद्रोहं मनागपसर्पणं
परिमितगुणे स्पष्टावद्ये मुधा किमुदासते ॥ १-१२ ॥
मूलम्
निरवधिगुणग्रामे निरागसि वागसि-
स्फुरणमुषितालोका लोका वदन्ति सदन्तिके ।
वरतनुहतिं वालिद्रोहं मनागपसर्पणं
परिमितगुणे स्पष्टावद्ये मुधा किमुदासते ॥ १-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
“ವಾಗಸಿ” ಅಂದರೆ ಮಾತು ಎಂಬ ಕತ್ತಿ. ಆ ಕತ್ತಿಯ ಹೊಳಪಿನಿಂದ ನಷ್ಟವಾದ ವಿವೇಕವುಳ್ಳ ಜನರು ಅನಂತಗುಣಗಳುಳ್ಳ ಪಾಪರಹಿತನಾದ ಶ್ರೀರಾಮನಲ್ಲಿ ಸ್ತ್ರೀಹತ್ಯೆಯ ದೋಷವನ್ನೂ (ತಾಟಕಾವಧ), ವಾಲಿಯಲ್ಲಿ ದ್ರೋಹವೆಸಗಿದ ದೋಷವನ್ನೂ, (ಖರದೂಷಣರೊಡನೆ ಯುದ್ಧ ಮಾಡುವಾಗ) ಸ್ವಲ್ಪ ಹಿಂದಕ್ಕೆ ಹೆಜ್ಜೆ ಸರಿದನೆಂಬ ದೋಷವನ್ನೂ ಸಜ್ಜನರ ಸಮ್ಮುಖದಲ್ಲಿ ಹೇಳುತ್ತಾರೆ. ಅಂತಹವರು ಅಲ್ಪಗುಣಗಳುಳ್ಳ ಸ್ಪಷ್ಟವಾಗಿ ತಪ್ಪುಮಾಡಿರುವ ಮನುಷ್ಯನಲ್ಲಿ (ದೋಷಗಳನ್ನು ಹೇಳದೆ) ಸುಮ್ಮನೆ ಉದಾಸೀನರಾಗಿರುತ್ತಾರೆಯೇ?
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ಶ್ಲೋಕವು ದೇಶಿಕರ “ಸಂಕಲ್ಪಸೂರ್ಯೋದಯ"ದಲ್ಲಿಯೂ ಬರುತ್ತದೆ.
|| ಇತಿ ಅನಿಪುಣಪದ್ಧತಿಃ ಪ್ರಥಮಾ ||
|| इति अनिपुणपद्धतिः प्रथमा ||