१ ಪೀಠಿಕೆ
ಆಗಮಗಳ ವಿಷಯದಲ್ಲಿ ಬಹುದೊಡ್ಡದಾದ ಆಗಮವಿಚಾರವೆಂಬ ಗ್ರಂಥವು ಸಂಸ್ಕೃತದಲ್ಲಿ ಸಕಲಕಾಲದೇಶೋಪಯೋಗಕ್ಕಾಗಿ ಬರೆಯಲ್ಪಟ್ಟಿರುತ್ತದೆ. ಅದು ಸಮಯಾಂತರದಲ್ಲಿ ಪ್ರಚುರಪಡಿಸಲ್ಪಡುವುದು. ಪ್ರಕೃತದಲ್ಲಿ ಈ ಶೇಷಸಂಹಿತಾ ವಿಷಯದಲ್ಲಿ ಸಂಕ್ಷೇಪವಾಗಿ ಸಕಲ ಸಾಮಾನ್ಯಜನರ ತಿಳಿವಳಿಕೆಗೋಸ್ಕರ ದೇಶಭಾಷೆಯಲ್ಲಿ ಒಂದು ಉಪೋದ್ಘಾತವು ಬರೆಯಲ್ಪಡುವುದು.
ಈ ಶೇಷಸಂಹಿತೆಯು ಬಹು ಸಂಕ್ಷೇಪವಾಗಿಯೂ ಬಹು ವಿಷಯಗಳಿಂದ ಕೂಡಿರುವುದಾಗಿಯೂ ಈಗಿನ ಕಾಲದಲ್ಲಿರುವ ಸದಾಚಾರಕ್ಕೆ ಮುಖ್ಯವಾದ ಪ್ರಮಾಣ ಗ್ರಂಥವಾಗಿಯೂ ಇರುವುದರಿಂದ ಇದನ್ನು ಮುದ್ರಿಸಬೇಕೆಂದು ಪ್ರಯತ್ನವಾಯಿತು.
ಆಗಮ ಸಂಪ್ರದಾಯವು ಅನಾದಿಕಾಲದಿಂದ ಈ ಭರತಖಂಡದಲ್ಲಿತ್ತೆಂಬುದಕ್ಕೆ ಇದೊಂದು ಮುಖ್ಯ ಕಾರಣವು — ಪರಮವೈದಿಕರಾದ ಆರ್ಯರೆಂಬ ಪ್ರಾಚೀನಮೀಮಾಂಸಕರು ವಿಗ್ರಹಾರಾಧನೆಯನ್ನು ನಿರಾಕರಿಸಿರುತ್ತಾರೆ. ಆದುದರಿಂದ ಆರ್ಯರ ಪ್ರವೇಶಕ್ಕಿಂತಲೂ ಪೂರ್ವದಲ್ಲಿ ಆಗಮ ಸಂಪ್ರದಾಯವಿತ್ತೆಂಬುದು ಸ್ಪಷ್ಟವು.
ಪಾಂಚರಾತ್ರ ಸಂಪ್ರದಾಯವು ಈಗ ಪ್ರಚಾರದಲ್ಲಿರುವ ವೇದಗಳಿಗೆಲ್ಲಾ ಮೂಲವಾದ ರಹಸ್ಯಾಮ್ನಾವೆಂಬ ವೇದಮೂಲಕವಾಗಿ ಪ್ರವೃತ್ತವಾಯಿತೆಂದು ಮಹಾಭಾರತಾದೀತಿಹಾಸಗಳಿಂದ ತಿಳಿದುಬರುತ್ತದೆ. ಈ ಆಗಮ ಸಂಪ್ರದಾಯವು 9-10ನೆ ಶತಮಾನಗಳಲ್ಲಿ ಕಾಶ್ಮೀರದೇಶದಲ್ಲಿ ವಿಶೇಷ ಪ್ರಚಾರದಲ್ಲಿತ್ತೆಂದು ಗ್ರಂಥಗಳಿಂದ ವಿಶದವಾಗುತ್ತದೆ.
ಮತ್ತು ಆಗಮಗಳಲ್ಲಿ ಆಪಾತವಾಗಿ ಈ ಅಭಿಪ್ರಾಯ ತೋರಿಬರುತ್ತದೆ :— ಶ್ರುತಿಸ್ಮೃತಿ ಸಮ್ಮತವಾದ ವರ್ಣಾಶ್ರಮ ವ್ಯವಸ್ಥೆಯು ಭಗವದ್ಭಕ್ತಿಯೆಂಬ ಪ್ರಧಾನ ಗುಣದಿಂದ ನಿರಾಕರಿಸಲ್ಪಟ್ಟಿರುವುದೆಂದು.
ಈ ಅಭಿಪ್ರಾಯವು ಈ ಆಗಮದಲ್ಲಿ ಸ್ಪಷ್ಟವಾಗಿ ನಿರಾಕರಿಸಲ್ಪಟ್ಟಿರುವುದು. ಈ ಅಂಶವನ್ನು ಶ್ರೀ ವೇದಾಂತಾಚಾರ್ಯರೇ ಮೊದಲಾದ ಪೂರ್ವಾಚಾರ್ಯರು ರಹಸ್ಯತ್ರಯಸಾರಗ್ರಂಥದ ಪ್ರಭಾವ ವ್ಯವಸ್ಥಾಧಿಕಾರದಲ್ಲಿ ಈ ಆಗಮದ ವಚನಗಳನ್ನುದಾಹರಿಸಿ ನಿರೂಪಿಸಿರುವರು.
ಈಗ ಭಾಗವತ ಸಂಪ್ರದಾಯದಲ್ಲಿ ಬಳಕೆಯಲ್ಲಿರುವ ಅನೇಕ ಮಂತ್ರಗಳು, ಧ್ಯಾನಶ್ಲೋಕಗಳು, ಪೂಜಾವಿಧಾನವು, ಪ್ರತಿಷ್ಠಾವಿಧಾನವು ಮೊದಲಾದ ಬಹು ಅಂಶಗಳು ಈ ಸಂಹಿತೆಯಲ್ಲಿರುವುವು.
ಇದರಲ್ಲಿ ಪಾಂಚರಾತ್ರಾಗಮಸಾರವಾದ ಸಕಲ ಫಲ ಸಾಧನವಾದ ಪ್ರಪತ್ತಿ ಸ್ವರೂಪವನ್ನು ನಿರೂಪಿಸಿರುತ್ತದೆ. ರಹಸ್ಯತ್ರಯಕ್ಕೆ ಇದೇ ಮೂಲವಾಗಿರಬಹುದು. ಇಂತಹ ಅತಿ ಸಂಕ್ಷಿಪ್ತವಾಗಿ ಸಮಗ್ರವಾಗಿ ಶುದ್ಧವಾಗಿ ಬಹು ವಿಷಯ ಪರಿಪೂರ್ಣವಾದ ಗ್ರಂಥವಾವುದೂ ಇಲ್ಲವೆಂದು ಇದನ್ನು ಪ್ರಚಾರ ಪಡಿಸಲಾಯಿತು. ಇದರಲ್ಲಿರುವ ಪ್ರತಿ ವಿಷಯವೂ ಈಗ ಎಲ್ಲರಿಗೂ ಬೇಕಾಗಿರುತ್ತದೆ.
ಮ್ಲೆಚ್ಛಚಂಡಾಲಾದಿಗಳಿಗೂ ಅಷ್ಟಾಕ್ಷರ ಮಂತ್ರಾಧಿಕಾರವನ್ನು ಈ ಸಂಹಿತೆಯು ಹೇಳುತ್ತದೆ (10 ಪು). ಮುಖ್ಯವಾಗಿ ಆಗಮ ಸಂಪ್ರದಾಯವು ಸಕಲ ಪ್ರಾಣಿಗಳ ಸಮುದ್ಧಾರಣಾರ್ಥವೆಂಬುದು ಸ್ಪಷ್ಟವು. ಆಗಮಗಳಲ್ಲಿ ಪರಸ್ಪರ ವಿರೋಧವೂ ಖಂಡನೆಯ ತೋರಿದರೂ ಸರ್ವಾಗಮಪ್ರಾಮಾಣ್ಯ ವಾದಿಗಳಾದ ಪ್ರಾಮಾಣಿಕರಾದ ಜಯಂತಭಟ್ಟಾಚಾರ್ಯರೆಮೊದಲಾದವರ ಗ್ರಂಥಗಳ ಪರಿಶೀಲನೆಯಿಂದ ಸಮರಸವಾಗುವುದು.
ಈ ಗ್ರಂಥವು ಬ್ರಹ್ಮನಿಗೆ ನಾರಾಯಣನಿಂದ ಉಪದಿಷ್ಟವಾಯಿತು, ಅದೇ ಪ್ರಕಾರದಿಂದ ಶೇಷನೆಂಬ ಸಂಕರ್ಷಣನು ಅನಂತನು ನಾರದನಿಗೆ ಉಪದೇಶಮಾಡಿದನು. ಆದುದರಿಂದ ನಾರದ ಶೇಷಸಂವಾದರೂಪವಾಗಿಯೂ ಚತುರ್ಮುಖ ಸಂಬೋಧನ ರೂಪವಾಗಿಯೂ ಶೇಷಸಂಹಿತಾಪ್ರಸಿದ್ಧಿಯೂಇರುತ್ತದೆ. ಇದಕ್ಕೆ ಶೇಷಸಂಹಿತೆಯಂತೆ ಅನಂತ ಸಂಹಿತೆಯೆಂದೂ ನಾಮವಿರಬೇಕು. ಅಷ್ಟೋತ್ತರ ಸಂಹಿತಾ ಪರಿಗಣನೆಯಲ್ಲಿ ಅನಂತಸಂಹಿತಾ ನಾಮವಿರುತ್ತದೆ. ಶೇಷಸಂಹಿತಾ ನಾಮವಿಲ್ಲದಿದ್ದರೂಬಾಧಕವಿಲ್ಲ. ಸಕಲ ಸಂಹಿತೆಗಳ ಪರಿಶಿಷ್ಟಾಂಶವನ್ನು ಇದು ಹೇಳುತ್ತಿದೆಯಾದುರಿಂದ ಶೇಷಸಂಹಿತೆಯೆಂದು ಹೆಸರು ಎಂದು ಕೆಲವರು ಹೇಳಬಹುದು.
ಈ ಸಂಹಿತೆಯನ್ನು ಮುದ್ರಣಮಾಡುವುದಕ್ಕೆ ಅನುಜ್ಞೆಯನ್ನಿತ್ತ ಮುಜರಾಯಿ ಇಲಾಖಾಧಿಕಾರಿಗಳ ವಿಷಯದಲ್ಲೂ ಇದರ ಮೇಲ್ವಿಚಾರಣೆಯನ್ನು ತೆಗೆದುಕೊಂಡ ಸಂಸ್ಕೃತ ಪಾಠಶಾಲಾಧಿಕಾರಿಗಳ ವಿಷಯದಲ್ಲೂ ಮುದ್ರಣಕ್ಕೆ ವಿಶೇಷ ಸಹಾಯಮಾಡಿದ ಸಂಸ್ಕೃತ ಪಾಠಶಾಲಾಗಮ ಪ್ರಧಾನ ಪಂಡಿತರ ವಿಷಯದಲ್ಲೂ ಬಹುಕೃತಜ್ಞತಾ ಸ್ಮರಣವಿರುತ್ತದೆ.
ಇದನ್ನು ಶೋಧಿಸುವುದಕ್ಕೆ ಶ್ರೀ ಪರಕಾಲ ಸ್ವಾಮಿ ಸನ್ನಿಧಿಯ ಗ್ರಂಥಾಕ್ಷರದ ಶುದ್ಧ ಪ್ರತಿಯೊಂದೂ, ಶ್ರೀ ಮೇಲ್ಕೋಟೆ ಯತಿರಾಜ ಸ್ವಾಮಿಗಳ ಸನ್ನಿಧಿಯ ಗ್ರಂಥಾಕ್ಷರದ ಶುದ್ಧವಾದ ಎರಡು ಪ್ರತಿಗಳೂ ಅನುಗ್ರಹಿಸಲ್ಪಟ್ಟವು. ಆದುದರಿಂದ ಆ ಸನ್ನಿಧಿಗಳಿಗೆ ಅನಂತ ಧನ್ಯವಾದಗಳು ಸಮರ್ಪಿಸಲ್ಪಡುತ್ತವೆ. ವಿಸ್ತರವು ಮುಂದಿರುತ್ತದೆ. ಇಂತು,
ಸಜ್ಜನ ವಿಧೇಯಃ,
ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯಃ
विषयसूची
––––
[TABLE]
[TABLE]
[TABLE]
॥श्रीः॥
भगवच्छास्त्रे श्रीपाञ्चरात्रे
–––––
शेषसंहिता
–––––