೦೧ ಅಶ್ವಘೋಷ

(ಕ್ರಿ.ಶ. ಸುಮಾರು. ೧೦೦)

ಅಶ್ವಘೋಷನು ಬೌದ್ಧ ದಾರ್ಶನಿಕ ಗ್ರಂಥಕಾರನೆಂದೂ ಕವಿಯೆಂದೂ ಬಹುಕಾಲದಿಂದ ಪ್ರಸಿದ್ಧನಾಗಿದ್ದನು. ಅವನ ಗ್ರಂಥಗಳು ಸಂಸ್ಕೃತದಲ್ಲಿಯೂ ಚೀನಾ ಭಾಷೆಯ ಭಾಷಾಂತರದಲ್ಲಿಯೂ ತಿಳಿದು ಬಂದಿದ್ದುವು. ಆದರೆ ಅವನು ನಾಟಕಕರ್ತನೂ ಆಗಿದ್ದನೆಂಬುದು ಗೊತ್ತಾದದ್ದು ೧೯೧೧ರಲ್ಲಿ ಲೂಡರ್ಸ್ ಎಂಬ ಜರ್ಮನ್ ಪಂಡಿತರು ಪ್ರಕಟಪಡಿಸಿದ ನಾಟಕದ ತುಂಡುಗಳಿಂದ.* ಸಂಸ್ಕೃತ ನಾಟಕದ ಚರಿತ್ರೆಯಲ್ಲಿ ಇವುಗಳ ಸ್ಥಾನವು ತಿಳಿಯಬೇಕಾದರೆ ಅಶ್ವಘೋಷನ ಕಾಲ ದೇಶ ಮತ ಧರ್ಮಾದಿಗಳು ಗೊತ್ತಾಗಬೇಕು. ಆದ್ದರಿಂದ ಅವುಗಳನ್ನು ಇಲ್ಲಿ ನಿರ್ದೇಶಿಸಿದೆ.

ಅಶ್ವಘೋಷನು ಹುಟ್ಟಿ ಬೆಳೆದು ಬಾಳಿದ ಕಾಲವು ಇದೇ ಎಂದು ನಿರ್ಧಾರ ಮಾಡುವುದು ಸಾಧ್ಯವಲ್ಲ; ಸ್ಥೂಲವಾಗಿ ಮಾತ್ರ ಹೇಳಬಹುದು. ಅವನು ಕನಿಷ್ಕ ರಾಜನ ಗುರುವಾಗಿದ್ದನೆಂದು ಹೇಳುವ ಚೀನಾ ದೇಶದ ಒಂದು ಪ್ರತೀತಿಯಿದೆ. ಕನಿಷ್ಕನು ಸುಮಾರು ಕ್ರಿ.ಶ. ೧೨೫ರಲ್ಲಿ ಪಿಷಾವರ್ ನಗರದಲ್ಲಿ ಆಳುತ್ತಿದ್ದ ಸಿಥಿಯನ್ ರಾಜ.* ಸಾರಾನಾಥದಲ್ಲಿರುವ ಅಶೋಕಸ್ತಂಭ ಶಾಸನದಲ್ಲಿ ಒಬ್ಬ ‘ಅಶ್ವಘೋಷ ರಾಜ’ ನ ವಿಚಾರ ಬಂದಿದೆ* ದೊಡ್ಡ ಗುರುಗಳು, ಮಠಾಧಿಪತಿಗಳು ಮುಂತಾದವರಿಗೆ ಇಂದಿಗೂ ಕೆಲವು ಕಡೆ ಹೀಗೆ ‘ಮಹಾರಾಜ’ ಮುಂತಾದ ಬಿರುದು ಇರುವುದರಿಂದ ಈ ‘ಅಶ್ವಘೋಷ ರಾಜ’ ನು ಅಶ್ವಘೋಷ ಕವಿಯೇ ಇರಬೇಕೆಂದು ಊಹಿಸಬಹುದಾಗಿದೆ. ಬೌದ್ಧಗುರು ಪರಂಪರೆಯಲ್ಲಿ ಅಶ್ವಘೋಷನ ಹೆಸರು ಪಾರ್ಶ್ವನಿಗಿಂತ ಮೂರು ತಲೆ ಮುಂದೂ ನಾಗಾರ್ಜುನನಿಗಿಂತ ಮೂರು ತಲೆ ಹಿಂದೂ ಬರುತ್ತದೆ. ಪಾರ್ಶ್ವನು ಕನಿಷ್ಕನಿಂದ ಏರ್ಪಟ್ಟ ಮಹಾಸಭೆಯಲ್ಲಿ ಅಧ್ಯಕ್ಷನಾಗಿದ್ದನು. ನಾಗಾರ್ಜುನನ ಕಾಲ ಎರಡನೆಯ ಶತಮಾನದ ಕೊನೆ.* ನಾಟಕ ಪತ್ರಗಳಲ್ಲಿರುವ ಬರೆವಣಿಗೆ ಅದರಲ್ಲಿ ಪ್ರಯುಕ್ತವಾಗಿರುವ ಪ್ರಾಕೃತದ ಪ್ರಾಚೀನತೆ ಇವುಗಳ ಕಾಲವು ಸುಮಾರು ಮೊದಲನೆಯ ಶತಮಾನವಾಗುತ್ತದೆ.*

ಅಶ್ವಘೋಷನು (ಪ್ರಾಯಶಃ ಯೋಗಾಚಾರ ಸಂಪ್ರದಾಯದ) ಮಹಾಯಾನ ಬೌದ್ಧನೆಂದು ಅವನ ಗ್ರಂಥಗಳಿಂದ ಸ್ಪಷ್ಟಪಡುತ್ತದೆ. ಆದರೆ ಅವನು ಬ್ರಾಹ್ಮಣನಾಗಿ ಹುಟ್ಟಿದ್ದು, ಆಮೇಲೆ ಬೌದ್ಧನಾಗಿರಬೇಕು. ಏಕೆಂದರೆ, ಅವನಿಗೆ ವೈದಿಕ ಗ್ರಂಥಗಳ ಪರಿಚಿತಿ ಚೆನ್ನಾಗಿದೆ; ಚೀಣಾ ದೇಶದ ಪ್ರತೀತಿಯೂ ಹಾಗೆಯೇ ಇದೆ.

ಅವನು ಸುಮಾರು ಏಳೆಂಟು ಗ್ರಂಥಗಳನ್ನು ಬರೆದಿರುವಂತೆ ಹೇಳುತ್ತಾರೆ.* ಇವುಗಳಲ್ಲಿ ‘ಸೌಂದರನಂದ’ ‘ಬುದ್ಧಚರಿತ’ ಎಂಬ ಎರಡು ಪದ್ಯ ಮಹಾಕಾವ್ಯಗಳು ಅವನವೆಂದು ನಿರ್ವಿವಾದವಾಗಿ ಹೇಳಬಹುದು.* ಸೂತ್ರಾಲಂಕಾರ’ (ಅಥವಾ ಕಲ್ಪನಾಮಂಡಿತಿಕಾ, ಕಲ್ಪನಾಲಂಕೃತಿಕಾ?) ‘ಮಹಾಯಾನ ಶ್ರದ್ಧೋತ್ಪಾದ’, ‘ವಜ್ರಸೂಚೀ’ (ದಾರ್ಶನಿಕ ಮತ್ತು ಧಾರ್ಮಿಕ) -ಇವು ಅವನವೇ ಎಂಬುದು ಸಂದೇಹ. ಇವಲ್ಲದೆ ಅವನು ‘ಗಂಡೀಸ್ತೋತ್ರಗಾಥಾ’ ಮುಂತಾದ ಕೆಲವು ಸ್ತೋತ್ರಗಳನ್ನು ಬರೆದಂತಿದೆ.* ಇವುಗಳ ಜೊತೆಗೆ ಈಚೆಗೆ ರೂಪಕ ಖಂಡಗಳೂ ದೊರೆತಿವೆ.

ಈ ಗ್ರಂಥಗಳ ಕೊನೆಯಲ್ಲಿ ಬರುವ ಸಮಾಪ್ತಿವಾಕ್ಯಗಳಿಂದ ಅಶ್ವಘೋಷನ ತಾಯಿ “ಸುವರ್ಣಾಕ್ಷೀ” ಎಂದೂ, ಅವನ ಊರು ಸಾಕೇತ* ವೆಂದೂ, ಅವನನ್ನು ಆಚಾರ್ಯ ಭದಂತ ಮಹಾಪಂಡಿತ ಮಹಾವಾದಿ ಮುಂತಾಗಿ ಗೌರವದಿಂದ ಕರೆಯುತ್ತಿದ್ದರೆಂದೂ ಗೊತ್ತಾಗುತ್ತದೆ. ಅವನಿಗೆ ಹಿಂದೆ ಹೇಳಿದಂತೆ ವೇದ ಒಂದರದೇ ಅಲ್ಲದೆ ರಾಮಾಯಣ ಭಾರತಗಳ ಮತ್ತು ಸಾಂಖ್ಯ ವೈಶೇಷಿಕ ಆರ್ಹತ ದರ್ಶನಗಳ ಪರಿಚಯವೂ ಇದ್ದಂತೆ ಊಹಿಸಲವಕಾಶವಿದೆ. ಆದ್ದರಿಂದ ಅಶ್ವಘೋಷನು ಒಬ್ಬ ದೊಡ್ಡ ಬೌದ್ಧ ಪಂಡಿತನೂ ದಾರ್ಶನಿಕನೂ ಬೋಧಕನೂ ಆಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಇವಲ್ಲದೆ ಸಂಗೀತಶಾಸ್ತ್ರದಲ್ಲಿಯೂ ಅವನು ನಿಪುಣನಾಗಿದ್ದನೆಂದೂ ಪಾಟಲೀಪುತ್ರದ ಯಾತ್ರಾಕಾಲದಲ್ಲಿ ಗಾಯಕ ಗಾಯಕಿಯರೊಡನೆ ಗಾನ ಮಾಡುತ್ತ ಜನರ ಮನಸ್ಸನ್ನು ಸೆಳೆದು ತನ್ನಲ್ಲಿ ಅನುರಕ್ತರಾದ ಭಕ್ತರನ್ನಾಗಿ ಮಾಡಿಕೊಳ್ಳುತ್ತಿದ್ದನೆಂದೂ ಹೇಳುತ್ತಾರೆ.* ಅಶ್ವಘೋಷನ ಕೃತಿಗಳನ್ನು ಹಿಂದೆ ಬ್ರಾಹ್ಮಣರು ಬೌದ್ಧರು ಜೈನರು ಎಲ್ಲರೂ ಓದುತ್ತಿದ್ದರೆಂದೂ ಅವನು ಕಾಳಿದಾಸಾದಿ ಮಹಾಕವಿಗಳಂತೆಯೇ ಪ್ರಸಿದ್ಧನಾಗಿದ್ದನೆಂದೂ ಊಹಿಸಲು ಅವಕಾಶವಿದೆ. ಆದ್ದರಿಂದಲೇ (ಈಗ ಒಳ್ಳೆಯ ಶ್ಲೋಕಗಳನ್ನೂ ಸ್ತೋತ್ರಗಳನ್ನೂ ‘ಕಾಳಿದಾಸ ರಚಿತ’, ‘ಶಂಕರಾಚಾರ್ಯ ರಚಿತ’ ಎಂದು ಹೇಳುವಂತೆ) ಇತರ ಅನೇಕರ ಕೃತಿಗಳು ಅವನ ಹೆಸರಿನಲ್ಲಿ ಬಂದಿವೆ.*

ಹಿಂದಿನ ಕಾಲದಲ್ಲಿ ಸಾಧಾರಣವಾಗಿ ಭಾರತೀಯ ಸಾಹಿತ್ಯ ಲೇಖಕರೆಲ್ಲರಿಗೂ ಧಾರ್ಮಿಕ ದೃಷ್ಟಿ ಇದ್ದೇ ಇರುತ್ತಿತ್ತು; ಅಂಥದರಲ್ಲಿ ಧರ್ಮಶ್ರದ್ಧೆಯಿಂದ ಮತಾಂತರ ಪ್ರವಿಷ್ಟನಾದವನಿಗೆ ಇದು ಹೆಚ್ಚು ಪ್ರಮಾಣದಲ್ಲಿರುವುದೇನೂ ಆಶ್ಚರ್ಯವಲ್ಲ. ಆದ್ದರಿಂದ ಕಾವ್ಯಗಳನ್ನು ಬರೆಯುವುದರಲ್ಲಿಯೂ ಅಶ್ವಘೋಷನಿಗೆ ಬೌದ್ಧಧರ್ಮಪ್ರಚಾರವೇ ಪ್ರಧಾನವಾದ ಉದ್ದೇಶವಾಗಿತ್ತು. ಇದು ‘ಸೌಂದರನಂದ’ ಕಾವ್ಯದ ಕೊನೆಯಲ್ಲಿ ಬರೆದಿರುವ ಈ ಶ್ಲೋಕಗಳಿಂದ ಗೊತ್ತಾಗುತ್ತದೆ—

ಇತ್ಯೇಷಾ ವ್ಯುಪಶಾಂತಯೇ ನ ರತಯೇ ಮೋಕ್ಷಾರ್ಥಗರ್ಭಾ ಕೃತಿಃ

ಶ್ರೋತೄಣಾಂ ಗ್ರಹಣಾರ್ಥಮನ್ಯಮನಸಾಂ ಕಾವ್ಯೋಪಚಾರಾತ್ ಕೃತಾ ।

ಯನ್ಮೋಕ್ಷಾತ್ ಕೃತಮನ್ಯದತ್ರ ಹಿ ಮಯಾ ತತ್ ಕಾವ್ಯಧರ್ಮಾತ್ ಕೃತಂ

ಪಾತುಂ ತಿಕ್ತಮಿನೌಷಧಂ ಮಧುಯುತಂ ಹೃದ್ಯಂ ಕಥಂ ಸ್ಯಾದಿತಿ ॥

ಪ್ರಾಯೇಣಾಲೋಕ್ಯ ಲೋಕಂ ವಿಷಯರತಿಪರಂ ಮೋಕ್ಷಾತ್ ಪ್ರತಿಹತಂ

ಕಾವ್ಯವ್ಯಾಜೇನ ತತ್ತ್ವಂ ಕಥಿತಮಿಹ ಮಯಾ ಮೋಕ್ಷಃ ಪರಮಿತಿ ।

ತದ್ಬುದ್ಧ್ವಾ ಶಾಮಿಕಂ ಯತ್ತದವಹಿತಮಿತೋ ಗ್ರಾಹ್ಯಂ ನ ಲಲಿತಂ

ಪಾಂಸುಭ್ಯೋ ಧಾತುಜೇಭ್ಯೋ ನಿಯತಮುಪಕರಂ ಚಾಮೀಕರಮಿತಿ ॥ (XVIII, ೬೩-೪)

ಅವನ ರೂಪಕಖಂಡಗಳನ್ನು ನೋಡಿದರೂ ಹೀಗೆಯೇ ಹೇಳಬೇಕಾಗುತ್ತದೆ.

ಈ ರೂಪಕಗಳು ಸೆಂಟ್ರಲ್ ಏಷಿಯಾದ ಟುರ್ಫಾನ್ ಎಂಬ ಸ್ಥಳದಲ್ಲಿ ದೊರೆತುವು. ಇವು ಇಂಡಿಯಾ ದೇಶದಲ್ಲಿ ಬರೆದು ಅಲ್ಲಿಗೆ ತೆಗೆದುಕೊಂಡು ಹೋಗಿದ್ದವುಗಳು; ಓಲೆಯ ಮೇಲೆ ಮಸಿಯಲ್ಲಿ ಬರೆದವು. ಇದುವರೆಗೆ ಸಿಕ್ಕಿರುವ ಓಲೆಯ ಪುಸ್ತಕಗಳಲ್ಲೆಲ್ಲಾ ಇವೇ ಅತ್ಯಂತ ಪ್ರಾಚೀನವೆಂದು ಹೇಳಬಹುದು. ಮೂಲ ಪುಸ್ತಕದ ಪತ್ರಗಳು ಕೆಲವು ೧೬ ಅಂಗುಲ ಕೆಲವು ೨೨ ಅಂಗುಲ ಉದ್ದವಿದ್ದರೂ, ಈಗ ಒಂದೂ ಅಖಂಡವಾಗಿ ದೊರೆತಿಲ್ಲ. ಒಂದು ಕಾಸಿನ ಅಗಲದಿಂದ ಹಿಡಿದು ಗೇಣು ಉದ್ದದವರೆಗೆ ಇರುವ ಸುಮಾರು ೧೬೦ ತುಂಡುಗಳು ದೊರೆತಿವೆ. ಅವುಗಳ ಲಿಪಿ ಸುಮಾರು ೧೮೦೦ ವರ್ಷಕ್ಕೆ ಹಿಂದೆ ಇದ್ದ ಕುಷಾನ ರಾಜರ ಕಾಲದ್ದು, ಭಾಷೆ ಸಂಸ್ಕೃತ ಮತ್ತು ಪ್ರಾಕೃತ. ಆದ್ದರಿಂದ ಇವುಗಳನ್ನು ಹೊಂದಿಕೆಯಾಗಿ ಜೋಡಿಸಿ ಓದಿ ಅರ್ಥಮಾಡಿದ ಲೂಡರ್ಸ್ ರವರ ಶ್ರಮವು ಅಪರಿಮಿತವಾದದ್ದು. ಈ ವಿದ್ವತ್ ಸಾಹಸವು ಜರ್ಮನ್ ಪಂಡಿತರಿಂದ ಮಾತ್ರ ಸಾಧ್ಯ.

ಇವುಗಳಲ್ಲಿ ಮೊದಲನೆಯ ಎರಡನೆಯ ತುಂಡುಗಳು ಒಂದು ಬರವಣಿಗೆಯಲ್ಲಿಯವೆ. ಇವು ೧೬ ಅಂಗುಲ ಉದ್ದವಿದ್ದ ಪತ್ರದವು; ಮಿಕ್ಕವೆಲ್ಲಾ ಮತ್ತೊಂದು ಬರವಣಿಗೆಯಲ್ಲಿವೆ; ಇವು ಸುಮಾರು ೨೨ ಅಂಗುಲವಿದ್ದ ಪತ್ರಗಳವು. ಇವುಗಳ ಭಾಷಾವಿಷಯಾದಿಗಳು ತಿಳಿಯುವಂತೆ ಮುಂದೆ ಮೂರು ಪತ್ರಗಳ ಲೇಖನವನ್ನು ಕನ್ನಡ ಲಿಪಿಯಲ್ಲಿ ಬರೆದಿದೆ—

ತುಂಡು ೩ — ಮುಂಭಾಗ

(ಪಂಕ್ತಿ) ೧. ಸಿದ್ಧಮ್ ಪಾರಿಪಾರ್ಶ್ವಿಕಃ— [ಪ]……………..

೨. ಓಮ್ ಮತ್ತಮಮಲಿನಂ…………….

೩….. ಇ.ಎ. [ಪ]….[ಕರ] ಣೇ….

ಅದೇ ತುಂಡು — ಹಿಂಭಾಗ

೧. ತ.ಮ…ತತಃ ಪ್ರವಿಶತಿ………….

೨.ಕಯ್ಯಮ್ ಪತಿ ಕಯ್ಯ [ಮ್] ವಾ—….

೩. ಹಕ ಗೋಪಿಟ್ಠೇ — ವಿದೂ —…

ತುಂಡು C೪ — ಮುಂಭಾಗ

ವ…………….ನ್ನೋ ಭಾವಾತ್ ಸೋ…. [ಕ್ಷಿ]….ಯ…. ನೋಪಾ….ಏ [ವಂ ಹಿ] ಸತಿ [ಇ]. ನ್ತು* ಯತ್ನೇನ ಜ್ಞಾ [ಯತಾಮ್]…. ಹೇಕಿ…………ಯ್ಯ…………. ನ[ಹಿ]…………

.ರೀ[ರ]* ನಿರ್ಮುಕ್ತಯಾ [ತ್ಮ] ಸ [o] ಜ್ಞಕಂ ಬುದ್ಧಿ ಸೌಕ್ಷ್ಮಮ್ ತತ್ - ಸೂಕ್ಷ್ಮತ್ವಾಚ್ಚೈವ ದೋಷಾಣಾಮವ್ಯಾಪಾರಾಚ್ಚ ಚೇತಸಃ…. [ಈ]…………[ದಾ]* ಯು ಷಶ್ಚೈವ ಮೋಕ್ಷ……* [ಪ]ರಿಕ ಲ್ಪ್ಯತೇ* - ಶಾರಿ….ವನ್* ಅಸ್ಯ ಧರ್ಮಸ್ಯ

…………ತಾತ್ಮಗ್ರಾಹೇ ಸತ* ನ ನೈಷ್ಠಿಕೇ ನಿವೃತ್ತಿ* ರ್ಭವತಿ ನೈರಾತ್ಮ್ಯಾ ದರ್ಶನಾಚ್ಚ* ಭವತಿ ತದ್ಯಥಾ [ನದೀ] ಸ್ರೋತಸೋ ವರ್ತ್ತಮಾನ [ಸ್ಯ] ಪ್ರ [ತ್ಯು]….. [ಶ್ಯೇ]……….. ದ್ಧ್ಯ…..* ಸ್ಮಿನ್ನು ಪರತೇಸ್ಯೋ………..

……………ಪ್ರಾಪ್ತಂ ತಚ್ಚ ಯಥಾ ನಿಮ್ನಗತಂ ಭವತಿ ತತ್ರಾದೌ ಸ್ರೋತ ಉಪರತಮ್ ವಿನಷ್ಟಮಿತಿ [ಭವ]ತಿ [ಏವಮ] ಸ………ಆ - ಮ್ ಶಾರೀ[ರೇ]ನ್ದ್ರಿಯ…. ಬುದ್ಧಿಸ್ರೋತಸೋವರ್ತ್ತಮಾನ [ನ]* …….. ಭಗವತಾಧಿ [ಗ]…………

ವೇಕಲ್ಯಮ್ ಕ್ರಿಯತ* ತತ್ಕೃತೋ ಹೇತುಕಸ್ಯ ನೋತ್ಪಾದ್ಯತೇ ಬೀಜದಕ ಪೃಥಿವಿ…. ರ…. ಮ್* …. ಐ…..[ಏವ]ಮ್….[ಹ] ತಸ್ಮಿನ್ನ….[ಯ] ಮಾನ್…..[ಅ]ಸ್ಮಿಮ್* ವಿ…..*

ಅದೇ ತುಂಡು - ಹಿಂಭಾಗ

ಕರ್ಮ್ಮಾ* ಕ್ಷೇತ್ರಮ್ಬೀಜಮುತ್ಪತ್ತಿ ಚೇತಸ್ತೃಷ್ಣಾ ಕ್ಲೇದಚ್ಛಾದನಞ್ಚಾ[ಪ್ಯ] [ವ]…. ಯ [ಮ್]* …. [ಕ] [ಸ] ಯ [ವ]* ಜ್ಜಾಯ ಮಾನೋ ಜ್ಞಾನಾದಿತ್ಯೇ…. ತ್ - [ಬ]* ……

……* ವಿನೀತಯೋರ್ಯ್ಯ [ತಿ] ಧರ್ಮೇಣ ಕೃತಪರಿಕರ್ಮಣೋಃ ಅಸ್ಮಾತ್ ಸಿದ್ಧಾನ್ತಪ್ರತಿವೇಧಾದುದ್ಧೃತ ವಿವಿಧ ದೃ [ಷ್ಟಿಶ] ಲ್ಯಯೋ [ಃ] ಶುದ್ಧಮನಸೋರ್ಯುವ….ಃ* ಯದೇ… ಮ್…. ಧವಾದಿ* ಜ್ಞಾ [ನಸ್ಯಾ]…..

ಶಿಷ್ಟಮ್ ದುಃಖಮ್ ಸ್ರೋತಸಿ ನಿರ್ವಾಣಸ್ಯ ವರ್ತತೇ ತತ್ -ಅತಃ ಪರಮ್ ಜ್ಞಾನಮಿದಮ್ ಯತೇನ್ದ್ರಯೌನಿರನ್ತರಮ್ ಭಾವ ಯತಮ್* ವಿಮುಕ್ತಯೇ ಶಿ….. ಸು ಭಿಕ್ಷ* ಮಖಿಲಾಮಕ….. ನಿರಾಮ (ಯೌಪಾ) ತು….

ಸರ್ವ್ವೇ ॥ ಶಾರೀಪುತ್ರ ಪ್ರಕರಣೇ ನವಮೋಙ್ಕಃ ೯. ಆರ್ಯ್ಯ ಸುವರ್ಣಾಕ್ಷಿ ಪುತ್ರಸ್ಯಾರ್ಯಾಶ್ವಘೋಷಸ್ಯ ಕೃತಿಶ್ಯಾರದ್ವತೀಪುತ್ರಪ್ಪ್ರಕರಣಮ್ ಸಮಾಪ್ತಮ್ (ಸ) ಮಾಪ್ತಾನಿ ಚಾಜ್ಕಾನಿ ನವ….. ಗ್ಯಮನು (ಷ್ಟುಭೇ) ಚ್ಛ…….

ತುಂಡು ೧ - ಮುಂಭಾಗ

(ಸಂಪಾದಕರು ಜೋಡಿಸಿ, ತಿದ್ದಿ, ಬರೆದಿರುವ ಪಾಠ)

೧….. ಯ. ಭವನಿವರ್ತಕೇಷು ಕ್ಲೇಶೇಷು ನ ಕಿಞ್ಚಿದಸ್ತಿ ಪ್ಪ್ರಹಾತವ್ಯಮ್ ಯಸ್ಯ ನಿತ್ಯಮನಿತ್ಯಮ್ ವಾನ ಕಿಞ್ಚಿದಸ್ತಿ ಬೋದ್ಧವ್ಯಮ್ - ತಮೋ ಯೇನ ಕ್ಷಿಪ್ತಮ್………… ಮಯೂಖೈರ್…. ರಜೋಯಸ್ಯ ಧ್ವಸಮ್….

೨….ಯೇನಾವಾಪ್ತಮ್ ಪರಮಮೃತನ್ದುರ್ಲ್ಲಭಮೃತಮ್ ಮನೋಬುದ್ಧಿಸ್ತಸ್ಮಿಮ್ನಹಮಭಿರಮೇ ಶಾನ್ತಿ ಪರಮೇ - ಧೃತಿಃ - ಅಸ್ತಿ ಅಸ್ತಿತತ್ ಮತ್ಪ್ರಭಾವ ಪರಿಗೃಹೀತಮ್ ಪುರುಷಸಮ್ ಜ್ಞಕನ್ತೇಜಃ ಪ್ರಾದುರ್ಭೂತಮ್

೩…..ಪರಸ್ಪರಾಯತ್ತಮಿದನ್ದ್ವನ್ದ್ವಮಿತಿ ಯತ್ರ ಹಿ ಬುದ್ಧಿರವತಿಷ್ಠತೇ ತತ್ರ ಧೃತಿಃ ಸ್ಥಾನಂ ಲಭತೇ ಯತ್ರಚ ಧೃತಿರಾಧೀಯತೇ ತತ್ರ ಬುದ್ಧಿರ್ವಿಸ್ತೀರ್ಯ್ಯತೇ-ಕೀರ್ತ್ತಿಃ - ಏವಙ್ಗತೇ ಯುವಾಭ್ಯಾಮಾಯತ್ತಾ ಭ್ಯಾಮ್….

೪…. ಇದಾನೀಙ್ಕ…. - ಬುದ್ಧಿಃ- ತಥಾ ತದಪಿ ಚ - ನಿತ್ಯಮ್ ಸ ಸುಪ್ತ ಇವ ಯಸ್ಯ ನ ಬುದ್ಧಿರಸ್ತಿ ನಿತ್ಯಮ್ ಸ ಮತ್ತ ಇವ ಯೋ ಧೃತಿ ವಿಪ್ರಹೀನಃ…. ನ ಚ ಯಸ್ಯ ನ ಕೀರ್ತಿರಸ್ತಿ…..

ಅದೇ ತುಂಡು - ಹಿಂಭಾಗ

(ಸಂಪಾದಕರು ಜೋಡಿಸಿ, ತಿದ್ದಿ, ಬರೆದಿರುವ ಪಾಠ)

೧…. ತಿಷ್ಠತಿ ಯಸ್ಯ ಕೀರ್ತ್ತಿಃ - ಕೀರ್ತ್ತಿಃ - ಕ್ವ ಪುನರಿದಾನೀಮ್ ಸ ಪುರುಷವಿಗ್ರಹೋ ಧರ್ಮಃ ಸಮ್ಪ್ರತಿ ವಿಹತಿ - ಬುದ್ಧಿಃ ಸ್ವಾಧೀನಾಯಾಮೃದ್ಧೌಕ್ವ ಪುನರ್ನ ವಿಹರತಿ…. ಪಕ್ಷೀವ ವ್ಯೋಮ್ನಿ ಯಾತಿವ್ರ (ಜತಿ?)…..

೨…. ನಿಸ್ಸಙ್ಗಸ್ತೋಯವದ್ ಕಾಮ್ಪ್ರವಿಶತಿ ಬಹುಧಾಮೂರ್ತಿಮ್ ವಿಭಜತಿ ಖೇ ವರ್ಷತ್ಯಮ್ಬುಧಾರಮ್ ಜ್ವಲತಿ ಚ ಯುಗ ಪತ್ ಸನ್ಧ್ಯಾಮ್ಬುದ ಇವ ಸ್ವಚ್ಛನ್ದಾತ್ ಪರ್ವ್ವ….. ವ್ರಜತಿ ಚ ವಿಧಿ ವದ್ಧರ್ಮಞ್ಚ ಚರತಿ…..

೩….ಙ್ಗೋಚರಃ — ಧೃತಿಃ — ತೇನ ಹಿ ಸರ್ವ್ವಾ ಯೇವ ತಾವದೇನಮ್ ವಾಸವೃಕ್ಷೀ ಕೂರ್ಮಃ ಏಷ ಹಿ ಸ ಮಹರ್ಷಿರ್ಮಗಧ ಪುರಸ್ಯೋಪವನೇ ಸಮ್ಪ್ರತಿ — ಸೋರ್ಣ್ಣಬ್ಭ್ರುಸ್ತನು ಮೃದು ಜಾಲ ಪಾಣಿ ಪಾದಃ…..

೪……ವಶ್ಯಾತ್ಮಾ ವಿಹರತಿ ನಿಸ್ಪೃಹಃ ಕೃತಾರ್ಥೋ ಜ್ಞಾನಸ ಪ್ರಶಮರಸಸ್ಯ ಜೈವ ಪೂರ್ಣಃ — ತತ್ವಃ ಪ್ರವಿಶತಿ ಪ್ರಭಾಮಣ್ಡಲೇನ ದೀಪ್ತೇನ…. ರ-ಬ್ಭ-ಃ ಪರಮ….. ಓ ವೇಷೋ ಭಗವಾನ್ ಶರ್ಮಾ….

ಮೇಲೆ ಕೊಟ್ಟಿರುವ C ೪ ಪತ್ರವನ್ನೂ ಅದಕ್ಕೆ ಸೇರಿದ ಹಾಗಿರುವ ಇನ್ನೆರಡು ಪತ್ರಗಳನ್ನು ಜೋಡಿಸಿಕೊಂಡು ನೋಡಿದರೆ ಅದರಲ್ಲಿ ಶಾರೀಪುತ್ರ ಮತ್ತು ಮೌದ್ಗಲಾಯನ ಇವರು ಬುದ್ಧನ ಶಿಷ್ಯರಾದದ್ದೇ ವಿಷಯವಾಗಿತ್ತೆಂದು ತಿಳಿದುಬರುತ್ತದೆ.* ಮೊದಲನೆಯ ತುಂಡಿನಲ್ಲಿ ಬಂದಿರುವುದ ಬೇರೆ ವಿಷಯ. ಇದರಲ್ಲಿ ಧೃತಿ ಕೀರ್ತಿ ಬುದ್ಧಿಗಳಿಗೆ ಸಂಭಾಷಣೆ ನಡೆಯುತ್ತದೆ. ಬುದ್ಧನು ರಂಗಕ್ಕೆ ಪ್ರವೇಶಿಸುತ್ತಾನೆ.* ಮತ್ತೆ ಕೆಲವು ತುಂಡುಗಳಲ್ಲಿ ಸೋಮದತ್ತ, ಧಾನಂಜಯ, ವೇಶ್ಯೆ, ದುಷ್ಟ ಮುಂತಾದವರ ವಿಚಾರವಿದೆ. ಆದ್ದರಿಂದ ಇವು ಮತ್ತೆರಡು ನಾಟಕಗಳಿಗೆ ಸಂಬಂಧಪಟ್ಟಿರಬೇಕು. ಇವೂ ಅಶ್ವಘೋಷನವೇಯೋ ಏನೋ ನಿರ್ಧರಿಸಿ ಹೇಳುವುದಕ್ಕೆ ಸಾಧನವಿಲ್ಲ. ‘ಶಾರೀಪುತ್ರ ಪ್ರಕರಣ’ ದ ಸಾದೃಶ್ಯವನ್ನು ಪಡೆದು ಅದರ ಜೊತೆಗೆ ಒಂದೇ ಪುಸ್ತಕದಲ್ಲಿದ್ದದ್ದರಿಂದ, ಅವೂ ಅಶ್ವಘೋಷ ಕರ್ತೃಕವಾಗಿರುವುದು ಸಂಭವ. ಹೀಗೆ, ಈಗ ಲೂಡರ್ಸ್ ರವರ ಪ್ರಯತ್ನ ಪರಿಶ್ರಮಗಳಿಂದ - ಪ್ರಾಯಶಃ ಎಲ್ಲವೂ ಅಶ್ವಘೋಷ ರಚಿತವಾದ - ಮೂರು ಬೌದ್ಧ ನಾಟಕಗಳ ಭಾಗಗಳು ದೊರೆತು ಪ್ರಕಾಶಕ್ಕೆ ಬಂದಿವೆ.

ಇವುಗಳಲ್ಲಿ ಮೊದಲನೆಯದು ಶಾರೀಪುತ್ರ ‘ಪ್ರಕರಣ’. ಇದು ಒಂಬತ್ತು ಅಂಕಗಳುಳ್ಳದ್ದೆಂದು ಗೊತ್ತಾಗಿದೆ (ಲಕ್ಷಣ ಗ್ರಂಥಗಳಲ್ಲಿ ‘ಪ್ರಕರಣ’ ಕ್ಕೆ ಹತ್ತು ಅಂಕಗಳೆಂದು ಹೇಳಿದೆ. ಹೀಗೆ, ಮೃಚ್ಛಕಟಿಕ ಮಾಲತೀ ಮಾಧವಗಳಲ್ಲಿ ಇರುವುದು ಹತ್ತು ಹತ್ತು ಅಂಕಗಳು). ಆದರೆ ಈ ಒಂಬತ್ತು ಅಂಕಗಳಲ್ಲಿ ನಮಗೆ ತಿಳಿದಿರುವುದು ಕೊನೆಯ ಮತ್ತು ಅದರ ಹಿಂದಿನ ಅಂಕಗಳ ಕೆಲವು ಭಾಗ ಮಾತ್ರ; ಮಿಕ್ಕ ಅಂಕಗಳಲ್ಲಿ ಏನಿತ್ತೋ ಊಹಿಸುವಂತೆಯೂ ಇಲ್ಲ. ಈಗ ತಿಳಿದಿರುವುದು ಇಷ್ಟು—

ಶಾರೀಪುತ್ರನು ಅಶ್ವಜಿನತಲ್ಲಿಗೆ ಹೋಗುತ್ತಾನೆ; ಬ್ರಾಹ್ಮಣನು ಕ್ಷತ್ರಿಯನಿಂದ ಉಪದೇಶ ಪಡೆಯಬಹುದೇ ಕೂಡದೇ ಎಂದು ತನ್ನ ಸ್ನೇಹಿತನಾದ ವಿದೂಷಕನೊಡನೆ ಚರ್ಚಿಸಿ -ಕೀಳು ಜಾತಿಯವನು ರೋಗಿಗೆ ಕೊಟ್ಟ ಔಷಧವೂ, ಬಾಯಾರಿದವನಿಗೆ ಕೊಟ್ಟ ನೀರೂ ಹಿತವಾಗುವಂತೆ - ಮುಮುಕ್ಷುವಾದ ಬ್ರಾಹ್ಮಣನಿಗೆ ಮಿಕ್ಕ ಜಾತಿಯವರು ಉಪದೇಶಿಸಬಹುದೆಂದು ಹೇಳುತ್ತಾನೆ. ಮೌದ್ಗಲ್ಯಾಯನನು ತನ್ನ ಸ್ನೇಹಿತನಾದ ಶಾರೀಪುತ್ರನನ್ನು ಕಂಡು ಅವನ ಪ್ರಸನ್ನಮುಖಭಾವವನ್ನು ನೋಡಿ ಅದಕ್ಕೆ ಕಾರಣನ್ನು ಕೇಳಿ ತಿಳಿಯುತ್ತಾನೆ. ಇಬ್ಬರೂ ಬುದ್ಧನ ಹತ್ತಿರಕ್ಕೆ ಹೋಗುತ್ತಾರೆ. ಬುದ್ಧನು ಅವರು ಜ್ಞಾನಿಗಳೂ ಮಹಿಮರೂ ಆಗುವರೆಂದು ತಿಳಿಸುತ್ತಾನೆ. ಬುದ್ಧನಿಗೂ ಶಾರೀಪುತ್ರನಿಗೂ ನಿತ್ಯನಾದ ಆತ್ಮನೊಬ್ಬನಿದ್ದಾನೆಯೇ ಎಂಬ ವಿಚಾರವಾಗಿ ಚರ್ಚೆ ನಡೆದು, ಕೊನೆಗೆ ಬುದ್ಧನು ತನ್ನ ಹೊಸ ಶಿಷ್ಯರಿಬ್ಬರನ್ನೂ ಮೆಚ್ಚಿ ಹೊಗಳಿ ಆಶೀರ್ವಾದ ಮಾಡುತ್ತಾನೆ. (ನಾಟಕವು ಮುಗಿಯುತ್ತದೆ.)

ಎರಡನೆಯ ನಾಟಕವು ಕೃಷ್ಣಮಿಶ್ರನ ‘ಪ್ರಬೋಧ ಚಂದ್ರೋದಯ’ ವನ್ನು ಹೋಲುತ್ತದೆ. ಇದರಿಂದ ಈ ವಿಧವಾದ ಧಾರ್ಮಿಕ ನಾಟಕವು ಬಹಳ ಹಿಂದಿನಿಂದಲೂ ಪರಿಚಿತವಾಗಿತ್ತೆಂದೂ ಕೃಷ್ಣಮಿಶ್ರನಿಗೆ ಅನುಸರಿಸಲು ಮೇಲ್ಪಂಕ್ತಿ ಇತ್ತೆಂದೂ ಊಹಿಸಬಹುದು.

ಮೂರನೆಯ ನಾಟಕವು ಭಾಸನ ಚಾರುದತ್ತ, ಶೂದ್ರಕನ ಮೃಚ್ಛಕಟಿಕಗಳನ್ನು ಜ್ಞಾಪಕಕ್ಕೆ ತರುತ್ತದೆ. ಇದರಲ್ಲಿ ಮಗಧವತಿ (ವೇಶ್ಯೆ), ಕೋಮುದಗಂಧ (ವಿದೂಷಕ), ಸೋಮದತ್ತ (ನಾಯಕ?), ಧಾನಂಜಯ (ರಾಜಪುತ್ರ?), ಗೋಬಂ (?) ಮುಂತಾದವರು ಬರುತ್ತಾರೆ. ಮೃಚ್ಛಕಟಿಕದಂತೆ ಇದರಲ್ಲಿಯೂ ಒಂದು ಜೀರ್ಣೋದ್ಯಾನ ವೇಶ್ಯಾಗೃಹಗಳು ಬರುತ್ತವೆ. ಪಾತ್ರಗಳು ‘ಪ್ರವಹಣ’ (ಗಾಡಿ)ಗಳಲ್ಲಿ ಪ್ರವೇಶಿಸುತ್ತಾರೆ. ಆದರೆ ಇದೂ ಮಿಕ್ಕ ನಾಟಕಗಳಂತೆ ಧಾರ್ಮಿಕ ನಾಟಕವಾಗಿತ್ತೆಂದೇ ಹೇಳಬೇಕು.

ಈ ನಾಟಕಗಳು ಇಷ್ಟು ಪ್ರಾಚೀನವಾದರೂ ನಾಟ್ಯಶಾಸ್ತ್ರಾದಿ ಗ್ರಂಥಗಳಲ್ಲಿ ಉಕ್ತವಾಗಿರುವ ಲಕ್ಷಣಗಳಿಗೆ ಅನುಸಾರಿಯಾಗಿವೆ. ಮುಮುಕ್ಷುವಾದ ಶಾರೀಪುತ್ರನಿಗೆ, ಅನಾವಶ್ಯಕವಾದರೂ, ಹಸಿವಿನಿಂದ ಪೀಡಿತನಾದ ಹಾಸ್ಯಗಾರ ವಿದೂಷಕನು ಸಖನಾಗಿದ್ದಾನೆ. ಅವನು ಬ್ರಾಹ್ಮಣ; ಹೆಸರು ಹೂವನ್ನು ಸೂಚಿಸುತ್ತದೆ. ಉತ್ತಮ ಪಾತ್ರಗಳು ಸಂಸ್ಕೃತವನ್ನೂ ನೀಚಪಾತ್ರಗಳು ಪ್ರಾಕೃತವನ್ನೂ ಆಡುತ್ತವೆ. ಪದ್ಯಗಳು ಹಲವು ವೃತ್ತಗಳಲ್ಲಿವೆ,* ಕೊನೆ ಮಾತ್ರ ಲಕ್ಷಣಕ್ಕೆ ಸ್ವಲ್ಪ ವಿರುದ್ಧವಾಗಿ ಕಾಣುತ್ತದೆ. ಅದು “ನಿನಗೆ ಇನ್ನೇನು ಉಪಕಾರ ಮಾಡಲಿ?” ಎಂದು ಆರಂಭವಾಗಿ “ದೇಶಕ್ಕೆ ಸುಭಿಕ್ಷವಾಗಲಿ!” ಎಂದು ಮುಂತಾದ ಸಾರ್ವಜನಿಕವಾದ “ಭರತ ವಾಕ್ಯ” ದಿಂದ ಮುಗಿಯುವುದಿಲ್ಲ. ಅದಕ್ಕೆ ಬದಲಾಗಿ “ಇನ್ನು ಮುಂದೆ ನೀವು ಮೋಕ್ಷಾರ್ಥವಾಗಿ ಈ ಜ್ಞಾನವನ್ನು ನಿರಂತರವಾಗಿಯೂ ಯತೇಂದ್ರಿಯರಾಗಿಯೂ ಭಾವನೆ ಮಾಡಿಕೊಂಡು ಬನ್ನಿ” ಎಂದು ಬುದ್ಧನು ತನ್ನ ಶಿಷ್ಯರಿಗೆ ಮಾಡುವ ಆಶೀರ್ವಾದವಿದೆ. ಆದರೆ ಇಷ್ಟರಿಂದಲೇ ಸಾಂಪ್ರದಾಯಿಕವಾದ ಭರತವಾಕ್ಯವು ಆಗ ಇನ್ನೂ ರೂಢಿಗೆ ಬಂದಿರಲಿಲ್ಲವೆಂದು ಹೇಳಲಾಗುವುದಿಲ್ಲ.

ಮಧ್ಯಮನಿಕಾಯದ ‘ರಟ್ಟ ಪಾಲಸುತ್ತ’ ದಲ್ಲಿ ಬರುವ ಒಂದು ಕಥೆಯನ್ನು ಅನುಸರಿಸಿ ಅಶ್ವಘೋಷನು ‘ರಾಷ್ಟ್ರಪಾಲ ನಾಟಕ’ ವೆಂಬ ರೂಪಕವೊಂದನ್ನು ರಚಿಸಿದನೆಂದೂ, ಅವನೇ ವೇಷ ಹಾಕಿಕೊಂಡು ಅದನ್ನು ಪಾಟಲಿಪುತ್ರದಲ್ಲಿ ಅಭಿನಯಿಸಲು ಅದನ್ನು ನೋಡಿದ ೫೦೦ ಕ್ಷತ್ರಿಯ ಕುಮಾರರು ವೈರಾಗ್ಯ ತಾಳಿ ಬೌದ್ಧಮತವನ್ನು ಕೈಕೊಂಡರೆಂದೂ ಐದನೆಯ ಶತಮಾನದ ಚೀನಾ ಗ್ರಂಥ ಒಂದರಿಂದ ತಿಳಿದುಬರುತ್ತದೆ. ಈ ನಾಟಕವು ಕ್ರಿ.ಶ. ೬ನೆಯ ಶತಮಾನದಲ್ಲಿಯೂ ಇದ್ದು ಆಮೇಲೆ ಯಾವಾಗಲೋ ನಷ್ಟವಾದಂತೆ ಕಾಣುತ್ತದೆ.*

ಒಟ್ಟಿನ ಮೇಲೆ, ಅಶ್ವಘೋಷನ ಕಾಲದಲ್ಲಿ ನಾಟಕವು ನಮ್ಮ ದೇಶಕ್ಕೆ ಹಳೆಯದಾಗಿತ್ತೆಂದೂ, ಆಗಲೇ ಸಿದ್ಧವಾದ ಮೇಲ್ಪಂಕ್ತಿಗಳಿದ್ದುವೆಂದೂ ಅವುಗಳನ್ನು ಕವಿಗಳು ಅನುಸರಿಸುತ್ತಿದ್ದರೆಂದೂ ನಿರ್ವಿವಾದವಾಗಿ ತೀರ್ಮಾನಿಸಬಹುದಾಗಿದೆ.

ಪ್ರಮಾಣ ಲೇಖನಾವಳಿ

Winternitz - W.Z.K.M., 27 (1913), 39 f.

Luders - Das Sariputraprakarana. ein Drama des Asvaghosa, S.B.A.W., 1911, 388f.; 1912, 830 f.; 1913, 999 f. Bruchstucke Buddhistischer Dramen, Berlin, 1911. Buddhistischer Dramen ausvorclassischer zeit (in Internationale Wochenschrift, v (1911), 678 f.

Levi - J.A. (1911), S.10, t xvii, 139 f., 1928, p 193.

Marshall-Archaeological Discoveries at Taxila, 1913, 5 f.; The Journal of the Punjab Historical Society, III, ii., J.R.A.S., 1914, 973. f.; 1915, 191 f.

Sten Konow - S.B.A.W., 1916, 820 F.; I.H.Q., II, 177f.; III, 851 f.

Oldenberg - N.G.G.W., 1911, 427 f.

Haraprasada Sastri - Introduction to Saundaranada.

Kennedy - J.R.A.S., 1912; 665 f.

Rapson, Fleet, Kennedy, Smith, Barnett, Waddel, Dames, Hoey. Thomas - The Date of Kanishka, J.R.A.S., 1913, 627. 650, 911.1042.

R. Kimura - Date of Kanishka, I.H.Q. I, 422, f.

H.C. Ghosh - The Date of Kanishka, I.H.Q., V, 49 f.

C.W. Gurner - Aswaghosha and Ramayana, J.A.S.B., 1927, 347 f.

Samuel Beal - Fo-Sho-Hing-King (A life of Buddha by Aswaghosha)- Sacred Books of the East, Vol. 18.

E.H. Johnston - The Buddha Carita or Arts of the Budha, Part II, 1936.

Vidhusekeara Bhattacharya - A New drama of Aswaghosha; in the Journal of the Greater India Society, V. page 15.

Bagchi - The Rastrapala Nataka of Aswaghosha - Serdesai Commemoration Volume, 261, 3.

L. Sarup - Hindusthan Review, Jan, 1927.

F.W. Thomas - C.H.I. Vol. I, 482 fn.

Avadana 75 (VIII, 5); Lalitha Visthara, XII, Jataka Mala, 27, 4, Ep. Indica, 13, 141 f.