ಅದ್ಭುತ ದರ್ಪಣ

ಮಹಾದೇವಕವಿ, ರಾಮಭದ್ರದೀಕ್ಷಿತನ ಸಮಕಾಲಿಕ; ಅವನು ‘ಅದ್ಭುತದರ್ಪಣ’ ವೆಂಬ ಹತ್ತು ಅಂಕಗಳ ಒಂದು ನಾಟಕವನ್ನು ಬರೆದಿದ್ದಾನೆ. ಇದರಲ್ಲಿ ಅಂಗದಸಂಧಾನದಿಂದ ಹಿಡಿದು ಮುಂದಿನ ರಾಮಾಯಣದ ಕಥೆಯೆಲ್ಲಾ ಇದೆ. ರಾಮಲಕ್ಷ್ಮಣರು ದೂರದಿಂದಲೇ “ಅದ್ಭುತಮಣಿದರ್ಪಣ” ದಲ್ಲಿ ರಾವಣನ ಮತ್ತು ತಮ್ಮ ಕಡೆಯ ಸೈನಿಕರ ಕಾರ್ಯಗಳನ್ನು ನೋಡುವುದರಿಂದ ಕವಿ ಈ ನಾಟಕಕ್ಕೆ ಈ ಹೆಸರು ಕೊಟ್ಟಿದ್ದಾನೆ. ಇದರ ತುಂಬ ಬರಿಯ ರಾಕ್ಷಸರ ಮಾಯೆ. ಮೊದಲ ಭಾಗದಲ್ಲಿ ಶಂಬರನೆಂಬ ರಾಕ್ಷಸನು ನಾನಾ ರೂಪದಿಂದ ರಾಮಾದಿಗಳೆಲ್ಲರನ್ನೂ ಭ್ರಾಂತಿಗೊಳಿಸುವನು. ಕೊನೆಯಲ್ಲಿ ತ್ರಿಜಟೆ ಸರಮೆಯರು ಸೀತೆಯ ಮುಂದೆ ರಾಮಲಕ್ಷ್ಮಣರಿಗೂ ರಾಕ್ಷಸರಿಗೂ ಅದ ಯುದ್ಧವನ್ನು ಮಾಯಾನಾಟಕವಾಗಿ ತೋರಿಸುತ್ತಾರೆ. ಕವಿ, ರಾಮನ ಔದಾರ್ಯ ಲಕ್ಷ್ಮಣನ ಔದ್ಧತ್ಯ ಸೀತೆಯ ಪಾತಿವ್ರತ್ಯಗಳನ್ನು ತೋರಿಸಿದ್ದೇನೆಂದೂ, ಸಾರಾಸಾರವಿವೇಕವೂ ಶಬ್ದಾರ್ಥಾದಿಶಾಸ್ತ್ರವ್ಯುತ್ಪತ್ತಿಯೂ ಇರುವವರು “ಕವಿ ಮಂಡಲೇಶ್ವರ ಮಹಾದೇವ” ನ ವೈಖರಿಯನ್ನೂ ವೈದಗ್ಧ್ಯವನ್ನೂ ಮೆಚ್ಚುತ್ತಾರೆಂದೂ ಹೇಳಿಕೊಂಡಿದ್ದಾನೆ. ಆದರೆ ಇದು ಬರಿಯ ಆಸೆ. ರಾಮಾಯಣ ನಾಟಕಗಳಲ್ಲಿ ಈ ಗ್ರಂಥ ಕೇವಲ ಕೀಳು; ಕಲ್ಪನೆ ಕ್ಲಿಷ್ಟ; ಕಥೆ ಶುಷ್ಕ; ಮಾತಿನಲ್ಲಿ ನಯವಿಲ್ಲ; ಪಾತ್ರಗಳಲ್ಲಿ ಸತ್ತ್ವವಿಲ್ಲ; ರಾಮನು ಮರುಳನ ಹಾಗೂ ಮಹೋದರನು ವಿದೂಷಕನ ಹಾಗೂ ತೋರುತ್ತಾರೆ. ಸಾಧಾರಣವಾ ರಾಮನಾಟಕಗಳಲ್ಲಿ ವಿದೂಷಕನು ಬರುವುದಿಲ್ಲ. ಪದ್ಯ ಸಂಖ್ಯೆ ೨೮೯.

ಅಂಜನಾ ಪವನಂಜಯ, ಅದ್ಭುತ ರಾಘವ, ಅಭಿನವ ರಾಘವಾನಂದ, ಅಭಿರಾಮಮಣಿ, ಆನಂದ ರಾಘವ, ಉದಾತ್ತ ರಾಘವ, ಉನ್ಮತ್ತ ರಾಘವ, ಕುಶಕುಮುದ್ವತೀಯ, ಕುಶಲವ ವಿಜಯ, ಕುಶಲವೋದಯ, ಚಲಿತ ರಾಘವ, ಜಾನಕೀಪರಿಣಯ (೩), ದರ್ಪಶಾತನ, ಬಾಲಚರಿತ, ಮುದಿತರಾಘವ, ಮೈಥಿಲೀ ಪರಿಣಯ, ಮೈಥಿಲೀಯ, ರಘುವಿಲಾಸ, (ರಘುವಿಲಾಪ?), ರಘುನಾಥ ವಿಲಾಸ, ರಘುವೀರ ಚರಿತ, ರಾಘವಾನಂದ, ರಾಘವಾಭ್ಯುದಯ (೪), ರಾಮಚರಿತ, ರಾಮಚಂದ್ರನಾಟಕ, ರಾಮ ನಾಟಕ, ರಾಮರಾಜ್ಯಾಭಿಷೇಕ. ರಾಮಾನಂದ, ರಾಮಾಭ್ಯುದಯ, ರಾಮಾಯಣ ನಾಟಕ, ರಾಮಾವದಾನ, ವಿಜಯೇಂದಿರಾ ಪರಿಣಯ, ಸ್ವಪ್ನ ದಶಾನನ, ಸೀತಾದಿವ್ಯಚರಿತ, ಸೀತಾನಂದ, ಸೀತಾರಾಘವ ನಾಟಕ, ಸೀತಾವಿವಾಹ ಸುಂದರ ಚರಿತ — ಇವು ಈಗ ನಮಗೆ ತಿಳಿದು ಬಂದಿರುವ ಇತರ ರಾಮಾಯಣ ಕಥಾನಾಟಕಗಳು.