೧೨ ಉಪರೂಪಕಗಳು

“ಉಪರೂಪಕ” ಗಳು ನಮಗೆ ತಿಳಿದಿರುವವೂ ದೊರೆತಿರುವವೂ ಬಹು ಸ್ವಲ್ಪ; ನಾಟಿಕಾ ಸಟ್ಟಕಗಳನ್ನು ಬಿಟ್ಟರೆ, ಇಂಥವು ರೂಪಗೋಸ್ವಾಮಿಯ ‘ದಾನಕೇಳೀ ಕೌಮುದೀ’ (ಭಾಣಿಕಾ) ಮತ್ತು ಮಾಧವನ ‘ಸುಭದ್ರಾಹರಣ’ (ಶ್ರೀಗದಿತ) ಇವೆರಡೇ ಎಂದು ಹೇಳಬಹುದು. ಇವು ಕೂಡ ಲಕ್ಷಣಗ್ರಂಥಗಳನ್ನು ನೋಡಿ ಅವುಗಳಿಗೆ ಹೊಂದುವಂತೆ ಬರೆದ ಈಚಿನ ಎಂದರೆ ೧೫—೧೬ ನೆಯ ಶತಮಾನಗಳ ಕೃತಿಗಳು.

ಉಪರೂಪಕಗಳಲ್ಲೆಲ್ಲಾ ಪ್ರಸಿದ್ಧವಾದವುಗಳೆಂದರೆ “ನಾಟಿಕಾ” ಮತ್ತು “ಸಟ್ಟಕ”. ಇವುಗಳಿಗೆ ಇರತಕ್ಕ ವ್ಯತ್ಯಾಸವು ಅಲ್ಪವೆಂದು ಹಿಂದೆಯೇ ನೋಡಿದ್ದೇವೆ; ಸಟ್ಟಕವು ಪೂರ್ತಿಯಾಗಿ ಪ್ರಾಕೃತದಲ್ಲಿರಬೇಕಾದ್ದರಿಂದ ಅದನ್ನು ಬರೆಯುವುದು ಪ್ರಯಾಸ; ಆದ್ದರಿಂದಲೋ ಏನೋ ಈ ಜಾತಿಯ ಕೃತಿಗಳು ಘನಶ್ಯಾಮನ ‘ಆನಂದ ಸುಂದರಿ’ ವಿಶ್ವೇಶ್ವರನ ‘ಶೃಂಗಾರ ಮಂಜರಿ’ ಇವೆರಡೇ ದೊರೆತಿವೆ.

“ನಾಟಿಕೆ” ಗೂ “ನಾಟಕ” ಕ್ಕೂ ಏನು ಅಷ್ಟು ವ್ಯತ್ಯಾಸವಿಲ್ಲ; ಆದರೂ ಹರ್ಷನ ‘ರತ್ನಾವಳಿ’ ಹುಟ್ಟಿದ ಮೇಲೆ ಆ ಮೇಲ್ಪಂಕ್ತಿಯ ಮೇಲೆ “ನಾಟಕ” ಎಂಬ ಹೆಸರಿನಿಂದ ಅನೇಕ ಅನುಕರಣಗಳು ಹುಟ್ಟಿವೆ. ಉಷಾ ರಾಗೋದಯ, ಕರ್ಣ ಸುಂದರೀ, ಕಮಲಿನೀ ಕಲಹಂಸ ನಾಟಕಾ, ಕುಂದ (ಮುಕುಂದ) ಮಾಲಾ, ಕುವಲಯವತೀ, ಚಂದ್ರಕಲಾ, ಚಂದ್ರಪ್ರಭಾ, ನವಮಾಲಿಕಾ, ಪಾರಿಜಾತ ಮಂಜರಿ (ವಿಜಯಶ್ರೀ), ಪುಷ್ಪಮಾಲಾ, ಮೃಗಾಂಕ ಲೇಖಾ, ರಂಭಾ ಮಂಜರೀ, ರಾಮಾಂಕ, ಲಲಿತ ರತ್ನಮಾಲಾ, ವಾಸಂತಿಕಾ, ವೃಷಭಾನುಜಾ, ಶಿವನಾರಾಯಣ ಭಂಜಮಹೋದಯ, ಶೃಂಗಾರತರಂಗಿಣೀ, ಶೃಂಗಾರ ವಾಟಿಕಾ (—ವಾಪಿಕಾ?), ಇವು ನಮಗೆ ತಿಳಿದು ಬಂದಿರುವ ಇಂಥ ನಾಟಿಕೆಗಳು.