ಉಪದೇಶ ಸಾರ

ಶ್ರೀ ರಮಣ ಮಹರ್ಷಿಗಳ ಭಕ್ತರೊಬ್ಬರಾದ ಶ್ರೀ ಮುರುಗನಾರ್ ಎಂಬುವರು ಮಹಾನ್ ಕವಿಯಾಗಿದದ್ದರು. ಇವರು ತಮಿಳು ಭಾಷೆಯಲ್ಲಿ “ಶಿವಲೀಲೆ” ಎಂಬ ನೂರು ಪದ್ಯಗಳನ್ನು ಒಳಗೊಂಡ ಕಾವ್ಯವನ್ನು ಬರೆಯುತ್ತಿದ್ದರು. ಅದರಲ್ಲಿ ದಂಡಕಾರಣ್ಯ ವನದಲ್ಲಿ ವಾಸಿಸುತ್ತಿದ್ದ ಋಷಿಮುನಿಗಳಿಗೆ. ಪರಮೇಶ್ವರನು ಉಪದೇಶಿಸಿದ್ದ ವೇದಾಂತದ ಜ್ಞಾನದ ಬಗ್ಗೆ ಬರೆಯಬೇಕಿತ್ತು. ತನ್ನ ಮನಸ್ಸಿಗೆ ಈ ವೇದಾಂತ ಜ್ಞಾನ ಎಟುಕದ ವಸ್ತುವಾದ್ದರಿಂದ, ಶ್ರೀ ರಮಣರ ಮೊರೆ ಹೊಕ್ಕಾಗ ರಮಣರು, ಅವರ ಇಚ್ಛೆಯನ್ನು ಪೂರೈಸಲು ಮೂವತ್ತು ಚಿಕ್ಕ ಪದ್ಯಗಳಲ್ಲಿ ಉಪದೇಶ ಉಂಡ್ರಿಯರ್ ಎಂದು ತಮಿಳು ಭಾಷೆಯಲ್ಲಿ ಬರೆದುಕೊಟ್ಟರು. ನಂತರದಲ್ಲಿ ಮಹರ್ಷಿಗಳೇ ಅದರ ತರ್ಜುಮೆಯನ್ನು ಸಂಸ್ಕೃತ ಮತ್ತು ಮಲೆಯಾಳಂ ಭಾಷಗೆ ಮಾಡಿ ಅದಕ್ಕೆ ಅನುಭೂತಿ ಸಾರ ಎಂದು ಹೆಸರಿಟ್ಟಿದ್ದರು. ನಂತರ ಅವರೇ ಅದನ್ನು ಉಪದೇಶ ಸಾರ ಎಂದು ಕರೆದರು. ಈ ಪದ್ಯಗಳನ್ನು ಇಂದಿಗೂ ರಮಣಾಶ್ರಮದಲ್ಲಿ ಪೂಜೆಯ ವೇಳೆಯಲ್ಲಿ ವಾಡಿಕೆಯಾಗಿ ಸಲ್ಲಿಸುತ್ತಾರೆ.

ಈ ಪದ್ಯಗಳು ಪರಮೇಶ್ವರನು ಋಷಿಮುನಿಗಳಿಗೆ ಉಪದೇಶಿಸಿದ್ದ ಮೊಕ್ಷ ವಿದ್ಯೆ. ಕರ್ಮದ ಆಚರಣೆಗಿಂತ ಜ್ಞಾನಮಾರ್ಗವೇ ಮೋಕ್ಷಕ್ಕೆ ಸಾಧನ ಎಂಬುದೇ ಅದರ ಸಂದೇಶ. ಸಾಧನಾ ಪಥದಲ್ಲಿರುವ ಎಲ್ಲರಿಗೂ ಈ ಸರಳವಾದ ಮತ್ಫು ಗಹನವಾದ ಚಿಕ್ಕ ಚಿಕ್ಕ ಸೂತ್ರಗಳು ಅರ್ಥ ಗರ್ಭಿತವಾಗಿದೆ. ಇದರಲ್ಲಿ ವೇದಾಂತದ ಸಾರವನ್ನೇಲ್ಲಾ ಮಹರ್ಷಿಗಳು ಅಡಕ ಮಾಡಿದ್ದಾರೆ. ಅತ್ಯಂತ ಗಹನವಾದ ಅವರ ಮೊದಲ ಉಳ್ಳದು ನಾರ್ಪದು(ಸತ್ ದರ್ಶನ) ಕೃತಿಗೆ ಪೂರಕವಾದ ಇವು ಸಾಧನೆಯ ಸೂಕ್ಷ್ಮತೆಯನ್ನು ಎತ್ತಿ ಹಿಡಿಯುತ್ತವೆ.

ಸಾಧಕನ ಮನನಕ್ಕೆ ಉಪಯುಕ್ತವಾದ ಈ ಮೂವತ್ತು ಪದ್ಯಗಳಲ್ಲಿ ರಮಣ ಮಹರ್ಷಿಗಳು ಮೊದಲು ಐದು ಪದ್ಯಗಳಲ್ಲಿಯೇ ತಮ್ಮ ಮೂಲ ಸಿದ್ದಾ೦ತವನ್ನು ಬಹಳ ಕ್ಲಿಷ್ಟಕರವಾದ ಸಣ್ಣ ಸಣ್ಣ ಸೂತ್ರಗಳಲ್ಲಿ ಮಂಡಿಸಿದ್ದಾರೆ. ಕರ್ಮದ ಉದ್ದೇಶ ಮತ್ತು ಅದರ ನಿರರ್ಥಕತೆಯ ಬಗ್ಗೆ ಚರ್ಚೆ ಮಾಡಿ, ನಮ್ಮೆಲ್ಲರ ತಿಳುವಳಿಕೆಯ ದಾರಿ,ತಪ್ಪು ಎಂದು ಮನದಟ್ಟು ಮಾಡಿದ್ದಾರೆ. ಆದ್ದರಿಂದ, ನಾವು ಈ ಕರ್ಮಗಳ ಆಚರಣೆಗಿಂತ ಜ್ಞಾನ, ಮತ್ತು ವಿಚಾರ ಮಾರ್ಗದಲ್ಲಿ, ತೊಡಗಿಸಿಕೊಂಡಾಗ,ಅದು ನಮ್ಮನ್ನು ಸತ್ ದರ್ಶನದ ಕಡೆಗೆ ದಾರಿ ದೀಪವಾಗುವುದು,ಎನ್ನುತ್ತಾರೆ ಮಹರ್ಷಿಗಳು.

ನಮಲ್ಲಿ ಸದಾ ನಡೆಯುತ್ತಿರುವ ಅಹಂ ಸ್ಪುರಣವೇ, ಬಚ್ಚ ಬರಿಯ ಅರಿವೇ ಹೊರತು, ಬೇರೆ ಯಾವ ನಾನು ಎಂಬ ವಸ್ತುವೇ ಇಲ್ಲವೇ ಇಲ್ಲ ಎಂದು ನಿಖರವಾಗಿ ತೋರಿಸಿದ್ದಾರೆ. ಇದಕ್ಕೆ ಜ್ಞಾನದ ಮಾರ್ಗವನ್ನು ನಾವು ಬಳಸಿಕೊಂಡಾಗ ಅದರ ಆನ೦ದದಿ೦ದ ನಮಗೆ ಸತ್ಯವು ಗೋಚರ ವಾಗುತ್ತದೆ. ಸಾಧಕರು, ಈ ಎಡರು ತೊಡರುಗಳನ್ನು ಗುರುತಿಸಿ ಅವುಗಳನ್ನು ದಾಟುವುದೇ ಮುಖ್ಯ ಗುರಿಯಾಗಿಸಿಕೊಳ್ಳಬೇಕು..

ಮಹರ್ಷಿಗಳ ವಾಣಿಯ ಮೊದಲ ಪದ್ಯದ ಪದಗಳು, ಕರ್ತೃ,ಕರ್ಮ, ಕರ್ಮಫಲ, ಅದರ ಆಶಾಶ್ವತೆ, ಜಡ ಸ್ವರೂಪ, ಇವುಗಳೆಲ್ಲವೂ ಅರ್ಥಗರ್ಭಿತವಾದ ಸಣ್ಣ ಪದಗಳಾದರೂ ಮತ್ತು ಸರಳವಾಗಿ ಕಂಡರೂ,ಇವೆಲ್ಲಾ ನಮ್ಮನ್ನು ಆಳವಾದ ಚಿಂತನೆಗೆ ಒಯ್ಯುತ್ತದೆ.

ಪಂಚಭೂತಗಳ ಸಂಯೋಗದ ಈ ದೇಹ, ಇಂದ್ರಿಯಗಳು, ಮನಸ್ಸು ಬುದ್ಧಿಗಳೇ ಈ ‘ನಾನು’ ಎಂದು ನಾವೆಲ್ಲಾ ತಿಳಿದಿದ್ದೇವೆ. ಇದರಿಂದ ನಾವು ಎಲ್ಲಾ ತರಹದ ಸುಖಗಳನ್ನು ಪಡೆಯಬಹುದೆಂದು ನಂಬಿದ್ದೇವೆ. ಆದರೆ, ಇದರ ಹಿಂದೆ ಇರುವ ಸೂಕ್ಷ್ಮ ಶಕ್ತಿಯೇ ಎಲ್ಲ, ಸ್ಥೂಲಶರೀರ, ಸೂಕ್ಷ್ಮಶರೀರಗಳ ಪಂಚೇಂದ್ರಿಯದ ತನ್ಮಾತ್ರೆಗಳು (ಶಬ್ದಸ್ಪರ್ಶ ರೂಪ ರಸ ಗಂಧ), ಮತ್ತು ಚಿತ್ತ, (ನಮ್ಮೆಲ್ಲರ ಆಗು ಹೋಗುಗಳಮೂಟೆ)ಗಳನ್ನು ನಿಯಂತ್ರಣ ಮಾಡುತ್ತಿರುವುದೇ ನಮ್ಮ ಮೂಲಶಕ್ತಿಯ ಸ್ವರೂಪ ಎಂಬುದನ್ನು ಮರೆತಿದ್ದೇವೆ. ಇದರ ಕಾರಣದಿಂದ ಈ ಜ್ಞಾನಶಕ್ತಿಯೇ ಇಚ್ಛಾಶಕ್ತಿಯಾಗಿ ಪರಿವರ್ತಿಸಿಕೊಂಡು ಕರ್ತೃವಿನ ರೂಪದಲ್ಲಿ ತಲೆದೋರುತ್ತದೆ. ಇದರಿಂದ ಕರ್ಮ ಪ್ರೇರೇಪಣೆಯಾಗುತ್ತದೆ. ಈ ರೀತಿ ಆದು ಕರ್ತೃವಿನ ಆಜ್ಞೆಯಾಗುತ್ತದೆ.

ಜೀವನದಲ್ಲಿ ಏಲ್ಲರೂ ಸುಖ ಶಾಂತಿಗಾಗಿ ಎಲ್ಲೆಡೆ ಅರಸಿ ಹೋಗುತ್ತಾರೆ..ಒಳ್ಳೆಯ ತಿಂಡಿಯ ಆಸ್ವಾದನೆಯ ಸುಖ, ಒಳ್ಳೆಯ ಸಂಗಾತಿಯ ಸುಖ, ಒಂದು ಉತ್ಕೃಷ್ಟವಾದ ಕಾರ್ಯದಿಂದ ದೊರೆಕುವ ಸುಖ ಮುಂತಾದುವೆಲ್ಲ ನಮಗೆ ಆನಂದ ಮತ್ತು ಮುದ ತರುತ್ತದೆಂಬುದು ನಮ್ಮ ಅನಿಸಿಕೆ. ಆದರೆ ಈ ಸುಖದ ಆನಂದ, ಮತ್ತಷ್ಟು ಕಾರ್ಯಗಳಲ್ಲಿ ತೊಡಗಿಸಿ ಮತ್ತಷ್ಟು ಹೆಚ್ಚು ಹೆಚ್ಚು ಕರ್ಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ಮಾಡಿ ಬಹಳ ದುಃಖದ ಕಡೆ ನಮ್ಮನ್ನು ದೂಡುತ್ತದೆ. ಇದರಿಂದ ಉತ್ಪಾದನೆಗೊಂಡ ದುರ್ಭರ ಶಕ್ತಿಗಳು, ಒಂದು ರೀತಿಯ ಸ೦ಕುಚಿತ ಭಾವನೆಗೆ ಒಳಗಾಗಿ, ನಮ್ಮನ್ನು ತಮೋಗುಣದತ್ತ ತಳ್ಳುತ್ತದೆ. ತಮೋಗುಣ ಪ್ರಧಾನವಾದ ಈ ಕರ್ಮಗಳೆಲ್ಲವೂ ಜಡತ್ವಕ್ಕೆ ದಾರಿಯಾಗುತ್ತದೆ.

ಇದೇ ಬೇಜಾರು ಅಥವಾ ಆಂಗ್ಲಭಾಷೆಯ ಬೋರ್ಡಮ್ ಎಂದು ಕರೆಯಲ್ಪಡುತ್ತದೆ. ನಮ್ಮ ಮೂಲಾಧಾರದಲ್ಲಿ ಉತ್ಪತ್ತಿಯಾದ ಈ ಶಕ್ತಿ ಆಜ್ಞಾ ಸ್ಥಾನದಲ್ಲಿ ಕೊನೆಗೊಂಡಾಗ ಇದರ ಪರಿಣಾಮವಾಗಿ, ಒತ್ತಡ ಬಹಳವಾಗುತ್ತದೆ. ಅದದಿಂದ ಹೊರಬರಲು ಮತ್ತೆ ನಾವು, ಒಂದು ಗಾಳಿಯ ವಿಹಾರಕ್ಕೋ, ಸಂಗೀತವನ್ನು ಆಲಿಸುವುದರಿಂದಲೋ,ಒಂದು ಚಿತ್ರವನ್ನು ನೋಡುವುದರಿಂದಲೋ, ಒಳ್ಳೆಯ ತಿಂಡಿ ಅಥವಾ ಪಾನೀಯವನ್ನು ಸವಿಯುವುದರಿಂದಲೋ), ಆ ದುರ್ಭರ ಶಕ್ತಿಗಳನ್ನು ವ್ಯಯಮಾಡಿದಾಗ, ನಮ್ಮ ಸಂಕುಚಿತವಾದ ಮನಸ್ಸು ಆ ಭಾವನೆಯಿಂದ ನಮ್ಮನ್ನು ವಿಶ್ರಾಂತಿಯ ಕಡೆಗೆ ಹೊರಳಿಸುತ್ತದೆ. ಇದು ಸ್ವಾಭಾವಿಕವಾಗಿ ಆಗುವ ಕ್ರಿಯೆ.. ಇದಕ್ಕೆ ಶಕ್ತಿ ಪಲ್ಲಟನಾ ಕ್ರಮ ಎನ್ನುತ್ತಾರೆ. ಆಂಗ್ಲಭಾಷೆಯಲ್ಲಿ ಇದಕ್ಕೆ ಎನರ್ಜಿ ಶಿಫ್ಟ್ ಮೆಖಾನಿಸಮ್ ಎನ್ನುತ್ತಾರೆ. ಆದರೆ ಇದರಿಂದ ದೊರೆತ ಆನಂದ, ಕ್ಷಣಿಕವಾದ್ದರಿಂದ ಮತ್ತೆ ಮತ್ತೆ ಕರ್ಮಕ್ಕೆ ದಾರಿ ಮಾಡಿ ಮಾಡಿಕೊಡುತ್ತದೆ. ನಾವು ಕರ್ಮಚಕ್ರದಲ್ಲಿ ಮತ್ತೆ ತಿರುಗಿ ,ದುಃಖದಿಂದ ತೊಳಲುತ್ತೇವೆ.

ಆದರೆ, ಈ ರೀತಿಯಾದ ಒಂದು ವ್ಯವಸ್ಥೆ ಮನುಷ್ಯನಲ್ಲಿ ಇರುವುದರಿಂದಲೇ ಇ೦ತಹ ಭಾದೆಗಳಿಂದ ಆಗಾಗ ಹೊರ ಬರುವುದರಿಂದ, ನಾವು ಒತ್ತಡದಿಂದ ಸರಿಯುತ್ತಾ ಇರುತ್ತೇವೆ. ಇವೆಲ್ಲವೂ ಮನಸ್ಸಿನಲ್ಲಿ ಆಗುವ ವೇಗ ಮತ್ತು ಸಂಕುಚಿತ ಭಾವನೆಗಳು. ನಾವು ಇವನ್ನು ತೊರೆದು, ನೈಧಾನ್ಯ ಮತ್ತು ವೈರಾಗ್ಯದ ಕಡೆ (ಉದಾಸೀನಭಾವ) ಮನಸ್ಸನ್ನು ತಿರುಗಿಸದಾಗ ಅದು ವೈಶಾಲ್ಯದ ಕಡೆಗೆ ತಿರುಗಿ ಜೀವನದಲ್ಲಿ ಏನೇ ಕಷ್ಟಕರ ಸನ್ನಿವೇಶ ಬಂದರೂ ಬಹಳ ಸರಳವಾಗಿ ಎದುರಿಸಬಹುದಾದ ಸನ್ನಿವೇಶ ಒದಗುತ್ತದೆ. ಈ ರೀತಿ ನಮಗೆ ಆನಂದವನ್ನು ತರುವಂತಹ ಸ್ಥಿತಿಯನ್ನು ನಾವು ಹೆಚ್ಚು ಹೆಚ್ಚು ಸಮಯ ಅನುಭವಿಸುವ ಒಂದು ನೆಲೆಯನ್ನು ಸಂಪಾದಿಸಿಕೊಳ್ಳಬೇಕು. ಇದಕ್ಕೆ ಉದಾಸೀನ ಭಾವ ಅಥವಾ ಸಾಕ್ಷಿ ಭಾವ ಎನ್ನುತ್ತಾರೆ.

ಮನಸ್ಸೇ ನಮ್ಮ ಸುಖ ದುಃಖಕ್ಕೆ ಮತ್ತು ಆದರ ಬಿಡುಗಡೆಗೆ ಕಾರಣವಾದ್ದರಿಂದ, ಅದರ ಆಳಕ್ಕೆ ಇಳಿದು ದೀರ್ಘ ಚಿಂತನೆಯ ದಾರಿಯತ್ತ ಸಾಗಬೇಕು. ಮನಸ್ಸಿಗಿಂತ ಅತ್ಯಂತ ವೇಗವಾದ ವಸ್ತು ಮತ್ತೊಂದಿಲ್ಲ. ನಮ್ಮ ದೇಹ ಮತ್ತು ಇಂದ್ರಿಯಗಳು ವೇಗ ಮತ್ತು ಸಂಕುಚಿತೆಯಲ್ಲಿ ಇದ್ದರೂ, ಮನಸ್ಸು ನೈಧಾನ್ಯ ಮತ್ಫು ಉದಾಸೀನತೆಯಲ್ಲಿ ಇದ್ದಾಗ, ವೇಗವನ್ನು ತಡೆಯಬಲ್ಲ ಶಕ್ತಿ ದೊರಕತ್ತದೆ. ಇದರಿಂದ ವೈಶಾಲತೆ ಬೆಳೆದು,ಅಮನೀಭಾವ ಉಂಟಾಗುತ್ತದೆ. ಇದನ್ನು ನಾವು ಹೆಚ್ಚು ಹೆಚ್ಚು ಬೆಳೆಸಿ ಕೊಳ್ಳಬೇಕು.

ನಮ್ಮ ಮೂಲ ಉದ್ದೇಶ ವಾಸನಾಕ್ಷಯದತ್ತ ಸಾಗಬೇಕು. ಇದು ಅಭ್ಯಾಸ ಮತ್ತು ವೈರಾಗ್ಯದಿಂದಲೇ ಸಾಧ್ಯ. ಆಭ್ಯಾಸ ಎಂದರೆ ನಮ್ಮ ಮೂಲ ಸ್ವರೂಪದ ಚಿಂತನೆಯಲ್ಲೇ ಸಹಜ ಸ್ಥಿತಿಯಲ್ಲಿ ನಿಲ್ಲುವುದಕ್ಕೆ ಪ್ರಯತ್ನ ಮಾಡಬೇಕು. ನಮ್ಮೆಲ್ಲ ಮೈಯ್ಯನ್ನು ಕಣ್ಣಾಗಿಸಿ,, ಎಚ್ಚರಿಕೆಯಿಂದ ನೋಡುತ್ತಾ ಆ ದೃಶ್ಯಗಳಲ್ಲಿ ತೊಡಗಿಸಿಕೊಳ್ಳದೆ, ಬರಿಯ ವೀಕ್ಷಕನಾಗಿ ನಿಲ್ಲುವುದನ್ನು ಅಭ್ಯಾಸಮಾಡಬೇಕು. ಇದು ಹಂತ ಹಂತ ದಲ್ಲಿ ಸಾಗುವುದರಿಂದ, ಸಮತ್ವದಲ್ಲಿ ಮನಸ್ಸನ್ನು ಇರಿಸಿದರೆ ಬಹಳ ಉತ್ತಮ. ವೈರಾಗ್ಯ ಎಂದರೆ ಅನಾಸಕ್ತಿಭಾವ. ಎಲ್ಲವನ್ನು ತ್ಯಜಿಸಿಬಿಟ್ಟರೆ ನನ್ನ ಗತಿ ಏನು ಎಂಬ ತಪ್ಪು ಭಾವನೆಯಿಂದ ಹೊರ ಬರಬೇಕು. ಎಲ್ಲ ರೀತಿಯ ದ್ವಂದ್ವಗಳಾದ, ಸುಖ ದುಃಖ, ಆಸೆ ನಿರಾಸೆ, ರಾಗದ್ವೇಷ, ಅಸೂಯೆ, ಮುಂತಾದ ಆರು ಶತ್ರುಗಳನ್ನು(ಕಾಮ,ಕ್ರೋಧ,ಲೋಭ,ಮೋಹ, ಮದ ಮತ್ಫು ಮಾತ್ಸರ್ಯ) ಹತೋಟಿಯಲ್ಲಿ ತಂದಾಗ, ಅವು ಒಂದೊಂದೇ ಬಿದ್ದುಹೋಗಿ ವಾಸನೆಗಳ ಮೂಟೆ ಕರಗಲು ಉಪಕಾರಿ ಯಾಗುತ್ತದೆ. ಎಲ್ಲ ಆಗು ಹೋಗುಗಳನ್ನು ಸಮತಾ ಭಾವದಿಂದ ನೋಡಿದಾಗ, ನಮ್ಮ ಮನಸ್ಸಿನ ಹೊಯ್ದಾಟ ಕಡಿಮೆಯಾಗಿ ಮನೋನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಇದರಿಂದ ಅಮನೀಭಾವದತ್ತ ನಮ್ಮಗತಿ ನಿಧಾನವಾಗಿ ಸಾಗುತ್ತದೆ. ವಾಸನಾಕ್ಷಯ, ಮನೋನಾಶ ಮತ್ಗು ಆತ್ಮ ಬೋಧಗಳೆಲ್ಲವೂ ಒಂದಕ್ಕೊಂದು ಪೂರಕವಾದ್ದರಿಂದ ಯಾವ ಒಂದು ಪ್ರಕ್ರಿಯೆಗೆ ಒತ್ತುಕೊಟ್ಟರೂ, ಅದು ನಮ್ಮನ್ನು ಮೂಲ ಸ್ವರೂಪಕ್ಕೆ ಒಯ್ಯುತ್ತದೆ.

ಇವನ್ನು ಕರಗತ ಮಾಡಿ ಅನುಭವಕ್ಕೆ ತಂದುಕೊಂಡಾಗಲೇ ನಮಗೆ ಆತ್ಯಂತಿಕ ಸುಖ ಮತ್ತು ಆನಂದ ಲಭಿಸುತ್ತದೆ. ಇದನ್ನು ಪದಗಳಲ್ಲೇ ಆಗಲೀ. ಅಥವಾ ಮಾತುಗಳಿಂದಾಗಲೀ ಹೇಳುವುದು ಅಸಾಧ್ಯ. ಇದನ್ನು ಸ್ವಂತ ಆನುಭವಾದಲ್ಲಿ ತಂದಾಗಲೇ ಅದರ ಮಹತ್ವ ಅರಿವಾಗುತ್ತದೆ.

ಇದಕ್ಕೇ, ಮಹರ್ಷಿಗಳು, ಸಮುದ್ರದ ಅಲೆಗಳು ಏಳುವ ಬೀಳುವ ಮತ್ತು ಅದರ ಉತ್ಪತ್ತಿ ಮತ್ತು ನಾಶದ ಬಗ್ಗೆ ಉದಾಹರಿಸಿ, ಕರ್ಮಫಲಗಳು ಶಾಶ್ವತವಲ್ಲದ ಕಾರಣ, ಸಾಧಕನು,ಇದರಲ್ಲಿ ಆಸಕ್ತಿ ತೋರಬಾರದು ಎಂಬ ಎಚ್ಚರಿಕೆ ಪದೇ ಪದೇ ನೀಡುತ್ತಿದ್ದಾರೆ. ಇವೆಲ್ಲವನ್ನೂ ಅವರು ತಮ್ಮ ಐದು ಪದಗಳಾದ ಕರ್ತೃ ಕರ್ಮ ಕರ್ಮಫಲ ಜಡ ಮತ್ಫು ಆಶಾಶ್ವತೆಯಲ್ಲಿ ತುಂಬಿದ್ದಾರೆ. ಆದ್ದರಿಂದ ಎಷ್ಟೇ ವಿಧವಾದ ಕರ್ಮದ ಆಚರಣೆಯಲ್ಲಿ ನಮ್ಮನ್ನು ತೊಡಗಿಸಿ ಕೊ೦ಡರೂ, ಅದು ನಮ್ಮ ಚಿತ್ತಶುದ್ದಿಗೆ ಕಾರಣವೇ ಹೊರತು, ಆತ್ಯಂತಿಕ ಸುಖ ಮತ್ತು ಆನಂದವನ್ನು ಕೊಡಲಾರದು. ಸಾಧಕನು ಯಾವರೀತಿಯಲ್ಲಿ ಸಾಧನೆ ಮಾಡಿದರೆ, ಅವನನ್ನು ಮೂಲ ಸ್ವರೂಪಕ್ಕೆ ಕೊಂಡು ಒಯ್ಯುತ್ತದೆ ಎಂಬುವುದೇ ಉಪದೇಶ ಸಾರದ ತಿರುಳು.

ಮಹರ್ಷಿಗಳು ನಮ್ಮನ್ನು ಹಂತ ಹಂತವಾಗಿ ಕೆಳ ಮಟ್ಟದಿಂದ ಉನ್ನತವಾದ ಶಿಖರಕ್ಕೆ ಕೊ೦ಡೊಯ್ಯುತ್ತಾರೆ. ಇದನ್ನು ನಾವೆಲ್ಲರೂ ನಿತ್ಯ ಪಾರಾಯಣವಾಗಿ ಸ್ವೀಕರಿಸಿದಾಗ ,ನಮ್ಮ ಸಾಕ್ಷಾತ್ಕಾರದ ಮಾರ್ಗಕ್ಕೆ ದಾರಿದೀಪವಾಗಿ, ನಮ್ಮ ಜನ್ಮ ಸಾರ್ಥಕ ವಾಗುವುದರಲ್ಲಿ ಸಂದೇಹವೇ ಇಲ್ಲ.

ಕನ್ನಡ ಬರಹಕ್ಕೆ ಶ್ರೀ ರಮಣ ಮಹರ್ಷಿಗಳ ಕೃಪಾಕಟಾಕ್ಷ ಮತ್ತು ಶ್ರೀ ಬ್ರಹ್ಮಾನಂದರ ಪ್ರವಚನದ ಮಾಲಿಕೆಯನ್ನು ಆಧಾರವಾಗಿ ಇಟ್ಟುಕೊಂಡು ನನ್ನ ಬುದ್ಧಿಗೆ ಎಟುಕುವಷ್ಟು ಪ್ರಯತ್ನ ನಡೆಸಿದ್ದೇನೆ. ಸ್ವಾಮಿ ಬ್ರಹ್ಮಾನಂದರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಅತ್ಮೀಯ ಸ್ನೇಹಿತರ ಪ್ರೇರಣೆ ಉತ್ತೇಜನ ಬಹಳ ಸಹಕಾರಿ ಆದದ್ದರಿ೦ದ, ಅವರಿಗೂ ನನ್ನ ವ೦ದನೆಗಳು.

कर्त्रुराज्ञया प्राप्यते फलम् ।
कर्म किं परं कर्म तज्जडम् ॥ १॥ 
ಕರ್ತುರಾಜ್ಞಯಾ ಪ್ರಾಪ್ಯತೇ ಫಲಮ್ |

ಕರ್ಮ ಕಿಂ ಪರಂ ಕರ್ಮ ತಜ್ಜಡಮ್ || ೧||  \

ಕರ್ತೃವಿನ(ಈಶ್ವರನ) ಆಪೇಕ್ಷಯ ಮೇರೆಗೆ ಕರ್ಮ ಮಾಡುವ ವನಿಗೆ ಕರ್ಮ ಫಲ ದೊರೆಯುತ್ತದೆ. ಅದರೆ ಅವೆರಡಕ್ಕೂ ಅದಿಯೂ ಅಂತ್ಯವೂ. ಇರುವುದರಿಂದ ಅದು ಆತ್ಯಂತಿಕ ಸುಖವನ್ನು ಕೊಡಲಾರದು. ಎಂತಹ ಕರ್ಮಗಳನ್ನು (ಪೂಜೆ, ಭಜನೆ ಮುಂತಾದವು) ಮಾಡಿದರೂ ಆ ಫಲಗಳಲ್ಲಿ ದೊರೆತ ಸುಖ ಕ್ಷಣಿಕವಾದದ್ದು ಮತ್ತು ಶಾಶ್ವತವಲ್ಲದ್ದು. ಅದ್ದರಿಂದ ಕರ್ಮ ಜಡವಾದ್ದರಿಂದ ಶಾಶ್ವತ ಸುಖ ಪಡೆಯಲು ಸಾಧ್ಯವಿಲ್ಲ.

कृतिमहोदधौ पतनकारणम् ।
फलमशाश्वतं गतिनिरोधकम् ॥ २॥ 
ಕೃತಿಮಹೋದಧೌ ಪತನಕಾರಣಮ್ |

ಫಲಮಶಾಶ್ವತಂ ಗತಿನಿರೋಧಕಮ್ || ೨||

ಕೃತಿ ಮಹಾದಧಿ ಉದದೌ ಸತಿ ಪತನ ಕಾರಣಂ ಏವ ತಸ್ಯ ಫಲಮ್ ಆಶಾಶ್ವತಮ್. ಮಾಡುವ ಕರ್ಮಗಳು, ಅದರ ಫಲಗಳು ಸಮುದ್ರದ ಅಲೆಗಳಂತೆ ಏಳುತ್ತಾ ಬೀಳುತ್ತಿರುವಂತೆ ಅವು ಆಶಾಶ್ವತವು. ಆದ್ದರಿಂದ ಕರ್ಮಾಚರಣೆಯ ಗತಿ ವೇಗವನ್ನು ನಿಯಂತ್ರಣ ಮಾಡುವುದರಿಂದ ಮೋಕ್ಷದ ಹಾದಿ ಸುಗಮವಾಗುತ್ತದೆ

ईश्वरार्पितं नेच्छया कृतम् ।
चित्तशोधकं मुक्तिसाधकम् ॥ ३॥

ಈಶ್ವರಾರ್ಪಿತಂ ನೇಚ್ಛಯಾ ಕೃತಮ್ |

ಚಿತ್ತಶೋಧಕಂ ಮುಕ್ತಿಸಾಧಕಮ್ || ೩||

ಸ್ವಾರ್ಥವನ್ನು ಬಿಟ್ಟು ಕರ್ಮಫಲದ ಅಪೇಕ್ಷೆಯಿಲ್ಲದಂತಹ ಬುದ್ಧಿಯಿಂದ ಕರ್ಮವನ್ನು ಮಾಡುವುದಾದರೆ, ಚಿತ್ತವು ಶುದ್ಧಿಗೊಳ್ಳುತ್ತದೆ. ಇದಕ್ಕೆ ಈಶ್ವರಾರ್ಪಣ ಭಾವ ಎನ್ನುತ್ತಾರೆ. ಇಂಥಹ ನಿಷ್ಕಾಮ ಕರ್ಮವು ಮನಸ್ಸಿನ ಸಮಾಧಾನಕ್ಕೆ ದಾರಿಯಾಗುವುದರಿಂದ ಅದು ಮುಕ್ತಿಗೆ ಸಾಧನವಾಗಬಲ್ಲದು. ಇದನ್ನು ಗಮನವಿಟ್ಟು ತಿಳಿದುಕೊಳ್ಳಬೇಕು.

कायवाङ्मनः कार्यमुत्तमम् ।
पूजनं जपश्चिन्तनं क्रमात् ॥ ४॥ 
ಕಾಯವಾಙ್ಮನಃ ಕಾರ್ಯಮುತ್ತಮಮ್ |

ಪೂಜನಂ ಜಪಶ್ಚಿನ್ತನಂ ಕ್ರಮಾತ್ || ೪||

ಕಾಯ ಎಂದರೆ ಸ್ಥೂಲ ಶರೀರ, ವಾಕ್ ಎಂದರೆ ಮಾತು, ಮತ್ತು ಮನಸ್ಸಿನ ಚಟುವಟಿಕೆ(ಅಂತಃಕರಣ), ಇವುಗಳು ಬಾಹ್ಯ ಕಣ್ಣುಗಳಿಗೆ ಕಾಣದಂತೆ ಚಲಿಸುತ್ತಿರುವ ಸಂಕಲ್ಪ ವಿಕಲ್ಪ ಪ್ರವಾಹದ ಚಟುವಟಿಕೆಗಳು. ಇದುವೇ ಒಳ ಕಾರ್ಯಗಳು. ಈ ಕಾರ್ಯಗತಿ ಮತ್ಗು ವೇಗವನ್ನು ನಿಯಂತ್ರಣ ಮಾಡುವ ವಿಧಾನವೇ, ಕ್ರಮವಾಗಿ ಪೂಜೆ ಮಂತ್ರ ಜಪ. ಇವುಗಳನ್ನು ಮನಸ್ಸಿನಲ್ಲಿಯೇ ಚಿಂತನೆ ನಡೆಸಿದಾಗ ಇವುಗಳೇ ಪ್ರಶಾಂತ ಸ್ಥಿತಿ ತಲಪುವ ಉಪಾಯಗಳಾಗುತ್ತದೆ. ಇದು ಮಹರ್ಷಿಗಳ ವಾಣಿ.

जगत ईशधी युक्तसेवनम् ।
अष्टमूर्तिभृद्देवपूजनम् ॥ ५॥

ಜಗತ ಈಶಧೀ ಯುಕ್ತಸೇವನಮ್ |

ಅಷ್ಟಮೂರ್ತಿಭೃದ್ದೇವಪೂಜನಮ್ || ೫||

ಜಗತಃ. ಪ್ರಪಂಚಸ್ಯ ಈಶಧೀಯುಕ್ತ ಸೇವನಂ ಅಷ್ಟ ಮೂರ್ತಿಬೃತ್ ದೇವ ಪೂಜನಮ್ ಇವ, ಮಹರ್ಷಿಗಳ ಪ್ರಕಾರ, ಈ ಪ್ರಪಂಚವನ್ನು ಪರಮೇಶ್ವರನ ಆಕೃತಿ ಎಂದು ನೋಡುವುದೇ ದೇವ ಪೂಜೆ. ಎಂಟು ಅಂಗಗಳಿಂದ ಕೂಡಿದ ಪರಮೇಶ್ವರನ ರೂಪವನ್ನು ನೋಡಿದಾಗ(ಪಂಚ ಮಹಾಭೂತಗಳು,ಸೂರ್ಯ ಚಂದ್ರ ಮತ್ತು ನಾನು ಎಂಬ ಯಜಮಾನ) ಇದೇ ಅವನಿಗೆ ಅರ್ಪಿಸುವ ಪೂಜೆ. ಎಲ್ಲೆಲ್ಲೂ ಅಲೆದಾಡುವ ಇಂದ್ರಿಯಗಳನ್ನು, ಕುಣಿಯುವ ಮನಸ್ಸನ್ನು ಒಳಗೆ ಇರಿಸಿ ಪರಮಾತ್ಮನಲ್ಲಿ ನಿಲ್ಲಿಸುವುದು, ಒಂದು ತಪಸ್ಸು ಮತ್ಗು ಸಾಧನೆ. ಸೂರ್ಯ ಚಂದ್ರರೇ ಕಣ್ಣುಗಳಂತಿರುವ ಈ ಶರೀರ ಪಂಚಭೂತಗಳಿಂದ ಆಗಿರುವುದರಿಂದ, ದೇಹವನ್ನು ದೇವಾಲಯಕ್ಕೆ ಹೋಲಿಸಿ, “ದೇಹೋ ದೇವಾಲಯಃ ಪ್ರೋಕ್ತಾ ಜೀವೋ ದೇವಃ ಸನಾತನಃ” ಎ೦ದಿದ್ದಾರೆ.

उत्तमस्तवादुच्चमन्दतः ।
चित्तजं जपध्यानमुत्तमम् ॥ ६॥ 
ಉತ್ತಮಸ್ತವಾದುಚ್ಚಮನ್ದತಃ |

ಚಿತ್ತಜಂ ಜಪಧ್ಯಾನಮುತ್ತಮಮ್ || ೬||

ಯಾವ ರೀತಿ ನಾವು ಮಂತ್ರ ಜಪವನ್ನು ಮಾಡಬೇಕು ಎನ್ನುವುದು ಮುಖ್ಯ. ಜಪವನ್ನು ಗಟ್ಟಿಯಾಗಿ ಉಚ್ಚರಿಸವುದಕ್ಕಿಂತ, ಮಂದ ಮಧ್ಯಮ ಸ್ವರದಲ್ಲಿ ಹೇಳುವುದು ಉತ್ತಮ. ಇದೇ ಜಪವನ್ನು ಮಾನಸಿಕವಾಗಿ ಆಚರಿಸಿದಾಗ ಅದು ಅತಿ ಉತ್ತಮ. ಯಾವರೀತಿಯ ಶಬ್ದವನ್ನೂ ಉಚ್ಚರಿಸದೇ ಮನದಲ್ಲೇ ನಿರಂತವಾಗಿ ಜಪವನ್ನು ಸಕ್ರಿಯಗೊಳಿಸಿಳದರೆ ಅದು ಮಹರ್ಷಿಗಳ ಪ್ರಕಾರ ಅತ್ಯುತ್ತಮ.

आज्यधारया स्रोतसा समम् ।
सरलचिन्तनं विरलतः परम् ॥ ७॥ 
ಆಜ್ಯಧಾರಯಾ ಸ್ರೋತಸಾ ಸಮಮ್ |

ಸರಲಚಿನ್ತನಂ ವಿರಲತಃ ಪರಮ್ || ೭||

ಮನದಲ್ಲಿ ಯಾವ ರೀತಿ ಜಪವನ್ನು ಮಾಡಬೇಕು? ತುಪ್ಪದ ಧಾರೆಯಂತೆ,ಅಥವಾ ಜೇನುತುಪ್ಪವನ್ನು ಪಾತ್ರೆಗೆ ಸುರಿದಾಗ ಬರುವ ಸತತ ಧಾರೆಯಂತೆ ಅಥವಾ ಹರಿಯುವ ನದಿ, ಯಾವ ರೀತಿ ಅಲೆಗಳಿಲ್ಲದೆ ಪ್ರಶಾಂತವಾಗಿ ಸಾಗುತ್ತದೆಯೋ,ಆ ರೀತಿಯಲ್ಲಿ ಅವಿಛಿನ್ನವಾಗಿ ಪರಮಾತ್ಮನ ಚಿಂತೆ, ಸ್ಮರಣೆ ನಡೆಯಬೇಕು. ಯಾವ ಎಡರು ತೊಡರುಗಳಿಲ್ಲದ, ಅಡೆಚನೆಗಳೂ ಇಲ್ಲದ ರೀತಿ ಆತ್ಮ ಚಿಂತನ ಸಾಧಿಸುವುದು ಬಹಳ ಮುಖ್ಯ.

. भेदभावनात् सोऽहमित्यसौ ।
भावनाऽभिदा पावनी मता ॥ ८॥

ಭೇದಭಾವನಾತ್ ಸೋಽಹಮಿತ್ಯಸೌ |

ಭಾವನಾಽಭಿದಾ ಪಾವನೀ ಮತಾ || ೮||

ಈಶ್ವರನು ತನಗಿಂತ ಬೇರೆ ಎಂದು ಮಾಡುವ ಜಪಕ್ಕೆ ಭೇದ ಭಾವನೆ ಎನ್ನುತ್ತಾರೆ. ಇದರಿಂದ ದ್ವೈತ ಭಾವನೆ ಉಂಟಾಗುವುದರಿಂದ, ಸೋಹಂ ಎಂಬ ಅಭೇಧ ಭಾವನೆ ಬಹಳ ಉತ್ತಮ. ಸಹ ಅಹಂ ಅಂದರೆ ಅವನೇ ನಾನು ಎಂಬ ತಿಳುವಳಿಕೆ ಬಹಳ ಮುಖ್ಯ. ನಾನು ನಾನು ಎಂಬ ಅಹಂ ಸ್ಪುರಣವೇ ಆ ಪರಮೇಶ್ವರ ಎಂಬುವುದು ಅಭೇದ ಭಾವನೆ. ಇಂತಹವರಲ್ಲಿ ಮರಣ ಭಯವೇ ತೋರುವುದಿಲ್ಲ. ಅದ್ದರಿಂದ ಈ ಭಾವನೆಯಲ್ಲಿಯೇ ತೊಡಗಿಸಿಕೊಳ್ಳುವ ಜಪ ಅತ್ಯಂತ ಪಾವನ ಎನ್ನುತ್ತಾರೆ ಮಹರ್ಷಿಗಳು.

भावशून्यसद्भावसुस्थितिः ।
भावनाबलाद्भक्तिरुत्तमा ॥ ९॥ 
ಭಾವಶೂನ್ಯಸದ್ಭಾವಸುಸ್ಥಿತಿಃ |

ಭಾವನಾಬಲಾದ್ಭಕ್ತಿರುತ್ತಮಾ || ೯||

ಸೋಹಂ ಭಾವನೆಯ ಬಲದಿಂದ ಭಾವಶೂನ್ಯವಾದ ಆತ್ಮ ಸ್ಥಿತಿ ದೊರೆಯುವುದೇ ಅತ್ಯುತ್ತಮವಾದ ಭಕ್ತಿ ಭಾವ. ಆಗ ನಮಗೆ ಸೋಹಮ್ ಭಾವನೆಯೂ ಇಲ್ಲದೆ(ನಾನು ಶುದ್ದ ಚೈತನ್ಯ ಪರಮೇಶ್ವರ ಸ್ವರೂಪ ಅನ್ನುವುದೂ ಇಲ್ಲದ ಸ್ಥಿತಿ) ಆತ್ಮನಲ್ಲಿ ಆತ್ಮನಾಗಿ ನಿಲ್ಲುವ ಸ್ಥಿತಿಯೇ ಬಹಳ ಉತ್ತಮ ವಾದ ನೆಲೆ. ವಿಕಾರಗಳೇ ಇಲ್ಲದ ಈ ಸ್ಥಿತಿಗೆ ನಿರ್ವಿಕಲ್ಪ ಸ್ಥಿತಿ ಎನ್ನುತ್ತಾರೆ.

हृत्स्थले मनः स्वस्थता क्रिया ।
भक्तियोगबोधाश्च निश्चितम् ॥ १०॥ 
ಹೃತ್ಸ್ಥಲೇ ಮನಃ ಸ್ವಸ್ಥತಾ ಕ್ರಿಯಾ |

ಭಕ್ತಿಯೋಗಬೋಧಾಶ್ಚ ನಿಶ್ಚಿತಮ್ || ೧೦||

ಕರ್ಮ ಭಕ್ತಿ ಮತ್ತು ಜ್ಞಾನಗಳು ಮೂರು ವಿಧವಾದ ಸಾಧನಾ ಮಾರ್ಗಗಳು. ಇವು ಒಂದಕ್ಕೊದು ಪೂರಕವಾಗಿರುವ ಯುಕ್ತಿಗಳು. ಇದರಲ್ಲಿ, ನಾವು ಯಾವುದಾದರೂ ಒಂದನ್ನು ಬಳಸಿಕೊಂಡು, ಚಂಚಲವಾಗಿ ಓಡುತ್ತಿರುವ ಮನಸ್ಸನ್ನು ಒಂದು ಸ್ಥಿಮಿತಕ್ಕ ತರಬಹುದು. ಕರ್ಮದಲ್ಲಿ, ತೊಡಗಿದ್ದಾಗ ಅದರ ಫಲಾಪೇಕ್ಷೆ ಮಾಡದೆ, ಎಲ್ಲವೂ ಸರ್ವಶಕ್ತನ ಶಕ್ತಿಯಿಂದ ನಡೆಯುತ್ತಿದೆ ಎಂಬ ಭಾವನೆ ಇದ್ದಾಗ,ಅಹಂಕಾರ ಏಳದ ಸ್ಥಿತಿಯಲ್ಲಿ ನಿಲ್ಲಬಹುದು. ಈ ಕರ್ಮಗಳೆಲ್ಲವೂ ಕರ್ತೃವಿನ ಆಜ್ಞೆ ಇಂದಲೇ ನಡೆಯುತ್ತದೆ ಎಂಬ ಭಾವನೆಯಿಂದ ಎಲ್ಲ ಕಾರ್ಯಗಳಲ್ಲಿ ತೊಡಗಿದಾಗ ಮನಸ್ಸು ನಿರಾಳ ವಾಗಬಲ್ಲದು. ಈ ಕರ್ಮಗಳು,ಸಾಂಸಾರಿಕ ಕೆಲಸಗಳು ಆಗಬಹುದು, ಪೂಜೆ ಭಜನೆ ಮಾನಸಿಕ ನಾಮ ಜಪವಾಗಬಹುದು, ಶರನಾಗತಿಯ ಮಾರ್ಗವಾಗಬದು. ಇವೆಲ್ಲವನ್ನೂ ಒಂದು ರುಜು ಭಾವದಿಂದ ಬಳಸಿದಾಗ, ಮನಸ್ಸು ಬುದ್ಧಿಗಳು ಶಾಂತವಾಗಿ, ಅವು ಹೃದಯ ಸ್ಥಾನದತ್ತ ಅಭಿಮುಖ ವಾಗಬಲ್ಲದು. ನಾವು ನಿದ್ದೆಯಲ್ಲಿ ಇದ್ದಾಗ, ಉಸಿರಾಟವು ಒಂದೇ ಸಮನೆ ನಡೆಯುವುದು ಆತ್ಮನ ಸ್ಪುರಣದಿಂದ. ಅಲ್ಲಿ ಯಾವ ಮನಸ್ಸೂ ಬುದ್ದಿಯೂ ಕೆಲಸಮಾಡದು. ಅದೇರೀತಿ, ಎಚ್ಚರದಲ್ಲಿ ಏಕಾಗ್ರತೆಯಿಂದ ಕರ್ಮಗಳು ನಡೆದಾಗ, ನಿದ್ರೆಯಲ್ಲಿದ್ದ ಸ್ಥಿತಿಯನ್ನು ಎಚ್ಚರದಲ್ಲಿ ತಂದಂತೆ ಆಗುತ್ತದೆ. ಇದನ್ನೇ ಸ್ವ ಸ್ವರೂಪದಲ್ಲಿ ನಿಲ್ಲುವ ಸ್ಥಿತಿ ಎನ್ನುತ್ತಾರೆ. ಮಹರ್ಷಿಗಳು.

वायुरोधनाल्लीयते मनः ।
जालपक्षिवद्रोधसाधनम् ॥ ११॥ 
ವಾಯುರೋಧನಾಲ್ಲೀಯತೇ ಮನಃ |

ಜಾಲಪಕ್ಷಿವದ್ರೋಧಸಾಧನಮ್ || ೧೧||

ಉಸಿರಾಟದ ಏರಿಳಿತಗಳನ್ನು(ಉಚ್ವಾಸ,ನಿಶ್ವಾಸ ಕುಂಭಕ) ನಿಯಂತ್ರಣ ಮಾಡಿದರೆ, ಮನಸ್ಸು ಲಯವಾಗುತ್ತದೆ. (ನಿದ್ದೆಯಲ್ಲಿ ಇರುತ್ತದೆ). ಇದನ್ನು ಲಯದಿಂದ ಎಬ್ಬಿಸಬೇಕು. ಒಬ್ಬ ಬೇಟೆಗಾರ, ಯಾವ ರೀತಿ ಏಕಾಗ್ರತೆಯಿಂದ ಒಂದು ಪಕ್ಷಿಯನ್ನು ತನ್ನ ಬಲೆಯಲ್ಲಿ ಹಿಡಿಯುತ್ತಾನೆಯೊ, ಅದೇ ರೀತಿ ಮನಸ್ಸನ್ನು ಎಕಾಗ್ರತೆಯಿಂದ ಕಟ್ಟಿ ಹಾಕಿ ಹೃದಯದತ್ತ ತಿರುಗಲು ಅಣಿವು ಮಾಡುವುದೇ ಸಾಧನದ ಮುಖ್ಯ ಭಾಗವಾಗಬೇಕು.

चित्तवायवश्चित्क्रियायुताः ।
शाखयोर्द्वयी शक्तिमूलका ॥ १२॥

ಚಿತ್ತವಾಯವಶ್ಚಿತ್ಕ್ರಿಯಾಯುತಾಃ |

ಶಾಖಯೋರ್ದ್ವಯೀ ಶಕ್ತಿಮೂಲಕಾ || ೧೨||

ಚಿತ್ತವಾಯವಾ ಚಿತ್ಕ್ರಿಯಾಯುತಾ, ಮನಸ್ಸು ಮತ್ತು ಪಂಚ ಪ್ರಾಣಗಳು, ಒಂದು ಜ್ಞಾನಶಕ್ತಿ ಮತ್ತೊಂದು ಕ್ರಿಯಾಶಕ್ತಿ ಇವು ಎರಡು ಶಾಖೆಗಳಾಗಿ ಕಂಡುಬಂದರೂ ಇವುಗಳ ಮೂಲ ಶಕ್ತಿ ಯಾದ ನಮ್ಮ ಅಂತಃಕರಣ ಒಂದೇ. ನಮ್ಮ ಇಂದ್ರಿಯಗಳು ಮತ್ತು ಪಂಚಪ್ರಾಣಗಳೆರಡೂ ಸಮನಾಗಿ ಕಾರ್ಯ ನಿರತವಾದಾಗ ನಮ್ಮ ದೇಹ ಆರೋಗ್ಯಕರವಾಗಿ ಇರಬಲ್ಲದು. ನಾವು ನಿದ್ರಿಸುತ್ತಿರುವಾಗಲೂ ಈ ಪಂಚಪ್ರಾಣಗಳು (ಪ್ರಾಣ, ಅಪಾನ, ವ್ಯಾನ, ಸಮಾನ ಮತ್ತು ಉದಾನ) ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿರುತ್ತವೆ. ಆಗ ಮನಸ್ಸು ಲಯವಾಗಿರುತ್ತದೆ. ಎಚ್ಚರದಲ್ಲಿ ಮನಸ್ಸು ಬುದ್ಧಿ ಪ್ರಾಣ ಗಳೆಲ್ಲವೂ ಕಾರ್ಯ ನಿರತವಾಗಿ ನಮ್ಮ ಚಲನವಲನಗಳು ನಡೆಯುತ್ತವೆ. ಇವು ಎರಡು ಶಾಖೆಗಳಾದರೂ ಒಂದನ್ನು ಗಮನ ಮಾಡಲು ಮತ್ತೊಂದು ಸ್ತಬ್ಧವಾಗಿಬಿಡುತ್ತದೆ.. ಮನಸ್ಸು ಮತ್ತು ಬುದ್ಧಿಯನ್ನು ಆತ್ಮನಲ್ಲಿ ನಿಲ್ಲಿಸುವುದೇ ಪರಮ ಗುರಿ. ಇದಕ್ಕೆ ಪೂರಕವಾಗಿ ಪ್ರಾಣಾಮವನ್ನು ಅಭ್ಯಾಸಮಾಡಬೇಕು.

लयविनाशने उभयरोधने ।
लयगतं पुनर्भवति नो मृतम् ॥ १३॥ 
ಲಯವಿನಾಶನೇ ಉಭಯರೋಧನೇ |

ಲಯಗತಂ ಪುನರ್ಭವತಿ ನೋ ಮೃತಮ್ || ೧೩||

ಹೀಗೆ ಪ್ರಾಣಾಯಾಮದ ಕಾರ್ಯ ನಡೆಯುವಾಗ ಮನಸ್ಸು ಲಯವಾದರೆ, ಅದು ನಾಶವಾಗಲಾರದು. ಲಯದಿಂದ ಮನಸ್ಸಿನ ನಾಶದ ಕಡೆ ನಮ್ಮ ಗಮನ ಹರಿಸಬೇಕು. ಏಕೆಂದರೆ ಲಯಗೊಂಡ ಮನಸ್ಸು ಬೇಗನೆ ಮತ್ತೆ ಎದ್ದುಬಿಡುತ್ತದೆ. ಇದು ಏಳೆದೇ ಇರುವ ಸ್ಥಿತಿಗೆ ಮನೋನಾಶ ಎನ್ನುತ್ತಾರೆ. ಲಯಗೊಂಡ ಮನಸ್ಸು ಅಲ್ಲೇ ನಿಲ್ಲದಂತೆ ಒಂದೇ ರೀತಿಯಾಗಿ ಆತ್ಮಚಿಂತನೆಯಲ್ಲೇ ತೊಡಗಿ ಮನಸ್ಸು ನಾಶವಾಗಲು ನೆರವಾಗಬೇಕು. ಇದಕ್ಕಾಗಿ ವಿಚಾರ (ಜ್ಞಾನಮಾರ್ಗ) ಮತ್ತು ಚಿಂತನೆ ಬಹಳಷ್ಟು ಬೇಕು. ಇದು ಕಷ್ಟದ ಸಾಧನೆ ಯಾದುದರಿಂದ ಬಹಳ ಜಾಗರೂಕತೆಯಿಂದ ಇದ್ದು ಸಾಧನೆ ಮಾಡಬೇಕು.

प्राणबन्धनाल्लीनमानसम् ।
एकचिन्तनान्नाशमेत्यदः ॥ १४॥

ಪ್ರಾಣಬನ್ಧನಾಲ್ಲೀನಮಾನಸಮ್ |

ಏಕಚಿನ್ತನಾನ್ನಾಶಮೇತ್ಯದಃ || ೧೪||

ಈ ರೀತಿ ನಷ್ಟಗೊಂಡ ಮನಸ್ಸು ನಮ್ಮ ಹೃದಯದಲ್ಲಿ ಬೆಳಗುತ್ತಿರುವ ಆತ್ಮನಲ್ಲಿ ನಿಂತಾಗ ಅದರ ಗುರಿಯೇ ಆನಂದ ಪ್ರಾಪ್ತಿ. ಇದನ್ನು ಹೊಂದಿದ ಕೂಡಲೇ ಏನನ್ನೂ ಸಾಧಿಸಬೇಕಾದದ್ದು ಇಲ್ಲ. ಇನ್ನೇನೂ ಉಳಿಯುವುದೇ ಇಲ್ಲ ಮತ್ತೆ ಯಾವ ರೀತಿಯ ಸಾಧನೆಯೂ ಬೇಡವಾಗುವುದು. ಎಲ್ಲೋ ಇರುವ ದೇವರು ನಮ್ಮ ರಕ್ಷಣೆಗೆ ಬರುತ್ತಾನೆಂಬ ಭ್ರಮೆಯಲ್ಲಿ ಪ್ರಯತ್ನ ಮಾಡಿದರೆ ಅದು ಸಾಧನೆಯೇ ಅಲ್ಲ. ನಮ್ಮ ಸಾಧನೆ ಎಷ್ಟು ಬಲವತ್ತರವಾದರೆ ಅದರಿ೦ದಾಗುವ ಶಾಶ್ವತಸುಖ ಮತ್ತು ಆನ೦ದ ಪ್ರಾಪ್ತಿ ಅಷ್ಟೇ ಮಹತ್ವವಾದದ್ದು.

नष्टमानसोत्कृष्टयोगिनः ।
कृत्यमस्ति किं स्वस्थितिं यतः ॥ १५॥

ನಸೋತ್ಕೃಷ್ಟಯೋಗಿನಃ |

ಕೃತ್ಯಮಸ್ತಿ ಕಿಂ ಸ್ವಸ್ಥಿತಿಂ ಯತಃ || ೧೫||

ಈ ರೀತಿಯಾದ ಸ್ಥಿತಿಯಲ್ಲಿ ಮನಸ್ಸು ಹೋರಗಿನ ವಿಷಯಗಳಿಂದ ಸರಿದಾಗ ಯಾವ ವೃತ್ತಿಗಳೂ ಇಲ್ಲದೆ ಆತ್ಮಾಭಿಮುಖವಾಗಿ ನಿಲ್ಲುತ್ತದೆ. ಆಗ ಹೃದಯದಲ್ಲಿ ಬೆಳಗುತ್ತಿರುವ ಆತ್ಮನಲ್ಲಿ ಮಾತ್ರ ಮನಸ್ಸು ನಿಲ್ಲುತ್ತದೆ. ಇದಕ್ಕೆ ಆತ್ಮ ದರ್ಶನ ಎನ್ನುತ್ತಾರೆ. ಇದೇ ತತ್ವದರ್ಶನ.

दृश्यवारितं चित्तमात्मनः ।
चित्त्वदर्शनं तत्त्वदर्शनम् ॥ १६॥ 
ದೃಶ್ಯವಾರಿತಂ ಚಿತ್ತಮಾತ್ಮನಃ |

ಚಿತ್ತ್ವದರ್ಶನಂ ತತ್ತ್ವದರ್ಶನಮ್ || ೧೬||


ಈ ರೀತಿಯಾದ ಸ್ಥಿತಿಯಲ್ಲಿ ಮನಸ್ಸು ಹೋರಗಿನ ವಿಷಯಗಳಿಂದ ಸರಿದು ಅಂತರ್ಮುಖವಾದಾಗ ವೃತ್ತಿಗಳು ಇಲ್ಲದೆ, ಪ್ರಶಾಂತವಾಗಿ ನಿಶ್ಚಲವಾಗುತ್ತದೆ. ಆಗ ಹೃದಯದಲ್ಲಿ ಬೆಳಗುತ್ತಿರುವ ಆತ್ಮನಲ್ಲಿ ಮನಸ್ಸು ಒಂದಾಗಲು ಸಹಕಾರಿ ಯಾಗುತ್ತದೆ. ಇದಕ್ಕೆ ದೃಕ್ ದೃಶ್ಯ ವಿವೇಕ ಎನ್ನುತ್ತಾರೆ. ಹೊರಗಿನ ಪ್ರಪಂಚ, ಶರೀರ, ಇಂದ್ರಿಯಗಳು ಮನಸ್ಸು ಬುದ್ಧಿ ಅಹಂಕಾರ ಇವೆಲ್ಲವೂ ಆತ್ಮನಿಗೆ ದೃಶ್ಯವಾಗಿರುವುವು. ಆತ್ಮನಾದರೊ ಮೂಲ ದೃಕ್. ದೃಶ್ಯವಾರಿತಮ್ ಮನಃ ಎಂದರೆ ,ಇವೆಲ್ಲವನ್ನೂ ದಾಟಿ ಮನಸ್ಸು ಆತ್ಮನಲ್ಲಿ ಲೀನವಾಗಬೇಕು. ಯಾವ ಚಿತ್ರಗಳೂ ಚಿಂತೆಗಳೂ ಇಲ್ಲದ ಮನಸ್ಸು ಆತ್ಮನಲ್ಲಿ ನಿಂತಾಗ, ಇರುವುದು ಆತ್ಮನೊಬ್ಬನೇ ಅಲ್ಲವೇ. ಅವನೇ ಸಚ್ಚಿದಾನಂದ ಸ್ವರೂಪ. ಅದೇ ಆತ್ಮ ಸಾಕ್ಷಾತ್ಕಾರ, ಆತ್ಮದರ್ಶನ, ತತ್ವದರ್ಶನ.

मानसं तु किं मार्गणे कृते ।
नैव मानसं मार्ग आर्जवात् ॥ १७॥ 
ಮಾನಸಂ ತು ಕಿಂ ಮಾರ್ಗಣೇ ಕೃತೇ |

ನೈವ ಮಾನಸಂ ಮಾರ್ಗ ಆರ್ಜವಾತ್ || ೧೭

ಮಾನಸಂತು ಕಿಮ್…ಆ ಮನಸ್ಸು ಎಂದರೇನು? ಮನ ಎವ ಮನುಷ್ಯಾಣಾ೦ಕಾರಣಮ್ ಬಂಧ ಮೋಕ್ಷಯೇ. ನಮ್ಮೆಲ್ಲರನ್ನು ಈ ಜಗತ್ತಿಗೆ ಕಟ್ಟಿಹಾಕುವುದೇ ಮನಸ್ಸು. ಆದರೆ ಅದೇ ಮನಸ್ಸು, ನಮ್ಮೆಲ್ಲರನ್ನೂ ಅದೇ ಸಂಕೋಲೆಯಿಂದ ಬಿಡಿಸಬಲ್ಲದು. ಯಾವರೀತಿಯ ಚಿಕ್ಕ ಚಿಕ್ಕ ಕಾರ್ಯಗಳಾದರೂ ಮನಸ್ಸಿನ ಸಹಾಯದಿಂದಲೇ ನಡೆಯಬೇಕು. ನಮಗೆಲ್ಲ ಪ್ರಕೃತಿ ಕರುಣಿಸಿರುವ ಭಾಗ್ಯವೇ ಮನಸ್ಸು. ನಿಸರ್ಗವು ಕರುಣಿಸಿರುವ ದೊಡ್ಡ ಉಪಕರಣವು ಮನಸ್ಸೇ. ಇದನ್ನೇ ನಾವು ಉಪಯೋಗಿಸಿಕೊಳ್ಳಬೇಕು. ಹೇಗೆ ನಾವು, ನಮ್ಮ ಕಾಲಿನಲ್ಲಿ ಹುದುಗಿರುವ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆಯೋ ಮತ್ತು ಆ ಎರಡನ್ನೂ ತ್ಯಜಿಸಿಬಿಡುತ್ತೇವೆಯೋ ಅದೇರೀತಿ ಮನಸ್ಸನ್ನು ಮನಸ್ಸಿನಿಂದ ಹುಡುಕತೋಡಗಿದರೆ ಅದೇ ಇಲ್ಲವಾಗಿ ಬಿಡುತ್ತದೆ.

वृत्तयस्त्वहं वृत्तिमाश्रिताः ।
वृत्तयो मनो विद्ध्यहं मनः ॥ १८॥ 
ವೃತ್ತಯಸ್ತ್ವಹಂ ವೃತ್ತಿಮಾಶ್ರಿತಾಃ |

ವೃತ್ತಯೋ ಮನೋ ವಿದ್ಧ್ಯಹಂ ಮನಃ || ೧೮||

ಆದ್ದರಿಂದ ನಿಜವಾದ ರೀತಿಯಲ್ಲಿ ಮನಸ್ಸನ್ನು ಹಿಡಿಯ ಬೇಕಾದರೆ,ನಮ್ಮ ಅಂತಃಕರಣವನ್ನು ಶೋಧಿಸಬೇಕು. ಚಿತ್ತ ಶೋಧಕಮ್ ಮುಕ್ತಿಸಾಧನಂ. ಚಿತ್ತ ಎಂದರೆ ನಮ್ಮಲ್ಲಿ ಆಗಿಹೋದ ವಿಷಯಗಳ,ನೆನೆಪು ಮತ್ತು ಮರೆವುಗಳ ಒಂದು ದೊಡ್ಡ ಗಂಟು. ಇದೊಂದು ರೀತಿಯ ಬುಟ್ಟಿ ಇದ್ದಹಾಗೆ. ಕೆಲವು ಘಟನೆಗಳು ಆ ಬುಟ್ಟಿಯಲ್ಲಿ ತೇಲುತ್ತಿರುತ್ತದೆ ಮತ್ತೆ ಕೆಲವು ಅದರ ತಳದಲ್ಲಿ ಇದ್ದು ಬಿಡುತ್ತದೆ. ಇದಕ್ಕೆ ಅಹಂವೃತ್ತಿ ಮತ್ಫು ಇದಂ ವೃತ್ತಿ ಎನ್ನುತ್ತಾರೆ. ನಾವೆಲ್ಲರೂ ನಿದ್ರಿಸುವಾಗ ಅಲ್ಲಿ ಯಾವ ವೃತ್ತಿಯೂ ಇರುವುದಿಲ್ಲ. ಮನಸ್ಸು. ಬುದ್ಧಿ ಇಲ್ಲ. ಅಹಂಕಾರವು ಇಲ್ಲವೇ ಇಲ್ಲ. ಇವೆಲ್ಲವೂ ನಾವು ಎಚ್ಚೆತ್ತಕೂಡಲೇ ಒಂದರ ಹಿಂದೆ ಈ ವೃತ್ತಿಗಳು ಎದ್ದು, ನಾನು ನನ್ನದು ಎಂಬುದು ತೋರಿ, ನಮ್ಮನ್ನು ಆ ಮೂಲ ಸ್ವರೂಪದಿಂದ ದೂರ ಕೊಂಡೊಯ್ಯುತ್ತದೆ. ಮನಸ್ಸಿನಲ್ಲಿ ಚಿತ್ರಗಳು ಎಡೆಬಿಡದೆ ಬರುತ್ತಲೇ ಇರುತ್ತವೆ. ಆದರೆ ನಾವು ಈ ಸೂಕ್ಷ್ಮ ಮನಸ್ಸನ್ನು ಹಿಡಿಯಬೇಕಾದರೆ ,ಎಲ್ಲ ವೃತ್ತಿಗಳನ್ನೂ ನಾಶ ಮಾಡ ಬೇಕಾಗುತ್ತದೆ. ಈ ಅಹಂ ಯಾರು?ಏಕೆ ಏಳುತ್ತದೆ? ಎಲ್ಲಿ ಏಳುತ್ತದೆ? ಮತ್ತು ಹೇಗೆ ಏಳುತ್ತದೆ? ಎಂದು ವಿಚಾರದಲ್ಲಿ ನಿಲ್ಲುವುದೇ ನಮ್ಮ ಗುರಿ ಆಗಬೇಕು.

अहमयं कुतो भवति चिन्वतः ।
अयि पतत्यहं निजविचारणम् ॥ १९॥ 
ಅಹಮಯಂ ಕುತೋ ಭವತಿ ಚಿನ್ವತಃ |

ಅಯಿ ಪತತ್ಯಹಂ ನಿಜವಿಚಾರಣಮ್ || ೧೯||

ಆದರೆ ಈ ಮನಸ್ಸೇ ನಮ್ಮನ್ನು ತಪ್ಪುದಾರಿಯಲ್ಲಿ ಎಳೆಯುವುದರಿಂದ ಮುಂದೆ ಒಂದು ಹೆಜ್ಜೆ ಇಟ್ಟು ಹೋದಾಗ,ಆ ಇದಂ ವೃತ್ತಿಗಳು ಯಾವರೀತಿಯಲ್ಲಿ. ಏನೆಲ್ಲಾ ಮನಸ್ಸಿನಲ್ಲಿ ಲಯವಾಗುತ್ತದೆಯೋ, ಅದೆಲ್ಲಾ ತೆಗೆದರೂ ಅಹಂಕಾರ ಉಳಿದುಕೊಂಡು ಬಿಡುತ್ತದೆ. ಈ ನಾನು ನಾನು ಎಂಬ ಸ್ಪುರಣ ಎಲ್ಲಿಂದ ಏಳುತ್ತದೆ(ಅಯಂ ಅಹಂ ಕುತೋ ಭವತಿ) ಈ ಧಾರೆಯಲ್ಲಿ ನಾವು ಮುಳುಗಿದಾಗ ಅಹಂ ಎನ್ನುವ ಅಹಂಕಾರವೇ ನಷ್ಟವಾಗಿ,(ಆಯಿ ಪತತಿ) ಬಿದ್ದು ಹೋಗಿ ಬಿಡುತ್ತದೆ. ಏಕೆಂದರೆ ಈ ಅಹಂಕಾರಕ್ಕ ಯಾವ ಅಸ್ತಿತ್ವವೂ ಇಲ್ಲ. ಆಧಾರವೂ ಇಲ್ಲ. ನಾವೆಲ್ಲ ತಿಳಿದಿರುವುದು,ಈ ಜೀವ ನಾಶವಾದಮೇಲೇ ಪರಮಾತ್ಮನಲ್ಲಿ ಐಕ್ಯವಾಗುವುದೇ ಮೋಕ್ಷ ಎಂದು. ಇದು ಬರಿಯ ಕಲ್ಪನೆಯೇ ಹೊರತು ಬೇರೇನೂ ಅಲ್ಲ. ಆ ನಿಜವಾದ ನಾನು ಎಂಬುವುದು ಎಲ್ಲ ಹೃದಯಗಳನ್ನು ಬೆಳಗುತ್ತಿರುವ ಶುದ್ದ ಚೈತನ್ಯವೇ ಹೊರತು ಬೇರೆ ಎನೂ ಅಲ್ಲ. ಆ ಸ್ವರೂಪದಲ್ಲಿ ನಾನು ಎಂಬ ರೀತಿ ನಿಲ್ಲುವಾಗ ಬೇರೇನೂ ಉಳಿಯುವುದಿಲ್ಲ ಮತ್ತು ಉಳಿಯಲು ಸಾದ್ಯವೇ ಇಲ್ಲ. ಇದೇ ಅರಿವು ಮತ್ತು ಇದೇ ಇರವು.

अहमि नाशभाज्यहमहंतया ।
स्फुरति हृत्स्वयं परमपूर्णसत् ॥ २०॥

ಅಹಮಿ ನಾಶಭಾಜ್ಯಹಮಹಂತಯಾ |

ಸ್ಫುರತಿ ಹೃತ್ಸ್ವಯಂ ಪರಮಪೂರ್ಣಸತ್ || ೨೦||

ಈ ಅಹಂಕಾರವು ನಾಶವಾದ ಮೇಲೆ ನಮ್ಮ ನಿಜ ಜೀವನ ಆರಂಭಗೊಳ್ಳುತ್ತದೆ. ಅಲ್ಲಿ ನಮ್ಮ ಎಲ್ಲಾ ತಪ್ಪು ತಿಳುವಳಿಕೆಗಳು ನಷ್ಟವಾಗಿ ಒಂದು ಸರ್ವ ವ್ಯಾಪಿ ಚೇತನ ಪೂರ್ಣವಾಗಿ, ತಾನೇ ಸ್ವಯ೦ ಸ್ಪುರಣ ಮಾಡುತ್ತಿರುತ್ತದೆ.

इदमहं पदाऽभिख्यमन्वहम् ।
अहमिलीनकेऽप्यलयसत्तया ॥ २१॥

ಇದಮಹಂ ಪದಾಽಭಿಖ್ಯಮನ್ವಹಮ್ |

ಅಹಮಿಲೀನಕೇಽಪ್ಯಲಯಸತ್ತಯಾ || ೨೧||

ಈ ‘ನಾನು’ ಎಂಬ ಆತ್ಮನಿಷ್ಠೆಯೇ ಸತ್ಯವಾದದ್ದು. ಅದೇ ನಾನು ನಾನು ಎನ್ನುವುದು. ಆದರೆ ನಾವು ತಿಳಿದಿದುವ ನಾನೇ ಬೇರೆ ಆಗಲು ಕಾರಣ ಏನೆಂದರೆ, ನಾವು ಇದರ ಮೇಲೆ, ನಮ್ಮ ಶರೀರ ಬುದ್ಧಿಗಳನ್ನು ಉಪಾಧಿಗಳಾಗಿ ಹಾಕಿ ನಿಜವಾದ ನಾನು ಮುಚ್ಚಿಬಿಟ್ಟಿದ್ದೇವೆ. ಆದರೆ ಸ್ಪುರಣ ಮಾಡುತ್ತಿರುವುದು ಅದೇ ಸತ್ ಸ್ವರೂಪ. ಎಲ್ಲ ಮಹಾತ್ಮರುಗಳು ನೆಲೆ ನಿಂತಿರುವುದು ಈ ಸ್ವರೂಪದಲ್ಲಿಯೇ. ಆದ್ದರಿಂದ ನಾವು ಅಂತಹವರ ಸಾನಿಧ್ಯದಲ್ಲಿ ಇದ್ದಾಗ, ಆ ತರಂಗಗಳು ನಮ್ಮನ್ನು ಎಚ್ಚರಗೊಳಿಸಿ ಆ ತಪ್ಪು ತಿಳುವಳಿಕೆಯಿ೦ದ ಸ್ವಲ್ಪ ಕಾಲ ಮಾಯವಾಗಿ ಮರೆತು ನಿಲ್ಲುವುದಕ್ಕೆ ಇದೇ ಕಾರಣ.

विग्रहेन्द्रियप्राणधीतमः ।
नाहमेकसत्तज्जडं ह्यसत् ॥ २२॥ 
ವಿಗ್ರಹೇನ್ದ್ರಿಯಪ್ರಾಣಧೀತಮಃ |

ನಾಹಮೇಕಸತ್ತಜ್ಜಡಂ ಹ್ಯಸತ್ || ೨೨||

ಜ್ಞಾನಿಯು ಯಾವ ರೀತಿ ವಿಹರಿಸುತ್ತಾನೆ? ತನಗೆ ದೇಹ, ಮನಸ್ಸು, ಬುದ್ಧಿ, ಇಂದ್ರಿಯಗಳೆಲ್ಲವೂ ಇದ್ದರೂ,ತಾನು, ಇದು ಯಾವುದೂ ಅಲ್ಲದ ಶುದ್ದ ಚೈತನ್ಯ ಎನ್ನುತ್ತಾನೆ. ಶರೀರ, ಇ೦ದ್ರಿಯಗಳು ,ಮನಸ್ಸು, ಬುದ್ಧಿಗಳೆಲ್ಲವೂ ಜಡವಾಗಿ ಇರತಕ್ಕವು( ತಜ್ಜದಮ್ ಹಿ ಅಸತ್). ಅವುಗಳಿಗೆ ಸ್ವಯಮ್ ಕಾರ್ಯ ಮಾದಲು ಶಕ್ತಿ ಇಲ್ಲ. ಅವುಗಳಿಗೆ ಆಧಾರವಾಗಿ ನಿ೦ತಿರುವ ಸತ್ವರೂಪವಾದ ’ನಾನು’ ಎ೦ಬುದರ ಸಾನಿಧ್ಯದಲ್ಲಿ ಇವುಗಳಿಗೆ ಅಸ್ಥಿತ್ವವೇ ಹೊರತು ಬೇರೆ ಇಲ್ಲ. ಆದರೆ, ಆ ಚಿತ್ ಸ್ವರೂಪದ ಹಿಂದೆಯೋ ಅಥವಾ ಅದನ್ನು ಬೆಳಗುವ ಮತ್ತೊಂದು ಯಾವುದಾದರೂ ಸ್ವರೂಪ ಇದೆಯೇ ಎಂಬ ಸಂಶಯವನ್ನು ನಿವಾರಿಸಲು ಮಹರ್ಷಿಗಳು ಮುಂದೆ ಹೆಜ್ಜೆ ಇಡುತ್ತಾರೆ.

सत्त्वभासिका चित्क्ववेतरा ।
सत्तया हि चिच्चित्तया ह्यहम् ॥ २३॥ 
ಸತ್ತ್ವಭಾಸಿಕಾ ಚಿತ್ಕ್ವವೇತರಾ |

ಸತ್ತಯಾ ಹಿ ಚಿಚ್ಚಿತ್ತಯಾ ಹ್ಯಹಮ್ || ೨೩||

ಸತ್ ಸ್ವರೂಪವನ್ನು ಬೆಳಗುವ ಚಿತ್ ಸ್ವರೂಪ ಬೆರೆಯೋ,ಒಂದೋ ಎಂಬ ಪ್ರಸ್ನೆಗೆ ಉತ್ತರ, ಇವೆರಡೂ ಒಂದೇ ಏಕೆಂದರೆ ಆತ್ಮನನ್ನು ಸತ್ ಚಿತ್ ಆನಂದ ಸ್ವರೂಪ ಎನ್ನುತ್ತಾರೆ. ಯಾವ ನಾನು ನಾನು ಎಂದು ಹೃದಯದಲ್ಲಿ ಸ್ಪುರಣ ಮಾಡುತ್ತಿದೆಯೋ ಅದು ಮೂರು ಕಾಲಗಳಲ್ಲಿಯೂ ಬದಲಾವಣೆ ಹೊ೦ದದ ಸತ್ ಸ್ವರೂಪ ಕೂಡ, ಏಕಂದರೆ,ಹೃದಯವನ್ನು ಬೆಳಗುವ ಮತ್ಗು ಬೆಳಗುತ್ತಿರುವ ಆತ್ಮನೇ ಚಿತ್ ಸ್ವರೂಪ..

ईशजीवयोर्वेषधीभिदा ।
सत्स्वभावतो वस्तु केवलम् ॥ २४॥ 
. ಈಶಜೀವಯೋರ್ವೇಷಧೀಭಿದಾ |

ಸತ್ಸ್ವಭಾವತೋ ವಸ್ತು ಕೇವಲಮ್ || ೨೪||

ಆದರೆ, ಈಶ್ವರ ಬೇರೆ ಜೀವ ಬೇರೆ ಎನ್ನುತ್ತಾರೆಯಲ್ಲಾ? ಮಹರ್ಷಿಗಳು ಇದಕ್ಕೆ ಉತ್ತರಿಸುತ್ತಾರೆ. ಈಶ್ವರ ಮತ್ತು ಜೀವಗಳಲ್ಲಿ ಭೇದ ಇದೆ. ಎಲ್ಲಿದೆ? ವೇಷದಲ್ಲಿ ಮತ್ತು ಬುದ್ಧಿಯಲ್ಲಿ ಅಹಂಕಾರದಲ್ಲೂ ಭೇದ ಇದೆ. ಇವೆರಡೂ ಮನಸ್ಸಿನ ಮತ್ತು ಶಾರೀರಿಕ ಭೇದ. ನಾನು ಪಾಪಿ, ನಾನು ಜ್ಞಾನಿ ಎನ್ನುವುದಿಲ್ಲವೇ ಎಲ್ಲರೂ! ಆದರೆ ಇದು ಹೊರಗಿನ ಪ್ರಪಂಚಕ್ಕೆ ಸೀಮಿತ. ಏಕೆಂದರೆ, ಸಮುದ್ರ ಮತ್ತು ಅಲೆಗಳನ್ನು ಗಮನಿಸಿದಾಗ,ಎರಡರಲ್ಲೂ ಇರುವುದು ಒಂದೇ ನೀರು ಆದರೂ,ನಾವು ಅಲೆ ಮತ್ತು ಸಮುದ್ರ ಎಂದು ವಿಭಜನೆಯಿಂದ ನೋಡುತ್ತೇವಲ್ಲವೋ?ಎತ್ತೆತ್ತ ನೋಡಿದರೂ ನೀರು ಒಂದೇ ಅಲ್ಲವೇ? ಆದ್ದರಿಂದ,ನೀರಿನ ದೃಷ್ಟಿಯಿಂದ ಅದರ ಸ್ವರೂಪ ಒಂದೇ. ಸತ್ಸ್ವಭಾವತಃ ವಸ್ತು ಕೇವಲಂ. ಜೀವ ಈಶ್ವರ ಒಬ್ಬನೇ. ಬೇರೆ ಆಗಲು ಸಾಧ್ಯವೇ ಇಲ್ಲ. ಬ್ರಹ್ಮ ಸ್ವರೂಪವೇ ಜೀವ.

वेषहानतः स्वात्मदर्शनम् ।
ईशदर्शनं स्वात्मरूपतः ॥ २५॥ 
ವೇಷಹಾನತಃ ಸ್ವಾತ್ಮದರ್ಶನಮ್ |

ಈಶದರ್ಶನಂ ಸ್ವಾತ್ಮರೂಪತಃ || ೨೫||

ಕನಸಿಂಲ್ಲಿರುವ ನಾನು ಮತ್ತು ಎಚ್ಚರದ ನಾನು ಒಂದೇ ಅಲ್ಲವೇ. ಆ ಕನಸಿನ ನಾನು ಎಚೆತ್ತಾಗ, ಬೇರೆ ನಾನು ಎಂಬುದನ್ನು ಹುಡುಕಲು ಹೋಗುತ್ತಾನೆಯೇ. ಇಲ್ಲವಲ್ಲಾ. ಆದ್ದರಿಂದ ಅವರಿಬ್ಬರೂ ಒಂದೇ ಅಲ್ಲದೆ ಬೇರೆ ಬೇರೆ ಅಲ್ಲ. ಇಬ್ಬರಲ್ಲಿ ಇರುವ ಚೈತನ್ಯ ಒಂದೇ. ನಾವು ತಿಳಿಯ ಬೆಕಾದದ್ದು ಜ್ನಾನ ಆಲ್ಲವೇ. ಇದು ಬುದ್ಧಿಯ ವೃತ್ತಿ. ನನಗೆ ಗೊತ್ತಿಲ್ಲವೆನ್ನುವುದು ಅಜ್ನಾನ. ಅಹಮ್ ಬುದ್ಧಿಯ ವೃತ್ತಿ. ಇವೆರಡನ್ನು ಬೆಳಗುವುದು ಒ೦ದೇ ಚೈತನ್ಯ ಆದ್ದರಿಂದ ವಿಚಾರದಿಂದ ಅಹಂಕಾರವು ನಾಶವಾದಾಗ, ನಾನು ನಾನು ಎಂಬ ಸ್ವರೂಪದರ್ಶನವೇ ಆತ್ಮ ದರ್ಶನ. ಇದೇ. ಈಶ ದರ್ಶನ.

आत्मसंस्थितिः स्वात्मदर्शनम् ।
आत्मनिर्द्वयादात्मनिष्ठता ॥ २६॥ 
ಆತ್ಮಸಂಸ್ಥಿತಿಃ ಸ್ವಾತ್ಮದರ್ಶನಮ್ |

ಆತ್ಮನಿರ್ದ್ವಯಾದಾತ್ಮನಿಷ್ಠತಾ || ೨೬||

ನಾವು ಇಂದ್ರಿಯ ಮನಸ್ಸು ಬುದ್ಧಿಗಳಿಂದ ಆತ್ಮನನ್ನು ನೋಡಲು ಆಗುವುದಿಲ್ಲ. ನಾವು ಒಂದು ಹೂವನ್ನು ನೋಡುತ್ತೇವೆ ಎಂದಾಗ,ನಮ್ಮ ದೃಷ್ಟಿ ಅಕ್ಷಿ ಪಟಲದ ಮೇಲೆ ಬೀಳುತ್ತದೆ. ಕಣ್ಣು ಅದನ್ನು ನೋಡುತ್ತಿರುತ್ತದೆ. ಆಗ, ಬರಿಯ ನೋಟ (ಇರವು) ಇರುತ್ತದೆ. ಆದೇ ದೃಷ್ಟಿ, ಚಿತ್ತದತ್ತ ಹರಿದು ಮನಸ್ಸಿನ ಕಡೆ ಹೋದಾಗ, ನಾನು ನೋಡುತ್ತಿರುವವ, (ದೇಹಧಾರಿಯಾದವ), ತಿಳಿದು ಕೊಳ್ಳುತ್ತಿರುವವ) ಎಂಬ ಭಾವನೆ ಉಂಟಾಗಿ, ಆ ಹೂವಿನ ಹಳೆಯ ನೆನೆಪನ್ನು ತಂದು ಕೊಂಡು, ಅದು ಗುಲಾಬಿ ಅಥವಾ ಮಲ್ಲಿಗೆ ಎಂದು ವಿಭಜನೆ ಮಾಡಿ ಅದರ ಬಣ್ಣ ಗುಣಗಳ ಬಗ್ಗೆ ಚಿಂತನೆ ನಡೆಸುತ್ತೇವೆ. ಆಗ ನೋಟವು ಹೋಗಿ ನೋಡುವವನ ಪಾತ್ರ ಬರುತ್ತದೆ. ಇಲ್ಲಿ ನೋಡುವವ ಬೇರೆ ಮತ್ತು ನೋಡಲ್ಪಡುವ ವಸ್ತು ಬೇರೆ ಎಂಬ ವಿಭಜನೆ ಆಗುತ್ತದೆ.

ಆದರೆ,ನಾವು ಈ ರೂಪದಲ್ಲಿದ್ದು, ಸಾಕ್ಷಿಯನ್ನುನೋಡಲು ಸಾಧ್ಯವಿಲ್ಲ. ಮನಸ್ಸು ಚಿತ್ತ ಬುದ್ಧಿ ಮತ್ತು ಅಹಂಕಾರಗಳನ್ನು ದಾಟಿ ನಿಂತಾಗಲೇ ಸ್ವ ಸ್ವರೂಪದ ದರ್ಶನ ಸಾಧ್ಯ. ಏಕೆಂದರೆ ಸಾಕ್ಷಿಗೆ ಯಾವ ಗುಣಗಳೂ ಇಲ್ಲ. ನಾನು ಹೂವನ್ನು ನೋಡಿದ ರೀತಿ ಸಾಕ್ಷಿಯನ್ನು ನೋಡಲು ಆಗದು.

ಆದ್ದರಿಂದ ಆತ್ಮನನ್ನು ನೋಡಿದೆ ಎಂದಾಗ (ಆತ್ಮನಿರ್ಧ್ವಯಾತ್) ಆತ್ಮ ಸ್ವರೂಪವನ್ನು ತಲಪಲು (ಆತ್ಮಸಂಸ್ಥಿತಿ) ಅಸಾದ್ಯ ಎಂಬುದು ಮಹರ್ಷಿಗಳ ವಾಣಿ.

ಇಲ್ಲಿ ನಾನು ನಾನು ಎನ್ನುವವನನ್ನು ಪ್ರಮಾತೃ, ಜ್ಞಾತೃ ಕರ್ತೃ ಎಂದೂ ಕರೆಯುತ್ತಾರೆ. ಸಾಕ್ಷಿ (ಅರಿವು) ಮತ್ತು ಪ್ರಮಾತೃಗಳ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಎಚ್ಚರದಲ್ಲಿರುವ ಅರಿವು, ಕನಸ್ಸಿನಲ್ಲಿ,ಇರುವ ಅರಿವು, ನಿದ್ದೆಯಲ್ಲಿ ಇರುವ ಅರಿವು ಎಲ್ಲವೂ ಒಂದೇ. ಆದರೆ ಎಚ್ಚರದಲ್ಲಿ,ನಾವು ಬಹಿರ್ಮುಖರಾದಾಗ,ಈ ಸಾಕ್ಷಿಯೇ ಪ್ರಮಾತೃ(ನಾನು ನಾನು) ರೂಪ ತಾಳುತ್ತದೆ. ಆಗ, ನಾವು, ಪ್ರಪಂಚವನ್ನು,ಇಂದ್ರಿಯ ಮನಸ್ಸು ಬುದ್ಧಿಗಳಿಂದ ದೇಶ ಕಾಲಗಳಿಂದ ಒಂದು ವಸ್ತುವನ್ನು ತಿಳಿಯುತ್ತೇವೆ. ಒಂದೊಂದು ಪದಾರ್ಥವನ್ನೂ ವಿಂಗಡಣೆ ಮಾಡಿ ಅದರ ಅಂಶಗಳನ್ನು ಬಿಡಿಬಿಡಿಯಾಗಿ ಗಮನಕ್ಕೆ ತರುತ್ತೇವೆ. ಇದೇ ಜಗತ್ತಿಗೆ ಸಂಬಂಧಿಸಿದ ಪ್ರಮಾತೃ ರೂಪ.

ಆದರೆ ಸಾಕ್ಷಿಯು, ಯಾವುದನ್ನೂ ಬಿಡಿಸಿ ಬಿಡಿ ಬಿಡಿಯಾಗಿ ನೋಡುವುದಿಲ್ಲ. ಆಕಾರವನ್ನು ಮರೆತು ಅಕಾಶದಂತೆ ನೋಡುತ್ತದೆ.. ದೇಶ ಕಾಲ, ಒಂದೊಂದು ಅವಸ್ಥೆಯಲ್ಲಿ (ವರ್ತಮಾನ ಭೂತ ಭವಿಷ್ಯತ್) ಬೇರೆ ಬೇರೆಯಾಗಿ ನೋಡುವುದಿಲ್ಲ. ಒಟ್ಟು ಪ್ರಪಂಚವನ್ನು, ಇದಂ ಅಹಂ ಎರಡನ್ನೂ ಸೇರಿಸಿ ನೋಡುತ್ತದೆ. ಆದರೆ,ನೋಟ ಎನ್ನುವುದು ಪ್ರಮಾತೃವಿಗೆ ಸೇರುತ್ತದೆ. ಇದರಲ್ಲಿ ನಾನು ಮತ್ತು ನೋಡುತ್ತಿದ್ದೇನೆ ಎಂಬ ಎರಡು ಅಂಶಗಳು ಸೇರುತ್ತವೆ. ಸಾಕ್ಷಿಗೆ, ನಾನು ಎಂಬ ವೃತ್ತಿಯೂ ಇಲ್ಲ,, ನೋಡುತ್ತಿದ್ದೇನೆ ಎಂಬ ವೃತ್ತಿಯೂ ಇಲ್ಲ. ವೃತ್ತಿ ಇಲ್ಲದ ಅರಿವು ಇರುತ್ತದೆ. ಸುಮ್ಮನೆ ನೋಟ ಅಷ್ಟೇ. ಇದೇ ಸಾಕ್ಷಿಗೂ ಪ್ರಮಾತೃವಿಗೂ ಇರುವ ವ್ಯತ್ಯಾಸ. ಈ ರೀತಿಯಾದ ಸಾಕ್ಷಿ, ಏನೇನು ನೋಡಿದರೂ, ಎಷ್ಟು ಹೊತ್ತು ನೋಡಿದರೂ, ತನ್ನಲ್ಲಿ ಯಾವ ಮಾರ್ಪಾಡು ಆಗದೆ ಇರುತ್ತದೆ. ಸಾಕ್ಷಿ ಸ್ವರೂಪ ಎಂದರೆ,ತಾನಾಗಿ ಇರುವುದು, ನಿಶ್ಚಲವಾಗಿ ಇರುವುದು, ಸ್ಥಿರವಾಗಿ ಇರುವುದು, ಸಂಕಲ್ಪ ವಿಕಲ್ಪ ಇಲ್ಲದೆ ಇರುವುದು. ಬದಲಾಗದೆ ಇರುವುದು. ಇದಕ್ಕೆ ಇರುವಿಕೆ ಎನ್ನುತ್ತಾರೆ.

ज्ञानवर्जिताऽज्ञानहीनचित् ।
ज्ञानमस्ति किं ज्ञातुमन्तरम् ॥ २७॥ 
ಜ್ಞಾನವರ್ಜಿತಾಽಜ್ಞಾನಹೀನಚಿತ್ |

ಜ್ಞಾನಮಸ್ತಿ ಕಿಂ ಜ್ಞಾತುಮನ್ತರಮ್ || ೨೭||

ನಿಮ್ಮ ನಿಜ ಸ್ವರೂಪದಲ್ಲಿ ನಿಂತ ಮೇಲೆ ತಿಳಿಯುವುದಕ್ಕೆ ಏನಾದರೂ ಉಳಿದಿದೆಯೇ? ಅಂತಹವನು ಏನನ್ನು ನೋಡಬಲ್ಲ, ಏನನ್ನು ಮೂಸಬಲ್ಲ, ಏನನ್ನು ಆಸ್ವಾದಿಸಬಲ್ಲ? ಏನೂ ಉಳಿಯದಹಾಗೆ ಇರುವ ಸ್ಥಿತಿಯೇ ಇರುವಿಕೆ ಅಥವಾ ಇರವು. ಇದೇ ಅರಿವು. ಬೇರೆ ತಿಳಿದುಕೊಳ್ಳಲು ಏನಿದೆ? ಆ ಶುದ್ದ ಬುದ್ಚ ಮುಕ್ತ ಚೈತನ್ಯದಲ್ಲಿ ನಿಲ್ಲುವುದೇ ಎಲ್ಲವನ್ನೂ ತಿಳಿದ ಹಾಗೆ. ಇದೆ ಪರಮ ಸ್ಥಾನ ಪರಮಪುರುಷಾರ್ಥ.


किं स्वरूपमित्यात्मदर्शने ।
अव्ययाऽभवाऽऽपूर्णचित्सुखम् ॥ २८॥ 
ಕಿಂ ಸ್ವರೂಪಮಿತ್ಯಾತ್ಮದರ್ಶನೇ |

ಅವ್ಯಯಾಽಭವಾಽಽಪೂರ್ಣಚಿತ್ಸುಖಮ್ || ೨೮||

ಇಷ್ಟೆಲ್ಲಾ ಸಾಧನೆ ಮಾಡಿದರೆ ನಮಗೆ ಏನು ಫಲ ಎಂದು ಕೇಳಿದರೆ,ಅದಕ್ಕೆ ಮಹರ್ಷಿಗಳು ಹೀಗೆ ಉತ್ತರಿಸುತ್ತಾರೆ

ಸಾಮಾನ್ಯವಾಗಿ, ನಾವೆಲ್ಲರೂ ಫಲವನ್ನು ಬಯಸಿಯೇ ಎಲ್ಲ ಸಾಧನೆಗಳನ್ನು ಮಾಡುತ್ತೇವೆ. ಬ್ರಹ್ಮ ಸ್ವರೂಪದಲ್ಲಿ ನಿಂತಾಗ, ನಮ್ಮ ಎಲ್ಲ ಕಾಮನೆಗಳು ಪೂರ್ಣಗೊಳ್ಳುತ್ತವೆ (ಸರ್ವಾನ್ ಕಾಮಾನ್ ಸಮಷ್ಣುತ ಇತಿ). ಎಲ್ಲ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟು ಭಸ್ಮವಾಗುತ್ತವೆ, ಎಂದು ಉಪನಿಷತ್ತುಗಳು ಹೇಳುತ್ತವೆ.

ಅದೇರೀತಿ, ನಾವು ನಮ್ಮ ಸ್ವಸ್ವರೂಪದಲ್ಲಿ ನಿಂತು ಚಿತ್ ಸುಖದಿಂದ ಉಂಟಾದ ಪರಾಮಶಾಂತಿಯನ್ನು ಪಡೆಯಬೇಕೆಂಬುದು ಮಹರ್ಷಿಗಳ ವಾಣಿ.

ಜ್ಞಾನಿಯಾದವನು,ಭೋಗದಲ್ಲಿರಲೀ,ಯೋಗದಲ್ಲಿರಲೀ,ಸಂಗದಲ್ಲಿರಲೀ, ಅಥವಾ ತನ್ನಷ್ಟಕ್ಕೆ ತಾನೇ ಇದ್ದರೂ, ಅವನು ಬಚ್ಚ ಬರಿಯ ಆನಂದ ಸ್ವರೂಪನಾಗಿಯೇ ನಿಲ್ಲುತ್ತಾನೆ, ಏಕೆಂದರೆ,ಅವನ ಚಿತ್ತವು ಯಾವಾಗಲೂ ಬ್ರಹ್ಮ ಚಿಂತನೇಯಲ್ಲಿಯೇ ಇರುತ್ತದೆ.

बन्धमुक्त्यतीतं परं सुखम् ।
विन्दतीह जीवस्तु दैविकः ॥ २९॥ 
ಬನ್ಧಮುಕ್ತ್ಯತೀತಂ ಪರಂ ಸುಖಮ್ |

ವಿನ್ದತೀಹ ಜೀವಸ್ತು ದೈವಿಕಃ || ೨೯||

ಆದ್ದರಿಂದ, ಬೇಕು ಬೇಡ ಎ೦ದು ಕೇಳುವವನೇ ನಷ್ಟ ಹೊ೦ದುವುದರಿ೦ದ ಮತ್ತೆ ಬೇಡುವವನೇ ಇಲ್ಲವಲ್ಲಾ. ಆದ್ದರಿ೦ದ ಅವನು ಆನ೦ದ ಸ್ವರೂಪನೇ ಆಗಿ ಬಿಡುತ್ತಾನೆ. ಇದೇ ಸಾಧನೆಯಿಂದ ದೊರೆಯುವ ಆತ್ಯಂತಿಕ ಸುಖ. ನಾಶರಹಿತವಾದ ಆತ್ಮ ಸೂಖವೇ ಶಾಶ್ವತ ಸುಖ.

अहमपेतकं निजविभानकम् ।
महदिदंतपो रमनवागियम् ॥ ३०॥ 
ಅಹಮಪೇತಕಂ ನಿಜವಿಭಾನಕಮ್ |

ಮಹದಿದಂತಪೋ ರಮನವಾಗಿಯಮ್ || ೩೦||

ನಮ್ಮೆಲ್ಲರ ಅಹಂಕಾರವನ್ನು ನಾಶಮಾಡುವ ಮತ್ತು ನಮ್ಮ ನಿಜ ಸ್ವರೂಪವನ್ನು ತೋರಿಸಿಕೊಡುವ,ಈ ವಿಚಾರಮಾರ್ಗ ಮತ್ಫು ಜ್ಞಾನಧಾರೆಯೇ ಮಹರ್ಷಿಗಳ ವಾಣಿ. ಯಾರು ಇದನ್ನು ಶ್ರದ್ಧೆಯಿಂದ ಗ್ರಹಿಸುತ್ತಾರೋ ಅವರು ಮಹರ್ಷಿಗಳ ಆಶಿರವಾದಕ್ಕೆ ಅರ್ಹರಾಗುತ್ತಾರೆ

                      ..............................................