ರಾಮಾಯಣದ ಕಥೆಯ ಮೇಲೆ ಬರೆದ ನಾಟಕಗಳು ಹೇರಳವಾಗಿವೆ. ಆದರೆ ಅವುಗಳಲ್ಲಿ ಪ್ರಾಚೀನವಾದವೂ ನಿಜವಾದ ಬೆಲೆಯುಳ್ಳವೂ ಬಹಳ ಅಪರೂಪ; ಈಗ ನಮಗೆ ತಿಳಿದಿರುವಮಟ್ಟಿಗೆ ಭಾಸನ ‘ಪ್ರತಿಮಾನಾಟಕ’ ವನ್ನು ಬಿಟ್ಟರೆ, ಅದೇ ಸಂಪ್ರದಾಯದಲ್ಲಿ ಬರೆದ ತಕ್ಕಮಟ್ಟಿನ ಒಳ್ಳೆಯ ರಾಮನಾಟಕ “ಕುಂದಮಾಲಾ.” ಭವಭೂತಿಗಿಂತ ಮುಂದೆ ಬಂದ ರಾಮಾಯಣ ನಾಟಕಕರ್ತರು ಬಹುಮಟ್ಟಿಗೆ ಅವನ ಅನುಕಾರಿಗಳು. ಅವರಲ್ಲಿ ಪಾಂಡಿತ್ಯ ಹೆಚ್ಚು, ರಸಿಕತೆ ಕಡಮೆ.
ರಾಮಾಯಣ ನಾಟಕಗಳು ಅನೇಕವಿದ್ದರೂ ಅವುಗಳಲ್ಲಿ ಬಹು ಗ್ರಂಥಗಳ ವಿಚಾರವಾಗಿ ನಮಗೆ ಗೊತ್ತಿರುವುದು ಅವುಗಳ ಹೆಸರು ಮಾತ್ರ; (ಪ್ರಾಯಿಕವಾಗಿ ಈ ಹೆಸರುಗಳಿಂದ ಅವುಗಳ ಕಥಾವಸ್ತುವನ್ನು ಊಹಿಸಬಹುದು.) ಮಿಕ್ಕ ಕೆಲವು ಇನ್ನೂ ಮುದ್ರಿತವಾಗಿಲ್ಲ. ಇದಕ್ಕೆ ಕಾರಣ ಸಾಧಾರಣವಾಗಿ ಅವುಗಳ ನಿಸ್ಸಾರತೆ. ಆದ್ದರಿಂದ ಪ್ರಸಿದ್ಧವೂ ಮುದ್ರಿತವೂ ಆದ ಕೆಲವು ರಾಮ ನಾಟಕಗಳ ಸ್ವರೂಪವನ್ನು ಮಾತ್ರ ಮುಂದೆ ವಿವರಿಸಿ ಮಿಕ್ಕವುಗಳನ್ನು ಸುಮ್ಮನೆ ಪಟ್ಟಿಮಾಡಿ ಕೊಟ್ಟಿದೆ. ಅವುಗಳ ವಿಚಾರವಾಗಿ ದೊರೆತಿರುವ ಅಂಶಗಳನ್ನು ಅನುಬಂಧದಲ್ಲಿ ಆಯಾ ಹೆಸರಿನ ಮುಂದೆ ಕಾಣಬಹುದಾಗಿದೆ.