“ಭಾಣ” ವೆಂದರೆ ಮಾತು; ಅದರಂತೆ ಈ ರೂಪಕ ಜಾತಿಯಲ್ಲಿ ಬರುವುದೆಲ್ಲಾ ಮಾತು; ಒಬ್ಬನ ಮಾತು; ನಾಟಕಾದಿಗಳಲ್ಲಿರುವ ಅಭಿನಯವಾಗಲಿ ವಸ್ತುವಾಗಲಿ ಕಥಾಸಂವಿಧಾನವಾಗಲಿ ಇಲ್ಲ; ಮಾತಿಗೆ ಪ್ರಾಧಾನ್ಯವಿರುವುದರಿಂದಲೇ ವರ್ಣನೆ ಹೆಚ್ಚು.
ಇದು ಭರತನಿಂದ ಉಕ್ತವಾದ ‘ದಶರೂಪಕ’ ಗಳಲ್ಲಿ ಒಂದಾಗಿರುವುದರಿಂದ ಬಹಳ ಹಿಂದಿನಿಂದಲೂ ಪ್ರಚಾರದಲ್ಲಿದ್ದಿರಬೇಕೆಂದು ತೋರುತ್ತದೆ; ಆದರೆ ಈಗ ನಮಗೆ ದೊರೆತಿರುವವೆಲ್ಲಾ ಈಚಿನವು, ಮತ್ತು ಪ್ರಾಯಿಕವಾಗಿ ದಕ್ಷಿಣದೇಶದವು; ಆದ್ದರಿಂದ ದಕ್ಷಿಣ ದೇಶದಲ್ಲಿ ಇವು ವಿಶೇಷ ಪ್ರಿಯವಾಗಿ ಪ್ರಚಾರದಲ್ಲಿದ್ದುವೆಂದು ಊಹಿಸಬಹುದಾಗಿದೆ. ವಾಮನ ಭಟ್ಟಬಾಣನ (ಸುಮಾರು ೧೫೦೦) ‘ಶೃಂಗರಭೂಷಣ’ ವೇ ಪ್ರಾಯಶಃ ಈಗ ದೊರೆತಿರುವ ಭಾಣಗಳಲ್ಲೆಲ್ಲಾ ಹಳೆಯದು.
ಎಲ್ಲಾ ಭಾಣಗಳ ಸ್ವರೂಪವೂ ವಸ್ತುವೂ ಸ್ವಲ್ಪ ಹೆಚ್ಚು ಕಡಮೆ ಒಂದೇಯೆ; ಅದರ ಸ್ಥಾನ ಸೂಳೆಗೇರಿ; ನಾಯಕ ವಿಟಶೇಖರ; ಅವನು ಅಲ್ಲಿ ಕಂಡಿದ್ದನ್ನೆಲ್ಲಾ ಆಕಾಶ ಭಾಷಿತಗಳಿಂದ ವರ್ಣಿಸುತ್ತಾನೆ; ಕಂಡಕಂಡವರನ್ನೆಲ್ಲಾ ಬೀದಿಗೆ ಎಳೆಯುತ್ತಾನೆ; ಇದರಲ್ಲಿ ಬರುವ ಶೃಂಗಾರ ಹಾಸ್ಯಗಳು ಬಲು ಕೀಳುತರದವು; ಅನೇಕ ವೇಳೆ ಅವುಗಳನ್ನು ಓದುವುದಕ್ಕೂ ಸಂಕೋಚವಾಗುತ್ತದೆ; ಈಚಿನ ಕಾಲದ ನಾಟಕಗಳಲ್ಲಿ ಬರುವ ದೋಷಗಳೆಲ್ಲಾ ಇವುಗಳಲ್ಲಿಯೂ ಕಂಡುಬರುತ್ತವೆ; ಪಾಂಡಿತ್ಯ ಹೆಚ್ಚು; ಸರಳತೆ ಕಡಮೆ. ಕಾಶೀಪತಿ ಕವಿರಾಜನು (೧೩ನೆಯ ಶತಮಾನ?) ತನ್ನ ‘ಮುಕುಂದಾನಂದಭಾಣ’ ದಲ್ಲಿ ಬರುವ ಭುಜಂಗ ಶೇಖರನ ಮಾತಿಗೆ ಶ್ಲೇಷಾರ್ಥದಿಂದ ‘ಕೃಷ್ಣಗೋಪೀ ವಿಲಾಸ’ ಪರವಾಗಿಯೂ ಅರ್ಥಮಾಡುವ ಹಾಗೆ ಬರೆದಿದ್ದಾನೆ! ಹೀಗೆ ಅರ್ಥಾಂತರವಿರುವುದರಿಂದ ಅದನ್ನು ‘ಮಿಶ್ರಭಾಣ’ ವೆಂದು ಕರೆದ ಹಾಗೆ ಕಾಣುತ್ತದೆ.
ಅನಂಗ ಜೀವನ,* ಅನಂಗ ಬ್ರಹ್ಮವಿದ್ಯಾ ವಿಲಾಸ, ಅನಂಗ ವಿಜಯ, ಅನಂಗ ಸರ್ವಸ್ವ, ಆನಂದತಿಲಕ, ಕಂದರ್ಪದರ್ಪ (೨), ಕಂದರ್ಪ ವಿಜಯ, ಕರ್ಪೂರ ಚರಿತ, ಕಾಮ ವಿಲಾಸ, ಕುಸುಮಬಾಣ ವಿಲಾಸ, ಕೇರಳಾಭರಣ, ಗೋಪಾಲ ಲೀಲಾರ್ಣವ, ಚಂದ್ರರೇಖಾ ವಿಲಾಸ, ಚೋಳಭಾಣ, ಪಂಚಬಾಣ ವಿಜಯ, ಪಂಚಬಾಣ ವಿಲಾಸ, ಪಂಚಾಯುಧ ಪ್ರಪಂಚ, ಮದನ ಗೋಪಾಲ ವಿಲಾಸ, ಮದನ ಭೂಷಣ, ಮದನ ಮಹೋತ್ಸವ, ಮದನ ಸಂಜೀವನ, ಮಾಲಮಂಗಲ, ಮುಕುಂದಾನಂದ, ರಸವಿಲಾಸ, ರಸಸದನ, ರಸಿಕರಂಜನ, ರಸಿಕಜನ ರಸೋಲ್ಲಾಸ, ರಸಿಕಾಮೃತ, ರಸೋಲ್ಲಾಸ, ಲೀಲಾ ಮಧುಕರ, ವಸಂತ ತಿಲಕ (ಅಮ್ಮಾಭಾಣ), ಶಾರದಾ ತಿಲಕ, ಶಾರದಾ ನಂದನ, ಶೃಂಗಾರ ಕೋಶ (೨), ಶೃಂಗಾರ ಚಂದ್ರಿಕಾ, ಶೃಂಗಾರ ಜೀವನ, ಶೃಂಗಾರ ತರಂಗಿಣೀ (೨), ಶೃಂಗಾರ ತಿಲಕ (ಅಯ್ಯಾಭಾಣ), ಶೃಂಗಾರ ದೀಪಕ, ಶೃಂಗಾರ ಪಾವನ, ಶೃಂಗಾರ ಭೂಷಣ, ಶೃಂಗಾರ ಮಂಜರೀ (ಶ್ರೀರಂಗರಾಜಭಾಣ), ಶೃಂಗಾರ ರಸೋದಯ, ಶೃಂಗಾರ ರಾಜತಿಲಕ, ಶೃಂಗಾರ ಶೃಂಗಾಟಕ, ಶೃಂಗಾರ ಸರ್ವಸ್ವ (೨), ಶೃಂಗಾರ ಸ್ತಬಕ, ಶೃಂಗಾರ ಸುಧಾಕರ, ಶೃಂಗಾರ ಸುಧಾರ್ಣವ, ಸಂಪತ್ಕುಮಾರ ವಿಲಾಸ (ಮಾಧವ ಭೂಷಣಭಾಣ), ಸರಸಕವಿ ಕುಲಾನಂದನ, ಹರಿವಿಲಾಸಭಾಣ — ಇವು ಇತರ ಭಾಣಗಳು.