ಅರಿಕೆ

ಇಂಗ್ಲಿಷರು ಇಂಡಿಯ ದೇಶದಲ್ಲಿ ನೆಲಿಸಿ ಸಂಸ್ಕೃತವನ್ನು ಪರಿಚಯ ಮಾಡಿಕೊಂಡ ಮೇಲೆ ಅವರು ಅದರ ಸಾಹಿತ್ಯದ ಮೇಲೆ ಲೇಖನಗಳನ್ನೂ ಗ್ರಂಥಗಳನ್ನೂ ಬರೆಯುವುದಕ್ಕೆ ಮೊದಲು ಮಾಡಿದರು. ಹೀಗೆ, ಸಂಸ್ಕೃತ ನಾಟಕದ ಮೇಲೆ ಬರೆದ ಗ್ರಂಥಗಳಲ್ಲಿ ಎಚ್.ಎಚ್. ವಿಲ್ಸನ್ ಅವರ ಇಂಗ್ಲಿಷ್ ಗ್ರಂಥವೇ (Select Specimens of the Theatre of the Hindus, 1827) ಪ್ರಾಚೀನವಾದದ್ದು. ಇದಾದ ಮೇಲೆ ಫ್ರೆಂಚ್ ಜರ್ಮನ್ ಮುಂತಾದ ಭಾಷೆಗಳಲ್ಲಿಯೂ ಈ ವಿಷಯದ ಮೇಲೆ ಗ್ರಂಥಗಳು ಹುಟ್ಟಲಾರಂಭವಾದುವು; ಪಾಶ್ಚಾತ್ಯ ವಿದ್ವಾಂಸರೂ ನಮ್ಮ ದೇಶದ ಪಂಡಿತರೂ ಪ್ರಾಚೀನ ಕೃತಿಗಳನ್ನು ಸಂಗ್ರಹಿಸಿ, ಶೋಧಿಸಿ, ಸಂಪಾದಿಸಿ, ವಿಮರ್ಶೆ ವ್ಯಾಖ್ಯಾನಾದಿಗಳೊಡನೆ ಪ್ರಕಟಿಸಿದರು. ನಮ್ಮ ದೇಶದ “ಕಾವ್ಯಮಾಲೆ’ ಈ ಪ್ರಕಟನ ಕಾರ್ಯದಲ್ಲಿ ಅಮೋಘವಾದ ಕೆಲಸಮಾಡಿತು. ಪಾಶ್ಚಾತ್ಯ ಪಂಡಿತರು “ಕಾವ್ಯಮಾಲೆ” ಯಲ್ಲಿ ಬಂದ ರೂಪಕಗಳನ್ನೆಲ್ಲಾ ತಾವು ಮುದ್ರಣಕ್ಕೆ ಅಥವಾ ಪುನರ್ಮುದ್ರಣಕ್ಕೆ ತೆಗೆದುಕೊಳ್ಳದಿದ್ದರೂ, ಅವರೂ ಮುಖ್ಯ ಮುಖ್ಯವಾದ ನಾಟಕಗಳನ್ನೆಲ್ಲಾ ಅಚ್ಚುಹಾಕಿಸಿದ್ದಾರೆ; ಸಂಪೂರ್ಣ ವ್ಯಾಸಂಗಕ್ಕೆ ಬೇಕಾದ ಸಾಮಗ್ರಿಗಳನ್ನೆಲ್ಲಾ ಒದಗಿಸಿಕೊಟ್ಟು, ಶುದ್ಧವಾಗಿರುವಂತೆ ಪರಿಷ್ಕರಿಸಿ, ಉತ್ತಮ ರೀತಿಯಲ್ಲಿ ಸಂಪಾದಿಸಿ, ಅಂದವಾಗಿರುವಂತೆ ಅವರು ಮುದ್ರಣಗೊಳಿಸಿರುವುದಕ್ಕೆ ಕೊಲಂಬಿಯಾ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ಪ್ರಿಯದರ್ಶಿಕಾ’, ಹಾರ್ವರ್ಡ್ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ‘ಉತ್ತರ ರಾಮ ಚರಿತ’, ಲೂಡರ್ಸ್ ಅವರು ಪ್ರಕಟಿಸಿರುವ “ಬೌದ್ಧನಾಟಕಗಳ ತುಂಡುಗಳು’ – ಇವುಗಳನ್ನು ಮಾದರಿಗಳಾಗಿ ಹೇಳಬಹುದಾಗಿದೆ. ಇವುಗಳನ್ನು ನೋಡಿದರೆ ಪಾಶ್ಚಾತ್ಯ ಪಂಡಿತರು, ಅವರು ಯೂರೋಪಿನವರಾಗಲಿ ಅಮೇರಿಕದವರಾಗಲಿ, ಸಂಸ್ಕೃತದಲ್ಲಿ ಇಟ್ಟಿರುವ ಆಸಕ್ತಿ, ಅದನ್ನು ವ್ಯಾಸಂಗಮಾಡುವ ಶ್ರಮ, ಕ್ರಮ, ಅವರಿಗೆ ಇರುವ ವಿದ್ವತ್ತು, ಅವರು ಗ್ರಂಥವನ್ನು ಪ್ರಕಟಪಡಿಸುವ ರೀತಿ ಇವನ್ನು ಮೆಚ್ಚಿ ಯಾರಾದರೂ ತಲೆದೂಗುವಂತಾಗುತ್ತದೆ.

ಮೇಲೆ ಹೇಳಿದ ವಿಲ್ಸನ್ ಅವರ ಗ್ರಂಥದ ಜೊತೆಗೆ ಈಗ ವೀಬರ್ (Indian Literature), ಮಾನಿಯರ್‌ ವಿಲಿಯಂಸ್ (Inidan Wisdom) ಸಿಲ್ವೇನ್ ಲೆವಿ (Le Theatre Indian), ಫ್ರೇಸರ್‌ (Literature History of India), ಮೆಗ್ಡಾ ನಲ್ (History of Sanskrit Literature: India’s past), ಸ್ಟೆನ್ ಕೊನೋ, (Das Indische Drama), ಷೂಯ್ಲರ್ (Bibliography of the Sanskrit Drama), ಕೀತ್ (The Sanskrit Drama), ವಿನ್ ಟರ್ ನಿಟ್ಸ್ (Geschicte der Indischen Literature, III) ಮುಂತಾದ ವಿದ್ವಾಂಸರು ಸಂಸಕೃತ ನಾಟಕದ ಚರಿತ್ರೆಯನ್ನು ತಮ್ಮ ಪುಸ್ತಕದ ಒಂದೊಂದು ಪ್ರಕರಣವಾಗಿಯೋ, ಗ್ರಂಥದ ತುಂಬವೋ ಬರೆದಿದ್ದಾರೆ. ಇವುಗಳಿಂದ ನನಗೆ ಆಗಿರುವ ಉಪಕಾರವನ್ನು ಇಲ್ಲಿ ಅತ್ಯಂತ ಕೃತಜ್ಞತೆಯಿಂದ ಒಪ್ಪಿಕೊಳ್ಳುತ್ತೇನೆ. ಇವರೂ ಇನ್ನಿತರ ಪ್ರಾಚ್ಯ ಮತ್ತು ಪಾಶ್ಚಾತ್ಯ ವಿದ್ವಾಂಸರೂ ನಾನಾ ಭಾಷೆಗಳಲ್ಲಿ, ನಾನಾ ಪತ್ರಿಕೆಗಳಲ್ಲಿ, ಈ ವಿಚಾರದ ಮೇಲೆ ಆಗಿಂದಾಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನೆಲ್ಲಾ ಸಾಧ್ಯವಾದಷ್ಟು ಮಟ್ಟಿಗೂ ಓದಿ, ಮುಖ್ಯವಾದವುಗಳನ್ನು ಮುಂದೆ ಆಯಾ ಅಧ್ಯಾಯಗಳ ಕೊನೆಗೆ ‘ಪ್ರಮಾಣಲೇಖನಾವಳಿ’ ಯಲ್ಲಿ (Bibiliography) ಕೊಟ್ಟಿದ್ದೇನೆ. ಇವುಗಳ ಜೊತೆಗೆ ಮೇಲೆ ಹೇಳಿದ ಪ್ರಸಿದ್ದ ಗ್ರಂಥಗಳ ಪುಟಗಳನ್ನೂ ನಿರ್ದೇಶಮಾಡುತ್ತ ಹೋಗುವುದು ಅನಾವಶ್ಯಕವೆಂದು ಭಾವಿತಿ, ಅವುಗಳನ್ನು ಮಾತ್ರ ಪ್ರಮಾಣ ಲೇಖನಾವಳಿ’ ಯಲ್ಲಿ ಸೇರಿಸದೆ ಬಿಟ್ಟಿದ್ದೇನೆ.

ಮುಂದೆ ಪ್ರಸಕ್ತರಾಗುವ ನಾಟಕಕರ್ತರ ಕಾಲ ದೇಶಾದಿಗಳನ್ನು ನಿರ್ಣಯಿಸಲು ಪಾಶ್ಚಾತ್ಯ ಪಂಡಿತರ ಗ್ರಂಥ ಲೇಖನಾದಿಗಳನ್ನು ಹೆಚ್ಚಾಗಿ ಉಪಯೋಗಿಸಿಕೊಂಡಿದ್ದೇನೆ. ಆದರೆ ಯಾರೊಬ್ಬರ ಮತವನ್ನೂ ಸಿದ್ಧಾಂತವಾಗಿ ಅಂಗೀಕರಿಸಿ ಅನುಸರಿಸಿಲ್ಲ; ಎಲ್ಲರ ಹೇಳಿಕೆಯನ್ನೂ ತಿಳಿದು, ತೂಗಿ, ನನಗೆ ಸಪ್ರಮಾಣವೆಂದು ತೋರಿದ್ದನ್ನು ಬರೆದಿದ್ದೇನೆ. ಇನ್ನು ವಿಮರ್ಶ ಭಾಗ; ಇದು ಪೂರ್ತಿಯಾಗಿ ನನ್ನದೇ, ಯಾವ ನಾಟಕವನ್ನೂ ನಾನೇ ಚೆನ್ನಾಗಿ ವ್ಯಾಸಂಗಮಾಡದೆ, ಒಪ್ಪಿಗೆಯಾಗದೆ, ಎಲ್ಲಿಯೂ ಅಭಿಪ್ರಾಯವನ್ನು ಕೊಟ್ಟಿಲ್ಲ; ಆದ್ದರಿಂದ ಇದರಲ್ಲಿರಬಹುದಾದ ಗುಣಾವಗುಣಗಳೆಲ್ಲಾ ನನ್ನವೇ. ಹೀಗೆ ವಿಮರ್ಶಿಸುವಾಗ ನಾನು ಲಕ್ಷಣಕಾರರು ಹೇಳಿರುವ ನಾಟಕದ ನಿಯಮಗಳನ್ನು ಲಕ್ಷ್ಯ ಕ್ಕೆ ಅನ್ವಯಿಸುವುದರಲ್ಲಿಯೇ ತೃಪ್ತನಾಗದೆ ವಸ್ತು, ಪಾತ್ರ, ರಸ, ಶೈಲಿ, ವರ್ಣನೆ, ನೀತಿ ಮುಂತಾದವುಗಳನ್ನು ಸಾಹಿತಿಯ ಒಂದು ವಿಸ್ತಾರ ದೃಷ್ಟಿಯಿಂದ ಪರಿಶೀಲಿಸಿ ಸಂಗ್ರಹವಾಗಿ ಬರೆಯಲು ಪ್ರಯತ್ನ ಪಟ್ಟಿದ್ದೇನೆ.

ಈಗ ನಮಗೆ ಗೊತ್ತಿರುವ ಸಂಸ್ಕೃತ ರೂಪಕಗಳ ಸಂಖ್ಯೆ ಸುಮಾರು ೬೫೦. ಇವುಗಳ ಹೆಸರನ್ನು ಈ ಗ್ರಂಥದ ಕೊನೆಯಲ್ಲಿ ಕೊಟ್ಟಿರುವ ಅಕಾರಾದಿ ಪಟ್ಟಿಯಲ್ಲಿ ನೋಡಬಹುದು. ಇವೆಲ್ಲವೂ ಈಗ ಮುದ್ರಿತವಾಗಿಲ್ಲ. ಹಲವು ಹಸ್ತಪ್ರತಿಗಳಲ್ಲಿವೆ; ಕೆಲವುಗಳ ಹೆಸರು ಮಾತ್ರ ತಿಳಿದಿದೆ; ಅವುಗಳನ್ನು ಭಾವಪ್ರಕಾಶನ, ದಶರೂಪಕ, ಸಾಹಿತ್ಯದರ್ಪಣ ಮುಂತಾದ ಗ್ರಂಥಗಳ ಕರ್ತರು ಹೆಸರಿಸಿದ್ದಾರೆ. ಅವು ಆಗಿನ ಕಾಲಕ್ಕೆ ಇದ್ದು ಈಗ ಎಲ್ಲಿಯೋ ಅಡಗಿಕೊಂಡೋ ನಷ್ಟವಾಗಿಯೋ ಇರುವಂತೆ ತೋರುತ್ತದೆ.

ಸಂಸ್ಕೃತ ನಾಟಕ ಸಾಹಿತ್ಯದ ಚರಿತ್ರೆ ಸುಮಾರು ಒಂದು ಸಾವಿರ ವರ್ಷದವರೆಗೆ ನಡೆದು ಬಂತು. ಅದು ಕ್ರಿಸ್ತಶಕ ಒಂದನೆಯ ಶತಮಾನದ ಸುಮಾರಿನಲ್ಲಿ ಹುಟ್ಟಿ, ಐನೂರು ವರ್ಷ ಬೆಳೆದು ಪ್ರವರ್ಧಮಾನವಾಗಿ, ಆಮೇಲೆ ಇನ್ನು ಐನೂರು ವರ್ಷ ಇಳಿಮುಖವಾಗುತ್ತ ಬಂದು ಕ್ರಿಸ್ತಶಕ ಹನ್ನೊಂದು ಅಥವಾ ಹನ್ನೆರಡನೆಯ ಶತಮಾನಕ್ಕೆ ಮುಗಿಯಿತೆಂದು ಸ್ಥೂಲವಾಗಿ ಹೇಳಬಹುದು. ಅಲ್ಲಿಂದ ಮುಂದಕ್ಕೆ ಇಂದಿನವರೆಗೂ ಅಲ್ಲೊಂದು ಇಲ್ಲೊಂದು ನಾಟಕಗಳೇನೋ ಹುಟ್ಟುತಿವೆ; ಆದರೆ ಅವುಯಾವುದರಲ್ಲಿಯೂ ಸ್ಥಾಯಿಯಾದ, ಹೆಸರು ಪಡೆದು ಉಳಿಯುವ, ಸತ್ವವಿಲ್ಲ. ಆದ್ದರಿಂದ ಈ ಗ್ರಂಥದಲ್ಲಿ ಕೃಷ್ಣಮಿಶ್ರನ (೧೧ನೇ ಶತಮಾನ) ವರೆಗಿನ ಸಂಸ್ಕೃತ ರೂಪಕ ಸಾಹಿತ್ಯದ ಚರಿತ್ರೆಯನ್ನು ವಿಸ್ತಾರವಾಗಿ ಬರೆದಿದೆ; ಅಲ್ಲಿಂದ ಮುಂದಿನ ಚರಿತ್ರೆಯನ್ನು ಸೂಕ್ಷ್ಮವಾಗಿ ರೇಖಿಸಿ ಆಯಾ ಕೃತಿಗಳ ವಿಚಾರವಾಗಿ ತಿಳಿಯಬಹುದಾದ ಅಥವಾ ತಿಳಿದು ಬಂದಿರುವ ಮುಖ್ಯ ಸಂಗತಿಗಳನ್ನೂ ಅವುಗಳ ಮೇಲಣ ಲೇಖನಗಳನ್ನೂ ಅನುಬಂಧದಲ್ಲಿ ಕೊಟ್ಟಿದೆ.

ಈ ಪುಸ್ತಕವನ್ನು ಬರೆದದ್ದು ಬೆಂಗಳೂರಿನಲ್ಲಿ; ಬೆಂಗಳೂರು ವಿಜ್ಞಾನ ಭಂಡಾರ; ಆದ್ದರಿಂದ ಇಲ್ಲಿ ವೈಜ್ಞಾನಿಕರಿಗೆ ಸಹಾಯವೂ ಸಾಧನ ಸಾಮಗ್ರಿಗಳೂ ಒದಗುವಂತೆ ಸಾಹಿತಿಗಳಿಗೆ ಒದಗುವುದಿಲ್ಲ. ಆದರೂ ಇಲ್ಲಿರುವ ಮಿಥಿಕ್ ಸೊಸೈಟಿ, ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆ ಮುಂತಾದ ಸಂಸ್ಥೆಗಳಿಂದ ಆದಷ್ಟು ಪ್ರಯೋಜನವನ್ನೂ ಪಡೆದುಕೊಂಡದ್ದಾಗಿದೆ. ಇಂಥ ಗ್ರಂಥದ ಲೇಖನಕ್ಕೆ ಮೈಸೂರಿನಲ್ಲಿ ಹೆಚ್ಚಾದ ಸಹಾಯ ಸಾಮಗ್ರಿಗಳು ದೊರೆಯುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿಂದ ಅಂಚೆಯ ಮೂಲಕ ಎಷ್ಟು ಸಹಾಯ ಪಡೆಯಬಹುದೋ ಅದನ್ನೂ ಪಡೆದದ್ದಾಗಿದೆ. ಈ ಸಹಾಯ ಸಂಪತ್ತಿಯನ್ನು ಒದಗಿಸಿಕೊಡುವುದರಲ್ಲಿ ನೆರವಾದ ಮೈಸೂರಿನ ನನ್ನ ಮಿತ್ರರಾದ ಡಾ ॥ ಎ. ಎನ್. ನರಸಿಂಹಯ್ಯ, ಎಂ.ಎ., ಎಲ್.ಟಿ., ಪಿ.ಎಚ್.ಡಿ., ಮುಂತಾದ ಮಿತ್ರರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಡಾ ॥ ನರಸಿಂಹಯ್ಯನವರು ಇಂಗ್ಲೆಂಡಿನಲ್ಲಿ ವ್ಯಾಸಂಗಮಾಡುತ್ತಿದ್ದಾಗ, ಅಲ್ಲಿಂದಲೇ ನನಗೆ ಬೇಕಾದ ಸಂಗತಿಗಳನ್ನು ಶೇಖರಿಸಿ ಕಳುಹಿಸಿಕೊಡುತ್ತಿದ್ದರು. ಅವರ ಮತ್ತು ಮ ॥ ಟಿ.ಎಸ್. ಸುಬ್ಬರಾಯ, ಎಂ.ಎಸ್ ಸಿ., ಅವರ ಸಹಾಯವಿಲ್ಲದಿದ್ದರೆ ಈ ಗ್ರಂಥದಲ್ಲಿ ಅಶ್ವಘೋಷನ ಮೇಲೆ ಬರೆದಿರುವ ಪ್ರಕರಣವು ಈಗಿನ ರೂಪನ್ನು ತಳೆಯುತ್ತಿರಲಿಲ್ಲ. ಈ ನನ್ನ ಮಿತ್ರರಿಗೂ, ಪ್ರತಿಯೊಂದಂಶದಲ್ಲಿಯೂ ಉಪಯುಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಉಪಕರಿಸಿದ ಈ ಗ್ರಂಥಮಾಲಾ ಪ್ರಧಾನ ಸಂಪಾದಕರೂ ನನ್ನ ವಿದ್ಯಾಗುರುಗಳೂ ಆದ ಮ ॥ ಬಿ.ಎಂ. ಶ್ರೀಕಂಠಯ್ಯ, ಎಂ.ಎ., ಬಿ.ಎಲ್., ಅವರಿಗೂ ಈ ಮೂಲಕ ನನ್ನ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ.

ಈ ಗ್ರಂಥವನ್ನು ಈಗ ಕೆಲವು ವರ್ಷಗಳ ಹಿಂದೆಯೇ ಕೈಗೆ ತೆಗೆದುಕೊಂಡು ಸಂತತವಾಗಿ ಕೆಲಸಮಾಡುತ್ತಿದ್ದರೂ ಇದರಲ್ಲಿ ಇನ್ನೂ ಹಲವು ಕೊರತೆಗಳುಂಟೆಂಬುದನ್ನು ನಾನು ಬಲ್ಲೆ. ವಿದ್ವಾಂಸರು ಇವುಗಳನ್ನು ತಿದ್ದಿಕೊಟ್ಟರೆ ತುಂಬ ಉಪಕೃತನಾಗುತ್ತೇನೆ.

ಬೆಂಗಳೂರು,

೧೫-೫-೧೯೩೭

ಎ.ಆರ್. ಕೃಷ್ಣಶಾಸ್ತ್ರಿ

ಎರಡನೇ ಮುದ್ರಣ

ಈಚೆಗೆ ಸಂಸ್ಕೃತ ನಾಟಕದ ಮೇಲೆ ಬಂದ ಲೇಖನಗಳನ್ನೂ ಗ್ರಂಥಗಳನ್ನೂ ನೋಡಿ ಆವಶ್ಯಕವಾದ ಕಡೆಗಳಲ್ಲಿ ತಕ್ಕ ಮಾರ್ಪಾಟುಗಳನ್ನು ಮಾಡಲಾಗಿದೆ. ನನ್ನ ತಿಳಿವಳಿಕೆಗೆ ಬರದಿರುವ ಹಲವು ಅಂಶಗಳು ಉಳಿದಿರಬಹುದು. ಅವುಗಳನ್ನು ಬಲ್ಲವರು ತಿಳಿಸಿದರೆ ಕೃತಜ್ಞತೆಯಿಂದ ಸ್ವೀಕರಿಸಿ ತಿದ್ದಿಕೊಳ್ಳುತ್ತೇನೆ.

ಬೆಂಗಳೂರು,

೧೦-೪-೧೯೫೫

ಎ.ಆರ್. ಕೃಷ್ಣಶಾಸ್ತ್ರಿ