೧೯೨೩ರಲ್ಲಿ ಮದರಾಸಿನ ರಾಮಕೃಷ್ಣ ಕವಿಗಳೂ ರಾಮನಾಥ ಶಾಸ್ತ್ರಿಗಳೂ “ಕುಂದಮಾಲಾ” ಎಂಬ ನಾಟಕವನ್ನು ಸಂಪಾದಿಸಿ ಅದು “ದಿಙ್ನಾಗ” ರಚಿತವೆಂದು ಪ್ರಕಟಿಸಿದರು. ಆಮೇಲೆ ಅವರೇ ಆ ನಾಟಕಕರ್ತನು ದಿಙ್ನಾಗನಿರಲಾರನೆಂದೂ ಅವನು ಧೀರನಾಗನಿರಬಹುದೆಂದೂ ಅಭಿಪ್ರಾಯಪಟ್ಟರು. ೧೯೩೨ರಲ್ಲಿ ಲಾಹೋರಿನ ಜಯಚಂದ್ರ ಶಾಸ್ತ್ರಿಗಳು ಆ ನಾಟಕವನ್ನು ದಿಙ್ನಾಗ ಕರ್ತೃಕವೆಂದು ಪ್ರಕಟಿಸಿದರು. ಕುಂದಮಾಲೆಯ ಎರಡನೆಯ ಪದ್ಯವು ದಿಙ್ನಾಗ ಕರ್ತೃಕವೆಂದು ಸುಭಾಷಿತಾವಳಿಯಲ್ಲಿ ದೊರೆಯುವುದರಿಂದ ಅವನೇ ಕರ್ತೃವೆಂದು ಅವರು ಹೇಳುತ್ತಾರೆ. ಆದರೆ ಕುಂದಮಾಲೆಯ ಯಾವ ಶ್ಲೋಕವೂ “ಸುಭಾಷಿತಾವಳಿ” ಯಲ್ಲಿ (ಬೊಂಬಾಯಿ ೧೮೮೬) ದೊರೆಯುವುದಿಲ್ಲ. ಭಾವಪ್ರಕಾಶನ ಸಾಹಿತ್ಯದರ್ಪಣ ಹನುಮನ್ನಾಟಕಗಳಲ್ಲಿ ಕುಂದಮಾಲೆಯ ಹೆಸರಾಗಲಿ ವಿಷಯವಾಗಲಿ ಪದ್ಯವಾಗಲಿ ದೊರೆತರೂ ಅದು ದಿಙ್ನಾಗಕರ್ತೃಕವೆಂದು ಅವನ ಹೆಸರ ಜೊತೆಯಲ್ಲಿ ಬರುವುದಿಲ್ಲ. ಹಾಗೆ ಕವಿಕೃತಿಗಳ ಹೆಸರು ಒಟ್ಟಿಗೆ ಬಂದಿರುವುದು “ವೀರನಾಗ ನಿಬದ್ಧಾಯಾಂ ಕುಂದಮಾಲಾಯಾಂ ಸೀತಾಯಾಸ್ತದಪತ್ಯಯೋಶ್ಚ ಪಾಲನ ಸಂಯೋಜನಾಭ್ಯಾಂ ಸ್ವಫಲನಿರಪೇಕ್ಷಸ್ಯ ವಾಲ್ಮೀಕೇಃ” ಎಂಬ ನಾಟ್ಯದರ್ಪಣದ ವಾಕ್ಯದಲ್ಲಿ. (ಪುಟ ೪೮ ಗಾ.ಓ.ಸೀ.) ಇದರಿಂದ ಕುಂದಮಾಲೆಯ ಕರ್ತೃ “ವೀರನಾಗ” ನೆಂದು ಸ್ಪಷ್ಟವಾಗಿ ತಿಳಿಯುತ್ತದೆ. ವೀರನಾಗನೆಂಬ ಹೆಸರು ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧವಲ್ಲ; ಆದ್ದರಿಂದ ಅದನ್ನು ಧೀರನಾಗ ದಿಙ್ನಾಗ ಎಂದು ಮುಂತಾಗಿ ಓದಿ ಬರೆದು ತಿಳಿದಿರುವಂತೆ ಕಾಣುತ್ತದೆ. ದಿಙ್ನಾಗನು ಪ್ರಸಿದ್ಧನಾದ ಬೌದ್ಧತಾರ್ಕಿಕ. (ಪುಟ ೧೨೫ನ್ನು ನೋಡಿ.) ಇವನು ನಾಟಕ ಕರ್ತನಾಗಿದ್ದನೆಂದು ಹೇಳಲು ಆಧಾರವಿಲ್ಲ. ಧೀರನಾಗನವೆಂದು ಸುಭಾಷಿತಾವಳಿಯಲ್ಲಿ ಐದು ಶ್ಲೋಕಗಳು ದೊರೆಯುತ್ತವೆ. (ಇವುಗಳಲ್ಲಿ ಯಾವುದೂ ಕುಂದಮಾಲೆಯಲ್ಲಿ ದೊರೆಯುವುದಿಲ್ಲ). ಇಷ್ಟು ಹೊರತು ಅವನ ಕಾವ್ಯ ನಾಟಕಗಳಾವುವೂ ಪ್ರಸಿದ್ಧವಾಗಿಲ್ಲ; ಅವನ ಹೆಸರಿನ ಹಿಂದೆ ‘ಭದಂತ’ ನೆಂಬ ಉಪಾಧಿಯಿರುವುದರಿಂದ ಅವನು ಬೌದ್ಧನಾಗಿರಬಹುದು. ಕುಂದಮಾಲೆಯು ಬೌದ್ಧರಚಿತವಾಗಿ ಕಾಣುವುದಿಲ್ಲ. ಏಕೆಂದರೆ, ಅದರ ಮೊದಲಲ್ಲಿ ಗಣಪತಿಯ ಪ್ರಾರ್ಥನೆಯೂ ಶಿವನ ಸ್ತುತಿಯೂ ಬರುತ್ತವೆ. ನಾಟಕದ ಒಳಗೆ ಎಲ್ಲಿಯೂ ಬೌದ್ಧವೆನ್ನಬಹುದಾದ ಭಾವವೊಂದೂ ಬರುವುದಿಲ್ಲ. ಉದ್ದಕ್ಕೂ ಶ್ರೋತ್ರಿಯ ವಾತಾವರಣವೇ ಇದೆ. ಸುಭಾಷಿತ ಸಂಗ್ರಹಕಾರರು ತಪ್ಪು ಮಾಡುವುದುಂಟು. ಲಕ್ಷಣ ಗ್ರಂಥಕಾರರು ಸಾಧಾರಣವಾಗಿ ತಪ್ಪು ಮಾಡುವುದಿಲ್ಲ. ಆದ್ದರಿಂದ ಸದ್ಯಕ್ಕೆ ನಾಟ್ಯದರ್ಪಣದಲ್ಲಿ ಹೇಳಿರುವಂತೆ ಕುಂದಮಾಲೆಯ ಕರ್ತೃವು ವೀರನಾಗನೆಂದು ಇಟ್ಟುಕೊಳ್ಳಬಹುದು.
ಇವನು ‘ಅರಾರಾಲಪುರ’ ದವನೆಂದು ಈ ನಾಟಕದ ‘ಸ್ಥಾಪನೆ’ ಯಿಂದ ತಿಳಿಯುತ್ತದೆ. ಈ ಊರು ಯಾವುದು ಎಂಬುದು ಗೊತ್ತಿಲ್ಲ.* ಅವನ ಕಾಲವೂ ತಿಳಿಯದು. ಭಾಸ ಕಾಳಿದಾಸರ ಸ್ಪಷ್ಟವಾದ ಅನುಕರಣವಿರುವುದರಿಂದ ಅವರಿಗಿಂತ ಈಚೆ ಇದ್ದವನು ಎಂದು ಹೇಳಬಹುದು. ಆದರೆ ತುಂಬ ಈಚಿನವನಾಗಿರಲಾರನು. ಶೈಲಿಯಲ್ಲಿ ಭಾಸಕಾಳಿದಾಸರ ಸರಳತೆ ಸೌಲಭ್ಯಗಳಿರುವುದರಿಂದಲೂ ಭವಭೂತಿಯ ಪಾಂಡಿತ್ಯ ಪೆಡಸುಗಳಿಲ್ಲದಿರುವುದರಿಂದಲೂ ಭವಭೂತಿಗಿಂತ ಹಿಂದೆ ಎಂದರೆ ಸುಮಾರು ಕ್ರಿ.ಶ. ಆರು ಅಥವಾ ಏಳನೆಯ ಶತಮಾನದಲ್ಲಿ ಇದ್ದಿರಬಹುದು.
ಕಾಲ ನಿಶ್ಚಯವಿಲ್ಲದಿರುವಾಗ ವಸ್ತುಸಾದೃಶ್ಯದಿಂದ ಕವಿಗಳ ಪೌರ್ವಾಪರ್ಯವನ್ನು ನಿರ್ಧರಿಸುವುದು ಕಷ್ಟ; ಆದರೂ ಕುಂದಮಾಲಾಕರ್ತನು ಭಾಸ ಕಾಳಿದಾಸರಿಂದ, ಅದರಲ್ಲಿಯೂ ಶಾಕುಂತಲದಿಂದ, ಉಪಕೃತನಾಗಿರಬಹುದೆಂದು ಬಹುಜನ ಒಪ್ಪಿಯಾರು. ಭವಭೂತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದೀತು. ಕಾಳಿದಾಸನ ನಾಟಕಗಳ ಪ್ರಸಿದ್ಧಿಯಿಂದ ಭಾಸನ ಹೆಸರು ಹಿಂದಕ್ಕೆ ಸರಿದಂತೆ ಭವಭೂತಿಯ ನಾಟಕಗಳ ಪ್ರಸಿದ್ಧಿಯಿಂದ ವೀರನಾಗನ ಹೆಸರೂ ಹಿಂದಕ್ಕೆ ಸರಿದಿರುವುದು ಸಂಭವ.
ಕುಂದಮಾಲೆಯಲ್ಲಿರುವುದು ಉತ್ತರರಾಮಾಯಣದ ಕಥೆ. ಅದರಲ್ಲಿ ಆರು ಅಂಕಗಳಿವೆ. ಇದು ಕಥಾಸಾರಾಂಶ:—
ಗರ್ಭಿಣಿಯಾಗಿದ್ದ ಸೀತೆಯನ್ನು ಲಕ್ಷ್ಮಣನು ರಾಮನ ಆಜ್ಞೆಯಂತೆ ಗಂಗಾತೀರದ ಕಾಡಿನಲ್ಲಿ ಬಿಟ್ಟು ಹಿಂತಿರುಗಿ ಹೋಗುವನು. ಅಂದಿನ ಸಂಜೆಗತ್ತಲಲ್ಲಿ ವಾಲ್ಮೀಕಿಯು ಬಂದು ಅವಳನ್ನು ಗುರುತಿಸಿ ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುವನು. ತನಗೆ ಸುಖಪ್ರಸವವಾದರೆ ಪ್ರತಿ ದಿನವೂ “ಕುಂದಮಾಲೆ” ಯಿಂದ ಪೂಜಿಸುವಂತೆ ಸೀತೆಯು ಗಂಗಾನದಿಗೆ ಹರಸಿಕೊಳ್ಳುವಳು (೧).
ಲವಕುಶರು ಹುಟ್ಟಿ ಬೆಳೆದು ಎಲ್ಲರಿಗೂ ಅಚ್ಚುಮೆಚ್ಚಾಗಿ ರಾಮಾಯಣವನ್ನು ವೀಣೆಯ ಮೇಲೆ ಹಾಡಲು ಕಲಿತಿದ್ದಾರೆ. ಅತ್ತ ರಾಮನು ಅಶ್ವಮೇಧ ಯಜ್ಞವನ್ನು ಕೈಕೊಂಡು ವಾಲ್ಮೀಕಿಯ ಆಶ್ರಮಕ್ಕೆ ದೂರವಲ್ಲದ ನೈಮಿಶಾರಣ್ಯದ ಒಂದು ಪ್ರದೇಶದಲ್ಲಿ ಅದಕ್ಕೆ ಏರ್ಪಡಿಸಿದ್ದಾನೆ (೨).
ರಾಮಲಕ್ಷ್ಮಣರು ಯಜ್ಞ ಸ್ಥಳಕ್ಕೆ ಬರುತ್ತ ದಾರಿಯಲ್ಲಿ ಹೊಳೆಯೊಳಗೆ ತೇಲಿಬರುತ್ತಿರುವ “ಕುಂದಮಾಲೆ” ಯನ್ನು ನೋಡುವರು. ರಾಮನು ಅದರ ರಚನೆಯು ಸೀತೆಯದೇ ಎಂದು ಗುರುತಿಸುವನು. ಮುಂದೆ ಹೋಗುತ್ತ ಆಯಾಸ ಪರಿಹಾರಕ್ಕಾಗಿ ಗಿಡಗಳ ಪೊದೆಯ ಹಿಂದೆ ಕುಳಿತುಕೊಂಡಿರಲು ಹೂ ಕುಯ್ಯುವುದಕ್ಕಾಗಿ ಬಂದಿದ್ದ ಸೀತೆಯು ಅದರ ಮರೆಯಲ್ಲಿ ನಿಂತು ಅವರ ಮಾತುಗಳಿಂದ ರಾಮನ ಸಂತಾಪವನ್ನು ಅರಿಯುವಳು (೩).
ರಾಮನು ತಪೋವನದಲ್ಲಿ ಸಂಚರಿಸುತ್ತ ಹೋಮಧೂಮದಿಂದ ಕಣ್ಣಿಗೆ ಬಾಧೆಯಾಗಲು ಕಣ್ಣು ತೊಳೆದುಕೊಳ್ಳುವುದಕ್ಕೆಂದು ಅಲ್ಲಿದ್ದ ಒಂದು ಕೊಳಕ್ಕೆ ಹೋಗುವನು. ಅಲ್ಲಿ ಓಡಾಡುತ್ತಿದ್ದ ಸೀತೆಯ ಪ್ರತಿಬಿಂಬವು ನೀರಿನಲ್ಲಿ ಕಾಣುವುದು. ಅವಳು ಮಾತ್ರ (ವಾಲ್ಮೀಕಿಯ ಮಹಿಮೆಯಿಂದ) ಕಾಣುವುದಿಲ್ಲ. ಅವಳನ್ನು ಹಿಡಿದುಕೊಳ್ಳುವುದಕ್ಕೆ ಹೋಗಿ ಸಿಕ್ಕದೆ ರಾಮನು ಮೂರ್ಛೆಹೋಗಲು, ಸೀತೆಯು ಅವನನ್ನು ಆಲಿಂಗಿಸಿಕೊಂಡು ಪ್ರಜ್ಞೆ ಬರಿಸುವಳು. ಅವಳು ಹೊದೆದುಕೊಂಡಿದ್ದ ಉತ್ತರೀಯವು ಅವನ ಕೈಗೆ ಸಿಕ್ಕವುದು. ಅದನ್ನು ಹಿಂದೆ ಚಿತ್ರಕೂಟದಲ್ಲಿ ಮಾಯಾವತಿ ಎಂಬ ವನದೇವತೆಯು ಅವಳಿಗೆ ಕೊಟ್ಟಿದ್ದಳು. ಅದನ್ನು ಅವನು ಗುರುತಿಸಿ ಹೊದೆದುಕೊಂಡು, ಯಾರಾದರೂ ಕಂಡಾರೆಂದು ತ್ಯಜಿಸುವನು, ಅದನ್ನು ಸೀತೆ ತೆಗೆದುಕೊಳ್ಳುವಳು. ಇದು ಸಿದ್ಧಾಶ್ರಮದ ವಾಸದಿಂದ ಸೀತೆಗೆ ಉಂಟಾಗಿರುವ ಮಹಿಮೆಯಾಗಿರಬಹುದೆಂದು ಯೋಚಿಸುತ್ತಿರುವಾಗ, ವಿದೂಷಕನು ಬಂದು ಇದೆಲ್ಲವೂ ಊರ್ವಶಿಯ ಮೋಸವೆಂದು ಹೇಳುವನು (೪).
ವಾಲ್ಮೀಕಿಯ ಅಪ್ಪಣೆಯಂತೆ ಲವಕುಶರು ರಾಮನ ಮುಂದೆ ರಾಮಾಯಣವನ್ನು ಗಾನಮಾಡಿ ಅವನ ಭಾವಗಳನ್ನು ಅರಿಯಲು ರಾಮನಿದ್ದ ಆಸ್ಥಾನಮಂಟಪಕ್ಕೆ ಬರುವರು. ರಾಮನು ಅವರನ್ನು ಸಿಂಹಾಸನದಲ್ಲಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡುತ್ತ ಅವರ ಕುಲಗೋತ್ರಾದಿಗಳನ್ನು ಅರಿಯಲು ಪ್ರಯತ್ನಪಡುವನು. ಅವರು ತನ್ನ ಮಕ್ಕಳೆಂದು ಸಂದೇಹಿಸಲು ಪ್ರಬಲವಾದ ಸಂಗತಿಗಳು ಒಂದರಮೇಲೊಂದು ತಿಳಿದುಬಂದರೂ ಅದನ್ನು ನಿರ್ಧರಿಸುವಹಾಗಿರುವುದಿಲ್ಲ (೫).
ರಾಮಲಕ್ಷ್ಮಣರು ಪೌರಜಾನಪದಾದಿಗಳೊಡನೆ ವಾಲ್ಮೀಕಿ ರಚಿತವಾದ ರಾಮಾಯಣಗೀತೆಯನ್ನು ಲವಕುಶರಿಂದಲೂ ಕಣ್ವರಿಂದಲೂ ಕೇಳಿ ಅದರಿಂದ ಸೀತೆಯ ವೃತ್ತಾಂತವನ್ನು ಅರಿಯುವರು, ಲವಕುಶರಿಗೂ ತಮ್ಮ ತಾಯಿ ತಂದೆಯರು ಯಾರೆಂದು ಗೊತ್ತಾಗುವುದು. ಮೂರ್ಛೆಹೋದ ಅವರನ್ನು ಸೀತೆ ಉಪಚರಿಸಿ ಎಬ್ಬಿಸುವಳು. ಕೈಹಿಡಿದ ಹೆಂಡತಿಯಲ್ಲಿ ಕನಿಕರವನ್ನು ತೋರಿ ಅವಳನ್ನು ಸ್ವೀಕರಿಸಬೇಕೆಂದು ವಾಲ್ಮೀಕಿ ಹೇಳಲು ರಾಮನು ಅವನ ಮಾತನ್ನು ಅಲಕ್ಷಿಸುವನು. ಅನಂತರ ಸೀತೆಯು ತಾನು ಪತಿವ್ರತೆಯೆಂದೂ ಅದನ್ನು ಪ್ರಕಟಿಸಬೇಕೆಂದೂ ಭೂದೇವಿಯನ್ನು ಪ್ರಾರ್ಥಿಸುವಳು. ಸೀತೆಯ ಮಾತನ್ನು ಮೀರಲಾರದೆ ಭೂದೇವಿಯು ಪಾತಾಳದಿಂದ ಬಂದು ಸೀತೆಯು ರಾಮನನ್ನು ಹೊರತು ಅನ್ಯರನ್ನು ಮನಸ್ಸಿನಲ್ಲಿಯೂ ಸ್ಮರಿಸಿದವಳಲ್ಲವೆಂದು ತಿಳಿಸಿ ಅಂತರ್ಧಾನ ಹೊಂದುವಳು. ಪುಷ್ಪವೃಷ್ಟಿಯಾಗುವುದು, ದೇವದುಂದುಭಿಗಳು ಮೊಳಗುವುವು. ರಾಮನು ಸೀತೆಯನ್ನು ಯಜ್ಞದಲ್ಲಿ ಭಾಗಿನಿಯಾಗಿ ಅಂಗೀಕರಿಸುವನು. ಅವನ ಇಚ್ಛೆಯಂತೆ ವಾಲ್ಮೀಕಿಯು ಕುಶನನ್ನು ರಾಜನನ್ನಾಗಿ ಅಭಿಷೇಕಮಾಡುವನು. ರಾಮನು ಕುಶನ ಅನುಮತಿಯಿಂದ ಲವನನ್ನು ಯುವರಾಜ ಪದವಿಯಲ್ಲಿ ಅಭಿಷೇಕಿಸುವನು (೬).
ಹೀಗೆ ಇದು ರಾಮನಿಗೆ ವಾಲ್ಮೀಕಿದರ್ಶನ, ಮಹಾಯಾಗಕ್ಕೆ ಪರಿಶುದ್ಧ ಚರಿತ್ರಳೆನಿಸಿದ ಪತ್ನಿಯ ಜೊತೆ, ತನ್ನ ಅವಳಿಗಂಡುಮಕ್ಕಳಿಗೆ ಭೂಮಂಡಲ ರಾಜ್ಯಾಧಿಕಾರ (IV—೪೪) ಈ ಪ್ರಿಯವೃತ್ತಾಂತಗಳಿಂದ ಸಂತೋಷದಲ್ಲಿ ಮುಗಿಯುವ ಉತ್ತರರಾಮಾಯಣದ ಕಥೆ.
ನಾಟಕದಲ್ಲಿ ಮೊದಲು ಒಂದು ಸಣ್ಣ ‘ಸ್ಥಾಪನೆ’ ಇದೆ. ಅದರಲ್ಲಿ
ಜಂಭಾರಿಮೌಲಿಮಂದಾರಮಾಲಿಕಾಮಧುಚುಂಬಿನಃ ।
ಪಿಬೇಯುರಂತರಾಯಾಬ್ಧಿಂ ಹೇರಂಬಪದಪಾಂಸವಃ ॥
ಎಂಬ ಗಣಪತಿಯ ಪ್ರಾರ್ಥನೆಯೂ ಅನಂತರ ಈಶ್ವರನ ಪ್ರಾರ್ಥನೆಯೂ ಬರುತ್ತದೆ. ಈ ಈಶ್ವರಸ್ತುತಿಯು ಮೃಚ್ಛಕಟಿಕದ ಮಂಗಳ ಶ್ಲೋಕವನ್ನು ಜ್ಞಾಪಕಕ್ಕೆ ತರುತ್ತದೆ. ಇದರಲ್ಲಿ ಶಿವನ ತಪೋಜ್ವಾಲೆ ಗಂಗಾತರಂಗ ಹಾವು ಚಂದ್ರಕಲೆ ಕೆಂಜಡೆ ಈ ಲಕ್ಷಣಗಳಿಂದ ಕವಿಯು ರಾಜರ್ಷಿ ರಾಮಚಂದ್ರನ ಭೀಮಕಾಂತಗಳಾದ ನೃಪಗುಣಗಳನ್ನು ಸೂಚಿಸಿರುವಂತಿದೆ.
ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದ ಕಥೆಯನ್ನು ಹಿಂದೆಯೇ ಕೊಟ್ಟಿದೆ. (ಪುಟ ೨೨೧) ಅದರಂತೆ ಇಲ್ಲಿ ರಾಮನು ಸೀತೆಯ ಸ್ವರ್ಣ ಪ್ರತಿಮೆಯನ್ನಿಟ್ಟುಕೊಂಡು ಯಜ್ಞಮಾಡಲಿಲ್ಲ; ಆ ಸಂಕಲ್ಪವಿತ್ತು; ಆದರೆ ಯಜ್ಞಕಾಲಕ್ಕೆ ಅವಳೇ ದೊರೆತಳು; ತನ್ನ ಮನಸ್ಸಿಗೆ ನಂಬಿಕೆ ಹುಟ್ಟುವಂತೆ ಶಪಥಮಾಡಬೇಕೆಂದು ಅವನು ನಿಷ್ಠುರನಾಗಿ ಸೀತೆಯನ್ನು ಕೇಳಲಿಲ್ಲ; ಆ ಮಾತನ್ನು ಹೇಳಿದವನು ವಾಲ್ಮೀಕಿ. ಅನಂತರ ಭೂದೇವಿ ಬಂದು ಅವಳನ್ನು ಕರೆದುಕೊಂಡು ಹೋಗಲಿಲ್ಲ; ಯಜ್ಞಕ್ಕೆ ಸೇರಿದ್ದ ನೆರವಿಯೆದುರಿಗೆ ಅವಳ ಪಾತಿವ್ರತ್ಯವನ್ನು ಘೋಷಿಸಿ ಹೋದಳು. ಇಲ್ಲಿ, ರಾಮನು ಶಂಬೂಕನನ್ನು ಕೊಂದ ವೃತ್ತಾಂತವಾಗಲಿ, ಶತ್ರುಘ್ನನು ಲವಣಾಸುರನನ್ನು ಕೊಂದ ವೃತ್ತಾಂತವಾಗಲಿ, ರಾಮಲಕ್ಷ್ಮಣರು ಮಕ್ಕಳೊಡನೆ ಯುದ್ಧ ಮಾಡಿದ ವೃತ್ತಾಂತವಾಗಲಿ ಇಲ್ಲ. ನಾಟಕವು ತುಂಬ ಸಂಗ್ರಹವಾಗಿದೆ.* ಸೀತಾಪರಿತ್ಯಾಗದವರೆಗಿನ ರಾಮಾಯಣ ಕಥೆಯನ್ನೆಲ್ಲಾ ಹತ್ತು ಶ್ಲೋಕಗಳಲ್ಲಿ ಮುಗಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. “ಅಹೋ ಸಂಕ್ಷೇಪಃ !” ರಾಮಾಯಣವು ವಿಸ್ತಾರವಾಗಿದ್ದರೂ ಕುಶಲವರು ವೀಣೆಯ ಮೇಲೆ ರಾಮನ ಮುಂದೆ ಗಾನಮಾಡಿ ಅವನ ಭಾವಪರಿವರ್ತನೆಯನ್ನು ತಿಳಿಯಲು ವಾಲ್ಮೀಕಿಯು ರಾಮಾಯಣ ಸಂಗ್ರಹವನ್ನು ರಚಿಸಿ ಹುಡುಗರಿಗೆ ಪಾಠಮಾಡಿಸಿದ್ದನೆಂಬುದು ಕವಿಯ ಭಾವವಿರಬಹುದು. ರಂಗದ ಮೇಲೆ ರಾಮಾಯಣವನ್ನೆಲ್ಲಾ ಹೇಳಿಸುವುದು ಹೇಗೆ? ಸೀತಾಪರಿತ್ಯಾಗಾನಂತರದ ಕಥೆಯನ್ನು ಕಣ್ವನೆಂಬ ಋಷಿಯು ಮೂರು ಶ್ಲೋಕಗಳಲ್ಲಿ ಹೇಳುತ್ತಾನೆ. ಹುಡುಗರಿಗೆ ಈ ಶ್ಲೋಕಗಳು ಗೊತ್ತಿರುವುದಿಲ್ಲ. ರಾಮಲಕ್ಷ್ಮಣಸೀತೆಯರ ಹೆಸರನ್ನು ರಾಮಾಯಣದಲ್ಲಿ ಕೇಳಿರುವುದೇ ಹೊರತು ಅವರಿಗೆ ವ್ಯಕ್ತಿ ಪರಿಚಯವಿರುವುದಿಲ್ಲ. ಏಕೆಂದರೆ, ಸೀತೆಯನ್ನು ಆಶ್ರಮದ ಹಿರಿಯರು “ವಧೂ” (ಸೊಸೆ) ಎಂದೂ ಇತರರು “ದೇವೀ” ಎಂದೂ ಕರೆಯುತ್ತಾರೆ. ರಾಮನ ಪ್ರಸ್ತಾಪ ಬಂದಾಗ ಅವಳು ಅವನನ್ನು “ನಿರನುಕ್ರೋಶ” (ನಿರ್ದಯ) ಎಂದೇ ನಿರ್ದೇಶಿಸುತ್ತಾಳೆ. ಹುಡುಗರಾದ್ದರಿಂದ ಅವರು ಹೆಚ್ಚು ವಿಚಾರ ಮಾಡುವುದಕ್ಕೆ ಹೋಗುತ್ತಿರಲಿಲ್ಲ. ಸೀತೆಯು ಮಕ್ಕಳ ಜೊತೆಯಲ್ಲಿಯೇ ಇದ್ದಳು. ರಾಮನನ್ನು ಅಲ್ಲಿ ಕಣ್ಣಾರ ನೋಡಿದ್ದಳು. ಅವನಿಗೆ ಸೀತೆ ಅಲ್ಲಿರಬಹುದೆಂದೂ ಆ ಹುಡುಗರು ತನ್ನ ಮಕ್ಕಳಾಗಿರಬಹುದೆಂದೂ ಒಂದು ಆಸೆ, ಅನುಮಾನ, ಮೂಡಿತ್ತು. ಆದರೆ ಸೀತಾರಾಮರು ತಮ್ಮ ತಾಯಿತಂದೆಗಳೆಂದು ಆ ಹುಡುಗರಿಗೆ ಅನಿರೀಕ್ಷಿತವಾಗಿ ತಿಳಿದಾಗ, ಅವರನ್ನು ಒಟ್ಟಿಗೆ ಕಂಡಾಗ, ಆದಷ್ಟು ಸಂತೋಷಾಶ್ಚರ್ಯಗಳು, ತಾಯಿತಂದೆಗಳಿಗೆ ಆಗಿರಲಾರವು. ಈ ಭಾಗವು ನಾಟಕೀಯ ಕೌಶಲದಲ್ಲಿ ಶಾಕುಂತಲದ ಏಳನೆಯ ಅಂಕದಂತಿದೆ.
ಸೀತಾರಾಮರಿಬ್ಬರಿಗೂ ತಮ್ಮ ಸಂತತಿಯ ಮೇಲೇ ದೃಷ್ಟಿ; ಅವರಿಗೋಸ್ಕರವೇ ಸೀತೆ ಆತ್ಮಹತ್ಯೆಯಿಂದ ಹಿಂತೆಗೆದದ್ದು; ತನಗೆ ಸುಖಪ್ರಸವವಾಗಲೆಂದೇ ಅವಳು ಗಂಗೆಗೆ ಕುಂದಮಾಲೆಯ ಹರಕೆಯನ್ನು ಹೊತ್ತದ್ದು. ಅವಳು ಆಶ್ರಮದಲ್ಲಿ ಸುಖವಾಗಿ ಹೆತ್ತಳು—ಅವಳಿ ಗಂಡು ಮಕ್ಕಳನ್ನು ಹೆತ್ತಳು; ಸಾಕಿ ಸಲಹಿದಳು. ತಾಯಿಯ ಪ್ರೇಮದಿಂದ ಅವರನ್ನು ವಂಚಿಸಿ ತಾನು ಪಾತಾಳಕ್ಕೆ ಹೋಗಲಿಲ್ಲ. ಅವರು ವಾಲ್ಮೀಕಿಯ ಆಶ್ರಮದಲ್ಲಿ, ಶಿಕ್ಷಣಸಂಸ್ಥೆಗಳಲ್ಲಿ, ಬೆಳೆದು ವಿದ್ಯಾವಂತರಾದರು, ವಿನಯವಂತರಾದರು, ವೀರಕಿಶೋರರಾದರು, ರಾಜಯುವರಾಜರಾದರು. ಆಮೇಲೆ ರಾಮನು ಯಾಗ ಮಾಡಿದನೋ ಬಿಟ್ಟನೋ, ರಾಜ್ಯ ಬಿಟ್ಟು ವಾನಪ್ರಸ್ಥನಾದನೋ ಮೊದಲಿನಂತೆಯೇ ಸಂಸಾರದಲ್ಲಿದ್ದನೋ, ಒಂದನ್ನೂ ಕವಿಯು ಹೇಳುವುದಿಲ್ಲ. ಸೀತರಾಮರು ಹನ್ನೆರಡುವರ್ಷ ದುಃಖದಲ್ಲಿ ನೊಂದಿದ್ದರೂ, ಅದನ್ನು ತಾಳ್ಮೆಯಿಂದ ಸಹಿಸಿಕೊಂಡಿರುತ್ತಾರೆ.* ತನ್ನ ಪರಿತ್ಯಾಗವು ಹಠಾತ್ತನೆ ಗೊತ್ತಾದ್ದರಿಂದ ಸೀತೆಯು ಮೊದಲು ತುಂಬ ಕಳವಳಪಟ್ಟು, ರಾಮನಮೇಲೆ ಅಸಮಾಧಾನ ಹೊಂದಿದ್ದು ನಿಜ. ಅವಳ ದೊಡ್ಡ ಆಕ್ಷೇಪಣೆ ಅವನು ಅಷ್ಟು “ನಿರನುಕ್ರೋಶ” ನಾಗಬಹುದೇ ಎಂಬುದು. ಆದರೂ ಅವರ ಪ್ರೇಮವು ಅಳಿಯಲಿಲ್ಲ. ಬೇರೆಯಾಗಿ ಹನ್ನೆರಡುವರ್ಷವಾದರೂ, ರಾಮನು ಸೀತೆ ಕಟ್ಟಿದ್ದ ಪುಷ್ಪಮಾಲೆಯನ್ನೂ ಅವಳ ಹೆಜ್ಜೆ ಗುರುತನ್ನೂ ಅರಿಯುವನು; ಅವಳ ಉತ್ತರೀಯವನ್ನು ಗುರುತಿಸಿ ಹೊದೆಯುವನು. ರಾಮನ ರಾಜಧರ್ಮವೂ ಸೀತೆಯ ಪತ್ನೀಧರ್ಮವೂ ಅವರ ದೋಷಗತುಣಾನಪೇಕ್ಷವಾದ ನಿರ್ವ್ಯಾಜ ಪ್ರೇಮವೂ (೫—೫) ಕೊನೆಗೆ ಸತ್ಫಲವನ್ನು ಕೊಟ್ಟುವು. ಶಕುಂತಲಾ ದುಷ್ಯಂತರಂತೆ ಕ್ರೂರಕಾಲವು ಕಳೆದ ಮೇಲೆ ಅವರು ಸುಖವಾಗಿದ್ದರು, ಎಂಬುದು ಕವಿಯ ಭಾವವಾಗಿ ಕಾಣುತ್ತದೆ. ಹೀಗೆ ನಾಟಕವು ಕರುಣದಿಂದ ಆರಂಭವಾಗಿ ಅದ್ಭುತದಲ್ಲಿ* ಮುಗಿಯುತ್ತದೆ; ಮಲ್ಲಿಗೆಯ ಹೂವಿನಂಥ ದಾಂಪತ್ಯಪ್ರೇಮವನ್ನೂ ಪುತ್ರವಾತ್ಸಲ್ಯವನ್ನೂ ಮಾಲೆಕಟ್ಟಿ ಸಂಸಾರದ ಹೊಳೆಯಲ್ಲಿ ತೇಲಿಬಿಡುತ್ತದೆ.
ಪಾತ್ರಗಳಲ್ಲಿ ಮಿತಿ ಇದೆ. ಕೌಸಲ್ಯಾದಿಗಳು ಅಂತಃಪುರಸ್ತ್ರೀಯರಾಗಿ ಪರದೆಯ ಹಿಂದೆ ಇರುತ್ತಾರೆ. ಪೌರರೂ ರಾಜರೂ ವಿಭೀಷಣಾದಿಗಳೂ ನೇಪಥ್ಯದಲ್ಲಿರುತ್ತಾರೆ. ಪದ್ಧತಿಯನ್ನನುಸರಿಸಿ ವಿದೂಷಕನು ಬರುತ್ತಾನೆ; ಆದರೆ ಅವನಿಂದ ಹೆಚ್ಚು ಹಾಸ್ಯವಾಗಲಿ ಪ್ರಯೋಜನವಾಗಲಿ ಇಲ್ಲ. ವಾಲ್ಮೀಕಿಯೇ ನಾಟಕದ ಅಧಿದೇವತೆ. ಎಲ್ಲವೂ ನಡೆಯುವುದು ಅವನ ಆಶ್ರಮದ ಹತ್ತಿರವೇ. ಅವನ ಶಿಷ್ಯರೇ ಅಲ್ಲಿ. ವಸಿಷ್ಠಾದಿ ಮಿಕ್ಕ ಮಹರ್ಷಿಗಳು ಕೂಡ ಇಲ್ಲ.
ಈ ನಾಟಕದ ಭಾಷಾಶೈಲಿಗಳು ತಿಳಿಯುವಂತೆ ಮುಂದೆ ಕೆಲವು ಪದ್ಯಗಳನ್ನು ಕೊಟ್ಟಿದೆ:—
ಏತೇ ರುದಂತಿ ಹರಿಣಾ ಹರಿತಂ ವಿಮುಚ್ಯ
ಹಂಸಾಶ್ಚ ಶೋಕವಿಧುರಾಃ ಕರುಣಂ ರುದಂತಿ ।
ನೃತ್ತಂ ತ್ಯಜಂ ಶಿಖಿನೋಪಿ ವಿಲೋಕ್ಯ ದೇವೀಂ
ತಿರ್ಯಗ್ಗತಾ ವರಮಮೀ ನ ಪರಂ ಮನುಷ್ಯಾಃ ॥ ೧—೧೮ ॥
ಧರ್ಮೇಣ ಜಿತಸಂಗ್ರಾಮೇ ರಾಮೇ ಶಾಸತಿ ಮೇದಿನೀಂ ।
ಕಥ್ಯತಾಂ ಕಥ್ಯತಾಂ ವತ್ಸೇ ವಿಪದೇಷಾ ಕುತಸ್ತವ ॥ ೧—೨೮ ॥
ಮಧ್ಯಾಹ್ನಾರ್ಕಮಯೂಖತಾಪಮಧಿಕಂ ತೋಯಾವಗಾಹಾದಯಂ
ನೀತ್ವಾ ವಾರಿಕಣಾರ್ದ್ರಕರ್ಣಪದನೈರಾಹ್ಲಾದ್ಯಮಾನಾನನಃ ।
ಮಂದಂ ಮಂದಮುಪೈತಿ ಕೂಲಮಧುನಾ ವಕ್ಷಃಪ್ರಣುನ್ನೈರ್ಜಲೈಃ
ಆಕ್ರಾಂತಂ ಕರಘಾತಭಾಂಕೃತಿಸರಿತ್ಕಲ್ಲೋಲಚಕ್ರಃ ಕರೀ ॥ ೩—೧೭ ॥
ಮಹಾನಾಟಕ
‘ಮಹಾನಾಟಕ’ ಅಥವಾ ‘ಹನುಮನ್ನಾಟಕ’ ದಲ್ಲಿರುವುದು ರಾಮಾಯಣದ ಸಂಪೂರ್ಣ ಕಥೆ. ಈ ನಾಟಕದ ಪ್ರಸಿದ್ಧಿ ಅದರ ಕಥಾವಸ್ತುವಿಗಲ್ಲ, ಅದರ ವಿಚಿತ್ರ ಸ್ವರೂಪಕ್ಕೆ. ಈ ವೈಚಿತ್ರ್ಯವನ್ನೂ ಅದರ ಸಂಬಂಧವಾಗಿ ಇರುವ ಸಮಸ್ಯೆ ಪರಿಹಾರಗಳನ್ನೂ ತಿಳಿದುಕೊಳ್ಳಬೇಕಾದರೆ ಸ್ವಲ್ಪಮಟ್ಟಿಗಾದರೂ ಮೂಲದ ಪರಿಚಯವಿರಬೇಕು. ಆದ್ದರಿಂದ ಈ ಪ್ರಕರಣದ ಕೊನೆಯಲ್ಲಿ ಇದರ ಔತ್ತರೇಯ ಪಾಠದ ಮೊದಲನೆಯ ಅಂಕವನ್ನು ರೇಖಿಸಿದೆ.
ಈ ನಾಟಕದ ಸ್ವರೂಪ, ಸ್ಥಾನ, ಕಾಲ, ಕವಿ ಮುಂತಾದ ಅಂಶಗಳನ್ನು ತಿಳಿಯಲು ಒಂದು ದೊಡ್ಡ ಕೊರತೆಯಿದೆ. ಅದೇನೆಂದರೆ— ಪ್ರಮಾಣವತ್ತಾದ ಇದರ ಒಂದೂ ಮುದ್ರಿತ ಪ್ರತಿಯಿಲ್ಲದಿರುವುದು; ಸಾಲದ್ದಕ್ಕೆ ಮೂಲಗ್ರಂಥವೇ ಎರಡು ಪಾಠಗಳಲ್ಲಿ ಬಂದಿದೆ; ಒಂದು ಮಧುಸೂದನನಿಂದ “ಸಂಕಲಿತ” ವಾದ ಔತ್ತರೇಯ ಅಥವಾ ಬಂಗಾಳೀ ಪಾಠ; ಇದರಲ್ಲಿ ೯ ಅಥವಾ ೧೦ ಅಂಕಗಳಿವೆ. ಇನ್ನೊಂದು ದಾಮೋದರಮಿಶ್ರನಿಂದ ಸಂಕಲಿತವಾದ ದಾಕ್ಷಿಣಾತ್ಯ ಅಥವಾ ನಾಗರಿ ಪಾಠ. ಇದರಲ್ಲಿ ೧೪ ಅಂಕಗಳಿವೆ. ಹೀಗೆ ಮುಖ್ಯಪಾಠಗಳು ಎರಡೇ ಆದರೂ ಒಂದು ಮುದ್ರಿತ ಪ್ರತಿಯ ಹಾಗೆ ಇನ್ನೊಂದಿಲ್ಲ. ಒಂದು ಹಸ್ತಪ್ರತಿಯ ಹಾಗೆ ಇನ್ನೊಂದಿಲ್ಲ. ಸುಶೀಲಕುಮಾರ ದೇ ಎಂಬುವರು ತಮಗೆ ಸಿಕ್ಕಿರುವ ಎಂಟು ಹಸ್ತಪ್ರತಿಗಳಲ್ಲಿ ಒಂದು ಸೂಕ್ಷ್ಮ ಪಾಠ ದೊರೆತಿರುವುದಾಗಿ ಹೇಳುತ್ತಾರೆ. ಅದರ ಮೊದಲನೆಯ ಅಂಕದಲ್ಲಿ ಔತ್ತರೇಯ ಪಾಠದ ೫೯ ಪದ್ಯಗಳಿಗೆ ಬದಲಾಗಿ ೨೪ ಪದ್ಯಗಳು ಮಾತ್ರ ಇವೆ; ಹನುಮಂತನು ಕವಿ ಎಂದಿಲ್ಲ; ಅಂಕ ವಿಭಾಗವಿಲ್ಲ; ಗದ್ಯವಿಲ್ಲ; ಮೂಲವು ಹೀಗಿದ್ದರೂ ಇದ್ದಿರಬಹುದು ಎಂದು ಅವರು ಊಹಿಸುತ್ತಾರೆ (I.H.Q., VII, ೫೬೭).
ಮೇಲಿನ ಎರಡು ಪಾಠಗಳಲ್ಲಿಯೂ ಈ ನಾಟಕದ ಕರ್ತೃವು ಹನುಮಂತನೆಂದಿದೆ; ಆದ್ದರಿಂದಲೇ ‘ಹನುಮನ್ನಾಟಕ’ ವೆಂಬ ಹೆಸರು. ‘ಮಹಾನಾಟಕ’ ವೆಂಬ ಹೆಸರು ಹೇಗೆ ಬಂತೋ ಇಷ್ಟು ನಿರ್ಧರವಾಗಿ ಹೇಳುವಂತಿಲ್ಲ; ಆದ್ಯಂತವಾದ ರಾಮಾಯಣ ಕಥೆ, ಅದರ ಗಾತ್ರ, ತಾಟಕದಲ್ಲಿರುವ ಹಲವು ಅಂಕಗಳು, ಕಥೆಯ ಮಾಹಾತ್ಮ್ಯ, ಕರ್ತೃವಿನ ಮಾಹಾತ್ಮ್ಯ ಮುಂತಾದವು ಕಾರಣಗಳಾಗಿರಬಹುದು.
ಹನುಮಂತನ ಕರ್ತೃತ್ವ ಸಂಬಂಧದಲ್ಲಿ ಸ್ವಾಭಾವಿಕವಾಗಿ ಹಲವು ದಂತಕಥೆಗಳಿವೆ. ಹನುಮಂತನು ಇದನ್ನು ಒಂದು ಬಂಡೆಯ ಮೇಲೆ ಕೆತ್ತಿದ್ದನು; ಅದು ಅಮೃತಪ್ರಾಯವಾಗಿದ್ದದ್ದರಿಂದ ತನ್ನ ರಾಮಾಯಣ ಎಲ್ಲಿ ಸಪ್ಪೆಯಾದೀತೋ ಎಂದು ಹೆದರಿ ವಾಲ್ಮೀಕಿ ಅದನ್ನು ಸಮುದ್ರಕ್ಕೆ ಹಾಕಿಸಿದ್ದನು; ಭೋಜನು ಅದನ್ನು ಎತ್ತಿಸಿ ದೊರಕಿದಷ್ಟನ್ನು ಜೋಡಿಸಿ ಪ್ರಸಿದ್ಧಿಗೆ ತಂದನು— ಇತ್ಯಾದಿ. ಇದರಿಂದ ಮೂಲನಾಟಕವು ಯಾವುದೋ ಒಂದು ಶಿಲಾಶಾಸನದಲ್ಲಿದ್ದಿರಬಹುದೆಂದೂ ಅದರ ಆಧಾರದ ಮೇಲೆ ಎರಡು ಪಾಠಗಳೂ ಹುಟ್ಟಿರಬಹುದೆಂದೂ ಪಾಶ್ಚಾತ್ಯ ಪಂಡಿತರು ಊಹಿಸುತ್ತಾರೆ.
ಈ ಮೂಲದ ಸ್ವರೂಪವು ಏನೋ ಅದರ ಕಾಲ ಯಾವುದೋ ಹೇಳಲಾಗುವುದಿಲ್ಲ; “ಶಾರ್ಙ್ಗಧರ ಪದ್ಧತಿ” ಯಲ್ಲಿ ಹನುಮಂತನದೆಂದು ಕೆಲವು ಶ್ಲೋಕಗಳು ದೊರೆಯುತ್ತವೆ. ಆದ್ದರಿಂದ ಈ ಎರಡು ಪಾಠಗಳು ಅದಕ್ಕೆ ಹಿಂದೆ (ಕ್ರಿ.ಶ. ೧೩೬೩) ಇದ್ದಿರಬೇಕೆಂದೂ, ಮೂಲವು (ಸಮಗ್ರವಾಗಿಯೋ ಅಸಮಗ್ರವಾಗಿಯೋ) ಪ್ರಾಯಶಃ ಭೋಜನ ಕಾಲಕ್ಕೆ (೧೧ನೆಯ ಶತಮಾನ) ಇದ್ದಿರಬಹುದೆಂದೂ ಹೇಳಬಹುದಾಗಿದೆ. ಅಂತು ಈ ಮೂಲ ಮಾತ್ರ ಎರಡು ಪಾಠಗಳಲ್ಲಿಯೂ ದಿನದಿನಕ್ಕೆ ಬೆಳೆಯುತ್ತ ಬಂದಿರುವುದು ಸ್ಪಷ್ಟವಾಗಿದೆ. ಹೀಗೆ ಅದರ ಪದ್ಯಸಂಖ್ಯೆ ಒಂದು ಪುಸ್ತಕಕ್ಕೂ, ಮತ್ತೊಂದು ಪುಸ್ತಕಕ್ಕೂ ವ್ಯತ್ಯಾಸವಾಗಿ ಸುಮಾರು ೫೫೦ ರಿಂದ ಹಿಡಿದು ೮೦೦ರ ವರೆಗೂ ಹೋಗುತ್ತದೆ. (ಇವುಗಳಲ್ಲಿ ಸುಮಾರು ೩೦೦ ಮಾತ್ರ ಎರಡು ಪಾಠಕ್ಕೂ ಒಂದೇ ಆಗಿದೆ.) ಆದ್ದರಿಂದ ಸಂಕಲನಕಾರರು ತಮ್ಮ ತಮ್ಮ ಕಾಲದಲ್ಲಿ ಪ್ರಸಿದ್ಧವಾಗಿದ್ದ ರಾಮನಾಟಕಗಳಿಂದ ಸಂದರ್ಭೋಚಿತವಾದ ಉತ್ತಮ ಶ್ಲೋಕಗಳನ್ನು ತೆಗೆದು ಅಲ್ಲಲ್ಲಿ ಸೇರಿಸುತ್ತಿದ್ದರೆಂದು ಧಾರಾಳವಾಗಿ ಹೇಳಬಹುದು; ಹೀಗೆ ಇದರಲ್ಲಿ ಭವಭೂತಿ, ಮುರಾರಿ, ರಾಜಶೇಖರ, ಜಯದೇವ ಇವರ ಪದ್ಯಗಳೆಲ್ಲಾ ಇವೆ; ನಮಗೆ ತಿಳಿಯದ ಇನ್ನೂ ಅನೇಕರ ಪದ್ಯಗಳಿದ್ದರೂ ಇರಬಹುದು. ಈ ಎರಡು ಪಾಠಗಳಲ್ಲಿಯೂ ಯಾವುದು ಹಿಂದಿನದೋ ಯಾವುದು ಈಚಿನದೋ ನಿಷ್ಕರ್ಷಿಸಲಾಗುವುದಿಲ್ಲ; ಔತ್ತರೇಯ ಪಾಠವೇ ಹಳೆಯದಾಗಿರುವುದು ಸಂಭವ.
ಈಚೆಗೆ, ಎಸ್ಟೆಲರ್ ಎಂಬ ಜರ್ಮನ್ ಪಂಡಿತರು ೧೦ ಮಧುಸೂದನ ಹಸ್ತಪ್ರತಿಗಳನ್ನೂ ೨೩ ದಾಮೋದರ ಹಸ್ತಪ್ರತಿಗಳನ್ನೂ ಪರಿಶೀಲಿಸಿ, ದಾಮೋದರ ಪಾಠವೇ ಮೂಲವೆಂದೂ ಮಧುಸೂದನ ಪಾಠವು ಅದರಿಂದ ಹುಟ್ಟಿದ್ದೆಂದೂ, ಮೊದಲು ಇದು ಪದ್ಯಗಳ ಸಂಕಲನವಾಗಿದ್ದು, ಆಮೇಲೆ ‘ನಾಟಕ’ ವೆಂಬ ಹೆಸರು ಸೇರಿತೆಂದೂ ನಿರ್ಧರಿಸಿದ್ದಾರೆ. (Die alteste Rezension des Mahanataka ein Beitrag zur Geschicte des indischen Buhmen—und Schatten spiel und der Rama—Sage, Von A Esteller; also, J.R.A.S. 1940. p. 217)
ಮುಂದೆ ಕೊಟ್ಟಿರುವ ಮಾದರಿಯನ್ನು ನೋಡಿದರೆ ನಾಟಕದಲ್ಲಿ ಈ ವಿಶೇಷಗಳು ಕಂಡುಬರುತ್ತವೆ; ಅದರಲ್ಲಿ ಗದ್ಯವಿಲ್ಲ; ರಂಗಸೂಚನೆಗಳೂ ಮಿಕ್ಕ ನಾಟಕಗಳಲ್ಲಿರುವಂತೆ, ಮತ್ತು ಅಷ್ಟು, ಇಲ್ಲ; ಸೂತ್ರಧಾರನು* ಪ್ರಸ್ತಾವನೆಯಾದ ಮೇಲೂ ಬರುತ್ತಿರುತ್ತಾನೆ. ಅವನು ಹೇಳುವ ಶ್ಲೋಕಗಳು ಕಥನ ರೂಪವಾಗಿರುತ್ತವೆ; ಪ್ರಾಕೃತವಿಲ್ಲ, ವಿದೂಷಕನಿಲ್ಲ. ಕಥೆ ಸನ್ನಿವೇಶದಿಂದ ಸನ್ನಿವೇಶಕ್ಕೆ ಹಾರಿ ಹರುಕುಮುರುಕಿನಂತೆ ಕಾಣುತ್ತದೆ.* ದಾಕ್ಷಿಣಾತ್ಯ ಪಾಠವು ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಅದರಲ್ಲಿ ಸೂತ್ರಧಾರ ಪಾರಿಪಾರ್ಶ್ವಕರು ಆಮೇಲೆ ಬರುವುದಿಲ್ಲ; ಸ್ವಲ್ಪ ಗದ್ಯವಿದೆ; ರಾಮಸೀತೆಯರ ನಾಟ್ಯ ಬರುತ್ತದೆ; ದೃಶ್ಯ “ಕಲ್ಪನೆ” ಗಳಿಲ್ಲ; ರಂಗಸೂಚನೆಗಳು ಸ್ವಲ್ಪ ಹೆಚ್ಚಾಗಿವೆ; ಒಟ್ಟಿನ ಮೇಲೆ ಇದು ಪ್ರಸಿದ್ಧವಾದ ನಾಟಕರೂಪಕ್ಕೆ ಸ್ವಲ್ಪ ಹತ್ತಿರ ಬರುತ್ತದೆ.
ಆದ್ದರಿಂದ ಈ ನಾಟಕವು ಒಂದು ಸಮಸ್ಯೆಯಾಗಿ ಅದು ಈ ರೂಪದಲ್ಲಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಸೂಚಿಸುತ್ತಾರೆ.—(೧) ಇದು ಒಂದು “ಛಾಯಾ ನಾಟಕ.” (೨) ನಾಟಕದ ಪೂರ್ವ ರೂಪವಾದ ಒಂದು ಪುರಾಣ ಕಾವ್ಯ. (೩) “ಗ್ರಾಂಥಿಕರು” ಉಪಯೋಗಿಸುತ್ತಿದ್ದ ರಾಮಾಯಣ ಕಥಾಗ್ರಂಥ. (೪) ಕೇವಲ ಓದುವುದಕ್ಕೆ ಮಾಡಿಕೊಂಡ ನಾಟಕರೂಪದ ಶ್ರವ್ಯಕಾವ್ಯ. (೫) “ಕಥಕರು”, ಹರಿಕಥೆ ಮಾಡುವವರು, ಉಪಯೋಗಿಸುವುದಕ್ಕಾಗಿ ಮಾಡಿಕೊಂಡಿರುವ ಗ್ರಂಥ—ಇತ್ಯಾದಿ. ಆದರೆ ಇವು ಯಾವುವೂ ಅಷ್ಟು ತೃಪ್ತಿಕರವಾಗಿಲ್ಲ. ಏಕೆಂದರೆ, ಇದು “ಛಾಯಾ ನಾಟಕ” ವೆನ್ನುವುದಕ್ಕೆ ಪ್ರಮಾಣವಿಲ್ಲ; ಭರತ ಧನಿಕರು ಈ ಜಾತಿಯನ್ನು ಹೆಸರಿಸಿಲ್ಲ; ಇದರಲ್ಲಿರುವ ಪ್ರೌಢ ವೃತ್ತಗಳನ್ನು ನೋಡಿದರೆ ಇದು ನಾಟಕಜಾತಿ ಪಕ್ವವಾಗುವುದಕ್ಕೆ ಮುಂಚೆ ಹುಟ್ಟಿದ್ದೆನ್ನಿಸುವುದಿಲ್ಲ; “ಗ್ರಾಂಥಿಕರು”, “ಕಥಕರು” ಉಪಯೋಗಿಸುತ್ತಿದ್ದರೆಂದರೆ ಮಧ್ಯೆ “ದೃಶ್ಯ ಕಲ್ಪನೆ” ರಂಗಸೂಚನೆಗಳೇಕೆ? ಶ್ರವ್ಯಕಾವ್ಯವೆಂದರೂ ಇದೇ ಆಕ್ಷೇಪಣೆಗಳು ಬರುತ್ತವೆ. ಒಟ್ಟಿನ ಮೇಲೆ ಇದು ಉತ್ತರದೇಶದ “ಯಾತ್ರಾ” ನಾಟಕ ಅಥವಾ ದಕ್ಷಿಣ ದೇಶದ “ಬಯಲಾಟ” “ಭಾಗವತರಾಟ” “ಕಥಕಳಿ” “ಗೊಂಬೆಯಾಟ” ಗಳ ಹತ್ತಿರ ಹತ್ತಿರಕ್ಕೆ ಬರುತ್ತದೆ ಎಂದು ಹೇಳಬಹುದು. ಇವುಗಳಲ್ಲಿ “ಭಾಗವತ” ನು ಕೊನೆಯವರೆಗೂ ಹಿಂದೆ ನಿಂತು ಹಾಡುತ್ತಿರುತ್ತಾನೆ. ಪಾತ್ರಗಳು ಮಾತನಾಡುವುದೂ ಉಂಟು. ಇಲ್ಲದ್ದೂ ಉಂಟು; ಸ್ವಕಪೋಲಕಲ್ಪನೆಯಿಂದ ಮಾತನ್ನು ಕಲ್ಪಿಸಿ ಬೆಳಸುವುದೂ ಉಂಟು; ಪ್ರಾಯಶಃ ಈ ಜಾತಿಯ ಬರವಣಿಗೆಯೂ ಆಟಗಳೂ ದೇಶೀಯರಲ್ಲಿ ಹೆಚ್ಚಾಗಿದ್ದು ಅವರಿಂದ ಸಂಸ್ಕೃತಕ್ಕೆ ಬಂದಹಾಗೆ ತೋರುತ್ತದೆ.