ಸಂಸ್ಕೃತ ಸಾಹಿತ್ಯದಲ್ಲಿ ‘ನಾಟಕ’ ಕ್ಕೆ ಶ್ರೇಷ್ಠವಾದ ಸ್ಥಾನವಿದೆ; ಸಾಹಿತ್ಯ ಸೋಪಾನದಲ್ಲಿ ಅದು ಎಲ್ಲಕ್ಕಿಂತಲೂ ಮೇಲಿನ ಮೆಟ್ಟಲು ಎಂದು ನಮ್ಮವರು ಭಾವಿಸಿದ್ದಾರೆ; ಇದು ನ್ಯಾಯವೇ; ಏಕೆಂದರೆ ನಾಟಕದಲ್ಲಿ ಅನೇಕ ಲಲಿತಕಲೆಗಳು ಸಮಂಜಸವಾಗಿ ಸೇರಿ ಒಂದು ಅಪೂರ್ವ ರಮಣೀಯತೆಯನ್ನು ತರುತ್ತವೆ; ಚರಿತ್ರೆಯ ದೃಷ್ಟಿಯಿಂದ ನೋಡಿದರೂ, ನಾಟಕವು ಸಾಹಿತ್ಯದ ಗೊಂಚಲಿನಲ್ಲಿ ಕೊನೆಗೆ ಅರಳಿದ ದೊಡ್ಡ ಕುಸುಮವೆಂದು ಗೊತ್ತಾಗುತ್ತದೆ.
‘ನಾಟಕ’ ವೆಂಬುದು ಈ ಕೃತಿಜಾತಿಯಲ್ಲಿ ಒಂದು ಒಳಭೇದ; (ಇದು ಮುಂದೆ ಗೊತ್ತಾಗುತ್ತದೆ.) ಆದರೂ ಅದಕ್ಕೆ ಇರುವ ಪ್ರಾಶಸ್ತ್ಯದಿಂದ ‘ನಾಟಕ’ ವೆಂಬ ಹೆಸರನ್ನು ಸಾಮಾನ್ಯವಾಗಿ ಆ ಗುಂಪಿನ ಎಲ್ಲಾ ಜಾತಿಗೂ ಉಪಯೋಗಿಸುವುದು ರೂಢಿಯಾಗಿದೆ; ಮುಂದೆಯೂ ಭೇದವಿವಕ್ಷೆ ಇಲ್ಲದ ಕಡೆಯಲ್ಲೆಲ್ಲಾ ಸಾಧಾರಣವಾಗಿ ಈ ರೂಢಿಯನ್ನೇ ಅನುಸರಿಸಿದೆ.
ಸಂಸ್ಕೃತದ ಆಲಂಕಾರಿಕರು ಕಾವ್ಯವನ್ನು ‘ದೃಶ್ಯ’ ವೆಂದೂ ‘ಶ್ರವ್ಯ’ ವೆಂದೂ ಎರಡು ವಿಭಾಗ ಮಾಡಿ ನಾಟಕಾದಿ ಪ್ರಬಂಧಗಳನ್ನು ‘ದೃಶ್ಯ’ ವಾಗಿ ಎಣಿಸುವರು; ‘ದೃಶ್ಯ’ ವೆಂದರೆ ನೋಡತಕ್ಕದ್ದು; ಆದ್ದರಿಂದ ಇವಕ್ಕೆ “ರೂಪಕ” (ರೂಪವುಳ್ಳದ್ದು) ಎಂದೂ ಹೆಸರು. ಇದಲ್ಲದೆ ಸಾಹಿತ್ಯವನ್ನು ‘ಕಾವ್ಯ’, ‘ನಾಟ್ಯ’ ಎಂದೂ ವಿಭಾಗ ಮಾಡಿ ‘ರೂಪಕ’ ಗಳನ್ನು ‘ನಾಟ್ಯ’ ದ ಕೆಳಗೆ ತರುವುದೂ ಉಂಟು; ‘ನಾಟ್ಯ’ ವೆಂದರೆ ‘ಕುಣಿತ’ - ಸಂಗೀತ, ಸಾಹಿತ್ಯ, ಅಭಿನಯಗಳೊಡಗೂಡಿ ಕುಣಿಯುವ ಕುಣಿತ. ಇದರಿಂದ ನಾಟಕದಲ್ಲಿ ಕಾವ್ಯ ನೃತ್ಯ ಗೀತ (ಎಂದರೆ ಗಾನ, ವಾದನ) ಇವೆಲ್ಲವೂ ಸೇರಿರುವುವೆಂದು ಗೊತ್ತಾಗುವುದು. ಇದನ್ನು ಪ್ರಯೋಗಿಸುವುದಕ್ಕೆ ಚಿತ್ರ, ಶಿಲ್ಪ ಮುಂತಾದ ಇತರ ಕುಶಲ ವಿದ್ಯೆಗಳ ಸಹಾಯವೂ ಬೇಕಾಗುತ್ತದೆ. ಹೀಗೆ ನಾಟಕದಲ್ಲಿ ಹಲವು ಕಲೆಗಳು ಸೇರಿ ಒಂದು ಅಪೂರ್ವ ರಮಣೀಯತೆಯನ್ನು ತಂದು ನಾನಾ ರುಚಿಗಳುಳ್ಳ ವಿವಿಧ ಜನರಿಗೆ ಆನಂದವನ್ನು ಉಂಟುಮಾಡುತ್ತವೆ.