೩ ನಾಟ್ಯ ಸ್ವರೂಪ

‘ನಾಟ್ಯ’ ವೆಂಬ ಪದವು ‘ನಟ್’ ಧಾತುವಿನಿಂದ ಆದದ್ದು. ‘ನಟ್’ ಎಂಬುದು ‘ನೃತ್’ ಧಾತುವಿನ ಪ್ರಾಕೃತ ರೂಪ. ‘ನೃತ್’ ಅಥವಾ ‘ನಟ್’ ಎಂದರೆ ‘ಕುಣಿ’ ಎಂದು ಅರ್ಥ; ಆದ್ದರಿಂದ ನೃತ್ತ, ನೃತ್ಯ, ನಾಟ್ಯ, ನಾಟಕ - ಎಂಬ ಎಲ್ಲಾ ಶಬ್ದಗಳಿಗೂ ಮೂಲತಃ ‘ಕುಣಿತ’ ಎಂದೇ ಅರ್ಥ. ಅದರಂತೆ ಇವೆಲ್ಲವುಗಳಲ್ಲಿಯೂ ಕುಣಿತವೇನೋ ಉಂಟು; ಆದರೂ ಇವುಗಳಿಗೆ ಪರಸ್ಪರ ವ್ಯತ್ಯಾಸವಿದೆ.

‘ನೃತ್ತ’ ವೆಂಬುದು ತಾಳ ಲಯಗಳನ್ನು ಅನುಸರಿಸಿ ಕುಣಿಯುವ ಕುಣಿತ; ಇದರ ಜೊತೆಗೆ ಸಂಗೀತವಿದ್ದರೂ ಇರಬಹುದು; ಇದನ್ನು ಒಬ್ಬರಾಗಲಿ ಹಲವರಾಗಲಿ ನಡೆಸಬಹುದು; ಇದರಲ್ಲಿ ಭಾವಪ್ರಕಾಶನವಾಗಲಿ, ಅಭಿನಯವಾಗಲಿ ಇರಬೇಕಾಗಿಲ್ಲ.

‘ನೃತ್ಯ’ ವೆಂಬುದೂ ಕುಣಿತವೇ; ಪ್ರಾಯಿಕವಾಗಿ ಒಬ್ಬರೇ ಕುಣಿಯುವ ಕುಣಿತ; ಇದರಲ್ಲಿ ಸಂಗೀತವಿರುತ್ತದೆ; ಸಂಗೀತವಿದ್ದ ಮೇಲೆ ತಾಳವೂ ಉಂಟು; ತಾಳ ಸಂಗೀತಗಳೆರಡಕ್ಕಿಂತಲೂ ಪ್ರಧಾನವಾದದ್ದು ‘ಭಾವ’ ಗಳ ಅಭಿನಯ; ಇದರಲ್ಲಿಯೇ ಹಿಂದಿನ ‘ನೃತ್ತ’ ಕ್ಕೂ ಈ ‘ನೃತ್ಯ’ ಕ್ಕೂ ಮುಖ್ಯ ವ್ಯತ್ಯಾಸವಿರುವುದು; ‘ಅಷ್ಟಪದಿ’ ಯ ಪದ್ಯ, ಕ್ಷೇತ್ರಯ್ಯನ ಪದಗಳು ಇವುಗಳನ್ನು ಹೀಗೆ ಇಂದಿಗೂ ಅಭಿನಯಿಸುತ್ತಾರೆ; ಇವುಗಳಲ್ಲಿ ಸಂತೋಷ, ದುಃಖ, ದೂರು, ಮೊರೆ- ಮುಂತಾದ ಯಾವುದಾದರೂ ಒಂದು ಭಾವವಿರುತ್ತದೆ. ಆ ಭಾವವನ್ನು ನರ್ತಕರು ಅಂಗಾಭಿನಯಗಳಿಂದ ವ್ಯಕ್ತಪಡಿಸುತ್ತಾರೆ; ಅವರಿಗೆ ಹೆಚ್ಚಿನ ವೇಷಭೂಷಗಳು ಬೇಕಿಲ್ಲ; ಆ ವೇಷಭೂಷಗಳಿಂದ ಅವರು ಯಾವ ವ್ಯಕ್ತಿಯನ್ನೂ ಅನುಕರಣ ಮಾಡುವುದಿಲ್ಲ; ಆ ಭಾವವು ವಿಸ್ತಾರವಾಗಿ ಪೋಷಿತವಾಗಿ ರಸವಾಗುವುದಿಲ್ಲ; ಅದಕ್ಕೆ ಆಶ್ರಯವಾಗಿ ಹೆಚ್ಚಿನ ವೃತ್ತಾಂತವಾಗಲಿ, ಕಥೆಯಾಗಲಿ ಇರುವುದಿಲ್ಲ.

‘ನಾಟ್ಯ’ ದಲ್ಲಿ ಮುಖ್ಯವಾಗಿರುವುದು - ಹಿಂದಿನ ಎರಡು ಜಾತಿಗಳಲ್ಲಿಯೂ ಇಲ್ಲದಿರುವುದು - ‘ಅನುಕರಣ’ ; ‘ಅವಸ್ಥೆ’ ಯ ಅನುಕರಣ. ‘ಅವಸ್ಥೆ’ ಎಂದರೆ ಯಾವುದಾದರೂ ವ್ಯಕ್ತಿಯ ಸ್ಥಿತಿಗತಿಗಳು; ಆದ್ದರಿಂದ ‘ನಾಟ್ಯ’ ವನ್ನು ಅಭಿನಯಿಸುವ ‘ನಟನು’ ತಾನು ಅನುಕರಣ ಮಾಡುವ ವ್ಯಕ್ತಿಯ ವೇಷಭೂಷಗಳನ್ನು ಅನುಕರಣಮಾಡುತ್ತಾನೆ; ಅವನಂತೆ ಮಾತುಕಥೆಗಳನ್ನಾಡುತ್ತಾನೆ; ‘ಅವಸ್ಥಾನುಕರಣ’ ವು ಸಮಗ್ರವಾಗಬೇಕಾದರೆ ಅವನಿಗೆ ಇತರ ಪಾತ್ರಗಳ ಸಹಾಯವೂ ಪರಿಕರಗಳೂ ಬೇಕಾಗುತ್ತವೆ; ಇವುಗಳ ಸಹಾಯದಿಂದ ಅವನು ತಾನು ಅನುಕರಿಸುವ ವ್ಯಕ್ತಿಯ ಭಾವವನ್ನು ಪ್ರದರ್ಶಿಸುವುದಲ್ಲದೆ ನಾನಾ ದೃಶ್ಯಗಳನ್ನು ಕಲ್ಪಿಸಿ ನಾಟ್ಯವನ್ನು ನೋಡುವವರ ಮನಸ್ಸಿನಲ್ಲಿ ವಿವಿಧ ರಸಗಳ ಅನುಭವವನ್ನು ಉಂಟುಮಾಡಿಕೊಡುತ್ತಾನೆ. ಈ ನಾಟ್ಯಕ್ಕೆ ‘ರೂಪ’, ‘ರೂಪಕ’ ಎಂದೂ ಹೆಸರು. ‘ರೂಪಕ’ ಗಳು ಹಲವು ವಿಧ. ‘ನಾಟಕ’ ವೆಂಬುದು ಆ ಹಲವು ವಿಧಗಳಲ್ಲಿ ಪ್ರಧಾನವಾದ ಒಂದು ಜಾತಿ.*

ನಾಟ್ಯವು ನೃತ್ಯದ ವಿಸ್ತಾರ; ನೃತ್ಯವು ನೃತ್ತಜನ್ಯ; ಆದ್ದರಿಂದ ಇವೆಲ್ಲವುಗಳಲ್ಲಿಯೂ ಕುಣಿತವೂ, ಕುಣಿತದ ಒಡನಾಡಿಯಾಗಿ ಸಂಗೀತವೂ ಬರುತ್ತದೆ. ನೃತ್ಯಕ್ಕೆ ಸಂಗೀತ ಬೇಕಿಲ್ಲ; ನೃತ್ಯದಲ್ಲಿ ಅಭಿನೇಯವಾದ ಹಾಡನ್ನು ಹಿಮ್ಮೇಳದವರು ವಾದ್ಯಗಳೊಡನೆ ಸ್ಪಷ್ಟವಾಗಿ ಹಾಡುತ್ತಾರೆ. ನರ್ತಕನು ಆ ಹಾಡನ್ನು ಅಸ್ಪಷ್ಟವಾಗಿ ತನ್ನ ಬಾಯಲ್ಲಿ ಅಂದುಕೊಳ್ಳುವಂತೆ ಮಾತ್ರ ತೋರುತ್ತ ಅದರ ಭಾವವನ್ನು ಅಭಿನಯಕ್ಕೆ ರೂಪಾಂತರ ಮಾಡುತ್ತಾನೆ; ನ್ಯಾಯವಾಗಿ ನಾಟ್ಯದಲ್ಲಿಯೂ ಹೀಗೆಯೇ ಹಾಡುವುದನ್ನೆಲ್ಲಾ ಹಿಮ್ಮೇಳದವರು ಹಾಡಿ, ಅಭಿನಯವನ್ನು ನಟರಿಗೆ ಬಿಡಬೇಕು; ಇಂಥದೇ ಮಲೆಯಾಳದಲ್ಲಿ ಇಂದಿಗೂ ಪ್ರಚುರವಾಗಿರುವ ‘ಕಥಕಳಿ’ ಎಂಬ ಮೂಕನಾಟ್ಯ; ‘ಬಯಲಾಟ’ ದಲ್ಲಿಯೂ ‘ಹಾಡು’ ಬಂತೆಂದರೆ ಅದನ್ನು ಹಿಮ್ಮೇಳದವರು ಹಾಡುತ್ತಾರೆ; ನಟನು ಹಾಡುವುದಿಲ್ಲ; ಕುಣಿದು ಅಭಿನಯಿಸಿ ತೋರಿಸುತ್ತಾನೆ; ಗದ್ಯವೆಂದರೆ ಮಾತ್ರ ಕುಣಿತವನ್ನು ನಿಲ್ಲಿಸಿ ಅಲ್ಪಸ್ವಲ್ಪ ಅಭಿನಯದಿಂದ ಮಾತುಗಳನ್ನು ಆಡುತ್ತಾನೆ.

ನಾಟ್ಯದಲ್ಲಿ ಹೀಗೆ ಗದ್ಯವು ಬಂದು ಪ್ರವೇಶಿಸಿ ಹೆಚ್ಚಿದ ಮೇಲೆ ಅದರಿಂದ ಸಂಭಾಷಣೆಯೂ ಕಥೆಯೂ ಬೆಳೆಯುವುದಕ್ಕೆ ಅವಕಾಶವಾಯಿತು; ಆದರೆ ನೃತ್ಯ ಗೀತಗಳು ಕಡಮೆಯಾದುವು; ಗ್ರೀಕ್ ಸಾಹಿತ್ಯದಲ್ಲಿ ಗದ್ಯವೇ ಇಲ್ಲದ, ಕೇವಲ ಪದ್ಯ ಗೀತಮಯವಾದ, ನಾಟ್ಯವುಳ್ಳ ನಾಟಕಗಳನ್ನು ನೋಡಬಹುದು; ಈ ರೂಪದ ನಾಟಕ ಸಾಹಿತ್ಯ ಸಂಸ್ಕೃತದಲ್ಲಿಯೂ ಮೊದಲು ಮೊದಲು ಇದ್ದಿರಬಹುದು; ಆದರೆ ಅಂಥವು ದೊರೆತಿಲ್ಲ; ಗದ್ಯಪದ್ಯಮಯವಾಗಿ ಉಳಿದರೂ ನೃತ್ಯಗೀತಗಳಿಲ್ಲದವು ಇಂಗ್ಲಿಷ್ ಸಾಹಿತ್ಯದಲ್ಲಿ ಕಂಡುಬರುವ ಷೇಕ್ಸ್ಪಿಯರ್ ಮೊದಲಾದವರ ನಾಟಕಗಳು; ‘ನಾಟ್ಯಧರ್ಮ’ ವನ್ನು ಪೂರ್ತಿಯಾಗಿ ತಿರಸ್ಕರಿಸಿ, ಪದ್ಯವನ್ನು ಬಿಟ್ಟು ಗದ್ಯವನ್ನೇ ಉಪಯೋಗಿಸುತ್ತಿರುವವು ಇಂದಿನ ಗದ್ಯ ಸಾಮಾಜಿಕ ನಾಟಕಗಳು; ಸಂಸ್ಕೃತ ನಟರಲ್ಲಿಯೂ ನಾಟಕಕರ್ತರಲ್ಲಿಯೂ ಸಂಪ್ರದಾಯಾನುಸರಣೆ ಶಿಥಿಲವಾಗಿ ಸ್ವತಂತ್ರ ಪ್ರವೃತ್ತಿ ಪರೀಕ್ಷಾ ಬುದ್ಧಿಗಳು ಹೆಚ್ಚಾಗಿ, ಮಿಕ್ಕ ದೇಶಗಳಲ್ಲಿರುವಂತೆ ಇಲ್ಲಿಯೂ ನಾಟಕ ಸಾಹಿತ್ಯವು ಬೆಳೆದುಕೊಂಡು ಬಂದಿದ್ದರೆ, ಪ್ರಾಯಶಃ ಸಂಸ್ಕೃತ ನಾಟಕಗಳೂ ಇಂದು ಇದೇ ರೂಪನ್ನು ತಾಳುತ್ತಿದ್ದುವೆಂದು ತೋರುತ್ತದೆ.

ಅದೇನೆ ಇರಲಿ, ಈಗ ಸಂಸ್ಕೃತ ಸಾಹಿತ್ಯದಲ್ಲಿರುವ ನಾಟಕಗಳೆಲ್ಲವೂ ಗದ್ಯಪದ್ಯಮಯವಾಗಿವೆ; ಅವುಗಳಲ್ಲಿ ಕೆಲವನ್ನಾದರೂ ಮೇಲೆ ಹೇಳಿದಂತೆ ನೃತ್ಯ ಗೀತ ವಾದ್ಯಗಳಿಂದ ಅಭಿನಯಿಸಿ ಪ್ರದರ್ಶಿಸುತ್ತಿದ್ದಿರಬೇಕು; ಇನ್ನು ಕೆಲವು ಪ್ರಯೋಗದೃಷ್ಟಿಯಿಂದ ಬರೆದವುಗಳಲ್ಲ; ಮಹಾಕಾವ್ಯದಂತೆ ಓದಲು ಅರ್ಹವಾದ ನಾಟಕರೂಪದ ಕೃತಿಗಳು; ಅವುಗಳನ್ನು ಆದ್ಯಂತವಾಗಿ ಅಭಿನಯಿಸುವುದು ಅಸಾಧ್ಯವೆಂದೇ ಹೇಳಬೇಕು; ಆದ್ದರಿಂದ ಬರಬರುತ್ತ ಕೆಲವು ಪದ್ಯಗಳನ್ನು ಹಾಡಿ ಅಭಿನಯಿಸುತ್ತಲೂ ಮಿಕ್ಕವನ್ನು ಸುಮ್ಮನೆ ಹಾಡುತ್ತಲೂ ಹೇಳುತ್ತಲೂ ಇದ್ದರೆಂದು ಊಹಿಸಬಹುದು.

ರಸೋತ್ಪತ್ತಿಗೆ ನೃತ್ಯಗೀತಗಳು ಪರಿಪೋಷಕಗಳಾಗಬಹುದು; ಆದರೆ ಆವಶ್ಯಕವಾಗಬೇಕಿಲ್ಲ; ಆದ್ದರಿಂದಲೇ ಒಳ್ಳೆಯ ಶ್ರವ್ಯಕಾವ್ಯಗಳಿಂದಲೂ ರಸೋತ್ಪತ್ತಿಯಾಗುತ್ತದೆ. ರಸಕ್ಕೆ ಮುಖ್ಯ ಕಾರಣ ಘಟನಾ ವಿಶೇಷಗಳು, ಸನ್ನಿವೇಶ ವೈಚಿತ್ರ್ಯಗಳು, ಪಾತ್ರಗಳ ನಡೆನುಡಿಗಳು; ಇವುಗಳಲ್ಲಿ ಕಲ್ಪನೆಯನ್ನೂ ಕೌಶಲವನ್ನೂ ಪ್ರತಿಭೆಯನ್ನೂ ನೈಪುಣ್ಯವನ್ನೂ ತೋರಿ ಕವಿ ತನ್ನ ಕೃತಿಯನ್ನು ರಸವತ್ತಾಗಿ ಮಾಡಬಹುದು; ಓದುವಾಗ ಇವಿಲ್ಲದೆ, ನೋಡುವಾಗ ನೃತ್ಯ ಗೀತಾಭಿನಯಗಳಿಲ್ಲದೆ ಇದ್ದರೆ ಉತ್ತಮವಾದ ಕಾವ್ಯವೂ ಆಗುವುದಿಲ್ಲ, ಒಳ್ಳೆಯ ನಾಟಕವೂ ಆಗುವುದಿಲ್ಲ.

ಇವೆಲ್ಲವನ್ನೂ ಸಂಸ್ಕೃತ ಸಾಹಿತ್ಯದಿಂದ ನಿದರ್ಶಿಸಬಹುದು. ಅಂತು ಲಕ್ಷಣ ಗ್ರಂಥಕಾರರೆಲ್ಲ ‘ನಾಟ್ಯ’ ಸ್ವರೂಪವನ್ನು ಒಂದೇ ರೀತಿಯಾಗಿ ಹೇಳುತ್ತ ಬಂದಿದ್ದರೂ ವಸ್ತು ಸ್ಥಿತಿಯಲ್ಲಿ ಅದು ಕ್ರಮವಾಗಿ ಮಾರ್ಪಡುತ್ತ ಬಂದಂತೆ ಊಹಿಸಲು ಅವಕಾಶವಿದೆ.