शशिकिरण-परिचयः

ಶತಾವಧಾನಿ ಡಾ|| ಆರ್. ಗಣೇಶರ ’ಛಂದೋವಿವೇಕ’ಕೃತಿಪರಿಚಯ

  • ಬಿ. ಎನ್. ಶಶಿಕಿರಣ್

ಛಂದೋವಿವೇಕ ಎಂಬ ಅದ್ಭುತವಾದ ಕೃತಿಯನ್ನು ಪರಿಚಯಿಸುವುದು ಗುರುತರವಾದ ಬಾಧ್ಯತೆಯಾದರೂ, ಇದರಲ್ಲಿ ನನ್ನ ವೈಯಕ್ತಿಕ ಧನ್ಯತೆಯೂ ಇದೆ. ಕಾರಣ, ಇಲ್ಲಿ ನೆರೆದಿರುವ ಮತ್ತು ಸ್ಥಳಾಂತರಗಳಿಂದ ವೀಕ್ಷಿಸುತ್ತಿರುವರಲ್ಲಿ, ಭಾರತೀಯಸಂಸ್ಕೃತಿ-ಸಾಹಿತ್ಯ ಮತ್ತು ಅಲಂಕಾರಶಾಸ್ತ್ರವೇ ಮುಂತಾದ ವಿದ್ಯೆಗಳಲ್ಲಿ ಆಸಕ್ತಿ, ಕುತೂಹಲ, ಕೃಷಿ ಮಾಡಲು ಪ್ರೇರಣೆಯುಂಟಾಗಿರುವುದು ಶತಾವಧಾನಿ ಡಾ|| ರಾ. ಗಣೇಶರಿಂದ. ಅವರೇ ಈ ಕೃತಿಯ ರಚಯಿತರು. ನಮ್ಮ ಕಾಲದ ಅತ್ಯಂತಮಾನ್ಯವಿದ್ವಾಂಸರಾದ ಕೀರ್ತಿಶೇಷ ಸೇಡಿಯಾಪು ಕೃಷ್ಣಭಟ್ಟರು ಇದೇ ವಿಷಯವಾಗಿ ರಚಿಸಿರುವ ಕೃತಿ ’ಛಂದೋಗತಿ.’ ಆ ಕೃತಿಯಿಂದ ಸ್ಫೂರ್ತಿವಡೆದು ನಡೆದ ಛಂದಸ್ಸಂಶೋಧನೆಯ ಫಲವಿದು.

ಛಂದಶ್ಶಾಸ್ತ್ರಕ್ಕೆ 2000 ಅಥವಾ ಅದಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಇಷ್ಟು ದೀರ್ಘಾವಧಿಯಲ್ಲಿ ವಿದ್ಯೆಯೊಂದು ಬೆಳೆದುಬಂದಿದೆಯೆಂದರೆ, ಅದರಲ್ಲಿ ಅದೆಷ್ಟೋ ಸತ್ಯಗಳಿರುತ್ತವೆ; ಭ್ರಾಮಕವಾದ ಅದೆಷ್ಟೋ ಕಲ್ಪನೆಗಳು ನುಸುಳಿರುತ್ತವೆ ಕೂಡ. ತಾನು ಕೈಗೊಂಡ ವಿದ್ಯಾವಿಷಯವನ್ನು ವರ್ಧಿಸಬೇಕಾದ ಮತ್ತು ಅಲ್ಲಿನ ಭ್ರಾಮಕಕಲ್ಪನೆಗಳನ್ನು ತಿದ್ದುವ ಬಾಧ್ಯತೆ ಶಾಸ್ತ್ರಕಾರನಿಗಿರುತ್ತದೆ. ಇಷ್ಟನ್ನು ಸಾಧಿಸಿದವನು ತನ್ನದೇ ಆದ ಕಾಣ್ಕೆಗಳನ್ನು ಸಹೃದಯರಿಗೆ ಸಂವಿಭಾಗ ಮಾಡಿಕೊಡುತ್ತಾನೆ. ’ಸದಸದ್ವಿವೇಕ’ ಎಂದು ವೇದಾಂತಾದಿಶಾಸ್ತ್ರಗಳು ಹೇಳಿರುವುದು ಇದೇ: ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ವರ್ಗೀಕರಣ. ’ಪರಸ್ಪರವ್ಯಾವೃತ್ತಿಯಿಂದ ವಸ್ತುಸ್ವರೂಪನಿಶ್ಚಯ’ ಎಂಬುದು ’ವಿವೇಕ’ಶಬ್ದದ ಅರ್ಥ. ಹಾಗಾಗಿ ’ಛಂದೋ-ವಿವೇಕ.’ ಇದರಿಂದಾಗುವ ಪ್ರಯೋಜನವೆಂದರೆ, ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಬೆಳೆದುಬರುತ್ತಿರುವ ವಿದ್ಯಾಪರಂಪರೆಯೊಂದರಲ್ಲಿ ಇಂತಹ ಗ್ರಾಹ್ಯ-ತ್ಯಾಜ್ಯಗಳು ಹೇಗೆ ಸಂಕಲಿತವಾದವು ಎಂದು ತಿಳಿದುಬರುವುದು.

ಈ ಐತಿಹಾಸಿಕಪರಿಪ್ರೇಕ್ಷೆಯನ್ನು ಒಂದಷ್ಟು ಮುಂದುವರಿಸೋಣ. ನಮ್ಮ ಪ್ರಾಚೀನರು ಲಕ್ಷ್ಯ-ಲಕ್ಷಣಸಮನ್ವಯದತ್ತ ಹೆಚ್ಚು ಒತ್ತಕೊಟ್ಟಿದ್ದರು. ಇದನ್ನು ಯಾಂತ್ರಿಕವಾಗಿ ಆಗಮಾಡಿಸತಕ್ಕದ್ದಲ್ಲ. ಶ್ರೀಮತಿ ಪದ್ಮಾ ಸುಬ್ರಹ್ಮಣ್ಯಂರಂತಹವರು ಇದನ್ನು ಕೈಗೊಂಡಾಗ, ಯಾಂತ್ರಿಕತೆಯಿರದೆ ಮಾಂತ್ರಿಕತೆಯಿರುತ್ತದೆ. ವಿಷಾದವೆಂದರೆ ಛಂದಶ್ಶಾಸ್ತ್ರದಲ್ಲಿ ಕೆಲವೊಮ್ಮೆ ಅದು ಯಾಂತ್ರಿಕವಾಗಿ ಆಗಿದೆ. ಲಕ್ಷ್ಯಭೂತವಾದ ಕೆಲವು ಪದ್ಯಗಳನ್ನು ಆಯ್ದುಕೊಂಡು ಅವುಗಳನ್ನು ವ್ಯಾಖ್ಯಾನಿಸುವಂಥ ಲಕ್ಷಣಗಳನ್ನು ಶಾಸ್ತ್ರಕಾರರು ಕೊಟ್ಟಿದ್ದಾರೆ. ಇದು ಸಾಧುವೇ. ಆದರೆ ಅದು ತನ್ನಂತೆಯೇ ಪರಿಪೂರ್ಣವಲ್ಲ. ಇನ್ನೊಂದೆಂದರೆ, ಆಧುನಿಕವಿದ್ವಾಂಸರು ಛಂದಸ್ಸನ್ನು ಕುರಿತು ಅನೇಕಸಂಶೋಧನೆ ಮತ್ತು ಪುನರ್ವ್ಯಾಖ್ಯೆಯನ್ನು ಮಾಡಿದ್ದಾರಾದರೂ, ಇವರ ದೃಷ್ಟಿಕೋನವು ಗಣೀತೀಯವಾಗಿದೆ. ಯಾವ ಛಂದಸ್ಸನ್ನು ಯಾವ ಕವಿ ಎಷ್ಟು ಬಾರಿ ಬಳಸಿದ, ಯಾವ ಕಾಲದಲ್ಲಿ ಯಾವ ಛಂದಸ್ಸು ಪ್ರಾಚುರ್ಯವನ್ನು ಗಳಿಸಿತ್ತು ಎಂಬಂತಹ ಅಂಕಿ-ಅಂಶಗಳು! ಇವೂ ಉಪಕಾರಕವೇ ಆದರೂ ತನ್ನಂತೆಯೇ ಪರಿಪೂರ್ಣವಲ್ಲ. ಇಲ್ಲೆಲ್ಲ ಆಗಿರುವುದೇನೆಂದರೆ ಛಂದಸ್ಸೌಂದರ್ಯಮೀಮಾಂಸೆ ಸೊರಗಿರುವುದು; ಆ ಕುರಿತು ಗಮನವನ್ನೇ ಹರಿಸಲಾಗಿರಲಿಲ್ಲ ಎಂದೇ ಹೇಳಬಹುದು. ಭಾರತೀಯಸಾಹಿತ್ಯಾಸಕ್ತರೆಲ್ಲರ ಸೌಭಾಗ್ಯವೆಂಬಂತೆ ಮಹನೀಯರಾದ ಸೇಡಿಯಾಪು ಕೃಷ್ಣಭಟ್ಟರು ಈ ಛಂದಸ್ಸೌಂದರ್ಯಮೀಮಾಂಸೆಯನ್ನು ಪ್ರಥಮರಾಗಿ ನಡೆಸಿ ಅದ್ವಿತೀಯವಾದ ಮಹತ್ತಾದ ಕೊಡುಗೆಯನ್ನು ನೀಡಿ, ಸಾಹಿತ್ಯವಿದ್ಯಾರ್ಥಿಗಳೆಲ್ಲರಿಗೂ ನಿತ್ಯಸ್ಮರಣೀಯರಾಗಿದ್ದಾರೆ.

’Genius abhors emulation/ ಪ್ರತಿಭಾಶಾಲಿಗಳು ಒಂದು ನಿಟ್ಟಿನಲ್ಲಿ ಕೆಲಸ ಮಾಡಿಯಾದಮೇಲೆ ಅದರ ಅನುಕರಣವನ್ನು ಅವರು ಸಹಿಸರು’ ಎಂಬ ಆಂಗ್ಲಭಾಷಾ ಉಕ್ತಿಯನ್ನು ಆಧರಿಸಿ ಇದನ್ನು ಆಲಂಕಾರಿಕವಾಗಿ ವ್ಯಾಖ್ಯಾನಿಸಬಹುದೇನೋ. ನಮ್ಮ ಸೌಭಾಗ್ಯವು ಈ ಉಕ್ತಿಗೆ ಅಪವಾದಪ್ರಾಯವಾದುದು. ಅದೆಂದರೆ, ಸೇಡಿಯಾಪು ಕೃಷ್ಣಭಟ್ಟರು ಮಾಡಿದ ಶಾಸ್ತ್ರಕೈಂಕರ್ಯವನ್ನು ಅವರ ಜೀವಿತದಲ್ಲಿ ಯಾರೂ ಮುಂದುವರಿಸದಿದ್ದರೂ, ನಮ್ಮ ಕಾಲದಲ್ಲಿ ಶತಾವಧಾನಿ ಡಾ|| ರಾ. ಗಣೇಶರು ಅನಿತರಸಾಧಾರಣವಾಗಿ ಮುಂದುವರಿಸಿದ್ದಾರೆ. ತಮ್ಮ ಜೀವಿತದ ಉತ್ತರಾರ್ಧದಲ್ಲಿ ಸೇಡಿಯಾಪು ಕೃಷ್ಣಭಟ್ಟರು ಪ್ರಜ್ಞಾಚಕ್ಷುಷರಾಗಿದ್ದರು, ಎಂದರೆ ಅಂಧರಾದರು. ಅವರ ಆಂಧ್ಯವನ್ನು ಪರಿಹರಿಸುವಂತೆ ಶತಾವಧಾನಿ ಡಾ|| ರಾ. ಗಣೇಶರು ಅವರ ಅಧ್ಯಯನವಿಷಯದಲ್ಲಿ ತೊಡಗಿಕೊಂಡು ಅದರ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿ ಆ ದರ್ಶನವನ್ನು ನಮಗೆ ಒದಗಿಸಿದ್ದಾರೆ. ಈ ಉಪಕಾರವು ನಮಗಾಗಿರುವುದು ’ಛಂದೋವಿವೇಕ’ ಎಂಬ ಈ ಕೃತಿಯಿಂದ.

ಈ ಗ್ರಂಥದಲ್ಲಿರುವ ಒಟ್ಟು ಹತ್ತು ಅಧ್ಯಾಯಗಳ ವಿಚಾರಗಳನ್ನು ಸ್ಥೂಲವಾಗಿ ಗಮನಿಸಿಕೊಳ್ಳೋಣ.

  1. ಪ್ರವೇಶಿಕೆ

  2. ಪ್ರಾಸ – ಒಂದು ವಿವೇಚನೆ: ಆದಿಪ್ರಾಸ, ಅಂತ್ಯಪ್ರಾಸ, ಅನುಪ್ರಾಸ ಇತ್ಯಾದಿಗಳನ್ನು ಒಳಗೊಂಡಿದೆ.

  3. ಸೀಸಪದ್ಯ ಮತ್ತು ಸಾನೆಟ್‍ಗಳ – ಪದ್ಯಶಿಲ್ಪವಿವೇಚನೆ: ತುಲನಾತ್ಮಕ ವಿಮರ್ಶೆ.

  4. ಅನುಷ್ಟುಪ್‍ಶ್ಲೋಕದ ರಚನಾಶಿಲ್ಪ: ಸಂಸ್ಕೃತಭಾಷಾಪದ್ಯ ಎಂದೊಡನೆಯೇ ನಮಗೆ ಪ್ರತೀತವಾಗುವುದು ಶ್ಲೋಕವೇ, ಪರ್ಯಾಯವಾಗಿ ಅನುಷ್ಟುಪ್‍ಶ್ಲೋಕವೇ. ಪಂಚಮಂ ಲಘು ಸರ್ವತ್ರ ಎಂಬ ಪ್ರಸಿದ್ಧಲಕ್ಷಣವು ಹೇಗೆ ಅಪರ್ಯಾಪ್ತ ಎಂದು ನಮ್ಮ ಪರಂಪರೆಯಲ್ಲಿ ಎಲ್ಲರಿಗೂ ತಿಳಿದಿತ್ತು. ಹಾಗಾದರೆ, ಪರ್ಯಾಪ್ತವಾದ ಲಕ್ಷಣವಾವುದು ಎಂದು ಯಾರೂ ಸರಿಯಾಗಿ ವ್ಯಾಖ್ಯಾನಿಸಿರಲಿಲ್ಲ. ಗಣೇಶರು ಅದನ್ನು ಇಲ್ಲಿ ನಮಗೆ ಆಗಮಾಡಿಸಿದ್ದಾರೆ.

  5. ಕೆಲವು ಪ್ರಸಿದ್ಧವರ್ಣವೃತ್ತಗಳ ಗತಿಮೀಮಾಂಸೆ: ಸುಮಾರು ಐವತ್ತಮೂರು ವರ್ಣವೃತ್ತಗಳ ಮರ್ಮೋದ್ಘಾಟನೆ ಅರ್ಥಾತ್ ಸ್ವಾರಸ್ಯದ ಅನಾವರಣವಾಗಿದೆ.

  6. ಆರ್ಯಾಪ್ರಭೇದಗಳ ಗತಿವಿವೇಚನೆ

  7. ಛಂದೋವಿನಿಯೋಗ: ಬಹಳ ಕುತೂಹಲಭರಿತವಾದ ಅಧ್ಯಯನವಿದು.

  8. ರಾಗ ಮತ್ತು ಛಂದಸ್ಸುಗಳ ನೇಪಥ್ಯದಲ್ಲಿ ನಾದಸೌಂದರ್ಯ ಮತ್ತು ಗತಿಸೌಂದರ್ಯ: ಸಮಾನತಂತ್ರವುಳ್ಳ ಎರಡು ವಿದ್ಯೆಗಳು, ಉದಾ. ಸಂಗೀತ-ಛಂದಸ್ಸು/ಸಾಹಿತ್ಯಗಳನ್ನು ಒಂದು ತೆಕ್ಕೆಯಲ್ಲಿ ಗ್ರಹಿಸಿ ಮಾಡಿದ ಶೋಧಪ್ರಬಂಧ.

  9. ತಮಿಳುಛಂದಸ್ಸು – ಕೆಲವು ಚಿಂತನೆಗಳು (ಅನುಬಂಧ)

  10. ತುಳುಛಂದಸ್ಸು – ಕೆಲವು ಚಿಂತನೆಗಳು (ಅನುಬಂಧ)

ಅದೆಷ್ಟೋ ವಿಚಾರಗಳು ಮತ್ತು ಹೊಳಹುಗಳು ಕವಿಗೆ ಮಾತ್ರ ಸ್ಫುರಿಸಬಲ್ಲಂಥವು. ನಮ್ಮ ಪರಂಪರೆಯಲ್ಲಿ ಕವಿಗಳಿದ್ದಾರೆ, ಶಾಸ್ತ್ರಕಾರರಿದ್ದಾರೆ, ಆದರೆ ಕವಿಯಾದ ಶಾಸ್ತ್ರಕಾರರಿಲ್ಲ. ಸುವೃತ್ತತಿಲಕ (ಪ್ರಾಯಃ) ಎಂಬ ತನ್ನ ಗ್ರಂಥದಲ್ಲಿ ಕ್ಷೇಮೇಂದ್ರನೆಂಬ ಆಲಂಕಾರಿಕನು ಕಾವ್ಯಶಾಸ್ತ್ರ ಮತ್ತು ಶಾಸ್ತ್ರಕಾವ್ಯಗಳೆಂಬ ಪ್ರಕಾರಗಳಿವೆಯೆಂದು ಹೇಳಿ, ಮಹಾಭಾರತವನ್ನು ಶಾಸ್ತ್ರಕಾವ್ಯ ಎಂದಿದ್ದಾನೆ. ಶಾಸ್ತ್ರವನ್ನು ಕಾವ್ಯಾತ್ಮಕವಾಗಿ ವಿನಿಕೆ ಮಾಡುವುದು, ಶಾಸ್ತ್ರಪರಿಷ್ಕಾರವಾಗುವಂತೆ ಕಾವ್ಯವನ್ನು ರಚಿಸುವುದನ್ನು ಸಿದ್ಧಿಯೆಂದೇ ಹೇಳಬೇಕು. ಗಣೇಶರು ಉತ್ತಮಕೋಟಿಕವಾದ ಕವಿಗಳೂ ಹೌದು, ಶಾಸ್ತ್ರಕಾರರೂ ಹೌದು. ಪ್ರಸ್ತುತಗ್ರಂಥವಿಷಯವನ್ನು ಪ್ರಸ್ತುತಪಡಿಸುವಲ್ಲಿ ಈ ಯೋಗಾಯೋಗವು ಹೇಗೆ ಕೆಲಸಮಾಡಿದೆ ಎಂದು ವೇದ್ಯವಾಗುತ್ತದೆ. ಛಂದಸ್ಸೆಂಬ ಶಾಸ್ತ್ರವು ಪ್ರಯೋಗಪ್ರಧಾನವಾದುದರಿಂದ, ಕವಿಗೆ ಮಾತ್ರ ಸ್ಫುರಿಸಬಲ್ಲ ಹೊಳಹುಗಳು ಇಲ್ಲಿ ಪಡಿಮೂಡಿವೆ. ಇವೇ ಕವಿಗಣೇಶರಿಂದ ನಮಗಾದ ಉಪಕಾರ,

ನಾಟ್ಯಶಾಸ್ತ್ರವಿಷಯವೂ ಇಂತೆಯೇ. ’ಪ್ರಯೋಗಪ್ರಧಾನಮ್ ಹಿ ನಾಟ್ಯಶಾಸ್ತ್ರಮ್’ ಎಂದು ಕಾಳಿದಾಸನು ತನ್ನೊಂದು ರೂಪಕದಲ್ಲಿ ಹೇಳಿದ್ದಾನೆ. ನಾಟ್ಯಶಾಸ್ತ್ರದಲ್ಲಿ ಛಂದಶ್ಶಾಸ್ತ್ರವೂ ಚರ್ಚಿತವಾಗಿದೆ. ಸಾಹಿತ್ಯವು ನಾಟ್ಯದ ಅವಿನಾಭೂತ ಅಂಗ, ಮತ್ತು ಗಣೇಶರು ಹೇಳುವಂತೆ ಕಾವ್ಯ ಅಥವಾ ಸಾಹಿತ್ಯಕ್ಕೆ ಛಂದಸ್ಸು ಅನಿವಾರ್ಯವಲ್ಲ ಆದರೆ ಅದು ಅಪೇಕ್ಷಣೀಯ. ಏಕೆ ಅಪೇಕ್ಷಣೀಯ ಎಂಬುದನ್ನು ಅವರೇ ಪ್ರವೇಶಿಕೆಯಲ್ಲಿ ವಿವರಿಸಿದ್ದಾರೆ. ಅವರು ಪ್ರಸ್ತುತಪಡಿಸುವ ಯಾವುದೇ ವಿಷಯವನ್ನು ಧಾತುಮೂಲಕ್ಕೊಯ್ದು ಸ್ಪಷ್ಟೀಕರಿಸುತ್ತಾರೆ. ಛಂದಸ್ಸೆಂಬುದರ ನಿಷ್ಪತ್ತಿಯು ಪ್ರಧಾನವಾಗಿ ಎರಡು ಧಾತುಗಳಿಂದ ಆಗಿದೆ: ಛದಿ ಸಂವರಣೇ ಮತ್ತು ಛದಿ ಆಹ್ಲಾದನೇ ದೀಪ್ತೌ ಚ. ಇಲ್ಲಿನ ಸ್ವಾರಸ್ಯವೆಂದರೆ:

• ಛದಿ ಸಂವರಣೇ - ನಮ್ಮ ಮಾತಿನಲ್ಲಿನ ಕೊರತೆಯನ್ನು ಮುಚ್ಚಿಕೊಳ್ಳಲು ಒದಗಿಬರುವ ವಾಗ್ವಿಧಾನ/ಉಪಸ್ಕಾರವೇ ಛಂದಸ್ಸು.

• ಛದಿ ಆಹ್ಲಾದನೇ ದೀಪ್ತೌ ಚ – ಮುಚ್ಚಿಹಾಕುವ ಕೆಲಸವೊಂದೇ ಅಲ್ಲ, ಆ ಮುಚ್ಚುವಿಕೆಯು ಮಾತಿಗೆ ಮೆರುಗು-ಕಾಂತಿಯನ್ನಿತ್ತು ಅದನ್ನು ಸುಂದರವಾಗಿಸುತ್ತದೆ.

ಛಂದಸ್ಸು ಕಾವ್ಯಾನುಭವಗಳನ್ನು ವಿಶ್ಲೇಷಿಸುವ ಉದ್ಯಮವು ಬಹಳ ಸಂಕೀರ್ಣವಾದುದು; ಕಾವ್ಯಾನುಭವವೇ ಸಂಕೀರ್ಣವಾದುದು. ಪದ್ಮಾ ಸುಬ್ರಹ್ಮಣ್ಯಂರವರ ನೃತ್ಯಪ್ರಸ್ತುತಿಯಲ್ಲಿ ಹಲವಾರು ಆಯಾಮಗಳತ್ತ ನಮ್ಮ ಅವಧಾರಣೆಯು ಏಕಕಾಲದಲ್ಲಿ ಸಲ್ಲಬೇಕೆಂಬ ಶ್ರೀಮತಿ ಮಧುಲಿಕಾ ಶ್ರೀವತ್ಸರವರ ಮಾತು ಇಲ್ಲಿ ಸ್ಮರಣೀಯ. ಪ್ರಾಮಾಣಿಕನಾದ ಸಹೃದಯನಿಗೆ ಎಲ್ಲವೂ ಸಮಪಾಕವಾದ ರಸಪಾಕವಾದ ಅನುಭೂತಿಯಾಗಿ ಮೂಡಿರುತ್ತದೆ. ಆದರೆ ಅದನ್ನು ವಿಶ್ಲೇಷಿಸುವಾಗ ಆ ಎಲ್ಲ ಘಟಕಗಳನ್ನು ಬಿಡಿಸಿ ಹೇಳಬೇಕಾಗುತ್ತದೆ. ಈ ವಿವಿಕ್ತಕರಣವನ್ನು ವಿಭಾವನಾಶಕ್ತಿ ಎನ್ನುತ್ತದೆ ಶಾಸ್ತ್ರ. ಈ ವಿವಿಕ್ತಕರಣ, ಅದಕ್ಕೆ ಬೇಕಾದ ಬುದ್ಧಿಬಲ, ಮತ್ತಾ ವಿಶ್ಲಿಷ್ಟವಿಚಾರಾಭಿವ್ಯಕ್ತಿಸಾಮರ್ಥ್ಯಗಳು ಶಾಸ್ತ್ರಕಾರನಲ್ಲಿ ಸರಿಮಿಗಿಲಾಗಿ ಇರುತ್ತದೆ. ಈ ಮೂರು ಗುಣಗಳ ಪೈಕಿ ಯಾವೊಂದಿಲ್ಲದಿದ್ದರೂ ಅಸಮರ್ಪಕವೇ. ಅದೆಷ್ಟೋ ಬಾರಿ ನಮ್ಮ ಮನಸ್ಸಿನಲ್ಲಿರುವುದೊಂದು, ನಮ್ಮ ನಲಗೆಯಿಂದ ಹೊರಡುವುದು ಮತ್ತೊಂದು. ಗಣೇಶರಲ್ಲಿ ಇಂತಹ ಸಂವಹನಲುಪ್ತಿ (Transmission loss) ಇಲ್ಲ. ಈ ಕೃತಿಯ ಕರ್ತೃಗಳು ಗಣೇಶರು ಎಂಬ ಹಿನ್ನೆಲೆಯಲ್ಲಿ ಗಮನಿಸಬೇಕಾದ ಇನ್ನೊಂದಂಶವಿದು.

ಪ್ರತಿಯೊಂದು ಅಧ್ಯಾಯದ ವಿಷಯದಲ್ಲಿ ಕನ್ನಡದಲ್ಲಿ ಆಗಿರುವ ಸಂಶೋಧನೆಯನ್ನು ಆರಂಭದಲ್ಲಿಯೇ ಪ್ರಸ್ತಾವಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಉಪಕಾರವಾಗಿದೆ. ನಡೆದಿರುವ ಸಂಶೋಧನೆಯು ಯಾವ ಆಯಾಮದ್ದು, ಆ ಸಂಶೋಧನೆಯಲ್ಲಿ ಯಾವೆಲ್ಲ ಕುಂದುಕೊರತೆಗಳಿದ್ದವು, ಮತ್ತು ಅವುಗಳನ್ನು ತುಂಬಿಕೊಳ್ಳುವಂಥ ವಿಧಾನ – ಈ ಮೂರೂ ಅಂಶಗಳು ಅಲ್ಲಿ ನಮಗೆ ಸೂತ್ರರೂಪದಲ್ಲಿ ದೊರೆಯುತ್ತವೆ ಎಂದು ಗಮನಿಸಬಹುದಾಗಿದೆ. ಉದ್ದಕ್ಕೂ ಅವರು ಕನ್ನಡದ ಸಂದರ್ಭಕ್ಕೆ ಒತ್ತನ್ನು ಇತ್ತಿದ್ದಾರೆ. ಇದು ಕನ್ನಡಕೃತಿ ಎಂಬುದೊಂದು ಮುಖ್ಯವಾದ ಅಂಶವಾದರೂ, ಭಾರತೀಯಸಾಹಿತ್ಯವು ಕನ್ನಡದಲ್ಲಿ ಅದೆಷ್ಟು ಚೆನ್ನಾಗಿ ಜೀವಂತವಾಗಿದೆ (ಜೀವಂತವಾಗಿ’ತ್ತು’ ಅಲ್ಲ) ಎಂಬುದನ್ನು ಎತ್ತಿತೋರಿಸವುದಾಗಿದೆ.

ಆನುಷಂಗಿಫಲಂ ಯಸ್ಯ - ಆನುಷಂಗಿಕವಾದ ಪ್ರಯೋಜನವೆಂದರೆ, ಈ ಕೃತಿಯಲ್ಲಿನ ಲಕ್ಷ್ಯಭೂತವಾದ ಉದಾಹರಣೆಗಳನ್ನು ಗಣೇಶರು ಯಾವಯಾವ ಮೂಲಗಳಿಂದ ಹೆಕ್ಕಿ ತೆಗೆದಿದ್ದಾರೆಂದರೆ, ಆ ಉದಾಹರಣಪದ್ಯಪಠನವು ಸಹೃದಯಶಿಕ್ಷಣರೂಪವಾದ ಅನುಭವ! ಒಬ್ಬ ಬಹುಶ್ರುತನಾದ ಸಹೃದಯನಾದ ವಿದ್ವಾಂಸನು ಕೈಗೆತ್ತಿಕೊಂಡ ಈ ರೀತಿಯಾದ ಕೆಲಸಗಳು ವಿಶ್ವತೋಮುಖವಾಗಿ ವ್ಯಾಪಿಸಬಲ್ಲುವು. ಬೇರೆಬೇರೆ ಮೂಲಗಳಿಂದ ಸಂಗ್ರಹಿಸಿದ್ದಾರೆಂಬುದೇ ಸ್ವಾರಸ್ಯಕರವೆಂದಲ್ಲ. ಆ ಪದ್ಯಗಳು ಚೆನ್ನಾಗಿವೆ ಎಂಬುದು ಇಲ್ಲಿನ ಸ್ವಾರಸ್ಯ. ದುರ್ಲಭವಿದ್ದ ಹರವಿಜಯ, ವರದಾಂಬಿಕಾಪರಿಣಯಚಂಪೂ, ಮತ್ತು ಅರ್ಧನೇಮಿಪುರಾಣಗಳಂತಹ ಗ್ರಂಥಗಳು/ಆಕರಗಳು ಈಗ ಸುಲಭಲಭ್ಯವಿರುವುದರಿಂದ, ಅವುಗಳಿಂದ ಪದ್ಯಗಳನ್ನು ಉದ್ಧರಿಸಬಹುದಾಗಿದೆ. ಆದರೆ ಆಯ್ದುಕೊಳ್ಳಬೇಕಾದ ಪದ್ಯವಾವುದು, ಸಂದರ್ಭಕ್ಕೆ ಹೊಂದುವುದಾವುದು, ಚೆನ್ನಾಗಿರುವುದಾವುದು ಎಂಬ ವಿವೇಚನೆ ಇಲ್ಲಿದೆ. ಹಾಗಾಗಿ, ಸ್ವತಂತ್ರವಾದ ಸ್ವರಸಸೂಕ್ತಿಗಳ ಸಂಕಲನದಂತೆಯೂ ಈ ಕೃತಿ ಇದೆ.

ಇಲ್ಲಿನ ಮತ್ತೊಂದು ಆಸಕ್ತಿಕರವಾದ ವಿಚಾರವೆಂದರೆ, ಗಣೇಶರು ಯಾವುದನ್ನೂ ಇದಮಿತ್ಥಮ್ ಎಂಬ ನಿಗಮನವಾಗಿ ನಮ್ಮ ಮುಂದೆ ಇಡುವುದಿಲ್ಲ. ಬದಲಾಗಿ, ವೈಜ್ಞಾನಿಕವಾದ ಗವೇಷಣೋದ್ಯಮವೊಂದರಲ್ಲಿ ನಮ್ಮ ಕೈಹಿಡಿದು ನಡೆಸುತ್ತಾರೆ, ಇಲ್ಲೇನೋ ಒಂದು ಚೆನ್ನಾಗಿ ಕಾಣುತ್ತಿದ್ದೆಯಲ್ಲ, ಇದನ್ನು ಹೇಗೆ ಭೇದಿಸುವುದು/ ಅರ್ಥೈಸುವುದು ಎಂದು ತೊಡಗಿಕೊಳ್ಳುತ್ತಾರೆ. ಸೇಡಿಯಾಪುರವರ ರೀತಿಯೂ ಇದೇ. ಅವರ ಮಾರ್ಗದಲ್ಲಿ ಗಣೇಶರು ಮುಂದುವರಿದರು ಎಂದು ಆಗಲೇ ಹೇಳಿದ್ದೇನಲ್ಲ.

ಸೂಕ್ಷ್ಮತರವಾದ ಒಂದಷ್ಟು ಛಂದೋವಿಷಯಗಳನ್ನು ಗಮನಿಸಿಕೊಳ್ಳೋಣ. ಪ್ರವೇಶಿಕೆಯಲ್ಲಿಯೇ ಅವರು ಕೆಲವು ಮೂಲಭೂತವಾದ ಅಂಶಗಳನ್ನು ಸ್ಪಷ್ಟಪಡಿಸಿ, ಇಡಿಯ ಪುಸ್ತಕವನ್ನು ಅರ್ಥೈಸಿಕೊಳ್ಳಲು ಬೇಕಾದಂತಹ ದೃಷ್ಟಿಕೋನವನ್ನು ನಮಗೆ ಒದಗಿಸಿಕೊಡುತ್ತಾರೆ. ಯಾವುದೇ ಪ್ರವೇಶಿಕೆಯು ಮಾಡಬೇಕಾದ ಕೆಲಸವೇ ಇದು.

ಯಮಾತಾರಾಜಭಾನಸಲಗಂ - ಗಣಗಳು, ಮಾತ್ರಾಗಣಗಳು ಇತ್ಯಾದಿಗಳು ಎಲ್ಲ ಆಸಕ್ತರಿಗೂ ತಿಳಿದಿರುವ ವಿಷಯವೇ. ಪದ್ಯರಚನೆಯಲ್ಲಿ ಮೂಲಭೂತವಾದದ್ದೆಂದರೆ ಗುರು-ಲಘುಗಳ ಪ್ರಸ್ತಾರ, ಯಗಣವೆಂದರೆ ಲಘು-ಗುರು-ಗುರು (ಯಮಾತಾ) ಇತ್ಯಾದಿ. ಆದರೆ ಯಾರೂ ಕೂಡ ಈ ಗಣಗಳ ಸ್ವರೂಪ ಏನು ಎಂದು ಹೇಳಿರಲಿಲ್ಲ; ಅದು ಸುಲಭವಾಗಿ ದೃಗ್ಗೋಚರವಾಗಿಯೇ ಇದೆ, ಆದರೆ ಯಾರೂ ಈವರೆಗೆ ಹೇಳಿರಲಿಲ್ಲ. ಅದೆಂದರೆ ಗತಿಸ್ವರೂಪ. ’ಮ’ಗಣ ’ನ’ಗಣಗಳು ಕ್ರಮವಾಗಿ ಪ್ಲುತಿ ಮತ್ತು ಆರೋಹಾವರೋಹಗಳಿಲ್ಲದ ವಿಳಂಬಿತಾಕ್ಷರ ಮತ್ತು ದ್ರುತಾಕ್ಷರಗತಿಗಳುಳ್ಳವು. ’ಮ’ಗಣದಲ್ಲಿ ಮೂರೂ ಗುರುಗಳು (ಮಾತಾರಾ), ಹಾಗಾಗಿ ಅದು ವಿಳಂಬಿತಗತಿ. ’ಸ’ಗಣವು ಪ್ಲುತಿಯಿಲ್ಲದ ಆರೋಹಾತ್ಮಕಗತಿಯುಳ್ಳದ್ದು, ಲಘುವಿನ ನಂತರ ಗುರುವನ್ನು ಉಚ್ಚರಿಸುವಾಗ ನಮ್ಮ ಅನುಭವಕ್ಕೆ ಬರುವ ನೆಗೆತವೇ ಪ್ಲುತಿ. ಪ್ರತಿಯೊಂದು ಗಣದ ಸ್ವರೂಪವನ್ನು ಹೀಗೆ ಅನುಭವನಿಷ್ಠವಾದ ಪರಿಕಲ್ಪನೆಯ ಮೂಲಕ ಕಟ್ಟಿಕೊಟ್ಟು ಅಲ್ಲಿನ ’ಸೌಂದರ್ಯ’ದತ್ತ ಗಮನ ಸೆಳೆದಿದ್ದಾರೆ. ಒಂದು ಗುರು ಎರಡು ಲಘುಗಳಿರುವ ಗಣವು ’ವಿವೃತಿ’ಪ್ರವಣವಾದುದು (Descriptive.) ಇದು ನಮ್ಮ ಅನುಭವವನ್ನು ಪೋಷಿಸುವುದಿಲ್ಲ, ಮತ್ತು ನಮ್ಮ ಅನುಭವವನ್ನು ವಿಶ್ಲೇಷಿಸುವ ಉಪಕರಣಗಳನ್ನು ಇದು ನೀಡುವುದಿಲ್ಲ. ಗಣೇಶರು ಪ್ರತಿಯೊಂದು ಹಂತದಲ್ಲಿಯೂ ಒಂದು ಹೆಜ್ಜೆ ಮುಂದೆ ಹೋಗಿ, ಅಲ್ಲಿರಬಹುದಾದಂತಹ, ಅಥವಾ ಅದರಲ್ಲಿಯೇ ಅಂತರ್ನಿಹಿತವಾಗಿರುವಂಥ ಸೌಂದರ್ಯದ ಅಂಶಗಳತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಗಣೇಶರು ಕಾಣ್ಕೆಗಳನ್ನು ನೀಡಿದ್ದಾರೆ.

ಗಣೇಶರಿಂದ ಬಹೂದ್ಧೃತನಾದ ಕಾಳಿದಾಸನ ಬಗೆಗೆ ಸಾಯಣಾಚಾರ್ಯರು ಹೇಳಿರುವ ಮಾತೊಂದು ಹೀಗಿದೆ:

ಪದವೀಂ ಕಾಲಿದಾಸಸ್ಯ ಲಲಿತಾಂ ಮೃದುಲೈಃ ಪದೈಃ|
ನ ಶಕ್ನುವಂತ್ಯಹೋ ಗಂತುಂ ಪಶ್ಯಂತೋಪಿ ಕವೀಶ್ವರಾಃ||

ಕಾಳಿದಾಸ ಬರೆದಿರುವ ಕಾವ್ಯಗಳನ್ನು ಹೇಗೆ ಆಸ್ವಾದಿಸಬೇಕು, ಅವುಗಳಲ್ಲಿ ಅದೆಷ್ಟು ಒಳ್ಳೆಯ ಶಬ್ದಗಳು ಅರ್ಥಗಳು ಇವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವನಂತೆ ಬರೆದವರಾರು? ಅವನನ್ನು ಅನುಕರಿಸಲು - ಬಣಗು ಕವಿಗಳಂತಿರಲಿ - ಕವೀಶ್ವರರಿಗೇ ಆಗಲಿಲ್ಲ. ಅಂತೆಯೇ, ಸೇಡಿಯಾಪುರವರು ಛಂದೋವಿಷಯವಾಗಿ ಬರೆದಿರುವುದು ಎಲ್ಲರಿಗೂ ಗೊತ್ತಿದೆ, ಆದರೆ ಅವರನ್ನು ಅನುಕರಿಸಿದವರಾರು? ಶಾಸ್ತ್ರವಿದ್ಯಾರ್ಥಿಯಾಗಿ, ಸೇಡಿಯಾಪುರವರ ’ಛಂದೋಗತಿ’ಯನ್ನು ಸಂಸ್ಕೃತಕ್ಕೆ ಅನುವಾದಿಸಿದವನಾಗಿ, ನಾನು ಒಂದು ಮಟ್ಟದ ಆತ್ಮವಿಶ್ವಾಸದಿಂದಲೇ ಹೇಳಬಲ್ಲೆ, ಸೇಡಿಯಾಪುರವರೂ ಮಾಡದಂಥ, ಆಲೋಚಿಸಿರದಂಥ ದಿಕ್ಕುಗಳಲ್ಲಿ ಗಣೇಶರು ಶ್ರಮಿಸಿದ್ದಾರೆ ಎಂದು ಛಂದೋವಿವೇಕದಿಂದ ವೇದ್ಯವಾಗುತ್ತದೆ. ಇವರ ಕಾಲದಲ್ಲಿ ನಾವಿರುವುದು ಮತ್ತು ಇವರ ಕೃತಿಗಳನ್ನು ನಾವು ಅನುಸಂಧಾನ ಮಾಡುತ್ತಿರುವುದು ನಮ್ಮ ಸೌಭಾಗ್ಯವೇ ಸರಿ.

ಇನ್ನು ಪ್ರಾಸವಿಷಯದಲ್ಲಿ ಅವರ ನಿಗಮನಗಳನ್ನು ನೋಡೋಣ. ಆದಿಪ್ರಾಸ, ಅಂತ್ಯಪ್ರಾಸ, ಅನುಪ್ರಾಸ, ಮತ್ತಿನ್ನೆಷ್ಟೋ ಬಗೆಯ ಪ್ರಾಸಗಳು ಎಲ್ಲರಿಗೂ ತಿಳಿದಿತ್ತು. ಆದರೆ ಯಾವುದನ್ನು ಎಲ್ಲಿ ಬಳಸಬೇಕು, ಯಾವುದು ಎಲ್ಲಿ ಬಳಕೆಯಾದರೆ ಹೆಚ್ಚು ಸೊಗಯಿಸುತ್ತದೆ ಎಂಬುದನ್ನು ತೋರ್ಪಡಿಸಿದವರು ಗಣೇಶರು. ಆದಿಪ್ರಾಸವೆಂದರೆ ಪ್ರತಿಪಾದದಲ್ಲಿ ದ್ವಿತೀಯಾಕ್ಷರವರ್ಣಸಾಮ್ಯವೆಂದಷ್ಟೆ ಎಂದು ಸ್ಥೂಲಮತಿಗಳ ಗ್ರಹಿಕೆ. ಆದರದು ಹಾಗಲ್ಲ. ಅದು ಪ್ರತಿಪದದ ಮೊದಲ ಎರಡು-ಮೂರು ಮಾತ್ರೆಗಳವರೆಗಿನ ಗುರು-ಲಘುಗಳ ಸಮತ್ವವೂ ಹೌದು ಎಂದು ಗಣೇಶರು ಪ್ರತಿಪಾದಿಸಿದ್ದಾರೆ. ಪದ್ಯರಚನೆಯಲ್ಲಿ ತೊಡಗುವ ಕವಿಗೆ ಇದು ಗೊತ್ತು. ಹಾಗಲ್ಲದೆ ಆತನು ಸುಷ್ಟುವಾಗಿ ರಚಿಸಲಾರ. ಆದರೆ ಶಾಸ್ತ್ರಕಾರನ ದೃಷ್ಟಿಗೆ ಇದು ಎಟುಕಿರಲಿಲ್ಲ. ಕವಿಯ ಅನುಭವವನ್ನು ಶಾಸ್ತ್ರಕಾರನು ಆತ್ಮಸಾತ್ತಾಗಿಸಿಕೊಂಡು ಶಾಸ್ತ್ರದಲ್ಲಿ ದಾಖಲಿಸಬೇಕಲ್ಲವೆ? ಹಾಗೆ ಮಾಡಿದಾಗಲ್ಲವೆ ಶಾಸ್ತ್ರಪ್ರತಿಪಾದಿತವಿಚಾರಕ್ಕೂ ಕವಿಪ್ರಯೋಗಕ್ಕೂ ತಾಳಮೇಳವಾಗುವುದು? ಪ್ರಾಮಾಣ್ಯ ಸಿದ್ಧಿಸುವುದು? ಈ ಗ್ರಂಥದಿಂದ ಆಗಿರುವ ಉಪಕಾರಗಳಲ್ಲಿ ಇದೂ ಒಂದು. ಎತ್ತುಗಡೆಯನ್ನು ತೋರಿಸಲು ಆದಿಪ್ರಾಸವು ಹೆಚ್ಚಾಗಿ ಬಳಕೆಯಾದರೆ ಚೆನ್ನು, ಮತ್ತು ಊನಗಣವು ಅಂತ್ಯಪ್ರಾಸದ ಸೊಬಗನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಗಣೇಶರು. ಪದ್ಯರಚನಾನುಸಂಧಾನಿಗಳಿಗೆ ಇವನ್ನು ವಿವರಿಸಿ ಹೇಳಬೇಕಾದ್ದಿಲ್ಲ.

ಸೀಸಪದ್ಯ ಮತ್ತು ಸಾನೆಟ್ ಎಂಬ ಎರಡು ಪದ್ಯಪ್ರಕಾರಗಳ ಬಗೆಗಿನ ಅವರ ವಿಚಾರವನ್ನು ನೋಡೋಣ. ನಮಗೆ ತಿಳಿದಿರುವಂತೆ ಸೀಸವು ಮಾತ್ರಾ ಮತ್ತು ಅಂಶ ಎಂದು ಎರಡು ವಿಧ. ಇನ್ನು ಸಾನೆಟ್ ಎಂಬ ಬಂಧ/ಛಂದಃಪ್ರಕಾರ ನಮ್ಮಲ್ಲಿ ಬೆಳೆದುಬಂದದ್ದು ಪಾಶ್ಚಾತ್ಯಪ್ರಪಂಚದ ಪ್ರಭಾವದಿಂದ. ನಮ್ಮಲ್ಲಿ ಈ ಸೀಸಪದ್ಯ ಅಥವಾ ಸಾನೆಟ್ ಬಳಕೆ ಹೆಚ್ಚಾಯಿತೋ ಕಡಮೆಯಾಯಿತೋ ಎಂಬಂಥ ಇತಿಹಾಸವಿಶ್ಲೇಷಣೆಯನ್ನು ಮಾಡುತ್ತಾರೆ, ಮತ್ತು ಇಂತಹ ಪ್ರತಿಯೊಂದು ಜಿಜ್ಞಾಸೆಯಲ್ಲೂ ಸೌಂದರ್ಯದಲ್ಲಿ ನೆಲೆನಿಂತ ಕಾರಣವನ್ನು ಕೊಡುತ್ತಾರೆ. ಗಣೇಶರ ಗುಣಪ್ರವಣತೆ ಈ ರೀತಿಯದು. ’ನಡುಗನ್ನಡದಲ್ಲಿ ಷಟ್ಪದಿಗಳ ಆವಿಷ್ಕಾರ ಸೀಸಪದ್ಯದಂಥ ಬಂಧದ ಅನಿವಾರ್ಯತೆಯನ್ನು ಕನ್ನಡದ ಮಟ್ಟಿಗೆ ಮೀರುವಂತೆ ಮಾಡಿತು.’ ತೆಲುಗುದೇಶದಲ್ಲಿ ಷಟ್ಪದಿಯಂಥ ಬಂಧವು ಆವಿಷ್ಕೃತವಾಗದ ಕಾರಣ, ಅವರು ಸೀಸಪದ್ಯವನ್ನು ವ್ಯಾಪಕವಾಗಿ ಬಳಸಿಕೊಳ್ಳುವುದಾಯಿತು. ’ಹೊಸಗನ್ನಡದ ಸಂದರ್ಭದಲ್ಲಿ ಸಾನೆಟ್ಟಿಗೆ ಸಂವಾದಿಯಾಗುವಂತೆ ಸೀಸವನ್ನು ಬಳಸಲಾಯಿತು. ಅದು ಪೆಟ್ರಾರ್ಕನ್ ಬಗೆಯಲ್ಲಿ,’ ಎಂದಿದ್ದಾರೆ.

ಪದ್ಯವನ್ನು ಶಿಲ್ಪಕ್ಕೆ ಒಪ್ಪವಿಟ್ಟು ನೋಡುವ ಪದ್ಯಶಿಲ್ಪ ಎಂಬ ಪರಿಕಲ್ಪನೆಯೊಂದಿದೆ. ಶಿಲ್ಪದಲ್ಲಿ ಅವಯವಸಮನ್ವಯ-ಸೌಷ್ಠವಗಳಿದ್ದಂತೆ, ಶಬ್ದಾಲಂಕಾರ-ಅರ್ಥಾಲಂಕಾರ-ಗುಣ-ರೀತಿ-ಪಾಕ-ಶಯ್ಯೆ ಮುಂತಾದವುಗಳ ಮೂಲಕ ಪದ್ಯದಲ್ಲೂ ಸೌಷ್ಠವವೇರ್ಪಡುತ್ತದೆ ಎಂಬ ವಿವೇಚನೆಯನ್ನು ಬಗೆಬಗೆಯ ಉದಾಹರಣೆಗಳೊಂದಿಗೆ ಚರ್ಚಿಸಿದ್ದಾರೆ. ಈ ಹೊತ್ತಿಗೆ ಕನ್ನಡದ ಸಂದರ್ಭಕ್ಕಂತೂ ಸಾನೆಟ್ಟಿಗಿಂತ ಸೀಸಪದ್ಯವೇ ಹೆಚ್ಚು ಸುಲಭ-ಸುಕರ-ಸುಂದರ ಎಂಬುದನ್ನು ತೋರ್ಪಡಿಸಿದ್ದಾರೆ.

ಅನುಷ್ಠುಪ್ ವಿಚಾರಕ್ಕೆ ಬರೋಣ. ಕ್ಷೇಮೇಂದ್ರನು ಮೇಲೆ ಉದ್ಧರಿಸಿದ ’ಸುವೃತ್ತತಿಲಕ’ದಲ್ಲಿ,

ಅಸಂಖ್ಯೋ ಭೇದಸಂಸರ್ಗಾದನುಷ್ಟುಪ್ಛಂದಸಾಂ ಗಣಃ|
ತತ್ರ ಲಕ್ಷ್ಯಾನುಸಾರೇಣ ಶ್ರವ್ಯತಾಯಾಃ ಪ್ರಧಾನತಾ||

ಅನುಷ್ಟುಪ್‍ನ ಘೋಷವು ಎಲ್ಲ ಭಾರತೀಯರಿಗೂ ಸುಪರಿಚಿತ. ವಿಷ್ಣುಸಹಸ್ರನಾಮವನ್ನೋ ಭಗವದ್ಗೀತೆಯನ್ನೋ ಕೇಳದವರಾರು? ಇವನ್ನು ಮೇಲಿಂದ ಮೇಲೆ ಕೇಳಿದ್ದೇವಾಗಿ, ಆ ಗತಿಸಂಸ್ಕಾರ ನಮ್ಮಲ್ಲಿ ನಮ್ಮ ತಿಳಿವಿಗೂ ಮೀರಿದಂತೆ ಆಗಿದೆ ಎಂದಿದ್ದಾರೆ ಗಣೇಶರು. ’ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಂ’ ಎಂಬುದು ಶ್ರೀಮದ್ರಾಮಾಯಣದ ಆದಿಮಪಾದ. ’ಶ್ಲೋಕೇ ಷಷ್ಟಂ ಗುರು ಜ್ಞೇಯಂ ಸರ್ವತ್ರ ಲಘುಪಂಚಮಮ್ ದ್ವಿಚತುಶ್ಪಾದಯೋರ್ಹ್ರಸ್ವಂ ಸಪ್ತಮಂ ದೀರ್ಘಮನ್ಯಯೋಃ’ ಎಂಬ ಅನುಷ್ಟುಪ್‍ಲಕ್ಷಣಗಳನ್ನು ಇದಕ್ಕೆ ಒಪ್ಪವಿಟ್ಟು ನೋಡಿದರೆ, ಲಕ್ಷಣಗಳ ಉಲ್ಲಂಘನೆಯಾಗಿರುವುದನ್ನು ಕಾಣುತ್ತೇವೆ. ಆದಿಕಾವ್ಯದ ಆದಿಮಶ್ಲೋಕದಲ್ಲಿಯೇ ಅನುಷ್ಠುಭ್‍ಛಂದಸ್ಸಿನ ಲಕ್ಷಣ ವ್ಯಭಿಚರಿತವಾಗಿದೆಯೆಂದರೆ ಶಾಸ್ತ್ರಗತಿಯೆಂತು! ಹಾಗಾಗಿಯೇ ಕ್ಷೇಮೇಂದ್ರನಂಥ ಆಲಂಕಾರಿಕರು ’ಶ್ರವ್ಯತಾಯಾಃ ಪ್ರಧಾನತಾ’ ಎಂದಿರುವುದು. ವ್ಯಭಿಚರಿತವಾದಂತೆ ಕಂಡರೂ ಅದೇಕೆ ಅದಕ್ಕೆ ಕಲಾಮಾನ್ಯತೆ ದೊರಕಿದೆ? ಕಲಾದೃಷ್ಟಿಯಿಂದ ಸರಿಯೆನಿಸದಿದ್ದರೂ ಸಹ್ಯ ಎಂದೇಕೆನಿಸಿದೆ? ಇಂತಹ ಸೂಕ್ಷ್ಮಗಳನ್ನು ಗಣೇಶರು ಚರ್ಚಿಸಿದ್ದಾರೆ. ಇದಕ್ಕಾಗಿ ವೃತ್ತರತ್ನಾಕರ ಎಂಬ ಶಾಸ್ತ್ರಗ್ರಂಥದ ನಾರಾಯಣಭಟ್ಟೀಯ ಎಂಬ ವ್ಯಾಖ್ಯಾನವನ್ನು ಅವಲಂಬಿಸಿ ಪರಿಷ್ಕೃತಲಕ್ಷಣವನ್ನು ಕೊಟ್ಟಿದ್ದಾರೆ, ಮೂರು ಮಾತ್ರೆಗಳ ಘಟಕಗಳು, ನಾಲ್ಕು ಮಾತ್ರೆಗಳ ಘಟಕಗಳು, ಎರಡು-ನಾಲ್ಕು ಮಾತ್ರೆಗಳ ಸಂಯುಕ್ತಘಟಕಗಳು, ಐದು ಮಾತ್ರೆಗಳ ಘಟಕಗಳೆಲ್ಲವುಗಳ ಅತ್ಯುತ್ತಮಗತಿಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಇವೆಲ್ಲ ನಮಗೆ ಬಹಳ ಉಪಕಾರಕ.

ಭಾಷೆಯೊಂದರ ಪದಗಳು ಸಾರ್ಥಕವಾದವು. ಛಂದಸ್ಸಿಗೆ ನಿರರ್ಥಕವಾದೊಂದು ರೂಪವಿರುತ್ತದೆ, ಅನುಷ್ಠುಭ್‍ನ ’ನಾನನಾನ ನನಾನಾನ ನಾನನಾನ ನನಾನನಾ’ ಇದ್ದಂತೆ. ಇದಕ್ಕೆ ಮಾತುಗಳನ್ನು ಹೊಂದಿಸಿ ರಚಿಸಿದರೆ ಅದು ಸಾರ್ಥಕವೆನಿಸುತ್ತದೆ. ಇವನ್ನು ಭಾಷಾಪದಗತಿ-ಛಂದಃಪದಗತಿ ಎಂದು ವಿಭಾಗಿಸಿಕೊಟ್ಟವರು ಸೇಡಿಯಾಪು ಕೃಷ್ಣಭಟ್ಟರು. ಅನುಷ್ಠುಭನ್ನು ನಾನ/ನಾನ/ನನಾ/ನಾನ ಎಂದು ಮೂರು ಮಾತ್ರಾಗಣಗಳಾಗಿ ವಿಂಗಡಿಸಬಹುದು, ನನನಾ/ನನನಾ/ನಾನಾ ಎಂದು ನಾಲ್ಕು ಮಾತ್ರಾಗಣಗಳಾಗಿ ವಿಂಗಡಿಸಬಹುದು, ನಾನನಾ/ನಾನನಾ/ನಾನಾನ ಎಂದು ಐದು ಮಾತ್ರಾಗಣಗಳಾಗಿ ವಿಂಗಡಿಸಬಹುದು. ಇವುಗಳನ್ನೆಲ್ಲ ತೆರೆದಿಟ್ಟು ಅತ್ಯುತ್ತಮಗತಿಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ .

ವರ್ಣವೃತ್ತಗಳ ವಿಷಯವಾಗಿ ಅವರು ಅದೆಷ್ಟೋ ಲಯರಹಿತವೃತ್ತಗಳ ಗತಿಸೌಂದರ್ಯಮೀಮಾಂಸೆಯನ್ನು ಮಾಡಿದ್ದಾರೆ. ಇದೇ ಈ ಪುಸ್ತಕದ ಹೃದಯಭಾಗವೆನ್ನಬಹುದು. ನಾನಾಗಲೇ ಹೇಳಿದಂತೆ ಇಂದ್ರವಜ್ರ, ಉಪೇಂದ್ರವಜ್ರ, ಉಪಜಾತಿಗಳಂಥ ಪ್ರಸಿದ್ಧವೃತ್ತಗಳಷ್ಟೇ ಅಲ್ಲದೆ ಶೇಣಿ, ಲಯಗ್ರಾಹಿ, ಮಹೇಂದ್ರವಜ್ರ, ಮಣೀಭೂಷಣ, ಉಜ್ಜ್ವಲ ಇತ್ಯಾದಿ ಅವೆಷ್ಟೋ ಅಜ್ಞಾತಪ್ರಾಯವಾದ ಛಂದಸ್ಸುಗಳನ್ನೂ ಇಲ್ಲಿ ವಿವೇಚಿಸಿದ್ದಾರೆ; ಅನತಿಪ್ರಚುರವಾದ ವಂಶಪತ್ರಪತಿತವಂಥವನ್ನೂ. ಕುತೂಹಲಕರವಿಷವೆಂದರೆ, ಅನುಷ್ಠುಭ್ ಇತ್ಯಾದಿ ಕೆಲವೊಂದು ಛಂದಸ್ಸುಗಳು ಕನ್ನಡದಲ್ಲಿ ಬಳಕೆಯಾಗಿಲ್ಲದ್ದಕ್ಕೆ ಕಾರಣವನ್ನು ಸಂಶೋಧಿಸಿದ್ದಾರೆ. ಅದೆಂದರೆ ಪ್ರಾಸದ ನಿರ್ಬಂಧ. ಕನ್ನಡಕ್ಕೆ ಪ್ರಾಸವು ಸತತ ಎಂದು ನಿಯಮಿಸಿಕೊಂಡು ಎಂಟೆಂಟು ಅಕ್ಷರಗಳಿಗೊಮ್ಮೆ ಪಾದಾದಿಪ್ರಾಸವನ್ನು ನಿರ್ವಾಹಮಾಡುವುದು ಕವಿಗೆ ಕಷ್ಟ. ಕಥನಾತ್ಮಕವಾಗಿ ಬಹಳ ಸ್ವಾತಂತ್ರ್ಯವನ್ನು ಕೊಡುತ್ತದೆ ಛಂದಸ್ಸು ಎಂದು ಪ್ರಸಿದ್ದಿಯಿರಲು, ಅದರ ಅಂತಹ ಸ್ವಾತಂತ್ರ್ಯದಾಯಕಶಕ್ತಿಯನ್ನೇ ಕುಂಠಿತಮಾಡುವ ನಿಯಮವೇರ್ಪಟ್ಟರೆ ಅದನ್ನು ಒಪ್ಪಿಕೊಳ್ಳಬೇಕೋ ಬೇಡವೋ? ಉಪಜಾತಿಯೇ ಮುಂತಾದ ಛಂದಸ್ಸುಗಳು ಕನ್ನಡದಲ್ಲಿ ಏಕೆ ಬಳಕೆಯಿಲ್ಲವೆಂದರೆ, ಗುರುಗಳು ಒತ್ತುಕೊಂಡುಬಂದಿರುವ ಅಂಥವುಗಳನ್ನು ಕನ್ನಡದಲ್ಲಿ (ಹಳಗನ್ನಡವೂ ಸೇರಿದಂತೆ) ನಿರ್ವಹಿಸುವುದು ಕಷ್ಟ, ಗುರುಪ್ರಚುರವಾದ ಸಂಸ್ಕೃತದಲ್ಲಿ ಅದು ಸುಲಭ ಎಂದು ತಿಳಿದೇ ಇದೆ. ಮೇಲ್ನೋಟಕ್ಕೆ ಇಂದ್ರವಜ್ರವೂ ಉಪಜಾತಿಯೂ ಗುರುಪ್ರಚರವಲ್ಲವಲ್ಲ ಎಂದರೆ, ಪಾದಾಂತ್ಯದ ಎರಡು ಗುರುಗಳು ಮತ್ತು (ಮುಂದಿನ) ಪಾದಾದಿಯ ಎರಡು ಗುರುಗಳು ಸೇರಿ ನಾಲ್ಕು ಗುರುಗಳಾದವು. ಕನ್ನಡದಲ್ಲಿ ಖಂಡಪ್ರಾಸವು ಪ್ರಚುರವಾಗಿದ್ದು, ಹೀಗೆ ನಾಲ್ಕು ಗುರುಗಳ ನಿರ್ವಹಣೆ ಕಷ್ಟವಾಗುತ್ತದೆ; ಪಾದಾಂತ್ಯಲಘುವನ್ನು ಕರ್ಷಿಸಿ ಉಚ್ಚರಿಸಿ ಅದನ್ನು ಗುರುವಾಗಿಸುವುದೆಂಬ ಯುಕ್ತಿಯು ಸಾಧುವಲ್ಲ.

ಆರ್ಯಾಪ್ರಭೇದಗಳ ಗತಿವಿವೇಚನೆಯೂ ಇಂಥದೇ ಪ್ರೌಢವಿಶ್ಲೇಷಣೆ. ಶುದ್ಧವಾದ ಮಾತ್ರಾಬಂಧಗಳೇ ನಮ್ಮಲ್ಲಿ ಹೆಚ್ಚು ವಾಡಿಕೆಯಲ್ಲಿರುವುದಕ್ಕೆ ಕಾರಣವೆಂದರೆ ಅಲ್ಲಿ ಅಂತರ್ಗತವಾಗಿರುವ ಗಣಪರಿವೃತ್ತಿಯೇ ಕಾರಣವೆಂದಿದ್ದಾರೆ.

’ಛಂದೋವಿನಿಯೋಗ’ಅಧ್ಯಾಯದಲ್ಲಿ, ದೃತಿ, ದೀಪ್ತಿ, ವಿಕಾಸ, ಸಂಕೋಚ ಇತ್ಯಾದಿ ರಸಧರ್ಮಗಳನ್ನು ಬಳಸಿಕೊಂಡು ಛಂದಸ್ಸನ್ನು ಹೇಗೆ ವಿವೇಚಿಸಬೇಕು ಎಂದು ವಿವರಿಸಿದ್ದಾರೆ. ನೂತನ ಛಂದಸ್ಸುಗಳ ಆವಿಷ್ಕಾರಸಾಧ್ಯತೆಗಳೇನು? ಒಂದು ಛಂದಸ್ಸಿನಲ್ಲಿ ಒಂದು ಗುರುವನ್ನು ಲುಪ್ತವಾಗಿಸಿಯೋ, ಇನ್ನೊಂದರಲ್ಲಿ ಒಂದು ಲಘುವನ್ನು ಸೇರಿಸಿಯೋ ಒಂದು ಹೊಸ ಛಂದಸ್ಸನ್ನು ಆವಿಷ್ಕರಿಸಬಹುದೆ? ಹೌದು, ಅದೊಂದು ಗಣಿತೀಯಸಾಧ್ಯತೆಯೇ. ಆದರೆ, ಅದು ಚೆನ್ನಿರುತ್ತದೆಯೆ? ಅದನ್ನು ಚೆನ್ನಾಗಿಸಲು ಬೇರಿನ್ನಾವ ಅಂಶಗಳನ್ನು ಗಮನಿಸಿಕೊಳ್ಳಬೇಕು, ಏನು ಎಚ್ಚರಿಕೆ ವಹಿಸಬೇಕು ಎಂಬುದನ್ನೆಲ್ಲ ಚರ್ಚಿಸಿದ್ದಾರೆ.

’ರಾಗ ಮತ್ತು ಛಂದಸ್ಸುಗಳ ನೇಪಥ್ಯದಲ್ಲಿ ನಾದಸೌಂದರ್ಯ ಮತ್ತು ಗತಿಸೌಂದರ್ಯ’ವು ಬಹಳ ಸುಷ್ಟುವಾದ ಪ್ರಬಂಧ. ಇದರ ವ್ಯಾಪ್ತಿಯೇ ಬಹಳ ಹಿರಿದಾದದ್ದು. ತೌಲನಿಕ ಅಧ್ಯಯನಗಳು ಸಾಧಿಸಬಹುದಾದ ಅತ್ಯಂತ ಎತ್ತರದ ಮಟ್ಟವೆಂಥದು ಎಂಬುದನ್ನು ಈ ಪ್ರಬಂಧವು ತೋರಿಸಿಕೊಟ್ಟಿದೆ ಎಂದು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಘಂಟಾಘೋಷವಾಗಿ ಹೇಳಬಹುದು. ಛಂದಸ್ಸು ಮತ್ತು ಸಂಗೀತಗಳಲ್ಲಿ ಸೌಂದರ್ಯವು ಹೆಚ್ಚು ಕಾಣಿಸುವುದು ಗ್ರಹಭೇದಬಾಹುಳ್ಯವಿರುವ ರಾಗಗಳಲ್ಲಿ ಮತ್ತು ಸಹಜವಾದ ಗತಿಸೌಂದರ್ಯವಿರುವ ವಿತಾಲವೃತ್ತಗಳಲ್ಲಿ ಎಂದಿದ್ದಾರೆ. ಒಂದು ಸಾಲಿನ ಈ ನಿಗಮನವು ಶುದ್ಧವಿಜ್ಞಾನನಿಗಮನಪರಿಕ್ರಮದ್ದು. ಒಂದು ವ್ಯಾಖ್ಯೆಯ (Definition), ಸಿದ್ಧಪ್ರತ್ಯಯದ (Axiom), ಸತ್ಯಾಗ್ರಹದ (Postulate), ನಿಯಮದ (Rule) ಹಿಂದೆ ಸಾವಿರಾರು ವರ್ಷಗಳ ದುಡಿಮೆಯಿರುತ್ತದೆ. ಗಣೇಶರು ಇದನ್ನು ಐವತ್ತರವತ್ತು ಪುಟಗಳಲ್ಲಿ ನಿರೂಪಿಸಿ ತೋರಿಸಿದ್ದಾರೆ.

ಅನುಬಂಧಗಳು ಕೃತಿಯನ್ನು ಸಾರ್ಥಕವಾಗಿಸಿವೆ. ಒಟ್ಟಿನಲ್ಲಿ ನಾನು ಆಗಲೇ ಹೇಳಿರುವ ’ವಿವೇಕ’ವವು ಇಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿಯೂ ಆಯಾಮದಲ್ಲಿಯೂ ಮೂಡಿದೆ. ಈ ಸದ್ಗ್ರಂಥವನ್ನು ಎಲ್ಲ ಸಾಹಿತ್ಯಾಭ್ಯಾಸಿಗಳು ಅವಶ್ಯವಾಗಿ ಓದಬೇಕು, ಓದಿ ಪ್ರಯೋಜನವನ್ನು ಪಡೆಯಬೇಕು. ಇದರ ಮೂಲಕ ಇಡಿಯ ಭಾರತೀಯಸಾಹಿತ್ಯ, ಛಂದಶ್ಶಾಸ್ತ್ರ, ಮತ್ತು ಸೌಂದರ್ಯಮೀಮಾಂಸೆಗಳು ಸಾಗಬೇಕಾದ ಹಾದಿ ನಮಗೆ ಗೊತ್ತಾಗುತ್ತದೆ ಎಂಬುದು ನಿಸ್ಸಂಶಯ.