ಪರಮಪೂಜ್ಯ ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀಮಹಾಸ್ವಾಮಿಗಳವರು ಶ್ರೀಶಂಕರಭಗವತ್ಪಾದರ ಈ ಬ್ರಹ್ಮಸೂತ್ರಭಾಷ್ಯವನ್ನು ಮೊಟ್ಟಮೊದಲು ಕನ್ನಡಕ್ಕೆ ಅನುವಾದ ಮಾಡಿಕೊಟ್ಟವರು. ಈ ಅಕ್ಷರಾನುವಾದವು ಕೇವಲ ಅನುವಾದವಾಗಿರದೆ ಕನ್ನಡಭಾಷೆಯಮರ್ಯಾದೆಗೂ ಮೂಲಕ್ಕೂ ಸ್ವಲ್ಪವೂ ಕುಂದುಕೊರತೆಯಿರದಂತೆ ಇರುವ ಒಂದು ಅಸಾಧಾರಣ ಗ್ರಂಥವೇ ಆಗಿದೆ. ಇದು ಹೆಮ್ಮೆಯ ವಿಷಯ. ಅಲ್ಲದೆ ಈ ಗ್ರಂಥದಲ್ಲಿ ಇರುವ ಸಂದರ್ಭೋಚಿತವಾದ ವಿಷಯವನ್ನೊಳಗೊಂಡ ಮಹತ್ತರವಾದ ಟಿಪ್ಪಣಿಗಳೂ ವಿಸ್ತಾರವಾದ ವಿಮರ್ಶಾತ್ಮಕ ಪೀಠಿಕೆಯೂ ಅಧಿ ಕರಣಗಳ ಸಾರವೂ ವಿಸ್ತ್ರತವಾದ ಶಬ್ದಾನುಕ್ರಮಣಿಕೆಯೂ ಯುಕ್ತವಾದ ತಲೆಬರಹಗಳೂ ಈ ಗ್ರಂಥದ ವಿಷಯಗಳನ್ನು ಕನ್ನಡಿಗರಿಗೆ ತಿಳಿಗೊಳಿಸಿದೆ. ಹೀಗಾಗಿ ಇದು ಒಂದು ಅತ್ಯುತ್ತಮವಾದ ಗ್ರಂಥರತ್ನ, ಶ್ರೀಗಳವರ ಈ ಗ್ರಂಥರತ್ನವು ಇಡೀ ಕರ್ನಾಟಕ ರಾಜ್ಯದ ಜನತೆಗೆ ಅರ್ಪಿಸಿದ ಮಹಾಪ್ರಸಾದವಾಗಿದೆ.
ಈ ಗ್ರಂಥದಲ್ಲಿ ಆಚಾರ್ಯರು ಯುಕ್ತಿಗಳನ್ನೂ ದೃಷ್ಟಾಂತಗಳನ್ನೂ ಶ್ರುತ್ಯನುಭವಗಳ ಜೋಡಣೆಯನ್ನೂ ತೋರಿಸಿರುವದನ್ನು ವಾಚಕರು ಮತ್ತೆಮತ್ತೆ ಮನನಮಾಡಬೇಕು. ಪ್ರಸ್ಥಾನತ್ರಯಗಳಲ್ಲಿ ಯಾವುದೇ ವಿಷಯಕ್ಕೆ ಸರಿಯಾದ ಅರ್ಥವನ್ನು ಕಂಡುಕೊಳ್ಳಬೇಕಾದರೆ ಸೂತ್ರಭಾಷ್ಯದಲ್ಲಿ ಏನು ಹೇಳಿದೆಯೋ ಅದೇ ಕಟ್ಟಕಡೆಯ ಅರ್ಥನಿರ್ಣಯವೆಂಬುದನ್ನು ಆಸೇತು ಹಿಮಾಚಲದವರೆಗಿರುವ ಎಲ್ಲಾ ವಿದ್ವಾಂಸರೂ ಒಪ್ಪಿರುವ ವಿಷಯವಾಗಿದೆ. ಹೀಗಾಗಿ ಈ ಗ್ರಂಥವು ಒಂದು ರೀತಿಯ ವಿಶಿಷ್ಟ ಸ್ಥಾನವನ್ನು ಗಳಿಸಿದೆ.
ಇದೀಗ ಈ ಗ್ರಂಥವು ನಾಲ್ಕನೇ ಮುದ್ರಣವನ್ನು ಕಾಣುತ್ತಿದೆ ಎಂದರೆ ಇದು ನಮ್ಮನಾಡಿನ ಆಧ್ಯಾತ್ಮಿಕಚಿಂತಕರ ಶಾಸ್ತ್ರೀಯ ಅಧ್ಯಯನದ ದ್ಯೋತಕವಾಗಿದೆ. ವಾಚಕರು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಈ ಗ್ರಂಥವನ್ನು ಬರಮಾಡಿಕೊಳ್ಳಲಿ ಎಂದು ಆಶಿಸುತ್ತೇವೆ.
_1953ರಲ್ಲಿ ಮೊದಲನೆಯ ಬಾರಿಗೆ ಶ್ರೀ ಜಯಚಾಮರಾಜೇಂದ್ರ ಗ್ರಂಥ ರತ್ನಮಾಲಾ ಶೀರ್ಷಿಕೆಯಲ್ಲಿ, ಶ್ರೀಶ್ರೀಗಳವರು ತಮ್ಮ ಪೂರ್ವಾಶ್ರಮದಲ್ಲಿ 1936ರಲ್ಲಿ ಪ್ರಕಟಿಸಿದ್ಧ ಸಂಪುಟಗಳನ್ನು ಸಂಸ್ಕರಿಸಿ ತರುವಾಯ ಎರಡನೆಯ ಬಾರಿಗೆ 1983ರಲ್ಲಿ ಮತ್ತು ಮೂರನೆಯಬಾರಿಗೆ 1998ರಲ್ಲಿ ಮುದ್ರಿಸಿ ಹೊರತರಲಾಯಿತು.
ಜನಪ್ರಿಯವಾಗಿದ್ದ ಈ ಗ್ರಂಥದ ಪ್ರತಿಗಳೆಲ್ಲಾ ಮಾರಾಟವಾಗಿದ್ದರಿಂದ ಪುನಃ ಮುದ್ರಣದ ತಪ್ಪುಗಳನ್ನೆಲ್ಲಾ ತಿದ್ದಿ ನಾಲ್ಕನೆಯ ಬಾರಿಗೆ 2010ರಲ್ಲಿ ಮುದ್ರಿಸಿ ಹೊರತರಲಾಗಿದೆ. ಶಂಕರವೇದಾಂತಭಾಷ್ಯಾಧ್ಯಯನಶೀಲರಿಗೆ ಕನ್ನಡ ಭಾಷೆಯಲ್ಲಿರುವ ಈ ಮೇರು ಗ್ರಂಥವು ಅತ್ಯುಪಯುಕ್ತವಾಗಿದ್ದು ಮತ್ತು ಶಂಕರವೇದಾಂತಪ್ರಚಾರಕರಿಗೆ ಕೈಗನ್ನಡಿಯಾಗಿದೆ.
ಗ್ರಂಥದ ಪರಿಪೂರ್ಣವು (ಎರಡು ಸಂಪುಟಗಳೂ ಸೇರಿ) ಸುಮಾರು ಎರಡು ಸಾವಿರದ ನಾಲ್ಕುನೂರು ಪುಟಗಳಷ್ಟು ವಿಸ್ತಾರವಾದ್ದರಿಂದ ಎರಡು ಭಾಗಗಳಾಗಿ ವಿಂಗಡಿಸಿ, ಪ್ರಾರಂಭದಿಂದ ಎರಡನೆಯ ಅಧ್ಯಾಯದ ಒಂದನೆಯ ಪಾದ ಪೂರ ಗ್ರಂಥವನ್ನು ಮೊದಲನೆಯ ಸಂಪುಟವಾಗಿ ಈಗ ಹೊರತರಲಾಗಿದೆ. ಇದರಲ್ಲಿ ಶ್ರೀಶ್ರೀಗಳವರು ತಮ್ಮ ಪೂಾಶ್ರಮದಲ್ಲಿಯೇ ಬರೆದು ಪ್ರಕಟಿಸಿದ್ಧ ಎರಡು ಪರಿಶಿಷ್ಟಗಳನ್ನೂ ಅಳವಡಿಸಲಾಗಿದೆ. ಮೊದಲನೆಯ ಪರಿಶಿಷ್ಟದಲ್ಲಿ ಭಾಷ್ಯದಲ್ಲಿರುವ ಮುಖ್ಯ ಪ್ರಮೇಯಗಳನ್ನು ವಿವರಿಸುವ ವಿಚಾರಗಳಿವೆ. ಇವು ಭಾಷ್ಯಾಧ್ಯಯನಕ್ಕೆ ಸಹಾಯಕಗಳಾಗಿವೆ. ಎರಡನೆಯ ಪರಿಶಿಷ್ಟದಲ್ಲಿ ಶಂಕರಭಾಷ್ಯದ ಮೇಲೆ ರಚಿತವಾಗಿರುವ ವ್ಯಾಖ್ಯಾನಗಳು ಹಾಗೂ ಮತಾಂತರಗಳ ಆಚಾರ್ಯರುಗಳ ಅಭಿಪ್ರಾಯಗಳ ವಿಮರ್ಶೆಯೂ ಇದೆ. ಈ ಪರಿಶಿಷ್ಟವು ವಿದ್ವಾಂಸರುಗಳ ಅವಗಾಹನೆಗೂ ಭಾಷ್ಯವ್ಯಾಖ್ಯಾನ ಪ್ರಸ್ಥಾನಗಳ ವೈಲಕ್ಷಣ್ಯವನ್ನು ತಿಳಿಯುವದಕ್ಕೂ ಉಪಯುಕ್ತವಾಗಿದೆ. ಹೀಗೆ ಈ ಪ್ರಥಮ ಸಂಪುಟವು ಒಟ್ಟು ಸುಮಾರು 1200 ಪುಟಗಳ ಬೃಹದ್ ಗ್ರಂಥವಾಗಿ ಹೊರಬರುತ್ತಿದೆ. ಉಳಿದ ಭಾಗವೂ ಸಹ ಸುಮಾರು 1200 ಪುಟಗಳಾಗಿದ್ದು ಎರಡನೆಯ ಸಂಪುಟವಾಗಿ ಇದರ ಜತೆಯಲ್ಲಿಯೇ ಪ್ರಕಾಶನಗೊಳಿಸಲಾಗಿದೆ. ಹೀಗೆ ವಾಚಕರಿಗೆ ಸಂಪೂರ್ಣಗ್ರಂಥವು ಈಗ ಲಭ್ಯವಾಗಿರುತ್ತದೆ.
ಈ ಗ್ರಂಥದ ಪ್ರಕಟನೆಗೆ ಉದಾರವಾಗಿ ಧನಸಹಾಯವನ್ನು ಮಾಡಿರುವವರ ಹೆಸರುಗಳನ್ನು ಮುಂದಿನ ಪುಟಗಳಲ್ಲಿ ಕೊಡಲಾಗಿದೆ.
ಕರಡುಗಳನ್ನು ತಿದ್ದುವುದು, ಗ್ರಂಥ ಶೋಧನೆ, ಮುಂತಾದ ಎಲ್ಲಾ ವಿಷಯ ಗಳಲ್ಲಿಯೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲಾ ಭಕ್ತ ವೃಂದದವರಿಗೆ ಕಾರ್ಯಾಲಯವು ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತದೆ.
ಈ ಗ್ರಂಥವನ್ನು ಸುಂದರವಾಗಿ ಮುದ್ರಿಸಿ ಹೊರ ತರಲು ಸಹಕರಿಸಿದ, ಅಕ್ಷರ ವಿನ್ಯಾಸವನ್ನು (ಡಿ.ಟಿ.ಪಿ.) ಮಾಡಿಕೊಟ್ಟ ಶ್ರೀ ಬೆಳ್ಳಾವೆ ದಿಲೀಪ್, ಬೆಂಗಳೂರು ಮತ್ತು ಸುಂದರವಾದ ರಕ್ಷಾಕವಚಗಳನ್ನೊಳಗೊಂಡು ಮುದ್ರಣಮಾಡಿಕೊಟ್ಟ ಶ್ರೀ ಗಣೇಶ್ ಮಾರುತಿ ಪ್ರಿಂಟರ್, ತ್ಯಾಗರಾಜನಗರ, ಬೆಂ.28 ಇವರಿಬ್ಬರಿಗೂ ಕಾರ್ಯಾಲಯದ ಪರವಾಗಿ ಅಭಿನಂದನೆಗಳನ್ನು ಸಮರ್ಪಿಸುತ್ತೇವೆ.
ವಾಚಕರು ಎಂದಿನಂತೆ ಈ ಗ್ರಂಥವನ್ನು ಬರಮಾಡಿಕೊಂಡು ಕಾರ್ಯಾಲಯದ ಮುಖ್ಯಧೈಯವಾದ ಗ್ರಂಥ ಪ್ರಕಟನೆಗೆ ಉದಾರವಾಗಿ ಸಹಾಯಮಾಡಿ, ಜಿಜ್ಞಾಸುಗಳಿಗೆ ಅಧ್ಯಾತ್ಮವಿಚಾರದ ಗ್ರಂಥಗಳು ಸುಲಭ ಬೆಲೆಯಲ್ಲಿ ದೊರೆಯುವಂತ ಪ್ರೋತ್ಸಾಹಿಸಬೇಕಾಗಿ ವಿನಂತಿ
ಪ್ರಕಾಶಕರು
ವಿಕೃತಿ ಸಂವತ್ಸರ ಮಾರ್ಗಶಿರ ಬಹುಳ ಅಷ್ಟಮಿ ಮಂಗಳವಾರ ( ಸದ್ಗುರು ಜಯಂತಿ)
28-10-2010
ಉದಾರವಾಗಿ ಸಹಾಯ ಮಾಡಿದ ಎಲ್ಲಾ ಭಕ್ತವೃಂದಕ್ಕೂ ಕಾರ್ಯಾಲಯದ ಪರವಾಗಿ ಕೃತಜ್ಞತಾಪೂರ್ವಕವಾದ ವಂದನೆಗಳು.