೦೬ ಕೃಷ್ಣಮಿಶ್ರ

(ಕ್ರಿ.ಶ. ೧೧ನೆಯ ಶತಮಾನ)

“ಪ್ರಬೋಧಚಂದ್ರೋದಯ’ ದ ಕರ್ತನಾದ ಕೃಷ್ಣಮಿಶ್ರನ ಕಾಲ ೧೧ನೆಯ ಶತಮಾನದ ಉತ್ತರಾರ್ಧವೆಂದು ಹೇಳಬಹುದು. ಏಕೆಂದರೆ, ಚೇದಿ ರಾಜನಾದ ಕರ್ಣನು ಕೀರ್ತಿವರ್ಮನನ್ನು ಸೋಲಿಸಿ (ಅವನ ರಾಜ್ಯವನ್ನು ಆಕ್ರಮಿಸಿ)ರಲು ಅವನನ್ನು ಗೋಪಾಲನು ಜಯಿಸಿ ಕೀರ್ತಿವರ್ಮನನ್ನು ಸ್ವರಾಜ್ಯದಲ್ಲಿ ಪ್ರತಿಷ್ಠಿಸಿದಂತೆಯೂ, ಆ ಯುದ್ಧದ ಗದ್ದಲ ಕಳೆದ ಮೇಲೆ ಶಾಂತರಸ ಪ್ರಧಾನವಾದ ‘ಪ್ರಬೋಧ ಚಂದ್ರೋದಯ’ ವು ಅವನ ಆಜ್ಞೆಯ ಪ್ರಕಾರ ಕೀರ್ತಿವರ್ಮನ ಮುಂದೆ ಅಭಿನಯಿಸಲ್ಪಟ್ಟಂತೆಯೂ ಈ ನಾಟಕದ ಪ್ರಸ್ತಾವನೆಯಿಂದ ತಿಳಿದುಬರುತ್ತದೆ. ಈ ಕೀರ್ತಿವರ್ಮನ ಕಾಲ ಸುಮಾರು ೧೦೯೮; ಕರ್ಣನ ಕಾಲ ಸುಮಾರು ೧೦೮೨. ಗೋಪಾಲನು ಯಾರೋ ಗೊತ್ತಾಗುವುದಿಲ್ಲ. ವ್ಯಾಖ್ಯಾನಕರ್ತನಾದ ಮಹೇಶ್ವರನು ಹೇಳುವಂತೆ ಅವನು ಕೀರ್ತಿವರ್ಮನ ಸೇನಾಪತಿಯಾಗಿರಲಾರನು. ಏಕೆಂದರೆ, ಅವನು “ಸಕಲ ಸಾಮಂತಚಕ್ರಚೂಡಾಮಣಿ…ನೀರಾಜಿತ ಚರಣ ಕಮಲ” ನೆಂದೂ ಕೀರ್ತಿವರ್ಮನು ಅವನಿಗೆ “ಸಹಜಸುಹೃತ್” ಎಂದೂ ಉಕ್ತವಾಗಿದೆ. ಆದ್ದರಿಂದ ಅವನೂ ಒಬ್ಬ ರಾಜನೇ ಆಗಿರಬಹುದು. ಕೃಷ್ಣಮಿಶ್ರನು ಒಬ್ಬ ಯತಿಯೆಂದೂ ವೇದಾಂತ ಹಿಡಿಯದ ಕಾವ್ಯಪ್ರಿಯನಾದ ತನ್ನ ಶಿಷ್ಯನೊಬ್ಬನಿಗಾಗಿ ವೇದಾಂತತತ್ತ್ವವನ್ನು ಹೀಗೆ ನಾಟಕಮಾಡಿದನೆಂದೂ ಒಂದು ಹೇಳಿಕೆ ಇದೆ. ಅಶ್ವಘೋಷನು ಇಂಥ ಉದ್ದೇಶದಿಂದ ಕಾವ್ಯ ಬರೆದದ್ದುಂಟು; ಅದನ್ನು ಅವನೇ ಹೇಳಿದ್ದಾನೆ (ಪುಟ ೬೧). ಆದರೆ ಇದು ಕೃಷ್ಣಮಿಶ್ರನ ವಿಷಯದಲ್ಲಿ ಎಷ್ಟು ನಿಜವೋ ಹೇಳುವುದಕ್ಕಾಗುವುದಿಲ್ಲ. ‘ಪ್ರಬೋಧ ಚಂದ್ರೋದಯ’ ವಲ್ಲದೆ ಆತನು ಮತ್ತಾವ ಗ್ರಂಥಗಳನ್ನು ಬರೆದಿದ್ದನೋ ತಿಳಿಯದು.

‘ಪ್ರಬೋಧ ಚಂದ್ರೋದಯ’ ವು ಆರು ಅಂಕಗಳ ನಾಟಕ; ಇದು ಅದರ ವಸ್ತುವಿನ ಸಂಗ್ರಹ:—

ಕಾಮರತಿಯರ ಸಂವಾದ (ವಿಷ್ಕಂಭ). ಈಶ್ವರನಿಗೆ ಅವಿದ್ಯೆಯಲ್ಲಿ ಮನಸ್ಸೆಂಬ ಮಗನು ಹುಟ್ಟಿದನು. ಅವನಿಗೆ ಪ್ರವೃತ್ತಿಯಲ್ಲಿ ಮಹಾಮೋಹಾದಿಗಳೂ ನಿವೃತ್ತಿಯಲ್ಲಿ ವಿವೇಕಾದಿಗಳೂ ಹುಟ್ಟಿದರು. ಮನಸ್ಸು ಅಹಂಕಾರವನ್ನು ಅನುವರ್ತಿಸಿ ಈಶ್ವರನನ್ನೇ ಬಂಧನದಲ್ಲಿಟ್ಟನು. ಮಹಾಮೋಹಾದಿಗಳು ಈ ಬಂಧನವನ್ನು ಬಿಗಿಪಡಿಸುತ್ತಲೂ ವಿವೇಕಾದಿಗಳು ಅವರಿಗೆ ವಿರುದ್ಧವಾಗಿಯೂ ಇದ್ದರು (೧). ಮಹಾ ಮೋಹನೂ ಅವನ ಪರಿವಾರಗಳಾದ ದಂಭಾಹಂಕಾರಾದಿಗಳೂ ಕಾಶಿಯಲ್ಲಿ ಅಧಿಕಾರ ಮಾಡುತ್ತಿರುವರು; ಚಾರ್ವಾಕನು ಬಂದು, ಕಲಿಪ್ರಭಾವದಿಂದ ಎಲ್ಲರೂ ವೇದ ಮಾರ್ಗವನ್ನು ಬಿಡುತ್ತಿರುವರೆಂದೂ, ಆದರೆ ತಮಗೆ ವಿಷ್ಣು ಭಕ್ತಿಯ ಹೆದರಿಕೆ ಇದೆ ಎಂದೂ ಮಹಾಮೋಹನಿಗೆ ವರದಿಯೊಪ್ಪಿಸುವನು. ಕೂಡಲೆ ಮಹಾಮೋಹನು ವಿಷ್ಣುಭಕ್ತಿಯನ್ನು ನಾಶಪಡಿಸಲು ಕಾಮಕ್ರೋಧಗಳನ್ನು ಕಳುಹಿಸುವನು. ಅತ್ತ ವೈರಾಗ್ಯಾದಿಗಳು ಭೇದೋಪಾಯದಿಂದ ಧರ್ಮವನ್ನು ಕಾಮನಿಂದ ಅಗಲಿಸಿದಂತೆಯೂ ಶಾಂತಿ ಮತ್ತು ಅವಳ ತಾಯಿ ಶ್ರದ್ಧೆ ಸೇರಿ ವಿವೇಕನೊಡನೆ ಉಪನಿಷದ್ದೇವಿಯನ್ನು ಸೇರಿಸಲು ಪ್ರಯತ್ನಿಸುತ್ತಿರುವಂತೆಯೂ ಮದಮಾನಗಳಿಂದ ವರದಿ ಬರುವುದು. ಆಗ ಕಾಮನು ಧರ್ಮನನ್ನು ಹಿಡಿದು ತರಬೇಕೆಂದೂ ಕ್ರೋಧಲೋಭರು ಶಾಂತಿಯನ್ನು ಜಯಿಸಬೇಕೆಂದೂ ಮಿಥ್ಯಾದೃಷ್ಟಿ ಶ್ರದ್ಧೆಯನ್ನು ಎಳೆದೊಯ್ದು ನಾಸ್ತಿಕರಲ್ಲಿ ಸೇರಿಸಬೇಕೆಂದೂ ಮಹಾಮೋಹನು ಅಪ್ಪಣೆಮಾಡುವನು (೨). ಶಾಂತಿ ತನ್ನ ತಾಯಿಯಾದ (ಸಾತ್ವಿಕ) ಶ್ರದ್ಧೆಯನ್ನ ಹುಡುಕಿಕೊಂಡು ಅಲೆಯುತ್ತಾ ಜೈನ ಬೌದ್ಧ ಸಂನ್ಯಾಸಿಗಳಲ್ಲಿ ತಾಮಸ ಶ್ರದ್ಧೆಯನ್ನೂ ಕಪಾಲಿಕನಲ್ಲಿ ರಾಜಸ ಶ್ರದ್ಧೆಯನ್ನೂ ಕಾಣುವಳು. ಇವರೆಲ್ಲರೂ ಮಹಾಮೋಹನ ಕಿಂಕರರು. ಅವರ ಸಂಭಾಷಣೆಯಿಂದ ಸಾತ್ವಿಕ ಶ್ರದ್ಧೆಯೂ ಧರ್ಮನೂ ವಿಷ್ಣು ಭಕ್ತಿಯನ್ನು ಸೇರಿ ಸಾಧುಜನರ ಹೃದಯದಲ್ಲಿ ನೆಲಸಿದ್ದರೆಂದು ಗೊತ್ತಾಗುವುದು. ಈ ಶ್ರದ್ಧಾಧರ್ಮರನ್ನು ಹಿಡಿದು ತರಲು ಕಪಾಲಿಕನು ಮಹಾಭೈರವೀ ವಿದ್ಯೆಯನ್ನು ಕಳುಹಿಸುವನು (೩) ಶ್ರದ್ಧೆ ಮೈತ್ರಿಯರ ಸಂವಾದ. ಭೈರವಿಗೆ ಸಿಕ್ಕಿದ ಧರ್ಮನನ್ನೂ ಶ್ರದ್ಧೆಯನ್ನೂ ವಿಷ್ಣು ಭಕ್ತಿ ಬಿಡಿಸಿ ಶ್ರದ್ಧೆಯನ್ನು ವಿವೇಕನಲ್ಲಿಗೆ ಕಳುಹಿಸುವಳು (ವಿಷ್ಕಂಭಕ). ವಿವೇಕ ಮಹಾರಾಜನು ವಸ್ತುವಿಚಾರವನ್ನು ಕಾಮನ ಮೇಲೂ ಕ್ಷಮೆಯನ್ನು ಕ್ರೋಧನ ಮೇಲೂ ಸಂತೋಷನನ್ನು ಲೋಭನ ಮೇಲೂ ಕಳುಹಿಸಿ ತಾನೂ ಯುದ್ಧಕ್ಕೆ ಸಜ್ಜಾಗಿ ಹೊರಟು ಕಾಶಿಯಲ್ಲಿದ್ದ ಆದಿಕೇಶವ ದೇವಾಲಯದಲ್ಲಿ ಬೀಡುಬಿಡುವನು (೪). ಚಕ್ರತೀರ್ಥದಲ್ಲಿದ್ದ ವಿಷ್ಣು ಭಕ್ತಿ ಶಾಂತಿಯರಿಗೆ ಶ್ರದ್ಧೆ ಯುದ್ಧ ವಿವರಗಳನ್ನು ತಿಳಿಸುವಳು. ವಿವೇಕನು ಜಯಹೊಂದಿ ಮಹಾಮೋಹನು ಎಲ್ಲಿಯೋ ಅಡಗಿಕೊಂಡಿರುವನು (ಪ್ರವೇಶಕ). ಮಾನಸನು ತನ್ನ ನೆಂಟರಿಷ್ಟರು ಸತ್ತ ಶೋಕದಿಂದ ಆತ್ಮಹತ್ಯಮಾಡಿಕೊಳ್ಳಬೇಕೆಂದಿರುವಾಗ, ವೈಯಾಸಿಕೀ ಸರಸ್ವತಿ ಅವನನ್ನು ಸಮಾಧಾನ ಮಾಡುವಳು. ಆಗತಾನೇ ಬಂದ ವೈರಾಗ್ಯವನ್ನೂ ವಿಷ್ಣುಭಕ್ತಿ ಕಳುಹಿಸಿದ ಮೈತ್ರಿ ಮೊದಲಾದವರನ್ನೂ ಬರಮಾಡಿಕೊಂಡು ಮಾನಸನು ಉಪಶಾಂತನಾಗುವನು (೫). ಶಾಂತಿ ಉಪನಿಷದ್ದೇವಿಯನ್ನೂ ಶ್ರದ್ಧೆ ವಿವೇಕನನ್ನೂ ಕರೆತಂದು ಸೇರಿಸುವರು. ಉಪನಿಷತ್ತು ತಾನು ಮಠಚತ್ವರಾದಿಗಳಲ್ಲಿ ಪಟ್ಟ ಕಷ್ಟಗಳನೂ ಕೊನೆಗೆ ಗೀತೆಯೊಡನೆ ಸೇರಿದ್ದನ್ನೂ ವಿವರಿಸಿ ಪುರುಷನೇ ಪರಮೇಶ್ವರನೆಂದು ತಿಳಿಸುವಳು. ಪುರುಷನು ಧ್ಯಾನಮಾಡುತ್ತಿರಲು ಪ್ರಬೋಧನು ಹುಟ್ಟಿ ಬಂದು ಅವನನ್ನು ಆಲಿಂಗಿಸುವನು. ಬಂಧನ ನೀಗುವುದು. ವಿಷ್ಣು ಭಕ್ತಿ ಬಂದು ಸಂತೋಷಿಸಿ ಆಶೀರ್ವದಿಸುವಳು.

ಹೀಗೆ ಈ ನಾಟಕದ ವಿಷಯ ಅದ್ವೈತಸಿದ್ಧಾಂತ; ಆದರೆ ಇದರಲ್ಲಿ ಮಿಕ್ಕ ದರ್ಶನಗಳೂ ಬರುತ್ತವೆ; ಜೈನ ಬೌದ್ಧ ಮುಂತಾದ ಅವೈದಿಕ ಮತಗಳು ಮಹಾಮೋಹನ ಕಿಂಕರರು; ನ್ಯಾಯ ಯೋಗ ಮೀಮಾಂಸಾದಿ ವೈದಿಕಮತಗಳು ವಿವೇಕನ ಮಿತ್ರರು; ಇವುಗಳ ಜೊತೆಗೆ ಕವಿ ಭಕ್ತಿಪಂಥವನ್ನೂ ಜೋಡಿಸಿಕೊಂಡಿದ್ದಾನೆ; ಒಂದು ವಿಧದಲ್ಲಿ ನೋಡಿದರೆ ಈ ನಾಟಕದಲ್ಲಿ ವಿಷ್ಣುಭಕ್ತಿಗೇ ಪ್ರಾಧಾನ್ಯ; ಅದು ಈ ನಾಟಕದಲ್ಲಿ ಮೊದಲಿಂದ ಕಡೆಯವರೆಗೆ ಅನುಸ್ಯೂತವಾಗಿ ಬರುತ್ತದೆ. ಇದ್ದ ಅಡ್ಡಿಗಳೂ ಬಂದ ಕಷ್ಟಗಳೂ ನಿವಾರಣೆಯಾಗಿ ಅವಶ್ಯವಾದ ಸಾಧನ ಸಂಪತ್ತಿಯೊದಗಿ ಪ್ರಬೋಧೋದಯವಾಗುವುದು ಅದರ ಪ್ರಭಾವದಿಂದಲೇ. ಪ್ರಾಯಶಃ ಕವಿ ಆಚಾರದಲ್ಲಿ ವಿಷ್ಣು ಭಕ್ತನಾಗಿದ್ದನೆಂದು ಇದರಿಂದ ಊಹಿಸಬಹುದು. ಮಿಕ್ಕ ಮತಗಳೆಲ್ಲವೂ ಗೌಣ; ಜೈನ ಬೌದ್ಧ ಕಾಪಾಲಿಕ ಮತಗಳನ್ನಂತೂ ಅವನು ತುಂಬ ಜರೆದಿದ್ದಾನೆ. ಪ್ರಾಯಶಃ ಇವು ಆಗ ಬಹು ಹೀನಸ್ಥಿತಿಯಲ್ಲಿದ್ದುವು. ವೈದಿಕ ಮತವೂ ಕ್ಷೀಣಿಸಿದ್ದು ಅದರಲ್ಲಿ ದಂಭಾಹಂಕಾರಗಳು ತುಂಬಿದ್ದಂತೆ ತೋರುತ್ತದೆ. ಆದ್ದರಿಂದ ಇವು ಬರುವೆಡೆಯಲ್ಲಿ ತೀಕ್ಷ್ಣ ಹಾಸ್ಯವಿರುತ್ತದೆ; ಹಾಸ್ಯ ಪಕ್ಷಪಾತಿಗಳಿಗೆ ಈ ನಾಟಕದಲ್ಲಿ ವಿದೂಷಕನಿಲ್ಲವೆನ್ನಿಸುವುದಿಲ್ಲ. ಇದು ದಂಭನ ಮಾತು—

ಸದನಮುಪಗತೋಹಂ ಪೂರ್ವಮಂಭೋಜಯೋನೇಃ

ಸಪದಿ ಮುನಿಭಿರುಚ್ಚೈ ರಾಸನೇಷೂಜ್ಝಿತೇಷು ।

ಸಶಪಥಮನುನೀಯ ಬ್ರಹ್ಮಣಾ ಗೋಮಯಾಂಭಃ

-ಪರಿಮೃಜಿ ನಿಜೋರಾವಾಶು ಸಂವೇಶಿತೋಸ್ಮಿ ॥ (II. ೧೦)

ಮಿಕ್ಕ ಪಾತ್ರಗಳ ಮಾತೂ ಹೀಗೇ ಅನುರೂಪವಾಗಿದ್ದು ಆಯಾ ಪಾತ್ರಗಳನ್ನು ಖಚಿತವಾಗಿ ಚಿತ್ರಿಸುತ್ತವೆ. ಅವು ವಸ್ತುತಃ ಆಕಾರವಿಲ್ಲದ ಗುಣಗಳೂ ಧರ್ಮಗಳೂ ಆದರೂ, ರಂಗದ ಮೇಲೆ ಬಂದಾಗ ಆಯಾ ಗುಣಾವಲಂಬಿಗಳೂ ಧರ್ಮಾನುಯಾಯಿಗಳೂ ಆದ ವ್ಯಕ್ತಿಗಳಾದುದರಿಂದ ದರ್ಶನವು ದೃಶ್ಯಕಾವ್ಯವಾಗುತ್ತದೆ; ವಸ್ತುವಿನಲ್ಲಿ ಕ್ರಿಯೆ ಬರುತ್ತದೆ. ಆದರೆ ಇದು ಎರಡು ಮೂರನೆಯ ಅಂಕಗಳಲ್ಲಿ ಮಾತ್ರ. ಮಿಕ್ಕೆಡೆಗಳಲ್ಲಿ ಕ್ರಿಯೆ ಕಡಮೆ, ಮಾತು ಹೆಚ್ಚು; ವಿಷಯ ಚೆನ್ನಾಗಿ ಗ್ರಹಿಕೆಯಾಗಿಲ್ಲದಿದ್ದರೆ ಬೇಸರವಾಗುತ್ತದೆ. ಒಟ್ಟಿನ ಮೇಲೆ ವೇದಾಂತಸಾರ ಸಂಗ್ರಹವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಇಷ್ಟು ಸ್ವಲ್ಪಾವಕಾಶದಲ್ಲಿ ಇಷ್ಟು ಸ್ಪಷ್ಟವಾಗಿ ರಸವತ್ತಾಗಿ ಮಾಡಿರುವುದರಲ್ಲಿ ಕವಿ ಅಪೂರ್ವ ಸಾಮರ್ಥ್ಯವನ್ನು ತೋರಿಸಿದ್ದಾನೆಂದು ಹೇಳಬಹುದು. ಇದನ್ನು ತಿಳಿಯಬೇಕಾದರೆ ಅವನ ಅನಂತರ ಬಂದ ಈ ನಾಟಕದ ಅನುಕರಣಗಳನ್ನು ನೋಡಬೇಕು. ಅವು ನೀರಸ, ವಿಸ್ತೃತ.

ಈ ನಾಟಕವು ಶಾಂತರಸ ಪ್ರಧಾನವೆಂದು ಪ್ರಸ್ತಾವನೆಯಲ್ಲಿ ಉಕ್ತವಾಗಿದೆ; ವೇದಾಂತದ ಉದ್ದೇಶ ಪ್ರಯೋಜನಗಳೇನೋ ಶಾಂತಿಯೇ; ಆದರೂ ರಂಗದ ಮೇಲೆ ಕಾಮರತಿಯರ ಸಂಭಾಷಣೆ ಕಾಪಾಲಿಕಾದಿಗಳ ಕೂಟ ಇತ್ಯಾದಿ ದೃಶ್ಯಗಳಿಂದ ವಿಟಶೃಂಗಾರವು ವಿಕಟಹಾಸ್ಯವೂ ಉದ್ಬುದ್ಧವಾಗಿ ಮುಂದಿನ ಅಂಕಗಳಲ್ಲಿ ಜನಿಸಬಹುದಾದ ಶಾಂತಕ್ಕಿಂತಲೂ ಹೆಚ್ಚು ಸ್ಥಾಯಿಯಾಗಿ ನಿಲ್ಲುವಂತೆ ತೋರುತ್ತದೆ. ಮಹಾಭಾರತದಲ್ಲಿ ಪ್ರಧಾನರಸವು ಶಾಂತವೆನ್ನಬಹುದಾದರೆ ಇದರಲ್ಲಿಯೂ ಶಾಂತವಿದೆ ಎನ್ನಬಹುದು; ಕವಿ ಮಹಾಭಾರತ ಯುದ್ಧವನ್ನೂ ದಂಡನೀತಿಯನ್ನೂ ಉದ್ದಕ್ಕೂ ತನ್ನ ಮನಸ್ಸಿನಲ್ಲಿಟ್ಟುಕೊಂಡಿರುವಂತಿದೆ; ಅನೇಕ ಸಣ್ಣ ದೊಡ್ಡ ಅಂಶಗಳಲ್ಲಿ ಇದನ್ನು ನೋಡಬಹುದು. ಜ್ಞಾತಿಮಾತ್ಸರ್ಯ, ಕಕ್ಷಿಪ್ರತಿಕಕ್ಷಿಗಳು, ರಾಯಭಾರಿಗಳು, ಯುದ್ಧಸನ್ನಾಹ, ಸೆರೆ, ಮುತ್ತಿಗೆ, ಶತ್ರು ಒಬ್ಬನೇ ಉಳಿದು ಎಲ್ಲಿಯೋ ಅಡಗಿಕೊಳ್ಳುವುದು, ಶೋಕ, ಉದಕದಾನ, ವೈಯಾಸಿಕೀ ಸರಸ್ವತಿಯ ಸಮಾಧಾನ ಇತ್ಯಾದಿ. ಇಂಥ ಸಂದರ್ಭಗಳಲ್ಲಿ ಇದರ ಅಲ್ಪವಾದ ಅಂಶಗಳಿಗೂ ಭಾರತದ ಘನ ಸನ್ನಿವೇಶಗಳಿಗೂ ಹೋಲಿಕೆ ತೋರಿ ಹೀನೋಪಮೇಯಕ್ಕೆ ಮಹೋಪಮಾನವನ್ನು ಕೊಟ್ಟಾಗ ಆಗುವ ವಿನೋದವು ಆಗಬಹುದು (ಅಂಕ IV, ೧೪ ಇತ್ಯಾದಿ). ಆದರೆ ಕವಿಗೆ ಈ ಉದ್ದೇಶವಿರಲಾರದು.

ಈ ಜಾತಿಯ ಧಾರ್ಮಿಕ ನಾಟಕಕ್ಕೆ ಸಂಸ್ಕೃತ ಸಾಹಿತ್ಯದಲ್ಲಿ ಇದೇ ಮೊದಲೆಂಬ ಭಾವನೆಯಿತ್ತು; ಆದರೆ ಅಶ್ವಘೋಷನು ಇಂಥ ಒಂದು ನಾಟಕವನ್ನು ಬರೆದಿದ್ದನೆಂದು ಈಗ ಗೊತ್ತಾಗಿದೆ (ಪುಟ ೬೭). ಅಲ್ಲಿಂದ ಈ ಪದ್ಧತಿ ಬಿಟ್ಟುಹೋಗಿದ್ದು ಕೃಷ್ಣಮಿಶ್ರನು ಹೊಸದಾಗಿ ಆರಂಭಿಸಿದನೋ, ಇಲ್ಲವೇ ಅಶ್ವಘೋಷನ ಕಾಲದಿಂದಲೂ ಅಲ್ಲೊಂದು ಇಲ್ಲೊಂದು ಇಂಥ ನಾಟಕಗಳು ಹುಟ್ಟುತ್ತಿದ್ದು ಅವು ನಷ್ಟವಾಗಿ ಹೋದುವೋ ತಿಳಿಯದು.

ಪ್ರಮಾಣ ಲೇಖನಾವಳಿ

Hultzsch and Kielhorn — Ep. Ind., I, ೨೧೭, f, ೩೨೫.

V.A. Smith — Ind. Ant., ೩೭, ೧೪೩ f.

G. Grierson — J.R.A.S., ೧೯೦೬, ೧೧೩೬ f.

ಕನ್ನಡ ಭಾಷಾಂತರಗಳು

ಕರ್ಣಾಟಕ ಪ್ರಬೋಧ ಚಂದ್ರೋದಯ ನಾಟಕಂ — ಎಂ. ಕೃಷ್ಣಪ್ಪ, ಮೈಸೂರು, ೧೯೧೦.

ಪ್ರಬೋಧ ಚಂದ್ರೋದಯ — ಎಂ.ಕೆ. ಶ್ರೀನಿವಾಸರಾಘವಾಚಾರ್ಯ, ಮೈಸೂರು, ೧೯೨೦.