ಬರುಬರುತ್ತ ನಾಟಕದ ಉದ್ದೇಶವೇ ಮರೆತುಹೋದಂತೆ ತೋರುತ್ತದೆ; ಆದ್ದರಿಂದ ಕೆಲವು ನಾಟಕಗಳು ಯಾವ ವಿಧವಾದ ಕಥೆಯನ್ನೂ ಅಪೇಕ್ಷಿಸದೆ ವೈದ್ಯ ವ್ಯಾಕರಣಾದಿ ಶಾಸ್ತ್ರವಿಷಯವನ್ನು ಪ್ರತಿಪಾದಿಸಿವೆ. ಹೀಗೆ ‘ಜೀವಾನಂದನ’ ವೆಂಬುದರಲ್ಲಿ (೧೭ನೆಯ ಶತಮಾನ) ಜೀವನಿಗೂ ಕ್ಷಯ ರೋಗಕ್ಕೂ ಹೋರಾಟವಾಗುತ್ತದೆ. ಜೀವನ ಕಡೆ ಜ್ಞಾನವಿಜ್ಞಾನಾದಿಗಳೂ ಕ್ಷಯದ ಕಡೆ ಜ್ವರ ಉಬ್ಬಸ ಅತಿಸಾರ ಮುಂತಾದವೂ ಹೋರುತ್ತವೆ. ಕೊನೆಗೆ ಜೀವನು ನಿರೋಗಿಯೂ ನಿತ್ಯಮುಕ್ತನೂ ಆಗುತ್ತಾನೆ. ಇದರಲ್ಲಿ ನಾಟ್ಯರಸವಿಲ್ಲ, ಕವಿತ್ವ ಚಮತ್ಕಾರವಿಲ್ಲ; ಆದರೆ ಚಿಕಿತ್ಸಾ ಶಾಸ್ತ್ರ ಬಲ್ಲವರಿಗೆ ಸ್ವಲ್ಪ ಉಪಯೋಗವಾಗಬಹುದು. ಹೀಗೆಯೇ ‘ಅಂತರ್ವ್ಯಾಕರಣ ನಾಟ್ಯ ಪರಿಶಿಷ್ಟ’ ವೆಂಬುದು ಒಂದು ಪದ್ಯಭೂಯಿಷ್ಠವಾದ ನಾಟಕ. ಇದರಲ್ಲಿ ಶ್ಲೇಷಾರ್ಥ ಬೇರೆ. ಅದರ ಪದ್ಯಗಳು ಒಂದು ಕಡೆ ವ್ಯಾಕರಣ ಸೂತ್ರಗಳ ಪರವಾಗಿಯೂ ಇನ್ನೊಂದು ಕಡೆ ಧಾರ್ಮಿಕ ಮತ್ತು ದಾರ್ಶನಿಕ ತತ್ತ್ವಗಳ ಪರವಾಗಿಯೂ ಅರ್ಥ ಕೊಡುತ್ತವೆ. ‘ವಾಸಂತಿಕಾ ಸ್ವಪ್ನ’ ವೆಂಬುದು ೧೮೯೨ರಲ್ಲಿ ಮಾಡಿದ ‘ಮಿಡ್ಸಮರ್ ನೈಟ್ಸ್ ಡ್ರೀಮ್’ ಎಂಬ ಷೇಕ್ಸ್ಪಿಯರ್ ನಾಟಕದ ಅನುವಾದ. ಕಿಂಪಂಚ ಚರಿತ, ನಗ್ನಭೂಪತಿ ಗ್ರಹ, ವೃತ್ತಿವಲ್ಲಭ, ಶಾರ್ಙ್ಗಧರೀಯ ಎಂಬಿವು ಈ ಗುಂಪಿಗೆ ಸೇರುವ ಇತರ ನಾಟಕಗಳು.