‘ಪ್ರಕರಣ’ ಗಳು ತೀರ ಕಡಿಮೆ; ಇರುವ ಒಂದೆರಡು ‘ಮಾಲತೀ ಮಾಧವ’ ದ ಅನುಕರಣಗಳು. ಇದಕ್ಕೆ ಉದ್ದಂಡಿಯ (ಅಥವಾ ಉದ್ದಂಡನಾಥನ) ‘ಮಲ್ಲಿಕಾ ಮಾರುತ’ ವು (೧೭ನೆಯ ಶತಮಾನ) ಒಳ್ಳೆಯ ಉದಾಹರಣೆ. ಇದರಲ್ಲಿ ಮಲ್ಲಿಕೆಯೆಂಬ ವಿದ್ಯಾಧರ ಮಂತ್ರಿಪುತ್ರಿಯು ಮಂದಾಕಿನಿಯೆಂಬ ಐಂದ್ರಜಾಲಿಕಳ ಸಹಾಯದಿಂದ ಕುಂತಲ ರಾಜಪುತ್ರನಾದ ಮಾರುತನನ್ನು ಮದುವೆಯಾಗುತ್ತಾಳೆ. ರಾಮಚಂದ್ರನು (೧೨ನೆಯ ಶತಮಾನ) ‘ಕೌಮುದೀ ಮಿತ್ರಾನಂದನ’ ವನ್ನು ಬರೆದಿದ್ದಾನೆ. ಇದರಲ್ಲಿ ಮಿತ್ರಾನಂದನೆಂಬ ವರ್ತಕ ಪುತ್ರನು ಕೌಮುದಿಯನ್ನು ಮದುವೆಯಾಗುತ್ತಾನೆ. ನಾಟಕದ ತುಂಬ ಸಿದ್ಧರು ವಿದ್ಯಾಧರರು ರಾಕ್ಷಸರು ಕಾಪಾಲಿಕರು ಮುಂತಾದವರ ಮಾಯೆಯೂ ರಾಜ ಮಂತ್ರಿ ಮುಂತಾದವರ ಮೋಹ ಮಾತ್ಸರ್ಯಗಳೂ ಬರುತ್ತವೆ. ಇವಕ್ಕೆ ನಾಯಕ ನಾಯಿಕೆಯರು ಸಿಕ್ಕಿ ಪಾರಾಗಿ ಕೊನೆಗೆ ಸುಖವಾಗಿರುತ್ತಾರೆ. ರಾಮಭದ್ರನ (೧೨ನೆಯ ಶತಮಾನ) ‘ಪ್ರಬುದ್ಧ ರೌಹಿಣೇಯ’ ದಲ್ಲಿ ಆರೇ ಅಂಕಗಳಿವೆ. ಅದರಲ್ಲಿ ರೌಹಿಣೇಯನೆಂಬ ಕಳ್ಳನು ಮದನವತಿ ಎಂಬ ಹೆಂಗಸನ್ನೂ ಮನೋರಥನೆಂಬ ಹುಡುಗನನ್ನೂ ಕದ್ದುಕೊಂಡು ಹೋಗುವನು. ಅವನು ಅಧಿಕಾರಿಗಳ ಕೈಗೆ ಸಿಕ್ಕಿ ಶಿಕ್ಷೆಯಾಗಬೇಕಾದಾಗ ವೇರ್ಧಮಾನಸ್ವಾಮಿ ಉಪದೇಶ ಮಾಡಿದ ಒಂದು ಶ್ಲೋಕ ಜ್ಞಾಪಕಕ್ಕೆ ಬಂದು ಪಶ್ಚಾತ್ತಾಪಪಟ್ಟು ತಾನು ಕದ್ದು ಇಟ್ಟಿದ್ದ ಹಣ ಹುಡುಗ ಹುಡುಗಿಯರನ್ನು ರಾಜನಿಗೆ ಒಪ್ಪಿಸುವನು. ಯಶಶ್ಚಂದ್ರನ (೧೨ನೆಯ ಶತಮಾನ) ‘ಮುದ್ರಿತ ಕುಮುದಚಂದ್ರ’ ವು ೧೧೨೪ರಲ್ಲಿ ಶ್ವೇತಾಂಬರ ದೇವಸೂರಿಗೂ ದಿಗಂಬರ ಕುಮುದಚಂದ್ರನಿಗೂ ವಾದ ನಡೆದು ಕುಮುದಚಂದ್ರನು ಸೋತದ್ದನ್ನು ಪ್ರತಿಪಾದಿಸುತ್ತದೆ. ಏನು ಕಾರಣವೋ ‘ಮೃಚ್ಛಕಟಿಕ’ ದ ಅನುಕರಣ ಕೂಡ ಮತ್ತೊಂದು ಹುಟ್ಟಲಿಲ್ಲ.
ಅತಂದ್ರಚಂದ್ರಿಕಾ, ಕೌಮುದೀ ಸುಧಾಕರ ಪ್ರಕರಣ, ತರಂಗದತ್ತ, ಪುಷ್ಪದೂಷಿತಕ (—ಭೂಷಿತ), ವಕ್ರತುಂಡ ಗಣನಾಯಕ, ಎಂಬಿವು ನಮಗೆ ತಿಳಿದು ಬಂದಿರುವ ಇತರ ಪ್ರಕರಣಗಳು. ಈಗ ಹೆಸರು ಮಾತ್ರ ಗೊತ್ತಿರುವ ನಾಟಕಗಳಲ್ಲಿ ಮತ್ತೆ ಕೆಲವು ‘ಪ್ರಕರಣಗಳು’ ಇದ್ದರೂ ಇದ್ದಿರಬಹುದು.