೦೩ ಶೂದ್ರಕ

(ಕ್ರಿ.ಶ. ಸು. ೪೦೦)

ಶೂದ್ರಕನ ಕಾಲ ದೇಶ ವರ್ತಮಾನಗಳೊಂದೂ ಸರಿಯಾಗಿ ಗೊತ್ತಿಲ್ಲ. “ಮೃಚ್ಛಕಟಿಕ” ದ* ಪ್ರಸ್ತಾವನೆಯಲ್ಲಿ ಅವನ ವಿಚಾರವನ್ನು ತಿಳಿಸುವ ಈ ಶ್ಲೋಕಗಳು ದೊರೆಯುತ್ತವೆ—

ದ್ವಿರದೇಂದ್ರಗತಿಶ್ಚಕೋರನೇತ್ರಃ ಪರಿಪೂರ್ಣೇಂದುಮುಖಃ ಸುವಿಗ್ರಹಶ್ಚ ।

ದ್ವಿಜಮುಖ್ಯತಮಃ ಕವಿರ್ಬಭೂವ ಪ್ರಥಿತಃ ಶೂದ್ರಕ ಇತ್ಯಗಾಧಸತ್ವಃ ॥

ಋಗ್ವೇದಂ ಸಾಮವೇದಂ ಗಣಿತಮಥ ಕಲಾಂ ವೈಶಿಕೀಂ ಹಸ್ತಿಶಿಕ್ಷಾಂ

ಜ್ಞಾತ್ವಾ ಶರ್ವಪ್ರಸಾದಾದ್ವ್ಯಪಗತತಿಮಿರೇ ಚಕ್ಷುಷೀ ಚೋಪಲಭ್ಯ ॥

ರಾಜಾನಂ ವೀಕ್ಷ್ಯ ಪುತ್ರಂ ಪರಮಸಮುದಯೇನಾಶ್ವಮೇಧೇನ ಚೇಷ್ಟ್ವಾ

ಲಬ್ಧ್ವಾಚಾಯಃ ಶತಾಬ್ದಂ ದಶದಿನಸಹಿತಂ ಶೂದ್ರಕೋಗ್ನಿಂ ಪ್ರವಿಷ್ಟಃ ॥

ಸಮರವ್ಯಸನೀ ಪ್ರಮಾದಶೂನ್ಯಃ ಕಕುದಂ ವೇದವಿದಾಂ ತಪೋಧನಶ್ಚ ।

ಪರವಾರಣಬಾಹುಯುದ್ಧಲುಬ್ಧಃ ಕ್ಷಿತಪಾಲಃ ಕಿಲ ಶೂದ್ರಕೋ ಬಭೂವ ॥

[ಶೂದ್ರಕನೆಂಬ ಸುಂದರನೂ ಸತ್ವಶಾಲಿಯೂ ಆದ ಪ್ರಸಿದ್ಧ ರಾಜ (“ದ್ವಿಜಮುಖ್ಯತಮ”)ನಿದ್ದನು. ಅವನು ಋಗ್ವೇದ ಸಾಮವೇದ ಗಣಿತ ಕಾಮಶಾಸ್ತ್ರ ಗಜಶಾಸ್ತ್ರಗಳನ್ನು ಬಲ್ಲವನಾಗಿದ್ದನು; ಅವನು ಹೋಗಿದ್ದ ಕಣ್ಣುಗಳನ್ನು ಈಶ್ವರ ಪ್ರಸಾದದಿಂದ ಮತ್ತೆ ಪಡೆದುಕೊಂಡು, ಮಗನಿಗೆ ಪಟ್ಟಕಟ್ಟಿ, ಅಶ್ವಮೇಧಯಾಗ ಮಾಡಿ, ನೂರು ವರ್ಷದ ಮೇಲೆ ಹತ್ತು ದಿನ ಬದುಕಿದ್ದು ಅಗ್ನಿಪ್ರವೇಶಮಾಡಿದನು. ಅವನಿಗೆ ಯುದ್ಧದಲ್ಲಿ ಆಸಕ್ತಿ; ಆನೆಗಳೊಡನೆ ಹೋರಾಟದಲ್ಲಿ ಆಸೆ; ಅವನು ಶ್ರೋತ್ರಿಯ, ತಪಸ್ವಿ, ವಿವೇಕಿ.]

ಈ ಶ್ಲೋಕಗಳನ್ನು ನೋಡಿದರೆ-ಅದರಲ್ಲಿಯೂ ಶೂದ್ರಕನು ನೂರು ವರ್ಷ ಹತ್ತು ದಿವಸ ಬದುಕಿದ್ದು ಅನಂತರ ಅಗ್ನಿಪ್ರವೇಶಮಾಡಿದನೆಂಬುದನ್ನು ಓದಿದರೆ ವಿಚಿತ್ರವಾಗಿ ಕಾಣುತ್ತದೆ. ಏಕೆಂದರೆ, ನೂರು ವರ್ಷ ಬದುಕುವುದಿರಲಿ, ಪ್ರಸ್ತಾವನೆಯಲ್ಲಿಯೇ ಕವಿಯ ಸಾವಿನ ವಿಚಾರ ಬಂದರೆ ಅದನ್ನು ಬರೆದವನಾರು? ಎಂಬ ಶಂಕೆಯುಂಟಾಗುತ್ತದೆ. ನಾಟಕವನ್ನು ಶೂದ್ರಕನು ಬರೆದಿಟ್ಟು ಮೃತಿಹೊಂದಲು ಅವನ ಅನಂತರಕಾಲದಲ್ಲಿ ಯಾರಾದರೂ ಪ್ರಸ್ತಾವನೆಯನ್ನು ಬರೆದು ಜೋಡಿಸಿದರೇ? ಅಥವಾ ಶೂದ್ರಕನ ಆಸ್ಥಾನದಲ್ಲಿದ್ದಿರಬಹುದಾದ ಯಾವನಾದರೂ ಕವಿ ಈ ನಾಟಕವನ್ನು ತನ್ನ ಪೋಷಕನ ಹೆಸರಿನಲ್ಲಿ ಬರೆದಿರಬಹುದೇ? ಹೀಗೆಂದು ನಿರ್ಧರಿಸಲು ಪ್ರಮಾಣವೇನೂ ಇಲ್ಲ. ಶೂದ್ರಕನೆಂಬ ವ್ಯಕ್ತಿಯೊಬ್ಬನಿದ್ದನೇ ಅಥವಾ ಅವನು ಕೇವಲ ಕವಿ ಕಲ್ಪನೆಯೇ ಎಂಬುದನ್ನು ನಿಶ್ಚಯಿಸುವುದಕ್ಕೂ ಸರಿಯಾದ ಸಾಧನವಿಲ್ಲ. ಏಕೆಂದರೆ, ಶೂದ್ರಕನ ಹೆಸರು ಶಾಸನಗಳಲ್ಲಾಗಲಿ, ನಾಣ್ಯಗಳಲ್ಲಾಗಲಿ ದೊರೆಯುವುದಿಲ್ಲ. ಹಿಂದಿನ ಪುರಾಣ ಶಾಸ್ತ್ರ ಸಾಹಿತ್ಯ ಗ್ರಂಥಗಳಲ್ಲೇನೋ* ಅಲ್ಲಲ್ಲಿ ಅವನ ಪ್ರಸ್ತಾಪ ಬರುತ್ತದೆ. ಆದ್ದರಿಂದ “ಶೂದ್ರಕ” ರಾಜನಿದ್ದದ್ದು ಸಂಭವವಾಗಿ ಕಾಣುತ್ತದೆ.* ಆದರೆ ಮೇಲಿನ ಶ್ಲೋಕಗಳಿಂದ ಅವನ ಕುಲದೇಶಗಳೊಂದೂ ತಿಳಿಯುವುದಿಲ್ಲ.

ನಾಟಕಕರ್ತೃವಿನ ವಿಚಾರವಾಗಿ ಎಷ್ಟು ಅನಿಶ್ಚಯವಿದೆಯೋ ಅವನ ಕಾಲದ ವಿಚಾರವಾಗಿಯೂ ಅಷ್ಟೇ ಅನಿಶ್ಚಯವಿದೆ. “ಮೃಚ್ಛಕಟಿಕದಲ್ಲಿ ಬರುವ (ಸರ್ವಸ್ವಾರಯಜ್ಞಕ್ಕೆ ವಿಹಿತವಾದ) ಆತ್ಮಹೋಮ ಪದ್ಧತಿ, ಚೌರ್ಯಶಾಸ್ತ್ರಕಾರರ ಪ್ರಸ್ತಾಪ… ಇಂದ್ರಧ್ವಜೋತ್ಸವ, (ಧೂತಾದೇವಿ ಮಾಡಿದ) ರತ್ನಷಷ್ಠೀ ಉಪವಾಸ, ಚತುರ್ವಿಧ ಪರೀಕ್ಷೆಗಳು, ಮನುಸ್ಮೃತಿಯ ಪ್ರಯೋಗ, ಭರತನಾಟ್ಯ ಶಾಸ್ತ್ರಕ್ಕೆ ವಿರುದ್ಧವಾಗಿ ರಂಗದ ಮೇಲೆ ನಿದ್ರೆ ಕೊಲೆಗಳ ಪ್ರದರ್ಶನ, ಜೂಜಿಗೆ ಸಂಬಂಧಪಟ್ಟ ಪಾರಿಭಾಷಿಕ ಶಬ್ದಗಳ ಪ್ರಯೋಗ, ‘ಪಾಯಶ ಪಿಂಡಲಕ’ ‘ಗದ್ದಹೀ’ ‘ಶತ್ತೀ’ ‘ಕಣ್ಣಾಟ ಕಲಹ’ ‘ವೈಶಿಕೀ’ ‘ವರಂಡಲಂಬು’ ಮುಂತಾದ ಅಪ್ರಸಿದ್ಧ ಪದೋಪಯೋಗ, ಬೌದ್ಧ ಧರ್ಮದ ಸುಸ್ಥಿತಿ, ಅದರ ವಿಷಯದಲ್ಲಿ ಸಹನೆ, ಬ್ರಾಹ್ಮಣನು ಶೂದ್ರಳನ್ನು ಲಗ್ನವಾಗುವಿಕೆ- ಇವುಗಳನ್ನು ವಿಮರ್ಶೆಮಾಡಿದರೆ, ಈ ನಾಟಕಕ್ಕೆ ಬಹು ಪ್ರಾಚೀನತೆಯನ್ನು ಹೇಳಬೇಕಾಗುತ್ತದೆ.”*

ಈ ನಾಟಕವು ಪಾಶ್ಚಾತ್ಯ ಪಂಡಿತರಿಗೆ ಪರಿಚಯವಾದಾಗ, ಇದೇ ಸಂಸ್ಕೃತ ನಾಟಕಗಳಲ್ಲೆಲ್ಲಾ ಪ್ರಾಚೀನತಮವೆಂದು ಅವರಲ್ಲಿ ಅನೇಕರು ಅಭಿಪ್ರಾಯಪಡುತ್ತಿದ್ದರು. ಆದರೆ ಈಚೆಗೆ ಅಶ್ವಘೋಷ ಭಾಸರ ನಾಟಕಗಳು ದೊರೆತಿರುವುದರಿಂದ ಆ ಅಭಿಪ್ರಾಯವು ಬದಲಾಗಿದೆ. ಹಿಂದೆ ಹೇಳಿದಂತೆ ಈಗ ನಮಗೆ ದೊರೆತಿರುವ ನಾಟಕಕರ್ತರಲ್ಲಿ ಅಶ್ವಘೋಷನೇ ಎಲ್ಲರಿಗಿಂತ ಹಿಂದಿನವನು; ಭಾಸನು ಅವನಿಗಿಂತ ಈಚಿನವನು; ಅವನ “ಚಾರುದತ್ತ” ದ ಆಧಾರದ ಮೇಲೆ ಹುಟ್ಟಿದ್ದು “ಮೃಚ್ಛಕಟಿಕ”.* ಮೃಚ್ಛಕಟಿಕದ ಪ್ರಾಕೃತವೂ ಕಾಳಿದಾಸನ ನಾಟಕಗಳ ಪ್ರಾಕೃತಕ್ಕಿಂತ ಹಿಂದಿನದಾಗಿ ಕಾಣುತ್ತದೆ. ಆದ್ದರಿಂದ ಶೂದ್ರಕನು ಭಾಸ ಕಾಳಿದಾಸರಿಗೆ ನಡುವೆ ಎಂದರೆ ಸ್ಥೂಲವಾಗಿ ನಾಲ್ಕು ಅಥವಾ ಐದನೆಯ ಶತಮಾನದಲ್ಲಿ ಇದ್ದನೆಂದು ಹೇಳಬಹುದು. ರಾಜಶೇಖರನ ಹೇಳಿಕೆಯಂತೆ ರಾಮಿಲ ಸೋಮಿಲರು ಒಂದು “ಶುದ್ರಕ ಕಥೆ” ಯನ್ನು ಬರೆದಿದ್ದರು.* ಈ ಸೋಮಿಲನು ಕಾಳಿದಾಸನು ಮಾಲವಿಕಾಗ್ನಿ ಮಿತ್ರದಲ್ಲಿ ಉಕ್ತನಾದವನೇ ಆಗಿದ್ದು, ಅವನ ಆ ಕಥೆಗೆ ಮೃಚ್ಛಕಟಿಕ ಕರ್ತನೇ ವಿಷಯನಾಗಿದ್ದರೆ “ಶೂದ್ರಕ” ನು ಕಾಳಿದಾಸನಿಗಿಂತ ಹಿಂದೆ ಇದ್ದವನಾಗಿರಬೇಕು. ಪಂಚತಂತ್ರದಲ್ಲಿ ಮೃಚ್ಛಕಟಿಕದ ಮೂರು ಮತ್ತು ನಾಲ್ಕನೆಯ ಅಂಕದ ಕೆಲವು ಭಾಗಗಳು ಬರುತ್ತವೆ. ಪಂಚತಂತ್ರಕ್ಕೆ ಕ್ರಿ.ಶ. ನಾಲ್ಕು ಅಥವಾ ಐದನೆಯ ಶತಮಾನದಲ್ಲಿ ಈಗಿನ ರೂಪ ಬಂತೆಂಬುದು ಕೀತ್, ವಿಂಟರ್ನಿಟ್ಸ್* ಮುಂತಾದ ವಿದ್ವಾಂಸರ ಮತ. ಈ ಅಂಶಗಳು ಮೇಲಿನ ಕಾಲ ನಿರ್ದೇಶಕ್ಕೆ ಉಪಷ್ಟಂಭಗಳಾಗುತ್ತವೆ.

ಮೃಚ್ಛಕಟಿಕದ ಭಾಷೆಯ ಸ್ವರೂಪವನ್ನು ವಿಮರ್ಶಿಸಿ ಅದರ ಆಧಾರದ ಮೇಲೆ ಗವರೋಂಸ್ಕಿಯವರು ಈ ನಾಟಕವು ತುಂಬ ಈಚಿನದೆಂದರೆ ನಾಲ್ಕನೆಯ ಶತಮಾನದ್ದಾಗಬಹುದೆಂದು ನಿರ್ಧರಿಸುತ್ತಾರೆ. ಆರನೆಯ ಅಂಕದಲ್ಲಿ ಬರುವ ಜ್ಯೋತಿಷಾಂಶಗಳ ಆಧಾರದ ಮೇಲೆ ಯಾಕೊಬಿಯವರು ಈ ನಾಟಕವು ನಾಲ್ಕನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ. ನಾಟಕ ಸ್ವರೂಪವನ್ನು ಪರಿಶೀಲಿಸಿ, ವಿಷೆಲ್ ಅವರು ಇದು ಕಾಳಿದಾಸಾದಿಗಳ ಕಾಲದ್ದು ಎಂದರೆ ಐದನೆಯ ಶತಮಾನದ್ದು ಎಂದು ಹೇಳುತ್ತಾರೆ. ವಿಂಟರ್ನಿಟ್ಸ್ ಅವರು ಮೃಚ್ಛಕಟಿಕದ ಕಾಲನಿರ್ಣಯದ ಪ್ರಯತ್ನವು ನಿಷ್ಫಲವೆಂದರೂ ಇದನ್ನು ಕಾಳಿದಾಸನ ಕಾಲಕ್ಕಿಂತ ಹಿಂದಿನದೆಂದು ಭಾವಿಸುವಂತಿದೆ (G.I.L. iii ೨೦೩ and Note ೨). ಹೀಗೆ ವಿದ್ವಾಂಸರ ಬಹು ಮತಗಳು ಕ್ರಿ.ಶ. ನಾಲ್ಕು ಅಥವಾ ಐದನೆಯ ಶತಮಾನಕ್ಕೆ ಅನುಕೂಲವಾಗಿವೆ.

ಆದರೂ ಶೂದ್ರಕನು ಮೂರನೆಯ ಶತಮಾನದಲ್ಲಿದ್ದ ಅಭೀರ ರಾಜನಾದ ಶಿವದತ್ತನಾಗಿರಬೇಕೆಂದು ಸ್ಟೆನ್ ಕೋನೋ ಎಂಬ ಪಂಡಿತರು ಅಭಿಪ್ರಾಯಪಡುತ್ತಾರೆ. ಹೀಗೆಂದು ಹೇಳಲು ಅವರಿಗೆ ಇರುವ ಮುಖ್ಯ ಆಧಾರ—ಈ ನಾಟಕದಲ್ಲಿ “ಗೋಪಾಲ” ದಾರಕನಾದ ಆರ್ಯಕನು ಪಾಲಕ ರಾಜನನ್ನು ದೊರೆತನದಿಂದ ತಪ್ಪಿಸುವುದು; ಅಭೀರರೂ ಮುಖ್ಯವಾಗಿ “ಗೋಪಾಲ” ರು ಅಥವಾ ಪಶುಪಾಲಕರಾಗಿದ್ದರೆಂಬುದು ಅವರ ತರ್ಕ. ಆದರೆ ಇದು ಸಂಭವವಾಗಿ ಕಾಣುವುದಿಲ್ಲ. “ಗೋಪಾಲ” ನೆಂದರೆ ದನಕಾಯುವವನೆಂದೇ ಅರ್ಥವಿರಲಾರದು; ಪಾಲಕನೆಂಬುದು ಹೇಗೆ ಹೆಸರೋ ಹಾಗೆ ಗೋಪಾಲನೆಂಬುದೂ ಹೆಸರಾಗಿರುವಂತೆ ತೋರುತ್ತದೆ; ಮಹಾಸೇನನಿಗೆ ಗೋಪಾಲ ಪಾಲಕ ಎಂಬ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಂತೆ “ಪ್ರತಿಜ್ಞಾ ಯೌಗಂಧರಾಯಣ” ದಲ್ಲಿ ಹೇಳಿದೆ. ಇವರ ಕಾಲದಲ್ಲಿ ರಾಜ್ಯ ವಿಪ್ಲವವಾಗಿ “ಗೋಪಾಲ ದಾರಕ” ನು ಪಾಲಕನನ್ನು ರಾಜ್ಯಚ್ಯುತನನ್ನಾಗಿ ಮಾಡಿದ ವೃತ್ತಾಂತವು ಬೃಹತ್ಕಥೆಯಲ್ಲಿ ಇದ್ದರೂ ಇದ್ದಿರಬಹುದು.

ಮೆಹೆಂಡಲೆಯವರು (Bhandarkar Commemoration Vol., p. 374) ಮುಖ್ಯವಾಗಿ ರಾಜತರಂಗಿಣಿಯ (* ಆಧಾರದ ಮೇಲೆ ಶೂದ್ರಕನನ್ನು ಆರನೆಯ ಶತಮಾನದ ಮಧ್ಯಕ್ಕೆ ಹಾಕುತ್ತಾರೆ. ಆದರೆ ಇಲ್ಲಿ ಶೂದ್ರಕನ ಪ್ರಸ್ತಾಪ ಬಂದಿರುವುದು ಬಹು ಸೂಕ್ಷ್ಮವಾಗಿದೆ. ಅಲ್ಲದೆ ಕಲ್ಹಣನು ತನ್ನ ಕಾಲಕ್ಕಿಂತ ಬಹು ಹಿಂದಿನ ಸಂಗತಿಗಳನ್ನು ಹೇಳುವಾಗ ಅವನ ಕಾಲನಿರ್ದೇಶನವು ನಂಬುವುದಕ್ಕರ್ಹವಲ್ಲ.

ವಿ.ಜಿ. ಪರಂಜಪೆಯವರು ಶೂದ್ರಕನು ಆಂಧ್ರಭೃತ್ಯರ ಮೂಲ ಪುರುಷನಿರಬಹುದೆಂದೂ ಆದ್ದರಿಂದ ಈ ನಾಟಕದ ಕಾಲ ಕ್ರಿ.ಪೂ. ಮೊದಲನೆಯ ಶತಮಾನವಿರಬಹುದೆಂದೂ ಹೇಳುತ್ತಾರೆ.* ಬೌದ್ಧರಿಗೆ ಆಗ ಇದ್ದ ಮರ್ಯಾದೆ, ಬ್ರಾಹ್ಮಣನು ಶೂದ್ರಿತಿಯನ್ನು ಮದುವೆಯಾಗುವ ಪದ್ಧತಿ, ನಾಟ್ಯಶಾಸ್ತ್ರ ವಿರೋಧ, ಸಂವಾಹಕ ದ್ಯೂತಕರ ಮಾಧುರರು ಆಡುವ ಮಿಶ್ರ ಪ್ರಾಕೃತ, ನಾಟಕದಲ್ಲಿ ಪ್ರಾಕೃತದ ಅಧಿಕವಾದ ಉಪಯೋಗ* ಪದ್ಯ ಬಂಧಕ್ಕೂ ಛಂದೋಲಕ್ಷಣಕ್ಕೂ ವಿಶೇಷ ಲಕ್ಷ್ಯ ಕೊಡದಿರುವಿಕೆ—ಮುಂತಾದ ಕಾರಣಗಳಿಂದ ಅವರು ಈ ಪ್ರಾಚೀನ ಕಾಲವನ್ನು ಸಮರ್ಥಿಸಿರುತ್ತಾರೆ.

ಮೇಲೆ ಹೇಳಿದ ಆಂಧ್ರ ಮೂಲಪುರುಷನ ಹೆಸರು ಒಂದೊಂದು ಪುರಾಣದಲ್ಲಿ ಒಂದೊಂದು ರೂಪದಲ್ಲಿ ದೊರೆಯುತ್ತದೆ—ಶಿಮುಖ, ಸಿಂಧುಕ, ಶಿಶುಕ, ಶಿಪ್ರಕ, ಶೂದ್ರ* ಇತ್ಯಾದಿ. ಇವುಗಳಲ್ಲಿ ಯಾವುದು ಮೂಲವೋ ಯಾವುದು ಅಪಭ್ರಂಶವೋ ಗೊತ್ತು ಮಾಡುವುದು ಕಷ್ಟ. ಮೃಚ್ಛಕಟಿಕವು ಚಾರುದತ್ತರಿಂದ ಹುಟ್ಟಿದ್ದು, ಚಾರುದತ್ತದ ಕಾಲವು ಮೂರನೆಯ ಶತಮಾನವಾಗುವುದಾದರೆ, ಮೃಚ್ಛಕಟಿಕಕ್ಕೆ ಕ್ರಿ.ಪೂ. ಒಂದನೆಯ ಶತಮಾನವು ಅಸಂಭವವಾಗುತ್ತದೆ. ಮಿಕ್ಕ ಕಾರಣಗಳು ಕ್ರಿ.ಶ. ೪-೫ನೆಯ ಶತಮಾನಕ್ಕೆ ಅಸಮಂಜಸವಾಗಲಾರವು.

ಕಾವ್ಯಾಲಂಕಾರ ಸೂತ್ರವೃತ್ತಿಯ ವ್ಯಾಖ್ಯಾನದಲ್ಲಿ ಶೂದ್ರಕನು ದಾಕ್ಷಿಣಾತ್ಯನೆಂದು ಹೇಳಿದೆ. ಚಂದನಕನು ತಾನು ದಾಕ್ಷಿಣಾತ್ಯನೆಂದು ಹೇಳಿಕೊಳ್ಳುವುದು, “ಕರ್ಣಾಟ ಕಲಹ”* ವನ್ನು ಮಾಡುವುದು, ನಾನಾ ‘ಮ್ಲೇಚ್ಛ’ ಜಾತಿಗಳ ಹೆಸರು ಹೇಳುವುದು (ಅಂಕ ೬) ಇವೆಲ್ಲಾ ಆ ಅಭಿಪ್ರಾಯಕ್ಕೆ ಉಪಷ್ಟಂಭಕವಾಗಿ ಎಣಿಸಲ್ಪಟ್ಟಿವೆ. ಆದರೆ ಇದೇನು ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ. ಏಕೆಂದರೆ, ದಾಕ್ಷಿಣಾತ್ಯರ ವಿಚಾರವನ್ನು ಕಂಡು, ಕೇಳಿ ಅಥವಾ ಊಹಿಸಿದ ಔತ್ತರೇಯನೂ ಮೇಲ್ಕಂಡ ವಾಕ್ಯಗಳನ್ನು ಆಡಬಹುದು, ಬರೆಯಬಹುದು.

ಆದ್ದರಿಂದ ಸದ್ಯದಲ್ಲಿ ಶೂದ್ರಕನ ಕಾಲವನ್ನು ಹಿಂದೆ ಹೇಳಿದಂತೆ ನಾಲ್ಕು ಅಥವಾ ಐದನೆಯ ಶತಮಾನವೆಂದು ಸ್ಥೂಲವಾಗಿ ಮಾತ್ರ ಇಟ್ಟುಕೊಳ್ಳಬಹುದಾಗಿದೆ.

ಇದು ಮೃಚ್ಛಕಟಿಕದ ಕಥೆ—

ಉಜ್ಜಯಿನಿಯಲ್ಲಿ ಚಾರುದತ್ತನೆಂಬ ವರ್ತಕನಿದ್ದನು. ಅವನು ತನ್ನ ಐಶ್ವರ್ಯವನ್ನೆಲ್ಲಾ ಪರೋಪಕಾರದಲ್ಲಿ ಕಳೆದು ಬಡವನಾಗಿದ್ದನು. ಆದರೂ ಅವನ ಸುಗುಣಗಳಿಗಾಗಿ ಅವನನ್ನು ಊರಿಗೆ ಊರೇ ಮೆಚ್ಚುತ್ತಿತ್ತು. ಹೀಗೆ ಅವನನ್ನು ಮೆಚ್ಚಿದ್ದವರಲ್ಲಿ ಆ ಊರಿನ ಪ್ರಸಿದ್ಧ ವೇಶ್ಯೆಯಾದ ವಸಂತಸೇನೆಯೆಂಬವಳೊಬ್ಬಳು; ಅವಳು ಒಂದು ದಿನ ಸಾಯಂಕಾಲ ಉದ್ಯಾನದಿಂದ ಬರುತ್ತಿರಲು ಶಕಾರ ವಿಟ ಚೇಟರು ಅವಳ ಬೆನ್ನು ಹತ್ತುವರು. ದಾರಿಯಲ್ಲಿ ಚಾರುದತ್ತನ ಮನೆ ಸಿಕ್ಕಲು ಅವಳು ಅಲ್ಲಿ ಆಶ್ರಯಪಡೆದು ತನ್ನ ಆಭರಣಗಳನ್ನು ರಕ್ಷಣೆಗಾಗಿ ಚಾರುದತ್ತನ ಕೈಗೆ ಕೊಡುವಳು. ಅವನು ಅದನ್ನು ತನ್ನ ಮಿತ್ರ ಮೈತ್ರೇಯನಿಗೆ ಒಪ್ಪಿಸಿ ತಾನು ವಸಂತಸೇನೆಯನ್ನು ಅವಳ ಮನೆಗೆ ಬಿಟ್ಟು ಬರುವನು. (೧)

ಚಾರುದತ್ತನಲ್ಲಿ ಹಿಂದೆ ಕಾಲು ಒತ್ತುವ ಕೆಲಸದಲ್ಲಿದ್ದ ಸಂವಾಹಕನು ಜೂಜಾಡಿ ಸೋತು ವಸಂತಸೇನೆಯ ಮನೆಯಲ್ಲಿ ಅವಿತುಕೊಳ್ಳುವನು. ಚಾರುದತ್ತನಲ್ಲಿದ್ದನೆಂದು ಕೇಳಿ ಸಂತೋಷಿಸಿ ಅವಳು ಅವನನ್ನು ಬಿಡಿಸುವಳು. ಸಂವಾಹಕನು ‘ಭಿಕ್ಷು’ ವಾಗುವನು. (೨).

ವಸಂತಸೇನೆಯಲ್ಲಿ ದಾಸಿಯಾಗಿದ್ದ ಮದನಿಕೆಯನ್ನು ಬಿಡಿಸಿಕೊಳ್ಳಲು ಹಣಕ್ಕೋಸ್ಕರ ಅವಳ ಅನುರಾಗಿಯಾದ ಶರ್ವಿಳಕನು ಚಾರುದತ್ತನ ಮನೆಗೆ ಕನ್ನ ಹಾಕುವನು. ವಸಂತಸೇನೆ ಇಟ್ಟಿದ್ದ ಒಡವೆಗಳು ಸಿಕ್ಕುವುವು. ತಮ್ಮ ಮನೆಯಲ್ಲಿ ನ್ಯಾಸವಾಗಿ ಇಟ್ಟಿದ್ದ ಒಡವೆ ಕಳುವಾಯಿತೆಂದು ತಿಳಿದು ಚಾರುದತ್ತನು ಮೈತ್ರೇಯನೊಡನೆ ವಸಂತಸೇನೆಗೆ ಕಳುಹಿಸುವನು. (೩)

ಶರ್ವಿಳಕನು ಒಡವೆಯನ್ನು ಮದನಿಕೆಗೆ ತಂದುಕೊಡುವನು. ಅವಳು ಅವನಿಂದ ನಿಜಸ್ಥಿತಿಯನ್ನು ಅರಿತು ಚಾರುದತ್ತನೇ ಕಳುಹಿಸಿಕೊಟ್ಟಂತೆ ಆ ಒಡವೆಗಳನ್ನು ವಸಂತಸೇನೆಗೆ ಕೊಡಿಸುವಳು. ಇವರ ಪ್ರೇಮಸಂಭಾಷಣೆಯನ್ನು ಕೇಳಿದ ವಸಂತಸೇನೆ ಮದನಿಕೆಯನ್ನು ಶರ್ವಿಳಕನಿಗೆಕೊಟ್ಟು ಕಳುಹಿಸುವಳು; ಅವರು ರಥದಲ್ಲಿ ಕುಳಿತು ಹೋಗುತ್ತಿರಲು ತನ್ನ ಮಿತ್ರನಾದ ಆರ್ಯಕನನ್ನು ಪಾಲಕರಾಜನು ಸೆರೆಹಾಕಿದನೆಂದು ಕೇಳಿ, ಶರ್ವಿಳಕನು ಅವನನ್ನು ಬಿಡಿಸಿಕೊಂಡು ಬರಲು ಹೋಗುವನು. ಈ ಮಧ್ಯೆ ಚಾರುದತ್ತನು ವಸಂತಸೇನೆಯ ಒಡವೆಯನ್ನು ಜೂಜಿನಲ್ಲಿ ಕಳೆದನೆಂದೂ ಅದಕ್ಕೆ ಪ್ರತಿಯಾಗಿ ಹಾರವನ್ನು ಕಳುಹಿಸಿದನೆಂದೂ ಮೈತ್ರೇಯನು ಅದನ್ನು ವಸಂತಸೇನೆಗೆ ತಂದು ಕೊಡುವನು. (೪)

ವಸಂತಸೇನೆ ಚಾರುದತ್ತನ ಮನೆಗೆ ಬಂದು ತಾನು ಚಾರುದತ್ತನಿಂದ ಬಂದ ರತ್ನಹಾರವನ್ನು ಜೂಜಿನಲ್ಲಿ ಸೋತದ್ದರಿಂದ ಅದಕ್ಕೆ ಬದಲಾಗೆಂದು ಒಡವೆಗಳ ಗಂಟನ್ನು ಕೊಡುವಳು. ಚಾರುದತ್ತನು ನಿಜಸ್ಥಿತಿಯನ್ನು ತಿಳಿದು ಸಂತೋಷಿಸುವನು. ಕತ್ತಲೆಯಾದ್ದರಿಂದಲೂ ಮಳೆ ಹಿಡಿದುಕೊಂಡದ್ದರಿಂದಲೂ ವಸಂತಸೇನೆ ಅಂದಿನರಾತ್ರಿ ಅವನ ಮನೆಯಲ್ಲಿಯೇ ನಿಲ್ಲುವಳು. (೫)

ಮಾರನೆಯ ದಿನ ಬೆಳಗ್ಗೆ ಅವಳು, “ಮಣ್ಣಿನ ಗಾಡಿ ಬೇಡ, ಚಿನ್ನದ ಗಾಡಿಯೇ ಬೇಕು” ಎಂದು ಅಳುತ್ತಿದ್ದ ರೋಹಸೇನನನ್ನು ಸಮಾಧಾನ ಮಾಡಿ ತನ್ನ ಒಡವೆಗಳನ್ನು ತೆಗೆದು ಅವನ ಗಾಡಿಗೆ ಹಾಕುವಳು. ಅನಂತರ ಚಾರುದತ್ತನು ಹೇಳಿ ಹೋಗಿದ್ದಂತೆ ಪುಷ್ಪ ಕರಂಡಕ ಜೀರ್ಣೋದ್ಯಾನಕ್ಕೆಂದು ಹೊರಟು ಅವನ ಗಾಡಿಗೆ ಬದಲಾಗಿ ಬಾಗಿಲಲ್ಲಿ ನಿಂತಿದ್ದ ಶಕಾರನ ಗಾಡಿಯನ್ನು ಏರುವಳು. ಚಾರುದತ್ತನ ಗಾಡಿಯಲ್ಲಿ, ಸೆರೆಯಿಂದ ತಪ್ಪಿಸಿಕೊಂಡು ಬಂದಿದ್ದ ಆರ್ಯಕನು ಹತ್ತಿಕೊಂಡು ಹೋಗುತ್ತ ದಾರಿಯಲ್ಲಿ ವೀರಕಲ ನಂದನಕರೆಂಬ ಕಾವಲುಗಾರರ ಕೈಗೆ ಬೀಳುವನು. ಚಂದನಕನು ಆರ್ಯಕನನ್ನು ವಿಶ್ವಾಸದಿಂದ ಬಿಟ್ಟಿದ್ದಲ್ಲದೆ, ಸಹಾಯಕ್ಕಿರಲೆಂದು ಅವನಿಗೆ ತನ್ನ ಕತ್ತಿಯನ್ನು ಕೊಟ್ಟು ಕಳುಹಿಸಿದನು. (೬)

ವಸಂತಸೇನೆಯನ್ನು ಎದುರುನೋಡುತ್ತಿದ್ದ ಚಾರುದತ್ತನು ತನ್ನ ಗಾಡಿಯಲ್ಲಿ ಅವಳಿಗೆ ಬದಲಾಗಿ ಆರ್ಯಕನು ಬಂದದ್ದನ್ನು ಕಂಡು ಅವನನ್ನು ಅದೇ ಗಾಡಿಯಲ್ಲಿ ಸುರಕ್ಷಿತಸ್ಥಾನಕ್ಕೆ ಕಳುಹಿಸಿಕೊಡುವನು. (೭)

ಚಾರುದತ್ತನ ಮನೆಯ ಬಾಗಿಲಲ್ಲಿ ನಿಂತಿದ್ದ ಶಕಾರನ ಗಾಡಿಯನ್ನು ಚಾರುದತ್ತನದೆಂದು ಭ್ರಮಿಸಿ ವಸಂತಸೇನೆ ಅದರಲ್ಲಿ ಕುಳಿತುಕೊಳ್ಳಲು ಅದು ಪುಷ್ಪ ಕರಂಡಕ ಜೀರ್ಣೋದ್ಯಾನದಲ್ಲಿದ್ದ ಶಕಾರನ ಹತ್ತಿರಕ್ಕೆ ಬರುವುದು. ಶಕಾರನಿಗೂ ವಸಂತಸೇನೆಗೂ ಮಾತು ನಡೆದು ಶಕಾರನು ರೇಗಿ, ವಸಂತಸೇನೆಯ ಕತ್ತು ಕಿವಿಚಿ, ಅವಳನ್ನು ತರಗಲೆಯಲ್ಲಿ ಮುಚ್ಚಿ ಹೋಗುವನು. ಅಲ್ಲಿಗೆ ಬಟ್ಟೆ ಒಗೆಯುವದಕ್ಕೆಂದು ಬಂದಿದ್ದ ಭಿಕ್ಷುವು (ಸಂವಾಹಕ) ಅವಳನ್ನು ಬದುಕಿಸಿ ಕರೆದುಕೊಂಡು ಹೋಗುವನು.(೮)

ಶಕಾರನು ಚಾರುದತ್ತನೇ ವಸಂತಸೇನೆಯನ್ನು ಕೊಂದನೆಂದು ದೂರು ತರುವನು. ನ್ಯಾಯಸ್ಥಾನದಲ್ಲಿ ವಿಚಾರಣೆಯಾಗಿ ದೂರು ಚಾರುದತ್ತನ ಮೇಲೆ ಹೊರಲು, ರಾಜನು ಅವನನ್ನು ಶೂಲಕ್ಕೆ ಹಾಕಿಸಬೇಕೆಂದು ಅಪ್ಪಣೆ ಮಾಡುವನು. (೯)

ಚಂಡಾಲರು ಚಾರುದತ್ತನನ್ನು ವಧ್ಯಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿರಲು, ಭಿಕ್ಷುವು ವಸಂತಸೇನೆಯನ್ನು ಕರೆದುಕೊಂಡು ಬರುವನು. ವಸಂತಸೇನೆ ಬದುಕಿರುವಳೆಂಬ ವರ್ತಮಾನ ಪಾಲಕನಿಗೆ ಹೋಗುವುದು. ಸ್ಥಾವರಕನು ಶಕಾರನೇ ವಸಂತಸೇನೆಯನ್ನು ಕೊಂದನೆಂದು ಸಾಕ್ಷಿ ಹೇಳುವನು. ಈ ಮಧ್ಯೆ ಆರ್ಯಕಾದಿಗಳು ಪಾಲಕನನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವರು. ಚಾರುದತ್ತನನ್ನು ಶೂಲಕ್ಕೆ ಹಾಕುವರೆಂದು ಕೇಳಿ ಅವನ ಹೆಂಡತಿಯಾದ ಧೂತಾದೇವಿ ಅಗ್ನಿಪ್ರವೇಶ ಮಾಡಬೇಕೆಂದಿರಲು ಚಾರುದತ್ತನು ಬಂದು ಅದನ್ನು ತಪ್ಪಿಸುವನು. ಅವನ ಪ್ರಾರ್ಥನೆಯಂತೆ ರಾಜನು ಶಕಾರನ ಅಪರಾಧವನ್ನು ಕ್ಷಮಿಸುವನು. ಹೊಸ ಆಡಳಿತದಲ್ಲಿ ಎಲ್ಲರಿಗೂ ಮೇಲಾಗುವುದು; ವೇಶ್ಯೆಯಾಗಿದ್ದ ವಸಂತಸೇನೆ ‘ವಧು’ ವಾಗುವಳು.*

ಇದರಲ್ಲಿ ಮೊದಲ ನಾಲ್ಕು ಅಂಕಗಳ ಕಥೆಯೂ ‘ಚಾರುದತ್ತ’ ದ ಕಥೆಯೂ ಸ್ವಲ್ಪ ಹೆಚ್ಚುಕಡಮೆ ಒಂದೇ ಆಗಿದೆ (ಪುಟ ೮೧ನ್ನು ನೋಡಿ). ಇವೆರಡಕ್ಕೂ ಮಾತು, ಕಥೆ, ಸನ್ನಿವೇಶ, ಪಾತ್ರ ಮುಂತಾದ ಅಂಶಗಳೆಲ್ಲದರಲ್ಲಿಯೂ ಎಷ್ಟು ಸಾದೃಶ್ಯವಿದೆಯೆಂದರೆ, ಇವೆರಡರಲ್ಲಿ ಒಂದರ ಪಾಠಾಂತರವೇ ಮತ್ತೊಂದೆಂದು ಹೇಳಬಹುದಾಗಿದೆ. ಹೀಗೆ ‘ಚಾರುದತ್ತ’ ವೇ ಮೂಲವೆಂದೂ ಅದರ ಮೇಲೆ ಮೃಚ್ಛಕಟಿಕ ಹುಟ್ಟಿತೆಂದೂ ಹಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇದೇ ಸಂಭವವಾಗಿ ಕಾಣುತ್ತದೆ.

ಈ ನಾಟಕದ ವಸ್ತುವಿನಲ್ಲಿ ಎರಡು ಭಾಗಗಳಿವೆ; ಒಂದು ಚಾರುದತ್ತ ವಸಂತಸೇನೆಯರಿಗೆ ಸಂಬಂಧಪಟ್ಟ ಸಾಮಾಜಿಕ ವೃತ್ತಾಂತ; ಮತ್ತೊಂದು ಆರ್ಯಕಪಾಲಕರಿಗೆ ಸಂಬಂಧಪಟ್ಟ ರಾಜಕೀಯ ವೃತ್ತಾಂತ.* ಇವುಗಳಲ್ಲಿ ರಾಜಕೀಯ ವೃತ್ತಾಂತ ಬರುವುದು ಮೃಚ್ಛಕಟಿಕದಲ್ಲಿ ಮಾತ್ರ; ಚಾರುದತ್ತದ ನಾಲ್ಕು ಅಂಕಗಳು ಮುಂದುವರಿದಿದ್ದು ಆ ಭಾಗ ದೊರೆತರೆ ಅದರಲ್ಲಿ ರಾಜಕೀಯ ವೃತ್ತಾಂತವೂ ದೊರೆಯಬಹುದೋ ಏನೋ; ಆದರೆ ಈಗಂತೂ ಅದರಲ್ಲಿ ಈ ವೃತ್ತಾಂತದ ಗಂಧವೂ ಇಲ್ಲ. ಆದ್ದರಿಂದ ‘ಶೂದ್ರಕ’ ನು ಆಗಲೇ ಸಿದ್ಧವಾಗಿದ್ದ ಚಾರುದತ್ತನ ಕಥೆಯೊಡನೆ ಈ ರಾಜ್ಯ ಕ್ರಾಂತಿಯ ಕಥೆಯನ್ನು ಜೋಡಿಸಿ ಮೃಚ್ಛಕಟಿಕವಾಗಿ ಮಾಡಿದ್ದಾನೆಂದು ಕೆಲವರು ಊಹಿಸುತ್ತಾರೆ.

ಇವುಗಳಲ್ಲಿ ಚಾರುದತ್ತನ ಕಥೆಯೇ ಪ್ರಧಾನ; ಆರ್ಯಕನ ಕಥೆ ಗೌಣ, ಪೋಷಕ.* (ಕವಿಯ ಅಭಿಪ್ರಾಯವೂ ಇದೇಯೆ ಎಂದು ‘ಮೃಚ್ಛಕಟಿಕ’* ವೆಂಬ ನಾಮ ನಿರ್ದೇಶದಿಂದಲೇ ಊಹಿಸಬಹುದು.) ಆದ್ದರಿಂದಲೇ ಇದು ನಾಲ್ಕನೆಯ ಅಂಕದಿಂದ ಮುಂದಕ್ಕೂ ಅಷ್ಟು ವಿಸ್ತೃತವಾಗುವುದಿಲ್ಲ; ಆದ ಕಡೆಯಲ್ಲಿ (ಅಂಕ ೬-೧೦) ಚಾರುದತ್ತ ಧೂತಾದೇವಿ ಮುಂತಾದವರ ಪಾತ್ರಗಳನ್ನು ವಿವರಿಸುವುದರ ಮೂಲಕ ಮುಖ್ಯ ಕಥೆಯನ್ನೇ ಪುಷ್ಟಿಗೊಳಿಸುತ್ತದೆ. ಆರ್ಯಕನು ಕಾಣಿಸಿಕೊಳ್ಳುವುದು ಒಂದು ಸಾರಿ ಮಾತ್ರ; ರಾಜನೆನ್ನಿಸಿಕೊಂಡಿದ್ದ ಪಾಲಕನು ರಂಗದ ಮೇಲೆ ಬರುವುದೇ ಇಲ್ಲ. ಚಾರುದತ್ತ-ವಸಂತಸೇನೆಯರ ಕಥೆಯ ಜೊತೆಯಲ್ಲಿ ಶರ್ವಿಲಕ-ಮದನಿಕೆಯರ ಉಪಕಥೆ ಬೇರೆ ಬರುತ್ತದೆ. ಇವೆಲ್ಲವುಗಳನ್ನೂ ಕವಿ ಹೊಂದಿಕೆಯಾಗುವಂತೆ ಸೇರಿಸಿ ರಸವತ್ತಾದ ಸನ್ನಿವೇಶಗಳು ಬರುವಂತೆಯೂ ಚಾರುದತ್ತ-ವಸಂತಸೇನೆಯರ ಪಾತ್ರಗಳು ವಿಕಾಸಗೊಳ್ಳುವಂತೆಯೂ, ಅವರ ಪ್ರಣಯವು ಪುಷ್ಟವಾಗಿ, ಅವರನ್ನು ಪ್ರತ್ಯಾಶೆ ನಿರಾಶೆಗಳಿಗೆ ಸಿಕ್ಕಿಸಿ, ಪ್ರಾಣಾಪಯವನ್ನು ತಂದು, ಕೊನೆಗೆ ಅನಿರೀಕ್ಷಿತವಾಗಿ ಸುಖದಲ್ಲಿ ಪರಿಣಮಿಸುವಂತೆಯೂ, ಸಂವಿಧಾನವನ್ನು ರಚಿಸಿದ್ದಾನೆ. ಎರಡನೆಯ ಅಂಕ ಐದನೆಯ ಅಂಕ ಮುಂತಾದ ಎಡೆಗಳಲ್ಲಿ ಕಥೆಯ ಓಟ ಕಡಮೆಯಾದರೆ ಅದು ಲೋಪವೆನ್ನಿಸುವುದಿಲ್ಲ; ಅದರಿಂದ ನಾಯಕ ನಾಯಿಕೆಯರ ಪ್ರಣಯವು ಹೇಗೆ ಮಾಗಿ ಪಕ್ವವಾಯಿತೆಂದು ಗೊತ್ತಾಗುವುದು. ಈ ಕಥೋಪಕಥೆಗಳ ಮಧ್ಯದಲ್ಲಿ ಕವಿ ಶರ್ವಿಲಕನ ಕಳ್ಳತನ, ಜೂಜುಕಾರರ ಜಗಳ, ನಗರ ರಕ್ಷಕರ ಹೋರಾಟ, ನ್ಯಾಯಸ್ಥಾನದಲ್ಲಿ ವಿಚಾರಣೆ ಮುಂತಾದ ಘಟನೆಗಳನ್ನು ರಸವತ್ತಾಗುವ ರೀತಿಯಲ್ಲಿ ವಿಸ್ತರಿಸಿ ಅವಕ್ಕೆ ಕಳೆ ಕಟ್ಟಿದ್ದಾನೆ.

ಆರ್ಯಕಪಾಲಕರ ರಾಜಕೀಯ ವೃತ್ತಾಂತವು ಆಮೇಲೆ ಸೇರಿದ್ದೆಂಬುದು ನಿಜವಾದರೆ, ಅದನ್ನು ಯಾರೇ ಸೇರಿಸಿರಲಿ ಅವನು ಬಹು ನೈಪುಣ್ಯದಿಂದ ಸೇರಿಸಿದ್ದಾನೆಂದು ಒಪ್ಪಿಕೊಳ್ಳಬೇಕು. ಇದಕ್ಕಾಗಿ ಅವನು ಪಾತ್ರಗಳನ್ನೂ ಘಟನೆಗಳನ್ನೂ ಎರಡು ಕಥೆಗಳಿಗೆ ಮಧ್ಯೆ ಲಾಳಿ ಆಡಿಸಿದಂತೆ ಆಡಿಸಿ ಅವುಗಳನ್ನು ಹಾಸುಹೊಕ್ಕಾಗಿ ನೆಯ್ದಿದ್ದಾನೆ. ಶಕಾರನು ದೊರೆಯ ಭಾವ ಮೈದುನ; ಅವನಿಗೆ ವಸಂತಸೇನೆಯಮೇಲೆ ಮೋಹ. ಸಂವಾಹಕನು ಚಾರುದತ್ತನ ಹತ್ತಿರವಿದ್ದು ಬಂದು ವಸಂತಸೇನೆಯಿಂದ ಸಹಾಯಪಡೆದು ಅವಳಿಗೆ ಪ್ರತ್ಯುಪಕಾರಮಾಡಿ ಚಾರುದತ್ತನನ್ನು ಬದುಕಿಸುವನು. ಚಾರುದತ್ತನ ಮನೆಯಲ್ಲಿ ಕಳ್ಳತನ ಮಾಡಿದ ಶರ್ವಿಳಕನು ಆರ್ಯಕನ ಸ್ನೇಹಿತ. ಪಾಲಕನ ಸೇವೆಯಲ್ಲಿದ್ದರೂ ಚಂದನಕನು ಆರ್ಯಕ ಚಾರುದತ್ತರಿಗೆ ಬೇಕಾದವನು. ಚಾರುದತ್ತನ ಸಾರಥಿಯಾದ ವರ್ಧಮಾನಕನು ಆರ್ಯಕನನ್ನೂ ಶಕಾರನ ಸಾರಥಿಯಾದ ಸ್ಥಾವರಕನು ವಸಂತಸೇನೆಯನ್ನೂ ತಮ್ಮ ತಮ್ಮ ಗಾಡಿಯಲ್ಲಿ ಕೂರಿಸಿಕೊಂಡು ಉದ್ಯಾನಕ್ಕೆ ತಂದು ಬಿಡುವರು. ಇವರೆಲ್ಲರೂ ಆರ್ಯಕ ಚಾರುದತ್ತರ ಪಕ್ಷವನ್ನು ವಹಿಸುವರು. ಶಕಾರನು ಶರಣಾಗತನಾಗುವನು. ಆರ್ಯಕ ಚಾರುದತ್ತರು ಒಂದಾಗುವರು. ಇದೇ ರೀತಿ, ವಸಂತಸೇನೆಯ ಒಡವೆ ಚಾರುದತ್ತನಿಂದ ಶರ್ವಿಳಕನಿಗೂ ಅವನಿಂದ ವಸಂತಸೇನೆಗೂ ಪುನಃ ಅವಳಿಂದ ರೋಹಸೇನನಿಗೂ ಅವನಿಂದ ವಿದೂಷಕನಿಗೂ ಬಂದು, ನ್ಯಾಯಸ್ಥಾನದಲ್ಲಿ ಚಾರುದತ್ತನಿಗೆ ವಿರುದ್ಧ ಸಾಕ್ಷ್ಯವಾಗುವುದು. ಹೀಗೆ ಈ ನಾಟಕದಲ್ಲಿ ಸುಮಾರು ಮುವ್ವತ್ತು ಪಾತ್ರಗಳಿದ್ದರೂ, ಹಲವು ಘಟನಾವಳಿಗಳಿದ್ದರೂ ಕಥೆಯ ವಿಸ್ತಾರ ಸ್ವಾರಸ್ಯಗಳನ್ನು ಗಮನಕ್ಕೆ ತಂದುಕೊಂಡರೆ ಅವು ಹೆಚ್ಚಲ್ಲವೆಂದೂ ಅವುಗಳನ್ನು ಕವಿ ಮಿತವಾಗಿ ತಂದಿದ್ದಾನೆಂದೂ, ಆದರೆ ಪೂರ್ತಿಯಾಗಿ ಉಪಯೋಗಿಸಿಕೊಂಡಿದ್ದಾನೆಂದೂ ಹೇಳಬೇಕು.

ಮೃಚ್ಛಕಟಿಕದ ವಸ್ತುಸ್ವರೂಪದಲ್ಲಿ ಮತ್ತೊಂದು ವಿಶೇಷವಿದೆ; ಅದೇನೆಂದರೆ, ಇದು ಒಬ್ಬ ಬ್ರಾಹ್ಮಣನ ಕಥೆ. ಅವನು ಜಾತಿಯಲ್ಲಿ ಬ್ರಾಹ್ಮಣ, ವೃತ್ತಿಯಲ್ಲಿ ವರ್ತಕ, ದಾನಧರ್ಮದಲ್ಲಿ ಕ್ಷತ್ರಿಯ. ದಾನ ಮಾಡಿ ಮಾಡಿ ಬಡತನವನ್ನು ಗಳಿಸಿಕೊಂಡಿದ್ದ ಇವನನ್ನು ಮೆಚ್ಚಿ ಬಂದಳು ವಸಂತಸೇನೆ.-ಉಜ್ಜಯಿನಿಯ ಪ್ರಖ್ಯಾತ ವೇಶ್ಯೆ. ವೇಶ್ಯೆಯಾದರೂ ಅವಳು ಸಂಪನ್ನೆ, ಘನವಂತೆ, ಗುಣ ಗೌರವ ಪಕ್ಷಪಾತಿನಿ; ಆದ್ದರಿಂದ ತನ್ನ ವೃತ್ತಿಗೆ ವಿರುದ್ಧವಾಗಿ ಒಬ್ಬ ಗುಣವಂತನಾದ ಬಡವನನ್ನು ಮೆಚ್ಚಿ ಅವನನ್ನು ಹುಡುಕಿಕೊಂಡು ಹೋಗುವಳು. ಪ್ರಣಯಚರಿತ್ರೆಯಲ್ಲಿ ಇದು ಅಪರೂಪ. ಸ್ತ್ರೀಮೋಹದಲ್ಲಿ ಸಿಕ್ಕಿ ನರಳಿ ಬೀಳಾಗುವ ಪುರುಷರ ಚರಿತ್ರೆಯೇ ಕಥೆಗಳಲ್ಲಿ ಸಾಮಾನ್ಯವಾಗಿ ಪ್ರತಿಪಾದಿತವಾಗಿರುವುದು.

ರತ್ನಾವಳಿ ಮುಂತಾದ ನಾಟಕಗಳಲ್ಲಿರುವಂತೆ ಇದರ ನಾಯಕನು ಹೆಂಡತಿಗೆ ಹೆದರಿಕೊಂಡು ನಡೆಯಬೇಕಾದದ್ದಿಲ್ಲ. ಕೈ ಹಿಡಿದ ಹೆಂಡತಿಯೂ ಮೆಚ್ಚಿ ಬಂದ ಉಪಪತ್ನಿಯೂ ಇಬ್ಬರು ಅಕ್ಕತಂಗಿಯರಂತಿರುವರು; ರೋಹಸೇನನು ಧೂತಾದೇವಿಗೆ ಮಗ; ವಸಂತಸೇನೆಗೆ ಮಗನಿಗಿಂತ ಹೆಚ್ಚು.

ಪ್ರಧಾನ ಪಾತ್ರಗಳಲ್ಲಿಯೂ ಅವರ ಚರಿತ್ರೆಯಲ್ಲಿಯೂ ವಿಶೇಷವಿರುವಂತೆಯೇ ಗೌಣ ಪಾತ್ರಗಳಲ್ಲಿಯೂ ಅವರ ಚರಿತ್ರೆಯಲ್ಲಿಯೂ ಸಹ ವಿಶೇಷವಿದೆ. ಈ ನಾಟಕದ ಪಾತ್ರಗಳಲ್ಲಿರುವ ವೈವಿಧ್ಯವ್ಯಕ್ತಿತ್ವಗಳು ಪ್ರಾಯಶಃ ಮತ್ತಾವ ಸಂಸ್ಕೃತ ನಾಟಕದಲ್ಲಿಯೂ ಇರಲಾರವು. ವಿಟ ಚೇಟ ವಿದೂಷಕರ ಮಾತಿರಲಿ; ಜೂಜುಕೋರ, ಕಳ್ಳ, ಧೂರ್ತ, ಪಟಿಂಗ, ಚಂಡಾಲ ಮುಂತಾದವರನ್ನು ನಾಟಕಕರ್ತನು ಇದರ ಸಂವಿಧಾನದಲ್ಲಿ ಜೋಡಿಸಿ ಕಥೆಯನ್ನು ಗೆಲುವಾಗಿ ಮಾಡಿದ್ದಾನೆ. ಶಕಾರನೂ ಅವನ ವಿಲಕ್ಷಣ ಹಾಸ್ಯವೂ ಬರುವುದು ಇದರಲ್ಲಿಯೇ. ವಿದೂಷಕನ ಹಾಸ್ಯವು ಮಿಕ್ಕ ನಾಟಕಗಳಲ್ಲಿರುವಂತೆ ಕೇವಲ ಅವನ ಹೊಟ್ಟೆಬಾಕತನದ ಆಧಾರದ ಮೇಲೆ ಹುಟ್ಟಿದ್ದಲ್ಲ; ಮೃಚ್ಛಕಟಿಕಕಾರನ ಹಾಸ್ಯವು ಸಂಪ್ರದಾಯಬದ್ಧವಲ್ಲ, ಕ್ಲಿಷ್ಟವಲ್ಲ, ಒಂದು ತೆರದ್ದಲ್ಲ. ಈ ನಾಟಕವು ಶೃಂಗಾರ ಪ್ರಧಾನವೆನ್ನಬೇಕಾದರೂ ಇದರಲ್ಲಿ ಬರುವ ನೈಜವಾದ ಸರ್ವತೋಮುಖವಾದ ಹಾಸ್ಯವು ಪಾಶ್ಚಾತ್ಯ ಗ್ರಂಥಗಳ ಪ್ರಸಿದ್ಧ ಹಾಸ್ಯದೊಡನೆ ಸರಿಯಾಗಬಲ್ಲುದು. ಇದನ್ನು ಪಾಶ್ಚಾತ್ಯ ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ.* ಈ ನಾಟಕವನ್ನು ಓದುತ್ತಿದ್ದರೆ, ನಗುತ್ತ, ಅಳುತ್ತ, ಜಗಳವಾಡುತ್ತ, ಮಹಾಸಮಾರಂಭಗಳಲ್ಲಿ ಬೆರೆಯುತ್ತ, ಗಡಿಬಿಡಿಯಿಂದ ಓಡಾಡುತ್ತ ಇರುವ ಹಲವು ಹದಿನೆಂಟು ಜಾತಿಯ ಜನರು ತುಂಬಿದ ಮಹಾನಗರವು ಕಣ್ಣಿಗೆ ಕಟ್ಟಿದಂತಾಗುತ್ತದೆ. ಬಹುಶಃ ಉಜ್ಜಯಿನಿಯೂ ಆಗಿನ ಕಾಲದಲ್ಲಿ ಹಾಗೆಯೇ ಇದ್ದಿರಬಹುದು. ಮೃಚ್ಛಕಟಿಕವು ಉಜ್ಜಯಿನಿಯ ಕಥೆ.*

ಈ ನಾಟಕದಲ್ಲಿ ದೋಷವಿಲ್ಲದೆ ಇಲ್ಲ. ಶಕಾರನು ತುಂಬ ವಿಕಾರನಾಗಿದ್ದಾನೆ; ದುರ್ಗುಣಗಳೆಲ್ಲವೂ ಒಂದೂ ಬಿಡದಂತೆ ಅವನಲ್ಲಿ ಮನೆ ಮಾಡಿಕೊಂಡಿವೆ; ಅವನು ವಕ್ರ, ದುರ್ಮಾರ್ಗ, ಕ್ರೂರಿ, ಹೇಡಿ, ನೀಚ, ಗ್ರಾಮ್ಯ, ವಂಚಕ, ಯಾವುದಕ್ಕೂ ಹೇಸದವನು; ಅವನ ಪುರಾಣಸಂಕರವು ಅತಿಯಾಗಿದೆ. ಚಾರುದತ್ತನು ತನ್ನ ಬಡತನಕ್ಕೆ ಸಂಕೋಚಪಟ್ಟುಕೊಳ್ಳುವುದೂ ನ್ಯಾಯಾಧೀಶನು ರಾಜನಿಗೆ ಹೆದರಿ ಶಕಾರನಿಗೆ ಪಕ್ಷಪಾತ ತೋರಿಸುವುದೂ ಅವರಲ್ಲಿ ಒಂದು ಲೋಪವಾಗಿ ಎಣಿಸಲ್ಪಟ್ಟಿದೆ; ಇದು ಅವರಲ್ಲಿ ಲೋಪವಾಗಿರಬಹುದು; ಕವಿಯಲ್ಲಿ ಲೋಪವಿಲ್ಲ. ಈ ಲೋಪವನ್ನಿಟ್ಟು ಕವಿ ಅವರನ್ನು ನೈಸರ್ಗಿಕವಾಗಿ ಮನುಷ್ಯ ಮಾತ್ರರನ್ನಾಗಿ ಮಾಡಿದ್ದಾನೆ. ಹಾಗಲ್ಲದಿದ್ದರೆ ಅವರು ಅತಿಮಾನುಷರೂ ಅಸಹಜರೂ ಆಗುತ್ತಿದ್ದರು. ವಸಂತಸೇನೆಯ ಮನೆಯ ವರ್ಣನೆಯೂ, ಮಳೆಯ ವರ್ಣನೆಯೂ ಅತಿ ವಿಸ್ತಾರವಾಗಿದೆ. ಇವುಗಳಲ್ಲಿ ಒಂದಾಗಲಿ ಎರಡೂ ಆಗಲಿ ಈಚೆಗೆ ಪ್ರಕ್ಷಿಪ್ತವಾಗಿ ಸೇರಿವೆಯೋ ಏನೋ ತಿಳಿಯದು.*

ಕಾವ್ಯಾಂಶವೂ ಈ ನಾಟಕದಲ್ಲಿ ಶ್ಲಾಘ್ಯವಾಗಿದೆ. ಶೈಲಿಯೂ ಶ್ಲೋಕಗಳೂ ಪಾಂಡಿತ್ಯಸೂಚಕವಲ್ಲದಿರಬಹುದು; ಪ್ರೌಢವಲ್ಲದಿರಬಹುದು; ಆದರೆ ಅವುಗಳಲ್ಲಿ ರಸವಿದೆ, ನವೀನತೆಯಿದೆ, ಸರಳತೆಯಿದೆ; ಅಲಂಕಾರ ಭಾರವಿಲ್ಲ, ಸ್ಪಷ್ಟ ಪ್ರಯತ್ನವಿಲ್ಲ; ಅಲಕ್ಷ್ಯವೇ ಇದೆ ಎಂದು ಹೇಳುವುದಕ್ಕೂ ಅವಕಾಶವಿದೆ.

ಈ ವಿಮರ್ಶೆಯೆಲ್ಲಾ ಮೃಚ್ಛಕಟಿಕವು ‘ಶೂದ್ರಕ’ ರಚಿತವೆಂಬ ಭಾವನೆಯ ಮೇಲೆ ಬರೆದದ್ದು; ಇದರಲ್ಲಿ ಭಾಸನಿಗೇ—ಸ್ವಲ್ಪವೋ ಸರ್ವವೋ—ಎಷ್ಟು ಸಲ್ಲಬೇಕೋ ಕಾಲಕ್ರಮದಲ್ಲಿ ನಿಶ್ಚಯವಾಗಬೇಕಾಗಿದೆ.

ಪ್ರಮಾಣಲೇಖನಾವಳಿ

A.W.Ryder—’ The Little Clay -cart,’ Introduction; J.A.O.S., 27, 418 f.

A. Gawronski —Kuhns Zeitschrift, 44, 224, f.; Sprachliche Untersuchungen; Uber das Mrichchakatika and das Dasakumara Charitha, Leipzing. 1907.

Jackson —J.A.O.S., 23. 317; 27, 418 f.

Bhaudaji —J.B.B.R.A.S., 8, 240.

Weber —Indische Studien, 14, 147 f.

Levi —J.A., 9, 19, 123 f.

Jacobi —Literatublatt fur Orient Philol., 3, 72 f, Bhavisata Kaha von Dhanvala, 83 f.

Sten Konow —Zur Fruhgeschi cte des Indischen Theatres, 107 f.

Fleet —J.R.A..S., 1905, 568 f.

Budhaswami —Brihathkathasloka Sangraha.

Bhandarkar —Ancient History of India, 64 f.

G. Morgenstierne —Uber das Verahaltnis Zwischen Charudatta und Mrichchakatika.

Mehendele —Bhandarkar Commemoration Vol., 367-374.

Rangacharya. B. Reddy Sastri and V.G. Paranjape —Introduction to their edition of Mrichchakatika.

V.S. Sukthankar —J.A..O.S., 42, 59 f.

C.V. Vaidya —’ Early History of India with correct Dates’, P.O.C., VII.

Jarl Charpentier —’ Sakara’, J.R.A.S., April, 1925.

R.Basak —’ Indian Society as pictured in Mrichchakatika,’ I.H.Q., V, 721 f.

J.C. Ghatak —’ Date of Mrichchakatika’, I.H.Q., V, 137 f.

G.V. Devasthali —Introduction to the Study of Mrichchakatika (1951)

ಕನ್ನಡ ಭಾಷಾಂತರಗಳು

ಮೃಚ್ಛಕಟಿಕ ಪ್ರಕರಣಂ —ಗರಣಿ ವೈ. ಕೃಷ್ಣಾಚಾರ್ಯ, ಮದರಾಸು, ೧೮೯೦.

ಮೃಚ್ಛಕಟಿಕಂ —ಧೋಂಡೋ ನರಸಿಂಹ ಮುಳಬಾಗಿಲು, ಧಾರವಾಡ, ೧೮೮೯.

ಕರ್ಣಾಟಕ ಮೃಚ್ಛಕಟಿಕ ಪ್ರಕರಣಂ —ನಂಜನಗೂಡು ಸುಬ್ಬಾಶಾಸ್ತ್ರೀ, ೧೯೨೯