೦೫ ವಿಶಾಖದತ್ತ

(ಕ್ರಿ.ಶ. ಸುಮಾರು ೪೫೦)

‘ಮುದ್ರರಾಕ್ಷಸ’ ದ ಪ್ರಸ್ತಾವನೆಯಿಂದ ವಿಶಾಖದತ್ತ ಕವಿ ಸಾಮಂತ ವಟೇಶ್ವರದತ್ತನ ಮೊಮ್ಮಗನೆಂದೂ ಮಹಾರಾಜ ಭಾಸ್ಕರದತ್ತನ (ಅಥವಾ ಪೃಥುವಿನ) ಮಗನೆಂದೂ ತಿಳಿದು ಬರುತ್ತದೆ. ಇವರು ಯಾರು, ಯಾವಾಗ, ಎಲ್ಲಿ ಇದ್ದರು ಎಂಬುದೊಂದು ನಿರ್ಧರವಾಗಿ ಗೊತ್ತಿಲ್ಲ.

ವಾರಾಹೀಮಾತ್ಮಯೋನೇಸ್ತನುಮವನವಿಧಾವಾಸ್ಥಿ ತಸ್ಯಾನುರೂಪಾಂ

ಯಸ್ಯ ಪ್ರಾಗ್ದಂತಕೋಟಂ ಪ್ರಲಯಪರಿಗತಾ ಶಿಶ್ರೀಯೇ ಭೂತಧಾತ್ರೀ ।

ಮ್ಲೇಚ್ಛೈರುದ್ವಿಜ್ಯಮಾನಾ ಭುಜಯುಗಮಧುನಾ ಸಂಶ್ರಿತಾ ರಾಜಮೂರ್ತೇಃ

ಸಶ್ಯ್ರೀಮದ್ಬಂಧುಭೃತ್ಯಶ್ಚಿರಮವತು ಮಹೀಂ ಪಾರ್ಥೀವಶ್ಚಂದ್ರಗುಪ್ತಃ ॥

ಎಂಬುದು ಈ ನಾಟಕದ ಭರತವಾಕ್ಯ. ಇದರಲ್ಲಿನ ‘ಮ್ಲೇಚ್ಛ’ ಶಬ್ದವು ಮಹಮ್ಮದ್ ಘೋರಿಯನ್ನು ನಿರ್ದೇಶಿಸುವುದೆಂದು ತಿಳಿದು ವಿಲ್ಸನ್ ಅವರು ಈ ನಾಟಕದ ಕಾಲವು ಸುಮಾರು ಹನ್ನೆರಡನೆಯ ಶತಮಾನವಿರಬಹುದೆಂದರು.* ಆದರೆ ಟೆಲಾಂಗರವರು ಅವರ ಮತವನ್ನು ಖಂಡಿಸಿ ಇದು ಎಂಟನೆಯ ಶತಮಾನದ ಆದಿಭಾಗದಲ್ಲಿ ರಚಿತವಾಗಿರಬಹುದೆಂದರು.* ಕೀತ್ ಪಂಡಿತನ ಮತಾನುಸಾರವಾಗಿ ಇದು ಒಂಬತ್ತನೆಯ ಶತಮಾನದಲ್ಲಿ ಇತ್ತು; ಆದರೆ ಇದಕ್ಕಿಂತಲೂ ಹಿಂದೆ ರಚಿತವಾಗಿದ್ದರೂ ಇರಬಹುದು.* ಏಳನೆಯ ಶತಮಾನದ ಆದಿಯಾಗಿರಬಹುದೆಂಬುದು ಸಿಲ್ವೇನ್ ಲೆವಿಯ ಮತ.* ಆದರೆ ಜಯಸ್ವಾಲ್ ಮುಂತಾದವರು ಮೇಲಿನ ಭರತವಾಕ್ಯದಲ್ಲಿ ಬರುವ ‘ಅಧುನಾ’ ‘ಚಂದ್ರಗುಪ್ತಃ’ ಎಂಬ ಮಾತುಗಳ ಆಧಾರದ ಮೇಲೆ ಇದು ಇಮ್ಮಡಿ ಚಂದ್ರಗುಪ್ತನ ಕಾಲದಲ್ಲಿ ರಚಿತವಾಗಿರಬಹುದೆಂದು ಅಭಿಪ್ರಾಯಪಡುತ್ತಾರೆ.* ಇದು ನಿರ್ವಿವಾದವಾಗಿಲ್ಲದಿದ್ದರೂ ಸಂಭವವೆಂಬುದು ಬಹುಜನ ವಿದ್ವಾಂಸರ ಮತವಾಗಿದೆ.*

ಈ ಮತಕ್ಕೆ ಸಾಧಕವಾದ ಮುಖ್ಯ ಅಂಶಗಳನ್ನು ಹೀಗೆ ಸಂಗ್ರಹಿಸಬಹುದು:— ‘ಮುದ್ರಾರಾಕ್ಷಸ’ ದಲ್ಲಿ ಬರುವ ಸುಗಾಂಗಪ್ರಾಸಾದ, ಪುಷ್ಪಚತ್ವರ, ಉಪವನ ಮುಂತಾದವುಗಳ ವರ್ಣನೆಯನ್ನು ಪರಿಶೀಲಿಸಿದರೆ ಕವಿಗೆ ಬಹುಶಃ ಈ ಭಾಗಗಳ ಪರಿಚಯವಿತ್ತೆಂದೂ, ಪಾಟಲೀಪುತ್ರನಗರವನ್ನು ಅವನು ನೋಡಿದ್ದನೆಂದೂ ಎನ್ನಿಸುತ್ತದೆ. ಈ ನಗರವು ಹುಯಾನ್ ತ್ಸಾಂಗನ ಕಾಲಕ್ಕೆ (ಕ್ರಿ.ಶ. ೬೨೯-೬೪೫) ಪಾಳಾಗಿತ್ತು. ಆದ್ದರಿಂದ ವಿಶಾಖದತ್ತನು ಈ ಕಾಲಕ್ಕೆ ಹಿಂದೆ ಇದ್ದಿರಬೇಕು. ಇದಕ್ಕೆ ಹಿಂದೆ ಪಾಟಲೀಪುತ್ರವು ಸುಸ್ಥಿತಿಯಲ್ಲಿದ್ದಾಗ ಆಳಿದವರು ಮೂವರು ಚಂದ್ರಗುಪ್ತರು- (೧) ಚಂದ್ರಗುಪ್ತಮೌರ್ಯ, (೨) ಮೊದಲನೆಯ ಚಂದ್ರಗುಪ್ತ, (೩) ಇಮ್ಮಡಿ ಚಂದ್ರಗುಪ್ತ. ಇವರಲ್ಲಿ ಭರತವಾಕ್ಯದಿಂದ ಮೌರ್ಯನು ನಿರ್ದಿಷ್ಟನಾಗಿರಲಾರನು. ಏಕೆಂದರೆ ಅವನ ಕಾಲದಲ್ಲಿ ಶಕಾದಿಗಳು (V, ೧೦) ಹಿಂದೂ ದೇಶಕ್ಕೆ ಬಂದಿರಲಿಲ್ಲ. ಮೊದಲನೆಯ ಚಂದ್ರಗುಪ್ತನು ಅಷ್ಟು ಪ್ರಸಿದ್ಧನಲ್ಲ. ಉಳಿದವನು ಇಮ್ಮಡಿ ಚಂದ್ರಗುಪ್ತ. ಇವನು ಉಕ್ತನಾಗಿದ್ದಾನೆನ್ನುವುದಕ್ಕೆ* ಇರುವ ಹಲವರ ಆಕ್ಷೇಪಣೆ— ಈ ನಾಟಕದಲ್ಲಿ ಮಲಯಕೇತುವಿನ ಹಿಂದ ಬರುವ ‘ಹೂಣರ’ ಪ್ರಸ್ತಾಪ; ಇವರು ಇಂಡಿಯಕ್ಕೆ ಇಮ್ಮಡಿ ಚಂದ್ರಗುಪ್ತನ ಆಳಿಕೆಯಲ್ಲಿ ಬಂದಿರಲಿಲ್ಲವೆಂಬುದು ಅವರ ಭಾವ; ಆದರೆ ಅವರು ಭರತಖಂಡವನ್ನು ಆಗ ಇನ್ನೂ ಮುತ್ತಿಲ್ಲದಿದ್ದರೂ ಅವರು ಅಪರಿಚಿತರಾಗಿರಲಿಲ್ಲ. ಲಲಿತ ವಿಸ್ತರದಲ್ಲಿ “ಹೂಣಲಿಪಿ” ಯ ಉಲ್ಲೇಖವಿದೆ; ಮಹಾಭಾರತದಲ್ಲಿಯೂ (I, ೧೮೬, ೩೩-೭) ಕಾಳಿದಾಸನ ರಘುವಂಶದಲ್ಲಿಯೂ (VI, ೬೮) ಅವರ ನಿರ್ದೇಶವಿದೆ. “ಆಗ ಪೀಡಿಸುತ್ತಿದ್ದ ಮ್ಲೇಚ್ಛ” ರು ಶಕರಾಗಿರಬಹುದು. ಚಂದ್ರಗುಪ್ತನು ತನ್ನ ಅಣ್ಣ ರಾಮಗುಪ್ತನ ಹೆಂಡತಿಯನ್ನು ಕಾಮಿಸಿದ ಶಕಾಧಿಪತಿಯನ್ನು ಕೊಂದನೆಂದು ದೇವೀಚಂದ್ರಗುಪ್ತ ಮುಂತಾದ ಪ್ರಮಾಣಗಳಿಂದ ತಿಳಿಯುತ್ತದೆ. ಈ ವೃತ್ತಾಂತವು “ಬಂಧು ಭೃತ್ಯಃ” ಎಂಬ ಮಾತಿಗೆ ಔಚಿತ್ಯವನ್ನು ಕೊಡುತ್ತದೆ.

ಈ ನಾಟಕದಲ್ಲಿ ಬರುವ ‘ಕಲ್ಯಾಣಕುಲ’, ‘ದೇವ’ ಎಂಬ ಪದಗಳೂ (IV, ೪) ‘ಶ್ರೀಮತ್’ ಎಂಬ ಪದವೂ ಈ ಚಂದ್ರಗುಪ್ತನಿಗೇ ಅನ್ವಯಿಸುವಂತೆ ತೋರುತ್ತದೆ.* ‘ಚಂದ್ರಗುಪ್ತಃ ಎಂಬುದಕ್ಕೆ ‘(ದಂ)ರಂತಿವರ್ಮಾ’ ‘(ಅ)ವಂತಿವರ್ಮಾ’ ಎಂಬ ಪಾಠಾಂತರಗಳಿವೆ.. ಇವುಗಳಲ್ಲಿ ‘ರಂತಿವರ್ಮಾ’ ಎಂಬುದು ‘ವಂತಿವರ್ಮಾ’ ಎಂಬುವರ ತಪ್ಪು ಪಾಠವಾಗಿ ಕಾಣುತ್ತವೆ; ಚರಿತ್ರೆಗೆ ಈ ಹೆಸರಿನ ರಾಜರು ಯಾರೂ ತಿಳಿದುಬಂದಿಲ್ಲ. ಇನ್ನು ‘ಅವಂತಿವರ್ಮ’ ನೆಂಬವರು ಇಬ್ಬರಿದ್ದಾರೆ. ಒಬ್ಬನು ಕಾಶ್ಮೀರ ರಾಜ (ಕ್ರಿ. ಶ ೮೬೬-೮೩) ಇನ್ನೊಬ್ಬನು ಹರ್ಷನ ಬೀಗನಾದ ಮೌಖರಿ ರಾಜ (ಆರನೆಯ ಶತಮಾನದ ಕೊನೆ). ನಾಟಕವು ಇವನ ಕಾಲದ್ದಿರಬಹುದೆಂಬುದು ಕೆಲವರ ಮತ* ಇದನ್ನು ಒಪ್ಪಿಕೊಂಡರೆ ಹೂಣರು ಬಂದಿರಲಿಲ್ಲವೆಂಬ ಆಕ್ಷೇಪವೇನೋ ಇರುವುದಿಲ್ಲ; ಆದರೆ ‘ಚಂದ್ರಗುಪ್ತಃ’ ಎಂಬುದು ‘ವಂತಿವರ್ಮಾ’ ಎಂದು ಸುಲಭವಾಗಿ ವ್ಯತ್ಯಾಸವಾಗಲಾರದು; ಅದನ್ನು ಯಾರೋ ಪ್ರಯತ್ನಪೂರ್ವಕವಾಗಿ ಬದಲಾಯಿಸಿರಬೇಕು; ಅದೂ ಇರುವುದು ಒಂದು ಪ್ರತಿಯಲ್ಲಿ; ಅದನ್ನು ಹಿಲ್ಲೆಬ್ರಾಂಟ್ ಮುಂತಾದ ವಿದ್ವಾಂಸರು ತಿರಸ್ಕರಿಸಿದ್ದಾರೆ; ಆದ್ದರಿಂದ ‘ಚಂದ್ರಗುಪ್ತಃ’ ಎಂಬುದೇ ಮೂಲಪಾಠವಾಗಿರಬೇಕು; ಅವಂತಿವರ್ಮನ ಕಾಲದಲ್ಲಿ ಈ ನಾಟಕವನ್ನು ಆಡಿದವರು (ಅಧುನಾ) ‘ಈಗ’ ಎಂಬುದರೊಡನೆ ಹೊಂದುವಂತೆ ಅದನ್ನು ತಮ್ಮ ರಾಜನ ಹೆಸರಾಗಿ ತಿದ್ದಿಕೊಂಡಿರಬೇಕು.*

ಪ್ರಸ್ತಾವನೆಯಲ್ಲಿ ಒಂದು ಚಂದ್ರಗ್ರಹಣದ ಪ್ರಸ್ತಾಪ ಬರುತ್ತದೆ. ಇದು ಕ್ರಿ.ಶ. ೨-೧೨-೮೬೦ ರಲ್ಲಿ ನಡೆಯಿತೆಂದು ಯಾಕೊಬಿ ಅವರೂ,* ಕ್ರಿ.ಶ. ೩೮೮ ಅಥವಾ ೩೯೭ರಲ್ಲಿ ನಡೆಯಿತೆಂದು ಡಾ ॥ ಎಸ್. ಶ್ರೀಕಂಠಶಾಸ್ತ್ರೀಗಳೂ* ಊಹಿಸುತ್ತಾರೆ. ನಾಟಕವೂ ಆಯಾ ಕಾಲದ್ದೆಂದೂ ಅವರ ಅಭಿಪ್ರಾಯ. ಆದರೆ ಗ್ರಹಣವು ನಡೆದದ್ದೋ ಕಲ್ಪಿತವೋ ಗೊತ್ತಿಲ್ಲ. (ನಾಟಕದಲ್ಲೇನೋ ಗ್ರಹಣವು ಆಸನ್ನವಾಗಿತ್ತೆಂದೂ ಆಗಲಿಲ್ಲವೆಂದೂ ಇದೆ). ಇದರ ಆಧಾರದ ಮೇಲೆ ಧೈರ್ಯವಾಗಿ ಕಾಲವನ್ನು ನಿಶ್ಚಯಿಸುವುದು ಹೇಗೆ?

ರಘುವಂಶ, ಕಿರಾತಾರ್ಜುನೀಯ, ವಕ್ರೋಕ್ತಿಪಂಚಾಶಿಕಾ, ಶಿಶುಪಾಲವಧ, ಮೃಚ್ಛಕಟಿಕ ಮುಂತಾದವುಗಳಿಗೂ ಮುದ್ರಾರಾಕ್ಷಸಕ್ಕೂ ಕೆಲವು ಅಂಶಗಳಲ್ಲಿ ಸಾದೃಶ್ಯವಿದೆ.* ಆದರೆ ಇದರಿಂದ ಏನನ್ನೂ ನಿಶ್ಚಯಿಸುವುದಕ್ಕಾಗುವುದಿಲ್ಲ. ಏಕೆಂದರೆ, ಇವುಗಳ ಕಾಲವು ನಿರ್ಧರವಾಗಿಲ್ಲ. ಆದ್ದರಿಂದ ಇವುಗಳಲ್ಲಿ ಯಾವುದು ಮೂಲವೋ ಯಾವುದು ಅನುಕರಣವೋ ಹೇಗೆ ಹೇಳುವುದು?

ಭಾಷಾಶೈಲಿ ಮುಂತದವುಗಳನ್ನು ಯಾವ ಗ್ರಂಥಕ್ಕೂ ಕಾಲನಿಶ್ಚಯಕ್ಕೆ ಪ್ರಮಾಣವಾಗಿ ಉಪಯೋಗಿಸುವುದು ಕ್ಷೇಮವಲ್ಲ. ಆದರೂ ಇಷ್ಟು ಹೇಳಬಹುದು:- ಮುದ್ರಾರಾಕ್ಷಸದ ಶೈಲಿಯಲ್ಲಿ ಋಜುತ್ವವೂ ಬಿಗುಪೂ ಇವೆ; ಆದರೆ ಜಟಿಲತ್ವವಿಲ್ಲ. ಈ ಜಟಿಲತೆ ಬರುವುದು ಬಾಣನಿಂದೀಚೆಗೆ, ಭಾಸ ಕಾಳಿದಾಸರಲ್ಲಿ ಇದು ಕಂಡುಬರುವುದಿಲ್ಲವೆಂಬುದೇ ಹೇಳಬೇಕು; ಶಾಕುಂತಲದ ಗದ್ಯವನ್ನೆಲ್ಲಾ ಹುಡುಕಿದರೂ ಸಮಾಸ ಜಟಿಲವಾದ ಒಂದು ವಾಕ್ಯ ಸಿಕ್ಕುವುದಿಲ್ಲ. ಆದ್ದರಿಂದಲೂ ವಿಶಾಖದತ್ತನು ಕಾಳಿದಾಸನ ಕಾಲದವನು ಅಥವಾ ಅವನಿಗಿಂತ ಸ್ವಲ್ಪ ಈಚಿನವನು ಎಂದು ಹೇಳಿದರೆ ಬಾಧಕವೇನೂ ಇರಲಾರದು.

ವಿಶಾಖದತ್ತನ ಕೃತಿಗಳಲ್ಲಿ ಈಗ ನಮಗೆ ಪೂರ್ತಿಯಾಗಿ ದೊರೆತಿರುವುದು ‘ಮದ್ರಾರಾಕ್ಷಸ’ ವೊಂದೇಯೆ. ಅವನು ‘ರಾಘವಾನಂದ’* ‘ದೇವೀ ಚಂದ್ರಗುಪ್ತ’ ಮತ್ತು ‘ಅಭಿಸಾರಿಕಾ ವಂಚಿತಕ’ ಎಂಬ ನಾಟಕಗಳನ್ನೂ ಬರೆದಿರುವಂತೆ ಭೋಜನ ಶೃಂಗಾರ ಪ್ರಕಾರದಿಂದ ತಿಳಿದುಬರುತ್ತದೆ. ಇವುಗಳಲ್ಲಿ ‘ದೇವೀಚಂದ್ರಗುಪ್ತ’ ದ ಕೆಲವು ಭಾಗಗಳು ಈಚೆಗೆ ದೊರೆತಿವೆ. ಮಿಕ್ಕ ನಾಟಕಗಳು ದೊರೆತಿಲ್ಲ.

‘ಮುದ್ರರಾಕ್ಷಸ’ ದ ಕಥೆ ಇದು—

[ನಂದವಿನಾಶಾನಂತರ ಅಮಾತ್ಯರಾಕ್ಷಸನು ಮಲಯಕೇತುವಿನಲ್ಲಿ ಸೇರಿಕೊಂಡು, ಅವನೊಡನೆ ಬಂದು ಚಂದ್ರಗುಪ್ತನನ್ನು ಮುತ್ತಬೇಕೆಂದು ಯತ್ನಿಸುತ್ತಿರುವನು. ಆ ರಾಕ್ಷಸನನ್ನು ಚಂದ್ರಗುಪ್ತನಲ್ಲಿ ಅಮಾತ್ಯನನ್ನಾಗಿ ತಂದು ನಿಲ್ಲಿಸಬೇಕೆಂಬುದು ಚಾಣಕ್ಯನ ಸಂಕಲ್ಪ. ಆದರೆ ನಂದಕುಲದ ಒಂದು ಕುಡಿ ಇದ್ದರೂ ಇದಕ್ಕೆ ರಾಕ್ಷಸನು ಒಪ್ಪುತ್ತಿರಲಿಲ್ಲ; ಆದ್ದರಿಂದ ಚಾಣಕ್ಯನು ಮೊದಲು ತಪೋವನದಲ್ಲಿದ್ದ ಸರ್ವಾರ್ಥಸಿದ್ಧಿಯನ್ನು ಕೊಲ್ಲಿಸಿದನು; ಗೂಢಾಚಾರರಿಂದ ವರ್ತಮಾನವನ್ನು ಸಂಗ್ರಹಿಸುತ್ತಿದ್ದನು.]

ನಿಪುಣಕನೆಂಬ ಗೂಢಚಾರನು ದೈವಿಕವಾಗಿ ದೊರೆತ ರಾಕ್ಷಸನ ಮುದ್ರೆಯುಂಗುರವನ್ನು ತಂದುಕೊಡಲು ಚಾಣಕ್ಯನು ಶಕಟದಾಸನಿಂದ ಹೆಸರು ಕುಲಗೋತ್ರಗಳಿಲ್ಲದ ಒಂದು ಕಾಗದವನ್ನು ಬರಸಿ ಅದಕ್ಕೆ ಈ ಉಂಗುರದಿಂದ ಮೊಹರುಮಾಡಿಸಿ ಅದನ್ನು ಸಿದ್ಧಾರ್ಥಕನಿಗೆ ಕೊಟ್ಟನು. ಶಕಟದಾಸನನ್ನು ಶೂಲಕ್ಕೇರಿಸುವಂತೆಯೂ ಆಗ ಅವನನ್ನು ಸಿದ್ಧಾರ್ಥಕನು ಬಿಡಿಸಿ ರಾಕ್ಷಸನಲ್ಲಿಗೆ ಕರೆದುಕೊಂಡು ಹೋಗುವಂತೆಯೂ ಏರ್ಪಡಿಸಿದನು; ಚಂದನದಾಸನನ್ನು ಕರಸಿ ಬಂಧನದಲ್ಲಿಡಿಸಿದನು. ಭದ್ರಭಟ ಮುಂತಾದ ಮಂತ್ರಿಗಳನ್ನು ಒಳಗೆ ಹಾಕಿಕೊಂಡು, ಅವರು ಅತೃಪ್ತರಾದವರ ಹಾಗೆ ಓಡಿಹೋಗಿ ರಾಕ್ಷಸನಲ್ಲಿ ಸೇರಿಕೊಳ್ಳುವಂತೆ ಏರ್ಪಡಿಸಿದನು.

ರಾಕ್ಷಸನು ಚಂದ್ರಗುಪ್ತನ ನಾಶಕ್ಕೆಂದು ಏರ್ಪಡಿಸಿದ್ದ ತಂತ್ರವೆಲ್ಲಾ ದೈವಯೋಗದಿಂದಲೂ ಚಾಣಕ್ಯನ ಬುದ್ಧಿಯಿಂದಲೂ ಹೊರಪಟ್ಟು ಪ್ರತಿಕೂಲವಾಗಿಯೇ ಪರಿಣಮಿಸಿತು; ವಿಷಕನ್ಯೆಯಿಂದ ಪರ್ವತರಾಜನು ಸತ್ತನು; ಅವಳನ್ನು ಕಳುಹಿಸಿದವನು ರಾಕ್ಷಸನೆಂಬ ಅಪಖ್ಯಾತಿ ಹರಡಿತು; ಅವಳನ್ನು ಕರೆತಂದವನೆಂದು ಜೀವಸಿದ್ಧಿ ದೇಶಚ್ಯುತನಾದನು. (ಅವನು ಚಾಣಕ್ಯನ ಮಿತ್ರನಾದ ಇಂದುಶರ್ಮ; ಆದರೆ ರಾಕ್ಷಸನ ಸ್ನೇಹಿತನಂತೆ ನಟಿಸುತ್ತಿದ್ದನು.) ಪರ್ವತನ ತಮ್ಮನಾದ ವೈರೋಚಕ, ಸೂತ್ರಧಾರನಾದ ಧಾರುವರ್ಮ, ಮಾವಟಿಗನಾದ ಬರ್ಬರಕ, ವೈದ್ಯನಾದ ಅಭಯದತ್ತ, ಮಲಗುವ ಮನೆಯಲ್ಲಿದ್ದ ಪ್ರಮೋದಕ ಎಲ್ಲರೂ ಹತರಾದರು. ಇಷ್ಟು ಹೊತ್ತಿಗೆ ಸಿದ್ಧಾರ್ಥಕನು ಶಕಟದಾಸನನ್ನು ಶೂಲದಿಂದ ತಪ್ಪಿಸಿ ಕರೆತಂದು ರಾಕ್ಷಸನಿಗೆ ಒಪ್ಪಿಸಲು ಅವನು ಸಂತೋಷದಿಂದ ತಾನು ಧರಿಸಿದ್ದ ಒಡವೆಗಳನ್ನು ಕೊಡುವನು. ಸಿದ್ಧಾರ್ಥಕನು ತಾನು ತಂದಿದ್ದ ರಾಕ್ಷಸನ ಮುದ್ರೆಯುಂಗುರವನ್ನು ಅವನಿಗೆ ಕೊಟ್ಟು ಒಡವೆಗಳ ಪೆಟ್ಟಿಗೆಯನ್ನು ಅದರಿಂದ ಮೊಹರುಮಾಡಿ ಅದನ್ನು ಅಲ್ಲಿಯೇ ಇಟ್ಟಿರುವಂತಗೆ ಕೆಳಿಕೊಂಡನು. ರಾಕ್ಷಸನು ಅದನ್ನು ಶಕಟದಾಸನಿಗಿತ್ತು ಸಿದ್ಧಾರ್ಥಕನನ್ನು ತನ್ನ ಹತ್ತಿರವೇ ನಿಲ್ಲಿಸಿಕೊಂಡನು. ಚಾಣಕ್ಯನಿಂದ ಪ್ರೇರಿತರಾಗಿದ್ದ ಬ್ರಾಹ್ಮಣರು ವರ್ತಕವೇಷದಿಂದ ಪರ್ವತರಾಜನ ಆಭರಣಗಳನ್ನು ತಂದು ರಾಕ್ಷಸನಿಗೆ ಮಾರುವರು.

ಚಾಣಕ್ಯ ಚಂದ್ರಗುಪ್ತರು ಕಪಟ ವ್ಯಾಜ್ಯಮಾಡುವರು; ಆಗ ಸ್ತನಕಲಶನು ಉದ್ವೇಜಕವಾದ ಮಾತಿನಿಂದ ರಾಜನನ್ನು ಹೊಗಳಲು ಚಾಣಕ್ಯನು ಅದು ರಾಕ್ಷಸ ತಂತ್ರವೆಂದರಿತು ಜಗಳವನ್ನು ಹೆಚ್ಚಿಸುವನು. ಚಂದ್ರಗುಪ್ತನು ರಾಕ್ಷಸನನ್ನು ಹೊಗಳಿ ಚಾಣಕ್ಯನನ್ನು ಅಲ್ಲಗಳೆಯಲು, ಚಾಣಕ್ಯನು ಕೋಪಗೊಂಡವನಂತೆ ಅಮಾತ್ಯಾಧಿಕಾರವನ್ನು ತೊರೆಯುವನು. ರಾಕ್ಷಸನು ಕುಸುಮಪುರದ ವೃತ್ತಾಂತವನ್ನು ಕೇಳುತ್ತಿದ್ದನು. ಅವನನ್ನು ನೋಡಬೇಕೆಂದು ಮಲಯಕೇತುವು ಭಾಗುರಾಯಣನೊಡನೆ ಬರುವನು. ಭಾಗುರಾಯಣನು ಭದ್ರಭಟ ರಾಕ್ಷಸ ಮುಂತಾದವರ ಮಾತಿಗೆ ಅಪಾರ್ಥಮಾಡಲು, ಮಲಯಕೇತುವು ರಾಕ್ಷಸನಿಗೆ ಚಂದ್ರಗುಪ್ತನಲ್ಲಿ ಭಕ್ತಿಯಿತ್ತೆಂದು ಭ್ರಮಿಸುವನು. ಚಾಣಕ್ಯ ಚಂದ್ರಗುಪ್ತರಿಗೆ ಜಗಳ ಹುಟ್ಟಿತೆಂದು ನಂಬಿ ರಾಕ್ಷಸನು ಅವರ ಮೇಲೆ ದಂಡೆತ್ತಿ ಹೋಗಲು ಸಿದ್ಧಗೊಳಿಸುವನು.

ಜೀವಸಿದ್ಧಿ ಉಂಡಿಗೆಯನ್ನು ತೆಗೆದುಕೊಳ್ಳುವುದಕ್ಕೆಂದು ಭಾಗುರಾಯಣನ ಹತ್ತಿರಕ್ಕೆ ಬಂದು ಅಲ್ಲಿದ್ದ ಮಲಯಕೇತು ಕೇಳುವ ಹಾಗೆ ರಾಕ್ಷಸನೇ ವಿಷಕನ್ಯೆಯಿಂದ ಪರ್ವತರಾಜನನ್ನು ಕೊಲ್ಲಿಸಿದನೆಂದು ಹೇಳುವನು. ಸಿದ್ಧಾರ್ಥಕನು ಹಿಂದೆ ಹೆಸರು ಕುಲಗೋತ್ರಗಳಿಲ್ಲದೆ ಶಕಟದಾಸನಿಂದ ಬರೆಸಿದ ಕಾಗದವನ್ನೂ, ರಾಕ್ಷಸನ ಮುದ್ರಿಕೆಯಿಂದ ಮೊಹರು ಮಾಡಿಸಿದ್ದ ಆಭರಣಗಳ ಪೆಟ್ಟಿಗೆಯನ್ನೂ ತೆಗೆದುಕೊಂಡು ಹೋಗುತ್ತ ಬೇಕೆಂದು ಸಿಕ್ಕಿಬಿದ್ದು, ಮಲಯಕೇತುವಿಗೆ ಅದೆಲ್ಲಾ ರಾಕ್ಷಸನ ಉಪಾಯವೆಂದೂ ಅವನು ಮತ್ತು ಚಿತ್ರವರ್ಮಾದಿ ರಾಜರು ಚಂದ್ರಗುಪ್ತನ ಪ್ರಸಾದಾಪೇಕ್ಷಿಗಳೆಂದೂ ತಿಳಿಸುವನು. ಮಲಯಕೇತು ಅಸಮಾಧಾನಗೊಂಡು ರಾಕ್ಷಸನನ್ನು ನೋಡಿ ಕೇಳಿದಾಗ, ಇದೆಲ್ಲಾ ಸುಳ್ಳೆಂದು ತೋರಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಮಲಯಕೇತು ರಾಕ್ಷಸನನ್ನು ಓಡಿಸಿ, ಚಿತ್ರವರ್ಮಾದಿಗಳನ್ನು ಕೊಲ್ಲಿಸುವನು.

ಮಿಕ್ಕ ಸಾಮಂತರು ಹೆದರಿ ಮಲಯಕೇತುವನ್ನು ತ್ಯಜಿಸಿ ಹಿಂತಿರುಗಿದರು. ಆಗ ಭದ್ರಭಟಾದಿಗಳು ಅವನನ್ನು ಸೆರೆಹಿಡಿದರು. ರಾಕ್ಷಸನು ಏನು ಮಾಡುವುದಕ್ಕೂ ತೋರದೆ ಹತ್ತಿರದಲ್ಲಿದ್ದ ಪಾಟಲೀಪುರದ ಉದ್ಯಾನಕ್ಕೆ ಬರಲು, ಅಲ್ಲಿ ಉದುಂಬರನು ನೇಣುಹಾಕಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದನು. ಅವನಿಂದ ಚಂದನದಾಸನು ವಧ್ಯಸ್ಥಾನದಲ್ಲಿದ್ದನೆಂದರಿತು ಅವನನ್ನು ಬಿಡಿಸಿಕೊಳ್ಳಲು ಶ್ಮಶಾನದ ಕಡೆಗೆ ಹೊರಟನು.

ರಾಕ್ಷಸನು ತನ್ನ ಮಿತ್ರನ ಸ್ಥಾನದಲ್ಲಿ ನಿಲ್ಲುವನು. ಚಾಣಕ್ಯನೂ ಚಂದ್ರಗುಪ್ತನೂ ಅವನನ್ನು ಕಂಡು ಮಂತ್ರಿಪದವಿಯನ್ನು ಸ್ವೀಕರಿಸುವಂತೆ ಪ್ರಾರ್ಥಿಸುವರು; ಚಂದನದಾಸನನ್ನು ಬದುಕಿಸಿಕೊಳ್ಳಲು ಅವನು ಅಧಿಕಾರವನ್ನು ಕೈಕೊಳ್ಳುವನು. ಮಲಯಕೇತುವಿಗೆ ತಂದೆಯ ರಾಜ್ಯ ಬರುವುದು; ಚಾಣಕ್ಯನು ತನ್ನ ಜುಟ್ಟನ್ನು ಕಟ್ಟುವನು.

ಚಂದ್ರಗುಪ್ತನ ಕಥೆ ಭಾಗವತ (x) ವಿಷ್ಣುಪುರಾಣ ಮುಂತಾದೆಡೆಗಳಲ್ಲಿ ಸಂಕ್ಷೇಪವಾಗಿ ದೊರೆಯುತ್ತದೆ. ಆದರೆ ಮುದ್ರಾರಾಕ್ಷಸಕ್ಕೆ ಮೂಲವು ಧನಿಕನು ಹೇಳುವಂತೆ ಬೃಹತ್ಕಥೆಯಾಗಿರಬಹುದು.* ಇದಲ್ಲದೆ ಮತ್ತಾವುದಾದರೂ ಚರಿತ್ರಗ್ರಂಥವಿತ್ತೆಂದು ಹೇಳಲು ಆಧಾರವಿಲ್ಲ; ಕಥೆಯ ತಿರುಳು ಚರಿತ್ರೆಯಲ್ಲಿ ನಡೆದದ್ದು; ಇದನ್ನು ಕವಿ ಕಲ್ಪನೆಯಿಂದ ಪುಷ್ಠಿಗೊಳಿಸಿಕೊಂಡಿದ್ದಾನೆಂಬುದರಲ್ಲಿ ಸಂದೇಹವಿಲ್ಲ; ಹೀಗೆ, ನಂದಸಂಹಾರ ಚಂದ್ರಗುಪ್ತ ಪ್ರತಿಷ್ಠೆ ರಾಕ್ಷಸಸಂಪಾದನೆಗಳು ಚರಿತ್ರಾಂಶಗಳು; ಚಾಣಕ್ಯ ಚಂದ್ರಗುಪ್ತರೂ ಪ್ರಾಯಶಃ ರಾಕ್ಷಸನೂ ಐತಿಹಾಸಿಕ ವ್ಯಕ್ತಿಗಳು; ನಿಪುಣಕ ಮುಂತಾದವರು ಕಲ್ಪಿತರು.

ವಸ್ತುಸ್ವರೂಪ, ಸನ್ನಿವೇಶರಚನೆ, ಪಾತ್ರಸೃಷ್ಟಿ ಮುಂತಾದ ಹಲವು ವಿಷಯಗಳಲ್ಲಿ ಮುದ್ರಾರಾಕ್ಷಸವು ಒಂದು ಅಪೂರ್ವ ಸ್ಥಾನವನ್ನು ಪಡೆದಿದೆ. ಮೇಲೆ ಹೇಳಿದಂತೆ ಇದರ ವಸ್ತು ಚರಿತ್ರೆ-ಚಾಣಕ್ಯತಂತ್ರ; ಕಾಮತಂತ್ರವಲ್ಲ; ನಾಟಕದ ಕೊನೆಯಲ್ಲಿ ಗೋಳಾಡುತ್ತ ಬರುವ ಹೆಂಗಸನ್ನು ಬಿಟ್ಟರೆ ಮತ್ತಾವ ಸ್ತ್ರೀಪಾತ್ರವೂ ಇಲ್ಲ. ಕಥೆಯ ಒಂದೊಂದು ಘಟನೆಯೂ ಅವಶ್ಯವಾಗಿದ್ದು, ಫಲಪ್ರಾಪ್ತಿಗೆ ಸಾಧಕವಾಗುತ್ತದೆ. ಇವೆಲ್ಲಕ್ಕಿಂತಲೂ ಮುಖ್ಯವಾದ ಅಂಶ ಚಾಣಕ್ಯ ರಾಕ್ಷಸರ ಸೃಷ್ಟಿ ಮತ್ತು ಅಭಿವ್ಯಕ್ತಿ.

ಚಾಣಕ್ಯನೆಂದರೆ ಅವನ ತಂತ್ರ. ಅದರ ಗುರಿ ರಾಕ್ಷಸ; ರಾಕ್ಷಸನನ್ನು ತಾನಾಗಿ ಬಂದು ಚಂದ್ರಗುಪ್ತನಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುವುದು. ಇದಕ್ಕಾಗಿ ಅವನು ಮುಖ್ಯವಾಗಿ ಭೇದೋಪಾಯವನ್ನು ಅನುಸರಿಸಿದ್ದಾನೆ. ಏಕೆಂದರೆ ಇತರ ಉಪಾಯಗಳು ಕಾರ್ಯಕಾರಿಯಾಗುತ್ತಿರಲಿಲ್ಲ. ಸಾಮದಿಂದ ರಾಕ್ಷಸನು ನಂದಭಕ್ತಿಯನ್ನು ಮೀರಿ ಚಂದ್ರಗುಪ್ತನನ್ನು ಎಂದಿಗೂ ಆಶ್ರಯಿಸುತ್ತಿರಲಿಲ್ಲ; ಅವನಿಗೆ ಐಶ್ವರ್ಯದ ಲೋಭವಿರಲಿಲ್ಲ; ಐಶ್ವರ್ಯ ಬೇಕಾಗಿದ್ದರೆ ಅದನ್ನು ಬೇರೆ ರೀತಿಯಿಂದ ಸಂಪಾದಿಸುವ ಸಾಮರ್ಥ್ಯ ಅವನಿಗಿತ್ತು; ದಂಡೋಪಾಯದಿಂದ ಅವನ ಪ್ರಾಣವು ಸಂಶಯಕ್ಕೀಡಾಗುತ್ತಿತ್ತು; ಅವನು ಬಲವಂತಕ್ಕೆ ಬಗ್ಗುವವನೂ ಆಗಿರಲಿಲ್ಲ. ಭೇದಕ್ಕಿಂತ ಯುದ್ಧಾದಿಗಳಲ್ಲಿ ಹೆಚ್ಚು ಪ್ರಾಣವಧೆಯಾಗುತ್ತಿತ್ತು. ಪ್ರಾಣಿವಧೆಯಿಂದ ರಕ್ತಪಾತ ಮಾಡುವುದಕ್ಕೆ ಚಾಣಕ್ಯನು ಹಿಂದೆಗೆಯುತ್ತಿದ್ದನೆಂದಲ್ಲ; ತನ್ನ ಕೆಲಸಕ್ಕೆ ಅತ್ಯಾವಶ್ಯಕವಾದರೆ ಪರ್ವತೇಶ್ವರನಂಥ ನಿರಪರಾಧಿ ರಾಜನೂ ಸರ್ವಾರ್ಥ ಸಿದ್ಧಿಯಂಥ ಅಸಹಾಯ ವೃದ್ಧನೂ ಬಲಿಬೀಳುತ್ತಿದ್ದರು; ಆದರೆ ಅವನು ಎಂದಿಗೂ ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುತ್ತಿರಲಿಲ್ಲ. ಹೀಗೆ ಚಾಣಕ್ಯನು ಯುದ್ಧದ ಕಷ್ಟನಷ್ಟಗಳನ್ನು ಅನುಭವಿಸದೆ ಕುಳಿತ ಕಡೆಯಿಂದಲೇ ಬಲೆ ಬೀಸಿ ರಾಕ್ಷಸನನ್ನು ಹಿಡಿದು ಜಯ ಸಂಪಾದಿಸಿದನೆಂದು ಹೇಳಬಹುದು. ಅವನ ನೀತಿಬೀಜವು ಸಣ್ಣದು; ಆದರೆ ಅದು ಬಹು ಫಲಗಳನ್ನು ಕೊಡುತ್ತಿತ್ತು.

ಭೇದೋಪಾಯದ ಸಾಧನೆಯಲ್ಲಿ ಮುಖ್ಯವಾಗಿ ಬೇಕಾದವು ಪ್ರಯೋಕ್ತೃವಿನ ಬುದ್ಧಿ, ಕಾರ್ಯನಿರ್ವಾಹದಲ್ಲಿನ ಗುಟ್ಟು. ಇವೆರಡೂ ಚಾಣಕ್ಯನಲ್ಲಿ ಅಪಾರವಾಗಿದ್ದವು. ಅವನದು ಬಹು ತೀಕ್ಷ್ಣಬುದ್ಧಿ; ಎಷ್ಟೋ ದಿನಗಳಿಂದ ಮಂತ್ರಿಕಾರ್ಯದಲ್ಲಿ ನುರುಗಿದ ರಾಕ್ಷಸನ ಬುದ್ಧಿಯೂ ಅದರ ಮುಂದೆ ಮಂಕಾಯಿತು. ಚಂದ್ರಗುಪ್ತನನ್ನು ಸಿಂಹಾಸನದಲ್ಲಿ ಕೂರಿಸುತ್ತಿದ್ದಹಾಗೆಯೇ ಅವನು ರಾಕ್ಷಸನ ಅವಶ್ಯಕತೆಯನ್ನು ನಿಶ್ಚಯಿಸಿದನು. ಅವನು ಹೊರಗಿದ್ದರೆ ಇಮ್ಮಡಿಯಾದ ನಷ್ಟವೆಂದೂ, ಒಳಕ್ಕೆ ಬಂದರೆ ಇಮ್ಮಡಿಯಾದ ಲಾಭವೆಂದೂ, ಅದರಿಂದಲೇ ಚಂದ್ರಗುಪ್ತನ ರಾಜ್ಯವು ಸ್ಥಿರವಾಗಿ ನಿಲ್ಲುವುದೆಂದೂ ಗ್ರಹಿಸಿದನು. ಅವನು ಮಂತ್ರಿಯಾಗಿ ಬಂದು ನಿಂತರೆ ತಾನು ನಿಶ್ಚಿಂತನಾಗಿ ತಪಸ್ಸಿಗೆ ಹೋಗಬಹುದಾಗಿತ್ತು; ಚಂದ್ರಗುಪ್ತನಿಗೆ ತನ್ನ ಹಾಗೆ ಕೇವಲ ಬುದ್ಧಿ ಧೈರ್ಯವಲ್ಲದೆ ಕ್ಷಾತ್ರಶೌರ್ಯವೂ ಉಳ್ಳ ಮಂತ್ರಿ ದೊರಕುವನೆಂಬುದನ್ನು ಅವನು ಅರಿತಿದ್ದನು. ಹೀಗೆ ಅವನು ತನ್ನ ಪ್ರಚಂಡ ಬುದ್ಧಿಯಿಂದ ಒಂದು ಉಪಾಯವನ್ನು ಹೂಡಿದನೆಂದರೆ ಅದು ನಿಷ್ಫಲವಾಗೋಣವೆಂದರೇನು? ಅವನ ಬುದ್ಧಿ ಯಾವುದನ್ನೂ ಇತರರಿಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ ಹೊಂಚುತ್ತಿತ್ತು, ಹವಣಿಸುತ್ತಿತ್ತು; ಆದರೆ ಯಾವುದಕ್ಕೂ ತಡಮಾಡುತ್ತಿರಲಿಲ್ಲ; ಮಿಂಚಿನ ವೇಗದಿಂದ ಪ್ರವಹಿಸುತ್ತಿತ್ತು; ಉಂಗುರ ಸಿಕ್ಕಿದ ಕೂಡಲೆ ಅವನು “ರಾಕ್ಷಸನನ್ನು ಗೆದ್ದೆ” ಎಂದುಕೊಳ್ಳುವುದೇ ಇದಕ್ಕೆ ಉದಾಹರಣೆ; ಆ ಕ್ಷಣವೇ ಅವನ ಮನಸ್ಸು ಅವನ ತಂತ್ರವನ್ನು ಕಲ್ಪಿಸಿ ಕೊನೆಮುಟ್ಟಿ ಫಲವನ್ನು ಗ್ರಹಿಸಿಕೊಂಡಿತು. ಒಂದು ಸಲ ಕಾರ್ಯವನ್ನು ಆರಂಭಿಸಿದನೆಂದರೆ ಅದನ್ನು ವಿಚಕ್ಷಣೆಯಿಂದಲೂ ವಿವೇಚನೆಯಿಂದಲೂ ನಡೆಸುತ್ತಿದ್ದನು; ಅದರ ನಿರ್ವಾಹದಲ್ಲಿ ಯಾವ ಲೋಪವೂ ಇರುತ್ತಿರಲಿಲ್ಲ. ಅದರ ಯಾವ ಭಾಗವನ್ನೂ ಅಲಕ್ಷ್ಯಮಾಡುತ್ತಿರಲಿಲ್ಲ; ಹೀಗೆ ರಾಕ್ಷಸನನ್ನು ಸಂಪಾದಿಸಲು, ಅವನು ಮೊದಲು ಮಲಯಕೇತುವಿಗೂ ರಾಕ್ಷಸನಿಗೂ ಇದ್ದ ಸ್ನೇಹವನ್ನು ಒಡೆದನು; ರಾಕ್ಷಸನು ಪರ್ವತೇಶ್ವರನನ್ನು ಕೊಲ್ಲಿಸಿದನೆಂದೂ ಅವನು ಚಂದ್ರಗುಪ್ತಾಭಿಮಾನಿಯೆಂದೂ ಭಾಗುರಾಯಣಾದಿಗಳಿಂದ ತೋರ್ಪಡಿಸಿ ಅವನನ್ನು ಅಲ್ಲಿಂದ ಹೊರಡಿಸಿದನು. ಅವರವರಿಗೆ ಜಗಳವು ಕುಸುಮಪುರದ ಹತ್ತಿರ ನಡೆದದ್ದರಿಂದ ರಾಕ್ಷಸನು ಸ್ವಾಭಾವಿಕವಾಗಿಯೂ ನಗರಾಭಿಮಾನದಿಂದಲೂ ಅಲ್ಲಿಗೇ ಬಂದನು; ಚಂದನದಾಸನ ಮರಣ ವೃತ್ತಾಂತದಿಂದ ಅವನನ್ನು ಹೊರಹೊರಡಿಸಿದನು; ಬರುವಾಗ ಉಪಾಯದಿಂದಲೇ ಕತ್ತಿಯನ್ನು ಬಿಸಾಡಿ ಬರಿಗೈಯಲ್ಲಿ ಬರುವಂತೆ ಮಾಡಿದನು; ಅಲ್ಲಿ ಅವನ ಬಾಯಿಂದಲೇ “ಮಂತ್ರಿಯ ಅಧಿಕಾರವನ್ನು ಒಪ್ಪಿಕೊಳ್ಳುತ್ತೇನೆ” ಎನ್ನಿಸಿದನು.

ಇಷ್ಟು ಬುದ್ಧಿ ಇದ್ದವನಾದ್ದರಿಂದಲೇ ಅವನು ಯಾವಾಗಲೂ ಎಚ್ಚರದಿಂದಿರುತ್ತಿದ್ದನು. ಅವನಿಗೆ ಮೈಯೆಲ್ಲಾ ಕಣ್ಣು; ಆದ್ದರಿಂದಲೇ ಅವನು ದಾರುವರ್ಮನ ಉತ್ತರದಿಂದಲೂ ಸ್ತನಕಲಶನ ಪದ್ಯದಿಂದಲೂ ಶತ್ರುಗಳ ತಂತ್ರವನ್ನು ಕೂಡಲೆ ಊಹಿಸಿಬಿಟ್ಟನು; ಚಂದ್ರಗುಪ್ತನ ನಾಶಕ್ಕಾಗಿ ರಾಕ್ಷಸನು ಏರ್ಪಡಿಸಿದ್ದ ತಂತ್ರಗಳನ್ನೆಲ್ಲಾ ತಿಳಿದು ಅವಕ್ಕೆ ಪ್ರತೀಕಾರಮಾಡಿದನು; ಶತ್ರುಗಳ ಯುಕ್ತಿಗಳು ಅವರ ಗಂಟಲಿಗೇ ಗಾಣವಾದುವು.

ಅವನ ಕೆಲಸಗಳೆಲ್ಲವೂ ಬಹುಮಟ್ಟಿಗೆ ಗೂಢಚಾರರಿಂದ, ವೇಷಧಾರಿಗಳಿಂದ ನಡೆದುವು. ಅವನ ನೀತಿ “ಅಶ್ರುತಗತಿ”. ಅದು ಅನೇಕ ವೇಳೆ ಅವನ ಗೂಢಚಾರರಿಗೇ ಆದ್ಯಂತವಾಗಿ ತಿಳಿಯುತ್ತಿರಲಿಲ್ಲ. ಆದರೂ ಎಲ್ಲೆಲ್ಲಿಯೂ ಅದರ ಪ್ರಭಾವ ಕಾಣುತ್ತಿತ್ತು; ಎಲ್ಲಿ ನೋಡಿದರೂ ಅವನ ಶಿಷ್ಯರು; ಎಲ್ಲಿ ನೋಡಿದರೂ ಅವನು ಹೂಡಿದ ಆಟಗಳು; ಎಲ್ಲಿ ನೋಡಿದರೂ ಅವರ ಕಣ್ಣು ಕೈಕಾಲುಗಳು. ಅವನ ಕಡೆಯ ಜನರು ಶತ್ರುಪಕ್ಷದ ಪ್ರತಿಯೊಂದು ವ್ಯಕ್ತಿಯನ್ನೂ ಬೆನ್ನಂಟಿದ್ದರು—ರಾಕ್ಷಸನಿಗೆ ಕ್ಷಪಣಕ, ಶಕಟದಾಸನಿಗೆ ಸಿದ್ಧಾರ್ಥಕ, ಮಲಯಕೇತುವಿಗೆ ಭಾಗುರಾಯಣ ಇತ್ಯಾದಿ; ಆದರೆ ಅವರಿಗೆ ಯಾರಿಗೂ ಸಂದೇಹ ಬರಲಿಲ್ಲ. ಇನ್ನು ತನ್ನ ಮರ್ಮವನ್ನಂತೂ ಅವನು ಯಾರಿಗೂ ಪೂರ್ತಿಯಾಗಿ ತಿಳಿಸಿದವನೇ ಅಲ್ಲ; ಅವನು ಮಹಾಗುಪ್ತ. ಅವನ ನಟನ ಚಾತುರ್ಯವು ಚಂದ್ರಗುಪ್ತನಿಗೂ ಆಶ್ಚರ್ಯವನ್ನುಂಟು ಮಾಡಿತು, ಭಯವನ್ನುಂಟುಮಾಡಿತು.

ಹೀಗೆ ಚಾಣಕ್ಯನು ಒಬ್ಬ ಪ್ರಚಂಡ ವ್ಯಕ್ತಿ; ಅವನ ಗೆಲುವಿನಿಂದ ನಮಗೆ ಸಂತೋಷವಾದರೂ, ಅವನ ನೈಪುಣ್ಯದಿಂದ ಆಶ್ಚರ್ಯವಾದರೂ, ಅವನ ಕೃತ್ಯದಿಂದ ಭಯವೂ ಆಗುತ್ತದೆ. ಆದರೆ ಅವನು ಕ್ರೂರನಲ್ಲ, ಸ್ವಾರ್ಥಪರನಲ್ಲ, ಉದಾರಿ, ಗುಣಪಕ್ಷಪಾತಿ, ವೈರಾಗ್ಯಶಾಲಿ; ತನ್ನ ಪ್ರತಿಪಕ್ಷಿಯಾದ ರಾಕ್ಷಸನ ಗುಣಗಳನ್ನು ಮೊದಲಿನಿಂದಲೂ ಗ್ರಹಿಸಿ ಮೆಚ್ಚಿ ಅವನನ್ನು ಹಿಂದೂ ಮುಂದೂ ಬಾಯಿತುಂಬ ಹೊಗಳುತ್ತಿದ್ದನು. ಇದು ಚಾಣಕ್ಯನ ಮನೆಯ ವರ್ಣನೆ:—

ಇದೋ ಗೋಮಯವೊಡೆಯುವ ಕಲ್

ಇದೋ ವಟುಗಳ್ ತಂದ ಕುಶಗಳಿದುಮೊಣಗಿಸಲೊ ।

ಡ್ಡಿದ ಸಮಿಧೆಯ ಭಾರದೆ ಬಾ

ಗಿದ ಸೂರಿನ ಕುಸಿದ ಗೋಡೆಯರೆಮನೆ ಕಾಣ್ಗುಂ ॥ (iii. ೧೫)

ಆದ್ದರಿಂದ ಅವನಿಗೆ ಯಾರದ್ದೂ ಲಕ್ಷ್ಯವಿರಲಿಲ್ಲ. ಮಹಾರಾಜ ಚಂದ್ರಗುಪ್ತನು ಅವನಿಗೆ “ವೃಷಲ”* ಮಾತ್ರ. ಸಾಲದುದಕ್ಕೆ ಅವನಿಗೆ ಆತ್ಮವಿಶ್ವಾಸವೂ ಧೈರ್ಯವೂ ಅಪಾರವಾಗಿದ್ದುವು. ಅವನು ಎಂದಿಗೂ ಎದೆಗೆಟ್ಟವನಲ್ಲ, ದೈವವನ್ನು ನೆಚ್ಚಿಕೊಂಡವನಲ್ಲ; “ಅರಿಯದವರು ದೈವವೆನ್ನುವರು!” ಎಂದು ದುರ್ಬಲರನ್ನು ಹಳಿಯುತ್ತಾನೆ.

ಆದರೆ ದೈವವು ಚಾಣಕ್ಯನಿಗೆ ಸಹಾಯಮಾಡಿತೆಂಬುದರಲ್ಲಿ ಸಂದೇಹವಿಲ್ಲ; ರಾಕ್ಷಸನ ಮುದ್ರೆಯುಂಗುರವು ದೊರೆತದ್ದು ದೈವಸಹಾಯದಿಂದಲೇ; ಆ ಉಂಗುರ ದೊರೆಯದಿದ್ದರೂ ಚಾಣಕ್ಯನು ಗೆಲ್ಲುತ್ತಿದ್ದನೆಂದೂ ಇತರ ಸಾಧನಗಳನ್ನು ಕಲ್ಪಿಸಿಕೊಳ್ಳುತ್ತಿದ್ದನೆಂದೂ ನಂಬಬಹುದು; ಆದರೆ ಅದು ಅವನಿಗೆ ಕೈಕೊಂಡ ಕೆಲಸವನ್ನು ಸುಲಭಮಾಡಿಕೊಟ್ಟಿತೆಂದಾದರೂ ಒಪ್ಪಿಕೊಳ್ಳಬೇಕು. ಚಾಣಕ್ಯನ ಗೆಲುವಿಗೂ ರಾಕ್ಷಸನ ಸೋಲಿಗೂ ಇದು ಒಂದು ಮುಖ್ಯವಾದ ಕಾರಣ. ರಾಕ್ಷಸನಿಗೆ ದೈವಬಲವಿಲ್ಲದೆ, ಅವನು ಮುಟ್ಟಿದ್ದು ಮಣ್ಣಾಗುತ್ತಿತ್ತು; ಅವನಿಗೆ ಸಿಕ್ಕಿದ ಸಾಧನ ಸಾಮಗ್ರಿಗಳೂ ಉತ್ತಮವಾಗಿರಲಿಲ್ಲ; ಅವನ ಕಡೆಯ ಗೂಢಚಾರರು ಚಾಣಕ್ಯನ ಕಡೆಯವರಷ್ಟು ತೀಕ್ಷ್ಣ ಬುದ್ಧಿಯುಳ್ಳವರಲ್ಲ; ಮಲಯಕೇತುವಿಗೂ ಚಂದ್ರಗುಪ್ತನಿಗೂ ಅಜಗಜಾಂತರ; ಚಂದ್ರಗುಪ್ತನು ಚಾಣಕ್ಯನ ಮರಿ; ಅವರಿಬ್ಬರೂ ಒಂದೇ ವಿಧವಾಗಿ ಚಿಂತಿಸುವರು; ಸುಳ್ಳು ವ್ಯಾಜ್ಯವಾಡಬೇಕಾಗಿ ಬಂದಾಗ ಚಂದ್ರಗುಪ್ತನು ಚಾಣಕ್ಯನ ಜೊತೆಗೂ ನಾಟಕವಾಡುವನು; ಮಲಯಕೇತುವಿಗೆ ಅಷ್ಟೊಂದು ಬುದ್ಧಿಯಿಲ್ಲ, ವಿವೇಚನೆಯಿಲ್ಲ, ವ್ಯಕ್ತಿ ಪರಿಜ್ಞಾನವಿಲ್ಲ. ಶೌರ್ಯಸಾಹಸಗಳಲ್ಲಿ ಚಾಣಕ್ಯನು ರಾಕ್ಷಸನ ಮುಂದಲ್ಲ; ಏಕೆಂದರೆ, ಚಾಣಕ್ಯನು ಬರಿಯ ವೈದಿಕ ಬ್ರಾಹ್ಮಣ; ರಾಕ್ಷಸನು ಸೇನಾನಿ. ಆದರೆ ಬುದ್ಧಿಯಲ್ಲಿ ಚಾಣಕ್ಯನೇ ಒಂದು ಕೈ ಮೇಲು; ಅವನು ರಾಕ್ಷಸನ ಬಲಾಬಲಗಳೆಲ್ಲವನ್ನೂ ಗ್ರಹಿಸಿದ್ದನು; ರಾಕ್ಷಸನು ಚಾಣಕ್ಯನನ್ನು ಅಷ್ಟುಮಟ್ಟಿಗೆ ಅರಿತಿರಲಿಲ್ಲ; ಅವನ ಸರಳ ಸ್ವಭಾವವು ಚಂದ್ರಗುಪ್ತ ಚಾಣಕ್ಯರ ಸುಳ್ಳುಜಗಳವನ್ನು ನಿಜವೆಂದು ನಂಬಿಸಿತು. ಅವನು ಚಾಣಕ್ಯನಂತೆ ಸಂದೇಹ ಪ್ರಕೃತಿಯವನಲ್ಲ; ಋಜುಸ್ವಭಾವದವನು; ಸಾತ್ವಿಕ; ಸಂಸಾರಿ; ಈ ಮೃದು ಋಜುಸ್ವಭಾವವು ಅವನ ಕೆಚ್ಚನ್ನು ಕರಗಿಸುತ್ತದೆ, ಹಟವನ್ನು ತಗ್ಗಿಸುತ್ತದೆ, ಅನೇಕ ಕಡೆ ಕಣ್ಣೀರಿಡಿಸುತ್ತದೆ; ಆದರೆ ಚಾಣಕ್ಯನು ಕಲ್ಲೆದೆಯವನು; ಒಂದು ಕಡೆಯೂ, ಒಂದು ಕ್ಷಣವೂ, ಅವನ ಕಣ್ಣು ನೆನೆಯುವುದಿಲ್ಲ. ರಾಕ್ಷಸನ ಸಾತ್ವಿಕಗುಣವು ಮನೆಯಲ್ಲಿ ಪ್ರೇಮವಾಗಿಯೂ, ಮಿತ್ರನಲ್ಲಿ ಸ್ನೇಹವಾಗಿಯೂ, ದೀನರಲ್ಲಿ ದಯೆಯಾಗಿಯೂ, ರಾಜನಲ್ಲಿ ಭಕ್ತಿಯಾಗಿಯೂ ಕಂಗೊಳಿಸುತ್ತದೆ. ಅವನ ಈ ಸ್ನೇಹ ದಯಾಪರತೆಗಳನ್ನು ಎರೆಯಾಗಿ ಉಪಯೋಗಿಸಿಕೊಂಡು ಚಾಣಕ್ಯನು ರಾಕ್ಷಸನನ್ನು ಹಿಡಿದುಹಾಕುತ್ತಾನೆ. ಅವನ ಅಪಾರವಾದ ರಾಜಭಕ್ತಿಯನ್ನು ಬಲ್ಲವನಾದ್ದರಿಂದಲೇ ಚಾಣಕ್ಯನು ರಾಕ್ಷಸನನ್ನು ಮಂತ್ರಿಪದವಿಗೆ ಒಪ್ಪಿಸಬೇಕೆಂದು ಯತ್ನಿಸುವುದು; ಒಂದು ಸಾರಿ ಅವನು ಒಪ್ಪಿ ನಿಂತನೆಂದರೆ ಅವನು ತನ್ನ ಮಾತಿಗೆ ತಾನು ಕಟ್ಟುಬಿದ್ದು, ನಂದರನ್ನು ಎಷ್ಟು ಭಕ್ತಿಯಿಂದ ಸೇವಿಸಿದನೋ ಅಷ್ಟೇ ಭಕ್ತಿಯಿಂದ, ಚಂದ್ರಗುಪ್ತನನ್ನು ಸೇವಿಸುವನೆಂಬುದು ಚಾಣಕ್ಯನಿಗೆ ಗೊತ್ತಿತ್ತು. ಒಟ್ಟಿನಮೇಲೆ ಇವರಿಬ್ಬರೂ ಧೀರೋದಾತ್ತರಾದ ತೇಜಸ್ವಿ ವ್ಯಕ್ತಿಗಳು.

ಇಷ್ಟು ಖಚಿತವಾದ ರೀತಿಯಲ್ಲಿ ಪಾತ್ರಗಳು ಸ್ಪಷ್ಟವಾಗಿ, ಆ ಪಾತ್ರ ಸ್ವಭಾವದಿಂದ ಘಟನೆಗಳು ನೈಸರ್ಗಿಕವಾಗಿ ಹುಟ್ಟಿ, ಕಥೆ ಒಮ್ಮುಖವಾಗಿ ಬೆಳೆದು ಮುಗಿಯುವುದು ಸಂಸ್ಕೃತ ನಾಟಕ ಸಾಹಿತ್ಯದಲ್ಲಿ ಅಪರೂಪ. ಹೀಗೆ ಈ ನಾಟಕದ ವಸ್ತು ಪಾತ್ರ ರಸಗಳಲ್ಲಿ ಪಾತ್ರ ರಚನೆ ಮೊದಲು ಬರುತ್ತದೆಂದು ಹೇಳಬಹುದು; ವಸ್ತುವು ಅದನ್ನು ಆಶ್ರಯಿಸಿದರೆ; ರಸವು ‘ವೀರ’ ವೆಂದೆನ್ನಬೇಕು; ಆದರೆ ಅದು ಲಾಕ್ಷಣಿಕಸಮಯಸಿದ್ಧವಾದ ದಾನವೀರ, ದಯಾವೀರ, ಯುದ್ಧವೀರ, ಧರ್ಮವೀರ ಮುಂತಾದ ಯಾವ ‘ವೀರ’ ದಲ್ಲಿಯೂ ಅಂತರ್ಗತವಾಗುವುದಿಲ್ಲ; ಕವಿ ರಸಕ್ಕೆ ಗಮನ ಕೊಟ್ಟು ಅದನ್ನು ಪ್ರಯತ್ನಪುರಸ್ಸರವಾಗಿ ಪ್ರಶಸ್ತಗೊಳಿಸಿಲ್ಲ. ಹಾಗೆ ಪ್ರಯತ್ನಪಟ್ಟಿದ್ದರೆ ಅದು ‘ವೇಣೀಸಂಹಾರ’ ದಲ್ಲಿರುವಂತೆ ಕೃತಕವಾಗಿ ಅವನ ಪಾತ್ರಗಳು ನಿರ್ಜೀವವಾಗುತ್ತಿದ್ದುವು. ನಿರ್ಜೀವವ್ಯಕ್ತಿಗಳಿಂದ ಏನು ಕಥೆ ನಡೆದೀತು? ಅದರಲ್ಲಿ ಯಾವ ರಸವಿದ್ದೀತು?

ಶೈಲಿಯ ಪ್ರಸ್ತಾಪ ಆಗಲೇ ಬಂದಿತ್ತು; ಅದು ಪಾತ್ರ ಸನ್ನಿವೇಶ ಸಂದರ್ಭಗಳಿಗೆ ಉಚಿತವಾಗಿದೆ; ವರ್ಣನೆಯಲ್ಲಿ ಮಿತಿ ಇದೆ; ಅಲಂಕಾರಗಳಲ್ಲಿ ಅತಿಯಿಲ್ಲ. ಒಟ್ಟಿನ ಮೇಲೆ, ವಿಶಾಖದತ್ತನು ಈಚಿನ ಹಲವು ಲೇಖಕರಂತೆ ನಾಟಕದ ಹೆಸರಿನಲ್ಲಿ ಪ್ರೌಢ ಕಾವ್ಯವನ್ನು ಬರೆದಿಟ್ಟಿಲ್ಲ; ನಿಜವಾದ ನಾಟಕವನ್ನು ಬರೆದಿದ್ದಾನೆ; ಆದ್ದರಿಂದ ಅದು ವಿದ್ವಾಂಸರಿಗೆ, ಅದರಲ್ಲಿಯೂ ಪಾಶ್ಚಾತ್ಯರಿಗೆ, ತುಂಬ ಪ್ರಿಯವಾಗಿದೆ.

“ದೇವಿಚಂದ್ರಗುಪ್ತ” ವು ವಿಶಾಖದತ್ತನ ಎರಡನೆಯ ನಾಟಕ. ಇದು ಐತಿಹಾಸಿಕವಾಗಿದ್ದು ಇಮ್ಮಡಿ ಚಂದ್ರಗುಪ್ತನ ಜೀವನಚರಿತ್ರೆಯಿಂದ ಕೆಲವು ಅಂಶಗಳನ್ನು ಪ್ರತಿಪಾದಿಸಿದೆ; ಇದರ ಪ್ರಕಾರ ‘ಶಕಪತಿ’ ಯು ಚಂದ್ರಗುಪ್ತನ ಅಣ್ಣನಾದ ರಾಮಗುಪ್ತನ ಹೆಂಡತಿಯನ್ನು ಕಾಮಿಸಲು, ಚಂದ್ರಗುಪ್ತನು ತನ್ನ ಅತ್ತಿಗೆಯಾದ ಧ್ರುವದೇವಿಯ ವೇಷ ಹಾಕಿಕೊಂಡು ಆ ಶಕಪತಿಯ ಶಿಬಿರಕ್ಕೆ ಹೋಗಿ ಅವನನ್ನು ಕೊಂದಂತೆ ಕಾಣುತ್ತದೆ. ಭೋಜ* ಬಾಣ* ಮುಂತಾದವರು ಈ ಕಥೆಯನ್ನು ಸೂಚಿಸಿದ್ದರು; ಆದರೆ ಈ ನಾಟಕ ಮಾತ್ರ ದೊರೆತಿರಲಿಲ್ಲ; ಈಗಲೂ ಅದು ಪೂರ್ತಿಯಾಗಿ ದೊರೆತಿಲ್ಲ; ಮ ॥ ರಾಮಕೃಷ್ಣ ಕವಿಗಳು ತಮಗೆ ದೊರೆತ ಒಂದು ಅಸಮಗ್ರ ಪ್ರತಿಯಿಂದ ಕೆಲವು ಭಾಗಗಳನ್ನು ಮೊದಲು ಪ್ರಕಾಶಕ್ಕೆ ತಂದರು.* ಆ ಮೇಲೆ ಸಿರ್ಲ್ವೇಲೆವಿ ಅವರು ‘ನಾಟ್ಯದರ್ಪಣ’ ದಿಂದ ಉದ್ಧರಿಸಿ, ಅದರ ಮತ್ತೆ ಕೆಲವು ಭಾಗಗಳನ್ನು ಪ್ರಕಟಿಸಿದರು.* ಈ ಗ್ರಂಥವು ಪೂರ್ತಿಯಾಗಿ ದೊರೆಯುವವರೆಗೆ ಅದರ ವಿಚಾರವಾಗಿ ಹೆಚ್ಚೇನೂ ಹೇಳುವಂತಿಲ್ಲ; ಅದರ ಸ್ವಲ್ಪ ಪರಿಚಯವಾದರೂ ಆಗಲೆಂದು ಮುಂದೆ ಕೆಲವು ವಾಕ್ಯಗಳನ್ನೂ ಶ್ಲೋಕಗಳನ್ನೂ ಉದ್ಧರಿಸಿ ಕೊಟ್ಟಿದೆ:—

೧. (… ವಿಶಾಖದತ್ತ ಕೃತೇ ದೇವೀಚಂದ್ರಗುಪ್ತೇ ಮಾದವ ಸೇನಾಂ ಸಮುದ್ದಿಶ್ಯ ಕುಮಾರ ಚಂದ್ರಗುಪ್ತಸ್ಯೋಕ್ತಿಃ*

ಆನಂದಾಶ್ರುಜಲಂ ಸಿತೋತ್ಪಲರುಚೋರಾಬದ್ಧನತಾ ನೇತ್ರಯೋಃ

ಪ್ರತ್ಯಂಗೇಷು ವರಾನನೇ ಪುಲಕಿಷು ಸ್ವೇದಂ ಸಮಾತನ್ವತಾ ।

ಕುರ್ವಾಣೀನ ನಿತಂಬಯೋರುಪಚಯಂ ಸಂಪೂರ್ಣಯೋರಪ್ಯಸೌ

ಕೇನಾಪ್ಯಸ್ಪೃಶತಾಪ್ಯಧೋನಿವಸನಗ್ರಂಥಿಸ್ತವೋಚ್ಛ್ವಾಸಿತಃ ॥

೨. (… ದೇವಿಚಂದ್ರಗುಪ್ತೇ ಚಂದ್ರಗುಪ್ತೋ ಧ್ರುವದೇವೀಂ ದೃಷ್ಟ್ವಾಸ್ವಗತಮಾಹ)-

ಇಯಮಪಿ ದೇವೀ ತಿಷ್ಠತಿ ಯೈಷಾ

ರಮ್ಯಾಂ ಚಾರತಿಕಾರಿಣೀಂ ಚ ಕರುಣಾಶೋಕೇನ ನೀತಾ ದಶಾಂ

ತತ್ಕಾ ಚಾರತಿಕಾರಣೀಂ ಚ ಕರುಣಾಶೋಕೇನ ನೀತಾ ದಶಾಂ

ತತ್ಕಾಲೋಪಗತೇನ ರಾಹುಶಿರಸಾ ಗುಪ್ತೇವ ಚಾಂದ್ರೀ ಕಲಾ ।

ಪತ್ಯುಃ ಕ್ಲೀಬಜನೋಚಿತೇನ ಚರಿತೇನಾನೇನ ಪುಂಸಃ ಸತೋ

ಲಜ್ಜಾಕೋಪವಿಷಾದಭೀತ್ಯರತಿಭಿಃ ಕ್ಷೇತ್ರೀಕೃತಾ ತಾಮ್ಯತಿ ॥

(ಅತ್ರ ಧ್ರುವದೇವ್ಯಭಿಪ್ರಾಯಸ್ಯ ಚಂದ್ರಗುಪ್ತೇನ ನಿಶ್ಚಯಃ)

೩. (… ದೇವಿಚಂದ್ರಗುಪ್ತೇ ದ್ವಿತೀಯೇಂಕೇ ಪ್ರಕೃತೀನಾಂ ಆಶ್ವಾಸನಾಯ ಶಕಸ್ಯ ಧ್ರುವದೇವೀಸಂಪ್ರದಾನೇ ಅಭ್ಯುಪಗತೇ ರಾಜ್ಞಾರಾಮ ಗುಪ್ತೇನಾರಿವಧನಾರ್ಥಂ ಯಿಯಾಸುಃ ಪ್ರತಿಪನ್ನ ಧ್ರುವದೇವೀ ನೇಪಥ್ಯಃ ಕುಮಾರ ಚಂದ್ರಗುಪ್ತೋ ವಿಜ್ಞಾಪಯನ್ನುಚ್ಯತೇ ಯಥಾ)

ಪ್ರತಿಷ್ಠೋತ್ತಿಷ್ಠನ ಖಲ್ವಹಂ ತ್ವಾಂ ಪರಿತ್ಯಕ್ತು ಮುತ್ಸಹೇ*

ಪ್ರತ್ಯಗಯೌವನ ವಿಭೂಷಣಮಂಗಮೇತ

ದ್ರೂಪಶ್ರಿಯಂ ಚತವ ಯೌವನಯೋಗ್ಯರೂಪಂ ।

ಸಕ್ತಿಂ ಚ ಮಯ್ಯನುಪಮಾಮನುರುಧ್ಯಮಾನೋ

ದೇವೀಂ ತ್ಯಜಾಮಿ ಬಲವಾಂಸ್ತ್ವಯಿ ಮೇನುಽರಾಗಃ ॥

ಅನ್ಯಸ್ತ್ರೀಶಂಕಯಾ ಧ್ರುವದೇವೀ…..

ರಾಜಾ. - ಅಪಿ ಚ

ತ್ಯಜಾಮಿ ದೇವೀಂ ತೃಣವತ್ವದಂತರೇ

ತ್ವಯಾ ವಿನಾ ರಾಜ್ಯಮಿದಂ ಹಿ ನಿಷ್ಫಲಂ ।

ಉಢೇತಿ ದೇವೀಂ ಪ್ರತಿ ಮೇ ದಯಾಳುತಾ

ತ್ವಯಿ ಸ್ಥಿತಂ ಸ್ನೇಹನಿಬಂಧನಂ ಮನಃ ॥

೪. (….. ದೇವೀಚಂದ್ರಗುಪ್ತೇ ಚತುರ್ಥೇಂಕೇ)

ಚಂದ್ರಗುಪ್ತಃ - ಪ್ರಿಯೇ ಮಾಧವಸೇನೇ, ತ್ವಮಿದಾನೀಂ ಮೇ ಬಂಧ ಮಾಜ್ಞಾಪಯ.

ಕಂಠೇ ಕಿನ್ನರಕಂಠಿ ಬಾಹುಲತಿಕಾ ಪಾಶಃ ಸಮಾಸಜ್ಯತಾಂ

ಹಾರಸ್ತೇ ಸ್ತನಬಾಂಧವೋ ಮನು ಬಲಾದ್ಬಧ್ನಾತು ಪಾಣಿದ್ವಯಂ ।

ಪಾದೌ ತ್ವಜ್ಜಘನಸ್ಥಲಪ್ರಣಯಿನೀ ಸಂದಾನಯೇನ್ಮೇಖಲಾ

ಪೂರ್ವಂ ತ್ವದ್ಗುಣಬದ್ಧಮೇವ ಹೃದಯಂ ಬಂಧುಂ ಪುನರ್ನಾರ್ಹತಿ ॥

ವಿಶಾಖದತ್ತನು “ಮುದ್ರಾರಾಕ್ಷಸ” ವನ್ನು ಬರೆದಾಗ “ಕೌಮುದೀ ಮಹೋತ್ಸವ” ವೆಂಬ ನಾಟಕವನ್ನು ಮುಂದಿಟ್ಟುಕೊಂಡಿದ್ದಿರಬಹುದೆಂದು ಜಯಸ್ವಾಲರು ಸೂಚಿಸಿದ್ದಾರೆ;* ಆದ್ದರಿಂದ ಆ ವಿಚಾರವಾಗಿ ಇಲ್ಲಿ ಒಂದೆರಡು ಮಾತು ಹೇಳುವುದು ಅವಶ್ಯಕ.

‘ಕೌಮುದೀ ಮಹೋತ್ಸವ’ ವು* ‘ಮಾಳವಿಕಾಗ್ನಿಮಿತ್ರ’ ‘ಮೃಚ್ಛಕಟಿಕ’ ಮುಂತಾದವುಗಳಂತೆ ಐತಿಹಾಸಿಕ ಭಿತ್ತಿಯಲ್ಲಿ ರಚಿತವಾದ ಒಂದು ಶೃಂಗಾರ ನಾಟಕ. ಇದನ್ನು ವಿಜ್ಜಿಕಾ (ಅಥವಾ ಕಿಶೋರಿಕಾ?) ಎಂಬ ಸ್ತ್ರೀಕವಿ ಬರೆದಂತೆಯೂ ಇದರ ಕಾಲವು ಸುಮಾರು ಕ್ರಿ.ಶ. ೩೨೫ ಎಂದೂ ಊಹಿಸಲ್ಪಟ್ಟಿದೆ. ಇದರಲ್ಲಿ ಮಗಧ ರಾಜಪುತ್ರನಾದ ಕಲ್ಯಾಣವರ್ಮನಿಗೆ ಅವನ ಮಂತ್ರಿಯ ಸಹಾಯದಿಂದ ರಾಜ್ಯ ಬರುತ್ತದೆ; ಶೂರಸೇನಾಪತಿ ಕೀರ್ತಿಷೇಣನ ಮಗಳಾದ ಕೀರ್ತಿಮತಿಯೊಡನೆ ಮದುವೆಯಾಗುತ್ತದೆ. ನಾಯಕ ನಾಯಕಿಯರು ಮೊದಲು ನೋಡಿರುತ್ತಾರೆ. ಅವರಿಗೆ ಒಬ್ಬ ಬೌದ್ಧಸಂನ್ಯಾಸಿನಿಯ ಸಹಾಯವಿರುತ್ತದೆ. ಈ ಮದುವೆ ಪಾಟಲೀಪುತ್ರದ ಸುಗಾಂಗ ಪ್ರಾಸಾದದಲ್ಲಿ ನಡೆಯುತ್ತದೆ. ಆಗ ಕೌಮುದೀ ಮಹೋತ್ಸವದ ಕಾಲ; ಅದರ ಜೊತೆಗೆ, “ಮತ್ತೊಂದು ಕೌಮುದೀ ಮಹೋತ್ಸವ” ದಂತೆ, ಮದುವೆಯವರೆಗಿನ ರಾಜಚರಿತ್ರೆಯನ್ನು ಒಳಗೊಂಡ ಈ ನಾಟಕವು ರಚಿತವಾಗಿ ಅಭಿನಯಿಸಲ್ಪಟ್ಟಂತೆ ಉಕ್ತವಾಗಿದೆ.

ಆದರೆ ಇದು ಎಷ್ಟರಮಟ್ಟಿಗೆ ಐತಿಹಾಸಿಕವೋ ಕಲ್ಪಿತವೋ ಗೊತಿಲ್ಲ; ಏಕೆಂದರೆ, ಇದರಲ್ಲಿ ಬರುವ (ಲಿಚ್ಛವಿ ಎಂಬ ಹೆಸರೊಂದನ್ನು ಬಿಟ್ಟು) ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಚರಿತ್ರೆಗೆ ತಿಳಿಯದವು. ಐತಿಹಾಸಿಕಗಳಲ್ಲದ ಇಂಥ ಕಥಾವೃತ್ತಾಂತಗಳು ಎಷ್ಟೋ ಇವೆ; ಶೌನಕ—ಬಂಧುಮತೀ ಅವಿಮಾರಕ-ಕುರಂಗೀ ವೃತ್ತಾಂತಗಳು ಈ ನಾಟಕದಲ್ಲಿಯೇ ಉಕ್ತವಾಗಿವೆ. ಭಾಸ ಕಾಳಿದಾಸ ಹರ್ಷ ಶೂದ್ರಕ ಇವರೆಲ್ಲರೂ ಇಂಥ ವಸ್ತುವುಳ್ಳ ನಾಟಕಗಳನ್ನು ಬರೆದಿದ್ದಾರೆ; ‘ಕೌಮುದೀ ಮಹೋತ್ಸವ’ ವು ಇವುಗಳ ಛಾಯೆಯಂತೆ ಇದೆ; ಶೈಲಿ ಸರಣಿ ಕಲ್ಪನೆ ಪ್ರತಿಪಾದನೆಗಳು ಸಪ್ಪೆ. ಆದ್ದರಿಂದ ಈ ನಾಟಕವು ಅಷ್ಟು ಪ್ರಾಚೀನವೆಂದಾಗಲಿ, ‘ಮುದ್ರಾರಾಕ್ಷಸ’ ಕ್ಕೆ ಪ್ರೇರಕವಾಗಿದ್ದಿರಬಹುದೆಂದಾಗಲಿ ನಂಬುವುದು ಕಷ್ಟ.

ಪ್ರಮಾಣ ಲೇಖನಾವಳಿ

J. Charpentier - ‘Some Remarks on the Hindu Drama’, J.R.A.S., 1923, 5895 f; ‘Sakara’, Do., 1925, 237 f; ‘Date of Mudrarakshasa’, IH.Q., VII, 629.

K.P. Jayaswal - ‘The Date of the Mudrarakshasa and the Identification of Malayakethu’, Ind. Ant., 42, 265 f; 46, 275 f; ‘Bandhubhrithya of the Mudrarakshasa’, Do., 46, 275; ‘Chandra Guptha II and his Predecessor’, J.B.O.R.S., XVIII.

A. Rangaswami Saraswati - ‘Devi Chandraguptham’, Ind. Ant., 52, 181 f; ‘Further Glimpses into Gupta Literary History’, Q.J.M.S., April 1925, 268 f; ‘The Age of Bharavi, etc’, Do., April, 1923, 686-7

Srikantasastri - ‘Date of Mudra-rakshasa’,, I.H.Q., vii, 163-169; Introduction to ‘ಕರ್ಣಾಟಕ ಮುದ್ರಾರಾಕ್ಷಸ ನಾಟಕಂ’.

Sylvain Levi — Journal Asiatique, Oct.-Dec., 1923, 201-6

H. Jacobi — ‘On Visakhadatta’, W.Z.K.M., II, 212 f.

K.H. Dhruva —’ Age of Visakhadatta’, W.Z.K.M., V, 25 f, ‘Introduction to his edition of Mudra. Verses mistaken for prose in Mudrarakshasa’, Poona Orientalist, Oct., 1936.

Keith —’ The Date of the Brihathkatha and Mudrarakshasa’, J.R.A.S., 1909, 145 f.

M. Winternitz — ‘Historical Dramas in Indian Literature’ in Krishnaswamiengar Commemoration Vol. 359 f.

K.T. Telang — Jiztroductioll to his edition of Mudra-(Bombay Sanskrit Series, 1928).

Hass — Mudrarakshasa (Edition and Translation), Columbia University, Press, New York, 1912.

K.S. Ramaswami Sastri — Introduction to Kavyamimamsa (3rd Edition, Baroda, 1934)

Hillebrandt — Z.D.M.G., 39, 107, f; Do., 69, 363 f; N.G.G.W., 1905, 429 f; Uber das Kautilyasasthra, 25 f.

Sten Konow — ‘Review of Mudrarakshasa’ (ed. by Hillebrandt), Ind. Ant., 43, 64 f.

V.A. Smith — Early History of India, 120 n.

W.H. Tawney — ‘Review of Kathasarithasagara’, J.R.A.S., 1908, 910.

E.J. Rapson — ‘Indian Drama’, E.R.E., IV, 886.

Speyer — Studies About the Kathasarithasagara, 51 f.

Pischel — G.G.A., 1883, 1225 f.

Hertel — Z.D.M.G., 70, 133 f.

V.J. Antani — ‘The Date of the Mudrarakshasa’ s, Ind. Ant., 51, 49 f.

A.S. Altekar — ‘A New Guptha King’, J.B.O.R.S., March, 1928.

F.W. Thomas — ‘Chandraguptha the Founder of the Maurya Empire’, C.H.I, I, 470 f.

J.C. Ghose — ‘Was Visakhadatta a Bengali?’ J.A.S.B., Vol. 26, no. 7.

K.D. Chatterjee — ‘Some observations on the Brihathkatha and its alleged relation to the Mudra.’, I.C., Oct., 1934.

L. Raghavan — ‘The Brihathkatha, the Mudra and the Avaloka of Dhanika on the Dasarupa’, I.C., Jan., 1935. The Social Play in Sanskrit, (1952) pp. 7-11

D.L. Narasimhachar — “ದೇವೀಚಂದ್ರಗುಪ್ತ ನಾಟಕ” in ಪ್ರಬುದ್ಧ ಕರ್ಣಾಟಕ” 18, ii, 112 f.

G.V. Devasthali — Introduction to the study of Visakhadatta and Mudrarakshasa, (1948)

N. Ayyaswami Sastri — Mudrarakshasa (Journal of Venkateswara Oriental Institute Vol. III, no. 1.)

ಕನ್ನಡ ಭಾಷಾಂತರ

ಕರ್ಣಾಟಕ ಮುದ್ರಾರಾಕ್ಷಸ ನಾಟಕಂ — ಮೋಟಗಾನಹಳ್ಳಿ ರಾಮಶೇಷಶಾಸ್ತ್ರೀ, ಮೈಸೂರು (ದ್ವಿತೀಯ ಮುದ್ರಣ), ೧೯೩೧.