ನಾಟ್ಯಶಾಸ್ತ್ರ ಮುಂತಾದ ಪ್ರಾಚೀನ ಲಕ್ಷಣ ಗ್ರಂಥಗಳಲ್ಲಿ “ಛಾಯಾ ನಾಟಕ” ಗಳ ಹೆಸರಾಗಲಿ ಸ್ವರೂಪವಿವರಣೆಯಾಗಲಿ ಇಲ್ಲ. ಆದ್ದರಿಂದ ಈ ಮಾತಿಗೆ ಅರ್ಥವನ್ನು ಒಬ್ಬೊಬ್ಬರು ಒಂದೊಂದು ವಿಧವಾಗಿ ಊಹಿಸುತ್ತಾರೆ. ಪರದೆಯ ಮೇಲೆ ಬೊಂಬೆಗಳ ನೆರಳನ್ನು ಬೀಳಿಸಿ ಮಾತಿಲ್ಲದ ಚಲನಚಿತ್ರದಂತೆ ಕಥೆ ತೋರಿಸುವಾಗಲೋ, ಸೂತ್ರದ ಬೊಂಬೆಯಾಟ ಅಥವಾ ‘ಕಥಕಳಿ’ ಯಂಥ ಮೂಕನಾಟ್ಯವನ್ನು ಪ್ರದಶಿಸುವಾಗಲೋ, ಆಟದ ಜೊತೆಗೆ ಭಾಗವತರು ಕಥೆ ಹೇಳುವುದಕ್ಕೆ ಇದನ್ನು ಉಪಯೋಗಿಸಿಕೊಳ್ಳುತ್ತಿದ್ದರೇ ಹೊರತು, ಇದು ನಿಜವಾದ ನಾಟಕವಲ್ಲ; ನಟರು ಇದನ್ನು ಅಭಿನಯಿಸಿ ಪ್ರಯೋಗಿಸುತ್ತಿರಲಿಲ್ಲ; ಹೀಗೆ ಇದರಲ್ಲಿ ನಾಟಕದ ತಿರುಳಿಲ್ಲ, ನೆರಳು ಮಾತ್ರ; ಆದ್ದರಿಂದ ಇದಕ್ಕೆ “ಛಾಯಾನಾಟಕ” ವೆಂದು ಹೆಸರು ಬಂದಿದೆಯೆಂದು ಹೇಳುತ್ತಾರೆ. ತಾಳ—ಮದ್ದಲೆ ಯಕ್ಷಗಾನಗಳಲ್ಲಿ ಭಾಗವತನು ಕಥೆಯ ‘ಛಾಯೆ’ ಎಂದರೆ ಹೆಗ್ಗುರುತಗಳಾಗಿ ಹಿಡಿದು ಇದರ ಶ್ಲೋಕಗಳನ್ನು ಉಪಯೋಗಿಸಿಕೊಂಡು ಸ್ವಪ್ರತಿಭೆ ಕಲ್ಪನೆಗಳಿಂದ ಪುಷ್ಟಿಗೊಳಿಸಿ ‘ಪ್ರಸಂಗ’ ನಡೆಸುತ್ತಿದ್ದರೂ ಇರಬಹುದು. ಆದರೆ ಇದೆಲ್ಲಾ ಬರಿಯ ಊಹೆ. ಈ ಜಾತಿ ಯಾವ ಕಾಲದಲ್ಲಿ ಹುಟ್ಟಿ ಬಂತೋ ಗೊತ್ತಿಲ್ಲ. ಈಗ ಇರುವುವೊಂದೂ ಪ್ರಾಚೀನವಲ್ಲ; ಇರುವ ಮಾದರಿಗಳೂ ಕೆಲವು ಮಾತ್ರ; ಅವುಗಳಲ್ಲಿ ಯಾವುವನ್ನಾದರೂ ಹೀಗೆ ಉಪಯೋಗಿಸುತ್ತಿದ್ದರೋ ಇಲ್ಲವೋ ಅದೂ ಗೊತ್ತಾಗುವುದಿಲ್ಲ. ಮೇಲೆ ಕೊಟ್ಟಿರುವ ‘ಮಹಾನಾಟಕ’ ದ ಮಾದರಿಯಿಂದ ಈ ಜಾತಿಯ ಕಾವ್ಯದ ಸ್ವರೂಪವನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದಾಗಿದೆ. ಇದು ಏನೇ ಆಗಲಿ, ಕೆಲವು ನಾಟಕಗಳು ಆಯಾ ಗ್ರಂಥಕರ್ತರಿಂದಲೇ “ಛಾಯಾ ನಾಟಕ” ಗಳೆಂದು ಉಕ್ತವಾಗಿವೆ. ಅವನ್ನು ಮಾತ್ರ ಇಲ್ಲಿ ಕೊಟ್ಟಿದೆ. ಇವುಗಳಲ್ಲಿ “ದೂತಾಂಗದ” ವು ಪ್ರಸಿದ್ಧವಾದದ್ದು—
ಆನಂದತಿಲಕಾ, ಚಿತ್ರಯಜ್ಞ, ‘ಛಾಯಾನಾಟಕ’, ದೂತಾಂಗದ, ಧರ್ಮಾಭ್ಯುದಯ, ಪಾಂಡವಾಭ್ಯುದಯ, ರಾಮಾಭ್ಯುದಯ, ಸಾವಿತ್ರೀ ಚರಿತ, ಸುಭದ್ರಾ ಪರಿಣಯ, ಹರಿದೂತ.