‘ಚಂದ್ರಾಲೋಕ’ ಕರ್ತನಾದ ಜಯದೇವನು (ಸುಮಾರು ಕ್ರಿ.ಶ. ೧೨೦೦) “ಪ್ರಸನ್ನರಾಘವ” ವನ್ನು ಬರೆದಿದ್ದಾನೆ. ಇದರ ಏಳು ಅಂಕಗಳಲ್ಲಿ ಸೀತಾಸ್ವಯಂವರದಿಂದ ಹಿಡಿದು ರಾಮನು ಅಯೋಧ್ಯೆಗೆ ಹಿಂದಿರುಗುವವರೆಗಿನ ರಾಮಾಯಣ ಕಥೆ ಪ್ರತಿಪಾದಿತವಾಗಿದೆ. ಇದರ ಸಂವಿಧಾನದಲ್ಲಿ ಮಾಲ್ಯವಂತ ಶೂರ್ಪಣಖಿಯರ ತಂತ್ರವಿಲ್ಲ; ಆದರೆ ಮತ್ತೆ ಕೆಲವು ಚಮತ್ಕಾರಗಳಿವೆ—ಹರಧನುಸ್ಸನ್ನು ಎತ್ತುವಾಗ ರಾವಣಾಸುರನೊಡನೆ ಬಾಣಾಸುರನೂ ಬಂದು ಸೋಲುತ್ತಾನೆ. ಸೀತಾರಾಮರು ಸ್ವಯಂವರಕ್ಕೆ ಮೊದಲೇ ಒಬ್ಬರೊಬ್ಬರನ್ನು ಮಿಥಿಲಾಪುರದ ಉದ್ಯಾನದಲ್ಲಿ ನೋಡಿ ಮೆಚ್ಚಿಕೊಂಡಿರುತ್ತಾರೆ. ರಾಮನು ಲಂಕೆಯಲ್ಲಿ ನಡೆಯುವ ಕಾರ್ಯಕಲಾಪಗಳನ್ನು ವಿದ್ಯಾಧರ ಇಂದ್ರಜಾಲದ ಸಹಾಯದಿಂದ ನೋಡುತ್ತಾನೆ. ರಾಮನ ವನವಾಸ, ಯುದ್ಧ, ಚಂದ್ರೋದಯ, ಅಯೋಧ್ಯೆಯ ದಾರಿ ಇವುಗಳ ದೀರ್ಘ ವರ್ಣನೆಯಿದೆ. ನಾಟಕದಲ್ಲಿ ಒಟ್ಟು ೩೯೩ ಪದ್ಯಗಳಿವೆ.
ಮಾತುಕಥೆಯಲ್ಲಿ ತೋರಿಸಿರುವ ಸಣ್ಣ ದೊಡ್ಡ ಚಮತ್ಕಾರಗಳೇ ಈ ನಾಟಕದಲ್ಲಿರುವ ಅತಿಶಯ. ನಾಟಕದ ಹೆಸರನ್ನು ಹೇಳಿರುವುದರಲ್ಲಿಯೂ ಇದನ್ನು ನೋಡಬಹುದು—
ಪ್ರತ್ಯಂಕಮಂಕುರಿತ ಸರ್ವರಸಾವತಾರ
ನ್ನವ್ಯೋಲ್ಲಸತ್ಕುಸುಮ ರಾಜಿವಿರಾಜಿಬಂಧಂ ।
ಘರ್ಮೇತರಾಂಕುರಿವ ವಕ್ರತಯಾತಿರಮ್ಯಂ
ನಾಟ್ಯ ಪ್ರಬಂಧಮತಿ ಮಂಜಲಸಂವಿಧಾನಂ ॥ (I, ೭)
ಈ ಶ್ಲೋಕದಲ್ಲಿರುವ ದಪ್ಪ ಅಕ್ಷರಗಳನ್ನು ಜೋಡಿಸಿದರೆ ನಾಟಕದ ಹೆಸರು ಬರುತ್ತದೆ. ನಾಟಕದಲ್ಲಿ ತೋರಬೇಕಾದ ಕಲಾಕೌಶಲ್ಯ ಇಲ್ಲಿಗಿಳಿಯಿತು ಇದ್ದಿದ್ದರಲ್ಲಿ ನಾಲ್ಕನೆಯ ಅಂಕ ಉತ್ತಮ; ಅದು ಪರಶುರಾಮ ಪಾತ್ರದಿಂದಲೂ ಕವಿ ತೋರಿಸಿರುವ “ವಾಕ್ಪರಿಪಾಟೀ ಪಾಟವ” ದಿಂದಲೂ ಸ್ಲಲ್ಪ ಸ್ವಾರಸ್ಯವಾಗಿದೆ.
ಜಾನಕೀ ಪರಿಣಯ
ಸುಮಾರು ಹದಿನೇಳನೆಯ ಶತಮಾನದ ಕೊನೆಯಲ್ಲಿದ್ದ ರಾಮಭದ್ರ ದೀಕ್ಷಿತನು ಏಳು ಅಂಕದ ಒಂದು “ಜಾನಕೀಪರಿಣಯ ನಾಟಕ”* ವನ್ನು ಬರೆದಿದ್ದಾನೆ. ಹೆಸರು “ಜಾನಕೀಪರಿಣಯ” ವೆಂದಿದ್ದರೂ ಇದರಲ್ಲಿ ರಾಮನು ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾಗುವವರೆಗಿನ ಕಥೆ ಎಲ್ಲವೂ ಇದೆ. ಇದರಲ್ಲಿ ಕವಿ ತನ್ನ ಹಿಂದಿದ್ದ ರಾಮಾಯಣ ನಾಟಕಕರ್ತರು ತೋರಿಸಿರುವ ಸಂವಿಧಾನ “ಚಮತ್ಕಾರ” ಗಳೆಲ್ಲವನ್ನೂ ತೋರಿಸಿ ಅವರನ್ನು ಮೀರಿಸಬೇಕೆಂದು ಸಂಕಲ್ಪಿಸಿದಂತಿದೆ—
ವಿದ್ಯುಜ್ಜಿಹ್ವ ರಾವಣ ಸಾರಣರು ಕ್ರಮವಾಗಿ ವಿಶ್ವಾಮಿತ್ರ ರಾಮ ಲಕ್ಷ್ಮಣರ ರೂಪನ್ನು ತಳೆದು ಜನಕನಿಗೆ ಮೋಸ ಮಾಡಿ ಸೀತೆಯನ್ನು ಪಡೆದುಕೊಂಡು ಹೋಗಬೇಕೆಂದು ಮಿಥಿಲೆಗೆ ಬರುತ್ತಾರೆ. ಅತ್ತ ಮಾರೀಚ ಕರಾಳರು ಕಾಶ್ಯಪ ಪಿಂಗಳರ ವೇಷ ಧರಿಸಿ ರಾಮನಿಗೆ ಮಾಯಾಸೀತೆಯನ್ನು ತೋರಿಸಿ ಅವಳು ರಾಮನ ವಿರಹದಿಂದ ಅಗ್ನಿಪ್ರವೇಶ ಮಾಡಲು ರಾಮನೂ ಅವಳ ಹಿಂದೆ ಬೆಂಕಿಗೆ ಬೀಳುವಂತೆ ಪ್ರೇರಿಸುವರು. ಅವನೂ ಬೀಳಬೇಕೆಂದು ಪಕ್ಕದಲ್ಲಿದ್ದ ಒಂದು ಬಂಡೆಯ ಮೇಲೆ ಹತ್ತಲು ಅದು ಅಹಲ್ಯೆಯಾಗುವುದು; ರಾವಣನ ಮೋಸ ನಡೆಯುವುದಕ್ಕೆ ಅಡ್ಡಿಯಾಗಿ ಒಬ್ಬ ಗಂಧರ್ವನು ಅವರ ಮಾಯೆಯನ್ನು ತಿಳಿಸುವನು. ಈ ಮಧ್ಯೆ ರಾಮಾದಿಗಳು ಬಂದು, ಧನುರ್ಭಂಗಪೂರ್ವಕವಾಗಿ ವಿವಾಹ ನಡೆದುಹೋಗುವುದು. ರಾವಣನು ನೆವದಿಂದ ನುಸುಳಿ ಅದೃಶ್ಯನಾಗಿ ನೋಡುತ್ತಿದ್ದು ಕೊನೆಗೆ ಸೀತೆಯನ್ನು “ಬಲ” ದಿಂದ ಹಿಡಿದುಕೊಂಡು ಹೋಗಬೇಕೆಂದು ನಿಶ್ಚಯಿಸಿ ಹಿಂತಿರುಗುವನು.
ರಾಮನನ್ನು ಪರಶುರಾಮನಿಂದ ಕೊಲ್ಲಿಸುವ ಪ್ರಯತ್ನವು ವ್ಯರ್ಥವಾಗುವುದು. ವಿದ್ಯುಜ್ಜಿಹ್ವಾದಿಗಳು ಮಂಧರೆ ಕೈಕೇಯೀ ದಶರಥರಲ್ಲಿ ಆವಿಷ್ಟರಾಗಿ ರಾಮನನ್ನು ಕಾಡಿಗೆ ಕಳುಹಿಸುವರು. ಅಲ್ಲಿ ವಿರಾಧ ಶೂರ್ಪಣಖಿಯರು ರಾಮಸೀತೆಯರ ವೇಷವನ್ನು ಹಾಕಿಕೊಂಡು ಸೀತಾರಾಮರನ್ನು ಹೊತ್ತುಕೊಂಡು ಹೋಗಲು ಬಂದು ಭ್ರಾಂತಿಪಟ್ಟು ವಿರಾಧನು ಶೂರ್ಪಣಖಿಯನ್ನೇ (ಸೀತೆಯೆಂದು) ಹೊತ್ತುಕೊಂಡು ಹೋಗುವನು. ಜಟಾಯುವನ್ನು ಕಂಡು ಇಬ್ಬರೂ ನೆಲದ ಮೇಲೆ ಬೀಳಲು, ಲಕ್ಷ್ಮಣನು ವಿರಾಧನನ್ನು ಕೊಂದು ಶೂರ್ಪಣಖಿಯ ಕಿವಿಮೂಗು ಕೊಯ್ಯುವನು.
ಸೀತಾಹರಣದಿಂದ ವಾಲಿವಧೆಯವರೆಗಿನ ಕಥೆ ಸೀತಾವಿರಹಿಯಾದ ರಾವಣನ ವಿನೋದಾರ್ಥವಾಗಿ ಅಪ್ಸರ ಸ್ತ್ರೀಯರಿಂದ ಅವನ ಮುಂದೆ “ಅಂತರ್ನಾಟಕ” ವಾಗಿ ಅಭಿನಯಿಸಲ್ಪಡುವುದು. ವಿಶ್ವಾಮಿತ್ರನು ಕೊಟ್ಟಿದ್ದ ‘ರಾಕ್ಷಸಾಂಧಂಕರಣ’ ಕಡಗವನ್ನು ತೊಟ್ಟು ಅದೃಶ್ಯಳಾಗಿ ಸೀತೆಯೂ ಈ ನಾಟಕವನ್ನು ನೋಡಿ ಗಂಡನ ವೃತ್ತಾಂತವನ್ನು ತಿಳಿಯುವಳು. (ರಾಮನು ಸೀತೆಯನ್ನು ಹುಡುಕಿಕೊಂಡು ಪುರೂರವಸ್ಸಿನ ಹಾಗೆ ಅಲೆಯುತ್ತ ಕಂಡ ಕಂಡ ಗಿರಿ ನದಿ ಗಿಡ ಪಕ್ಷಿಗಳನ್ನು ಕೇಳುವನು. ಅವಳ ಆನೆ ಮರಿಕೇಳೀಮಯೂರಾದಿಗಳ ವಿಚಾರವೂ ಬರುವುದು.) ರಾವಣಾದಿ ವಧೆಯಾದ ಮೇಲೆ ಶೂರ್ಪಣಖಿ ತಾಪಸೀ ವೇಷದಿಂದ ಅಯೋಧ್ಯೆಗೆ ಬಂದು ರಾಮಲಕ್ಷ್ಮಣರು ಹತರಾದರೆಂದೂ ಸೀತೆ ನೇಣುಹಾಕಿಕೊಂಡಳೆಂದೂ ಭರತಶತ್ರುಘ್ನರಿಗೆ ತಿಳಿಸಿ ಅವರನ್ನು ಅಗ್ನಿಪ್ರವೇಶಮಾಡಿಸುತ್ತಿರಲು ಆಂಜನೇಯನು ಮುಂದೆ ಬಂದು ರಾಮಲಕ್ಷ್ಮಣರ ಯೋಗಕ್ಷೇಮವನ್ನು ತಿಳಿಸುವನು. ಸ್ವಲ್ಪ ಹೊತ್ತಿನಲ್ಲಿ ರಾಮಾದಿಗಳು ಬಂದು ಪಟ್ಟಾಭಿಷೇಕವಾಗುವುದು.
ಈ ‘ಚಮತ್ಕಾರ’ ಗಳನ್ನು ತಂದು ತುಂಬುವ ಆಸಕ್ತಿಯಲ್ಲಿ ಕವಿಗೆ ಕಥೆ ಅಸಂಭವವಾದೀತೆಂಬ ಯೋಚನೆಯಾಗಲಿ ಪಾತ್ರಗಳಲ್ಲಿ ಕುಂದು ಬಂದೀತೆಂಬ ಯೋಚನೆಯಾಗಲಿ ಉಳಿದಂತೆ ಕಾಣುವುದಿಲ್ಲ. ಆದರೆ ಮಿಕ್ಕ ರಾಮಾಯಣ ನಾಟಕಗಳಲ್ಲಿಲ್ಲದ ಒಂದೆರಡು ಗುಣಗಳು ಇದರಲ್ಲಿವೆ — ಅದೇಕೋ ಈ ಕವಿ ಪರಶುರಾಮ ವಾಲಿ ರಾವಣ ಮುಂತಾದವರೊಡನೆ ಆಗುವ ಯುದ್ಧವನ್ನೂ ಅಯೋಧ್ಯಾಮಾರ್ಗವನ್ನೂ ಅಸಂಖ್ಯಾತಪದ್ಯಗಳಿಂದ ವರ್ಣಿಸಿಲ್ಲ! ಇರುವ ಪದ್ಯಗಳು ಸ್ವಲ್ಪ ಹೆಚ್ಚಾಗಿಯೇ ಇದ್ದರೂ ಅವು ಸಾಧಾರಣವಾಗಿ ಸಣ್ಣ ವೃತ್ತಗಳು. ಭಾಷೆ ಸುಗಮವಾಗಿದೆ. ಮಾತು ಉದ್ದವಿಲ್ಲ. ಒಟ್ಟಿನ ಮೇಲೆ ನಾಟಕ ಅಷ್ಟೇನೂ ಸರಸವಲ್ಲದಿದ್ದರೂ ಸರಳವಾಗಿದೆ.