೦೨ ಭವಭೂತಿ

(ಕ್ರಿ.ಶ. ಸುಮಾರು ೭೦೦)

ಭವಭೂತಿಯು ‘ಮಹಾವೀರ ಚರಿತ’, ‘ಮಾಲತೀ ಮಾಧವ’, ‘ಉತ್ತರ ರಾಮಚರಿತ’ ಎಂಬ ಮೂರು ನಾಟಕಗಳನ್ನು ಬರೆದಿದ್ದಾನೆ. ಇವುಗಳಲ್ಲಿ ‘ಮಹಾವೀರ ಚರಿತ’ ವೇ ಮೊದಲು ಬರೆದದ್ದೆಂದು ತೋರುತ್ತದೆ. ಅದರಲ್ಲಿ ಅವನು ತನ್ನ ಕುಲಗೋತ್ರ ದೇಶಗಳ ವಿಚಾರವಾಗಿ ಹೀಗೆಂದು ಹೇಳಿಕೊಂಡಿದ್ದಾನೆ—

“ಅಸ್ತಿ ದಕ್ಷಿಣಾಪಥೇ ಪದ್ಮಪುರಂ ನಾಮ ನಗರಂ. ತತ್ರ ಕೇಚಿತ್ತೈತ್ತಿರೀಯಾಃ ಕಾಶ್ಯಪಾಶ್ಚರಣಗುರವಃ ಪಂಕ್ತಿಪಾವನಾಃ ಪಂಚಾಗ್ನಯೋ ಧೃತವ್ರತಾಃ ಸೋಮಪೀಥಿನ ಉದುಂಬರನಾಮಾನೋ ಬ್ರಹ್ಮವಾದಿನಃ ಪ್ರತಿವಸಂತಿ. ತದಾಮುಷ್ಯಾಯಣಸ್ಯ ತತ್ರಭವತೋ ವಾಜಪೇಯಯಾಜಿನೋ ಮಹಾಕವೇಃ ಪಂಚಮಃ ಸುಗೃಹೀತನಾಮ್ನೋ ಭಟ್ಟಗೋಪಾಲಸ್ಯ ಪೌತ್ರಃ ಪವಿತ್ರಕೀರ್ತೇರ್ನೀಲಕಂಠಸ್ಯಾತ್ಮಸಂಭವಃ ಶ್ರೀಕಂಠಪದಲಾಂಛನಃ ಪದವಾಕ್ಯ ಪ್ರಮಾಣಜ್ಞೋ ಭವಭೂತಿರ್ನಾಮ ಜತುಕರ್ಣೀಪುತ್ರಃ ಕವಿರ್ಮಿತ್ರಧೇಯಮಸ್ಮಾಕಮಿತಿ ಭವಂತೋ ವಿದಾಂಕುರ್ವಂತು…ಯಸ್ಯಜ್ಞಾನನಿಧಿರ್ಗುರುಃ”.

ಮಿಕ್ಕ ಎರಡು ನಾಟಕಗಳಿಂದಲೂ ಇವೇ ಅಂಶಗಳೇ ಸೂಕ್ಷ್ಮವಾಗಿ ತಿಳಿದುಬರುತ್ತವೆ. ಇವುಗಳನ್ನು ಹೀಗೆ ಸಂಗ್ರಹಿಸಬಹುದು—

‘ಭವಭೂತಿಯ (ಇಟ್ಟ?) ಹೆಸರು ಶ್ರೀಕಂಠ; ಅವನ ತಾಯಿತಂದೆಗಳು ಜತುಕರ್ಣೀ ಮತ್ತು ನೀಲಕಂಠ; ತಾತನ ಹೆಸರು ಭಟ್ಟಗೋಪಾಲ; ವಂಶ ಪಾರಂಪರ್ಯವಾಗಿ ಅವರು ಶ್ರೋತ್ರಿಯರು, ಸೋಮಯಾಜಿಗಳು; ಅವರದು ತೈತ್ತಿರೀಯ ಶಾಖೆ; ಕಾಶ್ಯಪಗೋತ್ರ; ಉದುಂಬರ ವಂಶ. ಭವಭೂತಿಗಿಂತ ಐದು ತಲೆ ಹಿಂದೆ ಇದ್ದ ಅವನ ಪೂರ್ವಿಕರೊಬ್ಬರು* ವಾಜಪೇಯ ಯಾಗ ಮಾಡಿದವರೂ ಮಹಾಕವಿಗಳೂ ಆಗಿದ್ದರು. “ಜ್ಞಾನನಿಧಿ” ಅವನ ಗುರು. ಅವನಿಗೆ ನಟರು ಸ್ನೇಹಿತರಾಗಿದ್ದರು. ದಕ್ಷಿಣಾಪಥದಲ್ಲಿರುವ ‘ಪದ್ಮಪುರ’ ವು* ಅವನ ಊರು. ತಾನು ‘ಪದವಾಕ್ಯ ಪ್ರಮಾಣಜ್ಞ’ -ಎಂದರೆ ವ್ಯಾಕರಣ ನ್ಯಾಯ ಮೀಮಾಂಸಾ ವೇದಾಂತ ಶಾಸ್ತ್ರಗಳಲ್ಲಿ ಪಂಡಿತ.* (ಇದರ ಜೊತೆಗೆ ವೇದವನ್ನೂ ಸಾಂಖ್ಯ ಯೋಗ, ಅಲಂಕಾರ, ಅರ್ಥ, ಕಾಮ, ನೀತಿ ಮುಂತಾದ ಶಾಸ್ತ್ರಗಳನ್ನೂ ಬಲ್ಲವನಾಗಿದ್ದನೆಂದು ಆಂತರ ಪ್ರಮಾಣಗಳಿಂದ ಊಹಿಸಬಹುದು.)*

‘ಭವಭೂತಿ’, ‘ಶ್ರೀಕಂಠ’ ಇವುಗಳಲ್ಲಿ ಕವಿಯ ತಾಯಿತಂದೆಗಳು ಅವನಿಗೆ ಇಟ್ಟ ಹೆಸರು ಯಾವುದು, ಬಂದ ಬಿರುದು ಯಾವುದು ಎಂಬುದರಲ್ಲಿ ಸ್ವಲ್ಪ ವಿವಾದವಿದೆ. ಶ್ರೀಕಂಠ ಎಂಬುದು ಬಿರುದಾದರೆ ಅದಕ್ಕೆ ವಾಕ್ ಸಂಪತ್ತು ಅಥವಾ ವಿದ್ಯೆ ಕಂಠದಲ್ಲಿ ಉಳ್ಳವನು ಎಂಧರ್ಥ; ಭವಭೂತಿ ಎಂಬುದು ಬಿರುದಾದರೆ ಅದಕ್ಕೆ ಈಶ್ವರಪ್ರಸಾದವುಳ್ಳವನು ಎಂದರ್ಥ; ಇದು ‘ಸಾಂಬಾಪುನಾತು ಭವಭೂತಿ ಪವಿತ್ರಮೂರ್ತಿಃ’ ಎಂಬ ಶ್ಲೋಕವನ್ನು ಬರೆದದ್ದಕ್ಕಾಗಿ (ಒಬ್ಬ?) ರಾಜನಿಂದ ಬಂದ ಬಿರುದೆಂದೂ ವ್ಯಾಖ್ಯಾನಕಾರರು ಒಂದು ಕಥೆಯನ್ನು ಬೇರೆ ಹೇಳುತ್ತಾರೆ. ನೀಲಕಂಠ, ಗೋಪಾಲ, ಎಂಬ ಅವನ ಪೂರ್ವಿಕರ ಹೆಸರುಗಳನ್ನು ನೋಡಿದರೆ ‘ಶ್ರೀಕಂಠ’ ಎಂಬುದೇ ಹುಟ್ಟು ಹೆಸರಾಗಿರುವುದು ಸಂಭವವೆನ್ನಿಸುತ್ತದೆ.

ಭವಭೂತಿಯ ಸಂಸಾರವು ಸುಖಮಯವಾಗಿತ್ತೆಂದೂ ಅವನಿಗೆ ಒಳ್ಳೆಯ ಪತ್ನೀಪುತ್ರ ಮಿತ್ರಾದಿಗಳಿದ್ದರೆಂದೂ ಅಂತರ ಪ್ರಮಾಣಗಳಿಂದ ಊಹಿಸಲು ಪ್ರಯತ್ನಗಳು ನಡೆದಿವೆ. ಈ ಊಹೆಗೆ ಆಧಾರಗಳು ಸಾಲವು. ಸ್ವಲ್ಪ ಸಾಧಾರವಾಗಿ ಊಹಿಸಬಹುದಾದ ಸಂಗತಿಯೆಂದರೆ ಅವನ ಅಪಾರವಾದ ಆತ್ಮವಿಶ್ವಾಸ. ಯಾರಾದರೂ ಖಂಡನೆ ಮಾಡಿದರೆ ‘ಅವರೇನು ಬಲ್ಲರು? ಅವರನ್ನು ಯಾರು ಓದು ಎಂದವರು?’ ಎಂಬ ಒಂದು ಬಗೆಯ ಔದ್ಧತ್ಯ ! ಕಾಳಿದಾಸನು ‘ಅಪರಿತೋಷಾದ್ವಿದುಷಾಂನ ಸಾಧು ಮನ್ಯೇ ಪ್ರಯೋಗವಿಜ್ಞಾನಂ…ಆತ್ಮನ್ಯ ಪ್ರತ್ಯಯ ಚೇತಃ’ ಎಂದರೆ, ಭವಭೂತಿ.

ಯಂ ಬ್ರಹ್ಮಾಣಮಿಯಂ ದೇವೀ ವಾಗ್ವಶ್ಯೇವಾನ್ವವರ್ತತ ।

ಉತ್ತರಂ ರಾಮಚರಿತಂ ತತ್ಪ್ರಣೀತಂ ಪ್ರಯೋಕ್ಷ್ಯತೇ ॥

ಎಂದು ‘ಉತ್ತರ ರಾಮಚರಿತ’ ಗೆ ನಾಂದಿ ಮಾಡಿದನು.

ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಂ ಜಾನಂತಿ ತೇ ಕಿಮಪಿ ರ್ತಾ ಪ್ರತಿ ನೈಷ ಯತ್ನಃ ।

ಉತ್ಪತ್ಸ್ಯತೇಽಸ್ತಿ ಮಮ ಕೋಪಿ ಸಮಾನಧರ್ಮಾ

ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ ॥

ಎಂದು ಮಾಲತೀ ಮಾಧವದ ಪ್ರಸ್ತಾವನೆಯಲ್ಲಿ ತನ್ನ ಖಂಡನಕಾರರನ್ನು ಖಂಡಿಸಿದನು.

ಭವಭೂತಿ ‘ವಿಕ್ರಮಾದಿತ್ಯ’ ನ ಒಡ್ಡೋಲಗದ ನವಮಣಿಗಳಲ್ಲಿ ಒಬ್ಬನಾಗಿದ್ದನೆಂದೂ ಇದಕ್ಕೆ ಅವನಿಗೆ ಕಾಳಿದಾಸನ ಸಹಾಯ ದೊರೆಯಿತೆಂದೂ ಹೇಳುವ ಒಂದು ದಂತಕಥೆ ಇದೆ. ಇದರ ಪ್ರಕಾರ—ಕಾಳಿದಾಸನು ಭವಭೂತಿಯ ‘ಉತ್ತರ ರಾಮಚರಿತ’ ವನ್ನು ಅವನಿಂದ ಕೇಳಿ ಮೆಚ್ಚಿ, “ಕಿಮಪಿ ಕಿಮಪಿ ಮಂದಂ…ರಾತ್ರಿರೇವಂ ವ್ಯರಂಸೀತ್” (I.೨೭) ಎಂಬ ಶ್ಲೋಕದಲ್ಲಿ ಒಂದು ಅನುಸ್ವಾರವನ್ನು ತೆಗೆದು “ರಾತ್ರಿರೇವ” ಎಂದು ಮಾಡಿದರೆ ಅವನನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದನು; ಭವಭೂತಿ ಒಪವಪಿ ಅದರಂತೆ ತಿದ್ದಲು ಅವನನ್ನು ನವಮಣಿಗಳಲ್ಲಿ ಒಬ್ಬನನ್ನಾಗಿ ಮಾಡಿಸಿದನು. ಇದಿರಿಂದ, ಪ್ರಾಚೀನರಿಗೆ “ರಾತ್ರಿರೇವ” ಎಂಬ ಪಾಠವು ಮೆಚ್ಚಿಕೆಯಾಗಿತ್ತೆಂದು ಮಾತ್ರ ಊಹಿಸಬಹುದೇ ಹೊರತು ಭವಭೂತಿ ಕಾಳಿದಾಸನು ಸಮಕಾಲೀನರಾಗಿದ್ದರೆಂದು ಹೇಳಲಾಗುವುದಿಲ್ಲ. ಆದರೆ ಭವಭೂತಿಯ ಗ್ರಂಥದಲ್ಲಿ ಕಾಳಿದಾಸನ ಪ್ರಭಾವವು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ.*

‘ಮಾಲತೀಮಾಧವ’ ದ ಒಂದು ಹಸ್ತಪ್ರತಿಯಲ್ಲಿ ಅದು ಭಟ್ಟಕುಮಾರಿಲ ಶಿಷ್ಯ ವಿರಚಿತವೆಂದೂ (ಅಂಕ ೩-ಅಂತ್ಯಗದ್ಯ), ಉಂಬೇಕಾಚಾರ್ಯ ವಿರಚಿತವೆಂದೂ (ಅಂಕ-೬-ಅಂತ್ಯಗದ್ಯ), ಕುಮಾರಿಲ ಶಿಷ್ಯನಾದ ಭವಭೂತಿ ವಿರಚಿತವೆಂದೂ (ಕೊನೆಯಲ್ಲಿ) ಉಕ್ತವಾಗಿದೆ. ಇದಕ್ಕೆ ಭವಭುತಿಯೂ ಕುಮಾರಿಲ ಶಿಷ್ಯನಾದ ಉಂಬೇಕನೂ ಒಬ್ಬನೇ ಎಂದೂ ಅರ್ಥವಾಗುತ್ತದೆ. ಆದರೆ ಇದಕ್ಕೆ ಎಷ್ಟರಮಟ್ಟಿಗೆ ಪ್ರಾಮಾಣ್ಯ ಕೊಡಬೇಕೆಂಬುದು ಯೋಚಿಸತಕ್ಕ ವಿಷಯ. ಏಕೆಂದರೆ ಮಿಕ್ಕ ಯಾವ ಪ್ರತಿಗಳಲ್ಲಿಯೂ ಈ ಅಂಶವಿಲ್ಲ. ಅಲ್ಲದೆ ಭವಭೂತಿ ತನ್ನ ಗುರುವನ್ನು ‘ಜ್ಞಾನನಿಧಿ’ ಯೆಂದು ಹೇಳಿಕೊಂಡಿದ್ದಾನೆ. ಇದು ಅಂಕಿತನಾಮವಲ್ಲವೆನ್ನೋಣ; ಆದರೆ ‘ಕುಮಾರಿಲ’ ನ ಹೆಸರನ್ನು ಸೇರಿಸುವುದು ಅವನಿಗೆ ಅಸಾಧ್ಯವಾಗಿರಲಿಲ್ಲ.* ಕುಮಾರಿಲ ಭವಭೂತಿಗಳಿಬ್ಬರೂ ದಾಕ್ಷಿಣಾತ್ಯರು; ಸುಮಾರು ಒಂದೇ ಕಾಲದಲ್ಲಿದ್ದವರು. ಆದರೆ ಇದಿಷ್ಟರಿಂದಲೇ ಅವರು ಗುರುಶಿಷ್ಯರೆಂದು ಊಹಿಸುವುದು ಸಪ್ರಮಾಣವಾಗಲಾರದು.

ರಾಜಶೇಖರನು (ಸುಮಾರು ೯೦೦) ತನ್ನನ್ನು ಭವಭೂತಿಯಂತೆ ವಾಲ್ಮೀಕಿಯ ಅವತಾರವೆಂದು ಹೊಗಳಿಕೊಂಡಿದ್ದಾನೆ.* ವಾಮನನು (ಸುಮಾರು ೮೦೦) ಮಹಾವೀರಚರಿತದಿಂದ (I.೫೪) ಉದಾಹರಿಸಿದ್ದಾನೆ. ರಾಜತರಂಗಿಣಿಯಲ್ಲಿ (IV. ೧೪೪) ಭವಭೂತಿ ವಾಕ್ಪತಿರಾಜರು ಯಶೋವರ್ಮನ ಆಶ್ರಿತರಾಗಿದ್ದರೆಂದು ಹೇಳಿದೆ.* ಯಶೋವರ್ಮನ ಕಾಲ ಸುಮಾರು ೭೩೬. ಇದೇ ಸುಮಾರಿನಲ್ಲಿ ಬರೆದ ವಾಕ್ಪತಿರಾಜನ ಗೌಡವಹೋ ಕಾವ್ಯದಲ್ಲಿ ೭೯೯ ಭವಭೂತಿಯ ಹೊಗಳಿಕೆಯಿದೆ.* ಇದರಲ್ಲಿ “ಅಜ್ಜವಿ” (=ಈಗಲೂ) ಎಂದಿರುವುದನ್ನು ನೋಡಿದರೆ ಭವಭೂತಿ ೭೩೬ಕ್ಕಿಂತ ಸ್ವಲ್ಪವಾದರೂ ಹಿಂದೆ ಇದ್ದನೆನ್ನಿಸುತ್ತದೆ. ಆದ್ದರಿಂದ ಭವಭೂತಿಯ ಕಾಲವನ್ನು ಸುಮಾರು ಕ್ರಿ.ಶ. ೭೦೦ ಎಂದು ಹೇಳಬಹುದು.

ಭವಭೂತಿ ‘ಮಹಾವೀರಚರಿತ’ ‘ಉತ್ತರ ರಾಮಚರಿತ’ ಎಂಬ ಎರಡು ನಾಟಕಗಳನ್ನೂ, ‘ಮಾಲತೀ ಮಾಧವ’ ಎಂಬ ಒಂದು ಪ್ರಕರಣವನ್ನೂ ಬರೆದಿದ್ದಾನೆ.* ಇವುಗಳಲ್ಲಿ ‘ಮಹಾವೀರಚರಿತ’ ವು ಅವನ ಪ್ರಥಮ ಪ್ರಯತ್ನವೆಂದು ತೋರುತ್ತದೆ. ಇದು ಅದರ ಅಂಕಾನುಸಾರಿಯಾದ ಕಥಾ ಸಂಗ್ರಹ

ವಿಶ್ವಾಮಿತ್ರನು ಯಜ್ಞ ಸಹಾಯಾರ್ಥವಾಗಿ ರಾಮಲಕ್ಷ್ಮಣರನ್ನು ತನ್ನ ಆಶ್ರಮಕ್ಕೆ ಕರೆದು ತಂದಿದ್ದಾನೆ. ಆ ಯಜ್ಞವನ್ನು ನೋಡುವುದಕ್ಕೆ ಕುಶಧ್ವಜನು ಸೀತೆ ಊರ್ಮಿಳೆಯರೊಡನೆ ಅಲ್ಲಿಗೆ ಬರುತ್ತಾನೆ. ರಾವಣನ ಪುರೋಹಿತನಾದ ಸರ್ವಮಾಯನೆಂಬ ವೃದ್ಧ ರಾಕ್ಷಸನೂ ರಾವಣನಿಗಾಗಿ ಸೀತೆಯನ್ನು ಕೇಳಲು ಅಲ್ಲಿಗೆ ಬರುತ್ತಾನೆ. ಏಕೆಂದರೆ, ಜನಕನನ್ನು ಕೇಳಲು, ಅವನು ಸೀತೆಯನ್ನು ಕೊಡುವ ಬಿಡುವ ವಿಚಾರವನ್ನು ವಿಶ್ವಾಮಿತ್ರ ಕುಶಧ್ವಜರ ಮೇಲೆ ಹಾಕಿರುತ್ತಾನೆ. ಅವರು ಜನಕನ ಮೇಲೆ ಹಾಕುತ್ತಾರೆ (ತಾಟಕಾಸಂಹಾರ, ಜೃಂಭಕಾಸ್ತ್ರಲಾಭ, ಶಿವಧನುರ್ಭಂಗ.* ಕುಶಧ್ವಜನು ಸೀತೆ ಊರ್ಮಿಳೆಯರನ್ನು ರಾಮಲಕ್ಷ್ಮಣರಿಗೆ ಕೊಡುವನು; ವಿಶ್ವಾಮಿತ್ರನು ಜನಕನನ್ನು ಒಪ್ಪಿಸುವ ಭಾರವನ್ನು ಹೊತ್ತು ಮಾಂಡವೀ ಶ್ರುತಕೀರ್ತಿಯರನ್ನು ಭರತ ಶತ್ರುಘ್ನರಿಗೆ ಗೊತ್ತುಮಾಡಿಕೊಂಡು ಈ ವರ್ತಮಾನವನ್ನು ದಶರಥ ವಸಿಷ್ಠಾದಿಗಳಿಗೆ ಹೇಳಿ ಕಳುಹಿಸುವನು. (ಸುಬಾಹು ಸಂಹಾರ). ಮುದುಕನಾದ ಸರ್ವಮಾಯನು ಇದೆಲ್ಲವನ್ನೂ ಕಣ್ಣಾರ ನೋಡುತ್ತ, ಏನೂ ಮಾಡಲಾರದೆ, ಈ ವೃತ್ತಾಂತವನ್ನು ಮಾಲ್ಯವಂತನಿಗೆ ಹೇಳುತ್ತೇನೆಂದು ಹೋಗುವನು. (ಅಂಕ ೧).

ಮಾಲ್ಯವಂತನು ರಾವಣನ ಮಾತಾಮಹ ಮತ್ತು ಅಮಾತ್ಯ. ಅವನು ರಾವಣನ ಸ್ನೇಹಿತನೂ ಈಶ್ವರಭಕ್ತನೂ ಆದ ಪರಶುರಾಮನನ್ನು ಉದ್ರೇಕಗೊಳಿಸಿ ಶಿವಧನುಸ್ಸನ್ನು ಮುರಿದದ್ದಕ್ಕಾಗಿ ರಾಮನನ್ನು ಶಿಕ್ಷಿಸಬೇಕೆಂದು ಪ್ರೇರಿಸುವನು. ಅವನು ಅದರಂತೆ ಔದ್ಧತ್ಯದಿಂದ ಜನಕನ ಅಂತಃಪುರವನ್ನು ಪ್ರವೇಶಿಸಿ ರಾಮನನ್ನು ಕೆಣಕುವನು. ರಾಮನು ಕಂಕಣ ವಿಸರ್ಜನೆಮಾಡಿಕೊಂಡು ಬರುವ ಹೊತ್ತಿಗೆ ವಸಿಷ್ಠ ವಿಶ್ವಾಮಿತ್ರ ಶತಾನಂದ ಜನಕ ದಶರಥರು ಪರಶುರಾಮನನ್ನು ನಯಭಯಗಳಿಂದ ನಿವಾರಿಸಲು ಪ್ರಯತ್ನಪಡುವರು. ಆದರೆ ಪರಶುರಾಮನು ತೊಟ್ಟ ಹಟವನ್ನು ಬಿಡುವುದಿಲ್ಲ. ಅಷ್ಟು ಹೊತ್ತಿಗೆ ರಾಮನೇ ಬಂದು ಪರಶುರಾಮನನ್ನು ಕರೆದುಕೊಂಡು ಹೋಗುವನು. (ಪರಶುರಾಮ ಪರಾಜಯ)—ಅಂಕ ೨-೩.

ಮಾಲ್ಯವಂತನ ಸೂಚನೆಯ ಪ್ರಕಾರ ಶೂರ್ಪಣಖಿ ಮಂಧರೆಯಲ್ಲಿ ಆವೇಶವಾಗಿ ಕೈಕೆಯಿಂದ ಒಂದು ಪತ್ರವನ್ನು ದಶರಥನಿಗೆ ತಂದುಕೊಡುವಳು. ಅದರಲ್ಲಿ ಭರತ ಪಟ್ಟಾಭಿಷೇಕ, ಸೀತಾರಾಮಲಕ್ಷ್ಮಣರ ವನವಾಸ—ಎರಡೂ ಕೇಳಲ್ಪಟ್ಟಿರುವುವು. ರಾಮನನ್ನು ಹೀಗೆ ಎಂದೂ ಕಾಣದ ಕಾಡಿಗೆ ಎಳೆದರೆ ಅಲ್ಲಿ ಸೀತೆಯನ್ನು ಅಪಹರಣಮಾಡಿಸಿ ರಾವಣನಿಗೆ ಕೊಡಿಸಬಹುದು; ರಾಮನು ಸೀತಾವಿರಹದಿಂದಲೋ ರಾಕ್ಷಸರ ಅಥವಾ ವಾಲಿಯ ಕೈಯಿಂದಲೋ ಸಾಯುವನು—ಎಂಬುದು ಮಾಲ್ಯವಂತನ ಯೋಚನೆ. ಆದರೆ, ತಾನು ಹೋಗಬೇಕೆಂದಿದ್ದ ಕಡೆಗೇ ಹೋಗಲು ಅವಕಾಶ ಸಿಕ್ಕಿತಲ್ಲಾ ಎಂದು ರಾಮನಿಗೆ ಸಂತೋಷ. ಈ ಮಧ್ಯೆ ಸೋತ ಪರಶುರಾಮನು ಉಪಶಾಂತನಾಗಿ ಹಿಂತಿರುಗಿ ಗುರುಹಿರಿಯರ ಆಶೀರ್ವಾದವನ್ನು ಪಡೆದು ತನ್ನ ವೈಷ್ಣವ ಧನುಸ್ಸನ್ನು ರಾಮನಿಗೆ ಕೊಟ್ಟು ಹೋಗುವನು. ಯುಧಾಜಿತ್ತೂ ಭರತನೂ ಬಂದು ಸೂಚಿಸಿದಂತೆ ರಾಮನಿಗೆ ಯೌವರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಬೇಕೆಂದು ದಶರಥನು ಸಂಕಲ್ಪಿಸಿ ಆ ಉತ್ಸಾಹದಲ್ಲಿ ಯಾರಿಗೆ ಏನು ಬೇಕೆಂದು ಕೇಳಲು, ರಾಮನು ಬಂದು ತನ್ನ ಚಿಕ್ಕಮ್ಮನ ವರಗಳನ್ನು ನಡೆಸಿಕೊಡುವಂತೆ ಬೇಡುವನು. ಅವನು ವಿಧಿಯಲ್ಲದೆ ಒಪ್ಪಬೇಕಾಗುವುದು. ತನ್ನನ್ನು ಹಿಂಬಾಲಿಸಿ ಹೊರಟ ಭರತಾದಿಗಳನ್ನು ತಡೆದು ನಿಲ್ಲಿಸಿ ರಾಮನು ಕಾಡಿಗೆ ಹೊರಡುವನು. (ಅಂಕ ೪).

ಸಂಪಾತಿ ಜಟಾಯುಗಳ ಸಂಭಾಷಣೆ. (ವಿರಾಧಸಂಹಾರ, ಶರಭಂಗಾಶ್ರಮ ಗಮನ, ಪಂಚವಟೀ ವಾಸ, ಶೂರ್ಪಣಖಿ ಮಾನಭಂಗ, ಖರದೂಷಣಾದಿ ಸಂಹಾರ, ಸೀತಾಪರಹರಣ, ಜಟಾಯು ಮರಣ), ರಾಮನ ಗೋಳಾಟ. ಲಕ್ಷ್ಮಣನು ಶ್ರಮಣೆಯೆಂಬ ಶಬರತಾಪಸಿಯನ್ನು ಕಬಂಧನಿಂದ ಬಿಡಿಸುವುದು, ಹನೂಮಂತನ ವೃತ್ತಾಂತವೂ ವಿಭೀಷಣನು ಸುಗ್ರೀವನೊಡನೆ ಅಲ್ಲಿ ಸಖ್ಯದಿಂದಿದ್ದಾನೆಂಬುದೂ ಅವಳಿಂದ ಗೊತ್ತಾಗುವುದು. ಮಾಲ್ಯವಂತನಿಂದ ನಿಯುಕ್ತನಾದ ದನುವೆಂಬ ರಾಕ್ಷಸನು ಶಾಪಮುಕ್ತನಾಗಿ ರಾಮನಿಗೆ ವಾಲೀ ರಾವಣ ಸಖ್ಯವನ್ನು ತಿಳಿಸಿ ಹೋಗುವನು. ದುಂದುಭಿ ದೇಹವಿಕ್ಷೇಪಣ. ವಾಲೀ ಸಮಾಗಮ. ವಾಲಿಗೆ ರಾಮನಲ್ಲಿ ಭಕ್ತಿ, ರಾವಣನಲ್ಲಿ ಮೈತ್ರಿ; ಆದ್ದರಿಂದ ಅವನು ತರ್ಕವಿತರ್ಕ ಮಾಡಿಕೊಂಡು ಕೊನೆಗೆ ಯುದ್ಧಕ್ಕೆ ಹೊರಡುವನು.

ರಾಮಬಾಣದಿಂದ ನೊಂದ ವಾಲಿ ಅವಸಾನಕಾಲದಲ್ಲಿ ರಾಮನಿಗೂ ಸುಗ್ರೀವನಿಗೂ ಅಗ್ನಿಸಾಕ್ಷಿಕವಾಗಿ ಸ್ನೇಹಮಾಡಿಸುವನು (ಅಂಕ ೫.)

ಮಾಲ್ಯವಂತನ ವ್ಯಥೆ (ಲಂಕಾದಹನ; ಅಕ್ಷಕುಮಾರ ಸಂಹಾರ; ಅಭಿಜ್ಞಾನ ಸಮರ್ಪಣ.); ರಾವಣ ಮಂಡೋದರಿಯರ ಸಂವಾದ (ಲಂಕೆಯ ಮುತ್ತಿಗೆ), ಅಂಗದನ ದೌತ್ಯ, ವಾಸವ ಚಿತ್ರರಥರಿಂದ ರಾಮರಾವಣಯುದ್ಧದ ವರ್ಣನೆ. (ರಾವಣನ ಸಂಹಾರ)—ಅಂಕ ೬.

ಲಂಕೆ ಅಲಕೆಯರ ಸಂಭಾಷಣೆ; ರಾಕ್ಷಸ ನಾಶಕ್ಕಾಗಿ ಪ್ರಲಾಪ; (ಸೀತೆಯ ಅಗ್ನಿಪ್ರವೇಶ, ಕುಬೇರನಿಂದ ಪುಷ್ಪಕ ಪರಿಗ್ರಹಣ, ವಿಭೀಷಣ ಪಟ್ಟಾಭಿಷೇಕ) ಪುಷ್ಪಕದಲ್ಲಿ ರಾಮಾದಿಗಳ ಪ್ರಯಾಣ; ದಾರಿಯಲ್ಲಿ ಸಿಕ್ಕುವ ಗಿರಿನದ್ಯಾದಿಗಳ ಮತ್ತು ಹಿಂದೆ ನಡೆದ ವೃತ್ತಾಂತಗಳ ವರ್ಣನೆ; ಭರತ ಸಮಾಗಮ; ವಸಿಷ್ಠಾದಿಗಳ ಆಗಮನ; ರಾಮವನವಾಸಕ್ಕೆ ಮಾಲ್ಯವಂತ ಶೂರ್ಪಣಖಿಯರು ಕಾರಣರೆಂದು ಅರುಂಧತಿ ತಿಳಿಸುವುದು; ವಿಶ್ವಾಮಿತ್ರರ ಆಗಮನ (ರಾಮಪಟ್ಟಾಭಿಷೇಕ); ಅಭಿನಂದನ ಆಶೀರ್ವಾದಗಳು, (ಅಂಕ ೭.)

ಇದು “ಎಲ್ಲಾ ಕಡೆಯಲ್ಲಿಯೂ ಪ್ರಚಾರದಲ್ಲಿಯೂ ಪಾಠ” ದ ಕಥಾ ಸಾರಾಂಶ. ಈ ಪಾಠವೇ ತೋದರಮಲ್ಲ ಮೆಗ್ಡಾನಲರವರಿಂದ ಅಂಗೀಕೃತವಾಗಿದೆ. ಇದಲ್ಲದೆ ಐದನೆಯ ಅಂಕದ ೪೬ನೆಯ ಪದ್ಯದಿಂದ ಮುಂದಕ್ಕೆ ಮತ್ತೊಂದು ಪಾಠವಿದೆ. ಅದರ ಕಥೆಯನ್ನು ಹೀಗೆ ಸಂಗ್ರಹಿಸಬಹುದು—

[ಇದ್ದಕ್ಕಿದ್ದ ಹಾಗೆ ವಾಲಿ ಅದೃಶ್ಯನಾಗುವನು. ಎಲ್ಲರೂ ಹುಡುಕಿ ಸಿಕ್ಕದೆ ಹೋಗಲು ರಾಮನು ತಾನು ತೊಟ್ಟ ಬಾಣಕ್ಕೆ ಲಕ್ಷ್ಯವನ್ನು ತೋರಿಸಬೇಕಾಗಿದ್ದದ್ದರಿಂದ ಮರದ ಮರೆಯಲ್ಲಿ ನಿಂತು ಅದನ್ನು ಒಂದು ಜಿಂಕೆಯ ಮೇಲೆ ಬಿಡುವನು. ಮೃಗದೇಹದಿಂದ ಒಬ್ಬ ದಿವ್ಯಪುರುಷನು ಬಂದು ತಾನೇ ವಾಲಿಯೆಂದೂ ಮತಂಗಶಾಪದಿಂದ ಜಿಂಕೆಯಾಗಿ ಆ ರೀತಿ ಮರಣವನ್ನು ಪಡೆದನೆಂದೂ ಹೇಳಿ ಹೋಗುವನು. ಅಗಸ್ತ್ಯರು ಬಂದು ವಿಶ್ವಾಮಿತ್ರರ ಸೂಚನೆಯಂತೆ ರಾಮನಿಗೆ ದಿವ್ಯದೃಷ್ಟಿಯನ್ನು ಕೊಟ್ಟು, ರಾಕ್ಷಸ ಮಾಯೆಯಿಂದ ‘ವಿಶ್ವಾಸ ವಿಷಾದ’ ಗಳನ್ನು ಹೊಂದಬಾರದೆಂದು ಎಚ್ಚರಿಸಿ ಹೋಗುವರು. ಈ ದಿವ್ಯದೃಷ್ಟಿಯ ಸಹಾಯದಿಂದ ರಾಮನು ಲಂಕೆಯಲ್ಲಿ ನಡೆಯುತ್ತಿದ್ದ ಮಾಲ್ಯವಂತ ರಾವಣರ ಸಂಭಾಷಣೆಯನ್ನು ನೋಡಿ ತಿಳಿಯುತ್ತಾನೆ. ಅವರು ಬಹಳ ಅಧೈರ್ಯಪಟ್ಟುಕೊಂಡು ಮಾಯಾ ಸೀತೆಯ ಸಹಾಯದಿಂದ ರಾಮಲಕ್ಷ್ಮಣರನ್ನು ಮೂರ್ಛೆಗೊಳಿಸಿ ಸೋಲಿಸಬೇಕೆಂದಿರುತ್ತಾರೆ. (ಅಂಕ ೬)

(ರಾವಣಸಂಹಾರ ವಿಭೀಷಣಪಟ್ಟಾಭಿಷೇಕ ಸೀತಾಗ್ನಿಪ್ರವೇಶಾದಿಗಳು ನಡೆದು ರಾಮನು ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗಿದ್ದಾನೆ) ವಸಿಷ್ಠ, ವಿಶ್ವಾಮಿತ್ರ, ದಶರಥ, ಇಂದ್ರ, ಬ್ರಹ್ಮ, ಮಹೇಶ್ವರ ಎಲ್ಲರೂ ಬಂದು ಅವನನ್ನು ಆಶೀರ್ವದಿಸುತ್ತಾರೆ, ಅಭಿನಂದಿಸುತ್ತಾರೆ. (ಅಂಕ ೭.)]

ಈ ಪಾಠದಲ್ಲಿಯೂ V. ೪೬ ರಿಂದ ಮುಂದಕ್ಕೆ ಆ ಅಂಕದ ಕೊನೆಯವರೆಗೆ ಕೆಲವು ವ್ಯತ್ಯಾಸಗಳಿರುವುವೆಂದೂ ಇದು ಮೂರನೆಯ ಪಾಠವೆಂದೂ ತೋದರಮಲ್ಲರು ತಿಳಿಸುತ್ತಾರೆ. ಇವುಗಳನ್ನು ಪರಿಶೀಲಿಸಿ ಅವರು ಮಾಡಿರುವ ತೀರ್ಮಾನವೇನೆಂದರೆ— ಪ್ರಾಯಶಃ ಭವಭೂತಿ ತನ್ನ ಈ ನಾಟಕವನ್ನು ಮುಗಿಸುವುದಕ್ಕೆ ಮುಂಚೆಯೇ ಕೆಲವಲರಿಗೆ ತೋರಿಸಿರಬೇಕು; ಅವರು ಸದಭಿಪ್ರಾಯವನ್ನು ಕೊಡದೆ ಇದ್ದದ್ದರಿಂದ ಅವನಿಗೆ ಅಸಮಾಧಾನವಾಗಿ ತನ್ನ ಕೋಪವನ್ನು ‘ಮಾಲತೀ ಮಾಧವ’ ‘ಉತ್ತರ ರಾಮಚರಿತ’ ಗಳ ಪ್ರಸ್ತಾವನೆಯಲ್ಲಿ ವ್ಯಕ್ತಗೊಳಿಸಿರಬಹುದು; ಹೀಗೆ ಭವಭೂತಿರಚಿತವಾದ ‘ಮಹಾವೀರ ಚರಿತ’ ವು V.೪೬ಕ್ಕೇ ನಿಂತುಹೋಯಿತು. ಆಮೇಲೆ ಅವನು ಆ ಅಂಕವನ್ನು ಕೊನೆಗಾಣಿಸಿ ಹಿಂದಿನ ಅಂಕಗಳನ್ನು ಅಲ್ಲಲ್ಲಿ ಪರಿಷ್ಕರಿಸಿರುವ ಹಾಗೆ ಕಾಣುತ್ತದೆ. ಅಲ್ಲಿಂದ ಮುಂದಕ್ಕೆ ಇರುವ ‘ಸರ್ವತಃ ಪ್ರಚಲಿತ ಪಾಠ’ ವೂ ಭವಭೂತಿಯದಿರಲಾರದು* V.೪೬ ರಿಂದ ಮುಂದಕ್ಕೆ ಇರುವ ಎರಡನೆಯ ಪಾಠವು ಸುಬ್ರಹ್ಮಣ್ಯ ಕವಿಯಿಂದ ರಚಿತವಾದದ್ದೆಂದು ವೀರರಾಘವ ವ್ಯಾಖ್ಯಾನದಲ್ಲಿ ಉಕ್ತವಾಗಿದೆ. ಕಾಶ್ಮೀರದ ಒಂದು ಪ್ರತಿಯಲ್ಲಿ ಈ ಭಾಗವನ್ನು ಮುಗಿಸಿದವನು ವಿನಾಯಕಭಟ್ಟನೆಂದಿದೆ. ಇವರು ಯಾರೋ ಯಾವ ಕಾಲದವರೋ ಗೊತ್ತಿಲ್ಲ.

ರಾಮಾಯಣವು ನಮ್ಮ ದೇಶಕ್ಕೂ ಪರದೇಶಕ್ಕೂ ಚಿರಪರಿಚಿತವಾದ ಕಥೆ. ನಮ್ಮ ದೇಶದ ವಾಲ್ಮೀಕಿರಾಮಾಯಣದಲ್ಲಿಯೂ ಮೂರು ನಾಲ್ಕು ಪಾಠಗಳಿವೆ. ಇವುಗಳಲ್ಲಿ ಯಾವುದು ಪ್ರಾಚೀನತಮವಾಗಿ ವಾಲ್ಮೀಕಿ ಕೃತವಾದ ಮೂಲ ಗ್ರಂಥದ ಹತ್ತಿರಕ್ಕೆ ಬರುತ್ತದೆ ಎಂಬುದನ್ನು ಇನ್ನೂ ಯಾರೂ ನಿಶ್ಚಯಿಸಿಲ್ಲ. ಆದರೆ ಮುಖ್ಯಭಾಗಗಳಲ್ಲಿ ಇವುಗಳೊಂದೊಂದಕ್ಕೆ ಹೆಚ್ಚು ವ್ಯತ್ಯಾಸವಿಲ್ಲ. ಮತ್ತು ಭವಭೂತಿ ಓದಿದ್ದ ವಾಲ್ಮೀಕಿ ರಾಮಾಯಣವು ಈಗ ನಮ್ಮಲ್ಲಿ ಪ್ರಚುರವಾಗಿರುವ ರಾಮಾಯಣಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಹೇಳಬಹುದು. ಇದಿಷ್ಟರಿಂದಲೇ ಭವಭೂತಿಯ ರಾಮಾಯಣನಾಟಕಗಳಿಗೆ ವಾಲ್ಮೀಕಿ ರಾಮಾಯಣವೇ ಮೂಲವೆಂದು ನಿರ್ಧರಿಸಿ ಹೇಳುವಂತಿಲ್ಲ. ಏಕೆಂದರೆ, ರಾಮಾಯಣ ಕಥೆ ಮಹಾಭಾರತ (III, ೩೭೩, VII, ೫೯), ಬ್ರಹ್ಮ, ಗರುಡ, ಸ್ಕಾಂದ, ಅಗ್ನಿ, ಕೂರ್ಮ, ಪದ್ಮ, ಭಾಗವತ ಮುಂತಾದ ಪುರಾಣಗಲಲ್ಲಿಯೂ ಬರುತ್ತದೆ. ಬೌದ್ಧ ಜೈನ ರಾಮಾಯಣಗಳು ಬೇರೆ ಇವೆ. ಸಾಧಾರಣವಾಗಿ ಇವು ಎಷ್ಟಷ್ಟು ಈಚಿನವಾದರೆ ಅಷ್ಟಷ್ಟು ಅವುಗಳಲ್ಲಿ ಅತಿಶಯೋಕ್ತಿ, ಅದ್ಭುತರಸ, ಅಲಂಕಾರ, ವೇದಾಂತ, ದೋಷದೂರೀಕರಣಾದಿಗಳು ಹೆಚ್ಚಾಗುತ್ತವೆಂದು ಹೇಳಬಹುದಾದರೂ ಈ ಕಥಾವತಾರಗಳಲ್ಲಿ ಯಾವುವು ಭವಭೂತಿಗಿಂತ ಈಚಿನವು, ಯಾವುವು ಹಿಂದಿನವು, ಆದ್ದರಿಂದ ಯಾವುವುಗಳನ್ನು ಅವನು ನೋಡಿ ಉಪಯೋಗಿಸಿಕೊಂಡಿರಬಹುದು ಎಂದು ನಿಶ್ಚಯಿಸಲು ತಕ್ಕ ಸಾಧನವಿಲ್ಲ. ಆದರೆ ರಾಮನಾಟಕವನ್ನು ಬರೆಯಹೋಗುವವನು ರಾಮಾಯಣವನ್ನು ಬಿಟ್ಟು ಯಾವುದೋ ಪುರಾಣವನ್ನು ಹುಡುಕಿಕೊಂಡು ಹೋಗುವುದು ಸಂಭವವಾಗಿ ತೋರುವುದಿಲ್ಲ. ಆದ್ದರಿಂದ ಭವಭೂತಿಯೂ ಭಾಸನಂತೆ ರಾಮಾಯಣದ ಆಧಾರದ ಮೇಲೇ ತನ್ನ ನಾಟಕಗಳನ್ನು ಬರೆದನೆಂದೂ ವ್ಯತ್ಯಾಸವಿರುವ ಕಡೆ ಅದು ಕವಿಕಲ್ಪಿತವೆಂದೂ ಹೇಳಬಹುದೆಂದು ತೋರುತ್ತದೆ.

ಭಾಸನು ಅಯೋಧ್ಯಾಕಾಂಡದಿಂದ ಮುಂದಿನ (ಪೂರ್ವ) ರಾಮಾಯಣ ಕಥೆಯನ್ನು ಈ ಮೊದಲೇ ಪ್ರತಿಮಾನಾಟಕದಲ್ಲಿ ಪ್ರತಿಪಾದಿಸಿದ್ದನು. ಆದರೆ ಭವಭೂತಿ ಬಾಲಕಾಂಡದ ಸ್ವಲ್ಪ ಭಾಗವನ್ನು ಬಿಟ್ಟು ಮಿಕ್ಕ ರಾಮಾಯಣ ಕಥಯೆಲ್ಲವನ್ನೂ ತನ್ನ ‘ಮಹಾವೀರ ಚರಿತ’ ದಲ್ಲಿ ತಂದಿದ್ದಾನೆ. ಇಷ್ಟು ದೊಡ್ಡ ಕಥೆಯನ್ನು ಇಷ್ಟು ಅವಕಾಶದಲ್ಲಿ ಸಂಗ್ರಹಿಸಿರುವುದೇ ಒಂದು ಕೌಶಲ್ಯ. (ವರ್ಣನಾದಿಗಳನ್ನು ಕಡಮೆಮಾಡಿದ್ದರೆ ನಾಟಕವು ಇನ್ನೂ ಚಿಕ್ಕದಾಗಬಹುದಾಗಿತ್ತು.) ಹೀಗೆ ವಿಶ್ವಾಮಿತ್ರರ ಆಶ್ರಮದಲ್ಲಿಯೇ ಧನುರ್ಭಂಗವು ನಡೆದು ಹೋಗುತ್ತದೆ. ಮಿಥಿಲಾ ಪಟ್ಟಣದಿಂದಲೇ ರಾಮನು ಕಾಡಿಗೆ ಹೊರಟುಬಿಡುತ್ತಾನೆ. ಅನೇಕ ವೃತ್ತಾಂತಗಳು ‘ನೇಪಥ್ಯ’ ದಲ್ಲಿ ನಡೆಯುತ್ತವೆ, ಇಲ್ಲವೇ ಪಾತ್ರಸಂಭಾಷಣೆಗಳಲ್ಲಿ ಅಡಗುತ್ತವೆ.* ಎರಡನೆಯದಾಗಿ, ಭಾಸನಂತೆಯೇ ಭವಭೂತಿ ಕೈಕೆಯ ಮತ್ತು ಸೀತೆಯ ಪಾತ್ರಗಳನ್ನು ಉದಾತ್ತಗೊಳಿಸಲು ಪ್ರಯತ್ನಪಟ್ಟಿದ್ದಾನೆ. ರಾಮನನ್ನು ಕಾಡಿಗೆ ಎಳೆಯಲು ಕಾರಣನಾದವನು ರಾವಣ, ಅವನ ಮಂತ್ರಿ ಮಾಲ್ಯವಂತ ಮತ್ತು ಅವನ ಅನುಯಾಯಿಗಳು-ಕೈಕೆಯಲ್ಲ, ಕೊನೆಗೆ ಮಂಧರೆಯೂ ಅಲ್ಲ. ಇಲ್ಲಿ ಮಂಧರೆ ಮಂಧರೆಯ ವೇಷದ ಶೂರ್ಪಣಖಿ. ಕೈಕೆಯ ಪ್ರಸ್ತಾಪವೇ ಇಲ್ಲ. ರಾಮನು ತಾನಾಗಿಯೇ ವನವಾಸವನ್ನು ಅಪೇಕ್ಷಿಸುವನು; ಆಗ ಭರತನೂ ಎದುರಿಗೇ ಇರುವನು. ಸೀತಾಪಹರಣವು ಜಟಾಯು ಸಂಪಾತಿಗಳ ಸಂಭಾಷಣೆಗಳಲ್ಲಿ ಉಕ್ತವಾಗಿಬಿಟ್ಟಿರುವುದರಿಂದ, ಸೀತೆ ಲಕ್ಷ್ಮಣನನ್ನು ಆಕ್ಷೇಪಿಸುವ ಸನ್ನಿವೇಶವು ನುಂಗಿಹೋಗಿದೆ. ವಾಲಿಯೂ ಹೀಗೆಯೇ ಇಲ್ಲಿ ರಾಮಭಕ್ತನಾಗಿ ಸುಗ್ರೀವನಲ್ಲಿ ಸ್ನೇಹವನ್ನು ತೋರುವನು. ಈ ನಾಟಕದಲ್ಲಿ ‘ಮಹಾಪುರುಷ’ ನನ್ನೂ ‘ವೀರರಸ’ ವನ್ನೂ ಚಿತ್ರಿಸಬೇಕೆಂಬುದು ಕವಿಯ ಉದ್ದೇಶ.* ರಾಮನು ‘ಮಹಾವೀರ’ ನೇನೋ ಹೌದು; ಅವನ ಚರಿತದಲ್ಲಿ ತಾಟಕಾ ಖರದೂಷಣ ವಾಲಿ ರಾವಣಾದಿಗಳ ಸಂಹಾರವೂ ನಡೆಯುತ್ತದೆ. ಆದರೆ ರಂಗದ ಮೇಲೆ ಕಂಡುಬರುವುದೇನು? ಮಾತು, ವರ್ಣನೆ; ಆಶ್ರಮದಲ್ಲಿ, ಅರಮನೆಯಲ್ಲಿ, ಬೆಟ್ಟದಲ್ಲಿ, ಕಾಡಿನಲ್ಲಿ, ಋಷಿಗಳ, ಮುದುಕರ, ಹೆಂಗಸರ, ಗೃಧ್ರಗಳ ಸಂಭಾಷಣೆ. ಪರಶುರಾಮ ಜಟಾಯು ಮುಂತಾದವರ ಮಾತಿನಲ್ಲಿ ಔದ್ಧತ್ಯವಿದೆ; ರಂಗದ ಮೇಲೆ ಬರುವ ‘ಮಹಾವೀರ’ ನಲ್ಲಿ ಇದೂ ‘ದೃಶ್ಯ’ ವಾಗಿಲ್ಲ. ಅವನು ಗುರು ವಿಧೇಯನಾದ, ಸಾತ್ವಿಕನಾದ ಒಬ್ಬ ರಾಜಕುಮಾರ. ಮಾತಿನ ಆಡಂಬರ, ಯುದ್ಧದ ವರ್ಣನೆ—ಇವುಗಳಿಂದಲೇ ನಾಟಕದಲ್ಲಿ ವೀರರಸೋತ್ಪತ್ತಿಯಾಗಲಾರದು. ಚಂಪೂ ಕಾವ್ಯದಲ್ಲಿ ಒಂದು ವೇಳೆ ಅವು ಪಾಠಕರನ್ನು ಸಂತೋಷಪಡಿಸಬಹುದು; ರಂಗದ ಮೇಲೆ ಯುದ್ಧಾದಿಗಳನ್ನು ತರಕೂಡದೆಂಬ ನಿಯಮಕ್ಕೂ ಕವಿಸಮಯಕ್ಕೂ ಭವಭೂತಿ ಬದ್ಧನಾಗಿರುವುದು ಈ ಪರಿಸ್ಥಿತಿಗೆ ಬಹುಮಟ್ಟಿಗೆ ಕಾರಣವಾಗಿದೆ.

‘ಉತ್ತರ ರಾಮಚರಿತ’ ವು ಬಹುಶಃ ಎಲ್ಲಕ್ಕೂ ಕೊನೆಯಲ್ಲಿ ಬರೆದದ್ದು; ಆದರೂ ಅದರ ಕಥೆ ‘ಮಹಾವೀರ ಚರಿತ’ ದ ಮುಂದಿನದಾದ್ದರಿಂದ ಅದನ್ನು ಇಲ್ಲಿಯೇ ಪ್ರಸ್ತಾಪಿಸುವುದು ಅನುಚಿತವೆನ್ನಿಸಲಾರದು; ಅದರ ಕಥೆ ಹೀಗಿದೆ—

(ಸೀತೆ ಪೂರ್ಣಗರ್ಭಿಣಿಯಾಗಿದ್ದದ್ದರಿಂದ ಅವಳನ್ನೂ ಅವಳ ಜೊತೆಗೆ ರಾಮಲಕ್ಷ್ಮಣರನ್ನೂ ಬಿಟ್ಟು ರಾಮನ ಮನೆಯವರೆಲ್ಲರೂ ಋಷ್ಯಶೃಂಗನ ಆಶ್ರಮದಲ್ಲಿ ನಡೆಯುತ್ತಿದ್ದ ಯಜ್ಞವನ್ನು ನೋಡುವುದಕ್ಕೆಂದು ಹೋಗಿದ್ದರು.) ರಾಮ ಲಕ್ಷ್ಮಣರು ಸೀತೆಯ ಬೇಸರವನ್ನು ಕಳೆಯಲು ರಾಮಾಯಣದ ಚಿತ್ರವನ್ನು ತೋರಿಸಿ ವಿವರಿಸುತ್ತಾರೆ. ಅವಳು ಆಯಾಸದಿಂದ ರಾಮನ ಎದೆಯ ಮೇಲೆ ತಲೆಯನ್ನಿಟ್ಟು ನಿದ್ರೆಮಾಡುವಳು. ಗೂಢಚಾರನಾದ ದುರ್ಮುಖನು ಬಂದು ಸೀತಾ ವಿಚಾರದಲ್ಲಿ ಜನದ ದೂರನ್ನು ತಿಳಿಸುವನು. ರಾಮನು ಸೀತೆಯನ್ನು ತ್ಯಾಗಮಾಡಬೇಕೆಂದು ನಿಶ್ಚಯಿಸಿ ಅವಳನ್ನು ರಥದಲ್ಲಿ ಕರೆದುಕೊಂಡು ಹೋಗುವಂತೆ ಲಕ್ಷ್ಮಣನಿಗೆ ಆಜ್ಞಾಪಿಸುವನು. ಸೀತೆ ಚಿತ್ರವನ್ನು ನೋಡುತ್ತಿದ್ದಾಗ, ಮತ್ತೆ ತಪೋವನವನ್ನು ನೋಡಬೇಕೆಂದು ಬಯಸಿದ್ದರಿಂದ ಅವನು ತನ್ನ ಆ ಬಯಕೆಯನ್ನು ಸಲ್ಲಿಸಿದನೆಂದೇ ತಿಳಿದು ಅವಳು ಲಕ್ಷ್ಮಣನೊಡನೆ ರಥದಲ್ಲಿ ಕುಳಿತು ಹೊರಟುಹೋಗುವಳು—೧.

ಪಂಚವಟಿಯಲ್ಲಿ ಅತ್ರೇಯಿ ವಾಸಂತಿಯರ ಸಂಭಾಷಣೆ. ವಾಲ್ಮೀಕಿಗಳ ಆಶ್ರಮದಲ್ಲಿ ಲವಕುಶರ ಬೆಳವಣಿಗೆ; ಜೃಂಭಕಾಸ್ತ್ರ ಸಿದ್ಧಿ; ವಿದ್ಯಭ್ಯಾಸ; ರಾಮಾಯಣ ರಚನೆ; ಸುವರ್ಣ ಸೀತೆಯೊಡನೆ ಅಶ್ವಮೇಧಯಾಗ ಮಾಡಲು ರಾಮನ ಸಂಕಲ್ಪ; ಲಕ್ಷ್ಮಣನ ಮಗ ಚಂದ್ರಕೇತುವನ್ನು ಸೈನ್ಯದೊಡನೆ ಕುದುರೆಯ ಹಿಂದೆ ಕಳುಹಿಸಿ ರಾಮನು ಶಂಬೂಕನನ್ನು ಸಂಹರಿಸಲು ಜನಸ್ಥಾನಕ್ಕೆ ಬಂದಿದ್ದಾನೆ. ಹತನಾದ ಶಂಬೂಕನಿಂದ ಒಬ್ಬ ದಿವ್ಯ ಪುರುಷನು ಬಂದು ಆ ಸ್ಥಳವು ಜನಸ್ಥಾನವೆಂದು ಹೇಳುವನು. ರಾಮನು ತಾನು ಹಿಂದೆ ಅಲ್ಲಿ ಸೀತೆಯೊಡನೆ ಇದ್ದದ್ದನ್ನು ನೆನೆಸಿಕೊಂಡು ದುಃಖಿಸುವನು.—೨.

ಸೀತೆ ತನ್ನ ಮಕ್ಕಳ ಹನ್ನೆರಡನೆಯ ಹುಟ್ಟಿದ ಹಬ್ಬಕ್ಕಾಗಿ ಪಾತಾಳಲೋಕದಿಂದ ಬಂದು ಗೋದಾವರಿಯ ಹತ್ತಿರವಿದ್ದಾಳೆ. ರಾಮನೂ ಅಲ್ಲಿಯೇ ವಿಮಾನದಿಂದ ಇಳಿಯುತ್ತಾನೆ. ಸೀತೆಯ ಜೊತೆಗೆ ತಮಸೆಯೂ ರಾಮನ ಜೊತೆಗೆ ವಾಸಂತಿಯೂ ಸಿಕ್ಕುತ್ತಾರೆ. ಸೀತೆ ತಮಸೆಗೆ ಹೊರತು ಮಿಕ್ಕವರಿಗೆ ಅದೃಶ್ಯಳಾಗಿದ್ದಾಳೆ. ವಾಸಂತಿ ಹಿಂದಿನ ನಾನಾವಸ್ತು ವೃತ್ತಾಂತಗಳನ್ನು ನಿರ್ದೇಶಿಸಿಯೂ ಸೀತಾಪರಿತ್ಯಾಗವನ್ನು ವಿಮರ್ಶಿಸಿಯೂ ರಾಮನನ್ನು ಕೊರಗಿಸುತ್ತಾಳೆ. ಅವನೂ ಸೀತೆಯೂ ಪದೇ ಪದೇ ಮೂರ್ಛೆ ಹೋಗುತ್ತಾರೆ. ತಮಸೆ ಸೀತೆಯನ್ನು ಸಮಾಧಾನಮಾಡುತ್ತಾಳೆ. ಸೀತೆ ರಾಮನನ್ನು ಮುಟ್ಟಿಮುಟ್ಟಿ ಎಚ್ಚರಗೊಳಿಸುತ್ತಾಳೆ. ಕೊನೆಗೆ ರಾಮನು ಅಯೋಧ್ಯೆಯ ಕಡೆಗೂ ಸೀತೆ ವಾಲ್ಮೀಕಿಯ ಆಶ್ರಮದ ಕಡೆಗೂ ಹೋಗುತ್ತಾರೆ—೩.

ವಾಲ್ಮೀಕಿ ಋಷಿಯ ಆಶ್ರಮ. ಅಲ್ಲಿಗೆ ತನ್ನ ಆಶ್ರಮದಿಂದ ಜನಕನೂ, ಋಷ್ಯಶೃಂಗನ ಯಜ್ಞದಿಂದ ವಸಿಷ್ಠ ಕೌಸಲ್ಯಾದಿಗಳೂ ಬಂದಿದ್ದಾರೆ. ಸೀತೆಯಿಲ್ಲದ ಅಯೋಧ್ಯೆಗೆ ಹೋಗುವುದಿಲ್ಲವೆಂಬುದು ಅವರ ಸಂಕಲ್ಪ. ಅವರ ಪರಸ್ಪರ ಸಂದರ್ಶನ ಸಲ್ಲಾಪ ಪ್ರಲಾಪಗಳು. ಅಲ್ಲಿ ಲವನನ್ನೂ ಅವನಲ್ಲಿ ಸೀತಾರಾಮರ ಸಾದೃಶ್ಯವನ್ನೂ ನೋಡಿ ಜನಕ ಕೌಸಲ್ಯಾದಿಗಳು ಅವನನ್ನು ಬರಮಾಡಿಕೊಂಡು ಮಾತನಾಡಿಸುತ್ತಿರುವರು. ಆಶ್ರಮಕ್ಕೆ ಯಜ್ಞಾಶ್ವವು ಬಂತೆಂದು ಕೇಳಿ ಹೋಗಿ ಲವನು ಅದನ್ನು ಹಿಡಿದು ಹಾಕುವನು-೪.

ಚಂದ್ರಕೇತುವು ಅವನನ್ನು ಎದುರಿಸಿ ನಿಲ್ಲುವನು. (ಲವನು ಜೃಂಭಕಾಸ್ತ್ರದಿಂದ ಪ್ರತಿಪಕ್ಷವನ್ನು ನಿಶ್ಚೇತನವಾಗಿಸುವನು.) ಅವನು ರಾಮನ ಚರಿತ್ರೆಯನ್ನು ಹಂಗಿಸಲು ಚಂದ್ರಕೇತುವಿಗೆ ರೇಗಿ ಯುದ್ಧವಾರಂಭವಾಗುವುದು —೫.

ವಿಧ್ಯಾದರ ದಂಪತಿಯರ ಸಂಭಾಷಣೆ. (ಲವಚಂದ್ರಕೇತುಗಳ ಯುದ್ಧ, ರಾಮನು ಶಂಬೂಕವಾದೆ ಮಾಡಿ ಹಿಂತಿರುಗಿ ಬಂದು ಅವರ ಮಧ್ಯೆ ಇಳಿಯುವನು.) ರಾಮಲವರಲ್ಲಿ ಪರಸ್ಪರ ಪ್ರೇಮ ಸೂಚನೆ. ರಾಮನ ಇಷ್ಟದಂತೆ ಜೃಂಭಕಾಸ್ತ್ರದ ಉಪಸಂಹಾರ, ಭರತಮುನಿಯ ಆಶ್ರಮದಿಂದ ಕುಶನ ಆಗಮನ. ರಾಮನಿಗೆ ಲವಕುಶರಲ್ಲಿ ಸೀತಾರಾಮರ ಸಾದೃಶ್ಯ ಕಾಣುವುದು. ಅವರ ಬಾಯಲ್ಲಿ ರಾಮಾಯಣದಿಂದ ಕೆಲವು ಶ್ಲೋಕಗಳನ್ನು ಕೇಳಿ ರಾಮನು ಹಿಂದಿನದನ್ನು ನೆನೆಸಿಕೊಂಡು ಶೋಕಿಸುವನು. (ಇಷ್ಟು ಹೊತ್ತಿಗೆ ವಸಿಷ್ಠ ಜನಕ ಅರುಂಧತೀ ಕೌಸಲ್ಯಾದಿಗಳು ಹುಡುಗರಿಗೆ ಯುದ್ಧ ಹತ್ತಿಕೊಂಡಿತೆಂದು ಕೇಳಿ ಬರುತ್ತಿರುವರು. ರಾಮಮಾತೆಯರು ಮಗನನ್ನು ಆ ಅವಸ್ಥೆಯಲ್ಲಿ ನೋಡಿ ಮೂರ್ಛೆ ಹೋಗುವರು.) ರಾಮನು ಅವರನ್ನು ಸಂತೈಸಲು ಏಳುವನು. ಹುಡುಗರು ಅವನನ್ನು ಹಿಂಬಾಲಿಸುವರು —೬.

ವಾಲ್ಮೀಕಿ, ಗಂಗಾತೀರದಲ್ಲಿ ದೇವಾಸುರ ನರೋರಗ ಪೌರ ಜಾನಪದರನ್ನು ಸೇರಿಸಿ ಅವರ ಮುಂದೆ ಸೀತಾಪರಿತ್ಯಾಗದಿಂದ ಮುಂದಿನ ಕಥೆಯನ್ನು ಅಭಿನಯಿಸುವುದಕ್ಕೆ ಏರ್ಪಡಿಸಿದ್ದಾನೆ. ಅದರಲ್ಲಿ ಸೀತೆ ಗಂಗೆಯೊಳಗೆ ಬಿದ್ದು ಪ್ರಸವಿಸಲು ಗಂಗಾದೇವಿ ಭೂದೇವಿಯರು ಅವಳನ್ನು ಪಾತಾಳಕ್ಕೆ ಕರೆದುಕೊಂಡುಹೋಗುವರು. (ಗಂಗಾ ಭೂದೇವಿಯರು ಸೀತೆಯನ್ನು ಅರುಂಧತಿಗೆ ತಂದು ಒಪ್ಪಿಸುವರು.) ಆಕೆ ಸೀತೆಯನ್ನು ಪ್ರಶಂಸಿಸಿ ಮಹಾಜನರೆದುರಿಗೆ ರಾಮನಿಗೆ ಒಪ್ಪಿಸುವಳು; ವಾಲ್ಮೀಕಿಗಳು ಲವಕುಶರನ್ನು ಕರೆತಂದು ತಾಯಿತಂದೆಗಳೊಡನೆ ಸೇರಿಸುವರು. ಲವಣನನ್ನು ಸಂಹರಿಸಿ ಶತ್ರುಘ್ನನೂ, ಶಾಂತಾ ಋಷ್ಯಶೃಂಗಾದಿಗಳೂ ಬಂದು ಕೂಡುವರು—೭.

ರಾಮಾಯಣದಲ್ಲಿ ಉತ್ತರಕಾಂಡವು ಮಿಕ್ಕ ಕಾಂಡಗಳಿಗಿಂತ ಈಚಿನದೆಂಬುದು ಹಲವು ವಿದ್ವಾಂಸರ ಅಭಿಪ್ರಾಯ; ಮತ್ತು ಅದರ ಈಗಿನ ರೂಪದಲ್ಲಿ ಹಲವು ಪ್ರಕ್ಷಿಪ್ತ ಭಾಗಗಳಿವೆ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಭವಭೂತಿಯ ಕಾಲದಲ್ಲಿ ಬಹುಶಃ ಅದು ಈಗ ಇರುವಂತೆಯೇ ಇದ್ದಿರಬಹುದು; ಆದರೂ ‘ಉತ್ತರ ರಾಮಚರಿತೆ’ ಗೆ ಇದೇ ಆಧಾರವೋ ಮತ್ತಾವುದಾದರೂ ಗ್ರಂಥಸ್ಥವಾದ ಅಥವಾ ಕಂಠಸ್ಥವಾದ ಪಾಠವೇ ಆಧಾರವೋ ನಿಶ್ಚಯಮಾಡಿ ಹೇಳಲಾಗುವುದಿಲ್ಲ.

ಉತ್ತರ ರಾಮಾಯಣದ ಪ್ರಕಾರ, ರಾಮನಿಗೆ ಪಟ್ಟಾಭಿಷೇಕವಾದ ಹತ್ತುಸಾವಿರ ವರ್ಷಗಳ ಮೇಲೆ ಸೀತೆ ಗರ್ಭಿಣಿಯಾಗಿ ಋಷ್ಯಾಶ್ರಮವನ್ನು ನೋಡಬೇಕೆಂದು ಬಯಸಿದಳು. ಇದಾದ ಸ್ವಲ್ಪ ಕಾಲಾನಂತರ ರಾಮನು ಭದ್ರನಿಂದ ಲೋಕಾಪವಾದವನ್ನರಿತು ಅವಳನ್ನು ಲಕ್ಷ್ಮಣನೊಡನೆ ಕಳುಹಿಸಲು ಅವನು ಆಕೆಯನ್ನು ವಾಲ್ಮೀಕಿಯ ಆಶ್ರಮದ ಹತ್ತಿರ ಕಾಡಿನಲ್ಲಿ ಬಿಟ್ಟನು. ಅದನ್ನು ತಿಳಿದ ವಾಲ್ಮೀಕಿ ಆಕೆಯನ್ನು ತನ್ನ ಆಶ್ರಮಕ್ಕೆ ಕರೆತಂದು ಉಪಚರಿಸಿದನು. ಅಲ್ಲಿ ಲವಕುಶರು ಹುಟ್ಟಿದರು. ಆ ದಿನ ರಾತ್ರಿ ಶತ್ರುಘ್ನನು ಲವಣಾಸುರ ಸಂಹಾರಕ್ಕೆಂದು ಹೋಗುತ್ತ ಅಲ್ಲಿ ತಂಗಿದ್ದನು. ಲವಣನನ್ನು ಕೊಂದು ಹನ್ನೆರಡು ವರ್ಷದ ಮೇಲೆ ಮತ್ತೆ ವಾಲ್ಮೀಕ್ಯಾಶ್ರಮದ ಮೇಲೆ ಅಯೋಧ್ಯೆಗೆ ಹೋಗಿ ಅಲ್ಲಿ ಒಂದು ವಾರವಿದ್ದು ಮತ್ತೆ ಹಿಂದಿರುಗಿದನು. ರಾಮನು ಜನಸ್ಥಾನಕ್ಕೆ ಹೋಗಿ ಶಂಬೂಕನನ್ನು ಸಂಹರಿಸಿದನು. ಆ ಮೇಲೆ ಅವನು ನೈಮಿಶಾರಣ್ಯದಲ್ಲಿ ಸುವರ್ಣಸೀತೆಯೊಡನೆ ಮಾಡಿದ ಅಶ್ವಮೇಧಯಾಗಕ್ಕೆ ವಾಲ್ಮೀಕಿಯ ಜೊತೆಯಲ್ಲಿ ಬಂದಿದ್ದ ಲವಕುಶರು ರಾಮಾಯಣವನ್ನು ಹಾಡಿದರು. ಅದರಿಂದ ಅವರ ಪೂರ್ವೋತ್ತರಗಳನ್ನು ತಿಳಿದು ರಾಮನು ವಾಲ್ಮೀಕಿಗಳ ಆಶ್ರಯದಲ್ಲಿದ್ದ ಸೀತೆಗೆ ಹೇಳಿಕಳುಹಿಸಿದನು. ಆಕೆಯನ್ನು ತನ್ನ ಮನಸ್ಸಿಗೆ ನಂಬಿಕೆ ಹುಟ್ಟುವಂತೆ ಶಪಥಮಾಡಬೇಕೆಂದು ಕೇಳಲು, ಸೀತೆ ಭೂದೇವಿಯನ್ನು ಪ್ರಾರ್ಥಿಸಿ, ಅವಳೊಡನೆ ಹೊರಟುಹೋದಳು.

ಇದರಲ್ಲಿ ಲವಕುಶರ ಕಾಳಗದ ಪ್ರಸ್ತಾಪವೇ ಇಲ್ಲ. ಅದೂ, ಯಜ್ಞಾಶ್ವವು ನಾನಾ ದೇಶಗಳಲ್ಲಿ ಸಂಚರಿಸಿ ಬಂದ ವಿವರವೂ ಪದ್ಮಪುರಾಣದ ಪಾತಾಳ ಖಂಡದಲ್ಲಿ (ಅಧ್ಯಾಯ ೧-೬೮) ಉಕ್ತವಾಗಿದೆ. ಅಲ್ಲದೆ ಅದರಲ್ಲಿ ಕಥೆ ಮಂಗಳಾಂತವಾಗಿ ಮುಗಿದು ರಾಮಸೀತೆಯರು ಸುಖವಾಗಿರುತ್ತಾರೆ. ಇದಿಷ್ಟರಿಂದಲೇ ಭವಭೂತಿ ಪದ್ಮಪುರಾಣವನ್ನೇ ಅನುಸರಿಸಿದ್ದಾನೆಂದು ಹೇಳಲಾಗುವುದಿಲ್ಲ. ಏಕೆಂದರೆ, ಉತ್ತರ ರಾಮಚರಿತೆಯ ಕಥೆಗೂ ಪದ್ಮಪುರಾಣದ ಕಥೆಗೂ ಹಲವು ಅಂಶಗಳಲ್ಲಿ ಭೇದವಿದೆ. ಹೀಗೆ ಪುರಾಣದಲ್ಲಿ, ಯಜ್ಞಾಶ್ವದ ಹಿಂದೆ ಹೋಗತಕ್ಕವನು ಭರತನ ಮಗ ಪುಷ್ಕಲ* -ಚಂದ್ರಕೇತುವಲ್ಲ.* ಅವನ ಜೊತೆಯಲ್ಲಿ ಶತ್ರುಘ್ನ, ಲಕ್ಷ್ಮೀನಿಧಿ, ಹನುಮಂತ, ಸುಗ್ರೀವ, ಮುಂತಾದವರು ಇರುತ್ತಾರೆ. ಲವಕುಶರ ವಯಸ್ಸು ಹದಿನಾರು-ಹನ್ನೆರಡಲ್ಲ. ವಾಲ್ಮೀಕಿಯೇ ಧನುರ್ವಿದ್ಯೆಯನ್ನು ಹೇಳಿಕೊಡುತ್ತಾನೆ. ಕುಶನು ಹಿಂದಿರುಗಿ ಬರುವುದು ‘ಮಹಾಕಾಲಪುರ’ ದಿಂದ, ‘ಭರತಾಶ್ರಮ’ ದಿಂದಲ್ಲ. ರಾಮನು ಯುದ್ಧರಂಗಕ್ಕೆ ಬರುವುದಿಲ್ಲ. ಅವನಿಗೆ ಮಕ್ಕಳ ಪರಿಚಯವಾಗುವುದು ಅಯೋಧ್ಯೆಯಲ್ಲಿ.-ಇತ್ಯಾದಿ.

ಭವಭೂತಿಯ ದೇಶಕಾಲಗಳಲ್ಲಿ ರಾಮಾಯಣದ ಯಾವ ಯಾವ ಆನುಪೂರ್ವಿಗಳು ಇದ್ದವು ಅವುಗಳಲ್ಲಿ ಯಾವುದನ್ನು ಅವನು ಹೇಗೆ ಉಪಯೋಗಿಸಿಕೊಂಡನು ಎಂಬುದು ಗೊತ್ತಾಗುವಂತಿಲ್ಲ. ಆದರೆ ‘ಮಹಾವೀರ ಚರಿತೆ’ ಯಲ್ಲಿ ಹೇಗೋ ಹಾಗೆ ಇಲ್ಲಿಯೂ ಅವನು ಶ್ರೀಮದ್ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಭಾಸನಂತೆ ಧಾರಾಳವಾದ ಬದಲಾವಣೆಗಳನ್ನು ಮಾಡಿಕೊಂಡಿರುವುದು ಸಂಭವ. ಇದನ್ನು ಒಪ್ಪಿದರೆ ‘ಉತ್ತರ ರಾಮಚರಿತ್ರ’ ದಲ್ಲಿ ಸ್ಥೂಲವಾದ ಕೆಲವು ಘಟನೆಗಳು, ಮುಖ್ಯವಾದ ಕೆಲವು ಪಾತ್ರಗಳು ಹೊರತು ಮಿಕ್ಕದ್ದೆಲ್ಲವೂ ಹೊಸದೆಂದೇ ಹೇಳಬೇಕು. ಕಥೆ ಹಳೆಯದು, ಕಲೆ ಹೊಸದು. ಮೊದಲನೆಯ ಅಂಕದಲ್ಲಿರುವುದು ಸೀತಾಪರಿತ್ಯಾಗ; ಆದರೆ ಅದು ಜರುಗುವ ಸನ್ನಿವೇಶವು ಪೂರ್ತಿಯಾಗಿ ಕವಿಕಲ್ಪಿತ; ಆಗ ಮನೆಯಲ್ಲಿ ಗುರುಹಿರಿಯರು ಯಾರೂ ಇರಲಿಲ್ಲ; ಇದ್ದರೆ ಅವರು ಈ ಅನ್ಯಾಯವನ್ನು ಅನುಮೋದಿಸುತ್ತಿರಲಿಲ್ಲವೆಂಬುದು ಕವಿಯ ಭಾವ. ಲೋಕಾರಾಧನವು ರಾಜನಿಗೆ ಒಂದು ವ್ರತ; ದಶರಥನು ಅದನ್ನು ನಡಸಲು ರಾಮನನ್ನು ಬಿಟ್ಟನು, ಪ್ರಾಣವನ್ನು ಬಿಟ್ಟನು (I ೪೧) ಅಂಥವನ ಮಗನಾಗಿ, ಇನ್ನೂ ಪಟ್ಟಾಭಿಷೇಖವಾದ ತರುಣದಲ್ಲಿ, ಎಲ್ಲೆಲ್ಲಿಯೂ ವಿಷದಂತೆ ಹರಡಿದ (I ೪೧) ಅಪವಾದವನ್ನು* ಅಲಕ್ಷ್ಯ ಮಾಡಬಹುದೇ? ಅಲ್ಲದೆ ವಸಿಷ್ಠರು ಆಗತಾನೇ ‘ಪ್ರಜಾನುರಂಜನೆಯಲ್ಲಿ ನಿರತನಾಗಿರು; ಯಶಸ್ಸೇ ನಿಮ್ಮ ಪರಮಸಂಪತ್ತು; ಎಂದು ಸಂದೇಶ ಕೊಟ್ಟು ಕಳುಹಿಸಿದ್ದರು (I. ೧೧). ಅದಕ್ಕೆ ರಾಮನು

“ಸ್ನೇಹಂ ದಯಾಂ ಚ ಸೌಖ್ಯಂ ಚಯದಿ ವಾ ಜಾನಕೀಮಪಿ ।

ಆರಾಧನಾಯ ಲೋಕಸ್ಯ ಮಂಚತೋ ನಾಸ್ತಿ ಮೇ ವ್ಯಥಾ ॥” (i. ೧೨)

ಎಂದು ಉತ್ತರ ಕೊಟ್ಟು ಕಳುಹಿಸಿದ್ದನು. ಪ್ರಜೆಗಳ ವಿಚಾರದಲ್ಲಿ ಅವನಿಗೂ ಹಾಗೆಯೇ ಗೌರವವಿತ್ತು. ದುರ್ಮುಖನು ಅವರನ್ನು ‘ದುರ್ಜನ’ ನೆನ್ನಲು ರಾಮನು ಅದನ್ನು ಒಪ್ಪದೆ ಅವನನ್ನೇ ಗದರಿಸಿದನು. “ಇಕ್ಷ್ವಾಕು ವಂಶವು ಜನರಿಗೆ ಮೆಚ್ಚಿಕೆಯಾಗಿತ್ತು; ಆದರೆ ಅದರಲ್ಲಿ ದೈವವಶಾತ್ ಮಾತಿಗೆ ಅವಕಾಶವುಂಟಾಯಿತು; ಅದ್ಭುತವಾದದ್ದಾದರೂ ಎಲ್ಲೋ ನಡೆದ ಅಗ್ನಿ ಶುದ್ಧಿ ವೃತ್ತಾಂತವನ್ನು ಅವರು ಹೇಗೆ ನಂಬಬೇಕು?” (I. ೪೪) ಎಂದು ಸಮಾಧಾನ ಹೇಳಿದನು.

ಹೀಗೆಂದು ಜಾನಕಿಯನ್ನು ಕೊಳೆತ ಹಣ್ಣಿನಂತೆ ಎಸೆದು ಬಿಡುವುದಕ್ಕಾಗುತ್ತದೆಯೇ? ದಿನ ತುಂಬಿದ ಬಸಿರಿ; ಪ್ರಿಯ ಪತ್ನಿ; ತನ್ನ ಜೊತೆಗೂ ವನವಾಸಮಾಡಿದವಳು; ರಾಕ್ಷಸರ ಕೈಗೆ ಸಿಕ್ಕಿ ಸಂಕಟಪಡುತ್ತ ತನ್ನ ಧ್ಯಾನದಲ್ಲಿಯೇ ಜೀವವನ್ನು ಹಿಡಿದುಕೊಂಡಿದ್ದವಳು; ಈಗ ಚಿತ್ರವನ್ನು ನೋಡುತ್ತ ನೋಡುತ್ತ ತಿರುಗಾಡಿದ ಆಯಾಸದಿಂದ ಸೊರಗಿ ತನ್ನ ಎದೆಯ ಮೇಲೆ ತೋಳನ್ನು ಒರಗಿಕೊಂಡು ನಿದ್ರೆಮಾಡಿದ್ದಾಳೆ.* ಅವಳನ್ನು ಹಾಗೆ ಧರಿಸಿ “ಇವಳು ನನ್ನ ಗೃಹಲಕ್ಷ್ಮಿ…ಇವಳ ವಿರಹವನ್ನು ಸಹಿಸುವುದು ಅಸಾಧ್ಯ” (I.೩೮, ೩೯) ಎಂದು ಆನಂದಿಸಿದ್ದಾನೆ. ಆದರೆ ಆ ಸ್ಥಿತಿಯಲ್ಲಿಯೇ ‘ದುರ್ಮುಖ’ ನಿಂದ ‘ವಾಗ್ವಜ್ರ’ ವು ಬೀಳುತ್ತದೆ. ರಾಮನು ಮೂರ್ಛೆ ಹೋಗುತ್ತಾನೆ; ದಿಕ್ಕು ತೋಚದೆ, “ಮಂದಭಾಗ್ಯನಾದ ನಾನು ಏನು ಮಾಡಲಿ?” ಎಂದು ಕೊಳ್ಳುತ್ತಾನೆ. ಏಕೆಂದರೆ, ಈಗ ಅವನಿಗೆ ಧರ್ಮಸಂಕಟ ಒದಗಿತ್ತು. ಪತಿಧರ್ಮವನ್ನು ಹಿಡಿದರೆ ರಾಜಧರ್ಮ ಹೋಗುತ್ತಿತ್ತು; ರಾಜಧರ್ಮವನ್ನು ಹಿಡಿದರೆ ಪತಿಧರ್ಮ ಹೋಗುತ್ತಿತ್ತು. ಆದರೆ ಈ ಅನಿಶ್ಚಯವಿದ್ದದ್ದು ಒಂದೇ ನಿಮಿಷ; ಅನಂತರ ರಾಜಧರ್ಮ ಕುಲಗೌರವ ಗುರ್ವಾಜ್ಞೆಗಳನ್ನು ನೆನೆದು ಆಗಲೇ ಅಲ್ಲಿಯೇ “ಮನೆಯಲ್ಲಿ ಸಾಕಿಕೊಂಡಿದ್ದ ಹಕ್ಕಿಯನ್ನು ನಂಬಿಸಿ ಕೈಯಾರ ವೃತ್ಯುವಿಗೆ ಕೊಡುವ ಕಟುಕನ ಹಾಗೆ” (I. ೪೫) ಅವಳನ್ನು ಕಾಡುಪಾಲು ಮಾಡಲು ನಿಶ್ಚಯಿಸುವನು. ಇದರಿಂದ ತಾನು ಧರ್ಮವನ್ನು ಗಳಿಸಿ ಪವಿತ್ರನಾದನೆಂದು ಅವನು ಭಾವಿಸಲಿಲ್ಲ; “ತಾನು ಅಸ್ಪೃಶ್ಯನಾದ ಪಾತಕಿಯಾದೆ; ಆದ್ದರಿಂದ ದೇವಿಯನ್ನು ಮುಟ್ಟಿ ಅವಳನ್ನೇಕೆ ಮೈಲಿಗೆ ಮಾಡಲಿ” ಎಂದು ತನ್ನನ್ನು ತಾನು ಹಳಿದುಕೊಂಡು ಅವಳನ್ನು ಕೆಳಗೆ ಮಲಗಿಸುವನು; ತಾನು ‘ಅಪೂರ್ವಕರ್ಮಚಂಡಾಲ’ ‘ದುರಾತ್ಮ’ ನಿರ್ಘೃಣ’ ಎಂದು ಮುಂತಾಗಿ ಬೈದುಕೊಳ್ಳುವನು. ಹೀಗೆ ರಾಜಧರ್ಮವು ಮೇಲಾಯಿತೇ ಹೊರತು ಅದು ಪತಿಧರ್ಮವನ್ನು ಅಳಿಸಲಿಲ್ಲ; ಪ್ರೇಮವನ್ನು ಅಡಗಿಸಲಿಲ್ಲ. ಮುಂದೆ ಬರುವುದನ್ನು ಆಗಲೇ ಅನುಭವಿಸಿಯೋ ಎಂಬಂತೆ ಸೀತೆ “ಹಾ ! ಆರ್ಯಪುತ್ರ ಎಲ್ಲಿದ್ದೀಯೇ!” ಎಂದು ಕಳವಳಿಸಿ ಕನವರಿಸುವಳು. ಆದರೇನು? ಇನ್ನು ಸ್ವಲ್ಪ ಹೊತ್ತಿನಲ್ಲಿ ಅವಳ ಬಯಕೆಯೇ ನೆವವಾಗಿ ಮುಂದೆ ಬರುವುದೊಂದನ್ನೂ ಅರಿಯದೆ ಸೀತೆ ಲಕ್ಷ್ಮಣನೊಡನೆ ಕಾಡಿಗೆ ಹೋಗಬೇಕಾಯಿತು.

ಜನಸ್ಥಾನದಲ್ಲಿ ನಡೆಯುವ ಶಂಬೂಕವಧವು ಹಳದಾದರೂ ಆತ್ರೇಯಿ ವಾಸಂತಿ ತಮಸೆಯರು ಹೊಸಬರು. ಇವರಲ್ಲಿ ಆತ್ರೇಯಿ ಸ್ವಪ್ನವಾಸವದತ್ತದಲ್ಲಿ ಬರುವ ಬ್ರಹ್ಮಚಾರಿಯನ್ನು ಜ್ಞಾಪಕಕ್ಕೆ ತರುತ್ತಾಳೆ. ಇವರನ್ನೂ ಜನ ಸ್ಥಾನವನ್ನೂ ಉಪಯೋಗಿಸಿಕೊಂಡು ಕವಿ ಹನ್ನೆರಡು ವರ್ಷದ ಹಿಂದೆ ಅಗಲಿದ್ದ ಸೀತಾರಾಮರಲ್ಲಿ ಈಗ ಪರಸ್ಪರ ವರ್ತನವು ಹೇಗಿತ್ತೆಂದು ಸೂಚಿಸಿದ್ದಾನೆ. (ಇಲ್ಲಿಯ ಕರುಣವಿಪ್ರಲಂಭ ಸನ್ನಿವೇಶವೂ ಆಜ್ಞಾತಳಾಗಿರುವ ಸೀತೆಯೂ ಮತ್ತೆ ಸ್ವಪ್ನವಾಸವದತ್ತವನ್ನು ಜ್ಞಾಪಿಸುತ್ತವೆ.) ರಾಮನು ಅದೇ ಧರ್ಮಮೂರ್ತಿ, ಸಂತಾಪಮೂರ್ತಿ; ಸೀತೆ ಪ್ರೇಮಮಯಿ ಕ್ಷಮಾಮಯಿ, ‘ಕ್ಷಮೆ’ ಯೆನ್ನಿಸಿಕೊಂಡ ಭೂದೇವಿಯೂ ರಾಮನ ವಿಚಾರದಲ್ಲಿ ಅಸಹನೆಯನ್ನು ತೋರಿಸಿದಳು. ಆದರೆ ಸೀತೆ ತಾಳ್ಮೆಯಿಂದಿದ್ದು ನೊಂದ ಪತಿಯ ಜೊತೆಗೆ ತಾನೂ ನೊಂದು ಅವನನ್ನು ಮತ್ತೆ ಮತ್ತೆ ಚೇತನಗೊಳಿಸಿದಳು.

‘ಮಹಾವೀರ ಚರಿತ’ ದಲ್ಲಿ ವಿಶ್ವಾಮಿತ್ರನ ಆಶ್ರಮಕ್ಕೆ ಇರುವ ಸ್ಥಾನವು ಇಲ್ಲಿ ವಾಲ್ಮೀಕಿಯ ಆಶ್ರಮಕ್ಕೆ ಇದೆ. ಇದು ಸಮಸ್ತ ವಸ್ತುಪಾತ್ರಗಳನ್ನೂ ತನ್ನಲ್ಲಿ ಕೇಂದ್ರೀಕರಿಸಿಕೊಂಡಿದೆ. ಗುರುಹಿರಿಯರು ಕೂಡುವುದು ಅಲ್ಲಿ; ಹುಡುಗರು ಯುದ್ಧಮಾಡುವುದು ಅಲ್ಲಿ; ಸೀತಾರಾಮರೂ ಅಗಲಿದ ತಾಯಿ ತಂದೆ ಮಕ್ಕಳೂ ಅನಿರೀಕ್ಷಿತವಾಗಿ ಸೇರುವುದು ಅಲ್ಲಿ. ಇದು ಶಾಕುಂತಲದ ಮಾರೀಚಾಶ್ರಮವನ್ನು ಜ್ಞಾಪಕಕ್ಕೆ ತರುತ್ತದೆ. ಆದರೆ ಇಲ್ಲಿ ತಮ್ಮ ವಂಶದ ಕುಡಿಯನ್ನು ನೋಡಿ ಸಂತೋಷಪಡುವವನು ತಂದೆ ಮಾತ್ರವಲ್ಲ, ಅಜ್ಜ ಅಜ್ಜಿಯರೂ ಆ ಭಾಗ್ಯವನ್ನು ಪಡೆಯುತ್ತಾರೆ (ಅಂಕ ೪). ಭರತನಿಗೆ ಬದಲಾಗಿ ಅವನಂತೆಯೇ ‘ಸರ್ವದಮನ’ ನಾದ, ಲವ, ಅವನನ್ನು ಮೀರಿಸಿದ ಅವನ ಅಣ್ಣ ಕುಶ. ಇದೆಲ್ಲಾ ಆದಮೇಲೆ ಕವಿ ನಾಟಕದ ಮುಡಿಯಲ್ಲಿ ಗರ್ಭಾಂಕವನ್ನು ಜೋಡಿಸಿದ್ದಾನೆ. ಇದು ಪ್ರಿಯದರ್ಶಿಕೆಯನ್ನೂ ಹ್ಯಾಂಲೆಟ್ ನಾಟಕವನ್ನೂ ಜ್ಞಾಪಕಕ್ಕೆ ತರುತ್ತದೆ. ನಾಟಕ ನೋಡುವುದಕ್ಕೆ ಸೇರಿದ್ದ ನೆರವಿಗೆ ಸೀತೆಯ ಪವಿತ್ರ ಚರಿತ್ರೆಯನ್ನೂ ರಾಮನ ದುಸ್ಸಹ ಶೋಕವನ್ನೂ ಇದರ ಮೂಲಕ ವಾಲ್ಮೀಕಿ ಚೆನ್ನಾಗಿ ನಿರವಿಸಿ ಅವರನ್ನು ಒಪ್ಪಿಸಿದನೆಂದು ಕವಿಯ ಭಾವ. ‘ಅಹೋ ಸಂವಿಧಾನಕಮ್!’ (ಅಂಕ III).

‘ಮಹಾವೀರ ಚರಿತೆ’ ಯಲ್ಲಿ ಕಂಡುಬರುವ ಕಥಾಸಂಗ್ರಹ ಸಾಮರ್ಥ್ಯವನ್ನು ಕವಿ ಇಲ್ಲಿಯೂ ತೋರಿಸಿದ್ದಾನೆ. ಒಂದು ಚಿತ್ರದಲ್ಲಿ ಪೂರ್ವ ರಾಮಾಯಣವೆಲ್ಲವೂ ಅಡಕವಾಗಿದೆ.* ನಟಸೂತ್ರಧಾರರ ನಾಲ್ಕು ಮಾತುಗಳಲ್ಲಿ ಮುಂದಿನ ಕಥೆಯೆಲ್ಲವೂ ಸೂಚಿತವಾಗಿದೆ.* ಆದರೆ ಅಲ್ಲಿನಂತೆ ಇಲ್ಲಿಯೂ ರಂಗದ ಮೇಲೆ ಕಥೆಗಿಂತ ಮಾತು ಹೆಚ್ಚು, ವರ್ಣನೆ ಹೆಚ್ಚು; ಒಟ್ಟಿನ ಮೇಲೇನೋ ಅದಕ್ಕಿಂತ ಉತ್ತಮ. ಇದರಲ್ಲಿ ಅವನ ‘ಪರಿಣತ ಪ್ರಜ್ಞೆ’ (VII. ೨೦) ಕಂಡು ಬರುತ್ತದೆ.

ಇದು ಕ್ಷತ್ರಿಯನ ಚರಿತ್ರೆಯಾದರೂ ಕಥೆಯೆಲ್ಲವೂ ಬಹುಮಟ್ಟಿಗೆ ಶಾಕುಂತಲ ಮಹಾವೀರ ಚರಿತಗಳಂತೆ ಋಷ್ಯಾಶ್ರಮಗಳಿಂದ ಪರಿವೃತವಾದ ಧಾರ್ಮಿಕ ವಾತಾವರಣದಲ್ಲಿ ನಡೆಯುತ್ತದೆ. ಋಷ್ಯಶೃಂಗ, ವಸಿಷ್ಠ, ವಾಲ್ಮೀಕಿ, ಜನಕ, ಅರುಂಧತಿ, ಗಂಗೆ, ಗೋದಾವರಿ, ವಾಸಂತಿ, ಆತ್ರೇಯಿ ಇವರು ಅಲ್ಲಿ ಯಜಮಾನಿಕೆ ವಹಿಸಿ ಓಡಾಡುವ ವ್ಯಕ್ತಿಗಳು. ಋಷ್ಯಶೃಂಗನ ದ್ವಾದಶ ವಾರ್ಷಿಕಸತ್ರವೂ ರಾಮನ ಅಶ್ವಮೇಧ (ಪೂರ್ವಾಂಗ)ವೂ ನಡೆಯುವುದು ಇಲ್ಲಿಯೇ.

ಈ ನಾಟಕದಲ್ಲಿ ಕರುಣವನ್ನು ಪ್ರಧಾನರಸವಾಗಿ ಚಿತ್ರಿಸಬೇಕೆಂಬುದು ಕವಿಯ ಆಶಯ. ಅವನು ಆರಿಸಿಕೊಂಡಿರುವ ಕಥಾಭಾಗಕ್ಕಿಂತ ಉತ್ತಮವಾದ ಮತ್ತಾವ ಪೌರಾಣಿಕ ವಸ್ತುವೂ ಇರಲಾರದು. ಅದರಲ್ಲಿ ಗಂಡುಸೂ ವೀರನೂ ರಾಜನೂ ಆದ ರಾಮನ ಮಾತಿರಲಿ; ಸೀತೆಯ ವಿಚಾರವನ್ನು ತೆಗೆದುಕೊಳ್ಳೋಣ—ತಂದೆಯನ್ನು ನೋಡಿದರೆ ಜನಕ, ಗಂಡನನ್ನು ನೋಡಿದರೆ ರಾಮ; ಮಕ್ಕಳು ಅಣಿಮುತ್ತಿನಂಥ ಅವಳಿ ಜವಳಿಗಳು; ಆದರೆ ಸೀತೆಯ ಪಾಲಿಗೆ ಬಂದದ್ದೇನು?-ಕಾಡು, ದೂರು, ದುಃಖ. ಅವಳ ದುಃಖವನ್ನು ನೋಡಿ ಭೂಮಿಯೇ ಅಯ್ಯೋ ಎಂದು ಬಾಯಿಬಿಟ್ಟಿತು; ಅದರಲ್ಲಿ ಅವಳು ಅಡಗಿಹೋದಳು. ಸೀತಾರಾಮರು ಆದರ್ಶ ಸ್ತೀಪುರುಷರು; ಅಂಥವರೂ ಈ ಕಷ್ಟಪರಂಪರೆಗೆ ಸಿಕ್ಕಿದರು. ಜೀವನವೆಂಬುದು ದುರ್ಭೇದ್ಯವಾದ ಸಮಸ್ಯೆ-ಎಂದು ಈ ಕಥೆ ಸಾರುತ್ತದೆ. ಈ ದಾರುಣವಾದ ಕಥೆಯನ್ನು ಕವಿ ದಾರುಣತರವಾಗಿ ಮಾಡಲು ಯತ್ನಿಸಿದ್ದಾನೆ. ಅವನ ನಾಟಕದಲ್ಲಿ ಸೀತೆ ವಾಲ್ಮೀಕ್ಯಾಶ್ರಮದ ತಾಪಸಿಯರಿಂದ ಸೇವೆಗೊಂಡು ಸುಖವಾಗಿ ಪ್ರಸವಿಸುವುದಿಲ್ಲ; ವ್ಯಥೆಯನ್ನು ತಾಳಲಾರದೆ ಗಂಗೆಯಲ್ಲಿ ಬಿದ್ದು ಮಕ್ಕಳನ್ನು ಹಡೆಯುವಳು. ರಾಮನು ಎಲ್ಲಿರಲಿ, ಯಾವುದನ್ನು ನೋಡಲಿ, ಏನನ್ನು ಮಾಡಲಿ, ಸೀತೆಯನ್ನು ನೆನೆದು ತನ್ನ ಕ್ರೌರ್ಯವನ್ನು ಹಳಿದುಕೊಂಡು ಸಂತಪಿಸುವನು.

ಇದರಲ್ಲಿ ಉದ್ದಕ್ಕೂ ಗೋಳಾಟವೇ—ತಡೆದುಕೊಳ್ಳಲೂ ತಪ್ಪಿಸಿಕೊಳ್ಳಲೂ ಆರದ ಸಂಕಟ.* ರಾಮ, ಸೀತೆ, ಕೌಸಲ್ಯೆ, ಜನಕ ಮುಂತಾದ ನಾನಾ ಜನರ ನಾನಾ ವಿಧವಾದ ಸಂಕಟ.

ಏಕೋ ರಸಃ ಕರುಣ ಏವ ನಿಮಿತ್ತಭೇದಾತ್

ಭಿನ್ನಃ ಪೃಥಕ್ ಪೃಥಗಿವಾಶ್ರಯತೇ ವಿವರ್ತಾನ್ ।

ಆವರ್ತಬುದ್ಭುದ ತರಂಗಮಯಾನ್ ವಿಕಾರಾನ್

ಅಂಭೋ ಯಥಾ ಸಲಿಲಮೇವ ತು ತತ್ಸಮಗ್ರಂ ॥

ಕೊನೆಯ ಅಂಕದಲ್ಲಿಯೂ ಅದ್ಭುತಕ್ಕಿಂತ ಕರುಣವೇ ಹೆಚ್ಚಾಗಿದೆ. ಆದರೆ (ಹರಿಶ್ಚಂದ್ರ ಕಥೆಯಂತೆ) ಇದು ಮಂಗಳಾಂತವಾಗಿ ಮುಗಿಯುವುದು ಕರುಣರಸ ದೃಷ್ಟಿಯಿಂದ ಕುಂದು ಎಂದೇ ಹೇಳಬೇಕು. ಮುಂದೆ ಸುಖ ಬರುವುದು ನಿರ್ಧರವಾಗಿದ್ದರೆ ಕಷ್ಟದ ಮೊನೆ ಅಷ್ಟಾಗಿ ತೋರುವುದಿಲ್ಲ; ಹಾಗಲ್ಲದೆ ಕೊನೆಯಲ್ಲಿ ಅನಿವಾರ್ಯವಾದ ಕಷ್ಟವು ಕಾದು ಕುಳಿತಿದ್ದರೆ ಸುಖವು ಜೋಲುಮುಖ ಹಾಕಿಕೊಳ್ಳುತ್ತದೆ; ಉತ್ತರ ಕಾಂಡದಲ್ಲಿ ಕಾಣುವ ರಾಮಕಥಾ ಪರಿಣಾಮವು ಇದಕ್ಕೆ ಉದಾಹರಣೆ. ಸೀತೆ ಭೂಮಿಯಲ್ಲಿ ಅಡಗಿಯೂ ರಾಮನು ಸರಯೂ ನದಿಯಲ್ಲಿ ಬಿದ್ದು ಕೊನೆಗಾಣುತ್ತಾರೆಂದು ಗೊತ್ತಿರುವಾಗ ಅವರ ರಾಜವೈಭವ ಗೃಹಸೌಖ್ಯವರ್ಣನೆಗಳು ಯಾರಿಗೆ ಸಂತೋಷ ಕೊಟ್ಟಾವು?

ಸಂಸ್ಕೃತದಲ್ಲಿ ಕರುಣವನ್ನು ಪ್ರಧಾನರಸವಾಗಿ ಪ್ರತಿಪಾದಿಸಿರುವ ನಾಟಕವು ಇದೊಂದೇ ಎಂದು ಹೇಳಬಹುದು; ಅಂದಿನಿಂದ ನಾಟಕದಲ್ಲಿ ಕರುಣವೂ ಅಂಗಿರಸವಾಗಬಹುದೆಂದು ಲಕ್ಷಣಗ್ರಂಥಕಾರರು ಒಪ್ಪಿಕೊಂಡಂತಿದೆ; “ಉತ್ತರೇ ರಾಮಚರಿತೇ ಭವಭೂತಿರ್ವಿಶಿಷ್ಯತೇ” ಎಂಬ ಪಂಡಿತೋಕ್ತಿಯೋ ಇದರಂತೆ ಮಿಕ್ಕ ಅಂಶಗಳನ್ನೂ ಮೆಚ್ಚಿ ಆಡುತ್ತಿರುವ ಮಾತಾಗಿದೆ; ಈ ಮಾತಿಗೆ, ಅವನ ಮೂರು ನಟಕಗಳಲ್ಲಿ ‘ಉತ್ತರ ರಾಮಚರಿತೆ’ ಶ್ರೇಷ್ಠವೆಂದು ಅರ್ಥಮಾಡುವುದಾದರೆ ಅದನ್ನು ಎಲ್ಲರೂ ಒಪ್ಪಲೇಬೇಕು; ಭವಭೂತಿ ಇಲ್ಲಿ ಎಲ್ಲ ನಾಟಕ ಕರ್ತರಿಗಿಂತ ಒಂದು ಕೈ ಮೇಲು ಎನ್ನುವುದಾದರೆ ಭಿನ್ನಾಭಿಪ್ರಾಯಗಳು ಬಂದಾವು.

‘ಮಾಲತೀ ಮಾಧವ’ ವು ‘ಮೃಚ್ಛಕಟಿಕ’ ದಂತೆ ಹತ್ತು ಅಂಕಗಳುಳ್ಳ ಒಂದು ಪ್ರಕರಣ’. ಅದರ ಕಥೆ ಹೀಗಿದೆ—

ಪದ್ಮಾವತೀ ನಗರದಲ್ಲಿ ಮಂತ್ರಿಯಾಗಿದ್ದ ಭೂರಿವಸುವಿಗೆ ಮಾಲತಿಯೆಂಬ ಮಗಳಿದ್ದಳು; ಕುಂಡನಪುರದಲ್ಲಿ ಮಂತ್ರಿಯಾಗಿದ್ದ ದೇವರಾತನಿಗೆ ಮಾಧವನೆಂಬ ಮಗನಿದ್ದನು. ಈ ಭೂರಿವಸು ದೇವರಾತರು ಸಹಾಧ್ಯಾಯಿಗಳಾಗಿದ್ದಾಗಲೇ ಮುಂದೆ ತಮ್ಮ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಕೊಟ್ಟು ತಂದು ಸಂಬಂಧ ಬೆಳೆಸುವುದಾಗಿ ಪ್ರತಿಜ್ಞೆ ಮಾಡಿಕೊಂಡಿದ್ದರು. ಈಗಲೂ ಅವರಿಗೆ ಇದು ಇಷ್ಟವೇ ಆಗಿತ್ತು. ಆದರೆ ಪದ್ಮಾವತೀ ರಾಜನು ಮಾಲತಿಯನ್ನುತನ್ನ ನರ್ಮಸಚಿವನಾದ ನಂದನನಿಗೆ ಕೊಡಬೇಕೆಂದು ಕೇಳಿದ್ದನು. ಭೂರಿವಸುವು ತನ್ನ ರಾಜನ ಇಷ್ಟಕ್ಕೆ ವಿರುದ್ಧವಾಗಿ ಹೋಗುವಂತಿರಲಿಲ್ಲ.

ದೇವರಾತನು ತನ್ನ ಮಗ ಮಾಧವನನ್ನು ನ್ಯಾಯಶಾಸ್ತ್ರ ಕಲಿಯಬೇಕೆಂಬ ನೆವದಿಂದ ಪದ್ಮಾವತಿಗೆ ಕಳುಹಿಸಲು, ಅವನು ಕಾಮಂದಕಿಯೆಂಬ ಬೌದ್ಧ ಸಂನ್ಯಾಸಿನಿಯ ಬಳಿಗೆ ಬಂದನು. ಕಾಮಂದಕಿ, ದೇವರಾತ ಭೂರಿವಸುಗಳೊಡನೆ ಸಹಾಧ್ಯಾಯಿನಿಯಾಗಿದ್ದವಳು; ಅವರ ಮನೋಗತವನ್ನೂ ಅದಕ್ಕೆ ಇದ್ದ ಅಡ್ಡಿಯನ್ನೂ ಅರಿತಿದ್ದವಳು; ಮಾಲತೀ ಮಾಧವರಿಗೆ ಮದುವೆಯಾಗಬೇಕೆಂದು ಅವಳಿಗೂ ಇಷ್ಟವಿತ್ತು. ಆದ್ದರಿಂದ, ಈಗ ಅವರು ಒಬ್ಬರ ಕಣ್ಣಿಗೆ ಮತ್ತೊಬ್ಬರು ಬೀಳುವಂತೆ ಏರ್ಪಡಿಸಿ ಅವರಲ್ಲಿ ಪರಸ್ಪರ ಪ್ರೇಮ ಹುಟ್ಟುವಂತೆ ಮಾಡಿದಳು. ಅದು ಬೆಳೆಯುತ್ತಿತ್ತು.

ಈ ಮಧ್ಯೆ, ಮಾಲತಿಯನ್ನು ಕಂಡು ಅವಳ ಮುಂದೆ ನಂದನನ ಅವಗುಣಗಳನ್ನು ವರ್ಣಿಸಿ ಅವನ ಮೇಲೆ ದ್ವೇಷವನ್ನುಂಟುಮಾಡಿದಳು; ಶಕುಂತಲೆ, ಉರ್ವಶಿ, ವಾಸವದತ್ತೆಯರ ಕಥೆಗಳನ್ನು ಹೇಳಿ ಅವಳು ಮದುವೆಯ ವಿಚಾರದಲ್ಲಿ ತಂದೆಯ ಮಾತನ್ನು ಕೇಳಬೇಕಾದದ್ದಿಲ್ಲವೆಂದು ಸೂಚಿಸಿದಳು; ಮಾಧವನ ಪ್ರಸ್ತಾಪ ಬರುವಂತೆ ಮಾಡಿ ಅವನ ರೂಪ ಕುಲ ಶೀಲಾದಿಗಳನ್ನು ಹೊಗಳಿದಳು.—೨.

ಮಾಧವನು ಕುಸುಮಾಕರೋದ್ಯಾನದಲ್ಲಿ ಅವಿತುಕೊಂಡಿರುವಂತೆ ಹೇಳಿ ಕಳುಹಿಸಿ ತಾನು ಅಲ್ಲಿದ್ದ ಶಿವಾಲಯದಲ್ಲಿ ಅರ್ಚನೆಗೆಂದು ಮಾಲತಿಯನ್ನು ಕರೆದುಕೊಂಡು ಹೋಗಿ, ಮಾಧವನ ಮನೋವೃತ್ತಿಯನ್ನು ತಿಳಿಸಿ ಅವನಿಗೂ ಅವಳಿಗೂ ಭೇಟಿ ಮಾಡಿಸಿದಳು. ಹಠತ್ತಾಗಿ ಅಲ್ಲಿಗೆ ಒಂದು ಹುಲಿ ಬಂದು ಮಾಲತಿಯ ಸ್ನೇಹಿತಳಾದ ಮದಯಂತಿಕೆಯನ್ನು ಹಿಡಿದುಕೊಳ್ಳಲು, ಮಾಧವನನ್ನು ಹುಡುಕಿಕೊಂಡು ಬಂದಿದ್ದ ಅವನ ಸ್ನೇಹಿತನಾದ ಮಕರಂದನು ಆ ಹುಲಿಯನ್ನು ಕೊಂದು ಅವಳನ್ನು ಉಳಿಸಿದನು.

ಆ ಊರಿನ ಹೊರಗಡೆ ಶ್ಮಶಾನದಲ್ಲಿ ಒಂದು ಚಾಮುಂಡಿಯ ಗುಡಿ ಇತ್ತು; ಅಲ್ಲಿ ಅಘೋರಘಂಟನೆಂಬ ಕಾಪಾಲಿಕನಿದ್ದನು. ಅವನೂ ಅವನ ಶಿಷ್ಯಳಾದ ಕಪಾಲಕುಂಡಲೆಯೂ ಮನೆಯಲ್ಲಿ ಮಲಗಿದ್ದ ಮಾಲತಿಯನ್ನು ಹೊತ್ತು ತಂದು ಅವಳನ್ನು ದೇವತೆಗೆ ಬಲಿಕೊಡುವುದರಲ್ಲಿದ್ದರು. ಮಾಧವನು ನರಮಾಂಸದಿಂದ ಭೂತಪ್ರೇತಗಳನ್ನು ಒಲಿಸಿಕೊಂಡು ಮಾಲತಿಯನ್ನು ಪಡೆಯಬೇಕೆಂದು ಅಲ್ಲಿಗೆ ಬಂದಿದ್ದು ಅವಳನ್ನು ಬಿಡಿಸಿಕೊಂಡನು, ಇಷ್ಟು ಹೊತ್ತಿಗೆ ಭೂರಿವಸುವಿನ ಪರಿವಾರದವರೂ ಅಲ್ಲಿಗೆ ಹುಡುಕಿಕೊಂಡು ಬರಲು ಮಾಧವನು ಅವಳನ್ನು ಅವರಿಗೆ ಒಪ್ಪಿಸಿ, ಅಘೋರ ಘಂಟನೊಡನೆ ಹೋರಾಡಿ ಅವನನ್ನು ಕೊಂದನು.—೫.

ನಂದನನೊಡನೆ ಮಾಲತಿಯ ಮದುವೆ ಗೊತ್ತಾಯಿತು; ಆ ಸಂಬಂಧದಲ್ಲಿ ಅವಳು ನಗರದೇವತೆಯ ಗುಡಿಗೆ ಹೋಗಿ ಪೂಜೆಮಾಡಿಕೊಂಡು ಬರುವುದಕ್ಕೆಂದು ಕಾಮಂದಕಿಯೊಡನೆಯೂ ತನ್ನ ಸಖಿಯೊಡನೆಯೂ ಹೋಗಲು ಅಲ್ಲಿ ಕಾಮಂದಕಿಯ ಏರ್ಪಾಡಿನಂತೆ ಮಾಧವ ಮಕರಂದರು ಕಾದಿದ್ದರು. ಕಾಮಂದಕಿಯ ಅಪ್ಪಣೆಯಂತೆ ಮಾಧವನು ಮಾಲತಿಯನ್ನು ಕರೆದುಕೊಂಡು ಕಾಮಂದಕಿಯ ಮಠದ ಕಡೆಗೆ ಹೋದನು; ಮಕರಂದನು ಮದುವೆಯ ಹೆಣ್ಣಿಗೆಂದು ಬಂದಿದ್ದ ವಸ್ತ್ರಾಭರಣಗಳನ್ನು ತೊಟ್ಟು ಕಾಮಂದಕಿಯ ಜೊತೆಯಲ್ಲಿ ಮಾಲತಿಯಂತೆ ಹೊರಟನು—೬.

(ನಂದನನು ಮದುವೆಮಾಡಿಕೊಂಡು ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋದನು.) ಆದರೆ ಮದುವಣಗಿತ್ತಿ ಅವನೊಡನೆ ಒರಟಾಟ ಮಾಡಲು ಅವನು ಬೈದು ಬೈಸಿಕೊಂಡನು. ಈ ವಿಚಾರ ಅವನ ತಂಗಿ ಮದಯಂತಿಕೆಗೆ ತಿಳಿಯಲು ಅವಳು ನಾದಿನಿಗೆ ಬುದ್ಧಿ ಹೇಳಬೇಕೆಂದು ಬಂದಳು. ಅಲ್ಲಿದ್ದ ಲವಂಗಿಕೆ ಬುದ್ಧರಕ್ಷಿತೆಯರು ಅವಳಿಗೆ ಮಕರಂದನಲ್ಲಿದ್ದ ಪ್ರೀತಿಯನ್ನು ಹೊರಡಿಸಿದರು. ಮುಸುಕು ಹಾಕಿಕೊಂಡು ಮಲಗಿದ್ದು ತನ್ನ ಮಾತನ್ನೆಲ್ಲಾ ಕೇಳುತ್ತಿದ್ದ ಮಕರಂದನನ್ನು ಮಾಲತಿಯೆಂದು ಅವಳು ಎಬ್ಬಿಸುವುದಕ್ಕೆ ಹೋಗಲು ಅವನು ಅವಳ ಕೈ ಹಿಡಿದುಕೊಂಡನು. ಕತ್ತಲೆಯಲ್ಲಿ ತಲೆಮರೆಸಿಕೊಂಡು ಅವರೂ ಕಾಮಂದಕಿಯ ಆಶ್ರಮದ ಹತ್ತಿರಕ್ಕೆ ಹೊರಟರು.—೭.

ಆದರೆ ದಾರಿಯಲ್ಲಿ ನಗರ ರಕ್ಷಕರು ಅವರನ್ನು ಹಿಡಿದು ರಾಜನ ಹತ್ತಿರಕ್ಕೆ ಕರೆದುಕೊಂಡು ಹೋದರು. ಈ ಮಧ್ಯೆ ಮದಯಂತಿಕೆಯೂ ಕಲಹಂಸಕನೂ ಗದ್ದಲದಲ್ಲಿ ತಪ್ಪಿಸಿಕೊಂಡುಬಂದು ತಾವು ಸಿಕ್ಕಿಬಿದ್ದಿದ್ದನ್ನು ಮಾಲತೀ ಮಾಧವರಿಗೆ ತಿಳಿಸಿದರು. ಮಾಧವನು ಸ್ನೇಹಿತನ ಸಹಾಯಕ್ಕೆಂದು ಹೊರಟನು. ರಾಜನು ಅವರ ಗುಣರೂಪಕುಲಾದಿಗಳನ್ನು ಕೇಳಿ ತಿಳಿದು ಅವರನ್ನು ಕ್ಷಮಿಸಿ ಕಳುಹಿಸಿದನು. ಈ ಮಧ್ಯೆ ಕಾಮಂದಕಿಗೆ ವರ್ತಮಾನವನ್ನು ತೆಗೆದುಕೊಂಡು ಹೋದ ಲವಂಗಿಕೆ ಬರಲಿಲ್ಲವೆಂದು ಅವಳನ್ನು ನೋಡುವುದಕ್ಕೆ ಮಾಲತಿ ಹೊರಕ್ಕೆ ಬರಲು ಅವಳನ್ನು ಕಪಾಲಕುಂಡಲೆ ಹಿಡಿದುಕೊಂಡು ಶ್ರೀಪರ್ವತಕ್ಕೆ ಹೊತ್ತುಕೊಂಡು ಹೋದಳು. ಮಾಧವ ಮಕರಂದರು ಮಾಲತಿಯನ್ನು ಕಾಣದೆ ಅವಳನ್ನು ಹುಡುಕಿಕೊಂಡು ಹೊರಟರು—೮

ಮಾಲತಿ ಸಿಕ್ಕದೆ ಅವರು ನಿರಾಶರಾಗಿರಲು ಕಾಮಂದಕಿಯ ಶಿಷ್ಯಳಾದ ಸೌದಾಮಿನಿ ಕಾಣಿಸಿಕೊಂಡು ಮಾಲತಿ ಬದುಕಿರುವಳೆಂದು ತಿಳಿಸಿದಳು. ಮೊದಲು ಅವಳ ಬಕುಳಮಾಲಿಕೆಯನ್ನು ಕೊಟ್ಟು ನಂಬಿಕೆಯನ್ನುಂಟುಮಾಡಿ ಅನಂತರ ಮಾಧವನನ್ನು ಕರೆದುಕೊಂಡು ಹೋಗಿ ತಾನು ರಕ್ಷಿಸಿದ್ದ ಮಾಲತಿಯನ್ನು ಅವನಿಗೆ ಒಪ್ಪಿಸಿದಳು.—೯.

ಇತ್ತ ಕಾಮಂದಕಿ ಮುಂತಾದವರು ಮಾಲತೀ ಮಾಧವರನ್ನು ಕಾಣದೆ ಕಳವಳಪಡುತ್ತಿರಲು ಮೊದಲು ಮಕರಂದನೂ ಆಮೇಲೆ ಮಾಲತಿಯನ್ನು ಕರೆದುಕೊಂಡು ಮಾಧವನೂ ಕೊನೆಗೆ ಸೌದಾಮಿನಿಯೂ ಬಂದು ನಡೆದ ಸಂಗತಿಯನ್ನೆಲ್ಲಾ ವಿವರಿಸಿದರು. ರಾಜನು ವಧುವರರನ್ನು ಅಭಿನಂದಿಸಿ ಒಂದು ಪತ್ರವನ್ನು ಬರೆದು ಕಳುಹಿಸಿದನು.— ೧೦.

ಮಾಲತೀಮಾಧವವು ಒಂದು ‘ಪ್ರಕರಣ’ ; ‘ಪ್ರಕರಣ’ ದ ವಸ್ತುವು ‘ಕಲ್ಪಿತ’. ಆದ್ದರಿಂದ ಇದರ ವಸ್ತುವೂ ಕಲ್ಪಿತವೇ ಆಗಿರಬೇಕು. ಆದರೂ ಅದರ ಅವಯವ ಸಾಮಗ್ರಿಗಳಲ್ಲಿ ಕೆಲವು ಕವಿಗೆ ಸಿದ್ಧವಾಗಿ ದೊರಕಿದಂತೆ ಕಾಣುತ್ತದೆ; ಹೀಗೆ ಈ ಕಥೆಯ ತಿರುಳಿಗೆ ಮೂಲವು ಬೃಹತ್ಕಥೆಯಲ್ಲಿದ್ದಿರಬಹುದೆಂದೂ,* ಮಾಧವನು ಪದ್ಮಾವತಿಗೆ ಪ್ರಯಾಣ ಮಾಡಿದ್ದಕ್ಕೆ ಭವಭೂತಿಯ ಆತ್ಮೀಯ ವೃತ್ತವೊಂದು ಆಧಾರವಾಗಿದ್ದಿರಬಹುದೆಂದೂ, ಮಾಲತೀ ಮಾಧವರ ವಿವಾಹ ವೃತ್ತಾಂತವು ವಾಕಾಟಕ ಚರಿತ್ರೆಯಿಂದ ಸೂಚಿತವಾಗಿರಬಹುದೆಂದೂ* ಊಹಿಸಲ್ಪಟ್ಟಿದೆ. ಬೌದ್ಧ ಸಂನ್ಯಾಸಿನಿಯರು ಯುವಕ ಯುವತಿಯರಿಗೆ ಸಹಾಯಕರಾಗುವ ಕಥೆಗಳು ಎಷ್ಟೋ ಇವೆ.—ಸಾಂಕೃತ್ಯಾಯನಿ ಕೌಶಿಕೆಯರು ಆಗಲೇ ಪರಿಚಿತರಾಗಿದ್ದಾರೆ; ದೇವಸ್ಮಿತೆಯ ಕಥೆಯಲ್ಲಿ ಯೋಗಕರಂಡಿಕೆಯೆಂಬ ವೃದ್ಧ ಸಂನ್ಯಾಸಿನಿಯೊಬ್ಬಳು ಬರುತ್ತಾಳೆ.* ಹೀಗೆಯೇ ಕಾಪಾಲಿಕರು ಹೆಂಗಸರನ್ನು ಬಲಿಕೊಡುವ ಮತ್ತು ಯುವಕರು ನರಮಾಂಸ ಕೊಟ್ಟು ಭೂತಪ್ರೇತಗಳಿಂದ ಕಾಮ್ಯಾರ್ಥಗಳನ್ನು ಪಡೆಯುವ ಕಥೆಗಳು ಇವೆ.* ಆದರೂ ಇವುಗಳಿಗೆ ಹೊಸ ನಾಮ ರೂಪಗಳನ್ನು ಕೊಟ್ಟು ಒಂದು ದೊಡ್ಡ ರೂಪಕವಾಗಿ ಮಾಡಿರುವ ಚಾತುರ್ಯವು ಭವಭೂತಿಯದೇ ಆಗಿದೆ.

ಇದರಲ್ಲಿ ಮಾಲತೀ ಮಾಧವರ ಮದುವೆಯೇ ಪ್ರಧಾನವಾದ ಶೃಂಗಾರ ವೃತ್ತಾಂತ. ಮದಯಂತಿಕಾ ಮಕರಂದರ ವಿವಾಹ ವೃತ್ತಾಂತವು ಇದರ ಜೊತೆಯಲ್ಲಿಯೇ ಹೋಗುತ್ತದೆ. ಮಕರಂದ ನಂದನರ ಮದುವೆ ಇವೆರಡನ್ನೂ ಕೂಡಿಸಿ ಸ್ವಲ್ಪ ವಿನೋದವನ್ನು ತರುತ್ತದೆ. ಮಾಧವ ಮಕರಂದರ ಸಾಹಸವನ್ನು ತೋರಿಸುವ ಕಾಪಾಲಿಕ ವ್ಯಾಘ್ರ ವೃತ್ತಾಂತಗಳು ಇವಕ್ಕೆ ಪರಿಪೋಷಕಗಳಾಗಿ ವೀರ ಕರುಣ ಅದ್ಭುತ ಬೀಭತ್ಸ ಭಯಾನಕ ರೌದ್ರಗಳನ್ನು ತಂದು ಜೋಡಿಸುತ್ತವೆ. ಇವುಗಳಿಂದ ಕವಿ ವಿವಿಧ ಘಟನಾ ವಿಚಿತ್ರವೂ ನಾನಾರಸ ಪರಿಪುಷ್ಟವೂ ಆದ ವಿಸ್ತೃತ ಪ್ರಕರಣವನ್ನು ಮಾಡಿಕೊಂಡಿದ್ದಾನೆ.

ನಂದನನು ಮಾಲತಿಯನ್ನು ಅಪೇಕ್ಷಿಸುವಂತೆಯೂ ಅವನ ತಂಗಿಯನ್ನು ಮಾಧವನ ಸ್ನೇಹಿತನು ಬದುಕಿಸಿ ಪ್ರೀತಿಸುವಂತೆಯೂ, ಮಕರಂದನು ಮಾಲತಿಯ ವೇಷದಿಂದ ನಂದನನನ್ನು ಮದುವೆಯಾಗುವಂತೆಯೂ ಏರ್ಪಡಿಸಿ ಕಥೆಗಳನ್ನು ಒಂದರಿಂದೊಂದಕ್ಕೆ ಗಂಟು ಹಾಕಿದ್ದಾನೆ. ಆದರೆ ವ್ಯಾಘ್ರವೃತ್ತಾಂತವೂ, ಅದಕ್ಕಿಂತ ಹೆಚ್ಚಾಗಿ ಕಾಪಾಲಿಕವೃತ್ತಾಂತವೂ ಅಷ್ಟು ಚೆನ್ನಾಗಿ ಹೊಂದಿಕೊಂಡಿಲ್ಲ. ಕಥೆಯಲ್ಲಿ ವೈಚಿತ್ರ್ಯವನ್ನೂ ನಾಯಕನಲ್ಲಿ ವಿರಹವನ್ನೂ ಉಂಟುಮಾಡುವುದಕ್ಕಾಗಿಯೇ ಇದನ್ನು ತಂದು ಹಾಕಿ ಎಳೆದಾಡಿದಂತೆ ಕಾಣುತ್ತದೆ. ಇದರಂತೆ ಮಾಧವ ಸೌದಾಮಿನಿಯರು ಮಾಲತಿಯನ್ನು ಉಳಿಸುವ ಸಂದರ್ಭಗಳೂ ಆಕಸ್ಮಿಕ ಘಟನೆಗಳಾದ್ದರಿಂದ ಅವು ಸಂವಿಧಾನರಚನೆಯಲ್ಲಿ ಅವಗುಣವೆನ್ನಿಸುವಂತಿವೆ.*

ಕಥೆ ಎಷ್ಟು ವಿಸ್ತಾರವಾಗಿಯೂ ತೊಡಕಾಗಿಯೂ ಇದ್ದರೂ ಅದರ ಪಾತ್ರ ಕಲ್ಪನೆಯಲ್ಲಿ ಮಿತಿಯಿದೆ. ಅದರ ಘಟನಾವಳಿಗಳನ್ನೆಲ್ಲಾ ಒಬ್ಬ ಕಾಮಂದಕಿ ಸೂತ್ರದಂತೆ ಕಟ್ಟುತ್ತಾಳೆ; ಎಲ್ಲವೂ ಅವಳ, ಅವಳ ಶಿಷ್ಯಮಂಡಲಿಯ, ಸ್ನೇಹಿತರ ಮತ್ತು ಅವರ ಮಕ್ಕಳ ಸಂಸಾರ; ಅವಳು ನಾಟಕದ ಉದ್ದಕ್ಕೂ ಬರುತ್ತಾಳೆ; ಅವಳಿಗೆ ಎಲ್ಲಾ ಕಡೆಯಲ್ಲಿಯೂ ಪ್ರವೇಶವುಂಟು, ಪ್ರಾಬಲ್ಯವುಂಟು; ರಾಜನೂ ಮಂತ್ರಿಗಳೂ ಅವಳ ಮುಂದಲ್ಲ. ರಂಗದಲ್ಲಿ ಬರುವುದು ಅವರ ಹೆಸರು ಪ್ರಸ್ತಾಪಗಳು ಮಾತ್ರ.

ಮಾಲತೀಮಾಧವರ ಗುಣಗಳನ್ನು ಕವಿ ಹೀಗೆ ಪರಿಗಣಿಸಿದ್ದಾನೆ—

“ಭೂಮ್ನಾ ರಸಾನಾಂ ಗಹಾನಾಃ ಪ್ರಯೋಗಾಃ

ಸೌಹಾರ್ದಹೃದ್ಯಾನಿ ವಿಚೇಷ್ಟಿತಾನಿ !

ಔದ್ಧತ್ಯಮಾಯೋಜಿಕಾಮಸೂತ್ರಂ

ಚಿತ್ರಾ ಕಥಾ ವಾಚಿ ವಿದಗ್ಧತಾ ಚ” !! (ಪ್ರಸ್ತಾವನೆ.)

ಭವಭೂತಿ ಒಬ್ಬ ದೊಡ್ಡ ವಿದ್ವತ್ಕವಿ; ಶಾಸ್ತ್ರ ಸಾಹಿತ್ಯಗಳಲ್ಲಿ ನಿಷ್ಣಾತನಾದ ಪಂಡಿತ; ಸಂಸ್ಕೃತ ಬಾಷೆಯಲ್ಲಿ ಅವನಿಗೆ ಅಪೂರ್ವ ಸಾಮರ್ಥ್ಯ, ಎಂಥ ಸೂಕ್ಷ್ಮ ವಿಷಯವನ್ನಾಗಲಿ, ಯಾವ ಅರ್ಥದ ಎಂಥ ಛಾಯೆಯನ್ನಾಗಲಿ ಅವನು ಖಚಿತವಾಗಿ ಹೇಳಬಲ್ಲನು; ಅವನ ಮಾತಿನಲ್ಲಿ ಪ್ರೌಢಿ ಇದೆ, ಉದಾರತೆ ಇದೆ, ಅರ್ಥಗೌರವವಿದೆ, ವಾಗ್ವೈದಗ್ಧ್ಯವಿದೆ.* ಅದರಲ್ಲಿ ಬರದ ಬೆಡಗು ಸೌಂದಂರ್ಯ ಶಯ್ಯೆ ಗುಂಫಗಳು ಇಲ್ಲ. ಸಂಗ್ರಹವಾಗಿ ಹೇಳಬೇಕೆಂದರೆ ಅವನು, ತಾನೇ ಹೇಳಿಕೊಂಡಿರುವಂತೆ, “ವಶ್ಯವಾಕ್”.* ಆದರೆ ಅವನ ಪಾಂಡಿತ್ಯವು ಕೆಲವು ವೇಳೆ ನಾಟಕಕ್ಕೆ ಅತಿಯಾಗುತ್ತದೆ. ವಾಕ್ಯಗಳು ಉದ್ದ, ಪೆಡಸು, ಗಂಟು ಗಂಟು; ಶಬ್ದಗಳು ಕ್ಲಿಷ್ಟ, ಅಪೂರ್ವ.* ಶ್ರವ್ಯ ಕಾವ್ಯದಲ್ಲಿ ಒಂದು ವೇಳೆ ಇದು ಸಹ್ಯವಾಗಬಹುದು; ಗುಣವೂ ಆಗಬಹುದು; ಆದರೆ ದೃಶ್ಯಕಾವ್ಯದಲ್ಲಿ ಇದರಿಂದ ಎಂಥ ವಿದ್ವತ್ಪ್ರೇಕ್ಷಕರಿಗೂ ಅರ್ಥಸ್ಪೂರ್ತಿಗೆ ಅಡ್ಡಿಯಾಗುತ್ತದೆ. ಆಡುವ ಮತೆನ್ನಿಸಿಕೊಂಡ ಪ್ರಾಕೃತದಲ್ಲಂತು ಇದು ಉಚಿತವೇ ಅಲ್ಲ.* ಈ ಶೈಲಿಗೆ ಬಹುಶಃ ಬಾಣಾನುಸರಣವೇ ಕಾರಣವಿರಬಹುದು; ಬಾಣನು ಆಗ ಕಾವ್ಯರಾಜ್ಯದಲ್ಲಿ ಚಕ್ರವರ್ತಿಯೆನ್ನಿಸಿಕೊಂಡಿದ್ದನು. ಅಲ್ಲದೆ ಆಗ “ಓಜಸ್ಸು ಗದ್ಯದ ಜೀವ” ಎಂಬ ದಂಡಿಯ ಮತವು ರೂಢಿಯಲ್ಲಿದ್ದಂತೆ ತೋರುತ್ತದೆ. ಆದರೆ ಈ ಭಾಷಾವೈಪರೀತ್ಯವು ‘ಮಹಾ ವೀರಚರಿತ’ ದಲ್ಲಿರುವಷ್ಟು ‘ಮಾಲತೀ ಮಾಧವ’ ದಲ್ಲಿಲ್ಲ. ಅದರಲ್ಲಿರುವಷ್ಟು ‘ಉತ್ತರ ರಾಮಚರಿತ’ ದಲ್ಲಿ ಇಲ್ಲ. ಇಲ್ಲಿ ಮಾತು ಬಹುಮಟ್ಟಿಗೆ ತಿಳಿಯಾಗಿದೆ, ಸರಳವಾಗಿದೆ.

ಶಾಸ್ತ್ರ ಸಾಹಿತ್ಯಗಳಲ್ಲಿಯೂ ಭವಭೂತಿಗೆ ಅದೇ ಸಾಮರ್ಥ್ಯವಿತ್ತು; ತನ್ನ ಹಿಂದೆ ಇದ್ದ ಪ್ರಸಿದ್ಧ ಕಾವ್ಯ ನಾಟಕಗಳನ್ನೆಲ್ಲಾ ಅವನು ವ್ಯಾಸಂಗ ಮಾಡಿದ್ದನೆಂದು ತೋರುತ್ತದೆ. ಭಾಸ ಕಾಳಿದಾಸ ಶೂದ್ರ (?) ಹರ್ಷರ ಪ್ರಭಾವವು ಅವನ ಕೃತಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.* ಪೂರ್ವ ಸೂರಿಗಳ ಕಾವ್ಯಸಾರವನ್ನು ಹೀರಿಕೊಂಡಿದ್ದದ್ದು ಮಾತ್ರವಲ್ಲ ತಾನು ಅವರನ್ನು ಅಟ್ಟಿಮೆಟ್ಟಿದನೆಂದೂ ಅವನು ಭಾವಿಸಿದ್ದಿರಬಹುದು. ಆದ್ದರಿಂದಲೋ ಏನೋ ಅವನು ವರ್ಣನಾದಿಗಳಲ್ಲಿ ಒಂದು ಮಾತಿಗೆ ಬದಲು ನಾಲ್ಕು ಮಾತುಗಳನ್ನು ಹಾಕುತ್ತಾನೆ; ಒಂದು ಪದ್ಯಕ್ಕೆ ಬದಲು ನಾಲ್ಕು ಪದ್ಯಗಳನ್ನು ಬರೆಯುತ್ತಾನೆ.* ಆದರೆ ಮೇಲಿಂದ ಮೇಲೆ ಬಣ್ಣ ಬಳಿದ ಮಾತ್ರದಿಂದ ಚಿತ್ರ ಉತ್ತಮವಾಗುವುದಿಲ್ಲ.* ಮುಖ್ಯವಾಗಿ, ಭಾಸ, ಕಾಳಿದಾಸರಂತೆ, ಅವನು ವರಕವಿಯಲ್ಲ; ಆದ್ದರಿಂದ ಅವನ ಕೃತಿಗಳಲ್ಲಿ ಸಹಜ ಕವಿಸುಲಭವಾದ ಸರಳತೆ ನಿರರ್ಗಳತೆ ಆವೇಶಗಳಿಗಿಂತ ಕ್ಲಿಷ್ಟಪ್ರಯತ್ನವೇ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಪದ್ಯಗಳನ್ನು, ಅದರಲ್ಲಿಯೂ ಆವೃತ್ತಿಯಾಗುವುವುಗಳನ್ನು, ನೋಡಿದರೆ ಅವುಗಳನ್ನು ಅವನು ಅವಕಾಶವಿದ್ದಾಗ ಬಿಡಿಬಿಡಿಯಾಗಿ ರಚಿಸಿಟ್ಟುಕೊಂಡಿದ್ದು ಬೇಕಾದೆಡೆಯಲ್ಲಿ ಉಪಯೋಗಿಸುವಂತೆ ತೋರುತ್ತದೆ.— (‘ಉ.ರಾ.’, I. ೨೯, II. ೪, ೭, ೨೦, ೨೧, III. ೧೭ —ಇತ್ಯಾದ) ಕಾಳಿದಾಸನು ಸೂಚಿಸಲು ಮಾತ್ರ ಬಲ್ಲದ್ದನ್ನು ಭವಭೂತಿ ವಾಚ್ಯವಾಗಿ ವರ್ಣಿಸಬಲ್ಲನೆಂದೂ ಇದು ಅವನ ವೈಯಕ್ತಿಕ ಗುಣವೆಂದೂ ಕೆಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಆದರೆ ಇದರಲ್ಲಿ ಕೆಲಕೆಲವು ವೇಳೆ ಕೃತಕತೆಯೂ ಅತಿಯೂ ಅಪರಿಚಿತತ್ವವೂ ಕಂಡು ಬರುತ್ತವೆ; ಇಲ್ಲವೇ ವರ್ಣಿತಾಂಶಗಳು ಅನನುಭೂತವಾಗಿದ್ದು ಮನಸ್ಸಿಗೆ ಆಯಾವಸ್ತುಭಾವಗಳ ಚಿತ್ರವು ಸ್ಪಷ್ಟವಾಗಿ ಬರುವುದಿಲ್ಲ.* ಕಾಳಿದಾಸಾದಿಗಳು ಮೃದುಮಧುರವಾದ ಭಾವಗಳನ್ನೂ ನವಿರಾಗಿ ವರ್ಣಿಸಬಲ್ಲರಾದರೆ ಭವಭೂತಿ ಘನಗಂಭೀರ ರೂಕ್ಷಭಾವಗಳನ್ನೂ ವಸ್ತುಗಳನ್ನೂ ವರ್ಣಿಸಬಲ್ಲನೆಂದೂ ಇದು ಅವನಲ್ಲಿ ಮತ್ತೊಂದು ವಿಶೇಷವೆಂದೂ ಹೇಳುತ್ತಾರೆ. ಆದರೆ ಇಂತ ವರ್ಣನೆಗಳಲ್ಲಿಯೂ ಸ್ಪಷ್ಟಚಿತ್ರಕ್ಕಿಂತ ಮಾತಿನ ಆಡಂಬರ ಜಟಿಲತೆಗಳು ಹೆಚ್ಚಾಗಿವೆ;* ದುಷ್ಯಂತ ಮಾತಲಿಯರು ವಿಮಾನದಿಂದ ಕಾಣುವ ಭೂಲೋಕ ದೃಶ್ಯದಲ್ಲಿ ಕಾಳಿದಾಸನು ತೋರಿಸಿರುವ ವಿಶ್ವ ಗ್ರಾಹಿಯಾದ ಧೀರ ಪ್ರತಿಭೆ ಭವಭೂತಿಯ ಕಾವ್ಯದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಭವಭೂತಿ ತಾನು ಸರಸ ಮಧುರ ಸ್ವಭಾವನಲ್ಲದ್ದರಿಂದಲೋ ತನ್ನ ನಾಟಕ ವಸ್ತುಗಳಿಗೆ ಅನಾವಶ್ಯಕವೆಂದೆಣಿಸಿಯೋ, ತನ್ನ ಪ್ರತಿಪಾದನೆಗೆ ಅಸಾಧ್ಯವೆಂದು ತಿಳಿದೋ, ಎಲ್ಲಿಯೂ ವಿದೂಷಕನನ್ನು ತಂದಿಲ್ಲ. ಹಾಸ್ಯ ಬರಬಹುದಾದ ಸಂದರ್ಭದಲ್ಲಿಯೂ ಹಾಸ್ಯವಿಲ್ಲ; ಇರುವ ಅಲ್ಪಸ್ವಲ್ಪ ಹಿಂಡಿ ತೆಗೆದದ್ದು; ಅದರಲ್ಲಿ ಪಂಡಿತನ ಗಂಭೀರ ನಗುವಿನಂತೆ ಬಿಗುಪು ಹೆಚ್ಚು.* ಕೊನೆಯದಾಗಿ, ಭವಭೂತಿ ಭಾವಕ್ಕೆ ತಕ್ಕ ಭಾಷೆಯನ್ನೂ ಛಂದಸ್ಸನ್ನೂ ಪ್ರಯೋಗಿಸಬಲ್ಲನೆಂದು ಹೇಳುವರು.* ವಶ್ಯವಾಕ್ಕಾದ ಕವಿಯಲ್ಲಿ ಇದೊಂದು ಅತಿಶಯವೇನಲ್ಲ; ಕಾಳಿದಾಸ ಶ್ರೀಹರ್ಷರಲ್ಲಿಯೂ ಈ ಗುಣವನ್ನು ಆಗಲೇ ನೋಡಿದ್ದೇವೆ; ಅಲ್ಲದೆ ಭವಭೂತಿಯ ಗಮನವು ಭಾವಸಂಪತ್ತಿಗಿಂತಲೂ ಭಾಷಾಸಂಪತ್ತಿನ ಮೇಲೇ ಹೆಚ್ಚಾಗಿರುತ್ತದೆ.* ಒಟ್ಟಿನ ಮೇಲೆ, ಅವನ ಶೈಲಿಶಯ್ಯೆಗಳು ಹಿಂದಿನವರದಕ್ಕಿಂತ ಬಹುಮಟ್ಟಿಗೆ ಗೌಡ, ಪ್ರೌಢ. “ಉನ್ನಾಲಬಾಲ ಕಮಲಾಕರ ಮಾಕರಂದ ನಿಷ್ಯಂದ ಸಂವಲನ ಮಾಂಸಲ ಗಂಧಬಂಧಃ ॥” (ಮಾ. ಮಾ., IX) ಎಂಬಂಥ ಮೃದುಸರಣಿ ಅಪರೂಪ. ಕೆಲವೆಡೆಯಲ್ಲಿ ಅವನ ಭಾಷಾ ರೀತಿಯೂ ಛಂದಸ್ಸೂ ಅಷ್ಟೇನು ಉಚಿತವಾಗಿ ಕಾಣುವುದೂ ಇಲ್ಲ. ಇದು ಲವನನ್ನು ಆಲಂಗಿಸಿಕೊಂಡಾಗ ರಾಮನಿಗೆ ಉಂಟಾದ ಆನಂದದ ವರ್ಣನೆ !

ಪರಿಣತಕಠೋರಪುಷ್ಕರಗರ್ಭಚ್ಛದಪೀನಮಸೃಣಕುಮಾರಃ

ನಂದಯತಿ ಚಂದ್ರಚಂದನನಿಷ್ಯಂದಜಡಸ್ತವ ಸ್ಪರ್ಶಃ ॥ (‘ಉ.ರಾ.ಚ.’ VI. ೧೩)

ಅವನ ಮನೋಧರ್ಮವು ಸರಸವೂ ಸರಳವೂ ಮೃದುವೂ ಮಧುರವೂ ಅಲ್ಲ; ಪಾಂಡಿತ್ಯಪರಿಜ್ಞಾನ ಆತ್ಮವಿಶ್ವಾಸಗಳಿದಂದ ಗಂಭೀರವೂ ಘನೀಭೂತವೂ ಆದದ್ದು;* ಪ್ರಪಂಚವನ್ನು ನಿರ್ಲಕ್ಷ್ಯವಾಗಿ ಕಂಡು, ಮಾನವ ಸ್ವಭಾವದ ವೈಚಿತ್ರ್ಯ ವೈವಿಧ್ಯ ದೌರ್ಬಲ್ಯಗಳನ್ನು ಅರಿಯದೆ ಹೋದದ್ದು. ಆದ್ದರಿಂದ ಅವನ ಪಾತ್ರಗಳಲ್ಲಿ ಜೀವ ಸಾಲದು;* ವ್ಯಕ್ತಿತ್ವ ಸಾಲದು; ರಾಮನೂ ಕೆಲವು ವೇಳೆ ಬೇಜಾರುಗೊಳಿಸುತ್ತಾನೆ; ಕಾಮಂದಕಿಯೂ ಯಂತ್ರದಂತೆ ಆಚರಿಸುತ್ತಾಳೆ. ಅವಳು ವೇಷದಲ್ಲಿ ಮಾತ್ರ ಸಂನ್ಯಾಸಿನಿ, ವ್ಯವಹಾರದಲ್ಲಲ್ಲ. ಆದರೆ ಭವಭೂತಿಯ ಗ್ರಂಥಗಳಿಂದ ಅವನ ಪಾತ್ರಗಳ ಚಿತ್ರಗಳಿಗಿಂತಲೂ ಅವನ ಚಿತ್ರವು ದೃಢವಾಗಿ ನಿಲ್ಲುತ್ತದೆ; ಅವನು ಒಳ್ಳೆಯ ತೇಜಶ್ಶಾಲಿ; ಅವನದು ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅಪೂರ್ವ ವ್ಯಕ್ತಿತ್ವ !

ಭವಭೂತಿಯ ಪ್ರಾಕೃತ ಪ್ರಯೋಗದಲ್ಲಿ ಒಂದು ವಿಶೇಷವಿದೆ; ಅವನು ಉಪಯೋಗಿಸುವುದು ಶೌರಸೇನಿಯೊಂದೇ; ಅದು ಗದ್ಯದಲ್ಲಿ ಮಾತ್ರ; ಪ್ರಾಕೃತವಾಡುವ ಪಾತ್ರಗಳೂ ಪದ್ಯ ಹೇಳಬೇಕಾದರೆ “ಸಂಸ್ಕೃತವನ್ನು ಆಶ್ರಯಿಸಿ” ಯೇ ಹೇಳುವರು

ಭವಭೂತಿ ಅನೇಕ ಘನಭಾವಗಳನ್ನು ಉಚಿತವಾದ ಮಾತುಗಳಿಂದ ಖಚಿತವಾಗಿ ಹೇಳಿದ್ದಾನೆ. ಆದ್ದರಿಂದ ಅವು ಮಿಕ್ಕ ಮಹಾಕವಿವಾಕ್ಯಗಳಂತೆ ಪ್ರಸಿದ್ಧವಾಗಿ ಅನುವಾದವಾಗುತ್ತಿರುತ್ತವೆ. ಅಂಥವುಗಳಲ್ಲಿ ‘ಉತ್ತರ ರಾಮಚರಿತ’ ದಿಂದ ತೆಗೆದ ಕೆಲವನ್ನು ಇಲ್ಲಿ ಕೊಟ್ಟಿದೆ—

೧. ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ. (I. ೧೦)

೨. ತೀರ್ಥೋದಕಂ ಚ ವಹ್ನಿಚ್ಛ ನಾನ್ಯತಶ್ಯದ್ಧಿಮತ್ತರಃ. (I. ೧೩)

೩. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಲೋಕೋತ್ತರಾಣಾಂ ಚೇತಾಂಸಿ. (II. ೭)

೪. ಸತ್ಸಂಗಜಾನಿ ನಿಧನಾನ್ಯಪಿ ತಾರಯಂತಿ. (II. ೧೧)

೫. ಅನಂದಗ್ರಂಥಿರೇಕೋಯಮಪತ್ಯಮಿತಿ ಕಥ್ಯತೇ. (III. ೧೭)

೬. ಗುಣಾಃ ಪೂಜಾಸ್ಥಾನಃ ಗುಣಿಷು ನ ಚ ಲಿಂಗಂ ನ ಚ ವಯಃ. (IV. ೧೧)

ಪ್ರಮಾಣ ಲೇಖನಾವಳಿ

S.K. Belvalkar — Introduction to ‘Uttararamacharitham’, H.O.S., No. 21; J.A.O.S., 34, 428 f.

Keith —’ Bhavabhuthi and the veda’, J.R.A.S., July, 1 91 4.

R.G. Bhandarkar —Introduction to ‘Malathi Madhava’, Bombay Sanskrit Series, No. 1 5; ‘Bhavabhuthi’ s quotations from the Ramayana’, Ind. Ant., II, 1 23 f.

Todarmall and Macdonell —Mahavira Charitham, Punjab University Publication, 1 928.

K.M. Banerjee —’ Bhavabhuthi in English Garb’, Ind. Ant., Vol. I, 1 43 f.

A. Weber — ‘On the Ramayana’, Ind. Ant., II, 246 f.

F.W.. Thomas —Kavindra Vachana Samuchchaya, 60 f.

Colebrooke —Essays, III, 1 23-4.

Klein —Geschicte des Dramas, III, 1 35 f. Peterson-J.B.R.A.S., 1 8, 1 09 f.

Anundaram Borooh —Bhavabhuthi and his Place in Sanskrit Literature.

S.P. Pandit —Gaudavaho, ccv, f

D.C. Bhattacharya —J.A.S.B., 1 4, 245 f.

Jacobi —Z..D.M.G., 64, 1 38 r.

Bhattanathaswamin —Ind. Ant., 41, 1 43 f.

Pischel —G.G..A., 1 883, 1 228 f.

Aufrecht —Z.D.M.G., 27, 63 f.

C.W. Gurner —’ On Bhavabhuti’, J.A.S.B., 1 928, iv.

S.K. De —’ On the Text of the Mahaviracharitha’, Ind. Ant., 59, Jan., 1 930. ‘Bhavabhuti’ I.H.Q., XIX-2 (June 1 943.)

ಕೆ. ಕೃಷ್ಣಮೂರ್ತಿ—ಭವಭೂತಿ, ಧಾರವಾಢ, ೧೯೫೪.

ಕನ್ನಡ ಭಾಷಾಂತರಗಳು

ಕರ್ಣಾಟಕ ಉತ್ತರ ರಾಮಚರಿತ ನಾಟಕಂ — ಬಸವಪ್ಪ ಶಾಸ್ತ್ರೀ, ಮೈಸೂರು, ೧೯೧೧.

ಉತ್ತರ ರಾಮಚರಿತ್ರ — ಧೋಂಡೋ ನರಸಿಂಹ ಮುಳಬಾಗಿಲ್, ಧಾರವಾಡ, ೧೮೯೨.

ಕರ್ಣಾಟಕ ಮಾಲತೀ ಮಾಧವ — ಬಿ.ಎಂ. ಕುಲಕರ್ಣಿ, ಬಾಗಲಕೋಟೆ, ೧೯೨೫.