೧೦ ಅಂಕ

ನಾಟಕದ ಒಳಗೆ ಬರುವ ಗರ್ಭಾಂಕ ನಾಟಕವನ್ನು ಸಾಧಾರಣವಾಗಿ “ಅಂಕ” ವೆಂದು ಎಣಿಸುತ್ತಾರೆ; “ಪ್ರೇಕ್ಷಣಿಕ” ವೆಂಬುದು ಈ ಅಂಕಕ್ಕೆ ಮತ್ತೊಂದು ಹೆಸರಾಗಿ ಕಾಣುತ್ತದೆ. ಉನ್ಮತ್ತ ರಾಘವ, ಕಮಲಾಕರುಣಾ ವಿಲಾಸ (ಕೃಷ್ಣಾಭ್ಯುದಯ), ಗೈರ್ವಾಣೀ ವಿಜಯ, ಶರ್ಮಿಷ್ಠಾ ಯಯಾತಿ, ಸ್ವರ್ಣಮುಕ್ತಾವಿವಾದ, ಸ್ನುಷಾ ವಿಜಯ — ಇವು ನಮಗೆ ತಿಳಿದುಬಂದಿರುವ “ಅಂಕ” ಗಳು. ‘ಉನ್ಮತ್ತರಾಘವ’ ವು ‘ವಿಕ್ರಮೋರ್ವಶೀಯ’ ದ ನಾಲ್ಕನೆಯ ಅಂಕದ ಅನುಕರಣ; ಇದರಲ್ಲಿ ರಾಮಲಕ್ಷ್ಮಣರು ಸುವರ್ಣಮೃಗದ ಹಿಂದೆ ಹೋದಾಗ ಸೀತೆ ದುರ್ವಾಸ ಶಾಪದಿಂದ ಒಂದು ಜಿಂಕೆಯಾಗುತ್ತಾಳೆ; ರಾಮನು ಹಿಂದಿರುಗಿ ಬಂದು ವಿರಹದಿಂದ ಹುಚ್ಚಾಗಿ ಅಲೆದು ಕೊನೆಗೆ ಅಗಸ್ತ್ಯರ ಪ್ರಸಾದದಿಂದ ಸೀತೆಯನ್ನು ಪಡೆಯುತ್ತಾನೆ.