೨ ನಾಟ್ಯದ ಮೇಲಣ ಲಕ್ಷಣ ಗ್ರಂಥಗಳು

೨ ನಾಟ್ಯದ ಮೇಲಣ ಲಕ್ಷಣ ಗ್ರಂಥಗಳು

ನಾಟಕದ ವಿಚಾರವು ಇಷ್ಟು ದೊಡ್ಡದಾದ್ದರಿಂದಲೇ, ಸಾಧಾರಣವಾಗಿ ಅದರ ಒಂದೊಂದು ಭಾಗದ ಪ್ರತಿಪಾದನೆ ಒಂದೊಂದು ಶಾಸ್ತ್ರದಲ್ಲಿ ವಿಸ್ತಾರವಾಗಿ ಕಂಡುಬರುತ್ತದೆ; ಸಾಹಿತ್ಯ ಶಾಸ್ತ್ರದಲ್ಲಿ ಕಾವ್ಯಾಂಶ; ನಾಟ್ಯಶಾಸ್ತ್ರದಲ್ಲಿ ಅಭಿನಯಾಂಶ; ಸಂಗೀತ ಶಾಸ್ತ್ರದಲ್ಲಿ ಸಂಗೀತಾಂಶ; ವಾಸ್ತುಶಾಸ್ತ್ರದಲ್ಲಿ ನಾಟ್ಯ ಮಂದಿರದ ನಿರ್ಮಾಣ - ಇತ್ಯಾದಿ. ಈ ಅಂಶಗಳೆಲ್ಲವನ್ನೂ ಭರತನ ನಾಟ್ಯ ಶಾಸ್ತ್ರವು ವಿವರಿಸುತ್ತದೆ. ಅದಕ್ಕೆ ಸಂಗ್ರಹವಾಗಿ “ಭರತಶಾಸ್ತ್ರ” ವೆಂದೂ ಹೆಸರು.

ಭರತನ ‘ನಾಟ್ಯಶಾಸ್ತ್ರ’ ವೇ ಈಗ ನಮಗೆ ದೊರೆತಿರುವ ಲಕ್ಷಣಗ್ರಂಥಗಳಲ್ಲೆಲ್ಲಾ ಪ್ರಾಚೀನವಾದದ್ದು; ಇದಕ್ಕೂ ಹಿಂದೆ ‘ಶಿಲಾಲಿ’ ಮತ್ತು ‘ಕೃಶಾಶ್ವ’ ಎಂಬುವರು ‘ನಟಸೂತ್ರ’ ಗಳನ್ನು ಬರೆದಿದ್ದಂತೆ ಪಾಣಿನಿಯ ವ್ಯಾಕರಣದಲ್ಲಿ ನಿರ್ದೇಶನವಿದೆ; ಆ ನಟಸೂತ್ರಗಳು ಸಿಕ್ಕಿಲ್ಲವಾಗಿ ಅವುಗಳ ಸ್ವರೂಪವೇನೆಂದು ತಿಳಿಯುವಂತಿಲ್ಲ. ಭರತನ ನಾಟ್ಯಶಾಸ್ತ್ರವು ಸುಮಾರು ಕ್ರಿ.ಶ. ಒಂದು ಅಥವಾ ಎರಡನೆಯ ಶತಮಾನದ್ದೆಂದು ಹೇಳಬಹುದು; ಅದರಲ್ಲಿ ಈಗ ಕಂಡುಬರತಕ್ಕ ಅಂಶಗಳೆಲ್ಲಾ ಒಂದೇ ಕಾಲದವಲ್ಲ; ಆದ್ದರಿಂದ ಅದರ ಕೆಲವು ಭಾಗಗಳು ಈ ಕಾಲಕ್ಕಿಂತ ಹಿಂದಕ್ಕೂ ಮತ್ತೆ ಕೆಲವು ಭಾಗಗಳು ಮುಂದಕ್ಕೂ ಹೋಗಬಹುದು.

ಇದರ ಬಹುಭಾಗವು ಅನುಷ್ಟುಪ್ ಶ್ಲೋಕಗಳಲ್ಲಿದೆ; ಅಲ್ಲಲ್ಲೇ ಬೇರೆಬೇರೆ ವೃತ್ತಗಳೂ ಮಹಾಭಾಷ್ಯ ಶೈಲಿಯಲ್ಲಿ ಬರೆದ ಗದ್ಯವೂ ಇವೆ. ಆದರೂ ಒಟ್ಟಿನ ಮೇಲೆ ಇದಕ್ಕೆ “ನಾಟ್ಯಸೂತ್ರ” ವೆಂಬ ವ್ಯವಹಾರವೂ ಇದೆ; ಹಿಂದೆ ಇದ್ದ ಸೂತ್ರರೂಪವಾದ ಗ್ರಂಥವೇ ಈಗ ಅದರ ವಿವರಣರೂಪವಾದ ಶ್ಲೋಕಗಳಾಗಿದೆ ಎಂದು ಕೆಲವರೂ, ಈಗಿನ ಗ್ರಂಥವು ಹಿಂದೆ ಇದ್ದ ಇನ್ನೂ ವಿಸ್ತಾರವಾದ ಗ್ರಂಥದ ಸಂಗ್ರಹವೆಂದು ಇನ್ನು ಕೆಲವರೂ ಅಭಿಪ್ರಾಯಪಡುತ್ತಾರೆ. ಇದರಲ್ಲಿ ಅಲ್ಲಲ್ಲಿ ಅನುವಾದ ಮಾಡಿರುವ ಶ್ಲೋಕಗಳನ್ನು ನೋಡಿದರೆ ಇದಕ್ಕೂ ಹಿಂದೆ ಈ ವಿಷಯದ ಮೇಲೆ ಪ್ರಮಾಣ ಗ್ರಂಥಗಳು ಇದ್ದಂತೆ ಊಹಿಸಬೇಕಾಗುತ್ತದೆ. ಆದರೆ ಇವುಗಳ ಹೆಸರಾಗಲಿ ಕರ್ತೃವಾಗಲಿ ಈ ಗ್ರಂಥದಲ್ಲಿ ಎಲ್ಲಿಯೂ ಉಕ್ತವಾಗಿಲ್ಲ.

ಹಿಂದೆ ಇದ್ದದ್ದು ಏನೇ ಆಗಲಿ, ಹೇಗೇ ಇರಲಿ, ಈಗಿರುವ ಈ ಗ್ರಂಥದಲ್ಲಿ ಮುವ್ವತ್ತೇಳು ಅಧ್ಯಾಯಗಳಿವೆ. ಇವುಗಳಲ್ಲಿ ಮೊದಲನೆಯ ಐದು ಅಧ್ಯಾಯಗಳು ಪೀಠಿಕಾ ರೂಪವಾಗಿಯೂ ಕೊನೆಯ ಎರಡು ಅಧ್ಯಾಯಗಳು ಉಪಸಂಹಾರ ರೂಪವಾಗಿಯೂ ಇವೆ. ಮಧ್ಯೆ ಇರುವ ಮಿಕ್ಕ ಮುವ್ವತ್ತು ಅಧ್ಯಾಯಗಳು ರಂಗವಿಚಾರವನ್ನು ನಿರೂಪಿಸುತ್ತವೆ. ಪೀಠಿಕಾ ಭಾಗದಲ್ಲಿ ನಾಟ್ಯದ ಉತ್ಪತ್ತಿ, ಉದ್ದೇಶ, ಮಂಟಪವಿಧಾನ, ಪೂರ್ವರಂಗವಿಧಾನ ಎಂಬ ಮುಖ್ಯವಾದ ಮೂರು ಅಂಶಗಳಿವೆ; ಅಲ್ಲಿಂದ ಮುಂದಿನ ಅಧ್ಯಾಯಗಳಲ್ಲಿ ರಸ ಮತ್ತು ಭಾವಗಳು (ಅಧ್ಯಾಯ ೬ - ೭), ಅಭಿನಯ (ಆಂಗಿಕ ೮ - ೧೨, ವಾಚಿಕ ೧೪ - ೧೯, ಆಹಾರ್ಯಾದಿ ೨೧ - ೨೬), ಧರ್ಮಿ (೧೩), ವೃತ್ತಿ (೨೦), ಪ್ರವೃತ್ತಿ (೧೩), ಸಿದ್ಧಿ (೨೭), ಸ್ವರ ಆತೋದ್ಯ ಗಾನ (೨೮ - ೩೪), ರಂಗಕ್ಕೆ ಸಂಬಂಧಪಟ್ಟ ಇತರ ವಿಚಾರ (೩೫), ಭರತಶಾಸ್ತ್ರ ಭೂಲೋಕಕ್ಕೆ ಬಂದದ್ದು (೩೬ - ೩೭) ಈ ವಿಚಾರಗಳು ಉಕ್ತವಾಗಿವೆ. ನಾಟ್ಯ ಲಕ್ಷಣವನ್ನು ವಿವರಿಸುವ ಮಿಕ್ಕ ಗ್ರಂಥಗಳೆಲ್ಲವೂ ಪ್ರಾಯಿಕವಾಗಿ ಇದನ್ನೇ ಅವಲಂಬಿಸಿಕೊಂಡು ಹುಟ್ಟಿವೆ. ಈ ವಿಚಾರದ ಮೇಲೆ ಇಷ್ಟು ವಿಸ್ತಾರವೂ ವ್ಯಾಪಕವೂ ಆದ ಮತ್ತಾವ ಸಂಸ್ಕೃತ ಗ್ರಂಥವೂ ಇಲ್ಲ.

ಇದರ ಮೇಲೆ ಅಭಿನವಗುಪ್ತನು (ಕ್ರಿ.ಶ. ೧೦೦೦) ಬರೆದಿರುವ ‘ಅಭಿನವಭಾರತೀ’ ಎಂಬ ವ್ಯಾಖ್ಯಾನವು ಮೂಲದಷ್ಟೇ ಬೆಲೆಯುಳ್ಳದ್ದಾಗಿದೆ; ಅನೇಕ ಕಡೆ ಅದಕ್ಕೆ ಪೂರಕವಾಗಿದೆ.

ಮುಂದೆ ಬಂದ ಸಾಹಿತ್ಯಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತಶಾಸ್ತ್ರ, ಅಭಿನಯಶಾಸ್ತ್ರ ಮುಂತಾದ ಶಾಸ್ತ್ರಗಳ ಮೇಲಣ ಗ್ರಂಥಗಳು ಮುಖ್ಯವಾಗಿ ತಮ್ಮ ತಮ್ಮ ಶಾಸ್ತ್ರಕ್ಕೆ ಸಂಬಂಧಪಡುವ ಅಂಶಗಳನ್ನೂ ಅವುಗಳಿಗೆ ಸಂಬಂಧಪಟ್ಟ ಹಾಗೆ ಇತರ ವಿಚಾರಗಳನ್ನೂ ಪ್ರಸ್ತಾಪಿಸುತ್ತವೆ. ಹೀಗೆ ಧನಂಜಯನ ‘ದಶರೂಪಕ’ ವು (೧೦ನೆಯ ಶತ) ಹತ್ತು ವಿಧವಾದ ರೂಪಕಗಳನ್ನೂ, ಅವುಗಳ ವಸ್ತು ಪಾತ್ರ ರಸಗಳನ್ನೂ ನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತದೆ. ಶಾರದಾತನಯನ ‘ಭಾವಪ್ರಕಾಶನ’ ವು (ಸು. ೧೨೦೦) ಹತ್ತು ‘ಅಧಿಕಾರ’ ಗಳಲ್ಲಿ ಭಾವ, ರಸ, ನಾಯಕ ನಾಯಿಕಾಭೇದ, ಶಬ್ದಾರ್ಥ ಸಂಬಂಧ, ರೂಪಕದ ಮತ್ತು ಉಪರೂಪಕದ ಭೇದಗಳು ಇವುಗಳನ್ನು ತಿಳಿಸಲು ಸಂಕಲ್ಪಿಸಿ ದೃಶ್ಯ ಕಾವ್ಯ ಲಕ್ಷಣಗಳನ್ನು ಹೇಳಿರುವುದಲ್ಲದೆ, ಲಕ್ಷ್ಯವಾಗಿ ಒಂದು ನಾಟಕವನ್ನೇ ಗರ್ಭೀಕರಿಸಿದೆ. ವಿದ್ಯಾಧರನ ‘ಏಕಾವಳಿ’ ಯೂ (ಸು. ೧೩೦೦) ಬಹುಮಟ್ಟಿಗೆ ಪ್ರತಾಪರುದ್ರೀಯದಂತೆಯೇ ಇದೆ. ವಿಶ್ವನಾಥನ ‘ಸಾಹಿತ್ಯ ದರ್ಪಣ’ ವು (ಸು. ೧೩೫೦) ಅದರ ದೃಶ್ಯ ಕಾವ್ಯ ನಿರೂಪಣ ರೂಪವಾದ ನಾಲ್ಕು ಅಧ್ಯಾಯಗಳಲ್ಲಿ (೩ - ೬) ರೂಪಕ, ಉಪರೂಪಕ, ವಸ್ತು, ಪಾತ್ರ, ರಸ ಇವುಗಳ ವಿಚಾರವನ್ನು ವಿಸ್ತಾರವಾಗಿ ವಿವರಿಸಿದೆ.

ನವೀನಾಲಂಕಾರಿಕರು ರಸಕ್ಕೆ ಪ್ರಾಧಾನ್ಯ ಕೊಡುತ್ತಾರೆ; ಆದ್ದರಿಂದ ಕೇವಲ ಶ್ರವ್ಯ ಕಾವ್ಯ ವಿಚಾರವೊಂದನ್ನೇ ಹೇಳಹೊರಡುವ ಈಚಿನ ಕೆಲವು ಅಲಂಕಾರ ಗ್ರಂಥಗಳೂ ಆನುಷಂಗಿಕವಾಗಿ ರಸ, ಅದಕ್ಕೆ ಸಂಬಂಧಪಟ್ಟಂತೆ ಭಾವ, ನಾಯಕ, ನಾಯಿಕೆ ಇವುಗಳನ್ನು ಪ್ರಸ್ತಾಪಿಸುತ್ತವೆ. ಕೆಲವು ಇವುಗಳಲ್ಲಿ ಒಂದೊಂದನ್ನೇ ತೆಗೆದುಕೊಂಡು ವಿವರಿಸುವುದೂ ಉಂಟು; ಭೋಜನ (೧೧ನೆಯ ಶತ.) ‘ಸರಸ್ವತೀ ಕಂಠಾಭರಣ’, ‘ಶೃಂಗಾರ ಪ್ರಕಾಶ’, ಶಿಂಗೆ ಭೂಪಾಲನ (೧೪ನೆಯ ಶತ) ‘ರಸಾರ್ಣವ ಸುಧಾಕರ’ ಮುಂತಾದುವು ಇಂಥ ಗ್ರಂಥಗಳು.

ಶಾರ್ಙ್ಗದೇವನ (೧೩ನೆಯ ಶತ.) ‘ಸಂಗೀತ ರತ್ನಾಕರ’ ವು ಸಂಗೀತ ಶಾಸ್ತ್ರಕ್ಕೇ ಎತ್ತಿದ್ದಾದರೂ ಅದರಲ್ಲಿ ರಸ ಭಾವ ಅಭಿನಯಾದಿಗಳ ವಿಚಾರವೂ ‘ಸಂಗೀತ ಚೂಡಾಮಣಿ’ ‘ಸಂಗೀತ ಮಕರಂದ’ ಮುಂತಾದ ಸಂಗೀತ ಗ್ರಂಥಗಳಲ್ಲಿ ನಾಟ್ಯಶಾಲೆಯ ವಿಚಾರವೂ ವಿವರಿಸಲ್ಪಟ್ಟಿವೆ.

‘ವಿಷ್ಣುಧರ್ಮೋತ್ತರ’, ‘ಮಾನಸೋಲ್ಲಾಸ’, ಭೋಜನ ‘ಸಮರಾಂಗಣ ಸೂತ್ರಧಾರ’, ಶ್ರೀಕುಮಾರನ ‘ಶಿಲ್ಪರತ್ನ’, ವಾಸುದೇವ ಸೂರಿಯ ‘ಪ್ರಾಸಾದ ಲಕ್ಷಣ’ ಮುಂತಾದ ಶಿಲ್ಪಶಾಸ್ತ್ರ ಗ್ರಂಥಗಳು ನಾಟ್ಯ ಮಂದಿರಗಳ ಸ್ವರೂಪ, ಅವುಗಳನ್ನು ಕಟ್ಟುವ ರೀತಿ ಮುಂತಾದುವುಗಳನ್ನು ವಿವರಿಸುತ್ತವೆ.

ನಾಟ್ಯವನ್ನೂ ಅಭಿನಯವನ್ನೂ ತಿಳಿಸುವುದಕ್ಕಾಗಿಯೇ ಅನೇಕ ಗ್ರಂಥಗಳು ಹುಟ್ಟಿವೆ. ‘ಅಭಿನಯ ದರ್ಪಣ’, ‘ನಾಟ್ಯ ದರ್ಪಣ’, ‘ನಾಟ್ಯ ಪ್ರದೀಪ’, ‘ನಾಟ್ಯ ಚೂಡಾಮಣಿ’ ಇವು ಇಂಥ ಗ್ರಂಥಗಳು.

ಇವಲ್ಲದೆ ಮೇಲೆ ಕಂಡ ವಿಷಯಗಳನ್ನು ತಿಳಿಸುವ ಇನ್ನೂ ಅನೇಕ ಗ್ರಂಥಗಳು ಹಸ್ತಪ್ರತಿಯ ರೂಪದಲ್ಲಿದ್ದು ಪ್ರಕಾಶಕ್ಕೆ ಬಾರದೆ ಇವೆಯೆಂದು ಗೊತ್ತಾಗುತ್ತದೆ; ಆದರೆ ಅವು ಅಷ್ಟು ಪ್ರಧಾನವೂ ಪ್ರಮಾಣವೂ ಪ್ರಸಿದ್ಧವೂ ಆದವಾಗಿ ಕಾಣುವುದಿಲ್ಲ.