“ಪ್ರಹಸನ” ವೂ ಪ್ರಾಚೀನವಾದ ರೂಪಕಜಾತಿಯೇ; ಆದರೆ ನಮಗೆ ಈಗ ದೊರೆತಿರುವ ಪ್ರಹಸನಗಳು ಈಚಿನವು. ಪ್ರಾಯಶಃ ಮಹೇಂದ್ರ ವಿಕ್ರಮವರ್ಮನ ‘ಮತ್ತವಿಲಾಸ’ ವೇ (೭ನೆಯ ಶತಮಾನ) ಇವುಗಳಲ್ಲಿ ಹಿಂದಿನದು.
ಪ್ರಹಸನಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಲೋಪದೋಷಗಳು ಹಾಸ್ಯ ಮಾಡಲ್ಪಟ್ಟಿರುತ್ತವೆ; ಆದರೆ ಇವುಗಳ ವಸ್ತುವು ಸಾಧಾರಣವಾಗಿ ಅಶ್ಲೀಲ; ಹಾಸ್ಯವು ಬಹಳ ಕೀಳು; ಬಗೆಬಗೆಯ “ಕಚ ಕುಚ ನಿತಂಬಾದಿ” ವರ್ಣನೆ ಭಾಣ ಪ್ರಹಸನಗಳಿಗೇ ಎತ್ತಿದ್ದು; ಸಭ್ಯರು ಸಂಕೋಚಪಡದಂತೆ, ಹೆಂಗಸರು ನಾಚಿಕೆಪಡದಂತೆ, ನೋಡಬಲ್ಲ, ಕೊನೆಗೆ ಓದಬಲ್ಲ ಪ್ರಹಸನವೇ ಸಂಸ್ಕೃತದಲ್ಲಿ ಇಲ್ಲವೆಂದರೆ ತಪ್ಪಾಗಲಾರದು; ಇಂಗ್ಲಿಷು ಸಾಹಿತ್ಯದಲ್ಲಿ ಕಂಡು ಬರುವ ನಯವಾದ ನವಿರಾದ ಮಧುರವಾದ ತಿಳಿಯಾದ ಹಾಸ್ಯವು ಇವುಗಳಲ್ಲಿ ತೀರ ಅಪರೂಪ.
ಪ್ರಹಸನದ ವಸ್ತುವೂ ಪ್ರತಿಪಾದನೆಯೂ ಹೇಗಿರುವುದೆಂದು ತಿಳಿಯಲು ಮಾದರಿಗಾಗಿ ಇಲ್ಲಿ ‘ಲಟಕಮೇಲಕ’ ವೆಂಬ ಪ್ರಹಸನವನ್ನು ಸಂಗ್ರಹಿಸಿ ಬರೆದಿದೆ. ‘ಲಟಕಮೇಲಕ’ ವೆಂದರೆ ದುಷ್ಟರ ಕೂಟವೆಂದರ್ಥ. ಇದರಲ್ಲಿ ಎರಡು ಅಂಕಗಳಿವೆ; ಮೊದಲನೆಯ ಅಂಕಕ್ಕೆ “ಲಜ್ಜಾ ವಿಕ್ರಯ” ವೆಂದೂ ಎರಡನೆಯ ಅಂಕಕ್ಕೆ “ದಂತುರಾ ವಿವಾಹ” ವೆಂದೂ ಹೆಸರು; ಕಥೆ ನಡೆಯುವುದು ಮದನ ಮಂಜರಿಯೆಂಬ ವೇಶ್ಯೆಯ ಮನೆಯಲ್ಲಿ.
ಸಭಾಸಲಿಯೆಂಬ ಉಪಾಧ್ಯಾಯನು ಕುಲವ್ಯಾಧಿಯೆಂಬ ಶಿಷ್ಯನೊಡನೆ ಮದನ ಮಂಜರಿಯನ್ನು ಹುಡುಕಿಕೊಂಡು ಬರುತ್ತಾನೆ. ಕಲಹಪ್ರಿಯೆಯೆಂಬ ಅವನ ಹೆಂಡತಿ ಅವನನ್ನು ಸೌಟು ಕೊಳ್ಳಿ ಮಣಿ ಹಂಡೆ ಏನು ಸಿಕ್ಕಿದರೆ ಅದರಿಂದ ಹೊಡೆದು ಅಟ್ಟಿರುತ್ತಾಳೆ. ಅವನ ಈ ವೃತ್ತಾಂತವನ್ನು ಕೇಳಿ ಮದನಮಂಜರಿ ಇಂಥವನ ಅನುರಾಗವು “ವಂಧ್ಯಾಸುತನು ಧರಿಸಿದ ಗಗನಕುಸುಮ ಮಾಲೆ!” ಎಂದುಕೊಳ್ಳುತ್ತಾಳೆ. ಅವಳ ತಾಯಿಯ ತೊಡೆಯಲ್ಲಿ ಒಂದು ಕುರುವಾಗಿರಲು ಅದನ್ನು ವಾಸಿಮಾಡುವುದಕ್ಕಾಗಿ ಸಭಾಸಲಿ ಜಂತುಕೇತುವೆಂಬ ವೈದ್ಯನನ್ನು ಕರೆಸುತ್ತಾನೆ; ಅವನದೆಲ್ಲಾ ವಿಪರೀತ ವೈದ್ಯವೇ! ಜ್ವರದಲ್ಲಿ ಹಾಲು ತುಪ್ಪ ಕುಡಿಸುವುದು, ಕ್ಷಯದಲ್ಲಿ ರಕ್ತ ತೆಗೆಯುವುದು, ಕಣ್ಣಿನ ವ್ಯಾಧಿಗೆ ಉಪ್ಪಿನ ಪುಡಿ ತುಂಬುವುದು — ಇತ್ಯಾದಿ. ಅವನು ಬರುವ ಹೊತ್ತಿಗೆ ಮದನಮಂಜರಿಯ ಗಂಟಲಲ್ಲಿ ಒಂದು ಮೀನಿನ ಮೂಳೆ ಸಿಕ್ಕಿಹಾಕಿಕೊಂಡಿರಲು, ಬಾಯನ್ನು ಬಲವಾಗಿ ಬಿಗಿದು ಕಟ್ಟಿ ಮೂಳೆಯನ್ನು ಹಗ್ಗದಿಂದ ಏಕೆ ಎಳೆದು ಹಾಕಬಾರದೆಂದೂ, ಒಂಟೆಯ ಬಾಯಲ್ಲಿ ನಳ್ಳಿ ಸಿಕ್ಕಿಕೊಂಡಿರಲು ತನ್ನ ತಂದೆ ಹೀಗೆ ಮಾಡಿಯೇ ಅದನ್ನು ತೆಗೆದಿದ್ದನೆಂದೂ ಹೇಳಲು, ಅವಳು ಫಕ್ಕನೆ ನಕ್ಕು ಮೂಳೆ ಈಚೆಗೆ ಬಿದ್ದುಬಿಡುತ್ತದೆ. ಆ ಊರಿನಲ್ಲಿ ವೈದ್ಯರ ಔಷಧದಿಂದ ರೋಗಿಗಳು ಸತ್ತರೆ ಅವರ ಶವವನ್ನು ಆ ವೈದ್ಯರೇ ಹೊತ್ತುಹಾಕಬೇಕಾಗಿತ್ತು. (ಅವನ ಚಿಕಿತ್ಸೆಯಿಂದ ರೋಗಿಗಳು ಸಾಯುವುದೇ ಹೆಚ್ಚಾಗಿದ್ದದ್ದರಿಂದ) ಅವನು ಗಜವೈದ್ಯವನ್ನು ಬಿಟ್ಟು ಬಾಲವೈದ್ಯವನ್ನು ಹಿಡಿದಿದ್ದನಂತೆ. ಅವನು ತನ್ನ ಪಾಂಡಿತ್ಯವನ್ನು
ಯಸ್ಯ ಕಸ್ಯ ತರೋರ್ಮೂಲಂ ಯೇನ ಕೇನಾಪಿ ಪೇಷಯೇತ್ ।
ಯಸ್ಮೈಕಸ್ಮೈ ಪ್ರದಾತವ್ಯಂ ಯದ್ವಾತದ್ವಾ ಭವಿಷ್ಯತಿ ॥
ಚಕ್ಷೂರೋಗೇ ಸಮುತ್ಪನ್ನೇ ತಪ್ತಫಾಲಂ ಗುದೇ ನ್ಯಸೇತ್ ।
ತದಾ ನೇತ್ರೋದ್ಭವಾಂ ಪೀಡಾಂ ಮನಸಾಪಿ ನ ಸಂಸ್ಮರೇತ್ ॥
ಮುಂತಾದ ಶ್ಲೋಕಗಳಿಂದ ಪ್ರದರ್ಶಿಸುತ್ತಾನೆ. ಅವನು ಮದನಮಂಜರಿಯ ಸೌಂದರ್ಯದಿಂದ ಮೋಹಿತನಾಗಿ ಅವಳನ್ನು ವಶಪಡಿಸಿಕೊಳ್ಳಲು ವಶೀಕರಣಾದಿ ವಿದ್ಯೆಗಳನ್ನು ಅಭ್ಯಾಸ ಮಾಡುವುದಕ್ಕೆ ಹೋಗುತ್ತಾನೆ.
ಅನಂತರ ಜಟಾಸುರನೆಂಬ ದಿಗಂಬರನು ಮದನಮಂಜರಿಗಾಗಿ ಅಲ್ಲಿಗೆ ಬರುತ್ತಾನೆ; ಇದು ಅವನ ವರ್ಣನೆ—
ನಷ್ಟಶ್ರುತಿರ್ವ್ಯಕ್ತಭುಜಂಗಸಂಗಃ ಸಂಗೀತಕಾನಂದವಿನೋದಬಂಧುಃ ।
ವಿಕ್ರೀತಲಜ್ಜಃ ಸ್ಮರಬಾಣವರ್ತೀ ಜಟಾಸುರಸ್ತಸ್ಕರಚಕ್ರವರ್ತೀ ॥
ಅವನ ಒಂದು ಆಡನ್ನು ಕೊಂದು ಹಾಕಿದ್ದ “ಅಜ್ಞಾನರಾಶಿ” ಯೂ ಅಲ್ಲಿಗೆ ಬರಲು, ಅವರ ಅಹವಾಲನ್ನು ಕೇಳಿ, ಜ್ಞಾನಪೂರ್ವಕವಾಗಿ ಕೊಲ್ಲದೆ, ಆಡನ್ನು ಕರುವೆಂದುಕೊಂಡು ಕೊಂದದ್ದರಿಂದ ಅಜ್ಞಾನರಾಶಿ ಅದಕ್ಕೆ ಯಾವ ಪರಿಹಾರವನ್ನೂ ಕೊಡಬೇಕಾದದ್ದಿಲ್ಲವೆಂದು ತೀರ್ಮಾನಿಸುವುದು (ಅಂಕ ೧).
ಎರಡನೆಯ ಅಂಕದಲ್ಲಿ ನಿಸ್ಸಂತಾನ ಗ್ರಾಮವಾಸಿಯಾದ ಸಂಗ್ರಾಮವಿಸರನೆಂಬ ರಾಜನು ವಿಶ್ವಾಸಘಾತುಕನೆಂಬ ಮಿತ್ರನೊಡನೆ ಅಲ್ಲಿಗೆ ಬರುತ್ತಾನೆ. ಅವನು ದುಡ್ಡಿನವನೆಂದು ಮದನಮಂಜರಿ ಸುಮುಖಿಯಾಗಿ ಮಾತನಾಡುತ್ತಾಳೆ; ಆದರೆ ಅವನು ಬರಿಯ ಪೊಳ್ಳುರಾಜ; ತಾನು ಕೊಂಡುಕೊಂಡಿದ್ದ ಒಂದು ನಾಯಿಗೆ ಬೆಲೆ ಕೊಡಲು ಅವನು ಸಾಲ ಮಾಡಬೇಕಾಗಿತ್ತು; ಆ ಸಾಲವೂ ಅವನಿಗೆ ಹುಟ್ಟುವುದಿಲ್ಲ.
ಆಮೇಲೆ ಮಿಥ್ಯಾಶುಕ್ಲನೆಂಬ ಬ್ರಾಹ್ಮಣನು ಅಲ್ಲಿಗೆ ಬರುವನು. ಇದು ಅವನ ಸ್ವಭಾವದ ವರ್ಣನೆ—
ಬ್ರಾಹ್ಮಣ್ಯದರ್ಪ ಪರಿಪೃಷ್ಟ ವಿರಿಂಚಿ ಶೀಲಃ
ಶಂಭೋರಪಿ ವ್ರತವಿಧಾವುಪಹಾಸ ಶೀಲಃ ।
ಕೂಪಾಂಬುಧೌತ ಕಪಿಲಾಂಬರ ವೇಷವರ್ತೀ
ದಂಭಪ್ರಿಯಃ ಸ್ಫುರತಿ ವಂಚಕ ಚಕ್ರವರ್ತೀ ॥
ಇವನಂತೆ ‘ಪುಂಕಟ ಮಿಶ್ರ’ ನೆಂಬ ಮತ್ತೊಬ್ಬ ಬ್ರಾಹ್ಮಣನೂ ಅಲ್ಲಿಗೆ ಬರುತ್ತಾನೆ; ಇದು ಅವನ ವರ್ಣನೆ—
ಗುರೋರ್ಗಿರಃ ಪಂಚದಿನಾನ್ಯುಪಾಸ್ಯ ವೇದಾಂತ ಶಾಸ್ತ್ರಾಣಿ ದಿನತ್ರಯಂ ಚ ।
ಅಮೀ ಸಮಾಘ್ರಾತ ವಿತರ್ಕವಾದಾಃ ಸಮಾಗತಾಃ ಪುಂಕಟಮಿಶ್ರಪಾದಾಃ ॥
ಇದು ಅವರವರಿಗೆ ನಡೆಯುವ ಸಂವಾದದ ಒಂದು ಭಾಗ—
ಮಿಥ್ಯಾ —
ತಾವು ಏಕದಂಡ ಮತವನ್ನು ಅಭ್ಯಾಸ ಮಾಡಿದ್ದೀರಿ; ಆದ್ದರಿಂದ ತಾವು ‘ಮಿಶ್ರ’ ರೆಂಬುದು ಹೇಗೆ?
ಪುಂಕಟ—
ನಾವು ಕರ್ಮಮೀಮಾಂಸಾ ಬ್ರಹ್ಮಮೀಮಾಂಸಾ ಇವೆರಡನ್ನೂ ವ್ಯಾಖ್ಯಾನ ಮಾಡುತ್ತೇವೆ; ಎರಡು ದರ್ಶನಗಳ ಜ್ಞಾನದಿಂದ ನಾವು ಮಿಶ್ರರು.
ಮಿಥ್ಯಾ —
ಪರಸ್ಪರ ಅವಿರೋಧದಿಂದ ಇವೆರಡೂ ಒಂದೇ ದರ್ಶನವಲ್ಲವೇ! ಆದ್ದರಿಂದ ಮಿಶ್ರರೆಂಬ ಹೆಸರು ಹೇಗೆ? ಅಲ್ಲದೆ ವೇದಾಂತಿಗಳಾದ ನಿಮ್ಮ ಅದ್ವೈತವು ಸಪ್ರಮಾಣವೇ ಅಪ್ರಮಾಣವೇ? ಪ್ರಮಾಣವಿದ್ದರೆ ದ್ವೈತವಾಗಿಬಿಡುತ್ತದೆ; ಪ್ರಮಾಣವಿಲ್ಲದಿದ್ದರೆ ಅದ್ವೈತ ಹೇಗೆ ಸಿದ್ಧವಾಗುತ್ತದೆ?
ಪುಂಕಟ —
ಪ್ರಮಾಣವೇನೋ ಇದೆ; ಆದರೆ ಅದು ಬೇರೆಯಲ್ಲ.
ಮಿಥ್ಯಾ —
ಅದೇ ಪ್ರಮಾಣ, ಅದೇ ಪ್ರಮೇಯವೆಂದರೆ ವೇದಾಂತ ಚರ್ಚೆ ತುಂಬ ಗಂಭೀರವಾಯಿತು!
ಪುಂಕಟ—
ಬರಿಯ ಶುಷ್ಕ ತರ್ಕ ಸಾಕು; ನಾವು ಮದನಮಂಜರಿಯ ಸ್ವಸ್ತ್ಯಯನಕ್ಕಾಗಿ ಬಂದಿದ್ದೇವೆ…..
ಹೀಗೆ ಅವರಿಗೆ ಮಾತಿಗೆ ಮಾತು ಬೆಳೆದು ಮಿಥ್ಯಾಶುಕ್ಲನು ಪುಂಕಟನನ್ನು ಕತ್ತಿಗೆ ಕೈ ಕೊಟ್ಟು ತಳ್ಳಿಬಿಡುತ್ತಾನೆ. ಇದರಂತೆ ವ್ಯಸನಾಕರನೆಂಬ ಮತ್ತೊಬ್ಬನೂ ಬರಲು ದಿಗಂಬರನು ಅವನೊಡನೆ ವ್ಯಾಜ್ಯಮಾಡಿ ಅವನನ್ನು ಓಡಿಸಿಬಿಡುತ್ತಾನೆ. ಕೊನೆಗೆ ಮದನಮಂಜರಿಯ ಆಕಾಂಕ್ಷಿಗಳಾಗಿ ಸಭಾಸಲಿ ದಿಗಂಬರರಿಬ್ಬರೇ ಉಳಿಯುತ್ತಾರೆ; ದಿಗಂಬರನು ಆತುರನಾಗಿ ತನಗೆ ದಂತುರೆಯನ್ನು ಕೊಡಿಸಿಕೊಟ್ಟರೆ ಸಾಕು, ಮದನಮಂಜರಿಯನ್ನು ಸಭಾಸಲಿಯೇ ಉಳಿಸಿಕೊಳ್ಳಬಹುದೆಂದು ಅವನನ್ನು ಬೇಡಿಕೊಳ್ಳಲು ಜಟಾಸುರನಿಗೂ ದಂತುರೆಗೂ ಮದುವೆಗೆ ಏರ್ಪಾಡಾಗುವುದು. ಚತುರ್ವೇದನೆಂಬ ಜಂಗಮನು ಬಂದು ದಿಗಂಬರನನ್ನು ಎಕ್ಕದ ಹೂವಿನಿಂದ ಅಲಂಕರಿಸಿ
ದೋಷಾಕರಮುಖೀಮೇನಾಂ ದಂತುರಾಂ ಪ್ರಾಪ್ಯ ಚಂಡಿಕಾಂ ।
ಭಜ ತ್ವಂ ಶೂಲಿನಃ ಕಾಂತಿಂ ಶ್ಮಶಾನಾಶ್ರಮವಾಸಿನಃ ॥
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ ॥
ಎಂದು ಆಶೀರ್ವದಿಸುವನು. ಈ ಪೌರೋಹಿತ್ಯಕ್ಕಾಗಿ ಅವನಿಗೆ ಎರಡು ಅಳಲೆಕಾಯಿ ದಕ್ಷಿಣೆಯಾಗಿ ದೊರೆಯುವುದು. ಸಭಾಸಲಿಯ ಭರತವಾಕ್ಯದಿಂದ ಆಟ ಮುಗಿಯುವುದು.
ಹೀಗೆ ಇದರಲ್ಲಿ ಸುಸಂಬದ್ಧವಾದ ‘ವಸ್ತು’ ವಾಗಲಿ ಉತ್ತಮ ಸಂವಿಧಾನವಾಗಲಿ ಇಲ್ಲ; ಪಾತ್ರಗಳ ಹೆಸರು ಉದ್ಯೋಗ ಮಾತು ಕಥೆ ನಡೆವಳಿಕೆ ಸನ್ನಿವೇಶ ಮುಂತಾದವುಗಳಿಗೆ ಸಂಬಂಧಪಟ್ಟ ಹಾಗೆ ವಿಧವಿಧವಾದ ಹಾಸ್ಯ ಬರುತ್ತದೆ. (‘ಪ್ರಭೋದ ಚಂದ್ರೋದಯ’ ದ ಮೂರನೆಯ ಅಂಕವನ್ನು ಹೋಲಿಸಿ.) ಅವುಗಳಲ್ಲಿ ಅನೇಕ ಅಂಶಗಳು ತುಂಬ ಗ್ರಾಮ್ಯವಾದ್ದರಿಂದ ಅವುಗಳನ್ನು ಇಲ್ಲಿ ಸೂಚಿಸಲೂ ಸಾಧ್ಯವಿಲ್ಲದೆ ಬಿಡಬೇಕಾಯಿತು. ಆದರೆ ಮದನ ಮಂಜರಿಯನ್ನು ವರ್ಣಿಸುವಾಗ ಎಲ್ಲ “ಲಟಕ” ರೂ ಸಾಧಾರಣವಾಗಿ ರಸವತ್ತಾದ ಕಾವ್ಯರೀತಿಯ ಶ್ಲೋಕಗಳನ್ನೇ ಹೇಳುತ್ತಾರೆ. ಇದು ಪುಂಕಟ ಮಿಶ್ರಕೃತ ವರ್ಣನೆ—
ಉದ್ಗ್ರೀವರ್ಯ ಧರಣಿಮಂಡಲಮಪ್ರಯತ್ನಾತ್
ಆವರ್ಜಯನ್ನಮರ ವೃಂದ ಮುಖಾಂಬುಜಾನಿ ।
ಅಸ್ಯಾ ವಿನೋದಯತಿ ಕಸ್ಯ ನ ಚಿತ್ತವೃತ್ತಿಂ
ಪ್ರಾಸಾದಶೈಲಶಿಖರಪ್ರಣಮಿ ಮುಖೇಂದುಃ ॥
ಲಾವಣ್ಯಾಮೃತಸರಸೀ ಲಲಿತಗತಿರ್ವಿಕಚಕಮಲದಳನಯನಾ ।
ಕಸ್ಯ ನ ಮದನಶರಾಸನವಿಧುರಮನಸ್ತಾಪಮಪಹರತಿ ॥
ಇಂಥ ಪ್ರಹಸನಗಳಿಗೆ ಸಾಮಗ್ರಿಯನ್ನು ಒದಗಿಸಿಕೊಟ್ಟ ಆಗಿನ ಸಮಾಜ ಹೇಗಿದ್ದಿರಬಹುದೆಂದು ಯೋಚಿಸಿಕೊಂಡರೆ ಅದರಲ್ಲಿ ಗೌರವ ಹುಟ್ಟುವುದಿಲ್ಲ.
ಉನ್ಮತ್ತ ಪ್ರಹಸನ, ಕಂದರ್ಪ ಕೇಳಿ, ಕಾಲೇಯ ಕುತೂಹಲ, ಕೌತುಕ ರತ್ನಾಕರ, ಕೌತುಕ ಸರ್ವಸ್ವ, ದೇವದುರ್ಗತಿ ಪ್ರಹಸನ, ಧೂರ್ತಚರಿತ, ಧೂರ್ತ ನರ್ತಕ ಪ್ರಹಸನ, ಧೂರ್ತ ವಿಡಂಬನ, ಧೂರ್ತ ಸಮಾಗಮ, ನಾಟವಾಟ ಪ್ರಹಸನ, ಪಲಾಂಡು ಮಂಡನ, ಭಗವದಜ್ಜುಕ, ಭಾನು ಪ್ರಬಂಧ, ಮುಂಡಿತ ಪ್ರಹಸನ, ಲಂಬೋದರ ಪ್ರಹಸನ (ಪ್ರಹಸನ ನಾಟಕ?), ವಿನೋದರಂಗ ಪ್ರಹಸನ, ಸಾಂದ್ರ ಕುತೂಹಲ, ಸುಭಗಾನಂದ, ಸೋಮವಲ್ಲೀ ಯೋಗಾನಂದ ಪ್ರಹಸನ, ಹಾಸ್ಯ ಚೂಡಾಮಣಿ, ಹಾಸ್ಯಾರ್ಣವ, ಹೃದಯ ಗೋವಿಂದ — ಇವು ಈಗ ನಮಗೆ ತಿಳಿದುಬಂದಿರುವ ಕೆಲವು ಇತರ ಪ್ರಹಸನಗಳು.