ಭರತನ ನಾಟ್ಯಶಾಸ್ತ್ರದಲ್ಲಿ ‘ತ್ರಿಪುರದಾಹ’ ವೆಂಬುದು “ಡಿಮ” ಕ್ಕೆ ಉದಾಹರಣೆಯಾಗಿ ಉಕ್ತವಾಗಿದೆ. ಆದರೆ ಈಗ ಅದಾಗಲಿ ಪ್ರಾಚೀನವಾದ ಇತರ ಡಿಮಗಳಾಗಲಿ ಉಪಲಬ್ಧವಾಗಿಲ್ಲ. ಸುಮಾರು ೧೧೫೦ರಲ್ಲಿ ಜೀವಿಸಿದ್ದ ವತ್ಸರಾಜನೆಂಬವನು ‘ತ್ರಿಪುರದಾಹ’ ವೆಂಬ ಒಂದು ಡಿಮವನ್ನು ಬರೆದಿದ್ದಾನೆ. ಅವನ ಕಾಲಕ್ಕೇ ಭರತನಿಂದ ಉದಾಹೃತವಾದ ಗ್ರಂಥವು ನಷ್ಟವಾಗಿದ್ದದ್ದರಿಂದ ಅವನು ಅದೇ ಹೆಸರಿನ ಇನ್ನೊಂದು ಡಿಮವನ್ನು ಬರೆದನೆಂದು ಊಹಿಸಬಹುದಾಗಿದೆ. ಇದೇ ಈಗ ದೊರೆತಿರುವ ಡಿಮಗಳಲ್ಲೆಲ್ಲಾ ಪ್ರಾಚೀನ. ಇದಲ್ಲದೆ ನಮಗೆ ಗೊತ್ತಿರುವ ಇತರ ಡಿಮಗಳು ಮೂರು ನಾಲ್ಕು ಮಾತ್ರ— ಕೃಷ್ಣ ವಿಜಯ, ಮನ್ಮಥೋನ್ಮಥನ, ವೀರಭದ್ರವಿಜೃಂಭಣ.