ಶ್ರೀಮಾನ್ ಕೃಷ್ಣಶಾಸ್ತ್ರಿಗಳವರ ಸಂಸ್ಕೃತ ನಾಟಕದ ಚರಿತ್ರೆಯನ್ನು ಮಹಾಜನರು ಆದರದಿಂದ ಬರಮಾಡಿಕೊಳ್ಳುವರೆಂದು ನಾನು ನಂಬಿದ್ದೇನೆ. ಈ ವಿಷಯಕ್ಕೆ ಸಂಬಂಧಪಟ್ಟ ಅನೇಕ ಗ್ರಂಥಗಳನ್ನೂ ವಿದ್ವತ್ ಪತ್ರಿಕೆಗಳಲ್ಲಿ ಚೆದರಿರತಕ್ಕ ಅಸಂಖ್ಯಾತ ಲೇಖನಗಳನ್ನೂ ಪರಿಶೀಲಿಸಿ, ಸಂಸ್ಕೃತ ನಾಟಕಗಳನ್ನೆಲ್ಲಾ ಪರಾಮರ್ಶಿಸಿದ ತಮ್ಮ ಸ್ವಂತ ಅನುಭವವನ್ನು ಸೇರಿಸಿ, ಈ ಸಣ್ಣ ಪುಸ್ತಕದಿಂದ, ಕನ್ನಡದಲ್ಲಿ ಮೊದಲನೆಯ ಸಾರಿ, ಭಾರತೀಯ ಸಾಹಿತ್ಯದ ನಾಯಕರತ್ನದಂತಿರುವ ಒಂದು ಭಾಗದ ವಿಚಾರವಾಗಿ ಜ್ಞಾನಪ್ರಸಾರಣೆಗೆ ಅನುಕೂಲಮಾಡಿದ್ದಾರೆ. ಅವರ ಶ್ರಮವೂ ಪರ್ಯಾಲೋಚನೆಯೂ ಕೃತಜ್ಞತೆಗೆ ಅರ್ಹವಾದುವು.
೧
ನಾಟಕಪ್ರೇಮಿಗಳು ಸಾಧಾರಣವಾಗಿ ಪ್ರಪಂಚದ ಮೂರು ಮುಖ್ಯ ನಾಟಕ ಸಾಹಿತ್ಯಗಳನ್ನು ನೋಡಬೇಕು. ಅವು ಯಾವುವೆಂದರೆ-ಸಂಸ್ಕೃತ, ಗ್ರೀಕ್ ಮತ್ತು ಇಂಗ್ಲಿಷ್. ಈ ಗ್ರಂಥದಲ್ಲಿ ಸಂಸ್ಕೃತ ನಾಟಕದ ಉತ್ಪತ್ತಿ ಮತ್ತು ಚರಿತ್ರೆಗಳನ್ನೂ ನಾಟಕ ಕವಿಗಳ ಕಾಲ ಜೀವನಚರಿತೆ ಮತ್ತು ವಿಮರ್ಶೆಗಳನ್ನೂ ಸಾಧ್ಯವಾದಷ್ಟು ಸಂಕ್ಷೇಪವಾಗಿ ತಿಳಿಸಿದೆ. ಮುಂದೆ, ಸಿದ್ಧ? ವಾಗಿರುವ ನನ್ನ ‘ಗ್ರೀಕ್ ನಾಟಕ’ವನ್ನು ಪ್ರಕಾಶಪಡಿಸುತ್ತದೆ. ಅದನ್ನು ಹಿಂಬಾಲಿಸಿ ‘ಇಂಗ್ಲಿಷ್ ನಾಟಕ’ ದ ಮೇಲೆ ಒಂದು ಗ್ರಂಥವನ್ನು ಹೊರಡಿಸುವ ಯೋಚನೆ ಇದೆ. ಈ ಮೂರು ಗ್ರಂಥಗಳಿಂದ ಕನ್ನಡ ಜನರು ನಾಟಕದ ಸ್ವರೂಪ ವಿಸ್ತಾರ ಶಕ್ಯತೆಗಳು ಏನೆಂಬುದನ್ನು ತಾರತಮ್ಯ ಜ್ಞಾನದಿಂದ ತಿಳಿದುಕೊಳ್ಳಲೂ ನಾಟಕೀಯತೆಯ ನಿಜಸ್ವಭಾವವನ್ನು ಕಂಡುಕೊಂಡು ಆನಂದಿಸಲೂ ನೆರವಾದೀತೆಂದು ಆಸೆಪಡಬಹುದಾಗಿದೆ.
ಗ್ರೀಕ್ ನಾಟಕ ಕಾಲಕ್ರಮದಲ್ಲಿ ಮೊದಲು ಬರುತ್ತದೆ. ಕ್ರಿಸ್ತಪೂರ್ವ ೫ನೆಯ ಶತಮಾನದಲ್ಲಿ, ಪಾರಸಿಕರ ಸೋಲಿನಿಂದ ಜೀವಕಳೆಯೇರಿದ ಅತ್ಯಭ್ಯುದಯ ಕಾಲದಲ್ಲಿ, ಪೆರಿಕ್ಲೀಸಿನ ಹೊನ್ನಿನ ಯುಗದ ರಾಜ್ಯಭಾರದಲ್ಲಿ, ಆಥೆನ್ಸಿನ ದಿವ್ಯನಗರಿಯಲ್ಲಿ ಹೊಮ್ಮಿ ಅರಳಿ, ಹಿರಿಯರಾದ ಮೂವರ ಪ್ರತಿಭೆಯಿಂದ ಪ್ರಕಾಶಿಸಿ, ಈ ನಾಟಕಪುಷ್ಪ ಬಹುಬೇಗ ಉದುರಿ ಹೋಯಿತು. ಈಸ್ಖಿಲಸ್, ಸಾಫೋಕ್ಲೀಸ್, ಯೂರಿಪೀಡೀಸ್ -ಇವರು ಗ್ರೀಕ್ ರುದ್ರನಾಟಕಗಳ (tragedy) ರತ್ನತ್ರಯಗಳು. ಗ್ರೀಕರ ಯುದ್ಧವಿಜಯವನ್ನು ಸಾರುವ ಈಸ್ಖಿಲಸಿನ ‘ಪಾರಸಿಕರು’ ಎಂಬ ನಾಟಕ ಕನ್ನಡದ ರಂಗಸ್ಥಳದಲ್ಲಿ ಈಗಾಗಲೇ ನಾಟ್ಯಮಾಡಿದೆ. ಈಸ್ಖಿಲಸಿನ ನಾಟಕಗಳು ೭, ಸಾಫೋಕ್ಲೀಸಿನವು ೭, ಯೂರಿಪೀಡೀಸಿನವು ೧೯; ಇವುಗಳ ಜೊತೆಗೆ ಪ್ರಹಸನ (Comedy) ಗಳನ್ನು ಬರೆದಿರುವ ಅರಿಸ್ಟೋಫೇನೀಸ್ ಇವನ ನಾಟಕಗಳು ೧೧ -ಹೀಗೆ ಒಟ್ಟು ಉಳಿದಿರುವ ಗ್ರೀಕ್ ನಾಟಕಗಳು ೪೪. ಇವು ಗ್ರೀಕ್ ನಾಟಕದ ಕಾಯ, ಲಕ್ಷ್ಮ. ೪ನೆಯ ಶತಮಾನದ ತತ್ತ್ವಜ್ಞಾನಿಗಳ ಶಿರೋಮಣಿಗಳಾದ ಪ್ಲೇಟೋ ಮತ್ತು ಆತನ ಶಿಷ್ಯ ಅರಿಸ್ಟೋಟಲ್-ಇವರಿಬ್ಬರೂ ಈ ನಾಟಕಗಳ ಚರಿತ್ರೆ ಮತ್ತು ಗುಣ ಪರಿಶೀಲನೆಗಳನ್ನು ಗಮನಿಸಿದ್ದಾರೆ. ಕವಿತಾವೇಶದಿಂದಾಗುವ ಸೃಷ್ಟಿಯ ಸೌಂದರ್ಯವನ್ನು ಬಲ್ಲವನಾದರೂ ಪ್ಲೇಟೋ ತತ್ತ್ವದೃಷ್ಟಿಯ ಆವೇಶದಲ್ಲಿ ನಾಟಕಪ್ರಪಂಚ ಮಿಥ್ಯಾಪ್ರಪಂಚವೆಂದೂ ರಾಗದ್ವೇಷಾದಿ ಮನಸ್ಸಿನ ಚಾಂಚಲ್ಯಗಳನ್ನು ಪ್ರತಿಬಿಂಬಿಸಿ ಮನುಷ್ಯನ ಚಾರಿತ್ರಶುದ್ಧಿ ಗೆ ಅಡ್ಡಿಬರುವುದರಿಂದ ಉತ್ತಮ ರಾಜ್ಯದಲ್ಲಿ ನಾಟಕಕ್ಕೂ ‘ಕಾವ್ಯಕ್ಕೂ ಬಹಿಷ್ಕಾರ ಹಾಕಬೇಕೆಂದೂ ಅಭಿಪ್ರಾಯಪಟ್ಟಿದ್ದಾನೆ “ಕಾವ್ಯಾಲಾಪಾಂಶ್ಚ ವರ್ಜಯೇತ್” ಎಂದು ನಮ್ಮವರು ಹೇಳಿದಂತೆ. ಈ ದೃಷ್ಟಿಯನ್ನು ಪ್ರತಿಭಟಿಸಿ, ನಾಟಕದ ಅನುಕರಣದ ‘ಆಟ’ ಮಿಥ್ಯೆ ಯ ಮತ್ತು ಮಾಯೆಯ ಮೂಲಕ ಜೀವನದ ಸತ್ಯವನ್ನು ತಿಳಿಸುವ ದಿವ್ಯಕಲೆಯೆಂದೂ, ರಾಗದ್ವೇಷ ಮುಂತಾದ ಮಾನವಹೃದಯದ ಪರಿವರ್ತನೆಗಳನ್ನು ಎತ್ತಿತೋರಿಸುವುದರಿಂದ ನೋಟಕರಲ್ಲಿ ಈ ಭಾಗಗಳನ್ನು ಹೊಮ್ಮಿಸಿ, ರಸಗಳನ್ನು ಕೆರಳಿಸಿ, ವೈದ್ಯನು ಮದ್ದಿ ಕ್ಕಿ ಪ್ರವೃತ್ತಿಯನ್ನುಂಟು ಮಾಡಿಸಿ ಕಲ್ಮಷವನ್ನು ಕಳೆಯುವಂತೆಯೇ ನಾಟಕ ಕವಿಯೂ ಚಿತ್ತಶುದ್ಧಿ ಯನ್ನುಂಟು ಮಾಡಿ, ಜನರನ್ನು ತಮ್ಮ ಅಲ್ಪವಾದ ಸ್ವಾರ್ಥ ಪ್ರಪಂಚದಿಂದ ಹೊರಕ್ಕೆಳೆದು, ಮಹಾಪುರುಷರ ದೊಡ್ಡ ಬಾಳಿನ ಅಮೋಘವಾದ ಸುಖದುಃಖ ಪ್ರವಾಹದಲ್ಲಿ ಮೀಯಿಸಿ, ಆನಂದವನ್ನೂ ಅನುಕಂಪವನ್ನೂ ಸಹಾನುಭೂತಿಯನ್ನೂ ಪಾಪಭೀತಿಯನ್ನೂ ವಿಶ್ವಪ್ರೇಮವನ್ನೂ ಕಲಿಸತಕ್ಕ ತತ್ತ್ವಜ್ಞಾನಿಯೇ ಸರಿ, ಬೋಧಕನೇ ಸರಿ ಎಂದೂ ಅರಿಸ್ಟೋಟಲ್ ಕಾವ್ಯವನ್ನೂ ನಾಟಕವನ್ನೂ ಸಮರ್ಥಿಸಿದ್ದಾನೆ-ನಮ್ಮವರು “ನಾನೃಷಿಃ ಕುರುತೇ ಕಾವ್ಯಂ’’ ಎಂದು ಹೇಳಿರುವಂತೆ, ಗುರುವಿಗೆ ತಕ್ಕ ಶಿಷ್ಯ ! ಗ್ರೀಕ್ ನಾಟಕ ವಿಮರ್ಶೆಗೆ, ಯೂರೋಪಿನ ಸಾಹಿತ್ಯವಿಮರ್ಶೆಗೆ ಅಡಿಗಲ್ಲು, ಮೂಲಾಧಾರ, ಅರಿಸ್ಟೋಟಲಿನ ‘ಕಾವ್ಯಮೀಮಾಂಸೆ’ (Poetics), ‘ಈ ಸಣ್ಣ ಗ್ರಂಥದಲ್ಲಿ ಗ್ರೀಕ್, ನಾಟಕದ ಉತ್ಪತ್ತಿ, ಸ್ವರೂಪ, ರುದ್ರನಾಟಕ ಮತ್ತು ಪ್ರಹಸನಗಳ ಲಕ್ಷಣ, ನಾಟಕದಲ್ಲಿ ಮೇಳ, ನಾಟ್ಯ, ಗೀತ (Chorus, ಗ್ರೀಕ್ ನಾಟಕದ ವೈಶಿಷ್ಟ್ಯ)-ಇವುಗಳ ಸ್ಥಾನ, ಕಾರ್ಯ (Action, Fable or Plot) ಪಾತ್ರರಚನೆ (Characterization), ಶೈಲಿ, ಇತಿಹಾಸ ಕಾವ್ಯಕ್ಕೂ (Epic) ರುದ್ರನಾಟಕಕ್ಕೂ ಪರಸ್ಪರ ತಾರತಮ್ಯ ಈ ಅಂಶಗಳನ್ನು ಬಹು ಸೂಕ್ಷ್ಮ ರೀತಿಯಲ್ಲಿ ಚರ್ಚಿಸಿದ್ದಾನೆ. ಆತನ ಹೇಳಿಕೆಯಂತೆ ರುದ್ರನಾಟಕ ಘನವಾದ, ಉದಾತ್ತವಾದ, ಗಂಭೀರವಾದ ಕಾರ್ಯದ ಅನುಕರಣ; ಕಥನವಲ್ಲ, ನಟನ, ಅಭಿನಯ; ಕಾರ್ಯ ಸಂಪೂರ್ಣವಾಗಿರಬೇಕು; ತಕ್ಕ ಗಾತ್ರವುಳ್ಳದ್ದಾಗಿರಬೇಕು. ಮೇಳದ ಗೀತಗಳು, ಪಾತ್ರಗಳ ಸಂವಾದಗಳು ಸುಂದರವಾದ ಶೈಲಿಯಲ್ಲಿರಬೇಕು. ಸಹಾನುಭೂತಿಯಿಂದ ಕನಿಕರವನ್ನೂ ಭಯವನ್ನೂ ಎಬ್ಬಿಸಿ, ಈ ರಸಗಳನ್ನು ಪರಿಶುದ್ದಿಗೊಳಿಸಬೇಕು. ರುದ್ರನಾಟಕಗಳಲ್ಲಿ ಮನುಷ್ಯ ಸ್ವಭಾವದ ಆಳವನ್ನು ನೋಡಬಹುದು; ರುದ್ರನಾಯಕನು ಮಹಾಪುರುಷನಾಗಿ ಅನೇಕ ಸದ್ಗುಣಗಳಿಂದ ನಮ್ಮ ಮೆಚ್ಚುಗೆಯನ್ನೂ ಸಹಾನುಭೂತಿಯನ್ನೂ ಪಡೆದವನಾಗಿ, ಯಾವುದೋ ಒಂದು ದೋಷದಿಂದ, ಲೋಪದಿಂದ, ಮದದಿಂದ, ಕ್ರೂರವಿಧಿಯಿಂದ ಕಷ್ಟಕ್ಕೊಳಗಾಗಿ ಸತ್ತುಹೋಗುವನು. ಆತನ ಗತಿಯನ್ನು ನೋಡಿ ಭಯವೂ, ಪೂಜ್ಯತೆಯನ್ನು ನೋಡಿ “ಅಯ್ಯೋ ಪಾಪ” ಎಂಬ ಮರುಕವೂ ಉಂಟಾಗುವುವು.
ಅಥೆನ್ಸ್ ರಾಜ್ಯ ನಾಶವಾದ ಮೇಲೆ ಅಲೆಗ್ಸಾಂಡರ್ ಮಹಾವೀರನ ವಿಜಯಗಳ ಪರಿಣಾಮವಾಗಿ, ಅಲೆಕ್ಸಾಂಡ್ರಿಯ ಪಟ್ಟಣ ಗ್ರೀಕ್ ನಾಗರೀಕತೆಯ ಕೇಂದ್ರವಾಯಿತು (ಕ್ರಿ. ಪೂ. ೩ನೆಯ ಶತಮಾನದಿಂದ). ಅಲ್ಲಿ ಅನೇಕ ವಿದ್ವಾಂಸರು ಸೇರಿ ಸಾಹಿತ್ಯ ಮಥನಮಾಡಿ ವ್ಯಾಕರಣ, ಛಂದಸ್ಸು, ಅಲಂಕಾರ ಮುಂತಾದ ಶಾಸ್ತ್ರಗಳನ್ನೂ ಹೊಸ ಸಾಹಿತ್ಯರೂಪಗಳನ್ನೂ ಬೆಳೆಸಿದರು. ಆದರೆ ಇದು ಒಟ್ಟಿನ ಮೇಲೆ ಲಕ್ಷಣ ಯುಗ, ಸೃಷ್ಟಿಯುಗವಲ್ಲ. ಆಗ ಅರಿಸ್ಟೋಟಲಿನ ಉದಾತ್ತ ತತ್ವಗಳು ಕಣ್ಮರೆಯಾಗಿ, ಪಾಂಡಿತ್ಯದ ಕೂದಲು ಸೀಳಿಕೆ ಬಲವಾಗಿ, ಗ್ರೀಕ್ ಸಾಹಿತ್ಯಸೂರ್ಯ ಅತಿಚರ್ಚೆಯ ಮಂಜಿನ ಮಬ್ಬಿನಲ್ಲಿ ಮುಳುಗಿಹೋಯಿತು.
ಆದರೆ ಸಂಜೆಗೆಂಪಿನ ಬೆಳಕು ಇಷ್ಟು ಹೊತ್ತಿಗೆ ಸಾಮ್ರಾಜ್ಯವನ್ನು ಕಟ್ಟುತ್ತಿದ್ದ ರೋಮ್ ನಗರಕ್ಕೆ ಹಬ್ಬಿತು. ಗೆದ್ದ ರೋಮನ್ ಜನಕ್ಕೆ ಸೋತ ಗ್ರೀಕ್ ಜನರು ಗುರುಗಳಾದರು. ತಮ್ಮ ಕಲೆ ಸಾಹಿತ್ಯ ನಾಗರಿಕತೆ ಎಲ್ಲದರಲ್ಲಿಯೂ ಗ್ರೀಕರ ಪಡಿಯಚ್ಚಾದರು ರೋಮನರು. ಗ್ರೀಕ್ ರುದ್ರನಾಟಕ ಮತ್ತು ಪ್ರಹಸನಗಳನ್ನು ಭಾಷಾಂತರಮಾಡಿ, ರೂಪಾಂತರಮಾಡಿ, ಸಂಕಲಿಸಿ, ಅನುಕರಿಸಿ, ಲ್ಯಾಟಿನ್ ನಾಟಕ ತೃಪ್ತಿ ಹೊಂದಿತು (ಕ್ರಿ. ಪೂ. ೨ನೆಯ ಶತಮಾನ-ಕ್ರಿ. ಶ. ೧ನೆಯ ಶತಮಾನ). ಈ ಲ್ಯಾಟಿನ್ ನಾಟಕ ಸತ್ತು ಮತ್ತೆ ೧೬ನೆಯ ಶತಮಾನದ ಯೂರೋಪಿನ ಪುನರುಜ್ಜೀವನದಲ್ಲಿ ಮಾರ್ಗದರ್ಶಿಯಾಯಿತು.
ಅಲೆಗ್ಸಾಂಡರಿನ ವಿಜಯಯಾತ್ರೆ ಪೂರ್ವಕ್ಕೂ ವ್ಯಾಪಿಸಿತ್ತು; ಪಾರಸಿಕರನ್ನು ಸೋಲಿಸಿ, ಭರತಭೂಮಿಗೆ ಅಡಿಯಿಟ್ಟು, ಸಿಂಧು ಪ್ರಾಂತವನ್ನು ವಶಪಡಿಸಿಕೊಂಡಿತು-ಕ್ಷಣಕಾಲ ಮಾತ್ರ. ಆದರೆ ಅದರ ಪರಿಣಾಮವಾಗಿ ಗ್ರೀಕರು (‘ಯವನ’ ರೆಂದು ನಮ್ಮಲ್ಲಿ ಪ್ರಸಿದ್ದ) ವಾಯವ್ಯ ಪ್ರಾಂತದಲ್ಲಿ, ಉಜ್ಜಯಿನಿಯವರೆಗೆ ಮತ್ತೆ ರಾಜ್ಯಕಟ್ಟಿ ಸುಮಾರು ಮೂರು ಶತಮಾನಗಳು ಅಳಿದರು. ಯವನಾಚಾರ್ಯರ ಪರಿಚಯ ನಮಗೂ ತಕ್ಕಮಟ್ಟಿಗೆ ಆದ ಹಾಗಿದೆ. ಈ ಕಾಲದಲ್ಲಿ ‘ಹೆಲೆನಿಸಮ್’ ಎಂಬ ಗ್ರೀಕ್ ಕಲೆ ಸಾಹಿತ್ಯ ತತ್ತ್ವ ಶಾಸ್ತ್ರಗಳನ್ನೊಳಗೊಂಡ ನಾಗರಿಕತೆ ನಮ್ಮ ಭಾರತೀಯರ ಮೇಲೆಯೂ ಪ್ರಭಾವವನ್ನು ಬೀರಿರಬಹುದೇ? ಎಂಬ ವಿಚಾರ ಚಾರಿತ್ರ ಪರಿಶೋಧಕರಲ್ಲಿ ಹುಟ್ಟುವುದು ಸಹಜವಾಗಿದೆ. ಈ ದೃಷ್ಟಿಯಲ್ಲಿ ಸಂಸ್ಕೃತ ನಾಟಕದ ಮೇಲೆಯೂ (ಇದು ಈಗ ಸಿಕ್ಕಿರುವ ಮಟ್ಟಿಗೆ ಸುಮಾರು ಕ್ರಿಸ್ತಶಕ ೧ನೆಯ ಶತಮಾನದಿಂದ ಆರಂಭವಾಗುವುದರಿಂದ) ಗ್ರೀಕ್ ನಾಟಕದ ಪ್ರಭಾವ ಬಿದ್ದಿರಬಹುದೇ ಎಂಬ ಚರ್ಚೆಗೆ ಅವಕಾಶವುಂಟು. ಈ ವಿಷಯವನ್ನು ಈ ಗ್ರಂಥದಲ್ಲಿ ಚರ್ಚಿಸಿದೆ.
ಸಂಸ್ಕೃತ ನಾಟಕ, ೧-೬ನೆಯ ಶತಮಾನಗಳಲ್ಲಿ ಉಚ್ಛ್ಛ್ರಾ ಯ ಸ್ಥಿತಿಯಲ್ಲಿದ್ದು ಕ್ರಮವಾಗಿ ಕ್ಷೀಣವಾಗುತ್ತ ಸುಮಾರು ೮-೧೦ನೆಯ ಶತಮಾನಗಳ ಹೊತ್ತಿಗೆ ಖಿಲವಾಗಿ ಹೋಯಿತು. ಆಮೇಲೆ ನಾಟಕಗಳನ್ನು ಪಂಡಿತರು ಬರೆಯುತ್ತಲೇ ಇದ್ದರೂ ಅದು ಕೇವಲ ಅಂಧಾನುಕರಣ, ಕೊಳೆ ಬೆಳೆ. ಗ್ರೀಕರ ಅಲೆಕ್ಸಾಂಡ್ರಿಯ ಸಾಹಿತ್ಯದಂತೆ ಲಕ್ಷಣ ಬಂಧನದ್ದು; ಚಮತ್ಕಾರ ಶಬ್ದಾಡಂಬರ ಪ್ರದರ್ಶನದ್ದು. ಸೃಷ್ಟಿಶಕ್ತ ರಾದ, ಪ್ರತಿಭಾಪೂರ್ಣರಾದ, ಸ್ವಲ್ಪ ಲಕ್ಷಣದ ಸಂಪ್ರದಾಯಕ್ಕೆ ಕಟ್ಟುಬಿದ್ದರೂ ಸ್ವಾತಂತ್ರ್ಯದ ತೇಜಸ್ಸುಳ್ಳವರಾದ ಕಾಳಿದಾಸಾದಿ ನಾಟಕಕವಿಗಳ ನಾಟಕವೇ ಸಂಸ್ಕೃತದ ಉತ್ತಮ ನಾಟಕ. ಇದರಲ್ಲಿ ಎದ್ದು ಹೊಳೆಯುವುವು. ಅಶ್ವಘೋಷನ ಬುದ್ಧದೇವನ ಉಪದೇಶಗಳ ಪ್ರಚಾರ; ಭಾಸನ ವೈದಿಕ ಶ್ರದ್ಧೆ, ಅವನ ವೀರ್ಯ, ಸರಳತೆ, ನಾಟಕೀಯತೆ; ಶೂದ್ರಕನ ಬೌದ್ಧ ವೈದಿಕ ಮಿಶ್ರವಾದ ಸಾಮಾಜಿಕ ಚಿತ್ರ, ಗ್ರೀಕ್ ಛಾಯೆ; ಕಾಳಿದಾಸನ ಪರಿಪೂರ್ಣತೆ, ಸೌಂದರ್ಯದರ್ಶನ, ಭೋಗ ಶೃಂಗಾರ, ವೇದಾಂತ ತತ್ತ್ವ, ಸಂಸಾರ ರಹಸ್ಯ, ಸಾತ್ವಿಕ ಪ್ರೇಮ; ಅಲ್ಲಲ್ಲಿ ಕೃತಕತೆ. ಏಕೆಂದರೆ, ಇಷ್ಟುಹೊತ್ತಿಗೆ ಸಂಸ್ಕೃತನಾಟಕ ಸೂರ್ಯ ಆಕಾಶದ ಮಧ್ಯಕ್ಕೆ ಏರಿ ಇಳಿಮುಖವಾಗಲಾರಂಭಿಸಿತು. ಕಥಾರಚನ ಗೀತ ಕವನಗಳಲ್ಲಿ ನಿಸ್ಸೀಮನಾದ ಕಾಳಿದಾಸನ ಕೈಯಲ್ಲಿ ನಾಟಕಕ್ಕೂ ಈ ಕಾವ್ಯಗೀತ ಗುಣಗಳು ಹಬ್ಬಿ ನಾಟಕೀಯತೆ ಭಾಸನಿಗಿಂತ ಸ್ವಲ್ಪ ಕಡಮೆಯಾಯಿತು. ಈಚೆಗೆ ವಿಶಾಖದತ್ತನ ಚರಿತ್ರನಾಟಕದ ರಾಜಕೀಯ ತಂತ್ರಗಳೂ, ಕಾಳಿದಾಸನ ಮಾದರಿಯಲ್ಲಿ ಹರ್ಷನ ಶೃಂಗಾರ ನಾಟಕಗಳೂ (ಸ್ವಲ್ಪ ಬೌದ್ಧ ನಾಟಕದ ಸೋಂಕೂ), ಭವಭೂತಿಯ ಕರುಣರಸದ ಅಸಾಧ್ಯ ಪ್ರವಾಹವೂ ಅದ್ಭುತ ಚಿತ್ರಗಳೂ ಜಟಿಲತೆಯೂ, ರಸಜ್ಞರು ಕಲೆಯ ರಹಸ್ಯ ‘ಅತಿ’ ಯಲ್ಲಲ್ಲವೆಂದು ಸೂಚಿಸಿದರೆ - “ಉತ್ಪತ್ಸ್ಯ ತೇಸ್ತಿ ಮಮ ಕೋಪಿ ಸಮಾನಧರ್ಮಾ, ಕಾಲೋಹ್ಯಯಂ ನಿರವಧಿರ್ವಿಪುಲಾಚ ಪೃಥ್ವೀ” ಎಂಬ ಕೆಚ್ಚೂ ಕಂಡುಬರುತ್ತವೆ. “ಆಪರಿ ತೋಷಾದ್ ವಿದುಷಾಂ ನ ಸಾಧು ಮನ್ಯೇ ಪ್ರಯೋಗ ವಿಜ್ಞಾನಂ” ಎಂಬ ವಿನಯ ವಾಕ್ಕಿಗೂ ಈ ದರ್ಪಕ್ಕೂ ಇರುವ ಅಂತರವೇ ನಾಟಕದ ಬೆಲೆ ಎಷ್ಟು ದೂರ ಬಂದಿತೆಂಬುದಕ್ಕೆ ನಿದರ್ಶನ. ಬಳಿಕ ಕ್ಷೇಮೀಶ್ವರನ ‘ಚಂಡಕೌಶಿಕ’, ಭಟ್ಟನಾರಾಯಣನ ‘ವೇಣೀಸಂಹಾರ, ಕೃಷ್ಣಮಿಶ್ರನ ವೇದಾಂತ ಜಿಜ್ಞಾಸೆಯ ‘ಪ್ರಬೋಧ ಚಂದ್ರೋದಯ’-ಇವು ಹೊಸ ಹೊಸ ಉಪಾಯಗಳಿಂದ ‘ನವೀನತೆ’ಯನ್ನು ಅರಸಿಕೊಂಡುಹೋಗಿ, ಉತ್ತಮ ಸ್ಥಾನದಲ್ಲಿಲ್ಲದಿದ್ದರೂ ಗೌರವಕ್ಕೆ ಆಸ್ಪದವಾಗಿವೆ.
ಆ ಬಳಿಕ ನಾಟಕಗಳು ಸಾಮಾನ್ಯ ಚಂಪೂ ಕಾವ್ಯಗಳ ಬಣ್ಣವನ್ನು ಹೊತ್ತು, ಭಾಣ ಪ್ರಹಸನಗಳನ್ನು ಚಪ್ಪರಿಸುತ್ತ, “ಪರಿಣಯ’ ‘ವಿಜಯ’ಗಳನ್ನು ಹೆಣೆಯುತ್ತ, ಅನಂಗನನ್ನೂ ಲಂಬೋದರನನ್ನೂ ಅಧಿದೇವತೆಗಳಾಗಿ ಉಪಾಸನೆ ಮಾಡಿ, ‘ರಸಿಕ’, ‘ರಸಿಕತೆ’ ಎಂಬ ಶಬ್ದಗಳನ್ನು ಪ್ರಚಾರದಲ್ಲಿರುವ ಅರ್ಥಕ್ಕೆ ತಂದುಬಿಟ್ಟುವು.
ಈ ಗ್ರಂಥದ ಅನುಬಂಧದಿಂದ ಸುಮಾರು ೬೫೦ ನಾಟಕಗಳ ಹೆಸರು ಕಾಣಬಂದರೂ ಸಂಸ್ಕೃತದ ಉತ್ತಮ ನಾಟಕಗಳ ಸಂಖ್ಯೆ ಸುಮಾರು ೪೦-೫೦; ಉತ್ತಮ ಕವಿಗಳು ೮-೧೦. ಈ ನಾಟಕ ಲಕ್ಷ್ಯ ಗಳ ಮೇಲೆ ಲಕ್ಷಣ ಗ್ರಂಥಗಳು ಹುಟ್ಟಿವೆ; ಅವನ್ನು ಅನುಸರಿಸಿ ನಾಟಕಗಳೂ ಕಟ್ಟಿವೆ. ಈ ಲಕ್ಷಣಗಳ ಸಾರವೇನು? ಯಾವ ರೀತಿಯಲ್ಲಿ ಇವು ವಿಶ್ವದೃಷ್ಟಿಯಲ್ಲಿ ಮಿಳಿತವಾಗುವುವು ಎಂದು ತಿಳಿಯಲೆಳಸುವ ಸಂಸ್ಕೃತ ನಾಟಕ ವಿದ್ಯಾರ್ಥಿಗಳು ಗ್ರೀಕ್ ಲಕ್ಷ್ಯ ಲಕ್ಷಣಗಳನ್ನು ಸಂಸ್ಕೃತದವುಗಳೊಡನೆ ಹೋಲಿಸಿ ವಿಮರ್ಶೆಮಾಡಿಕೊಳ್ಳಬೇಕು. ಮತ್ತು ಆಮೇಲೆ ೧೬ನೆಯ ಶತಮಾನದಿಂದ ಬೆಳೆದ ಯೂರೋಪಿನ, ಮುಖ್ಯವಾಗಿ ಷೇಕ್ಸ್ ಪಿಯರ್ ಪ್ರಧಾನವಾದ ಇಂಗ್ಲಿಷ್ ನಾಟಕದ, ಲಕ್ಷ್ಯ ಲಕ್ಷಣಗಳನ್ನು ದೃಷ್ಟಿಸಬೇಕು.
ಸಂಸ್ಕೃತ ನಾಟಕಗಳ ವಿಷಯದಲ್ಲಿ ಹಲವು ಪ್ರಶ್ನೆಗಳು ತಲೆದೋರಬಹುದು. ಗ್ರೀಕ್ ನಾಟಕದ ಸಂಸರ್ಗವುಂಟೇ? ಎಂಬುದೊಂದು, ಇಲ್ಲವೆಂದು ವಿದ್ವಾಂಸರು ನಿರ್ಧರಿಸಿದ್ದಾರೆ; ಆದರೆ ಇನ್ನು ವಿಚಾರಕ್ಕೆ ಅವಕಾಶವೇ ಇಲ್ಲವೆಂದು ಹೇಳಬಹುದೇ? ಸಂಸ್ಕೃತ ನಾಟಕ ರಾಜಾಸ್ಥಾನಗಳಲ್ಲಿ, ವ್ಯವಹಾರದಲ್ಲಿ ಬಿಟ್ಟುಹೋಗಿದ್ದ ಭಾಷೆಯಲ್ಲಿ (ಮುಖ್ಯವಾಗಿ), ಆಡುವ ಭಾಷೆಯನ್ನು ಬಿಟ್ಟು ಕಲಿತಭಾಷೆಯಲ್ಲಿ ಬರೆದ ಕವಿಗಳಿಂದ, ಅಲ್ಲೊಂದು ಇಲ್ಲೊಂದು ಸ್ಥಾನಾಂತರ ಕಾಲಾಂತರಗಳಲ್ಲಿ ಉತ್ಪನ್ನವಾದದ್ದು, ಅಲ್ಲೊಮ್ಮೆ ಇಲ್ಲೊಮ್ಮೆ ಪ್ರದರ್ಶನವಾದದ್ದು. ಗ್ರೀಕ್ ಇಂಗ್ಲಿಷ್ ನಾಟಕಗಳಂತೆ ಇದು ಸಾರ್ವಜನಿಕ ನಾಟಕ ಶಾಲೆಯಲ್ಲಿ, ಜನಾಂಗ ಸಂಪರ್ಕಗಳಲ್ಲಿ ಬೆಳೆದ ಹಾಗೆ ಕಾಣುವುದಿಲ್ಲ. ಜನಜೀವನದಲ್ಲಿ ಬಯಲಾಟ, ಭಾಗವತರಾಟ, ಮೂಕಾಭಿನಯ, ನಾಟ್ಯ, ಗೀತ ಮುಂತಾದುವು ಸಾರ್ವತ್ರಿಕವಾಗಿ ಭರತ ಭೂಮಿಯಲ್ಲಿ ಕಂಡುಬಂದರೂ, ಈವೊತ್ತಿಗೂ ಉಳಿದಿದ್ದರೂ, ದೇಶಭಾಷೆಗಳಲ್ಲಿ ನಾಟಕಸಾಹಿತ್ಯ ಪೂರ್ವದಿಂದ ಬಂದದ್ದು ಬಹು ಅಪೂರ್ವ. ಇದರ ರಹಸ್ಯವೇನು? ಆಡುವ ನಾಟಕಕ್ಕಿಂತಲೂ ಓದುವ ನಾಟಕವೇ ಹೆಚ್ಚು. ಅದಕ್ಕೇ ನಾಟಕಕ್ಕೆ ಪ್ರತಿಭಾಶಾಲಿಗಳಾದ ಪೂರ್ವಕವಿಗಳಲ್ಲಿ ಹೊರತು, ನಾಟಕೀಯತೆಗಿಂತಲೂ ಕಾವ್ಯಗುಣವೇ ಹೆಚ್ಚಾಗಿ ಪಸರಿಸಿಕೊಂಡಿತೆಂದು ಕಾಣುತ್ತದೆ. ಗ್ರೀಕರು ತಮ್ಮ ಪುರಾಣಗಳಿಂದ ಮಹಾವೀರರ, ದೇವಾಂಶ ಸಂಭೂತರ, ದೇವತೆಗಳ, ಕಥೆಗಳನ್ನು ಎತ್ತಿ ಮತಾಚರಣಸಂಬಂಧವಾದ ಜಾತ್ರೆ ಹಬ್ಬಗಳಲ್ಲಿ ನಾಟಕವನ್ನು ಪ್ರಯೋಗಿಸಿದಂತೆಯೇ, ಭರತಭೂಮಿಯಲ್ಲಿಯೂ ರಾಮಾಯಣ, ಭಾರತ, ಭಾಗವತ (ಜೊತೆಗೆ ಬೃಹತ್ಕಥೆ-ಇದರ ಉತ್ಪತ್ತಿ ಎಲ್ಲಿ?)-ಈ ಮುಖ್ಯವಾದ ಆಕರಗಳಿಂದ ನಾಟಕವಸ್ತುವನ್ನು ತೆಗೆದುಕೊಂಡು ಮತಾವರಣದಲ್ಲಿ ಪ್ರಯೋಗಿಸಿದರು. ರಾಮ, ಕೃಷ್ಣ, ಪಾಂಡವರು, ಕೌರವರು, ಹರಿಶ್ಚಂದ್ರ ಮುಂತಾದ ಪಾತ್ರಗಳು (ಸ್ವತಂತ್ರಕಾಲದಲ್ಲಿ ಕವಿಗಳು ಅಲ್ಪ ಸ್ವಲ್ಪ ಮಾರ್ಪಾಟು ಮಾಡಿದ್ದರೂ) ಒಟ್ಟಿನ ಮೇಲೆ ತಮ್ಮ ಆಕರಗಳ ಕಾಂತಿಯಿಂದ ಜನರ ಮನಸ್ಸಿನಲ್ಲಿ ಹೆಚ್ಚಾಗಿ ಬೆಳಗುತ್ತಿವೆಯೇ ಹೊರತು ನಾಟಕ ಕವಿಗಳ ಪಾತ್ರರಚನೆಯಿಂದ ಅಷ್ಟು ಬೆಳಗುತ್ತಿಲ್ಲ. ಷೇಕ್ಸ್ ಪಿಯರ್ ಕವಿಯ ಪ್ರಸಿದ್ಧ ಪಾತ್ರಗಳು ತಮ್ಮದೇ ಒಂದು ಜೀವಕಳೆಯಿಂದ ಸರ್ವಾಜನಾಂಗದ ಭಾವನಾಪ್ರಪಂಚದಲ್ಲಿ ಪ್ರತಿಬಿಂಬಿಸುವಂತೆ ಭಾರತೀಯರ ಚಿತ್ತದಲ್ಲಿ ಸಂಸ್ಕೃತ ನಾಟಕದ ಪಾತ್ರಗಳು ಸ್ಥಳವನ್ನು ಪಡೆದಿರುವುವೇ? ಕಾಳಿದಾಸನ ಶಕುಂತಲೆಯನ್ನು ಬಿಟ್ಟರೆ, ಅವನ ದುಷ್ಯಂತ ಕೂಡ ಅಷ್ಟು ವರ್ಚಸ್ಸಿನಿಂದ ಕಡೆದ ಬಿಂಬವೇ? ಭವಭೂತಿಯ ಸೀತೆ ಹೇಗೆ? ಈ ಸರಣಿಯಲ್ಲಿ ಯೋಚನೆ ಮಾಡುವವರಿಗೆ ದೇಶಭಾಷೆಗಳಲ್ಲಿ ಸಂಸ್ಕೃತದ ಉತ್ತಮ ನಾಟಕಗಳು ಪುನರ್ಜನ್ಮ ಪಡೆದು ಸಾರ್ವಜನಿಕವಾದ ಈ ಕಾಲದ ನಾಟಕಗಳಲ್ಲಿ ಆಡಿ, ಜನರ ಹೃದಯಕ್ಕೆ ಇಳಿಯಬೇಕಾಗಿದೆ ಎಂದು ತೋರಬಹುದು.
ಈ ಲಕ್ಷಣ ಪ್ರಪಂಚದಲ್ಲಿ ಕೂಡ ಜನರ ಮನೋಭಾವ ಹೇಗೆ? ಕೃಷಿ ಎಷ್ಟು? ಯೂರಿಪೀಡೀಸ್, ಷೇಕ್ಸ್ ಪಿಯರ್ ಮುಂತಾದ ಕವಿಗಳ ಮೇಲಿರುವಷ್ಟು ತರಂಗ ತರಂಗವಾದ ವಿಚಾರ ಮತ್ತು ವಿಮರ್ಶೆ ನಮ್ಮ ಕಾಳಿದಾಸ ಭವಭೂತಿಗಳ ಮೇಲೆ ಹಿಂದಿನ ಪಾಂಡಿತ್ಯ ಲೋಕದಲ್ಲಿ ಉಂಟೇ? ಸಾಧಾರಣ ವ್ಯಾಖ್ಯಾನ ಸೂತ್ರಗಳಲ್ಲದೆ ವ್ಯಕ್ತಿಪ್ರೇಮದಿಂದ ಹುಟ್ಟಿದ ವಿಮರ್ಶೆಗಳಿರುವುವೇ?
ಭಾಸೋ ಹಾಸಃ ಕವಿಕುಲಗುರುಃ ಕಾಳಿದಾಸೋ ವಿಲಾಸಃ ।
ಕಾವ್ಯೇಷು ನಾಟಕಂ ರಮ್ಯಂ ನಾಟಕೇಷು ಶಕುಂತಲಾ ।
ತತ್ರಾಪಿ ಚ ಚತುರ್ಥಂಕಃ ತತ್ರ ಶ್ಲೋಕಚತುಷ್ಟಯಂ ॥
ಉತ್ತರೇ ರಾಮಚರಿತೇ ಭವಭೂತಿರ್ವಿಶಿಷ್ಯತೇ ।
ಮುರಾರೇಸ್ತ್ರಯಃ ಪಂಥಾಃ ।
ಎಂಬಂಥ ಎಲ್ಲೋ ಒಂದೆರಡು ‘ವಚನ’ಗಳು ಕಿವಿಯ ಮೇಲೆ ಬೀಳಬಹುದು. ಆಳವಾದ ವಿಚಾರವೆಲ್ಲಿ ?
ಆಕಾರದ ಬೆಳವಣಿಗೆಯನ್ನು ನೋಡಿದರೆ ಗ್ರೀಕ್ ನಾಟಕದ ರೂಪ, ಆರಂಭ ಕಾಲದ, ಮೇಳ ತೊಡರಿಕೊಂಡ, ಸಂವಾದ; ಸಂಸ್ಕೃತದ ನಾಟಕ ಕೆಲವು ನಿರ್ಬಂಧಗಳನ್ನು ಬಿಟ್ಟರೆ (ಈಗ ಬಿಡುತ್ತಾ ಇದ್ದಾರೆ) ನಾಟಕದ ಪೂರ್ಣರೂಪ; ಇಂಗ್ಲಿಷ್ ನಾಟಕ ಇದಕ್ಕೆ ಮುಂದಾಗಿ ಹೆಚ್ಚು ಹೋಗಿಲ್ಲ. ಗ್ರೀಕ್ ನಾಟಕದ ಅರ್ಧ ನಾಟಕೀಯತೆ ಸಂಸ್ಕೃತ ನಾಟಕದಲ್ಲಿ (ಇಂಗ್ಲಿಷ್ ನಾಟಕ ಹುಟ್ಟುವ ಕಾಲಕ್ಕೆ ಬಹು ಮುಂಚೆ) ಪೂರ್ಣವಾಗಿ ನಾಟಕದ ಪೂರ್ಣಾಕಾರವನ್ನು ಸಾಧಿಸಿಕೊಂಡಿತೆಂದು ಹೇಳಬಹುದು. ಪ್ರತಿಪಾದಿತ ವಿಷಯಗಳನ್ನು ನೋಡಿದರೆ ಭಾರತೀಯ ಜನಾಂಗದ ಕಲ್ಯಾಣ ಗುಣಗಳನ್ನೂ ದಿವ್ಯದರ್ಶನಗಳನ್ನೂ ಪ್ರತಿಬಿಂಬಿಸಿ, ಉದಾತ್ತವಾದ ಬೋಧನಾವೇಶಗಳನ್ನೊಳಕೊಂಡು, ಅವರ ಭಕ್ತಿ, ಅವರ ಧರ್ಮಪ್ರೇಮ, ಅವರ ಸಾತ್ತ್ವಿ ಕ ಪ್ರವೃತ್ತಿ, ಅವರ ಕುಟುಂಬ ಪ್ರೇಮ, ಅವರ ಕರುಣ, ಅವರ ಗಾಂಭೀರ್ಯ, ವಿನೋದ, ಲೀಲೆ, ಅವರ ಕಲೆಗಳು (ಕೆಲವು ವೇಳೆ ವಿಡಂಬನ)-ಇವೆಲ್ಲವನ್ನೂ ಸಂಸ್ಕೃತ ನಾಟಕ ಅನುಭವಕ್ಕೆ ತಂದುಕೊಟ್ಟಿರುವುದು, ಕೊನೆಯ ಮಾತಾಗಿ, ಪ್ರಪಂಚದ ನಾಟಕಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿ, ಅಗ್ರಪಂಕ್ತಿಯಲ್ಲಿ, ಇಡಬಹುದಾದ ನಾಟಕಗಳು ನಮ್ಮ ಸಾಹಿತ್ಯ ಭಂಡಾರದಲ್ಲಿವೆಯೆಂದು ನಾವು ಹೆಮ್ಮೆಪಡಬಹುದು. ‘ಸ್ವಪ್ನವಾಸವದತ್ತ’, ‘ಪ್ರತಿಮಾನಾಟಕ’, ‘ಪಂಚರಾತ್ರ’, ‘ಶಾಕುಂತಲ’, ‘ಮೃಚ್ಛಕಟಿಕ’, ‘ಉತ್ತರರಾಮಚರಿತ’ ಮುಂತಾದ ನಾಟಕಗಳು ಪ್ರಪಂಚದ ನಾಟಕಗಳಲ್ಲಿ ಒಂದು ಪ್ರತಿಭೆ, ಒಂದು ವೈಶಿಷ್ಟ್ಯ, ಒಂದು ರಮ್ಯತೆ, ಒಂದು ಪ್ರಸಾದ, ಒಂದು ಶಾಂತಿಯನ್ನು ಅವುಗಳ ಮೋಹನ ಶಕ್ತಿಗೆ ಒಳಪಟ್ಟವರ ಹೃದಯದಲ್ಲಿ ತುಂಬುತ್ತವೆ.-ನಾಟಕ ಮಣಿಗಳು ಅವು; ಜೀವಕಣಿಗಳು. ಎಚ್ಚತ್ತು ವಿಜೃಂಭಿಸುತ್ತಿರುವ ಈಗಿನ ಭರತಖಂಡದಲ್ಲಿ ಅವು ಪುನರುತ್ಥಾನವಾಗಿ, ಹೊಸ ದೃಷ್ಟಿಯಿಂದ, ವಿಶಾಲ ಹೃದಯದಿಂದ ಅಭ್ಯಾಸವಾಗಿ, ಭಾರತದ ಪುನರುಜ್ಜೀವನದ ಉನ್ನತ ಪ್ರಗತಿಗೆ ಪ್ರಚೋದಕಗಳಾಗುವುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
೨
ಮೇಲೆ ಹೇಳಿದ ಮೂರು ನಾಟಕಸಾಹಿತ್ಯಗಳ ಅನುಭವದಿಂದ ನಾಟಕಕ್ಕೆಲ್ಲಾ ಸಾಮಾನ್ಯವಾದ ಕೆಲವು ಅಂಶಗಳನ್ನು ಇಲ್ಲಿ ಸೂಚಿಸಬಹುದು-
(೧) ನಾಟಕದ ಸ್ವರೂಪ (Nature)- ನಾಟಕ ಆಟ, ನೋಟ, ರೂಪಕ, ದೃಶ್ಯ; ಡ್ರಾಮ, ಪ್ಲೇ; ಮಾಡಿದ್ದು, ಆಡಿದ್ದು, ತೋರಿದ್ದು, ಇದಕ್ಕೆ ಮೊದಲು ಬೇಕಾದದ್ದು ರಂಗಸ್ಥಳ, ಸ್ಟೇಜ್, ಥಿಯೇಟರ್, ಬಯಲಾಟದಂತೆ, ಈ ಸ್ಥಳ ಒಂದು ಬಯಲಾಗಬಹುದು. ಗ್ರೀಕ್ ನಾಟಕದಂತೆ, ಬೆಟ್ಟದಲ್ಲಿ ಕೊರೆದು ಮೆಟ್ಟಲು ಮೆಟ್ಟಲಾದ ದುಂಡು ಜಾಗವಾಗಬಹುದು. ಮೇಲೆ ಆಕಾಶ, ಕೆಳಗೆ ಒಂದು ಅಟ್ಟ, ರಾಜಭವನದಲ್ಲಿ ತೆರೆ ನೇಪಥ್ಯ (ವೇಷಗೃಹ) ಉಪಕರಣಗಳಿಂದ ಕೂಡಿದ ನಾಟಕ ತೊಟ್ಟಿಯಾಗಿರಬಹುದು. ಸಾರ್ವಜನಿಕ ನಾಟಕಶಾಲೆಯಾಗಬಹುದು. ಕೆಲವು ಕಾಲ, ವೇಷಭೂಷಣಗಳ, ಚಿತ್ರವಿಚಿತ್ರಗಳ ವೈಭವಕ್ಕೆ ಆಸೆ ಹುಟ್ಟಬಹುದು. ಬೇಸರವಾದರೆ ಸರಳತೆಯ ಸ್ವಲ್ಪ ಸಲಕರಣೆಗಳಿಂದ, ನಾಟಕವಸ್ತು ರಸ ಅಭಿನಯ ಮಾತ್ರದಿಂದ, ಆಕರ್ಷಣ ಮಾಡಲು ಮಾರ್ಪಡಬಹುದು. ದುಷ್ಯಂತನು ರಾಜವೈಭವವನ್ನು ಬಿಟ್ಟು ಋಷ್ಯಾಶ್ರಮವನ್ನು ಭಕ್ತಿಯಿಂದ ಹೊಕ್ಕಂತೆ.
(೨) ನಾಟಕದ ಉತ್ಪತ್ತಿ, ಜೀವಾಳ (Origin and Essence)- ನಾಟಕ ಹುಟ್ಟಿದ್ದು ದೇವತೆಗಳ, ಸತ್ತು ಅಮೃತಗಣಕ್ಕೆ ಸೇರಿದ ಮಹಾಪುರುಷರ, ಆರಾಧನೆಯಲ್ಲಿ; ವರ್ಷದ ಜಾತ್ರೆಗಳು ಮರಳಿದಾಗ; ಕೃಷಿದೇವತೆಯ ಮಳೆ ಬೆಳೆಗಳನ್ನು ಕೊಡುವ ಶಕ್ತಿಯ ತರ್ಪಣಕ್ಕಾಗಿ (ತೃಪ್ತ್ಯ ರ್ಥವಾಗಿ) ಮಾಡುವ ವ್ರತಾಚರಣೆಯಲ್ಲಿ; ಇದರ ಆವರಣ ಮತಾವರಣ, ಜನರು ಸೇರಿದ ಜಾತ್ರೆಯಲ್ಲಿ, ಅರ್ಚಕರು ಪುರೋಹಿತರು ಯಾಗ ಮಾಡಿ, ಬಲಿಕೊಟ್ಟು, ದೇವತಾ ಸ್ತುತಿಯನ್ನು ನೆರವೇರಿಸಿ, ಯಾವುದಾದರೂ ಒಂದು ಅಧಿದೇವತೆಯ ಇಲ್ಲವೇ ವೀರನ ಹುಟ್ಟು, ಬೆಳವಳಿಗೆ, ಮದುವೆ, ಕಷ್ಟ ಸುಖಗಳು, ಸಾಹಸಕಾರ್ಯಗಳು, ಅದ್ಭುತ ಗುಣಗಳು, ಸಾವು, ಪುನರುತ್ಥಾನ-ಇವುಗಳನ್ನು ಭಕ್ತಿಯಿಂದ ವೇಷಧರಿಸಿ, ಆ ದೇವತೆಯೇ, ವೀರನೇ ತಾವು ಎಂಬಂತೆ ನಟಿಸಿ (ಅನುಕರಣ ಮಾಡಿ) ಕುಣಿದು, ಹಾಡಿ, ಆಡಿ, ತೋರಿಸಿ, ಕೊನೆಯಲ್ಲಿ ಮಳೆ ಬೆಳೆ ಆಗಲಿ, ದೇವರು ನಮ್ಮನ್ನು ಕಾಪಾಡಲಿ, ಐಶ್ವರ್ಯವನ್ನೋ ಮುಕ್ತಿಯನ್ನೋ ಕೊಡಲಿ, ರಾಜರು ಧರ್ಮದಿಂದ ಆಳಲಿ, ಪ್ರಜೆಗಳಿಗೆಲ್ಲಾ ಮಂಗಳವಾಗಲಿ ಎಂದು ಪ್ರಾರ್ಥಿಸಿ ಮುಗಿಸುತ್ತಿದ್ದದ್ದು. ಇದರಲ್ಲಿ ನಾಯಕನಿಗೂ ನಾಯಕಿಗೂ ಮದುವೆಯೂ ನಾಯಕ ಪ್ರತಿನಾಯಕರ ಘರ್ಷಣವೂ ಮುಖ್ಯ; ಅದೇ ನಾಟಕದ ಜೀವಾಳ. ಈ ಮತಕಾರ್ಯದಿಂದ ಜನಕ್ಕೆ ಫಲಪ್ರಾಪ್ತಿ, ಆನಂದ. ಈ ಮುಖ್ಯ ಜೀವಾಳ ಎಲ್ಲಾ ನಾಟಕಗಳಲ್ಲಿಯೂ ಇಂದಿಗೂ ಉಳಿದು ಬಂದಿದೆ. ಆದರೆ ಮತಾಚರಣೆಯ ಕೋಶ ಬಿದ್ದುಹೋಗಿ ಒಳತಿರುಳಾದ ಒಂದು ಉದಾತ್ತಾನುಭವವೂ ಅಭಿನಯಕಲೆಯೂ ಅರಳುತ್ತಾ ಬಂದಿವೆ. ಹಾಡು ಕುಣಿತಗಳು, ಬಣ್ಣ ಮೊಗವಾಡಗಳು ಮೊದಲಿದ್ದಂತೆ ಆಮೇಲೆ ಇಲ್ಲ. ಮೇಳ, ಗೀತ, ನಾಟ್ಯ-ಇವು ನಾಟಕದ ಒಂದು ಅಂಗವಾಗಿ ಉಚಿತ ಸ್ಥಳಗಳಲ್ಲಿ ಬರಬಹುದು, ಬರದೆ ಇರಬಹುದು.
(೩) ನಾಟಕದ ಆಕಾರ (Form)- ಮೇಳ ಗೀತದ ಕುಣಿತದಿಂದ ಆರಂಭವಾಗಿ, ಮೇಳದ ಸಂಗೀತಕ್ಕೆ ಸಂವಾದವನ್ನು ಸೇರಿಸಿಕೊಂಡು, ದೂತ ಮೊದಲಾದವರ ಕಥನಕ್ಕೆ ತಕ್ಕಮಟ್ಟಿಗೆ ಪ್ರಾಧಾನ್ಯ ಕೊಟ್ಟು, ತೋರಲಾಗದುದನ್ನು ಅಥವಾ ತೋರಬಾರದೆಂಬ ಭಾವವುಳ್ಳದ್ದನ್ನು (ಕೊಲೆ ಮುಂತಾದವು) ಆಖ್ಯಾನ ರೂಪವಾಗಿ, ವಿಷ್ಕಂಭಾದಿ ರೂಪವಾಗಿ, ಹೇಳಿ ತಿಳಿಸಿ, ಪಾತ್ರಪೋಷಣೆಯನ್ನು ನಡೆಸುತ್ತ, ಕಡೆಗೆ ನಾಟಕೀಯತೆಯೆಂದರೆ ವ್ಯಕ್ತಿಗಳ ಸಂವಾದ, ಪಾತ್ರಗಳ ಮಾನವ ಸ್ವಭಾವ, ನೋಡತಕ್ಕದ್ದರ ಪ್ರಧಾನತೆ, ಹೇಳತಕ್ಕದ್ದರ ಅಭಾವ-ಈ ರೀತಿ ಪ್ರಗತಿಯನ್ನು ನಾಟಕದ ಆಕಾರ ಹೊಂದಿರುತ್ತದೆ. ಮೊದಲಿಂದ ಕಡೆಯವರೆಗೂ ಒಂದೇ ಒಂದು ದೃಶ್ಯ; ಇಲ್ಲ, ವಿರಾಮಕ್ಕಾಗಿ ವಸ್ತು ವಿಭಾಗವನ್ನನುಸರಿಸಿ, ಅಲ್ಲಲ್ಲೆ ತೆರೆ (ಅಂಕ) ಒಂದು, ಎರಡು, ಆಯ್ದು, ಏಳು, ಹದಿನಾಲ್ಕು-ಮುಖ್ಯವಾಗಿ, ನಾಟಕ ಸ್ವಾರಸ್ಯವಾದ ಕಥೆಯನ್ನು, ಚಿತ್ರವನ್ನು, ದೃಶ್ಯದ ಮೇಲೆ ದೃಶ್ಯ ತೋರುತ್ತ, ಮುಕ್ತಾಯದಲ್ಲಿ ಪರಿಣಾಮವನ್ನುಂಟು ಮಾಡುವುದಾಗಿ ಏರ್ಪಟ್ಟಿದೆ.
(೪) ನಾಟಕದ ವಾಹಕ (Medium)- ದೇವತಾಂಶವಾದ ಉದಾತ್ತ ವಸ್ತುಗಳನ್ನುಳ್ಳ ಮತ್ತು ಮೇಳ ಗೀತ ನಾಟ್ಯಗಳಿಂದ ಕೂಡಿದ ನಾಟಕ ಸ್ವಾಭಾವಿಕವಾಗಿ ಛಂದಸ್ಸಿನ ಲಯವನ್ನು ಹೊಂದಿಕೊಂಡಿರುತ್ತದೆ. ಆಮೇಲೆ ಗೀತ ಹೋಗಿ, ಬರಿಯ ಛಂದಸ್ಸು. ಆಮೇಲೆ ನಾಟಕೀಯತೆ ಹೆಚ್ಚುತ್ತ, ಲೋಕ ಸಹಜವಾದ ಗದ್ಯ, ಛಂದಸ್ಸು ಮತ್ತು ಗದ್ಯದ ಮಿಶ್ರ, ಕೊನೆಗೆ ಲೋಕಸ್ವಭಾವ ಸಮಾಜ ಚಿತ್ರಗಳನ್ನೇ ಆಶ್ರಯಿಸಿರುವ ಈಗಿನ ನಾಟಕಗಳಲ್ಲಿ ಛಂದಸ್ಸು ಅಸ್ವಾಭಾವಿಕವೆಂದು ಬರಿಯ ಗದ್ಯಪ್ರಯೋಗ ಬಳಕೆಗೆ ಬಂದಿರುತ್ತದೆ. ಈ ವಿಚಾರದಲ್ಲಿ ಗ್ರೀಕ್ ನಾಟಕ ಬರಿಯ ಛಂದಸ್ಸೇ; ಸಂಸ್ಕೃತ ನಾಟಕ ಗದ್ಯದ ಹಾಸು, ಪದ್ಯದ ಹೊಕ್ಕು; ಇಂಗ್ಲಿಷ್ ನಾಟಕ ಮಿಶ್ರಣದಲ್ಲಿ ಆರಂಭವಾಗಿ ಈಗ ಬರಿಯ ಗದ್ಯಕ್ಕೆ ಇಳಿದಿದೆ. ನಾಟಕಕ್ಕೂ ಕವಿತೆಗೂ (Drama and Poetry) ಸಂಬಂಧವಿರಬೇಕೇ ಬೇಡವೇ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ.
(೫) ನಾಟಕದ ವಿಷಯ, ವಸ್ತು, ಉದ್ದೇಶ (Matter, Fable, Myth, Purpose, Aim)- ಇದು ಮೊದಲು ಮತಾಚರಣೆಯ ಆವರಣದಲ್ಲಿ ಬೆಳೆದದ್ದಾದುದರಿಂದ ಮತದ ನಂಬಿಕೆಗಳನ್ನೂ ದೇವತೆಗಳ ಮತ್ತು ಮಹಾಪುರುಷರ ಕಥೆಗಳನ್ನೂ ಆಶ್ರಯಿಸಿತು. ಗ್ರೀಕ್ ಮತ್ತು ಸಂಸ್ಕೃತ ನಾಟಕಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಸ್ವಾಭಾವಿಕವಾಗಿ, ಡಯೊನೀಸಸ್, ಪ್ರೊಮೆಥಿಯಸ್, ಜ್ಯೂಸ್, ಅಥೀನ, ಯೂಲಿಸಿಸ್, ಏಜಾಕ್ಸ್, ಅಗಮೆಮ್ನಾನ್, ವಿಷ್ಣು, ರುದ್ರ, ಕೃಷ್ಣ, ರಾಮ, ಮಹಾಭಾರತದ ವೀರರು, ಮುಂತಾದವರೇ ನಾಯಕರು. ಅವರ ಸುಖದುಃಖಗಳು, ಅವರ ಮಹಾತ್ಮ್ಯ ಅವರ “ಆಟ-ಪಾಟ-ಮಾಟ” ಗಳ ಅನುಭವದಿಂದ ಉಂಟಾಗುವ ಶ್ರೇಯಸ್ಸು, ಆನುಷಂಗಿಕವಾಗಿ ಕಲಾ ಕೌಶಲ್ಯದ ಆನಂದ-ಇವೇ ರುದ್ರನಾಟಕಗಳ, ಉದಾತ್ತ ನಾಟಕಗಳ, ಪೂಜ್ಯ ನಾಟಕಗಳ ವಸ್ತು ಮತ್ತು ಫಲ. ಇವುಗಳ ಜೊತೆಗೆ ಕಾಮನ ಹಬ್ಬ ಮುಂತಾದ ಪ್ರಸಂಗಗಳಲ್ಲಿ ಅಶ್ಲೀಲವಾದ, ವಿಡಂಬನ ಪೂರಿತವಾದ, ಸ್ತ್ರೀಪುರುಷ ಸಂಯೋಗ ವಿಚಾರವಾದ, ಹಾಸ್ಯ ಪ್ರಧಾನವಾದ ನಾಟಕಗಳು-ಇವೂ ದೇವತಾ ಪ್ರೀತ್ಯರ್ಥವಾಗಿಯೇ, ಜನರ ಶ್ರೇಯಸ್ಸು ಮತ್ತು ಸಂತೋಷಗಳಿಗಾಗಿಯೇ. ಏಕೆಂದರೆ ಈ ಸಂಯೋಗವ್ರತಾನುಭವವಿಲ್ಲದೆ ಲೋಕದಲ್ಲಿ ಉತ್ಪತ್ತಿ ಇಲ್ಲ; ಬೆಳೆ ಬೆಳೆಯದು; ಗಿಡ ಹಣ್ಣು ಕೊಡದು; ಹೆಂಗಸರು ಹೆರರು; ಗಂಡಸರು ಮಕ್ಕಳನ್ನು ಪಡೆದು ಸ್ವರ್ಗಕ್ಕೆ ಹೋಗರು. ಮೂರನೆಯದಾಗಿ, ಅಪೂರ್ವವಾಗಿ ಪ್ರಸಿದ್ಧ ಚಾರಿತ್ರಕ ವಿಷಯ. ಗ್ರೀಕ್ ನಾಟಕದಲ್ಲೂ ಸಂಸ್ಕೃತ ನಾಟಕದಲ್ಲೂ ಇವು ಮೂರೂ ಉಂಟು. ರುದ್ರನಾಟಕ ಸಂಸ್ಕೃತದಲ್ಲಿ ನೈಜವಾಗಿಯೇ ಒಮ್ಮೆ ಇದ್ದು ನಿಷೇಧಿಸಲ್ಪಟ್ಟಂತೆ ಊಹಿಸಬಹುದಾಗಿದೆ. ರುದ್ರನಾಟಕದ ವಿಷಯವೂ ರಸೋತ್ಪಾದನೆಯೂ ಧರ್ಮಗಾಂಭೀರ್ಯವೂ ಯಥೇಷ್ಟವಾಗಿ ಇವೆ.
ಕಾಲಾಂತರದಲ್ಲಿ ಮನುಷ್ಯನಾಗರಿಕತೆ ಬೆಳೆದ ಹಾಗೆಲ್ಲಾ ಬುದ್ಧಿ ವಿಚಾರ ಜ್ಞಾನ ವಿಕಾಸಗಳು ಹಬ್ಬಿದ ಹಾಗೆಲ್ಲಾ, ನಾಟಕದ ಮತಭಾವ ಹಿಂಗುತ್ತ, ಕಲಾಭಾವ ಹೆಚ್ಚುತ್ತ ಜೀವನಚಿತ್ರಗಳನ್ನು, ಮಹಾವೀರರ ಉದಾತ್ತ ಗುಣಗಳನ್ನು ಕೇವಲ ಲೌಕಿಕ (Secular), ಒಂದೊಂದು ಸಲ ಲೋಕಾಯುತ, ದೃಷ್ಟಿಯಿಂದಲೇ ಪ್ರದರ್ಶಿಸುವುದು ಆರಂಭವಾಯಿತು. ನಾಟಕದ ಆಕಾರವೂ ಬದಲಾಯಿಸಿತು; ರೀತಿ ಆತ್ಮಗಳೂ ಬದಲಾಯಿಸಿದುವು; ಪುರಾಣ ಕಥೆಗಳು ಹಿಮ್ಮೆಟ್ಟಿದುವು ಅಥವಾ ಹಾಸ್ಯಕ್ಕೊಳಗಾದುವು; ಕವಿಗಳ ಕಲ್ಪನಾ ಪ್ರಪಂಚ ದೊಡ್ಡದಾಗುತ್ತ ಬಂತು; ಹಾಸ್ಯ ಮತ್ತು ಶೃಂಗಾರ ರಸಗಳ ಆಕರ್ಷಣೆ ಹೆಚ್ಚಿತು. ಪ್ರಕರಣಗಳು, ಪ್ರಹಸನಗಳು, ಭಾಣಗಳು, ವಿಡಂಬನಗಳು ಪ್ರಬಲವಾದುವು; ಬೃಹತ್ಕಥೆಯಂಥ ಪ್ರಸಿದ್ಧ ಕಥಾಸಂಗ್ರಹಗಳೂ ಸ್ವಂತ ಕಲ್ಪನೆಗಳೂ ನಾಟಕಕ್ಕೆ ಆಕರಗಳಾದುವು. ಮೇಧಾವಿಗಳು, ಸಮಾಜ ಸಂಸ್ಕಾರಕರು, ತಮ್ಮ ಅಭಿಪ್ರಾಯಗಳನ್ನೂ ಸಮಾಜ ಸಮಸ್ಯೆಗಳನ್ನೂ ಚಿತ್ರಿಸುವುದು ಕೂಡ ನಾಟಕಕ್ಕೆ ವಿಷಯವಾಯಿತು. ಹೊತ್ತು ಹೋಗುವುದಕ್ಕೆ, ವಿನೋದಕ್ಕೆ, ಹರ್ಷಕ್ಕೆ, ವಿಚಾರಕ್ಕೆ ನಾಟಕ ಪ್ರಯೋಜನಕಾರಿಯಾಯಿತು. ಪುರಾಣ, ಪುಣ್ಯಕಥೆ, ವ್ರತಫಲ, ಮುಕ್ತಿ, ಶ್ರೇಯಸ್ಸು -ಇವು ಹಿಂದಾದುವು, ಮರೆಯಾದುವು.
(೬) ನಾಟಕವಿಮರ್ಶೆ- ಉತ್ತಮ ನಾಟಕಗಳ ಸೃಷ್ಟಿಕಾರ್ಯವನ್ನು ತತ್ತ್ವಜ್ಞರೂ ರಸಜ್ಞರೂ ಪರಿಶೀಲಿಸಿ ಲಕ್ಷಣಗಳನ್ನು ನಿರೂಪಿಸಿದರು. ಕೆಲವು, ಸರ್ವಸಮಾನವಾದ, ವಿಶ್ವವ್ಯಾಪಕವಾದ ಮುಖ್ಯ ತತ್ತ್ವಗಳು. ಬೇಕಾದಷ್ಟು (ಬೇಡವಾದಷ್ಟೋ?) ಸಣ್ಣ ಪುಟ್ಟ ನಿಬಂಧನೆಗಳು: ಮಹಾಕವಿಗಳು ಬಂದು ಮುರಿದುಹಾಕಿದಂತಹವು. ಸ್ಥಳ್ಳೆಕ್ಯ, ಕಾಲೈಕ್ಯ, ಕಾರ್ಯೈಕ್ಯ. ರುದ್ರನಾಟಕದಲ್ಲಿ ಹಾಸ್ಯ ಬೆರೆಯಬಹುದೇ? ವಿಧವಿಧ ವಿಂಗಡಣೆ- ನಾಟಕ ನಾಟಿಕೆ, ತ್ರೋಟಕ ಸಟ್ಟಕ, ರೂಪಕ ಉಪರೂಪಕ, ನಾಯಕ ನಾಯಿಕಾ ಭೇದಗಳು, ನಾಂದಿ ವಿಷ್ಕಂಭಕ, ಭರತವಾಕ್ಯಗಳು, ಭಾಷೆ-ಎಷ್ಟೋ ವಿಷಯಗಳಲ್ಲಿ ಸೂತ್ರಗಳು ಮೂರು ಸಾಹಿತ್ಯಗಳಲ್ಲಿಯೂ ಹುಟ್ಟಿಕೊಂಡವು; ಬೇರಿನಿಂದ, ತಾಳಿನಿಂದ ದೊಡ್ಡ ಕೊಂಬೆಗಳಾಗಿ, ಕವಲುಗಳಾಗಿ ಬರಲಾಗಿ ಸೊರಗಿ ಹೋದುವು. ಒಟ್ಟಿನ ಮೇಲೆ ನಾಟಕ ಸ್ವರೂಪದ, ನಾಟಕೀಯತೆಯ ಮುಖ್ಯ ಲಕ್ಷಣಗಳನ್ನು, ಜೀವಾಳವನ್ನು ಅರಿಸ್ಟೋಟಲಿನ ‘ಕಾವ್ಯ ಮೀಮಾಂಸೆ’ಯಲ್ಲಿಯೂ, ಭರತನ ‘ನಾಟ್ಯಶಾಸ್ತ್ರದಲ್ಲಿಯೂ, ಈಸ್ಖಿಲಸ್, ಕಾಳಿದಾಸ ಷೇಕ್ಸ್ ಪಿಯರ್ ಮುಂತಾದ ಮಹಾಕವಿಗಳ ನಾಟಕ ಸೃಷ್ಟಿಯಲ್ಲಿಯೂ, ನೂತನ ಯೂರೋಪಿನ ವಿಮರ್ಶೆಯಲ್ಲಿಯೂ ತಿಳಿಯಬಹುದು. ಬೇರೆಬೇರೆ ಜನಾಂಗಗಳ ಅವರವರ ಪ್ರತಿಭೆ ಮತ್ತು ಜೀವನಗಳಿಗನುಸಾರವಾಗಿ, ಪೌರಾಣಿಕ, ಗಂಭೀರ, ರುದ್ರ ನಾಟಕ (tragedy), ಹರ್ಷ ನಾಟಕ (comedy), ಪ್ರಹಸನ (farce), ಚರಿತ್ರ ನಾಟಕ (historical play), ಸಾಮಾಜಿಕ ನಾಟಕ (social play, problem play)- ಈ ಅಚ್ಚುಗಳಲ್ಲಿ, ದೇವತೆಗಳ, ಮಹಾಪುರುಷರ, ಸಾಮಾನ್ಯ ಜನರ ಜೀವನ ಚಿತ್ರಗಳನ್ನು, ವ್ಯಕ್ತಿಮಹತ್ವವನ್ನು, ಗುಣಗಳ ಉತ್ಕೃಷ್ಟತೆ ನ್ಯೂನತೆಗಳನ್ನು, ಮಾನವ ಜನ್ಮದ ಸುಖದುಃಖಗಳನ್ನು, ಧ್ಯೇಯ ಸಾಹಸಗಳನ್ನು, ಸೋಲುಗೆಲುವುಗಳನ್ನು, ಮದುವೆ ಸಾವುಗಳನ್ನು, ಧಾರ್ಮಿಕ ರಾಜಕ ಸಾಮಾಜಿಕ ಜ್ಞಾನೋತ್ತೇಜನಕ್ಕೂ ಆನಂದ ವಿನೋದಗಳಿಗೂ ವರಕವಿಗಳು ಧಾರೆಯೆರೆದಿದ್ದಾರೆ. ವಾಸ್ತವಿಕವಾದ ಅಥವಾ ಕಲ್ಪಿಸಿಕೊಂಡ ಜೀವನ ಚಿತ್ರವನ್ನು ಕೇಂದ್ರೀಕರಿಸಿ ಕಥೆ ಕಟ್ಟುವುದು, ಕಥೆಗೆ ಜೀವಾಂಗ ರಚನೆಯ ಐಕ್ಯವನ್ನು ಕೊಡುವುದು, ಕಥೆಯನ್ನು ಕಥನಕ್ಕಿಂತಲೂ ಸಾಧ್ಯವಾದಮಟ್ಟಿಗೆ ದೃಶ್ಯವಾಗಿ ತೋರಿಸುವುದು, ಕಾರ್ಯದಿಂದ ಪಾತ್ರವನ್ನೂ ಪಾತ್ರದಿಂದ ರಸವನ್ನೂ ಹೊಂದಿಕೆ ಗೊಳಿಸುವುದು, ನಾಟಕದ ಅಚ್ಚನ್ನು ಸಾಧ್ಯವಾದ ಮಟ್ಟಿಗೂ ಸರಳತೆಗೆ ಎಳೆಯುವುದು, ಭಾಷೆಯನ್ನು (ಛಂದಸ್ಸಾಗಲಿ, ವಿಶೇಷವಾಗಿ ಗದ್ಯವಾಗಲಿ) ಸ್ವಾಭಾವಿಕತೆಯ ಭ್ರಾಂತಿ ಹುಟ್ಟುವಂತೆ ಪಳಗಿಸುವುದು, ಮಾನವ ಹೃದಯದ ಮತ್ತು ವ್ಯಕ್ತಿತ್ವದ ತೊಡಕುಗಳು, ಆಳಗಳು, ವಿವರಗಳು, ಕೆಟ್ಟದು ಒಳ್ಳೆಯದು ಬೆರಕೆಯಾದದ್ದು, ತಾನರಿತದ್ದು, ತನ್ನನ್ನು ತಾನೇ ಅರಿಯದೆ ನಡೆದುಬಿಟ್ಟು ನುಡಿದುಬಿಟ್ಟು ಆಶ್ಚರ್ಯಪಡತಕ್ಕದ್ದು; ಎಲ್ಲಾ ರಹಸ್ಯ, ಎಲ್ಲಾ ವಿಚಿತ್ರ, ಎಲ್ಲಾ ರಸ, ಎಲ್ಲಾ ಸಾಹಸ, ಎಲ್ಲಾ ಪೂರ್ವವಾಸನೆ, ಎಲ್ಲಾ ಭವಿಷ್ಯದ್ ಧ್ಯೇಯಸಾಧನೆ, ಆಸೆ, ಭಯ, ಅಳಲು, ನಗೆ, ಒಲವು, ಮುರಿವು, ಅಳುಕು, ಎದುರುಬೀಳು, ಒಳಗಿನ ಹೊರಗಿನ ಹೋರಾಟ, ಎದೆಯ ತಣ್ಣನೆಯ ತಂಪು -ಇವೆಲ್ಲವನ್ನೂ ಅನುಕರಿಸುವುದು, ಎಂದರೆ ಪುನಸೃಷ್ಟಿ ಮಾಡಿ ಅನುಭವಕ್ಕೆ ತಂದುಕೊಡುವುದು; ತಾದಾತ್ಮ್ಯ, ತಲ್ಲೀನತೆಯನ್ನುಂಟು ಮಾಡುವುದು-ತನ್ನ ಅಮೋಘವಾದ ದರ್ಶನವನ್ನು ಉತ್ತಮ ನಾಟಕದಲ್ಲಿ ರೂಪುಕೊಟ್ಟು ಉತ್ತಮ ನಟರ ಮೂಲಕ ಕಣ್ಣಿಗೆ ಕಟ್ಟಿ ಆನಂದಗೊಳಿಸುವುದು, ಚಿತ್ತಶುದ್ಧಿಗೊಳಿಸುವುದು, ಅನುಭವ ವೈಶಾಲ್ಯವನ್ನುಂಟುಮಾಡುವುದು, ಬದುಕನ್ನು ಹಿಗ್ಗಿಸುವುದು; ಈ ಪುಣ್ಯಫಲವನ್ನು ದೊರಕಿಸಿದರೆ ಸಣ್ಣಪುಟ್ಟ ಕಟ್ಟುನಿಟ್ಟುಗಳನ್ನು ಮೀರಿ ಮುರಿದರೂ ಮಹಾಕವಿಗಳು ಧನ್ಯರು. ಅಂತಹ ನಾಟಕಗಳನ್ನು ನೋಡಿ (ಓದಿ?) ಆನಂದಪಟ್ಟವನೂ ಧನ್ಯನು. ಏಕೆಂದರೆ ಮಾನವ ಜನ್ಮದುಃಖ ಈ ಆನಂದದಲ್ಲಿ ತೊಳೆದು ಹೋಗುವುದು; ಅಮೃತತ್ವ ಇಲ್ಲಿಯೇ ಕೈಗೂಡುವುದು.
ಬೆಂಗಳೂರು
೮-೬-೩೭
ಬಿ.ಎಂ. ಶ್ರೀಕಂಠಯ್ಯ