+सुभाषीतनीवी

ಶ್ರೀನಿವಾಸಮೂರ್ತಿ - ಪ್ರಸ್ತಾವನೆ

ಶ್ರೀಮಾನ್ ನಿಗಮಾನ್ತಮಹಾದೇಶಿಕರು ರಚಿಸಿದ ಸುಭಾಷಿತನೀವೀ (ಸುಭಾಷಿತಗಳ ಗಂಟು)
ಜಿ ಎಸ್ ಶ್ರೀನಿವಾಸಮೂರ್ತಿಯವರು ಬರೆದಿರುವ
ಕನ್ನಡ ಭಾವಾರ್ಥ ಟಿಪ್ಪಣಿಗಳೊಡನೆ

Title: Subhaashitaniivii
Author: Sri Vedantadesika
Language of text: Sanskrit
Language of translation: Kannada
Script: Kannada
Translator: G S S Murthy murthygss@gmail.com
Tags: Subhashita, Subhashitaniivi, Vedantadeshika, G S S Murthy

ಕವಿ-ತಾರ್ಕಿಕರ ಸಿಂಗ ನಿಗಮಾನ್ತದೇಶಿಕರು |
ನೆಲಸಲೆನ್ಮನದಿ ವೇಂಕಟನಾಥರನುಗಾಲ ||

ಶ್ರೀ ಯತಿವರ್ಯ ರಾಮಾನುಜರ ವಿಶಿಷ್ಟಾದ್ವೈತಸಿದ್ಧಾನ್ತದ ಪ್ರತಿಪಾದನೆಗೆ ಮತ್ತು ಸರ್ವತೋಮುಖವಾದ ವಿಕಾಸಕ್ಕೆ ಯಶಸ್ವಿಯಾಗಿ ದುಡಿದ ಮಹಾನುಭಾವರಲ್ಲಿ ಶ್ರೀನಿಗಮಾನ್ತಮಹಾದೇಶಿಕರು ಅಗ್ರಗಣ್ಯರು. ೧೩ನೇ ಶತಮಾನದ ಉತ್ತರಾರ್ಧದಲ್ಲಿ ತಮಿಳುನಾಡಿನ ಕಾಂಚೀಪುರದ ಭಾಗವಾದ ತೂಪ್ಪಿಲ್ ಎಂಬ ಅಗ್ರಹಾರದಲ್ಲಿ ಜನಿಸಿ ೧೦೧ ವರ್ಷಗಳಕಾಲ ರಾಮಾನುಜಸಿದ್ಧಾನ್ತದ ಪ್ರತಿಪಾದನೆಗಾಗಿ ಶಿಷ್ಯರಿಗೆ ಕಾಲಕ್ಷೇಪ, ಜನತೆಗೆ ಪ್ರವಚನ, ವಿದ್ವಾಂಸರೊಡನೆ ವಾಕ್ಯಾರ್ಥ, ಅಮೂಲ್ಯ ಗ್ರಂಥರಚನೆ, ಭಗವದಾರಾಧನೆ ಇವುಗಳನ್ನು ಸಫಲವಾಗಿ ನಡೆಸಿದ ಈ ಮಹಾತ್ಮರು ತಮಿಳುನಾಡಿನಲ್ಲಿಯೇ, ಮುಖ್ಯವಾಗಿ ಕಾಂಚೀಪುರ, ತಿರುವಹೀಂದ್ರಪುರ ಮತ್ತು ಶ್ರೀರಂಗ ಈ ಊರುಗಳಲ್ಲಿ, ತಮ್ಮ ಜೀವನದ ಹೆಚ್ಚುಭಾಗವನ್ನು ಕಳೆದರು. ಈಸವೀ ೧೩೨೭ರಲ್ಲಿ ಶ್ರೀರಂಗದ ಶ್ರೀರಂಗನಾಥನ ದೇವಸ್ಥಾನವನ್ನು ಮಹಮ್ಮದೀಯ ದರೋಡೆಕಾರರು ದೋಚಿದಾಗ, ನೊಂದ ದೇಶಿಕರು ಕನ್ನಡನಾಡಿನ ಮೇಲುಕೋಟೆ ಮತ್ತು ಸತ್ಯಾಗಾಲಗಳಲ್ಲಿ ಕೆಲವು ವರ್ಷಗಳು ನೆಲಸಿದ್ದರು. ಇವರು ವಿದ್ಯಾರಣ್ಯರ ಸಮಕಾಲೀನರಾಗಿದ್ದು, ಇವರಿಬ್ಬರಲ್ಲಿ ಪರಸ್ಪರ ಗೌರವ ವಿಶ್ವಾಸ ಇದ್ದಿತೆಂಬುದರಲ್ಲಿ ಸಂಶಯವಿಲ್ಲ. ವಿಶಿಷ್ಟಾದ್ವೈತಸಿದ್ಧಾನ್ತಕ್ಕೆ ಸಂಬಂಧಿಸಿದಂತೆ ಪ್ರಕರಣಗ್ರಂಥಗಳಿಗೆ, ಭಾಷ್ಯಗಳಿಗೆ ವ್ಯಾಖ್ಯಾನಗಳನ್ನು ರಚಿಸಿರುವದಲ್ಲದೆ ಸ್ವತಂತ್ರ ತತ್ತ್ವಗ್ರಂಥಗಳನ್ನೂ ಅನೇಕ ಸ್ತೋತ್ರಗಳನ್ನೂ ರಚಿಸಿರುವ ಈ ಮಹಾನುಭಾವರು ದಾರ್ಶನಿಕರು, ಗೃಹಸ್ಥರಾಗಿಯೇ ಮಹಾವಿರಕ್ತ ಭಗವದ್ಭಕ್ತರು, ಅದ್ವಿತೀಯ ವಿದ್ವಾಂಸರು ಆಗಿರುವುದಲ್ಲದೆ ಮಹಾಕವಿಗಳೂ ಕೂಡ. ಇವರು ಸಂಸ್ಕೃತವಲ್ಲದೆ ತಮಿಳಿನಲ್ಲೂ ಪ್ರಾಕೃತದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ಕೃತಿಗಳು ನೂರಕ್ಕೂ ಹೆಚ್ಚು. ಇವರ ಸಮಕಾಲೀನ ವಿದ್ವಾಂಸರು ಇವರ ಕುಶಾಗ್ರಪ್ರತಿಭೆ, ಇವರ ವಿದ್ವತ್ತಿನ ವಿಸ್ತಾರ ಅಗಾಧತೆ ಇವುಗಳಿಗೆ ಮಣಿದು ಇವರ “ಕವಿತಾರ್ಕಿಕಸಿಂಹ”, “ಸರ್ವತಂತ್ರಸ್ವತಂತ್ರ” ಎಂಬ ಬಿರುದುಗಳಿಗೆ ಮನ್ನಣೆಯಿತ್ತರು. ಇವರ ಹುಟ್ಟಿನ ಹೆಸರು “ವೆಂಕಟನಾಥ” ಎಂದಾದರೂ ಇವರನ್ನು “ನಿಗಮಾನ್ತಮಹಾದೇಶಿಕ” “ವೇದಾನ್ತಾಚಾರ್ಯ” ಎಂದೇ ಕರೆಯುವುದು ಸಂಪ್ರದಾಯವಾಯಿತು.

ಇವರ ಶ್ರೀಕೃಷ್ಣನ ಚರಿತೆಯನ್ನವಲಂಬಿಸಿದ ಯಾದವಾಭ್ಯುದಯ ಮಹಾಕಾವ್ಯದ ಘನತೆಗೆ ರಮಣೀಯತೆಗೆ ಕುವಲಯಾನಂದವೆಂಬ ಪ್ರಸಿದ್ಧ ಅಲಂಕಾರಶಾಸ್ತ್ರದ ಗ್ರಂಥವನ್ನು ರಚಿಸಿದ ಅದ್ವೈತಿಗಳಾದ ಅಪ್ಪಯ್ಯದೀಕ್ಷಿತರು ಈ ಕಾವ್ಯಕ್ಕೆ ವ್ಯಾಖ್ಯಾನವನ್ನು ರಚಿಸಿರುವುದೇ ನಿದರ್ಶನ. ಶ್ರೀರಂಗನಾಥರ ಪಾದುಕೆಗಳನ್ನು ಸ್ತುತಿಸುವ ಪಾದುಕಾಸಹಸ್ರವೆಂಬ ೧೦೦೮ ಶ್ಲೋಕಗಳ ಇವರ ಅಪೂರ್ವವಾದ ಕಾವ್ಯಕ್ಕೂ ಅಪ್ಪಯ್ಯದೀಕ್ಷಿತರು ವ್ಯಾಖ್ಯಾನ ಬರೆದಿರುತ್ತಾರೆ. ಕಾಳಿದಾಸನ ಮೇಘಸಂದೇಶವನ್ನು ಹೋಲುವ ಇವರ ಹಂಸಸಂದೇಶವೆಂಬ ಖಂಡಕಾವ್ಯದಲ್ಲಿ ವಿರಹಿ ಶ್ರೀರಾಮಚಂದ್ರನು ಸೀತಾದೇವಿಗೆ ಹಂಸವೊಂದರ ಮುಖೇನ ಕಳುಹಿಸಿದ ಸಂದೇಶವು ಹೃದಯಂಗಮವಾಗಿ ವರ್ಣಿತವಾಗಿದೆ. ವಿಶಿಷ್ಟಾದ್ವೈತತತ್ತ್ವನ್ನು ಬೋಧಿಸುವ ಇವರ ಸಂಕಲ್ಪಸೂರ್ಯೋದಯವೆಂಬ ಸುದೀರ್ಘವಾದ ನಾಟಕವೂ ಕೂಡ ಪ್ರಸಿದ್ಧವಾದುದು. ಪ್ರಕೃತ, ಇವರ ಸುಭಾಷಿತನೀವಿಯೂ ಕೂಡ ಮನೋಹರವಾದ ಸುಭಾಷಿತಗಳ ಖಂಡಕಾವ್ಯ. ಸಜ್ಜನರ ಬಗ್ಗೆ ಸಜ್ಜನರಿಗಾಗಿ ಸಜ್ಜನೋತ್ತಮರು ಬರೆದಿರುವ ಅಮೂಲ್ಯ ಕಾವ್ಯ.

ಈ ಕಾವ್ಯ ಸುಭಾಷಿತಗಳ ನೀವಿ. “ನೀವಿ” ಎಂದರೆ ಗಂಟು, ಹಣದಗಂಟು, ಥೈಲಿಯೆಂದು. ಸ್ತ್ರೀಯರು ಸೀರೆಗೆ ಸೊಂಟದಲ್ಲಿ ಹಾಕಿಕ್ಕೊಳ್ಳುವ ಗಂಟು ಕೂಡ ನೀವಿ. ಹಣದಗಂಟಿನ ಮೌಲ್ಯ ಗಂಟಿನ ಗಾತ್ರವನ್ನವಲಂಬಿಸಿರುವುದಿಲ್ಲ. ಹಣವನ್ನು ಪಡೆಯಲು ಗಂಟನ್ನು ಬಿಚ್ಚುವ ಪ್ರಯಾಸ ಮಾಡಬೇಕು. ಅದೇರೀತಿ ಸುಭಾಷಿತನೀವಿಯ ಅಂತರಾರ್ಥಗಳನ್ನು ಪಡೆಯಲು ಪ್ರಯಾಸ ಪಡಬೇಕು. ಓದುಗರಿಗೆ ಸರಸ್ವತಿಯು ಒಲಿದಿದ್ದರೇನೇ ಈ ಸುಭಾಷಿತನೀವಿಯ ಬಂಧಮೋಕ್ಷವು ಸಾಧ್ಯ ಎಂಬ ಅರ್ಥವೂ ಸ್ಫುರಿಸುತ್ತದೆ.

ಈ ಕಾವ್ಯದಲ್ಲಿ ೧೨ ಅಧ್ಯಾಯಗಳಿವೆ. ಅಧ್ಯಾಯವನ್ನು ಪದ್ಧತಿಯೆಂದು ಕರೆಯಲಾಗಿದೆ. ಒಂದೊಂದು ಪದ್ಧತಿಯಲ್ಲೂ ೧೨ ಶ್ಲೋಕಗಳಿವೆ, ಕಾವ್ಯದ ಅಂತ್ಯಶ್ಲೋಕವೂ ಸೇರಿ ಈ ಕಾವ್ಯದಲ್ಲಿ ಒಟ್ಟು ೧೪೫ ಶ್ಲೋಕಗಳು ಮಾತ್ರ. ಮೊದಲು ದುರ್ಗುಣಗಳನ್ನು, ದುರ್ಜನರನ್ನು ದೂರಮಾಡಿದರೇನೇ ಸದ್ಗುಣಗಳಿಗೆ, ಸಜ್ಜನರ ಸಂಗಕ್ಕೆ ಪಾತ್ರರಾಗಬಹುದು ಎಂಬುದನ್ನು ತೋರಿಸುವುದಕ್ಕಾಗಿ ಮೊದಲ ಐದು ಪದ್ಧತಿಗಳು ದುರ್ಗುಣಗಳ, ದುರ್ಜನರ ವೈಖರಿಯ ವೈವಿಧ್ಯತೆಗೆ ಮೀಸಲಾಗಿವೆ. ಮಿಕ್ಕ ಏಳು ಪದ್ಧತಿಗಳು ಸಜ್ಜನರ, ಸತ್ಕವಿಗಳ ಆಚಾರ, ವ್ಯವಹಾರಗಳನ್ನು ಅನೇಕ ದೃಷ್ಟಿಕೋಣಗಳಿಂದ ಪ್ರತಿಪಾದಿಸುತ್ತವೆ.

ಮೊದಲನೆಯ ಪದ್ಧತಿಯನ್ನು ಆರ್ಯಾವೃತ್ತದಲ್ಲಿ ರಚಿಸಲಾಗಿದೆ. ಉಳಿದೆಲ್ಲ ಪದ್ಧತಿಗಳು ಹೆಚ್ಚು ಬಳಕೆಯ ಅನುಷ್ಟುಪ್ ಛಂದಸ್ಸಿನಲ್ಲೇ ರಚಿತವಾಗಿವೆ. ಎಲ್ಲ ಪದ್ಧತಿಗಳ ನಿಗಮನಶ್ಲೋಕಗಳು ವೃತ್ತಗಳಾಗಿವೆ. ಕ್ಲಿಷ್ಟಪದಗಳಿಲ್ಲದೆ ಲಲಿತವಾದ ಶೈಲಿಯಲ್ಲಿ ರಚಿತವಾಗಿದ್ದರೂ ಶ್ಲೋಕಗಳ ಭಾವಾರ್ಥವನ್ನು ಗ್ರಹಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಎರಡು ಕಾರಣಗಳು. ಒಂದು, ಶ್ಲೇಷೆಯ ಪ್ರಯೋಗ. ಎರಡನೆಯದು ಭಾವವನ್ನು ಅನ್ಯೋಕ್ತಿಯ ಮೂಲಕ ತಿಳಿಸುವ ವಿಧಾನ.

ಪ್ರಾಯಶಃ ಶ್ಲೇಷೆಯ ಪ್ರಯೋಗಬಾಹುಳ್ಯ ಸಂಸ್ಕೃತ ವಾಙ್ಮಯದಲ್ಲಿ ಇರುವಂತೆ ಮತ್ತಾವ ಭಾಷೆಯಲ್ಲಿಯೂ ಇಲ್ಲ. ಇದಕ್ಕೆ ಶ್ಲೇಷೆ ಸಂಸ್ಕೃತ ಭಾಷೆಯ ಅನ್ತರ್ಗುಣವಾಗಿರುವುದೇ ಕಾರಣ. ಸಂಸ್ಕೃತದಲ್ಲಿ ಅನೇಕ ಶಬ್ದಗಳಿಗೆ ಒಂದಕ್ಕಿಂತ ಹೆಚ್ಚು ಅರ್ಥವುಂಟು. ಅಮರಕೋಶದಲ್ಲಿ ನಾನಾರ್ಥವರ್ಗದಲ್ಲಿ ಈ ಶಬ್ದಗಳನ್ನೂ ಈ ಶಬ್ದಗಳ ಎಲ್ಲ ಅರ್ಥಗಳನ್ನೂ ವಿವರವಾಗಿ ಕೊಡಲಾಗಿದೆ. ಅಷ್ಟೇ ಅಲ್ಲದೆ, ಸಮಾಸ ಸಂಧಿ ಪ್ರಕ್ರಿಯೆಗಳಿಂದ ಗುಂಫಿತವಾದ ಪದಸಮೂಹವನ್ನು ಅನೇಕವಿಧವಾಗಿ ಒಡೆಯಬಹುದು. ಬೇರೆ ಬೇರೆ ವಿಧದಲ್ಲಿ ಮಾಡಿದ ಪದವಿಭಾಗ ಬೇರೆ ಬೇರೆ ಅರ್ಥವನ್ನು ಕೊಡುವ ಸಾಧ್ಯತೆ ಇದೆ. ಶ್ಲೇಷೆಯ ವೈಖರಿ ಈ ಕಿರು ಕಾವ್ಯದಲ್ಲಿ ಹೇರಳವಾಗಿ ದೊರಕುತ್ತದೆ. ವಾಲ್ಮೀಕಿ, ಕಾಳಿದಾಸ ಮುಂತಾದ ಪ್ರಾಚೀನ ಕವಿಗಳಲ್ಲಿ ಶ್ಲೇಷೆಯ ಪ್ರಯೋಗವು ಅಲ್ಲಿ ಇಲ್ಲಿ ಕಂಡು ಬಂದರೂ, ಹೆಚ್ಚಾಗಿ ಭಾರವಿ, ಮಾಘ, ಬಾಣ, ಶ್ರೀಹರ್ಷ ಮುಂತಾದ ಮಧ್ಯಕಾಲೀನ ಕವಿಗಳಲ್ಲಿ ಕಾಣಬರುತ್ತದೆ. ಶ್ಲೇಷೆಯನ್ನು ಉಪಯೋಗಿಸಿಕ್ಕೊಂಡು ಉಚಿತವಾದ ಸಮರ್ಪಕವಾದ ಬೇರೆ ಬೇರೆ ಅರ್ಥಗಳು ಬರುವಂತೆ ಶ್ಲೋಕಗಳನ್ನು ರಚಿಸುವುದು ಭಾಷೆಯಲ್ಲಿ ಪೂರ್ಣಪಾಂಡಿತ್ಯವಿಲ್ಲದೆ ಇದ್ದವರಿಗೆ ದುಸ್ಸಾಧ್ಯ. ಅದರಲ್ಲೂ, ಒಂದು ಅರ್ಥ ಉಪಮಾನಕ್ಕೆ ಅನ್ವಯವಾಗುವಂತೆಯೂ, ಮತ್ತೊಂದು ಅರ್ಥ ಉಪಮೇಯಕ್ಕೆ ಅನ್ವಯವಾಗುವಂತೆಯೂ ಶ್ಲೋಕವನ್ನು ರಚಿಸುವುದು ಪಂಡಿತರಿಗೂ ಶ್ರಮಸಾಧ್ಯ. ಶ್ಲೇಷೆಯ ಕಸರತ್ತಿನಲ್ಲಿ ಕೆಲವುಸಲ ಅರ್ಥವು ಕುಂಠಿತವಾಗುವುದೂ ಉಂಟು. ಅದಕ್ಕಾಗಿಯೇ ಕೆಲವು ಕಾವ್ಯಮೀಮಾಂಸಕರು ಶ್ಲೇಷೆಗೆ ಹೆಚ್ಚು ಬೆಲೆ ಕೊಡುವುದಿಲ್ಲ.

ಶ್ಲೇಷೆಯಿರುವ ಪದಗಳೆಲ್ಲವನ್ನೂ ಭಾಷಾಂತರಿಸದೆ ಹಾಗೆಯೇ ಇನ್ನೊಂದು ಭಾಷೆಯಲ್ಲಿ ಅಳವಡಿಸಿಕ್ಕೊಳ್ಳುವ ಸಾಧ್ಯತೆಯಿದ್ದರೆ ಮಾತ್ರ ಶ್ಲೇಷೆಯ ಚಮತ್ಕಾರವನ್ನು ಭಾಷಾಂತರದಲ್ಲಿ ಉಳಿಸಿಕ್ಕೊಳ್ಳಬಹುದು. ವಿಶೇಷ ಸಂದರ್ಭಗಳಲ್ಲಿ ಇದು ಸಾಧ್ಯವಾಗಬಹುದು. ಸಾಮಾನ್ಯವಾಗಿ ಮೂಲದಲ್ಲಿ ಶ್ಲೇಷೆಯಿದ್ದರೆ ಅದನ್ನು ಶ್ಲೇಷೆಯ ಚಮತ್ಕಾರದ ಸಹಿತ ಭಾಷಾಂತರಿಸುವುದು ಸಾಧ್ಯವಿಲ್ಲವೆಂದೇ ಹೇಳಬಹುದು. ಮೂರು ಪರಿಮಾಣ (dimension)ದ ಕಟ್ಟಡವೊಂದನ್ನು ಎರಡು ಪರಿಮಾಣದ ಕಾಗದದ ಪುಟದಮೇಲೆ ಪ್ರತಿನಿಧಿಸುವುದಕ್ಕಾಗಿ plan, elevation and sideview ಎಂಬ ಮೂರು ಚಿತ್ರಗಳಾಗಿ ಒಡೆಯುತ್ತಾರೆ. ಅದೇ ರೀತಿ ಶ್ಲೇಷೆಯಿರುವ ಮೂಲಕ್ಕೆ ಬೇರೆ ಭಾಷೆಯಲ್ಲಿ ಎರಡು ಅರ್ಥಗಳನ್ನು ಬೇರೆ ಬೇರೆ ಬರೆಯಬೇಕಾಗಿ ಬರುತ್ತದೆ. ಶ್ಲೇಷೆಯ ಚಮತ್ಕಾರ ಭಾಷಾಂತರದಲ್ಲಿ ಮಾಯವಾಗುವುದರಿಂದ ಮೂಲ ಸುವರ್ಣಮಯವಾಗಿದ್ದರೆ ಭಾಷಾಂತರ ಸೀಸಮಯವಾಗಿ ಕಂಡೀತು. ಇಷ್ಟಾದರೂ ಎರಡೂ ಅರ್ಥಗಳನ್ನು ಓದಿಕ್ಕೊಂಡು ಸುಂದರವಾದ ಮೂಲ ಮೂರ್ತಿಯ ನೆರಳನ್ನಾದರೂ ನಾವು ನೋಡಬಹುದು.

ಮೇಲೆ ಹೇಳಿದಂತೆ ಈ ಕಾವ್ಯದಲ್ಲಿ ಅನ್ಯೋಕ್ತಿಯ ಪ್ರಯೋಗವಿದೆ. ತಿಳಿಸಬೇಕಾದ ನೀತಿಯನ್ನು ನೇರವಾಗಿ ಉಪದೇಶಿಸದೆ ಮತ್ತಾವುದೋ ಪ್ರಾಕೃತಿಕ ಸಂದರ್ಭವನ್ನು ವರ್ಣಿಸಿ ವ್ಯಂಗ್ಯವಾಗಿ ಸೂಚಿಸುತ್ತಾರೆ. ಕನ್ನಡ ಭಾಷೆಯಲ್ಲಿ ಅನೇಕ ಗಾದೆಗಳು ಅನ್ಯೋಕ್ತಿಗಳಾಗಿವೆ. ಉದಾಹರಣೆಗೆ, “ಹಿತ್ತಲ ಗಿಡ ಮದ್ದಲ್ಲ”, “ನಾಯಿ ಬೊಗಳಿದರೆ ದೇವಲೋಕ ಹಾಳೇ?” ಎಂಬ ಗಾದೆಗಳಲ್ಲಿ ಬರಿಯ ವಾಚ್ಯಾರ್ಥದಲ್ಲಿ ಎನೂ ಹುರುಳಿಲ್ಲ. ಈ ಗಾದೆಗಳನ್ನು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕೆಂಬುದು ಯಾರಿಗೆ ತಾನೇ ತಿಳಿಯದು? ಇದೇ ಮಾದರಿಯಲ್ಲಿ ಸಂಸ್ಕೃತದಲ್ಲಿ ರಚಿಸಿರುವ ಶ್ಲೋಕವನ್ನು ಅನ್ಯೋಕ್ತಿ ಅಥವಾ ಅನ್ಯಾಪದೇಶ ಎನ್ನುತ್ತಾರೆ. ಸಂಸ್ಕೃತದ ಮಧ್ಯಕಾಲೀನ ಕವಿಗಳನೇಕರು ನೂರು ಅನ್ಯೋಕ್ತಿಗಳನ್ನು ರಚಿಸಿ ಅನ್ಯೋಕ್ತಿಶತಕವೆಂಬ ಹೆಸರಿನಲ್ಲಿ ಕೃತಿಗಳನ್ನು ರಚಿಸಿದ್ದಾರೆ. ದೇಶಿಕರು ಈ ಕೃತಿಯಲ್ಲಿ ಶ್ಲೇಷೆಯನ್ನೂ ಅನ್ಯೋಕ್ತಿಯನ್ನೂ ಹೆಣೆದು ಒಂದು ವಾಚ್ಯಾರ್ಥ ಅನ್ಯೋಕ್ತಿಯಾದರೆ, ಇನ್ನೊಂದು ವಿವಕ್ಷಿತ ನೀತಿಬೋಧಕ ಅರ್ಥವಾಗಿರುವಂತೆ ಶ್ಲೋಕಗಳನ್ನು ರಚಿಸಿದ್ದಾರೆ. ಕೆಲವು ಶ್ಲೋಕಗಳು ತೋರಿಕೆಗೆ ಒಗಟೆಯಂತಿದ್ದು ಕೊಂಚ ಶ್ರಮಪಟ್ಟು ಶ್ಲೋಕದಲ್ಲಿರುವ ಶ್ಲೇಷೆಯನ್ನು ಅರಿತುಕ್ಕೊಂಡು ಒಗಟೆಯನ್ನು ಬಿಡಿಸಿಕ್ಕೊಳ್ಳಬೇಕಾಗುತ್ತದೆ.

ಸುಭಾಷಿತನೀವಿಗೆ ಹಲವು ವ್ಯಾಖ್ಯಾನಗಳಿವೆ. ಶ್ರೀನಿವಾಸಾಚಾರ್ಯರೆಂಬುವರು “ರತ್ನಪೇಟಿಕಾ” ಎಂಬ ವಿಸ್ತಾರವಾದ ವ್ಯಾಖ್ಯಾನವನ್ನು ಬರೆದಿರುತ್ತಾರೆ. ಈ ವ್ಯಾಖ್ಯಾನ ಈಗ ದೊರೆತಿರುವ ಇನ್ನುಳಿದ ವ್ಯಾಖ್ಯಾನಗಳಿಂತ ಹಳೆಯದು. ನರಸಿಂಹಾಚಾರ್ಯರೆಂಬುವರು ಮತ್ತೊಂದು ವ್ಯಾಖ್ಯಾನವನ್ನು ಬರೆದಿರುವರೆಂದು ತಿಳಿದುಬಂದಿದೆ. ಶ್ರೀನಿವಾಸತಾತಾಚಾರ್ಯರೆಂಬುವರು ಬಹಳ ವಿಸ್ತೃತವಾದ “ಹೃದ್ಯಾರ್ಥದೀಪಿಕಾ” ಎಂಬ ವ್ಯಾಖ್ಯಾನವನ್ನು ಬರೆಯುವ ಪ್ರಯತ್ನ ಮಾಡಿ, ಈ ವ್ಯಾಖ್ಯಾನ ಮೊದಲ ಮೂರು ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆ. ವಾತ್ಸ್ಯ ವರದಾಚಾರ್ಯರೆಂಬುವರು “ನಾನಾರ್ಥದರ್ಶಿನೀ” ಎಂಬ ವ್ಯಾಖ್ಯಾನವನ್ನು ರಚಿಸಿ, ತಮಿಳಿನಲ್ಲಿಯೂ ಭಾವಾರ್ಥವನ್ನು ಕೊಟ್ಟಿರುತ್ತಾರೆ. ಸಂಸ್ಕೃತಜ್ಞರಿಗೆ ಚಿರಪರಿಚಿತರಾದ ಡಾ. ಕೆ. ಎಸ್. ನಾಗರಾಜನ್ ರವರ ಇಂಗ್ಲಿಷ್ ಅನುವಾದದಿಂದ ಕೂಡಿದ ಪುಸ್ತಕವೊಂದು ಮುದ್ರಿತವಾಗಿದೆ. ಕನ್ನಡದಲ್ಲಿ ಕೂಡ ಅನುವಾದದ ರಚನೆಯಾಗಿ ಮುದ್ರಿತವಾಗಿದ್ದಿರಬಹುದು.

ಪ್ರಕೃತ ಈ ನನ್ನ ಪ್ರಯತ್ನದಲ್ಲಿ ಪ್ರತಿಯೊಂದು ಶ್ಲೋಕಕ್ಕೂ ಕನ್ನಡದಲ್ಲಿ ಭಾವಾರ್ಥವನ್ನು ಕೊಡಲಾಗಿದೆ. ಈ ಕೃತಿಯ ಹಲವಾರು ಶ್ಲೋಕಗಳಿಗೆ ಪಾಠಾಂತರಗಳಿವೆ. ಇಲ್ಲಿ ಸೂಕ್ತವೆಂದು ತೋರಿದ ಒಂದೇ ಒಂದು ಪಾಠವನ್ನು ಕೊಟ್ಟು ಅದರ ಭಾವಾರ್ಥವನ್ನು ಕೊಡಲಾಗಿದೆ. ಶ್ಲೇಷೆಯಿದ್ದ ಶ್ಲೋಕಗಳಿಗೆ, ಅನ್ಯೋಕ್ತಿಯಿದ್ದರೆ ಎರಡು ಅರ್ಥಗಳನ್ನೂ ಬೇರೆ ಬೇರೆ ಕೊಡಲಾಗಿದೆ. ಮೊದಲನೆಯ ಅರ್ಥ ತೋರಿಕೆಯ ಅನ್ಯೋಕ್ತಿ, ಎರಡನೆಯದು ನೀತಿಬೋಧಕ ಅರ್ಥ. ಮೇಲೆ ಹೇಳಿದ ವ್ಯಾಖ್ಯಾನಗಳಲ್ಲಿ ಅನೇಕ ಶ್ಲೋಕಗಳಿಗೆ ನಾಲ್ಕಾರು ಅರ್ಥಗಳನ್ನು ಕೊಡಲಾಗಿದೆ. ಉದಾಹರಣೆಗೆ, ಹೃದ್ಯಾರ್ಥದೀಪಿಕೆಯಲ್ಲಿ ಒಂದು ಶ್ಲೋಕಕ್ಕೆ (೨.೧೦) ೧೫ ಅರ್ಥಗಳನ್ನು ಕೊಟ್ಟಿದ್ದಾರೆ. ಈ ನನ್ನ ಕಿರುಪ್ರಯತ್ನದಲ್ಲಿ ಆ ಎಲ್ಲ ಅರ್ಥಗಳನ್ನೂ ಕೊಡುವ ಪ್ರಯಾಸಕ್ಕೆ ಕೈಹಾಕಿಲ್ಲ. ಭಾವಾರ್ಥವು ಶ್ಲೋಕದ ಅನ್ವಯಾರ್ಥಕ್ಕೆ ಕನ್ನಡ ವಾಕ್ಯಗ್ರಥನದ ಮರ್ಯಾದೆಯನ್ನು ಮೀರದೆ ಆದಷ್ಟು ಸಮೀಪವಾಗಿರುವಂತೆ ಭಾವಾರ್ಥವನ್ನು ಬರೆಯಲು ಪ್ರಯತ್ನಿಸಿದ್ದೇನೆ. ಭಾವಾರ್ಥದ ಕೆಳಗೆ ಕೊಟ್ಟಿರುವ ಟಿಪ್ಪಣಿ ಭಾವಾರ್ಥವನ್ನು ಸ್ಪಷ್ಟಪಡಿಸುವುದಕ್ಕಾಗಿ ಉಪಯುಕ್ತವಾದ ವಿಷಯಗಳ ಸಂಗ್ರಹ. ಸಂಸ್ಕೃತದಲ್ಲಿ ಅಭಿರುಚಿಯೂ ಸಾಕಷ್ಟು ಜ್ಞಾನವೂ ಇರುವವರಿಗೆ ಅನುಕೂಲವಾಗಲೆಂದು, ಶ್ಲೇಷೆಯಿರುವ ಪದಗಳಿಗೆ ಅವುಗಳ ಉಚಿತ ಅರ್ಥಗಳನ್ನೂ ಟಿಪ್ಪಣಿಯಲ್ಲಿ ಕೊಡಲಾಗಿದೆ. ನನ್ನ ಈ ಪ್ರಯತ್ನಕ್ಕೆ ಮುಖ್ಯವಾದ ಅಧಾರ ಮೇಲೆ ಹೇಳಿದ “ಹೃದ್ಯಾರ್ಥದೀಪಿಕಾ” ಮತ್ತು “ನಾನಾರ್ಥದರ್ಶಿನೀ” ಎಂಬ ಎರಡು ವ್ಯಾಖ್ಯಾನಗಳನ್ನೂ ಒಳಗೊಂಡ ಉಭಯವೇದಾನ್ತಗ್ರನ್ಥಮಾಲೆಯಲ್ಲಿ ೧೯೭೧ರಲ್ಲಿ ಪ್ರಕಟವಾಗಿರುವ “ಸುಭಾಷಿತನೀವೀ” ಪುಸ್ತಕ.

ಈ ಪ್ರಯತ್ನಕ್ಕೆ ನಾನು ಹೇಗೆ ಕೈಹಾಕಿದೆ ಎಂಬ ಬಗ್ಗೆ ಕೆಲವು ವಾಕ್ಯಗಳು ಅನುಚಿತವಾಗಲಾರದು. ನನ್ನ ತಂದೆ ವಿದ್ಯಾವಿನಯಸಂಪನ್ನರೂ ಭಗವದ್ಭಕ್ತರೂ ಆದ ಕೀರ್ತಿಶೇಷ ಗೊರೂರು ಶೆಲ್ವಪಿಳ್ಳೈ ಅವರಿಗೆ ಅವರ ಮಧ್ಯವಯಸ್ಸಿನಲ್ಲಿ ಯಾದೃಚ್ಛಿಕವಾಗಿ ತಿರುವಹೀಂದ್ರಪುರದಲ್ಲಿ ಜರುಗುತ್ತಿದ್ದ ದೇಶಿಕತಿರುನಕ್ಷತ್ರದ ಕೈಂಕರ್ಯಗಳನ್ನು ಸಂದರ್ಶಿಸುವ ಸುಯೋಗ ಒದಗಿತು. ಅಲ್ಲಿಯ ಉತ್ಸವಗಳ ವೈಭವಗಳನ್ನೂ ನೆರೆದಿದ್ದ ಶ್ರೀವೈಷ್ಣವರ ಶ್ರದ್ಧೆ ಭಕ್ತಿಭಾವಗಳನ್ನೂ ಕಂಡು ಆಶ್ಚರ್ಯ ಚಕಿತರಾದರು. ಹೆಚ್ಚಾಗಿ, ತಮ್ಮ ಸಂಸ್ಕೃತ ಡಾಕ್ಟರೇಟಿಗಾಗಿ ವೇದಾನ್ತದೇಶಿಕರ ಜೀವನ ಮತ್ತು ಕೃತಿಗಳನ್ನೇ ವಸ್ತುವನ್ನಾಗಿ ಆರಿಸಿಕ್ಕೊಂಡು, ಇದಕ್ಕಾಗಿ ಸ್ವತಃ ವೇದಾನ್ತದೇಶಿಕರು ಜೀವಿಸಿದ್ದ ಸ್ಥಳಗಳನ್ನು ಸಂದರ್ಶಿಸಲೂ, ಶ್ರೀವೈಷ್ಣವಧರ್ಮದ ವಾತಾವರಣವನ್ನು ಅನುಭವಿಸಲೂ, ತಮಿಳುನಾಡಿನ ವಿದ್ವಾಂಸರಲ್ಲಿ ದೇಶಿಕಪಂಥದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕ್ಕೊಳ್ಳುವುದಕ್ಕಾಗಿಯೂ ಅಲ್ಲಿ ಬಂದಿದ್ದ ಸತ್ಯವ್ರತಸಿಂಗ್ ಎಂಬ ಒಬ್ಬ ಯುವಕ ಉತ್ತರದೇಶೀಯರನ್ನು ಅಲ್ಲಿ ಭೇಟಿ ಮಾಡಿದರು. ಸತ್ಯವ್ರತಸಿಂಗ್ ಅವರ ಸಂಸ್ಕೃತದಲ್ಲಿ ನಿರರ್ಗಳವಾಗಿ ಸಂಭಾಷಣೆಯನ್ನು ಮಾಡುವ ವೈಖರಿಗೆ ಬೆರಗಾದರು. (ಡಾ. ಸತ್ಯವ್ರತಸಿಂಗ್ ಅವರು ವೇದಾನ್ತದೇಶಿಕರ ಜೀವನ ಮತ್ತು ಅವರ ದರ್ಶನದ ಬಗ್ಗೆ ಇಂಗ್ಲಿಷಿನಲ್ಲಿ ಒಂದು ಉದ್ಗ್ರಂಥವನ್ನು ಬರೆದಿದ್ದಾರೆ.) ಅಲ್ಲಿಯವರಿಗೆ ನಾಮಮಾತ್ರೇಣ ಶ್ರೀವೈಷ್ಣವರಾಗಿದ್ದ ನಮ್ಮ ತಂದೆ ಸಂಸ್ಕೃತವನ್ನು ಕಲಿಯಬೇಕೆಂದೂ ದೇಶಿಕರ ಗ್ರಂಥಗಳ ಪರಿಚಯಮಾಡಿಕ್ಕೊಳ್ಳಬೇಕೆಂದೂ ಸಂಕಲ್ಪಮಾಡಿದರು. ಆಪ್ತರೂ ಬಂಧುಗಳೂ ಆದ ಹೆಸರಾಂತ ಗಾಂಧೀವಾದಿ ಕೀರ್ತಿಶೇಷ ವಿದ್ವಾನ್ ಜಿ.ಕೆ. ನರಸಿಂಹಾಚಾರ್ ಅವರಲ್ಲಿಯೂ ಗೊರೂರಿನ ಸ್ಕೂಲಿಗೆ ಉಪಾಧ್ಯಾಯರಾಗಿ ಬಂದಿದ್ದ ಕೀರ್ತಿಶೇಷ ವಿದ್ವಾನ್ ಎಚ್. ವಿ. ನಾರಾಯಣಶಾಸ್ತ್ರಿ (ಇವರು ಬೆಂಗಳೂರಿನ ಸಂಸ್ಕೃತಕಾಲೇಜೀನ ಪ್ರಾಧ್ಯಾಪಕರಾಗಿ ನಿವೃತ್ತರಾದರು) ಯವರಲ್ಲಿಯೂ ಸಂಸ್ಕೃತವನ್ನು ವ್ಯಾಸಂಗ ಮಾಡಿದರು. ತಮ್ಮ ಅಧ್ಯಯನಕ್ಕಾಗಿ ಸಂಸ್ಕೃತಗ್ರಂಥಗಳನ್ನೂ ಶ್ರೀವೈಷ್ಣವಮತಗ್ರಂಥಗಳನ್ನೂ ತರಿಸಿಕ್ಕೊ<ಡು ಒಂದು ಚಿಕ್ಕ ಪುಸ್ತಕಭಾಂಡಾರವನ್ನೇ ಮಾಡಿಕ್ಕೊಂಡರು. ತದನಂತರ ಗೊರೂರಿನಲ್ಲಿ ವಾಸಿಸಲು ಬಂದ ಉಭಯವೇದಾಂತಿ ಕೀರ್ತಿಶೇಷ ವಿದ್ವಾನ್ ನುಗ್ಗೆಹಳ್ಳಿ ರಾಮಸ್ವಾಮಿ ಅಯ್ಯಂಗಾರ್ಯರಲ್ಲಿ ಅಧ್ಯಯನ ನಡೆಸಿ ಶ್ರೀವೈಷ್ಣವ ಮತಗ್ರಂಥಗಳ ಮತ್ತು ದೇಶಿಕರ ಗ್ರಂಥಗಳ ಪರಿಚಯವನ್ನು ಮಾಡಿಕ್ಕೊಂಡರು. ಇಲ್ಲಿ ಸ್ಮರಿಸಿರುವ ವಿದ್ವಾಂಸರೆಲ್ಲರೂ ಪ್ರಾತಃಸ್ಮರಣೀಯರು.

ಚಿಕ್ಕ ವಯಸ್ಸಿನಲ್ಲೇ ಸಂಸ್ಕೃತವನ್ನು ಕಲಿಯದಿದ್ದಕ್ಕಾಗಿ ವಿಷಾದಿಸುತ್ತಿದ್ದ ನಮ್ಮ ತಂದೆ ನನ್ನನ್ನು ಚಿಕ್ಕವಯಸ್ಸಿನಲ್ಲೇ ಸಂಸ್ಕೃತವನ್ನು ಕಲಿಯಲು ಪ್ರೋತ್ಸಾಹಿಸಿದರು. ಇದರ ಫಲವಾಗಿ ನಾನು ನಾರಾಯಣಶಾಸ್ತ್ರಿಯವರಲ್ಲಿಯೂ, ತದನಂತರ ರಾಮಸ್ವಾಮಿ ಅಯ್ಯಂಗಾರ್ಯರಲ್ಲಿಯೂ ಸಂಸ್ಕೃತ ಪಾಠವನ್ನು ಹೇಳಿಸಿಕ್ಕೊಂಡೆ. ನಾನು ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ರಾಮಸ್ವಾಮಿ ಅಯ್ಯಂಗಾರ್ಯರು ನನಗೆ ಸುಭಾಷಿತನೀವಿಯ ಪಾಠ ಹೇಳಿದರು. ಆ ವಯಸ್ಸಿನಲ್ಲಿ ನನಗೆ ಅವರು ಹೇಳಿಕೊಟ್ಟುದರಲ್ಲಿ ಹೆಚ್ಚು ತಲೆಗೆ ಹೋದ ಹಾಗೆ ನೆನಪಿಲ್ಲ. ಆದರೂ ಆಗ ಉರುಹೊಡೆದಿದ್ದ ಶ್ಲೋಕಗಳಲ್ಲಿ ಕೆಲವು ಈಗಲೂ ನೆನಪಿನಲ್ಲಿವೆ. ನಾನು ಸರಕಾರೀ ಕೆಲಸದಿಂದ ನಿವೃತ್ತನಾದ ಮೇಲೆ ತಂದೆಯವರ ಪುಸ್ತಕಭಂಡಾರದಲ್ಲಿ ದೊರೆತ ಸುಭಾಷಿತನೀವಿಯೇ ಈ ಪ್ರಯತ್ನಕ್ಕೆ ಪ್ರಚೋದಕ.

ಇತ್ತೀಚೆಗೆ ಮೇಲುಕೋಟೆಯಲ್ಲಿರುವ “Academy of Sanskrit Research” ಸಂಸ್ಥೆಯ ಡೈರಕ್ಟರ್ ಆಗಿರುವ ಫ್ರೊಫ಼ೆಸರ್ ವೀರನಾರಾಯಣ ಪಾಂಡುರಂಗಿಯವರ ಪರಿಚಯವು ನನ್ನ ಸುಯೋಗದಿಂದ ನನಗೆ ಒದಗಿತು. ಅವರಿಗೆ ಈ ಮೇಲ್ ಮೂಲಕ ನಾನು ಬರೆದಿದ್ದ ಭಾವಾರ್ಥ,ಟಿಪ್ಪಣಿಗಳನ್ನು ಕೂಡಿದ ಸುಭಾಷಿತನೀವಿಯ ಕರಡು ಪ್ರತಿಯನ್ನು ಕಳುಹಿಸಿಕೊಟ್ಟು ಸಮಯ ಒದಗಿದರೆ ಓದಬಹುದೆಂದು ಸೂಚಿಸಿದೆ. ನನ್ನ ಸೌಭಾಗ್ಯದಿಂದ ಅವರಿಗೆ ಆ ಪ್ರತಿಯನ್ನು ಓದಲು ಸಮಯ ಒದಗಿತು. ಓದಿದ್ದಲ್ಲದೆ ತಮ್ಮ ಮೆಚ್ಚುಗೆಯನ್ನೂ ವ್ಯಕ್ತಪಡಿಸಿ ಇದನ್ನು ಮೇಲುಕೋಟೆ ಅಕಡೆಮಿಯು ನನ್ನ ಒಪ್ಪಿಗೆಯಿದ್ದರೆ ಪ್ರಕಾಶಿಸಲು ಸಿದ್ಧವಿದೆಯೆಂದೂ ತಿಳಿಸಿದರು. ರೋಗಿಯು ಬಯಸುತ್ತಿದ್ದ ಹಾಲನ್ನವನ್ನೇ ವೈದ್ಯರು ಸಲಹೆಮಾಡಿದಂತೆ ಆಯಿತು. ವಿಶಿಷ್ಟಾದ್ವೈತ ದರ್ಶನಕ್ಕೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ಅಮೂಲ್ಯ ಸೇವೆಮಾಡುತ್ತಿರುವ ಮೇಲುಕೋಟೆ ಸಂಸ್ಥೆಯು ಹೀಗೆ ನನ್ನ ಕಿರುಪ್ರಯತ್ನಕ್ಕೆ ಮನ್ನಣೆ ಕೊಟ್ಟಿರುವುದು ನನ್ನ ಸುಕೃತಫಲವೇ ಸರಿ. ಮೇಲುಕೋಟೆಯ Academy of Sanskrit Research ಸಂಸ್ಥೆಗೂ ಸಂಸ್ಥೆಯ ಡೈರಕ್ಟರ್ ಆಗಿರುವ ಪ್ರೊಫ಼ೆಸರ್ ವೀರನಾರಾಯಣ ಪಾಂಡುರಂಗಿಯವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

ಶ್ರೀಕೃಷ್ಣಾರ್ಪಣಮಸ್ತು.
ಇತಿ ಸಜ್ಜನವಿಧೇಯ,
ಜಿ ಎಸ್ ಶ್ರೀನಿವಾಸಮೂರ್ತಿ
[murthygss@gmail.com]

ನನ್ನ ಬಾಲ್ಯದಲ್ಲಿ ನನ್ನ ಸಂಸ್ಕೃತ ಅಧ್ಯಯನದ ಅಂಗವಾಗಿ
ನನಗೆ ಸುಭಾಷಿತನೀವಿಯನ್ನು ಅಧ್ಯಾಪಿಸಿದ
ಕೀರ್ತಿಶೇಷ ವಿದ್ವಾನ್ ನುಗ್ಗೆಹಳ್ಳಿ ರಾಮಸ್ವಾಮಿ ಅಯ್ಯಂಗಾರ್ಯರ ನೆನಪಿಗೆ

ಶ್ರೀಮತೇ ರಾಮಾನುಜಾಯ ನಮಃ

श्रीमान् वेंकटनाथार्यः कवितार्किककेसरी।
वेदान्ताचार्यवर्यो मे सन्निधत्तां सदा हृदि॥

ಸುಭಾಷಿತಗಳ ಗಂಟು ಸುಭಾಷಿತನೀವೀ. ಈ ಕಿರುಕಾವ್ಯವನ್ನು ನಿಗಮಾನ್ತದೇಶಿಕರು ರಾಜಮಹೇಂದ್ರಿಯ ರಾಜನಾದ ಶಿಂಗ ಭೂಪಾಲನಿಗೆ ಅವನು ದೇಶಿಕರಬಳಿ ಕಳುಹಿಸಿಕೊಟ್ಟ ವೈಷ್ಣವರಜೊತೆಯಲ್ಲಿ ಕಳುಹಿಸಿಕೊಟ್ಟರೆಂದು ವ್ಯಾಖ್ಯಾನಕಾರರು ಬರೆದಿದ್ದಾರೆ. ಈ ಕಾವ್ಯದಲ್ಲಿ ಹನ್ನೆರಡು ಪದ್ಧತಿಗಳು ಇವೆ. ಪದ್ಧತಿಯೆಂದರೆ ಮಾರ್ಗ ಅಥವಾ ಸಾಲು ಎಂದು. ಸಂಸ್ಕೃತಕೃತಿಗಳಲ್ಲಿ ಅಧ್ಯಾಯಗಳನ್ನು ಪದ್ಧತಿಯೆಂದು ಕರೆಯುವುದುಂಟು. ಪ್ರತಿ ಪದ್ಧತಿಯಲ್ಲೂ ಹನ್ನೆರಡು ಶ್ಲೋಕಗಳಿವೆ. ಒಟ್ಟು ಈ ಕಿರು ಕಾವ್ಯದಲ್ಲಿ ೧೪೪ ಶ್ಲೋಕಗಳು ಮಾತ್ರ. ಕಾವ್ಯದ ಎಲ್ಲ ಶ್ಲೋಕಗಳೂ ನೀತಿಬೊಧಕಗಳೇ. ಮೊದಲು ಐದು ಪದ್ಧತಿಗಳಲ್ಲಿ ದುರ್ವೃತ್ತಿ ದುರ್ಗುಣಗಳನ್ನು ವಿವರಿಸಲಾಗಿದೆ. ಉಳಿದ ಏಳು ಪದ್ಧತಿಗಳು ಸದ್ವೃತ್ತಿ ಸುಗುಣಗಳ ಪ್ರಶಂಸೆಗೆ ಮೀಸಲು.