ಅನುಷ್ಟುಪ್-ಶ್ಲೋಕದ ರಚನಾಶಿಲ್ಪ

Source: prekshaa series

[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 1 Source: prekshaa]]

ಸಂಜ್ಞಾ

‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು. ಗೋಡ್ರೇಜ್ ಕಪಾಟು, ಜೆ಼ರಾಕ್ಸ್ ಯಂತ್ರ, ಜಾಟರ್ ಪೆನ್ ಮುಂತಾದುವು ಮೊದಲ ಪ್ರಕಾರಕ್ಕೂ ಚಿನ್ನ (ಆಭರಣ), ಚೈನಾ (ಪಿಂಗಾಣಿಯ ವಸ್ತುಗಳು), ಅನ್ನ (ಆಹಾರ, ಊಟ) ಮುಂತಾದುವು ಎರಡನೆಯ ಪ್ರಕಾರಕ್ಕೂ ಉದಾಹರಣೆಗಳು.

1 ಈ ಲೇಖನದಲ್ಲಿ ಶ್ಲೋಕವೆಂಬ ಶಬ್ದವನ್ನೇ ಹೆಚ್ಚಾಗಿ ಬಳಸಲಾಗಿದೆಯಾದರೂ ವಿಚಾರಸ್ಪಷ್ಟತೆಗಾಗಿ ‘ಅನುಷ್ಟುಪ್‌ಶ್ಲೋಕ’ ಎಂಬ ಅಂಕಿತವನ್ನು ಮೊದಲಿಗೆ ಉಪಯೋಗಿಸಲಾಗಿದೆ. ಶಾಸ್ತ್ರೀಯವಾಗಿ ನೋಡಿದಾಗ ಇದು ಪುನರುಕ್ತಿ ಎನಿಸಬಹುದಾದರೂ ಲೋಕಪ್ರಸಿದ್ಧಿಯ ದೃಷ್ಟಿಯಿಂದ ಅನುಚಿತವೆನಿಸದು.

ಶ್ಲೋಕ ಎಂಬ ಹೆಸರು ಅನಂತರಕಾಲದಲ್ಲಿ ಯಾವುದೇ ಛಂದಸ್ಸಿನಲ್ಲಿ ರಚಿತವಾದ ಸಂಸ್ಕೃತಭಾಷೆಯ ಪದ್ಯಕ್ಕೆ ವಾಚಕವಾಯಿತೆಂಬುದನ್ನು ಮರೆಯುವಂತಿಲ್ಲ. ಬಹುಶಃ ಇನ್ನಷ್ಟು ಗೊಂದಲವಾಗಬಾರದೆಂಬ ಎಚ್ಚರದಿಂದಲೇ ‘ಅನುಷ್ಟುಪ್‌ಶ್ಲೋಕ’ ಎಂಬ ವಿವರಣಾತ್ಮಕವಾದ ಅಭಿಧಾನ ಬಂದಿರಬಹುದು. ಇದು ಸ್ಪಷ್ಟತೆಗಾಗಿ ಮಾಡಿಕೊಂಡ ಪುನರುಕ್ತಿಪ್ರಾಯವಾದ ಸಂಜ್ಞೆ. ಶ್ಲೋಕವೆಂಬ ವಿಶಿಷ್ಟವಾದ ಬಂಧಕ್ಕೆ ‘ಅನುಷ್ಟುಪ್’ ಎಂಬ ಜಾತಿಸಾಮಾನ್ಯವಾದ ಹೆಸರು ಬರಲು ಶ್ಲೋಕಶಬ್ದಕ್ಕೆ ಒದಗಿದ ಅತಿವ್ಯಾಪ್ತಿಯೇ ಕಾರಣವಾಗಿರಬಹುದು. ಯಾವುದೇ ಸಂಸ್ಕೃತಪದ್ಯಕ್ಕೆ ಶ್ಲೋಕ ಎಂಬ ಸಾಮಾನ್ಯಸಂಜ್ಞೆ ರೂಢವಾಗಿರುವುದಕ್ಕೆ ಮೂಲಹೇತು ಆ ಭಾಷೆಯಲ್ಲಿ ಇದಕ್ಕಿರುವ ಪ್ರಾಚುರ್ಯ ಮತ್ತು ಸೌಲಭ್ಯಗಳೇ ಕಾರಣವೆಂಬ ಮತ್ತೊಂದು ವಾಸ್ತವವನ್ನೂ ಇಲ್ಲಿ ನೆನೆಯಬಹುದು.

ಶ್ಲೋಕ ಎಂಬ ಶಬ್ದಕ್ಕೆ ಕೀರ್ತಿ ಎಂಬ ಮತ್ತೂ ಒಂದು ಅರ್ಥವಿದೆ. ಬಹುಶಃ ಇದು ಈ ಛಂದಸ್ಸಿನಲ್ಲಿ ರಚಿತವಾದ ಪ್ರಶಸ್ತಿಪದ್ಯಗಳ ಮೂಲಕವೇ ಲೋಕದಲ್ಲಿ ರೂಢವಾಗಿರಬಹುದು. ಅಂತೂ ಶ್ಲೋಕದ ಶ್ಲೋಕತ್ವ ಹಿರಿದು.

ಈಗಾಗಲೇ ಕನ್ನಡದ ಹಲವರು ವಿದ್ವಾಂಸರು ಶ್ಲೋಕದ ವಿಶಿಷ್ಟತೆಯನ್ನು ಕುರಿತು ವರ್ಣನಾತ್ಮಕವೂ ಮೀಮಾಂಸಾತ್ಮಕವೂ ಆದ ಅನೇಕ ಬರೆಹಗಳನ್ನು ಪ್ರಕಟಿಸಿದ್ದಾರೆ.

2 ಈ ಬಗೆಗೆ ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ ಮುಂತಾದ ಭಾಷೆಗಳಲ್ಲಿಯೂ ಸಾಕಷ್ಟು ಬರೆಹಗಳು ಬಂದಿವೆ. ಆದರೂ ನನ್ನರಿವಿಗೆ ಎಟುಕಿದಂತೆ ಹೇಳುವುದಾದರೆ ಶ್ಲೋಕಗತಿಮೀಮಾಂಸೆಯನ್ನು ಸರ್ವಂಕಷವೆಂಬಂತೆ ಮಾಡಿರುವವರು ಸೇಡಿಯಾಪು ಅವರು ಮಾತ್ರ. ಮಿಕ್ಕವರು ನಿರಪವಾದವೆಂಬಂತೆ ಐತಿಹಾಸಿಕ ಮತ್ತು ವರ್ಣನಾತ್ಮಕ ಅಧ್ಯಯನಗಳನ್ನು ನಡಸಿದ್ದಾರೆ. ಗತಿಯನ್ನು ಕುರಿತ ಚಿಂತನೆಯೂ ಯುಕ್ತಿಯುಕ್ತವಾಗಿ ತೋರುವುದಿಲ್ಲ; ತೃಪ್ತಿಕರವಾಗಿಲ್ಲ. ಬಲುಮಟ್ಟಿಗೆ ಎಲ್ಲರೂ ಎ. ಎ. ಮ್ಯಾಕ್‌ಡೊನಾಲ್ಡ್, ಇ. ವಿ. ಅರ್ನಾಲ್ಡ್, ಎಚ್. ಡಿ. ವೇಲಣಕರ್ ಮುಂತಾದವರ ಅಭಿಪ್ರಾಯಗಳನ್ನೇ ಮರುದನಿಸಿದ್ದಾರೆ. ಇವರೆಲ್ಲರ ಹಾಗೂ ಈ ತೆರನಾದವರ ಎಲ್ಲ ಅಧ್ಯಯನಗಳನ್ನೂ ಕ್ರೋಡೀಕರಿಸಿಕೊಂಡು ನಡೆದ ಚಿಂತನದ ಸಾರವನ್ನು ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಬರೆವಣಿಗೆಯಲ್ಲಿ ಕಾಣಬಹುದು. ಹೀಗೆ ಶ್ಲೋಕಮೀಮಾಂಸೆಗೆ ಸೇಡಿಯಾಪು ಅವರ ಚಿಂತನೆ ಅನಿವಾರ್ಯ ಮತ್ತು ಅನನ್ಯ ಆಲಂಬನವಾಗುತ್ತದೆ. ಇಂತಿದ್ದರೂ ಇವರು ಕೂಡ ಹೇಳದೆ ಉಳಿಸಿದ, ಚಿಂತಿಸದೆ ಉಳಿಸಿದ ಹಲಕೆಲವು ವಿಚಾರಗಳು ಇರುವ ಕಾರಣ ಇವನ್ನೆಲ್ಲ ಪ್ರಪಂಚಿಸುವ ನಿಟ್ಟಿನಲ್ಲಿ ಸದ್ಯದ ಲೇಖನ ಹೊರಟಿದೆ.

ಶ್ಲೋಕಲಕ್ಷಣ

ಮೊದಲಿಗೆ ಶ್ಲೋಕದ ಲಕ್ಷಣವನ್ನು ಗಮನಿಸಬಹುದು:

ಶ್ಲೋಕೇ ಷಷ್ಠಂ ಗುರು ಜ್ಞೇಯಂ ಸರ್ವತ್ರ ಲಘು ಪಂಚಮಮ್ । ದ್ವಿಚತುಷ್ಪಾದಯೋರ್ಹ್ರಸ್ವಂ ಸಪ್ತಮಂ ದೀರ್ಘಮನ್ಯಯೋಃ ॥ (ಶ್ರುತಬೋಧ, ೧.೧೦)

ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ । ಗುರು ಷಷ್ಠಂ ಚ ಪಾದಾನಾಂ ಶೇಷೇಷ್ವನಿಯಮೋ ಮತಃ ॥ (ಛಂದೋಮಂಜರೀ, ೪.೭)

ಈ ಲಕ್ಷಣಗಳು ಸ್ಥೂಲದೃಷ್ಟಿಯಿಂದ ಸಮಗ್ರವೆಂಬಂತೆ ತೋರಿದರೂ ದಿಟವಾಗಿ ಸಮಗ್ರವಲ್ಲ. ಇವುಗಳ ಪ್ರಕಾರ ಶ್ಲೋಕದ ಪ್ರತಿಯೊಂದು ಪಾದದ ಮೊದಲ ನಾಲ್ಕು ಅಕ್ಷರಗಳ ಗುರುಲಘುವಿನ್ಯಾಸವು ಹೇಗೂ ಇರಬಹುದು. ಅಂದರೆ, ಅವು ಸರ್ವಲಘು ಆಗಿರಬಹುದು; ಮೂರು ಲಘುಗಳ ಬಳಿಕ ಒಂದು ಗುರುವೂ ಆಗಿರಬಹುದು. ಆದರೆ ಇಂಥ ಲಕ್ಷಣವುಳ್ಳ ಶ್ಲೋಕಗಳನ್ನು ನಾವು ಯಾವುದೇ ವೈದಿಕ-ಲೌಕಿಕ ಸಾಹಿತ್ಯದಲ್ಲಿ ನೋಡಲಾರೆವು. ವಸ್ತುತಃ ಈ ಬಗೆಯ ಛಂದೋವಿನ್ಯಾಸದಲ್ಲಿ ಶ್ಲೋಕದ ಘೋಷವೂ ಕೇಳದು; ಅದರ ಗತಿಯೂ ಉನ್ಮೀಲಿಸದು. ಇದನ್ನು ಸೋದಾಹರಣವಾಗಿ ಕಾಣೋಣ:

ಅನುಪಮವಚೋಯುಕ್ತಂ ಸರಸಗುಣಸಂಯುತಮ್ ।
ಭಜತ ಹೃದಿ ಗೋವಿಂದಂ ನಮತ ಜನಜೀವನಮ್ ॥
ಪ್ರಣಮತಾಂ ಪ್ರಿಯಂ ನಿತ್ಯಂ ಸುಮನಸಾಂ ವಿಭುಂ ಹರಿಮ್ ।
ಹೃದಿ ಭಜೇ ಮುದಾ ಭೂತ್ಯೈ ಲಲಿತವೇಣುವಾದಕಮ್ ॥

ಮೇಲ್ನೋಟಕ್ಕೇ ಇವು ಶ್ಲೋಕದ ಧಾಟಿಯನ್ನು ಹೊಂದಿಲ್ಲವೆಂದು ತಿಳಿಯುತ್ತದೆ. ಈ ಕಾರಣದಿಂದಲೇ ಕ್ಷೇಮೇಂದ್ರನು ‘ಸುವೃತ್ತತಿಲಕ’ ಎಂಬ ತನ್ನ ಕೃತಿಯಲ್ಲಿ ಒಂದಲ್ಲ ಎರಡು ಕಡೆ ಶ್ಲೋಕಕ್ಕೆ ಶ್ರವ್ಯತೆಯೇ ಪ್ರಧಾನಲಕ್ಷಣವೆಂದು ಸಾರಿದ್ದಾನೆ:

ಅಸಂಖ್ಯೋ ಭೇದಸಂಸರ್ಗಾದ್ ಅನುಷ್ಟುಪ್ ‌ಛಂದಸಾಂ ಗಣಃ ।

ತತ್ರ ಲಕ್ಷ್ಯಾನುಸಾರೇಣ ಶ್ರವ್ಯತಾಯಾಃ ಪ್ರಧಾನತಾ ॥

ಅನುಷ್ಟುಪ್‌ಛಂದಸಾಂ ಭೇದೇ ಕೈಶ್ಚಿತ್ ಸಾಮಾನ್ಯಲಕ್ಷಣಮ್ ।
ಯದುಕ್ತಂ ಪಂಚಮಂ ಕುರ್ಯಾಲ್ ಲಘು ಷಷ್ಠಂ ತಥಾ ಗುರು ॥
ತತ್ರಾಪ್ಯನಿಯಮೋ ದೃಷ್ಟಃ ಪ್ರಬಂಧೇ ಮಹತಾಮಪಿ ।
ತಸ್ಮಾದವ್ಯಭಿಚಾರೇಣ ಶ್ರವ್ಯತೈವ ಗರೀಯಸೀ ॥
(ಸುವೃತ್ತತಿಲಕ ೧.೧೫; ೨.೪,೫)

ಹೀಗೆ ಶ್ಲೋಕಕ್ಕೆ ಶ್ರವ್ಯತೆಯೇ ಅಳತೆಗೋಲಾದ ಕಾರಣ ಕವಿಗಳೂ ಲಾಕ್ಷಣಿಕರೂ ಪ್ರಯೋಗಿಸಿ ಗಮನಿಸಿರುವ ‘ಲಕ್ಷಣಬಾಹ್ಯ’ ಎನ್ನಬಹುದಾದ ಹಲವು ಬಗೆಗಳೂ ಶಿಷ್ಟರ ಸಮ್ಮತಿಯನ್ನು ಗಳಿಸಿವೆ:

u – – – u u u – u – – – u – u –

ತಪಃಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ ।
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ ॥ (ವಾಲ್ಮೀಕಿರಾಮಾಯಣ, ೧.೧.೧)

u – u – – u u – u – – – u – u –

ತದನ್ವಯೇ ಶುದ್ಧಿಮತಿ ಪ್ರಸೂತಃ ಶುದ್ಧಿಮತ್ತರಃ ।
ದಿಲೀಪ ಇತಿ ರಾಜೇಂದುರಿಂದುಃ ಕ್ಷೀರನಿಧಾವಿವ ॥ (ರಘುವಂಶ, ೧.೧೨)

ಇವುಗಳ ಪರಿಶೀಲನೆಯಿಂದ ಓಜಪಾದ(ವಿಷಮಪಾದ)ಗಳಲ್ಲಿ ಲಕ್ಷಣೋಕ್ತವಾದ ಕಡೆಯ ಮೂರು ಗುರುಗಳಿಗೆ ಬದಲಾಗಿ (ಮ-ಗಣವೊಂದಕ್ಕೆ ಆದೇಶವಾಗಿ) ಎರಡು ಲಘುಗಳನ್ನೂ ಒಂದು ಗುರುವನ್ನೂ (ಸ-ಗಣವೊಂದನ್ನು) ಬಳಸುವುದು ಶಿಷ್ಟಸಮ್ಮತ ಎಂದು ತಿಳಿಯುತ್ತದೆ; ಇದು ಶ್ರುತಿಕಟುವಲ್ಲವೆಂದೂ ಅನುಭವಕ್ಕೆ ಬರುತ್ತದೆ. ಈ ಬಗೆಯ ಗತಿಯು ಶ್ಲೋಕದ ಧಾಟಿಯನ್ನು ಹದಗೆಡಿಸದೆಯೇ ಅದರಲ್ಲಿ ಹೃದ್ಯ ವೈವಿಧ್ಯವನ್ನು ತಂದೀಯಬಲ್ಲ ಸಾಧನವೆಂದು ಸ್ಪಷ್ಟವಾಗುತ್ತದೆ.

ಇಲ್ಲಿ ಕೆಲವು ಎಚ್ಚರಿಕೆಗಳನ್ನು ಹೇಳಬೇಕಿದೆ. ಅವನ್ನು ಹೀಗೆ ನಮೂದಿಸಬಹುದು:

ಓಜಪಾದ

ಕಡೆಯ ಮಾತ್ರಾ

೧. ಓಜಪಾದಗಳ ಕಡೆಯ ಮೂರು ಅಕ್ಷರಗಳು
ಸಹಜಗುರುಗಳಾಗಿ ಇರಬೇಕು ಎಂಬುದು ಆದರ್ಶಲಕ್ಷಣ.
ಆದರೆ ಪಾದಾಂತ್ಯದ ಅಕ್ಷರವು ಲಘುವಾಗಿದ್ದಾಗಲೂ
ಕರ್ಷಣದ ಮೂಲಕ ಅದಕ್ಕೆ ಗುರುತ್ವ ಬರುವುದುಂಟು.
ಈ ಬಗೆಯ ಸೌಲಭ್ಯವನ್ನು ಅನುಚಿತವಾಗಿ ಗ್ರಹಿಸಿ,
ಬಳಿಕ ಮೇಲೆ ಕಾಣಿಸಿದಂತೆ ‘ಲಕ್ಷಣಬಾಹ್ಯ’ವಾದ ಪ್ರಯೋಗಕ್ಕೆ ತೊಡಗಿದರೆ
ಶ್ಲೋಕದ ಗತಿ ಹದಗೆಡುತ್ತದೆ.
ನಾವು ಈ ಮೊದಲೇ ಗಮನಿಸಿದಂತೆ
ಶ್ಲೋಕದಲ್ಲಿ ನಾಲ್ಕು ಲಘುಗಳು ಅವ್ಯವಹಿತವಾಗಿ ಬರಲು ಸಾಧ್ಯವಿಲ್ಲ.+++(5)+++ ಇದು ಪ್ರತಿ ಪಾದದ ಪೂರ್ವಾರ್ಧಕ್ಕೆ ಹೇಗೋ ಹಾಗೆಯೇ ಉತ್ತರಾರ್ಧಕ್ಕೂ ಅನ್ವಯಿಸುತ್ತದೆ.

ಇಲ್ಲೊಂದು ಸ್ಪಷ್ಟೀಕರಣ ಬೇಕಿದೆ:
ಓಜಪಾದದ ಕಡೆಯ ಪದವು
ಯುಕ್ಪಾದ(ಸಮಪಾದ)ದ ಮೊದಲನೆಯ ಪದದೊಡನೆ ಸಮಾಸದ ರೂಪವನ್ನು ತಾಳಿದಾಗ
ಎಂಟನೆಯ ಅಕ್ಷರವು ಸಹಜ-ಲಘುವಾದರೆ
ಈ ಮುನ್ನ ಕಾಣಿಸಿದ ಸಂದರ್ಭಗಳಲ್ಲಿ ಶ್ರುತಿಕಟುವಾಗುತ್ತದೆ.+++(5)+++
ಹಾಗಲ್ಲದೆ ಎಂಟನೆಯ ಅಕ್ಷರಕ್ಕೇ ಪದವು ಮುಗಿದಲ್ಲಿ ಅಲ್ಲಿಯ ಸಹಜಲಘುವು ಕರ್ಷಣಕ್ಕೆ ಒಳಗಾಗಿ ಗುರುವಿನಂತೆ ಕೇಳುವ ಮೂಲಕ ಸ್ವಲ್ಪ ಶ್ರುತಿಸಹ್ಯವೆನಿಸುತ್ತದೆ. ಉದಾಹರಣೆಗೆ:

u – – – u u u u u u – u u – u –

ಜನಾನಂದಾಯ ಭವತಿ ಭವತಾಂ ವಿಜಯೋತ್ಸವಃ ।

– – u – – u u u u – – u u – u –

ಮನ್ಯೇ ಮಹಾಂತಂ ಜಗತಿ ಭವಂತಂ ಭವಿಕಪ್ರದಮ್ ॥

ಶ್ಲೋಕದ ಛಂದೋಗತಿಯು
ಎಷ್ಟೋ ಬಾರಿ ಪದಸಾಪೇಕ್ಷವಾಗಿ ವರ್ತಿಸುವುದೆಂಬುದನ್ನು
ಈ ಮೂಲಕ ಮನಗಾಣಬಹುದು.
ಪದವು ಸಮಸ್ತ ಮತ್ತು ಅಸಮಸ್ತ
ಎಂದು ಎರಡು ಪ್ರಕಾರಗಳಲ್ಲಿ ಮೈದಾಳುವ ಕಾರಣ
ಎರಡೂ ಬಗೆಯ ಪದಸಾಧ್ಯತೆಗಳು
ಶ್ಲೋಕದ ಗತಿಯನ್ನು ಕೆಲಮಟ್ಟಿಗೆ ನಿರ್ದೇಶಿಸುತ್ತವ್ ಎನ್ನಬಹುದು.
ಇದಕ್ಕೆ ಮುಖ್ಯಕಾರಣ ಯತಿಯೇ ಆಗಿದೆ.

ಶ್ಲೋಕದಲ್ಲಿ ಪ್ರಾಯಶಃ ಯತಿಯೇ ಇಲ್ಲವೆಂದು ಕವಿ-ಲಾಕ್ಷಣಿಕರ ಅಭಿಮತ.
ಆದರೆ ನಿಯತವಾದ ಯತಿ ಎಂಬುದು ಇಲ್ಲಿ ಇಲ್ಲದಿದ್ದರೂ
ಪ್ರತಿಯೊಂದು ಸ್ವತಂತ್ರಪದದ ಬಳಿಕ ಬರುವ ವಿರಾಮವೇ ಯತಿಯ ಪಾತ್ರವನ್ನು ಕೆಲಮಟ್ಟಿಗೆ ವಹಿಸುತ್ತದೆ.+++(5)+++ ಇದನ್ನು ಅಭಿಜ್ಞರು ‘ಪದಯತಿ’ ಎಂದು ಹೆಸರಿಸಿದ್ದಾರೆ.+++(5)+++
ಇದು ಗತಿ-ಪ್ರಜ್ಞಾವಂತರಿಗೆ ಅನುಭವವೇದ್ಯ.

ಮಿಕ್ಕ ವರ್ಣವೃತ್ತಗಳಲ್ಲಿ ಹೀಗೇಕೆ ಆಗುವುದಿಲ್ಲ? ಎಂಬ ಪ್ರಶ್ನೆ ಉದಿಸಬಹುದು.
ಅದಕ್ಕೆ ಸಮಾಧಾನವಿಷ್ಟೇ:
ಶ್ಲೋಕದಲ್ಲಿ ಮಿಕ್ಕ ವರ್ಣವೃತ್ತಗಳಲ್ಲ್ ಇರುವಂತೆ
ಗುರು-ಲಘುಗಳ ಸರ್ವದೇಶಸ್ಥಿರತೆ ಇಲ್ಲ.

ಈ ಸಂದರ್ಭದಲ್ಲಿ ಲಯಾನ್ವಿತವಾದ ಮಾತ್ರಾಜಾತಿಗಳಲ್ಲಿಯೂ ಕರ್ಷಣಜಾತಿಗಳಲ್ಲಿಯೂ ಆಯಾ ಗಣಗಳ ಬಳಿಕ ಬರುವ ಯತಿಸದೃಶ ವಿರಾಮವನ್ನು ನೆನೆಯಬಹುದು. ಶ್ಲೋಕವು ಇಂಥ ಬಂಧಗಳಂತೆ ಲಯಾನ್ವಿತವಲ್ಲದ ಕಾರಣ ಅವುಗಳಲ್ಲಿ ಪ್ರತಿಯೊಂದು ತಾಲಾವರ್ತದ ಬಳಿಕವೂ ನಿಯತವಾಗಿ ವಿರಾಮ ಬರುವಂತೆ ಇಲ್ಲಿ ಬರುವುದಿಲ್ಲ. ಹೀಗೆ ಯತಿಯಲ್ಲದಿದ್ದರೂ ಯತಿಕಲ್ಪ ಎಂಬಂತೆ ಶ್ಲೋಕದಲ್ಲಿ ತೋರಿಕೊಳ್ಳುವ ವಿರಾಮಗಳು ಅದರ ಗತಿವೈವಿಧ್ಯಕ್ಕೂ ನಿರ್ವಾಹದ ಸೌಲಭ್ಯಕ್ಕೂ ಒದಗಿಬರುತ್ತವೆ.

ಸೇಡಿಯಾಪು ಅವರು ಶ್ಲೋಕವನ್ನು ‘ಅಕ್ಷರಜಾತಿ’ ಎಂಬ ತಾವೇ ಕಲ್ಪಿಸಿದ ವರ್ಗದಲ್ಲಿ ಸೇರಿಸುತ್ತಾರೆ. ಇಲ್ಲಿ ಬಳಕೆಯಾದ ಜಾತಿಶಬ್ದದ ಏಕದೇಶಸ್ಥಿರತೆಯ ವಿಶೇಷವನ್ನೂ ಅವರು ವಿವರಿಸುತ್ತಾರೆ. ಮಾತ್ರಾಜಾತಿ ಮತ್ತು ಕರ್ಷಣಜಾತಿಗಳ ವರ್ಗಗಳಲ್ಲಿ ಪ್ರಯುಕ್ತವಾಗುವ ಪದಗಳ ಗುರು-ಲಘು-ವಿನ್ಯಾಸದ ಅನಿಯತತೆ ಶ್ಲೋಕದಲ್ಲಿಯೂ
ತನ್ನದೇ ಆದ ರೀತಿಯಲ್ಲಿ ಇರುವುದು ಸ್ಪಷ್ಟ.
ಇದರ ಮೂಲಕ
ಈ ಎಲ್ಲ ಬಂಧಗಳ ನಿರ್ವಾಹದಲ್ಲಿ
ಹೆಚ್ಚಿನ ಸ್ವಾತಂತ್ರ್ಯ ಲಭಿಸುವುದೂ ಸ್ಪಷ್ಟ.
ಎಂಥ ಸ್ವಾತಂತ್ರ್ಯಕ್ಕೂ ಅಂಟಿಬರುವ ಬಾಧ್ಯತೆಯನ್ನು ಬಲ್ಲವರಿಗೆ ಈ ಬಗೆಯ ಸೌಲಭ್ಯವನ್ನು ನಿರ್ವಹಿಸಲು ಬೇಕಾದ ಎಚ್ಚರ ಎಂಥದ್ದೆಂಬುದನ್ನು ಸ್ಪಷ್ಟಪಡಿಸಬೇಕಿಲ್ಲ.

ಸದ್ಯದ ವಿಶ್ಲೇಷಣೆಗೆ ಮತ್ತೆ ಬರುವುದಾದರೆ,
ಶ್ಲೋಕದ ಗುರು-ಲಘುವಿನ್ಯಾಸದಲ್ಲಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು
ಯತಿಕಲ್ಪವಾದ ಪದಗಳ ವಿರತಿ
ಮತ್ತು ಅಂಥ ಪದಗಳ ಗುರು-ಲಘು-ವಿನ್ಯಾಸದ ಸೂಕ್ಷ್ಮತೆಗಳ ಅರಿವ್ ಇರಬೇಕು.


[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 2 Source: prekshaa]]

ಲಘುಬಾಹುಳ್ಯ
ಪಂಚಮಾಕ್ಷರ

೨. ವಿಷಮಪಾದದ ಉತ್ತರಾರ್ಧದಲ್ಲಿ ಲಘುಬಾಹುಳ್ಯವುಳ್ಳ ಸಂದರ್ಭಗಳಲ್ಲಿ ಆಯಾ ಓಜಪಾದಗಳ ಪಂಚಮಾಕ್ಷರಗಳು ಲಘು ಅಥವಾ ಗುರುವೇ ಆಗಿರಲಿ,
ಮೇಲಣ ಎಚ್ಚರಿಕೆಯನ್ನು ಪಾಲಿಸಿದ್ದೇ ಆದಲ್ಲಿ ಶ್ಲೋಕದ ಧಾಟಿ ಕೆಡುವುದಿಲ್ಲ.+++(5)+++
ಇಂತಿದ್ದರೂ ಪಂಚಮಾಕ್ಷರವು ‘ಲಕ್ಷಣವಿರುದ್ಧ’ವಾಗಿ ಗುರುವಾದಲ್ಲಿ ಒಟ್ಟಂದದ ಶ್ಲೋಕಗತಿಗೆ ಹೆಚ್ಚಿನ ಸೊಗಸು ಬರುತ್ತದೆ. ಉದಾ:

ಷಾಣ್ಮಾತುರಃ ಕ್ತಿಧರಃ ಕುಮಾರಃ ಕ್ರೌಂಚದಾರಣಃ ॥ (ಅಮರಕೋಶ, ೧.೧.೪೭)

ಆದರೆ ಓಜಪಾದದ ಪೂರ್ವಾರ್ಧವು ಗುರುಗಳಿಂದಲೇ ತುಂಬಿದ್ದರೆ -
ವಿಶೇಷತಃ ಮೂರು ಹಾಗೂ ನಾಲ್ಕನೆಯ ಅಕ್ಷರಗಳು ಗುರುಗಳಾಗಿದ್ದರೆ -
ಐದನೆಯ ಅಕ್ಷರವು ಲಕ್ಷಣಾನುಸಾರವಾಗಿ ಲಘುವಾಗುವುದೇ ಒಳಿತು.+++(5)+++

ಪಾದಾಂತ ಪದಾಂತ

೩. ಕನ್ನಡ, ತೆಲುಗು, ತಮಿಳು, ತುಳು ಮತ್ತು ಮಲಯಾಳ ಭಾಷೆಗಳಲ್ಲ್ ಇದ್ದಂತೆ
ಖಂಡ-ಪ್ರಾಸವೆಂಬ ಶಬ್ದಾಲಂಕಾರಕ್ಕಾಗಿ
ಪಾದಾಂತದಲ್ಲಿ ಪದಚ್ಛೇದದ ಮೂಲಕ ಯತಿವಿಲಂಘನವನ್ನು ಮಾಡುವುದು
ಶ್ಲೋಕದ ಗತಿಯಲ್ಲಿ ವೈರಸ್ಯವನ್ನು ತರುತ್ತದೆ.

ಈ ಮುನ್ನ ಕಾಣಿಸಿದಂತೆ ಓಜಪಾದದ ಉತ್ತರಾರ್ಧದಲ್ಲಿ
ಸ-ಗಣವೋ ನ-ಗಣವೋ ಬಂದು
ಆ ಬಳಿಕ ಒಂದು ಗುರುವಿರುವಂಥ ಸಂದರ್ಭಗಳಲ್ಲಂತೂ
ಪಾದಾಂತದ ಯತಿಯನ್ನು ಪಾಲಿಸುವುದಲ್ಲದೆ
ಅಲ್ಲಿಗೇ ಪದವು ಮುಗಿಯುವಂತೆ ಮಾಡಬೇಕು.+++(5)+++
ಪ್ರಾತಿಪದಿಕ ಮುಗಿದರೂ ಸಮಸ್ತಪದವು ಮುಗಿಯದೆ ಮುಂದಿನ ಪಾದಕ್ಕೆ ಸಾಗುವಂಥ ರಚನೆಯನ್ನು ಮಾಡುವುದು ಶ್ರುತಿಕಟುವೆನಿಸುತ್ತದೆ. ಉದಾ:

ಕಾಲಿಂದೀಪಾವನಜಲಾಲೋಕಕೌತೂಹಲೀ ಹಲೀ ।
ಶೌರಿಣಾ ಸಹ ಸಾಮೋದಂ ಯಯಾವಾನಂದತುಂದಿಲಃ ॥

ಇದನ್ನು ‘ಕಾಲಿಂದೀಪಾವನಜಲಂ ದ್ರಷ್ಟುಕಾಮೋಽಸಿತಾಂಬರಃ’ ಎಂದು ತಿದ್ದಿದರೆ ಶ್ರುತಿಕಟುತ್ವ ಕಡಮೆಯಾದೀತು.

ಹೀಗೆಯೇ ಸಮಾಸವೊಂದು ಶ್ಲೋಕದ ಓಜಪಾದ ಮತ್ತು ಯುಕ್ಪಾದಗಳೆರಡನ್ನೂ ಬೆಸೆಯುವ ಸಂದರ್ಭ ಬಂದಾಗ
ಓಜಪಾದಾಂತದ ಅಕ್ಷರ
ಸಹಜಗುರುವಾಗಿಯೇ ಇರುವುದು ಒಳಿತು.+++(5)+++
ಇಲ್ಲವಾದರೆ ಪಾದಾಂತದ ಪ್ರಬಲಯತಿಯ ಕಾರಣ ಅಲ್ಲಿಯ ಲಘುವು ಗುರುವಾಗಿ ಕರ್ಷಿತವಾಗುವ ಅಪಾಯ ಉಂಟು. ಪಾದಾಂತ್ಯದಲ್ಲಿ ಪದವೂ ಮುಗಿದರೆ ಅದರ ತುದಿಯಲ್ಲಿರುವ ಲಘ್ವಕ್ಷರವು ಕರ್ಷಣಗೊಂಡಾಗ ತೋರಿಕೊಳ್ಳದ ಅಪಾರ್ಥ ಅಥವಾ ಶ್ರುತಿಕಟುತ್ವ ಸಮಸ್ತಪದದಲ್ಲಿ ಅಂತರ್ಗತವಾದ ಪ್ರಾತಿಪದಿಕವೊಂದರ ಕೊನೆಯಲ್ಲಿರುವ ಲಘ್ವಕ್ಷರದ ಕರ್ಷಣದ ಮೂಲಕ ಎದ್ದುತೋರುವಂತಾಗುತ್ತದೆ. ಉದಾ: ಲಲಿತಾಸಹಸ್ರನಾಮದಲ್ಲಿ ಬರುವ ‘ತಾಪತ್ರಯಾಗ್ನಿಸಂತಪ್ತಸಮಾಹ್ಲಾದನಚಂದ್ರಿಕಾ’ ಎಂಬ ಶ್ಲೋಕಾರ್ಧದಲ್ಲಿ ‘ಸಂತಪ್ತ’ ಎಂಬ ಪದದ ಕೊನೆಯ ಅಕ್ಷರ ‘ಪ್ತ’ ತನ್ನ ಯತಿಸ್ಥಾನದ ಕಾರಣ ಸಹಜವಾಗಿಯೇ ಕರ್ಷಣಕ್ಕೆ ತುತ್ತಾಗಿ ‘ಸಂತಪ್ತಾ’ ಎಂದಾಗುವ ಮೂಲಕ ಅಪಾರ್ಥಕ್ಕೆ ಆಸ್ಪದವೀಯುತ್ತದೆ. ಆಗ “ತಾಪತ್ರಯವೆಂಬ ಉರಿಗೆ ಸಿಲುಕಿದ ಜನರ ಪಾಲಿಗೆ ದೇವಿಯು ಬೆಳುದಿಂಗಳಿನಂತೆ” ಎಂಬ ಸದರ್ಥವು ಮರೆಯಾಗಿ ದೇವಿಯೇ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರುವಳೆಂಬ ಅಪಾರ್ಥ ತಲೆದೋರುತ್ತದೆ! ಆದರೆ ಮಹಾಕವಿಗಳೇ ಇಂಥ ಎಷ್ಟೋ ರಚನೆಗಳನ್ನು ಮಾಡಿದ್ದಾರೆ. ಉದಾಹರಣೆಗೆ ಬಾಣಭಟ್ಟನ ಪ್ರಸಿದ್ಧಪದ್ಯವನ್ನೇ ಗಮನಿಸಬಹುದು:

ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೇ ।
ತ್ರೈಲೋಕ್ಯನಗರಾರಂಮೂಲಸ್ತಂಭಾಯ ಶಂಭವೇ ॥
(ಹರ್ಷಚರಿತ ೧.೧)

ಧಾಟಿಯು ಉನ್ಮೀಲಿತವಾಗುವಂತೆ ದಂಡಾಕಾರವಾಗಿ ಪಠಿಸುವ ಮೂಲಕ ಇಂಥ ಶ್ಲೋಕಗಳಿಗೆ ವಾಗರ್ಥಗಳ ಸೊಗಸನ್ನು ತುಂಬಿಕೊಡಬೇಕಲ್ಲದೆ ಯತಿಸ್ಥಾನದಲ್ಲಿ ಯಾಂತ್ರಿಕವಾಗಿ ನಿಲ್ಲಿಸುವಂಥ ರೀತಿಯಿಂದ ಅಲ್ಲ.+++(5)+++ ಇಂಥ ರಚನೆಗಳ ಸಮಾಸಗುಂಫನ ವಿಶಿಷ್ಟವೂ ನಾದಮಯವೂ ಆದ ಗತಿಸುಭಗತೆಯನ್ನು ತಳೆದ ಕಾರಣ ರಸಿಕರ ಸಮ್ಮತಿ ದಕ್ಕಿದೆ.

ಯುಕ್ಪಾದ

೪. ಓಜಪಾದಗಳ ಪರಿ ಇಂತಾದರೆ,
ಯುಕ್ಪಾದಗಳ ಬಗೆ ಹೇಗೆಂಬುದನ್ನು ಸ್ವಲ್ಪ ಗಮನಿಸೋಣ.
ಇಲ್ಲಿ ಕೂಡ ಪೂರ್ವಾರ್ಧದ ನಾಲ್ಕು ಅಕ್ಷರಗಳಿಗೆ ಲಕ್ಷಣಕಾರರು ಯಾವುದೇ ನಿಯಮಗಳನ್ನು ವಿಧಿಸಿಲ್ಲ.
ಆದರೂ ಪಾದದ ಮೊದಲಿಗೆ ಎರಡಕ್ಕಿಂತ ಹೆಚ್ಚು ಲಘುಗಳು ಒಟ್ಟಿಗೆ ಬರುವಂತಿಲ್ಲವೆಂಬ ಸೂಕ್ಷ್ಮ ಶ್ಲೋಕದ ಗತಿಸುಭಗತೆಯನ್ನು ಬಲ್ಲವರಿಗೆ ಸುವೇದ್ಯ.+++(5)+++
ಉದಾಹರಣೆಗೆ ‘ಕಮಲಾಕರಕಂಜಾತಪ್ರೀತಂ ವಿಷ್ಣುಪದಂ ಭಜೇ’ ಎಂಬ ಈ ಸಾಲು ಶ್ರುತಿಸುಭಗವಾಗಿರುವಂತೆ ‘ಕಮಲಯಾ ಸಮಾರಾಧ್ಯಂ ಭಜೇ ವೈಕುಂಠವಾಸಿನಮ್’ ಎಂಬ ಸಾಲು ತೋರದು.

ಸರ್ವದಾ ಲಘುವಾಗುವ ಐದನೆಯ ಅಕ್ಷರಕ್ಕೆ ಮುನ್ನ ಮಾತ್ರ ಇಂಥ ಅವಕಾಶ ಉಂಟು.+++(5)+++
ಅಂದರೆ ಮೂರು ಮತ್ತು ನಾಲ್ಕನೆಯ ಅಕ್ಷರಗಳನ್ನು ಲಘುವಾಗಿಸಿಕೊಂಡು
ಮೂರು ಲಘುಗಳನ್ನು ಅವ್ಯವಹಿತವಾಗಿ ಉಳಿಸಿಕೊಳ್ಳುವುದು ಈ ಎಡೆಯಲ್ಲಿ ಮಾತ್ರ ಸಾಧ್ಯ.
ಉದಾ: ‘ದೇವಂ ಕುವಲಯಶ್ಯಾಮಂ ವಂದೇ ವನಧಿಶಾಯಿನಮ್’ ಎಂಬ ಸಾಲಾಗಲಿ
‘ರಮಾಸಹಚರಂ ರಮ್ಯಂ ನುಮಃ ಸುರಮುನಿಸ್ತುತಮ್’
ಎಂಬ ಸಾಲಾಗಲಿ ಶ್ರುತಿಕಟುವಾಗಿಲ್ಲ.
ಮೊದಲನೆಯ ಸಾಲಿನಲ್ಲಿ ಮೂರು ಲಘುಗಳ ಮುನ್ನ
ಎರಡು ಗುರುಗಳು ಅವ್ಯವಹಿತವಾಗಿ ಬಂದಿವೆ.
ಎರಡನೆಯ ಸಾಲಿನಲ್ಲಿ ಮೂರು ಲಘುಗಳ ಮುನ್ನ
ಒಂದೇ ಗುರು ಬಂದಿದೆ. ಇಂತಿದ್ದರೂ ಗತಿಯಲ್ಲಿ ಶ್ರುತಿಕಟುತ್ವವಿಲ್ಲ.
ಈ ಎಲ್ಲ ವೈಚಿತ್ರ್ಯಗಳನ್ನು ಗಮನಿಸಿದಾಗ
ಶ್ಲೋಕವು ಅದೆಷ್ಟು ಬಗೆಯ ವೈವಿಧ್ಯ-ಸ್ವಾತಂತ್ರ್ಯಗಳ ಸಾಧ್ಯತೆಗಳನ್ನು ಹೊಂದಿದೆಯೆಂದು ತಿಳಿಯುತ್ತದೆ.
ಹೀಗಾಗಿಯೇ ಇದಕ್ಕೆ ವಿಶಿಷ್ಟವಾದ ಗತಿಸೌಂದರ್ಯವನ್ನು ನಿರ್ದಿಷ್ಟವಾಗಿ ಕಂಡುಕೊಳ್ಳುವ
ಹಾಗೂ ಪದ್ಯರಚನಾಕಾಲದಲ್ಲಿ ಆ ಸೊಗಸನ್ನು ಪುನ ರ್ನಿರ್ಮಿಸುವ ಪ್ರಕ್ರಿಯೆಯಲ್ಲಿ ಸಂಕೀರ್ಣತೆಯುಂಟು.

ಹೀಗೆ ಮೂರು ಲಘುಗಳಿಗೆ ಅವಕಾಶವಿರುವ ಶ್ಲೋಕಗಳಲ್ಲಿ
ಮೂರನೆಯ ಅಕ್ಷರ ಮುಗಿದ ಬಳಿಕ
ಪದಯತಿ (ಪದದ ಮುಗಿತಾಯ) ಬರದಿದ್ದಲ್ಲಿ
ಅರ್ಥನಿರಪೇಕ್ಷವಾಗಿ ಮೂರನೆಯ ಅಕ್ಷರವನ್ನು ಒತ್ತಿಹೇಳುವ ಪ್ರವೃತ್ತಿ ತಾನಾಗಿಯೇ ಉಂಟಾಗುತ್ತದೆ.
ಇಂಥ ಸ್ಫುಟತರೋಚ್ಚಾರಣೆಯ ಕಾರಣ
ಆ ಅಕ್ಷರವು ಸ್ವರ-ಭಾರವನ್ನು ಹೊಂದಿ,
ಗುರುಸದೃಶ ಸ್ಥಿತಿಯನ್ನು ಪಡೆದು
ಶ್ಲೋಕದ ಗತಿಗೆ ಸೌಷ್ಠವವನ್ನು ತಂದೀಯುತ್ತದೆ.+++(5)+++
ಆದರೆ ಅಂಥ ಎಡೆಯಲ್ಲಿ
ಅರ್ಥಕ್ಕೆ ತೊಡಕಾಗುವಂತೆ ವಿಕಾರವಾಗಿ ಪದಚ್ಛೇದವಾಗುವ ಮೂಲಕ
ಯತಿಭಂಗದಂಥ ಅಹಿತಕರ ಭಾವನೆ
ಶ್ರೋತೃಗಳ ಮನಸ್ಸಿನಲ್ಲಿ ಮೂಡುತ್ತದೆ.
ಇದನ್ನು ಗಮನಿಸಿದಾಗ
ಶ್ಲೋಕದಲ್ಲಿ ಗುರುವಿಗಿರುವ ಮಹತ್ತ್ವ ಅರಿವಾಗದಿರದು.

ದೇವಂ ಕುವಲಯಶ್ಯಾಮಂ ವಂದೇ ವನಧಿಶಾಯಿನಮ್ ।
ರಮಾಸಹಚರಂ ರಮ್ಯಂ ನುಮಃ ಸುರಮುನಿಸ್ತುತಮ್ ॥
ನಮಾಮಿ ಗಿರಿಜಾಕಾಂತಂ ಭಜಾಮಿ ವಿಶದಪ್ರಭಮ್ ।
ಬಾಲೇಂದುಮುಕುಟಂ ಭರ್ಗಂ ಧ್ಯಾಯಾಮಿ ಯಮವೈರಿಣಮ್ ॥

ಇಲ್ಲಿ ಲ-ಗಂ ಎಂಬ ತ್ರಿಮಾತ್ರಾವಿನ್ಯಾಸದ ಪಾದಾದಿಯಲ್ಲಿ
ಮೂರನೆಯ ಅಕ್ಷರದ ಬಳಿಕ
ಪದಯತಿಯ ಅಥವಾ ಸ್ಫುಟತರೋಚ್ಚಾರಣೆಯ ಅನಿವಾರ್ಯತೆ ಇದ್ದರೂ
ಗಂ-ಗಂ ಎಂಬ ಚತುರ್ಮಾತ್ರಾವಿನ್ಯಾಸದ ಪಾದಾದಿಯಲ್ಲಿ
ಇಂಥ ಅನಿವಾರ್ಯತೆ ಉಲ್ಬಣಿಸಿಲ್ಲ.+++(5)+++
ಇದಕ್ಕೆ ಕಾರಣ ಪಾದಾದಿಯ ಲ-ಗಂ ಎಂಬ ವಿನ್ಯಾಸಕ್ಕಿಂತ ಗಂ-ಗಂ ಎಂಬ ವಿನ್ಯಾಸದಲ್ಲಿ ಉಂಟಾಗಿರುವ ಒಂದು ಮಾತ್ರಾಕಾಲದ ಆಧಿಕ್ಯ
ಹಾಗೂ ತತ್ಫಲಿತವಾದ ಚತುರಸ್ರತೆಗಳೇ.+++(5)+++
ಲ-ಗಂ ಎಂಬ ತ್ರಿಮಾತ್ರಾ-ವಿನ್ಯಾಸವು ಲ-ಗಂ-ಲ ಎಂಬ ಜ-ಗಣರೂಪದ ಚತುರ್ಮಾತ್ರಾ-ವಿನ್ಯಾಸವನ್ನು ತಾಳಿದಲ್ಲಿ
ಪಾದಾದಿಗೆ ಒಂದು ಬಗೆಯ ಗತಿಸಾಮ್ಯ ದಕ್ಕುತ್ತದೆ.
ಇದನ್ನು ಗಳಿಸಲೆಂದೇ ಶ್ಲೋಕದ ಛಂದೋಗತಿಯು
ಸ್ವತಂತ್ರವಾಗಿಯೋ ಸ್ವರಭಾರ-ಪ್ರಾಪ್ತಿಯಿಂದಲೋ
ತೃತೀಯಾಕ್ಷರದಲ್ಲಿ ಪದ-ಚ್ಛೇದವನ್ನು ಸಾಧಿಸಲು ಹೆಣಗುತ್ತದೆ.+++(4)+++

ಸ್ವರಭಾರದಿಂದ ಅಕ್ಷರಗಳ ಗುರುತ್ವ-ಲಘುತ್ವಗಳು ವ್ಯತ್ಯಾಸವಾಗುವುದು ವರ್ಣವೃತ್ತಗಳಲ್ಲಿ ಇಲ್ಲದ ಪ್ರಕ್ರಿಯೆ. ಇದನ್ನು ಕರ್ಷಣಜಾತಿಗಳ ಶ್ರಾವಣರೂಪದಲ್ಲಿ ಬಲುಮಟ್ಟಿಗೆ ಕಾಣಬಹುದು. ತ್ರೈಸ್ವರ್ಯದ ಸ್ವರಿತದಲ್ಲಿ ಕೂಡ ಇದರ ಎಳೆಯನ್ನು ಗಮನಿಸಬಹುದು.+++(4)+++ ಈ ಹಂತದಲ್ಲಿ ಪ್ರಸ್ತುತ ಚರ್ಚೆಯು ಛಂದಃಶಾಸ್ತ್ರದ ಪರಿಧಿಯನ್ನು ಮೀರಿ ಶಿಕ್ಷಾಶಾಸ್ತ್ರ ಮತ್ತು ಸಂಗೀತಶಾಸ್ತ್ರಗಳತ್ತ ಚಾಚಿಕೊಳ್ಳುವಂತೆ ತೋರುತ್ತದೆ.

೫. ಸೇಡಿಯಾಪು ಅವರು
ಶ್ಲೋಕದಲ್ಲಿ ಗರಿಷ್ಠಸಂಖ್ಯೆಯ ಗುರುಗಳು ಹಾಗೂ ಲಘುಗಳು ಎಷ್ಟಿರಬಹುದು,
ಹೇಗಿರಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಇದನ್ನು ಹೀಗೆ ರೂಪಿಸಬಹುದು:

ಧೀರೋದಾತ್ತಂ ಹರಿಂ ವಂದೇ
ಶಾಂತಸ್ಮೇರಂ ತಥಾ ಹರಮ್ ।

ಕಮಲಾ-ವದನಾದಿತ್ಯಂ
ಗಿರಿಜಾ-ಹೃದಯೇಶ್ವರಂ ॥

ಇವು ಶ್ರುತಿಕಟುತ್ವದ ಸೋಂಕೂ ಇಲ್ಲದ ಎರಡು ಮಾದರಿಗಳು. ಮೊದಲನೆಯ ಉದಾಹರಣೆಯಲ್ಲಿ ಕೇವಲ ಮೂರು ಲಘುಗಳ ನಿರ್ಣಾಯಕ ವಿನಿಯೋಗದಿಂದ ಶ್ಲೋಕದ ಧಾಟಿ ಸೊಗಸಾಗಿ ಉನ್ಮೀಲಿತವಾಗಿದೆ. ಎರಡನೆಯ ಉದಾಹರಣೆಯಲ್ಲಿ ಐದು ಯಥಾರ್ಥಗುರುಗಳ ಮತ್ತು ಎರಡು ಸಂಭಾವ್ಯಗುರುಗಳ ನಿರ್ಣಾಯಕ ವಿನ್ಯಾಸದಿಂದ ಶ್ಲೋಕದ ಗತಿ ಚೆನ್ನಾಗಿ ಒಡಮೂಡಿದೆ.

ಚೋದ್ಯವೆಂಬಂತೆ ಎರಡೂ ಮಾದರಿಗಳಲ್ಲಿ ನಾಲ್ಕು ಮಾತ್ರೆಗಳ ಘಟಕಗಳು ಸಹಜವೆಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ:

ಧೀರೋ । ದಾತ್ತಂ । ಹರಿಂ । ವಂದೇ । ಶಾಂತ । ಸ್ಮೇರಂ । ತಥಾ ಹರಮ್
ಕಮಲಾ । ವದನಾ । ದಿತ್ಯಂ* । ಗಿರಿಜಾ । ಹೃದಯೇ । ಶ್ವರಂ

ಇಂತಿದ್ದರೂ ಇಲ್ಲಿಯ ಮೊದಲ ಉದಾಹರಣೆ
ಚತುಷ್ಕಲ ಧಾಟಿಯಲ್ಲಿ ಸಾಗುವ ಆರ್ಯಾಪ್ರಭೇದಗಳ ಹಾಗೆಯೋ
ಪಂಜರಿಕೆಯ ಪ್ರಕಾರಗಳಂತೆಯೋ ಕೇಳುತ್ತಿಲ್ಲ.
ಇದಕ್ಕೆ ಕಾರಣ ನಾಲ್ಕು ಮಾತ್ರೆಗಳ ಎರಡು ಗಣಗಳ ಬಳಿಕ ಮೂರು ಮಾತ್ರೆಗಳ ಒಂದು ಗಣ ಬರುವುದು ಮತ್ತಿದು ಲಯಾನ್ವಿತತೆಗೆ ಸ್ವಲ್ಪವೂ ಒದಗಿಬರದಂಥ ಲ-ಗಂ ರೂಪದಲ್ಲಿರುವುದು.
ಇಂಥ ಲಘ್ವಾದಿಯಾದ ಗುರುಗಳು ಮಾತ್ರಾಜಾತಿಗಳ ಗತಿಗೆ ವಿರಸಪ್ರಾಯಗಳೆಂಬುದು ಛಂದೋವಿದರ ಮತ.+++(5)+++
ವಿಶೇಷತಃ ಈ ಬಗೆಯ ಗಣಗಳು
ಮಾತ್ರಾಸಮತ್ವದಿಂದ ಏಕರೂಪತೆಯನ್ನು ತಾಳದಿದ್ದಾಗ
ಅವು ಒಟ್ಟ್-ಅಂದದ ಗತಿಗೆ ತಂದ್ ಈಯುವ ತೊಡಕು ಎದ್ದುಕಾಣುವಂಥದ್ದು.
ಈ ಕಾರಣದಿಂದಲೇ ಮೂಲತಃ ಲಯಾನ್ವಿತತೆಯ ಜಾಡಿಗೆ ಸಲ್ಲಬಹುದಾದ ವೃತ್ತಗಳೂ
ಲಯರಹಿತ ಬಂಧಗಳಂತೆ ಕೇಳಿಸುತ್ತವೆ.
ಇದನ್ನು ಕುರಿತು ಸೇಡಿಯಾಪು ಅವರು ವಿಶದವಾಗಿ ಚರ್ಚಿಸಿದ್ದಾರೆ.
ಇನ್ನು ಸದ್ಯದ ಉದಾಹರಣೆಯ ‘ತಥಾ ಹರಮ್’ ಎಂಬಲ್ಲಿ
ಜ-ಗಣ ಮತ್ತೊಂದು ಗುರುವಿರುವಂತೆ ತೋರಿದರೂ
ಇಲ್ಲಿ ಲ-ಗಂ ಲ-ಗಂ ಎಂಬ ಮೂರು ಮೂರು ಮಾತ್ರೆಗಳ ಎರಡು ಘಟಕಗಳೇ ಉನ್ಮೀಲಿತವ್ ಆಗುವುದು ಗತಿವಿಜ್ಞರಿಗೆ ಸುವೇದ್ಯ.

ಇನ್ನು ಮತ್ತೊಂದು ಉದಾಹರಣೆಯನ್ನು ಗಮನಿಸುವುದಾದರೆ
ಇಲ್ಲಿಯ ಎಲ್ಲ ಘಟಕಗಳೂ ನಾಲ್ಕು ಮಾತ್ರೆಗಳ ಗಣಗಳೇ ಆಗಿವೆ.
‘ದಿತ್ಯ’ ಮತ್ತು ‘ಶ್ವರ’ ಎಂಬಲ್ಲಿ ಪಾದಾಂತದ ಕರ್ಷಣದಿಂದ
ಕಡೆಯ ಅಕ್ಷರಗಳು ಗುರುಗಳಾಗಿ ಮಾರ್ಪಟ್ಟಿವೆ. ‘ಶ್ವರ’ ಎಂಬಲ್ಲಿ ಮಾತ್ರ ಲ-ಗಂ ವಿನ್ಯಾಸದ ಮೂರು ಮಾತ್ರೆಗಳ ಗಣ ಉಳಿದಿದೆ. ಇಂತಿದ್ದರೂ ಇಲ್ಲಿ ಚತುರ್ಮಾತ್ರಾಗಣಘಟಿತವಾದ ಬಂಧಗಳ ಗತಿ ಉನ್ಮೀಲಿಸುವಂತೆ ಕಾಣದು. ಈ ಮಾದರಿಯ ಎರಡು ಪಾದಗಳೂ ಮೂರು ಮೂರು ಗಣಗಳಿಂದ ಕೂಡಿದ್ದು, ಮಾತ್ರಾಜಾತಿಯ ಬಂಧಗಳ ಗತಿಸುಭಗತೆಗೆ ತುಂಬ ಅನಿವಾರ್ಯವಾದ ಚತುರಸ್ರತೆಯಿಂದ ವಂಚಿತವಾಗಿರುವುದೇ ಇದಕ್ಕೆ ಕಾರಣ. ಎರಡನೆಯ ಪಾದದ ಕೊನೆಗೆ ಊನಗಣವು ಬಂದು ಕರ್ಷಣದ ಮೂಲಕ ಚತುರಸ್ರತೆಯನ್ನು ಹೇಗೋ ಸಂಪಾದಿಸಿಕೊಳ್ಳುವ ಅವಕಾಶವಿದ್ದಂತೆ ತೋರಿದರೂ ಇದು ಗಂ-ಲ ಎಂಬ ವಿನ್ಯಾಸದಲ್ಲಿಲ್ಲದೆ ಲ-ಗಂ ಎಂಬ ವಿನ್ಯಾಸವನ್ನುಳ್ಳ ಕಾರಣ ಚತುರ್ಮಾತ್ರಾತ್ವ ಮತ್ತು ಚತುರಸ್ರತ್ವಗಳಿಗೆ ಅಡ್ಡಿಯನ್ನು ತಂದಿದೆ. ಅಲ್ಲದೆ ಶ್ಲೋಕರಚನೆಯ ಸಹಜಧಾರೆಯಲ್ಲಿ ಇಂಥ ವಿಶಿಷ್ಟರೂಪದ ವಿನ್ಯಾಸ ಏಕಪ್ರಕಾರವಾಗಿ ತೋರಿಕೊಳ್ಳುವುದು ವಿರಳ. ಈ ಬಗೆಯ ರಚನೆಗೆ ಪ್ರತ್ಯೇಕವಾದ ಅವಧಾನ ಬೇಕಾಗುತ್ತದೆ. ಆದುದರಿಂದ ಇಂಥ ಚತುರ್ಮಾತ್ರಾಪಾರಮ್ಯದ ಗಣಗಳು ಅಮಿತವಾಗಿರುವ ಪಾದಗಳ ಏಕತ್ರ ಸಮಾವೇಶ ಅಸಂಭವ. ಯಾವುದೇ ಗತಿಯು ನಮ್ಮ ಕೇಳ್ಮೆಯಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂದರೆ ಆ ಬಗೆಯ ವಿನ್ಯಾಸದ ಸಾಲುಗಳು ಕನಿಷ್ಠಪಕ್ಷ ನಾಲ್ಕಾದರೂ ಬರಬೇಕು. ಇಂಥ ಸಂಭವತೆ ಪೂರ್ವೋಕ್ತ ವಿನ್ಯಾಸಗಳಲ್ಲಿ ಇಲ್ಲವೆಂಬಷ್ಟು ವಿರಳ ಎಂಬುದೇ ಸದ್ಯದ ನಿಗಮನಕ್ಕೆ ಆಧಾರ.

೬. ಪ್ರಸಿದ್ಧವಾದ ಲಕ್ಷಣದ ಪ್ರಕಾರ ಪಾದಾದಿಯಲ್ಲಿ ಭ-ಗಣವು ಬರಬಾರದೆಂಬ ನಿಯಮವಿಲ್ಲ. ಇಂಥ ವಿನ್ಯಾಸವು ಬಂದಾಗ ಶ್ರುತಿಕಟುವಾಗುವುದು ಸ್ವಯಂವೇದ್ಯ. ಉದಾಹರಣೆಗೆ ‘ಮಾಧವ ಮಾಧುರೀಧುರ್ಯ ಶ್ರೀಧರ ಶಾಂತಿಶೀಲಿತ’ ಎಂಬಲ್ಲಿ ಶ್ಲೋಕದ ಘೋಷ ಸ್ವಲ್ಪವೂ ಕಾಣದಿರುವುದು ಸಾಮಾನ್ಯಸ್ತರದ ಗತಿಪ್ರಜ್ಞೆ ಉಳ್ಳವರಿಗೂ ತಿಳಿಯುತ್ತದೆ.

೭. ಯುಕ್ಪಾದಗಳಲ್ಲಿಯ ಮೊದಲ ನಾಲ್ಕು ಅಕ್ಷರಗಳು ಕಡೆಯ ನಾಲ್ಕು ಅಕ್ಷರಗಳ ವಿನ್ಯಾಸವನ್ನು ಹೊಂದಿರಬಾರದೆಂಬ ನಿರ್ಬಂಧ ಪೂರ್ವೋಕ್ತ ಲಕ್ಷಣದಲ್ಲಿಲ್ಲ. ಆದರೆ ಇಂಥ ಯುಕ್ಪಾದ ಪ್ರಮಾಣಿಕಾ ಎಂಬ ಲಯಾನ್ವಿತ ವೃತ್ತದ ಸಾಲಾಗಿ ಪರಿಣಮಿಸುವ ಅಪಾಯವುಂಟು. ಇದು ಶ್ಲೋಕದ ಲಯರಹಿತ ಧಾಟಿಗೆ ವ್ಯತಿರಿಕ್ತವಾದುದು; ಹೀಗಾಗಿ ಶ್ರುತಿಕಟುವೂ ಆದುದು. ಉದಾಹರಣೆಗೆ ‘ವಂದೇ ಮುಕುಂದಮಾನಂದಂ ಸನಾತನಂ ನಿರಂತರಮ್’ ಎಂಬಲ್ಲಿ ಶ್ಲೋಕದ ಧಾಟಿಗೆ ಓಜಪಾದವು ಎಷ್ಟು ಬದ್ಧವಾಗಿದೆಯೋ ಯುಕ್ಪಾದ ಕೂಡ ಅಷ್ಟೇ ಅಬದ್ಧವಾಗಿದೆ. ಯುಕ್ಪಾದದ ‘ಸನಾತನಂ’ ಎಂಬ ಪದವನ್ನು ‘ನಿತ್ಯಸತ್ಯಂ’ ಎಂದು ಮಾರ್ಪಡಿಸಿದೊಡನೆಯೇ ಗತಿಯು ಸುಭಗವಾಗುವುದು ಸ್ಪಷ್ಟ.

[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 3 Source: prekshaa]]

ಪರಿಷ್ಕೃತ ಲಕ್ಷಣ

ಈ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ
ಈ ಮುನ್ನ ಹೇಳಿದ ಶ್ಲೋಕದ ಲಕ್ಷಣಗಳು
ಪರ್ಯಾಪ್ತವಲ್ಲವೆಂದು ತಿಳಿಯುತ್ತದೆ.
ಬಹುಶಃ ಈ ಕಾರಣದಿಂದಲೇ
ಮಧ್ಯಕಾಲೀನ ಛಂದೋವಿದರು
ಇನ್ನಷ್ಟು ಪರಿಷ್ಕೃತವಾದ ಲಕ್ಷಣವನ್ನು ರೂಪಿಸಿದ್ದಾರೆ.

ವೃತ್ತರತ್ನಾಕರ

ಉದಾಹರಣೆಗೆ ‘ವೃತ್ತರತ್ನಾಕರ’ದ ನಾರಾಯಣಭಟ್ಟೀಯ ವ್ಯಾಖ್ಯೆಯು
ಶ್ಲೋಕದ ಎಲ್ಲ ಪಾದಗಳ
ಮೊದಲ ನಾಲ್ಕು ಅಕ್ಷರಗಳ ವಿನ್ಯಾಸಗಳಿಗೂ ಅನ್ವಯಿಸುವಂಥ ಕೆಲವೊಂದು ನಿಯಮಗಳನ್ನು ರೂಪಿಸಿದೆ (೨.೨೧). ಅವು ಹೀಗಿವೆ:

  • ಪ್ರತಿಯೊಂದು ಸಾಲಿನ
    ಮೊದಲ ಹಾಗೂ ಕೊನೆಯ ಅಕ್ಷರಗಳ ಗುರುತ್ವ ಅಥವಾ ಲಘುತ್ವಗಳಲ್ಲಿ
    ಐಚ್ಛಿಕತೆ ಉಂಟು.
    ಆದರೆ ನಡುವೆ ಬರುವ ಆರು ಅಕ್ಷರಗಳಲ್ಲಿ ಇಂಥ ಸ್ವಾತಂತ್ರ್ಯವಿಲ್ಲ.
  • ಯಾವುದೇ ಪಾದದಲ್ಲಾಗಲಿ
    ಎರಡು, ಮೂರು ಮತ್ತು ನಾಲ್ಕನೆಯ ಅಕ್ಷರಗಳನ್ನು ಒಳಗೊಂಡ ಭಾಗದಲ್ಲಿ ಸ-ಗಣವಾಗಲಿ, ನ-ಗಣವಾಗಲಿ ಬರಬಾರದು.
  • ಯುಕ್ಪಾದಗಳ ಇವೇ ಅಕ್ಷರಗಳ ಸ್ಥಾನದಲ್ಲಿ ರ-ಗಣ ಬರಬಾರದು.

ಇದು ಅನುಷ್ಟುಪ್‌-ವರ್ಗದ ‘ಪಥ್ಯಾವಕ್ತ್ರ’ ಎಂಬ ಪ್ರಭೇದಕ್ಕೆ ಅನ್ವಿತವಾಗಿದೆ.
ಇದನ್ನೇ ಶ್ಲೋಕದ ಸಾಮಾನ್ಯ-ಲಕ್ಷಣವಾಗಿ ಸ್ವೀಕರಿಸಲಾಗಿದೆ.
ಮೇಲೆ ಕಾಣಿಸಿದ ಲಕ್ಷಣ ಶ್ಲೋಕದ ಗತಿಯಲ್ಲಿ
ತಲೆದೋರಬಹುದಾದ ಎಲ್ಲ ಬಗೆಯ ಶ್ರುತಿಕಟುತ್ವಗಳನ್ನೂ ಬಲುಮಟ್ಟಿಗೆ ನಿವಾರಿಸಿಕೊಂಡಿದೆ.
ಇದರ ಅನುಸರಣೆಯಿಂದ
ಪ್ರತಿಪಾದದ ಪಂಚಮಲಘುವನ್ನು ಒಳಗೊಳ್ಳದಂತೆ
ಮೂರು ಲಘುಗಳ ಅವ್ಯವಹಿತ ಪ್ರಯೋಗಕ್ಕೆ ಅವಕಾಶವ್ ಇರುವುದಿಲ್ಲ.
ಜೊತೆಗೆ ಆದ್ಯಂತ ಲ-ಗಂ ವಿನ್ಯಾಸವುಳ್ಳ ಪ್ರಮಾಣಿಕಾಗತಿಯು
ಯುಕ್ಪಾದಗಳಲ್ಲಿ ತಲೆದೋರುವುದಿಲ್ಲ.
ಪಾದಗಳು ಭ-ಗಣದಿಂದ ಆರಂಭವಾಗುವ
ಮೂಲಕ ಒದಗುವ ಶ್ರುತಿಕಟುತೆಗೂ ಅವಕಾಶವಿರುವುದಿಲ್ಲ.

ಮತ್ತೂ ಪರಿಷ್ಕರಿಸುವುದು

ಹೀಗೆ ಪರಿಷ್ಕೃತವಾದ ಲಕ್ಷಣವನ್ನು
ಮತ್ತೂ ಪರಿಷ್ಕರಿಸುವುದು ಅಪೇಕ್ಷಣೀಯ.

(೧) ಯುಕ್ಪಾದಗಳ ಮೊದಲ ಅಕ್ಷರದ ಬಳಿಕ ವರ್ಜ್ಯವಾಗಿರುವ ರ-ಗಣವು ಓಜಪಾದಗಳ ಅದೇ ಎಡೆಯಲ್ಲಿ ವರ್ಜ್ಯವಾದರೆ ಒಳಿತು.

(೨) ನಾಲ್ಕನೆಯ ಅಕ್ಷರವು ಲಘುವಾಗುವ ಪಕ್ಷದಲ್ಲಿ ಆ ಪಾದದ ಆದಿಯಲ್ಲಿ ತ-ಗಣ ಮತ್ತು ಜ-ಗಣಗಳು ವರ್ಜ್ಯವಾದರೆ ಒಳಿತು.

ಗತಿ-ಸೌಂದರ್ಯವು ಭಾಷಾ-ಪದ-ಗತಿ ಮತ್ತು ಛಂದಃ-ಪದ-ಗತಿಗಳೆಂಬ
ಎರಡು ದಂಡೆಗಳ ನಡುವೆ ಹರಿಯುವ ನದಿ.+++(5)+++
ಆದುದರಿಂದ ಛಂದಃ-ಪದ-ಗತಿಯ ದಂಡೆಯನ್ನು ಒಡೆದುಕೊಂಡು ಹೋದಂತೆಲ್ಲ
ನದಿಯ ಹರಿವು ಹದಗೆಡುತ್ತದೆ.
ಛಂದಃ-ಪದಗತಿಯಲ್ಲಿ ಹತ್ತಾರು ಸಾಧ್ಯತೆಗಳಿದ್ದಾಗಲೂ ಅವುಗಳ ಪೈಕಿ ಮಿಗಿಲಾಗಿ ಶ್ರುತಿ-ಹಿತವಾದುವನ್ನೇ ಆಯ್ದುಕೊಂಡರೆ
ಅವು ಭಾಷಾ-ಪದ-ಗತಿಗೆ ಕೂಡ ಅನುಕೂಲಿಗಳಾಗುತ್ತವೆ.

ಏಕೆಂದರೆ ಯತಿ-ಭಂಗವನ್ನು ತರುವಲ್ಲಿ
ಭಾಷಾ-ಪದ-ಗತಿಯದೇ ಹೆಚ್ಚಿನ ಪಾತ್ರ.
ಈ ತೊಡಕನ್ನು ನಿವಾರಿಸಿಕೊಂಡರೆ
ಪದ್ಯಗತಿಯು ತನ್ನಂತೆಯೇ ಸೊಗಸಾಗುವುದು.
ಹೀಗೆ ಒಳ್ಳೆಯ ಛಂದಃ-ಪದ-ಗತಿ,
ಅದಕ್ಕೆ ಅ-ವಿರುದ್ಧವಾದ ಭಾಷಾ-ಪದ-ಗತಿ ಮತ್ತು
ಇವೆರಡರ ಮೂಲಕ ಸುಂದರವಾದ ಪದ್ಯಗತಿ
ಎಂಬ ಅನುಕ್ರಮ ಪಾಲಿತವಾಗುತ್ತದೆ.

ಅತ್ಯುತ್ತಮ ಗತಿಸಾಧ್ಯತೆಗಳು

ಅಕ್ಷರಜಾತಿಗೆ ಸೇರುವ ಶ್ಲೋಕವು ಮಾತ್ರಾಜಾತಿ ಮತ್ತು ಕರ್ಷಣಜಾತಿಗಳ ಬಂಧಗಳಂತೆ ತನ್ನ ಗುರು-ಲಘುವಿನ್ಯಾಸದಲ್ಲಿ ಕೆಲಮಟ್ಟಿನ ಸ್ವಾತಂತ್ರ್ಯವನ್ನು ತಳೆದಿದೆ. ಆದರೆ ಮಾತ್ರಾಜಾತಿಗಳ ಹಾಗೆ ಸತಾನ ಗಣಗಳನ್ನಾಗಲಿ, ಮಾತ್ರಾಸಮತೆಯನ್ನಾಗಲಿ ಹೊಂದಿಲ್ಲ. ಜೊತೆಗೆ ಕರ್ಷಣಜಾತಿಗಳ ಹಾಗೆ ತಾಲಾನುಕೂಲವಾದ ಗಣಗಳನ್ನಾಗಲಿ, ಕಾಲಪ್ರಮಾಣದ ಸಮತೆಯನ್ನಾಗಲಿ ಪಡೆದಿಲ್ಲ. ಹೀಗಾಗಿ ಈ ಮೂರು ವರ್ಗಗಳ ನಡುವೆ ಕೆಲವಂಶಗಳಲ್ಲಿ ಸಾಮ್ಯ ಮತ್ತು ಕೆಲವಂಶಗಳಲ್ಲಿ ವೈಷಮ್ಯವಿದೆ.

ವಿಶಿಷ್ಟತೆಯನ್ನು ಗಮನಿಸುವಾಗ ವೈಷಮ್ಯಕ್ಕೆ ಸಹಜವಾಗಿಯೇ ಹೆಚ್ಚಿನ ಅವಧಾರಣೆ ಸಲ್ಲುತ್ತದೆ. ಶ್ಲೋಕದಲ್ಲಿ ಕಾಲಪ್ರಮಾಣ ಅಥವಾ ಮಾತ್ರಾಪ್ರಮಾಣದಿಂದ ಸಮಾನವಾದ ಘಟಕಗಳು ಬಂದಾಗ ಅವು ಲಯಾನ್ವಿತವಾಗದೆ, ಶ್ರುತಿಕಟುವೂ ಎನಿಸದೆ ಸಲ್ಲಬೇಕಾದ ಅನಿವಾರ್ಯತೆ ಉಂಟು. ಇಂಥ ಸೂಕ್ಷ್ಮವನ್ನು ಕಂಡುಕೊಂಡೊಡನೆಯೇ ಶ್ಲೋಕದ ಅತ್ಯುತ್ತಮ ಗತಿಸಾಧ್ಯತೆಗಳು ಉನ್ಮೀಲಿಸುತ್ತವೆ.

ಮೊದಲಿಗೆ ಗುರು-ಲಘುಗಳ ಯುಗ್ಮಕಗಳೇ ಹೆಚ್ಚಾಗಿರುವ ಶ್ಲೋಕಗತಿಯ ಪ್ರಸ್ತಾರವನ್ನು ಗಮನಿಸಬಹುದು.

ನನಾ ನಾನ ನನಾ ನಾನ ನನಾ ನಾನ ನನಾ ನನಾ ॥
ನಾನ ನಾನ ನನಾ ನಾನ ನಾನ ನಾನ ನನಾ ನನಾ
ನಾನಾ ನಾನಾ ನನಾ ನಾನಾ ನಾನಾ ನಾನಾ ನನಾ ನನಾ
ನನನಾ ನನನಾ ನಾನಾ ನನನಾ ನನನಾನಾ

ಈ ಉದಾಹರಣೆಗಳ ಪೈಕಿ ಮೊದಲನೆಯದು ಆದ್ಯಂತವಾಗಿ ಮೂರು ಮಾತ್ರೆಗಳ ಘಟಕಗಳನ್ನೇ ಹೊಂದಿದೆ. ಎರಡನೆಯದು ನಾಲ್ಕು ಮಾತ್ರೆಗಳ ಘಟಕಗಳನ್ನು ಹೆಚ್ಚಾಗಿ ಹೊಂದಿದ್ದರೂ ಮೂರು ಮಾತ್ರೆಗಳ ಮೂರು ಘಟಕಗಳನ್ನು ಪೂರ್ವಾರ್ಧದಲ್ಲಿಯೂ ಒಂದು ಘಟಕವನ್ನು ಉತ್ತರಾರ್ಧದಲ್ಲಿಯೂ ತಳೆದಿರುವುದನ್ನು ಗಮನಿಸಬಹುದು.

ಆದ್ಯಂತ ಮೂರು ಮಾತ್ರೆಗಳ ಮಾನವುಳ್ಳ ಗುರು-ಲಘುಗಳ ಯುಗ್ಮಗಳಿಂದಲೇ ಗತಿಸುಭಗತೆಯುಳ್ಳ ಶ್ಲೋಕವೊಂದು ರೂಪಿತವಾಗಲು ಸಾಧ್ಯವೆಂದು ಮೊದಲನೆಯ ಉದಾಹರಣೆಯ ಮೂಲಕ ತಿಳಿಯುತ್ತದೆ. ಜೊತೆಗೆ ಇಂಥ ಯುಗ್ಮಗಳು ಆದ್ಯಂತವಾಗಿ ಐಕರೂಪ್ಯವನ್ನು ಹೊಂದಿಲ್ಲದೆ ಅಲ್ಲಲ್ಲಿ ಪ್ರತೀಪರೂಪವನ್ನು ತಾಳಬೇಕೆಂಬ ತಥ್ಯವೂ ಗೋಚರವಾಗುತ್ತದೆ. ಮಾತ್ರವಲ್ಲ, ಇಂಥ ಪ್ರತೀಪರೂಪಗಳು ಯಾದೃಚ್ಛಿಕವಾಗಿ ಬರದೆ ವಿಶಿಷ್ಟವೂ ನಿರ್ದಿಷ್ಟವೂ ಆದ ಸ್ಥಾನಗಳಲ್ಲಿಯೇ ಬರಬೇಕೆಂಬ ಸೂಕ್ಷ್ಮವೂ ಗಮನಕ್ಕೆ ಬರುತ್ತದೆ. ಸಾವಧಾನವಾಗಿ ನೋಡಿದಾಗ ಇಂಥ ಪ್ರತೀಪರೂಪಗಳು ಮಾತ್ರಾಜಾತಿಗಳ ಬಂಧಗಳಲ್ಲಿ ಕಾಣುವಂಥ ತ್ರ್ಯಶ್ರಗತಿಯ ಲಯಾನ್ವಿತತೆಯನ್ನು ಮುರಿಯಲೆಂದೇ ನಿರ್ದಿಷ್ಟ ಸ್ಥಾನಗಳಲ್ಲಿ ಬರುವ ಮೂಲಕ ಶ್ಲೋಕಕ್ಕೇ ವಿಶಿಷ್ಟವಾದ ಲಯರಹಿತ ಗತಿಯನ್ನು ಕಾಪಾಡುತ್ತಿವೆಯೆಂದು ಸ್ಪಷ್ಟವಾಗುತ್ತದೆ. ಈ ಉದಾಹರಣೆಯ ಪೂರ್ವಾರ್ಧವನ್ನು ಕಂಡಾಗ ಯುಕ್ಪಾದದ ಕೊನೆಯ ನಾಲ್ಕು ಅಕ್ಷರಗಳಲ್ಲಿ ಇರಲೇಬೇಕಾದ ‘ಲಗಂ-ಲಗಂ’ ಎಂಬ ಶಾಶ್ವತ ವಿನ್ಯಾಸವನ್ನುಳಿದು ಮಿಕ್ಕಂತೆ ಎಲ್ಲ ಸಮಸ್ಥಾನಗಳಲ್ಲಿ ‘ಗಂ-ಲ’ ಎಂಬ ಪ್ರತೀಪವಿನ್ಯಾಸಗಳು ಬಂದಿರುವುದು ಸ್ಪಷ್ಟವಾಗುತ್ತದೆ ಮತ್ತಿವುಗಳ ಸಂಖ್ಯೆ ಮೂರು ಎಂಬ ತಥ್ಯವೂ ತಿಳಿಯುತ್ತದೆ. ಇನ್ನು ಉತ್ತರಾರ್ಧವನ್ನು ಕಂಡಾಗ ಯುಕ್ಪಾದದ ಕಡೆಯಲ್ಲಿ ಬರಲೇಬೇಕಾದ ‘ಲಗಂ-ಲಗಂ’ ಎಂಬ ವಿನ್ಯಾಸವನ್ನುಳಿದು ಮಿಕ್ಕಂತೆ ಇಡಿಯ ಪದ್ಯಾರ್ಧದಲ್ಲಿ ಕೇವಲ ಒಂದೇ ಒಂದು ಎಡೆಯಲ್ಲಿ ಮಾತ್ರ ‘ಲ-ಗಂ’ ಎಂಬ ಪ್ರತೀಪರೂಪವು ಬರುವ ಮೂಲಕ ಶ್ಲೋಕದ ಗತಿಸುಭಗತೆ ರಕ್ಷಿತವಾಗಿರುವುದು ಸ್ಪಷ್ಟ. ಒಟ್ಟಿನಲ್ಲಿ ಹೇಗೆ ನೋಡಿದರೂ ಸದ್ಯದ ಉದಾಹರಣೆಯ ಪೂರ್ವೋತ್ತರಾರ್ಧಗಳಲ್ಲಿ ಕಾಣುವ ಎರಡೂ ಮಾದರಿಗಳ ಪೈಕಿ ಎಲ್ಲಿಯೂ ಪ್ರತೀಪರೂಪದ ವಿನ್ಯಾಸಗಳು ಮೂರಕ್ಕಿಂತ ಹೆಚ್ಚಾಗಿಲ್ಲವೆಂದು ಸ್ಪಷ್ಟವಾಗುತ್ತದೆ. ಈ ಕಾರಣದಿಂದಲೇ ‘ಗಂ-ಲ’ ಎಂಬ ವಿನ್ಯಾಸವು ಓಜ ಮತ್ತು ಯುಕ್ಪಾದಗಳೆರಡರ ಮೊದಲ ನಾಲ್ಕು ಅಕ್ಷರಗಳ ಸ್ಥಾನದಲ್ಲಿ ಕೂಡ ಅವ್ಯವಹಿತವಾಗಿ ಬರಬಹುದೆಂದು ಗೊತ್ತಾಗುತ್ತದೆ.

‘ಲ-ಗಂ’ ವಿನ್ಯಾಸದ ಯುಗ್ಮಗಳು ಯುಕ್ಪಾದಗಳ ಕೊನೆಯ ನಾಲ್ಕು ಅಕ್ಷರಗಳಲ್ಲಿ ಅಳವಡಲೇ ಬೇಕಿರುವ ಕಾರಣ ಅವು ಮಿಕ್ಕಂತೆ ಎಲ್ಲಿಯೂ ಒಂದಕ್ಕಿಂತ ಹೆಚ್ಚು ಬಾರಿ ಅವ್ಯವಹಿತವಾಗಿ ಕಾಣಿಸಿಕೊಳ್ಳುವಂತಿಲ್ಲ.

ಎರಡನೆಯ ಉದಾಹರಣೆಯನ್ನು ಗಮನಿಸಿದಾಗ ಇಲ್ಲಿಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳು ಕ್ರಮವಾಗಿ ಶ್ಲೋಕವೊಂದರಲ್ಲಿ ಬರಬಹುದಾದ ಅತಿ ಹೆಚ್ಚಿನ ಹಾಗೂ ಅತಿ ಕಡಮೆಯ ಸಂಖ್ಯೆಯ ಮಾತ್ರೆಗಳಿಂದ ಕೂಡಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ ಪ್ರತೀಪಗಣಗಳ ಪಾತ್ರವಿಲ್ಲದಿದ್ದರೂ ‘ಲ-ಗಂ’ ವಿನ್ಯಾಸವುಳ್ಳ ಗುರು-ಲಘುಯುಗ್ಮಗಳು ಪೂರ್ವಾರ್ಧದ ಗತಿಸುಭಗತೆಯನ್ನು ಕಾಪಾಡುವಲ್ಲಿ ನಿರ್ಣಾಯಕವಾಗಿರುವುದು ಸುವೇದ್ಯ. ಅಂತೆಯೇ ಉತ್ತರಾರ್ಧದ ಗತಿಸುಭಗತೆಯನ್ನು ರಕ್ಷಿಸುವಲ್ಲಿ ಗುರುಗಳ ಪಾತ್ರವೇ ಕೀಲಕವಾಗಿರುವುದು ಸ್ಪಷ್ಟ.

ಮೊದಲ ಉದಾಹರಣೆಯಲ್ಲಿ ಗುರು-ಲಘುಯುಗ್ಮಗಳ ಸಂಖ್ಯೆ ಪ್ರತಿಯೊಂದು ಪಾದದಲ್ಲಿಯೂ ನಾಲ್ಕು-ನಾಲ್ಕಾಗುವ ಮೂಲಕ ಘಟಕಗಳ ಚತುರಸ್ರತೆಯು ಚೆನ್ನಾಗಿ ರಕ್ಷಿತವಾಗಿದ್ದರೂ ಪ್ರತೀಪವಿನ್ಯಾಸದ ಘಟಕಗಳ ಕಾರಣ ಅದು ಒದಗಿಸುವ ಲಯಾನ್ವಿತತೆಯು ನಿವಾರಿತವಾಗಿದೆ; ಈ ಮೂಲಕ ಶ್ಲೋಕದ ಲಯರಹಿತ ಗತಿರಮ್ಯತೆ ಉನ್ಮೀಲಿತವಾಗಿದೆ. ಎರಡನೆಯ ಉದಾಹರಣೆಯಲ್ಲಿ ಪೂರ್ವಾರ್ಧದ ಮಟ್ಟಿಗೆ ಹೆಚ್ಚು-ಕಡಮೆ ಇದೇ ರೀತಿಯಲ್ಲಿ ಘಟಕಗಳ ಚತುರಸ್ರತೆಯು ‘ಲ-ಗಂ’ ವಿನ್ಯಾಸದ ಗುರು-ಲಘುಯುಗ್ಮಗಳ ಹಾಗೂ ಇವುಗಳಲ್ಲಿ ಅಂತರ್ಗತವಾದ ತ್ರಿಮಾತ್ರಾಮಾನದ ಮೂಲಕ ಮುರಿಯಲ್ಪಟ್ಟು ಲಯರಹಿತವಾದ ಶ್ಲೋಕಗತಿಯ ಸುಭಗತೆಯು ರಕ್ಷಿತವಾಗಿದೆ. ಆದರೆ ಉತ್ತರಾರ್ಧದಲ್ಲಿ ಆದ್ಯಂತವಾಗಿ ನಾಲ್ಕು-ನಾಲ್ಕು ಮಾತ್ರೆಗಳ ಗಣವಿನ್ಯಾಸವು ಸ್ಫುಟವಾಗಿ ಮೂಡಿದ್ದರೂ ಗಣಸಂಖ್ಯೆಯಲ್ಲಿ ಚತುರಸ್ರತೆ ಇಲ್ಲವಾಗಿದೆ. ಮಾತ್ರವಲ್ಲ, ಓಜಪಾದದಲ್ಲಿ ಊನಗಣದ ಸಾಧ್ಯತೆಯೂ ಇಲ್ಲದಂತಾಗಿ ಪಾದವು ಸಾಕಾಂಕ್ಷವಾಗಿ ಮುಗಿಯುವ ಮೂಲಕ ಲಯಾನ್ವಿತತೆಯ ಅಪಾಯ ದೂರವಾಗಿದೆ. ಇನ್ನು ಯುಕ್ಪಾದದ ಕೊನೆಗೆ ಊನಗಣ ಬಂದಂತೆ ತೋರಿದರೂ ಅದು ‘ಲ-ಗಂ’ ಎಂಬ ವಿನ್ಯಾಸವನ್ನು ತಾಳುವ ಮೂಲಕ ಮಾತ್ರಾಜಾತಿಯ ಬಂಧಗಳಿಗೆ ವಿಷಮವೆನಿಸುವ ಲಘ್ವಾದಿಯಾದ ಕಾರಣ ಇಲ್ಲಿಯೂ ಲಯರಹಿತತೆಗೇ ಮಾನ್ಯತೆ ಸಂದಿದೆ. ಅಲ್ಲದೆ ಈ ಯುಕ್ಪಾದಕ್ಕೆ ಮುನ್ನ ಬಂದಿರುವ ಓಜಪಾದದ ಲಯರಹಿತಗತಿಯು ತನ್ನ ಪ್ರಭಾವವನ್ನು ಮುಂದಿನ ಸಾಲಿಗೂ (ಯುಕ್ಪಾದಕ್ಕೂ) ಬೀರಿರುವ ಸಾಧ್ಯತೆಯೂ ಸ್ಪಷ್ಟವಾಗಿದೆ.

ಶ್ಲೋಕವು ತನ್ನ ಲಯರಹಿತತೆಯನ್ನು ಕಾಪಿಟ್ಟುಕೊಳ್ಳುವ ಮೂಲಕ ನೈಜವಾದ ಗತಿಸುಭಗತೆಯನ್ನು ಹೇಗೆಲ್ಲ ಉಳಿಸಿಕೊಳ್ಳಬಲ್ಲುದೆಂಬ ಸಂಗತಿ ಈ ಉದಾಹರಣೆಗಳ ಮೂಲಕ ಮನವರಿಕೆಯಾಗದಿರದು.

ಈ ಉದಾಹರಣೆಗಳಿಂದ ಮತ್ತೂ ಒಂದು ಅಂಶ ಸ್ಪಷ್ಟವಾಗದಿರದು. ಶ್ಲೋಕದಲ್ಲಿ ಗುರುಗಳು ಹೆಚ್ಚಾದಂತೆಲ್ಲ ಅಲ್ಲಿ ಚತುರ್ಮಾತ್ರಾಘಟಕಗಳು ಸಹಜವಾಗಿ ಹೆಚ್ಚುತ್ತವೆ. ಲಘುಗಳು ಹೆಚ್ಚಾದಂತೆಲ್ಲ ಕೂಡ ಚತುರ್ಮಾತ್ರಾಘಟಕಗಳೇ ಅಧಿಕವಾಗುತ್ತವೆ. ಇದು ಮೇಲ್ನೋಟಕ್ಕೆ ವಿಚಿತ್ರವಾಗಿ ತೋರಬಹುದು. ಲಘುಬಾಹುಳ್ಯ ಇರುವಾಗ ಶ್ಲೋಕದ ಲಯರಹಿತಗತಿಯನ್ನು ರಕ್ಷಿಸಲು ನಿರ್ಣಾಯಕ ಸ್ಥಾನಗಳಲ್ಲಿ ಗುರುಗಳು ಬರಬೇಕಿರುವ ಸಂದರ್ಭವನ್ನು ನೆನೆದಾಗ ಈ ವೈಚಿತ್ರ್ಯಕ್ಕೆ ಕಾರಣವೇನೆಂದು ಸ್ಪಷ್ಟವಾಗುತ್ತದೆ. ಗುರು ಮತ್ತು ಲಘುಗಳು ಜೋಡಿಜೋಡಿಯಾಗಿ ಬರುವಾಗ ತ್ರಿಮಾತ್ರಾಘಟಕಗಳೇ ಹೆಚ್ಚಾಗಿ ತೋರಿಕೊಳ್ಳುತ್ತವೆ. ಇದು ಸೇಡಿಯಾಪು ಕೃಷ್ಣಭಟ್ಟರು ಗುರುತಿಸುವ ಗುರುಪ್ರಧಾನವಾದ ಮಧ್ಯಾಕ್ಷರಗತಿ (ಸೇಡಿಯಾಪು ಛಂದಃಸಂಪುಟ, ಪು. ೨೭೪). ಅವರೇ ಹೇಳುವಂತೆ ಇದು ವೈದಿಕ ಮತ್ತು ಲೌಕಿಕಸಂಸ್ಕೃತಗಳೆರಡಕ್ಕೂ ಸಹಜವಾದ ಭಾಷಾಪದಗತಿ. ಈ ಕಾರಣದಿಂದಲೇ ಇಂಥ ಗತಿಗೆ ವಿಪುಲವಾದ ಅವಕಾಶ ನೀಡಿರುವ ಶ್ಲೋಕವು ಸಂಸ್ಕೃತದ ಅತ್ಯಂತ ಸಹಜ-ಸುಂದರ-ಸುಲಭರೂಪದ ಛಂದಸ್ಸಾಯಿತು.

[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 4 Source: prekshaa]]

ಇನ್ನು ಮುಂದೆ ಶ್ಲೋಕದಲ್ಲಿ ಬರಬಹುದಾದ ವಿಭಿನ್ನಸಂಖ್ಯೆಯ ಮಾತ್ರಾಗಣಗಳ ಕೆಲವು ಪ್ರಮುಖ ಸಾಧ್ಯತೆಗಳನ್ನು ಪರಿಶೀಲಿಸೋಣ.

ಅ) ಮೂರು ಮಾತ್ರೆಗಳ ಘಟಕಗಳುಳ್ಳ ರಚನೆ:

ನಾನ । ನಾನ । ನನಾ । ನಾನ/ನಾ । ನಾನ । ನಾನ । ನನಾ । ನನಾ ।
ನನಾ । ನನಾ । ನನಾ । ನಾನ/ನಾ । ನನಾ । ನಾನ । ನನಾ । ನನಾ ।

ತ್ರಿಮಾತ್ರಾಗಣಗಳೇ ಪ್ರಚುರವಾದ ಈ ಬಗೆಯ ಶ್ಲೋಕದಲ್ಲಿ ಮೂರು ಮಾತ್ರೆಗಳ ಪರಿಮಾಣವನ್ನೇ ಉಳ್ಳ ನ-ಗಣಕ್ಕೆ ಆಸ್ಪದವಿಲ್ಲ. ಅದು ಬಂದೊಡನೆಯೇ ಎರಡು ಗುರುಗಳು ಅವ್ಯವಹಿತವಾಗಿ ಬರಬೇಕಾಗುತ್ತದೆ; ಆಗ ಗತಿಯು ನಾಲ್ಕು ಮಾತ್ರೆಗಳ ಘಟಕಕ್ಕೆ ಅವಕಾಶ ನೀಡಬೇಕಾಗುತ್ತದೆ. 3

ಆ) ನಾಲ್ಕು ಮಾತ್ರೆಗಳ ಘಟಕಗಳುಳ್ಳ ರಚನೆ:

ನನನಾ । ನನನಾ । ನಾನಾ/ನ । ನನನಾ । ನನನಾ । ನನಾ/ನ ।
ನಾನಾ । ನಾನಾ । ನನಾ । ನಾನಾ/ನ । ನಾನಾ । ನಾನಾ । ನನಾ । ನನಾ ।

ನಾಲ್ಕು ಮಾತ್ರೆಗಳ ಗಣಗಳೇ ಹೆಚ್ಚಾಗಿರುವ ಈ ಶ್ಲೋಕದಲ್ಲಿ ಸರ್ವಲಘುರೂಪದ ಚತುಷ್ಕಲವಾಗಲಿ, ಭ-ಗಣ ಮತ್ತು ಜ-ಗಣಗಳಾಗಲಿ ಬರುವಂತಿಲ್ಲ. ಅವುಗಳಿಂದ ಪದ್ಯದ ಗತಿ ಕೆಡುತ್ತದೆ. ಅಂಥ ಗತಿವೈಷಮ್ಯವನ್ನು ಪರಿಹರಿಸಲು ತ್ರಿಮಾತ್ರಾಘಟಕಗಳ ಪ್ರವೇಶ ಅನಿವಾರ್ಯ.

ಇ) ಐದು ಮಾತ್ರೆಗಳ ಘಟಕಗಳುಳ್ಳ ರಚನೆ:

ನಾನನಾ । ನಾನನಾ । ನಾನಾ/ನ । ನಾನನಾ । ನಾನನಾ । ನನಾ/ನ
ನಾನಾನ । ನಾನನಾ । ನಾನಾ/ನ । ನಾನಾನ । ನಾನನಾ । ನನಾ/ನ

ಐದು ಮಾತ್ರೆಗಳ ಘಟಕಗಗಳು ಹೆಚ್ಚಾಗಿರುವ ಈ ಶ್ಲೋಕದಲ್ಲಿ ಅನಿವಾರ್ಯವಾಗಿ ಪ್ರತಿ ಸಾಲಿನ ಮೂರನೆಯ ಘಟಕ ನಾಲ್ಕು ಮಾತ್ರೆಗಳದೋ ಮೂರು ಮಾತ್ರೆಗಳದೋ ಆಗಿರಬೇಕು. ಇಂಥ ರಚನೆಯಲ್ಲಿ ‘ನಾನನನ’, ‘ನನನಾನ’, ‘ನನನನಾ’, ‘ನನನನನ’ ಎಂಬ ವಿನ್ಯಾಸಗಳ ಪಂಚಕಲಗಳು ಬರುವಂತಿಲ್ಲ. ಏಕೆಂದರೆ ಇಲ್ಲಿ ಲಘುಬಾಹುಳ್ಯ ಎದ್ದುತೋರಿದೆ. ಅವ್ಯವಹಿತವಾಗಿ ಎರಡು ಲಘುಗಳಿಗಿಂತ ಹೆಚ್ಚಿನವಕ್ಕೆ ಅವಕಾಶವಿಲ್ಲದ ‘ನನನಾನ’ ಎಂಬ ವಿನ್ಯಾಸ ಬರುವ ಸಾಧ್ಯತೆ ಇದ್ದರೂ ಇಂಥ ಮತ್ತೊಂದು ಪಂಚಕಲ ಬಾರದಂತೆ ‘ಲ-ಗಂ’ ವಿನ್ಯಾಸ ಎದುರಾಗುತ್ತದೆ. ಇದು ಶ್ಲೋಕಚ್ಛಂದಸ್ಸಿನ ಲಕ್ಷಣಕ್ಕೆ ಅನಿವಾರ್ಯ.

ಈ) ಎರಡು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:

ನನ । ನಾನನ । ನಾನಾ । ನಾ । ನನ । ನಾನನ । ನಾನ । ನಾ ।
ನಾ । ನಾನನ । ನನಾ । ನಾನಾ । ನಾ । ನಾನನ । ನನಾ । ನನಾ ।
ನಾ । ನಾನಾ । ನನನಾ । ನಾ । ನಾ । ನಾ । ನಾನಾ । ನನನಾ । ನನಾ ।

ಇದು ಸಂತುಲಿತದ್ರುತಾವರ್ತಗತಿಗೆ ಸಲ್ಲುವಂಥ ಎರಡು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತರಚನೆಗೆ ನಿಕಟವಾದ ಗತಿ. ಮೊದಲ ಮಾದರಿಯಲ್ಲಿ ‘ನನ-ನಾನನ’ ಎಂಬ ಘಟಕಗಳಲ್ಲಿ ಅಪ್ಪಟವಾದ ಸಂತುಲಿತದ್ರುತಾವರ್ತಗತಿ ತೋರಿದೆ. ಇದನ್ನು ಅಲ್ಲಿಯ ಯುಕ್ಪಾದದ ಮೊದಲಿಗೂ ನೋಡಬಹುದು. ಓಜಪಾದದ ‘ನಾನಾ-ನಾ’ ಎಂಬ ಮುಂದಿನ ಘಟಕಗಳು ಸಂತುಲಿತದ್ರುತಾವರ್ತಗತಿಯನ್ನು ಈ ಮಟ್ಟಕ್ಕೆ ಧ್ವನಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ಮೂರೂ ಅಕ್ಷರಗಳು ಗುರುಗಳೇ ಆಗಿರುವುದು. ಇನ್ನು ಯುಕ್ಪಾದದ ಕೊನೆಯಲ್ಲಿ ಬರುವ ‘ನಾನ-ನಾ’ ಎಂಬ ವಿನ್ಯಾಸ ಐದು ಮಾತ್ರೆಗಳ ರ-ಗಣವಾದ ಕಾರಣ ಇಲ್ಲಿ ಸಂತುಲಿತದ್ರುತಾವರ್ತಗತಿಗೆ ಅವಕಾಶವಿಲ್ಲ.

ಎರಡನೆಯ ಮಾದರಿಯಲ್ಲಿ ಓಜಪಾದ ಮತ್ತು ಯುಕ್ಪಾದಗಳ ‘ನಾ-ನಾನನ’ ಎಂಬ ಮೊದಲ ಘಟಕಗಳು ಅಪ್ಪಟ ಸಂತುಲಿತದ್ರುತಾವರ್ತಗತಿಗೆ ಬದ್ಧವಾಗಿವೆ. ಮಿಕ್ಕ ಘಟಕಗಳು ಹೀಗಲ್ಲ. ಓಜಪಾದದ ‘ನನಾ-ನಾನಾ’ ಎಂಬ ವಿನ್ಯಾಸ ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯದ ಘಟಕ. ಆದರೆ ಈ ಲಯ ಸ್ಫುರಿಸದ ಹಾಗೆ ‘ನನಾ’ ಎಂಬ ವಿನ್ಯಾಸದ ಲಘ್ವಾದಿತ್ವ ವಿಸಂವಾದವೊಡ್ಡಿದೆ. ಇನ್ನುಳಿದಂತೆ ಯುಕ್ಪಾದದ ಕೊನೆಯ ಎರಡು ಘಟಕಗಳು (ನನಾ-ನನಾ) ಮೂರು ಮಾತ್ರೆಗಳ ಮಾನವನ್ನು ಹೊಂದಿದ್ದರೂ ಅವು ಸಂತುಲಿತದ್ರುತಾವರ್ತಗತಿಗೆ ಸೇರುವುದಿಲ್ಲ. ಮಾತ್ರವಲ್ಲ, ಅವು ಲಘ್ವಾದಿಯಾದ ಕಾರಣ ತ್ರಿಮಾತ್ರಾಗತಿಯ ಸಹಜಧಾಟಿಗೂ ಸ್ವಲ್ಪ ವಿಸಂವಾದಿಯಾಗಿ ತೋರುತ್ತವೆ.

ಮೂರನೆಯ ಮಾದರಿಯ ಓಜಪಾದ-ಯುಕ್ಪಾದಗಳ ಮೊದಲ ಘಟಕಗಳು ಮೂರು ಗುರುಗಳಿಂದ ರಚಿತವಾದ ಕಾರಣ ಈ ಮುನ್ನ ಹೇಳಿದ ಸಮಸ್ಯೆ ಇಲ್ಲಿಯೂ ತಲೆದೋರಿದೆ; ಸಂತುಲಿತದ್ರುತಾವರ್ತಗತಿತ್ವಕ್ಕೆ ಎರವಾಗಿದೆ. ಓಜಪಾದದ ಎರಡನೆಯ ಮತ್ತು ಮೂರನೆಯ ಘಟಕಗಳು (ನನನಾ-ನಾ) ಅಪ್ಪಟ ಸಂತುಲಿತದ್ರುತಾವರ್ತಗತಿಗೆ ಸಂದಿವೆ. ಮುಂದಿನ ಒಂದು ಗುರು ಇಂಥ ಗತಿಗೆ ಹೊರಚ್ಚಾಗಿ ನಿಂತಿದೆ. ಯುಕ್ಪಾದದ ಕೊನೆಯ ಎರಡು ಘಟಕಗಳು (ನನನಾ-ನನಾ) ನಾಲ್ಕು ಮತ್ತು ಮೂರು ಮಾತ್ರೆಗಳ ಮಾನವನ್ನು ಹೊಂದಿದ ಕಾರಣ ಮಿಶ್ರಲಯದ (೩+೪) ಪ್ರತೀಪವಾಗಿ ನಿಂತಿವೆ. ‘ನ-ನಾ’ ಎಂಬ ವಿನ್ಯಾಸ ತನ್ನ ಲಘ್ವಾದಿತ್ವದ ಮೂಲಕ ಲಯಾನ್ವಿತತೆಗೆ ಮತ್ತಷ್ಟು ಎರವಾಗಿದೆ.

ಈ ಮೂರು ಮಾದರಿಗಳನ್ನು ಪರಿಕಿಸಿದಾಗ ಮೊದಲ ಎರಡು ಮಾದರಿಗಳಲ್ಲಿ ತೋರುವ ಮಟ್ಟದ ಸಂತುಲಿತದ್ರುತಾವರ್ತಗತಿ ಮೂರನೆಯದರಲ್ಲಿ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಕನಿಷ್ಠಪಕ್ಷ ಸಂತುಲಿತದ್ರುತಾವರ್ತಗತಿಯ ಎರಡು ಗಣಗಳು ಯಾವ ಮಾದರಿಯಲ್ಲಿಯೂ ಅವ್ಯವಹಿತವಾಗಿ ಉನ್ಮೀಲಿಸುತ್ತಿಲ್ಲ. ಹೀಗಾಗಿ ಈ ಗತಿಯ ಸ್ಫುರಣೆ ನಮಗಾಗುವುದು ಕಷ್ಟ. ಒಟ್ಟಂದದ ಶ್ಲೋಕಧಾಟಿಯಲ್ಲಿ ಇಂಥ ಗತಿಯ ಸಾಧ್ಯತೆ ಒಂದು ಗಣದ ಮಟ್ಟಿಗಾದರೂ ಮಿಂಚಿ ಮಾಯವಾಗುವ ಕಾರಣ ಗತಿಪ್ರಜ್ಞಾಶಾಲಿಗಳ ಕಿವಿಗೆ ಆಗೀಗ ಕೇಳಿಸಿ ವೈವಿಧ್ಯವನ್ನು ಆ ಮಟ್ಟಿಗೆ ತಾರದಿರದು.

ಉ) ಮೂರು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:

ನಾನ । ನಾನನ । ನಾನಾನಾ । ನಾನ । ನಾನನ । ನಾನನಾ ।
ನಾನ । ನಾನಾ । ನನಾ । ನಾನಾ । ನಾನ । ನಾನಾ । ನನಾ । ನನಾ ।
ನನಾ । ನಾನನ । ನಾನಾನಾ । ನನಾ । ನಾನನ । ನಾನನಾ ।

ಇವು ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯವನ್ನು ಧ್ವನಿಸುವ ಘಟಕಗಳು ಹೆಚ್ಚಾಗಿರುವ ಮಾದರಿಗಳು. ಇಷ್ಟೂ ಮಾದರಿಗಳಲ್ಲಿ ಓಜಪಾದ ಮತ್ತು ಯುಕ್ಪಾದಗಳ ಮೊದಲೆರಡು ಘಟಕಗಳ ಸೇರಿಕೆಯಲ್ಲಿ ಮಾತ್ರ ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯ ಸ್ಫುರಿಸುತ್ತದೆ. ಅನಂತರದ ಘಟಕಗಳಲ್ಲಿ ಹೆಚ್ಚೆಂದರೆ ಆರು ಮಾತ್ರೆಗಳ ಮೊತ್ತವಿರುವ ಕಾರಣ ಮಿಶ್ರಲಯಕ್ಕೆ ಆಸ್ಪದವಿಲ್ಲ. ಮಾತ್ರವಲ್ಲ, ಆರು ಮಾತ್ರೆಗಳ ಈ ಗುಂಪುಗಳಲ್ಲಿಯೂ ತ್ರ್ಯಶ್ರಗತಿ ಸ್ಫುಟವಾಗಿ ಉನ್ಮೀಲಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಯುಕ್ಪಾದಗಳ ಘಟಕಗಳ ಲಘ್ವಾದಿ ಗತಿ.

ಮೊದಲ ಮಾದರಿಯಲ್ಲಿ ಓಜಪಾದದ ಕಡೆಯ ಮೂರು ಗುರುಗಳು ಆ ಮುನ್ನ ಬಂದಿದ್ದ ಮಿಶ್ರಗತಿಗೆ ಪೂರ್ಣವಾಗಿ ವಿಸಂವಾದಿಯಾಗಿವೆ; ಹೀಗಾಗಿ ಲಯಾನ್ವಿತತೆಗೆ ಎರವಾಗಿವೆ. ಯುಕ್ಪಾದದಲ್ಲಿ ಕಡೆಯ ಮೂರು ಅಕ್ಷರಗಳ ರ-ಗಣವು ಆ ಮುನ್ನ ಬಂದ ಮಿಶ್ರಲಯಕ್ಕೆ ಪೂರಕವಾಗುವಂತೆ ಮೂರು ಮಾತ್ರೆಗಳ ಒಂದು ಘಟಕ ಮತ್ತು ಗುರುವೊಂದರ ರೂಪದ ಊನಗಣವಾಗಿ ಮೈವೆತ್ತು ತನ್ಮೂಲಕ ಮಿಶ್ರಗತಿಯನ್ನು ಅಸ್ಖಲಿತವಾಗಿ ಉನ್ಮೀಲಿಸಿದೆ. ಹೀಗೆ ಈ ಮಾದರಿಯ ಓಜಪಾದ-ಯುಕ್ಪಾದಗಳಲ್ಲಿ ಮಿಶ್ರಲಯದ ಪ್ರಾಚುರ್ಯವಿದ್ದರೂ ಕೇಳುಗರಿಗೆ ಇದು ಸ್ವಲ್ಪವೂ ಪ್ರತೀತವಾಗದಂತೆ ನಡುವಿನಲ್ಲಿ ಬಂದ ಮೂರು ಗುರುಗಳು ವರ್ತಿಸುತ್ತಿರುವುದು ಛಂದೋಗತಿಯ ವಿಸ್ಮಯಗಳಲ್ಲೊಂದು. ಒಟ್ಟಿನಲ್ಲಿ ಲಯಾನ್ವಿತವಾಗಬಲ್ಲ ಮಾದರಿ ಲಯರಹಿತವಾಗಿ ಪರಿಣಮಿಸಿದೆ.

ಎರಡನೆಯ ಮಾದರಿಯಲ್ಲಿ ಏಳು ಮಾತ್ರೆಗಳ ಘಟಕವು ಓಜಪಾದ ಮತ್ತು ಯುಕ್ಪಾದಗಳ ಆದಿಯಲ್ಲಿ ಅಸ್ಖಲಿತವಾಗಿ ಉಳಿದಿದೆ. ಬಳಿಕ ಬರುವ ಲಘ್ವಾದಿಯಾದ ‘ನ-ನಾ’ ಎಂಬ ವಿನ್ಯಾಸವು ಲಯಾನ್ವಿತತೆಗೆ ಅಡ್ಡಿಯಾಗಿದೆ. ನಾವೆಲ್ಲರೂ ಬಲ್ಲಂತೆ ಮಿಶ್ರಲಯದ ಮೊದಲ ಮೂರು ಮಾತ್ರೆಗಳು ಲಘ್ವಾದಿಯಾದರೆ ಅಲ್ಲಿಯ ಲಯವು ಹದಗೆಡುತ್ತದೆ. ಹೀಗಾಗಿ ಇಲ್ಲಿಯ ಓಜಪಾದದಲ್ಲಿ ಮಿಶ್ರಲಯದ ಎರಡು ಘಟಕಗಳಿಗೆ ಅವಕಾಶವಾಗಿದ್ದರೂ ಒಟ್ಟಂದದ ಲಯಸುಭಗತೆ ತಪ್ಪಿದೆ. ಯುಕ್ಪಾದದಲ್ಲಂತೂ ಈ ಮುನ್ನ ತಿಳಿಸಿದಂತೆ ಲಘ್ವಾದಿಯಾದ ಎರಡು ತ್ರಿಮಾತ್ರಾಘಟಕಗಳು ಬಂದ ಕಾರಣ ಮಿಶ್ರಯಲಕ್ಕೆ ಆಸ್ಪದ ದೊರೆತಿಲ್ಲ.

ಮೂರನೆಯ ಮಾದರಿ ಬಲುಮಟ್ಟಿಗೆ ಮೊದಲ ಮಾದರಿಯನ್ನೇ ಅನುಸರಿಸಿದೆ. ಓಜಪಾದ ಮತ್ತು ಯುಕ್ಪಾದಗಳ ಮೊದಲಿಗೆ ಬರುವ ‘ನನಾ’ ಎಂಬ ಲಘ್ವಾದಿಯಾದ ಘಟಕವು ಮಿಶ್ರಲಯಕ್ಕೆ ಅನುಕೂಲಿಸುತ್ತಿಲ್ಲ. ಇದನ್ನು ಈಗಷ್ಟೇ ಚರ್ಚಿಸಿದ್ದೇವೆ.

ಒಟ್ಟಿನಲ್ಲಿ ಶ್ಲೋಕದ ಗುರುಲಘುವಿನ್ಯಾಸದಲ್ಲಿ ಮಿಶ್ರಲಯಕ್ಕೆ ಅವಕಾಶವಿದ್ದರೂ ಅದು ಆದ್ಯಂತ ಸ್ಫುರಿಸುವುದೇ ಇಲ್ಲ. ಏನಿದ್ದರೂ ಗತಿಪ್ರಜ್ಞಾಶೀಲರಿಗೆ ಆಗೀಗ ಅಷ್ಟಿಷ್ಟು ಸ್ಫುರಿಸಬಹುದು. ಆದರೆ ಇದು ಶ್ಲೋಕದ ಲಯರಹಿತತೆಯನ್ನು ಮಾರ್ಪಡಿಸಲು ಶಕ್ತವಲ್ಲ.

ಊ) ಮೂರು ಮತ್ತು ಐದು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:

ನಾನ । ನಾನಾನ । ನಾನಾನಾ । ನಾನ । ನಾನಾನ । ನಾನನಾ ।
ನನಾ । ನಾನಾನ । ನಾನಾನಾ । ನನಾ । ನಾನಾನ । ನಾನನಾ ।

ಇವು ಮೂರು ಮತ್ತು ಐದು ಮಾತ್ರೆಗಳ ಸಂತುಲಿತಮಧ್ಯಾವರ್ತಗತಿಯನ್ನು ಒಳಗೊಂಡ ಮಾದರಿಗಳು. ಇವುಗಳಲ್ಲಿ ಮೂರು ಮತ್ತು ಐದು ಮಾತ್ರೆಗಳ ಘಟಕಗಳು ಒಂದು ಪಾದಕ್ಕೆ ಒಂದೇ ಆಗಿವೆ. ಉಳಿದಂತೆ ಓಜಪಾದಗಳಲ್ಲಿ ಮೂರು ಗುರುಗಳ ಆರು ಮಾತ್ರೆಗಳೂ ಯುಕ್ಪಾದಗಳಲ್ಲಿ ರ-ಗಣರೂಪದ ಐದು ಮಾತ್ರೆಗಳೂ ಇವೆ.

ಮೊದಲ ಮಾದರಿಯಲ್ಲಿ ಯುಕ್ಪಾದದ ಕೊನೆಯ ಘಟಕ ರ-ಗಣವಾಗಿರುವ ಕಾರಣ ಅದು ಮೂರು ಮಾತ್ರೆಗಳ ಒಂದು ಗಣ ಮತ್ತು ಗುರುರೂಪದ ಊನಗಣದ ಆಕೃತಿಯನ್ನು ತಾಳಿ ಇಡಿಯ ಪಾದ ಲಯಸಮತ್ವವನ್ನು ಹೊಂದುವಂತೆ ಮಾಡಿದೆ. ಆದರೆ ನಾವು ಈ ಮುನ್ನ (ಉ) ವಿಭಾಗದಲ್ಲಿ ನೋಡಿದಂತೆ ಇಲ್ಲಿಯೂ ಕೂಡ ಸಂತುಲಿತಮಧ್ಯಾವರ್ತಗತಿಯ ಎರಡು ಘಟಕಗಳ ನಡುವೆ ಬಂದಿರುವ ಮೂರು ಗುರುಗಳ ಆರು ಮಾತ್ರೆಗಳು ಲಯಾನ್ವಿತತೆಗೆ ಅಡ್ಡಿಯಾಗಿವೆ.

ಎರಡನೆಯ ಮಾದರಿ ಬಲುಮಟ್ಟಿಗೆ ಮೊದಲ ಮಾದರಿಯದೇ ಪ್ರತಿಫಲನ. ಓಜಪಾದ ಮತ್ತು ಯುಕ್ಪಾದಗಳ ಮೊದಲಿಗೆ ಬರುವ ಮೂರು ಮಾತ್ರೆಗಳ ಘಟಕವು ‘ನನಾ’ ಎಂಬ ಲಘ್ವಾದಿವಿನ್ಯಾಸವನ್ನು ಹೊಂದಿರುವ ಕಾರಣ ಲಯಸಮತ್ವಕ್ಕೆ ಸ್ವಲ್ಪ ತೊಡಕಾಗಿದೆ. ಈ ಮೂಲಕ ಶ್ಲೋಕದ ಮೂಲಸ್ವರೂಪವಾದ ಲಯರಹಿತತೆಯನ್ನೇ ಮತ್ತುಷ್ಟು ಪೋಷಿಸಿದೆ.

ಇದಿಷ್ಟು ಚರ್ಚೆಯನ್ನು ಗಮನಿಸಿದಾಗ ಶ್ಲೋಕದಲ್ಲಿ ಯಾವುದೇ ಬಗೆಯ ಲಯಾನ್ವಿತಗತಿಯ ಸಾತತ್ಯ ಇಲ್ಲವೆಂದು ತಿಳಿಯುತ್ತದೆ. ಲಯವೊಂದು ಕೇಳುಗರ ಮನಸ್ಸಿನಲ್ಲಿ ನಿಲ್ಲಬೇಕೆಂದರೆ ಲಯಾನ್ವಿತವಾದ ಏಕರೂಪದ ಗಣಗಳು ಮತ್ತೆ ಮತ್ತೆ ಆವರ್ತಿಸಬೇಕು. ಇಂಥ ಆವರ್ತನ ಕನಿಷ್ಠ ಮೂರು ಬಾರಿಯಾದರೂ ಆಗಬೇಕು. ಇಲ್ಲವೇ ಎರಡು ಬಾರಿ ಪೂರ್ಣಘಟಕಗಳ ಆವರ್ತನ ಮತ್ತೊಮ್ಮೆ ಊನಗಣದ ಪ್ರಯೋಗವಾದರೂ ಇರಬೇಕು. ಅಲ್ಲಿ ಲಘ್ವಾದಿಯಾದ ಗಣಗಳ, ಪ್ರತೀಪಗಣಗಳ ಮೇಲಾಟ ಇರಬಾರದು. ಒಂದು ವೇಳೆ ಇದ್ದರೂ ಅದು ಒಟ್ಟಂದದ ಲಯಸಮತ್ವಕ್ಕೆ ಧಕ್ಕೆ ತಾರದಂತಿರಬೇಕು. ಇಂಥ ಯಾವೊಂದು ವ್ಯವಸ್ಥೆಯನ್ನೂ ನಾವು ಶ್ಲೋಕದಲ್ಲಿ ಕಾಣುವುದಿಲ್ಲ. ಇಲ್ಲಿ ವ್ಯವಸ್ಥಿತವಾಗಿ ಲಘ್ವಾದಿಯಾದ ಗಣಗಳೋ ಗುರುಗಳೋ ಬಂದು ಲಯಸಮತ್ವವನ್ನು ಮುರಿಯುತ್ತಿರುತ್ತವೆ. ಈ ಮೂಲಕ ಮಾತ್ರಾಜಾತಿಯಲ್ಲಿ ಕಾಣುವ ಏಕತಾನತೆಯನ್ನು ಇಲ್ಲವಾಗಿಸುತ್ತವೆ. ಹೀಗೆ ‘ನಿರೀಕ್ಷಿತವಾದ ವ್ಯವಸ್ಥೆ’ಯನ್ನು ಹಿತವಾದ ಅನಿರೀಕ್ಷಿತಗಳಿಂದ ಮುರಿಯುವ ಮೂಲಕ ಶ್ಲೋಕದ ಲಯರಹಿತಗತಿ ಉನ್ಮೀಲಿಸುತ್ತದೆ.


[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 5 Source: prekshaa]]

ಈ ಮುನ್ನ ಕಾಣಿಸಿದ ಮಾದರಿಗಳಲ್ಲಿ ಹ್ರಸ್ವ ಮತ್ತು ಮಧ್ಯಮಗಾತ್ರದ ಬಗೆಬಗೆಯ ಅಕ್ಷರ / ಮಾತ್ರಾಘಟಕಗಳನ್ನು ಪರಿಶೀಲಿಸಿದಾಗ ‘ಇವೇ ಪರಿಮಾಣಗಳಲ್ಲಿ ಹೆಚ್ಚಿನ ಭಾಷಾಪದಗಳು ರೂಪುಗೊಳ್ಳುವುವೇ?’ ಎಂಬ ಸಂದೇಹ ಕೆಲವರಲ್ಲಿ ಮೂಡಬಹುದು. ಭಾಷಾಪದಗಳು ತಮ್ಮ ಪರಿಮಾಣದಲ್ಲಿ ಲಯಾನ್ವಿತವಾದ ಛಂದಃಪದಗಳಿಗಿಂತ ಹೆಚ್ಚು-ಕಡಮೆಗಳನ್ನು ಹೊಂದಿರುತ್ತವೆ ಎಂಬುದು ಅವರ ಸಂದೇಹಕ್ಕೆ ಕಾರಣ. ಆದರೆ ಇಂಥ ಸಂಶಯ ನಿಲ್ಲುವಂಥದ್ದಲ್ಲ.

ಭಾರತೀಯಭಾಷೆಗಳು ಪ್ರಾಯಿಕವಾಗಿ ಒಂದೇ ಬಗೆಯ ಪದಪದ್ಧತಿಯನ್ನು ಹೊಂದಿವೆ. ಈ ಮಾತು ಅವುಗಳ ಅಭಿಜಾತಸಾಹಿತ್ಯದ ಮಟ್ಟಿಗಂತೂ ಸತ್ಯ. ನಮ್ಮ ಭಾಷೆಗಳ ಯಾವುದೇ ಅಸಮಸ್ತಪದವಾಗಲಿ ಎರಡು ಮಾತ್ರೆಗಳ ಅಥವಾ ಒಂದು ಗುರುವಿನ ಅಳತೆಯಿಂದ ಮೊದಲ್ಗೊಂಡು ಆರು ಮಾತ್ರೆಗಳ ಅಥವಾ ಐದು ಅಕ್ಷರಗಳ ವ್ಯಾಪ್ತಿಯ ಒಳಗೆ ಬರುವುದು ವಿಜ್ಞವೇದ್ಯ. ಇವಕ್ಕಿಂತ ಹೆಚ್ಚಿನ ಪರಿಮಾಣದ ಪದಗಳು ಎರಡು ಅಥವಾ ಮೂರು ಪದಗಳಾಗಿ ಒಡೆದುಕೊಳ್ಳುವುದೂ ಸುವಿದಿತ. ಹೀಗಾಗಿ ಈಗ ಕಾಣಿಸಿದ ಮಾದರಿಗಳ ಹಾಗೆ ಶ್ಲೋಕದ ಛಂದಃಪದಗಳನ್ನು ವಿಭಜಿಸಿಕೊಂಡರೆ ಅವು ನಮ್ಮ ಅಭಿಜಾತಭಾಷೆಗಳ ಭಾಷಾಪದಗಳಿಗೆ ತುಂಬ ಸಂವಾದಿಗಳಾದ ಮಾತೃಕೆಗಳಾಗಿ ವರ್ತಿಸುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಈ ಬಗೆಯ ವಿಂಗಡಣೆ ಒಟ್ಟಂದದ ಪದ್ಯಗತಿಗೆ ಪೂರಕವಲ್ಲದೆ ಮಾರಕವಲ್ಲ. ಜೊತೆಗೆ ನಾವಿಲ್ಲಿ ಕಾಣಿಸಿರುವ ವಿನ್ಯಾಸಗಳಲ್ಲಿರುವ ಚಿಕ್ಕ ಚಿಕ್ಕ ಗುರು-ಲಘು ಘಟಕಗಳ ವ್ಯಾಪ್ತಿಯೊಳಗೇ ಪದ್ಯದ ಪ್ರತಿಯೊಂದು ಭಾಷಾಪದವೂ ಅಡಗಬೇಕೆಂಬ ಆಗ್ರಹವೇನಿಲ್ಲ. ಇಂಥ ಆಗ್ರಹ ಅಸಾಧುವೂ ಅಸಿಂಧುವೂ ಹೌದು. ಏಕೆಂದರೆ ಇಲ್ಲಿ ಸೂಚಿತವಾದ ಘಟಕಗಳು ವೃತ್ತಗಳ ಲಕ್ಷಣಗಳಲ್ಲಿ ಬಳಕೆಯಾಗುವ ಯ-ಮ-ತ-ರ-ಜ-ಸ-ಭ-ನ-ಗಳಂಥ ಗಣಗಳ ವಿನ್ಯಾಸದ ಹಾಗೆ. ಇವು ಛಂದಃಪದಗಳೆನಿಸಿದ ಗುರು-ಲಘುಗಳ ವಿನ್ಯಾಸಗಳನ್ನು ಸೂಚಿಸಲು ಮಾತ್ರ ಇವೆಯಲ್ಲದೆ ಭಾಷಾಪದಗಳ ವ್ಯಾಪ್ತಿ-ವಿಸ್ತರಗಳನ್ನು ನಿರ್ದೇಶಿಸಲು ಅಲ್ಲ. ಇದನ್ನೊಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು: ‘ನನಮಯಯಯುತೇಯಂ ಮಾಲಿನೀ ಭೋಗಿಲೋಕೇ’ ಎಂಬ ಮಾಲಿನೀವೃತ್ತದ ಲಕ್ಷಣವು ಅದರ ಗುರು-ಲಘುಗಳ ವಿನ್ಯಾಸವನ್ನು ಸೂಚಿಸಲಷ್ಟೇ ಇರುವುದು. ಹಾಗಲ್ಲದೆ ಈ ವೃತ್ತದಲ್ಲಿ ರಚಿತವಾದ ಯಾವುದೇ ಪದ್ಯದ ಮೊದಲ ಪದವು ಮೂರು ಲಘುಗಳಿಗೇ ಮುಗಿದು, ಎರಡನೆಯ ಪದ ಕೂಡ ಅಂತೆಯೇ ಇರಬೇಕು; ಮೂರನೆಯ ಪದ ಮೂರು ಗುರುಗಳಷ್ಟರ ಪ್ರಮಾಣದಲ್ಲಿಯೇ ಇರಬೇಕು ಎಂಬಿತ್ಯಾದಿ ನಿಯಂತ್ರಣವನ್ನು ಅದು ಮಾಡುವುದಿಲ್ಲ. ಸದ್ಯದ ಸೂಚನೆಗಳು ಹೀಗೆಯೇ ಇವೆ. ಮಾತ್ರವಲ್ಲ, ಇಂಥ ನಿರ್ದೇಶನದಿಂದ ಪದ್ಯದ ಭಾಷಾಪದಗಳ ವೈವಿಧ್ಯ, ಸೌಲಭ್ಯ ಮತ್ತು ಸೌಂದರ್ಯಗಳೇ ಹಾಳಾಗುವುವೆಂಬ ಅರಿವನ್ನೂ ಹೊಂದಿವೆ. ಛಂದಃಶಾಸ್ತ್ರದ ಸೂಕ್ಷ್ಮಗಳನ್ನು ಸ್ವಲ್ಪವೂ ತಿಳಿಯದೆ, ಪದ್ಯರಚನೆಯ ಕೌಶಲವನ್ನು ಸ್ವಲ್ಪವೂ ಹೊಂದಿರದೆ ವೃತ್ತವೊಂದರ ಲಕ್ಷಣವನ್ನು ತಿಳಿಯಲು ಯಾಂತ್ರಿಕವಾಗಿ ಮೂರು-ಮೂರು ಅಕ್ಷರಗಳ ವಿಭಾಗ ಮಾಡಿ, ಗುರು-ಲಘುಪ್ರಸ್ತಾರವನ್ನು ಹಾಕಿ, ಹೇಗೋ ಹೆಣಗಿ ಗಣಗಳನ್ನು ಗುರುತಿಸಿ ಗೆದ್ದಂತೆ ನಿಟ್ಟುಸಿರು ಬಿಡುವ ಶಾಲಾಬಾಲಕರ ಹಂತದಲ್ಲಿರುವ ಪಂಡಿತಂಮನ್ಯರಿಗೆ ಮಾತ್ರ ಈ ಬಗೆಯ ಭ್ರಾಂತಿಗಳಿರುತ್ತವೆ.

ತೌಲನಿಕ ವಿವೇಚನೆ

ವರ್ಣವೃತ್ತಗಳು, ಮಾತ್ರಾಜಾತಿಗಳು ಮತ್ತು ಕರ್ಷಣಜಾತಿಗಳೆಂದು ಮುಬ್ಬಗೆಯಾಗಿ ವಿಭಕ್ತವಾದ ಛಂದೋವರ್ಗಗಳೊಡನೆ ಶ್ಲೋಕವನ್ನು ತೌಲನಿಕವಾಗಿ ನೋಡಬಹುದು. ಇಂಥ ಕೆಲವು ಅಂಶಗಳನ್ನು ಈಗಾಗಲೇ ನಾವು ನೋಡಿಯೂ ಇದ್ದೇವೆ. ಆದರೂ ಮತ್ತಷ್ಟು ಆಳವಾಗಿ ಪರಿಶೀಲಿಸಬೇಕಾದ ಅನಿವಾರ್ಯತೆ ಉಂಟು.

ವರ್ಣವೃತ್ತಗಳು ಸರ್ವದೇಶಸ್ಥಿರಗಳಾದ ಕಾರಣ ಇವುಗಳ ಗತಿವಿವೇಚನೆ ಅಷ್ಟು ಕಷ್ಟವಲ್ಲ. ಯತಿಪ್ರಬಲವಾದ ವೃತ್ತಗಳಲ್ಲಿ ಯತಿಸ್ಥಾನ ಯಾವುದೆಂಬ ಗೊಂದಲವೂ ಇರುವುದಿಲ್ಲ. ಆದರೆ ಶ್ಲೋಕವು ಹೀಗಲ್ಲ. ಸೇಡಿಯಾಪು ಅವರು ಹೇಳುವಂತೆ ಇದು ‘ಅಕ್ಷರಜಾತಿ’ ಎಂಬ ವರ್ಗಕ್ಕೆ ಸೇರುವ ಕಾರಣ ಗುರು-ಲಘುಗಳ ಸರ್ವದೇಶಸ್ಥಿರತೆ ಇಲ್ಲಿಲ್ಲ. ಹೀಗಾಗಿಯೇ ಯತಿಸ್ಥಾನದ ನಿಶ್ಚಯ ಇಲ್ಲಿಲ್ಲ. ಒಟ್ಟಂದದ ಛಂದೋಗತಿಯ ಘೋಷವನ್ನು ಗಮನಿಸಿಕೊಂಡೇ ಯತಿಕಲ್ಪವಾದ ವಿರಾಮಗಳನ್ನು ಮಾಡಿಕೊಳ್ಳಬೇಕು. ಆದುದರಿಂದ ಇಲ್ಲಿ ಪದಯತಿಗೆ ಪ್ರಾಮುಖ್ಯವಿದೆ. ಯಾವಾಗ ಛಂದೋಬಂಧವೊಂದು ಪದಯತಿಗೆ ಪ್ರಾಶಸ್ತ್ಯ ನೀಡಬೇಕಾಗಿ ಬರುವುದೋ ಆಗ ಅದು ಆಯಾ ಭಾಷೆಯ ಸಹಜವಾದ ಪದಗತಿಗೆ ಬದ್ಧವಾಗಿರಬೇಕಾಗುತ್ತದೆ. ಈ ಮೂಲಕ ಛಂದಸ್ಸು ಮತ್ತು ಭಾಷೆಗಳಿಗೆ ಘನಿಷ್ಠವಾದ ಸಂಬಂಧ ಒದಗುತ್ತದೆ. ಸಂಸ್ಕೃತಪದ್ಯವೆಂದರೆ ಅದು ಶ್ಲೋಕ ಎಂದೇ ಪ್ರಸಿದ್ಧಿ ಬರಲು ಇಂಥ ಸಂಬಂಧವೂ ಒಂದು ಕಾರಣ.

ಮಾತ್ರಾಜಾತಿಗಳು ಲಯಾನ್ವಿತವಾದ ನಿರ್ದಿಷ್ಟ ರೂಪದ ಮಾತ್ರಾಗಣಗಳಿಗೆ ಮಾತ್ರ ಬದ್ಧವಾಗಿರುತ್ತವೆ. ಹೀಗಾಗಿ ಇಲ್ಲಿ ಅಕ್ಷರಗಳ ಗುರುಲಘುಸ್ಥಿರತೆಗೆ ಪ್ರಾಮುಖ್ಯವಿಲ್ಲವೆಂಬ ಭಾವನೆ ಹಲವರದು. ಈ ಸಂಗತಿ ಅಷ್ಟು ಸರಳವಲ್ಲ. ಬಂಧವನ್ನು ಸುಕುಮಾರವಾಗಿ ರೂಪಿಸುವಾಗ ಗುರು-ಲಘುಗಳ ಪ್ರಾಮುಖ್ಯ ಅಷ್ಟಾಗಿ ತೋರದಿದ್ದರೂ ನಿಬಿಡವಾಗಿ ಶಿಲ್ಪಿಸುವಾಗ ಮಾತ್ರಾಗಣಗಳ ವರ್ಣಗಳು ಗುರುತ್ವ ಅಥವಾ ಲಘುತ್ವಗಳ ನಿಟ್ಟಿನಿಂದ ನಿರ್ದಿಷ್ಟವಾಗಿರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಮಾತ್ರಾಜಾತಿಯ ಪದ್ಯವು ನಿಬಿಡಬಂಧವಾದಂತೆಲ್ಲ ಗುರುಗಳ ಸ್ಥಾನ ನಿರ್ಣಾಯಕವಾಗುತ್ತದೆ. ಪಂಚಕಲ, ಷಟ್ಕಲ, ಸಪ್ತಕಲ ಮತ್ತು ಅಷ್ಟಕಲಗಳಲ್ಲಿ ಪದ್ಯಬಂಧವು ಸಾಗುವಾಗಲಂತೂ ಈ ತಥ್ಯ ಮತ್ತಷ್ಟು ಮನದಟ್ಟಾಗದಿರದು. ಪದ್ಯದ ಭಾಷಾಪದಗಳು ಛಂದಃಪದಗಳಲ್ಲಿ ನೆಲಸಿದ ಗಣಗಳಿಗೆ ತಮ್ಮಲ್ಲಿರುವ ಗುರು-ಲಘುರೂಪದ ಅಕ್ಷರಗಳನ್ನು ಹಂಚಿಕೊಡುವಾಗ ಪ್ರತಿಯೊಂದು ಗಣವೂ ಯತಿಭಂಗಕ್ಕೆ ಆಸ್ಪದವಿಲ್ಲದಂತೆ ಇದನ್ನು ಗ್ರಹಿಸಬೇಕು. ನಿಬಿಡಬಂಧಗಳಲ್ಲಿ ನಿರಪವಾದವೆಂಬಂತೆ ಗಣಕ್ಕೊಂದು ಪದವೆಂಬ ‘ಸರಳನ್ಯಾಯ’ವಿಲ್ಲದೆ ಪ್ರತಿಯೊಂದು ಅಖಂಡಪದವೂ ಅಕ್ಕಪಕ್ಕದ ಗಣಗಳಿಗೆ ಹಂಚಿಹೋಗುವಂಥ ‘ಸಂಕೀರ್ಣನ್ಯಾಯ’ ಇರುತ್ತದೆ. ಇದರ ಸೂಕ್ಷ್ಮತೆ ಪ್ರಬುದ್ಧರಿಗೆ ಮಾತ್ರ ವೇದ್ಯ. ಅವಿಭಕ್ತಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರೂ ತಮ್ಮ ಬಾಧ್ಯತೆಗಳಿಗೆ ಚ್ಯುತಿಯಾಗದಂತೆ ಹಕ್ಕುಗಳನ್ನು ಗಳಿಸಿ, ಇಡಿಯ ಮನೆಯ ಹಿತವನ್ನು ಸಾಧಿಸಿ ತಮ್ಮ ತಮ್ಮ ಹಿತಗಳನ್ನೂ ಕಾಣುವಂತೆ ಇದು ಸಲ್ಲುತ್ತದೆ. ಇದನ್ನು ಸೋದಾಹರಣವಾಗಿ ನಿರೂಪಿಸಬಹುದು:

ಮುರಳಿ । ಕರದೊಳು । ನಲಿಯೆ । ಮುದದಲಿ
ಹರಿವ । ಯಮುನೆಯು । ಲಯವ । ಕಲ್ಪಿಸೆ
ಪರಮ- । ಪುರುಷನು । ಮರುಳು- । ಗೊಳಿಸಿದ । ಜಗವ- । ನೆಲ್ಲವ- । ನು ।

ಇದು ಭಾಮಿನೀಷಟ್ಪದಿಯ ಪೂರ್ವಾರ್ಧ. ರಚನೆ ಲಕ್ಷಣಶುದ್ಧವಾಗಿದೆ. ಇದು ಸುಕುಮಾರಬಂಧವನ್ನು ಆಶ್ರಯಿಸಿದ ಕಾರಣ ಒಂದೊಂದು ಗಣಕ್ಕೆ ಒಂದೊಂದು ಪದ ಎಂಬಂತೆ ರಚನೆ ಸಾಗಿದೆ. ಪದ್ಯದಲ್ಲಿ ತೊಂಬತ್ತೈದು ಭಾಗಕ್ಕಿಂತ ಹೆಚ್ಚಾಗಿ ಲಘುಗಳೇ ಇದ್ದರೂ ಬಂಧವು ಸುಕುಮಾರವಾಗಿರುವ ಕಾರಣ ಪದಯತಿ ಪಾಲಿತವಾಗಿದೆ; ಪದ್ಯ ಶ್ರುತಿಹಿತವೆನಿಸಿದೆ. ಇಂಥ ರಚನೆಗಳನ್ನು ಅರ್ಥಸ್ವಾರಸ್ಯವಿರುವಂತೆ ಬಹುಸಂಖ್ಯೆಯಲ್ಲಿ ಮಾಡುವುದು ಕಷ್ಟ. ಒಂದು ವೇಳೆ ಹಾಗೆ ಮಾಡಿದಲ್ಲಿ ಪದ್ಯದ ಲಯವು ತುಂಬ ಯಾಂತ್ರಿಕವಾಗಿ ಪರಿಣಮಿಸಿ ಶ್ರೋತೃಗಳಿಗೆ ವೈರಸ್ಯವನ್ನು ಮೂಡಿಸುತ್ತದೆ.

ಪೂರ್ವದ ಮಹಾಕವಿಗಳು ಒಂದೇ ಛಂದಸ್ಸಿನ ಸಾವಿರಾರು ಪದ್ಯಗಳ ಕಥನವನ್ನು ನಿರ್ಮಿಸುವಾಗ ನಿಬಿಡಬಂಧಕ್ಕೆ ಶರಣಾಗಬೇಕಾಯಿತು. ಇದನ್ನು ಕುಮಾರವ್ಯಾಸನಂಥ ಒಬ್ಬ ಮಹಾಕವಿಯ ಒಂದು ಪದ್ಯದಿಂದ ಮನಗಾಣಬಹುದು:

ಕ್ಷಮಿಸು- । ವುದು ಸ- । ರ್ವೇಶ । ಸರ್ವೋ-
ತ್ತಮ ವೃ- । ಥಾ ಸುಭ- । ಟಾಭಿ- । ಮಾನ-
ಭ್ರಮಿತ- । ನನು ಮೋ- । ಹಾಂಧ- । ಕೂಪಜ- । ಲಾವ- । ಗಾಹದ- । ಲಿ ।
ಸ್ತಿಮಿತ- । ನನು ದು- । ರ್ಬೋಧ- । ವೇದ-
ಭ್ರಮಿತ- । ನನು ಕ- । ಲ್ಯಾಣ- । ಪದನಿ-
ರ್ಗಮಿತ- । ನನು ಕಾ- । ರುಣ್ಯ- । ನಿಧಿ ಕೈ- । ಗಾಯ- । ಬೇಕೆಂ- । ದ ॥ (ಕರ್ಣಾಟಭಾರತಕಥಾಮಂಜರಿ, ೩.೬.೮೦)

ಇಲ್ಲಿ ಸಪ್ರತ್ಯಯವಾದ ಯಾವೊಂದು ಪದವೂ ಗಣಕ್ಕೆ ಸರಿಯಾಗಿ ವಿಭಕ್ತವಾಗಿಲ್ಲ. ಇಂತಿದ್ದರೂ ಶ್ರುತಿಸುಭಗತೆಗೆ ಎರವಾಗಿಲ್ಲ. ಇಡಿಯ ಪದ್ಯ ತನ್ನ ಲಯಸಂಕೀರ್ಣತೆಯ ಮೂಲಕ ಮತ್ತಷ್ಟು ಶ್ರವಣಾಭಿರಾಮವೆನಿಸಿದೆ. ಏಕತಾನತೆಯಂತೂ ಇಂಥ ಪದ್ಯಗಳ ಆಸುಪಾಸಿನಲ್ಲಿಯೂ ಸುಳಿಯುವುದಿಲ್ಲ. ಸಂದರ್ಭೌಚಿತ್ಯ, ಅರ್ಥಗಾಂಭೀರ್ಯ ಮತ್ತು ಧ್ವನಿಶೀಲತೆಗಳಿಂದ ಪ್ರಸ್ತುತ ಬಂಧ ಇನ್ನಷ್ಟು ರಸಾವಹವಾಗಿದೆ. ನಮ್ಮ ಆಲಂಕಾರಿಕರು ಸಾಹಿತ್ಯದ ಶಬ್ದಗುಣ ಮತ್ತು ಅರ್ಥಗುಣಗಳನ್ನು ವಿವರಿಸುವಾಗ ‘ಶ್ಲೇಷ’ ಎಂಬ ಗುಣವನ್ನು ಗುರುತಿಸುತ್ತಾರೆ. ವರ್ಣಗಳ ಪರಸ್ಪರ ಹೊಂದಾಣಿಕೆಯೇ ಶಬ್ದಶ್ಲೇಷ. ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸ್ತುತ ಪದ್ಯಬಂಧದ ಶ್ಲಿಷ್ಟತೆಗೆ ಗುರುಗಳೇ ಕಾರಣವೆಂದು ಸ್ಪಷ್ಟವಾಗುತ್ತದೆ. ನಿರ್ಣಾಯಕಸ್ಥಾನದ ಗುರುಗಳನ್ನು ಹೀಗೆ ಗುರುತಿಸಬಹುದು:

ಕ್ಷಮಿಸುವುದು ಸರ್ವೇಶ ಸರ್ವೋ-
ತ್ತಮ ವೃಥಾ ಸುಭಟಾಭಿಮಾನ-
ಭ್ರಮಿತನನು ಮೋಹಾಂಧಕೂಪಜಲಾವಗಾಹದಲಿ
ಸ್ತಿಮಿತನನು ದುರ್ಬೋಧವೇದ-
ಭ್ರಮಿತನನು ಕಲ್ಯಾಣಪದನಿ-
ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ ॥

ಮಾತ್ರಾಜಾತಿಗಳ ಪದ್ಯಗಳಲ್ಲಿ ಗುರುಗಳ ಸ್ಥಾನದ ನಿರ್ಣಾಯಕತೆಯನ್ನು ಮತ್ತಷ್ಟು ಉದಾಹರಣೆಗಳ ಮೂಲಕ ಮನಗಾಣಲು ಸೇಡಿಯಾಪು ಅವರ ಬರೆವಣಿಗೆಯನ್ನು ಪರಿಶೀಲಿಸಬಹುದು (ಸೇಡಿಯಾಪು ಛಂದಃಸಂಪುಟ, ಪು. ೧೪೨-೫೩).

ಇದನ್ನು ಶ್ಲೋಕದಲ್ಲಿ ಕೂಡ ಕಾಣಬಹುದು. ಸಾಮಾನ್ಯಲಕ್ಷಣದಲ್ಲಿ ಕಂಠೋಕ್ತವಾಗಿ ಹೇಳದಿದ್ದರೂ ಕೆಲವೊಮ್ಮೆ ಗುರುಲಘುಗಳು ನಿರ್ದಿಷ್ಟವಿನ್ಯಾಸದಲ್ಲಿ ಬರಬೇಕಾಗುತ್ತವೆ. ಇವನ್ನು ವಿಶೇಷವಾಗಿ ‘ಲ-ಗಂ’, ‘ಗಂ-ಲ’ ಮತ್ತು ‘ಗಂ’ ಎಂಬ ಮುಬ್ಬಗೆಯ ರೂಪಗಳಲ್ಲಿ ಗುರುತಿಸಬಹುದು. ಇಂಥ ಸೂಕ್ಷ್ಮಗಳನ್ನು ಗಮನಿಸಿಕೊಂಡು ನಡಸಿದ ಪ್ರಯೋಗಗಳೇ ಶ್ಲೋಕಲಕ್ಷಣಪರಿಷ್ಕಾರಕ್ಕೆ ಕಾರಣವಾಗಿವೆ. ‘ವೃತ್ತರತ್ನಾಕರ’ದ ವ್ಯಾಖ್ಯೆ ನಾರಾಯಣಭಟ್ಟೀಯವು ಇಂಥ ಪರಿಷ್ಕೃತ ಲಕ್ಷಣವನ್ನು ನೀಡಿದೆ. ಇದು ಶ್ಲೋಕದ ಸ್ವರೂಪವನ್ನು ಸಮಗ್ರವೆಂಬಷ್ಟರ ಮಟ್ಟಿಗೆ ನಿರ್ವಚಿಸಿದೆ. ಮಾತ್ರಾಜಾತಿಗಳಲ್ಲಿ ಮಾತ್ರೆಗಳ ಸಂಖ್ಯಾಸಮತ್ವ ಇದ್ದರೂ ಅಕ್ಷರಗಳ ಸಂಖ್ಯಾಸಮತ್ವ ಇರುವುದಿಲ್ಲ. ಇದಕ್ಕೆ ಸಂವಾದಿ ಎನಿಸಬಲ್ಲಂತೆ ಶ್ಲೋಕದಲ್ಲಿ ಅಕ್ಷರಸಂಖ್ಯಾಸಮತ್ವವಿದ್ದರೂ ಮಾತ್ರಾಸಂಖ್ಯಾಸಮತ್ವ ಇಲ್ಲ. ಇಂತಿದ್ದರೂ ಉಭಯವರ್ಗಗಳಲ್ಲಿ ಛಂದೋಗತಿಯ ಸೊಗಸಿಗೆ ಕೊರತೆಯಿರುವುದಿಲ್ಲ. ಏಕತಾನತೆಯ ಅಪಾಯವೂ ಕಡಮೆ. ಇದನ್ನೆಲ್ಲ ಅನುಲಕ್ಷಿಸಿದಾಗ ಸಂಸ್ಕೃತದಲ್ಲಿ ಶ್ಲೋಕದಂತೆಯೇ ಆರ್ಯಾಪ್ರಭೇದಗಳು ವ್ಯಾಪಕವಾಗಿರುವುದರ ಔಚಿತ್ಯ ತಿಳಿಯುತ್ತದೆ.

[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 6 Source: prekshaa]]

ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ ನಾಲ್ಕು ಬಗೆಯ ಗತಿಗಳಿಗೂ ಅಳವಟ್ಟಾಗ ಎಷ್ಟೆಲ್ಲ ಮಾತ್ರೆಗಳ ಆಕೃತಿವ್ಯತ್ಯಾಸವನ್ನು ಹೊಂದುವುದೆಂಬ ನಿದರ್ಶನದ ಮೂಲಕ ಮನಗಾಣಬಹುದು:

ಕಾಲವನ್ನೆಳ್ಳಷ್ಟೂ ಪೋಲು ಮಾಡದೆ ಕಾರ್ಯ-
ಶೀಲನಾಗಿದ್ದೊಂದು ಗಳಿಗೆ ।
ಕಾಲನ್ನು ಚಾಚಿ ಮೈಮರೆವಾಗಲೇ ಬಂದಂ
ಮೇಲಧಿಕಾರಿಯು ಬಳಿಗೆ ॥ (ಕನ್ನಡದಲ್ಲಿ ಅವಧಾನಕಲೆ, ಪು. ೩೫೭)

ಈ ಪದ್ಯವನ್ನು ಸಮುಚಿತವಾದ ಕರ್ಷಣಕ್ಕೆ ಅಳವಡಿಸಿ ನಾಲ್ಕೂ ಲಯಗಳಲ್ಲಿ ಹಾಡಿದಾಗ ಪದ್ಯದ ಶ್ರಾವಣರೂಪದಲ್ಲಿ ಮಾತ್ರೆಗಳ ಸಂಖ್ಯೆ ಹೀಗಿರುತ್ತದೆ: ಏಕ / ಆದಿ (೫೬), ರೂಪಕ (೮೪), ಖಂಡ (೭೦), ಮಿಶ್ರ (೯೮). ಅಂದರೆ, ಸಾಂಗತ್ಯದ ಅತ್ಯಂತ ಸಂಕ್ಷಿಪ್ತ ಶ್ರಾವಣರೂಪ ಐವತ್ತಾರು ಮಾತ್ರೆಗಳನ್ನು ಒಳಗೊಂಡಿದ್ದರೆ ಅದರ ವಿಸ್ತೃತ ಶ್ರಾವಣರೂಪ ತೊಂಬತ್ತೆಂಟು ಮಾತ್ರೆಗಳಷ್ಟು ನಿಡಿದಾಗಿದೆ. ಇಂಥ ನಮ್ಯತೆ ಇರುವ ಕಾರಣದಿಂದಲೇ ಕರ್ಷಣಜಾತಿಯ ಬಂಧಗಳಿಗೆ ಹೆಚ್ಚಿನ ಸೌಲಭ್ಯವಿದೆ.

ಇದಕ್ಕೆ ಸಂವಾದಿ ಎನಿಸುವಂತೆ ಶ್ಲೋಕದ ಕನಿಷ್ಠ ಮಾತ್ರಾಸಂಖ್ಯೆ ನಲವತ್ತೆರಡು ಅಥವಾ ನಲವತ್ತಾರು; 4 ಗರಿಷ್ಠ ಮಾತ್ರಾಸಂಖ್ಯೆ ಐವತ್ತೆಂಟು. ಅಂದರೆ, ಹನ್ನೆರಡರಿಂದ ಹದಿನಾರು ಮಾತ್ರೆಗಳಷ್ಟರ ಮಟ್ಟಿಗೆ ನಮ್ಯತೆಯ ಅವಕಾಶವುಂಟು. ಕರ್ಷಣಜಾತಿಗಳಿಗೆ ಹೋಲಿಸಿದರೆ ಈ ಅಳತೆ ಕಡಮೆ ಎನಿಸಿದರೂ - ಶ್ಲೋಕದ ವರ್ಣಗಳು ಯಥಾಕ್ಷರ ಗುರು-ಲಘುಗಳೇ ಆಗಿರುವ ಕಾರಣ ಈ ಬಂಧವು ಚಾಕ್ಷುಷ ರೂಪವೆನಿಸಿದ ಪಾಠ್ಯದಲ್ಲಿ ಕೂಡ ತನ್ನೆಲ್ಲ ಗತಿವೈವಿಧ್ಯವನ್ನು ಉಳಿಸಿಕೊಳ್ಳುವ ಮೂಲಕ ಅತಿಶಯವೆನಿಸುತ್ತದೆ. ಕರ್ಷಣಜಾತಿಗಳಲ್ಲಾದರೋ ಭಾಷಾಪದಗತಿಯ ಗುರು-ಲಘುಗಳಿಗೆ ನಿರಪೇಕ್ಷವಾಗಿ ತಾಳಲಯಗಳ ಮೂಲಕವೇ ಏಕರೂಪತೆ ಬರುವ ಕಾರಣ - ಹೆಸರಿಗೆ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಶ್ರಾವಣ ರೂಪಗಳ ವೈವಿಧ್ಯವಿದ್ದರೂ ಶ್ಲೋಕದ ಪಾಠ್ಯಗತಿಯ ವೈವಿಧ್ಯದ ಮುಂದೆ ಸ್ವಲ್ಪದ್ದೆನಿಸುತ್ತದೆ. ಮಾತ್ರವಲ್ಲ, ಇಂಥ ತಾಳಾತ್ಮಕ ಲಯವು ಪ್ರತಿಯೊಂದು ಪಾದದಲ್ಲಿಯೂ ಏಕರೂಪವನ್ನು ತಾಳುವುದರಿಂದ ಗತಿವೈವಿಧ್ಯಕ್ಕೆ ಎರವಾಗಿದೆ. ಆದರೆ ಶ್ಲೋಕವು ತನ್ನ ಪ್ರತಿಪಾದದಲ್ಲಿಯೂ - ಲಕ್ಷಣದ ಮಿತಿಯೊಳಗೆ ಸಲ್ಲುವ - ಗುರು-ಲಘುವಿನ್ಯಾಸದ ಸಾಕಷ್ಟು ವೈವಿಧ್ಯವನ್ನು ಬಿಂಬಿಸಲು ಸಮರ್ಥವಾಗಿದೆ. ಹೀಗೆ ಗತಿಸಮತೆ ಮತ್ತು ಗತಿವೈವಿಧ್ಯಗಳ ಸಾಮರಸ್ಯವನ್ನು ಇದು ನಿರಂತರವಾಗಿ ಕಾಯ್ದುಕೊಂಡಿದೆ. ಹೀಗಾಗಿ ರಾಮಾಯಣ-ಮಹಾಭಾರತಗಳಂಥ ಬೃಹದ್ಗ್ರಂಥಗಳ ಆದ್ಯಂತ ಶ್ಲೋಕಭಾಗೀರಥಿಯು ಪ್ರವಹಿಸಿದ್ದರೂ ನೈರಸ್ಯ-ವೈರಸ್ಯಗಳ ಜಹ್ನು ಅದಕ್ಕೆ ಎದುರಾಗುವುದಿಲ್ಲ. ಇದನ್ನು ಮನಗಾಣಲು ಸಂಸ್ಕೃತಸಾಹಿತ್ಯದ ಯಾವ ಮಹಾಕವಿಯ ಶ್ಲೋಕವನ್ನೂ ಪರಿಶೀಲಿಸಬಹುದು. ಕಾಳಿದಾಸ, ಭಾರವಿ, ಜಿನಸೇನ, ಕ್ಷೇಮೇಂದ್ರ, ಸೋಮದೇವ, ಗಂಗಾದೇವಿ ಮುಂತಾದ ಎಷ್ಟೋ ಮಂದಿ ಕವಿಗಳಿದ್ದರೂ ಆದಿಕವಿ ಭಗವಾನ್ ವಾಲ್ಮೀಕಿಮಹರ್ಷಿಗಳ ಕೆಲವೊಂದು ಪದ್ಯಗಳಿಂದ ಈ ತಥ್ಯವನ್ನು ಮನಗಾಣಬಹುದು:

ತತ್ರ ತ್ರಿಪಥಗಾಂ ದಿವ್ಯಾಂ ಶಿವತೋಯಾಮಶೈವಲಾಮ್ ।
ದದರ್ಶ ರಾಘವೋ ಗಂಗಾಂ ಪುಣ್ಯಾಮೃಷಿನಿಷೇವಿತಾಮ್ ॥ (೨.೫೦.೧೨)
ದೇವಮಾನವಗಂಧರ್ವೈಃ ಕಿಂನರೈರುಪಶೋಭಿತಾಮ್ ।
ನಾಗಗಂಧರ್ವಪತ್ನೀಭಿಃ ಸೇವಿತಾಂ ಸತತಂ ಶಿವಾಮ್ ॥ (೨.೫೦.೧೪)
ಕ್ವಚಿತ್ ಸ್ತಿಮಿತಗಂಭೀರಾಂ ಕ್ವಚಿದ್ವೇಗಜಲಾಕುಲಾಮ್ ।
ಕ್ವಚಿದ್ಗಂಭೀರನಿರ್ಘೋಷಾಂ ಕ್ವಚಿದ್ಭೈರವನಿಸ್ವನಾಮ್ ॥ (೨.೫೦.೧೭)
ದೇವಸಂಘಾಪ್ಲುತಜಲಾಂ ನಿರ್ಮಲೋತ್ಪಲಶೋಭಿತಾಮ್ ।
ಕ್ವಚಿದಾಭೋಗಪುಲಿನಾಂ ಕ್ವಚಿಚಿನ್ನಿರ್ಮಲವಾಲುಕಾಮ್ ॥ (೨.೫೦.೧೮)
ಹಂಸಸಾರಸಸಂಘುಷ್ಟಾಂ ಚಕ್ರವಾಕೋಪಕೂಜಿತಾಮ್ ।
ಸದಾ ಮತ್ತೈಶ್ಚ ವಿಹಗೈರಭಿಸನ್ನಾದಿತಾಂತರಾಮ್ ॥ (೨.೫೦.೧೯)

ಕನ್ನಡದಲ್ಲಿ ಶ್ಲೋಕ

ಕನ್ನಡದಲ್ಲಿ ಶ್ಲೋಕದ ರಚನೆ ವಿರಳವಾಗಿರುವುದನ್ನು ಕುರಿತು ಕೆಲವರು ಆಧುನಿಕ ಸಂಶೋಧಕರು ವಿವೇಚಿಸಿದ್ದಾರೆ. ಈ ಸಾಲಿನಲ್ಲಿ ವೆಂಕಟಾಚಲ ಶಾಸ್ತ್ರೀ, ಸೇಡಿಯಾಪು ಮುಂತಾದವರಿದ್ದಾರೆ. 5 ಶಾಸ್ತ್ರಿಗಳು ಇದಕ್ಕೆ ಕಾರಣಗಳನ್ನು ತಿಳಿಸುವಾಗ ಶ್ಲೋಕದ ಗತಿ ಕನ್ನಡಕ್ಕೆ ವಿಜಾತೀಯವೆಂದು ಹೇಳಿಲ್ಲ. ಇದು ಒಪ್ಪತಕ್ಕ ನಿಲವು. ಅವರು ಹೇಳುವ ಮಿಕ್ಕ ಕಾರಣಗಳು ಯುಕ್ತಿಯುಕ್ತವಾಗಿ ತೋರವು. ಅವುಗಳ ತಾತ್ಪರ್ಯ ಹೀಗೆ: ಚಿಕ್ಕ ಛಂದಸ್ಸಾದ ಕಂದವೇ ಇರುವಾಗ ಶ್ಲೋಕ ಬೇಕಿಲ್ಲ; ಶ್ಲೋಕವನ್ನು ಸಂಸ್ಕೃತಕವಿಗಳು ಈ ಮುನ್ನ ಬಳಸಿ ಬೆಳಸಿದ ಕಾರಣ ಕನ್ನಡಕವಿಗಳು ಇದರ ಮೂಲಕ ಸ್ವೋಪಜ್ಞತೆ ಮೆರೆಯಲು ಸಾಧ್ಯವಿರಲಿಲ್ಲ; ಕನ್ನಡದ ಮಟ್ಟಿಗೆ ವೃತ್ತ-ಕಂದಗಳಿಗಿದ್ದ ಇತಿಹಾಸ ಮತ್ತು ಪರಂಪರೆ ಶ್ಲೋಕಕ್ಕೆ ಇರಲಿಲ್ಲ.

ಒಂದು ಚಿಕ್ಕ ಛಂದಸ್ಸು ಇದ್ದ ಮಾತ್ರಕ್ಕೆ ಮತ್ತೊಂದು ಅಂಥದ್ದೇ ಬಂಧ ಬೇಡ ಎಂದು ಯಾವ ವಿವೇಕಿಯೂ ಹೇಳಲಾರ. ಮತ್ತೇಭವಿಕ್ರೀಡಿತದಂಥ ಒಂದು ದೊಡ್ಡ ಛಂದಸ್ಸಿರುವಾಗ ಚಂಪಕಮಾಲೆಯಂಥ ಮತ್ತೊಂದು ದೊಡ್ಡ ಛಂದಸ್ಸೇಕೆ? ಅಥವಾ ಸ್ರಗ್ಧರೆ-ಮಹಾಸ್ರಗ್ಧರೆಗಳೇಕೆ? ಎಂಬ ಪ್ರಶ್ನೆ ನಮ್ಮ ಕವಿಗಳಿಗೆ ಬರಲಿಲ್ಲವಷ್ಟೆ. ಇದೇ ನ್ಯಾಯ ಶ್ಲೋಕಕ್ಕೂ ಅನ್ವಯಿಸುತ್ತದೆ. ಅಷ್ಟೇಕೆ, ಅನಂತರಕಾಲದಲ್ಲಿ ಸಾಂಗತ್ಯದಂಥ ಚಿಕ್ಕ ಛಂದಸ್ಸು ರೂಪುಗೊಳ್ಳಲಿಲ್ಲವೇ? ಇನ್ನು ಸ್ವೋಪಜ್ಞತೆಯ ವಿಷಯಕ್ಕೆ ಬಂದರೆ ಕಂದದ ಮೂಲವಾದ ಸ್ಕಂಧಕ ಅಥವಾ ಆರ್ಯಾಪ್ರಭೇದಗಳನ್ನು ಸಂಸ್ಕೃತ-ಪ್ರಾಕೃತಕವಿಗಳು ವಿಪುಲವಾಗಿ ಬಳಸಿಯೇ ಇದ್ದರು; ಚಂಪೂಪ್ರಕಾರವನ್ನು ಅವರು ಆವಿಷ್ಕರಿಸಿದ್ದರು; ಇವನ್ನು ಬಳಸಿಕೊಳ್ಳಲು ಕನ್ನಡಕವಿಗಳಿಗೆ ಸ್ವೋಪಜ್ಞತೆ ಅಡ್ಡಿಯಾಗಲಿಲ್ಲ. ಹೀಗಿರುವಾಗ ಶ್ಲೋಕಕ್ಕೆ ಬಂದ ಅಡ್ಡಿ ಏನು? ಇದಕ್ಕೊಂದು ಪರಂಪರೆ ನಮ್ಮಲ್ಲಿ ಬೆಳೆಯಲಿಲ್ಲವೆಂಬ ಕಾರಣವಂತೂ ಹಾಸ್ಯಾಸ್ಪದ. ಬಳಸದೆಯೇ ಇದ್ದರೆ ಬೆಳೆಯುವುದಾದರೂ ಹೇಗೆ!

೧೯೭೮ರಲ್ಲಿ ಬಂದ ‘ಕನ್ನಡ ಛಂದಃಸ್ವರೂಪ’ ಎಂಬ ಗ್ರಂಥದಲ್ಲಿ ಪೂರ್ವೋಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಾಸ್ತ್ರಿಗಳು ೧೯೭೫ರಲ್ಲಿ ಬಂದ ‘ಕವಿರಾಜಮಾರ್ಗದ ಛಂದೋವಿಚಾರಗಳು’ ಎಂಬ ಲೇಖನದಲ್ಲಿ ಶ್ಲೋಕವು ಕನ್ನಡಕ್ಕೆ ಅಸಹಜವಲ್ಲವೆಂಬ ಯುಕ್ತಿಯುಕ್ತವಾದ ನಿಲವನ್ನು ತಳೆದಿದ್ದಾರೆ. ಅಲ್ಲದೆ “ಒಂದು ವೇಳೆ ಅನುಷ್ಟುಪ್ಪನ್ನು ಪ್ರಯೋಗಿಸಿ ನೋಡಿ ಕನ್ನಡ ಭಾಷೆಗೆ ಹೊಂದುವುದಿಲ್ಲವೆಂದು ಬಿಟ್ಟಿರಬಹುದು” ಎಂಬ ಕನ್ನಡ ಕೈಪಿಡಿಯ ಅಭಿಪ್ರಾಯಕ್ಕೆ ಅಸಮ್ಮತಿ ಸೂಚಿಸಿದ್ದಾರೆ. 6

ಇನ್ನು ಸೇಡಿಯಾಪು ಕೃಷ್ಣ ಭಟ್ಟರ ಅಭಿಪ್ರಾಯಗಳನ್ನು ಗಮನಿಸೋಣ. ಅವರ ಪ್ರಕಾರ ಸಂಸ್ಕೃತಭಾಷೆಯ ಸಹಜ ಪದವಿನ್ಯಾಸ ಗುರುಪ್ರಧಾನವಾದ ಮಧ್ಯಗತಿ. ಇದಕ್ಕೆ ತಕ್ಕಂತೆ ರೂಪುಗೊಂಡದ್ದು ಶ್ಲೋಕ. ಕನ್ನಡದ್ದು ಈ ಜಾಡಲ್ಲ. ಹೀಗಾಗಿ ಶ್ಲೋಕವಿಲ್ಲಿ ನೆಲೆಗಾಣಲಿಲ್ಲ. ಈ ಕಾರಣ ಯುಕ್ತವೆನಿಸದು. ಹಳಗನ್ನಡದ ಸಹಜವಾದ ಪದವಿನ್ಯಾಸ ಗುರುಪ್ರಧಾನವಾದ ಮಧ್ಯಗತಿಯೇ. ಹೀಗಲ್ಲವಾದರೆ ಶ್ಲೋಕಕ್ಕಿಂತ ಎಷ್ಟೋ ಪಾಲು ಹೆಚ್ಚಿನ ಗುರುಪ್ರಾಚುರ್ಯವುಳ್ಳ ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ, ಮಹಾಸ್ರಗ್ಧರೆ ಮುಂತಾದ ಹತ್ತಾರು ವೃತ್ತಗಳು ನಮ್ಮ ಕವಿಗಳಿಗೆ ಒದಗಿಬರುತ್ತಿರಲಿಲ್ಲ. ಮಾತ್ರವಲ್ಲ, ಈ ವೃತ್ತಗಳೆಲ್ಲ ಸರ್ವದೇಶಸ್ಥಿರಗಳು. ಶ್ಲೋಕಕ್ಕಿರುವ ಸೌಲಭ್ಯ ಇವುಗಳಲ್ಲಿ ಸ್ವಲ್ಪವೂ ಇಲ್ಲ.

ಶ್ಲೋಕವು ಕನ್ನಡದಲ್ಲಿ ವಿರಳವಾದುದಕ್ಕೆ ಬೇರೊಂದು ಕಾರಣ ಇರಬೇಕು. ಅದು ತುಂಬ ಸರಳ, ಸುಸ್ಪಷ್ಟ. ‘ಕನ್ನಡಕ್ಕೆ ಸತತಂ ಪ್ರಾಸಂ’ ಎಂಬುದು ಅನುಲ್ಲಂಘ್ಯವಾದ ನಿಯಮ. ಇದನ್ನು ಪಾಲಿಸದ ಪ್ರಾಚೀನ ಕವಿಯಿಲ್ಲ. ಶ್ಲೋಕದಂಥ ಚಿಕ್ಕ ಬಂಧದಲ್ಲಿ ಎಂಟೆಂಟು ಅಕ್ಷರಗಳ ಬಳಿಕ ಮತ್ತೆ ಮತ್ತೆ ತಲೆದೋರುವ ಪ್ರಾಸದ ತ್ರಾಸವನ್ನು ದಾಟಿಕೊಂಡು ಸಾರ್ಥಕವೂ ಸಾಲಂಕೃತವೂ ಆದ ಪದ್ಯವನ್ನು ರಚಿಸುವುದು ಎಂಥ ವ್ಯುತ್ಪನ್ನನಿಗೂ ಕಷ್ಟ. (ಕಂದವಾದರೋ ತನ್ನ ಮಾತ್ರಾಜಾತಿತ್ವದ ಕಾರಣ, ನಿಡಿದಾದ ಯುಕ್ಪಾದಗಳ ಕಾರಣ ಪ್ರಾಸನಿರ್ವಾಹದಲ್ಲಿ ಹೆಚ್ಚಿನ ಕ್ಲೇಶ ತಾರದು.) ಹೀಗಾಗಿ ನಮ್ಮ ಕವಿಗಳು ಒಲ್ಲದ ಮನಸ್ಸಿನಿಂದ ಶ್ಲೋಕವನ್ನು ಕೈಬಿಡಬೇಕಾಯಿತು. ಇಲ್ಲವಾದರೆ ಇಂಥ ಒಳ್ಳೆಯ ಬಂಧವನ್ನು ಬಿಡಲು ಯಾರು ತಾನೆ ಒಪ್ಪುತ್ತಾರೆ!


[[ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 7 Source: prekshaa]]

ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ ಇದೆ. ಪರಿಸ್ಥಿತಿ ಹೀಗಿರುವಾಗ ಶ್ಲೋಕಕ್ಕೆ ಆಸ್ಪದವೆಲ್ಲಿ? ವಸ್ತುತಃ ಇದು ಸಂಸ್ಕೃತಮೂಲದ ಬಂಧವೇ ಆಗಿದ್ದರೂ ಇಂದು ಪ್ರಚಾರದಲ್ಲಿರುವ ಸಂಭಾಷಣಸಂಸ್ಕೃತದಲ್ಲಿ ಕೂಡ ರಚಿತವಾಗುವುದು ಕಷ್ಟ ಎಂದ ಬಳಿಕ ಹೊಸಗನ್ನಡದ ಬಗೆಗೆ ಹೇಳುವುದೇನಿದೆ? ಇಂದಿನ ಆಡುಗನ್ನಡದಲ್ಲಿ ತ್ರಿಪದಿ-ಚೌಪದಿಗಳನ್ನೂ ಬರೆಯಲಾಗುವುದಿಲ್ಲ; ಸಾಂಗತ್ಯ-ಷಟ್ಪದಿಗಳನ್ನೂ ರಚಿಸಲು ಆಗುವುದಿಲ್ಲ. ಹಾಗೊಂದು ವೇಳೆ ಸಫಲವಾದಲ್ಲಿ ಅವು ಅಪವಾದಗಳೇ ಆದಾವು.

ಶ್ಲೋಕವು ಹಳಗನ್ನಡಕ್ಕೆ ಚೆನ್ನಾಗಿ ಒಗ್ಗುತ್ತದೆ. ಇದರ ಘೋಷ ಕನ್ನಡಕ್ಕೆ ಸ್ವಲ್ಪ ವಿಜಾತೀಯವೆಂದು ಸೇಡಿಯಾಪು ಅವರ ಅನಿಸಿಕೆ ಇರಬಹುದು. ಕೇಳದ ಕಿವಿಗಳಿಗೆ ಇಂಥ ಕಳವಳ ಸಹಜ. ಯಾವ ಬಂಧವೂ ಕೂಡ ಕಿವಿಗೊಗ್ಗಿದ ಬಳಿಕ ಚೆನ್ನೆನಿಸೀತು. ಖ್ಯಾತಕರ್ಣಾಟಗಳ ಘೋಷವಾದರೂ ‘ವಿಜಾತೀಯ’ ತಾನೆ! ಅಚ್ಚಗನ್ನಡದ ನೆಲದ ಬಂಧಗಳೆನಿಸದ ಮಾತ್ರಾಜಾತಿಗಳಿಗೂ ಇದೇ ತರ್ಕ ಅನ್ವಯಿಸುವುದಲ್ಲವೇ? ಹೆಚ್ಚಿನ ಮಾತೇಕೆ, ಉಪಲಬ್ಧವಿರುವ ಶ್ಲೋಕದ ಹಲಕೆಲವು ಮಾದರಿಗಳನ್ನು ನೋಡಿಯೇ ನಿಶ್ಚಯಿಸಬಹುದು:

ಕಿಡಿಪಂ ಬಾರಗೇ ಮೆಯ್ಯಂ ಕಿಡಿಪಂ ಕಿಡಿಪಂತೆ ಮುಂ ।
ಕಿಡಿಪಂ ಪೋಕುಮೇ ತಾಮುಂ ಕಿಡಿಸಲ್ ಸುಡಿಸೋಲಮೇ ॥
ನರನಾಯಕನಂ ನಿಂದಾನಿರದೀಗಳೆ ಕಾಂತನಂ ।
ನೆರೆದೇನದಱಿಂದಲ್ಲಾ ನೆರೆದಿರ್ದಾಗೆನಾಗೆನೇ ॥
ಪೆಱನಾವಂ ಧರಾಚಕ್ರಕ್ಕೆಱೆಯಂ ಕೆಳೆಯಪ್ಪವಂ ।
ನೆಱೆಯಾರೆಣೆಯೆಂಬನ್ನಱೆ ಕುಱಿತಬ್ಧಿಗೆ ಬನ್ನಮಂ ॥
ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ ।
ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ ॥ (ಕವಿರಾಜಮಾರ್ಗ, ೨.೧೨೩, ೧೨೫, ೧೨೭, ೧೨೮)
ಸುಂದರಾಕಾರಸಂಪನ್ನನೆಂದುಮೀ ನೃಪನಂದನಂ ।
ನಂದನಂ ಬುಧಕೀರಾಳಿವೃಂದಕ್ಕೆ ಸಕಲರ್ತುಕಂ ॥
ತನ್ನ ಸಂತತಿ ಮುನ್ನೀತಂ ತನ್ನೀತಂ ಮುನಿಸನ್ನುತಂ ।
ತನ್ನನುರ್ಕಿನೊಳಿನ್ನಾತಂ ತನ್ನೊಳಿಂದಿನಿಸನ್ನುತಂ ॥
ಇಂದು ನೋಡಿದು ಬೇಱಂದಮೆಂದಿನಂದಮದಲ್ತಣಂ ।
ಮಂದಮಂದಂ ಕರಸ್ಪರ್ಶಂ ತಂದಪ್ಪುದುಪತಾಪಮಂ ॥
ಆತನಲ್ಲದನಂ ಮೆಚ್ಚೆಂ ಮಾತೇಂ ತಾಂ ಮಾರನಾದೊಡಂ ।
ಕೇತನಂ ರತಿರಾಗಕ್ಕೆ ಕೇತನಂ ತಾರ ನಲ್ಲನಂ ॥ (ಕಾವ್ಯಾವಲೋಕನ, ೨.೫೭೧, ೫೭೪, ೫೮೨, ೫೯೧)
ಆಕಾರದಿಂದೆ ತಿಳಿದೆಂ ನಿನ್ನ ಧರ್ಮದ ಹೇತುವಂ ।
ನಗೆಯುಂ ದಯೆಯುಂ ನಿನ್ನೊಳ್ ಅದರಿಂದೆನಗಾದುದು ॥
ಬಚ್ಚರ್ ಲಾಭೇಚ್ಛೆಯಿಂದೆಂತು ಪಣ್ಯಮಂ ಕೊಂಬರಂತೆ ನೀಂ ।
ಧರ್ಮಚರ್ಯೆಯನುಂ ಪಣ್ಯಂಗೆಯ್ದೆಯ್ ಶಾಂತಿಗದಲ್ಲಮೆ ॥
ಕಾಣ್ಬಂ ಜೇನನೆ ಬೀಳ್ಗುಂಡಿ ಬರಿಯಂ ಕಾಣನೆಂತವಂ ।
ಅಂತಪ್ಸರೆಯರಂ ಕಾಂಬೈ ಕಾಣೈ ಕಡೆಗೆ ಬೀಳ್ವುದಂ ॥
ಬಗೆ ಕಾಮಾಗ್ನಿಯಿಂ ಪೊತ್ತೆ ಮೆಯ್ಯಿಂದಂ ನೋಂತ ನಿನ್ನದೇಂ ।
ಬ್ರಹ್ಮಚರ್ಯಮೆ ನೀಂ ಬ್ರಹ್ಮಚಾರಿಯಲ್ಲಂ ಮನಸ್ಸಿನೊಳ್ ॥ (ಸೌಂದರನಂದ, ೧೧.೨೩, ೨೬, ೨೯, ೩೦)
ನನ್ನಿಯಂ ನುಡಿದುಂ ನಿಲ್ಲರ್ ದುರ್ಬಲರ್ ದುಷ್ಟಲೋಕದೊಳ್ ।
ಬಾಳ್ಗುಮೇ ಮುಕುರಂ ಬಲ್ಪಿಂ ಚೆಲ್ವುಗೇಡಿಗರೂರಿನೊಳ್ ॥
ಅದರಿಂ ಬಲಮಂ ಪೊಂದಯ್ ಬೀತುವೋಗದೆ ಬಾಳ್ತೆಯೊಳ್ ।
ಜಯದಿಂ ನಯಮುಂ ನಿಲ್ಗುಂ ಸಿರಿಯಿಂ ಹರಿ ಸೇರ್ದಪಂ ॥
ಯಾದವೀಯಮಹಾರಾಜ್ಯಮದವೀಯಂ ತವೇಪ್ಸೆಗಂ ।
ಏರಬಲ್ಲಂಗೆ ಮರನಂ ದೂರಮಪ್ಪುದೆ ತತ್ಫಲಂ ॥
ಇಂತಿರಲ್ ಶಂಕೆಯಿನ್ನೇಕಯ್ ಕಯ್ ಸಾರ್ಚಯ್ ಕಂದ ಕೂರ್ಮೆಯಿಂ ।
ಬೆಳ್ಳಿ ಮೂಡಲ್ಕೆ ಬಾನೆಲ್ಲಂ ಬಿಚ್ಚಳಿಪ್ಪಂತೆ ಕಾಯ್ದಪೆಂ ॥ (ನನ್ನದೇ)

ಮೊದಲಿನ ಎರಡು ಪದ್ಯಗುಚ್ಛಗಳು ಆದಿಪ್ರಾಸವನ್ನೂ ಒಳಗೊಂಡಿವೆ. ಇವು ಚಿತ್ರಕಾವ್ಯದ ನಿದರ್ಶನಗಳಾದ ಕಾರಣ ಆ ಪ್ರಕಾರಕ್ಕಿರುವ ಬಿಕ್ಕಟ್ಟು ಇಲ್ಲಿಯೂ ಕಂಡಿದೆ. ಆದರೂ ಗತಿಸುಭಗತೆ ಮತ್ತು ತಿರುಳ್ಗನ್ನಡತನಗಳು ಎದ್ದುತೋರುವಂತಿವೆ. ಅಷ್ಟೇಕೆ, ಚಿತ್ರಕಾವ್ಯದಂಥ ದುಷ್ಕರಕವಿತೆಗೂ ಶ್ಲೋಕ ಒದಗಿಬರಬಲ್ಲುದೆಂದರೆ ಕನ್ನಡಕ್ಕೆ ಇದಕ್ಕಿಂತ ಒದಗಿಬರಬಲ್ಲ ಛಂದಸ್ಸು ಮತ್ತಾವುದೆಂದು ನಾವು ಪ್ರತಿಪ್ರಶ್ನೆಯನ್ನೂ ಮಾಡಬಹುದು. ಮುಂದಿನ ಪದ್ಯಗುಚ್ಛ ಕಡವ ಶಂಭುಶರ್ಮರ ವಿಶಿಷ್ಟರಚನೆ. ಇದು ಅಶ್ವಘೋಷನ ಸಂಸ್ಕೃತಮೂಲದ ಅನುವಾದ. ಶರ್ಮರು ಕಾವ್ಯವನ್ನು ಮೂಲದ ಛಂದಸ್ಸಿನಲ್ಲಿಯೇ ಅನುವಾದಿಸುವ ಸಾಹಸ ಮಾಡಿ ಗೆದ್ದಿದ್ದಾರೆ. ಇಲ್ಲಿ ಆದಿಪ್ರಾಸವಿಲ್ಲ. ಆದರೆ ಬಂಧ-ಭಾಷೆಗಳ ಸೊಗಸಿಗೇನೂ ಕೊರತೆಯಿಲ್ಲ. ಕಡೆಯ ಗುಚ್ಛ ನನ್ನದೇ ರಚನೆ. ಇಲ್ಲಿಯೂ ಆದಿಪ್ರಾಸ ಪಾಲಿತವಾಗಿಲ್ಲ. ಈ ಪದ್ಯಗಳು ಸ್ವೋಪಜ್ಞವಾದ ಕಾರಣ ಅರ್ಥಾಲಂಕಾರ-ಶಬ್ದಾಲಂಕಾರಗಳಿಗೆ ಮುಕ್ತವಾದ ಅವಕಾಶ ದಕ್ಕಿದೆ.

ಇಷ್ಟು ಪದ್ಯಗಳನ್ನು ಕಂಡ ಬಳಿಕವೂ ಹಳಗನ್ನಡಕ್ಕೆ ಶ್ಲೋಕ ಒಗ್ಗದೆನ್ನಲಾದೀತೇ? ಆದಿಪ್ರಾಸವನ್ನು ಮೀರಿದ ಬಳಿಕವಂತೂ ಇದಕ್ಕೆ ದಕ್ಕುವ ಚೆಲುವನ್ನು ಅಲ್ಲಗೆಳೆಯಲು ಸಾಧ್ಯವೇ?

ಒಟ್ಟಿನಲ್ಲಿ ಶ್ಲೋಕವು ಭಾರತೀಯ ಕವಿಗಳಿಗೆ ವೈದಿಕ ಪರಂಪರೆಯು ಬಹೂಕರಿಸಿದ ಭವ್ಯವಾದ ಛಂದೋಬಂಧ. ಇದಕ್ಕಿರುವ ಲಕ್ಷಣ ತಕ್ಕಮಟ್ಟಿಗೆ ಪರ್ಯಾಪ್ತವಾಗಿಯೇ ಇದೆ. ಆದರೂ ಈ ಬಂಧದ ಒಳ-ಹೊರಗನ್ನರಿಯಲು ರಸಸಿದ್ಧರಾದ ಮಹಾಕವಿಗಳ ಪ್ರಯೋಗಗಳನ್ನೇ ಆಲಿಸಬೇಕು; ಗಮನಿಸಿ ಅಭ್ಯಸಿಸಬೇಕು. ಹೇಗೆ ಸನಾತನಧರ್ಮವು ಮಿಕ್ಕ ಮತಗಳಂತೆ ಕೇವಲ ರೂಪೈಕನಿಷ್ಠವಲ್ಲವೋ ಹಾಗೆಯೇ ಶ್ಲೋಕಚ್ಛಂದಸ್ಸು ಕೂಡ ಏಕದೇಶೀಯವಾದ ಲಕ್ಷಣದೊಳಗೆ ಸಿಲುಕುವಂಥದ್ದಲ್ಲ. ಇದನ್ನು ಛಂದೋಗತಿಪ್ರಜ್ಞೆ ಎಂಬ ವಿಶದಾನುಭವದಿಂದ ಅರಿತು ಅನುಸಂಧಾನಿಸಬೇಕು; ರಚಿಸಿ ಆನಂದಿಸಬೇಕು.


  1. ಇಂಥ ವಾಡಿಕೆಯನ್ನು ನಮ್ಮ ಶಾಸ್ತ್ರೀಯ ಪರಿಭಾಷೆಯಲ್ಲಿ ಕ್ರಮವಾಗಿ ‘ಜಾತಿ’ಯನ್ನು ‘ವ್ಯಕ್ತಿ’ಯ ಹೆಸರಿನಿಂದಲೂ ವ್ಯಕ್ತಿಯನ್ನು ಜಾತಿಯ ಹೆಸರಿನಿಂದಲೂ ಗುರುತಿಸುವ ಪರಿ ಎಂದು ಹೇಳಬಹುದು. ಜಾತಿ ಮತ್ತು ವ್ಯಕ್ತಿಗಳನ್ನು ಜೀನಸ್ ಮತ್ತು ಸ್ಪೀಷೀಸ್ ಎಂದು ಪಾಶ್ಚಾತ್ತ್ಯರ ಪರಂಪರೆ ಹೆಸರಿಸಿದೆ. ↩︎

  2. ಕನ್ನಡ ಛಂದಃಸ್ವರೂಪ, ಪು. ೧೭೦-೮೨; ಕನ್ನಡ ಛಂದಸ್ಸಿನ ಚರಿತ್ರೆ (ಸಂ. ೧), ಪು. ೩೧೯-೨೯; ಸೇಡಿಯಾಪು ಛಂದಃಸಂಪುಟ, ಪು. ೨೨೩-೩೧ ↩︎

  3. ಇಲ್ಲಿಯ ಮೂರನೆಯ ಪಾದದ ಎರಡನೆಯ ಘಟಕವು ಪ್ರತೀಪಗಣವಾಗಿಯೋ ಲಘುಯುಗ್ಮವಾಗಿಯೋ ಪರಿಣಮಿಸಿದ್ದಲ್ಲಿ ಶ್ಲೋಕದ ಗತಿ ಮತ್ತೂ ಸೊಗಯಿಸುತ್ತಿತ್ತು. ಏಕೆಂದರೆ ಈಗಿರುವ ವಿನ್ಯಾಸದಲ್ಲಿ ವರ್ಜ್ಯವೆನಿಸಿದ ರ-ಗಣವು ತೃತೀಯಪಾದದ ಪ್ರಥಮಾಕ್ಷರದ ಬಳಿಕ ತಲೆದೋರಿದೆ. ಹೀಗಾಗಿ ಇಲ್ಲಿಯ ಮೂರನೆಯ ಪಾದದ ವಿನ್ಯಾಸವು ಸೌಂದರ್ಯಸಾಧ್ಯತೆಗಿಂತ ಮಿಗಿಲಾಗಿ ಗಣಿತೀಯ ಸಾಧ್ಯತೆಯೆನಿಸಿದೆ. ↩︎

  4. ಪ್ರತಿಪಾದದ ಕೊನೆಗೆ ಬರುವ ಅಕ್ಷರವು ಸಹಜಗುರುವಾಗಿಲ್ಲದೆ ಲಘುವಾಗಿ ಉಳಿದಾಗ ಒಟ್ಟು ಮಾತ್ರೆಗಳ ಸಂಖ್ಯೆ ನಲವತ್ತೆರಡಾಗಿತ್ತದೆ. ಹಾಗಲ್ಲದ ಪಕ್ಷದಲ್ಲಿ ನಲವತ್ತಾರು. ↩︎

  5. ನೋಡಿ: ಸೇಡಿಯಾಪು ಛಂದಃಸಂಪುಟ (ಪು. ೨೨೮-೨೯); ಕನ್ನಡ ಛಂದಃಸ್ವರೂಪ (ಪು. ೧೮೧) ↩︎

  6. ನೋಡಿ: ಶಾಸ್ತ್ರೀಯ (ಸಂ. ೨), ಪು. ೧೮೩ ↩︎