೦೪ ರಾಜಶೇಖರ

(ಸುಮಾರು ಕ್ರಿ.ಶ. ೯೦೦)

‘ಬಾಲರಾಮಾಯಣ’, ‘ಬಾಲಭಾರತ’, ‘ಕರ್ಪೂರ ಮಂಜರೀ’, ‘ವಿದ್ಧಶಾಲಭಂಜಿಕಾ’, ‘ಕಾವ್ಯ ಮೀಮಾಂಸಾ’ (ಅಧಿಕರಣ ೧)-ಇವು ಈಗ ದೊರೆಯುವ ರಾಜಶೇಖರನ ಗ್ರಂಥಗಳು. ಇವುಗಳಲ್ಲದೆ ಅವನು ‘ಹರವಿಜಯ’ ವೆಂಬ ಮಹಾಕಾವ್ಯವನ್ನೂ ‘ಭುವನಕೋಶ’ ವೆಂಬ ಭೂವಿವರಣೆಯನ್ನೂ ಬರೆದಿದ್ದಂತೆ ಗೊತ್ತಾಗುತ್ತದೆ. ಇವುಗಳಲ್ಲಿ ಮೊದಲ ನಾಲ್ಕೂ ರೂಪಕಗಳು; ‘ಕಾವ್ಯ ಮೀಮಾಂಸೆ’ ಕೌಟಿಲ್ಯನ ‘ಅರ್ಥಶಾಸ್ತ್ರ’ ದ ಶೈಲಿಯಲ್ಲಿ ಬರೆದ ಕಾವ್ಯ ಲಕ್ಷಣ ವಿಚಾರ ಗ್ರಂಥ.

ಇವುಗಳಲ್ಲಿ ಪ್ರಾಯಶಃ ‘ಬಾಲರಾಮಾಯಣ’ ವು ಅವನು ಮೊದಲು ಬರೆದ ಗ್ರಂಥ. ಅವನು ಅದರ ಪ್ರಸ್ತಾವನೆಯಲ್ಲಿ, ಪಾರಿಪಾರ್ಶ್ವಿಕನ ಪ್ರಶ್ನೆಗೆ ಉತ್ತರವಾಗಿ ಕೊಟ್ಟಿರುವ ತನ್ನ ಕುಲಗೋತ್ರಗಳ ವಿಸ್ತೃತ ವಿವರಗಳನ್ನು ನೋಡಿದರೆ ಹೀಗೆನ್ನಿಸುತ್ತದೆ. ಅಲ್ಲಿ ಈ ಶ್ಲೋಕ ದೊರೆಯುತ್ತದೆ—

ಬ್ರೂತೇ ಯಃ ಕೋಪಿ ದೋಷಂ ಮಹದಿತಿ ಸುಮತಿಃ ಬಾಲರಾಮಾಯಣೇರ್ಸ್ಮಿ

ಪ್ರಷ್ಟವ್ಯೂಸೌ ಪಟೀಯಾನಿಹ ಭಣಿತಿರುಣೋ ವಿದ್ಯತೇ ವಾ ನ ವೇತಿ ।

ಯದ್ಯಸ್ತಿ ಸ್ವಸ್ತಿ ತುಭ್ಯಂ ಭವ ಪಠನರುಚಿರ್ವಿದ್ಧಿ ನಃ ಷಟ್ ಪ್ರಬಂರ್ಧಾ

ನೈವಂ ಚೀದ್ದೀರ್ಘಮಾಸ್ತಾಂ ನಟವಟುವದನೇ ಜರ್ಜರಾ ಕಾವ್ಯಕಂಥಾ ॥ (I.೧೨)

ಇದರಿಂದ ಅವನು ಆರು ಪ್ರಬಂಧಗಳನ್ನು ಬರೆದಿದ್ದಂತೆ ತಿಳಿಯುತ್ತದೆ. ‘ಬಾಲರಾಮಾಯಣ’ ಕ್ಕೆ ಮುಂಚೆಯೇ ಬೇರೆ ಐದಾರು ಗ್ರಂಥಗಳನ್ನು ಬರೆದಿದ್ದನೋ ಅಥವಾ ಈಗ ಇರುವ ಗ್ರಂಥಗಳಿಗೇ ಇದರಿಂದ ನಿರ್ದೇಶವೋ ಗೊತ್ತಾಗುವುದಿಲ್ಲ. ಅವನು ‘ಬಾಲರಾಮಾಯಣ’ ವನ್ನೂ ಈಗ ಗೊತ್ತಿರುವ ವಿಕ್ಕ ಕೆಲವು ಗ್ರಂಥಗಳನ್ನೂ ಬರೆದು, ಜನರು ‘ಬಾಲರಾಮಾಯಣ’ ವನ್ನು ‘ಮಾತಿನ ಮಟ್ಟೆ’ ಎಂದು ಜರಿಯಲು, ತಾನೇ ಸ್ವಲ್ಪ ಬೇಸರದಿಂದ ಆಮೇಲೆ ಈ ಶ್ಲೋಕವನ್ನು ಸೇರಿಸಿದ್ದರೂ ಸೇರಿಸಿರಬಹುದು. ‘ಸೂಕ್ತಿ ಮುಕ್ತಾವಳಿ’ ಮುಂತಾದ ಕಾವ್ಯಸಂಗ್ರಹಗಳಲ್ಲಿ ರಾಜಶೇಕರನವೆಂದು ಕೆಲವು ಪದ್ಯಗಳು ದೊರೆಯುತ್ತವೆ. ಅವು ಈಗ ಪ್ರಸಿದ್ಧವಾಗಿರುವ ಅವನ ಕೃತಿಗಳಲ್ಲಿ ಕಾಣಬರುವುದಿಲ್ಲ; ಆದ್ದರಿಂದ ಇನ್ನು ಬೇರೆ ಗ್ರಂಥಗಳನ್ನು ಬರೆದಿರಬಹುದು; ಸಂಗ್ರಹಕಾರರು ತಪ್ಪು ಮಾಡಿರುವುದೂ ಸಂಭವ.

ರಾಜಶೇಖರನು ತಾನು (ನಿರ್ಭಯರಾಜನ ಅಥವಾ) ಮಹೇಂದ್ರಪಾಲನ ಗುರು ಎಂದು ನಾಲ್ಕು ನಾಟಕಗಳಲ್ಲಿಯೂ ಹೇಳಿಕೊಂಡಿದ್ದಾನೆ. ಈ ಮಹೇಂದ್ರಪಾಲನು ಸುಮರು ಕ್ರಿ.ಶ. ೯೦೭ರಲ್ಲಿ ಕನೂಜ್ ಅಥವಾ ಕನ್ಯಾಕುಬ್ಜದಲ್ಲಿ ಆಳುತ್ತಿದ್ದ ದೊರೆ. ಅಲ್ಲದೆ ಅವನು ತನ್ನ ‘ಕಾವ್ಯ ಮೀಮಾಂಸೆ’ ಯಲ್ಲಿ ಆನಂದ (ವರ್ಧನ)ನ (ಸುಮಾರು ಕ್ರಿ.ಶ. ೮೬೦)ಅಭಿಪ್ರಾಯವನ್ನು ಅನುವಾದ ಮಾಡಿದ್ದಾನೆ. ಸೋಮದೇವನು (ಸುಮರು ೯೫೦) ತನ್ನ ಯಶಸ್ತಿಲಕ ಚಂಪುವಿನಲ್ಲಿ ರಾಜಶೇಖರನನ್ನು ನಿರ್ದೇಶಿಸಿದ್ದಾನೆ. ಆದ್ದರಿಂದ ಅವನ ಕಾಲವು ಸುಮಾರು ಕ್ರಿ.ಶ. ೯೦೦ ಎಂದು ಹೇಳಬಹುದು. ‘ಬಾಲ ಬಾರತ’ ದ ಪ್ರಸ್ತಾವನೆಯಲ್ಲಿ ನಿರ್ಭಯರಾಜನ ಮಗ ಶ್ರೀಮಹೀಪಾಲನ ಹೆಸರು ಬಂದಿರುವುದರಿಂದ ರಾಜಶೇಖರನು ಶ್ರೀಮಹೀಪಾಲನ ಕಾಲದಲ್ಲಿಯೂ (ಸುಮಾರು ೯೧೭) ಇದ್ದನೆಂದು ಊಹಿಸಬಹುದು. ಪ್ರಾಯಶಃ ಅದೇ ಅವನ ಕೊನೆಯ ಕೃತಿ. ಅದನ್ನು ಆರಂಭಿಸಿ ಮುಗಿಸುವುದರೊಳಗಾಗಿ ಅವನು ಮಡಿದಿರಬಹುದು. ಇವೆರಡರ ಮಧ್ಯೆ ಮಿಕ್ಕೆರಡು ನಾಟಕಗಳು ಬರುತ್ತವೆ. ‘ಕಾವ್ಯ ಮೀಮಾಂಸೆ’ ಮೂರು ಸಂಸ್ಕೃತ ನಾಟಕಗಳ ಅನಂತರ ಬರೆದದ್ದು; ಏಕೆಂದರೆ, ಇದರಲ್ಲಿ ಅವುಗಳಿಂದ ಅನುವಾದವಿದೆ.

ರಾಜಶೇಖರನು ಯಾಯಾವರ ವಂಶದಲ್ಲಿ ಹುಟ್ಟಿದವನು; ಅಕಾಲ ಜಲದ, ಸುರಾನಂದ, ತರಲ, ಕವಿರಾಜ ಮುಂತಾದವರು ಇವನ ಪೂರ್ವಿಕರು; ಅಕಾಲ ಜಲದನು ಅವನ ಮುತ್ತಾತ; ದುರ್ದುಕ (ದುಹಿಕ?) ಶ್ರೀಲವತಿಯರು ಅವನ ತಂದೆತಾಯಿಗಳು; ಅವನ ತಂದೆ “ಮಹಾಮಂತ್ರಿ” ಯಾಗಿದ್ದಂತೆ ಕಾಣುತ್ತದೆ. ರಾಜಶೇಖರಣ ಹೆಂಡತಿ ಅವಂತಿಸುಂದರಿ; ಈಕೆ ವಿದ್ಯಾವತಿಯಾಗಿದ್ದಳೆಂದು ಊಹಿಸಬಹುದು. ಪ್ರಾಯಶಃ ಅವನು ಶೈವಬ್ರಾಹ್ಮಣ.* ಮಹಾರಾಷ್ಟ್ರ ದೇಶದಲ್ಲಿ ಹುಟ್ಟಿ ಬೆಳೆದು ಕನೂಜಿಗೆ ಹೋಗಿ ಅಲ್ಲಿ ರಾಜಾಶ್ರಯವನ್ನು ಪಡೆದಂತೆ ಊಹಿಸಲು ಅವಕಾಶವಿದೆ. ತನ್ನನ್ನು “ಬಾಲಕವಿ”, “ಕವಿರಾಜ” ಎಂದು ಕರೆದುಕೊಂಡಿದ್ದಾನೆ. ‘ಬಾಲ ರಾಮಾಯಣ’ ವನ್ನು ಬರೆದದ್ದರಿಂದ “ಬಾಲಕವಿ” ಎಂದು ಬಿರುದು ಬಂದಿರಬಹುದು. “ಕವಿರಾಜ” ನ ಸ್ವರೂಪವನ್ನು ಅವನ ಬಾಯಿಯಿಂದಲೇ ತಿಳಿಯಬಹುದು.—

“ಯಸ್ತು ತತ್ರ ತತ್ರ ಭಾಷಾವಿಶೇಷೇ ತೇಷು ತೇಷು ಪ್ರಬಂಧೇಷು ತಸ್ಮಿಂಸ್ತಸ್ಮಿಂಶ್ವರಸೇ ಸ್ವತಂತ್ರಃ ಸ ಕವಿರಾಜಃ” -’ ಕಾವ್ಯಮೀಮಾಂಸಾ’, ಪು. ೧೯.

ಇದರಂತೆ ಅವನು ಹಲವು ಭಾಷೆಗಳನ್ನು ಬಲ್ಲವನಾಗಿದ್ದನೆಂದು ತೋರುತ್ತದೆ. ತನ್ನನ್ನು “ಸರ್ವಭಾಷಾವಿಚಕ್ಷಣ” ನೆಂದೂ ಸರ್ವರೀತಿನಿಬಂಧಕರ್ತನೆಂದೂ ಹೇಳಿಕೊಂಡಿರುವುದಲ್ಲದೆ ತನ್ನ ದಿವ್ಯ (ಸಂಸ್ಕೃತ), ಪ್ರಾಕೃತ, ಅಪಭೃಂಶ, ಭೂತಭಾಷೆಗಳನ್ನು ಹೊಗಳಿಕೊಂಡಿದ್ದಾನೆ. (ಬಾ. ರಾ., I.೧೧)* “ಕರ್ಪೂರಮಂಜರಿ” ಯಂತೂ ಪೂರ್ತಿಯಾಗಿ ಪ್ರಾಕೃತದಲ್ಲಿಯೇ ಬರೆದದ್ದು.

ರಾಜಶೇಖರನು ತನ್ನ ಹಿಂದೆ ಪ್ರಸಿದ್ಧರಾಗಿದ್ದ ಅನೇಕ ಸಂಸ್ಕೃತ ಕವಿಗಳ ಕಾವ್ಯನಾಟಕಗಳನ್ನೆಲ್ಲಾ ಓದಿ ಪಂಡಿತನಾಗಿದ್ದಂತೆ ಅವನ ಗ್ರಂಥಗಳಿಂದ ಗೊತ್ತಾಗುತ್ತದೆ. ಆದರೆ ಅವುಗಳಲ್ಲೆಲ್ಲಾ ಹರ್ಷ ಭವಭೂತಿಯರ ನಾಟಕಗಳು ಅವನಿಗೆ ತುಂಬ ಮೆಚ್ಚಿಕೆಯಾಗಿದ್ದ ಹಾಗೆ ತೋರುತ್ತದೆ. ಅವರನ್ನು ಅವನು ತನ್ನ ನಾಟಕಗಳ ಹಲವು ಅಂಶಗಳಲ್ಲಿ ಸ್ಪಷ್ಟವಾಗಿ ಅನುಕರಣಮಾಡಿದ್ದಾನೆ. ‘ಬಾಲರಾಮಾಯಣ’ ವಂತೂ ‘ಮಹಾವೀರಚರಿತ’ ದ ಅಪರಾವತಾರ. ಆದ್ದರಿಂದಲೇಯೋ ಏನೋ “ದೈವಜ್ಞ” ರಲ್ಲಿ ಹೀಗೆ “ಪ್ರವಾದ” ವಿತ್ತಂತೆ—

ಬಭೂವ ವಲ್ಮೀಕಭವಃ ಪುರಾ ಕವಿಸ್ತತಃ ಪ್ರಪೇದೇ ಭುವಿ ಭರ್ತೃಮೇಂಠತಾಂ ।

ಸ್ಥತಃ ಪುನರ್ಯೋ ಭವಭೂತಿರೇಖಯಾ ಸ ವರ್ತತೇ ಸಂಪ್ರತಿ ರಾಜಶೇಖರಃ ॥ —(ಬಾ. ರಾ., I. ೧೬; ಭಾ., I.೧೨)

ಅದೇ ಆತ್ಮಪ್ರಶಂಸೆ—

೧.ಯದ್ವಾ ಕಿಂ ವಿನಯೋಕ್ತಿಭಿಃ ಮಮ ಗಿರಾಂ ಯದ್ಯಸ್ತಿ ಸೂಕ್ತಾಮೃತಂ

ಮಾದ್ಯಂತಿ ಸ್ವಯಮೇವ ತತ್ಸುಮನಸೋ ಯಾಜ್ಞಾ ಪರಂ ದೈನ್ಯಭೂಃ ॥ —(ಬಾ. ರಾ., I. ೧೦; ಬಾ. ಭಾ., I. ೫)

೨…..ಕಾವ್ಯವ್ಯಾಜಾತ್ ತದಿಯಮಪರಾ ಕಾಪ್ಯಹೋ ಕಾಮಧೇನುಃ । —(ಬಾ. ರಾ., I. ೬)

೩. ಅಹೋ ಶಿಖರಿಣೀಪಾದಃ । ಅಹೋ ಸೂಕ್ತಿಯುಕ್ತಾ ವಾಚಃ । ಅಹೋಹೃದ್ಯಾವೈದರ್ಭೀ ರೀತಿಃ । ಅಹೋ ಮಾಧುರ್ಯಮಪರ್ಯಾಪ್ತಂ । ಅಹೋ ನಿಷ್ಪ್ರಮಾದಃ ಪ್ರಾಸಾದಃ । —(ವಿ. ಶಾ., I.)

ಭವಭೂತಿಯಂತೆಯೇ ರಾಜಶೇಖರನೂ ಮೊದಲು ವಾಗ್ದೇವತೆಯನ್ನು ಸ್ತುತಿಸಿ ತನ್ನ ರಾಮಾಯಣವನ್ನು ಆರಂಭಿಸುತ್ತಾನೆ. ಅದರ ಹತ್ತು ಅಂಕಗಳಲ್ಲಿ ವಿಶ್ವಾಮಿತ್ರನು ರಾಮನನ್ನು ಕರೆತರುವುದರಿಂದ ಮೊದಲು ಮಾಡಿಕೊಂಡು ಪೂರ್ವರಾಮಾಯಣದ ಕಥೆಯೆಲ್ಲವೂ ಬಂದಿದೆ. ಇದು ವಸ್ತು ಸಂಗ್ರಹ—

ಶುನಶ್ಶೇಪ ರಾಕ್ಷಸರ ಸಂವಾದ—ವಿಷ್ಕಂಭಕ (ವಿಶ್ವಾಮಿತ್ರನು ಯಜ್ಞರಕ್ಷಣೆಗಾಗಿ ರಾಮನನ್ನು ಕರೆದು ತರಲು ಹೋಗಿದ್ದಾನೆ.); ರಾವಣನು ಸೀತೆಯನ್ನು ಅಪೇಕ್ಷಿಸಿ ಮಿಥಿಲಾಪಟ್ಟಣಕ್ಕೆ ಬರುತ್ತಾನೆ. ಜನಕನು ಶಿವಧನುಸ್ಸನ್ನು ಬಗ್ಗಿಸಬೇಕೆಂದು ಮುಂದಿರಿಸಲು ರಾವಣನು ಪಣದಿಂದ ಹೆಣ್ಣು ಪಡೆಯುವುದು ತನ್ನ ಮಾನಕ್ಕೆ ಕಡಮೆಯೆಂದು ತಿರಸ್ಕರಿಸಿ, ಸೀತೆಯನ್ನು ಯಾರು ಮದುವೆಯಾಗುತ್ತಾರೋ ಅವರನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿ ಹೋಗುತ್ತಾನೆ (೧). ನಾರದ ಭೃಂಗಿರಿಟಿ ಸಂವಾದ—ವಿಷ್ಕಂಭಕ. ಶಿವಧನುಸ್ಸನ್ನು ತಿರಸ್ಕಾರಮಾಡಿದ್ದಕ್ಕಾಗಿ ರಾವಣ ಪರಶುರಾಮರಿಗೆ ಮಾತು ನಡೆದು ಜಗಳಹತ್ತಲು ಅದನ್ನು ಋಚೀಕ ಪುಲಸ್ತ್ಯಾದಿಗಳು ಬಿಡಿಸುವರು (೨). ಗೃಧ್ರರಗಳ ಸಂವಾದ—ವಿಷ್ಕಂಭಕ. (ತಾಟಕಾ ಸುಬಾಹು ಮಾರೀಚಾದಿಗಳ ಸಂಹಾರ). ಭರತಮುನಿಯು ಇಂದ್ರನ ಅಪ್ಪಣೆಯಂತೆ ರಚಿಸಿ ದೇವಸಭೆಯಲ್ಲಿ ಆಡಿಸಿದ “ಸೀತಾಸ್ವಯಂವರ” ನಾಟಕವನ್ನು ಸೀತಾಸಕ್ತ ಚಿತ್ತನಾದ ರಾವಣನನ್ನು ವಿನೋದಗೊಳಿಸುವುದಕ್ಕಾಗಿ ಲಂಕೆಯಲ್ಲಿ ಆಡಿಸುವನು. ಗರ್ಭಾಂಕ ನಾಟಕದಲ್ಲಿ ಸೀತಾಸ್ವಯಂವರ ನಡೆಯುವುದು. ರಾಮನು ರಾವಣನ ಕೋಪಕ್ಕೆ ಪಾತ್ರನಾಗುವನು (೩). ಉಪಾಧ್ಯಾಯ ವಟುಸಂವಾದ—ವಿಷ್ಕಂಭಕ. ಪರಶುರಾಮ ಶ್ರೀರಾಮರ ಯುದ್ಧ ಸೂಚನೆ. ದಶರಥನು ದೇವಲೋಕಕ್ಕೆ ಹೋಗಿದ್ದು ಅಲ್ಲಿಂದ ಇಂದ್ರನ ರಥದಲ್ಲಿ ಮಿಥಿಲೆಗೆ ಬರುತ್ತಾನೆ. (ಆ ರಥದಲ್ಲಿ ಚಿತ್ರಿಸಿದ್ದ ಪರಶುರಾಮ ಚರಿತ್ರೆಯನ್ನು ದಾರಿಯಲ್ಲಿ ಮಾತಲಿ ವರ್ಣಿಸುತ್ತಾನೆ.) ಅಷ್ಟು ಹೊತ್ತಿಗೆ ಸೀತಾ ರಾಮರನ್ನು ಕಳುಹಿಸಿಕೊಡುವ ಏರ್ಪಾಟು ನಡೆಯುತ್ತಿದೆ. ಪರಶುರಾಮನು ಬಂದು ಶಿವಧನುರ್ಭಂಗವನ್ನು ಕೇಳಿ ಹಾರಾಡುತ್ತಾನೆ. ಅವನಲ್ಲಿದ್ದ ವಿಷ್ಣುಧನುಸ್ಸನ್ನು ಬಗ್ಗಿಸಿ ಲಕ್ಷ್ಮಣನು ಊರ್ಮಿಳೆಯನ್ನು ಪಡೆಯುತ್ತಾನೆ. ಪರಶುರಾಮ ಶ್ರೀರಾಮರು ಯುದ್ಧಕ್ಕೆ ಸಿದ್ಧರಾಗುತ್ತಾರೆ (೪). ಮಾಯಾಮಯ ಮಾಲ್ಯವಂತರ ಸಂವಾದ—ವಿಷ್ಕಂಭಕ. ರಾವಣನ ವಿರಹ. ಮಾಲ್ಯವಂತನು ಮಾಡಿಸಿದ್ದ ಯಂತ್ರದ ಸೀತೆಯೊಡನೆ ಅವನು ಸರಸವಾಡಿ ಅದು ಯಂತ್ರವೆಂದು ಕಂಡುಕೊಳ್ಳುತ್ತಾನೆ. ಉದ್ಯಾನದರ್ಶನ, ವಿರಹೋನ್ಮಾದ; ಶೂರ್ಪಣಖಿ ಮೂಗು ಹರಿದು ಬಂದು ರಾವಣನಿಗೆ ದೂರು ಹೇಳಿಕೊಳ್ಳುವಳು. ರಾವಣನಿಗೆ ರಾಮನ ಮೇಲೆ ಕೋಪ ಹೆಚ್ಚುವುದು (೫). ಶೂರ್ಪಣಖಾ ಮಾಯಾಮಯ ಮಾಲ್ಯವಂತರ ಸಂವಾದ—ವಿಷ್ಕಂಭಕ. ದಶರಥ ಕೈಕೆಯರು ದೇವಲೋಕಕ್ಕೆ ಹೋಗಿದ್ದಾಗ ಮಾಯಮಯ ಶೂರ್ಪಣಖಿಯರು ಅವರ ರೂಪನ್ನು ತಳಿದು ರಾಮನನ್ನು ಕಾಡಿಗೆ ಕಳುಹಿಸುವರು. ವಾಮದೇವಾದಿಗಳು ಇದು ಮೋಸವೆಂದು ಹೇಳಿದರೂ ರಾಮನು ಕೇಳುವುದಿಲ್ಲ. ಈ ಮಧ್ಯೆ ದಶರಥ ಕೈಕೆಯರು ಹಿಂದಿರುಗಿ ಬಂದು ನಡೆದ ಸಂಗತಿಯನ್ನು ತಿಳಿದು ಎಲ್ಲರೂ ಶೋಕಿಸುವರು. ನರ್ಮದಾನದಿಯವರೆಗೆ ಸೀತಾರಾಮಲಕ್ಷ್ಮಣರನ್ನು ಕಳುಹಿಸಿ ಬಂದ ಸುಮಂತ್ರನು ಅವರ ವೃತ್ತಾಂತವನ್ನು ಎಲ್ಲರಿಗೂ ತಿಳಿಸುವರು. ಜಟಾಯುವಿನ ದೂತನಾದ ರತ್ನಶಿಖಂಡನು ಬಂದು ಸೀತಾಹರಣ ಜಟಾಯು ಮರಣಗಳನ್ನು ತಿಳಿಸುವನು (೬). ವಿಭೀಷಣನ ವಂದಿ ಮತ್ತು ಸುಗ್ರೀವನ ಪ್ರತೀಹಾರ ಇವರ ಸಂವಾದ—ವಿಷ್ಕಂಭಕ. (ದಶರಥನ ಸಾವು; ಸುಗ್ರೀವ ಸಖ್ಯ, ವಿಭೀಷಣನ ಸ್ನೇಹ) ರಾಮಬಾಣಕ್ಕೆ ಹೆದರಿ ಸಮುದ್ರನು ಗಂಗಾ ಯಮುನೆಯರೊಡನೆ ರಾಮನನ್ನು ಕಂಡು ನಲನಿಂದ ಸೇತುವೆ ಕಟ್ಟಿಸಬಹುದೆಂದು ಹೇಳುವನು. ಸೇತುವೆ ಕಟ್ಟಿ, ವಾನರ ರಾಕ್ಷಸರಿಗೆ ಯುದ್ಧ ಮೊದಲಾಗುವುದು. ರಾವಣನು ಯಂತ್ರಸೀತೆಯ ತಲೆಯನ್ನು ರಾಮನ ಮುಂದೆ ಬೀಳಿಸುವನು. ಅದರ ಗುಟ್ಟು ಗೊತ್ತಾಗುವುದು. ಸಿಂಹನಾದನಿಗೂ ರಾಮನಿಗೂ ಯುದ್ಧ (೭). ದುರ್ಮುಖ ಸುಮುಖ ತ್ರಿಜಟೆಯರ ಸಂವಾದ—ವಿಷ್ಕಂಭಕ. (ಸಿಂಹನಾದ ವಧೆ). ರಾವಣ ಮತ್ತು ಅವನ ಪರಿವಾರಕ್ಕೆ ಸೇರಿದ ಮೂವರು ರಾಕ್ಷಸರ ಸಂವಾದ. ಮೇಘನಾದನ ಸಾವೂ, ಕುಂಭಕರ್ಣನು ಎದ್ದು ಯುದ್ಧ ಮಾಡಿ ಸತ್ತದ್ದೂ ಅವರಿಂದ ವರ್ಣಿತವಾಗುತ್ತದೆ (೮). ಯಮದೂತರ ಸಂವಾದ—ವಿಷ್ಕಂಭಕ. ಅದರಿಂದ ಐದು ದಿವಸದ ಯುದ್ಧದಲ್ಲಿ ಹತರಾದವರ ವಿವರ ತಿಳಿಯುತ್ತದೆ. ಇಂದ್ರ ದಶರಥ ಚಾರಣರು ಅಂತರಿಕ್ಷದಿಂದ ರಾಮ ರಾವಣರ ಯುದ್ಧವನ್ನೂ ರಾವಣವಧೆಯನ್ನೂ ವರ್ಣಿಸುತ್ತಾರೆ (೯). ಅಲಕಾ ಲಂಕಾ ಸಂವಾದ—ವಿಷ್ಕಂಭಕ. ಅದರಲ್ಲಿ ಸೀತಾಗ್ನಿಶುದ್ಧಿಯ ವರ್ಣನೆ. ರಾಮ ಲಕ್ಷ್ಮಣ ಸೀತೆ ತ್ರಿಜಟೆ ಸುಗ್ರೀವ ವಿಭೀಷಣಾದಿಗಳು ವಿಮಾನದಲ್ಲಿ ಅಯೋಧ್ಯೆಗೆ ಹೊರಡುತ್ತಾರೆ. ಮಹೇಂದ್ರನ ಕಡೆಯಿಂದ ಬಂದ ರತ್ನಶೇಖರನೆಂಬ ವಿದ್ಯಾಧರನೂ ಇತರರೂ ದಾರಿಯಲ್ಲಿ ಕಂಡುಬರುವ ನಾನಾ ಪ್ರದೇಶಗಳನ್ನು ವರ್ಣಿಸುತ್ತಾರೆ. ವಸಿಷ್ಠ ಭರತಶತ್ರುಘ್ನರು ಅವರನ್ನು ಎದುರುಗೊಳ್ಳುತ್ತಾರೆ. ರಾಮ ಪಟ್ಟಾಭಿಷೇಕ (೧೦).

ಇದರಲ್ಲಿ ‘ಮಹಾವೀರಚರಿತ’ ದ ಗುಣದೋಷಗಳೆಲ್ಲಾ ಇವೆ. ಅದರಂತೆಯೇ ಇಲ್ಲಿಯೂ ರಾವಣನಿಗೆ ಮೊದಲಿನಿಂದಲೂ ಸೀತೆಯಲ್ಲಿ ಆಸಕ್ತಿ; ಕೈಕೆ ದಶರಥರು ನಿರಪರಾಧಿಗಳು. ಇವುಗಳ ಜೊತೆಗೆ (ಗರ್ಭಾಂಕದ) “ಸೀತಾ ಸ್ವಯಂವರ”, “ಯಂತ್ರ ಸೀತೆ” ಮುಂತಾದವುಗಳಿಂದ ವಸ್ತುರಚನೆಯಲ್ಲಿ ಹೆಚ್ಚು ಚಮತ್ಕಾರವನ್ನು ತೋರಿಸಿ ಭವಭೂತಿಯನ್ನು ಮೀರಿಸಿದ್ದನೆಂಬುದು ಕವಿಯ ಭಾವನೆಯಿರಬಹುದು. ಆದರೆ ರಾವಣನು ಇವುಗಳಿಂದ ವಿನೋದಪಟ್ಟನೆಂದು ವರ್ಣಿಸುವುದು ಅಭಾಸವಾಗಿ ಕಾಣುತ್ತದೆ. ರಸಕ್ಕಿಂತ ವರ್ಣನೆಯೇ ಹೆಚ್ಚು. ಅದೂ ಬಹು ಉದ್ದ. ಯುದ್ಧವನ್ನು ರಂಗದ ಮೇಲೆ ತೋರಿಸಕೂಡದೆಂಬ ನಿಯಮದ ಪಾಲನೆ ಸ್ವಲ್ಪ ಮಟ್ಟಿಗೆ ಇದಕ್ಕೆ ಕಾರಣ; ಆದರೆ ಅನೇಕ ಕಡೆ ಇದು ಅನಾವಶ್ಯಕ; ಕೊನೆಯ ಅಂಕದಲ್ಲಿ ಕವಿ ‘ಮೇಘಸಂದೇಶ’, ‘ರಘುವಂಶ’ (ಸರ್ಗ ೧೩)ಗಳನ್ನು ಸೂರೆಗೊಳ್ಳಬೇಕೆನ್ನುತ್ತಾನೆ. ನಾಟಕಕ್ಕೆ ಇದು ಸಲ್ಲದ ಕೆಲಸ. ಪ್ರತಿ ಅಂಕಕ್ಕೂ ಒಂದೊಂದು ವಿಷ್ಕಂಭವಿದೆ. ಗದ್ಯಕ್ಕಿಂತ ಪದ್ಯವೇ ಹೆಚ್ಚು; ಮಾತೆತ್ತಿದರೆ ಪದ್ಯ (ಇದರಲ್ಲಿ ಎಲ್ಲಾ ಒಟ್ಟು ಸುಮಾರು ೭೪೦ ಪದ್ಯಗಳಿವೆ ।* ಕ್ರಿಯೆಗಿಂತ ಮಾತೇ ಹೆಚ್ಚು. ಕವಿಯು ವಾಕ್ಪ್ರೌಢಿಗೇ ಹೆಚ್ಚು ಬೆಲೆ ಕೊಟ್ಟಂತೆ ಕಾಣುತ್ತದೆ.* “ನನ್ನ ಕಾವ್ಯದಲ್ಲಿ ಭಣಿತಿಗುಣವಿದೆಯೇ ಇಲ್ಲವೇ ನೋಡಿ ! ಇದ್ದರೆ ಓದಿ !” ಎಂದು ಅವನು ಮೂದಲಿಸುತ್ತಾನೆ. (ಬಾ. ರಾ., I. ೧೨). “ಮನೋರಥಮೋದಕ”, “ಮದನಜಯ ಮಹಾ ವೈಜಯಂತಿ” ಎಂಬಂಥ ಮಾತುಗಳು ಅಪೂರ್ವವಲ್ಲ. ಆದರೆ ಬರಿಯ ವಾಕ್ಪ್ರೌಢಿಯಿಂದಲೇ ದೃಶ್ಯತೆ ಬರುವುದಿಲ್ಲ. ಪ್ರೌಢಗದ್ಯ ಪದ್ಯಗಳು ನಾಟಕದ ಆಕಾರದಲ್ಲಿ ಬೆರೆದರೆ ಆಗುವುದು ಚಂಪುಗೆ ಚಂಪುವಲ್ಲ, ನಾಟಕಕ್ಕೆ ನಾಟಕವಲ್ಲ. ಇಂಥ “ಜರ್ಜರ ಕಾವ್ಯಕಥೆ”, “ನಟವಟುವದನ” ದಲ್ಲಿ ತಾನೇ ಹೇಗೆ ನಿಂತೀತು?

‘ಬಾಲಭಾರತ’ ಅಥವಾ ‘ಪ್ರಚಂಡಪಾಂಡವ’ ದಲ್ಲಿ ಈಗ ಎರಡು ಅಂಕಗಳು ಮಾತ್ರ ದೊರೆತಿವೆ. ಕವಿ ಬರೆದದ್ದೇ ಇಷ್ಟೇಯೋ ಏನೋ ತಿಳಿಯದು. ‘ಬಾಲರಾಮಾಯಣ’ ದಲ್ಲಿ ಸಮಗ್ರ ರಾಮಾಯಣದ ಕಥೆಯನ್ನು ರೂಪಕ ಮಾಡಿದಂತೆ ಇದರಲ್ಲಿ ಸಮಗ್ರಭಾರತದ ಕಥೆಯನ್ನೂ ನಿರೂಪಿಸಬೇಕೆಂದು ಅವನು ಉದ್ದೇಶಪಟ್ಟಿದ್ದಿರಬಹುದು.—

ನಾಟಕಾರಂಭದಲ್ಲಿ ವ್ಯಾಸ ವಾಲ್ಮೀಕಿಗಳು ಪ್ರವೇಶಿಸಿ, ವ್ಯಾಸರು ಹೊಸದಾಗಿ ಬರೆದಿದ್ದ ಭಾರತದ ವಿಚಾರವನ್ನು ಕುರಿತು ಮಾತನಾಡುತ್ತಾ ದ್ರೌಪದೀ ಸ್ವಯಂವರದವರೆಗಿನ ಭಾಗವನ್ನು ವಾಲ್ಮೀಕಿಗಳು ಆಗಲೇ ನೋಡಿದ್ದದ್ದರಿಂದ ವ್ಯಾಸರು ಈಗ ಅಲ್ಲಿಂದ ಮುಂದಿನ ಭಾಗವನ್ನು ಅವರಿಗೆ ತೋರಿಸುವುದಾಗಿ ಹೇಳುತ್ತಾರೆ. ಮೊದಲನೆಯ ಅಂಕದಲ್ಲಿ ದ್ರೌಪದಿಯ ಸ್ವಯಂವರವೂ ಎರಡನೆಯ ಅಂಕದಲ್ಲಿ ಜೂಜು ದ್ರೌಪದೀ ವಸ್ತ್ರಾಪಹರಣ ವನಪ್ರಯಾಣಗಳೂ ನಡೆಯುತ್ತವೆ.

ಸಂವಿಧಾನ ಕೌಶಲ್ಯಾದಿ ವಿಚಾರವಾಗಿ ‘ಬಾಲರಾಮಾಯಣ’ ದ ಸಂಬಂಧದಲ್ಲಿ ಹೇಳಿದ ಮಾತೇ ಈ ನಾಟಕಕ್ಕೂ ಬಹುಮಟ್ಟಿಗೆ ಅನ್ವಯಿಸುತ್ತದೆ. ಇದರ ನಡುನಡುವೆ ವ್ಯಾಸಭಾರತದಿಂದ ಒಂದೊಂದು ಪದ್ಯ ಉಂಡೆಯಾಗಿ ಬರುತ್ತದೆ. ಇದು ಒಂದು—

ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ

ಸ್ಕಂಧೋರ್ಜುನೋ ಭೀಮಸೇನೋಸ್ಯ ಶಾಖಾಃ ।

ಮಾದ್ರೀಸುತೌ ಪುಷ್ಪಫಲೇ ಸಮೃದ್ಧೀ

ಮೂಲಂ ಕೃಷ್ಣೋಬ್ರಹ್ಮಣಾಶ್ಚ ॥ (II. ೫.)

ಪಾತ್ರಚಿತ್ರದಲ್ಲಿಯೂ ಅತಿಶಯವೇನೂ ಇಲ್ಲ; ಭೀಮನ ಪ್ರತಿಜ್ಞಾ ಸಂರಂಭಕ್ಕೆ ಉತ್ತರವಾಗಿ ಶಕುನಿ ಆಡುವ ಧೋರಣೆಯ ಮಾತನ್ನು ಬೇಕಾದರೆ ಒಂದನ್ನು ಉದಾಹರಿಸಬಹುದು—

“ನಿರ್ಗಚ್ಛತ ವನಾಯ, ಕೋಹಿನಾಮ ದ್ಯೂತಜಿತಾನಾಮುದ್ವಿಜತೇ ಮೌಖರ್ಯೇಣ !”

ಈ ವಾಕ್ಯದಿಂದ ಎರಡನೆಯ ಅಂಕ ಮುಗಿಯುತ್ತದೆ.

ವಂದಿ, ಮಧುಪ್ರಿಯನಾದ ಬಲರಾಮನನ್ನು ಹೀಗೆ ವರ್ಣಿಸುತ್ತಾನೆ. ಅದು ವಿನೋದವಾಗಿದೆ—

ಕಿಂ ಕಿಂ ಕಿಂ ಚು ಚು ಚುಂಬನೈರ್ಮನು ಮುಧಾ ವಕ್ತ್ರಾಂಬುಜಸ್ಯಾಗ್ರತೋ

ದೇ ದೇ ದೇಹಿ ಪಿ ಪಿ ಪ್ರಿಯೇ ಸು ಸು ಸುರಾಂ ಪಾತ್ರೇತ್ರಿ ರೇ ರೇವತಿ ।

ಮಾ ಮಾ ಮಾ ವಿ ವಿಲಂಬನಂ ಕು ಕು ಕುರು ಪ್ರೇಮ್ಣಾ ಹಲೀ ಯಾಚತೇ

ಯಸ್ಯೇತ್ಥಂ ಮದಘೋರ್ಣಿತಸ್ಯ ತರಸಾ ವಾಚಃ ಸ್ಖಲಂತ್ಯಾಕುಲಾಃ ॥ (I. ೫೨)

‘ವಿದ್ಧಶಾಲಭಂಜಿಕೆ’, ‘ಕರ್ಪೂರ ಮಂಜರಿ’ ಗಳು ಹರ್ಷನ ‘ರತ್ನಾವಳೀ’, ‘ಪ್ರಿಯದರ್ಶಿಕೆ’ ಗಳನ್ನು ಅನುಸರಿಸಿ ಬರೆದವುಗಳು. ನಾಂದೀಶ್ಲೋಕ, ವಸ್ತೂಪಕ್ಷೇಪ, ಮಂತ್ರಿಯ ತಂತ್ರ, ಸಿದ್ಧಾದೇಶ, ಪಾತ್ರಗಳ ಹೆಸರು ಮೊದಲಾದವುಗಳಲ್ಲೆಲ್ಲಾ ಈ ಅನುಕರಣವನ್ನು ಕಾಣಬಹುದು; ಇವುಗಳಲ್ಲಿ ‘ವಿದ್ಧಶಾಲ ಭಂಜಿಕಾ ನಾಟಿಕೆ’ ಪ್ರಾಯಶಃ ಮೊದಲು ಬರೆದದ್ದು; ಅದರ ಪ್ರಸ್ತಾವನೆ ಚಿಕ್ಕದು; ಅದರಲ್ಲಿ ಕವಿ ತನ್ನ ಮಾಹಾತ್ಮ್ಯವನ್ನು ವಿಸ್ತರಿಸಿ ಹೇಳಿಕೊಂಡಿಲ್ಲ; ಕೃತಿಶರೀರದಲ್ಲಿಯೂ ಅಷ್ಟೊಂದು ಪ್ರೌಢಿಮೆ ಕಂಡುಬರುವುದಿಲ್ಲ. ಇದು “ಯುವರಾಜ ದೇವ” ನ ಆಜ್ಞಾನುಸಾರವಾಗಿ ಆಡಿದಂತೆ ಹೇಳಿದೆ; ಈ ಯುವರಾಜನು ಮಹೀಪಾಲನೋ ಚೇದಿರಾಜಕುಮಾರನೋ ಗೊತ್ತಿಲ್ಲ. ಈ ನಾಟಿಕೆಯ ಕಥೆ ಇದು—

ತ್ರಿಲಿಂಗರಾಜನಾದ ವಿದ್ಯಾಧರಮಲ್ಲನಿಗೆ ಮದನವತಿಯೆಂಬ ಹೆಂಡತಿಯಿದ್ದಳು. ಆಕೆಯ ಸೋದರಮಾವನೂ ಲಾಟರಾಜನೂ ಆದ ಚಂದ್ರವರ್ಮನಿಗೆ ಗಂಡುಮಕ್ಕಳಿರಲಿಲ್ಲ. ಮೃಗಾಂಕಾವಳಿ ಎಂಬ ತನ್ನ ಮಗಳನ್ನು ಗಂಡುಹುಡುಗನ ವೇಷ ಹಾಕಿ ಬೆಳಸಿಕೊಂಡು ಬಂದು ಅವಳನ್ನು ಮದನವತಿಯ ಹತ್ತಿರ ಬಿಟ್ಟಿದ್ದನು. ಕುಂತಲ ರಾಜನಾದ ಚಂದ್ರಮಹಾಸೇನನು ಗಂಡುವೇಷದ ಅವಳಿಗೆ ತನ್ನ ಮಗಳಾದ ಕುವಲಯ ಮಾಲೆಯನ್ನು ಮದುವೆಮಾಡಬೇಕೆಂದು ನಿಶ್ಚಯಿಸಿ ಅವಳನ್ನು ಮದನವತಿಯ ಹತ್ತಿರವೇ ಬಿಟ್ಟಿದ್ದನು (೨).

ಈ ಮೃಗಾಂಕಾವಳಿಯನ್ನು ಮದುವೆ ಮಾಡಿಕೊಂಡವನು ಚಕ್ರವರ್ತಿಯಾಗುತ್ತಾನೆಂದು ಸಿದ್ಧಾದೇಶವಿತ್ತು. ಇದನ್ನು ಬಲ್ಲ ಭಾಗುರಾಯಣನು- ವಿದ್ಯಾಧರನ ಮಂತ್ರಿ-ಒಂದು ದಿನ ಬೆಳಗಿನ ಜಾವದಲ್ಲಿ ಮೃಗಾಂಕಾವಳಿಯನ್ನು ಗುಪ್ತಮಾರ್ಗದಿಂದ ರಾಜನ ಶಯ್ಯಾಗೃಹಕ್ಕೆ ಕಳುಹಿಸಿ ಅವನ ಕೊರಳಿಗೆ ಒಂದು ಮುತ್ತಿನ ಹಾರವನ್ನು ಹಾಕಿಸುವನು. ಅವಳಿಗೆ ರಾಜನು ಕಾಮದೇವನೆಂಬ ತಿಳಿವಳಿಕೆಯನ್ನು ಕೊಟ್ಟಿದ್ದನು (೩).

ರಾಜನು ಇದನ್ನು ಸ್ವಪ್ನವೆಂದೆಣಿಸುವನು. ಆದರೆ ಕೊರಳಿನಲ್ಲಿ ಹಾರವಿತ್ತು. ವಿದೂಷಕನೊಡನೆ ಉದ್ಯಾನಕ್ಕೆ ಹೋಗಲು ಅಲ್ಲಿ ಮೃಗಾಂಕಾವಳಿ ಉಯ್ಯಾಲೆಯಾಡುತ್ತಿರುವಳು. ಅವಳನ್ನು ಮತ್ತೆ “ಕೇಳು ಕೈಲಾಸ” ಎಂಬ ಸ್ಫಟಿಕ ಶಿಲಾಮಂದಿರದಲ್ಲಿ ಚಿತ್ರರೂಪವಾಗಿಯೂ ವಿಗ್ರಹರೂಪವಾಗಿಯೂ.* ಸಾಕ್ಷಾತ್ತಾಗಿ ಪಳುಕಿನ ಗೋಡೆಯ ಹಿಂದೂ, ಆಮೇಲೆ ಚೆಂಡಾಡುತ್ತಿರುವಾಗಲೂ ನೋಡುವನು. ಆದರೆ ಅವಳು ಆಗ ಅವನ ಕೈಗೆ ಸಿಕ್ಕುವುದಿಲ್ಲ (೧-೨). ಮತ್ತೆ ಉದ್ಯಾನದಲ್ಲಿ ವಿರಹದಿಂದ ತಪಿಸುತ್ತ ಸಿಕ್ಕಿದಾಗ ‘ಮಹಾರಾಣಿ ಬರುತ್ತಾಳೆ’ ಎಂಬ ಕೂಗನ್ನು ಕೇಳಿ ಇಬ್ಬರೂ ಬೆದರುವರು (೩).

ರಾಣಿ ಮೃಗಾಂಕಾವಳಿಯನ್ನು ರಾಜನಿಗೆ ಮದುವೆ ಮಾಡಿಕೊಡಲು ಸಿದ್ಧಗೊಳಿಸುವಳು. ಮೃಗಾಂಕೆ ಗಂಡಸೆಂದೂ ಅವಳಿಗೆ ಹೆಣ್ಣುವೇಷ ಹಾಕಿ ಗಂಡನಿಗೆ ಮದುವೆ ಮಾಡಿಕೊಟ್ಟು ಮೋಸಗೊಳಿಸಿ ತಮಾಷೆ ನೋಡಬೇಕೆಂದೂ ಅವಳು ಯೋಚಿಸಿದ್ದಳು. ಆದರೆ ಮೋಸಹೋದವಳು ಅವಳೇಯೆ. ಈ ಮಧ್ಯೆ ಚಂದ್ರವರ್ಮನಿಗೆ ಒಂದು ಗಂಡುಮಗು ಹುಟ್ಟಲು ಅವನು ಆ ವರ್ತಮಾನವನ್ನೂ ತನ್ನ ಮಗಳ ಗುಟ್ಟನ್ನೂ ತಿಳಿಸುವನು. ರಾಣಿ, ಆದದ್ದಕ್ಕೆ ವೈಥೆಪಡದೆ ಕುವಲಯಮಾಲೆಯನ್ನೂ ತನ್ನ ಗಂಡನಿಗೆ ಮದುವೆ ಮಾಡಿಸುವಳು. ವಿದ್ಯಾಧರಮಲ್ಲನ ಸಹಾಯದಿಂದ ಅವನ ಸಾಮಂತನಾದ ವೀರಪಾಲನು ಶತ್ರುಗಳನ್ನು ಓಡಿಸಿ ಮತ್ತೆ ಕುಂತಲಕ್ಕೆ ರಾಜನಾದ್ದರಿಂದ ವಿದ್ಯಾಧರಮಲ್ಲನು ಚಕ್ರವರ್ತಿಯಾಗುವನು (೪).

ಇದರಲ್ಲಿ ರಾಜನು ರಾಣಿಯ ಸಹಾಯದಿಂದ ಕೊನೆಗೆ ಮದುವೆಯಾಗುವುದು ಒಬ್ಬ ಅಂತಃಪುರ ಸ್ತ್ರೀಯನ್ನಲ್ಲ, ಇಬ್ಬರನ್ನ. ಅವರಲ್ಲಿ ಒಬ್ಬಳು ಪುರುಷ ವೇಷದಿಂದ ಇದ್ದು ಕಥೆಯನ್ನು ಇನ್ನು ಸ್ವಲ್ಪ ತೊಡಕುಮಾಡುತ್ತಾಳೆ. ಕವಿ ಇದರಿಂದ ತನ್ನ ಕಥೆಯಲ್ಲಿ ಹೆಚ್ಚು ಚಮತ್ಕಾರವನ್ನು ತಂದೆನೆಂದು ಭಾವಿಸಿಕೊಂಡಿದ್ದಿರಬಹುದು; ಆದರೆ ವಸ್ತುತಃ ಇದರಿಂದ ನೈಸರ್ಗಿಕತೆ ಕಡಿಮೆಯಾಗುತ್ತದೆ. ರಾಣಿಗೂ ಸಂದೇಹವಾಗದಂತೆ ಅವಳ ಸೋದರಮಾವನ ಮಗಳು ಅವಳ ಅಂತಃಪುರದಲ್ಲಿಯೇ ಗಂಡುವೇಷದಿಂದ ಬೆಳೆದು ವಯಸ್ಸಿಗೆ ಬಂದಿದ್ದಳೆಂಬುದು ವಿಶ್ವಾಸರ್ಹವಲ್ಲ. ಎರಡನೆಯ ಅಂಕದಲ್ಲಿ ಮಹಾರಾಣಿ ವಿನೋದಕ್ಕಾಗಿ ತನ್ನ ಚೇಟನೊಬ್ಬನಿಗೆ ಹೆಣ್ಣು ವೇಷಹಾಕಿ ಅವನನ್ನು ವಿದೂಷಕನಿಗೆ ಮದುವೆ ಮಾಡುವಳು; ಇದರಿಂದ ಅವಮಾನಿತನಾದ ವಿದೂಷಕನು ರಾಣಿಯ ಚೇಟಿಯೊಬ್ಬಳನ್ನು ದಿಗಿಲುಪಡಿಸಿ ಅವಳು ತನ್ನ ಕಾಲ ಕೆಳಗೆ ನುಸಿಯುವಂತೆ ಮಾಡಿ ಮುಯ್ಯಿ ತೀರಿಸಿಕೊಳ್ಳುವನು. ಈ ಉಪಕಥೆ ಉಚಿತವಲ್ಲ. ಗಂಭೀರವಲ್ಲ, ಅವಶ್ಯವಲ್ಲ. ನಾಲ್ಕನೆಯ ಅಂಕದಲ್ಲಿ ಮೃಗಾಂಕಾವಳಿಯನ್ನು ರಾಜನಿಗೆ ಮದುವೆ ಮಾಡಿಕೊಡಲೂ ರಾಣಿ ಇದೇ ಹಂಚಿಕೆಯನ್ನೇ ಮಾಡುತ್ತಾಳೆ. ಹೀಗೆ ತನ್ನ ಬುದ್ಧಿವಂತಿಕೆಯಿಂದ ಕಲ್ಪಿಸಿರುವ ಚಮತ್ಕಾರವೊಂದೂ ಕವಿಗೆ ಪ್ರಶಸ್ತಿಯನ್ನು ತರುವಂತಿಲ್ಲ.

‘ಕರ್ಪೂರಮಂಜರಿ’ ‘ವಿದ್ಧಶಾಲಭಂಜಿಕೆ’ ಗಿಂತ ಉತ್ತಮ. ಇದನ್ನು ರಾಜಶೇಖರನ ಹೆಂಡತಿಯಾದ ಅವಂತಿಸುಂದರಿಯ ಇಷ್ಟದಂತೆ ಪ್ರಯೋಗಿಸಿದ ಹಾಗೆ ತಿಳಿದು ಬರುತ್ತದೆ. (I. ೧೧). ಇದರಲ್ಲಿಯೂ ನಾಲ್ಕು ಅಂಕಗಳಿವೆ. ಆದರೆ ಅವುಗಳಿಗೆ “ಜವನಿಕಾಂತರ” ಗಳೆಂದು ಹೆಸರು. ಇದು ಕಥಾಸಂಗ್ರಹ—

ಚಂಡಪಾಲರಾಜನು ವಸಂತೋತ್ಸವದಲ್ಲಿ ಮಹಾರಾಣಿ ವಿಭ್ರಮಲೇಖೆಯೊಡನೆ ವಿನೋದದಿಂದಿರುವಾಗ ಅಲ್ಲಿಗೆ ಭೈರವಾನಂದನೆಂಬ ಸಿದ್ಧನು ಬಂದು ತನ್ನ ಯೋಗಶಕ್ತಿಯನ್ನು ಪ್ರಯೋಗಿಸಿ ವಿದರ್ಭನಗರದಿಂದ ಕರ್ಪೂರಮಂಜರಿಯೆಂಬ ಸುಂದರಿಯನ್ನು ಬರಮಾಡುವನು. ಅವಳು ಮಹಾರಾಣಿಯ ಚಿಕ್ಕಮ್ಮನ ಮಗಳು. ಆದ್ದರಿಂದ ಅವಳು ತನ್ನ ಹತ್ತಿರ ಸ್ವಲ್ಪದಿನವಿರಲಿ ಎಂದು ಮಹಾರಾಣಿ ಅವಳನ್ನು ಕರೆದುಕೊಂಡು ಹೋಗುವಳು (೧). ವಿಚಕ್ಞಣೆಯೆಂಬ ಚೇಟಿಯೂ ವಿದೂಷಕನೂ ಸಂಚು ಮಾಡಿ ಮಹಾರಾಣಿ ಕಾಣದಂತೆ ರಾಜನಿಗೆ ಕರ್ಪೂರಮಂಜರಿ ಉಯ್ಯಾಲೆಯಾಡುವುದನ್ನೂ ದೋಹದ ನಡೆಸುವುದನ್ನೂ ತೋರಿಸುವರು (೨). ವಿದೂಷಕನು ರಾಜನನ್ನು ಕರ್ಪೂರಮಂಜರಿಯ ಕೊಟಡಿಗೆ ಕರೆದುಕೊಂಡು ಹೋಗುವನು. ಅಲ್ಲಿದ್ದ ಸುರಂಗದ್ವಾರದಿಂದ ಎಲ್ಲರೂ ಹೊರಕ್ಕೆ ಬಂದು ಬೆಳದಿಂಗಳಲ್ಲಿ ವಿನೋದವಾಗಿ ಮಾತಾನಾಡುತ್ತಿರಲು, ಇದು ರಟ್ಟಾಗಿ ಒಳಗೆ ಗದ್ದಲವಾಗುವುದು. ಕರ್ಪೂರಮಂಜರಿ ಗುಪ್ತಮಾರ್ಗದ ಮೂಲಕ ಹಿಂದಿರುಗಿ ಹೋಗುವಳು (೩). “ಘನಸಾರಮಂಜರಿ” ಯನ್ನು ಮದುವೆಯಾದವನು ಚಕ್ರವರ್ತಿಯಾಗುವನೆಂದೂ ಆದ್ದರಿಂದ ಅವಳನ್ನು ತನ್ನಗಂಡನಿಗೆ ಮದುವೆಮಾಡಿಕೊಡಬೇಕೆಂದೂ ಭೈರವಾನಂದನು ರಾಣಿಗೆ ಹೇಳಲು ಅವಳು ಉದ್ಯಾನದಲ್ಲಿದ್ದ ಚಾಮುಂಡೀ ಗುಡಿಯಲ್ಲಿ ತನ್ನ ಗಂಡನ ಮದುವೆಗೆ ಏರ್ಪಾಟು ಮಾಡುವಳು. ಈಚೆಗೆ ಕರ್ಪೂರಮಂಜರಿಯ ರಕ್ಷಾಗೃಹದ ಸುರಂಗಮಾರ್ಗವನ್ನು ಮುಚ್ಚಿಸಿ ಅದರ ಸುತ್ತಲೂ ಕಾವಲು ಹಾಕಿದ್ದದ್ದರಿಂದ ರಾಣಿಗೆ ಕರ್ಪೂರಮಂಜರಿಯ ಯೋಚನೆ ಇರಲಿಲ್ಲ. ಭೈರವಾನಂದನು ಅಲ್ಲಿಂದ ಗುಡಿಗೆ ಬೇರೆ ಸುರಂಗಮಾರ್ಗ ಮಾಡಿಸಿ ಅದರ ಮೂಲಕ ಕರ್ಪೂರಮಂಜರಿಯನ್ನು ಬರಮಾಡಿದ್ದನು. ಮದುವಣಗಿತ್ತಿಯನ್ನು ನೋಡಿ ರಾಣಿಗೆ ಸಂದೇಹ ಹುಟ್ಟಿತು. ಆದ್ದರಿಂದ ಏನೇನೋ ನೆವದ ಮೇಲೆ ಅವಳು ಎರಡು ಮೂರು ಸಾರಿ ಅಂತಃಪುರಕ್ಕೆ ಹೋಗಿ ಹೋಗಿ ನೋಡಿದಳು. ಆಗ ಕರ್ಪೂರಮಂಜರಿಯೂ ಸುರಂಗದ ಮೂಲಕ ಅಲ್ಲಿಗೆ ಹೋಗಿ ಹೋಗಿ ಇರುತ್ತಿದ್ದಳು. ಕೈಮೀರಿದ ಮೇಲೆ ಕರ್ಪೂರಮಂಜರಿಯೇ ಘನಸಾರಮಂಜರಿಯೆಂದು ಅವಳಿಗೆ ಗೊತ್ತಾಯಿತು (೪).

ಇದು ಬಹುಮಟ್ಟಿಗೆ ‘ರತ್ನಾವಳಿ’ ಯಂತಿದೆ. ಅದೇ ಸಿದ್ಧಾದೇಶ ಇಂದ್ರಜಾಲ ದೋಹದ ಕಾಮತಂತ್ರಗಳ ಶೃಂಗಾರ ಕಥೆ. ಆದರೆ ಅದರ ಕಥಾಸಂವಿಧಾನ ಕೌಶಲವಾಗಲಿ ಪಾತ್ರವೈಚಿತ್ರ್ಯವಾಗಲಿ ರಸಪರಿಪುಷ್ಟಿಯಾಗಲಿ ಇದರಲ್ಲಿಲ್ಲ. ಇವೆಲ್ಲ ಕವಿಯ ಉದ್ದೇಶದಲ್ಲಿ ಪ್ರಧಾನವಾಗಿ ಇರಲೂ ಇಲ್ಲವೆಂದು ತೋರುತ್ತದೆ. ಏಕೆಂದರೆ, ಕರ್ಪೂರಮಂಜರಿ ಒಂದು “ಸಾಟಕ” ಅಥವಾ “ಸಟ್ಟಕ”. ಸಟ್ಟಕವು ಪ್ರವೇಶಕ ವಿಷ್ಕಂಭಕಗಳಿಲ್ಲದ—ಎಂದರೆ ಕಥಾ ವಿಸ್ತಾರವಿಲ್ಲದ—ನಾಟಿಕೆ. ಪಾರಿಪಾರ್ಶ್ವಿಕನು ಹೇಳುವಂತೆ ಇದು “ನರ್ತಿಸತಕ್ಕದ್ದು” ಆದರೂ ಇರುವ ಅಲ್ಪಾವಕಾಶದಲ್ಲಿಯೇ ಕವಿ ವಸ್ತುರಚನೆಗೆ ಹೆಚ್ಚು ಗಮನ ಕೊಡಬಹುದಾಗಿತ್ತು. ನಾಯಿಕೆಯ ವಿಚಾರವೇ ಒಂದು ಉದಾಹರಣೆ; ಒಡವೆವಸ್ತುಗಳನ್ನೆಲ್ಲಾ ತೆಗೆದಿಟ್ಟು ಆಗತಾನೇ ಸ್ನಾನಮಾಡಿದ್ದ ಅವಳನ್ನು ಯೋಗವಿದ್ಯೆ ಪರಸ್ಥಳಕ್ಕೆ ತರುತ್ತದೆ; ಆದರೂ ಅವಳಿಗೆ ಆಶ್ಚರ್ಯವಿಲ್ಲ, ದಿಗಿಲಿಲ್ಲ; ಅವಳ ತಾಯಿತಂದೆಗಳಿಗೆ ಗಾಬರಿಯಿಲ್ಲ. ‘ರತ್ನಾವಳಿ’ ಮುಂತಾದ ಪ್ರಸಿದ್ಧ ನಾಟಿಕೆಗಳ ವಸ್ತುವು ಇಂಥ ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ರಚಿತವಾಗಿದೆ. ಇದರ ರಾಜ ರಾಣಿ ನಾಯಿಕೆಯರಲ್ಲಿಯೂ ಆ ಸತ್ತ್ವವಿಲ್ಲ. ಕವಿ, ಪ್ರಮದಾಪುಂಜ ರಂಜಿತವಾದ ಸೌಂದರ್ಯ ಶೃಂಗಾರಭರಿತವಾದ ಒಂದು ಸಣ್ಣ ಅಂತಃಪುರ ಪ್ರಪಂಚವನ್ನೂ ಅದಕ್ಕೆ ತಕ್ಕ ಮೃದುಮಧುರ ವಾತಾವರಣವನ್ನೂ ಸೃಷ್ಟಿಸುವುದರಲ್ಲಿಯೇ ತನ್ನ ದೃಷ್ಟಿಯನ್ನೆಲ್ಲಾ ಇಟ್ಟಿರುವಂತೆ ತೋರುತ್ತದೆ. ಹೀಗೆ ಈ ಕಥೆಯ ಬಹುಭಾಗ ನಡೆಯುವುದು ಸಾಯಂಕಾಲ ಅಥವಾ ರಾತ್ರಿ ಬೆಳದಿಂಗಳಲ್ಲಿ; ಅರಮನೆಯ ಪ್ರಾಸಾದಗಳಲ್ಲಿ, ಅದರ ಉದ್ಯಾನಪ್ರದೇಶಗಳಲ್ಲಿ; ವಸಂತೋತ್ಸವ (ಅಂಕ ೧), ಉಯ್ಯಾಲೆ (೨), ಚರ್ಚರಿ (೪)—ಇವು ನಡೆಯುತ್ತಿರುವಾಗ, ರಕ್ಷಾಗೃಹಕ್ಕೆ ಕಾವಲಿದ್ದವರು,—ಸೇನೆಯರು, —ಲೇಖೆಯರು, ಮಾಲೆಯರು, —ಕೇಳಿಯರು, —ವತಿಯರು. ಎರಡನೆಯ ಅಂಕವೆಲ್ಲಾ ಕರ್ಪೂರಮಂಜರಿಯ ಅನಂಗಲೇಖನ ಅಲಂಕಾರ ಉಯ್ಯಾಲೆಯಾಟ ದೋಹದ ದಾನಗಳಿಂದ ತುಂಬಿದೆ. ಮೂರನೆಯದರ ತುಂಬ ಶೃಂಗಾರಸ್ವಪ್ನ, ಪ್ರೇಮಮೀಮಾಂಸೆ; ನಾಲ್ಕನೆಯದರಲ್ಲಿ ನಾಟ್ಯ. ಮೊದಲನೆಯಂಕದಲ್ಲಿ ವಿಚಕ್ಷಣೆ ವಿದೂಷಕರ ಕವಿತಾ ಸ್ಪರ್ಧೆಯಿದೆ; ಇದು ಕಥೆಗೆ ಅನಾವಶ್ಯಕವಾದರೂ ‘ಕಾವ್ಯಮೀಮಾಂಸಾ’ ಕರ್ತನಿಗೆ ಬೇಕಾಯಿತು. ಅದರಲ್ಲಿ ಎರಡು ವಾಕ್ಯಗಳನ್ನು ಮಾತ್ರ ಅವುಗಳ ಭಾವಸ್ವಾರಸ್ಯಕ್ಕಾಗಿ ಇಲ್ಲಿ ಬರೆದಿದೆ—

ವಿಚಕ್ಷಣಾ— “….ಕಾವ್ಯಮೇವ ಕವಿತ್ವಂ ಪಿಶನಯತಿ…ನಿಂದ ನೀಯೇಪ್ಯರ್ಥೇ ಸುಕುಮಾರಾ ತೇ ವಾಣೀ…ಸ್ಥವಿರಾಯಾ ಇವ ಕಟಾಕ್ಷವಿಕ್ಷೇಪಃ, ಕರ್ತಿತಕೇಶಾಯಾ ಇವ ಮಾಲತೀಕುಸುಮಮಾಲಾ, ಕಾಣಾಯಾವ ಕಜ್ಜಲಶಲಾಕಾ, ನ ಸುಷ್ಠುತರಂ ಭಾತಿ ರಮಣೀಯಾ.”

ವಿದೂಷಕಃ— “ತವ ಪುನಾ ರಮಣೀಯೇಪ್ಯರ್ಥೇ ನ ಸುಂದರಾ ಶಬ್ದಾವಳೀ, ಕನಕಕಟಿಸೂತ್ರ ಇವ ಲೋಹ ಕಿಂಕಿಣಿಮಾಲಾ…ನ ಚಾರುತ್ವ ಮವಲಂಬತೇ. ತಥಾಸಿ ತ್ವಂ ವರ್ಣ್ಯಸೇ”.

ಈ ಭಾವಸ್ವಾರಸ್ಯದ ಮತ್ತು ವರ್ಣನೆಗಳ ಜೊತೆಗೆ ಶ್ಲೇಷವಿರೋಧಾಭಾಸಾದಿ ಅಲಂಕಾರ ಚಮತ್ಕಾರಗಳೂ ಸ್ವಲ್ಪ ಬಂದಿವೆ. (I. II.—ವಿದೂಷಕನ ವಿಚಕ್ಷಣೆಯರ ಸಂವಾದ.)

‘ಕರ್ಪೂರಮಂಜರಿ’ ಪೂರ್ತಿಯಾಗಿ ಪ್ರಾಕೃತದಲ್ಲಿದೆ. ಇಂಥ ಪ್ರಾಕೃತ ಸಟ್ಟಕ ದೊರೆತಿರುವುದು ಇದೊಂದೇಯೆ. ಪ್ರಾಕೃತದಲ್ಲಿ ಬರೆದದ್ದಕ್ಕೆ ಕವಿಯೇ ಕಾರಣವನ್ನು ಶಂಕಿಸಿ “ಉಕ್ತಿವಿಶೇಷಃ ಕಾವ್ಯಂ’ ಭಾಷಾ ಯಾ ಭವತಿ ಸಾ ಭವತು” ಎಂದೂ

“ಪುರುಷಾಃ ಸಂಸ್ಕೃತಗುಂಫಾಃ ಪ್ರಾಕೃತಗುಂಪೋಪಿ ಭವತಿ ಸುಕುಮಾರಃ ।

ಪುರುಷಮಹಿಲಾನಾಂ ಯಾವದಿಹಾಂತರಂ ತೇಷು ತಾವತ್ ॥”

ಎಂದೂ ಉತ್ತರ ಕೊಟ್ಟಿದ್ದಾನೆ.

ಇದು ನಾಯಿಕೆ ಉಯ್ಯಾಲೆಯಾಡುವುದರ ವರ್ಣನೆ—

ರಣಂತಮಣಿಣೇಉರಂ ಝಣಝಣಂತ ಹಾರಚ್ಛಡಂ

ಕಲಕ್ಕಣಿದ ಕಿಂಕಿಣೀ ಮುಹರ ಮೇಹಲಾಡಂಬರಂ ।

ವಿಲೋಲವಲ ಆವಲೀ ಜಣಿದ ಮಂಜು ಸಿಂಜಾರವಂ

ಣ ಕಸ್ಸ ಮಣಮೋಹಣಂ ಸಸಿಮಾಹೀಅ ಹಿಂದೋಲಣಮ್ ॥ (ವಿ.ಶಾ. ಭಂಜಿಕೆಯ II. ೬—೭ ನ್ನು ಹೋಲಿಸಿ.)

ರಾಜಶೇಖರನು ಒಳ್ಳೆಯ ಪಂಡಿತ. ಆದರೆ ಅವನ ಪಾಂಡಿತ್ಯದಲ್ಲಿ ಭವಭೂತಿಯ ಪಾಂಡಿತ್ಯದ ಆಳವಾಗಲಿ, ಅಗಲವಾಗಲಿ ಇಲ್ಲ; ಪ್ರಾಚೀನ ಕವಿಗಳ ಭಾವಸಂಪತ್ತಿಲ್ಲ, ಜೀವನವಿಮರ್ಶೆಯಿಲ್ಲ, ಭಾಷಾಸಂಪತ್ತಿದೆ; ಆದ್ದರಿಂದ ಸಂಸ್ಕೃತ ಪ್ರಾಕೃತಗಳನ್ನು ಯಾವ ರೀತಿಯಲ್ಲೆಂದರೆ ಆ ರೀತಿಯಲ್ಲಿ ಹಿಡಿದು ಬರೆಯಲು ಸಮರ್ಥನಾಗಿದ್ದನೆಂದು ಹೇಳಿದರೆ ಅವನಿಗೆ ಸಲ್ಲಬೇಕಾದ ಗೌರವವೂ ಬಹುಮಟ್ಟಿಗೆ ಸಂದಂತಾಗುವುದು.

ರಾಜಶೇಖರನಿಗೆ ಕರ್ಣಾಟಕರ ಪರಿಚಯವಿದ್ದಂತೆ ಕಾಣುತ್ತದೆ; ಆದ್ದರಿಂದ ಅವರ ವಿಚಾರಗಳನ್ನು ಅಲ್ಲಲ್ಲೇ ನಿರ್ದೇಶಿಸುತ್ತಾನೆ; ಒಟ್ಟಿನ ಮೇಲೆ ಅವು ಕನ್ನಡಿಗರಿಗೆ ಸಂತೋಷವಾಗುವಂತೆಯೇ ಇವೆ—

೧.ಅಕಂಡಿಪ್ರಸರಾ ಹಿ ಪುರುಷಕಾರಾಃ ಕರ್ಣಾಟಾನಾಂ (ಬಾ.ರಾ., I, ೩)

೨.ಕರ್ಣಾಟ್ಯೋ ಯತ್ರ ಯತ್ರೈವ ವಿಕ್ಷಿಪಂತಿ ದೃಶೋ ದಿಶಿ । ವಿಕ್ಷೇಪಾಗ್ರೇಸರಃ ಕಾಮಸ್ತತ್ರ ತತ್ರೈವ ಧಾವತಿ । (ಅದೇ, X, ೭೩.)

೩. ಕರ್ಣಾಟೋ ಯುದ್ಧತಂತ್ರೇ ಚತುರತರಮತಿಃ (ವಿ.ಶಾ., IV. ೧೯)

೪. ಸಮರಕರ್ಮಣಿ ನಿಸರ್ಗೋದ್ಭಟಾ ಏವ ಕಾರ್ಣಾಟಾಃ — (ಅದೇ.)

ಪ್ರಮಾಣ ಲೇಖನಾವಳಿ

V.S. Apte — Rajasekhara, His Life and Writings, Poona, 1886.

Pischel — C.G.A., 1883, 122 f.

Bhattanathaswami - Ind. Ant., 41, 139 f.

Sten Konow and R. Lanman — ‘Karpuramanjari’, H.O.S., Vol. IV.

Hultzsch — Ind. Ant., 34, 177 f.

F.W. Thomas — Kavindravachana Samuchchaya, 80 f.

J.F. Fleet — ‘The Date of the Poet Rajasekhara’, Ind. Ant., 16, 175 f.

F.Hall — J.A.S.B., 31, 13 f.

Aufrecht — Z.D.M.G., 27, 77 f.

F. Kielhorn — ‘On the Date of Rajasekhara,’ Ep. Ind., I, 162-179.

V.V. Mirashi — ‘The Chronological Order of Rajasekhara’ s Writings’, in K.B. Pathak Commemoration Volume, 359 f.

K.S. Ramaswami Sastri — Introduction to Kavyamimamsa, Baroda, 1934.

ಕನ್ನಡ ಭಾಷಾಂತರಗಳು

ಕರ್ಣಾಟಕ ಕರ್ಪೂರಮಂಜರೀ ಪರಿಣಯಂ — ನಂಜನಗೂಡು ಅನಂತನಾರಾಯಣ ಶಾಸ್ತ್ರೀ, ಮೈಸೂರು, ೧೯೧೩.

ಕರ್ಪೂರಮಂಜರಿ — ಎಸ್. ಎನ್. ನರಹರಯ್ಯ, ನಂಜನಗೂಡು, ೧೯೨೬.