೫ ನಾಟ್ಯಭೇದಗಳು

ರೂಪಕಗಳು

ನಾಟಕ, ಪ್ರಕರಣ, ಭಾಣ, ಪ್ರಹಸನ, ಡಿಮ, ವ್ಯಾಯೋಗ, ಸಮ ವಕಾರ, ವೀಥಿ, ಅಂಕ, ಈಹಾಮೃಗ - ಎಂದು ರೂಪಕಗಳು ಹತ್ತು ವಿಧ. ಮುಂದೆ ‘ಸಾಹಿತ್ಯದರ್ಪಣ’ ವನ್ನು ಅನುಸರಿಸಿ ಅವುಗಳ ಮುಖ್ಯ ಲಕ್ಷಣವನ್ನು ತಿಳಿಸಿದೆ.

೧. ನಾಟಕ - ಇದರ ವಸ್ತು ಪ್ರಖ್ಯಾತ; ವೃದ್ಧಿ, ವಿಲಾಸ, ಸುಖ, ದುಃಖಗಳು ಇರುತ್ತವೆ; ಐದು ಸಂಧಿಗಳು; ಐದರಿಂದ ಹತ್ತು ಅಂಕಗಳು; ನಾಯಕನು ಧೀರೋದಾತ್ತ, ರಾಜರ್ಷಿ, ದಿವ್ಯ ಅಥವಾ ದಿವ್ಯಾದಿವ್ಯ; (ಅವನೊಡನೆ) ಕಾರ್ಯದಲ್ಲಿ ತೊಡಗಿರುವ ಮುಖ್ಯ ಪುರುಷ ವ್ಯಕ್ತಿಗಳು ನಾಲ್ಕು ಅಥವಾ ಐದು ಜನ. ರಸಗಳು ಹಲವು; ಆದರೆ ಅವುಗಳಲ್ಲಿ ಶೃಂಗಾರವಾಗಲಿ ವೀರವಾಗಲಿ ಪ್ರಧಾನ; ಮಿಕ್ಕವು ಅದಕ್ಕೆ ಅಂಗ; ಕೊನೆಯಲ್ಲಿ ಅದ್ಭುತ; ಅದರ ಕಟ್ಟಡವು ಹಸುವಿನ ಬಾಲದ ತುದಿಯಂತೆ ಇರುತ್ತದೆ.* ಇದು ನಾನಾ ಸಂವಿಧಾನಗಳಿಂದ ಕೂಡಿ ನಾಯಕ, ಅವನ ಪತ್ನಿ, ಮಂತ್ರಿ ಮುಂತಾದವರ ರಸವತ್ತಾದ ಪ್ರತ್ಯಕ್ಷ ಚರಿತ್ರೆಯನ್ನು ಒಳಗೊಂಡಿರುತ್ತದೆ; ಕಾರ್ಯಗಳು ಅನೇಕವಾಗಿರದೆ, ಆವಶ್ಯಕವಾದ ಘಟನೆಗಳಿಗೆ ಪರಸ್ಪರ ಹೊಂದಿಕೆಯಿರುತ್ತದೆ; ಮುಖ್ಯ ಪ್ರಯೋಜನದ ಮೇಲೆ ದೃಷ್ಟಿಯಿರುವುದರಿಂದ ಮಧ್ಯೆ ಬರುವ ಸಣ್ಣ ಪ್ರಯೋಜನಗಳು ನಿವಾರಣೆಯಾಗುತ್ತವೆ.

ಮಾತೂ ಅರ್ಥವೂ ಸ್ಪಷ್ಟವಾಗಿ, ಗದ್ಯವಾಕ್ಯಗಳು ಚಿಕ್ಕಚಿಕ್ಕವಾಗಿ, ಪದ್ಯಗಳು ಮಿತವಾಗಿ ಇರುತ್ತವೆ.

ಪ್ರತಿಯೊಂದು ಅಂಕವೂ ಕಥಾಬೀಜಕ್ಕೆ ಸಂಬಂಧಪಟ್ಟಿದ್ದು ಅದನ್ನು ವಿಸ್ತರಿಸುತ್ತಿರುತ್ತದೆ; ಆದರೆ ಅದು ಬಹು ದೊಡ್ಡದಾಗಿರಬಾರದು; ಅದರಲ್ಲಿ ಹಲವು ದಿನ ನಡೆಯುವ ಕಥೆ ಇರಬಾರದು; ಸಾಧಾರಣವಾಗಿ ನಾಯಕನು ಮೂರು ನಾಲ್ಕು ಪಾತ್ರಗಳೊಡನೆ ಕಾಣಿಸಿಕೊಳ್ಳಬೇಕು; ಇದರ ಕೊನೆಯಲ್ಲಿ ಪಾತ್ರಗಳೆಲ್ಲರೂ ಹೊರಟುಹೋಗುತ್ತಾರೆ. ಉದಾಹರಣೆ - ಶಾಕುಂತಲ, ಮುದ್ರಾರಾಕ್ಷಸ.

ನಾಟಕವು ಪ್ರಕೃತಿ; ಮಿಕ್ಕ ರೂಪಕಗಳೆಲ್ಲವೂ ಇದರ ‘ವಿಕೃತಿ’ ಗಳು,

೨. ಪ್ರಕರಣ - ಇದರ ವಸ್ತು ಲೌಕಿಕ ಮತ್ತು ಕವಿಕಲ್ಪಿತ; ಪ್ರಧಾನ ರಸ ಶೃಂಗಾರ; ನಾಯಕನು ಬ್ರಾಹ್ಮಣ, ಮಂತ್ರಿ ಅಥವಾ ವರ್ತಕ; ಅವನು ಧೀರಪ್ರಶಾಂತ; ಧರ್ಮಕಾಮಾರ್ಥಪರ; ಅವನ ಆಸ್ತಿ ನಶಿಸಿಹೋಗುತ್ತದೆ; ನಾಯಿಕೆ ಸತ್ಕೂಲಪ್ರಸೂತೆ ಅಥವಾ ವೇಶ್ಯೆ; ಕೆಲವು ವೇಳೆ ಇಬ್ಬರೂ ಇರುವುದು ಉಂಟು; ಈ ಬಗೆಯದರಲ್ಲಿ ವಿಟ, ಚೇಟ, ಜೂಜುಗಾರ ಮೋಸಗಾರ ಮುಂತಾದವರು ಬರುತ್ತಾರೆ. ಮಿಕ್ಕ ಅಂಶಗಳು ನಾಟಕದಲ್ಲಿರುವಂತೆಯೇ. ಉದಾ - ಮೃಚ್ಛಕಟಿಕ, ಮಾಲತೀಮಾಧವ, ಪುಷ್ಪಭೂಷಿತ.

೩. ಭಾಣ - ಇದರ ವಸ್ತು ಉತ್ಪಾದ್ಯ ಮತ್ತು ಧೂರ್ತನ ಚರಿತ್ರೆ; ಒಂದೇ ಅಂಕ; ನಿಪುಣನೂ ಪಂಡಿತನೂ ಆದ ವಿಟನೊಬ್ಬನೇ ಪಾತ್ರ; ಅವನು ಆಕಾಶಭಾಷಿತಗಳ ಮೂಲಕ ತನ್ನ ಮತ್ತು ಇತರರ ಅನುಭವವನ್ನು ತಿಳಿಸುತ್ತಾನೆ. ಶೌರ್ಯ ಸೌಭಾಗ್ಯಗಳ ವರ್ಣನೆಯಿಂದ ವೀರಶೃಂಗಾರಗಳು ಸೂಚಿತವಾಗುತ್ತವೆ; ಮುಖನಿರ್ವಹಣ ಸಂಧಿಗಳೂ, ಹತ್ತು ಲಾಸ್ಯಾಂಗಗಳೂ, ಪ್ರಾಯಿಕವಾಗಿ ಭಾರತೀ ವೃತ್ತಿಯೂ ಇರುತ್ತವೆ. ಉದಾ:- ಲೀಲಾ ಮಧುಕರ.

೪. ಪ್ರಹಸನ - ಇದರ ವಸ್ತು ಕಲ್ಪಿತ ಮತ್ತು ಕೀಳುಜನರ ಚರಿತ್ರೆ; ಹಾಸ್ಯ ಪ್ರಧಾನರಸ; ಸಂಧಿ, ಸಂಧ್ಯಂಗ, ಲಾಸ್ಯಾಂಗ, ಅಂಕ ಇವು ಭಾಷಣದಲ್ಲಿರುವಂತೆಯೇ; ವೀಥ್ಯಂಗಗಳು ಇರುವುದೂ ಉಂಟು, ಇಲ್ಲದ್ದೂ ಉಂಟು. ಆರಭಟೀವೃತ್ತಿಯಾಗಲಿ, ವಿಷ್ಕಂಭಕ ಪ್ರವೇಶಕಗಳಾಗಲಿ ಇಲ್ಲ.

ಪ್ರಹಸನವು ಶುದ್ಧ, ಸಂಕೀರ್ಣ, ವಿಕೃತ ಎಂದು ಮೂರು ವಿಧ; ಶುದ್ಧದಲ್ಲಿ ತಪಸ್ವಿ, ಬ್ರಾಹ್ಮಣ, ಗುರು ಇವರಲ್ಲಿ ಯಾರಾದರೂ ನಾಯಕರಾಗಿರುತ್ತಾರೆ. ಬಹುಜನ ಭ್ರಷ್ಟರ ಚರಿತ್ರೆ ಇದ್ದರೆ ಅದು ಸಂಕೀರ್ಣವಾಗುತ್ತದೆ; ಷಂಡ, ಕಂಚುಕಿ, ತಾಪಸ, ಭುಜಂಗ, ಭಟ ಮುಂತಾದವರು ಬಂದರೆ ವಿಕೃತವಾಗುತ್ತದೆ. ಉದಾ:-ಕಂದರ್ಪಕೇಳಿ, ಧೂರ್ತಚರಿತ, ಲಟಕಮೇಲಕ.

೫. ಡಿಮ - ಇದರ ವಸ್ತು ಪ್ರಖ್ಯಾತ. ಮಾಯ, ಇಂದ್ರಜಾಲ, ಗ್ರಹಣ, ಯುದ್ಧಾದಿಗಳಿಂದ ತುಂಬಿರುತ್ತದೆ. ರೌದ್ರರಸವು ಪ್ರಧಾನ. ಮಿಕ್ಕವುಗಳಲ್ಲಿ ಶಾಂತ ಹಾಸ್ಯ ಶೃಂಗಾರಗಳಿಲ್ಲ; ನಾಲ್ಕು ಅಂಗಗಳು; ವಿಷ್ಕಂಭಕ ಪ್ರವೇಶಕಗಳಿಲ್ಲ. ದೇವ ಗಂಧರ್ವ ಯಕ್ಷ ರಾಕ್ಷಸ ಉರಗ ಭೂತ ಪ್ರೇತಾದಿ ಹದಿನಾರು ಜನ ಉದ್ಧತ ನಾಯಕರು. ಕೈಶಿಕೀವೃತ್ತಿಯೂ, ವಿಮರ್ಶಸಂಧಿಯೂ ಇಲ್ಲ. ಉದಾ- ತ್ರಿಪುರದಾಹ.

೬. ವ್ಯಾಯೋಗ - ಇದರ ವಸ್ತು ಪ್ರಖ್ಯಾತ; ಸ್ತ್ರೀನಿಮಿತ್ತವಲ್ಲದ ಜಗಳ; ಹೆಂಗಸರು ಕಡಿಮೆ, ಗಂಡಸರು ಹೆಚ್ಚು; ಗರ್ಭವಿಮರ್ಶ ಸಂಧಿಗಳಿಲ್ಲ; ಒಂದೇ ಅಂಕ; ಪ್ರಖ್ಯಾತನಾದ ಧೀರೋದ್ಧತ ನಾಯಕ; ಅವನು ರಾಜರ್ಷಿ ಅಥವಾ ದಿವ್ಯ; ಕೈಶಿಕೀವೃತ್ತಿಯಿಲ್ಲ; ಹಾಸ್ಯ ಶೃಂಗಾರ, ಶಾಂತಗಳನ್ನು ಬಿಟ್ಟು ಮಿಕ್ಕ ರಸಗಳು ಪ್ರಧಾನ. ಉದಾ - ಸೌಗಂಧಿಕಾ ಹರಣ.

೭. ಸಮವಕಾರ - ಇದರ ವಸ್ತು ಪ್ರಖ್ಯಾತ; ದೇವಾಸುರರಿಗೆ ಸಂಬಂಧಪಟ್ಟಿದ್ದು, ವಿಮರ್ಶ ಸಂಧಿಯಿಲ್ಲ; ಮೂರು ಅಂಕಗಳು; ಮೊದಲನೆಯದರಲ್ಲಿ ಎರಡು ಸಂಧಿಗಳೂ ಮಿಕ್ಕವುಗಳಲ್ಲಿ ಒಂದೊಂದೂ ಬರುತ್ತವೆ, ಪ್ರಖ್ಯಾತರೂ ಉದಾತ್ತರೂ ಆದ ಹನ್ನೆರಡು ದೇವಮಾನವ ನಾಯಕರು, ಅವರೆಲ್ಲರಿಗೂ ಪ್ರತ್ಯೇಕವಾದ ಫಲ; ವೀರರಸ ಪ್ರಧಾನ, ಕೈಶಿಕೀವೃತ್ತಿ ಕಡಿಮೆ, ಬಿಂದು ಪ್ರವೇಶಕಗಳಿಲ್ಲ; ಗಾಯತ್ರಿ, ಉಷ್ಣಿಕ್ ಮುಂತಾದ ವಿವಿಧ ಛಂದಸ್ಸುಗಳಿರುತ್ತವೆ; ಶೃಂಗಾರತ್ರಯ ಕಪಟತ್ರಯ ವಿದ್ರವತ್ರಯ* ಗಳೂ ವೀಥಿಯ ಹದಿಮೂರು ಅಂಗಗಳಲ್ಲಿ ಸಂಭವವಾದವುಗಳೂ ಬರುತ್ತವೆ. ಮೊದಲನೆಯ ಅಂಕದ ಕಥೆ ೨೪ ಗಳಿಗೆಯಲ್ಲಿಯೂ, ಎರಡು ಮೂರನೆಯ ಅಂಕದವು ಎಂಟು* ಮತ್ತು ನಾಲ್ಕು ಗಳಿಗೆಯಲ್ಲಿಯೂ ನಡೆಯುವುವು. ಉದಾ: ಸಮುದ್ರಮಥನ.

೮. ವೀಥೀ - ಇದರಲ್ಲಿ ಒಂದೇ ಅಂಕ, ಒಬ್ಬ ನಾಯಕ; ಅವನು ಆಕಾಶ ಭಾಷಿತಗಳ ಸಹಾಯದಿಂದ ಚಮತ್ಕಾರವಾಗಿ ಉಕ್ತಿ ಪ್ರತ್ಯುಕ್ತಿಗಳನ್ನು ನಡೆಸುತ್ತಾನೆ, ಶೃಂಗಾರವನ್ನು ಹೆಚ್ಚಾಗಿಯೂ (ಮಿಕ್ಕ ರಸಗಳನ್ನು ಸ್ವಲ್ಪವಾಗಿಯೂ) ಸೂಚಿಸಿರುತ್ತದೆ. ಮುಖನಿರ್ವಹಣ ಸಂಧಿಗಳೂ ಎಲ್ಲಾ ಅರ್ಥಪ್ರಕೃತಿಗಳೂ ಉದ್ಧಾತಕ ವಲಗಿತಾದಿ ಹದಿಮೂರು ಅಂಗಗಳೂ* ಇರುತ್ತವೆ. ಉದಾ: ಮಾಲವಿಕಾ.

ಅಂಕ - ಅಥವಾ ಉತ್ಸೃಷ್ಟಿಕಾಂಕ. ಇದರಲ್ಲಿ ವಸ್ತುವು ಪ್ರಖ್ಯಾತ, ಆದರೆ ಅದು ಕವಿಬುದ್ಧಿಯಿಂದ ಬೆಳೆದಿರುತ್ತದೆ, ಒಂದೇ ಅಂಕ, ನಾಯಕರು ಹಲವರು, ಅವರು ಚತುರರಲ್ಲ, ಕರುಣರಸ, ಅನೇಕ ಹೆಂಗಸರು ಶೋಕಿಸುತ್ತಾರೆ, ಸಂಧಿ ವೃತ್ತಿ ಅಂಗಾದಿಗಳು ಭಾಣದಲ್ಲಿರುವಂತೆಯೇ, ಇದರಲ್ಲಿ ಜಯ ಪರಾಜಯಗಳೂ ಬಹು ವೈರಾಗ್ಯವಿಚಾರವೂ ಬರುತ್ತವೆ, ಆದರೆ ಯುದ್ಧ ಬರಿಯ ಮಾತಿನಿಂದ ವರ್ಣಿಸಲ್ಪಡುತ್ತದೆ. ಉದಾ: ಶರ್ಮಿಷ್ಠಾ ಯಯಾತಿ.

ಈಹಾಮೃಗ* -ಇದರಲ್ಲಿ ವಸ್ತುವು ಮಿಶ್ರ, ಅಂಕಗಳು ನಾಲ್ಕು, ಮುಖ ಪ್ರತಿಮುಖ ನಿರ್ವಹಣ ಸಂಧಿಗಳು, ಪ್ರಖ್ಯಾತರೂ ಧೀರೋದ್ಧತರೂ ಆದ ನರದಿವ್ಯ (ಅಥವಾ ದಿವ್ಯನರ) ವ್ಯಕ್ತಿಗಳು ಪ್ರತಿನಾಯಕರಾಗಿರುತ್ತಾರೆ, ಪ್ರತಿನಾಯಕನು ಗೂಢವಾಗಿ ಆಯುಕ್ತವಾದದ್ದನ್ನು ಮಾಡುತ್ತಾನೆ. ಇಷ್ಟವಿಲ್ಲದ ದಿವ್ಯಸ್ತ್ರೀಯನ್ನು ಕದಿಯಲಿಚ್ಛಿಸುತ್ತಾನೆ; ಅವನಲ್ಲಿ ಸ್ವಲ್ಪ ಶೃಂಗಾರಾಭಾಸವಿರುತ್ತದೆ. ದಿವ್ಯರೋ ಮರ್ತ್ಯರೋ ಹತ್ತು ಜನ ಪತಾಕಾನಾಯಕರಿರುತ್ತಾರೆ, ಯುದ್ಧ ಒದಗಿ ನಿವಾರಣೆಯಾಗುತ್ತದೆ, ಮಹಾತ್ಮರು ವಧೆಗೆ ಸಿಕ್ಕಿದರೂ ವಧಿಸಲ್ಪಡುವುದಿಲ್ಲ (ಒಂದೇ ಅಂಕ, ದಿವ್ಯ ನಾಯಕ ಎಂದು ಕೆಲವರೂ, ದಿವ್ಯಸ್ತ್ರೀ ಹೇತುಕವಾದ ಯುದ್ಧ, ಆರು ನಾಯಕರು ಎಂದು ಮತ್ತೆ ಕೆಲವರೂ, ಇದರ ಲಕ್ಷಣವನ್ನು ಹೇಳುತ್ತಾರೆ). ಉದಾ: ಕುಸುಮಶೇಖರ ವಿಜಯ.

ಉಪರೂಪಕಗಳು

೧. ನಾಟಿಕಾ. ೨. ತ್ರೋಟಕ, ೩. ಗೋಷ್ಠೀ, ೪. ಸಟ್ಟಕ, ೫. ನಾಟ್ಯ ರಾಸಕ, ೬. ಪ್ರಸ್ಥಾನ, ೭. ಉಲ್ಲಾಪ್ಯ, ೮. ಕಾವ್ಯ, ೯. ಪ್ರೇಂಖಣ, ೧೦. ರಾಸಕ, ೧೧. ಸಂಲಾಪಕ, ೧೨. ಶ್ರೀ ಗದಿತ, ೧೩. ಶಿಲ್ಪಕ, ೧೪. ವಿಲಾಸಿಕಾ, ೧೫. ದುರ್ಮಲ್ಲಿಕಾ, ೧೬. ಪ್ರಕರಣೀ, ೧೭. ಹಲ್ಲೀಶ, ೧೮. ಭಾಣಿಕಾ - ಎಂದು ಉಪರೂಪಕಗಳು ಹದಿನೆಂಟು ವಿಧ. ಅವುಗಳ ಲಕ್ಷಣವನ್ನು ಸಾಹಿತ್ಯದರ್ಪಣಕಾರನು ಹೀಗೆ ಹೇಳುತ್ತಾನೆ-

೧. ನಾಟಿಕಾ - ಇದರಲ್ಲಿ ವಸ್ತುವು ಕಲ್ಪಿತ; ನಾಲ್ಕು ಅಂಕಗಳು; ಸ್ತ್ರೀ ಪಾತ್ರಗಳು ಹೆಚ್ಚು; ಧೀರಲಲಿತನೂ ಪ್ರಖ್ಯಾತನೂ ಆದ ರಾಜನು ಅದರ ನಾಯಕ, ಅಂತಃಪುರಕ್ಕೆ ಸಂಬಂಧಪಟ್ಟ ಅಥವಾ ಸಂಗೀತ ಕಲಿಯುತ್ತಿರುವ ನವಾನುರಾಗವುಳ್ಳ ಅವಿವಾಹಿತ ರಾಜಪುತ್ರಿ ನಾಯಿಕೆ, ನಾಯಕನು ರಾಣಿಗೆ ಹೆದರಿ ನಡೆಯುತ್ತಾನೆ. ರಾಣಿ ಹಿರಿಯಳು, ಪ್ರಗಲ್ಭೆ, ರಾಜವಂಶೀಯಳು, ಹೆಜ್ಜೆಹೆಜ್ಜೆಗೆ ಅವಳಿಗೆ ಕೋಪ, ನಾಯಕ ನಾಯಿಕೆಯರ ಸಂಗಮವು ಅವಳ ಕೈಯಲ್ಲಿ, ಕೈಶಿಕೀವೃತ್ತಿ, ಪ್ರಾಯಿಕವಾಗಿ ವಿಮರ್ಶಸಂಧಿಯಿಲ್ಲ. ಉದಾ - ರತ್ನಾವಳೀ, ವಿದ್ಧಶಾಲಭಂಜಿಕಾ.

೨. ತ್ರೋಟಕ - ಇದರಲ್ಲಿ ಐದು, ಏಳು, ಎಂಟು ಅಥವಾ ಒಂಬತ್ತು ಅಂಕಗಳು, ಕಥೆ ದಿವ್ಯಮಾನುಷರಿಗೆ ಸಂಬಂಧಪಟ್ಟದ್ದು, ವಿದೂಷಕನು ಪ್ರತಿಯೊಂದು ಅಂಕದಲ್ಲಿಯೂ ಬರುತ್ತಾನೆ. ಶೃಂಗಾರರಸ ಪ್ರಧಾನ.

ಉದಾ: ಸ್ತಂಭಿತರಂಭ, ವಿಕ್ರಮೋರ್ವಶೀಯ.

೩. ಗೋಷ್ಠೀ - ಇದರಲ್ಲಿ ಒಂಬತ್ತು ಅಥವಾ ಹತ್ತು “ಪ್ರಾಕೃತ” ಪುರುಷರಿರುತ್ತಾರೆ; ರಚನೆ ಉದಾತ್ತವಾದದ್ದಲ್ಲ; ಕೈಶಿಕೀವೃತ್ತಿ; ಗರ್ಭ ವಿಮರ್ಶ ಸಂಧಿಗಳಿಲ್ಲ; ಐದೋ ಆರೋ ಸ್ತ್ರೀಯರಿರುತ್ತಾರೆ; ಕಾಮಶೃಂಗಾರ; ಒಂದೇ ಅಂಕ.

ಉದಾ: ರೈವತಮದನಿಕಾ.

೪. ಸಟ್ಟಿಕ* - ಇದರಲ್ಲಿ ಎಲ್ಲರೂ ಪ್ರಾಕೃತವನ್ನಾಡುತ್ತಾರೆ, ಪ್ರವೇಶಕ ವಿಷ್ಕಂಭಕಗಳಿಲ್ಲ, ಅದ್ಭುತರಸ ಪ್ರಚುರವಾಗಿರುತ್ತದೆ, ಇದರ ಅಂಕಗಳಿಗೆ “ಜವನಿಕೆ” ಗಳೆಂದು ಹೆಸರು, ಮಿಕ್ಕ ಅಂಶಗಳೆಲ್ಲಾ ನಾಟಿಕೆಯಲ್ಲಿರುವಂತೆಯೇ. ಉದಾ: ಕರ್ಪೂರಮಂಜರೀ.

೫. ನಾಟ್ಯರಾಸಕ - ಇದರಲ್ಲಿ ಒಂದೇ ಅಂಕ, ಉದಾತ್ತನಾಯಕ, ಪೀಠಮರ್ದನ ಉಪನಾಯಕ; ಹಾಸ್ಯ ಪ್ರಧಾನ, ಶೃಂಗಾರವೂ ಉಂಟು; ನಾಯಿಕೆ ವಾಸಕ ಸಜ್ಜಿಕೆ; ಮುಖನಿರ್ವಹಣ ಸಂಧಿಗಳು (ಕೆಲವರ ಮತದಲ್ಲಿ ಪ್ರತಿಮುಖಸಂಧಿ ಮಾತ್ರ ಇಲ್ಲ,) ಹತ್ತು ಲಾಸ್ಯಾಂಗಗಳು. ಬಹು ತಾಲ ಲಯಗಳನ್ನುಳ್ಳುದು. ಉದಾ - ನರ್ಮವತೀ, ವಿಲಾಸವತೀ.

೬. ಪ್ರಸ್ಥಾನ (ಕ) - ಇದರಲ್ಲಿ ನಾಯಕನು ದಾಸ; ಉಪನಾಯಕನು ಹೀನ; ನಾಯಿಕೆ ದಾಸಿ; ಕೈಶಿಕೀ ಭಾರತೀ ವೃತ್ತಿಗಳು; ಕಥೆ ಸುರಾಪಾನದಲ್ಲಿ ಮುಗಿಯುತ್ತದೆ; ಎರಡು ಅಂಕಗಳು; ಲಯತಾಲ ವಿಲಾಸವು ಹೆಚ್ಚು. ಉದಾ: ಶೃಂಗಾರತಿಲಕ.

೭. ಉಲ್ಲಾಪ್ಯ - ಅದರ ನಾಯಕನು ಉದಾತ್ತ; ವಸ್ತು ದಿವ್ಯ; ಒಂದೇ ಅಂಕ (ಮೂರು ಎಂಬುದು ಕೆಲವರ ಮತ); “ಶಿಲ್ಪಕ” ದ ಅಂಗಗಳಿಂದ ಕೂಡಿದ್ದು; ಹಾಸ್ಯಶೃಂಗಾರ ಕರುಣಗಳುಳ್ಳದ್ದು; ಯುದ್ಧ ಕದನ ಹೆಚ್ಚು; ತ್ರ್ಯಸ್ರ (ಅಸ್ರ?) ಗೀತದಿಂದ ಮನೋಹರವಾಗಿರುತ್ತದೆ; ನಾಲ್ವರು ನಾಯಿಕೆಯರು ಇರುತ್ತಾರೆ. ಉದಾ: ದೇವೀಮಹಾದೇವ.

೮. ಕಾವ್ಯ- ಇದರಲ್ಲಿ ಒಂದೇ ಅಂಕ; ಆರಭಟೀವೃತ್ತಿಯಿಲ್ಲ; ಉದಾತ್ತ ನಾಯಕನಾಯಿಕೆಯರು; ಮೊದಲೆರಡು ಮತ್ತು ಕೊನೆಯ ಸಂಧಿಗಳು; ಹಾಸ್ಯರಸ; ಖಂಡಮಾತ್ರಾ, ದ್ವಿಪದಿ, ಭಗ್ನತಾಳಗಳೆಂಬ ಗೀತಿಗಳಿಂದ ಕೂಡಿದ್ದು, ವರ್ಣಮಾತ್ರದಲ್ಲಿ ಶುದ್ಧಳಾದ ಗಣಿಕೆಯಿಂದಲೂ, ಶೃಂಗಾರದಿಂದಲೂ ಭೂಷಿತವಾದದ್ದು.* ಉದಾ: ಯಾದವೋದಯ.

೯. ಪ್ರೇಂಖಣ- ಇದರಲ್ಲಿ ನೀಚನಾಯಕ; ಗರ್ಭಾವಮರ್ಶ ಸಂಧಿಗಳಿಲ್ಲ; ಸೂತ್ರಾಧಾರನಿಲ್ಲ; ಒಂದೇ ಅಂಕ; ವಿಷ್ಕಂಭಪ್ರವೇಶಕಗಳಿಲ್ಲ; ಎಲ್ಲಾ ವೃತ್ತಿಗಳೂ ಉಂಟು; ಕುಸ್ತಿಯೂ ಕೋಪದ ಮಾತುಗಳೂ ಬರುತ್ತವೆ; ನಾಂದೀ ಪ್ರರೋಚನಗಳು ನೇಪಥ್ಯದಲ್ಲಿ ನಡೆಯುತ್ತವೆ. ಉದಾ: ವಾಲಿವಧ.

೧೦. ರಾಸಕ - ಇದರಲ್ಲಿ ಒಂದೇ ಅಂಕ; ಐದು ಪಾತ್ರಗಳು; ಮುಖ ನಿರ್ವಹಣ ಸಂಧಿಗಳು (ಕೆಲವರ ಮತದಲ್ಲಿ ಪ್ರತಿಮುಖಸಂಧಿಯೂ ಉಂಟು); ಭಾರತೀ ಕೈಶಿಕೀ ವೃತ್ತಿಗಳು; ಭಾಷಾವಿಭಾಷಾ ಭೇದಗಳಿಂದ ತುಂಬಿದ್ದು; ವೀಥ್ಯಂಗಗಳಿಂದಲೂ ಕಲೆಯಿಂದಲೂ (?) ಕೂಡಿದ್ದು; ನಾಯಕನು ಮೂರ್ಖ; ನಾಯಿಕೆ ಪ್ರಖ್ಯಾತಳು; ನಾಂದಿ ಶ್ಲೇಷೆಯಿಂದ ಕೂಡಿದ್ದು; ಆದರೆ ಸೂತ್ರಧಾರನಿಲ್ಲ; ಬರುಬರುತ್ತ ಉದಾತ್ತಭಾವಗಳ ಅತಿಶಯವಾದ ವಿನ್ಯಾಸವಿರುತ್ತದೆ. ಉದಾ: ಮೇನಕಾಹಿತ.

೧೧. ಸಂಲಾಪಕ - ಇದರಲ್ಲಿ ಮೂರು ಅಥವಾ ನಾಲ್ಕು ಅಂಕಗಳು; ಪಾಷಂಡನಾಯಕ; ಶೃಂಗಾರಕರುಣಗಳನ್ನು ಬಿಟ್ಟು ಮಿಕ್ಕರಸಗಳೂ ಊರಿನ ಮುತ್ತಿಗೆ, ಚಲ, ಯುದ್ಧ ಮುಂತಾದ ಉಪದ್ರವಗಳೂ ಇರುತ್ತವೆ; ಭಾರತೀ ಕೈಶಿಕೀ ವೃತ್ತಿಗಳಿಲ್ಲ. ಉದಾ: ಮಾಯಾಕಾಪಾಲಿಕಲ.

೧೨. ಶ್ರೀಗದಿತ: ಇದರ ವಸ್ತುವು ಪ್ರಖ್ಯಾತ; ನಾಯಕ ಪ್ರಖ್ಯಾತ. ಉದಾತ್ತ; ನಾಯಿಕೆ ಪ್ರಸಿದ್ಧಳು; ಗರ್ಭವಿಮರ್ಶ ಸಂಧಿಗಳಿಲ್ಲ; ಭಾರತೀ ವೃತ್ತಿಯೇ ಹೆಚ್ಚು; ಶ್ರೀ ಎಂಬ ಶಬ್ದವು ಹೆಚ್ಚಾಗಿ ಬರುತ್ತದೆ (?). ಉದಾ: - ಕ್ರೀಡಾರಸಾತಲ.

೧೩. ಶಿಲ್ಪಕ: ಇದರಲ್ಲಿ ನಾಲ್ಕು ಅಂಕಗಳು; ನಾಲ್ಕು ವೃತ್ತಿಗಳು; ಶಾಂತ ಹಾಸ್ಯರಸಗಳಿಲ್ಲ; ಬ್ರಾಹ್ಮಣ ನಾಯಕ; ಶ್ಮಶಾನಾದಿಗಳ ವರ್ಣನೆಗಳು; ನೀಚನಾದ ಉಪನಾಯಕ; ಆಶಂಸೆ ಮುಂತಾದ ಇಪ್ಪತ್ತೇಳು ಅಂಗಗಳಿರುತ್ತವೆ.* ಉದಾ: ಕನಕಾವತೀಮಾಧವ

೧೪. ವಿಲಾಸಿಕಾ : ಇದರಲ್ಲಿ ಒಂದೇ ಅಂಕ; ಶೃಂಗಾರ ಹೆಚ್ಚು; ಹತ್ತು ಲಾಸ್ಯಾಂಗಗಳು; ವಿದೂಷಕ ವಿಟ ಪೀಠಮರ್ದರು ಇರುತ್ತಾರೆ; ಗರ್ಭ ವಿಮರ್ಶ ಸಂಧಿಗಳಿಲ್ಲ; ನೀಚನಾಯಕ; ಕಥಾವಸ್ತು ಸ್ವಲ್ಪ; ನೇಪಥ್ಯ (ವೇಷ ಭೂಷಾದಿ) ರಚನೆ ಚೆನ್ನಾಗಿರುತ್ತದೆ. ಉದಾ-?

೧೫. ದುರ್ಮಲ್ಲಿಕಾ: ಇದರಲ್ಲಿ ನಾಲ್ಕು ಅಂಕಗಳು; ಕೈಶಿಕೀ ಭಾರತೀ ವೃತ್ತಿಗಳು; ಗರ್ಭಸಂಧಿಯಿಲ್ಲ; ಕಥೆಯಲ್ಲಿ ಬರುವ ಜನರು ನಾಗರಿಕರು; ಹೀನನಾಯಕ; ಮೊದಲನೆಯ ಅಂಕದಲ್ಲಿ ವಿಟಕ್ರೀಡೆ. ಇದು ಆರು ಗಳಿಗೆಯಾಗುತ್ತದೆ; ಎರಡನೆಯ ಅಂಕದಲ್ಲಿ ವಿದೂಷಕನ ವಿಲಾಸ; ಇದು ಹತ್ತು ಗಳಿಗೆಯಾಗುತ್ತದೆ; ಮೂರನೆಯ ಅಂಕದಲ್ಲಿ ಪೀಠಮರ್ದನ ವಿಲಾಸ; ಇದು ಹನ್ನೆರಡು ಗಳಿಗೆಯಾಗುತ್ತದೆ. ನಾಲ್ಕನೆಯದರಲ್ಲಿ ನಾಗರಿಕನ ಕ್ರೀಡೆ; ಇದು ಇಪ್ಪತ್ತು ಗಳಿಗೆಯಾಗುತ್ತದೆ. ಉದಾ: ಬಿಂದುಮತೀ.

೧೬. ಪ್ರಕರಣಿ (ಕಾ) - ನಾಟಿಕೆಯಲ್ಲಿ ವರ್ತಕಾದಿಗಳು ನಾಯಕರಾಗಿಯೂ ನಾಯಕನ ವಂಶದಲ್ಲಿ ಹುಟ್ಟಿದವಳೇ ನಾಯಿಕೆಯಾಗಿಯೂ ಇದ್ದರೆ ಅದೇ ಪ್ರಕರಣಿ. ಉದಾ-?

೧೭. ಹಲ್ಲೀಶ - ಇದರಲ್ಲಿ ಒಂದೇ ಅಂಕ; ಮಾತು ಉದಾತ್ತ; ಒಬ್ಬ ಪುರುಷ; ಏಳು ಎಂಟು ಅಥವಾ ಹತ್ತು ಸ್ತ್ರೀಯರು; ಕೈಶಿಕೀವೃತ್ತಿ ಹೆಚ್ಚು; ಮುಖನಿರ್ವಹಣ ಸಂಧಿಗಳು; ತಾಲಲಯಗಳು ಹೆಚ್ಚು. ಉದಾ: ಕೇಲಿ ರೈವತಕಂ.

೧೮. ಭಾಣಿಕಾ - ಇದರಲ್ಲಿಯೂ ಒಂದೇ ಅಂಕ; ನೇಪಥ್ಯ ಸೂಕ್ಷ್ಮ; ಮುಖನಿರ್ವಹಣ ಸಂಧಿಗಳು; ಕೈಶಿಕೀ ಭಾರತೀ ವೃತ್ತಿಗಳು; ಉದಾತ್ತ ನಾಯಿಕೆ; ನೀಚನಾಯಕ; ಉಪನ್ಯಾಸ, ವಿನ್ಯಾಸ, ವಿಬೋಧ, ಸಾಧ್ವಸ, ಸಮರ್ಪಣ, ನಿವೃತ್ತಿ, ಸಂಹಾರ ಎಂಬ ಏಳು ಅಂಗಗಳು. ಉದಾ: ಕಾಮದತ್ತಾ.

ಭರತನು “ಉಪರೂಪಕ” ಗಳನ್ನು ಹೇಳಿಲ್ಲ. ಇವು ಅವನ ಕಾಲಕ್ಕೆ ಇರಲೇ ಇಲ್ಲವೋ, ಇದ್ದೂ ಅವನು ಅವುಗಳನ್ನು ಲಕ್ಷಿಸಲಿಲ್ಲವೋ ಹೇಳುವುದಕ್ಕಾಗುವುದಿಲ್ಲ. ನಾಟಕಾದಿ ಹತ್ತು ರೂಪಕಗಳು ರಸವನ್ನೂ ವಾಕ್ಯಾರ್ಥವನ್ನು ಅಭಿನಯಿಸುವುವೆಂದೂ, ಉಪರೂಪಕಗಳು ಭಾವವನ್ನೂ ಪದಾರ್ಥವನ್ನು ಅಭಿನಯಿಸುವುವೆಂದೂ ಕೆಲವರು* ಅಭಿಪ್ರಾಯಪಡುವುದನ್ನು ನೋಡಿದರೆ, ಈ ಉಪರೂಪಕಗಳಲ್ಲಿ ತಕ್ಕಷ್ಟು ಕಥೆಯೂ ರಸಪುಷ್ಟಿಯೂ ಇರದೆ, ನರ್ತನ ಅಭಿನಯಗಳೇ ಪ್ರಧಾನವಾಗಿದ್ದಂತೆಯೂ ಇವು ಒಟ್ಟಿನ ಮೇಲೆ ಸಣ್ಣ ಸಣ್ಣ ಪ್ರಬಂಧ ವಿಶೇಷಗಳಾಗಿದ್ದಂತೆಯೂ ಊಹಿಸಬಹುದು;* ಮತ್ತು ಇವು ಜನಸಾಮಾನ್ಯದಲ್ಲಿ ಪ್ರಚಾರದಲ್ಲಿದ್ದು ಅವುಗಳ ಸಂಖ್ಯೆ ದೇಶಕಾಲಾನುಸಾರವಾಗಿ ಹೆಚ್ಚು ಕಡಮೆಯಾಗುತ್ತಿದ್ದಿರಬಹುದು; ಆದ್ದರಿಂದ ಲಕ್ಷಣಕಾರರು ಇವುಗಳಲ್ಲಿ ತಮತಮಗೆ ಪರಿಚಿತವಾದಷ್ಟು ಮಾತ್ರ ತಿಳಿಸಿರುವಂತಿದೆ; ಹೀಗೆ ಈ ಉಪರೂಪಕಗಳು ಏಳು ಎಂಬುದು ಒಂದು ಮತ;* ಭೋಜನ ಅಭಿಪ್ರಾಯದಲ್ಲಿ ಇವು ೧೪; ಅಗ್ನಿಪುರಾಣದ ಪ್ರಕಾರ ೧೭; ಭಾವಪ್ರಕಾಶನದಲ್ಲಿ ಉಕ್ತವಾಗಿರುವುದು೨೦. ಆದ್ದರಿಂದಲೇ ಲಕ್ಷಣಕಾರರಿಂದ ಈ ಉಪರೂಪಕಗಳಿಗೆ ಉಕ್ತವಾದ ಲಕ್ಷಣಗಳೂ ಕೆಲವು ಸಣ್ಣ ಅಂಶಗಳಲ್ಲಿ ವ್ಯತ್ಯಾಸವಾಗುತ್ತವೆ.