೦೧ ಹರ್ಷವರ್ಧನ

(ಕ್ರಿ.ಶ. ಸುಮಾರು ೫೯೦-೬೪೭)

ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಚಂದ್ರಗುಪ್ತಮೌರ್ಯ, ಅಶೋಕ ಇವರಿಬ್ಬರನ್ನು ಬಿಟ್ಟರೆ ಹರ್ಷನ ವಿಚಾರವೇ ನಮಗೆ ಖಚಿತವಾಗಿಯೂ ವಿಸ್ತಾರವಾಗಿಯೂ ತಿಳಿದಿರುವುದು. ಇದಕ್ಕೆ ಆಧಾರಗಳು ಮುಖ್ಯವಾಗಿ ಮೂರು-ಬಾಣನ ಹರ್ಷಚರಿತ, ಹುಯಾನ್ ತ್ಸಾಂಗನ ಹೇಳಿಕೆ, ಹರ್ಷ ಇಮ್ಮಡಿ ಪುಲಿಕೇಶಿ ಮುಂತಾದವರ ಶಾಸನಗಳು.

ಹರ್ಷ ಅಥವಾ ಶ್ರೀ ಹರ್ಷನು* ಕ್ರಿ.ಶ. ೫೯೦ರಲ್ಲಿ ಹುಟ್ಟಿದನು. ಪ್ರಭಾಕರವರ್ಧನ ಮತ್ತು ಯಶೋಮತಿ ಇವರು ಅವನ ತಂದೆ ತಾಯಿಗಳು. ಯಶೋಮತಿ ಪ್ರಸಿದ್ಧ ಮಾಳವರಾಜನಾದ ವಿಕ್ರಮಾದಿತ್ಯ ಯಶೋಧರ್ಮನ ಮಗಳು. ಹರ್ಷನಿಗೆ ರಾಜ್ಯವರ್ಧನನೆಂಬ ಅಣ್ಣನೂ ರಾಜ್ಯಶ್ರೀಯೆಂಬ ತಂಗಿಯೂ ಇದ್ದಳು. ತನ್ನ ಅಣ್ಣನು ಸ್ವಲ್ಪ ಕಾಲ ಆಳಿ ಶತ್ರುಗಳಿಂದ ಹತನಾಗಲು ಹರ್ಷನು ಪಟ್ಟಕ್ಕೆ ಬಂದನು (೬೦೬).

ಅವನ ಆಳ್ವಿಕೆ ಯುದ್ಧದಿಂದಲೇ ಆರಂಭವಾಯಿತು; ಮತ್ತು ರಾಜ್ಯಕ್ಕೆ ಬಂದ ಸ್ವಲ್ಪ ದಿವಸದಲ್ಲಿಯೇ ಅವನು ಒಂದು ದಿಗ್ವಿಜಯಕ್ಕೆ ಏರ್ಪಡಿಸಿ ಪೂರ್ವ ಪಶ್ಚಿಮೋತ್ತರಗಳಲ್ಲಿ ಜಯವನ್ನು ಪಡೆದನು; ಆದರೆ ದಕ್ಷಿಣದಲ್ಲಿ ಇಮ್ಮಡಿ ಪುಲಿಕೇಶಿ ಅವನಷ್ಟೇ ಪ್ರಬಲನಾಗಿದ್ದದ್ದರಿಂದ ನರ್ಮದಾ ನದಿಯಿಂದ ಮುಂದಕ್ಕೆ ಹರ್ಷನ ಕೈ ಹಾಯಲಿಲ್ಲ. ಆದರೂ ಅವನು ಉತ್ತರಾಪಥ ಚಕ್ರವರ್ತಿಯೆನಿಸಿಕೊಂಡು ಚೀನಾ ರಾಜನ ಆಸ್ಥಾನಕ್ಕೆ ಒಬ್ಬ (ಬ್ರಾಹ್ಮಣ) ರಾಯಭಾರಿಯನ್ನು ಕಳುಹಿಸಿ, ಅಲ್ಲಿಂದಲೂ ರಾಯಭಾರಿಗಳನ್ನು ಬರಮಾಡಿಕೊಂಡನು. ಅವನದೇ ಒಂದು ಶಕೆ ಸ್ಥಾಪಿತವಾಯಿತು.

ಅವನು ರಾಜ್ಯವಾಳಿದ ಸುಮಾರು ನಲವತ್ತು ವರ್ಷ ಕಾಲ ದೇಶದಲ್ಲಿ ಶಾಂತಿಯಿತ್ತು, ಸುಭಿಕ್ಷವಿತ್ತು; ಆದ್ದರಿಂದ ಜನರು ಸುಖವಾಗಿದ್ದರು; ರಾಜನೇ ಸ್ವಂತವಾಗಿ ಧರ್ಮ ಸಾಹಿತ್ಯ ಶಾಸ್ತ್ರ ಕಲೆಗಳಲ್ಲಿ ಆಸಕ್ತಿವಹಿಸಿದ್ದರಿಂದ ಅವೂ ಅಭಿವೃದ್ಧಿಗೊಂಡುವು. ಬಹು ಜನರು ವಿದ್ಯಾವಂತರಾಗಿದ್ದರು. ಅವನು ಒಂದು ಕಡೆ ಬೌದ್ಧ ಧರ್ಮಕ್ಕೂ ಇನ್ನೊಂದು ಕಡೆ ಬ್ರಾಹ್ಮಣ ಧರ್ಮಕ್ಕೂ ಏಕರೀತಿಯಾಗಿ ಪ್ರೋತ್ಸಾಹವಿತ್ತನು. ನಾಲಂದ ವಿಶ್ವವಿದ್ಯಾನಿಲಯವೂ ದಿವಾಕರಮಿತ್ರನ ವಿದ್ಯಾಶ್ರಮವೂ, ಬಾಣ ಭರ್ತೃಹರಿ ಭಾರವಿ ಮುಂತಾದ ಕವಿಗಳು ಇದ್ದದ್ದೂ ಈ ಕಾಲದಲ್ಲಿಯೇ. ಅವನು ಭೂಕಂದಾಯದಿಂದ ಬಂದ ಹುಟ್ಟುವಳಿಯಲ್ಲಿ ಕಾಲು ಭಾಗವನ್ನು ಜ್ಞಾನಾಭಿವೃದ್ಧಿಗೂ ವಿದ್ವತ್ಪ್ರೋತ್ಸಾಹಕ್ಕೂ ಮೀಸಲಾಗಿಟ್ಟಿದ್ದನಂತೆ. ಬಾಣನು ಅವನ ಗುಣಗಳನ್ನು ಹೀಗೆ ಸಂಗ್ರಹಿಸಿದ್ದಾನೆ :—

“ಏತೇನ ಚ ಖಲು ರಾಜನ್ವತೀ ಪೃಥ್ವೀ !… ಚಿತ್ರಮಿದಮತ್ಯ ಮರಂ ರಾಜತ್ವಂ ! ಅಪಿಚಾಸ್ಯ ತ್ಯಾಗಸ್ಯಾರ್ಥಿನಃ, ಪ್ರಜ್ಞಾಯಃ ಶಾಸ್ತ್ರಾಣಿ, ಕವಿತ್ವಸ್ಯ ವಾಚಃ, ಸತ್ವಸ್ಯ ಸಾಹಸಸ್ಥಾನಾನಿ, ಉತ್ಸಾಹಸ್ಯ ವ್ಯಾಪಾರಃ, ಕೀರ್ತೇರ್ದಿಙ್ಮುಖಾನಿ, ಅನುರಾಗಸ್ಯ ಲೋಕಹೃದಯಾನಿ, ಗುಣಗಣಸ್ಯ ಸಂಖ್ಯಾ, ಕೌಶಲಸ್ಯ ಕಲಾನ ಪರ್ಯಾಪ್ತೋ ವಿಷಯಂ…” -’ ಹರ್ಷ ಚರಿತ’ (ಬೊಂಬಾಯಿ), ಉಚ್ಛ್ವಾಸ II. ೧೨೧.

ಹರ್ಷನು ತನ್ನ ಪೂರ್ವಿಕರಂತೆ ಶಿವನನ್ನೂ* ಆದಿತ್ಯನನ್ನೂ* ಆರಾಧಿಸುತ್ತಿದ್ದನು. ಬುದ್ಧನಲ್ಲಿಯೂ ಭಕ್ತಿಯಿತ್ತು; ಈ ಬೌದ್ಧಾಭಿಮಾನವು ಕೊನೆ ಕೊನೆಗೆ ಪ್ರಬಲವಾಗಿ ಗಂಜಾಂ ಯುದ್ಧವಾದ ಮೇಲೆ (ಕ್ರಿ.ಶ. ೬೪೩) ಅವನು ಅಶೋಕನಂತೆ ಬೌದ್ಧನಾದ ಹಾಗೆ ತೋರುತ್ತದೆ. ಹೀಗೆ ಹರ್ಷ ಮಹಾರಾಜನು ಧೀರನಾಗಿ ಆಳಿ, ದಾನಿಯಾಗಿ ಬಾಳಿ, ಕೊನೆಗೆ ಶಾಂತನಾಗಿ ಮಡಿದನು (ಕ್ರಿ.ಶ.೬೪೭).

“ಕರ್ಮಣಾ ಮನಸಾ ವಾಚಾ ಕರ್ತವ್ಯಂ ಪ್ರಾಣಿಭಿರ್ಹಿತಂ ।

ಹರ್ಷೇಣೈತತ್ಸಮಾಖ್ಯಾತಂ ಧರ್ಮಾರ್ಜನಮನುತ್ತಮಂ ಬನ್ ಸ್ಖೆರ ತಾಮ್ರಶಾಸನ

ಹರ್ಷನು ‘ಸುಪ್ರಭಾತಸ್ತೋತ್ರ’ (J.R.A.S., ೧೯೦೩ ಪು. ೭೦೩-೭೨೨) ‘ಅಷ್ಟಮಹಾಶ್ರೀ ಚೈತ್ಯ ಸಂಸ್ಕೃತ ಸ್ತೋತ್ರ’ ಎಂಬ ಎರಡು ಬೌದ್ಧ ಸ್ತೋತ್ರಗಳನ್ನೂ, ‘ಪ್ರಿಯದರ್ಶಿಕಾ’, ‘ರತ್ನಾವಳೀ’ ‘ನಾಗಾನಂದ’ ಎಂಬ ಮೂರು ನಾಟಕಗಳನ್ನೂ ಬರೆದಿದ್ದಾನೆ.* ಬನ್ ಸ್ಖೆರ (ಶಕ ೬೨೮) ಮಧುವನ (೬೩೧) ತಾಮ್ರಶಾಸನಗಳೂ (ಎಪಿ. ಇಂ ic, ೨೦೬ ಮತ್ತು ೬೭) ಅವನಿಂದಲೇ ರಚಿತವಾಗಿರುವಂತೆ ತೋರುತ್ತವೆ. ಇದಲ್ಲದೆ ಅವನು ವ್ಯಾಕರಣವನ್ನೂ ಬರೆದನೆಂದು ಹೇಳಿಕೆ ಇದೆ.*

ರಾಜರು ಕವಿಗಳಾಗಿರುವುದು ಅಪರೂಪವಾದ್ದರಿಂದಲೋ ಏನೋ* ಈ ನಾಟಕಗಳನ್ನು ಅವನ ಆಸ್ಥಾನಪಂಡಿತರು ಯಾರೋ ಬರೆದಿರಬಹುದೆಂದು ಬಹಳ ಕಾಲದಿಂದ ಒಂದು ಅನುಮಾನವಿದೆ. ‘ಕಾವ್ಯಪ್ರಕಾಶ’ ಕಾರನಾದ ಮಮ್ಮಟನು (ಕ್ರಿ.ಶ. ಸುಮರು ೧೧೦೦) ಕಾವ್ಯಪ್ರಯೋಜನವನ್ನು ಹೇಳುವಾಗ “ಶ್ರೀ ಹರ್ಷಾದೇಃ ಧಾವಕಾದೀನಾಮಿವ ಧನಂ,” ಎಂದು ಹೇಳಿದ್ದಾನೆ. ರತ್ನಾವಳಿಯನ್ನು ಬರೆದಿದ್ದಕ್ಕಾಗಿ ಧವಕ (ಅಥವಾ ಬಾಣ)ನಿಗೆ ಶ್ರೀಹರ್ಷನು ಧನವನ್ನು ಕೊಟ್ಟನೆಂದು ಈ ವಾಕ್ಯಕ್ಕೆ ನಾಗೋಜಿಭಟ್ಟ (೧೭ನೆಯ ಶತಮಾನ) ಮುಂತಾದ ವ್ಯಾಖ್ಯಾನಕಾರರು ಅರ್ಥಮಾಡಿದ್ದಾರೆ. ಇಷ್ಟೇ ಆ ಅನುಮಾನಕ್ಕೆ ಇರುವ ಆಧಾರ. ಈ ವ್ಯಾಖ್ಯಾನಕ್ಕೆ ಮೂಲಪ್ರಮಾಣವಿಲ್ಲ. ಮತ್ತಾವ ಆಧಾರವಿದೆಯೋ ತಿಳಿಯದು. ಧಾವಕಾದಿಗಳು ಶ್ರೀಹರ್ಷನಿಂದ ಹಣವನ್ನು ತೆಗೆದುಕೊಂಡರೆಂದು ಮಾತ್ರ ಮೂಲಕ್ಕೆ ಅರ್ಥವಾಗಬಹುದು. ಹರ್ಷನು ಕವಿಪೋಷಕನಾಗಿದ್ದನೆಂಬುದು ಪ್ರಸಿದ್ಧವಾಗಿದೆ, ನಿರ್ವಿವಾದವಾಗಿದೆ. ರತ್ನಾವಳಿ ಹುಟ್ಟಿದ ಮುನ್ನೂರು ನಾನೂರು ವರ್ಷಗಳವರೆಗೆ ಈ ಅನುಮಾನಕ್ಕೆ ಬೀಜವೇ ಇರಲಿಲ್ಲ. ಆದರೆ ಹರ್ಷನೇ ಬರೆದಿರಬಹುದೆಂಬುದಕ್ಕೆ ಅವನ ಕಾಲದಿಂದಲೂ ಪ್ರಮಾಣಗಳಿವೆ. ಹರ್ಷನ ಕವಿತಾ ಶಕ್ತಿಯನ್ನು ಬಾಣನೇ ಕೊಂಡಾಡಿದ್ದಾನೆ.* ಶಿಲಾದಿತ್ಯನು ಜೀಮೂತವಾಹನನ ಕಥೆಯನ್ನು (ನಾಗಾನಂದ) ನಾಟಕ ರೂಪವಾಗಿ ರಚಿಸಿ ಅಭಿನಯ ಮಾಡಿದನೆಂದು ಇತ್ಸಿಂಗನು (೭ನೆಯ ಶತಮಾನದ ಕೊನೆ) ಹೇಳಿದ್ದಾನೆ.* ಉದಯಸುಂದರೀ ಕಥಾಕಾರನಾದ ಸೊಡ್ಡಲನು (೧೧ನೆಯ ಶತಮಾನ) ಶ್ರೀ ಹರ್ಷನು ‘ಗೀರ್ಹರ್ಷ’ ನೆಂದೂ (ಪುಟ ೨) ಅವನು ವಿಕ್ರಮಾದಿತ್ಯ ಮುಂಜಭೋಜರಂತೆ ಭೂಪಾಲ-ಕವೀಂದ್ರನಾಗಿ ಸಭಾಧ್ಯಕ್ಷನಾಗಿದ್ದಂತೆಯೂ (ಪುಟ ೧೫೦) ಹೇಳುತ್ತಾನೆ. ಜಯಾಪೀಡನು (ಕ್ರಿ.ಶ. ೭೦೦) ‘ರತ್ನಾವಳಿ’ ಯಿಂದ ಅನುವಾದ ಮಾಡಿ, ಅದು ರಾಜರಚಿತವೆಂದು ಹೇಳಿದ್ದಾನೆ. ಜಯದೇವನೂ (೧೧ನೆಯ ಶತಮಾನ) ಹರ್ಷನು ಕವಿಯೆಂದು ಅಭಿಪ್ರಾಯಪಡುತ್ತಾನೆ. ಮಧುಸೂದನನು (ಸುಮಾರು ೧೬೫೪) ಅವನನ್ನು ‘ಕವಿಜನ ಮೂರ್ಧನ್ಯ’ ನೆಂದೂ ‘ರತ್ನಾವಳ್ಯಾಖ್ಯ ನಾಟಿಕಾ ಕರ್ತ’ ನೆಂದೂ ಹೇಳಿದ್ದಾನೆ.* ಅವನು ಕವಿಯಾಗಿದ್ದನು, ನಾಟಕ ಕರ್ತನಾಗಿದ್ದನು ಎಂಬುದಕ್ಕೆ ಇಂಥ ಬಾಹ್ಯಪ್ರಮಾಣಗಳೇ ಬೇಕಿಲ್ಲ. ಅವನ ಮೂರು ನಾಟಕಗಳ ಪ್ರಸ್ತಾವನೆಯಲ್ಲಿ ಬರುವ “ಶ್ರೀಹರ್ಷೋ ನಿಪುಣಃ ಕವಿಃ..” ಎಂಬ ಶ್ಲೋಕವೇ ಸಾಕು; ಹೀಗಿದ್ದರೂ ಬಾಣ (ಧಾವಕ) ಕರ್ತೃತ್ವವು ಜನ ಜನಿತವಾಗಿದ್ದರೆ ಅದು ಸರಿಯೆಂದು ಹೇಳಲೂ ಸಾಧನವಿಲ್ಲ, ತಪ್ಪೆಂದು ಹೇಳಲೂ ಸಾಧನವಿಲ್ಲ. ಬಾಣನಂತೂ ಅವುಗಳನ್ನು ಬರೆದಿರಲಾರನು; ಕಾದಂಬರೀ ಹರ್ಷಚರಿತಗಳ ಭಾಷಾ ಶೈಲಿಗಳನ್ನು ಹೋಲಿಸಿದರೆ ಹೀಗೆನ್ನಿಸುತ್ತದೆ.* ಬಾಣನು ಶ್ರೀಮಂತನಾಗಿದ್ದನೆಂದು ಗೊತ್ತಾಗುವುದರಿಂದ ಅವನು ರಾಜನ ಹೆಸರಿನಲ್ಲಿ ಪುಸ್ತಕವನ್ನು ಬರೆದು ಅದನ್ನು ಮಾರಿಕೊಂಡು ದುಡ್ಡು ಸಂಪಾದನೆ ಮಾಡಬೇಕಾಗಿರಲಿಲ್ಲ. ಹಾಗೆ ಮಾರಬೇಕಾಗಿದ್ದರೆ ಅವನ ಪ್ರಸಿದ್ಧ ಗ್ರಂಥಗಳಾದ ‘ಹರ್ಷಚರಿತ’ ‘ಕಾದಂಬರಿ’ ಗಳನ್ನೇ ರಾಜನ ಹೆಸರಿನಲ್ಲಿ ಬರೆದು ಇನ್ನೂ ಹೆಚ್ಚಾಗಿ ಸಂಪಾದಿಸಬಹುದಾಗಿತ್ತು. ಆದರೆ ಇದೇನು ಅಷ್ಟು ಪ್ರಬಲವಾದ ತರ್ಕವಲ್ಲ. ರತ್ನಾವಳೀ ಪ್ರಿಯದರ್ಶಿಕೆಗಳನ್ನು ಬಾಣನು ಬರೆದನೆಂದು ಒಪ್ಪಿದರೆ ನಾಗಾನಂದವನ್ನೂ ಅವನೇ ಬರೆದನೆಂದು ಒಪ್ಪಿಕೊಳ್ಳಬೇಕು. ಇದು ಸಂಭವವಲ್ಲ. ಏಕೆಂದರೆ ವೈದಿಕ ಮತಾನುಯಾಯಿಯಾದ ಬಾಣನು ಈ ಬೋಧಿಸತ್ವನ ಕಥೆಯನ್ನು ಬರೆದಿರಲಾರನು. ಧಾವಕ-ಭಾಸನು ಯಾರೋ ಗೊತ್ತಿಲ್ಲ; ಪ್ರಾಚೀನ ಭಾಸನಂತೂ ಅಲ್ಲ. ಹರ್ಷನ ಆಸ್ಥಾನ ಪಂಡಿತರು ಯಾರಾದರೂ ಬರೆದು ಆ ಕವಿಕೀರ್ತಿಯನ್ನು ತಮ್ಮ ಆಶ್ರಯದಾತನಾದ ರಾಜನಿಗೆ ಕೊಟ್ಟಿದ್ದರೂ ಇರಬಹುದು.

ಯಾರೇ ಬರೆದಿರಲಿ, ಈ ಮೂರು ನಾಟಕಗಳೂ (ಪ್ರಸ್ತಾವನೆಯಲ್ಲಿ ಬರುವ ಕವಿಕಾವ್ಯಪ್ರಶಂಸಾದಿಗಳಿಂದ) ಏಕಕರ್ತೃಕವೆಂಬುದು ಸ್ಪಷ್ಟವಾಗಿದೆ; ರತ್ನಾವಳೀ ಪ್ರಿಯದರ್ಶಿಕೆಗಳಂತೂ ಭಾಷೆ, ಶೈಲಿ, ಮಾತು, ಕಥೆ, ರಸ, ನಾಯಕ, ರೂಪಕಜಾತಿ ಮುಂತಾದ ಹಲವು ಅಂಶಗಳಲ್ಲಿ ಒಂದೇ ವಿಧವಾಗಿವೆ. ಇವೆರಡೂ ಅವಳಿ “ನಾಟಿಕೆ” ಗಳು; ಇವುಗಳಲ್ಲಿ ವತ್ಸರಾಜನು ಅಂತಃಪುರದ ಪರಿಚಾರಿಕೆಯಂತಿದ್ದ ಒಬ್ಬ ರಾಜಪುತ್ರಿಯನ್ನು ಉದ್ಯಾನದಲ್ಲಿ ನೋಡಿ ಮೋಹಗೊಳ್ಳುತ್ತಾನೆ. ಅವರ ಸ್ನೇಹಿತರು ಸಂಗಮಕ್ಕೆ ಸಹಾಯ ಮಾಡುತ್ತಾರೆ. ವಾಸವದತ್ತೆ ಅದನ್ನು ಕಂಡು ಕುಪಿತಳಾಗಿ ಅವಳನ್ನು ಬಂಧನದಲ್ಲಿಡುತ್ತಾಳೆ. ಅವಳು ಅಸಹಾಯಳಾಗಿ ಪ್ರಾಣಬಿಡುವ ಸಂದರ್ಭದಲ್ಲಿ ಅವಳ ಕಡೆಯ ಜನರು ಬಂದು ಗುರುತಿಸುತ್ತಾರೆ. ಅವಳು ಪೂರ್ವದಲ್ಲಿ ವತ್ಸರಾಜನಿಗೇ ಉದ್ದಿಷ್ಟಳಾಗಿದ್ದಳೆಂದೂ ವಾಸವದತ್ತೆಯ ನಂಟಳೆಂದೂ ಗೊತ್ತಾಗಿ ವಾಸವದತ್ತೆ ಸಂತೋಷದಿಂದ ಅವಳನ್ನು ತನ್ನ ಗಂಡನಿಗೆ ಮದುವೆ ಮಾಡಿಕೊಡುತ್ತಾಳೆ.

ನಾಟಿಕೆ “ಕ್ಲ್ಪ್ತವೃತ್ತ”, ಎಂದರೆ ಅದರ ವಸ್ತುವು ಕಲ್ಪಿತವಾದದ್ದು. ಆದರೆ ವತ್ಸರಾಜನ ಕಥೆಯೇನೋ ‘ಪ್ರಖ್ಯಾತ’ ವಾದದ್ದೇ. ಅದರಲ್ಲಿ ಪ್ರಾಚೀನ ಭಾರತೀಯರಿಗೆ ತುಂಬ ಪ್ರೀತಿಯಿದ್ದಂತೆ ಕಾಣುತ್ತದೆ.* ಭಾರತ ರಾಮಾಯಣ ಕಥೆಗಳಲ್ಲಿ ಪೂಜ್ಯತೆ, ಗೌರವ; ಆದರೆ ವತ್ಸರಾಜಕಥೆಯಲ್ಲಿ ಪ್ರೀತಿ.* ಆದ್ದರಿಂದ ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಅನೇಕ ಕೃತಿಗಳು ಆ ಕಥೆಯ, ಅಥವಾ ಅದರ ಉಪಕಥೆಯ, ಆಧಾರದ ಮೇಲೆ ಹುಟ್ಟಿವೆ. ಹೀಗೆ ‘ಪ್ರಿಯದರ್ಶಿಕಾ’ ‘ರತ್ನಾವಳಿ’ ಗಳೂ ವತ್ಸರಾಜನ ಕಥೆಯನ್ನೇ ಅವಲಂಬಿಸಿ ಬರೆದವು. ಆದರೂ ಈ ನಾಟಕಗಳ ಕಥಾಸಾಮಗ್ರಿ ಬಹುಮಟ್ಟಿಗೆ ಕವಿ ಕಲ್ಪಿತವಾಗಿರುವಂತೆ ತೋರುತ್ತದೆ.

ಇದು ‘ಪ್ರಿಯದರ್ಶಿಕಾ’ ನಾಟಿಕೆಯ ಕಥೆ

ಅಂಗರಾಜನಾದ ದೃಢವರ್ಮನು ತನ್ನ ಮಗಳಾದ ಪ್ರಿಯದರ್ಶಿಕೆಯನ್ನು ವತ್ಸರಾಜನಿಗೆ ಕೊಡುವುದಾಗಿ ಮಾತು ಕೊಟ್ಟಿದ್ದನು. ಆಕೆಯನ್ನು ತನಗೆ ಕೊಡಲಿಲ್ಲವೆಂಬ ಆಗ್ರಹದಿಂದ ಕಳಿಂಗರಾಜನು ಅಂಗರಾಜ್ಯವನ್ನು ಮುತ್ತಿ ದೃಢವರ್ಮನನ್ನು ಸೆರೆ ಹಿಡಿದುಕೊಂಡು ಹೋದನು. ಈ ಮುತ್ತಿಗೆಯ ಗದ್ದಲದಲ್ಲಿ ಕಂಚುಕಿ ಪ್ರಿಯದರ್ಶಿಕೆಯನ್ನು ಬಿಡಿಸಿ ಕರೆದುಕೊಂಡುಹೋಗಿ ವಿಂಧ್ಯಕೇತುವೆಂಬ ರಾಜನ ಹತ್ತಿರ ಬಿಟ್ಟು* ತಾನು ಸ್ವಲ್ಪದಿನದ ಮಟ್ಟಿಗೆ ತೀರ್ಥಯಾತ್ರೆಗೆಂದು ಹೋದನು; ಅಲ್ಲಿಂದ ಬಂದು ಅವಳನ್ನು ವತ್ಸರಾಜನ ಹತ್ತಿರಕ್ಕೆ ಕರೆದುಕೊಂಡು ಹೋಗಿ ಬಿಡಬೇಕೆಂಬುದು ಅವನ ಉದ್ದೇಶ; ಆದರೆ ಅವನು ಹಿಂತಿರುಗಿ ಬರುವುದರೊಳಗಾಗಿ ವತ್ಸರಾಜನ ಸೇನೆ ವಿಂಧ್ಯಕೇತುವನ್ನು ಧ್ವಂಸಮಾಡಿತು. ಅಲ್ಲಿ ಗೋಳಾಡುತ್ತಿದ್ದ ಪ್ರಿಯದರ್ಶಿಕೆಯನ್ನು ಸೇನಾಪತಿ ಕರೆದು ತಂದು ವತ್ಸರಾಜನಿಗೆ ಒಪ್ಪಿಸಿದನು. ವತ್ಸರಾಜನು ಆಕೆಯನ್ನು ವಾಸವದತ್ತೆಯ ವಶಕ್ಕೆ ಕೊಟ್ಟನು. ಅರಣ್ಯದಲ್ಲಿ ಸಿಕ್ಕಿದ್ದರಿಂದ ಆಕೆಗೆ ಅರಣ್ಯಕೆ ಎಂಬ ಹೆಸರು ಬಂತು. ಎಲ್ಲರೂ ಆಕೆಯನ್ನು ವಿಂಧ್ಯಕೇತುವಿನ ಮಗಳೆಂದು ಭಾವಿಸಿದ್ದರು.

ಒಂದು ದಿನ ಅರಣ್ಯಕೆ ವಾಸವದತ್ತೆಯ ಪೂಜೆಗೆ ಕಮಲದ ಹೂವುಗಳನ್ನು ಕುಯ್ಯುತ್ತಿರಲು ಅಲ್ಲಿದ್ದ ದುಂಬಿಗಳು ಅವಳನ್ನು ಪೀಡಿಸಿದವು. ಆ ಸುತ್ತಿನಲ್ಲಿಯೇ ವಿಹಾರಾರ್ಥವಾಗಿ ಸಂಚರಿಸುತ್ತಿದ್ದ ರಾಜನು ಅವಳನ್ನು ಕಂಡು ಭೃಂಗಬಾಧೆಯನ್ನು ತಪ್ಪಿಸಿದನು. ಇಬ್ಬರಿಗೂ ಮೋಹವುಂಟಾಯಿತು.

ವತ್ಸರಾಜನು ಗಾನಾಚಾರ್ಯನಾಗಿದ್ದು ವಾಸವದತ್ತೆಯನ್ನು ಮದುವೆ ಮಾಡಿಕೊಂಡ ಸಂಗತಿಯನ್ನು ಸಾಂಕೃತ್ಯಾಯನಿ ಒಂದು ನಾಟಕವಾಗಿ ಮಾಡಿದ್ದಳು. ಅದನ್ನು ಅರಮನೆಯಲ್ಲಿ ಆಡಬೇಕೆಂದು ಏರ್ಪಾಡಾಗಿ ವಾಸವದತ್ತೆಯ ಪಾತ್ರವನ್ನು ಅರಣ್ಯಕೆಯೂ, ವತ್ಸರಾಜನ ಪಾತ್ರವನ್ನು ಅವಳ ಸಖಿಯಾದ ಮನೋರಮೆಯೂ ವಹಿಸಬೇಕೆಂದು ನಿಶ್ಚಿತವಾಗಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡು ಅರಣ್ಯಕಾ ವತ್ಸರಾಜರನ್ನು ಸೇರಿಸಬೇಕೆಂದು ಅವರ ಮಿತ್ರರಾದ ಮನೋರಮಾ ವಸಂತಕರು ಒಂದು ಸಂಚು ಮಾಡಿದರು. ಅದರಂತೆ ಮನೋರಮೆಗೆ ಬದಲಾಗಿ ವತ್ಸರಾಜನೇ ತನ್ನ ಪಾತ್ರವನ್ನು ವಹಿಸಿ ಅರಣ್ಯಕೆಯೊಡನೆ ಅಭಿನಯದ ನೆವದಲ್ಲಿ ಸರಸಸಲ್ಲಾಪಗಳನ್ನು ನಡಸಿದನು. ಪ್ರೇಕ್ಷಕಳಾಗಿದ್ದ ವಾಸವದತ್ತೆ ಅನುಮಾನಪಟ್ಟು ಎದ್ದು ಬಂದು ಒಳಗೆ ನಿದ್ರಿಸುತ್ತಿದ್ದ ವಸಂತಕನನ್ನು ಎಬ್ಬಿಸಲು, ಅವನು ನಿದ್ರೆಗಣ್ಣಿನಲ್ಲಿ ಗುಟ್ಟನ್ನು ಬಿಟ್ಟುಕೊಟ್ಟನು. ನಾಟಕ ಅಷ್ಟಕ್ಕೇ ನಿಂತಿತು. ಅರಣ್ಯಕಾ ವಸಂತಕರಿಗೆ ಬಂಧನವಾಯಿತು.

ದೃಢವರ್ಮನು ವಾಸವದತ್ತೆಯ ಚಿಕ್ಕಮ್ಮನ ಗಂಡ; ಅವನು ಸೆರೆಯಾದ ಸಂಗತಿಯನ್ನು ವಾಸವದತ್ತೆ ತನ್ನ ತಾಯಿಯ ಪತ್ರದಿಂದ ತಿಳಿದು ಕೊರಗುತ್ತಿರಲು ಆ ಸಮಯಕ್ಕೆ ಸರಿಯಾಗಿ ಕಳಿಂಗನು ಯುದ್ಧದಲ್ಲಿ ಸತ್ತು ದೃಢವರ್ಮನು ತನ್ನ ರಾಜ್ಯವನ್ನು ಪುನಃ ಪಡೆದನೆಂಬ ವರ್ತಮಾನ ಬಂತು. ವತ್ಸರಾಜನ ಸಹಾಯವೇ ಇದಕ್ಕೆ ಕಾರಣವಾದ್ದರಿಂದ ವಾಸವದತ್ತೆಗೆ ಅವನ ಮೇಲಿನ ಕೋಪ ಇಳಿದು ಸಂತೋಷವಾಯಿತು. ಆದರೆ ತನ್ನ ಚಿಕ್ಕಮ್ಮನ ಮಗಳಾದ ಪ್ರಿಯದರ್ಶಿಕೆ ಎಲ್ಲಿಯೋ ಹೋದಳೆಂದೂ ಅವಳ ವರ್ತಮಾನವೇ ತಿಳಿಯದೆಂದೂ ಕೇಳಿ ದುಃಖವೂ ಆಯಿತು. ಈ ದುಃಖದ ಮೇಲೆ ಮತ್ತೊಂದು ದುಃಖ ಬಂತು; ಅರಣ್ಯಕೆ ಹತಾಶಳಾಗಿ ವಿಷಪಾನಮಾಡಿದಳು. ಅವಳನ್ನು ಬದುಕಿಸಬೇಕೆಂದು ವಾಸವದತ್ತೆ ತನ್ನ ಗಂಡನನ್ನು ಪ್ರಾರ್ಥಿಸಬೇಕಾಯಿತು. (ಅವನು ವಿಷ ಇಳಿಸುವ ಮಂತ್ರತಂತ್ರಗಳನ್ನು ನಾಗಲೋಕದಿಂದ ಕಲಿತು ಬಂದಿದ್ದನು.) ಅವಳನ್ನು ರಾಜನ ಮುಂದೆ ಕರೆತಂದಾಗ ಕಂಚುಕಿ ಅವಳೇ ಪ್ರಿಯದರ್ಶಿಕೆಯೆಂದು ಗುರುತಿಸಿದನು. ವಾಸವದತ್ತೆ ತನ್ನ ತಂಗಿಯನ್ನು ಸಂತೋಷದಿಂದ ವತ್ಸರಾಜನಿಗೆ ಮದುವೆಮಾಡಿಕೊಟ್ಟಳು.

ಇದು ‘ರತ್ನಾವಳೀ’ ನಾಟಿಕೆಯ ಕಥೆ—

[ಸಿಂಹಳರಾಜನಾದ ವಿಕ್ರಮಬಾಹುವಿಗೆ ರತ್ನಾವಳೀ ಎಂಬ ಮಗಳಿದ್ದಳು. ಅವಳನ್ನು ಮದುವೆ ಮಾಡಿಕೊಂಡವನು ಚಕ್ರವರ್ತಿಯಾಗುತ್ತಾನೆಂಬ ಸಿದ್ಧಾದೇಶವಿತ್ತು. ಆದ್ದರಿಂದ ವತ್ಸರಾಜನ ಮಂತ್ರಿಯಾದ ಯೌಗಂಧರಾಯಣನು ಆಕೆಯನ್ನು ತನ್ನ ರಾಜನಿಗೆ ಮದುವೆಮಾಡಿಸಬೇಕೆಂದು ಯೋಚಿಸಿದನು. ಆದರೆ ವಿಕ್ರಮಬಾಹುವು ಹೆಣ್ಣು ಕೊಡಲು ಒಪ್ಪಲಿಲ್ಲ. ಏಕೆಂದರೆ, ಅದರಿಂದ ವಾಸವದತ್ತೆಯ ಮನಸ್ಸಿಗೆ ಕಿಂಕೃತಿಯಾಗುತ್ತಿತ್ತು. ವಾಸವದತ್ತೆ ಅವನ ಸೋದರಸೊಸೆ. ಇದನ್ನು ತಿಳಿದು ಯೌಗಂಧರಾಯಣನು, ಲಾವಾಣಕದಲ್ಲಿ ವಾಸವದತ್ತೆ ಸುಟ್ಟು ಹೋದಳೆಂಬ ವರ್ತಮಾನವನ್ನು ಹರಡಿದನು. ಆಗ ವಿಕ್ರಮಬಾಹುವು ರತ್ನಾವಳಿಯನ್ನು ವಸುಭೂತಿ ಬಾಭ್ರವ್ಯರ ಜೊತೆಮಾಡಿ ವತ್ಸರಾಜನಲ್ಲಿಗೆ ಕಳುಹಿಸಿದನು. ಆದರೆ ದಾರಿಯಲ್ಲಿ ಅವರ ಹಡಗು ಒಡೆದು ಹೋಯಿತು. ವಸುಭೂತಿ ಬಾಭ್ರವ್ಯರು ದಡವನ್ನು ಸೇರಿ ರತ್ನಾವಳಿ ನೀರಿನಲ್ಲಿ ಮುಳುಗಿಹೋದಳೆಂದುಕೊಂಡು ಬರುತ್ತ ಕೋಸಲ ದೇಶಕ್ಕೆ ಹೋಗಿ, ಅಲ್ಲಿಗೆ ದಂಡೆತ್ತಿ ಬಂದಿದ್ದ (ವತ್ಸರಾಜನ ಸೇನಾಪತಿ) ರುಮಣ್ವಂತನನ್ನು ಸೇರಿಕೊಂಡರು. ರತ್ನಾವಳಿ ಒಂದು ಹಲಗೆಯನ್ನು ಹಿಡಿದು ತೇಲಿಕೊಂಡು ದಡಕ್ಕೆ ಬರಲು ಅಲ್ಲಿ ಕೌಶಾಂಬಿಗೆ ಹೋಗುತ್ತಿದ್ದ ಒಬ್ಬ ರತ್ನ ವ್ಯಾಪಾರಿ ಆಕೆಯನ್ನು ಗುರುತಿಸಿ ಯೌಗಂಧರಾಯಣನಲ್ಲಿಗೆ ತಂದು ಬಿಟ್ಟನು. ಯೌಗಂಧರಾಯಣನು ಸಾಗರದಲ್ಲಿ ಸಿಕ್ಕಿದ ಅವಳಿಗೆ ‘ಸಾಗರಿಕೆ’ ಎಂಬ ಹೆಸರನ್ನು ಕೊಟ್ಟು ಅವಳನ್ನು ವಾಸವದತ್ತೆಯ ಅಂತಃಪುರದಲ್ಲಿರುವಂತೆ ಏರ್ಪಡಿಸಿದನು. ಇದಿಷ್ಟೂ ಪೂರ್ವಕಥೆ.]

ಹೀಗಿರಲು, ಒಂದು ದಿನ ಮದನೋತ್ಸವದಲ್ಲಿ ಸಾಗರಿಕೆ ವತ್ಸರಾಜನನ್ನು ನೋಡಿದಳು. ಅವನಲ್ಲಿ ಮೋಹವುಂಟಾಯಿತು.

ಅರಮನೆಯ ಉದ್ಯಾನಕ್ಕೆ ಸೇರಿದ ಒಂದು ಲತಾಗೃಹದಲ್ಲಿ ಸಾಗರಿಕೆ ರಾಜನ ಚಿತ್ರವನ್ನು ಬರೆಯುತ್ತಿರಲು ಅದನ್ನು ಅವಳ ಸಖಿ ಸುಸಂಗತೆ ಬಂದು ನೋಡಿ ಎಲ್ಲವನ್ನೂ ತಿಳಿದು ಆ ಭಾವಚಿತ್ರದ ಮಗ್ಗುಲಲ್ಲಿ ಸಾಗರಿಕೆಯ ಚಿತ್ರವನ್ನು ಬರೆದಳು. ಸಾಗರಿಕೆ ತನ್ನ ವ್ಯಥೆಯನ್ನು ಹೇಳಿಕೊಂಡಳು. ಸುಸಂಗತೆ ಅವಳನ್ನು ಸಮಾಧಾನ ಮಾಡಿ ಉಪಚರಿಸುತ್ತಿದ್ದಳು. ಇಷ್ಟುಹೊತ್ತಿಗೆ ಅಂತಃಪುರದಲ್ಲಿದ್ದ ಒಂದು ಕೋತಿ ಕಟ್ಟಿದ್ದ ಸರಪಣಿಯನ್ನು ಕಿತ್ತುಕೊಂಡು ಬರುತ್ತ ಮೊಸರನ್ನದ ಆಸೆಗೆ ಗಿಣಿಯ ಪಂಜರದ ಬಾಗಿಲನ್ನು ತೆಗೆದುಬಿಟ್ಟಿತು. ಗಿಣಿ ಹಾರಿಹೋಯಿತು. ಅಂತಃಪುರದಲ್ಲೆಲ್ಲಾ ಗದ್ದಲವಾಯಿತು. ಇದನ್ನು ಕೇಳಿ ಸಾಗರಿಕಾ ಸುಸಂಗತೆಯರು ಸಂಭ್ರಮದಿಂದ ಚಿತ್ರಪಟವನ್ನು ಇದ್ದಲ್ಲಿಯೇ ಬಿಟ್ಟು ಗಿಣಿಯನ್ನು ಹುಡುಕಲು ಹೊರಟರು; ಏಕೆಂದರೆ, ಆ ಗಿಣಿಯ ರಕ್ಷಣೆ ಸಾಗರಿಕೆಯದಾಗಿತ್ತು. ಅದು ಹಾರಿ ಹೋಗಿ ಎಷ್ಟೋ ಹೊತ್ತಾಗಿದ್ದರಿಂದ ಸಿಕ್ಕಲಿಲ್ಲ. ಮತ್ತೆ ಹಿಂತಿರುಗಿ ಚಿತ್ರಪಟಕ್ಕಾಗಿ ಲತಾಗೃಹಕ್ಕೆ ಬರಲು, ಅಲ್ಲಿಗೆ ರಾಜನೂ ವಿದೂಷಕನೂ ದೋಹದದಿಂದ ಕುಸುಮಿತವಾದ ನವವಲ್ಲಿಕಾ ಲತೆಯನ್ನು ನೋಡುವುದಕ್ಕೆಂದು ಬಂದಿದ್ದರು. ಶಾರಿಕೆ (ಗಿಣಿ)ಯಿಂದ ಸಾಗರಿಕಾ ಸುಸಂಗತೆಯರ ಮಾತನ್ನು ಕೇಳಿ, ಚಿತ್ರಪಟ ಪದ್ಮಪತ್ರಾದಿಗಳನ್ನು ನೋಡಿ, ಸಾಗರಿಕಾ ಪ್ರಣಯ ವೃತ್ತಾಂತವನ್ನು ಊಹಿಸಿ ಅವಳ ಸೌಂದರ್ಯವನ್ನು ವರ್ಣಿಸುತ್ತಿದ್ದರು. ಇಷ್ಟುಹೊತ್ತಿಗೆ ಅವಳೇ ಪ್ರತ್ಯಕ್ಷವಾಗಿ ಬರಲು ರಾಜನು ಅನುನಯದ ಮಾತನಾಡುತ್ತಿದ್ದನು. ವಿದೂಷಕನು “ಇವಳಿನ್ನೊಬ್ಬಳು ವಾಸವದತ್ತೆ, ಮುನಿಸಿನಲ್ಲಿ!” ಎನ್ನುವುದಕ್ಕೆ ಹೋಗಲು, ವಾಸವದತ್ತೆಯ ಹೆಸರು ಕೇಳಿತೋ ಇಲ್ಲವೋ ಎಲ್ಲರೂ ಚಲ್ಲಾಪಿಲ್ಲಿಯಾದರು. ಅಷ್ಟುಹೊತ್ತಿಗೆ ವಾಸವದತ್ತೆಯೂ ನವಮಲ್ಲಿಕೆಯನ್ನು ನೋಡಲೆಂದು ಬಂದಳು. ತಮ್ಮ ಗುಟ್ಟು ಗೊತ್ತಾಗಲಿಲ್ಲವೆಂದು ಕುಣಿಯುತ್ತ ವಿದೂಷಕನು ತಾನು ಮುಚ್ಚಿಟ್ಟುಕೊಂಡಿದ್ದ ಚಿತ್ರವನ್ನು ಬೀಳಿಸಿದನು. ಅದನ್ನು ಕಂಡ ವಾಸವದತ್ತೆ ಎಲ್ಲವನ್ನೂ ಊಹಿಸಿ ಕೋಪದಿಂದ ಹೊರಟು ಹೋದಳು.

ವಿದೂಷಕ ಸುಸಂಗತೆಯರು ಸಾಗರಿಕೆಗೆ ವಾಸವದತ್ತೆಯ ವೇಶವನ್ನು ಹಾಕಿ ರಾಜನಲ್ಲಿಗೆ ತಂದು ಬಿಡಬೇಕೆಂದು ಯೋಚಿಸುವರು. ಇದನ್ನು ತಿಳಿದ ವಾಸವದತ್ತೆ ರಾಜನಲ್ಲಿಗೆ ಬರಲು, ಅವಳನ್ನು ರಾಜನು ಕತ್ತಲೆಯಲ್ಲಿ ಅರಿಯದೆ ಸಾಗರಿಕೆಯೆಂದು ಪ್ರಣಯದ ಮಾತುಗಳನ್ನಾಡುವನು. ಅಷ್ಟುಹೊತ್ತಿಗೆ ಚಂದ್ರೋದಯವಾಗಿ ವಾಸವದತ್ತೆಯ ಗುರುತು ಹತ್ತಲು ಅವಳ ಕ್ಷಮೆಯನ್ನು ಬೇಡುವನು. ಗಂಡನು ಕಾಲಿಗೆ ಬಿದ್ದು ನಮಸ್ಕರಿಸಿದರೂ ವಾಸವದತ್ತೆ ಮುನಿದುಕೊಂಡು ಹೋಗುವಳು. ಅಷ್ಟುಹೊತ್ತಿಗೆ ವಾಸವದತ್ತೆಯ ವೇಷದಲ್ಲಿ ಬಂದು ನಿರಾಶೆಯಿಂದ ನೇಣುಹಾಕಿಕೊಳ್ಳಲು ಯತ್ನಿಸುತ್ತಿದ್ದ ಸಾಗರಿಕೆಯನ್ನು ವತ್ಸರಾಜನು ಕಂಡು ವಾಸವದತ್ತೆಯೆಂದು ಭಾವಿಸಿ ಅವಳ ಕ್ಷಮೆಯನ್ನು ಬೇಡುತ್ತ ಕೊನೆಗೆ ಸಾಗರಿಕೆಯೆಂದು ಅರಿತು ಅಪೂರ್ವ ಸಂತೋಷದಿಂದಿರಲು, ವಾಸವದತ್ತೆ ಮರುಗಿ ಗಂಡನನ್ನು ಕಾಣುವುದಕ್ಕೆಂದು ಬಂದು ನೋಡುತ್ತಾಳೆ—ಸಾಗರಿಕಾ ವತ್ಸರಾಜರ ಪ್ರಣಯಚರಿತ್ರೆ ಬೆಳೆಯುತ್ತಿದೆ ! ಅವಳ ಕೋಪ ಒಂದಕ್ಕೆ ಎರಡಾಯಿತು. ಇದಕ್ಕೆಲ್ಲಾ ಕಾರಣರಾದ ಸಾಗರಿಕಾ ವಸಂತಕರಿಗೆ ಬಂಧನವಾಯಿತು.

ವಸಂತಕನಿಗೆ ಬೇಗ ಬಿಡುಗಡೆಯಾಯಿತು. ಆದರೆ ಸಾಗರಿಕೆಯನ್ನು ಮಾತ್ರ ಇನ್ನೂ ಅಂತಃಪುರದಲ್ಲಿಯೇ ಬಂಧಿಸಿ ವಾಸವದತ್ತೆ ಅವಳನ್ನು ಉಜ್ಜಯಿನಿಗೆ ಕಳುಹಿಸಿಬಿಟ್ಟಿದ್ದಂತೆ ವರ್ತಮಾನವನ್ನು ಹರಡಿದ್ದಳು. ಒಂದು ದಿನ ವಿದೂಷಕನು ಸುಸಂಗತೆಯ ಮೂಲಕ ತನಗೆ ದಾನವಾಗಿ ಬಂದ ಸಾಗರಿಕೆಯ ರತ್ನಮಾಲಿಕೆಯನ್ನು ರಾಜನಿಗೆ ತೋರಿಸುತ್ತ ಸಮಾಧಾನ ಮಾಡುತ್ತಿರುವಾಗ ರುಮಣ್ವಂತನು ಜಯಶಾಲಿಯಾದ ವರ್ತಮಾನ ಬರುವುದು. ವಾಸವದತ್ತೆಯ ಮೂಲಕ ಬಂದ ಒಬ್ಬ ಐಂದ್ರಜಾಲಿಕನ ಆಟವನ್ನು ಎಲ್ಲರೂ ನೋಡುತ್ತಿರಲು ವಸೂಭೂತಿಬಾಭ್ರವ್ಯರು ಬಂದು ರತ್ನಾವಳಿ ಸಮುದ್ರದ ಪಾಲಾದಳು ಎಂಬ ದುಃಖವಾರ್ತೆಯನ್ನು ಹೇಳುವರು. ಎಲ್ಲರೂ ಆ ದುಃಖದಲ್ಲಿ ಮುಳುಗಿರುವಾಗ ಹಠತ್ತಾಗಿ ಅಂತಃಪುರಕ್ಕೆ ಬೆಂಕಿ ಬೀಳುವುದು. ವಾಸವದತ್ತೆ ಅಲ್ಲಿ ಬಂಧಿತಳಾಗಿದ್ದ ಸಾಗರಿಕೆಯನ್ನು ನೆನೆದು ಅದನ್ನು ರಾಜನಿಗೆ ತಿಳಿಸುವಳು. ರಾಜನು ಒಳಕ್ಕೆ ನುಗ್ಗಿ ಸಾಗರಿಕೆಯನ್ನು ಕರೆದುತರುತ್ತಲೇ ಬೆಂಕಿ ಆರುವುದು. ಈ ಬೆಂಕಿ ಐಂದ್ರಜಾಲಿಕನ ಮಾಯೆಯಾದ್ದರಿಂದ ಯಾರಿಗೂ ಏನೂ ಅಪಾಯವಾಗಲಿಲ್ಲ. ಮೊದಲು ವಿದೂಷಕನ ಹತ್ತಿರವಿದ್ದ ರತ್ನಮಾಲಿಕೆಯನ್ನು ನೋಡಿ ಆಗಲೇ ಸಂದೇಹಿಸುತ್ತಿದ್ದ ವಸುಭೂತಿಗೆ ಈಗ ಸಾಗರಿಕೆ ಕಂಡು ಅವಳೇ ರತ್ನಾವಳಿ ಎಂದು ನಿಶ್ಚಯವಾಗುವುದು. ಈ ಮಧ್ಯೆ ಯೌಗಂಧರಾಯಣನು ಬಂದು ರತ್ನಾವಳಿಯನ್ನು ಸಾಗರಿಕೆಯೆಂಬ ಹೆಸರಿನಿಂದ ವಾಸವದತ್ತೆಗೆ ಒಪ್ಪಿಸಿದ್ದು ಮೊದಲು ಮಾಡಿ ಐಂದ್ರಜಾಲಿಕ ವೃತ್ತಾಂತದವರೆಗೆ ಎಲ್ಲಾ ಸಂಗತಿಗಳೂ ತನ್ನಿಂದಲೇ ಏರ್ಪಟ್ಟವೆಂದೂ ಅದಕ್ಕೆಲ್ಲಾ ರಾಜನ ಅಭ್ಯುದಯವೇ ಉದ್ದೇಶವಾದ್ದರಿಂದ ತನ್ನನ್ನು ಕ್ಷಮಿಸಬೇಕೆಂದೂ ಪ್ರಾರ್ಥಿಸುವನು. ವಾಸವದತ್ತೆ ರತ್ನಾವಳಿಯನ್ನು ತನ್ನ ಗಂಡನಿಗೆ ಮದುವೆಮಾಡಿಕೊಡುವಳು.

ಈ ನಾಟಕಗಳ ಕಥೆಗೆ ಸಂಬಂಧಪಡುವಂತಿರುವ ಕಥಾಸರಿತ್ಸಾಗರದ ಭಾಗವು ಇದು:—

(ವಾಸವದತ್ತೆಯ ಅಣ್ಣನಾದ) ಗೋಪಾಲಕನು ಬಂಧುಮತಿಯೆಂಬ ರಾಜಪುತ್ರಿಯನ್ನು ಗೆದ್ದುತಂದು ತನ್ನ ತಂಗಿಗೆ ಉಪಾಯನವಾಗಿ ಕೊಟ್ಟಿದ್ದನು. ವಾಸವದತ್ತೆ ಅವಳಿಗೆ ಮಂಜುಳಿಕೆಯೆಂಬ ಹೆಸರು ಕೊಟ್ಟು ಗುಟ್ಟಾಗಿಟ್ಟುಕೊಂಡಿದ್ದಳು; ಲಾವಣ್ಯಜಲಧಿಯಿಂದ ಹುಟ್ಟಿಬಂದ ಎರಡನೆಯ ಲಕ್ಷ್ಮಿಯೋ ಎಂಬಂತಿದ್ದ ಆಕೆಯನ್ನು ವತ್ಸರಾಜನು ಉದ್ಯಾನಲತಾಗೃಹದಲ್ಲಿ ಕಂಡು ವಸಂತಕನ ಸಹಾಯದಿಂದ ಗಾಂಧರ್ವವಿವಾಹ ಮಾಡಿಕೊಂಡನು. ಇದನ್ನು ಮರೆಯಲ್ಲಿ ನೋಡುತ್ತಿದ್ದ ವಾಸವದತ್ತೆ ಕೋಪಿಸಿಕೊಂಡು ವಸಂತಕನನ್ನು ಬಂಧಿಸಿದಳು. ರಾಜನು ವಾಸವದತ್ತೆಯ ತವರುಮನೆಯಿಂದ ಬಂದವಳೂ ಅವಳ ಸಖಿಯೂ ಆಗಿದ್ಧ ಸಾಂಕೃತ್ಯಾಯನಿ ಎಂಬ ಸಂನ್ಯಾಸಿನಿಯನ್ನು ಆಶ್ರಯಿಸಿದನು. ಆಕೆ ರಾಣಿಯನ್ನು ಸಮಾಧಾನಮಾಡಿ ಅವಳ ಅಪ್ಪಣೆಯಂತೆ ಬಂಧುಮತಿಯನ್ನು ರಾಜನಿಗೆ ಕೊಟ್ಟಳು. (ಕಥಾಮುಖಲಂಬಕ, ತರಂಗ ೬, ಶ್ಲೋಕ ೬೭-೭೨).

‘ಕಥಾಸರಿತ್ಸಾಗರ’ ವು ಹನ್ನೊಂದನೆಯ ಶತಮಾನದಲ್ಲಿ (ಕ್ರಿ.ಶ. ೧೦೬೩ ರಿಂದ ೧೦೮೧ರ ಒಳಗೆ ಯಾವಾಗಲೋ) ‘ಬೃಹತ್ಕಥೆ’ ಯ ಆಧಾರದ ಮೇಲೆ ಹುಟ್ಟಿದ ಗ್ರಂಥ; ಇದರಂತೆಯೇ, ಆದರೆ ಇದಕ್ಕಿಂತಲೂ ಸಂಗ್ರಹವಾಗಿರುವ ‘ಬೃಹತ್ಕಥಾಮಂಜರಿ’ ಯೂ ಹನ್ನೊಂದನೆಯ ಶತಮಾನದ್ದೇ. ಇವೆರಡಕ್ಕಿಂತಲೂ ಪ್ರಾಚೀನವೂ (ಎಂಟು ಅಥವಾ ಒಂಬತ್ತನೆಯ ಶತಮಾನ) ಮೂಲ ಬೃಹತ್ಕಥೆಗೆ ಹತ್ತಿರ ಸಂಬಂಧವಿದ್ದಿರಬಹುದಾದದ್ದೂ ಆದ ಗ್ರಂಥ “ಬೃಹತ್ಕಥಾ ಶ್ಲೋಕ ಸಂಗ್ರಹ”. ಇದು ಆರಂಭವಾಗುವುದು ಪ್ರದ್ಯೋತನ ಸಾವಿನಿಂದ; ಆದ್ದರಿಂದ ಇದರಲ್ಲಿ ಉದಯನನ ಶೃಂಗಾರ ಚರಿತ್ರೆಯಿಲ್ಲ. ಈ ಗ್ರಂಥಗಳೆಲ್ಲಾ ಹರ್ಷನ ಕಾಲಕ್ಕಿಂತ ಈಚಿನವಾದ್ದರಿಂದ ಅವನ ನಾಟಿಕೆಗಳಿಗೆ ಪ್ರಾಕೃತ ಬೃಹತ್ಕಥೆಯೋ, ಬಾಯಿ ಹೇಳಿಕೆಯೋ, ಮತ್ತಾವುದಾದರೂ ಗ್ರಂಥವೋ ಆಧಾರವಾಗಿರಬೇಕು. ಹರ್ಷನು ಉಪಯೋಗಿಸಿಕೊಂಡ ಕಥೆ ಕಥಾಸರಿತ್ಸಾಗರದ ಕಥೆಯಂತೆ ಇದ್ದರೆ* ‘ಮಂಜುಳಿಕೆ’ ‘ಪ್ರಿಯದರ್ಶಿಕೆ’ ಯನ್ನೂ, ಲಾವಣ್ಯಜಲಧಿ ‘ಸಾಗರಿಕೆ’ ಯನ್ನೂ ಸೂಚಿಸಿರಬಹುದು; ಸಾಗರಿಕಾ ಪ್ರಿಯದರ್ಶಿಕೆಯರ ಕುಲಗೋತ್ರಗಳೂ, ಅಲ್ಲಿ ಸಂಭವಿಸಿದ ವಿಪತ್ತೂ, ವತ್ಸರಾಜನ ಸಹಾಯವೂ ಕಲ್ಪಿತಗಳು. ಇವಕ್ಕೆ ಸೂಚನೆ ಕಾಳಿದಾಸನ ಮಾಳವಿಕಾಗ್ನಿಮಿತ್ರದಿಂದ ಬಂದಿರಬಹುದು. ವಸ್ತುತಃ ಬಂಧುಮತೀ ವೃತ್ತಾತಕ್ಕಿಂತ ಮಾಳವಿಕಾಗ್ನಿಮಿತ್ರದಲ್ಲಿ ಈ ನಾಟಿಕೆಗಳಿಗೆ ಬಹುವಾದ ಸಾದೃಶ್ಯವು ಕಂಡುಬರುತ್ತದೆ.—ಮತ್ಸರಿಯಾದ ಮಹಾರಾಣಿ, ಗೋಪ್ಯವಾಗಿದ್ದ ರಾಜಪುತ್ರಿ, ಅವಳಿಗೆ ಸಹಾಯಕಳಾದ ಸನ್ಯಾಸಿನಿ, ಕಾಮತಂತ್ರ ಸಹಾಯಕರಾದ ವಿದೂಷಕ ಸಖಿಯರು, ಅಕಸ್ಮಾತ್ತಾಗಿ ಚಿತ್ರದಲ್ಲಿ ನಾಯಿಕೆಯನ್ನು ಕಂಡು ಮೋಹಗೊಳ್ಳುವ ರಾಜ, ದೋಹದಿಂದ ಪುಷ್ಪಿತವಾದ ಗಿಡ, ಅದನ್ನು ನೋಡುವುದಕ್ಕೆ ಹೋಗಿದ್ದಾಗ ರಾಜನಿಗೂ ರಾಜಪುತ್ರಿಗೂ ಸಂದರ್ಶನಾದಿಗಳು, ರಾಣಿ ಅದನ್ನು ಕಂಡುಹಿಡಿದು ತಪ್ಪಿತಸ್ಥರನ್ನು ಸೆರೆಯಲ್ಲಿಡುವುದು, ವಿಜಯ ವೃತ್ತಾಂತ, ರಾಜಪುತ್ರಿಯ ಪ್ರತ್ಯಭಿಜ್ಞಾನ, ಪೂರ್ವ ಸಂಬಂಧ ವಿವಾಹೋದ್ದೇಶಗಳ ಪರಿಚಯ, ರಾಣಿಯೇ ತನ್ನ ಗಂಡನಿಗೆ ಆಕೆಯನ್ನು ಮದುವೆ ಮಾಡಿಕೊಡುವುದು-ಇತ್ಯಾದಿ. ಇದೇ ರೀತಿಯಾಗಿ ಶಾಕುಂತಲ ವಿಕ್ರಮೋರ್ವಶೀಯ ಸ್ವಪ್ನವಾಸವದತ್ತಗಳಿಗೂ ಈ ನಾಟಿಕೆಗಳಿಗೂ ಘಟನೆ ಪಾತ್ರ ಸನ್ನಿವೇಶಕಲ್ಪನಾದಿಗಳಲ್ಲಿ ಸಾದೃಶ್ಯವನ್ನು ಹೇಳಬಹುದು; ಆದರೆ ಇದು ಸುಸ್ಪಷ್ಟವಾಗಿರುವುದು ರತ್ನಾವಳೀ ಮಾಳವಿಕಾಗ್ನಿಮಿತ್ರಗಳಲ್ಲಿ; ಇದರಿಂದ ಒಂದು ಕಡೆ ಹರ್ಷನ ನಾಟಕಕ್ಕೆ ನವೀನತೆ ಕಡಮೆಯಾಗಿದೆ.

ಇದನ್ನು ಕಾವ್ಯಚೌರ್ಯವೆಂದು ಕರೆಯುವುದು ಸುಲಭ; ಹಾಗೆ ಕರೆದರೆ ಮಹಾಕವಿಯ ಸಾಮರ್ಥ್ಯವನ್ನು ಕಡೆಗಣಿಸಿದಂತಾಗುತ್ತದೆ. ಹರ್ಷನು ತನ್ನ ಪೂರ್ವಕವಿಗಳಿಗೆ ಯಾವ ವಿಧದಲ್ಲಿ ಎಷ್ಟು ಋಣಿಯಾಗಿದ್ದರೂ ಅವನು ‘ನಿಪುಣಕವಿ’ ಎಂದೂ ಅವನ ಕೃತಿಗಳು ‘ಅಪೂರ್ವವಸ್ತುರಚನಾಲಂಕೃತ’ ಗಳೆಂದೂ ಒಪ್ಪಿಕೊಳ್ಳಬೇಕು. ಏಕೆಂದರೆ, ಸ್ವಪ್ನವಾಸವದತ್ತ ಮಾಲವಿಕಾಗ್ನಿಮಿತ್ರಗಳನ್ನು ಉಪಯೋಗಿಸಿಕೊಂಡವರೆಲ್ಲರೂ ಪ್ರಿಯದರ್ಶಿಕಾ ರತ್ನಾವಳಿಗಳನ್ನು ಬರೆಯಲಾಗಿಲ್ಲ. ಇವುಗಳ ವಸ್ತು ಅಪೂರ್ವವಲ್ಲದಿರಬಹುದು; ಆದರೆ ವಸ್ತು ‘ರಚನೆ’ ಅಪೂರ್ವವಾದದ್ದೇಯೆ; ಅದರಲ್ಲಿ ಬಹಳ ಚಮತ್ಕಾರವಿದೆ.* ಪ್ರಿಯದರ್ಶಿಕದಲ್ಲಿ ‘ಗರ್ಭಾಂಕ’ ದ ಪ್ರಯೋಗವಿದೆ. ಇದು ನಮಗೆ ತಿಳಿದಿರುವ ಮಟ್ಟಿಗೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಥಮ ಪ್ರಯೋಗ. ‘ರತ್ನಾವಳಿ’ ಯಲ್ಲಿ ಯಕ್ಷಿಣಿ ದೋಹದ ಮುಂತಾದ ವಿದ್ಯೆಗಳಿಂದಲೂ, ಗಿಣಿ ಕೋತಿ ಮುಂತಾದ ಪ್ರಾಣಿಗಳಿಂದಲೂ ಕಥೆ ಕಟ್ಟಿ, ಕವಿ ತನ್ನ ಸಂವಿಧಾನ ಕೌಶಲವನ್ನು ಚೆನ್ನಾಗಿ ತೋರ್ಪಡಿಸಿಕೊಂಡಿದ್ದಾನೆ. ಕೋತಿ ಸರಪಳಿಯನ್ನು ಕಿತ್ತುಕೊಂಡು ಬಂದು ಮೊಸರನ್ನಕ್ಕಾಗಿ ಪಂಜರದ ಬಾಗಿಲನ್ನು ತೆಗೆದು ಶಾರಿಕೆಯನ್ನು ಓಡಿಸಿ ತಾನೂ ಓಡಿಹೋಗಲು ಎಷ್ಟು ನೈಸರ್ಗಿಕವಾಗಿ ಎಷ್ಟು ಬೇಗ ಎಷ್ಟು ಘಟನಾವಳಿಗಳಾಗುವುವು! ಆ ವಾನರನು ವತ್ಸರಾಜ ಸಾಗರಿಕೆಯವರಿಗೆ ಮಧ್ಯೆ ಇದ್ದ ಅಪಾರ ಸಾಗರಕ್ಕೆ ಸೇತುವೆ ಕಟ್ಟುತ್ತಾನೆ. ಆಮೇಲೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ವಸಂತಕನ ಅತಿಬುದ್ಧಿವಂತಿಕೆಯ ಮಾತಿನಿಂದ ನಾಯಕನಾಯಿಕೆಯರು ಚೆದರಿ ಹೋಗುವುದೂ, ಪೆಚ್ಚು ಬ್ರಾಹ್ಮಣನ ಬುದ್ಧಿಗೆ ಸದೃಶವಾದ ತಳತಂತ್ರವು ಹೊರಬಿದ್ದು, ರಾಜನು ಸಾಗರಿಕೆಯೆಂದು ಮೋಹಪರವಶನಾಗಿ ಮಾತನಾಡಿಸುವುದಕ್ಕೆ ಹೋದಾಗ ಬರಸಿಡಿಲು ಬಿದ್ದಂತೆ ವಾಸವದತ್ತೆ ಕಾಣಿಸಿಕೊಂಡಿದ್ದೂ, ಹೆಂಡತಿ ಕೋಪದಿಂದ ನೇಣುಹಾಕಿಕೊಳ್ಳುತ್ತಾಳೆಂದು ನಿರಾಶನಾಗಿ ಬಿಡಿಸುವುದಕ್ಕೆ ಹೋದಾಗ ಸೊರಗಿಹೋದ ಹೂವಿನ ಗಿಡದ ಮೇಲೆ ಅಮೃತವರ್ಷವಾದಂತೆ ರತ್ನಾವಳಿ ಕಂಡದ್ದೂ, ಕೊನೆಗೆ ವಾಸವದತ್ತೆಯೇ ಬಾಯಿಬಿಟ್ಟು ಹೇಳಿ ವತ್ಸರಾಜನು ರತ್ನಾವಳಿಯನ್ನು ಎತ್ತಿಕೊಂಡು ಬರುವಂತೆ ಮಾಡಿರುವ ಐಂದ್ರಜಾಲಿಕನ ಘಟನೆಯೂ ಬಹು ವಿಚಿತ್ರವಾದವು. ಕೊನೆಯಲ್ಲಿ ಸೇರುವವರು ಶಾಕುಂತಲದಲ್ಲಿರುವಂತೆ ನಾಯಕನಾಯಿಕೆಯರು ಮಾತ್ರವೇ ಅಲ್ಲ. ಹಡಗು ಒಡೆದು ದಿಕ್ಕಾಪಾಲಾದವರೂ ಪರದೇಶಕ್ಕೆ ಹೋಗಿದ್ದವರೂ ಸ್ವಕೀಯರೂ ಪರಕೀಯರೂ ಎಲ್ಲರೂ ಸೇರಿ ದೊಡ್ಡ ಅವಾಂತರವು ತಪ್ಪಿಹೋಗಿ ಮಹೋತ್ಸವವಾಗುವುದು. ಇದೊಂದು ಅಪೂರ್ವವಾದ ರೂಪಕಸನ್ನಿವೇಶ !

‘ಪ್ರಿಯದರ್ಶಿಕಾ’ ‘ರತ್ನಾವಳಿ’ ಗಳ ಪಾತ್ರರಚನೆಯಲ್ಲಿ ವಿಶೇಷವಾದ ನವೀನತೆಯೇನೂ ಕಂಡುಬರುವುದಿಲ್ಲ. ಅವುಗಳ ಪಾತ್ರಗಳು ಹಿಂದೆ ಭಾಸ ಕಾಳಿದಾಸರ ಕೃತಿಗಳಲ್ಲಿ ಹೆಸರಿನಿಂದಲೂ ಸ್ವಭಾವದಿಂದಲೂ ಪರಿಚಿತರಾದವರೇಯೆ, ವತ್ಸರಾಜನು ‘ಧೀರಲಲಿತ’ —’ ಕಲಾಸಕ್ತಿ, ಸುಖಿ, ಮೃದು.’ ಅವನ ದೇಶಕೋಶಗಳ ರಕ್ಷಣಾವೇಕ್ಷಣಗಳು ಅವನ ಮಂತ್ರಿ ಸೇನಾಪತಿಗಳದು. ನಾಟಕಗಳಲ್ಲಿ ಬರುವ ವೀರವೃತ್ತಾಂತಗಳಲ್ಲಿ ಅವನು ಯಾವ ಭಾಗವನ್ನೂ ವಹಿಸುವುದಿಲ್ಲ; ಅವನ ಬುದ್ಧಿ ಸಾಹಸಗಳೆಲ್ಲಾ ಶೃಂಗಾರ ಸಂಪಾದನೆಯಲ್ಲಿ ಉಪಯುಕ್ತವಾಗುವುದು ಮಾತ್ರ ಕಂಡುಬರುತ್ತದೆ. ಇದಕ್ಕೆ ಕಟುವಾಕ್ಕಿನ ಕೋಪಿಷ್ಠೆಯಾದ ವಾಸವದತ್ತೆ ಬಹುಮಟ್ಟಿಗೆ ಕಾರಣವಾಗಿ ತೋರುತ್ತದೆ. ಅವಳು ಭಾಸಸೃಷ್ಟಳಾದ ಪ್ರೇಮಮಯಿ ವಾಸವದತ್ತೆಯಲ್ಲ. ಮುಂಗೋಪಿ, ಕಠಿಣಹೃದಯೆ; ರಾಜನಾದ ಗಂಡನಿಂದಲೂ ‘ಸೇವೆ’ ಯನ್ನು ಸಲ್ಲಿಸಿಕೊಳ್ಳತಕ್ಕವಳು (ರತ್ನಾ., III.೧೮) ಕೋಪ ಬಂದರೆ ಅದು ತಾನಾಗಿ ಇಳಿಯಬೇಕು (ರತ್ನಾ, IV. ೧); ಪ್ರಿಯದರ್ಶಿಕೆಯ ವಾಸವದತ್ತೆ ಸ್ವಲ್ಪ ವಾಸಿ ಎರಡು ಕಡೆಯಲ್ಲಿಯೂ ಅವಳು ಇರಾವತಿಯ ತಂಗಿಯಾದರೂ ಕಾಳಿದಾಸನ ಚಿತ್ರವು ಹೆಚ್ಚು ಖಚಿತವಾಗಿದೆ. ಇವುಗಳಿಗೆ ವಿರುದ್ಧವಾದ ಚಿತ್ರ ಪ್ರಿಯದರ್ಶಿಕಾ ರತ್ನಾವಳಿಯರದು. ಅವರು ವಾಳವಿಕೆಯ ತಂಗಿಯರು; ‘ಲಜ್ಜಾವತಿ, ವತ್ಸಲೆ, ಉದಾರಶೀಲೆ, ಸೌಮ್ಯದರ್ಶನೆ’ ಎಂದು ರತ್ನಾವಳಿಯನ್ನು ಸುಸಂಗತೆ ವರ್ಣಿಸಿದರೆ ಅದು ಬರಿಯ ಸಖೀಸ್ನೇಹದಿಂದಲ್ಲ. ವಾಸವದತ್ತೆಯ ಗಂಡನಿಗೆ ಅಂಧವಳಲ್ಲಿ ಪ್ರೀತಿ ಹುಟ್ಟಿ, ‘ಪ್ರೇಮಾಬಂಧ ವಿವರ್ಧಿತಾಧಿಕರಸ’ ವಾದರೆ (ರತ್ನಾ., III.೧೮) ಕ್ಷಮ್ಯವೆನ್ನಿಸುತ್ತದೆ.

ಇವುಗಳಲ್ಲಿ ಬರತಕ್ಕ ಶೃಂಗಾರವು ಘನವೂ ಉದಾತ್ತವೂ ಆದದ್ದಲ್ಲ; -ಅದು ಬರಿಯ ರೂಪಮೋಹ, ಯೌವನದ ಚಾಪಲ್ಯ. ಆದ್ದರಿಂದ ಹಸಿಹಸಿಯಾಗಿ ಬಣ್ಣಬಣ್ಣವಾಗಿ ಕಾಣುತ್ತದೆ. ಅದರಲ್ಲಿ ಧರ್ಮ ದಾರ್ಢ್ಯ ಪುಷ್ಟಿ ಮಾಧುರ್ಯಗಳಿಲ್ಲ. ಕಾಳಿದಾಸನ ಮತ್ತು ಹರ್ಷನ ನಾಂದೀಪದ್ಯಗಳಿಗಿರುವ ವಿಷಯ ವ್ಯತ್ಯಾಸವೇ ಇದನ್ನು ಸೂಚಿಸುವಂತಿದೆ.

“ನಾಗಾನಂದ” ವು ಇವೆರಡಕ್ಕಿಂತಲೂ ಎಲ್ಲ ವಿಧದಲ್ಲಿಯೂ ಭಿನ್ನವಾದದ್ದು; ಅದು ದಾನವೀರಪ್ರಧಾನವಾದ ಐದು ಅಂಕಗಳ ನಾಟಕ; ಅದರ ಕಥಾಸಾರಾಂಶವಿದು:—

ಜೀಮೂತವಾಹನನೆಂಬ ವಿದ್ಯಾಧರ ರಾಜಕುಮಾರನು ಮಲಯಪರ್ವತ ಪ್ರದೇಶದಲ್ಲಿ ಸಂಚರಿಸುತ್ತ, ಅಲ್ಲಿನ ಗೌರೀ ದೇವಾಲಯಕ್ಕೆ ಪೂಜೆಗೆಂದು ಬಂದಿದ್ದ ಮಲಯವತಿಯನ್ನು ನೋಡುವನು. ಇಬ್ಬರಿಗೂ ಪರಸ್ಪರ ಪ್ರೇಮವು ಉತ್ಪನ್ನವಾಗುವುದು. ಅವನು ಶ್ಲಾಘ್ಯನಾದ ವರನೆಂದರಿತು ಆಕೆಯ ತಂದೆ ವಿಶ್ವಾವಸುವು ತನ್ನ ಮಗಳನ್ನು ಮದುವೆಮಾಡಿಕೊಡುವುದಾಗಿ ಹೇಳಿಕಳುಹಿಸುವನು. ಆದರೆ, ತಾನು ಗೌರೀದೇವಾಲಯದಲ್ಲಿ ನೋಡಿದ್ದವಳೂ ಈ ಮಲಯವತಿಯೂ ಒಬ್ಬಳೇ ಎಂದು ಅವನಿಗೆ ಗೊತ್ತಿಲ್ಲದೆ ಇದ್ದದ್ದರಿಂದ ಸ್ವಲ್ಪ ರಗಳೆಯಾಗಿ ಕೊನೆಗೆ ಇಬ್ಬರಿಗೂ ಮದುವೆಯಾಗುವುದು. ಎಲ್ಲರೂ ಆ ಉತ್ಸವದಲ್ಲಿರುವರು (ಅಂಕ ೧—೩).

ಜೀಮೂತವಾಹನನು ಸಮುದ್ರದ ಕರೆಯಲ್ಲಿ ತಿರುಗುತ್ತ ಅಲ್ಲಿ ಪರ್ವತಾಕಾರವಾಗಿ ಬಿದ್ದಿದ್ದ ಹಾವಿನ ಮೂಳೆಗಳನ್ನು ನೋಡಿ, ಅದರ ಪೂರ್ವವೃತ್ತಾಂತವನ್ನು ತಿಳಿದು ಕನಿಕರಪಡುತ್ತಿದ್ದನು. ಅಷ್ಟುಹೊತ್ತಿಗೆ ಗರುಡನ ಆಹಾರವಾಗಿ ಬಂದಿದ್ದ ಶಂಖಚೂಡ ನಾಗನನ್ನು ಕಂಡು, ಅವನು ಗೋಕರ್ಣೇಶ್ವರನನ್ನು ನೋಡಿಕೊಂಡು ಬರಲು ಹೋಗಿದ್ದಾಗ, ತನ್ನ ದೇಹವನ್ನು ಗರುಡನಿಗೆ ಅರ್ಪಿಸುವನು. ಗರುಡನು ಅವನನ್ನು ನಾನಗೆಂದೇ ಭಾವಿಸಿ ಎತ್ತಿಕೊಂಡು ಹೋಗಿ ಒಂದು ಕೋಡುಗಲ್ಲಿನ ಮೇಲೆ ಕುಕ್ಕಿ ತಿನ್ನುತ್ತಿರಲು ಶಂಖಚೂಡನು ಅಲ್ಲಿಗೆ ಹುಡುಕಿಕೊಂಡು ಬಂದು ನಿಜಸ್ಥಿತಿಯನ್ನು ತಿಳಿಸುವನು. ಜೀಮೂತವಾಹನನ ಮುದುಕ ತಾಯಿತಂದೆಗಳೂ, ಹೊಸಾಗಿ ಮದುವೆಯಾದ ಹೆಂಡತಿಯೂ ಬಂದು ಸೇರುವರು. ಜೀಮೂತವಾಹನನು ಸಾಯುವನು. ಅದನ್ನು ನೋಡಿ ಅವನ ಕಡೆಯವರೆಲ್ಲರೂ ಬೆಂಕಿಯಲ್ಲಿ ಬಿದ್ದು ಪ್ರಾಣಬಿಡಬೇಕೆಂದಿರುವಾಗ ಗೌರಿ ಜೀಮೂತವಾಹನನ್ನು ಬದುಕಿಸುವಳು. ಗರುಡನು ಸ್ವರ್ಗದಿಂದ ಅಮೃತವನ್ನು ತಂದು ಚಿಮುಕಿಸಿ ಬಹುಕಾಲದಿಂದ ಸತ್ತು ಮೂಳೆಯ ರಾಶಿಯಾಗಿದ್ದ ಸರ್ಪಗಳನ್ನು ಬದುಕಿಸಿ, ತಾನು ಹಿಂದೆ ಮಾಡಿದ್ದ ಪಾಪಕ್ಕೆ ಅನುತಾಪಪಟ್ಟು ಮುಂದೆ ಸರ್ಪಗಳನ್ನು ಹಿಂಸಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವನು (ಅಂಕ ೪-೫).

ಈ ಕಥೆ ಬಹುಮಟ್ಟಿಗೆ ಕಥಾಸರಿತ್ಸಾಗರದಲ್ಲಿ ದೊರೆಯುವಂತೆಯೇ ಇದೆ (ತರಂಗ ೨೨ ಮತ್ತು ೯೦).* ಆದ್ದರಿಂದ ‘ನಾಗಾನಂದ’ ಕ್ಕೂ ಬೃಹತ್ಕಥೆಯೇ ಮೂಲವಾಗಿರಬೇಕು. ಆದರೆ ಕಥಾಶೋಧನೆ, ಸನ್ನಿವೇಶರಚನೆ, ಪಾತ್ರಪೋಷಣೆ, ಶೃಂಗಾರ ವೀರ ಕರುಣಾದಿ ವಿವರಣೆ, ಹಾಸ್ಯರಸಯೋಜನೆ, ವರ್ಣನೆ - ಮುಂತಾದವೆಲ್ಲಾ ಕವಿಪ್ರತಿಭಾಕಲ್ಪಿತವಾದವು. ನಾಟಕದ ಹೆಸರೂ ಕೂಡ, ರತ್ನಾವಳೀ ಪ್ರಿಯದರ್ಶಿಕೆಗಳಂತೆ, ಕಲ್ಪಿತವಾಗಿಯೇ ತೋರುತ್ತದೆ. ಇದು ಉಚಿತವಾಗಿ ಮುದ್ದಾಗಿ ಶ್ರಾವ್ಯವಾಗಿ ಇದೆ ಎಂಬುದರಲ್ಲಿ ಸಂದೇಹವಿಲ್ಲ.

ಈ ‘ಬೋಧಿಸತ್ವ’ ದ ಕಥೆಯನ್ನು ಹರ್ಷನು ಏಕೆ, ಹೇಗೆ, ಬರೆದನೆಂದು ಕೆಲವರು ಆಶಂಕಿಸುತ್ತಾರೆ. ಇದು ಅಷ್ಟು ಕಠಿಣವಾದ ಸಮಸ್ಯೆಯೇನಲ್ಲ. ನಾಗಾನಂದದ ಮೊದಲುಕೊನೆಗಳಲ್ಲಿ ಸ್ವಲ್ಪ ಬೌದ್ಧವರ್ಣವು ಕಂಡರೂ ಮೂಲ ಕಥೆಯಲ್ಲಿರುವ ಜಾತಿಸ್ಮರತ್ವ, ಪೂರ್ವಜನ್ಮವೃತ್ತಾಂತಾದಿ ಬೌದ್ಧವೆನ್ನಿಸುವ ಬಹು ಅಂಶಗಳು ನಾಟಕದಲ್ಲಿ ಬಿಟ್ಟುಹೋಗಿವೆ.ಬೋಧಿಸತ್ವ ಇನ್ನೂ ಗೌರೀಪೂಜೆ ಸುರ್ಯೋಪಾಸನಾದಿಗಳ ಯೋಜನೆ ವರ್ಣನೆಗಳನ್ನು ನೋಡಿದರೆ ಬೌದ್ಧಾಂಶಕ್ಕಿಂತ ಸ್ಮಾರ್ತಾಂಶವೇ ಹೆಚ್ಚಾಗಿದೆಯೆಂದು ಹೇಳಬಹುದು; ಸ್ಮಾರ್ತಪುರಾಣಗಳಲ್ಲಿಯೂ ಶಿಬಿಚಕ್ರವರ್ತಿ ಮುಂತಾದ ದಾನವೀರರ ದಯಾವೀರರ ಕಥೆಗಳಿವೆ. ಅಲ್ಲದೆ ಆಗಿನ ಕಾಲದಲ್ಲಿ ಸ್ಮಾರ್ತ ಬೌದ್ಧ ಧರ್ಮಗಳಿಗೆ ಅಷ್ಟೊಂದು ವೈಷಮ್ಯವೂ ಇರಲಿಲ್ಲ; ಹರ್ಷನೂ ಮೊದಲಿಂದ ಬೌದ್ಧ ಧರ್ಮದಲ್ಲಿ ಗೌರವವುಳ್ಳವನಾಗಿದ್ದನೆಂದೂ ಕೊನೆಕೊನೆಗೆ ಅದು ಪಕ್ಷಪಾತವಾಗಿ ಪರಿಣಮಿಸಿತೆಂದೂ ಹಿಂದೆಯೇ ಹೇಳಿದೆ. ಹೀಗೆ ನಾಗಾನಂದವು ಅವನ ಜೀವಮಾನದ ಕೊನೆಗೆ ಬರೆದದ್ದಾಗಿದ್ದರೂ ಇರಬಹುದು. ಬುದ್ಧನು ದಶಾವತಾರಗಳಲ್ಲಿ ಒಬ್ಬನೆಂದು ಗಣ್ಯನಾಗಿದ್ದಾನೆ; ಆದ್ದರಿಂದ ಆ ಸಂಬಂಧವಾದ ಕಥೆಯನ್ನು ಬರೆಯಬೇಕಾದರೆ ಕವಿ ಬೌದ್ಧನೇ ಆಗಬೇಕೆಂಬ ನಿರ್ಬಂಧವೇನಿಲ್ಲ.

ಮೇಲೆ ಕೊಟ್ಟಿರುವ ಕಥಾಸಂಗ್ರಹವನ್ನು ನೋಡಿದರೆ, ಈ ನಾಟಕದ ಐದು ಅಂಕಗಳಲ್ಲಿ ಮೂರು, ಜೀಮೂತವಾಹನನ ಮದುವೆ ಆ ಸಂಬಂಧವಾದ ಶೃಂಗಾರ ವಿನೋದ ಹಾಸ್ಯ ಉತ್ಸವ ಸಂಭ್ರಮಾದಿಗಳಿಗೆ ಪ್ರಯುಕ್ತವಾಗಿರುವುದು ಕಂಡುಬರುತ್ತದೆ. ನಾಟಕವು ನಾಲ್ಕನೆಯ ಅಂಕದಿಂದ ಆರಂಭವಾದರೂ ಅದರ ವಸ್ತು ಪಾತ್ರ ರಸಾದಿಗಳಲ್ಲಿ ‘ನಾಗಾನಂದ’ ದೃಷ್ಟಿಯಿಂದ ಯಾವ ಕೊರತೆಯೂ ಆಗುವುದಿಲ್ಲ. ಆದ್ದರಿಂದ ವೈರಾಗ್ಯಪರನೂ ತ್ಯಾಗಿಯೂ ಆದ ಜೀಮೂತವಾಹನನ ಚರಿತ್ರೆಯಲ್ಲಿ ಈ ಶೃಂಗಾರ ಹಾಸ್ಯ ಪ್ರಾಧಾನ್ಯವು ಅತಿವಿಸ್ತಾರವೆಂದೂ ಅನುಚಿತವೆಂದೂ ಎನ್ನಿಸಬಹುದು. ಆದರೆ ಈ ಸಂದರ್ಭದಲ್ಲಿ ಮನಸ್ಸಿಗೆ ತಂದುಕೊಳ್ಳಬೇಕಾದ ಕೆಲವು ಸಂಗತಿಗಳಿವೆ—

ಕಥಾಸರಿತ್ಸಾಗರದ ಕಥೆಯನ್ನು ನೋಡಿದರೆ (ತರಂಗ ೯೦), ಮೂಲದಲ್ಲಿಯೂ ಮಲಯವತೀ ಪ್ರಣಯ ವಿರಹಾದಿ ಶೃಂಗಾರಭಾಗದ ವಿಸ್ತಾರವಿದ್ದಂತೆ ಕಾಣುತ್ತದೆ. ಇದನ್ನು ಬಿಟ್ಟು ಮಿಕ್ಕ ಭಾಗವನ್ನು ವಿಸ್ತರಿಸುವುದು ಅಸಾಧ್ಯವೇನಾಗಿರಲಿಲ್ಲ. ಆದರೆ ಎಂಥ ವೈರಾಗ್ಯಪರನಾದರೂ ಪ್ರಿಯದರ್ಶಿಕಾ ರತ್ನಾವಳೀ ನಾಟಕಗಳನ್ನು ಬರೆದ ರಾಜನಿಗೆ ಈ ಅಂಶವನ್ನು ತ್ಯಾಗಮಾಡುವುದು ಸ್ವಲ್ಪ ಕಷ್ಟವೇಯೆ; ಆದ್ದರಿಂದ ‘ನಾಗಾನಂದ’ ದ ಆದಿಯಲ್ಲಿ ಬರುವ ನಾಂದಿಗಳೂ ನಾಟಿಕೆಯ ನಾಂದಿಗಳಂತೆ ಶೃಂಗಾರ ರಂಜಿತವಾಗಿದೆ. ಕಾಳಿದಾಸನು ‘ಮಾಳವಿಕಾಗ್ನಿಮಿತ್ರ’ ಕ್ಕೂ ಇಂಥ ನಾಂದಿಯನ್ನು ಸೇರಿಸಿಲ್ಲ. ಹರ್ಷನ ರಾಜ್ಯದಲ್ಲಿ ಶಾಂತಿ ಸುಭಿಕ್ಷಗಳಿದ್ದೂ ಪ್ರಜೆಗಳು ನಿಶ್ಚಿಂತೆಯಾಗಿಯೂ ಸುಖಾಸಕ್ತರಾಗಿಯೂ ಶೃಂಗಾರ ವಿನೋದಪ್ರಿಯರಾಗಿಯೂ ಇದ್ದದ್ದರಿಂದ ಅಂಥ ಸಾಮಾಜಿಕರ ತೃಪ್ತಿಯೂ ಒಂದು ಕಾರಣವಾಗಿರಬಹುದು. ಭಾಸ ಕಾಳಿದಾಸರ ಕಾಲಕ್ಕೂ ಹರ್ಷನ ಕಾಲಕ್ಕೂ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಬದಲಾಯಿಸಿ “ಶೃಂಗಾರ ಏವ ರಸಃ” ಎನ್ನುವ ಕಾಲ ಬರುತ್ತಿತ್ತು. ಆಗ ಬಾಣ ಸುಬಂಧುಗಳು ಆದರ್ಶರಾಗಿದ್ದರು. ಇದರಿಂದ ಕವಿಕಲಾದ್ಯಭಿರುಚಿಯಲ್ಲಿ ಕ್ಷಮ್ಯವೆನ್ನಬಹುದಾದ ಒಂದು ತರದ ಕೊರತೆಯನ್ನು ಹೇಳಿದಂತಾಯಿತು. ಆದರೆ ಇದು ಮುಂದೆ ಬರತಕ್ಕ ದಾನವೀರ ರಸಕ್ಕೂ ಜೀಮೂತವಾಹನ ಪಾತ್ರಕ್ಕೂ ಪೋಷಕವಾಗುವುದೆಂಬುದನ್ನು ಮರೆಯಬಾರದು. ಯೌವನವು ‘ನಿಂದ್ಯ’ ವೆನ್ನುತ್ತಾ, ವೈರಾಗ್ಯಪರನಾಗಿದ್ದು, ರಾಜ್ಯಕೋಶಗಳನ್ನು ತ್ಯಜಿಸಿ ಕಾಡಿನಲ್ಲಿ ಪಿತೃಶುಶ್ರೂಷೆ ಮಾಡಿಕೊಂಡಿದ್ದ ರಾಜಪುತ್ರನು (ಪೂರ್ವಜನ್ಮ ಸಂಸ್ಕಾರದಿಂದಲೋ ಎಂಬಂತೆ), ಮಲಯವತಿಯಲ್ಲಿ ದುರ್ನಿವಾರವಾಗಿ ಆಸಕ್ತನಾಗುವನು; ಪ್ರಣಯಪಥದಲ್ಲಿ ಅಡ್ಡಿಬಂದು, ತನ್ನ ಪ್ರಿಯೆಯನ್ನು ತಾನು ವರಿಸಿಯೇನೇ ಎಂದು ಹಂಬಲಿಸಿ ಕೊನೆಗೆ ಅವಳನ್ನು ಪಡೆಯುವನು. ತನ್ನ ಮದುವೆಗೆ ಬಂದಿದ್ದ ಸಿದ್ಧವಿದ್ಯಾಧರ ನೆಂಟರಿಷ್ಟರು ತನ್ನ ಸುತ್ತ ಸ್ವೇಚ್ಛೆಯಾಗಿ ಪಾನವಿನೋದಾದಿಗಳಿಂದ ಸಂಭ್ರಮಪಡುತ್ತಿರುವಾಗ, ಮದುವಣಿಗನು ಕುಸುಮಾಕರೋದ್ಯಾನದಲ್ಲಿ ತಾನು ಮೆಚ್ಚಿ ಮದುವೆಯಾದ ಮೋಹದ ಹೆಂಡತಿಯೊಡನೆ ಏಕಾಂತದಲ್ಲಿದ್ದು, ಮಿತ್ರಾವಸು ಬಂದು ಕರೆಯಲು ಹಾಗಿಂದ ಹಾಗೆಯೇ ಹೊರಟುಹೋಗುವನು; ಮದುವೆಯಾಗಿ ಇನ್ನೂ ಹತ್ತು ದಿನಗಳೂ ಕೂಡ ಆಗಿಲ್ಲದೆ ಇದ್ದಾಗ ಅಂಥ ಹೆಂಡತಿಯ ಮಾತೂ ಯೋಚನೆಯೂ ಇಲ್ಲದೆ, ಪರೋಪಕಾರವೇ ಪರಮಧರ್ಮವೆಂದು ಅವನು ತನ್ನ ದೇಹವನ್ನು ಈಡಾಡುವನು.—ಅದೂ ಅನಾಮಧೇಯನಾದ ಒಬ್ಬ ನಾಗನಿಗೆ.

ಜಿಮೂತವಾಹನನ ಗುಣಗಳು ಈ ಶ್ಲೋಕದಲ್ಲಿ ಪರಿಗಣಿತವಾಗಿವೆ—

ನಿರಾಧಾರಂ ಧೈರ್ಯಂ ಕಮಿವ ಶರಣಂ ಯಾಶು ವಿನಯಃ

ಕ್ಷಮಃ ಕ್ಷಾಂತಿ ಪೋಢುಂ ಕ ಇಹ ವಿರತಾ ದಾನಪರತಾ ।

ಹತಂ ಸತ್ಯಂ ಸತ್ಯಂ ವ್ರಜತು ಚಕೃಪಾ ಕ್ವಾದ್ಯ ಕೃಪಣಾ

ಜಗಜ್ಜಾತಂ ಶೂನ್ಯಂ ತ್ವಯಿ ತನಯ ಲೋಕಾಂತರಗತೇ ॥ (V.೩೦.)

ಅವನ ಈ ನಯ ವಿನಯ ಧೈರ್ಯೌದಾರ್ಯಾದಿ ಗುಣಗಳನ್ನು ಕವಿ ಚೆನ್ನಾಗಿ ಚಿತ್ರಿಸಿದ್ದಾನೆ; ನಾಟಕಾರಂಭದಲ್ಲಿ ಜೀಮೂತವಾಹನನು ವೃದ್ಧರಾದ ತಾಯಿ ತಂದೆಗಳ ಶುಶ್ರೂಷೆಗಾಗಿ ಕಾಡಿನಲ್ಲಿರುತ್ತಾನೆ; ಅದರ ಮುಂದೆ ಅವನಿಗೆ ರಾಜ್ಯ ಸುಖವೂ ಅಲ್ಲ; ಅದರಿಂದ ಬರಿಯ “ಆಯಾಸ” (I.೬) ಹೀಗೆಂದು ಅವನು ಪ್ರಜಾಸೌಖ್ಯವನ್ನು ಅಲಕ್ಷ್ಯಮಾಡಿರಲಿಲ್ಲ. ಅವರಿಗೆ ಕಲ್ಪವೃಕ್ಷವನ್ನೇ ದಾನಮಾಡಿದ್ದನು. (I. ೭) ಅವರು ಸುಖವಾಗಿರುವವರೆಗೂ ಮತಂಗ ಮುಂತಾದ ತನ್ನ ಶತ್ರುಗಳು ರಾಜ್ಯವನ್ನು ಆಕ್ರಮಿಸಿಕೊಂಡರೂ ಅವನೇನು ಅದಕ್ಕಾಗಿ ಚಿಂತಿಸುವಂತಿರಲಿಲ್ಲ; ಇನ್ನೂ ಸಂತೋಷವೇಯೆ;— ತನಗೆ ಭಾರ ತಪ್ಪಿತೆಂದಲ್ಲ; ರಾಜ್ಯಾಭಿಲಾಷೆಯುಳ್ಳ ಒಬ್ಬ ವ್ಯಕ್ತಿಗೆ ತನ್ನಿಂದ ರಾಜ್ಯ ದೊರಕಿ ತೃಪ್ತಿಯಾಗುವುದಲ್ಲಾ ಎಂದು ಅವನು ರಾಜ್ಯವನ್ನು ಮುತ್ತಿದನೆಂದು ಮಿತ್ರಾವಸುವು ಹಾರಾಡಲು ಅದರಿಂದ ಜೀಮೂತವಾಹನನು ಸ್ವಲ್ಪವೂ ಕದಲದೆ ಶಾಂತನಾಗಿದ್ದು ಅವನನ್ನು ಸಮಾಧಾನಗೊಳಿಸುವನು. ಔದಾರ್ಯವು ಅವನ ಹುಟ್ಟು ಗುಣ; ಅದು ಕೀರ್ತಿಪ್ರತಿಷ್ಠೆಗಳಿಗಾಗಿಯಲ್ಲ; ಪರರ ಕಷ್ಟ ಕೊರತೆಗಳನ್ನು ನೋಡಿ ಮರುಗಿ ಅವರನ್ನು ಸಂತೋಷ ಪಡಿಸುವುದಕ್ಕೋಸ್ಕರ. ಅದಕ್ಕಾಗಿ ಅವನು ತನ್ನ ಜೀವನವನ್ನು ಕೊಟ್ಟನು; ಹಿಂಧೆ ಮುಂದೆ ನೋಡದೆ ಬೇಡವೇಡವೆಂಧು ಅಡ್ಡಿಮಾಡಿದರೂ, ಒಬ್ಬ ಸಾಮಾನ್ಯ ನಾಗನಿಗಾಗಿ ಕೊಟ್ಟನು; ಚಿತ್ರಹಿಂಸೆಯನ್ನು ಅನುಭವಿಸಿ ಪ್ರಾಣಬಿಟ್ಟನು; ಕೊರಗಲಿಲ್ಲ, ನರಳಲಿಲ್ಲ; ಅಂಥ ಒಂದು ಅವಕಾಶವಿಲ್ಲವಲ್ಲಾ ಎಂದೇ ಸದಾ ಚಿಂತಿಸುತ್ತಿದ್ದನು. ‘ಅಪ್ರಾರ್ಥಿಕ ಲಭ್ಯವಿಭವವಾದ ಆ ವನದಲ್ಲಿ ಅವನಿಗೆ ಅದೊಂದೇ ದೋಷವಾಗಿ ಕಾಣುತ್ತಿತ್ತು. (IV.೨) ಅಂಥ ಅವಕಾಶ ದೊರೆತಾಗ ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ಅದು ತನ್ನ ಹೆಂಡತಿಯ, ತನ್ನ ತಾಯಿಯ ಪ್ರೇಮಕ್ಕಿಂತಲೂ ಹೆಚ್ಚು ಆನಂದದಾಯಕವಾಗಿತ್ತು (IV. ೨೩-೨೪). ಹೀಗೆ ನಿರ್ನಿಮಿತ್ತವಾಗಿ, ಕೇವಲ ದಯಾರ್ದ್ರ ಹೃದಯನಾಗಿ ಪ್ರಾಣ ಕೊಡುವುದಿರಲಿ, ರಾಜಧರ್ಮದಿಂದ ತನ್ನ ಪ್ರಜೆಯನ್ನು ತಾನು ರಕ್ಷಿಸುವುದಕ್ಕೆ ಮುಂದುವರಿಯಲಿಲ್ಲವೆಂದು ಆದಿಶೇಷನನ್ನು ದೂರುವನು. ‘ಅವನಿಗೆ ಬದಲಾಗಿ ನನ್ನನ್ನು ತಗೋ!’ ಎಂದು ಹೇಳುವುದಕ್ಕೆ ಒಂದು ನಾಲಗೆಯನ್ನು ಮುಂದೋರದೆ ಇದ್ದ ಮೇಲೆ ಅವನಿಗೆ ಎರಡು ಸಾವಿರ ನಾಲಗೆಗಳಿದ್ದೇನು ಫಲ ಎಂದು ಆಕ್ಷೇಪಿಸುವನು.

ಹೀಗೆ ಈ ನಾಟಕದಲ್ಲಿ ಕವಿ ದಯಾಮೂಲವಾದ ದಾನವೀರನನ್ನು ಪ್ರಧಾನವಾಗಿ ಚಿತ್ರಿಸಿದ್ದಾನೆ. ಶೃಂಗಾರ ಹಾಸ್ಯ ಕರುಣ ಅದ್ಭುತಗಳು ಅದಕ್ಕೆ ಅಂಗವಾಗಿವೆ; ಭಾಸನ ಕೈಗೆ ಸಿಕ್ಕಿದ್ದರೆ ಈ ನಾಟಕವು ‘ಕರ್ಣಭಾರ’ ದಂತೆ ಒಂದು ರುದ್ರನಾಟಕವಾಗಿ, ಆ ಭಾರತವೀರನಂತೆ ಈ ಬೌದ್ಧವೀರನೂ ಅತ್ಯೌದಾರ್ಯಕ್ಕೆ ಬಲಿ ಬೀಳುತ್ತಿದ್ದನೆಂದು ತೋರುತ್ತದೆ. ಆಗ ಕರುಣರಸವು ಪ್ರಧಾನವಾಗುತ್ತಿತ್ತು.

ಹರ್ಷನ ಇತರ ಕೃತಿಗಳಲ್ಲಿ ಕಂಡ ‘ಅಪೂರ್ವವಸ್ತುರಚನೆ’ ಇಲ್ಲಿಯೂ ಕಂಡುಬರುತ್ತದೆ. ಎರಡನೆಯ ಅಂಕದಲ್ಲಿ ಭ್ರಾಂತಿಮೂಲಕವಾಗಿ ನಾಯಕ ನಾಯಿಕೆಯರಿಗೆ ಆಗುವ ಕಲಹವು ಚಮತ್ಕಾರವಾಗಿದೆ. ಮೂರನೆಯ ಅಂಕದ ವಿನೋದವು ರಸವತ್ತಾದದ್ದೆಂದೂ ಚಮತ್ಕಾರಸೂಚಕವೆಂದೂ ಕೆಲವರಿಗೆ ತೋರಬಹುದು; ಇದರಲ್ಲಿ ರುಚಿಭೇದವನ್ನು ಒಪ್ಪಿಕೊಳ್ಳಬೇಕು. ಆದರೆ ನಾಲ್ಕನೆಯ ಅಂಕದಲ್ಲಿ ಜೀಮೂತವಾಹನನು ಮಿತ್ರಾವಸುವಿನೊಡನೆ ಸಮುದ್ರದ ಕರೆಯಲ್ಲಿ ಸಂಚರಿಸುತ್ತಿರುವನು; ಆಗ ಅವನಿಗೆ ಪರೋಪಕಾರಮಾಡಲು ಯಾರೂ ಅರ್ಥಿಗಳಿಲ್ಲವಲ್ಲಾ ಎನ್ನಿಸುವುದು; ಈ ಮನೋವೃತ್ತಿಯಿರುವಾಗಲೇ ಮುಂದೆ ಹಿಮವತ್ಪರ್ವತ ಶಿಖರದಂತೆ ಇದ್ದ ನಾಗಗಳ ಮೂಳೆಗಳ ರಾಶಿ ಕಂಡು, ಆದಿಶೇಷನು ರಕ್ಷಿಸಲಾರದೆ ಬಹುಕಾಲದಿಂದ ನಾಗಗಳು ನಿತ್ಯವೂ ಗರುಡನಿಗೆ ಬಲಿಯಾಗಿ ಬೀಳುತ್ತಿರುವ ಸಂಗತಿ ತಿಳಿಯುವುದು; ಆಗ ಅವನು “ನನ್ನ ದೇಹವನ್ನು ಗರುಡನಿಗೆ ಕೊಟ್ಟು ಯಾವುದಾದರೂ ಒಂದು ನಾಗನನ್ನು ಬದುಕಿಸುವುದಕ್ಕೆ ನನ್ನಿಂದ ಆದೀತೆ?” ಎಂದುಕೊಳ್ಳುವನು. ಜೊತೆಯಲ್ಲಿದ್ದ ಮಿತ್ರಾವಸುವು ತಂದೆ ಹೇಳಿಕಳುಹಿಸಲಾಗಿ ಹೊರಟುಹೋಗುವನು; ಹೀಗೆ ಒಬ್ಬನೇ ತಿರುಗಾಡುತ್ತಿದ್ದಾಗ ಶಂಖಚೂಡನ ತಾಯಿಯ ಅಳುವು ಕೇಳಿಸುವುದು; ಅವಳು ಅನಾಥೆಯಾದ ಮುದುಕಿ; ಅವಳಿಗೆ ಒಬ್ಬನೇ ಮಗ; ಅವನು ಗರುಡನಿಗೆ ಆಹಾರವಾಗಬೇಕೆಂಬುದು “ರಾಜಾಜ್ಞೆ”. ಆದ್ದರಿಂದ ತನ್ನ ಮಗನು ಹೋಗುವನೆಂದೂ ಅವನನ್ನು ಯಾರೂ ಕಾಪಾಡಲಾರರೆಂದೂ ಅವಳು ಗೋಳಾಡುವಳು. ಅವನಿಗೆ ಬದಲಾಗಿ ಜೀಮೂತವಾಹನನು ತನ್ನ ಜೀವವನ್ನು ಕೊಡುತ್ತೇನೆಂದು ಹೋದರೆ ಅವನೂ ಒಪ್ಪನು, ಅವಳೂ ಒಪ್ಪಳು! ತರ್ಕವಿತರ್ಕವೊಂದೂ ಉಪಯೋಗಕ್ಕೆ ಬರುವುದಿಲ್ಲ. ಹೀಗೆ ಶಂಖಚೂಡನು ಬಲಿಯಾಗುವುದಕ್ಕೆ ಸಿದ್ಧನಾಗಿ ಅದಕ್ಕೆ ಮುಂಚೆ ಹತ್ತಿರದಲ್ಲಿದ್ದ ಗೋಕರ್ಣೇಶ್ವರನ ದರ್ಶನಮಾಡಿಕೊಂಡು ಬರುವುದಕ್ಕೆಂದು ಹೋಗುವನು. ಆ ಸಮಯಕ್ಕೆ ಸರಿಯಾಗಿ ಕಂಚುಕಿ ಜೀಮೂತವಾಹನನನ್ನು ಹುಡುಕಿಕೊಂಡು ಬಂದು ರಕ್ತವರ್ಣದ ಸಂಕಲಿಕೆ ಪಂಚೆಯನ್ನು ತಂದುಕೊಡುವನು; ರಕ್ತವಸ್ತ್ರವು ಶಂಖಚೂಡನ ವಧ್ಯಚಿಹ್ನೆಯಾಗಿದ್ದರಿಂದ ಜೀಮೂತವಾಹನನಿಗೆ ತಾನು ಬಲಿಯಾಗಲು ಒಂದು ಒಳ್ಳೆಯ ಸಾಧನವು ದೊದರೆತಂತಾಯಿತು. ಅದರಿಂದ ಅವನಿಗೆ ಎಷ್ಟು ಸಂತೋಷವಾಯಿತೆಂದರೆ “ಮಲಯವತಿಯನ್ನು ಮದುವೆಯಾದದ್ದು ಈಗ ಸಾರ್ಥಕವಾಯಿತು!” ಎನ್ನುವನು. ಅಷ್ಟು ಹೊತ್ತಿಗೆ ಗರುಡನು ಬರಲು ಜೀಮೂತವಾಹನನು ತನ್ನ ಸಂಕಲಿಕೆಯ ರಕ್ತವಸ್ತ್ರವನ್ನು ಹೊದ್ದುಕೊಂಡು ವಧ್ಯಯಶಿಲೆಯನ್ನು ಏರಿ ಕುಳಿತುಕೊಳ್ಳುವನು. ಅವನನ್ನು ಗರುಡನು ಬೆಟ್ಟದ ಕೋಡುಗಲ್ಲಿಗೆ ಹೊತ್ತುಕೊಂಡು ಹೋಗುವನು. ಇದು ಚೂಡಾಮಣಿಯ ಸಹಾಯದಿಂದಲೂ, ರಕ್ತದ ತೊಟ್ಟುಗಳಿಂದಲೂ ಶಂಖಚೂಡಾದಿಗಳಿಗೆ ತಿಳಿಯುವುದು. ಈ ಸಂವಿಧಾನವು ಬುದ್ಧಿವಂತಿಕೆಯಿಂದ ರಚಿತವಾಗಿದೆ. ಕೊನೆಯಲ್ಲಿ, ಗೌರಿಯ ಕಮಂಡಲೋದಕ ಗರುಡನ ಅಮೃತವರ್ಷ ಇವೆರಡರೊಳಗೆ ಯಾವುದಾದರೂ ಒಂದನ್ನು ಉಳಿಸಬಹುದಾಗಿತ್ತು. ಆದರೆ ಈ ಅಂಶಗಳಲ್ಲಿ ಕವಿ ಮೂಲವೃತ್ತಾಂತವನ್ನು ಅವಲಂಬಿಸಿರುವಂತೆ ತೋರುತ್ತದೆ. ಇವುಗಳಿಂದ ನಾಟಕವು ಸಂತೋಷದಲ್ಲಿ ಮುಗಿಯುತ್ತದೆ.

ಹರ್ಷನು ಸನ್ನಿವೇಶ ಕಲ್ಪನಾದಿಗಳಲ್ಲಿ, ತಿಳಿಯದೆಯೋ ತಿಳಿದೋ, ಭಾಸ ಕಾಳಿದಾಸರ ಕೃತಿಗಳನ್ನು ಅನುಸರಿಸಿದ್ದಾನೆಂದು ಹಿಂದೆ ಅಲ್ಲಲ್ಲೇ ಸೂಚಿಸಿದೆ. ಭಾಷಾ ಶೈಲಿ ವರ್ಣನಾದಿಗಳಲ್ಲಿಯೂ ಇದನ್ನು ನೋಡಬಹುದು; ಅದೇ ರಸಾನುಗುಣವಾದ ಓಜಃ ಪ್ರಸಾದಾದಿಗಳು ಇಲ್ಲಿಯೂ ಕಂಡುಬರುತ್ತವೆ; ಆದರೆ ಕಾಳಿದಾಸನ ಕಾಲದಿಂದ ಆಗಲೇ ಮುನ್ನೂರು ನಾನೂರು ವರ್ಷಗಳು ಕಳೆದು ಹೋಗಿ ಈಗ ಸುಬಂಧು ಬಾಣರು ಮೇಲ್ಪಂಕ್ತಿಗಳಾಗಿದ್ದದ್ದರಿಂದ ಅಲ್ಲಲ್ಲೇ ಕವಿಸಮಯದ ಪ್ರಾಬಲ್ಯವೂ ವಾಗ್ಜಾಲ ವೈಚಿತ್ರ್ಯವೂ ಅಲಂಕಾರಪ್ರಿಯತೆಯೂ ಕಂಡುಬರುತ್ತವೆ. ಒಟ್ಟಿನ ಮೇಲೆ ಶೈಲಿಯಲ್ಲಿ ಸ್ವಪ್ನವಾಸವದತ್ತ ಶಾಕುಂತಲಗಳ ಸೌಲಭ್ಯವಿದೆ, ಸರಳತೆಯಿದೆ, ಮಾಧುರ್ಯವಿದೆ; ವೇಣೀಸಂಹಾರ ಚಂಡಕೌಶಿಕಗಳ ಕ್ಲಿಷ್ಟತೆಯಿಲ್ಲ, ಕೃತಕತೆಯಿಲ್ಲ, ಗಡುಸಿಲ್ಲ. ವರ್ಣನೆಗಳಲ್ಲಿಯೂ ಎರಡು ವಿಧವನ್ನು ನೋಡಬಹುದು; ಒಂದುಕಡೆ ಸ್ವಾನುಭವಭಾವಿತವಾದ, ನೈಸರ್ಗಿಕವಾದ, ಉದ್ಯಾನಸೌಂದರ್ಯಾದಿಗಳ ವರ್ಣನೆ, ಮತ್ತೊಂದು ಕಡೆ ಅನನುಭೂತವಾದ ಅಥವಾ ಕವಿಸಮಯಾನುಸಾರಿಯಾದ, ಬರಿಯ ಚಮತ್ಕಾರವಾಗಿ ಕಾಣುವ, ಸಾಗರ ಸ್ತ್ರೀಸೌಂದರ್ಯಾದಿಗಳ ವರ್ಣನೆ. ಇವು ಕೆಲವು ಉದಾಹರಣೆಗಳು—

‘ಪ್ರಿಯದರ್ಶಿಕಾ’—

೧. ಯುದ್ಧ.—*

ಪಾರಾನ್ನೀತ್ವಾ ಪತ್ತಿರೇವ ಪ್ರಥಮತರಮುರಃಪೆಷಾತ್ರೇಣ ಪಿಷ್ಟ್ವಾ

ದೂರಾನ್ನೀತ್ವಾ ಶರೌಘೈರ್ಹರಿಣಕುಲಮಿವ ತ್ರಸ್ತಮಶ್ವೀಯಮಾಶಾಃ ।

ಸರ್ವತ್ರೋತ್ಸೃಷ್ಟ ಸರ್ವಪ್ರಹರಣನಿವಹಸ್ತೂರ್ಣಮುತ್ಖಾಯ ಖಡ್ಗಂ

ಪಷ್ಚಾತ್ಕರ್ತುಂ ಪ್ರವೃತಃ ಕರಿಕರಕದಲೀಕಾನನಚ್ಛೇದಲೀಲಾಂ ॥ (I. ೯)

೨. ಉದ್ಯಾನ.—

ಅವಿರತಪತದ್ವಿವಿಧಕುಸುಮಸುಕುಮಾರಶಿಲಾತಲೋತ್ಸಂಗಸ್ಯ ಪರಿಮಲನಿಲೀ ನಮಧುಕರಭರಭಗ್ನಬಕುಲಮಾಲತೀಲತಾಜಾಲಕಸ್ಯ ಕಮಲಗಂಧಗ್ರಹಣೋದ್ದಾಮ ಮಾರುತಪರ್ಯವಬುದ್ಧ ಬಂಧೂಕಬಂಧನಸ್ಯ ಅವಿರಲತಮಾಲತರುಪಿಹಿತಾತಪಪ್ರಕಾಶಸ್ಯಾಸ್ಯಧಾರಾಗೃಹೋದ್ಯಾನಸ್ಯ ಸಶ್ರೀಕತಾಂ (II).

೩. ಪ್ರೇಕ್ಷಾಗೃಹ.—

-ಆಭಾತಿ ರತ್ನಶತಶೋಭಿತ ಶಾತಕುಂಭ

ಸ್ತಂಭಾವಸಕ್ತ ಪೃಥುಮೌಕ್ತಿಕದಾಮ ರಮ್ಯಂ ।

ಅಧ್ಯಾಸಿತಂ ಯುವತಿಭಿರ್ವಿಜಿತಾಪ್ಸರೋಭಿಃ

ಪ್ರೇಕ್ಷಾಗೃಹಂ ಸುರವಿಮಾನಸಮಾನಮೇತತ್ ॥ (III ೨) ‘ರತ್ನಾವಳೀ’

೪. ಸಾಗರಿಕೆಯ ಸೌಂದರ್ಯ.— -

ವಿಧಾಯಾಪೂರ್ವಪೂರ್ಣೇಂದುಮಸ್ಯಾ ಮುಖಮಭೂದ್ಧ್ರುವಂ ।

ಧಾತಾ ನಿಜಾಸನಾಂಭೋಜವಿನಿಮೀಲನ ದುಃಸ್ಥಿತಃ ॥ II. ೯)

೫. ಚಂದ್ರೋದಯ—

ಕಿಂ ಪದ್ಮಸ್ಯ ರುಚಿಂನ ಹಂತಿ ನಯನಾನಂದಂ ವಿಧತ್ತೇ ನ ಕಿಂ

ವೃದ್ಧಿಂ ಪಾ ಝಷಕೇತನಸ್ಯ ಕುರುತೇ ನಾಲೋಕಮಾತ್ರೇಣ ಕಿಂ ।

ವಕ್ತ್ರೇಂದೌ ತವ ಸತ್ಯಯಂ ಯದಪರಃ ಶೀತಾಂಶುರುಜ್ಜೃಂಭತೇ

ದರ್ಪಸ್ಸ್ಯಾದಮೃತೇನ ಚೇದಿಹ ತದಪ್ಯಸ್ತ್ಯೇವ ಬಿಂಬಾಧರೇ ॥ (III. ೧೩)

೬. ಪ್ರಿಯಾಸ್ಪರ್ಶ.—

ವ್ಯಕ್ತಂ ಲಗ್ನೋಪಿ ಭವತೀಂ ನ ಧಕ್ಷ್ಯತಿ ಹುತಾಶನಃ ।

ಯತಃ ಸಂತಾಪಮೇವಾಯಂ ಸ್ಪರ್ಶಸ್ತೇ ಹರತಿ ಪ್ರಿಯೇ । (IV.೧೮) ‘ನಾಗಾನಂದ’

೭. ವಿರಹಿಯ ಧೈರ್ಯ.—

ನೀತಾಃ ಕಿಂ ನ ನಿಶಾಃ ಶಶಾಂಕಧವಳಾ ನಾಘ್ರಾತಮಿಂದೀವರಂ

ಕಿಂ ನೋನ್ಮೀಲಿತ ಮಾಲತೀ ಸುರಭಯಃ ಸೋಢಾಃ ಪ್ರದೋಷಾನಿಲಾಃ ।

ಝಂಕಾರಃ ಕಮಲಾಕರೇ ಮಧುಲಿಹಾಂ ಕಿಂ ವಾ ಮಯಾ ನ ಶ್ರುತೋ

ನಿರ್ವ್ಯಾಜಂ ವಿಧುರೇಷ್ಟಧೀರ ಇತಿ ಮಾಂ ಯೇನಾಭಿದತ್ತೇ ಭವಾನ್ (II. ೬)

೮. ಉದ್ಯಾನ ರಮಣೀಯತೆ.—,

ನಿಷ್ಯಂದಶ್ಚಂದನಾನಾಂ ಶಿಶಿರಯತಿ ಲತಾಮಂಡಪೇ ಕುಟ್ಟಿಮಾಂರ್ತಾ

ಶ್ರುತ್ವಾ ಧಾರಾಗೃಹಾಣಾಂ ಧ್ವನಿಮನುತನುತೇ ತಾಂಡವಂ ನೀಲಕಂಠಃ ।

ಯಂತ್ರೋನ್ಮುಕ್ತಶ್ಚ ವೇಗಾಚ್ಚಲತಿ ವಿಟಪಿನಾಂ ಪೂರಯನ್ನಾಲವಾರ್ಲಾ

ಆಪಾತೋತ್ಪೀಡ ಹೇಲಾಹತ ಕುಸುಮ ರಜಃ ಪಿಂಜರೋಯಂ ಜಲೌಘಃ ॥ (III.)

೯. ಸಮುದ್ರ

ಕವಲಿತಲವಂಗಪಲ್ಲವ ಕರಿಮರೋದ್ಗಾರಿಸುರಭಿಣಾ ಪಯಸಾ ।

ಏಷಾ ಸಮುದ್ರವೇಲಾ ರತ್ನದ್ಯುತಿರಂಜಿತಾ ಭಾತಿ ॥ (IV. ೪.)

ರತ್ನಾವಳಿಯನ್ನು ಕುರಿತು ಎಚ್.ಎಚ್. ವಿಲ್ಸನ್ ಅವರು ಮಾಡಿರುವ ವಿಮರ್ಶೆ

‘The Ratnavali’, considered also under a purely literary point of view, marks a change in the principles of dramatic composition, as well as in those of social organization. Besides the want of passion and the substitution of intrigue, it will be very evident that there is in it no poetic spirit, no gleam of inspiration scarce even enough to suggest a concert in the ideas. The only poetry of the play in fact is mechanical. The structure of the original language is eminently elegant, particularly in the Prakrit. This dialect appears to equal advantage in no other drama, although much more laboured in the Malathi Madhava. The Sanskrit style is also very smooth and beautiful without being painfully elaborate. The play, is indeed, especially interesting on this account that whilst both in thought and expression there is little fire or genius, a generally correct and delicate taste regulates the composition, and avoids those absurdities which writers of more pretension than judgement, the writers of more recent periods invariably commit. ‘The Ratnavali’ in short may be taken as one of the connecting links between the old and the new school; as a not unpleasing production of that middle region, through which Hindu poetry passed from elevation to extravagance…It is chiefly valuable as a picture of Hindu manners in a sphere of life secluded from common observation and at a period of some antiquity. The manners depictured are not influenced by lofty principle or profound reflection, but they are mild, affectionate and elegant….

The story is romantic, the incidents are well contrived, the situations are eminently dramatic, and although the spectator is let into the secret of the plot from the beginning, the interest is very successfully maintained. The intrigue corresponds perfectly with the definition given by Schlegel; it is the union of unexpected combinations, resulting from the contending operation of accidental occurrences and premeditated designs.

In the circumscribed limits of the action, we have no right to expect much contrast or development of character, and it is enough that all the individuals introduced preserve their identity. This is true even of the chambermaids, and the obliging confidante of the heroine is distinguishable from the termagant adviser of the queen….

Select Specimens of the Theatre of the Hindus - by H.H. Wilson, (1835), Vol.II, pp. 258-259, 318.

ಪ್ರಮಾಣ ಲೇಖನಾವಳಿ

Nariman, Jackson and Ogden - Priyadarsika.

Itsing - A Record of the Buddhist Religion in India and the Malay Archipelago, translated by J. Takakusu.

M.L. Ettinghausen — Harsha Vardhana, Louvain, 1906.

G.P. Quackenbos — The Sanskrit Poems of Mayura, New York, 1917.

D.R. Bhandarkar —Lectures on the Ancient History of India, Calcutta, 1919, pp. 58-63. F.

Cimmino —O.C., XIII, Hamburg, 1902, 31 f.

Jackson —’ The Dramas of Harsha,’ J.A.O.S, 21, 88 f.

Lacote — J.A., 1919, 523 f.

T.S. Narayanasastsri —Sri Harsha the Dramatist, Madras, 1902.

S.P. Pandit —Gaudavaho, cvii, f. Buhler-Ind. Ant., 2, 127 f.

Weber —Indische Studien, 14, 407 f.

Pischel —G.G.A., 1883, 1235 f; 1891, 366 f.

K.M. Panikkar —Sri Harsha of Kanouj, 1922. Barnett-J.R.A.S., 1921, 589 f.

R.K. Mukherjee —Harsha (‘Rulers of India’ Series)

A. Yusuf Ali —’ The Caste of Harsha Vardhana,’ P.O.C., IV, 131 f.

S.V. Viswanatha — ‘A Short Note on Nagas,’ P.O.C., IV, 174 f.

C.S. Srinivasachari — ‘The Ancient Tamils and the Nagas’, P.O.C., IV, 175 f.

K.A. Padbye — ‘Buddhism as Depicted and Represented in Ancient Sanskrit Dramas’, P.O.C., VII.

V.A. Smith — ‘The Reign of Harsha from 606-648 A.D., in E.H.I., pp. 282-302.

Montgomery Schuyler —’ The Origin of the Vidushaka and the Employment of this Character in the Plays of Harsha Deva’, J.A.O.S., 20, 338 f.

C.K Venkataramayya — ‘ಹರ್ಷವರ್ಧನ’,

N.V. Kurdi — “ಶ್ರೀ ಹರ್ಷನ ನಾಟಕಗಳು’,

Ramasankar Tripathi — History of Kanouj, 1937 Nanigopala banarjee.c-Sriharsha the king Poet, I.H.Q., XII, 503f

ಕನ್ನಡ ಭಾಷಾಂತರಗಳು

ಪ್ರಿಯದರ್ಶಿಕಾ ನಾಟಿಕೆ —ನಂಜನಗೂಡು ಶ್ರೀಕಂಠಶಾಸ್ತ್ರೀ, ಮೈಸೂರು, ೧೯೦೫.

ಕರ್ಣಾಟಕ ರತ್ನಾವಳೀ ನಾಟಿಕೆ —ಬಸವಪ್ಪ ಶಾಸ್ತ್ರೀ, ಮೈಸೂರು; ೧೯೨೯. ಮೂಲದ ಪೂರ್ಣಭಾಷಾಂತರ ೧೯೩೫.

ರತ್ನಾವಳೀ ನಾಟಿಕೆ —ಸಿದ್ಧಾಂತಿ ಶಿವಶಂಕರ ಶಾಸ್ತ್ರೀ, ಮೈಸೂರು, ೧೮೯೯.

ಕರ್ಣಾಟಕ ನಾಗಾನಂದ ನಾಟಕಂ —ಗರಣಿ ವೈಯಾಕರಣ ಕೃಷ್ಣಾಚಾರ್ಯ, ಮದರಾಸು, ೧೮೯೯.

ಕರ್ಣಾಟಕ ನಾಗಾನಂದ ನಾಟಕಂ —ಅನಂತನಾರಾಯಣ ಶಾಸ್ತ್ರೀ, ಮೈಸೂರು, ೧೮೯೪.