೦೧ ಈಚಿನ ರೂಪಕಗಳು ಮತ್ತು ಉಪರೂಪಕಗಳು

೦೧ ಈಚಿನ ರೂಪಕಗಳು ಮತ್ತು ಉಪರೂಪಕಗಳು

ಕ್ರಿಸ್ತಶಕ ಹತ್ತು-ಹನ್ನೆರಡನೆಯ ಶತಮಾನಗಳ ಹೊತ್ತಿಗೆ ಸಂಸ್ಕೃತ ಸಾಹಿತ್ಯವು ಹೊಡೆಬಿಟ್ಟು ತೆನೆಯಾಗಿ ಕಾಳಾದ ಪಯಿರಿನಂತೆ ಒಣಗುವುದಕ್ಕೆ ಮೊದಲಾಯಿತು. ಆದ್ದರಿಂದ ಸಂಸ್ಕೃತ ನಾಟಕ ಚರಿತ್ರೆಯ ಈ ಮುಂದಿನ ಭಾಗವು ಅದರ ಕ್ಷೀಣಸ್ಥಿತಿಯ ಚರಿತ್ರೆ. ಹಿಂದಿನ ಭಾಗಲದಲಿಯೇ ಕ್ಷೀಣಗತಿಯ ಚಿಹ್ನೆಗಳು ಕಾಣಿಸಿಕೊಳ್ಳುವುದಕ್ಕೆ ಆರಂಭವಾದರೂ ಇಲ್ಲಿಂದ ಮುಂದಕ್ಕೆ ಅವು ಸ್ಪಷ್ಟವಾಗುತ್ತವೆ, ಪ್ರಬಲವಾಗುತ್ತವೆ. ಅವುಗಳಲ್ಲಿ ಕಲ್ಪನೆ ರಸ ಸರಳತೆ ಸದ್ರುಚಿಗಳಿಗೆ ಬದಲಾಗಿ ಕ್ರಮೇಣ ಅನುಕರಣ ಚಮತ್ಕಾರ ಪಾಂಡಿತ್ಯ ಕುರುಚಿಗಳು ಬೆಳೆಯುತ್ತ ಹೋಗುತ್ತವೆ. ಹೀಗೆ ಒಂದು ವಿಧದಲ್ಲಿ ಸಂಸ್ಕೃತ ಸಾಹಿತ್ಯ ಕ್ಷಯಿಸಿದರೂ ಇನ್ನೊಂದು ವಿಧದಲ್ಲಿ ಕೃತಕ ಜೀವಪೋಷಣೆಯಾಗಿ ಇಂದಿಗೂ ಅದು ಬದುಕಿ ಬೆಳೆಯುತ್ತಲೇ ಇದೆ; ಅದರಲ್ಲಿ ಕಾವ್ಯ ನಾಟಕಗಳು ಈಗಲೂ ಹುಟ್ಟುತ್ತಲೇ ಇವೆ. ಆದರೆ ಒಟ್ಟಿನ ಮೇಲೆ ಅವು ನಿರ್ಜೀವ, ನಿಸ್ಸತ್ವ, ನೀರಸ.

ಈ ಕ್ಷೀಣಗತಿಗೆ ಕೀತ್ ಪಂಡಿತರು ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ (ಪುಟ ೨೪೨). ಅವುಗಳನ್ನು ಹೀಗೆ ಸಂಗ್ರಹಿಸಬಹುದು; ಕವಿಗಳು ಸಾಧಾರಣವಾಗಿ ಆಸ್ಥಾನ ಪಂಡಿತರಾಗಿದ್ದು ಪಂಡಿತರು ಮೆಚ್ಚುವಂತೆ ಪ್ರೌಢವಾಗಿ ಬರೆಯುವ ಸಂಪ್ರದಾಯವನ್ನು ಹಾಕುತ್ತ ಬಂದರು. ಆದ್ದರಿಂದ ಅವರ ಕೃತಿಗಳು ಪೆಡಸಾದವು. ಮುಸಲ್ಮಾನರು ಈ ದೇಶಕ್ಕೆ ದಾಳಿಯಿಟ್ಟು ಬರಲು, ಕ್ರಮವಾಗಿ ಹಿಂದೂ ಸಂಸ್ಕೃತಿಯಲ್ಲಿ ಆದರವುಳ್ಳ ಉದಾರಿಗಳೂ ಆಶ್ರಯದಾತರೂ ಆದ ರಾಜರು ಕ್ಷೀಣವಾದರು. ದೇಶಭಾಷೆಗಳು ಬೆಳೆಯುತ್ತ ಬಂದ ಹಾಗೆ ಅವುಗಳಿಗೂ ಸಂಸ್ಕೃತ ಪ್ರಾಕೃತಗಳಿಗೂ ದೂರ ಹೆಚ್ಚಾಯಿತು. ಜನಸಾಮಾನ್ಯಕ್ಕೆ ಅವು ತಿಳಿಯುವುದು ಕಷ್ಟವಾಗುತ್ತ ಬಂತು; ಪಾಂಡಿತ್ಯ ಹೆಚ್ಚಾಗುತ್ತ ನಿಯಮಾನುಸರಣೆ ಸಂಪ್ರದಾಯಪರಿಪಾಲನೆಗಳು ಹೆಚ್ಚಾದವು; ಸ್ವಾತಂತ್ರ್ಯ, ವ್ಯಕ್ತಿತ್ವ, ವೈವಿದ್ಯ ಜೀವಕಳೆಗಳು ಕುಗ್ಗಿದುವು.

ಇಲ್ಲಿಂದ ಮುಂದೆ ಹುಟ್ಟಿದ ನಾಟಕಗಳು ನೂರಾರು. ಆದರೆ ಅವೆಲ್ಲದರ ವಿಸ್ತೃತ ಪರಿಶೀಲನೆ ಅಸಾಧ್ಯ, ಅನಾವಶ್ಯಕ. ಆದರೂ ಅವುಗಳ ವಿಷಯ ಸ್ವರೂಪಗಳು ಸ್ಥೂಲವಾಗಿಯಾದರೂ ತಿಳಿಯಲೆಂದು ಮುಂದೆ ಅವುಗಳ ವಿಚಾರವನ್ನು ಸಂಕ್ಷೇಪಿಸಿ ಬರೆದಿದೆ.

ಇದಕ್ಕೆ ಮುಂಚೆ, ಹತ್ತನೆಯ ಶತಮಾನಕ್ಕೆ ಹಿಂದಿದ್ದ ಇತರ ನಾಟಕ ಕರ್ತರ ವಿಚಾರವಾಗಿ ಒಂದೆರಡು ಮಾತು ಹೇಳಬೇಕು. ಅವರು ಅಷ್ಟು ಪ್ರಸಿದ್ಧರಲ್ಲ; ಅವರೆಲ್ಲರ ಕೃತಿಗಳೂ ದೊರೆತಿಲ್ಲ; ಅವು ಇರುವವೂ ಕೆಲವು ಮಾತ್ರ. ಇಂಥವರಲ್ಲಿ ಚಂದ್ರ ಅಥವಾ ಚಂದ್ರಗೋಮಿ(?) ಪ್ರಾಚೀನನೆಂದು ತೋರುತ್ತದೆ. ಇವನ ಕಾಲ ಸುಮಾರು ಆರನೆಯ ಶತಮಾನವಿರಬಹುದು. ಇವನು ‘ಲೋಕಾನಂದ’ ವೆಂಬ ಬೌದ್ಧ ನಾಟಕವನ್ನು ಬರೆದಿದ್ದಂತೆಯೂ ಅದರಲ್ಲಿ ಮಣಿಚೂಡನೆಂಬ ದಾನವೀರನು ಒಬ್ಬ ಬ್ರಾಹ್ಮಣನಿಗೆ ತನ್ನ ಹೆಂಡತಿ ಮಕ್ಕಳನ್ನು ದಾನಮಾಡಿದುದಾಗಿರುವಂತೆಯೂ ತಿಳಿಯುತ್ತದೆ. ಮಹೇಂದ್ರ ವಿಕ್ರಮವರ್ಮನು ಹರ್ಷನ ಸಮಕಾಲಿಕ; ಅವನ ‘ಮತ್ತ ವಿಲಾಸ’ ವು ನಮಗೆ ಈಗ ದೊರೆತಿರುವ ಪ್ರಹಸನಗಳಲ್ಲೆಲ್ಲಾ ಪ್ರಾಚೀನವಾದದ್ದು. ಕಲಿಂಜರಪತಿಯಾದ ಭೀಮಟನು (ಸುಮಾರು ೯೦೦) ‘ಸ್ವಪ್ನದಶಾನನ’ ಮುಂತಾದ ಐದು ನಾಟಕಗಳನ್ನು ಬರೆದಿದ್ದಂತೆ ರಾಜಶೇಕರನದೆಂದು ಉಕ್ತವಾಗುವ ಒಂದು ಶ್ಲೋಕದಿಂದ ಗೊತ್ತಾಗುತ್ತದೆ. ಆನಂದವರ್ಧನನ ಉದಾಹರಣೆಯಿಂದ ಭವಭೂತಿಯ ಪೋಷಕನಾದ ಯಶೋವರ್ಮನು ‘ರಾಮಾಭ್ಯುದಯ’ ನಾಟಕವನ್ನೂ, ಅನಂಗಹರ್ಷಮಾತ್ರ ರಾಜನು (೮ನೆಯ ಶತಮಾನ?) ‘ತಾಪಸ ವತ್ಸರಾಜಚರಿತ’ ವೆಂಬ ನಾಟಕವನ್ನೂ, ದಶರೂಪಾವಲೋಕಕಾರನು ಉದಾಹರಿಸಿರುವುದರಿಂದ ಮಾಯುರಾಜನು (೯ನೆಯ ಶತಮಾನ?) ‘ಉದಾತ್ತರಾಘವ ನಾಟಕ’ ವನ್ನೂ ಬರೆದನೆಂದು ತಿಳಿದುಬರುತ್ತದೆ.

ಸಂಸ್ಕೃತ ದೃಶ್ಯಕಾವ್ಯಗಳಲ್ಲಿ ಹಿಂದಿನಿಂದ ಹಲವು ಭೇದಗಳಿದ್ದರೂ ಅವುಗಳಲ್ಲೆಲ್ಲಾ “ನಾಟಕ” ಕ್ಕೆ ಪ್ರಾಧಾನ್ಯ ಪ್ರಾಚುರ್ಯಗಳು ಬಂದುವು. ಇದುವರೆಗೆ ವಿಮರ್ಶಿಸಿದವುಗಳಲ್ಲಿ ನಾಟಕಗಳೇ ಹೆಚ್ಚು; ಮುಂದೆ ಬರುವವುಗಳಲ್ಲಿಯೂ ಅವೇ ಹೆಚ್ಚು; ಆದ್ದರಿಂದಲೂ, ರೂಪಕ ಜಾತಿಗಳಲ್ಲಿ ಕ್ರಮಪ್ರಾಪ್ತವಾಗಿ ಮೊದಲು ಬರುವುದರಿಂದಲೂ, ಇಲ್ಲಿ “ನಾಟಕ” ಗಳನ್ನೇ ಮೊದಲು ತೆಗೆದುಕೊಂಡು, ಅವುಗಳನ್ನು ವಿಷಯಸ್ವರೂಪಾನುಸಾರವಾಗಿ ವಿಂಗಡಿಸಿ ಅವುಗಳ ಯೋಗ್ಯತೆ ಸ್ಥಳಾವಕಾಶ ಇವುಗಳಿಗೆ ತಕ್ಕಂತೆ ನಿರೂಪಿಸಿದೆ.