ಅನರ್ಘ ರಾಘವ

ಮುರಾರಿಯ ಕೃತಿಗಳಲ್ಲಿ ನಮಗೆ ಈಗ ದೊರೆತಿರುವುದು ಅವನ ‘ಅನರ್ಘ ರಾಘವ’ ಒಂದೇಯೆ. ಅವನ ದೇಶಕಾಲಗಳು ಸರಿಯಾಗಿ ಗೊತ್ತಿಲ್ಲ. ಪ್ರಾಯಶಃ ಭವಭೂತಿಗಿಂತ ಈಚೆಗೂ ರತ್ನಾಕರನಿಗಿಂತ (೯ನೆಯ ಶತಮಾನ) ಹಿಂದೂ ಮಾಹಿಷ್ಮತಿಯಲ್ಲಿ ಇದ್ದಿರಬಹುದು. ಅವನದು ಮೌದ್ಗಲ್ಯ ಗೋತ್ರ; ಅವನ ತಂದೆತಾಯಿಗಳು ಭಟ್ಟವರ್ಧಮಾನ ಮತ್ತು ತಂತುಮತೀ; ಅವನು ತನ್ನನ್ನು “ಬಾಲವಾಲ್ಮೀಕಿ’ ಎಂದು ಕರೆದುಕೊಂಡಿದ್ದಾನೆ.

ರಾಮಾಯಣದ ಮೇಲೆ ತನ್ನ ಹಿಂದೆ ಆಗಲೇ ಅನೇಕರು ನಾಟಕಗಳನ್ನು ಬರೆದಿದ್ದರೂ ತಾನೂ ಅದರ ಮೇಲೆ ಬರೆದದ್ದಕ್ಕೆ ಹೀಗೆ ಸಮಾಧಾನ ಹೇಳಿದ್ದಾನೆ—

ಯದಿ ಕ್ಷುಣ್ಣಂ ಪೂರ್ವೈರಿತಿ ಜಪತಿ ರಾಮಸ್ಯ ಚರಿತಂ

ಗುಣೈರೇತಾವದ್ಭಿರ್ಜಗತಿ ಪುನರನ್ಯೋ ಜಯತಿ ಕಃ ।

ಸ್ವಮಾತ್ಮಾನಂ ತತ್ತದ್ಗುಣಗರಿಮಗಂಭೀರಮಧುರ

ಸ್ಫುರದ್ವಾಗ್ಬ್ರಹ್ಮಾಣಃ ಕಥಮುಪಕರಿಷ್ಯಂತಿ ಕವಯಃ ॥ (I, ೯)

ಇಲ್ಲಿ ಅವನು ಭವಭೂತಿಯಲ್ಲದೆ ಮತ್ತಾವ ಪೂರ್ವ ಕವಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದನೋ ಗೊತ್ತಾಗುವುದಿಲ್ಲ. ರಾಜಶೇಖರನ ನಾಟಕಗಳ ಪ್ರಸ್ತಾವನೆಗೂ ಇದರ ಪ್ರಸ್ತಾವನೆಗೂ ಕೆಲವು ಅಂಶಗಳಲ್ಲಿ ಸಾದೃಶ್ಯವಿದೆ. ಅವರು ಸಮಕಾಲೀನರಾಗಿದ್ದರೂ ಇದ್ದಿರಬಹುದು.

‘ಅನರ್ಘರಾಘವ’ ವು ಮಧ್ಯದೇಶೀಯನಾದ ‘ಸುಚರಿತ’ ನಿಂದ ಪುರುಷೋತ್ತಮನ ಯಾತ್ರೆಯ ಸಂದರ್ಭದಲ್ಲಿ ಪ್ರಯೋಗಿಸಿದ್ದು. ಇದರಲ್ಲಿ ಏಳು ಅಂಕಗಳಿವೆ; ಅವುಗಳ ಮುಖ್ಯ ವಿಷಯಗಳಿವು—

ವಿಶ್ವಾಮಿತ್ರನು ರಾಮಲಕ್ಷ್ಮಣರನ್ನು ಕರೆತರುತ್ತಾನೆ (೧). ತಾಟಕಾ ಸಂಹಾರ (೨). ಹರಧನುರ್ಭಂಗ; ರಾವಣನಿಗಾಗಿ ಸೀತೆಯನ್ನು ಕೇಳಲು ಬಂದಿದ್ದ ಶೌಷ್ಕಲನು ಇದನ್ನು ಅವನಿಗೆ ತಿಳಿಸಲು ಹೋಗುವನು (೩). ಪರಶುರಾಮ ಪರಾಜಯ; ರಾಮಾದಿಗ ಅರಣ್ಯಗಮನ (೪). ಸೀತಾಪಹರಣ; ವಾಲಿವಧ (೫). ವಿದ್ಯಾಧರರಿಂದ ರಾವಣವಧ ವರ್ಣನೆ (೬). ವಿಮಾನದಲ್ಲಿ ರಾಮಾದಿಗಳ ಪುನರಾಗಮನ; ದಾರಿಯ ವರ್ಣನೆ (೭).

ಇಲ್ಲಿಯೂ ಮಾಲ್ಯವಂತನ ಮಂತ್ರಿತ್ವವಿದೆ; ಶೂರ್ಪಣಖಿಗೆ ಬದಲಾಗಿ ಸಿದ್ಧಶಬರಿಯು ಮಂಧರೆಯನ್ನು ಪ್ರವೇಶಿಸುತ್ತಾಳೆ ಆದರೆ ಮಾಲ್ಯವಂತನು ಅರ್ಥಶಾಸ್ತ್ರ ಪಂಡಿತ; ಅವನಿಗೆ ಹೆಚ್ಚು ವಿವೇಚನೆಯಿದೆ; ರಾಮನು ವಾಲಿಯನ್ನು ಧರ್ಮಯುದ್ಧದಲ್ಲಿಯೇ ಕೊಲ್ಲುತ್ತಾನೆ. ಕಥಾಸಂಕ್ಷೇಪದಲ್ಲಿ ನೈಪುಣ್ಯವಿದೆ. ನಾಟಕದಲ್ಲಿರುವ ಒಟ್ಟು ಪದ್ಯ ಸಂಖ್ಯೆ ೫೬೭.

“ಮುರಾರಿಯ ದಾರಿ ಮೂರನೆಯ ದಾರಿ” ಎಂದು ಹೇಳುವುದುಂಟು. ಪ್ರಾಯಶಃ ಇದು ಅವನು ಹೇಳಿಕೊಳ್ಳುವ ತನ್ನ ಮಾತುಕಥೆಗಳ “ಗಂಭೀರತೆ”* ಯನ್ನು ನಿರ್ದೇಶಿಸುತ್ತದೆ. ಮುರಾರಿಯದು ಜಯದೇವ ಮುಂತಾದವರದಕ್ಕಿಂತ ಘನಿಷ್ಠವಾದ ಪಾಂಡಿತ್ಯ. ಅವನ ಪಾತ್ರಗಳು ಪರಿಷ್ಕಾರವಾಗಿ ಪ್ರೌಢವಾಗಿ ಪಾಂಡಿತ್ಯಪೂರ್ಣವಾಗಿ ಮಾತನಾಡುತ್ತಾರೆ. ಅವರ ಮಾತೂ ವರ್ಣನೆಗಳೂ ಹೆಚ್ಚು; ಎರಡನೆಯ ಅಂಕದ ವಿಷ್ಕಂಭದಲ್ಲಿ ಪಾತ್ರವರ್ಣನೆಗೇ ಹತ್ತು ಪದ್ಯಗಳಿವೆ. ಅವನಲ್ಲಿ ಅಪೂರ್ವಪದಗಳೂ ಕ್ಲಿಷ್ಟ ವ್ಯಾಕರಣ ಪ್ರಯೋಗಗಳೂ ಉಂಟು.* ಶೈಲಿ ಜಟಿಲ* ; ‘ವಾಲಿ’ ಎನ್ನುವ ಕಡೆ ‘ವಿಕರ್ತನತನಯ’ ಎಂದ ಹೊರತು ಅವನಿಗೆ ತೃಪ್ತಿಯಾಗುವುದಿಲ್ಲ; ‘ಶಿವಧನುಸ್ಸು’ ಎನ್ನುವುದಕ್ಕಿಂತ ‘ಕಾತ್ಯಾಯನೀಕಾಮುಕಕಾರ್ಮುಕ’ ಎಂದರೆ (III, ೧೬ ಗದ್ಯ) ಅವನಿಗೆ ಸಂತೋಷ. ಪ್ರಸಾದಗುಣ ಅಪರೂಪ. ಪ್ರೌಢಿ ಹೆಚ್ಚು. ಈ ಕಾರಣದಿಂದ ಪ್ರಾಯಶಃ ಅವನು ಪಂಡಿತಪ್ರಿಯನಾಗಿದ್ದಾನೆ. ಅವನ ಮುಂದೆ ಭವಭೂತಿ ಏಕೆ ಎಂದು ಹೇಳುವ ಈ ಶ್ಲೋಕವನ್ನು ನೋಡಿ:—

ಮುರಾರಿಪದಚಿಂತಾಯಾಂ ಭವಭೂತೇಸ್ತು ಕಾ ಕಥಾ ।

ಭವಭೂತಿಂ ಪರಿತ್ಯಜ್ಯ ಮುರಾರಿಮುರರೀಕುರು ॥

ವ್ಯಾಖ್ಯಾನಕಾರನಾದ ಹರಿಹರದೀಕ್ಷಿತನ ಈ ಅಭಿಪ್ರಾಯವನ್ನು ಪರಿಶೀಲಿಸಿ:—

ಯೇ ಶಬ್ದ ಶಾಸ್ತ್ರ ನಿಷ್ಣಾತಾಃ ಯೇ ಶೀಲಿತನಿಘಂಟವಃ ।

ತೇಷಾಮೇವಾಧಿಕಾರೋಸ್ಯ ಗ್ರಂಥಸ್ಯ ಪರಿಶೀಲನೇ ॥