(ಕ್ರಿ.ಶ. ೮ನೆಯ ಶತಮಾನ)
‘ವೇಣೀಸಂಹಾರ’ ಕರ್ತನಾದ ಭಟ್ಟನಾರಾಯಣನ ಕಾಲದೇಶಗಳು ನಿಷ್ಕೃಷ್ಟವಾಗಿ ಗೊತ್ತಿಲ್ಲ. ವಾಮನನೇ (IV, ೩-೨೮) ಮೊದಲಾದ ಲಾಕ್ಷಣಿಕರು ಅವನ ನಾಟಕದಿಂದ ಉದಾಹರಣೆಗಳನ್ನು ತೆಗೆದುಕೊಂಡಿದ್ದಾರೆ. ವಾಮನನ ಕಾಲ ಸುಮಾರು ಕ್ರಿ.ಶ. ೮೦೦. ಆದ್ದರಿಂದ ಭಟ್ಟನಾರಾಯಣನು ಇದಕ್ಕಿಂತ ಹಿಂದೆ ಇದ್ದನೆಂಬುದು ನಿರ್ವಿವಾದವಾಗಿದೆ.
ಈ ನಾಟಕದ ಪ್ರಸ್ತಾವನೆಯಿಂದ ಭಟ್ಟನಾರಾಯಣನಿಗೆ ‘ಮೃಗರಾಜ’ ಎಂಬ ಉಪನಾಮಧೇಯವು ಇದ್ದಂತೆ ತಿಳಿಯುತ್ತದೆ. ಮೃಗರಾಜನೆಂದರೆ ಸಿಂಹವೆಂದರ್ಥ. ಆದ್ದರಿಂದ ‘ಸಿಂಹ’ ನೆಂಬುದು ಭಟ್ಟನಾರಾಯಣನ ಉಪನಾಮವಾಗಿದ್ದಿರಬಹುದೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ‘ಸಿಂಹ’ ವೆಂಬ ಸುಲಭವಾದ ಲಕ್ಷಣವಾದ ಹೆಸರನ್ನು ಬಿಟ್ಟು ‘ಮೃಗರಾಜ’ ನೆಂಬ ಹೆಸರನ್ನು ಹೇಳುವುದು ಅಸಂಭವವಾಗಿ ಕಾಣುತ್ತದೆ.
ಭಟ್ಟನಾರಾಯಣನು ಬ್ರಾಹ್ಮಣನೆಂದೂ ಅವನನ್ನು ಆದಿಶೂರನು ಕನ್ಯಾಕುಬ್ಜದಿಂದ ಬಂಗಾಳ ಪ್ರಾಂತಕ್ಕೆ ಆಶ್ರಯಕೊಟ್ಟು ಕರೆಸಿಕೊಂಡನೆಂದೂ ಒಂದು ಪ್ರತೀತಿ ಇರುವುದಾಗಿ ತಿಳಿಯಬರುತ್ತದೆ. ಇದರ ಆಧಾರದ ಮೇಲೆ ಸೈನ್ಕೋನೋ ಅವರು ಭಟ್ಟನಾರಾಯಣನ ಕಾಲವು ಏಳನೆಯ ಶತಮಾನದ ಉತ್ತರಾರ್ಧವಾಗಿರಬಹುದೆಂದು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ದೃಢವಾದ ಪ್ರಮಾಣವಿಲ್ಲ.
ಅವನ ‘ವೇಣೀಸಂಹಾರ’ ವು ಬಹುದಿನದಿಂದ ಲಾಕ್ಷಣಿಕರಿಗೂ ಪಂಡಿತರಿಗೂ ಪ್ರಿಯವಾದದ್ದಾಗಿದೆ. ಅದು ಆರು ಅಂಕಗಳ ನಾಟಕ. ಅದರ ಕಥಾ ಸಾರಾಂಶವು ಹೀಗಿದೆ—
ಕೃಷ್ಣನು ಸಂಧಿಗೆ ಹೋಗಿದ್ದಾನೆ; ಆದರೆ ಭೀಮನಿಗೆ ತಾಳ್ಮೆಯಿಲ್ಲ; ಈ ಮಧ್ಯೆ ದ್ರೌಪದಿ ಬಂದು ಭಾನುಮತಿ ತನ್ನನ್ನು ಮೂದಲಿಸಿದ್ದನ್ನು ತಿಳಿಸಿ ಅವನನ್ನು ಇನ್ನೂ ರೇಗಿಸುವಳು. ಸಂಧಿ ಮುರಿಯಿತೆಂಬ ವರ್ತಮಾನ ಬರುವುದು, (೧). ಭಾನುಮತಿಗೆ ಕೆಟ್ಟ ಕನಸಾಗುವುದು; ಅದರ ದುಷ್ಫಲ ಪರಿಹಾರಕ್ಕಾಗಿ ಅವಳು ನಿಯಮದಿಂದಿರಲು ದುರ್ಯೋಧನನು ಅದನ್ನು ಭಂಗಪಡಿಸುವನು. ಅವನಿಗೆ ಅಪಶಕುನವಾಗುವುದು. ಗಾಳಿ ಎದ್ದು ಅವನ ತೇರಿನ ಧ್ವಜ ಮುರಿಯುವುದು; ಜಯದ್ರಥನ ತಾಯಿಯೂ ಹೆಂಡತಿಯೂ ಬಂದು ಅರ್ಜುನನ ಪ್ರತಿಜ್ಞೆಯನ್ನು ತಿಳಿಸಲು ದುರ್ಯೋಧನನು ಅವರನ್ನು ಸಮಾಧಾನ ಮಾಡಿ ಕಳುಹಿಸುವನು (೨). (ಸೈಂಧವ ಘಟೋತ್ಕಚಾದಿಗಳ ಮರಣ-ಪ್ರವೇಶಕ) ದ್ರೋಣಾಚಾರ್ಯರು ಸತ್ತ ಪರಿಯನ್ನು ಕೇಳಿ ಪಾಂಡವರ ಮೇಲೆ ಕುಪಿತನಾದ ಅಶ್ವತ್ಥಾಮನು ಅವರನ್ನು ಶಿಕ್ಷಿಸಬೇಕೆಂದು ಹಟ ತೊಟ್ಟು ಕೃಪನೊಡನೆ ಕೌರವನ ಹತ್ತಿರಕ್ಕೆ ಬಂದು ಸೇನಾಧಿಪತ್ಯವನ್ನು ಕೇಳುವನು. ಆದರೆ, ಅವನು ಸೇನಾಧಿಪತ್ಯವನ್ನು ಕರ್ಣನಿಗೆ ಕೊಡುವುದಾಗಿ ಮೊದಲೇ ನಿಶ್ಚಯ ಮಾಡಿಕೊಂಡಿದ್ದದ್ದಾಗಿ ಹೇಳುವನು. ಈ ಮಧ್ಯೆ ಅಲ್ಲಿದ್ದ ಕರ್ಣನ ಮೂದಲಿಕೆಯ ಮಾತುಗಳಿಂದ ಅವನಿಗೂ ಅಶ್ವತ್ಥಾಮನಿಗೂ ಜಗಳ ಹತ್ತಿ, ಕರ್ಣ ಸಾಯುವವರೆಗೆ ತಾನು ಆಯುಧ ಹಿಡಿಯುವುದಿಲ್ಲವೆಂದು ಅಶ್ವತ್ಥಾಮನು ಪ್ರತಿಜ್ಞೆ ಮಾಡಿ ಕತ್ತಿಯನ್ನು ಕೆಳಕ್ಕೆ ಹಾಕಿ ಹೊರಟು ಹೋಗುವನು (೩). (ದುಶ್ಶಾಸನನ ವಧೆ). ಕರ್ಣಾರ್ಜುನರ ಕಾಳಗದ ವರ್ಣನೆ (೪). ಧೃತರಾಷ್ಟ್ರ ಗಾಂಧಾರಿಯರು ರಣರಂಗದಲ್ಲಿದ್ದ ದುರ್ಯೋಧನನನ್ನು ಕಂಡು ಸಂಧಿಮಾಡಿಕೊಳ್ಳುವಂತೆ ಹೇಳುವರು; ಕರ್ಣ ಸತ್ತನೆಂದು ವರ್ತಮಾನ ಬರುವುದು; ಅಶ್ವತ್ಥಾಮನನ್ನು ನಿರಾಕರಿಸಿ ದುರ್ಯೋಧನನು ತಾನೇ ಸೇನಾಧಿಪತಿಯಾಗಿ ಶತ್ರುಗಳನ್ನು ಕೊಲ್ಲುವುದಾಗಿ ನಿಶ್ಚಯಿಸುವನು. ಭೀಮಾರ್ಜುನರು ಅಲ್ಲಿಗೆ ಬರುವರು. ದುರ್ಯೋಧನನಿಗೂ ಭೀಮನಿಗೂ ಮಾತು ನಡೆದು ಭೀಮನು ಅವನನ್ನು ಮರುದಿನ ಸಾಯಂಕಾಲದೊಳಗಾಗಿ ಕೊಲ್ಲುವಂತೆ ಪ್ರತಿಜ್ಞೆ ಮಾಡಿ ಹೋಗುವನು (೫). ಕೊಳದಲ್ಲಿ ಅವಿತುಕೊಂಡಿದ್ದ ದುರ್ಯೋಧನನು ಸಿಕ್ಕಿ ಅವನಿಗೂ ಭೀಮನಿಗೂ ಕಾಳಗವಾಗುತ್ತಿತ್ತೆಂದು ಧರ್ಮರಾಯ ದ್ರೌಪದಿಯರಿಗೆ ವರ್ತಮಾನ ಬರುವುದು. ಈ ಮಧ್ಯೆ ದುರ್ಯೋಧನನ ಸ್ನೇಹಿತನಾದ ಚಾರ್ವಾಕನೆಂಬ ರಾಕ್ಷಸನು ಋಷಿವೇಷದಿಂದ ಅಲ್ಲಿಗೆ ಬಂದು, ಭೀಮನು ಸತ್ತನೆಂದೂ ಅರ್ಜುನನೂ ಸತ್ತಿರಬಹುದೆಂದೂ ಹೇಳುವನು. ಅದನ್ನು ಕೇಳಿ ದುಃಖದಿಂದ ಧರ್ಮರಾಯ ದ್ರೌಪದಿಯರು ಅಗ್ನಿ ಪ್ರವೇಶಕ್ಕೆ ಸಿದ್ಧರಾಗುವರು. ಭೀಮನು ದುರ್ಯೋಧನನನ್ನು ಕೊಂದು ಮೈಯೆಲ್ಲಾ ರಕ್ತವಾಗಿ ದ್ರೌಪದಿಯನ್ನು ಹುಡುಕಿಕೊಂಡು ಬರುವನು. ಅವನನ್ನು ದುರ್ಯೋಧನನೆಂದುಕೊಂಡು ಎಲ್ಲರೂ ಭಯಭ್ರಾಂತರಾಗುವರು. ಕೊನೆಗೆ ನಿಜಸ್ಥಿತಿ ತಿಳಿದು ‘ವೇಣೀಸಂಹಾರ’ ವಾಗುವುದು. ಕೃಷ್ಣಾರ್ಜುನರು ಬಂದು ಚಾರ್ವಾಕ ವೃತ್ತಾಂತವನ್ನೂ ಅವನು ನಕುಲನಿಂದ ಹತನಾದದ್ದನ್ನೂ ತಿಳಿಸುವರು. ಧರ್ಮರಾಯನ ಪಟ್ಟಾಭಿಷೇಕ (೬).
ಹೀಗೆ ಇದು ಕೃಷ್ಣಸಂಧಾನದಿಂದ ಹಿಡಿದು ದುರ್ಯೋಧನನ ಸಂಹಾರದವರೆಗಿನ ಭಾರತಕಥೆ. ಇಷ್ಟು ದೊಡ್ಡ ಕಥೆಯನ್ನು ಸಂಗ್ರಹಿಸಿ ರಸವತ್ತಾಗಿ ರಚಿಸುವುದರಲ್ಲಿಯೂ ಪಾತ್ರಗಳನ್ನು ಚಿತ್ರಿಸಿ ಜೋಡಿಸುವುದರಲ್ಲಿಯೂ ಕವಿ ಒಳ್ಳೆಯ ಕೌಶಲವನ್ನು ಪ್ರದರ್ಶಿಸಿದ್ದಾನೆ. ಅವನ ಪ್ರತಿಭೆ ಈ ಅಂಶಗಳಲ್ಲಿ ಭಾಸ ವಿಶಾಖದತ್ತರ ಪ್ರತಿಭೆಯನ್ನು ಹೋಲುತ್ತದೆ. ಆದರೆ ಜಾತಿ ಅದೇ ಆದರೂ ಗುಣವು ಸ್ವಲ್ಪ ಕೀಳು. ಅಲ್ಲದೆ ಆಗಿನ ಕಾವ್ಯಸಂಪ್ರದಾಯನಿಷ್ಠವಾಗಿದ್ದ ಕೆಲವು ಸಾಹಿತ್ಯ ಲಕ್ಷಣಗಳೂ ಲೋಪಗಳೂ ಸ್ವಾಭಾವಿಕವಾಗಿ ಈ ನಾಟಕದ ಮೇಲೆ ತಮ್ಮ ಪ್ರಭಾವವನ್ನು ಬೀರಿ ಅದರ ಗುಣವನ್ನು ಕುಗ್ಗಿಸಿವೆ. ನಿಸರ್ಗಪ್ರತಿಭೆ ಕಾಲದೋಷದಿಂದ ಕುಂದುವುದಕ್ಕೆ ‘ವೇಣೀಸಂಹಾರ’ ವು ಒಂದು ಒಳ್ಳೆಯ ಉದಾಹರಣೆ.
ಈಚಿನ ಲಕ್ಷಣಗ್ರಂಥಗಳಲ್ಲಿ, ವಿಶೇಷವಾಗಿ ದಶರೂಪಕದಲ್ಲಿ, ‘ವೇಣೀಸಂಹಾರ’ ವು ತುಂಬ ಉದಾಹೃತವಾಗಿದೆ. ಧನಂಜಯನ ಕಾಲಕ್ಕೆ ‘ರತ್ನಾವಳಿ’ ‘ನಾಗಾನಂದ’ ‘ವೇಣೀಸಂಹಾರ’ ಇವಕ್ಕೆ ಬಹು ಮಾನ್ಯತೆ ಇದ್ದ ಹಾಗೆ ಕಾಣುತ್ತದೆ. ಯಾವ ಲಕ್ಷಣಕ್ಕೆ ಬೇಕಾದರೂ ಅವುಗಳಿಂದ ಲಕ್ಷ್ಯವನ್ನು ಕೊಡಬಹುದಾಗಿತ್ತು. ಅವು ಶಾಸ್ತ್ರವನ್ನು ಮುಂದಿಟ್ಟುಕೊಂಡೇ, ಅದರ ನಿಯಮಗಳಿಗೆ ಹೊಂದಿಸಿಕೊಂಡೇ ಬರೆದವುಗಳು. ಆದರೆ ಅವುಗಳಲ್ಲಿ ನಿಯಮ ಪರಿಪಾಲನೆ ಸ್ವಲ್ಪ ಕಡಮೆಯಾಗಿದ್ದರೆ ನಾಟಕವು ಉತ್ತಮವಾಗುತ್ತಿತ್ತೆಂದು ತೋರುತ್ತದೆ. ಹೀಗೆ ಯುದ್ಧವೀರಪ್ರಧಾನವಾದ ಈ ನಾಟಕದಲ್ಲಿ ರಂಗದ ಮೇಲೆ ಯುದ್ಧವೇ ಬರುವುದಿಲ್ಲ; ಮೊದಲನೆಯ ಅಂಕವು ಭೀಮನ ವೀರಾವೇಶದ ಮಾತುಗಳಿಂದ ಆರಂಭವಾದರೂ ಯುದ್ಧವನ್ನು ವಿವರಿಸುವ ಸುಂದರಕ ಪಾಂಚಾಲಕರು ನಾಲ್ಕನೆಯ ಮತ್ತು ಆರನೆಯ ಅಂಕಗಳಲ್ಲಿ ತುಂಬ ಬೇಸರಗೊಳಿಸುತ್ತಾರೆ. ಮೂರನೆಯ ಅಂಕದಲ್ಲಿ ಕರ್ಣಾಶ್ವತ್ಥಾಮರು ಹೊಡೆದಾಡಲು ಕತ್ತಿ ಹಿರಿದು ನುಗ್ಗುವುದು ಎಷ್ಟೋ ವೀರಜನಕವಾಗಿದೆ. ಐದನೆಯ ಅಂಕವೇ ನಾಟಕದಲ್ಲೆಲ್ಲಾ ಶ್ಲಾಘ್ಯವಾದ ಭಾಗ. ಇದರಲ್ಲಿ ಕವಿ ಕರುಣವನ್ನೂ ವೀರವನ್ನೂ ಚೆನ್ನಾಗಿ ಚಿತ್ರಿಸಿದ್ದಾನೆ. ದುರ್ಯೋಧನನಿಗೆ ಮುಪ್ಪಿನ ತಾಯಿ ತಂದೆಗಳಲ್ಲಿ ಇದ್ದ ಭಕ್ತಿ, ಕರ್ಣನಲ್ಲಿ ಇದ್ದ ಸ್ನೇಹ, ಅಶ್ವತ್ಥಾಮನಲ್ಲಿದ್ದ ತಿರಸ್ಕಾರ, ಭೀಮಾರ್ಜುನರ ಮೇಲಿದ್ದ ದ್ವೇಷ—ಇವೆಲ್ಲವೂ ಇಲ್ಲಿ ಚೆನ್ನಾಗಿ ಪ್ರತಿಪಾದಿತವಾಗಿವೆ. ಅನೇಕ ಘಟನೆಗಳನ್ನು ತಂದು ಜೋಡಿಸಿ ದುರ್ಯೋಧನನ ಸಂಕಟ ಸಮಸ್ಯೆಯನ್ನು ವರ್ಣಿಸಿರುವ ಸನ್ನಿವೇಶವು ಶ್ಲಾಘ್ಯವಾಗಿದೆ. ಆದರೆ ಚಾರ್ವಾಕಪ್ರಕರಣವು ಅನಾವಶ್ಯಕ, ಅನುಚಿತ. ಇದು ಕೊನೆಗೆ ಅದ್ಭುತವನ್ನು ತರಲು ಪ್ರಯತ್ನಮಾಡಿದ ಅತಿಬುದ್ಧಿವಂತಿಕೆಯ ಪ್ರಯತ್ನ. ಹೀಗೆಯೇ ಎರಡನೆಯ ಅಂಕದಲ್ಲಿ ಬರುವ ದುರ್ಯೋಧನನ ಸಂದೇಹ ಸ್ವೇಚ್ಛಾವಿಹಾರ ಪ್ರಕರಣಗಳೂ ಅನುಚಿತವಾಗಿಯೇ ಕಾಣುತ್ತವೆ. ಪ್ರಾಯಶಃ ಮೊದಲನೆಯ ಅಂಕದ ಭೀಮ ದ್ರೌಪದಿಯರಿಗೂ ಇಲ್ಲಿಯ ದುರ್ಯೋಧನ ಭಾನುಮತಿಯರಿಗೂ ವ್ಯತ್ಯಾಸ ತೋರಿಸಬೇಕೆಂಬುದು ಕವಿಯ ಉದ್ದೇಶವಿರಬಹುದು; ಲೋಕಾಭಿರುಚಿ, ಕವಿ ಸಂಪ್ರದಾಯ ಮುಂತಾದವೂ ಕಾರಣವಾಗಿ ಕಾಣುತ್ತವೆ. ಒಟ್ಟಿನ ಮೇಲೆ ವಾಚಿಕಾಭಿನಯದಿಂದ ಎಷ್ಟು ವೀರ ಬರಬಹುದೋ ಅಷ್ಟೂ ನಾಟಕದಲ್ಲಿ ಬಂದಿದೆ. ಒಂದೆರಡು ಮಾತಿನಿಂದಲೇ ಭಾನುಮತಿ ಚೇಟಿ ಮುಂತಾದ ಸ್ತ್ರೀ ಪಾತ್ರಗಳೂ ಅಪ್ರಧಾನ ಪಾತ್ರಗಳೂ ಖಚಿತವಾಗಿ ಸೃಷ್ಟಿಸಲ್ಪಟ್ಟಿವೆ.
ಮಾತಿನ ಕೌಶಲದಿಂದ ಮುಂದೆ ಬರುವುದನ್ನು ಸೂಚಿಸುವ ಭಾಸಗುಣವು ಇಲ್ಲಿಯೂ ಕಂಡುಬರುತ್ತದೆ.* ಆದರೆ ಭಾಷೆಯಲ್ಲಿ ಆ ಸರಳತೆ ಲಾಲಿತ್ಯಗಳಿಲ್ಲ. ಗೌಡಶೈಲಿ ವೀರಕ್ಕೆ ಅನುಗುಣವೇ; ಆದರೆ, ಅದು ವೀರದಲ್ಲಿ ಬರುವಂತೆ ಶೃಂಗಾರದಲ್ಲಿಯೂ ಉದ್ಯಾನವರ್ಣನೆ ಸೂರ್ಯೋದಯ ವರ್ಣನೆ ಮುಂತಾದೆಡೆಗಳಲ್ಲಿಯೂ ಬರುತ್ತದೆ. ಇದು ಕಾದಂಬರಿಯ ಪ್ರಭಾವ. ವೀರವಿಲ್ಲದ ಪದ್ಯದ ಶೈಲಿಯೂ ಸ್ವಲ್ಪ ಪೆಡಸೇ.
‘ವೇಣೀಸಂಹಾರ’ ದ ವಸ್ತು ರಸ ಮಾತುಕಥೆಗಳನ್ನು ಪಂಪ ರನ್ನರು ಪೂರ್ತಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಆದ್ದರಿಂದ ‘ಪಂಪ ಭಾರತ’ ದ ಹದಿಮೂರನೆಯ ಆಶ್ವಾಸವೂ ‘ಗದಾಯುದ್ಧ’ ದ ಬಹುಭಾಗವೂ ಕಳೆಗಟ್ಟಿವೆ.
ಪ್ರಮಾಣ ಲೇಖನಾವಳಿ
C. Lassen —Ind. Ant., 3, 71 8 f.
J.Grill — Venisamhara, iv f.
R.D. Banerjee —Memories of Asiatic Society of Bengal, 5, 47 f.
R. Appa Shastri and K.N. Dravid -Introduction to their Edition of Venisamhara, Kolhapur, 1 91 0.
Gajendragadkar -Venisamhara, a Study.
ಕನ್ನಡ ಭಾಷಾಂತರಗಳು
ವೇಣೀಸಂಹಾರ ನಾಟಕಂ — ಜಯರಾಯಾಚಾರ್ಯ, ಮೈಸೂರು, ೧೯೦೭.
ವೇಣೀಸಂಹಾರ ನಾಟಕಂ — ಧೋಂಡೋ ನರಸಿಂಹ ಮುಳಬಾಗಿಲ್, ಧಾರವಾಢ, ೧೮೮೪.
ವೇಣೀಸಂಹಾರ ನಾಟಕಂ — ಎಂ.ಕೆ. ಶ್ರೀನಿವಾಸರಾಘವಾಚಾರ್ಯ, ಮೈಸೂರು, ೧೯೨೧.
ವೇಣೀಸಂಹಾರ ಪ್ರತಿಕೃತಿ — ಮೈಸೂರು ಸೀತಾರಾಮಶಾಸ್ತ್ರೀ, ಮೈಸೂರು.