(ಕ್ರಿ.ಶ. ೧೦ನೆಯ ಶತಮಾನದ ಆದಿ)
“ಚಂಡಕೌಶಿಕ” ನಾಟಕವನ್ನು ಬರೆದ ಕ್ಷೇಮೀಶ್ವರ (ಅಥವಾ ಕ್ಷೇಮೇಂದ್ರ)ನ ಕಾಲದೇಶಾದಿ ವಿಚಾರವಾಗಿ ಆ ನಟಕದ ಪ್ರಸ್ತಾವನೆಯಿಂದ ಈ ಅಂಶಗಳು ತಿಳಿದು ಬರುತ್ತವೆ— “ಕ್ಷೇಮೀಶ್ವರನು ವಿಜಯ ಪ್ರಕೋಷ್ಟನ ಮರಿಮಗ; ಅವನ ಈ ನಾಟಕವು ಮಹೀಪಾಲದೇವನ ಅಪ್ಪಣೆಯ ಪ್ರಕಾರ ಆಡಿದ್ದು; ಮಹೀಪಾಲದೇವನು ಹಿಂದೆ ಚಂದ್ರಗುಪ್ತನಾಗಿ ನಂದರನ್ನು ಧ್ವಂಸಮಾಡಿದ್ದನು; ಆಗ ನಂದರಾಗಿದ್ದವರು ಈಗ ಕರ್ಣಾಟಕ ರಾಜರಾಗಿದ್ದುದರಿಂದ ಅವರನ್ನು ಮತ್ತೆ ನಾಶಗೊಳಿಸಲು ತಾನು ಮಹೀಪಾಲದೇವನಾಗಿ ಹುಟ್ಟಿದನು.” ಈ ಮಹೀಪಾಲದೇವನು ಸುಮಾರು ಕ್ರಿ.ಶ. ೯೧೦ ರೀಮದ ೯೪೦ ರವರೆಗೆ ಕನೂಜಿನಲ್ಲಿ ಆಳಿ ರಾಜಶೇಖರನಿಗೆ ಪೋಷಕನಾಗಿದ್ದ ದೊರೆಯಾಗಿ ತೋರುತ್ತದೆ. ಇಲ್ಲಿ ಉಕ್ತನಾದ “ಕರ್ಣಾಟಕ ರಾಜ” ನು ರಾಷ್ಟ್ರಕೂಟ ರಾಜನಾದ ಇಂದ್ರನಿರಬೇಕು. ಇವನಿಗೂ ಮಹೀಪಾಲನಿಗೂ ಕ್ರಿ.ಶ. ೯೧೬ರಲ್ಲಿ ಯುದ್ಧ ನಡೆಯಿತೆಂದು ತಿಳಿದು ಬರುತ್ತದೆ. ಆದ್ದರಿಂದ ಕ್ಷೇಮೀಶ್ವರನ ಕಾಲವು ಸುಮಾರು ಹತ್ತನೆಯ ಶತಮಾನದ ಆದಿ ಎಂದು ಹೇಳಬಹುದು.
ವಿಜಯಪ್ರಕೋಷ್ಠನು ಯಾರೋ ಗೊತ್ತಿಲ್ಲ; ಆ ಕಾಲಕ್ಕೆ ಅವನು ಬಹಳ ಪ್ರಸಿದ್ಧನಾಗಿರಬೇಕು; ಆದ್ದರಿಂದ ಕ್ಷೇಮೀಶ್ವರನು ತನ್ನ ತಂದೆ ತಾತಂದಿರ ಹೆಸರನ್ನು ಬಿಟ್ಟು ಮುತ್ತಾತನ ಹೆಸರನ್ನು ಹೇಳಿಕೊಂಡಿದ್ದಾನೆ. ಆದರೆ ಈಗ ಮರಿಮಗನ ಕೀರ್ತಿಯಿಂದ ಮುತ್ತಾತನ ಹೆಸರು ಜ್ಞಾಪಕದಲ್ಲಿರುವಂತಾಗಿದೆ.
ಕ್ಷೇಮೀಶ್ವರನು ‘ಚಂಡಕೌಶಿಕ’ ವಲ್ಲದೆ, ‘ನೈಷಧಾನಂದ’ ವೆಂಬ ಏಳು ಅಂಕದ ಮತ್ತೊಂದು ನಾಟಕವನ್ನು ಬರೆದಂತೆ ಗೊತ್ತಾಗಿದೆ. ಇದು ಇನ್ನೂ ಅಚ್ಚಾಗಿಲ್ಲ; ಇದರ ವಿಷಯವು ನಳಚಕ್ರವರ್ತಿಯ ಕಥೆಯಾಗಿರಬೇಕು.
‘ಚಂಡಕೌಶಿಕ’ ವು ಐದು ಅಂಕಗಳ ನಾಟಕ; ಇದು ಅದರ ಕಥಾ ಸಂಗ್ರಹ-
ಉತ್ಪಾತಗಳ ಶಾಂತಿಗಾಗಿ ಕುಲಪತಿಗಳು ವಿಧಿಸಿದಂತೆ ರಾತ್ರಿಯೆಲ್ಲಾ ನಿಯಮದಿಂದ ಇದ್ದು ಜಾಗರಣೆ ಮಾಡಿ ಹರಿಶ್ಚಂದ್ರನು ಬೆಳಗ್ಗೆ ಹೆಂಡತಿಯನ್ನು ನೋಡಲು ಬರುವನು; ಅವಳು ಅವನನ್ನು ರಾತ್ರಿ ಕಾಣದೆ ಸಂದೇಹದಿಂದಲೂ ದುಮ್ಮಾನದಿಂದಲೂ ಇರುವಳು; ರಾಜನು ಅವಳ ಮುನಿಸನ್ನು ತಿಳುಹುವ ಹೊತ್ತಿಗೆ ಕುಲಪತಿಗಳ ಕಡೆಯಿಂದ ತಾಪಸನು ಮಂತ್ರೋದಕವನ್ನು ತರುವನು. ರಾಣಿ ತನ್ನ ಅಕಾರಣವಾದ ಸಂದೇಹಕ್ಕಾಗಿ ಮರುಗುವಳು. ವನಚರನು ಬಂದು ಹಂದಿಯ ಕಾಟವನ್ನು ಬಿನ್ನಯಿಸುವನು (೧). ವಿದ್ಯಾತ್ರಯಗಳನ್ನು ಪಡೆಯುವುದಕ್ಕಾಗಿ ಕೌಶಿಕನು ಉಗ್ರತಪಸ್ಸು ಮಾಡುತ್ತಿರಲು ಅದಕ್ಕೆ ಭಂಗ ತರಬೇಕೆಂದು ವಿಘ್ನೇಶ್ವರನು ಹಂದಿಯ ರೂಪವನ್ನು ತಾಳಿ ರಾಜನನ್ನು ಕೌಶಿಕನ ಆಶ್ರಮಕ್ಕೆ ಎಳೆದುಕೊಂಡು ಬರುವನು, (ವಿಷ್ಕಂಭಕ) ಆ ವಿದ್ಯೆಗಳ ಆರ್ತನಾದವನ್ನು ಕೇಳಿ ಓಡಿಬಂದು ರಾಜನು ಕೌಶಿಕನನ್ನು ಪಾಷಂಡನೆಂದು ಭಾವಿಸಿ ದೂಷಿಸುವನು; ಅದರಿಂದ ಅವನ ತಪೋಭಂಗವಾಗಲು, ಇನ್ನೇನು ವಶವಾಗಲಿದ್ದ ವಿದ್ಯೆಗಳು ಕೈಬಿಟ್ಟು ಹೋಗುವುವು. ದಾನ ರಕ್ಷಣಶಿಕ್ಷಣಗಳು ಕ್ಷತ್ರಿಯ ಧರ್ಮವಾದ್ದರಿಂದ ತಾನು ಹಾಗೆ ಮಾಡಿದನೆಂದು ರಾಜನು ಕೌಶಿಕನನ್ನು ಸಮಾಧಾನಪಡಿಸಲು ಯತ್ನಿಸುವನು. ಕೌಶಿಕನು “ನನಗೇನು ದಾನ ಮಾಡುವೆ?” ಎಂದು ಕೇಳಲು ರಾಜನು ಸಂತೋಷಿಸಿ “ಈ ಭೂಮಿಯೆಲ್ಲಾ ನಿಮ್ಮದು” ಎನ್ನುವನು. ಅದನ್ನೇ ಹಿಡಿದುಕೊಂಡು ಕೌಶಿಕನು ದಾನಕ್ಕೆ ದಕ್ಷಿಣೆಯನ್ನು ಕೇಳಲು ರಾಜನು ಒಂದು ತಿಂಗಳು ಗಡುವು ಮಾಡಿಕೊಂಡು ಅದನ್ನು (ಒಂದು ಲಕ್ಷ ವರಹ) ತಾನು ದಾನ ಮಾಡಿದ್ದ ಈ ಭೂಮಿಗೆ ಸೇರದ ಕಾಶಿಯಲ್ಲಿ ಸಂಪಾದಿಸಿ ಕೊಡುವುದಾಗಿ ಹೇಳುವನು. ಕೌಶಿಕನಿಗೆ ಕೋಪ ಹೆಚ್ಚಾಗಿ ಅವನನ್ನು ರಾಜ್ಯವಿಚ್ಯುತನನ್ನಾಗಿ ಮಾಡಿದಂತೆಯೇ ಸತ್ಯವಿಚ್ಯತನನ್ನಾಗಿ ಮಾಡುವೆನೆಂದು ಪ್ರತಿಜ್ಞೆ ಮಾಡುವನು (೨). ಕಾಶೀ ಪಟ್ಟಣ. ಪಾಪಪುರುಷನೂ ಭೃಂಗಿರಿಟಿಯೂ ಹರಿಶ್ಚಂದ್ರನ ಬರುವಿಕೆಯನ್ನು ತಿಳಿಸುವರು. ಹರಿಶ್ಚಂದ್ರನು ತನ್ನ ಗಡುವಿನ ಕೊನೆಯ ದಿವಸ ಮಧ್ಯಾಹ್ನ ಕಾಶಿಯನ್ನು ಸೇರಿ ತನ್ನನ್ನು ಮಾರಿಕೊಳ್ಳಬೇಕೆಂದಿರುವಷ್ಟರಲ್ಲಿ ಅವನ ಹೆಂಡತಿ ಶೈಬ್ಯೆ ಮುಂದುವರಿದು ತನ್ನನ್ನು ಮಾರಿಕೊಳ್ಳುವುದಕ್ಕೆ ಸಿದ್ಧಳಾಗುವಳು. “ಉಪಧ್ಯಾಯ” ನು ಬಂದು ಅವರ ಮೇಲಾಟವನ್ನು ನೋಡಿ ಐವತ್ತು ಸಾವಿರ ವರಹ ಕೊಟ್ಟು ಇಬ್ಬರಲ್ಲಿ ಯಾರಾದರೂ ಒಬ್ಬರು ಬನ್ನಿ ಎನ್ನುವನು. ಶೈಬ್ಯೆಯೇ ಹಣವನ್ನು ತೆಗೆದುಕೊಂಡು ಗಂಡನ ಸೆರಗಿಗೆ ಕಟ್ಟಿ ಮಗನನ್ನು ಕರೆದುಕೊಂಡು ಹೋಗುವಳು. (ವಿಶ್ವೇದೇವತೆಗಳು ಹರಿಶ್ಚಂದ್ರನಲ್ಲಿ ಕರುಣೆಯಿಂದ ಕೌಶಿಕನನ್ನು ದೂರಿ ಶಾಪ ತಂದುಕೊಳ್ಳುವರು.) ಕೌಶಿಕನ ಕಾಟವನ್ನು ತಡೆಯಲಾರದೆ ಹರಿಶ್ಚಂದ್ರನು ತನ್ನನ್ನು ಚಂಡಾಲನಿಗೆ ಮಾರಿಕೊಂಡು ದಕ್ಷಿಣೆಯ ಹಣವನ್ನು ಪೂರ್ತಿಮಾಡಿ ಅದನ್ನು ಕೌಶಿಕನಿಗೆ ಒಪ್ಪಿಸುವನು (೩). ಶ್ಮಶಾನದಲ್ಲಿ ಹರಿಶ್ಚಂದ್ರನ ಕಾವಲು. ವಿದ್ಯೆಗಳು ಪ್ರಸನ್ನರಾಗಿ ಬರಲು ಅವರನ್ನು ಅವನು ಕೌಶಿಕನ ಹತಿರಕ್ಕೇ ಕಳುಹಿಸುವನು. ಕಾಪಾಲಿಕನು ಹರಿಶ್ಚಂದ್ರನ ವಾಕ್ಸಹಾಯದಿಂದ ವಿಘ್ನಗಳನ್ನು ಗೆದ್ದು ಸಿದ್ಧಿಗಳನ್ನು ಸಾಧಿಸಿ ನಿಧಿಯನ್ನು ಹೊತ್ತು ತಂದು ಕೊಡುವನು. ಆದರೆ ಹರಿಶ್ಚಂದ್ರನು ದಾಸ್ಯದಲ್ಲಿದ್ದದ್ದರಿಂದ ಅದನ್ನು ಸ್ವೀಕರಿಸದೆ ತನ್ನೊಡೆಯನಿಗೆ ಕಳುಹಿಸುವನು (೪). (ಇತ್ತ ಪುರೋಹಿತನಿಗಾಗಿ ಹೂದರ್ಭೆಗಳನ್ನು ತರುವುದಕ್ಕೆಂದು ಹೋಗಿದ್ದ ರೋಹಿತಾಶ್ವನು ಹಾವು ಕಡಿದು ಸಾಯುವನು.) ಅವನನ್ನು ಶೈಬ್ಯೆ ಶ್ಮಶಾನಕ್ಕೆ ತೆಗೆದುಕೊಂಡು ಹೋಗಿಟ್ಟು ಗೋಳಿಡುವಾಗ ಹರಿಶ್ಚಂದ್ರನು ಅವಳಿಂದ ಮೃತ ಕಂಬಳವನ್ನು ತಗೆದುಕೊಳ್ಳುವನು. ಇಬ್ಬರೂ ಶೋಕಪರವಶರಾಗಿ, ದಾಸ್ಯದಲ್ಲಿದ್ದುದರಿಂದ ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲದೆ, ಧರ್ಮವು ಕಾಪಾಡಲಾರದೆಂದು ನಿರಾಶರಾದಾಗ, ಧರ್ಮಪುರುಷನು ಬಂದು ಅವರನ್ನು ಸಂತಯಿಸಿ ರೋಹಿತಾಶ್ವನನ್ನು ಬದುಕಿಸುವನು. ವಿದ್ಯಾಪ್ರಾಪ್ತಿಯಿಂದ ವಿಶ್ವಾಮಿತ್ರನು ಸಂತುಷ್ಟನಾಗಿ ರಾಜ್ಯವನ್ನು ಮಂತ್ರಿಗಳ ವಶಕ್ಕೆ ಬಿಟ್ಟಿದ್ದನೆಂಬುದನ್ನು ತೋರಿಸಿ ತಾನು ಕಷ್ಟಕೊಟ್ಟಿದ್ದು ಸತ್ಯಪರೀಕ್ಷೆಗೆಂದು ತಿಳಿಯಹೇಳುವನು. (ಪುರೋಹಿತನು ಮಹೇಶ್ವರನೆಂದೂ ಚಂಡಾಲನು ಧರ್ಮನೆಂದೂ ಗೊತ್ತಾಗುವುದು.) ಹರಿಶ್ಚಂದ್ರನು ತನ್ನ ಪುಣ್ಯವನ್ನು ತನ್ನ ಪ್ರಜೆಗಳಿಗೆ ದಾನಮಾಡಿ ಅವರೆಲ್ಲರೊಡನೆ ಪುಣ್ಯಲೋಕವನ್ನು ಪಡೆಯುವನು.
ಹೀಗೆ, ಈ ನಾಟಕದಲ್ಲಿರುವುದು ಹರಿಶ್ಚಂದ್ರನ ಕಥೆ; ಆದರೆ ಇದಕ್ಕೆ ಕವಿ ‘ಚಂಡಕೌಶಿಕ’ ಎಂಬ ಹೆಸರನ್ನು ಕೊಟ್ಟಿದ್ದಾನೆ. ಏಕೆಂದರೆ, ಇದರಲ್ಲಿ ಅವನು ಹರಿಶ್ಚಂದ್ರನ ಸತ್ಯಕ್ಕಿಂತಲೂ ಕೌಶಿಕನ (ಕೋಪ ಅಥವಾ)” ಚಂಡ” ತೆಯನ್ನೇ ಪ್ರಧಾನವಾಗಿಟ್ಟುಕೊಂಡಿದ್ದಾನೆ. ಕೌಶಿಕನು ಬ್ರಹ್ಮರ್ಷಿಯೆನಿಸಿಕೊಂಡಿದ್ದಾಗ್ಗೂ ಇನ್ನೂ ಅವನಲ್ಲಿ ಕಾಮಕ್ರೋಧಾದಿಗಳ ಆವೇಗ ಕಡಮೆಯಾಗದೆ ಬ್ರಹ್ಮ ವಿಷ್ಣು ಮಹೇಶ್ವರರನ್ನೂ ಮೀರಿಸಬೇಕೆಂಬ ಹುರುಪಿನಿಂದ ತಪಸ್ಸು ಮಾಡುತ್ತಿದ್ದನೆಂದೂ, ಸತ್ಯವಂತನೂ ಧರ್ಮಿಷ್ಠನೂ ಸಾತ್ವಿಕನೂ ಆದ ಹರಿಶ್ಚಂದ್ರನೇ ಅವನ ಕೈಗೆ ಸಿಕ್ಕಿ ಜೇಡನ ಬಲೆಗೆ ಸಿಕ್ಕಿದ ನೊಣದಂತೆ ನರಳಿದನೆಂದೂ ತೋರಿಸಿದ್ದಾನೆ. ರಾಜನು “ಅರಿಯದೆ ಅಪರಾಧ ಮಾಡಿದೆ” ಎಂದರೆ “ನನ್ನನ್ನು ಅರಿಯೆಯಾ?” ಎನ್ನುವನು. “ಧರ್ಮವೆಂದು ಆರ್ತರನ್ನು ರಕ್ಷಿಸಿದೆ” ಯೆಂದರೆ “ನಿನ್ನ ಧರ್ಮವೇನು?” ಎಂದು ಕೇಳುವನು. “ದಾನ, ರಕ್ಷಣೆ…” ಎಂದರೆ ಹಾಗಾದರೆ “ನನಗೆ ಏನು ದಾನಮಾಡುತ್ತೀಯೋ ಮಾಡು!” ಎನ್ನುವನು. ಅವನ ಮೇಲಿನ ಗೌರವದಿಂದ “ಪ್ರಪಂಚವೇ ತಮ್ಮದು!” ಎನ್ನಲು ಆ ಮಾತನ್ನೇ ಹಿಡಿದುಕೊಂಡು “ಆಗಲಿ, ದಕ್ಷಿಣೆಯೆಲ್ಲಿ?” ಎನ್ನುವನು. “ದಕ್ಷಿಣೆಯನ್ನು ಒಂದು ತಿಂಗಳಲ್ಲಿ ಸಂಪಾದಿಸಿ ಕೊಡುತ್ತೇನೆ” ಎಂದರೆ “ಈ ಭೂಮಂಡಲ ನನ್ನದು, ನನ್ನ ರಾಜ್ಯದಲ್ಲಿ ಸಂಪಾದಿಸಬೇಡ” ಎನ್ನುವನು. ಕಾಶಿಗೆ ಹೋಗುವ ಹೊತ್ತಿಗೆ ರಾಜನಿಗೆ ಒಂದು ತಿಂಗಳು ಹಿಡಿಯಲು, ಸಂಪಾದನೆಗೆ ಅವಕಾಶ ಕೊಡದೆ ಹೆಂಡತಿ ಮಕ್ಕಳನ್ನು ಮಾರಿಯಾದರೂ ಕೂಡಲೆ ಹಣ ಸಲ್ಲಿಸುವಂತೆ ನಿರ್ಬಂಧಿಸುವನು. ಚಂಡಾಲನ ಸೇವೆ ಮಾಡಲಾರೆನೆಂದೂ ಮಿಕ್ಕ ಹಣಕ್ಕೆ ತಮ್ಮ ಸೇವಕನಾಗುತ್ತೇನೆಂದೂ ಹೇಳಿಕೊಂಡರೆ ಒಪ್ಪದೆ ಚಂಡಾಲನಿಗೇ ದಾಸನಾಗಬೇಕೆನ್ನುವನು. ಅಂತು ಗಡುವಿನಲ್ಲಿ ಹಣ ಸಂದ ಮೇಲೆ ಮುಂದೆ ಹೋಗಲು ನೆವವಿಲ್ಲದೆ ನಿಲ್ಲಬೇಕಾಯಿತು. ಹೀಗೆ ಅವನದು ನಿಷ್ಕರುಣವಾದ ಕೋಪ, ಛಲ; ಹರಿಶ್ಚಂದ್ರನ ಕಷ್ಟದಲ್ಲಿ ಅವನು ಮರುಗುವುದಿರಲಿ, ವಿಶ್ವೇದೇವತೆಗಳು ಆಕಾಶದಲ್ಲಿ ಹೋಗುತ್ತ ಅಯ್ಯೋ ಎನ್ನಲು ಅವರು ಆ ಕ್ಷಣವೇ ಶಾಪಕ್ಕೆ ಗುರಿಯಾಗಿ ಉರುಳಿದರು. ಆದರೂ ಕೊನೆಗೆ ಅವನೇ ಪರಾಜಿತನಾದನು; ವಿದ್ಯೆಗಳನ್ನು ಉಪಯೋಗಿಸಿಕೊಳ್ಳದೆ ಹರಿಶ್ಚಂದ್ರನು ವಿಶ್ವಾಮಿತ್ರನಲ್ಲಿಗೆ ಕಳುಹಿಸಿಕೊಡಲು ಆಗ ಶಾಂತನಾಗಿ ರಾಜ್ಯವನ್ನು ಮಂತ್ರಿಗಳಿಗೆ ಒಪ್ಪಿಸಿದನು. ಅವನು ಹರಿಶ್ಚಂದ್ರನ ಸತ್ಯವನ್ನು ಪರೀಕ್ಷೆಮಾಡುವುದಕ್ಕಾಗಿ ಗೋಳಾಡಿಸಿದನೆಂದು ಧರ್ಮಪುರುಷನು ಹೇಳುವುದು ಹರಿಶ್ಚಂದ್ರನ ಕಣ್ಣೊರಸಿ ಸಮಾಧಾನ ಮಾಡುವುದಕ್ಕಾಗಿ. (ಹೀಗೆಂದುಕೊಂಡರೆ ವಸ್ತು ಪಾತ್ರರಸಗಳಲ್ಲಿ ಸಾಮಂಜಸ್ಯ ಔಚಿತ್ಯಗಳು ಬರುತ್ತವೆ.)
ಹರಿಶ್ಚಂದ್ರನ ಕಥೆ ಹಳೆಯದು, ವೈದಿಕಕಾಲದಿಂದ ಬಂದದ್ದು; ಅದು ಲೋಕಪ್ರಿಯವಾಗಿರುವುದರಿಂದ ಬೆಳೆಯುತ್ತ ಬಂದು ಮಹಾಭಾರತದ ಕೆಲವು ಪಾಠಗಳಲ್ಲಿ ಕಂಡುಬರುವ—ಬಹುಶಃ ಪ್ರಕ್ಷಿಪ್ತವಾದ—ಒಂದು ಅಗಾಧ ಪ್ರಕರಣವಾಗಿದೆ. ಅದರಲ್ಲಿ ಅತಿಶಯೋಕ್ತಿ ಅನೌಚಿತ್ಯ ಅಸಾಮಂಜಸ್ಯಗಳಿವೆ.ಲ ಕ್ಷೇಮೀಶ್ವರನ ವಸ್ತುವಿಗೆ ಈ ಕಥಾಪಾಠವು ಆಧಾರವಾಗಿರಲಾರದು. ಪ್ರಾಯಶಃ ಮಾರ್ಕಂಡೇಯ ಪುರಾಣವು ಆಧಾರವಾಗಿರಬಹುದು. ಇದರಲ್ಲಿ ವಸಿಷ್ಠ ವಿಶ್ವಾಮಿತ್ರರ ಹೋರಾಟವಾಗಲಿ, ಹೊಲತಿಯರ ವೃತ್ತಾಂತವಾಗಲಿ, ಚಂದ್ರಮತಿಯ ಮೇಲೆ ಕಾಶೀರಾಜ್ಯಪುತ್ರನನ್ನು ಕೊಂದಳೆಂಬ ಆರೋಪವಾಗಲಿ ಇಲ್ಲ. ವಿದ್ಯಾಧಿದೇವತೆಗಳು ವಿಘ್ನೇಶ್ವರ ವಿಶ್ವೇದೇವತೆಗಳು ಇವರನ್ನು ಕವಿ ಸ್ವಲ್ಪ ಹೆಚ್ಚುಕಡಮೆ ಮಾಡಿ ಉಪಯೋಗಿಸಿಕೊಂಡಿದ್ದಾನೆ. ರಾಜಸೂಯಯಾಗದ ದಕ್ಷಿಣೆಯನ್ನು ಭೂದಾನದ ದಕ್ಷಿಣೆಯಾಗಿ ತಿರುಗಿಸಿದ್ದಾನೆ. ಶ್ಮಶಾನದಲ್ಲಿ ರಾಜರಾಣಿಯರು ಮಾಡಿದ ಆತ್ಮಹತ್ಯಪ್ರಯತ್ನವನ್ನು ಇಟ್ಟುಕೊಂಡು, ಅದರಲ್ಲಿ ಶೈಬ್ಯೆ ಹರಿಶ್ಚಂದ್ರರ ಗುಣದಲ್ಲಿ ಒಂದು ಅತಿಶಯವನ್ನು ತೋರಿಸಿದ್ದಾನೆ. ರಾಜನು ಶ್ಮಶಾನದಲ್ಲಿ ನಿದ್ರೆಹೋಗಿ ಸ್ವಪ್ನ ಕಂಡನೆಂಬ ಅಂಶವನ್ನು ಬಿಟ್ಟಿದ್ದಾನೆ. ಕಾಪಾಲಿಕನು ನಿಧಿಯನ್ನು ತಂದ ಮತ್ತು ವಿದ್ಯೆಗಳು ಒಲಿದುಬಂದ ಘಟನೆಗಳನ್ನು ಕಲ್ಪಿಸಿ, ಹರಿಶ್ಚಂದ್ರನ ಪಾತ್ರವನ್ನು ಪುಷ್ಟಿಗೊಳಿಸಿದ್ದಾನೆ. ಒಟ್ಟಿನಮೇಲೆ ಪೌರಾಣಿಕ ಕಥೆಯನ್ನು ನಾಟಕ ವಸ್ತುವಾಗಿ ಮಾಡಿಕೊಳ್ಳುವುದರಲ್ಲಿ ಬಹು ನೈಪುಣ್ಯವನ್ನು ತೋರಿಸಿದ್ದಾನೆ ಎಂದು ಹೇಳಬಹುದು.
ನಾಟಕವು ಉತ್ಪಾತಶಾಂತಿಯಿಂದ ಆರಂಭವಾಗುತ್ತದೆ. ಆದ್ದರಿಂದ ಹರಿಶ್ಚಂದ್ರನ ಕಷ್ಟಪರಂಪರೆಗೆ, ಚಂಡಕೌಶಿಕನು ನಿಮಿತ್ತಮಾತ್ರನೆಂದೂ, ವಿಧಿಯೇ ಕಾರಣವೆಂದೂ ಸೂಚಿತವಾಗುತ್ತದೆ. ಶಿವಪಾರ್ವತಿಯರ ಸೇವೆಯಲ್ಲಿ ನವೆದಿದ್ದ ಭೃಂಗಿರಿಟಿಗೂ ಕೊರತೆ ತಪ್ಪಲಿಲ್ಲ—” ಪೂರ್ವಕರ್ಮ ಪರಿಪಾಕಂ ದುರ್ವಿಲಂಘ್ಯಂ.” ಹೀಗೆ ವಿಧಿ ದುರ್ನಿವಾರವೆಂದು ನಾಟಕದ ಉದ್ದಕ್ಕೂ ಅಲ್ಲಲ್ಲೇ ಪ್ರಸ್ತಾಪ ಬರುತ್ತದೆ. ಅದು ಸುಮುಖವಾಗುವ ಕಾಲಕ್ಕೆ —ಉಪಾಧ್ಯಾಯನೋ ಚಂಡಾಲನೋ—ಯಾರೋ ನಿಮಿತ್ತರಾಗುತ್ತಾರೆ. ಆದರೆ, ಈ ಮಧ್ಯೆ ಬರುವ ಹಿಂಸೆಯನ್ನು ಅನುಭವಿಸುವುದು ಎಂಥವರಿಗೂ ಕಷ್ಟ. ಆಗ ದೇವರಲ್ಲಿ ಭಕ್ತಿ ಸಡಿಲುತ್ತದೆ; ಧರ್ಮದಲ್ಲಿ ನಂಬಿಕೆ ಹೋಗುತ್ತದೆ; ನಿರಾಶೆಯಾಗುತ್ತದೆ; ಆದರೆ ಧೀರನು ಧರ್ಮಬಾಹಿರನಾಗುವುದಿಲ್ಲ. ಪರಿಣಾಮದಲ್ಲಿ ಅವನಿಗೆ ಕೇಡಿಲ್ಲ; ಒಂದಕ್ಕೆರಡಾಗಿ ಶ್ರೇಯಸ್ಸೇ ಆಗಬಹುದು; “ನಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ” —ಎಂಬುದನ್ನು ಕವಿ ಬೋಧಿಸುವಂತಿದೆ. ಭಾರತೀಯರ ನಂಬಿಕೆ ಆಚಾರ ಧಾರ್ಮಿಕವ್ಯವಹಾರ ಆಸ್ತಿಕ ಜೀವನಗಳನ್ನು ಅರಿಯದವರಿಗೆ ಈ ಕಥೆಯ ಭಾವ ಹಿಡಿಯದೆ, ನಾಟಕದ ಬೆಲೆ ಗೊತ್ತಾಗದೆ ಹೋಗಬಹುದು.
ಹೀಗೆ ಒಂದು ವಿಧದಲ್ಲಿ ಇದು ಧಾರ್ಮಿಕ ನಾಟಕವಾದರೂ, ಹರಿಶ್ಚಂದ್ರನು ಮೂರ್ತಿವಂತನಾದ ಸತ್ಯಧರ್ಮಗಳೆಂದು ಹೇಳಬಹುದಾದರೂ, ಇದರ ಪಾತ್ರಗಳು ಪ್ರಬೋಧ ಚಂದ್ರೋದಯದಲ್ಲಿರುವಂತೆ ಗುಣಧರ್ಮ ಪ್ರತಿಮೂರ್ತಿಗಳಲ್ಲ. ಗಂಡ, ಹೆಂಡತಿ, ಮಗ, ಸತ್ಯ, ಧರ್ಮ, ಕಷ್ಟ, ಸಾವು, ಶ್ಮಶಾನ ಇವು ಎಲ್ಲರಿಗೂ ಅರ್ಥವಾಗತಕ್ಕವು. ಹಿಡಿಯತಕ್ಕವು. ಆದ್ದರಿಂದ ಈ ಕಥೆ, ಈ ನಾಟಕ, ಇಷ್ಟು ಪ್ರಿಯವಾಗಿದೆ. ಕವಿಗೂ ಈ ಭಾಗ ಅನುಭವಕ್ಕೆ ಬಂದಿದ್ದು ಹಿಡಿತಕ್ಕೆ ಸಿಕ್ಕುವುದರಿಂದ ಅದನ್ನು ಹೃದಯಂಗಮವಾಗಿ ವಿವರಿಸಿದ್ದಾನೆ. ನಾಟಕದ ಮೊದಲಲ್ಲಿ ಬರುವ ಶೃಂಗಾರಭಾಗವು ‘ನಾಗಾನಂದ’ ‘ವೇಣಿಸಂಹಾರ’ ಗಳಲ್ಲಿರುವಂತೆ ಅನಾವಶ್ಯಕ, ಅನುಚಿತ ಎನ್ನಿಸುತ್ತದೆ. ಆದರೆ ಇದು ಹರಿಶ್ಚಂದ್ರನ ಸಾಂಸಾರಿಕ ಪ್ರೇಮವನ್ನು ತೋರಿಸುತ್ತದೆಂದೂ, ಅಂಥ ಹೆಂಡತಿಯನ್ನೂ ಮುಂದೆ ಅವನು ಮಾರುವುದಕ್ಕೆ ಸಿದ್ಧನಾಗಿದ್ದನೆಂದೂ ಸಮಾಧಾನ ಹೇಳಬಹುದು. ಕವಿಸಂಪ್ರದಾಯ, ಜನರ ಅಭಿರುಚಿ, ಪ್ರಧಾನರಸದ ಜೊತೆಗೆ ಇತರ ರಸಗಳನ್ನೂ ತರಬೇಕೆಂಬ ಉದ್ದೇಶ ಇವೂ ಇದಕ್ಕೆ ಪ್ರಾಯಶಃ ಕಾರಣಗಳು. ಮುಂದೆ ಬರುವವು ಕರುಣವೀರಗಳು. ಹರಿಶ್ಚಂದ್ರನ ದಾನಧರ್ಮದಯೆಗಳಲ್ಲಿ ಅಪಾರವಾದ ವೀರವನ್ನು ತೋರಿಸಿದ್ದಾನೆ. ಆದರೆ ಅದಕ್ಕಿಂತಲೂ ಕರುಣವೇ ಒಂದು ಕೈ ಮೇಲಾಗಿ ಕಾಣುತ್ತದೆ.
ಈ ನಾಟಕಕ್ಕೆ ನಾಯಕನು ಯಾರು? ಕೌಶಿಕನೇ, ಹರಿಶ್ಚಂದ್ರನೇ? ನಾಟಕದ ಹೆಸರನ್ನೂ ರಾಜನ ದುರ್ವಿಧಿರೂಪವಾಗಿ ಕೌಶಿಕನು ಕಥೆಯನ್ನೆಲ್ಲಾ ವ್ಯಾಪಿಸಿಕೊಂಡಿರುವುದನ್ನೂ ನೋಡಿದರೇ ಅವನೇ ನಾಯಕನೆನ್ನಿಸುತ್ತದೆ. ಆದರೆ ಅವನ ಆತ್ಮಶ್ಲಾಘನೆ ಕೋಪತಾಪಗಳು ಧೀರೋದ್ಧತನಾದ ಪ್ರತಿನಾಯಕನ ಗುಣಗಳು; ಇವನನ್ನು ಸೋಲಿಸಿದ್ದರಿಂದಲೂ ಧೀರೋದಾತ್ತ ಗುಣಗಳುಳ್ಳವನಾದ್ದರಿಂದಲೂ ಹರಿಶ್ಚಂದ್ರನೇ ನಾಯಕನೆಂಬುದು ಕವಿಯ ಅಭಿಪ್ರಾಯವಿರಬಹುದು.
ಮಿಕ್ಕ ಅಂಶಗಳಲ್ಲಿ ಆಗಿನ ಕಾಲದ ಇತರ ನಾಟಕಲಕ್ಷಣಗಳು ಇದರೊಳಗೂ ಕಂಡುಬರುತ್ತವೆ. ಪದ್ಯಗಳು ಬಹಳ; ವರ್ಣನೆ ಹೆಚ್ಚು—ಹಂದಿ, ಬೇಟೆ, ಶ್ಮಶಾನ, ಇತ್ಯಾದಿ. ಭಾಷೆ, ಅದರಲ್ಲಿಯೂ ವರ್ಣನೆಯಲ್ಲಿ, ಸಮಾಸ ಜಟಿಲ, ಕಷ್ಟ.
ಪ್ರಮಾಣ ಲೇಖನಾವಳಿ
R. Pischel — G.G.A., ೧೮೮೩, ೧೨೧೭ f.
F. Kielhorn — Ind. Ant., ೧೫, ೩೩ f.
K.A. Nilakantasastri — ‘Mahipala of he Chandakausika’ I.C., April, ೧೯೩೬.
ಕನ್ನಡ ಭಾಷಾಂತರಗಳು
ಕರ್ಣಾಟಕ ಚಂಡಕೌಶಿಕ ನಾಟಕಂ — ಬಸವಪ್ಪ ಶಾಸ್ತ್ರೀ ಮತ್ತು ದೇವಶಿಖಾಮಣಿ ಅಲಸಿಂಗರಾಚಾರ್ಯ, ಮೈಸೂರು, ೧೮೯೭.
ಕರ್ಣಾಟಕ ಚಂಡಕೌಶಿಕವೆಂಬ ಹರಿಶ್ಚಂದ್ರ ನಾಟಕ —ಜಯರಾಮಾಚಾರ್ಯ, ಮೈಸೂರು, ೧೮೮೯.