೦೯ ಹೃದಯ ಗ್ರಂಥಿಯ ಬೇಧನೆ

ವೇದಾಂತದ ಬಗ್ಗೆ ತಿಳಿದವರಿಗೂ, ಸಂಶಯವಿರುವ ಗ್ರಂಥಿಭೇದದ ಬಗ್ಗೆ ರಮಣ ಮಹರ್ಷಿಗಳು ವಿಷದವಾಗಿ ಕೆಳಕಂಡಂತೆ ತಿಳಿಸಿದ್ದಾರೆ.

ಆತ್ಮಕ್ಕೂ ದೇಹಕ್ಕೂ ಇರುವ ಜೋಡಣೆಯೇ ಗ್ರಂಥಿ. ಈ ಸಂಬಂಧದಿಂದಲೇ ದೇಹದ ಬಗ್ಗೆ ತಿಳುವಳಿಕೆಯನ್ನು ಮತ್ತು ಅದರ ಇರುವಿಕೆಯನ್ನು ಮನುಷ್ಯನು ತಿಳಿಯುತ್ತಾನೆ.

ದೇಹವು ಜಡವಸ್ತು,. ಆತ್ಮನಾದರೋ ಶುದ್ಧ ಅರಿವು. ಇವೆರಡರ ಸಂಬಂಧವನ್ನು, ನಾವು ಜ್ಞಾನದಿಂದ, ವ್ಯವಕಲನ ಮಾಡಬಹುದು. ಶುದ್ಧ ಅರಿವಿನ ಜ್ಯೋತಿಯ, ಬೆಳಕಿನ ಆವರಣದಿಂದ, ದೇಹವು ಕಾರ್ಯಗತವಾಗುತ್ತದೆ. ನಿದ್ರೆಯಲ್ಲಿ ಅಥವಾ ಮೂರ್ಛೆಯಲ್ಲಿ,, ಪ್ರಪಂಚದ ಬಗ್ಗೆ ಆತಂಕ ಅಥವಾ ಭಯ ಇಲ್ಲದಿರುವುದೇ ಆತ್ಮನ ನೆಲೆಯನ್ನು ನಿರ್ಣಯಿಸಲು ಸಾಧ್ಯವಾಗುವುದು.

ಯಾವ ರೀತಿಯಲ್ಲಿ ಕಣ್ಣಿಗೆ ಕಾಣುವ ತಂತಿಗಳಲ್ಲಿ,ಸೂಕ್ಷ್ಮವಾದ ವಿದ್ಯುತ್ ಶಕ್ತಿಯ ಪ್ರವಾಹವು ನಿರ್ಣಯವಾಗುತ್ತದೆಯೋ, ಅದೇ ರೀತಿ. ದೇಹದ ನಾಡಿಗಳಲ್ಲಿ, ಜ್ಯೋತಿ ಸ್ವರೂಪದ ಪ್ರವಾಹ ಹರಿಯುತ್ತದೆ.

ಸೂರ್ಯನು, ಯಾವ ರೀತಿ ಪ್ರಪಂಚವನ್ನು ಬೆಳಗುವನೋ, ಅದೇ ರೀತಿ ಈ ಉಜ್ವಲವಾದ ಅರಿವಿನ ಬೆಳಕು, ದೇಹದ ಮಧ್ಯದ ಗ್ರಂಥಿಯಿಂದ ದೇಹವನ್ನೆಲ್ಲಾ ಬೆಳಗುತ್ತದೆ.

ಈ ರೀತಿಯಾದ ಜ್ಯೋತಿಯ ಹರಡುವಿಕೆಯಿಂದ ದೇಹದಲ್ಲಿ ಅನುಭವಗಳು ಆಗುತ್ತದೆ.. ಈ ಚೈತನ್ಯದ ಅರಿವಿನ ಬೆಳಕಿಗೆ, ಮೂಲ ಕೇಂದ್ರವೇ ಹೃದಯ ಎಂದು ಜ್ಞಾನಿಗಳು ತಿಳಿಸುತ್ತಾರೆ.

ನಾಡಿಗಳಲ್ಲಿ ಶಕ್ತಿಗಳ ಸಂಚಲನದಿಂದ, ಅರಿವಿನ ಜ್ಯೋತಿಯ, ಹರಿಯುವಿಕೆಯು ತಿಳಿಯುತ್ತದೆ. ಈ ಶಕ್ತಿಯು ಒಂದೊಂದು ನಿರ್ದಿಷ್ಟವಾದ ನಾಡಿಗಳನ್ನು ಅಪ್ಪಿಕೊಂಡು ದೇಹದಲ್ಲಿ ಸಹಜವಾಗಿ ಚಲಿಸುತ್ತದೆ. ಶುದ್ಧ ಜ್ಯೋತಿಯು ಪ್ರವಹಿಸುವ ನಾಡಿಗೆ ಸುಷುಮ್ನ ಎನ್ನುವರು. ಇದನ್ನು ಬ್ರಹ್ಮ ನಾಡಿ,ಆತ್ಮನಾಡಿ, ಪರಾನಾಡಿ, ಅಮೃತನಾಡಿ ಎಂದೂ ಕರೆಯುವರು.

ಎಲ್ಲ ದೇಹದ ಭಾಗಗಳಲ್ಲಿ ಜ್ಯೋತಿಯು ಪ್ರವಹಿಸುವುದರಿಂದ, ದೇಹದ ಅಭಿಮಾನ ಉಳ್ಳವರು, ತಾನೇ ದೇಹದ ಯಜಮಾನ ಎಂದುಕೊಂಡು ಪ್ರಪಂಚವು ತನಗಿಂತ ಬೇರೆಯೇ ಎಂದು ತಿಳಿಯುತ್ತಾನೆ.

ಸೂಕ್ಷ್ಮದೃಷ್ಟಿ ಅಥವಾ ವಿವೇಚನಾ ದೃಷ್ಟಿಯುಳ್ಳವರು, ಯಾವಾಗ ತನ್ನನ್ನು ದೇಹದ ಸಂಬಂಧದಿಂದ ಬಿಡಿಸಿಕೊಂಡು ನಿರ್ದಿಷ್ಟವಾದ ರೀತಿಯಲ್ಲಿ ಅನ್ವೇಷಣೆ ಮಾಡಲು ಪ್ರಾರಂಭಿಸುತ್ತಾರೆಯೋ, ಆಗ, ನಾಡಿಗಳಲ್ಲಿ ಮಂಥನವು, ಅಂದರೆ, ಕಡೆಯುವಿಕೆ ಆರಂಭವಾಗುತ್ತದೆ.

ಈ ರೀತಿಯಲ್ಲಿ ನಾಡಿಗಳಲ್ಲಿ ಮಂಥನವು ಆರಂಭವಾದಾಗ ಆತ್ಮನು ಬೇರೆ ನಾಡಿಗಳಿಂದ ಬೇರ್ಪಟ್ಟು, ಸುಷುಮ್ನ ಅಥವಾ ಅಮೃತ ನಾಡಿಗಳಲ್ಲಿ ಬೆರೆಯುವುದರಿಂದ, ಜ್ಯೋತಿ ಸ್ವರೂಪನಂತೆ ಬೆಳಗುತ್ತಾನೆ.

ಈ ರೀತಿಯಾಗಿ ಉಜ್ವಲವಾದ ಅರಿವಿನ ಜ್ಯೋತಿಯು, ಅಮೃತ ನಾಡಿಯನ್ನು ಬೆಳಗಿದಾಗ, ಅದು ಸ್ವಯಂ ಪ್ರಕಾಶಮಾನದ ಆತ್ಮದ ಅರಿವು ಒಂದೇ ಅಲ್ಲದೆ ಮತ್ತೆ ಅಲ್ಲಿ, ಯಾವ ಪ್ರಕಾಶವೂ ಇರುವುದಿಲ್ಲ.

ಅಂತಹ ಜ್ಞಾನೀಯ ಮುಂದೆ,ಏನು ಕಾಣಿಸಿಕೊಂಡರೂ, ಅದಕ್ಕೆ ಸ್ವಂತ ಇರುವಿಕೆಯೇ ಇರುವುದಿಲ್ಲ. ಯಾವ ರೀತಿಯಲ್ಲಿ ಅಜ್ಞಾನಿಯು, ದೇಹವನ್ನು ಗುರುತಿಸಿ ಕೊಳ್ಳುತ್ತಾನೆಯೋ, ಅದೇ ರೀತಿ ಜ್ಞಾನಿಯು,ಆತ್ಮನನ್ನು ವಿಷದವಾಗಿ ತಿಳಿಯುತ್ತಾನೆ.

ಯಾರಲ್ಲಿ ಆತ್ಮಜ್ಞಾನ ಉಂಟಾಗಿರುತ್ತದೋ, ಅಂಥವರಿಗೆ ಒಳಗೆ+ಹೊರಗೆ ಅನ್ನುವ ದ್ವೈತ ಭಾವನೆ ಇಲ್ಲದೇ, ಎಲ್ಲೆಲ್ಲೂ ಇರುವ ಸ್ವಾನುಭೂತಿಯ ಅಱಿವಿನ ಇರುವಿಕೆಯೇ ಜ್ಯೋತಸ್ವರೂಪನಾಗಿ ಇರುತ್ತಾರೆ. ಅಂಥವರು ಹೃದಯ ಗ್ರಂಥಿ ಬೇಧನೆಯಾಗಿರುವರು.,ಎಂದು ತಿಳಿಯಬೇಕು.

ಈ ಹೃದಯ ಗ್ರಂಥಿ ಸಂಬಂಧ, ಎರಡು ವಿಧವಾಗಿ( (ಭಾವಾತ್ಮಿಕ ಮತ್ತು ದೇಹಾತ್ಮಿಕ),) ಇರುತ್ತದೆ. ಒಂದು, ನಾಡಿಗಳ ಜೊತೆ ಬಂಧನ, ಮತ್ತೊಂದು ಮನಸ್ಸಿನ ಜೊತೆ ಬಾಂಧವ್ಯ. ಇದನ್ನು ಗ್ರಹಿಸುವವನಿಗೆ, ಅದು ಅತ್ಯಂತ ಸೂಕ್ಷ್ಮವಾಗಿ ಕಂಡರೂ, ನಾಡಿಗಳ ಸಂಬಂಧದಿಂದ ಸಮಸ್ತ ದೃಶ್ಯ ಪ್ರಪಂಚವನ್ನು ತಿಳಿಯುತ್ತಾನೆ.

ಯಾವಾಗ ಬೆಳಕು ಎಲ್ಲ ನಾಡಿಗಳಿಂದ ಹಿಂದಕ್ಕೆ ಸರಿದು ಒಂದೇ ಆತ್ಮನಾಡಿಯಲ್ಲಿ(ಹೃದಯಗ್ರಂಥಿ) ನಿಲ್ಲುತ್ತದೆಯೋ, ಆಗ, ಅರಿವು, ದೇಹದ ಸಂಬಂಧದಿಂದ ಬೇರ್ಪಟ್ಟು, ಆ ಜ್ಯೋತಿಯು, ಆತ್ಮ ನಂತೆ ನಿಲ್ಲುತ್ತದೆ.

ಯಾವ ರೀತಿಯಲ್ಲಿ ಕಾಯಿಸಿದ ಕಬ್ಬಿಣದ ಗುಂಡು, ಬೆಂಕಿಯ ಒಂದು ಚೆಂಡಿನಂತೆ ಕಾಣುತ್ತದೆಯೋ, ಅದೇ ರೀತಿ ಆತ್ಮ ಅನ್ವೇಷಣೆಯ ಬೆಂಕಿಯಲ್ಲಿ ಕಾದ ದೇಹವು, ‘ಆತ್ಮ’ ನಾಗಿ ಪ್ರಕಾಶಗೋಳ್ಳುತ್ತದೆ.

ದೇಹಕ್ಕೆ ಸಂಬಂಧಿಸಿದ ಎಲ್ಲ ಹಳೆಯ ವಾಸನೆಗಳೂ ಕಳಚಿಬೀಳುತ್ತವೆ. ದೇಹದ ಪರಿವೆಯೇ ಇಲ್ಲದವನಿಗೆ, ಯಾವ ರೀತಿಯಾದ ಕರ್ತವ್ಯವೂ ಇರುವುದಿಲ್ಲ.

ಎಲ್ಲಾ ಕರ್ಮಗಳಿಂದಲೂ ಮುಕ್ತನಾಗಿ, ಕರ್ತವ್ಯ ರಹಿತನಾದವನಿಗೆ, ಆತ್ಮನ ಹೊರತು ಬೇರೆ ಏನೂ, ಉಳಿಯುವುದಿಲ್ಲ, ಆದ್ದರಿಂದ ಅವನಿಗೆ ಯಾವ ರೀತಿಯ ಶಂಕೆಯೂ ಇರುವುದಿಲ್ಲ.

ಗ್ರಂಥಿಯು,ಒಂದಾವರ್ತಿ ಭೇದನೆ ಗೊಂಡಮೇಲೆ ಮತ್ತೆ ಅದರ ಜೋಡಣೆ ಸಾಧ್ಯವಿಲ್ಲ. ಈ ಅವಸ್ಥೆಗೆ ಸರ್ವೋಚ್ಛಶಕ್ತಿ ಅಥವಾ ಪರಮಶಾಂತಿ ಎನ್ನುತ್ತಾರೆ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಗ್ರಂಥಿಬೇಧನೆ ಎಂಬ ಒಂಬತ್ತನೆಯ ಅಧ್ಯಾಯ.